Saturday, March 28, 2026
Saturday, March 28, 2026
Home Blog Page 551

Rotary Club Shivamogga ಶಿಕ್ಷಣ ಅತ್ಯಂತ ಪ್ರಭಾವಶಾಲಿ ಅಸ್ತ್ರ- ಡಾ.ಕೆ.ಬಿ.ಧನಂಜಯ

0

Rotary Club Shivamogga ಪ್ರತಿಯೊಂದು ಮಗುವಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಮಕ್ಕಳಿಗೆ ಮನೆಯಿಂದಲೇ ಶಿಕ್ಷಣ ಆರಂಭವಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಕೆ.ಬಿ.ಧನಂಜಯ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂಲ ಶಿಕ್ಷಣ ಮತ್ತು ಸಾಕ್ಷರತೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಅತ್ಯಂತ ಪ್ರಭಾವಶಾಲಿ ಅಸ್ತ್ರ ಆಗಿದ್ದು, ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಶಿಕ್ಷಣ ಪಡೆಯುವುದು ಬಹಳ ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಶಿಕ್ಷಣವು ಪ್ರತಿಯೊಬ್ಬರಲ್ಲಿ ನಾಗರಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತದೆ. ಎಲ್ಲ ಮಕ್ಕಳಿಗೆ ಶಿಕ್ಷಣ ಸಿಗುವಂತಾಗಬೇಕು ಎಂದರು.

Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ. ಕಿರಣ್ ಕುಮಾರ್ ಮಾತನಾಡಿ, ಧನಂಜಯ ಅವರು ನನ್ನ ಗುರುಗಳು. ಅವರ ಜತೆಯಲ್ಲಿ ವೇದಿಕೆ ಹಂಚಿಕೊಳ್ಳುತ್ತಿರುವುದು ಸಂತಸದ ಸಂಗತಿ. ರೋಟರಿ ಸಂಸ್ಥೆಯು ನಿರಂತರ ತರಬೇತಿ ಹಾಗೂ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ನಮ್ಮ ಸಂಸ್ಥೆ ವತಿಯಿಂದ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಅರುಣ್ ಕುಮಾರ್ ಅವರು ರೋಟರಿ ಸ್ಥಾಪನೆಯಾದ ಚಿಕಾಗೋ ಹಾಗೂ ರೋಟರಿ ಮುಖ್ಯ ಕಚೇರಿಗೆ ಭೇಟಿ ಕೊಟ್ಟಿರುವ ಅಲ್ಲಿನ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪಿ ಡಿ ಜಿ ಪ್ರಕಾಶ್, ರವಿ ಕೋಟೋಜಿ, ಎಸ್.ಕೆ. ಕುಮಾರ್, ರಮಾನಾಥ್ ಗಿರೀಮಾಜಿ, ಚೆನ್ನಪ್ಪ, ಧರ್ಮೇಂದ್ರ ಸಿಂಗ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಈಶ್ವರ್ ಬಿವಿ, ರಮೇಶ್ ಸಂತೋಷ್, ಬಸವರಾಜ್ ಗುರುರಾಜ ಮತ್ತು ಕ್ಲಬ್ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

Thirtahalli Police ಗ್ರಾಹಕರಿಗೆ ಕೋಟಿ ರೂ.ವಂಚಿಸಿದ್ದ ತೀರ್ಥಹಳ್ಳಿಯ ಬ್ಯಾಂಕ್ ಅಧಿಕಾರಿ ಆತ್ಮಹತ್ಯೆ

0

Thirtahalli Police ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದ ಗ್ರಾಹಕರ ಹಣವನ್ನು ವಂಚನೆ ಮಾಡಿ ಕೋಟಿ ರೂಪಾಯಿ ಲಪಟಾಯಿಸಿದ ವಜಾಗೊಂಡ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆಗೆ ಶರಣಾದ ಘಟನೆ ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ನಡೆದಿದೆ.

ಆರಗದ ಸುನಿಲ್ (35) ಆತ್ಮಹತ್ಯೆಗೆ ಶರಣಾದವನು. ಯಡೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುನಿಲ್ ಕೆಲವು ಖಾತೆಗಳಿಂದ ಠೇವಣಿ ಇಟ್ಟಿದ್ದ ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿದ್ದ ಎಂದು ದೂರು ನೀಡಲಾಗಿತ್ತು.

ಹಣ ಲಪಟಾಯಿಸಿದ ಬಗ್ಗೆ 2023 ಡಿಸೆಂಬರ್‌ನಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ಸಂಬಂಧ ಸುನಿಲ್ ಜೈಲಿಗೂ ಹೋಗಿದ್ದ. ನಂತರ ಜಾಮೀನಿನ ಮೇಲೆ ಹೊರ ಬಂದಿದ್ದ ಈತ ಆನ್‌ಲೈನ್ ವ್ಯವಹಾರದಲ್ಲಿ ಹಣ ಕಳೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ.
ಇದರಿಂದ ನೊಂದು ಸುನೀಲ್ ವಿಷ ಸೇವಿಸಿದ್ದನು.

