Shivamogga Police ಸುಮಾರು 35 ವರ್ಷ ಜ.04 ರಂದು ಬೆಳಗಿನ ಜಾವ ಸುಮಾರು 3 ರಿಂದ 6 ಗಂಟೆಯ ಅವಧಿಯಲ್ಲಿ ಪೆಸಿಟ್ ಕಾಲೇಜು ಸಾನ್ವಿ ಹೋಟೆಲ್ ಸಮೀಪ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಗೆ ಸಾಗರದಿಂದ ಶಿವಮೊಗ್ಗ ಕಡೆ ಯಾವುದೋ ವಾಹನ ಚಾಲಕ ಅತಿ ವೇಗದಿಂದ ವಾಹನ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
Shivamogga Police ಮೃತ ವ್ಯಕ್ತಿಯು ಅಂದಾಜು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ಕೋಲು ಮುಖ ಹೊಂದಿದ್ದು, ಕಂದು ಬಣ್ಣದ ತುಂಬು ತೋಳಿನ ಜರ್ಕಿನ್, ನೀಲಿ ಬಣ್ಣದ ಟೀ ಶರ್ಟ್, ಬಿಳಿ ಬಣ್ಣದ ಬನಿಯನ್, ನಶೆ ಕಲರ್ ಪ್ಯಾಂಟ್ ಧರಿಸಿರುತ್ತಾನೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ತಿಳಿಸಿದೆ
Shivamogga Police ಪೆಸಿಟ್ ಸನಿಹದ ಸಾನ್ವಿ ಹೋಟೆಲ್ ಬಳಿ ಅಪಘಾತ ಅಪರಿಚಿತ ವ್ಯಕ್ತಿ ಸಾವು
Madhu Bangarappa ಪರಿಸರ ಜಾಗೃತಿ ಚಳವಳಿಯಲ್ಲಿದ್ದ ಮುಂಚೂಣಿ ಸಾಹಿತಿ,ನಾ.ಡಿಸೋಜ- ಮಧುಬಂಗಾರಪ್ಪ ಕಂಬನಿ
Madhu Bangarappa ನಾಡಿನ ಖ್ಯಾತ ಸಾಹಿತಿ ನಾ ಡಿಸೋಜಾ ಅವರ ನಿಧನಕ್ಕೆ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಾ.ಡಿಸೋಜಾ ಅರು ಈ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದ ದಿಗ್ಗಜರಲೊಬ್ಬರಾಗಿದ್ದ ಅವರು ನಮ್ಮೆಲ್ಲರ ಮಾರ್ಗದರ್ಶಿಯಾಗಿದ್ದಾರೆ. ಬರೀ ಸಾಹಿತಿಯಾಗಿರದೆ ಒಬ್ಬ ಜನಪರ ಹೋರಾಟಗಾರರೂ ಆಗಿದ್ದ ಅವರು, ಮಲೆನಾಡಿನ ನೆಲ ಜಲದ ವಿಚಾರದಲ್ಲಿ ಸದಾ ಸಮಾಜವನ್ನು ಜಾಗೃತಗೊಳಿಸುತ್ತಿದ್ದರು. ಸಾಗರ ತಾಲೂಕಿನ ರೈಲ್ವೆ, ಪರಿಸರ, ಶರಾವತಿ ಕಣಿವೆಗಳಿಗೆ ಸಂಬಂಧಿಸಿದ ಹೋರಾಟದಲ್ಲಿ ಮುಂಚೂಣಿಯಲ್ಲಿರುತಿದ್ದ ನಾ ಡಿಸೋಜಾ ಅವರದ್ದು ಮಾದರಿ ವ್ಯಕ್ತಿತ್ವ ಎಂದು ಮಧುಬಂಗಾರಪ್ಪ ಹೇಳಿದ್ದಾರೆ.
Madhu Bangarappa ಡಿಸೋಜಾ ಅವರು ಬೌತಿಕವಾಗಿ ನಮ್ಮನ್ನು ಅಗಲಿರಬಹುದು ಆದರೆ ಅವರ ಉತ್ಕೃಷ್ಟ ಸಾಹಿತ್ಯಕ್ಕೆ ಎಂದೂ ಸಾವಿಲ್ಲ. ಅವರ ಸಾಹಿತ್ಯ ಈ ಸಮಾಜಕ್ಕೆ ಎಂದೂ ದಾರಿದೀಪವಾಗಿದೆ. ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಅವರ ಕಾದಂಬರಿಗಳು ಬೆಳಕು ಚೆಲ್ಲಿವೆ. ಅ ಜನರ ಪರವಾಗಿ ಡಿಸೋಜಾ ಅವರು ಧ್ವನಿ ಎತ್ತಿದ್ದರು. ಶ್ರೇಷ್ಠ ಸಾಹಿತಿಯನ್ನು ಕಳೆದುಕೊಂಡು ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಅವರ ಅಗಲಿಕೆ ಇಡೀ ಓದುಗ ವಲಯಕ್ಕೆ ತುಂಬಲಾರದ ನಷವಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೀಡಲಿ ಎಂದು ಮಧುಬಂಗಾರಪ್ಪ ಪ್ರಾರ್ಥಿಸಿದ್ದಾರೆ.
Santosh S Lad ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸುವಲ್ಲಿ ಅರಿವು ಹೆಚ್ಚಿಸಬೇಕು- ಸಚಿವ ಸಂತೋಷ್ ಲಾಡ್
Santosh S Lad ಬಾಲ ಕಾರ್ಮಿಕತೆಯನ್ನು ಹೋಗಲಾಡಿಸಲು ಜಾಗೃತಿಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ತಂಡ ಕಾರ್ಯಪ್ರವೃತ್ತರಾಗಬೇಕೆಂದು ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ತಿಳಿಸಿದರು.
ಸೋಮವಾರ ¸ರ್ಕ್ಯುಟ್ ಹೌಸ್‌ನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಲ ಕಾರ್ಮಿಕ ಪದ್ದತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅರಿವು ಹೆಚ್ಚಿಸಬೇಕು. ಭಯ ಅಲ್ಲ, ಬದಲಾಗಿ ಜಾಗೃತಿ ಮೂಡಿಸಬೇಕು. ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓ ಮತ್ತು ಪೊಲೀಸ್ ವರಿಷ್ಟಾಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಅಭಿಯಾನದ ರೀತಿಯಲ್ಲಿ ಜಾಗೃತಿ ಮೂಡಿಸಬೇಕು. ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕೆಂದರು.
ಜಿಲ್ಲೆಯಲ್ಲಿ ಈ ವರ್ಷ 8 ಬಾಲ ಕಾರ್ಮಿಕ ಪ್ರಕರಣ ವರದಿಯಾಗಿದೆ. 5 ಪ್ರಕರಣಗಳು ಬೇರೆ ರಾಜ್ಯದಿಂದ ವಲಸೆ ಬಂದಂತಹ ಪ್ರಕರಣ ಆಗಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಒಂದು ಪ್ರಕರಣ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಇದೆ. ಮತ್ತಿಬ್ಬರನ್ನು ಮುಖ್ಯವಾಹಿನಿಗೆ ತಂದು ಶಿಕ್ಷಣ ಕೊಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚು ಇಲ್ಲ. ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳ ಮೂಲಕ ಈ ಸಂಖ್ಯೆಯನ್ನೂ ತಗ್ಗಿಸಬಹುದು ಎಂದರು.
Santosh S Lad ಮಾಜಿ ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಅಧಿಕೃತ ಲೈಸೆನ್ಸ್ ಪಡೆಯದೇ ಹೊರಗುತ್ತಿಗೆ ಏಜೆನ್ಸಿ ನಡೆಸುತ್ತಿರುವ ಬಗ್ಗೆ, ಹಲವು ಕಾರ್ಮಿಕ ಸಮಸ್ಯೆಗಳು ಹಾಗೂ ಕಾರ್ಮಿಕರಲ್ಲದೇ ಇರುವವರೂ ಕಾರ್ಮಿಕರಾಗಿ ನೋಂದಣಿಯಾಗುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಸಚಿವರು ಪ್ರತಿಕ್ರಿಯಿಸಿ, ಕಾರ್ಮಿಕರಲ್ಲದೇ ಇರುವವರೂ ಕಾರ್ಮಿಕರೆಂದು ನೋಂದಣಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸೆಕ್ಟರ್‌ವಾರು 43 ಸೆಕ್ಟರ್‌ಗಳಲ್ಲಿ ಹೊಸದಾಗಿ ವಾಹನಗಳನ್ನು ಖರೀದಿಸಿ, ಕಟ್ಟಡ ನಿರ್ಮಾಣ ಸ್ಥಳಗಳಿಗೆ ತೆರಳಿ ಕಾರ್ಮಿಕರ ನೈಜತೆಯನ್ನು ಪರಿಶೀಲಿಸಲಾಗುವುದು ಎಂದರು.
ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸೊಸೈಟಿಗಳನ್ನು ರಚಿಸಿ, ಜಿಲ್ಲಾಧಿಕಾರಿಗಳ ಮುಖಾಂತರವೇ ಹೊರಗುತ್ತಿಗೆ ನೌಕರರಿಗೆ ವೇತನ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುವುದು. ಕಾರ್ಮಿಕರ ಸಮಸ್ಯೆಗಳನ್ನು ಹೋಗಲಾಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ಆರು ತಿಂಗಳಲ್ಲಿ ಹಲವಾರು ಬದಲಾವಣೆ ಆಗಲಿದೆ ಎಂದು ತಿಳಿಸಿದರು.
ವಿಧಾನಸಭಾ ಶಾಸಕರಾದ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ಮಾಜಿ ವಿಧಾನಸಭಾ ಶಾಸಕ ಪ್ರಸನ್ನಕುಮಾರ್, ಕಾರ್ಮಿಕ ಇಲಾಖೆ ಆಯುಕ್ತರಾದ ಗೋಪಾಲಕೃಷ್ಣ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಿಇಓ ಮತ್ತು ಕಾರ್ಯದರ್ಶಿ ಭಾರತಿ.ಡಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಕಾರ್ಮಿಕ ಅಧಿಕಾರಿ, ಇತರೆ ಅಧಿಕಾರಿಗಳು ಹಾಜರಿದ್ದರು.
Klive Special Article ನೆನಪಾಗಿ ಸಲ್ಲುವ ಮಹನೀಯ “ನಾಡಿ” ಸ್ಮರಣ ಲೇಖನ: ಪ್ರಭಾಕರ ಕಾರಂತ
Klive Special Article ನಮ್ಮ ಒಲುವಿನ ಸಾಹಿತಿ ನಾ.ಡಿಸೋಜ ಇನ್ನಿಲ್ಲ. ಘನತೆಯ ಬದುಕು ಸವೆಸಿ ಅವರು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಶರಾವತಿ ಯೋಜನೆಯಲ್ಲಿ ಹಣ ಎಣಿಸುವ ಆಯಕಟ್ಟಿನ ಸ್ಥಾನದಲ್ಲಿದ್ದೂ ಒಂದು ಕ್ಷಣ ಭ್ರಷ್ಟ ಹಣ ಅವರು ಮುಟ್ಟಿದವರಲ್ಲ. ಸಾಗರದಲ್ಲಿ ಕಷ್ಟದಿಂದ ಒಂದು ಪುಟ್ಟ ಮನೆಯಷ್ಟೇ ಅವರಿಗೆ ಉಳಿಸಿದ್ದರಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಿದ್ದು. ಮುಳುಗಡೆಯ ನೋವನ್ನು ಪ್ರಥಮ ಬಾರಿ ಅವರು ಬರೆದವರು. ಸಂಕಟವನ್ನು ಸ್ವತಹ ಅನುಭವಿಸಿದವರಂತೆ ಬರೆದರು. ಪರಕಾಯ ಪ್ರವೇಶ ಸಾಧ್ಯವಾಯಿತೆಂದೇ ಇಂತಹ ಬರಹ ಬರಲು ಸಾಧ್ಯವಾಯಿತು. ನನ್ನನ್ನು ಅವರತ್ತ ಸೆಳೆದಿದ್ದೇ ಈ ಬರಹ.ಸರ್ ನಿಮ್ಮ ಮಾತು ಕೇಳಬೇಕು, ನಾನು ಮುಳುಗಡೆಯ ಸಂತ್ರಸ್ಥ, ಕೊಪ್ಪ ಬರಬೇಕು ನೀವು ಎಂದು ಒಂದು ಪತ್ರ ಬರೆದಿದ್ದಕ್ಕೆ ಉತ್ತರಿಸಿ ಬಂದೇ ಬಿಟ್ಟರಲ್ಲ ಆಗಿನಿಂದ ನನ್ನಂತಹ ಸಾಮಾನ್ಯನೊಂದಿಗೂ ಹಿರಿಯರ ನಂಟು ಸಾಧ್ಯವಾಯಿತು. ಮತ್ತೆ ಹರಿಸಿದ್ದೆಲ್ಲಾ ಪ್ರೀತಿಯ ಧಾರೆ.ಎಷ್ಟು ಸಾರಿ ಅವರು ದಂಪತಿಗಳು ನಮ್ಮ ಮನೆಯಲ್ಲೋ ನಾನು ಅವರ ಮನೆಯಲ್ಲೋ ಕಲೆತು ಹರಟಿಲ್ಲ. ಈ ಭಾಗದ ಯಾವುದೇ ಕಾರ್ಯಕ್ರಮಕ್ಕೆ ಕರೆದರೆ ಇಲ್ಲ ಅಂದಿದ್ದೇ ಇಲ್ಲ. ಮಾತ್ರವಲ್ಲ ಎಲ್ಲಿಗೋ ಹೋಗುವಾಗಲೂ ನನ್ನ ಮನೆಗೆ ಬಂದು ಒಂದಿಷ್ಟು ಹೊತ್ತು ಮಾತನಾಡಿ ಹೋಗಿದ್ದೂ ಇದೆ.
ರಮೇಶ್ ಬೇಗಾರ್ ಮಲೆನಾಡ ಮಡಿಲಿಂದ ದಾರವಾಹಿ ದೂರದರ್ಶನಕ್ಕಾಗಿ ಮಾಡುವಾಗ ನಾ.ಡಿಸೋಜರವರದ್ದೂ ಒಂದು ಕಥೆ ಚಿತ್ರಿಸಬೇಕಿತ್ತು. ಕೇಳಿದರೆ ಪುಕ್ಸಟ್ಟೆ ಹಕ್ಕು ಕೊಟ್ಟೇ ಬಿಟ್ಟರು. ನಾವು ಐದಾರು ಜನ ಸಾಗರದ ಅವರ ಮನೆಗೆ ಚಿತ್ರೀಕರಿಸಲು ಹೋಗಿದ್ದೆವು. ಸಂದರ್ಶನ ನಾನೇ ಮಾಡಿದ್ದು. ಚಿತ್ರಿಕರಣ ಮುಗಿಯುವಾಗ ಗಂಟೆ ಒಂದು ದಾಟಿತ್ತು. ಸಾಗರದಲ್ಲಿ ಹೋಟೆಲ್ ಗಳಿಗೆ ಬರವೇ. ಊಟಕ್ಕೆ ಯಾವುದೋ ಹೋಟೆಲ್ ಗೆ ನುಗ್ಗಿದರಾಯಿತು ಎಂದು ಅಂದುಕೊಂಡಿದ್ದ ನಮಗೆ ಡಿಸೋಜ ಬಿಡಲೇ ಇಲ್ಲ.ಅವರ ಪತ್ನಿಯೇ ಅಡಿಗೆ ಮಾಡಿ ಬಡಿಸಿದ್ದು. ಹೊರಡುವಾಗ ಎಲ್ಲರಿಗೂ ಒಂದೊಂದು ಪುಸ್ತಕ ಉಡುಗರೆ!!.ಈ ಸುಸಂಸ್ಕೃತ ನೆಡವಳಿಕೆ ನಮ್ಮ ಪಾಲಿಗೆ ಅಪರೂಪದ್ದು. ನಾ.ಡಿ.ದಂಪತಿಗಳು ನನ್ನ ಮನೆಗೆ ಬರುವಾಗ ಬರಿಗೈಯಲ್ಲಿ ಬಂದವರಲ್ಲ. ಅತ್ರಸ ಮಾಡಿ ಅವರ ಪತ್ನಿ ತಂದುಕೊಡುತ್ತಿದ್ದರು.ಅದು ಅತೀವ ಋಚಿ ಹೊಂದಿರುತ್ತಿತ್ತು.
ಅವರು ರಾಜ್ಯದ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದಾಗ ನಾನು ಅವರದ್ದೊಂದು ಸಂದರ್ಶನ ತರಂಗಕ್ಕಾಗಿ ಮಾಡಲು ಸಾಗರ ತೆರಳಿದ್ದೆ. ಒಂದಿಷ್ಟು ಫೋಟೋ ತೆಗೆಸಿಕೊಂಡು ಸಂದರ್ಶನ ಮಾಡಿ ಹೊರಟಾಗ ಮದ್ಯಾಹ್ನ 12 ಗಂಟೆ.ಊಟಕ್ಕೆ ನಾನು ನಿಲ್ಲಲಾರೆ, ಈ ಫೋಟೋ ಸ್ಟುಡಿಯೋಗೆ ಹೋಗಿ ಆರಿಸಿ ನಾನು ಊರಿಗೆ ಹೋಗಲೇ ಬೇಕು, ಲೇಖನಕ್ಕೆ ಎರಡೇ ದಿನ ಉಳಿದಿರುವುದು ಎಂದು ಹೊರಟಾಗ, ಸ್ವಲ್ಪ ತಡೆಯಿರಿ ಎಂದವರ ಪತ್ನಿ ಹೇಳಿದರು. ನೋಡಿದರೆ ಮತ್ತೆ ಬಿಸಿ ಬಿಸಿ ಅತ್ರಸದ ಪೊಟ್ಟಣ.ಮನಸ್ಸು ಈ ಪ್ರೀತಿಗೆ ತುಂಬಿ ಬಂದಿತ್ತು.
