ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಫೆಬ್ರವರಿ ತಿಂಗಳ ಅಂತ್ಯದೊಳಗೆ ‘ಗ್ರಾಮ ಒನ್’ ವಿಸ್ತರಿಸಲು ಆದೇಶಿಸಿರುವ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಗತ್ಯವಿರುವ ಮೂಲ ಸೌಕರ್ಯ ಒದಗಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಿದ್ದಾರೆ.
ಅರ್ಜಿ ಸ್ವೀಕೃತಿ ಸೇವೆಯನ್ನು ಗ್ರಾಮ ಒನ್ ನಿರ್ವಹಿಸಬೇಕು. ಗ್ರಾಮ ಒನ್ ನಿಂದ ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿ ಕೆಲಸವನ್ನು ‘ ಅಟಲ್ ಜನಸ್ನೇಹಿ ಕೇಂದ್ರ’ ಗಳು ನಿರ್ಮಿಸಬೇಕು. ಅದಕ್ಕಾಗಿ ಅಗತ್ಯ ಕಂಪ್ಯೂಟರ್ ಮತ್ತು ಮೂಲಸೌಕರ್ಯ ಕಲ್ಪಿಸಲು ಇ-ಆಡಳಿತ ಇಲಾಖೆ ಮೇಲುಸ್ತುವಾರಿ ವಹಿಸಬೇಕೆಂದು ಸೂಚಿಸಲಾಗಿದೆ.
ಗ್ರಾಮ ಒನ್ ಆಪರೇಟರ್ ಗಳಿಗೆ ತಾಂತ್ರಿಕ, ಆಡಳಿತಾತ್ಮಕ ಹಾಗೂ ಕಾನೂನು ಸಮಸ್ಯೆಗಳ ಬಗ್ಗೆ ತರಬೇತಿ ನೀಡಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಮತ್ತು ಅಜ್ಜಿ ತಿರಸ್ಕಾರಕ್ಕೆ ಸಕಾರಣವನ್ನು ತಂತ್ರಾಂಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಜಿಲ್ಲಾಧಿಕಾರಿಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ತಿರಸ್ಕೃತ ಅರ್ಜಿಗಳನ್ನು ಪರಿಶೀಲಿಸಬೇಕು. ಒಂದು ವೇಳೆ ತಪ್ಪಾಗಿ ತಿರಸ್ಕೃತ ಮಾಡುತ್ತಿರುವ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಜೊತೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುವ ಎಂಪಿಕ್ ಮತ್ತು ಕೆಡಿಪಿ ಸಭೆಯಲ್ಲಿ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.
ಎಲ್ಲಾ ಆಪರೇಟರ್ ಗಳಿಗೆ ಅನ್ವಯಿಸುವಂತೆ ಇ-ಆಡಳಿತ ಇಲಾಖೆಯಿಂದ ನೀತಿ ಸಂಹಿತೆ ಪ್ರಕಟಿಸಬೇಕು. ಇದರ ಕಡ್ಡಾಯ ಪಾಲಿಗೆ ಸ್ಥಳೀಯ ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು. ಸೇವೆಗಳನ್ನು ವಿತರಿಸುವ ಆಡಳಿತಾತ್ಮಕ ಕಾರ್ಯವಿಧಾನ, ಕಾನೂನು ತಿಳುವಳಿಕೆ ನೀಡಬೇಕು. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಆಪರೇಟರ್ ಗಳನ್ನು ಸಿದ್ಧಪಡಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿ ಅವರು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.