Wednesday, March 25, 2026
Wednesday, March 25, 2026
Home Blog Page 508

Chamber of Commerce Shivamogga ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೀಗ ಶಿವಮೊಗ್ಗದಲ್ಲಿ “ಪ್ರಾಣಶಕ್ತಿ ಚಿಕಿತ್ಸಾ ಕಾರ್ಯಾಗಾರ

0

Chamber of Commerce Shivamogga ಯಾವುದೇ ಬಗೆಯ ಮಾನಸಿಕ ಹಾಗೂ ದೈಹಿಕ ಸಂಬಂಧದ ಆರೋಗ್ಯ ಸಮಸ್ಯೆಗಳಿಗೆ ಡಾ. ಲತಾಶೇಖರ್ ಅವರು ಕಳೆದ ಎರಡು ದಶಕಗಳಿಂದ ನಿಖರ ಫಲಿತಾಂಶದ ಭಾರತೀಯ ಪ್ರಾಚೀನ ಪರಂಪರೆಯ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆಗಳನ್ನು ಒದಗಿಸಿ ಜನಸಾಮಾನ್ಯರಿಗೆ ರಾಸಾಯನಿಕ ಮಾತ್ರೆ-ಔಷಧಮುಕ್ತ ಜೀವನಶೈಲಿಯನ್ನು ಕಲ್ಪಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ನವೆಂಬರ್ 10 ರಂದು ಪ್ರಪ್ರಥಮ ಬಾರಿಗೆ ಡಾ. ಲತಾಶೇಖರ್ ಅವರ ಒಂದು ದಿನದ ಚಿಕಿತ್ಸಾ ಕಾರ್ಯಗಾರವನ್ನು ಶಿವಮೊಗ್ಗ ನಗರದ ಚೇಂಬರ್ ಆಫ್ ಕಾಮಸ್೯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಗಾರದಲ್ಲಿ ದೇಹ ಮತ್ತು ಮನಸ್ಸನ್ನು ಕ್ರೋಢೀಕರಿಸುವ ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ ಒಳಗೊಂಡ ಮುದ್ರಾ ಸಹಿತ ವಿವಿಧ ಬಗೆಯ ಪರ್ಯಾಯ ಚಿಕಿತ್ಸಾ ಕ್ರಮಗಳನ್ನು ಪ್ರಯೋಗ ಮಾಡಲಾಗುವುದು.

Chamber of Commerce Shivamogga ನಿಮ್ಮಲ್ಲಿರುವ ಸಮಸ್ಯೆಗಳಾದ ಮಾನಸಿಕ ಖಿನ್ನತೆ, ಭಯ, ನಿದ್ರಾಹೀನತೆ, ಮಧುಮೇಹ, ಅಧಿಕ ರಕ್ತದೊತ್ತಡ, ನರ ದೌರ್ಬಲ್ಯ, ಅರ್ಧ ತಲೆನೋವು, ಮಂಡಿ ನೋವು, ಸ್ತ್ರೀಯರ ಎಲ್ಲಾ ಬಗೆಯ ಸಮಸ್ಯೆಗಳು, ವಯೋವೃದ್ಧರ ಯಾವುದೇ ಬಗೆಯ ಸಮಸ್ಯೆಗಳು, ಮಕ್ಕಳ ಸಮಸ್ಯೆಗಳು, ಹಾಗೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಸರಳ ಹಾಗೂ ಸೂಕ್ತ ಚಿಕಿತ್ಸೆಯನ್ನು ಶಿಬಿರದಲ್ಲಿ ಪಡೆಯಬಹುದು.
ಸಾವ೯ಜನಿಕರು ನ್ಯಾಯವಾದ ಚಿಕಿತ್ಸಾ ಶುಲ್ಕವನ್ನು ಪಾವತಿಸಿ ಅಪರೂಪದ ಪ್ರಾಣಶಕ್ತಿ ಚಿಕಿತ್ಸಾ ಕಾರ್ಯಾಗಾರದ ನೋಂದಣಿಯನ್ನು ಮಾಡಿಕೊಳ್ಳಬಹುದು.

ಶಿಬಿರದ ವಿವರ
ದಿನಾಂಕ : 10 ನವೆಂಬರ್ ಬೆಳಿಗ್ಗೆ 8.30 ರಿಂದ ಸಂಜೆ 7 ಗಂಟೆ ವರೆಗೆ 2024 ಭಾನುವಾರ
ಸ್ಥಳ : ಛೇಂಬರ್ ಆಫ್ ಕಾಮಸ್೯ ಸಭಾಂಗಣ ಶಿವಮೊಗ್ಗ ಸಿಟಿಕ್ಲಬ್ ಹಿಂಭಾಗ
ಡಿಸ್ಟ್ರಿಕ್ಟ್ ಲೈಬ್ರರಿ ಪಕ್ಕ, ಶಿವಮೊಗ್ಗ.