Thirtahalli Police ವಿಷಯ ತಿಳಿದ ಮನೆಯವರು ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Karki movie “ಕರ್ಕಿ” ಸಿನಿಮಾ ಕ್ಲಾಸ್ & ಮಾಸ್ ಪ್ರೇಕ್ಷಕರನ್ನ ಸೆಳೆದಿದೆ- ಪಳನಿ

0

Karki movie ಥರ್ಡ್ ಐ ಮೀಡಿಯಾ ಬ್ಯಾನರಿನಲ್ಲಿ ನಿರ್ಮಿಸಿರುವ ಕರ್ಕಿ ಚಲನಚಿತ್ರ ಸೆ. 20ರಂದು ಬಿಡುಗಡೆಯಾಗಿದು ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ನಿರ್ಮಾಪಕ ಪ್ರಕಾಶಕ ಪಳನಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾ ಸುಮಾರು 60 ಕೇಂದ್ರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಕ್ಲಾಸ್ ಮತ್ತು ಮಾಸ್ ಎರಡೂ ಥರದ ಆಡಿಯನ್ಸಗಳನ್ನು ಸೆಳೆದಿದೆ.

ಸಿನಿಮಾ ತುಂಬಿದ ಪ್ರದರ್ಶನ ಕಾಣುತ್ತಿದ್ದು, ನಿಧಾನವಾಗಿ ಸಿನಿಮಾ ನೋಡಲು ಚಿತ್ರಮಂದಿರಗಳತ್ತ ಧಾವಿಸುತ್ತಿರುವ ಪ್ರೇಕ್ಷಕರ ಸಂಖ್ಯೆಯಲ್ಲೂ ಗಣನೀಯವಾಗಿ ಹೆಚ್ಚಿದೆ ಎಂದರು.

Karki movie ಸಿನಿಮಾಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ಆಕ್ಷನ್ ಕಟ್ ಹೇಳಿದ್ದಾರೆ. ತಮಿಳಿನ ‘ಪರಿಯೂರಮ್ ಪೆರುಮಾಳ್’ ಸಿನಿಮಾದ ರಿಮೇಕ್ ಆಗಿರುವ ಕನ್ನಡದ ‘ಕರ್ಕಿ’ ಸಿನಿಮಾಕ್ಕೆ ತಮಿಳಿನ ನಿರ್ದೇಶಕ ಪವಿತ್ರನ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮೂಲ ಸಿನಿಮಾ ತಮಿಳಿನಾದರೂ ‘ಕರ್ಕಿ’ ಸಿನಿಮಾವನ್ನು ಕನ್ನಡದ ಪರಿಸರಕ್ಕೆ ತಕ್ಕಂತೆ ಚಿತ್ರಿಸಿ ತೆರೆಮೇಲೆ ತಂದಿರುವುದು ಈ ಸಿನಿಮಾದ ವಿಶೇಷ ಎಂದರು.

‘ಕರ್ಕಿ ಸಿನೆಮಾದಲ್ಲಿ
ನಾಯಕ ನಟ ಜಯಪಕಾಶ್ (ಜೆ. ಪಿ) ರೆಡ್ಡಿ ಅವರಿಗೆ ಮಲೆಯಾಳಿ ಬೆಡಗಿ ಮೀನಾಕ್ಷಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಸಾಧುಕೋಕಿಲ, ಬಲರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ, ವಾಲೆ ಮಂಜು, ಜೋಸೈಮನ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದರು.

ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ, ಈಗಾಗಲೇ ‘ವಾಟ್ಸಪ್, ಲವ್, ‘ರಾಜರಾಣಿ’ ಸೇರಿದಂತೆ ಕೆಲ ಸಿನೆಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ ಜಯಪ್ರಕಾಶ್(ಜೆ.ಪಿ)ರೆಡ್ಡಿ, ‘ಕರ್ಕಿ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಈ ಸಿನೆಮಾದಲ್ಲಿ ಕಾನೂನು ಪದವಿಧರನಾಗಬೇಕು ಎಂಬ ಕನಸು ಇಟ್ಟುಕೊಂಡ ಹಳ್ಳಿ ಹುಡುಗನ ಪಾತ್ರದಲ್ಲಿ ಜೆ. ಪಿ ಅಭಿನಯಿಸಿದ್ದಾರೆ ಎಂದರು
ಹೃಷಿಕೇಶ ಛಾಯಾಗ್ರಹಣ, ಶ್ರೀ, ಕ್ರೇಜಿ ಮೈಂಡ್ಸ್ ಸಂಕಲನವಿದೆ. ಸಿನಿಮಾದ ಆರು ಹಾಡುಗಳಿಗೆ ಕವಿರಾಜ್ ಸಾಹಿತ್ಯವಿದ್ದು, ಅರ್ಜುನ. ಜನ್ಯ ಸಂಗೀತ ಸಂಯೋಜಿಸಿದ್ದಾರೆ ಎಂದರು.