ನನ್ನ ಎರಡು ಪುಸ್ತಕ ಬಂದಾಗ ಅವರಿಗೆ ಹೋದಾಗ ಕೊಟ್ಟರಾಯಿತು ಎಂದು ಅಂದುಕೊಂಡಿದ್ದೆ.ಆದರೆ ಒಂದು ದಿನ ಅವರ ಫೋನ್.ಕಾರಂತರೇ ನಿಮ್ಮ ಎರಡೂ ಪುಸ್ತಕ ಓದಿದೆ. ಖುಷಿಯಿಂದ ಎನ್ನಬೇಕೇ. ಎಲ್ಲಿ ಸಿಕ್ಕಿತು ಸರ್ ಎಂದರೆ ಶಿವಮೊಗ್ಗ ಜಿಲ್ಲೆಯ ಸಾಹಿತ್ಯ ಸಮ್ಮೇಳನದಲ್ಲಿ ಸ್ಟಾಲ್ ನಲ್ಲಿ ಎಂದರು. ಅವರು ಆ ಸಮ್ಮೇಳನ ಅಧ್ಯಕ್ಷರಾಗಿದ್ದರು.
Klive Special Article ಧರ್ಮಸ್ಥಳದ ಬಳಿ ಒಂದು ಸಮಾರಂಭಕ್ಕೆ ಅವರೊಟ್ಟಿಗೆ ಹೋಗುವುದಿತ್ತು. ಬರುವಾಗ ನನಗೆಂದು ಒಂದೆರಡು ಪುಸ್ತಕ ತಂದಿದ್ದರು.
ಅವರ ಆರೋಗ್ಯ ಕೆಟ್ಟು ಶಸ್ತ್ರ ಚಿಕಿತ್ಸೆ ಆಗಿದೆ ಎಂದು ಕೇಳಲ್ಪಟ್ಟ ನಾನು ಸಾಗರ ಹೋದಾಗ ನೋಡಿ ಬರಲು ಅವರ ಮನೆಗೆ ಹೋಗಿದ್ದೆ. ಅದು ದಶಕಗಳ ಹಿಂದಿನ ಮಾತು. ನೋಡಿದರೆ ತುಂಬಾ ಸೋತು ಹೋಗಿದ್ದರು. ಪತ್ನಿ ಮಂಗಳೂರಿನಲ್ಲಿ ಆಸ್ಪತ್ರೆಯ ಖರ್ಚೇ 85 ಸಾವಿರ ಆಯಿತು ಎಂದರು.ನನ್ನ ಗೆಳೆಯ ಯೋಗೀಶ್ವರ್ ಆಗ ಸಾಗರದ ತಹಶಿಲ್ದಾರರಾಗಿದ್ದರು. ಅವರನ್ನು ಡಿಸೋಜ ಮನೆಗೆ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕ ಅವರ ಮೆಡಿಕಲ್ ಬಿಲ್ ಪಡೆದು ಸರ್ಕಾರಕ್ಕೆ ಈ ಹಣ ಕೊಡಬೇಕು ಎಂದು ಪತ್ರ ಹಾಕಿಸಿದೆ. ಒಂದು ತಿಂಗಳಲ್ಲೇ ಹಣ ಅವರಿಗೆ ದೊರಕಿತು.ನಾನೇನೋ ದೊಡ್ಡ ಉಪಕಾರ ಮಾಡಿದಂತೆ ಫೋನಾಯಿಸಿ ಕೃತಜ್ಞತೆ ಹೇಳಿದ್ದರು.
ನನ್ನ ಬಂದು ಒಬ್ಬರ ಕವನ ಸಂಕಲನಕ್ಕೆ ಮುನ್ನುಡಿ ಬೇಕಿತ್ತು. ಬರೆದುಕೊಡುವಿರಾ ಸರ್ ಎಂದಾಗ ಓ ಸಂತೋಷದಿಂದ ಎಂದು ಹೇಳಿ ಸುಂದರ ಮುನ್ನುಡಿ ಬರೆದುಕೊಟ್ಟಿದ್ದಲ್ಲದೇ ಮೇಳಿಗೆಯಲ್ಲಿ ನಡೆದ ಪುಸ್ತಕ ಬಿಡುಗಡೆಗೂ ಬಂದು ಇಡೀ ದಿನ ನಮ್ಮೊಡನೇ ಇದ್ದು ಇದೊಂದು ಆತ್ಮೀಯ ಅನುಭವ ಕೊಡಿಸಿದಿರಿ ಎಂದು ನನಗೇ ಧನ್ಯವಾದ ಹೇಳಿದ್ದರು.
ನನ್ನ ಮುಳುಗಡೆ ಒಡಲಾಳ ಕೊಟ್ಟು ಬರಲೆಂದೇ ಅವರ ಮನೆಗೆ ಹೋದಾಗ ಬೀಗ ಹಾಕಿತ್ತು. ಮಂಗಳೂರಿಗೆ ಆಸ್ಪತ್ರೆಗೆ ಹೋಗಿದ್ದಾರೆ ಎಂದು ಎದುರು ಮನೆಯವರು ಹೇಳಿ ಪುಸ್ತಕ ಅವರೇ ಇಸಿದುಕೊಂಡರು. ಸ್ವಲ್ಪ ದಿನದ ಮೇಲೆ ಫೋನಾಯಿಸಿದರೆ ಅವರ ಪತ್ನಿ ಎತ್ತಿದರು. ಪರವಾಗಿಲ್ಲ ಎಂದರೇ ವಿನಹ ಫೋನ್ ಕೊಡಲೇ ಇಲ್ಲ. ನನಗೆ ಅರ್ಥವಾಯಿತು.
ಈಚೆಗೆ ರಾಷ್ಟ್ರೋತ್ಥಾನ ಕ್ಕೆ ಹೋದಾಗ ನಾ.ಡಿಸೋಜ ಅಕೌಂಟ್ ವಿವರ ಬೇಕು ಎಂದರು.ಯಾಕೆ ಕೇಳಿದಾಗ ಕಥೆ ಒಂದು ಬಿಚ್ಚಿಕೊಂಡಿತು. ನಾ.ಡಿಸೋಜ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಹೋ.ವೆ.ಶೇಷಾದ್ರಿಯವರ ಆತ್ಮೀಯರಂತೆ. ಒಮ್ಮೆ ಶೇಷಾದ್ರಿಯವರ ಬೇಟಿಯಾಗಲು ಬೆಂಗಳೂರಿನ ಕೇಶವ ಕೃಪಾಕ್ಕೆ ಬಂದಿದ್ದರಂತೆ.ಅವರು ಯಾರು ಎಂದು ತರುಣನೋರ್ವ ವಿಚಾರಿಸಿದ್ದಾನೆ.ನಾನು ನಾ.ಡಿಸೋಜ ಎಂದವರು ಹೇಳಿದ್ದಾರೆ.ಇಲ್ಲಿ ಅಹಿಂದೂಗಳಿಗೆ ಪ್ರವೇಶ ಇಲ್ಲ ಎಂದಾತ ಹೇಳಿದ್ದಾನೆ.ನಾ.ಡಿ.ಕೋಪಗೊಳ್ಳುವ ಬದಲು ನಗುತ್ತಾ ಶೇಷಾದ್ರಿಯವರನ್ನೇ ಇಲ್ಲಿ ಕರೆಯಿರಿ ಎಂದಿದ್ದಾರೆ.ಅಷ್ಟರಲ್ಲಿ ಶೇಷಾದ್ರಿಯವರೇ ಅಲ್ಲಿ ಬಂದು ನೋಡಿ ಅವರನ್ನು ಒಳಗೆ ಕರೆದೊಯ್ದಿದ್ದಾರೆ. ಶೇಷಾದ್ರಿಯವರ ನಿಧನಾ ನಂತರ ಅವರ ಸಂಸ್ಮರಣ ಗ್ರಂಥ ಒಂದು ತರಬೇಕು ಎಂದು ರಾಷ್ಟ್ರೋತ್ಥಾನ ನಿರ್ಧರಿಸಿದೆ.ಒಂದಿಷ್ಟು ಲೇಖನ ಸಂಗ್ರಹಿಸಿ ನೀವೇ ಸಂಪಾದಿಸಿಕೊಡಬೇಕು ಎಂದು ನಾ.ಡಿಸೋಜ ಬಳಿ ಕೊಂಡೊಯ್ದು ನೀಡಿದ್ದಾರೆ. ಅವರು ಪ್ರಾಮಾಣಿಕವಾಗಿ ಸಂಪಾದಿಸಿ ಕಳಿಸಿದ್ದಾರೆ.ಆದರೆ ಆ ಕಾರ್ಯ ವಹಿಸಿಕೊಂಡವರ ಅಜಾಗುರೂಕತೆಯಿಂದ ಪುಸ್ತಕ ಆಗದೇ ಹಾಗೇ ದಶಕಗಳ ಕಾಲ ಉಳಿದಿದೆ. ಈಚೆಗೆ ಯಾರಿಗೋ ನಾ.ಡಿಸೋಜ ಕಳಿಸಿದ ಸಂಪಾದಿತ ಕರಡು ಪ್ರತಿ ಅಕಸ್ಮಾತ್ ಕಣ್ಣಿಗೆ ಬಿದ್ದಿದೆ.