ಹೆಚ್ಚಿನ ಆರೋಗ್ಯಕರ ಮಾಹಿತಿ ಹಾಗೂ ಸಲಹೆಗಳಿಗೆ ನಮ್ಮನ್ನು ಸಂಪರ್ಕಿಸಿ.
9353755841/831077452

Dnaneshwari Goshala ಗೋಪೂಜೆಯಿಂದ ಮನಸ್ಸಿಗೆ ಶಾಂತಿ & ನೆಮ್ಮದಿ- ಚಂದ್ರಹಾಸ.ಪಿ‌.ರಾಯ್ಕರ್

0

Dnaneshwari Goshala ಗೋವಿನ ಪೂಜೆ ಮಾಡುವುದರಿಂದ ಕೋಟ್ಯಾಂತರ ದೇವರ ಪೂಜಿಸಿದ ಪುಣ್ಯ ಪ್ರಾಪ್ತಿ ಆಗುವ ಜತೆಯಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ. ಆರೋಗ್ಯಯುವ ಜೀವನಶೈಲಿ ನಮ್ಮದಾಗುತ್ತದೆ ಎಂದು ಜ್ಞಾನೇಶ್ವರಿ ಗೋಶಾಲೆಯ ಅಧ್ಯಕ್ಷ ಚಂದ್ರಹಾಸ ಪಿ ರಾಯ್ಕರ್ ಹೇಳಿದರು.
ದೀಪಾವಳಿ ಬಲಿಪಾಡ್ಯಮಿ ಪ್ರಯುಕ್ತ ಹುಣಸೋಡು ಗ್ರಾಮದಲ್ಲಿ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಸಂಕಲ್ಪದಂತೆ ಜ್ಞಾನೇಶ್ವರಿ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿ ಮಾತನಾಡಿ, ಗೋವುಗಳು ಕಾಮಧೇನು ಇದ್ದಂತೆ, ಪ್ರತಿ ದಿನ ಹಾಲು ಕರುಣಿಸುವ ಗೋಮಾತೆಯನ್ನು ಪ್ರತಿಯೊಬ್ಬರೂ ಪೂಜಿಸುವುದರಿಂದ ಸಕಲವು ಒಳಿತಾಗುತ್ತದೆ ಎಂದು ತಿಳಿಸಿದರು.
ಬಿಡಾಡಿ ಗೋವುಗಳು ಹಾಗೂ ಅಪಘಾತದಲ್ಲಿ ಗಾಯಗೊಂಡ ಜಾನುವಾರುಗಳನ್ನು ಜ್ಞಾನೇಶ್ವರಿ ಗೋಶಾಲೆಯಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ಎಲ್ಲ ಟ್ರಸ್ಟಿಗಳ ಸಹಕಾರದಿಂದ ತುಂಬಾ ಉತ್ತಮವಾಗಿ ಗೋಶಾಲೆಯು ನಡೆಯುತ್ತಿದೆ ಎಂದರು.
ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಸಾರ್ವಜನಿಕರು ಗೋಶಾಲೆಗೆ ಹುಲ್ಲು, ಹಿಂಡಿ, ಮೇವು, ಬಾಳೆಹಣ್ಣು, ಬೆಲ್ಲ, ಅಕ್ಕಿ ಸೇರಿದಂತೆ ನೆರವು ನೀಡಬಹುದಾಗಿದೆ ಎಂದರು.
Dnaneshwari Goshala ಇದೇ ಸಂದರ್ಭದಲ್ಲಿ. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ಗೋವುಗಳ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಕರ್ತವ್ಯ. ಸಮಾಜಮುಖಿ ಹಾಗೂ ಪವಿತ್ರವಾದ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಗೋಪೂಜೆ ಪ್ರಯುಕ್ತ 170 ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಉಪಾಧ್ಯಕ್ಷ ಪ್ರಶಾಂತ್ ರಾಯ್ಕರ್, ಕಾರ್ಯದರ್ಶಿ ಗುರುರಾಜ್ ಎಂ ಶೇಟ್, ಖಜಾಂಚಿ ಗಣೇಶ್ ಆರ್., ಸತೀಶ್, ಕಮಲಾಕ್ಷ, ದೇವಿದಾಸ್ ಶೇಟ್, , ಸಂತೋಷ್, ವಿಜಯ ರಾಯ್ಕರ್, ಶೇಷಾದ್ರಿ, ರಾಘವೇಂದ್ರ ಕೆ, ಕೃಷ್ಣಮೂರ್ತಿ ಕೆ ವಿ ಬಿಂದು ವಿಜಯ್‌ಕುಮಾರ್, ಗೌರಿ ಗುರುರಾಜ್, ಶ್ರೀಪಾದ ರೇವಣಕರ್, ಚಿತ್ರಕೂಟ ಶ್ರೀನಿವಾಸ್.ಸವಿತಾ ಡಾಕ್ಟರ್ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

Election Commission ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಮತದಾರರ ಪಟ್ಟಿ ಪ್ರಕಟಣೆ

0

Election Commission ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಕ್ಕೆ ಸಂಬAಧಿಸಿದAತೆ 111-ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ದಿನಾಂಕ : 29-10-2024 ರಂದು ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ(ಬಿಎಲ್‌ಓ) ಮೂಲಕ ಪ್ರಚುರಪಡಿಸಿದ್ದು ಈ ಬಗ್ಗೆ ಆಕ್ಷೇಪಣೆಯನ್ನು ಸಲ್ಲಿಸಲು ದಿ: 28-11-2024 ರವರೆಗೆ ಕಾಲಾವಧಿಯನ್ನು ಚುನಾವಣಾ ಆಯೋಗವು ನಿಗದಿಪಡಿಸಿದೆ.
ಈ ಹಿನ್ನೆಲೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ಬಾಧಿತರಾದವರು ತಮ್ಮ ಆಕ್ಷೇಪಣೆಯನ್ನು ಅವಶ್ಯಕತೆಗೆ ಅನುಗುಣವಾಗಿ ನಮೂನೆ 6, 7, 8 ನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ(ಬಿಎಲ್‌ಓ) ಆ್ಯಪ್ ಮೂಲಕ ಅಥವಾ https://www.nvsp.in/web portal ಹಾಗೂ voter Helpline ಮೂಲಕ ಸಲ್ಲಿಸಬಹುದಾಗಿರುತ್ತದೆ.
Election Commission ಚುನಾವಣಾ ಆಯೋಗವು ಮತದಾರರ ವಿಶೇಷ ಆಂದೋಲನವನ್ನು ದಿ: 09-11-2024, 10-11-2024,23-11-2024 ಹಾಗೂ ದಿ: 24-11-2024 ರಂದು ನಿಗದಿಪಡಿಸಿದ್ದು ಈ ದಿನಾಂಕಗಳಂದು ಮತಗಟ್ಟೆ ಮಟ್ಟದ ಅಧಿಕಾರಿಗಳು ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದು ಹಕ್ಕು ಮತ್ತು ಆಕ್ಷೇಪಣೆಯನ್ನು ಸಲ್ಲಿಸಬಹುದು ಎಂದು 111-ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ಬಿ ಎನ್ ಗಿರೀಶ್ ತಿಳಿಸಿದ್ದಾರೆ.