ಶಿವಮೊಗ್ಗ, ದಾವಣಗೆರೆ, ಬಂಗಾರಪೇಟೆ, ಕೋಲಾರ, ಬಾಗಲಕೋಟೆ ಸುತ್ತಮುತ್ತ ‘ಕರ್ಕಿ’ ಸಿನೆಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ ಎಂದು ವಿವರಿಸಿದರು.

Madhu Bangarappa ಮೃತ ಚಂದ್ರಶೇಖರ್ ಕುಟುಂಬಕ್ಕೆ ₹ 25 ಲಕ್ಷ ಸಹಾಯ ಧನ ನೀಡಿಕೆ- ಮಧು ಬಂಗಾರಪ್ಪ

0

Madhu Bangarappa ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಮೊಗ್ಗ ನಿವಾಸಿ ದಿವಂಗತ ಚಂದ್ರಶೇಖರನ್ ಅವರ ಕುಟುಂಬಕ್ಕೆ ಮುಖ್ಯಮಮತ್ರಿ ಸಿದ್ದರಾಮಯ್ಯ 25 ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡಿದ್ದಾರೆ.

ಚಂದ್ರಶೇಖರ್ ಆತ್ಮಹತ್ಯೆ ನಂತರ ಅವರ ನಿವಾಸಕ್ಕೆ ತೆರಳಿದ್ದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದರು.

ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಮನವಿ ಮಾಡಿದ್ದೆನು. ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಚೆಕ್ ಹಸ್ತಾಂತರಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಷೇಧ ಕಾಯ್ದೆಯಡಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುವ ಹಿನ್ನಲೆಯಲ್ಲಿ ೮.೨೫ ಲಕ್ಷ ರೂಗಳನ್ನು ದಿವಂಗತ ಚಂದ್ರಶೇಖರನ್‌ರ ಪತ್ನಿ ಕವಿತಾ ಅವರಿಗೆ ಈಗಾಗಲೇ ಮಂಜೂರು ಮಾಡಿದ್ದಾರೆ.

Madhu Bangarappa ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಿಂದ ಪಾವತಿಸಬೇಕಾದ ಸಂಬಳ ಮತ್ತು ರಜೆಗೆ ಸಂಬಂಧಿಸಿದಂತೆ ೧,೪೧,೩೬೧ ರೂಗಳನ್ನು ಕವಿತಾ ಅವರ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ.
ಮೃತರ ಮಗನಿಗೆ ಉದ್ಯೋಗ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಈ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆಂದು ಸಚಿವರು ತಿಳಿಸಿದ್ದಾರೆ.

ಈ ವೇಳೆ ಬೋವಿ ಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಶಾಸಕ ಚನ್ನಬಸಪ್ಪ (ಚನ್ನಿ) ಉಪಸ್ಥಿತರಿದ್ದರು.

Vokkaliga Society ಶಾಸಕ ಮುನಿರತ್ನ ಹೇಳಿಕೆ. ಒಕ್ಕಲಿಗ ಸಮುದಾಯಕ್ಕೆ ನೋವು ತಂದಿದೆ. ಒಕ್ಕಲಿಗ ಯುವ ವೇದಿಕೆ ಪ್ರತಿಭಟನೆ

0

Vokkaliga Society ಒಕ್ಕಲಿಗ ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಮುನಿರತ್ನ ಅವರ ವಿರುದ್ಧ ಕಠಿಣ ಕಾನೂನು ಕ್ರಮ ವಹಿಸುವಂತೆ ಆಗ್ರಹಿಸಿ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಒಕ್ಕಲಿಗ ಹಾಗೂ ದಲಿತ ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಾಸಕ ಮುನಿರತ್ನ ಅತ್ಯಾಚಾರಿ ಹಾಗೂ ಹನಿಟ್ರಾಪ್‌ನ ರೂವಾರಿಯಾಗಿದ್ದಾರೆ.

ಗುತ್ತಿಗೆದಾರರನ್ನು ಶೋಷಣೆ ಮಾಡಿದ್ದಲ್ಲದೆ, ಹಣ ವಸೂಲಿ ಮಾಡಿದ್ದಾರೆ. ಗುತ್ತಿಗೆದಾರರ ಜೊತೆಗಿನ ಸಂಭಾಷಣೆಯಲ್ಲಿ ಹೆಣ್ಣುಮಕ್ಕಳ ವಿಷಯವಾಗಿ, ಒಕ್ಕಲಿಗ ಹಾಗೂ ಪರಿಶಿಷ್ಟರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಒಕ್ಕಲಿಗ ಸಮುದಾಯ ನಾಡಿಗೆ ನೀಡಿರುವ ಕೊಡುಗೆ ಅಪಾರ. ಒಕ್ಕಲುತನ, ಪಶುಪಾಲನೆ, ಕೃಷಿ, ಹೈನುಗಾರಿಕೆ ಮಾಡಿ ಒಕ್ಕಲಿಗರು ನಾಡನ್ನು ಕಟ್ಟಿದ್ದಾರೆ. ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಲ್ಲದೇ ನಾಡಿನ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ.

