ಪ್ರಾದೇಶಿಕ ಮತ್ತು ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದ್ದಾರೆ.
ಶಿವಮೊಗ್ಗ ನಗರದ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದ ಪ್ರೇರಣಾ ಕನ್ವೇಷನ್ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾತನಾಡಿದರು.
ಬೇರೆ ಎಲ್ಲಾ ರಾಜ್ಯಗಳಿಗಿಂತ ಕರ್ನಾಟಕ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಹಳ ಮುಂಚೂಣಿಯಲ್ಲಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಶಿವಮೊಗ್ಗದ ಕೊಡುಗೆ ಅಪಾರವಾಗಿದೆ. ಇದು ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವುದು ಸಂತಸದ ಸಂಗತಿ. ಹಿಂದಿ ಭಾಷಿಗನಾದರೂ ರಾಜ್ಯಪಾಲನಾಗಿ ಕರ್ನಾಟಕಕ್ಕೆ ಬಂದ ಬಳಿಕ ಕನ್ನಡ ಕಲಿಯುತ್ತಿದ್ದೇನೆ ಎಂದರು.

ರಾಜ್ಯಪಾಲರಾದ ಬಳಿಕ ಮೊದಲ ಬಾರಿಗೆ ಶಿವಮೊಗ್ಗ ಭೇಟಿ ನೀಡಿದ ಥಾವರಚಂದ್ ಗೆಹ್ಲೋಟ್ ಅವರು ಮಲೆನಾಡಿನ ಪರಿಸರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಭೇಟಿ ನೀಡಿ ಪ್ರಾಣಿಗಳನ್ನು ವೀಕ್ಷಿಸಿದರು. ಅರಣ್ಯ, ದಟ್ಟ ಹಸಿರು, ತಂಪಾದ ವಾತಾವರಣವಿರುವ ಇಂತಹ ಸ್ಥಳಗಳಿಗೆ ರಾಜ್ಯದವರಲ್ಲದೇ ಹೊರ ರಾಜ್ಯದವರೂ ಬಂದು ವೀಕ್ಷಿಸಬೇಕು. ಪ್ರವಾಸಿ ಕೇಂದ್ರಗಳಿಗೆ ಹೆಚ್ಚು ಜನರು ಬರುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜೋಗ ಜಲಪಾತವನ್ನು ವಿಕ್ಷಿಸಿ ಆನಂದ ಪಟ್ಟರು.