Saturday, March 28, 2026
Saturday, March 28, 2026
Home Blog Page 550

Dasara Festival ಸೆ.29 ರಂದು ನಾಡಹಬ್ಬ ದಸರಾ-2024 ರ ಮಕ್ಕಳ ಕ್ರೀಡಾಕೂಟ

0

Dasara Festival ಶಿವಮೊಗ್ಗ ಮಹಾನಗರ ಪಾಲಿಕೆಯು ನಾಡಹಬ್ಬ ದಸರಾ 2024ರ ಕಾರ್ಯಕ್ರಮದಲ್ಲಿ ಸೆ. 29 ರಂದು ಬೆಳಗ್ಗೆ 9 ಗಂಟೆಗೆ ಮಕ್ಕಳ ದಸರಾ ಕ್ರೀಡಾ ಮತ್ತು ಸ್ಪರ್ಧೆಯನ್ನು ಅನುದಾನಿತ ಹಾಗೂ ಅನುದಾನ ರಹಿತ ಶಾಲೆಯ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಿಳಘಟ್ಟ ಸರ್ಕಾರಿ ಪ್ರೌಡ ಶಾಲೆಯಲ್ಲಿ ಏರ್ಪಡಿಸಿದೆ.
Dasara Festival ಈ ಕಾರ್ಯಕ್ರಮದಲ್ಲಿ ಚಿತ್ರಕಲಾ, ಛದ್ಮ ವೇಷ, ಮ್ಯೂಸಿಕಲ್ ಛೇರ್, ಲೋಟದಲ್ಲಿ ಪಿರಮಿಡ್ ಮಾಡುವುದು, ಕಪ್ಪೆ ಜಿಗಿತ, ಮೆಮೊರಿ ಟೆಸ್ಟ್, ಪ್ರಬಂಧ ರಚನೆ, 100 ಮತ್ತು 200 ಮೀ ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಸನ್ ಸಾಬ್ ಕೆ. ಹೆಚ್ ಮೊ, ನಂ 9901711486 ಹಾಗೂ ಸಿ.ಆರ್.ಪಿ ಅಶೋಕ್ ಪಾಟೀಲ್ 9480369937 ಸಂಪರ್ಕಿಸುವAತೆ ಶಿವಮೊಗ್ಗ ಮಹಾನಗರಪಾಲಿಕೆ ಮಕ್ಕಳ ದಸರಾ ಸಮಿತಿ ಕಾರ್ಯದರ್ಶಿ ತಿಳಿಸಿದ್ದಾರೆ.

Nehru Stadium Shivamogga ತಮ್ಮಡಿಹಳ್ಳಿ ಶಾಲಾಮಕ್ಕಳು ಜಿಲ್ಲಾಮಟ್ಟದ ಕಬಡಿ ಪಂದ್ಯಕ್ಕೆ ಆಯ್ಕೆ

0

Nehru Stadium Shivamogga ನೆಹರು ಕ್ರೀಡಾಂಗಣದಲ್ಲಿ ನಡೆಸಲಾದ,ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಹಾಗೂ ಪ್ರೌಢಶಾಲಾ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶಿವಮೊಗ್ಗ. ಇವರ ಸಹ ಯೋಗದಲ್ಲಿ ಆಯೋಜಿಸಲಾಗಿದ್ದ ಬಾಲಕ ಮತ್ತು ಬಾಲಕಿಯರ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಬಾಲಕರು ಕಬಡ್ಡಿಯಲ್ಲಿ ಭಾಗವಹಿಸಿ ಉತ್ತಮ ಆಟದ ಪ್ರದರ್ಶನ ನೀಡಿ, ಉತ್ತಮ ದಾಳಿ ಅಷ್ಟೇ ರಕ್ಷಣಾತ್ಮಕ ಆಟವನ್ನು ಆಡಿ, ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಹಂತದ ಕ್ರೀಡೆಗೆ ಆಯ್ಕೆಯಾಗಿದ್ದಾರೆ.

ಬಾಲಕಿಯರು ಖೋ ಖೋ ದಲ್ಲಿ ಉತ್ತಮ ಸಾಧನೆ ಮಾಡಿ,ತಾಲ್ಲೂಕಿನ ಹಂತದ ಕ್ರೀಡೆಯಲ್ಲಿ ದ್ವಿತೀಯ ಸ್ಥಾನ ಪಡೆದು ಟ್ರೋಪಿಯನ್ನು ಮತ್ತು ಪ್ರಶಸ್ತಿ ಪತ್ರವನ್ನು ಸಂಸ್ಥೆಯ ಮಡಿಲಿಗೆ ಹಾಗೂ ತಮ್ಮಡಿ ಹಳ್ಳಿ ಗ್ರಾಮಕ್ಕೆ ಕೀರ್ತಿಯನ್ನು ತಂದು ಕೊಟ್ಟಿದ್ದಾರೆ.

Nehru Stadium Shivamogga ಈ ಕ್ರೀಡಾ ಪ್ರತಿಭೆಗಳ ಮುಂದಿನ ಕ್ರೀಡಾ ಜೀವನ ಯಶಸ್ವಿ ಯಾಗಲೆಂದು ಮುಖ್ಯ ಶಿಕ್ಷಕರಾದ ಪರ್ವಿಜ್ ಅಹಮದ್ , ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಎಸ್. ಕಾಳನಾಯ್ಕ, ಸಹ ತರಬೇತುದಾರರಾದ ಕುಬೇರನಾಯ್ಕ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಅಕ್ಕ ಪಕ್ಕದ ಊರಿನ ಪೋಷಕ ವರ್ಗದವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ

N. Manjunath ಕ್ರಾಂತಿದೀಪ ಮಂಜುನಾಥ್, ಶಿವಮೊಗ್ಗ ಪತ್ರಿಕೋದ್ಯಮದಲ್ಲಿ ಮುಂಚೂಣಿ ಹೆಸರು

0

ವಿಶೇಷ ಲೇಖನ: ಶಿ.ಜು.ಪಾಶಾ.

N. Manjunath ಪತ್ರಿಕಾರಂಗ ಮತ್ತು ಪತ್ರಿಕೋದ್ಯಮದ ಮಧ್ಯದ ಕೊಂಡಿಯಂತೆ ಕಾಣುವ ಕ್ರಾಂತಿದೀಪ ದಿನಪತ್ರಿಕೆಯ ಸಂಪಾದಕ ಎನ್.ಮಂಜುನಾಥ್ ಮಂಜಣ್ಣ ಕಷ್ಟ- ನಷ್ಟದ ನಡುವೆಯೇ ದೀಪ ಆರದಂತೆ ನೋಡಿಕೊಂಡವರು. ಈ ದೀಪ ಆರಿಬಿಡುತ್ತಿದ್ದರೆ ಕೇವಲ ಮಂಜಣ್ಣ ಮಾತ್ರ ನೊಂದುಕೊಳ್ಳುತ್ತಿರಲಿಲ್ಲ;

ಬಹಳಷ್ಟು ಯುವ ಪತ್ರಕರ್ತರ ಪತ್ರಿಕಾ ಲೋಕದ ಕಾಲ್ದಾರಿಯೂ ಮುಚ್ಚಿ ಹೋಗುತ್ತಿತ್ತು. ಇವತ್ತು ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಕ್ರಾಂತಿದೀಪ ಹುಟ್ಟು ಹಾಕಿದ ಪತ್ರಕರ್ತರಿದ್ದಾರೆ. ಅಂತೆಯೇ, ತಮ್ಮದೇ ಪುಟ್ಟ ಪುಟ್ಟ ಮಾಧ್ಯಮ ದ್ವೀಪಗಳನ್ನು ಸೃಷ್ಟಿಸಿಕೊಂಡು ಬದುಕು ಕಟ್ಟಿಕೊಂಡ ಪತ್ರಕರ್ತರ ದೊಡ್ಡ ಸಮೂಹವೂ ಕ್ರಿಯಾಶೀಲವಾಗಿದೆ. ಇವರಿಗೆಲ್ಲ ತಾಯಿಬೇರಿನಂತೆ ಉಳಿದುಕೊಂಡು, ತನ್ನ ತಾ ಬೆಳೆಸಿಕೊಂಡು ಬರುತ್ತಿದೆ ಕ್ರಾಂತಿದೀಪ.