ನಾಡಪ್ರಭು ಕೆಂಪೇಗೌಡರಾದಿಯಾಗಿ ಸಮಾಜದ ಹಲವರು ನಾಡಿನ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಿದ್ದಾರೆ. ಶ್ರೀಕೃಷ್ಣದೇವರಾಯ ಸಾರ್ವಭೌಮತ್ವ ಪಡೆಯಲು ಗಂಗರು, ಚೋಳರು ಆಡಳಿತ ನಡೆಸಿ ನಾಡಿನ ಸಂಸ್ಕೃತಿ ಉಳಿಸಲು ಒಕ್ಕಲಿಗ ಜನಾಂಗ ಕೊಡುಗೆ ನೀಡಿದೆ. ಇಂತಹ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತನಾಡಿರುವುದು ಇಡೀ ಒಕ್ಕಲಿಗ ಜನಾಂಗಕ್ಕೆ ನೋವುಂಟಾಗಿದೆ ಎಂದಿದ್ದಾರೆ.

Vokkaliga Society ಇಂತಹ ನಾಚಿಕೆಗೆಟ್ಟ ಶಾಸಕನನ್ನು ಗೆಲ್ಲಿಸಿದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನತೆ ತಲೆ ತಗ್ಗಿಸುವಂತಾಗಿದೆ. ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಇವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮವಹಿಸಬೇಕೆಂದು ಆಗ್ಹರಿಸಿದರು.

ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೆಗ್ಡೆ, ಯುವ ಅಧ್ಯಕ್ಷ ಚೇತನ್ ಗೌಡ, ಮುಖಂಡರಾದ ರಘು ಗೌಡ, ಭಾರತಿ ರಾಮಕೃಷ್ಣ, ಯಮುನಾ ರಂಗೇಗೌಡ, ರಂಗೇಗೌಡ, ತಮ್ಮಯ್ಯ, ಹರ್ಷಿತ್ ಗೌಡ, ಸತೀಶ್. ವಿಜಯ್, ಮೋಹನ್ ಮೊದಲಾದವರಿದ್ದರು.

Mysore Urban Development Authority ಬಿಜೆಪಿ, ಜೆಡಿಎಸ್ ನ ಈ ಸೇಡಿನ ವಿರುದ್ದ ಹೋರಾಡುವೆ-ಹೈಕೋರ್ಟ್ ತೀರ್ಪಿಗೆ ಸಿದ್ಧರಾಮಯ್ಯ ಪ್ರತಿಕ್ರಿಯೆ

0

Mysore Urban Development Authority ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧದ ತನಿಖೆಗೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪ್ರಕರಣದ ತೀರ್ಪು ಪ್ರಕಟಿಸಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯೆ ನೀಡಿದ್ದು,ಹೈಕೋರ್ಟ್ ಆದೇಶದ ಅಂಶಗಳನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಆದೇಶ ಪ್ರತಿ ಪಡೆದು ಓದಿದ ಬಳಿಕ‌ ವಿಸ್ತೃತವಾದ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.

ನ್ಯಾಯಾಲಯವು ಸೆಕ್ಷನ್ 218 ರ ಅಡಿ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ.

ನಾನು ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ. ಕಾನೂನಿನ ಅಡಿ ಅಂತಹ ತನಿಖೆಗೆ ಅವಕಾಶ ಇದೆಯೋ ಇಲ್ಲವೋ ಎಂಬ ಬಗ್ಗೆ ತಜ್ಞರ ಜೊತೆ ಸಮಾಲೋಚಿಸುತ್ತೇನೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸುತ್ತೇನೆ ಎಂದು ತಿಳಿಸಿದ್ದಾರೆ.

ದೂರುದಾರ ತನ್ನ ದೂರಿನಲ್ಲಿ ಸೆಕ್ಷನ್ 218 ಬಿಎನ್ಎಸ್ಎಸ್, 17 ಎ ಮತ್ತು 19 ಪಿಸಿ ಕಾಯಿದೆ ಪ್ರಕಾರ ತನಿಖೆ ಹಾಗೂ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದರು. ಆದರೆ, ರಾಜ್ಯಪಾಲರು ಪ್ರಾಥಮಿಕ ಹಂತದಲ್ಲಿ 19 ಪಿಸಿ ಕಾಯಿದೆ ಪ್ರಕಾರ ಕೇಳಿದ್ದ ಅಭಿಯೋಜನಾ ಅನುಮತಿ‌ ನಿರಾಕರಿಸಿದ್ದರು.