ಅದು ಎಸ್.ಆರ್.ರಾಮಸ್ವಾಮಿಯವರ ಗಮನಕ್ಕೂ ಬಂದು ಛೇ ಈ ಕೃತಿ ಈಗಲಾದರೂ ಮಾಡಿ ಶೇಷಾದ್ರಿಯವರಿಗೂ ಅತ್ತ ನಾ.ಡಿಸೋಜ ರವರಿಗೂ ಗೌರವ ನೀಡುವಾ ಎಂದು ಪ್ರಕಟಿಸಿದ್ದಾರೆ. ನಾ.ಡಿಸೋಜ ರವರಿಗೆ ಗೌರವ ಪ್ರತಿ ಕಳಿಸಿ ಬ್ಯಾಂಕಿನ ವಿವರಕ್ಕೆ ಕೋರಿದರೆ ಅವರ ಉತ್ತರ ಇಲ್ಲ.ಈ ಸಂಗತಿ ತಿಳಿದ ನಾನು ವಿವರ ನೀಡುವ ಜವಾಬ್ದಾರಿ ಹೊತ್ತುಕೊಂಡೆ. ನನ್ನ ಫೋನ್ ಅತ್ತಕಡೆಯಿಂದ ತೆಗೆಯದಾಗ ಸಾಗರದ ಗೆಳೆಯ ಪಿ.ಡಿ.ಎನ್ ಸಹಾಯ ಕೋರಿದೆ. ಅವರು ಡಿಸೋಜ ಮತ್ತೆ ಅನಾರೋಗ್ಯ ಕಾರಣ ಮಂಗಳೂರಿನಲ್ಲೇ ಇರುವ ಸಂಗತಿ ಹೇಳಿ ಯಾರ ಮೂಲಕವೋ ಮಗನನ್ನೇ ಸಂಪರ್ಕಿಸಿ
ವಿವರ ಕಳಿಸಿದರು. ಕಡೆಯ ಕ್ಷಣದಲ್ಲಿ ಅವರ ಋಣ ತೀರಿಸಲು ರಾಷ್ಟ್ರೋತ್ಥಾನಕ್ಕೆ ನನ್ನ ಅಳಿಲು ಸೇವೆ ಸಂದಿತು.
ಬಡತನ ಅಂದರೆ ಅದು ನಾಚಿಕೆ ಪಡುವ ವಿಷಯವಲ್ಲ. ಹಣದ ಮೌಲ್ಯಕ್ಕಿಂತ ಗುಣದ ಮೌಲ್ಯ ಮಿಗಿಲು ಎಂದು ಬದುಕಿ ತೋರಿದ ಮಹಾತ್ಮ ಡಿಸೋಜ. ಅವರೊಬ್ಬ ಅಪ್ಪಟ ಭಾರತೀಯ.ಈ ದೇಶ,ಈ ಸಂಸ್ಕೃತಿ ಪ್ರೀತಿಸುತ್ತಿದ್ದರು. ನಾನು ಅವರನ್ನು ಅಬ್ದುಲ್ ಕಲಾಂ ರಂತೆ ಭಾರತೀಯ ಎಂದೊಂದು ಸಂಧರ್ಭ ಹೇಳಿದ್ದೆ. ಅಷ್ಟು ದೊಡ್ಡ ಮಾತು ಆಡಬಾರದು ಎಂದವರು ನಂತರ ಹೇಳಿದ್ದರು. ಕ್ರೈಸ್ತ ಬದುಕನ್ನು ತೆರೆದಿಟ್ಟ ಪ್ರಪ್ರಥಮ ಭಾರತೀಯ ಸಾಹಿತಿ ಅವರು. ಕನ್ನಡ ಸಾರಸ್ವತ ಲೋಕ ಓರ್ವ ಸಜ್ಜನ ಸಾತ್ವಿಕ ಸಹೃದಯನನ್ನು ಕಳೆದುಕೊಂಡು ಬಡವಾಗಿದೆ. ಅವರ ಸ್ಥಾನ ತುಂಬುವುದು ಕಷ್ಟವೇ ಸರಿ.
Klive Special Article ಮಲೆನಾಡಿನ ಸಂವೇದನೆಗಳಿಗೆ ಅನಾವರಣ.” ಭಾವಬಿಂಬ” ಕವನ ಸಂಕಲನ-ಅಭಿಜ್ಞಾ ಪಿ.ಎಂ.ಗೌಡ
Klive Special Article ಮಲೆನಾಡಿನ ಒಳನೋಟಗಳ ಅನಾವರಣಗೊಳಿಸುವ ‘ಭಾವಬಿಂಬ’ /ಭರವಸೆ ಮೂಡಿಸಿದ ಗೀತಾ ಮಕ್ಕಿಮನೆ
(ಗೀತಾ ಮಕ್ಕಿಮನೆ ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸದವರು. ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಇವರು ಓದು ಮತ್ತು ಬರಹ ಮುಖ್ಯ ಹವ್ಯಾಸ. ತರಂಗ, ಮಂಗಳ ಸೇರಿದಂತೆ ರಾಜ್ಯದ ಅನೇಕ ಪತ್ರಿಕೆಗಳಲ್ಲಿ ಇವರ ಕಾವ್ಯ ಪ್ರಕಟಗೊಂಡಿದೆ. ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಇವರ ಕವನ ವಾಚನ ಮಾಡಿದ್ದು, ರಾಜ್ಯದ ಅನೇಕ ಕವಿಗೋಷ್ಟಿಗಳಲ್ಲಿ ಇವರು ಭಾಗವಹಿಸಿದ್ದಾರೆ. ಇವರ ಚೊಚ್ಚಲ ಕೃತಿ ‘ಭಾವಬಿಂಬ’ ಪ್ರಕಟಗೊಂಡಿದ್ದು, ನಾಡಿನ ಸಾಹಿತ್ಯಾಸಕ್ತರ ಗಮನ ಸೆಳೆದಿದೆ. ಇವರ ಕೃತಿ ಕುರಿತು ಹಲವಾರು ಸಾಹಿತಿಗಳು ಕೃತಿ ವಿಮರ್ಶೆ ಮಾಡಿದ್ದಾರೆ. ಇದರಲ್ಲಿ ಮಂಡ್ಯದ ಶಿಕ್ಷಕಿ ಮತ್ತು ಬರಹಗಾತಿ ಅಭಿಜ್ಞಾ ಪಿ.ಎಮ್.ಗೌಡ ಪ್ರಮುಖರು. ಇವರು ಬರೆದ ವಿಮರ್ಶೆ ಇಲ್ಲಿದೆ]
‘ಭಾವದೆಲೆಯ ಬಿಂಬ ಮೂಡಿ
ಕವನವಾಗಿ ಹರಿದಿದೆ
ಗೀತೆಯೊಳಗೆ ಸಾರ ತುಂಬಿ
ಮಕ್ಕಿಮನೆಯೆ ಕಂಡಿದೆ…..’
ಕವನವೆಂಬುವುದು ಎಷ್ಟೊ ಸಂಗತಿಗಳನ್ನು ಅವುಗಳ ಆಳ, ವಿಸ್ತಾರದ ಕಥೆಯನ್ನು ಆಕರ್ಷಕವಾಗಿ, ಎಳೆಎಳೆಯಾಗಿ ಕೆಲವು ಸಾಲುಗಳಲ್ಲಿ ಹಿಡಿದಿಟ್ಟುಕೊಂಡು ಹಾಡಿನ ರೂಪದಲ್ಲಿ, ವಾಚಿಸುವ ರೂಪದಲ್ಲಿ ಪ್ರದರ್ಶಿಸಬಲ್ಲ ಸಾಹಿತ್ಯ ಪ್ರಕಾರ. ಅತ್ಯಂತ ಛವಿಯುಳ್ಳ, ಸಾರಸತ್ವವುಳ್ಳ ಇಂತಹ ಕವಿತೆ ಅಥವಾ ಕವನ ಸಾಹಿತ್ಯದಲ್ಲಿನ ಉಳಿದೆಲ್ಲ ಪ್ರಕಾರಗಳಿಗಿಂತ ವಿಭಿನ್ನ ಮತ್ತು ಸೊಗಸಿನಿಂದ, ಸೊಗಡಿನಿಂದ ಕೂಡಿರುತ್ತವೆಂದೆ ಹೇಳಬಹುದು.