N. Manjunath ಶಿವಮೊಗ್ಗ ಕೇಂದ್ರವಾಗಿಸಿಕೊಂಡ ಮಲೆನಾಡಿನ ಬಹಳಷ್ಟು ಹೋರಾಟಗಳಲ್ಲಿ ಕ್ರಾಂತಿದೀಪ ಪ್ರಮುಖ ಪಾತ್ರವಹಿಸುತ್ತಲೇ ಬಂದಿದೆ. ಕ್ರಾಂತಿದೀಪದ ಪಂಜು ಹಿಡಿದ ಮಂಜಣ್ಣ ಬಹಳಷ್ಟು ಹೋರಾಟಗಳಲ್ಲಿ ತಾವು ಪಾಲ್ಗೊಂಡಿದ್ದಲ್ಲದೇ ಪತ್ರಿಕೆಯನ್ನೂ ಅದಕ್ಕೆ ವೇದಿಕೆಯಾಗಿಸುತ್ತಾ ಬಂದಿದ್ದಾರೆ. ಜನಪರ, ಪರಿಸರ ಪರ, ಜೀವಪರ ಹೋರಾಟಗಳಲ್ಲಿ ಪತ್ರಿಕೆಯೊಂದು ಹೇಗೆ ಪಾಲ್ಗೊಂಡು ಆ ಹೋರಾಟಗಳನ್ನು ಯಶಸ್ಸಿನತ್ತ ಕೊಂಡೊಯ್ಯಬಹುದು ಎಂಬುದಕ್ಕೆ ಕ್ರಾಂತಿದೀಪ ಪತ್ರಿಕೆ ಮತ್ತು ಮಂಜಣ್ಣ ಸಾಕ್ಷಿಯಾಗಿ ನಮ್ಮ ಕಣ್ಣಮುಂದೆಯೇ ಇದ್ದಾರೆ.ತುಂಗಾಮೂಲ ಉಳಿಸಿ ಹೋರಾಟ ಹಾಗೂ ಕೋಮು ಸೌಹಾರ್ದದ ನಿರಂತರ ಹೋರಾಟಗಳು ಇದಕ್ಕೆಲ್ಲ ಸಾಕ್ಷಿ. ಸ್ವತಃ ಮಂಜಣ್ಣ ಕಿರಿಯ ವಯಸ್ಸಲ್ಲೇ ಗೋಕಾಕ್ ಚಳುವಳಿಯಲ್ಲಿ ಹೆಜ್ಜೆಯೂರಿದ್ದರು. ಆ ಹೋರಾಟದ ಗುಣ ಪತ್ರಿಕೆಗೂ ಮೆತ್ತಿಕೊಂಡೇ ಬಂದಿದೆ.

ತೆಂಗಿನ ಮರ ಎತ್ತರೆತ್ತರಕ್ಕೆ ಬೆಳೆದರೂ ಅದು ಕಲ್ಪವೃಕ್ಷವಾಗುತ್ತಾ ಹೋಗುತ್ತದಲ್ಲ, ಹಾಗೆ ಕ್ರಾಂತಿದೀಪ ಕೂಡ ವರ್ಷ ವರ್ಷವೂ ಪ್ರೌಢಿಮೆ ಮೆರೆಯುತ್ತಾ, ಪತ್ರಕರ್ತ ಆಗುವ ಕನಸು ಹೊತ್ತು ಬರುವ ಯುವ ಸಮೂಹದ ಕೈ ಹಿಡಿಯುತ್ತಾ ಬಂದಿದೆ.

ಮಲೆನಾಡಲ್ಲಿ ಹೋರಾಟಕ್ಕೆ ತೀವ್ರತರವಾಗಿ ಪಂಜು ಹಿಡಿದ ಪತ್ರಿಕೆ ಕ್ರಾಂತಿದೀಪ. ಅದರ ಲೋಗೋ ಕೂಡ ಪಂಜು.ಬೆಂಕಿಯನ್ನು ಬೆಳಕಾಗಿಸುವ ನಿಟ್ಟಿನಲ್ಲಿ ಪತ್ರಿಕೆ ಯಾವತ್ತಿಗೂ ಪ್ರಯತ್ನ ಕೈಬಿಟ್ಟಿಲ್ಲ ಎಂಬುದೊಂದು ಹೆಮ್ಮೆ.

ಕ್ರಾಂತಿದೀಪ ಮತ್ತು ಮಂಜಣ್ಣ ನನಗೆ ಗುರುವೇ; ಪತ್ರಿಕಾರಂಗದಲ್ಲಿ ಸುದ್ದಿ ಅರಿವು ಮೂಡಿಸಿದ ಅರಿವೇ ಗುರು. ನಾನು ಒಂದಿಷ್ಟು ವರ್ಷಗಳ ಕಾಲ ಕ್ರಾಂತಿದೀಪದಲ್ಲಿ ಪತ್ರಕರ್ತನಾಗಿದ್ದೆ. ಆಗ ಹೊಸ ಹೊಸದಕ್ಕೆ ತುಡಿಯುವ ಸಂಪಾದಕರಾಗಿ ನನಗೆ ಕಂಡಿದ್ದು ಮಂಜಣ್ಣ. ಮೊದಲ ಬಾರಿಗೆ ಆಗಿನ ಶಿವಮೊಗ್ಗ ನಗರಸಭೆಯ ಎಲ್ಲಾ ಕೌನ್ಸಿಲರ್ ಗಳ ಸಂದರ್ಶನ ಮಾಡಿದ್ದು ಈಗಲೂ ಇತಿಹಾಸವೇ. ಈಗ ಪ್ರತಿವರ್ಷ ಬಹಳಷ್ಟು ಪತ್ರಿಕೆಗಳು ಈ ಸಂಪ್ರದಾಯ ಪಾಲಿಸುತ್ತವೆ- ಆ ಮಾತು ಬೇರೆ. ರಾಜ್ಯಮಟ್ಟದ ಪತ್ರಿಕೆಗಳ ಎದೆಗೆ ಎದೆಕೊಟ್ಟು ಅರ್ಥಪೂರ್ಣ ವಿಶೇಷಾಂಕಗಳನ್ನು ಆಗ ಜಿಲ್ಲಾಮಟ್ಟದ ಪತ್ರಿಕೆಯಾಗಿದ್ದ ಕ್ರಾಂತಿದೀಪ ಹೊರತರುತ್ತಿತ್ತು. ಇಂಥ ಹತ್ತು ಹಲವು ಸುದ್ದಿ ಸಾಹಸಗಳಿಗೆ ನಮ್ಮಂಥವರಿಗೆ ವೇದಿಕೆಯಾಗಿದ್ದು ಕ್ರಾಂತಿದೀಪ.

ಕ್ರಾಂತಿದೀಪದ ಸಾಹಸಗಳನೇಕ‌ ಶಿವಮೊಗ್ಗ ಪತ್ರಿಕೋದ್ಯಮ ಇತಿಹಾಸದ ಮೈಲುಗಲ್ಲಾಗಿವೆ. ಕಲ್ಲೊಂದು ಮೂರ್ತಿಯಾಗುವುದೆಂದರೆ ಉಳಿಪೆಟ್ಟು ಉಣ್ಣದಿರುತ್ತದೆಯೇ! ಅಂಥ ಬಹಳಷ್ಟು ಪೆಟ್ಟುಗಳನ್ನು ತಿನ್ನುತ್ತಲೇ ಪತ್ರಿಕೆ ಮತ್ತು ಮಂಜಣ್ಣ ತಿಂದಿದ್ದಾರೆ. ಅದೂ ಕೂಡ ಇತಿಹಾಸದ ಭಾಗವೇ.

ಬಿ ಎ ಪೂರ್ತಿ ಮಾಡದಿದ್ದರೂ ಪತ್ರಿಕೋದ್ಯಮದ ನಿಜಪಾಠ ಹೇಳಿಕೊಟ್ಟವರು ಮಂಜಣ್ಣ. ಪೈಲ್ವಾನ್ ಪೂಜಾರಿ ನಿಂಗಪ್ಪ- ಶ್ರೀಮತಿ ಲಕ್ಷ್ಮಮ್ಮರ ಮಗ ಎನ್.ಮಂಜುನಾಥ್ ರ ಸೇವಾನುಭವ ಅಚ್ಚರಿ ಮೂಡಿಸುತ್ತೆ. ತಮ್ಮ ಸಹ ಪತ್ರಕರ್ತರ ಜೊತೆ ನಿಂತು ಪತ್ರಕರ್ತರ ಏಳಿಗೆಗಾಗಿಯೂ ಮಂಜಣ್ಣ ದುಡಿದಿದ್ದಾರೆ. 1991ರ ಸಮಯ. ಎಸ್.ಬಂಗಾರಪ್ಪ ಮುಖ್ಯಮಂತ್ರಿ, ಕಾಗೋಡು ತಿಮ್ಮಪ್ಪ ಹೌಸಿಂಗ್ ಚೇರ್ಮನ್. ಶಿವಮೊಗ್ಗದಲ್ಲಿ ಪತ್ರಕರ್ತರ ಕಾಲೋನಿಗೆ ಪ್ರಯತ್ನ ನಡೆಯಿತು. 37 ಜನ ಪತ್ರಕರ್ತರಿಗೆ ಮನೆಭಾಗ್ಯ ಸಿಕ್ಕಿತ್ತು. ಅದರ ಹಿಂದೆ ಮಂಜಣ್ಣ ಮತ್ತು ತಂಡದ ಪ್ರಯತ್ನ ಸಣ್ಣದಿರಲಿಲ್ಲ.1997 ರಲ್ಲಿ ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪತ್ರಿಕಾಲಯಗಳಲ್ಲಿ ಅಚ್ಚುಮೊಳೆ ಜೋಡಿಸುತ್ತಿದ್ದ 72 ಜನರಿಗೆ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಉಚಿತ ನಿವೇಶನ ನೀಡಿಸುವಲ್ಲಿ ಮಂಜಣ್ಣ ಮತ್ತು ತಂಡದ ಶ್ರಮ ಮರೆತರೇನು ಚೆನ್ನ!
ಅಂತೆಯೇ, ರಾಜ್ಯದಲ್ಲಿಯೇ ಇತಿಹಾಸ ಬರೆದಿದ್ದು ಶಿವಮೊಗ್ಗದ ಸೋಮಿ‌ನಕೊಪ್ಪ ಬಡಾವಣೆಯ ಪ್ರೆಸ್ ಕಾಲೋನಿ. ಆಗ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. 227 ಜನ ಪತ್ರಕರ್ತರಿಗೆ ನಿವೇಶನ ಸಿಗುವಂತಾಯ್ತು. ಈಗ ಮತ್ತೊಂದು ಹಂತದಲ್ಲಿ 74 ಜನ ಪತ್ರಕರ್ತರಿಗೆ ನಿವೇಶನ ಸಿಗಲಿದೆ. ಇದರ ಹಿಂದೆಯೂ ಮಂಜಣ್ಣ ಮತ್ತು ತಂಡದ ಬೆವರು ಹರಿದಿದೆ.

ಹಾಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಮಂಜಣ್ಣ ಪತ್ರಕರ್ತರ ಬಗ್ಗೆಯೂ ಕಾಳಜಿವಹಿಸುತ್ತಾ ಬಂದವರು. ವ್ಯವಸ್ಥಿತ ಪತ್ರಿಕಾ ಭವನ ಶಿವಮೊಗ್ಗದವರ ನಾಲಿಗೆಯ ಮೇಲಷ್ಟೇ ನಲಿಯುತ್ತಿಲ್ಲ- ಹೊರ ಜಿಲ್ಲೆಗಳ, ರಾಜ್ಯದ ಪ್ರಮುಖರ ಗಮನವನ್ನೂ ಸೆಳೆಯುತ್ತಿದೆ. ಮಂಜಣ್ಣನ ಕಾಳಜಿಯುತ ಕೆಲಸಗಳಲ್ಲಿ ಪತ್ರಿಕಾಭವನ ಕೂಡ ಪ್ರಮುಖವಾದುದು.

ಅಚ್ಚುಮೊಳೆಯಿಂದ ಕ್ರಾಂತಿದೀಪ ಆರಂಭವಾಯ್ತು. ಮುಂಗಾರಿನಿಂದ(ಮುಂಗಾರು ಪತ್ರಿಕೆ) ಮಂಜಣ್ಣನ ಪತ್ರಿಕಾ ಲೋಕ ಶುರುವಾಯ್ತು.ನನಗೆ ಗೊತ್ತಿರುವ ಹಾಗೆ, ಮಂಜಣ್ಣ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಅಭಿವೃದ್ಧಿಗಾಗಿ ರಚಿಸಲ್ಪಟ್ಟಿದ್ದ ಪಿ.ರಾಮಯ್ಯ ಸಮಿತಿ ಸದಸ್ಯರಾಗಿ, 2008ರಿಂದ ನಿರಂತರವಾಗಿ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಪ್ರಾದೇಶಿಕ ಪತ್ರಿಕೆಗಳ ಸಂಘದ ರಾಜ್ಯಾಧ್ಯಕ್ಷರಾಗಿ, ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘದ ಅಧ್ಯಕ್ಷರಾಗಿ…ಹೀಗೆ, ಬಹಳಷ್ಟು ರೀತಿಯಲ್ಲಿ ಸಂಘಟನಾತ್ಮಕವಾಗಿ ಅರಳಿದವರು ಮಂಜಣ್ಣ.

ಅಚ್ಚುಮೊಳೆಯಿಂದ ಆರಂಭವಾದ ಕ್ರಾಂತಿದೀಪ ಪತ್ರಿಕೆ ಈಗ ಪ್ರಾದೇಶಿಕ ಪತ್ರಿಕೆಯಾಗಿ 8 ಜಿಲ್ಲೆಗಳಲ್ಲಿ ಸುದ್ದಿ ಬೆಳಕು ಚೆಲ್ಲುತ್ತಿದೆ. ಮೂವತ್ತಕ್ಕೂ ಹೆಚ್ಚುಜನರಿಗೆ ಅನ್ನ ಕೊಡುತ್ತಿದೆ. 2003ರಲ್ಲಿ ಶಿವಮೊಗ್ಗ ಜಿಲ್ಲಾ ಅತ್ಯುತ್ತಮ ಪತ್ರಿಕೆ ಸಂಪಾದಕರೆಂದು ಪ್ರೆಸ್ ಗಿಲ್ಡ್ ಪ್ರಶಸ್ತಿ, 2003 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಆಂದೋಲನ ಪ್ರಶಸ್ತಿ, 2013ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ, ಗೌರವ, 2014ರಲ್ಲಿ ಕಿಡಿ ಶೇಷಪ್ಪ ಪ್ರಶಸ್ತಿ ಪಡೆದ ಕ್ರಾಂತಿದೀಪ ಮತ್ತು ಕ್ರಾಂತಿದೀಪದ ಮಂಜಣ್ಣರಿಗೆ ಇದೀಗ ಕರ್ನಾಟಕ ಪತ್ರಿಕೋದ್ಯಮದ ಅತ್ಯುನ್ನತ ಗೌರವ ದಕ್ಕಿದೆ…ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪಡೆದಿರುವ ಕ್ರಾಂತಿದೀಪದ ಮಂಜಣ್ಣ ಹೊಸ ಪತ್ರಕರ್ತರಿಗೆ ಎಂದಿಗೂ ತಮ್ಮ ಕಚೇರಿಯ ಕದ ತೆರೆದಿಟ್ಟ ಸಂಪಾದಕರು…ಹಾಗಾಗಿ, ಮಂಜಣ್ಣನಿಗೆ ಈ ಪ್ರಶಸ್ತಿ ಹೇಗೆ ಅತ್ಯುನ್ನತ ಗೌರವವೋ ಈ ಪ್ರಶಸ್ತಿಗೂ ಒಂದು ಅತ್ಯುನ್ನತ ಮೌಲ್ಯವೇ….

  • ಶಿ.ಜು.ಪಾಶ

Tirupati laddu ಜನಪ್ರಿಯತೆ ಕುಗ್ಗದ ತಿರುಪತಿ” ಲಡ್ಡು” ಪ್ರಸಾದ

0

Tirupati laddu ತಿರುಪತಿ ಲಡ್ಡು ಪ್ರಸಾದ ಕುರಿತು ಏನೆಲ್ಲಾ ವ್ಯತಿರಿಕ್ತ ವರದಿಗಳು‌ ಮಾಧ್ಯಮಗಳಲ್ಲಿ ಬಂದಿವೆ. ಪ್ರಾಣಿ‌ಜನ್ಯ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ.
ಅದು ಪ್ರಯೋಗಾಲಯದಲ್ಲಿ ಧೃಢಪಟ್ಟಿದೆ.ಆದರೂ ಕೂಡ ಶ್ರೀವೆಂಕಟೇಶ್ವರ ಸ್ವಾಮಿ ಲಡ್ಡು ಪ್ರಸಾದದ ಜನಪ್ರಿಯತೆ ಕುಗ್ಗಿಲ್ಲ.

ದಿನಂಪ್ರತಿ 60,000 ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ ಎಂದು ಟಿಟಿಡಿ ಹೇಳಿದೆ .
ಬಂದ ಭಕ್ತರು ಪ್ರಸಾದ ರೂಪ ಮತ್ತು‌, ವಿತರಣೆಗೆಂದು ಸಾಕಷ್ಟು ಲಡ್ಡುಗಳನ್ನು ಖರೀದಿ ಮಾಡುತ್ತಾರೆ. ಅದರಂತೆ ಸೆ.19ರಂದು 3.59 ಲಕ್ಷ ಲಡ್ಡು ಮಾರಾ­ಟ­ವಾಗಿವೆ. ಸೆ.20ರಂದು 3.17 ಲಕ್ಷ, ಸೆ.21ಕ್ಕೆ 3.67 ಲಕ್ಷ, ಸೆ.22ಕ್ಕೆ 3.60 ಲಕ್ಷ ಲಡ್ಡುಗಳು ಮಾರಾಟವಾಗಿವೆ.

Tirupati laddu ಪ್ರಸಾದದಲ್ಲಿ ದೋಷವಿದೆ ಎಂಬ ಸುದ್ದಿಯ ಮೊದಲು ದೇಗುಲದಲ್ಲಿ ಪ್ರತೀದಿನ ಸರಾಸರಿ 3.50 ಲಕ್ಷ ಲಡ್ಡು ಮಾರಾಟವಾಗುತ್ತಿತ್ತು. ಈಗಲೂ ಅದರ ಆಸುಪಾಸಿನ ಸಂಖ್ಯೆಯಲ್ಲೇ ಮಾರಾಟ­ವಾಗುತ್ತಿದೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.

Kuvempu University ಕುವೆಂಪು ವಿವಿ ನಗರ ಕಚೇರಿಯಲ್ಲಿಆಸಕ್ತರ ಗಮನ ಸೆಳೆದ ” ಹಾರುವ ಹಾವು” !