Mysore Urban Development Authority ಈ ದಿನ ಘನ ನ್ಯಾಯಾಲಯ ರಾಜ್ಯಪಾಲರು 218 ಬಿಎನ್ಎಸ್ಎಸ್ ಪ್ರಕಾರ ನೀಡಿರುವ ಅಭಿಯೋಜನಾ ಅನುಮತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ.
ಮುಂದಿನ ದಿನಗಳಲ್ಲಿ ಸತ್ಯ ಹೊರಬಂದು 17ಎ ಅಡಿ ನೀಡಿರುವ ತನಿಖೆ ರದ್ದಾಗಲಿದೆ ಎಂಬ ದೃಢ ವಿಶ್ವಾಸ ನನಗಿದೆ.

ಈ ರಾಜಕೀಯ ಹೋರಾಟದಲ್ಲಿ ರಾಜ್ಯದ ಜನ ನನ್ನ ಹಿಂದೆ ಇದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ.
ಕಾನೂನು ಮತ್ತು ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ.

ಇದು ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಸೇಡಿನ ರಾಜಕೀಯದ ವಿರುದ್ಧದ ಹೋರಾಟ. ಬಿಜೆಪಿ, ಜೆಡಿಎಸ್ ನ ಈ ಸೇಡಿನ ರಾಜಕೀಯದ ವಿರುದ್ಧ ನಮ್ಮ ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ.

ನಮ್ಮ ಪಕ್ಷದ ಎಲ್ಲ ಶಾಸಕರು, ನಾಯಕರು ಮತ್ತು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹೈಕಮಾಂಡ್ ನನ್ನ ಪರವಾಗಿ ಭದ್ರವಾಗಿ ನಿಂತಿದ್ದು, ಕಾನೂನಿನ ಹೋರಾಟ ಮುಂದುವರಿಸುವಂತೆ ಉತ್ತೇಜನ ನೀಡಿದ್ದಾರೆ.

ನಾನು ಬಡವರ ಪರವಾಗಿದ್ದೇನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ ನನ್ನ ವಿರುದ್ದ ಬಿಜೆಪಿ, ಜೆಡಿಎಸ್ ರಾಜಕೀಯ ಪ್ರತಿಕಾರಕ್ಕೆ ಇಳಿದಿದೆ.

ನನ್ನ 40 ವರ್ಷಗಳ ರಾಜಕೀಯ ಜೀವನದುದ್ದಕ್ಕೂ ಇಂತಹ ಸೇಡು, ಸಂಚಿನ ರಾಜಕೀಯವನ್ನು ಎದುರಿಸಿದ್ದೇನೆ ಮತ್ತು ರಾಜ್ಯದ ಜನರ ಆಶೀರ್ವಾದ, ಹಾರೈಕೆಯ ಬಲದಿಂದ ಗೆಲ್ಲುತ್ತಾ ಬಂದಿದ್ದೇನೆ. ಈ ಹೋರಾಟವನ್ನು ಜನತೆಯ ಆಶೀರ್ವಾದದ ಬಲದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ.

ಮುಡಾ ಪ್ರಕರಣ ಒಂದು ನೆಪ ಅಷ್ಟೇ. ಬಡವರು ಮತ್ತು ಶೋಷಿತರ ಪರವಾಗಿರುವ ನಮ್ಮ ಸರ್ಕಾರದ ಯೋಜನೆಗಳನ್ನು ನಿಲ್ಲಿಸಬೇಕೆಂಬುದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖ್ಯ ಉದ್ದೇಶವೆಂದು ತಿಳಿಸಿದ್ದಾರೆ.

ಮುಡಾ ಪ್ರಕರಣವನ್ನು ಸೃಷ್ಟಿಸಿ, ಅದರ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ಮುಖಗಳನ್ನು ಒಮ್ಮೆ ರಾಜ್ಯದ ಜನತೆ ಸರಿಯಾಗಿ ನೋಡಬೇಕೆಂದು ಮನವಿ ಮಾಡುತ್ತೇನೆ.ನನ್ನ ರಾಜೀನಾಮೆ ಕೇಳುತ್ತಿರುವ ಇದೇ ನಾಯಕರು ನಾನು ರಾಜ್ಯದ ಬಡವರು, ಶೋಷಿತರ ಪರವಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ವಿರೋಧಿಸಿದವರೇ ಆಗಿದ್ದಾರೆ.
ಇದೇ ಬಿಜೆಪಿ, ಜೆಡಿಎಸ್ ನಾಯಕರು ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರ ಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ವಿರೋಧಿಸಿದ್ದಾರೆ.

ಕರ್ನಾಟಕದ ಜನತೆ ಇಲ್ಲಿಯ ವರೆಗೆ ಭಾರತೀಯ ಜನತಾ ಪಕ್ಷಕ್ಕೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವಷ್ಟು ಬಹುಮತ ನೀಡಿಲ್ಲ. ಇಲ್ಲಿಯ ವರೆಗೆ ಬಿಜೆಪಿ ಅನೈತಿಕವಾಗಿ, ದುಡ್ಡಿನ ಬಲದಿಂದ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದದ್ದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಆಪರೇಷನ್ ಕಮಲಕ್ಕೆ ಅವಕಾಶವೇ ಇಲ್ಲದಂತೆ ನಮ್ಮ ಪಕ್ಷಕ್ಕೆ 136 ಸದಸ್ಯರ ಬಲ ನೀಡಿ ಗೆಲ್ಲಿಸಿದರು.
ಇದರಿಂದ ಹತಾಶೆಗೀಡಾಗಿರುವ ಬಿಜೆಪಿ, ಜೆಡಿಎಸ್ ನಾಯಕರು, ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ.