Adichunchanagiri Muth ಹಿಂದೂ ಧರ್ಮ ಸನಾತನ- ಶ್ರೀ ನಿರ್ಮಲಾನಂದನಾಥಶ್ರೀ

0

Adichunchanagiri Muth ಸನಾತನ ಹಿಂದೂ ಧರ್ಮ, ಜಗತ್ತಿನ ಧರ್ಮಗಳಲ್ಲಿಯೇ ಪುರಾತನವಾದದ್ದು, ಸುಮಾರು 5 ಸಾವಿರ ವರ್ಷಗಳ ಪ್ರಾಚೀನತೆಯನ್ನು ಹೊಂದಿದೆ. ನಂತರ ಯಹೂದಿ ಧರ್ಮ, ಜೈನ ಧರ್ಮ, ಬೌದ್ಧ ಧರ್ಮ, ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ,ಹೀಗೆ ಧರ್ಮಗಳು ಅಸ್ತಿತ್ವಕ್ಕೆ ಬಂದವು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾ ನಂದನಾಥ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಒಂದು ದಿನದ ಸಮಾಜ ವಿಜ್ಞಾನ ಮತ್ತು ಕನ್ನಡ ವಿಷಯಗಳ ಕುರಿತು ನಡೆಯುತ್ತಿರುವ ರಾಜ್ಯ ಮಟ್ಟ ಕಾರ್ಯಗಾರದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಧರ್ಮ ಧರ್ಮಗಳ ನಡುವೆ ಸಾಮರಸ್ಯದ ಬದುಕಿನಿಂದ ಶಾಂತಿ ನೆಲೆಸಲು ಸಾಧ್ಯ,ಆ ನಿಟ್ಟಿನಲ್ಲಿ ನಾವೆಲ್ಲರೂ ಚಿಂತನೆ ಮಾಡಬೇಕಾಗಿದೆ. ಧರ್ಮ ನಮ್ಮ ಭೌತಿಕ ಬದುಕನ್ನು ಸಮೃದ್ಧಗೊಳಿಸುವುದಲ್ಲದೇ,ಭೂಮಿಯ ಮೇಲೆ ಆನಂದ ಸಂತೋಷದಿಂದ ಬದುಕುವುದನ್ನ ತಿಳಿಸುವುದೇ ಧರ್ಮದ ಕೆಲಸವಾಗಿದೆ ಎಂದರು.
Adichunchanagiri Muth ವಿಶ್ವ ಉಗಮದ ಬಗ್ಗೆ ತಿಳಿಸುತ್ತಾ, ವಿಶ್ವ ಅಸ್ತಿತ್ವಕ್ಕೆ ಬಂದು ಒಂದು ಸಾವಿರ 382 ಕೋಟಿ ವರ್ಷಗಳು ಆಗಿವೆ, ಸೂರ್ಯ ಅಸ್ತಿತ್ವಕ್ಕೆ ಬಂದು 500 ಕೋಟಿ ವರ್ಷಗಳು, ಭೂಮಿ ಅಸ್ತಿತ್ವಕ್ಕೆ ಬಂದು 450 ಕೋಟಿ ವರ್ಷಗಳು ಸಂದಿವೆ, ಆದರೆ ಮಾನವನ ವಿಕಾಸವಾಗಿ 2 ಲಕ್ಷ ವರ್ಷಗಳು ಆಗಿವೆ, ಭೂಮಿಗೆ ವಸಾಹತುಶಾಹಿ ವ್ಯವಸ್ಥೆ ನೆಲೆಗಗೊಳ್ಳಲು 60 ಸಾವಿರ ವರ್ಷ ಹೀಗೆ ವಿಶ್ವ ಅಸ್ತಿತ್ವ ಬಂದಿತು ಎಂದರು.
ಎರಡು ಸಾವಿರ ಐದು ನೂರು ವರ್ಷಗಳ ಹಿಂದೆ ಬಂದ ಬುದ್ಧ, ಭೋಧಿಸಿದ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಪ್ರತಿಯೊಬ್ಬ ಶಿಕ್ಷಕರು ಮಕ್ಕಳ ಜೊತೆ ಉತ್ತಮ ಒಡನಾಟದಿಂದ ಇರಬೇಕು, ಅವರಿಗೆ ಬೇಕು-ಬೇಡಗಳ ಬಗ್ಗೆ ತಿಳಿದು ತರಬೇತಿ ಕೊಟ್ಟಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ.ಒಂದು ಶಾಲೆಯಲ್ಲಿ ಮಕ್ಕಳಲ್ಲಿ ಶಿಸ್ತು, ಸಂಯಮ, ಇದೆ ಅಂದರೆ ಅದಕ್ಕೆ ಶಿಕ್ಷಕರ ಪಾತ್ರ ದೊಡ್ಡದು, ಪೋಷಕರ ಜೊತೆಗೆ ಆತ್ಮೀಯತೆಯಿಂದ ಇರಬೇಕು ಎಂದರು. ಈಗಾಗಲೇ ರಾಜ್ಯದ ನುರಿತ ವಿವಿಧ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಪನ್ಮೂಲ ವ್ಯಕ್ತಿಗಳಿಂದ ತಮಗೆ ಕಾರ್ಯಾಗಾರ ನಡೆಸುತ್ತಿದ್ದು,ಇದರ ಸದುಪಯೋಗ ಪಡೆದುಕೊಂಡು, ತಮ್ಮ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕೊಟ್ಟು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಂದ ತಾವು ಉತ್ತಮ ಸಾಧನೆ ಮಾಡಿಸಬೇಕಾಗಿದೆ ಎಂದು ಶಿಕ್ಷಕರಿಗೆ ಕಿವಿ ಮಾತು ತಿಳಿಸಿದರು.
ಮಕ್ಕಳಿಗೆ ತರಬೇತಿ, ನಿರಂತರ ಅಭ್ಯಾಸ ಮಾಡುವುದರ ಮೂಲಕ ಅವರ ಸಾಧನೆಗೆ ಶಕ್ತಿ ತುಂಬುವುದು, ಮಕ್ಕಳಲ್ಲಿ ಅನೇಕ ನೂನ್ಯತೆ ಗಳಿರುತ್ತವೆ,ಅವುಗಳನ್ನು ತಿದ್ದಿ-ತೀಡಿ ಉತ್ತಮ ರೀತಿಯಲ್ಲಿ ಒಬ್ಬ ಪ್ರಜ್ಞಾವಂತರನ್ನಾಗಿ ಸಜ್ಜುಗೊಳಿಸುವುದರಲ್ಲಿ ತಮ್ಮಗಳ ಪಾತ್ರ ದೊಡ್ಡದು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿ ವಹಿಸಿದ್ದರು. ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಪ್ರಭಾಕರ ರಾವ್ ಅವರು, ವಕೀಲರು ಮತ್ತು ಸಂಪಾದಕರಾದ ಶ್ರೀ ಸುಧೀರ ಕುಮಾರ ಮುರೊಳ್ಳಿ ಅವರು, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಜಯಪ್ರಕಾಶಗೌಡ ಅವರು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗವದವರು ಉಪಸ್ಥಿತರಿದ್ದರು.

CM Siddhramaiah ನನ್ನ ಜೊತೆ ಚರ್ಚೆಗೆ ಮೊದಲು ನಿಮ್ಮ ಪಕ್ಷದ ಯತ್ನಾಳ್, ರಮೇಶ್ ಜಾರಕಿಹೊಳಿ ಅವರ ಸಂಗಡ ಚರ್ಚಿಸಿ- ಸಿದ್ಧರಾಮಯ್ಯ