0

Kuvempu University ಎಂ.ಆರ್.ಎಸ್ ಸರ್ಕಲ್ ನಲ್ಲಿರುವ ಕುವೆಂಪು ವಿಶ್ವವಿದ್ಯಾಲಯ ನಗರ ಕಛೇರಿಯಲ್ಲಿ ಹಾರುವ ಹಾವು (Flying Ornate Snake) ಕಾಣಿಸಿಕೊಂಡಿದೆ ಇದು ಉರಗ ಜಾತಿಯಲ್ಲಿ ವಿಶೇಷ ಮತ್ತು ಆಕರ್ಷಣೀಯ ವಾದದ್ದು ಈ ಹಾವಿಗೆ ಅಲಂಕೃತ ಹಾರುವ ಎಂದು ಹೆಸರು ನೋಡುಗರನ್ನು ಗಮನ ಸೆಳೆಯುತ್ತದೆ. ಈ ಹಾವು ನಗರ ಕಛೇರಿ ಆವರಣದಲ್ಲಿ ಕಾಣಿಸಿಕೊಂಡಿದ್ದು , ಕೊಡಲೆ ಉರಗ ರಕ್ಷಕ ಸ್ನೇಕ್ ವಿಕ್ಕಿ ಮತ್ತು ಉರಗ ತಜ್ಞ ಜಯಂತ ಬಾಬು ರವರಿಗೆ ಸಂಪರ್ಕಿಸಿದ್ದು ಕೊಡಲೆ ಸ್ಥಳಕ್ಕೆ ಆಗಮಿಸಿದ ಇವರು ಈ ಸುಂದರ ಹಾವಿನ ಬಗ್ಗೆ ಇಲ್ಲಿರುವ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಸುರಕ್ಷಿತವಾಗಿ ಸಂರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಿರುತ್ತಾರೆ.
Kuvempu University ಉಗರಗಳ ರಕ್ಷಣೆಗಾಗಿ ಸಂಪರ್ಕಿಸಿ : ಸ್ನೇಕ್ ವಿಕ್ಕಿ
9916286349,
ಜಯಂತ್ ಬಾಬು
9886635333

Karnataka Lokayukta ಸಾರ್ವಜನಿಕರ ಸಹಕಾರದಿಂದ ಮಾತ್ರ ಭ್ರಷ್ಡಾಚಾರ ತಡೆಗಟ್ಟಲು ಸಾಧ್ಯ- ನ್ಯಾ. ಮಂಜುನಾಥ್ ನಾಯಕ್

0

Karnataka Lokayukta ಭ್ರಷ್ಟಾಚಾರ ತಡೆಗೆ ಸಾಕಷ್ಟು ಕಾನೂನುಗಳು, ಲೋಕಾಯುಕ್ತ, ವಿಶೇಷ ನ್ಯಾಯಾಲಯಗಳಿದ್ದರೂ ಇದನ್ನು ತಡೆಯಲು ಸಫಲವಾಗಿಲ್ಲ. ಸಾರ್ವಜನಿಕರ ಸಹಕಾರದಿಂದ ಮಾತ್ರ ಭ್ರಷ್ಟಾಚಾರವನ್ನು ಕಡಿಮೆ ಮಾಡಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯ್ಕ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ, ರಾಷ್ಟ್ರೀಯ ಶಿಕ್ಷಣ ಸಮಿತಿ, ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜು, ಶಿವಮೊಗ್ಗ ಇವರ ಸಹಯೋಗದೊಂದಿಗೆ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಸಿಎ ಸಭಾಂಗಣದಲ್ಲಿ ಏರ್ಪಡಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Karnataka Lokayukta ಭ್ರಷ್ಟಾಚಾರ ತಡೆಗೆ ಸಾಕಷ್ಟು ಕಾನೂನುಗಳಿದ್ದರೂ ಇದರ ತಡೆ ಸಾಧ್ಯವಾಗಿಲ್ಲ. ಕಾರಣ ಜನ ಸಾಮಾನ್ಯರ ಸಹಕಾರದ ಕೊರತೆ. ಆದ್ದರಿಂದ ಸಾರ್ವಜನಿಕರು, ಯುವಜನತೆ ಎಚ್ಚೆತ್ತುಕೊಂಡು ಸಹಕರಿಸಿದಲ್ಲಿ ಮಾತ್ರ ಇದನ್ನು ಕಡಿಮೆ ಮಾಡಬಹುದು ಎಂದರು.
ಭ್ರಷ್ಟಾಚಾರ ತಡೆ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಈ ಉದ್ದೇಶವೇ ವಿಷಾಧನೀಯ. ಭ್ರಷ್ಟಾಚಾರ ಎಂಬುದು ಸಮಾಜದ ಒಳಹೊಕ್ಕಿದ್ದು ಇದರಿಂದ ಅನೇಕರು ತೊಂದರೆಗೀಡಾಗಿದ್ದರೆ, ಕೆಲವರು ಲಾಭ ಪಡೆಯುತ್ತಿದ್ದಾರೆ.
ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಆದ್ದರಿಂದ ಸ್ಪರ್ಧೆ ಹೆಚ್ಚುತ್ತಿದೆ. ಈ ಅಸಮತೋಲನವೂ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಹಾಗೂ ಅನಕ್ಷರತೆ ಅಥವಾ ಕಡಿಮೆ ಸಾಕ್ಷರತೆ ಪ್ರಮಾಣ ಕೂಡ ಭ್ರಷ್ಟಾಚಾರಕ್ಕೆ ಒಂದು ಕಾರಣವಾಗಿದೆ.
ಹೆಚ್ಚು ಬೇಕು ಎನ್ನುವ ದಾಹ ಭ್ರಷ್ಟಾಚಾರದ ಮೂಲ ಕಾರಣವಾಗಿದ್ದು, ಜೀವನದಲ್ಲಿ ನಮ್ಮ ಆದ್ಯತೆಗಳು ಬದಲಾಗಬೇಕು. ಉತ್ತಮ ಶಿಕ್ಷಣ ಮೊದಲ ಆದ್ಯತೆಯಾಗಬೇಕು. ಉತ್ತಮ ಶಿಕ್ಷಣ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕಾರಿಯಾಗಿದೆ. ಹಾಗೂ ಜನರಿಗೆ ಸಾಕಷ್ಟು ಉದ್ಯೋಗ ಅವಕಾಶಗಳು ಮತ್ತು ಸೌಲಭ್ಯಗಳನ್ನು ನೀಡಿದಲ್ಲಿ ಒಂದು ಹಂತಕ್ಕೆ ಇದಕ್ಕೆ ಕಡಿವಾಣ ಹಾಕಬಹುದು ಎಂದ ಅವರು ಸ್ವಚ್ಚತೆ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಸಹ ವಿದ್ಯಾರ್ಹತೆಯನ್ನು ನಿಗದಿಪಡಿಸುತ್ತೇವೆ. ಹೀಗಿರುವಾಗ ನಮ್ಮ ಕಾನೂನುಗಳನ್ನು ರೂಪಿಸುವ ಜನಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸದೇ ಇರುವುದು ದುರಂತ ಎನ್ನಬಹುದು ಎಂದರು.

ಕರ್ನಾಟಕ ಲೋಕಾಯುಕ್ತ ಪೊಲೀಸ್ ವರಿಷ್ಟಾಧಿಕಾರಿ ಮಂಜುನಾಥ ಚೌದರಿ ಹೆಚ್.ಎಂ. ಮಾತನಾಡಿ, ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ದೊರಕಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ, ಸರ್ಕಾರಿ ಕರ್ತವ್ಯ ನಿರ್ವಹಿಸಲು ನಿರ್ಲಕ್ಷ್ಯ, ಅನಗತ್ಯ ವಿಳಂತ ಮತ್ತು ಅಧಿಕೃತ ಕೆಲಸ ನಿರ್ವಹಿಸಲು ಲಂಚಕ್ಕೆ ಬೇಡಿಕೆ ಇಟ್ಟರೆ ಅದು ಭ್ರಷ್ಟಾಚಾರ. ಯುವಜನತೆ ಸೇರಿದಂತೆ ಯಾರೇ ಆಗಲಿ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಬಾರದು. ವಿದ್ಯಾರ್ಥಿಗಳು, ಯುವಜನತೆಗೆ ಇಂತಹ ಭ್ರಷ್ಟಾಚಾರ ಪ್ರಕರಣಗಳು ಗಮನಕ್ಕೆ ಬಂದರೆ ನೇರವಾಗಿ ಅರ್ಜಿ ಮೂಲಕ ಅಥವಾ ಕರೆ ಮಾಡಿ ಲೋಕಾಯುಕ್ತ ಕಚೇರಿಗೆ ತಿಳಿಸಬಹುದು.
ಯುವಜನತೆಯಲ್ಲಿ ಭ್ರಷ್ಟಾಚಾರ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವುದು ಅತಿ ಮುಖ್ಯವಾಗಿದೆ. ಯುವಜನತೆ ಉತ್ತಮ ಶಿಕ್ಷಣ ಪಡೆದು ಹತ್ತಾರು ಜನರಿಗೆ ಉದ್ಯೋಗ ನೀಡುವಂತಹ ಕೆಲಸ ಮಾಡಬೇಕು ಹಾಗೂ ವಾಹನ ಚಾಲನೆ ವೇಳೆ ರಸ್ತೆ ಸುರಕ್ಷತಾ ಕ್ರಮಗಳನ್ನೆಲ್ಲ ಪಾಲಿಸಬೇಕೆಂದು ಕಿವಿ ಮಾತು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕರಿಂದ ಹಣ ಪಡೆಯುವುದು ಭ್ರಷ್ಟಾಚಾರ. ಪ್ರಸ್ತುತ ಭ್ರಷ್ಟಾಚಾರ ಒಂದು ರೂಢಿಯಂತೆ ಆಗಿದೆ. ಇದು ದುರಾಸೆಯ ಫಲವಾಗಿದ್ದು ಎಲ್ಲ ಕಡೆ ವ್ಯಾಪಿಸಿದೆ. ಇದರ ನಿರ್ಮೂಲನೆ ಒಂದು ದೊಡ್ಡ ಸವಾಲಾಗಿದೆ. ಒಂದೊಂದು ಸ್ಥಳದಲ್ಲಿ ಒಂದೊಂದು ರೀತಿಯಲ್ಲಿ ಭ್ರಷ್ಟಾಚಾರವಿದ್ದು, ಇದಕ್ಕೆ ಸ್ಥಳೀಯವಾದ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ವಿದ್ಯಾರ್ಥಿಗಳಾದ ನೀವು ಡೇಟಾ ಸೈನ್ಸ್, ತಾಂತ್ರಿಕ ಶಿಕ್ಷಣ ಅಳವಡಿಸಿಕೊಂಡು ಈ ಸವಾಲನ್ನು ಎದುರಿಸಬಹುದು.
ಸರಿಯಾದ ಶಿಕ್ಷಣ, ಸಂತೃಪ್ತಿ ಮತ್ತು ಮಾನವೀಯತೆಯ ನೆಲೆಗಟ್ಟಿನಿಂದ ಈ ಭ್ರಷ್ಟತೆಯಿಂದ ದೂರ ಇರಬಹುದು ಎಂದ ಅವರು ಯುವಜನತೆ ಭ್ರಷ್ಟಾಚಾರದಿಂದ ತಾವೂ ದೂರ ಇದ್ದು ಇದರ ವಿರುದ್ದ ಹೋರಾಡಬೇಕಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ .ಎಂ.ಎಸ್. ಮಾತನಾಡಿದರು.
ಕರ್ನಾಟಕ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಎಸ್.ಸುರೇಶ್ ಭ್ರಷ್ಟಾಚಾರ ತಡೆ ಕಾಯ್ದೆ 1988 ಕುರಿತು ಮಾತನಾಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ರಾಘವೇಂದ್ರ ಸ್ವಾಮಿ, ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಅನಂತ ದತ್ತ, ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಇತರೆ ಅಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Klive Special Article ಅಜಂತಾ ಗುಹೆಗಳ ಗುಟ್ಟೇನು?