ರಾಜಭವನದ ದುರ್ಬಳಕೆ ಮೂಲಕ ವಿರೋಧ ಪಕ್ಷಗಳ ಸರ್ಕಾರವನ್ನು ಹಣಿಯುವ ಸಂಚನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿದೆ.

ನನ್ನ ಪ್ರಕರಣದಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ಇದೇ ರೀತಿ ಮುಖಭಂಗ ಅನುಭವಿಸುವುದು ಖಂಡಿತ.
ಸತ್ಯಮೇವ ಜಯತೇ..
ಎಂದು ಮುಖ್ಯಮಂತ್ರಿ
ಸಿದ್ಧರಾಮಯ್ಯ ಸಾಮಾಜಿಕ ತಾಣದಲ್ಲಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

Breaking News ಮೂಡಾ ಹಗರಣ.ಸಿದ್ಧರಾಮಯ್ಯಗೆ ಮುಖಭಂಗ.ಅರ್ಜಿ ವಜಾಗೊಳಿಸಿದ ಹೈ ಕೋರ್ಟ್

0

High Court ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ತಮ್ಮ ಕುಟುಂಬಸ್ಥರಿಗೆ ನಿವೇಶನ ಪಡೆದ ಆರೋಪ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ಅಂತಿಮ ಆದೇಶ ಹೊರಬಿದ್ದಿದೆ.

High Court ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟಿನ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯ ಪೀಠ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ರಾಜ್ಯಪಾಲರ ತೀರ್ಮಾನವನ್ನು ಎತ್ತಿ ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿತು.

Ministry of Government of Karnataka ಅಕ್ಟೋಬರ್ 5 ರಂದು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯುವ ಸಂಸತ್ ಸ್ಪರ್ಧೆ

0

Ministry of Government of Karnataka 2024-25ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು ಹಾಗೂ ಜಿಲ್ಲಾ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ರವರ ಸಂಯುಕ್ತ ಆಶ್ರಯದಲ್ಲಿ ಅ.05 ರಂದು ಶ್ರೀ ಅಬ್ದುಲ್ Ministry of Government of Karnataka ನಜೀರ್ ಸಾಬ್ ಸಭಾಂಗಣ ಜಿಲ್ಲಾ ಪಂಚಾಯತ್ ಆವರಣ ಶಿವಮೊಗ್ಗ ಇಲ್ಲಿ ಮಧ್ಯಾಹ್ನ 2-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

C. N. Ashwath Narayan ರಾಜಕೀಯ ಹಸ್ತಕ್ಷೇಪ, ತುಷ್ಟೀಕರಣದಿಂದ ನಾಗಮಂಗಲ ಗಲಭೆ. ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ವಿಶ್ಲೇಷಣೆ

0

C. N. Ashwath Narayan ನಾಗಮಂಗಲದಲ್ಲಿ ಅದ್ಭುತವಾದ ಸೌಹಾರ್ದತೆ ಇತ್ತು. ಕಾಲಕಾಲದಲ್ಲಿ ರಾಜಕೀಯದ ಹಸ್ತಕ್ಷೇಪ, ವಿಭಜನೆಯ ರಾಜಕಾರಣ ಮತ್ತು ತುಷ್ಟೀಕರಣದ ಕಾರಣದಿಂದ ಗಲಭೆ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸತ್ಯಶೋಧನಾ ಸಮಿತಿಯ ನೇತೃತ್ವ ವಹಿಸಿದ್ದ ಅವರು ತಮ್ಮ ಸಮಿತಿಯ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರರಿಗೆ ಹಸ್ತಾಂತರ ಮಾಡಿದರು. ಬಿ.ವೈ.ವಿಜಯೇಂದ್ರ, ಸತ್ಯಶೋಧನಾ ಸಮಿತಿಯಲ್ಲಿದ್ದ ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ, ರಾಜ್ಯ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ಅಶ್ವಿನ್ ಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಪಕ್ಷದ ಮುಖಂಡ ಭಾಸ್ಕರ್ ರಾವ್ ಅವರ ಉಪಸ್ಥಿತಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
C. N. Ashwath Narayan ಮತಕ್ಕಾಗಿ ಆಪಾದಿತರ ಕೇಸುಗಳನ್ನು ಹಿಂಪಡೆಯಲಾಗಿದೆ. ಪೊಲೀಸರ ಸಂಪೂರ್ಣ ವೈಫಲ್ಯತೆ ಕಾಣುತ್ತದೆ. ಪೊಲೀಸರ ಕೈಕಟ್ಟಿ ಹಾಕಿದ್ದರು. ಏನೂ ಕ್ರಮ ಕೈಗೊಳ್ಳಲು ಅವರಿಗೆ ಅವಕಾಶ ಇರಲಿಲ್ಲ. ಯಾರ ಮೇಲೂ ಕೇಸ್ ಮಾಡುವ ಹಾಗಿಲ್ಲ. ಯಾರ ಮೇಲೂ ಕ್ರಮ ಕೈಗೊಳ್ಳುವಂತಿಲ್ಲ ಎಂಬ ಸ್ಥಿತಿ ಪೊಲೀಸರದಾಗಿತ್ತು ಎಂದು ವಿವರಿಸಿದರು.