0

CM Siddhramaiah ನನ್ನ ಜೊತೆ ಚರ್ಚೆಗೆ ಮೊದಲು ನಿಮ್ಮ ಪಕ್ಷದ ಯತ್ನಾಳ್, ರಮೇಶ್ ಜಾರಕಿಹೊಳಿ ಅವರ ಸಂಗಡ ಚರ್ಚಿಸಿ- ಸಿದ್ಧರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಪೇಮೆಂಟ್ ಸೀಟ್ ಅಧ್ಯಕ್ಷ’ ಎಂದು ವ್ಯಂಗ್ಯವಾಡಿದ್ದಾರೆ. ನನ್ನ ಜೊತೆಗೆ ಚರ್ಚೆ ನಡೆಸುವ ಮೊದಲು ನಿಮ್ಮದೇ ಪಕ್ಷದ ನಾಯಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರ ಜೊತೆ ಒಂದು ಸುತ್ತು ಚರ್ಚೆ ಮಾಡಿಕೊಂಡು ಬನ್ನಿ ಎಂದು ಅವರಿಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
CM Siddhramaiah ನನ್ನ ಜೊತೆ ಚರ್ಚೆಗೆ ಮೊದಲು ನಿಮ್ಮ ಪಕ್ಷದ ಯತ್ನಾಳ್, ರಮೇಶ್ ಜಾರಕಿಹೊಳಿ ಅವರ ಸಂಗಡ ಚರ್ಚಿಸಿ- ಸಿದ್ಧರಾಮಯ್ಯ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಪೇಮೆಂಟ್ ಸೀಟ್ ಅಧ್ಯಕ್ಷ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಪೋಸ್ಟ್ ಹಾಕಿರುವ ಸಿಎಂ ಸಿದ್ದರಾಮಯ್ಯ, “ಮಾನ್ಯ ವಿಜಯೇಂದ್ರ ಅವರೆ, ಪ್ರಧಾನಿ ನರೇಂದ್ರ ಮೋದಿ ಅವರ ಬದಲಿಗೆ ತಾವೇ ಬಹಿರಂಗ ಚರ್ಚೆಗೆ ಸಿದ್ಧ ಎಂದು ನೀವು ಹಾಕಿರುವ ಸವಾಲನ್ನು ಗಮನಿಸಿದೆ. ನನ್ನ ಜೊತೆ ಚರ್ಚೆ ನಡೆಸುವ ಮೊದಲು ನಿಮ್ಮದೇ ಪಕ್ಷದ ನಾಯಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರ ಜೊತೆ ಒಂದು ಸುತ್ತು ಚರ್ಚೆ ಮಾಡಿಕೊಂಡು ಬನ್ನಿ” ಎಂದು ಹೇಳಿದ್ದಾರೆ.
“ನಿಮ್ಮ ಪೂಜ್ಯ ತಂದೆಯವರನ್ನು ಮುಖ್ಯಮಂತ್ರಿ ಮಾಡಲು ನೀವು ಬಿಜೆಪಿ ಹೈಕಮಾಂಡ್ ಗೆ ಎರಡು ಸಾವಿರ ಕೋಟಿ ರೂಪಾಯಿ ನೀಡಿದ್ದೀರಿ..!! ನಿಮ್ಮನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಇನ್ನೂ ಒಂದಷ್ಟು ಕೋಟಿ ರೂಪಾಯಿ ನೀಡಿದ್ದೀರಿ..!! ಎಂದು ನಿಮ್ಮ ನಾಯಕರೇ ಆರೋಪಿಸಿದ್ದಾರೆ. ಮೊದಲು ಅವರ ಜೊತೆ ಚರ್ಚೆ ಮಾಡಿ ಮುಗಿಸಿ ಬನ್ನಿ.” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
“ನೀವು ಕಮಿಷನ್ ಹೊಡೆಯುವುದರಲ್ಲಷ್ಟೇ ಪರಿಣತರು ಎಂದು ನಿಮ್ಮದೇ ಪಕ್ಷದ ನಾಯಕರಾದ ಯತ್ನಾಳ್, ಜಾರಕಿಹೊಳಿ, ಹೆಚ್.ವಿಶ್ವನಾಥ್ ಅವರು ಹೇಳುತ್ತಲೇ ಇದ್ದಾರೆ. ಇಲ್ಲಿಯ ವರೆಗೆ ಅವರ ಆರೋಪಗಳಿಗೆ ನೀವು ಪ್ರತಿಕ್ರಿಯೆ ನೀಡದಿರುವುದು ಮತ್ತು ಇಂತಹ ಆರೋಪ ಮಾಡುತ್ತಿರುವವರ ವಿರುದ್ಧ ನಿಮ್ಮ ಪಕ್ಷದ ಹೈಕಮಾಂಡ್ ಕೂಡಾ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಈ ಆರೋಪಗಳನ್ನು ನೀವು ಒಪ್ಪಿಕೊಂಡಂತೆ ಕಾಣಿಸುತ್ತಿದೆ, ಇದು ನಿಜವೇ?” ಎಂದು ಅವರು ಕೇಳಿದ್ದಾರೆ.

Adichunchanagiri Muth ಮನುಕುಲದ ಹಿತರಕ್ಷಣೆ ಎಲ್ಲಾ ಧರ್ಮಗಳ ಚಿಂತನೆ- ಶ್ರೀಮಾದಾರ ಚನ್ನಯ್ಯಶ್ರೀ

0

Adichunchanagiri Muth ಎಲ್ಲಾ ಧರ್ಮಗಳ ಚಿಂತನೆ ಮನುಕುಲದ ಹಿತವನ್ನು ರಕ್ಷಿಸುವಂತಿದೆ ಎಂದು ಚಿತ್ರದುರ್ಗ ಮದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ನಗರದ ಆದಿಚುಂಚನಗಿರಿ ಶಾಖಾ ಮಠದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಭಗವತ್ ಚಿಂತನ ಧರ್ಮ ಸಂಕಥನ ಉಪನ್ಯಾಸದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಪ್ರತಿಯೊಂದು ಧರ್ಮದಲ್ಲಿಯೂ ಮನುಷ್ಯನ ಹಿತವನ್ನು ಬಯಸುವಂತಹ ವಿಶೇಷ ನಿಯಮಗಳಿವೆ ಎಂದರು.

ಎಲ್ಲ ಧರ್ಮಗಳಲ್ಲಿನ ವಿಚಾರಗಳು ಅನುಷ್ಟಾನಕ್ಕಾಗಿ ಇವೆಯೇ ಹೊರತು ಕೇವಲ ಭಾಷಣಕ್ಕಲ್ಲ. ಆದರೆ ಇಂದು ಧರ್ಮದ ವಿಚಾರಗಳು ಹೆಚ್ಚಾಗಿ ಭಾಷಣಕ್ಕೇ ಸೀಮಿತವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾನವ ಜೀವಿ ವಿಕಾಸ ಹೊಂದಿದ ಆರಂಭದಲ್ಲಿ ಕಾಡಿನಲ್ಲಿ ಪ್ರಾಣಿಗಳ ನಡುವೆ ಮಾನವ ವಾಸಿಸುತ್ತಿದ್ದ. ಬಳಿಕ ಆಹಾರ ಕ್ರಾಂತಿಯಾಯಿತು. ಇದರಿಂದ ಗುಂಪು, ಪ್ರದೇಶ, ಗ್ರಾಮ, ಪಟ್ಟಣ ನಿರ್ಮಾಣವಾಯಿತು. ಇದೆಲ್ಲ ಆದ ಬಳಿಕ ದೇವರು, ಧರ್ಮವನ್ನು ಮನುಷ್ಯ ಹುಡುಕಿಕೊಂಡ. ಇದೇ ಹೆಸರಿನಲ್ಲಿ ಏಕತೆ ಸೃಷ್ಟಿಯಾಯಿತು ಎಂದು ಹೇಳಿದರು.