0

Klive Special Article ಅಜಂತಾ ಗುಹಾ ಸಮುಚ್ಚಯ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರ (ಹಿಂದಿನ ಹೆಸರು-ಔರಂಗಾಬಾದ್)
ಜಿಲ್ಲೆಯಲ್ಲಿದೆ.
ಅಲ್ಲಿಗೆ ಹೋಗುವುದೂ ಚಾರಣಿಗರಿಗೆ ಬಹಳ ಇಷ್ಟವಾದ ಸಂಗತಿ. ಬೌದ್ಧಧರ್ಮದ ಮೇರುಕಾಲದಲ್ಲಿ ವಿಜೃಂಭಿಸಿದ ತಾಣವಿದು. ಬೌದ್ಧ ಧರ್ಮ
ಕ್ಷೀಣಿಸುತ್ತಿದ್ದಂತೆಯೇ ಈ ಗುಹೆಗಳು ನಿರ್ಲಕ್ಷಿಸಲ್ಪಟ್ಟವು.
ಬೌದ್ಧ ಸಮುದಾಯಕ್ಕೆ ಈಗಲೂ
ಪೂಜನೀಯ ಯಾತ್ರಾ ಸ್ಥಳ. ವಿಶ್ವ ಪಾರಂಪರಿಕ ತಾಣವಾಗಿ‌ 1983 ರಲ್ಲಿ ಯುನೆಸ್ಕೊ ಪಟ್ಟಿಗೆ ಸೇರ್ಪಡೆಯಾಗಿದೆ. ತಾಣದ ಕ್ರಮಾಂಕ 242..

ಕ್ರಿಶ 1819 ಸುಮಾರಿನಲ್ಲಿ ಇದನ್ನ
ಪತ್ತೆಮಾಡಲಾಯಿತು.. ಬ್ರಿಟಿಷ್ ಬೇಟೆಗಾರರ ತಂಡ ಅಲ್ಲಿಗೆ ಬಂದಾಗ‌ ದಟ್ಟ ಕಾಡಿನ ನಡುವೆ ಈ ಗುಹೆ ಕಣ್ಸೆಳೆಯಿತು. ಕಣಿವೆಯಾಳದಲ್ಲಿ ನದಿ ಜುಳಜುಳ ಹರಿಯುತ್ತಿತ್ತು. ಹುಲಿಬೇಟೆಗೆ ಬಂದ ತಂಡ ಸ್ಥಳದ ಗುರುತಿಗೆ “ಟೈಗರ್ ರಿವರ್” ಅಂತ ಕರೆದರು.ಅದು ಮರಾಠಿಯಲ್ಲಿ “ ವಾಘೋರು” ನದಿ
ಆಯಿತು.

ಮೊದಲಿಗೆ ಬೇಟೆಯ ತಂಡಕ್ಕೆ ಕಂಡದ್ದು ಗುಹಾ ಸಮುಚ್ಚಯದ 10 ನೇ ಗುಹೆಯ ಕಮಾನು. ಆಗ ಹೈದ್ರಾಬಾದಿನ ನಿಜಾಮರಿಗೆ ವರದಿಮಾಡಿದರಂತೆ.

ಹಿನ್ನೆಲೆ..

ಗುಹೆಯ ನಿರ್ಮಾಣ ಮತ್ತು ಕೆತ್ತನೆಯು ಕ್ರಿಪೂ 200 ರಿಂದ 650 ನೇ ಶತಮಾನದಷ್ಟು ಪುರಾತನ ಎನ್ನಲಾಗುತ್ತದೆ. ಬೌದ್ಧ ಧರ್ಮದ ಉಚ್ಚ್ರಾಯದ ಕಾಲಕ್ಕೆ ಸಂಬಂಧಿಸಿವೆ.‌ ಆಗಿನ ಸಾತವಾಹನರು ಮತ್ತು ವಾಕತಾಕರು ಹಿಂದುಮತ್ತು ಬೌದ್ಧ ಧರ್ಮದ ಪೋಷಕರಾಗಿದ್ದರು.
ಇವು ಬುದ್ಧನೇ ಅಲ್ಲದೇ ಗುಹೆಯ ಒಳಗಿನ ಬುದ್ದನ ಜಾತಕಕತೆಗಳ ಆಧರಿಸಿ ರಚಿಸಿರುವ ಬಣ್ಣದ ಚಿತ್ರಗಳಿಂದ ಪ್ರಸಿದ್ಧವಾಗಿದೆ
.
Klive Special Article
ಒಟ್ಟು 30 ಗುಹೆಗಳಿವೆ. ಅದರಲ್ಲಿ ಮೊದಲ ಐದು ಗುಹೆಗಳು ಚೈತ್ಯಗಳು( ಅಂದರೆ ದೇಗುಲ)
ಉಳಿದ 25 ವಿಹಾರ ಮತ್ತು ಭಿಕ್ಷುಗಳಿಗೆ ಸಂಬಂಧಿಸಿವೆ.
ಇವುಗಳಲ್ಲಿ 8,9,10,12,13 ಮತ್ತು 30 ನೇ ಗುಹೆಗಳು ಹೀನಾಯಾನ ಪಂಥಕ್ಕೆ ಸೇರಿದವು.ಮಿಕ್ಕವು ಮಹಾಯಾನ ಪಂಥಕ್ಕೆ ಸೇರಿದವುಗಳಾಗಿವೆ.
ಹೀನಾಯಾನ ಪರಂಪರೆಯಲ್ಲಿ
ಬುದ್ದ ನೇರವಾಗಿ ಬಿಂಬಿತನಾಗಿಲ್ಲ.
ಕೇವಲ ಸ್ತೂಪ,ಬೋಧಿವೃಕ್ಷ ಸಂಕೇತಗಳ ಮೂಲಕ ಬುದ್ಧನ ಅಸ್ತಿತ್ವ ವ್ಯಕ್ತವಾಗಿದೆ. ನಂತರದಲ್ಲಿ
ಮಹಾಯಾನದಲ್ಲಿ ಬುದ್ಧನಿಗೆ ಪ್ರತಿಮಾರಾಧನೆ ಸಂದಿದೆ.