ಸಾಹಿತ್ಯ ಕ್ಷೇತ್ರದೊಳಗೆ ನಾವು ಪ್ರವೇಶಿಸುವ ಮಾರ್ಗ ಕಥೆ, ಕಾದಂಬರಿ, ಲೇಖನ, ನಾಟಕ, ಪ್ರಬಂಧ ಹೀಗೆ ಯಾವುದೇ ಇರಬಹುದು. ಆದರೆ ಬರೆಯಲು ಹೊರಡುವ ಸಾಹಿತ್ಯ ಪ್ರೇಮಿಯ ಮೊದಲ ಒಲವು ಮಾತ್ರ ಕವನವೇ ಆಗಿರುತ್ತದೆ. ಕಾರಣ ಇಷ್ಟೇ, ತನ್ನೊಳಗೆ ಅದ್ಯಾವುದೇ ವಿಷಯಗಳು ಗೋಚರಿಸಿದರೂ ತನ್ನೊಳಗಿನ ಒಳಗುದಿಯನ್ನ ಎರಡು ಮೂರು ಸಾಲುಗಳಲ್ಲಿ ಅತ್ಯಂತ ಹುಮ್ಮಸ್ಸಿನಿಂದ ಗೀಚುವ ಸಾಲುಗಳೇ ಕವನಗಳಾಗುವವು.
Klive Special Article ಕವನಕ್ಕೆ ತನ್ನದೆ ಆದ ಚೌಕಟ್ಟುಗಳಿವೆ. ತನ್ನದೆ ಆದ ಚಮತ್ಕಾರಗಳನ್ನು ಹೊಂದಿದ್ದು ಹಾಗೂ ಅರ್ಥಪೂರ್ಣವಾಗಿದ್ದು ನೋಡುವುದಕ್ಕೂ, ವಾಚಿಸುವುದಕ್ಕೂ ವಾವ್.! ಎನ್ನುವ ಅಂಶಗಳನ್ನು ಒಳಗೊಂಡಿರುತ್ತವೆ. ಹಾಗೆಯೇ ಕವನಗಳು ಸೃಜನಾತ್ಮಕ ಕೌಶಲ್ಯಗಳನ್ನು ಬಲಪಡಿಸುವುದಲ್ಲದೆ ಇವು ಸಾಮಾನ್ಯವಾಗಿ ಕಥೆಗಳಿಗಿಂತ ಚಿಕ್ಕದಾಗಿರುವುದರಿಂದ, ಕವನಗಳು ಚರಣಗಳ ರೂಪದಲ್ಲಿ ಸಾಲುಗಳಾಗಿರುತ್ತವೆ.ಕೆಲವು ಕವನಗಳು ಪ್ರಾಸಬದ್ಧವಾಗಿದ್ದು, ವಾಚಿಸಲು ಅಥವ ಹಾಡಲೂ ಯೋಗ್ಯವಾಗಿರುತ್ತವೆ. ಮುಂದುವರೆದಂತೆ ಕವನಗಳಲ್ಲಿ ಯಾವುದೇ ಒಂದು ವಿಷಯವನ್ನು ತೆಗೆದುಕೊಂಡಾಗ ಗಂಭೀರವಾಗಿ ಹೇಳಿ ಬಿಡಬಹುದು. ಇಲ್ಲವೇ ಕೆಲವು ಸಂದರ್ಭಗಳಲ್ಲಿ ಭಯ, ನೋವು, ಸಂಕಷ್ಟಗಳನ್ನು ಹೇಳುವಾಗ ಅವುಗಳಲ್ಲಿನ ಬೇಗುದಿಯನ್ನು ಪದಗುಚ್ಛಗಳನ್ನು ಹೊದಿಸುವ ಮುಖೇನ ಹೇಳಬಹುದು. ಹಾಗಾಗಿ ಕವನ ಎನ್ನುವುದು ಬರವಣಿಗೆಯ ಒಂದು ತುಣುಕು, ಸಾಮಾನ್ಯವಾಗಿ ಸೃಜನಶೀಲತೆ ,ವೈಶಿಷ್ಟತೆ ಹಾಗು ನಿರ್ದಿಷ್ಟವಾದ ಅರ್ಥ, ಭಾವನೆಯನ್ನು ವ್ಯಕ್ತಪಡಿಸುವಂತದ್ದಾಗಿದೆ. ಹೀಗೆ ನಾವು ಯಾವುದೇ ಒಂದು ವಿಷಯದ ಮೇಲೆ ಅರ್ಥಪೂರ್ಣವಾಗಿ ಗೀಚಿದ್ದೆಲ್ಲವೂ ಕವನಗಳೇ ಆಗಿರುತ್ತವೆ. ಪ್ರಾಸ ಹಾಕಲೇ ಬೇಕೆಂದು ಹಠಹಿಡಿದು ಕವನದ ಸಾಲುಗಳನ್ನು ತ್ರಾಸಮಾಡಿ ರಚಿಸಿದರೆ ಕವನಗಳ ಅರ್ಥವೆ ಕೆಡುತ್ತವೆ. ಹೀಗೆ ಕವನ ಒಂದು ರೂಪ ತಾಳಬೇಕೆಂದರೆ ಅದಕ್ಕೊಂದು ಎಲ್ಲೆಯುಂಟು, ನಿಯಮ ಉಂಟು, ಅದರದ್ದೆ ಆದ ಗತ್ತು, ತಾಕತ್ತು ಕೂಡ ಉಂಟು.
ಇವೆಲ್ಲವನ್ನು ಮನದೊಳಗಿಟ್ಟುಕೊಂಡು ಕವಯತ್ರಿ ಗೀತಾ ಮಕ್ಕಿಮನೆಯವರು ತಮ್ಮ ‘ಭಾವ ಬಿಂಬ’ ಎಂಬ ಕವನಸಂಕಲನದೊಳಗೆ ತುಂಬಾ ಸೊಗಸಾದ ಹಾಗೂ ಅರ್ಥಪೂರ್ಣ ಕವನಗಳ ಗುಚ್ಛವನ್ನು ಬೆಳಗಿದ್ದಾರೆ. ಆ ಬೆಳಕೆಂಬ ಕವನಗಳ ದೀವಿಗೆಯ ಸತ್ವಯುತ ಭಾವವನ್ನು ನಾ ಹರಿಯ ಹೊರಟಾಗ..!
ಕವಯತ್ರಿ ಗೀತಾ ಮಕ್ಕಿಮನೆಯವರ ಕವನಸಂಕಲನದೊಳಗೆ ಕಣ್ಣಾಡಿಸಿದಾಗ ಸುಮಾರು 63 ಕವನಗಳು ಕಂಡವು. ಒಂದೊಂದು; ಒಂದೊಂದು ರೀತಿಯ ವಿಷಯಾಂಶಗಳನ್ನು ಹೊತ್ತಿರುವ ಕವನಗಳಾಗಿದ್ದವು. ಸ್ಪಷ್ಟತೆ ,ಸ್ಫುಟತೆ ಎದ್ದು ಕಾಣುತ್ತಿದ್ದವು. ಹಾಗೆ ಎಲ್ಲಾ ಕವನಗಳು ಚೊಕ್ಕವಾಗಿ, ಅರ್ಥಪೂರ್ಣವಾಗಿ, ಹೆಚ್ಚು ಕಡಿಮೆ ನಾಲ್ಕು, ನಾಲ್ಕು ಚರಣಗಳನ್ನೊಳಗೊಂಡ ಬೃಹತ್ ಅರ್ಥವುಳ್ಳ ಆಕರ್ಷಣೀಯ ಪದ್ಯಗಳಾಗಿದ್ದವು.‘ಕವಿ ಬರೆದಾನು’ ಎಂಬ ಕವನದಿಂದ ಪ್ರಾರಂಭವಾಗಿ ‘ನೋವಿನ ಹಾಡು’ ಕವನ ಕೊನೆಕೊಂಡಿದ್ದು ಪ್ರತಿ ಕವನದೊಳಗೂ ವಿಭಿನ್ನ, ವಿಶಿಷ್ಟ ಅರ್ಥಗಳನ್ನು ಹಾಗು ಅದ್ಭುತ ಪದಸಂಪತ್ತನ್ನು ನೋಡಬಹುದಾಗಿದೆ.ಕವಿಯ ಬರೆಹದ ಗತ್ತು ಗಮ್ಮತ್ತಿನ ಶ್ರೇಣಿಯನ್ಹೊತ್ತು ಪಯಣವೆಂಬ ಸಾಲುಗಳೊಳಗೆ ಸುಂದರವಾದ ಬೆಸುಗೆಯನ್ನೇರ್ಪಡಿಸಿ; ಸಂಯೋಜಿಸುತ ಗುರಿ ಮುಟ್ಟುವ ದಾರಿಯೊಳಗೆ ಜಗದ ಸಂತೆಯ ಕಂಡು ಕವಿಮನದೊಳಗಾದ ಫಜೀತಿಯ ಪ್ರಸ್ತುತಿಯನ್ನು ಸುಂದರ ಹಂದರದೊಳಗೆ ಹೆಣೆದು ಭಕ್ತಿ ಪರಾಕಾಷ್ಟೆಯಲ್ಲಿ ಶ್ರೀರಾಮನ ನೆನೆಯುತ ಮುಖವಾಡಗಳನ್ನು ಕಳಚ ಹೊರಟಿರುವ ಕವಯತ್ರಿಯ ಬರವಣಿಗೆಯ ಕೌಶಲ್ಯ ತುಂಬಾ ಸೊಗಸಾಗಿ ಮೂಡಿಬಂದಿದೆ..