ಆಹಾರಕ್ಕಾಗಿ ಹೋರಾಟ ಮಾಡುತ್ತಿದ್ದ ಮನುಷ್ಯ ಕ್ರಮೇಣ ಧರ್ಮಕ್ಕಾಗಿ ಹೋರಾಟ ಮಾಡುವ ಸನ್ನಿವೇಶ ಸೃಷ್ಟಿಯಾಯಿತು. ಇಸ್ಲಾಂ ಧರ್ಮ ಶಾಂತಿ ಹಾಗೂ ಶರಣಾಗತಿಯನ್ನು ಸಾರುತ್ತದೆ. ಆದರೆ ಇಂದು ಸನ್ನಿವೇಶ ಭಿನ್ನವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಮನು ಕುಲದ ಪರಿವರ್ತನೆ, ವಿಶ್ವಶಾಂತಿ ಹಾಗೂ ಸೌಹಾರ್ದತೆಯಲ್ಲಿ ಧರ್ಮಗಳ ಪಾತ್ರ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು.

ಸತ್ಸಂಗ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ಆದಿಚುಂಚನಗಿರಿ ಸಂಸ್ಥೆಯ ಹಿರಿಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಶ್ರೀಗಳು ಗೌರವಿಸಿ ಆಶೀರ್ವದಿಸಿದರು.
ಕರ್ನಾಟಕದಲ್ಲಿ ಶಿಕ್ಷಣ ಮಹಾ ಕ್ರಾಂತಿ ಮಾಡಿರುವುದು ಅದಿಚುಂಚನಗಿರಿ ಕ್ಷೇತ್ರ. ಧರ್ಮ ಹಾಗೂ ಆಧ್ಯಾತ್ಮಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅದನ್ನು ಸಮಾಜದಲ್ಲಿ ಅನುಷ್ಟಾನಗೊಳಿಸಲು ಶ್ರಮಿಸಿದವರು ಶ್ರೀ ಬಾಲಗಂಗಾಧರನಾಥ ಶ್ರೀಗಳು ಎಂದು ನಿಟ್ಟೂರು ನಾರಾಯಣ ಗುರು ಮಹಾ ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಎಲ್ಲ ಧರ್ಮಗಳೂ ಬ್ರಾತೃತ್ವದ ಸಂದೇಶ ಸಾರುತ್ತವೆ. ಎಲ್ಲರೂ ಸದ್ಗುಣ ಅಳವಡಿಸಿಕೊಳ್ಳಬೇಕು. ಸತ್ಕಾರ್ಯ ಮಾಡಿ, ಸತ್ಪುರಷರಾಗಿ ಬಾಳಬೇಕು. ಅದನ್ನೇ ಆಚಾರ್ಯತ್ರಯರು ಹೇಳಿದ್ದಾರೆ. ಅನೇಕ ಮಠಾಧೀಶರು ಇಂತಹ ಸಂದೇಶಗಳನ್ನು ನಮಗೆ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಿದರೆ ಅವರು ಉತ್ತಮವಾದ ಧರ್ಮ ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದರು.

Adichunchanagiri Muth ಪ್ರತಿ ವರ್ಷ ಭಗವತ್ ಚಿಂತನ ಧರ್ಮ ಸಂಕಥನ ಏರ್ಪಡಿಸಿ ಧಾರ್ಮಿಕ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲು ಅವಕಾಶ ಕಲ್ಪಿಸುತ್ತಿರುವ ಆದಿಚುಂಚನಗಿರಿ ಪೀಠದ ಕಾರ್ಯ ಅನುಕರಣೀಯ ಎಂದು ಹೇಳಿದರು.

ಎಲ್ಲರೂ ನಮ್ಮವರೂ ಎಂದುಕೊಂಡು, ಒಪ್ಪಿಕೊಂಡು ಬದುಕುವುದರಿಂದ ಜೀವನ ಸಾರ್ಥಕವಾಗುತ್ತದೆ. ಎಲ್ಲ ಧರ್ಮಗಳನ್ನೂ ಪ್ರೀತಿಸಬೇಕು ಎಂದು ಶಿಕಾರಿಪುರ ವಿರಕ್ತ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಧರ್ಮದ ಜಾಗೃತಿ ಚೆನ್ನಾಗಿದ್ದರೆ ಧರ್ಮ ಬೆಳೆಯುತ್ತದೆ. ಆದರೆ ಧರ್ಮದ ಹುಚ್ಚು ಶುರುವಾದರೆ ಅಪಾಯ. ಹೀಗಾಗಿ ಬೇರೆ ಧರ್ಮಗಳ ಬಗ್ಗೆ ಗೌರವ ಹಾಗೂ ಆದರ ಅವಶ್ಯ. ಇಂದು ಧರ್ಮ ಸಂಕಥನದ ಮೂಲಕ ಜ್ಞಾನದ ಹೊಳೆ ಹರಿಸುತ್ತಿರುವುದು ಸಮಯೋಚಿತ ಹಾಗೂ ಅರ್ಥಪೂರ್ಣವಾಗಿದೆ ಎಂದರು.

ನಿಟ್ಟೂರು ನಾರಾಯಣ ಗುರು ಮಹಾ ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಚಿತ್ರದುಗ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗನಾಥ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿ, ಶಿಕಾರಿಪುರ ವಿರಕ್ತ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಗೋಕಾಕ್‌ನ ಶ್ರೀ ರವಿಶಂಕರ ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Holalur Panchayath ಕೋಟೆ ಗಂಗೂರು& ಹೊಳಲೂರು “ಗ್ರಾಪಂ” ಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟಣೆ

0

Holalur Panchayath ಶಿವಮೊಗ್ಗ ತಾಲೂಕು ಕೋಟೆಗಂಗೂರು ಹಾಗೂ ಹೊಳಲೂರು ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತಿದ್ದು ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಹೊರಡಿಸಿದ್ದು, ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ: 06/11/2024, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 12/11/2024, ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ: 13/11/2024, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ: 15/11/2024, ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸುವ ದಿನಾಂಕ: 23/11/2024 ರಂದು (ಬೆಳಗ್ಗೆ 7.00 ರಿಂದ ಸಂಜೆ 5.00ರವರೆಗೆ), ಮರು ಮತದಾನದ ಅವಶ್ಯವಿದ್ದಲ್ಲಿ Holalur Panchayath ಮತದಾನ ನಡೆಸುವ ದಿನಾಂಕ: 25/11/2024, ಮತಗಳ ಎಣಿಕೆ ದಿನಾಂಕ: 26/11/2024 ರಂದು (ಬೆ. 8.00ರಿಂದ ) ನಡೆಸಲಾಗುವುದು.
ಸಾರ್ವಜನಿಕರು ಮುಕ್ತ ಹಾಗೂ ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆ ನಡೆಸಲು ಸಹಕರಿಸುವಂತೆ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಬಿ.ಎನ್. ಗಿರೀಶ್ ತಿಳಿಸಿದ್ದಾರೆ.