ಇದೊಂದು ಪೂರ್ವಯೋಜಿತ ಕೃತ್ಯ..
25ರಿಂದ 30 ಜನರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಿದ್ದರು. ಆಗ ಗಲಭೆ ಆಗಿದೆ. ಕಳೆದ ವರ್ಷವೂ ಗಲಭೆ ಆಗಿತ್ತು. ಇದು ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಈ ವೈಫಲ್ಯ ಮತ್ತು ತುಷ್ಟೀಕರಣ ಎದ್ದು ಕಾಣುವಂತಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಆರೋಪಿಸಿದರು.
ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಆರೋಪಿಗಳು ಮಾಸ್ಕ್ ಧರಿಸಿದ್ದು ನೋಡಿದರೆ, ಪೆಟ್ರೋಲ್ ಬಾಂಬ್ ಸಿದ್ಧವಿಟ್ಟಿದ್ದನ್ನು ಗಮನಿಸಿದರೆ ಇದೊಂದು ಪೂರ್ವಯೋಜಿತ ಕೃತ್ಯ ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು. ನಿರ್ದಿಷ್ಟ ಅಂಗಡಿಗಳನ್ನೇ ಗುರಿ ಮಾಡಿ ಮೂರನೇ ಬಾರಿ ಬಂದು ಬೆಂಕಿ ಹಚ್ಚಿದ್ದಾರೆ ಎಂದು ಆಕ್ಷೇಪಿಸಿದರು.

ನಿರ್ದಿಷ್ಟ ಪೆಟ್ರೋಲ್ ಬಂಕ್‍ನಿಂದ ಪೆಟ್ರೋಲ್ ಬಾಂಬಿಗೆ ಪೆಟ್ರೋಲ್ ಕೊಡಲಾಗಿದೆ. ನಾಗಮಂಗಲವು ತಲೆಮರೆಸಿಕೊಂಡಿರುವವರ, ಸಮಾಜಬಾಹಿರ ಶಕ್ತಿಗಳ, ದೇಶದ್ರೋಹಿಗಳು, ಪಿಎಫ್‍ಐ ಚಟುವಟಿಕೆಗಳ ನೆಲೆಯಾಗಿದೆ. ಮಾದಕ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ ಎಂದು ಅವರು ದೂರಿದರು.
ಕೇರಳ ಮೂಲದ ವ್ಯಕ್ತಿಗಳು ಭಾಗಿಯಾದ ಕುರಿತು ಗೃಹ ಸಚಿವರೂ ಹೇಳಿದ್ದಾರೆ. ಬಾಂಗ್ಲಾ ದೇಶೀಯರು ಇರುವ ಬಗ್ಗೆ ಅವರೇ ತಿಳಿಸಿದ್ದಾರೆ. 800 ಎಕರೆ ಹೊಂದಿದ ಪ್ರಬಲ ವ್ಯಕ್ತಿಯ ಜಾಗದಲ್ಲಿ ಬಾಂಗ್ಲಾ ದೇಶೀಯರು ಕೆಲಸ ಮಾಡುತ್ತಿದ್ದಾರೆ ಎಂದರಲ್ಲದೆ, ನಿಷೇಧಿತ ಪಿಎಫ್‍ಐ ಚಟುವಟಿಕೆ ಮಾಡಲು ಹೇಗೆ ಅವಕಾಶ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಪೊಲೀಸ್ ವೈಫಲ್ಯ ಎದ್ದು ಕಾಣುವಂತಿದೆ ಎಂದು ನುಡಿದರು.
ನಮ್ಮ ಆಡಳಿತಾವಧಿಯಲ್ಲಿ ಎಲ್ಲಿಯೂ ಗಣೇಶೋತ್ಸವ ಸಂದರ್ಭದಲ್ಲಿ ಗಲಾಟೆಗಳು ಆಗಿರಲಿಲ್ಲ. ಇವತ್ತು ರಾಜ್ಯದ 8-10 ಕಡೆ ಗಲಭೆಗಳು ಆಗಿವೆ. ವಿನಾ ಕಾರಣ ಪ್ರಚೋದನೆ ನಡೆದಿದೆ. ಅವರ ಚುನಾಯಿತ ಪ್ರತಿನಿಧಿಗಳು ಬಾಂಗ್ಲಾ ದೇಶದ ಪರಿಸ್ಥಿತಿ ನಿರ್ಮಿಸುತ್ತೇವೆ; ಗವರ್ನರ್ ಕಚೇರಿಗೆ ನುಗ್ಗುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಮೋದಿಜೀ ಅವರನ್ನು ಶೇಖ್ ಹಸೀನ್ ಥರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಈ ರೀತಿ ಬಹಿರಂಗ ಹೇಳಿಕೆ ಕೊಟ್ಟರೂ ಒಂದೇ ಒಂದು ಕೇಸು ದಾಖಲಿಸುತ್ತಿಲ್ಲ ಎಂದರು.

