ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಸೈಬರ್ ವಂಚಕರ ಜಾಲಕ್ಕೆ ವಿದ್ಯಾವಂತರೇ ಬಲಿಯಾಗುತ್ತಿದ್ದಾರೆ.
ಸೈಬರ್ ಅಪರಾಧ ಕುರಿತಂತೆ ಜಿಲ್ಲೆಯಾದ್ಯಂತ ಜಿಲ್ಲಾ ಪೊಲೀಸ್ ಇಲಾಖೆ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಎಜುಕೇಟ್ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಎನ್ನೆಸ್ಸೆಸ್ ಘಟಕ ಮತ್ತು ಪೊಲೀಸ್ ಇಲಾಖೆ ವತಿಯಿಂದ ಸೈಬರ್ ಅಪರಾಧ ಕುರಿತಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
“ಸೈಬರ್ ವಂಚಕರ ಮಾತುಗಳನ್ನು ನಂಬಿ ಉನ್ನತ ವ್ಯಾಸಂಗ ಮಾಡಿದ ಎಂಜಿನಿಯರ್ ಗಳು, ವಕೀಲರು, ವೈದ್ಯರು ಹಾಗೂ ಉನ್ನತ ಹುದ್ದೆಯಲ್ಲಿರುವವರು ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ” ಎಂದು ಸಿಇಎನ್ ಮತ್ತು ಅಪರಾಧ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗುರುರಾಜ್ ಬೇಸರ ವ್ಯಕ್ತಪಡಿಸಿದರು.
ವಂಚಕರು ಬ್ಯಾಂಕ್ ಅಧಿಕಾರಿ, ಮ್ಯಾನೇಜರ್ ಎಂದು ನಂಬಿಸಿ ಎಟಿಎಂ ಕಾರ್ಡ್, ಸಿವಿವಿ ಮತ್ತು ಓಟಿಪಿ ಪಡೆದು ಬ್ಯಾಂಕ್ ಖಾತೆಯಲ್ಲಿ ಇರುವಂತಹ ಹಣವನ್ನು ಲಪಟಾಯಿಸುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಯಾರಿಗೂ ಎಟಿಎಂ ಕಾರ್ಡ್ ನಂಬರ್, ಸಿವಿವಿ ನಂಬರ್ ಮತ್ತು ಒಟಿಪಿಯನ್ನು ಕೊಡಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ಲೇ ಸ್ಟೋರ್ ಗಳಲ್ಲಿ ಸಿಗುವ app ಗಳೆಲ್ಲ ಅಧಿಕೃತವಾಗಿರುವುದಿಲ್ಲ. ಕ್ಲಬ್ ಫ್ಯಾಕ್ಟರಿ ಮತ್ತು ಇತರೆ ಸೈಟ್ಗಳ ನಕಲಿ ಕಸ್ಟಮರ್ ಕೇರ್ ನಂಬರ್ ಗಳಿಗೆ ಕರೆ ಮಾಡಿ ಮೋಸ ಹೋಗಬೇಡಿ ಎಂದು ತಿಳಿಸಿದ್ದಾರೆ. ನಿಮ್ಮ ಸುತ್ತಮುತ್ತ ಅಪರಾಧ ಕೃತ್ಯಗಳು, ಸೈಬರ್ ಅಪರಾಧಗಳು, ಗಾಂಜಾ ಸೇವನೆಯಂತಹ ಪ್ರಕರಣಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ, ಪೊಲೀಸ್ ಕಂಟ್ರೋಲ್ ರೂಂ 112, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 08182261413 ಅಥವಾ ಸಿಇಎನ್ ಅಪರಾಧ ಪೊಲೀಸ್ ಠಾಣೆ 08182261426 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.