VISL Bhadravati ಭದ್ರಾವತಿ ವಿಐಎಸ್ ಎಲ್ ನಲ್ಲಿ ಜಾಗೃತಾ ತಿಳುವಳಿಕೆ ಸಪ್ತಾಹ

0

VISL Bhadravati ಕೇಂದ್ರ ಜಾಗೃತಾ ಆಯೋಗ ಮತ್ತು ಸೈಲ್ ಕಾಪೋರೇಟ್ ವಿಜಿಲೆನ್ಸ್ನ ನಿರ್ದೇಶನದಂತೆ ಈ ವರ್ಷದ ಜಾಗೃತಾ ತಿಳುವಳಿಕೆ ಸಪ್ತಾಹ-೨೦೨೪ನ್ನು “ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ“ ಎಂಬ ಧ್ಯೇಯವಾಕ್ಯದೊಂದಿಗೆ ೨೮ನೇ ಅಕ್ಟೋಬರ್ ೨೦೨೪ ರಿಂದ ೩ನೇ ನವೆಂಬರ್, ೨೦೨೪ರ ವರೆಗೆ ಆಚರಿಸಲಾಯಿತು.

ಜಾಗೃತಾ ತಿಳುವಳಿಕೆ ಸಪ್ತಾಹದ ಸಮಾರೋಪ ಸಮಾರಂಭವನ್ನು ೪ನೇ ನವೆಂಬರ್, ೨೦೨೪ ರಂದು ಶಾರದಾ ಮಂದಿರ, ಭದ್ರಾವತಿಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು ಮತ್ತು ಗೌರವಾನ್ವಿತ ಅತಿಥಿಗಳಾದ ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ರಘುನಾಥ ಬಿ. ಅಷ್ಟಪುತ್ರೆ, ಮಹಾಪ್ರಬಂಧಕರು (ವಿಜಿಲೆನ್ಸ್ ಮತ್ತು ಎ.ಸಿ.ವಿ.ಓ) ಶ್ರೀ ಕೆ.ಬಿ. ಮಲ್ಲಿಕಾರ್ಜುನ, ಉಪಾಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ಶ್ರೀ ವಿಕಾಸ್ ಬಸೇರ್, ಪ್ರಧಾನ ಕಾರ್ಯದರ್ಶಿಗಳು, ವಿಐಎಸ್‌ಎಲ್ ಅಧಿಕಾರಿಗಳ ಸಂಘ ಇವರುಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀ ಸಿ. ಲಕ್ಷ್ಮಿಕಾಂತ, ಕಿರಿಯ ಪ್ರಬಂಧಕರು (ಮಿಲ್ಸ್ ಮತ್ತು ಆರ್.ಟಿ.ಎಸ್) ರವರು ಪ್ರಾರ್ಥನಾಗೀತೆಯನ್ನು ಹಾಡಿದರು. ಸೈಂಟ್ ಚಾರ್ಲ್ಸ್ ಶಾಲೆಯ ೩ನೇ ತರಗತಿ ವಿಧ್ಯಾರ್ಥಿನಿ ಕುಮಾರಿ ಪಾವನಿ ಎಮ್. ನಾಯಕ್ ತನ್ನ ಭರತನಾಟ್ಯದಿಂದ ಪ್ರೇಕ್ಷಕರನ್ನ ಬೆರಗುಗೊಳಿಸಿದಳು.

ವೃತ್ತಿ ಬದುಕು ಮತ್ತು ವೈಯುಕ್ತಿಕ ಬದುಕಿನಲ್ಲಿ ಪ್ರಾಮಾಣಿಕತೆ, ನೀತಿ ಮತ್ತು ಮೌಲ್ಯಗಳ ಮಹತ್ವ ಸಾರುವ “ಸತ್ಯ-ನಿಷ್ಠೆ” ಎಂಬ ನಾಟಕವನ್ನು ಅನನ್ಯ ಶಾಲೆಯ ಮಕ್ಕಳು ಅದ್ಭುತವಾಗಿ ಪ್ರದರ್ಶಿಸಿದರು.

ಶ್ರೀ ರಘುನಾಥ ಬಿ. ಅಷ್ಟಪುತ್ರೆ, ಮಹಾಪ್ರಬಂಧಕರು (ವಿಜಿಲೆನ್ಸ್ ಮತ್ತು ಎ.ಸಿ.ವಿ.ಓ) ರವರು ಈ ವರ್ಷದ ಜಾಗೃತಾ ತಿಳುವಳಿಕೆ ಸಪ್ತಾಹ-೨೦೨೪ ರ ಅಂಗವಾಗಿ ಹಮ್ಮಿಕೊಂಡಿದ್ದ ೧೮೨ ಉದ್ಯೋಗಿಗಳಿಗೆ ತರಬೇತಿ, ಮಾರುಕಟ್ಟೆ ಇಲಾಖೆ ಆಯೋಜಿಸಿದ್ದ ಗ್ರಾಹಕರ ಸಭೆ, ನೈತಿಕ ಉಧ್ಯಾನವನ ಸ್ವಚ್ಛತೆ ಮುಂತಾದ ಚಟುವಟಿಕೆಗಳ ವಿವರವಾದ ವರದಿಯನ್ನು ಮಂಡಿಸಿದರು. ಜಾಗೃತಾ ತಿಳುವಳಿಕೆ ಸಪ್ತಾಹ-೨೦೨೪ರ ಯಶಸ್ಸಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

VISL Bhadravati ಶ್ರೀ ಕೆ.ಎಸ್. ಸುರೇಶ್ ತಮ್ಮ ಭಾಷಣದಲ್ಲಿ, ನಮ್ಮ ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕಿರುವ, ಜೀವನದಲ್ಲಿ ಅತಿಮುಖ್ಯವಾದ ಪ್ರಾಮಾಣಿಕತೆ, ನೀತಿ, ಪಾರದರ್ಶಕತೆ ಮತ್ತು ಮೌಲ್ಯಗಳ ಮಹತ್ವ ಬಗ್ಗೆ ಒತ್ತಿಹೇಳಿದರು.

ವಿಐಎಸ್‌ಎಲ್‌ನ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಭದ್ರಾವತಿಯ ಶಾಲಾ ವಿದ್ಯಾರ್ಥಿಗಳಿಗಾಗಿ ಪೊಸ್ಟರ್ ಡಿಜೈನ್, ಪ್ರಬಂಧ, ಆಶುಭಾಷಣ, ರಂಗೋಲಿ, ರಸಪ್ರಶ್ನೆ ಮತ್ತು ಚಿತ್ರಕಲೆಯಂತಹ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.