ಈ ನಿಟ್ಟಿನಲ್ಲಿ ಕವಯತ್ರಿ ಭಾವ ಬೆಸುಗೆಯೊಂದಿಗೆ ಸ್ಪಂದಿಸುತ ಜಗದ ಸಂತೆಯೊಳಗಿನ ಮುಖವಾಡಗಳ ಕಳಚಿ ದ್ವೇಷ ಅಸೂಯೆಗಳನ್ನೂ ಅಳಿಸಿ ;ಸತ್ಪಥ, ನ್ಯಾಯ, ನೀತಿ, ನಿಷ್ಟೆಗಳನ್ನು ತಮ್ಮ ಕವನದಲ್ಲಿ ಬಿತ್ತಿ ಪ್ರೀತಿ, ವಿಶ್ವಾಸ, ವಾತ್ಸಲ್ಯ, ಮಮತೆ ,ಕರುಣೆಯ ಭಾವವನ್ನು ಹರಿಸುರಿಸುವುದನ್ನ ನೋಡಬಹುದು.
ಹಾಗೆಯೆ ಬಾಳಬಂಡಿಯಲ್ಲಿನ ಏಳು ಬೀಳುಗಳು ಸುಖಹಾದಿಗೆ ಕಸರತ್ತು, ಧೈರ್ಯ ,ಛಲ ತುಂಬುವ ಸಾಲುಗಳು ಮತ್ತು ಇರುವ ಮೂರುದಿನದ ಸಂತೆಯಲ್ಲಿ ಯಾರು ಯಾರಿಗುಂಟೆಂದೆ ಹೇಳುತ್ತ ಎಲ್ಲರೂ ಸಹಬಾಳ್ವೆ, ಸಹಕಾರದಿಂದ ಬಾಳೋಣವೆಂಬ ಸೂತ್ರ ಚಂದವಾಗಿಸಿವೆ.
ಒಗ್ಗಟ್ಟಿನಿಂದ ನಲಿಯುತ ಸಾಗುವ ಆಂಬೋಣವನ್ನು ತಮ್ಮ ಕವನಗಳಲ್ಲಿ ಕವಯತ್ರಿ ತೋರಿರುವ ರೀತಿ ತುಂಬಾ ಇಷ್ಟವಾಯಿತು. ಭೂತಕಾಲದ ಬಗ್ಗೆ ಚಿಂತಿಸದೆ, ನಾಳೆಗಳ ನೆನೆದು, ಇಂದು ಖುಷಿಯಾಗಿ ಬದುಕುವ ಕಲೆಯನ್ನು ಬಿಂಬಿಸಿದ ವಿಧಾನ ಈ ಕವನಗಳಲ್ಲಿ ಮೇಳೈಸಿವೆ.‘ಈ ದುನಿಯಾದಲ್ಲಿ ಎಲ್ಲವೂ ಉಂಟು; ಸೂಕ್ತ ಬಳಕೆಯ ಕಲೆ ನಮ್ಮೊಳಗಿರಬೇಕಷ್ಟೆ.!’ ಎಂಬ ನೀತಿ ಮಾತುಗಳ ಹೂರಣದೊಂದಿಗೆ ಗಮ್ಯದ ಕನಸು ಕಾಣುತ ಜೀವನದಲ್ಲಿ ಶಾಂತಿ ,ಸಹನೆಯನ್ನು ರೂಢಿಸಿಕೊಂಡು ಸಾಗುವ ಸಾಲುಗಳ ಮೇಳ;ಕೋಪವೆಂಬುದು ನಮ್ಮನ್ನೆ ಹಾಳು ಮಾಡುವ ದುಷ್ಟ ಭಾವ. ಅದನ್ನು ಕಿತ್ತೊಗೆದು ನ್ಯಾಯ, ನೀತಿ, ಧರ್ಮವನ್ನು ಪಾಲಿಸಬೇಕೆಂಬ ಮಾತುಗಳು,ಕೆಟ್ಟದ್ದರಿಂದ
ಏನೇನು ಸಾಧಿಸಲಾರಿರಿ ಆ ಒಂದು ಕೃತ್ಯ ನೀನು ಮಾಡುವುದು ಧರ್ಮವೇ.? ಎಂಬ ಕೆಚ್ಚದೆಯ ನುಡಿಗಳ ಗತ್ತು ಎಂಥವರನ್ನು ಕುಗ್ಗಿಸುವುದಂತು ಸತ್ಯ. ಹೀಗೆ ಪ್ರತಿಯೊಂದು ಕವನಗಳು ಕೂಡ ತಮ್ಮದೆ ಆದ ಗತ್ತನ್ನು ಹಿಡಿದಿಟ್ಟಿಕೊಂಡಿರುವುದನ್ನು ನೋಡಬಹುದಾಗಿದೆ.
“ಸಂಸಾರದಲ್ಲಿ ಸರಿಗಮ”…….
ಹೆಂಡತಿ ಗುಲಾಮಳಲ್ಲ
ಗಂಡ ಕೂಲಿಕಾರನಲ್ಲ
ಅರಿತು ಬಾಳಿದರೆ ಸಮರಸ
ಮರೆತ ರಾಗ ಅಲ್ಲಿ ಅಪಸ್ವರ…..
ಕವಯತ್ರಿಯವರು ಸಂಸಾರದಲ್ಲಿ ಸರಿಗಮ ಎಂಬೀ ಕಾವ್ಯದಲ್ಲಿ ಗಂಡ ಹೆಂಡತಿ ಹೇಗೆ ಹೊಂದಿಕೊಂಡು ಹೋಗಬೇಕು ಅವರಲ್ಲಿ ಪ್ರೀತಿ ವಿಶ್ವಾಸವಿರದಿದ್ದರೆ ಏನಾಗುತ್ತದೆ ಎಂಬುದಕ್ಕೆ ಅವರ ಈ ಕವನ ಚೆನ್ನಾಗಿ ಮೂಡಿಬಂದಿದೆ.
“ಅಮ್ಮ”
ಹೊತ್ತು ಹೆತ್ತು ಸಲಹುವ ಅಮ್ಮ
ಪಡುವಳು ಅನುದಿನ ಕಷ್ಟ
ತುತ್ತನ್ನಿಟ್ಟು ಬದುಕಲು ಕಲಿಸುವ
ಅವಳೇ ಜಗದಲಿ ಶ್ರೇಷ್ಟ..
ನವಮಾಸ ಗರ್ಭದಿ ಹೊತ್ತು ಜೀವನ್ಮರಣದ ನೋವುಂಡು ಹೆತ್ತು ಸಲಹುವಳು ಅಮ್ಮ.ಹೊತ್ತು ಹೊತ್ತಿಗೂ ತನ್ನ ಎದೆಹಾಲ ಉಣಿಸುವಳು.
ಅಮೃತವೆಂಬ ಪ್ರೀತಿ-ವಾತ್ಸಲ್ಯ, ಮಮತೆ, ಕರುಣೆ, ಅನುರಾಗವನ್ನು ತೋರಿ ಒಲವಿನಿಂದ ಮುತ್ತಿಟ್ಟು ಸಾಕುವಳು.ಹಾಗೆಯೆ ಜೀವನದುದ್ದಕ್ಕೂ ಮಕ್ಕಳಿಗೆ ಬದುಕಿನ ಪಾಠವನ್ನು ಕಲಿಸುವವಳೇ ಜಗದೊಳಗೆ ಶ್ರೇಷ್ಟ ಅವಳೇ ಅಮ್ಮನೆಂದು ಅಮ್ಮನ ಗುಣಗಾನವನ್ನು ಈ ಪದ್ಯದೊಳಗೆ ಬಲು ಚನ್ನಾಗಿ ಮೂಡಿಸಿರುವುದನ್ನು ನೋಡಬಹುದಾಗಿದೆ.