ಬುದ್ಧನ ಜಾತಕ ಕತೆಗಳನ್ನ ಇಲ್ಲಿ ಚಿತ್ರಿಸಲಾಗಿದೆ.
ಗುಹೆಯ ಗೋಡೆ ಮತ್ತು ಚಾವಣಿಗಳ ಒಳಮುಖದಲ್ಲಿನ
“ವರ್ಣ ಭಿತ್ತಿಚಿತ್ರಗಾರಿಕೆ “ ಯಿಂದ
ಗುಹಾ ಸಮುಚ್ಚಯ ಜಗದ್ವಿಖ್ಯಾತವಾಗಿದೆ. ಸಂಪೂರ್ಣ ಬೃಹತ್ ಏಕಶಿಲಾ ಬೆಟ್ಟವನ್ನ ಆಗಿನ ಕಾಲದಲ್ಲಿ ಹೇಗೆ ಹುಡುಕಿದರು?
ಅಲ್ಲಿ ಬಂಡೆಗಳನ್ನ ಎಂತಹ ಸಲಕರಣೆಗಳಿಂದ ಕೊರೆದರು? ಶಿಲ್ಪಕಲಾವಿದರು ಯಾರು? ಅಲ್ಲಿ ಭೌದ್ಧಭಿಕ್ಷುಗಳ ದಿನಚರಿ‌ಹೇಗಿತ್ತು?
ಅದೊಂದೇ ಅಲ್ಲ ಭಿತ್ತಿಚಿತ್ರ ಮತ್ತು ಚಾವಣಿಚಿತ್ರಗಳನ್ನ ಹೇಗೆ ಬಿಡಿಸಿದರು? ಬಣ್ಣಗಳನ್ನ ಹೇಗೆ ತಯಾರಿಸಿದರು? ಚಿತ್ರಗಳಲ್ಲಿ ಹೇಗೆ ತುಂಬಿದರು? ಆಗ ಯಾವ ತಾಂತ್ರಿಕತೆ ಇತ್ತು? ಇತ್ಯಾದಿಗಳ
ಬಗ್ಗೆ ಇಂದಿನ ಐಟಿ-ಬಿಟಿ ಯುಗದ ನಾವು ಉತ್ತರ ಹುಡುಕುವಲ್ಲಿ
ತಡಬಡಾಯಿಸಿ ಬಿಡುವಂತಾಗುತ್ತದೆ. ಸಂಶೋಧಕರು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಜವಾಹರ‌ ಲಾಲ್ ನೆಹರು‌ ಅವರ ಉಲ್ಲೇಖದಂತೆ
“ಇಲ್ಲಿ ಬಹುತೇಕ ಮಹಿಳೆಯರ ಚಿತ್ರಗಳಿವೆ, ಸುಂದರ ರಾಜಕುಮಾರಿಯರು, ಗಾಯಕಿಯರು, ನರ್ತಕಿಯರು, ಕುಳಿತಿರುವ ಮತ್ತು ನಿಂತಿರುವ,ತಮ್ಮನ್ನು ಅಲಂಕರಿಸಿಕೊಳ್ಳುತ್ತಿರುವ ಅಥವಾ ಮೆರವಣಿಗೆಯಲ್ಲಿ ಹೊರಟಿರುವ ಭಂಗಿಗಳಲ್ಲಿವೆ. ಇದರಿಂದಾಗಿ
ಅಜಂತಾದ ಸ್ತ್ರೀ ಚಿತ್ರಗಳು ಜಗತ್ಪ್ರಸಿದ್ಧ. ಆ ವರ್ಣಚಿತ್ರಕಾರ ಭಿಕ್ಷುಗಳ (ಸನ್ಯಾಸಿಗಳು) ಜಗತ್ತನ್ನು ಮತ್ತು ಜೀವನದ ಚಲನೆಯ ನಾಟಕವನ್ನು ಎಷ್ಟು ಚೆನ್ನಾಗಿ ತಿಳಿದಿದ್ದರು ಅನಿಸುತ್ತದೆ, ಅವರು ಬೋಧಿಸತ್ವನನ್ನು ಆತನ ಶಾಂತಮುದ್ರೆ ಮತ್ತು ಇತರ ಲೌಕಿಕ ಗಾಂಭೀರ್ಯದಲ್ಲಿ ಚಿತ್ರಿಸಿದಂತೆಯೇ ಅವರು ಅದನ್ನು ಎಷ್ಟು ಪ್ರೀತಿಯಿಂದ ಚಿತ್ರಿಸಿದ್ದಾರೆ.”

ಎಲ್ಲವನ್ನೂ
ನೋಡಲು ಒಂದೇ ದಿನ ಅಸಾಧ್ಯ.
ಎಲ್ಲಗುಹೆಗಳನ್ನೂ ನೋಡುವ ಕಾತರವಿರುತ್ತದೆ.ಆದರೆ ನಮ್ಮ ಸಮಯ ಮತ್ತು ಚೈತನ್ಯ ಆಧರಿಸಿ‌
ವೀಕ್ಷಣೆಯ ಆನಂದ ಅನುಭವಿಸಬಹುದು.
ಅಜಂತಾ ಗುಹೆ, ಶಿಲ್ಪ, ಭಿತ್ತಿಚಿತ್ರಗಳು, ಹಾಗೂ ಐತಿಹ್ಯಗಳ
ಬಗ್ಗೆ ಎಷ್ಟು ಬರೆದರೂ ಸಾಲದು.
ನಮ್ಮ ಆಲೋಚನೆ‌ಗಳ ಮೂಲಕ
ಅಲ್ಲಿನ ಅಸ್ತಿತ್ವದ ಬಗ್ಗೆ ತೋಚಿದ್ದನ್ನ
ದಾಖಲಿಸಬಹುದಷ್ಟೆ. ಹೇಳುವುದು ಇನ್ನೂ ಉಳಿದಿರುತ್ತದೆ.

ಇಲ್ಲಿನ ಗುಹಾ ಸಮುಚ್ಚಯ.
ಶತಶತಮಾನಗಳಿಂದ ಓರ್ವ ಅವತಾರ ಪುರುಷನ ಪರಂಪರೆಗೆ ಮೂಕಸಾಕ್ಷಿಯಾಗಿ ಕುಳಿತಿವೆ.
ಆ ಭವ್ಯತೆಯೆದುರು ನಾವು ಅನಾಮಿಕರು ಅಷ್ಟೆ.
ನಾನು ನೋಡಿದ ಗುಹೆಗಳಲ್ಲಿ
ಸಭಾಂಗಣದ ರೀತಿಯ ಒಳ ಸ್ಥಳವಿದೆ. ಅಷ್ಟನ್ನು ಕೊರೆದು ಮತ್ತೆ ಒಳಗಡೆ ಗೂಡುಗಳು, ಅದರಲ್ಲಿ ಬುದ್ಧ ವಿಗ್ರಹ, ಜಾತಕ ಕತೆಗಳಿಗೆ ಸಂಬಂಧಿಸಿದ ಕೆತ್ತನೆಗಳಿವೆ.
ಅಚ್ಚರಿಯೆಂದರೆ ಆಗಿನ ಕಾಲದಲ್ಲಿ ರಚಿಸಿದ ವರ್ಣಚಿತ್ರಗಳ ಸರಣಿಯೇ
ಅಲ್ಲಿದೆ. ಗವ್ವೆನ್ನುವ ಕತ್ತಲೆ. ಮಂದದೀಪ ಮಾತ್ರ ಇದೆ.

ಪ್ರವಾಸಿಗರು ಮೊಬೈಲ್ ಒಯ್ಯಬಹುದು. ಆದರೆ ಫ್ಲಾಷ್ ಬಳಸುವಂತಿಲ್ಲ. ವಿಡಿಯೊ ಮಾಡುವಂತಿಲ್ಲ.
Still Photographyಗೆ ಮಾತ್ರ ಅವಕಾಶ.
ಅಲ್ಲಿನ ಸುರಕ್ಷಣಾ ಸಿಬ್ಬಂದಿಯ ಹದ್ದುಗಣ್ಣು ತಪ್ಪಿಸಲು ಕಷ್ಟ.

ಬಹಳ ಜನಪ್ರಿಯವಾಗಿರುವ, ಅಜಂತಾ ಗುಹೆ ಪ್ರಾತಿನಿಧಿಕವೆನಿಸಿರುವ “ಅಪ್ಸರೆ”ಯ ವರ್ಣಚಿತ್ರವನ್ನ ನನ್ನ ಮೊಬೈಲ್ ಶಕ್ತಿಮೀರಿ ಸೆರೆಹಿಡಿದಿದೆ.

ಪ್ರವೇಶಕ್ಕೆ ಮುನ್ನ …

ನಾವು ಅಲ್ಲಿನ ಸ್ಥಳದ ಭೂಸ್ಪರ್ಶ ಮಾಡುತ್ತಿದ್ದಂತೆಯೇ ಗೈಡುಗಳು,
ಕಲಾಕೃತಿ ಮಾರಾಟ ಮಳಿಗೆ ಏಜೆಂಟರು, ಪ್ರವಾಸಿ ಮಾಹಿಯ ಪುಸ್ತಕ, ಬಣ್ಣಬಣ್ಣದ ಫೋಟೋ ಆಲ್ಬಂಧಾರಿಗಳು, ಕಲ್ಲುಮಣಿಸರಗಳ ಮಾರಾಟಗಾರರು , ದೀನರು ನಮ್ಮನ್ನ ಸುತ್ತುವರಿದು ಕೋಟೆ ಕಟ್ಟುತ್ತಾರೆ.
ಯಾರಿಗೂ ಮನಸೋಲಬೇಡಿ..
ಗೈಡ್ ಬೇಕೆಂದರೆ ಅಧೀಕೃತ ಬ್ಯಾಡ್ಜ್
ಇರುವವರನ್ನು ಮಾತ್ರ ಗೊತ್ತು ಮಾಡಿಕೊಳ್ಳಬಹುದು. ಕೌಂಟರ್ ಬಳಿ ವಿಚಾರಣೆ ಮಾಡಬಹುದಾಗಿದೆ.