ವಿಐಎಸ್‌ಎಲ್ ಹಮ್ಮಿಕೊಂಡಿದ್ದ ಎಥಿಕ್ಸ್ ಕ್ಲಬ್ ಚಟುವಟಿಕೆಗಳಲ್ಲಿ ಅನನ್ಯ ಶಾಲೆಯ ಶ್ರೀ ಬಿ.ಎಸ್. ಅನಿಲ್ ಕುಮಾರ್, ಕಾರ್ಯದರ್ಶಿ, ಶ್ರೀ ವೇಣುಗೋಪಾಲ್, ಆಡಳಿತಾಧಿಕಾರಿ, ಶ್ರೀ ಕಲ್ಲೇಶ್ ಕುಮಾರ್.ಕೆ, ಮುಖೋಪಾಧ್ಯಾರು ಮತ್ತು ಸಿಬ್ಬಂದಿಗಳು ನೀಡಿದ ಅವಿಸ್ಮರಣೀಯ ಸಹಾಯಕ್ಕಾಗಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ವಿಐಎಸ್‌ಎಲ್‌ನ ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರು ಬರೆದ ಪೊಸ್ಟರ್ ಮತ್ತು ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ವಿಜಿಲೆನ್ಸ್ ಇಲಾಖೆಯ ಶ್ರೀ ಕೇದಾರನಾಥ್ ನೆರೆದವರನ್ನು ಸ್ವಾಗತಿಸಿ, ಶ್ರೀ ಚೇತನ್ ತಡ್ಕಲ್ ವಂದಿಸಿ ಹಾಗೂ ಶ್ರೀ ಎಲ್. ಕುತಲನಾಥನ್, ಸಹಾಯಕ ಮಹಾಪ್ರಬಂಧಕರು ಕಾರ್ಯಕ್ರಮ ನಿರೂಪಿಸಿದರು.

Karnataka Janapada Academy 2023 ನೇ ವಾರ್ಷಿಕ ಜಾನಪದ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

0

Karnataka Janapada Academy 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ ಗೌರವ, ಇಬ್ಬರಿಗೆ ಜಾನಪದ ತಜ್ಞ ಪ್ರಶಸ್ತಿ, ಐವರಿಗೆ ಪುಸ್ತಕ ಬಹುಮಾನವನ್ನು ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದೆ.

ವಾರ್ಷಿಕ ಗೌರವಕ್ಕೆ ಆಯ್ಕೆಯಾದವರು: ಬೆಂಗಳೂರು ನಗರ ಜಿಲ್ಲೆಯ ಕೆ.ಎಂ.ರಾಮಯ್ಯ (ಏಕತಾರಿ, ತಂಬೂರಿ), ಬೆಂಗಳೂರು ಗ್ರಾಮಾಂತರದ ಓಬಮ್ಮ (ಸೋಬಾನೆ), ರಾಮನಗರ ಜಿಲ್ಲೆ ರಂಗಯ್ಯ (ಪಟ ಕುಣಿತ), ಕೋಲಾರದ ತೋಪಣ್ಣ ಮಂಚಂಡಹಳ್ಳಿ (ಕೀಲುಕುದುರೆ), ಚಿಕ್ಕಬಳ್ಳಾಪುರದ ದೊಡ್ಡಕೂರ್ಲಪ್ಪ (ತಮಟೆ ವಾದನ), ತುಮಕೂರು ಜಿಲ್ಲೆಯ ಕದರಮ್ಮ (ಜನಪದ ಹಾಡು), Karnataka Janapada Academy ದಾವಣಗೆರೆ ಜಿಲ್ಲೆಯ ಕಾಟಮ್ಮ (ಕಥನ ಕಾವ್ಯ), ಚಿತ್ರದುರ್ಗದ ಸಿರಿಯಮ್ಮ (ಮಹಾಕಾವ್ಯ), ಶಿವಮೊಗ್ಗ ಜಿಲ್ಲೆ ಟೀಕಪ್ಪ (ಡೊಳ್ಳು ಕುಣಿತ), ಕೊಡಗು ಜಿಲ್ಲೆಯ ದೇವಕಿ ಕೆ.ಸಿ. (ಊರ್ಟಿಕೋಟ್‌), ಮಂಡ್ಯದ ಗುರುಬಸವಯ್ಯ (ತಂಬೂರಿಪದ), ಹಾಸನದ ವೀರಭದ್ರಯ್ಯ (ತತ್ವಪದ), ಚಿಕ್ಕಮಗಳೂರಿನ ನಾಗರಾಜಪ್ಪ ವೈ.ಪಿ. (ಕರಡಿಗೆ ಕಾವ್ಯ), ಮೈಸೂರಿನ ಗುರುಸಿದ್ದಯ್ಯ (ತಂಬೂರಿಪದ), ಉಡುಪಿಯ ಅಪ್ಪಿ (ಜನಪದ ಸೂಲಗಿತ್ತಿ), ದಕ್ಷಿಣ ಕನ್ನಡದ ಲೀಲಾವತಿ (ನಾಟಿವೈದ್ಯೆ), ಚಾಮರಾಜನಗರದ ಗೌರಮ್ಮ (ಸೋಬಾನೆಪದ), ಬೆಳಗಾವಿಯ ಶಿವನಪ್ಪ ಚಂದರಗಿ (ಡೊಳ್ಳುಕುಣಿತ), ಬಾಗಲಕೋಟೆಯ ಹನಮಂತ ವೆಂಕಪ್ಪ ಸುಗತೇಕರ (ಗೊಂದಳಿಪದ), ವಿಜಯಪುರದ ಇಮಾಂಬಿ ಇಮಾಮಸಾಬ (ತತ್ವಪದ), ಗದಗದ ಬಸಪ್ಪ ಹಡಗಲಿ (ಗೀಗೀ ಪದ), ಬಳ್ಳಾರಿಯ ದಳವಾಯಿ ಚಿತ್ತಪ್ಪ (ಜನಪದ ಮಹಾಕಾವ್ಯ), ಹಾವೇರಿಯ ಸಾವಕ್ಕಾ ಓಲೇಕಾರ (ಸೋಬಾನೆ, ಸಂಪ್ರಾದಯ ಪದ), ಉತ್ತರ ಕನ್ನಡದ ಈರಯ್ಯ ಮೊಗೇರ (ಕಾರಿನ್‌ಮನೆ ಕುಣಿತ, ಹೌಂದೇರಾಯನ ಕುಣಿತ), ಕಲಬುರಗಿ ಅಕ್ಕಮ್ಮ (ಸಂಪ್ರದಾಯ ಪದ), ಬೀದರ್‌ನ ಏಸಪ್ಪಾ (ಶಹನಾಯಿ), ರಾಯಚೂರಿನ ಶಾಂತಮ್ಮ (ಬುರ‍್ರಕಥೆ), ಕೊಪ್ಪಳದ ರೇವಣಪ್ಪ (ಡೊಳ್ಳಿನ ಹಾಡು, ಕುಣಿತ), ಧಾರವಾಡದ ರಾಮಪ್ಪ ಬಸವಂತಪ್ಪ ಮೂಲಗಿ (ಹಂತಿಪದ), ಯಾದಗಿರಿಯ ಅಮಯ್ಯಸ್ವಾಮಿ ಹಿರೇಮಠ (ಭಜನೆ) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ವಿಜೇತರು ತಜ್ಞ ಪ್ರಶಸ್ತಿ: ಜೀ.ಶಂ.ಪ ತಜ್ಞ ಪ್ರಶಸ್ತಿಗೆ ದಕ್ಷಿಣ ಕನ್ನಡದ ಕೆ. ಚಿನ್ನಪ್ಪ ಗೌಡ ಹಾಗೂ ಬಿ.ಎಸ್‌.ಗದ್ದಗಿಮಠ ತಜ್ಞ ಪ್ರಶಸ್ತಿಗೆ ವಿಜಯನಗರದ ಮಂಜುನಾಥ ಬೇವಿನಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ

Karnataka Janapada Academy ಪುಸ್ತಕ ಬಹುಮಾನ: 2022ರ ಸಾಲಿನಲ್ಲಿ ಬೆಂಗಳೂರು ಬಿ.ಎಸ್‌.ಸ್ವಾಮಿ ಅವರ “ಜಾನಪದ ಲೇಖನ ಗುಚ್ಚ”, ಬೆಂಗಳೂರು ಕುರುವ ಬಸವರಾಜು ಅವರ “ಭೌತಿಕ ವಸ್ತು ವಿಜ್ಞಾನ ಜಾನಪದ ಮತ್ತು ವಸ್ತು ಸಂಗ್ರಹಾಲಯಗಳ ಕುರಿತ ಲೇಖನಗಳು”, ನಾಗ ಎಚ್‌.ಹುಬ್ಳಿ ಜಾರ್ಖಂಡ್‌ ಅವರ “ಆದಿವಾಸಿ ಸಂಸ್ಕೃತಿ”, 2023ನೇ ಸಾಲಿನಲ್ಲಿ ಮೈಸೂರಿನ ವ.ನಂ.ಶಿವರಾಮು ಅವರ “ಜನಪದ–ಜಾನಪದ ಮತ್ತು ಕ್ಷೇತ್ರಕಾರ್ಯ” ಬೆಂಗಳೂರಿನ ವಿಜಯಶ್ರೀ ಸಬರದ ಅವರ “ಸಬರದ ಮತ್ತು ಜಾನಪದ” ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

Department of Youth Empowerment and Sports ರಾಜ್ಯಮಟ್ಟದ ಯುವಜನೋತ್ಸವಕ್ಕೆ ನ.16 ರಂದು ಆಯ್ಕೆ ಪ್ರಕ್ರಿಯೆ

0

Department of Youth Empowerment and Sports ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಜಿಲ್ಲಾ ತಂಡಗಳನ್ನು ಕಳುಹಿಸಿಕೊಡಲು ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆಗಳನ್ನು ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನ.16 ರಂದು ಬೆಳಗ್ಗೆ 10 ಗಂಟೆಗೆ ನಗರದ ಕುವೆಂಪು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದೆ.
ಯುವಜನೋತ್ಸವದ ಸ್ಪರ್ಧೆಗಳು : ಜನಪದ ನೃತ್ಯ(ತಂಡ) ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ 10 ಜನರು 15 ನಿಮಿಷ ಭಾಗವಹಿಸಲು ಸಮಯವಿರುತ್ತದೆ. ಜನಪದ ಗೀತೆ (ತಂಡ) ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ 10 ಜನರು 07 ನಿಮಿಷ ಸಮಯ, ಜನಪದ ನೃತ್ಯ( ವೈಯಕ್ತಿಕ) ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಒಬ್ಬರು 07 ನಿಮಿಷ ಸಮಯ, ಜನಪದ ಗೀತೆ ( ವೈಯಕ್ತಿಕ) ಕನ್ನಡ/ಆಂಗ್ಲ ಹಿಂದಿ ಭಾಷೆಯಲ್ಲಿ ಒಬ್ಬರು 07 ನಿಮಿಷ ಸಮಯವಿರುತ್ತದೆ. ವಿಷಯಾಧಾರಿತ ಸ್ಪರ್ಧೆಗಳು 40 ಜನರು, ಕವಿತೆ ಬರೆಯುವುದು 2 ಜನ 60 ನಿಮಿಷ ಸಮಯ, ಕಥೆ ಬರೆಯುವುದು 3 ಜನ 60 ನಿಮಿಷ ಸಮಯ, ಚಿತ್ರ ಕಲೆ 2 ಜನ 90 ನಿಮಿಷ, ಘೋಷಣೆ ಸ್ಪರ್ಧೆ 2 ಜನ 3 ನಿಮಿಷ ಸಮಯ, ಯುವ ಕೃತಿ ವಿಭಾಗದಲ್ಲಿ ಗುಡಿ ಕೈಗಾರಿಕೆ ಕಲಾ ಪ್ರಕಾರ, ನೇಕಾರಿಕೆ/ಜವಳಿ, ಕೃಷಿ ಉತ್ಪನ್ನಗಳು 7 ಜನರು ಭಾಗವಹಿಸಬಹುದು.
Department of Youth Empowerment and Sports ಭಾಗವಹಿಸುವ ಯುವಕ, ಯುವತಿಯರು 15 ರಿಂದ 29 ವರ್ಷ ವಯೋಮಿತಿಯೊಳಗಿರಬೇಕು. ನೊಂದಾವಣೆ ಸಮಯದಲ್ಲಿ ವಯಸ್ಸಿನ ದೃಢೀಕರಣಕ್ಕೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ಜನನ ಪ್ರಮಾಣ ಪತ್ರ/ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿರುತ್ತದೆ. ಗ್ರಾಮೀಣ ಪ್ರದೇಶದವರು, ನಗರ ಪ್ರದೇಶದವರು. ಕಾಲೇಜಿನ ಯುವಕ / ಯುವತಿಯರು, ಯುವಕ/ಯುವತಿ ಸಂಘದ ಸದಸ್ಯರು ಭಾಗವಹಿಸಬಹುದಾಗಿರುತ್ತದೆ. ಭಾಗವಹಿಸುವ ಸ್ಪರ್ಧಾಳುಗಳು ಅವಶ್ಯಕ ವೇಷ ಭೂಷಣ, ಸಂಗೀತ ಉಪಕರಣ ಮತ್ತು ಸ್ಪರ್ಧೆಗೆ ಅವಶ್ಯವಿರುವ ಸಾಮಗ್ರಿಗಳನ್ನು ತಾವೇ ತರತಕ್ಕದ್ದು. ಭಾಗವಹಿಸುವ ಸ್ಪರ್ಧಾಳುಗಳಿಗೆ ಮಧ್ಯಾಹ್ನ ಲಘು ಉಪಹಾರವನ್ನು ಹಾಗೂ ತಾಲ್ಲೂಕಿನಿಂದ ಭಾಗವಹಿಸುವ ಸ್ಪರ್ಧಾಳುಗಳಿಗೆ ಬಂದು ಹೋಗುವ ಸಾಮಾನ್ಯ ಪ್ರಯಾಣ ದರ ನೀಡಲಾಗುವುದು.
ಆಸಕ್ತರು ನ. 16 ರಂದು ಶನಿವಾರ ಬೆಳಗ್ಗೆ 10.00 ಗಂಟೆಗೆ ಕುವೆಂಪು ರಂಗಮಂದಿರ, ಶಿವಮೊಗ್ಗ ಇಲ್ಲಿ ವರದಿ ಮಾಡಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಕ್ರೀಡಾಂಗಣ, ಶಿವಮೊಗ್ಗ, ದೂರವಾಣಿ ಸಂಖ್ಯೆ 99002-80416 ಮುಖಾಂತರ ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.