ರಾಜ್ಯದಲ್ಲಿ ದ್ವೇಷದ ರಾಜಕಾರಣ..
ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆದಿದೆ. ಇವರ ಕಣ್ಮುಂದೆಯೇ ಎಲ್ಲ ರೀತಿಯ ಅನೈತಿಕ ಚಟುವಟಿಕೆ, ಕಾನೂನು ದುರ್ಬಳಕೆ ಆದರೂ ಕೈಕಟ್ಟಿ ಇರುತ್ತಾರೆ. ಪೊಲೀಸ್ ಇಲಾಖೆಯ 8 ಸಿಬ್ಬಂದಿಗಳ ಮೇಲೆ ಹಲ್ಲೆ ಆಗಿದೆ. ಗಾಯವಾಗಿದ್ದರೂ ಮೆಡಿಕೊ ಲೀಗಲ್ ಕೇಸ್ (ಎಂಎಲ್‍ಸಿ) ಆಗಿಲ್ಲ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಟೀಕಿಸಿದರು. ಮುಗ್ಧ ಜನರ ಮೇಲೆ ಕೇಸು ಹಾಕಿದ್ದಾರೆ ಎಂದು ಆರೋಪಿಸಿದರು.

ಪಕ್ಷದ ಮಂಡ್ಯ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ದಾವಣಗೆರೆಯಲ್ಲಿ ಕಾಲೇಜಿಗೆ ನುಗ್ಗಿದ “ಭುಸ್ ನಾಗಪ್ಪ”

0

ನಾಗರಹಾವೊಂದು ಕಾಲೇಜಿನ ಅಡುಗೆ ಮನೆಯಲ್ಲಿನ ಪಾತ್ರೆಯಲ್ಲಿ ಅವಿತು ಕೂತಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ಬಳಿಯ ಜೈನ್ ಕಾಲೇಜಿನಲ್ಲಿ ಹಾವು ಕಂಡುಬಂದಿದೆ.

ನಾಗರಹಾವನ್ನು ಕಂಡ ವಿದ್ಯಾರ್ಥಿಗಳು ಆತಂಕದಿಂದ ಹೊರಗೆ ಓಡಿ ಬಂದಿದ್ದರು. ಪಾತ್ರೆಯಲ್ಲಿ ಕೂತಿದ್ದ ಹಾವನ್ನು ನೋಡಿದ ಅಡುಗೆ ಸಿಬ್ಬಂದಿಯೂ ಕೂಡ ಕೆಲಕಾಲ ಭಯಭೀತರಾಗಿದ್ದರು.

ಬಳಿಕ ಕಾಲೇಜಿನ ಸಿಬ್ಬಂದಿ ಸ್ನೇಕ್ ಬಸವರಾಜ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಬಸವರಾಜ್ ಹಾವನ್ನು ಸೆರೆಹಿಡಿದು ರಕ್ಷಿಸಿದ್ದಾರೆ. ನಾಲ್ಕು ಅಡಿ ಉದ್ದದ ನಾಗರಹಾವು ಇದಾಗಿದೆ. ಹಾವನ್ನು ಬಸವರಾಜ್ ರಕ್ಷಣೆ ಮಾಡಿದ ಬಳಿಕ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟರು.

ದಾವಣಗೆರೆ ನಗರದ ಆರ್ಟಿಓ ಕಚೇರಿ ಬಳಿಯ ಮಲ್ಲೇಶಪ್ಪ ಎಂಬವರ ಮನೆಯಲ್ಲಿ ಕೂಡ ನಾಗರಹಾವು ಬೀಡುಬಿಟ್ಟಿತ್ತು. ಇಟ್ಟಿಗೆಗಳಲ್ಲಿ ಅವಿತುಕೊಂಡಿದ್ದ ನಾಗಪ್ಪನನ್ನು ಸ್ನೇಕ್ ಬಸವರಾಜ್ ಅವರೇ ರಕ್ಷಣೆ ಮಾಡಿದ್ದಾರೆ. ಒಂದೇ ದಿನ ಎರಡು ಹಾವುಗಳನ್ನು ರಕ್ಷಣೆ ಮಾಡುವಲ್ಲಿ ಬಸವರಾಜ್ ಯಶಸ್ವಿಯಾಗಿದ್ದಾರೆ.

ಹಾವುಗಳನ್ನು ಆನಗೋಡು ಕಾಡಿಗೆ ಬಿಡುವುದಾಗಿ ಬಸವರಾಜ್ ತಿಳಿಸಿದ್ದಾರೆ.