ಸ್ಥಳ ಪ್ರವೇಶದಲ್ಲೇ ನಮಗೆ ಎದುರಾಗುವ ಸವಾಲೆಂದರೆ…ಕಲ್ಲುಗುಡ್ಡದಲ್ಲಿ ಕೆತ್ತಿರುವ ಸೋಪಾನಗಳು.
ಆಗುಂಬೆ ಘಾಟಿಯೇರುವಂತೆ ಹತ್ತಬೇಕು. ಮೆಟ್ಟಿಲು ಬೇಡವೆಂದರೆ ಅನಿತು ದೂರ ಏರುಹಾದಿ
( Ramp) ಇದೆ.
ಕೈಕಾಲು ಘನವಿದ್ದರೆ ಮಾತ್ರ ಗುಹೆಗಳನ್ನ ವೀಕ್ಷಿಸಲು ಸಾಧ್ಯ.
ಜೊತೆಯಲ್ಲಿ ನೀರಿನ ಬಾಟಲಿ ಅಗತ್ಯ.ಏಕೆಂದರೆ ಒಂದೊಂದು‌ ಗುಹೆ ನೋಡಲು‌ ಸುಮಾರು ಹತ್ತು‌ಮೆಟ್ಟಿಲು ಏರಬೇಕು. ಕೈಹಿಡಿದುಕೊಳ್ಳಲು ರೇಲಿಂಗ್ ಇಲ್ಲ.
ಆದರೆ ವಾಪಸಾಗುವ ಹಾದಿ ಬೇರೆ ಮಾಡಿದ್ದಾರೆ. ಅಲ್ಲಿ ಇಳಿಯಲು ಮೆಟ್ಟಿಲುಗಳಿಲ್ಲ.ಕಾಲ್ನಡಿಗೆ ರಸ್ತೆ ಮಾಡಿ ಪ್ರವಾಸೋದ್ಯಮದವರು‌
ಪುಣ್ಯದ ಕೆಲಸ ಮಾಡಿದ್ದಾರೆ

ಮುಂಜಾಗ್ರತೆಗಳು..
*ಪ್ರವೇಶಕ್ಕೆ ಟಿಕೆಟ್ ಖರೀದಿಸಬೇಕು.
*ಗುಹೆಗಳಿರುವ ಕಣಿವೆಗೆ ಸಾಗಲು
ಸಾರಿಗೆ ಬಸ್ ವ್ಯವಸ್ಥೆ ಇದೆ. ಅದಕ್ಕೂ ಬೇರೆಯಾಗಿ ಟಿಕೆಟ್ ಖರೀದಿಸಬೇಕು.ಹತ್ತು ನಿಮಿಷದಲ್ಲಿ ಗುಹೆಗಳ ಸನಿಹ ತಲುಪಬಹುದು.
*ಅಲ್ಲಿಯೇ ಕ್ಯಾಂಟೀನ್ ಸೌಲಭ್ಯವಿದೆ. ಶಾಖಾಹಾರಿ‌‌ ಊಟವಿದೆ.

*ಜನಸಂದಣಿಯನ್ನು ತಪ್ಪಿಸಲು ಗುಹೆಗಳಿಗೆ ಮುಂಜಾನೆ ಅಥವಾ ಮಧ್ಯಾಹ್ನ ಭೇಟಿ ನೀಡಿ.
*ನೀರಿನ ಬಾಟಲಿ ಮತ್ತು ಲಘು ತಿಂಡಿಗಳನ್ನು ತೆಗೆದುಕೊಳ್ಳಿ.
ಪ್ರಥಮ ಚಿಕಿತ್ಸಾ ಕಿಟ್ ಮತ್ತು ಅಗತ್ಯ ಔಷಧಿಗಳನ್ನು ತನ್ನಿ.

*ಸೈಟ್ಗೆ ಭೇಟಿ ನೀಡುವಾಗ
ತಲೆಗೆ ಟೋಪಿ ಮತ್ತು ಸನ್‌ಸ್ಕ್ರೀನ್ ತೆಗೆದುಕೊಳ್ಳಿ.
*ಹಗುರವಾದ ಮತ್ತು ಆರಾಮದಾಯಕ ಉಡುಪುಗಳನ್ನು ಧರಿಸಿ.
*ಒಳಗೆ ಗುಹೆಗಳು ತಂಪಾಗಿರಬಹುದು, ಆದ್ದರಿಂದ ಬೆಚ್ಚಗಿನ ಬಟ್ಟೆಗಳನ್ನು ಇರಿಸಿ.
*ಬಂಡೆಗಳ ಮೇಲೆ ಕಾಲ್ನಡಿಗೆಗೆ ಸೂಕ್ತವಾದ ವಾಕಿಂಗ್ ಬೂಟುಗಳನ್ನು ಧರಿಸಿ.
*ನಿಮ್ಮ ಸುತ್ತಮುತ್ತಲಿನ ಬಗ್ಗೆ ಜಾಗರೂಕರಾಗಿರಿ.
ಒಂದು ಗುಹೆಯಿಂದ ಇನ್ನೊಂದಕ್ಕೆ ನಡೆಯುವಾಗ ಮೆಟ್ಟಿಲು ಹಾದಿ ಅಸಮವಾಗಿರುವುದರಿಂದ ನಿಮ್ಮ ಹೆಜ್ಜೆಗಳನ್ನು ನೋಡಿಕೊಂಡು ಸಾಗಿರಿ..
*ಛಾಯಾಗ್ರಹಣವನ್ನು ಅನುಮತಿಸಲಾಗಿದೆ, ಆದರೆ ನೀವು ಗುಹೆಗಳಲ್ಲಿ ಫ್ಲ್ಯಾಷ್ ಅನ್ನು ಬಳಸಬಾರದು.
*ನೀವು ಭೇಟಿ ನೀಡುವ ಮೊದಲು ಅಜಂತಾ ಗುಹೆಗಳ ಬಗ್ಗೆ ಓದಿ.
*ಅಜಂತಾ ಗುಹೆಗಳ ಪ್ರಾಮುಖ್ಯತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮಾರ್ಗದರ್ಶಿಯನ್ನು ನೇಮಿಸಿಕೊಳ್ಳಿರಿ.

ಹೋಗುವುದು ಹೇಗೆ?

ನಮ್ಮ ರಾಜ್ಯದಿಂದ ಹೋಗುವವರು
(ಔರಂಗಾಬಾದ್ ) ಛತ್ರಪತಿ ಸಾಂಭಾಜಿನಗರ ತಲುಪಬೇಕು. ಅಲ್ಲಿಂದ 93 ಕಿಮೀ ದೂರವಿದೆ.
ವೀಕ್ಷಣೆಗೆ ಕನಿಷ್ಠ ಮೂರುಗಂಟೆ ಬೇಕು. ಆದ್ದರಿಂದ ಛತ್ರಪತಿ ಸಾಂಬಾಜಿನಗರದಲ್ಲಿ ಹಿಂದಿನ ದಿನ ತಂಗುವುದು ಉತ್ತಮ
ಬೆಳಿಗ್ಗೆಯೇ ಹೊರಡಬೇಕು.
ಬಸ್ ಗಳನ್ನ ನಂಬಿಕೊಂಡರೆ ಸಮಯ ಹೊಂದಾಣಿಕೆಯಾಗದು.
ಟ್ಯಾಕ್ಸಿ ತುಂಬಾ ಅನುಕೂಲ.

ರೈಲುಮೂಲಕ ಆದರೆ (ಔರಂಗಾಬಾದ್) ಛತ್ರಪತಿ‌ಸಾಂಬಾಜಿ ನಗರ ಸನಿಹದ ನಿಲ್ದಾಣ.
ಪುಣೆ,ಮುಂಬೈಗೆ ಸುಗಮ ಸಂಪರ್ಕವಿದೆ.
ವಿಮಾನದ ಮೂಲಕ ಆದರೆ (ಔರಂಗಾಬಾದ್ ) ಛತ್ರಪತಿ‌ ಸಾಂಭಾಜಿ ನಗರಕ್ಕೆ ಬರಬೇಕು.

ಭೇಟಿಗೆ ಸೂಕ್ತ ಕಾಲ..

ಚಳಿಗಾಲ,ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಹಿತಕರ.
ಜೂನ್ ನಿಂದ ಸೆಪ್ಟೆಂಬರ್ ತಕ್ಕಮಟ್ಟಿಗೆ ಅಡ್ಡಿಯಿಲ್ಲ.
ಅಡ್ಡಾದಿಡ್ಡಿ ಮಳೆ ಸುರಿದರೆ ಮಾತ್ರ
ನಡಿಗೆಗೆ ಕಷ್ಟಸಾಧ್ಯವಾಗಬಹುದು.

ಪ್ರವಾಸಿ ಲೇಖನ

  • ಡಾ.ಸುಧೀಂದ್ರ.
    -ಪ್ರಧಾನ ಸಂಪಾದಕ.
    ಕೆ ಲೈವ್.ನ್ಯೂಸ್

Nidhi Apke Nikat ಸೆ.27 ರಂದು ದಾವಣಗೆರೆ & ಶಿವಮೊಗ್ಗ ಜಿಲ್ಲೆಗಳಲ್ಲಿ ” ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮ

0

Nidhi Apke Nikat ಶಿವಮೊಗ್ಗ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸೆ. 27 ರಂದು ಆಯೋಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹೊಸನಗರ ಅಂಚೆ ಕಚೇರಿ ರಸ್ತೆಯಲ್ಲಿರುವ ಶ್ರೀ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಹಾಗೂ ದಾವಣಗೆರೆ ತಾಲೂಕು ದೊಡ್ಡಬಾತಿ ಕೆ.ಎಂ.ಎಫ್. ಡೈರಿ ಇಲ್ಲಿ ಕಾರ್ಯಕ್ರಮ ನಡೆಯಲಿದೆ.

Nidhi Apke Nikat ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಪಿಂಚಣಿದಾರರಿಗೆ ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆವರೆಗೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದ್ದು, ಉದ್ಯೋಗದಾತರು ಮತ್ತು ಉದ್ಯೋಗಿಗಳು ಮತ್ತು ಪಿಂಚಣಿದಾರರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಾದೇಶಿಕ ಕಚೇರಿಯ ಸಹಾಯಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

Consumer Disputes Redressal Commission ಸೇವಾ ನ್ಯೂನತೆ ಪರಿಗಣಿಸಿ ಗ್ರಾಹಕರ ಪರ ತೀರ್ಪು ನೀಡಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

0

Consumer Disputes Redressal Commission ಅಖಿಲಾ ಸಿ.ಕೆ ಜೈನ್ ಎಂಬುವವರು ತಮ್ಮ ವಕೀಲರ ಮೂಲಕ ಬಾತ್ಲಾ ಟೆಲಿ ಟೆಕ್ ಪ್ರೈವೇಟ್ ಲಿಮಿಟೆಡ್, ತಮಿಳುನಾಡು ಮತ್ತು ಸ್ಯಾಮ್‌ಸಂಗ್ ಸವೀರ್ಸ್ ಸೆಂಟರ್ ಶಿವಮೊಗ್ಗ ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.