ಹೀಗೆ ಕವಯತ್ರಿ ತಮ್ಮೆಲ್ಲ ಕವನಗಳಲ್ಲೂ ವಿಭಿನ್ನ ರೀತಿಯ ವಿಷಯಯಾಂಶಗಳೊಂದಿಗೆ ಕವನ ಸಾರವನ್ನು ಉಣಬಡಿಸಿರುವುದು ಖುಷಿಯಾಗುತ್ತದೆ. ಹಾಗೆಯೇ ಈ ಒಂದು ಕವನ ಸಂಕಲನಕ್ಕೆ ತುಂಬಾ ಸೊಗಸಾಗಿ ಮುನ್ನುಡಿಯನ್ನು ಲಕ್ಷ್ಮೀನಾರಾಯಣ ಆಡೇಖಂಡಿಯವರು ಬರೆದವರು ಮತ್ತು ಬೆನ್ನುಡಿಯನ್ನು ಗೋಪಾಲ್ ಯಡಗೆರೆಯವರು ಬರೆದಿರುವರು.ಕವಯತ್ರಿರವರ ಬರೆಹದೊಳಗಿನ ವಿಷಯವಸ್ತು, ಪದಸಂಪತ್ತು ನನಗಂತು ತುಂಬಾ ಇಷ್ಟವಾಯಿತು ,ಇವರ ಕವನಗಳಲ್ಲಿ ಒಳಾರ್ಥ ಅರ್ಥಮಾಡಿಕೊಂಡು ಓದಿದಾಗ ಮನಸ್ಸಿಗೆ ಉಲ್ಲಾಸ ಉತ್ಸಾವನ್ನುಂಟು ಮಾಡುವುದಂತು ಸತ್ಯ.ಇವರ ಜಾಣ್ಮೆ ಸೃಜನಶೀಲತೆ ಈ ಕೃತಿಯಲ್ಲಿ ತುಂಬ ಸುಂದರವಾಗಿ ಮೂಡಿ ಬಂದಿದೆ. ಇವರ ಕವನ ರಚನಾ ಕೌಶಲ್ಯ ಮತ್ತಷ್ಟು ಹೆಚ್ಚಲಿ. ಸಾಹಿತ್ಯ ಪ್ರಿಯರು ಈ ಸಂಕಲನವನ್ನು ಪ್ರೀತಿಯಿಂದ ಓದುತ್ತಾರೆಂಬ ಭರವಸೆಯಲ್ಲಿ ಶುಭಹಾರೈಸುವೆ…
ಧನ್ಯವಾದಗಳೊಂದಿಗೆ…..
ಅಭಿಜ್ಞಾ ಪಿ.ಎಮ್.ಗೌಡ
ಶಿಕ್ಷಕಿ ಮತ್ತು ಬರೆಹಗಾರ್ತಿ
ಮಂಡ್ಯ
Sri Shivaganga Yoga Centre ಶಿವಮೊಗ್ಗದಲ್ಲಿ ಜನವರಿ 8 ರಿಂದ 22 ವರೆಗೆ ಉಚಿತ ಪ್ರಾಣಾಯಾಮ ಯೋಗಾಸನ & ಧ್ಯಾನ ಶಿಬಿರ
Sri Shivaganga Yoga Centre ಶ್ರೀ ಶಿವಗಂಗಾ ಯೋಗ ಕೇಂದ್ರ ಕಲ್ಲಹಳ್ಳಿ ಶಿವಮೊಗ್ಗ ಇದರ ಆಶ್ರಯದಲ್ಲಿ 15 ದಿನಗಳ ಕಾಲ ಉಚಿತ ಯೋಗಾಸನ. ಪ್ರಾಣಾಯಾಮ ಹಾಗೂ ಧ್ಯಾನ ಶಿಬಿರವನ್ನು ಶಿವಮೊಗ್ಗದ ಗುಂಡಪ್ಪ ಶೆಡ್ ಮಲ್ಲೇಶ್ವರ ನಗರದ ಪಾರ್ಕಿನ ಯೋಗಭವನದಲ್ಲಿ ದಿನಾಂಕ 8.01.2025ನೇ ಬುಧವಾರದಿಂದ 22 -1- 2025 ರವರೆಗೆ. ನಡೆಯಲಿದೆ. ಯೋಗ ಶಿಬಿರದಲ್ಲಿ ಮನಸ್ಸಿನಿಂದ ಶರೀರಕ್ಕೆ ಬರುವ ವ್ಯಾದಿಗಳು ಅಸ್ತಮಾ ರಕ್ತದೊತ್ತಡ ಹೃದಯ ಸಂಬಂಧಿ ಕಾಯಿಲೆಗಳು. ಸಕ್ಕರೆ ಕಾಯಿಲೆ.ಬೆನ್ನು ಕುತ್ತಿಗೆ ಸೊಂಟ ನೋವು.
ಮೈಗ್ರೇನ್ ತಲೆನೋವು. ಜೊತೆಗೆ ಮಾನಸಿಕ ಒತ್ತಡ. ಉದ್ವೇಗ.ಖಿನ್ನತೆ. ಮುಂತಾದ ತೊಂದರೆಗಳಿಗೆ ಕಾರಣ ಮನಸ್ಥಿತಿ ಈ ಮನಸ್ಥಿತಿಯನ್ನು ಸಮಾತೋಲನಕ್ಕೆ ತರುವ ರಾಮಬಾಣವೆ ಯೋಗ. ಈ ಶಿಬಿರವನ್ನು ಶಿವಗಂಗಾ ಯೋಗ ಕೇಂದ್ರದ ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಸಿವಿ ರುದ್ರಾರಾಧ್ಯ ರವರು ನಡೆಸಿಕೊಡಲಿದ್ದಾರೆ. Sri Shivaganga Yoga Centre ಶಿಬಿರದ ಆಯೋಜಕರು ಶ್ರೀ ಕೆಇ ಕಾಂತೇಶ್ ಟ್ರಸ್ಟಿಗಳು ಶ್ರೀ ಶಿವಗಂಗಾ ಯೋಗ ಕೇಂದ್ರ ಶಿವಮೊಗ್ಗ. ಈ 15 ದಿನಗಳ ಶಿಬಿರವನ್ನು ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀಯುತ ಕೆಎಸ್ ಈಶ್ವರಪ್ಪನವರು ಉದ್ಘಾಟಿಸಲಿದ್ದಾರೆ. ಶಿಬಿರವು ಪ್ರತಿದಿನ ಬೆಳಿಗ್ಗೆ 6ರಿಂದ 7.ಗಂಟೆಯವರೆಗೆ ನಡೆಯಲಿದೆ ಈ ಶಿಬಿರದ ಪ್ರಯೋಜನವನ್ನು ಸ್ಥಳೀಯರು ಸಾರ್ವಜನಿಕರು. ಹಾಗೂ ಬಡಾವಣೆಯ ನಿವಾಸಿಗಳು
ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ಯೋಗ ಕೇಂದ್ರದ ಶಿಬಿರಾರ್ಥಿ ಜಿ ವಿಜಯಕುಮಾರ್ ತಿಳಿಸಿದ್ದಾರೆ.
JCI Shivamogga ಶಿವಮೊಗ್ಗ ಜೆಸಿಐ ಚಿರಂತನ ಘಟಕಕ್ಕೆ ನೂತನ ಪದಾಧಿಕಾರಗಳ ಪದಗ್ರಹಣ
JCI Shivamogga ಶಿವಮೊಗ್ಗ ನಗರದ ಶ್ರೀ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಜೆಸಿಐ ಶಿವಮೊಗ್ಗ ಚಿರಂತನ ಘಟಕದ 4ನೇ ಪದ ಗ್ರಹಣ ಸಮಾರಂಭದಲ್ಲಿ 2025ರ ಅಧ್ಯಕ್ಷರಾಗಿ ರುದ್ರೇಶ್ ಸಿ ಕೋರಿ ಹಾಗೂ ಕಾರ್ಯದರ್ಶಿಯಾಗಿ ವೈಷ್ಣವಿ ಚಂದನ್ ಪ್ರಮಾಣವಚನ ಸ್ವೀಕರಿಸಿದರು.
ಚಿರಂತನ ಘಟಕದ ಮಹಿಳಾ ವಿಭಾಗದ ಅಧ್ಯಕ್ಷರಾಗಿ ತ್ರಿವೇಣಿ ಹಾಗೂ ಜೂನಿಯರ್ ಜೆಸಿಯಾಗಿ ವಿಲಾಸ್ ಅಂದ್ರಾದೆ, ಘಟಕದ ಉಪಾಧ್ಯಕ್ಷರಾಗಿ ಡಾ. ವಾಸು ಎಸ್, ಚಂದನ್ ಎನ್ ಹೊಳ್ಳ, ಮಂಜುನಾಥ್ ಹೆಚ್ ಎಂ, ಸೌಮ್ಯ ಗುರುರಾಜ್, ಸುರೇಶ್ ಜಿ, ಮಮತಾ ಕೆ ಮತ್ತು ನಿರ್ದೇಶಕರಾಗಿ ಜ್ಯೋತಿ ಉಮೇಶ್, ಉಮಾಪತಿ, ನಿಶಾಂತ್, ಅಶೋಕ್ ಎಸ್ ಆರ್, ಹರ್ಷ ಕರ್ಣೆ, ಸಹ ಕಾರ್ಯದರ್ಶಿ ಆಗಿ ಪೃಥ್ವಿ, ನಿರ್ದೇಶಕರಾಗಿ ಡಾ. ಯತೀಶ್ ಹಾಗೂ ಖಜಾಂಚಿಯಾಗಿ ಶೃತಿ ರುದ್ರೇಶ್ ಆಯ್ಕೆಯಾಗಿದ್ದಾರೆ.
