ಸಕ್ರೆಬೈಲು ಆನೆ ಬಿಡಾರದ ನೇತ್ರಾವತಿ ಆನೆಯ ಮಗನಿಗೆ ಪುನೀತ್ ರಾಜಕುಮಾರ್ ಎಂದು ಹೆಸರಿಡಲಾಗಿದೆ. ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ನಿಧನದ ಬಳಿಕ ಹಲವು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಗಣ್ಯರು ಹಾಗೂ ಅಭಿಮಾನಿಗಳು ಕೈಗೊಳ್ಳುತ್ತಿದ್ದಾರೆ.
ಕಳೆದ ಒಂದುವರೆ ತಿಂಗಳ ಹಿಂದೆ ನಟ ಪುನೀತ್ ರಾಜಕುಮಾರ್ ಅವರು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಅರಣ್ಯ ಇಲಾಖೆಗೆ ಸಂಬಂಧಿಸಿದ ವನ್ಯಜೀವಿ ಸಾಕ್ಷಚಿತ್ರ ಚಿತ್ರೀಕರಣಕ್ಕೆಂದು ಭೇಟಿ ನೀಡಿದರು. ಆವೇಳೆ ಆನೆಗಳನ್ನು ಕಂಡು ಪುನೀತ್ ಹರ್ಷ ವ್ಯಕ್ತಪಡಿಸಿದರು ಹಾಗೂ ನೇತ್ರಾವತಿ ಆನೆಯ ಮರಿಯನ್ನು ಮುದ್ದಾಡಿದರು. ಕೆಲಕಾಲ ಆ ಆನೆ ಮರಿಯೊಂದಿಗೆ ಚಿನ್ನಾಟ ಸಹ ಆಡಿ ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಡಾರದಲ್ಲಿರುವ ಮಾವುತರೊಂದಿಗೆ ಆತ್ಮೀಯವಾಗಿ ಮಾತನಾಡಿ ಅವರೊಂದಿಗೆ ಫೋಟೋ ತೆಗೆಸಿಕೊಂಡು ಮತ್ತೆ ಬರುವುದಾಗಿ ಹೇಳಿ ಹೋಗಿದ್ದರು. ಅದಾಗಿ ಒಂದುವರೆ ತಿಂಗಳ ಒಳಗಾಗಿ
ಪುನೀತ್ ಅವರ ಹಠಾತ್ ನಿಧನ ಎಲ್ಲರಲ್ಲೂ ದಿಗ್ಭ್ರಮೆ ಮೂಡಿಸಿದೆ.

ಪುನೀತ್ ರಾಜಕುಮಾರ್ ಸ್ಮರಣೆಗಾಗಿ ಅವರ ಮುದ್ದಾಡಿದ ಮರಿ ಆನೆಗೆ ಪುನೀತ್ ರಾಜಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್ ಅವರು ಮಾತನಾಡಿ. ಮರಿ ಆನೆಗೆ ಏನು ಹೆಸರಿಡಬೇಕಂಬ ಬಗ್ಗೆ ಬಹಳ ಚರ್ಚೆ ನಡೆದಿತ್ತು. ಇತ್ತೀಚೆಗಷ್ಟೇ ಬಿಡಾರಕ್ಕೆ ಬಂದು ಹೋದ ಪುನೀತ್ ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದರಿಂದ ಮರಿ ಆನೆಗೆ ಅವರ ಹೆಸರು ಇಡಬೇಕೆಂಬ ಬಗ್ಗೆ ಸಿಬ್ಬಂದಿ ಅಭಿಪ್ರಾಯ ಸೂಚಿಸಿದ್ದರು. ಅಪ್ಪು ಅವರು ವನ್ಯಜೀವಿಗಳ ಬಗ್ಗೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದರಿಂದ ಆನೆ ಮರಿಗೆ ಅವರ ಹೆಸರು ಇಡಲಾಗಿದೆ ಎಂದು ಹೇಳಿದರು.