ಅರ್ಜಿದಾರ ಅಖಿಲಾ ಸಿ.ಕೆ ಜೈನ್ ರವರು ಎದುರಾರ ಬಾತ್ಲಾ ಟೆಲಿ ಟೆಕ್ ಪ್ರೈವೇಟ್ ಲಿಮಿಟೆಡ್, ತಮಿಳುನಾಡು ಮತ್ತು ಸ್ಯಾಮ್‌ಸಂಗ್ ಸವೀರ್ಸ್ ಸೆಂಟರ್ ಶಿವಮೊಗ್ಗದಲ್ಲಿ ಪ್ಲಿಪ್ ಕಾರ್ಟ್ ಮೂಲಕ ಸ್ಯಾಮ್‌ಸಂಗ್ ವಾಷಿಂಗ್ ಮಿಷನ್ ಖರೀದಿಸಿದ್ದರು.

ಮಿಷನ್‌ಗೆ ಮೂರು ವರ್ಷಗಳ ಹಾಗೂ ಬಿಡಿಭಾಗಗಳಿಗೆ 10 ವರ್ಷಗಳ ವಾರಂಟಿ ಇರುತ್ತದೆ. ಆದರೆ 2023 ರಲ್ಲಿ ವಾಷಿಂಗ್ ಮಷಿನ್ ಡ್ರಮ್ ಹಾಳಾಗಿದ್ದು, ಹೊಸದಾಗಿ ಡ್ರಮ್ ಅಳವಡಿಸಿಕೊಡಲು 5,291 ರೂಗಳನ್ನು ಪಡೆದಿರುತ್ತಾರೆ. ಆದರೆ ಬದಲಿಸಿದ ನಂತರವು ನೀರು ಸೊರಲು ಪ್ರಾರಂಭವಾಗುತ್ತದೆ.

Consumer Disputes Redressal Commission ಸರ್ವೀಸ್ ಸೆಂಟರ್‌ರವರಿಗೆ ದೂರು ನೀಡಿದ್ದು, ಮನೆಗೆ ಬಂದು ಡ್ರಮ್ ಸರಿಯಾದ ರೀತಿಯಲ್ಲಿ ಅಳವಡಿಸದೆ, ಪ್ರಶ್ನಿಸಿದಾಗ ಯಾವುದೆ ಪ್ರತಿ ಕ್ರಿಯೆ ನೀಡದೆ ಹೋರಹೋಗಿರುತ್ತಾರೆ.
ಈ ಕುರಿತು ಆಯೋಗದ ಮುಂದೆ ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದು, ಪ್ರಕರಣದ ಅಂಶಗಳು ಮತ್ತು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ, ಎದುರುದಾರರಿಗೆ ಆಯೋಗವು ನೋಟೀಸ್ ನೀಡಿ ದೂರಿನ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ತಿಳಿಸಿದ್ದು, ನೋಟೀಸ್ ಪಡೆಯದ ಹಾಗೂ ನೋಟೀಸ್ ಪಡೆದು ಹಾಜರಾಗದ ಕಾರಣ ಪ್ರಕರಣವನ್ನು ಏಕಪಕ್ಷೀಯವೆಂದು ಆಯೋಗವು ತೀರ್ಮಾನಿಸಿದೆ. ಅರ್ಜಿದಾರರ ಅಂಶಗಳು, ಪ್ರಮಾಣ ಪತ್ರ, ದಾಖಲೆಗಳನ್ನು ಮತ್ತು ದೂರುದಾರರ ಪರ ವಕೀಲರ ವಾದವನ್ನು ಆಲಿಸಿ, ಸೇವಾ ನ್ಯೂನತೆ ಎಸಗಿರುವುದು ಕಂಡುಬಂದಿದ್ದು, ಎದುರುದಾರರು ದೂರುದಾರರಿಂದ 45 ದಿನದೊಳಗೆ ವಾಷಿಂಗ್ ಮಷಿನ್ ಬದಲಿಸಿಕೊಡಲು ಮತ್ತು ವಾಷಿಂಗ್ ಮಷಿನ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿಕೊಡಲು ಸೂಚಿಸಿದೆ.

ಈ ಆದೇಶ ಪಾಲಿಸುವರೆಗೂ ದಿನಕ್ಕೆ ರೂ. 150 ರಂತೆ ವಾಷಿಂಗ್ ಚಾರ್ಜ್ ನೀಡಲು ಹಾಗೂ ರೂ.5.291 ಡ್ರಮ್ ಚಾರ್ಜಸ್ ಮತ್ತು ರೂ. 10,000 ಗಳನ್ನು ಮಾನಸಿಕ ಹಿಂಸೆ ಹಾಗೂ ಹಾನಿಗಳಿಗೆ ಪರಿಹಾರವಾಗಿ ಹಾಗೂ ವ್ಯಾಜ್ಯದ ಖರ್ಚು ವೆಚ್ಚದ ಬಾಬ್ತಾಗಿ ನೀಡಬೇಕು. ತಪ್ಪಿದಲ್ಲಿ ಆದೇಶವಾದ ದಿನಾಂಕದಿಂದ ಈ ಮೊತ್ತಗಳಿಗೆ ವಾರ್ಷಿಕ ಶೇ.9 ರಷ್ಟು ಬಡ್ಡಿಯನ್ನು ಪೂರಾ ಹಣ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಸೆ.18 ರಂದು ಆದೇಶಿಸಿದೆ.

Youth Empowerment and Sports ಮೈಸೂರಿನಲ್ಲಿ ನಡೆದ ಅಂತರ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಗೆದ್ದು ಬೀಗಿದ ಶಿವಮೊಗ್ಗದ ಕ್ರೀಡಾ ಹಾಸ್ಟೆಲ್ ಸ್ಪರ್ಧಿಗಳು

0

Youth Empowerment and Sports ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೆ.14 ರಿಂದ 17 ವರೆಗೆ ನಡೆದ ಕರ್ನಾಟಕ ಅಂತರ್‌ಜಿಲ್ಲಾ ಕಿರಿಯರ ಮತ್ತು 23ರ ವಯೋಮಿತಿಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶಿವಮೊಗ್ಗದ ಕ್ರೀಡಾ ವಸತಿನಿಲಯದ ಕ್ರೀಡಾಪಟುಗಳು ವಿಜೇತರಾಗಿದಾರೆ.

23ರ ವಯೋಮಿತಿಯ ಅಥ್ಲೆಟಿಕ್‌ನಲ್ಲಿ ಸುದೀಪ್ ಎತ್ತರ ಜಿಗಿತದಲ್ಲಿ 2.05 ಮೀ ಜಿಗಿದು ನೂತನ ದಾಖಲೆ ದಾಖಲಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಕಿಡ್ಸ್ ಜಾವಲೀನ್ ಥ್ರೋನಲ್ಲಿ ಚಿರಾಗ್ ಎಂ.ಎಲ್ ಪ್ರಥಮ ಸ್ಥಾನ, 18 ವರ್ಷದ ವಯೋಮಿತಿಯ ಎತ್ತರ ಜಿಗಿತದಲ್ಲಿ ರೋಹಿತ್ ಕುಮಾರ್ ತೃತೀಯ ಸ್ಥಾನ, 16 ವರ್ಷದ ವಯೋಮಿತಿಯ ಎತ್ತರ ಜಿಗಿತದಲ್ಲಿ ಮಣಿಕಂಠ ಗೌಡ ತೃತೀಯ ಸ್ಥಾನ, ಕಿಡ್ಸ್ ಜಾವಲೀನ್ ಥ್ರೋನಲ್ಲಿ ಭಾನು ಪ್ರಕಾಶ್ ತೃತೀಯ ಸ್ಥಾನ, 16 ವರ್ಷದ ವಯೋಮಿತಿಯ ಎತ್ತರ ಜಿಗಿತದಲ್ಲಿ ಅನ್ವಿತಾ ಎಂ.ಆರ್. ದ್ವಿತೀಯ ಸ್ಥಾನ, ಗೌರಂಗಿ ಗೌಡ 100 ಮೀ ಹರ್ಡಲ್ಸ್ನಲ್ಲಿ ದ್ವಿತೀಯ ಮತ್ತು ಹಪ್ಪತ್‌ಲೈನ್‌ನಲ್ಲಿ ದ್ವಿತೀಯ ಸ್ಥಾನ, 18 ವರ್ಷದ ವಯೋಮಿತಿಯ ಎತ್ತರ ಜಿಗಿತದಲ್ಲಿ ಗೌತಮಿ ಗೌಡ ದ್ವಿತೀಯ ಸ್ಥಾನ ಪಡೆದು ವಿಜೇತರಾಗಿತ್ತಾರೆ.

Youth Empowerment and Sports ವಿಜೇತ ಕ್ರೀಡಾಪಟುಗಳಿಗೆ ತರಬೇತುದಾರ ಬಾಳಪ್ಪ ಮಾನೆ, ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ್ ಮತ್ತು ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಉದಯ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ ಎಂದು ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.