JCI Shivamogga ಸಮಾರಂಭದ ಅಧ್ಯಕ್ಷತೆ ವಹಿಸಿದ್ದ 2024ರ ಅಧ್ಯಕ್ಷ ಡಾ. ನಾಗರಾಜ್ ಎಸ್ ಅಂಗಡಿ ಮಾತನಾಡಿ, ಜೆಸಿಐ ಜಗತ್ತಿನಾದ್ಯಂತ 113 ದೇಶದಲ್ಲಿ ಇದ್ದು, ಇದು ನಾನ್ ಬೆನಿಫಿಟೆಡ್ ಆರ್ಗನೈಜೇಷನ್ ಆಗಿದೆ. ಭಾರತ ಅತ್ಯಂತ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಿದೆ. ವ್ಯಕ್ತಿತ್ವ ವಿಕಸನಕ್ಕೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದರಲ್ಲಿ ಜೆಸಿಐ ಬಹಳ ಸಹಕಾರಿಯಾಗಿ ನಿಲ್ಲುತ್ತಿದೆ ಎಂದು ಎಂದು ತಿಳಿಸಿದರು.
ಜೆಸಿಐ ವಲಯ್ಯಾಧ್ಯಕ್ಷ, ಸೆಲೇಟರ್ ಗೌರೀಶ್ ಭಾರ್ಗವ್, ಶಾಸಕ ಬಿ.ಕೆ.ಸಂಗಮೇಶ್ವರ್, ಜಿ.ಎನ್.ಸುಧೀರ್, ಬಿ.ಎಸ್.ಗಣೇಶ್, ವಲಯ ಉಪಾಧ್ಯಕ್ಷ ಪ್ರಮೋದ್ ಶಾಸ್ತ್ರಿ ಭಾಗವಹಿಸಿದ್ದರು.
Ghanbasava Amareshwar Swamiji ಪೋಷಕರೇ ಮೊಬೈಲ್ ಗೀಳಿನಿಂದ ಹೊರಬಂದರೆ ಮಕ್ಕಳು ಅನುಕರಿಸುವುದಿಲ್ಲ- ಶ್ರೀಘನ ಬಸವ ಅಮರೇಶ್ವರಶ್ರೀ
Ghanbasava Amareshwar Swamiji ಬಾಲ್ಯದಲ್ಲಿ ಮಕ್ಕಳು ಪೋಷಕರನ್ನು ಅನುಸರಿಸುತ್ತವೆ. ಈ ನಿಟ್ಟಿನಲ್ಲಿ ಪೋಷಕರಾದವರು ಮೊಬೈಲ್ ಗೀಳಿಗೆ ಸಿಲುಕದೇ ಪುಸ್ತಕಗಳ ಓದಿನ ಕಡೆ ಗಮನ ಹರಿಸಬೇಕು ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.
ಸೊರಬ ಪಟ್ಟಣದ ಚಾಮರಾಜ ಪೇಟೆಯ ಕಾನುಕೇರಿ ಮಠದ ಆವರಣದಲ್ಲಿ ಸಮರ್ಪಣ ಎಜುಕೇಷನಲ್ ಟ್ರಸ್ಟ್ನ ಸ್ಮಾರ್ಟ್ ಕಿಡ್ಸ್ ಪ್ರೀ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡುವ ಹೊಣೆ ಪೋಷಕರ ಮೇಲಿದೆ. ಮಕ್ಕಳು ಪ್ರೌಢಾವಸ್ಥೆಗೆ ಬರುವ ತನಕ ಅವರ ಮೇಲೆ ನಿಗಾ ವಹಿಸಬೇಕು. ಮಕ್ಕಳ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಪೋಷಕರು ಹೊಂದಿರುತ್ತಾರೆ. ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುವುದು ಸಲ್ಲದು. ಶಿಕ್ಷಣಕ್ಕೆ ಪೂರಕವಾದ ವಾತಾವರಣ ಲಭಿಸಿದಾಗ ಸುಶಿಕ್ಷಿತರಾಗಲು ಸಾಧ್ಯವಿದೆ. ಜೊತೆಗೆ ನಾವು ವಾಸಿಸುವ ಪರಿಸರವೂ ಸಹ ಮಕ್ಕಳ ಮೇಲೆ ಪರಿಣಾಮ ಭೀರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮರ್ಪಣ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಕೆ.ಪಿ. ರಾಜೇಶ್ ಮಾತನಾಡಿ, ಹಿಂದುಳಿದ ಪ್ರದೇಶದ ಮಕ್ಕಳಿಗೂ ಸಹ ನಗರ ಪ್ರದೇಶದಂತೆ ಉತ್ತಮ ಶಿಕ್ಷಣ ದೊರಕಿಸಿಕೊಡಬೇಕು ಎನ್ನುವ ಸದುದ್ದೇಶದಿಂದ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಕಳೆದ ಎಂಟು ವರ್ಷಗಳಿಂದ ನುರಿತ ಶಿಕ್ಷಕ ವೃಂದವನ್ನು ಹೊಂದಿದ್ದು, ಬಾಲ್ಯಾವ್ಯಸ್ಥೆಯಲ್ಲಿಯೇ ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತರಾಗಿಸದೇ, ವ್ಯವಹಾರಿಕ ಜ್ಞಾನ ಮತ್ತು ಸಂಸ್ಕಾರವನ್ನು ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಪೋಷಕರು ಸಹ ಉತ್ತಮವಾದ ಸಹಕಾರ ನೀಡುತ್ತಿದ್ದಾರೆ ಎಂದರು.
Ghanbasava Amareshwar Swamiji ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪುರಸಭೆ ಸದಸ್ಯ ಮಧುರಾಯ್ ಜಿ. ಶೇಟ್, ಶ್ರೀ ಯಲ್ಲಮ್ಮ ಶ್ರೀ ಪಾರ್ವತಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್. ಚಂದ್ರಶೇಖರ ನಿಜಗುಣ, ಹವ್ಯಾಸಿ ಬರಹಗಾರ್ತಿ ಹಾಗೂ ಶಿಕ್ಷಕಿ ಶ್ರೀಮತಿ ಜೋಶಿ, ಸಂಸ್ಥೆಯ ಕಾರ್ಯದರ್ಶಿ ಬಿ.ಎಂ. ಮಮತಾ ರಾಜೇಶ್, ಶಿಕ್ಷಕ ವೃಂದ ಮತ್ತು ಪೋಷಕರು ಮತ್ತಿತರರಿದ್ದರು. ದಾನೇಶ್ವರಿ ನಿರ್ವಹಿಸಿದರು.
ಫೋಟೋ
೦೬ ಸೊರಬ ೦೧ಎ: ಸೊರಬ ಪಟ್ಟಣದ ಕಾನುಕೇರಿ ಮಠದ ಆವರಣದಲ್ಲಿ ಸಮರ್ಪಣ ಎಜುಕೇಷನಲ್ ಟ್ರಸ್ಟ್ನ ಸ್ಮಾರ್ಟ್ ಕಿಡ್ಸ್ ಪ್ರೀ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಅವರನ್ನು ಗೌರವಿಸಲಾಯಿತು.
೦೬ ಸೊರಬ ೦೧ಬಿ: ಸೊರಬ ಪಟ್ಟಣದ ಕಾನುಕೇರಿ ಮಠದ ಆವರಣದಲ್ಲಿ ಸಮರ್ಪಣ ಎಜುಕೇಷನಲ್ ಟ್ರಸ್ಟ್ನ ಸ್ಮಾರ್ಟ್ ಕಿಡ್ಸ್ ಪ್ರೀ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
Innovative Kid’s Preschool ಮಕ್ಕಳಿಗೆ ಒತ್ತಡ ಹೇರದೇ ಅವರ ಆಸಕ್ತಿಗಳಿಗೆ ಪ್ರೋತ್ಸಾಹ ನೀಡಿ-ಡಾ.ಕೆ.ಎಲ್.ಶ್ರೀಪತಿ
Innovative Kid’s Preschool ಮಕ್ಕಳಿಗೆ ಒತ್ತಡ ಹಾಕದೇ ಅವರಲ್ಲಿನ ಆಸಕ್ತಿ, ಅಭಿರುಚಿ ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಬೇಕು. ಬಾಲ್ಯದಿಂದಲೇ ಪರಿಸರ ಪ್ರಜ್ಞೆ ಮೂಡಿಸಬೇಕು ಎಂದು ಜೆಎನ್‌ಎನ್‌ಸಿಇ ನಿವೃತ್ತ ಉಪಪ್ರಾಂಶುಪಾಲ ಡಾ. ಎಲ್.ಕೆ.ಶ್ರೀಪತಿ ಹೇಳಿದರು.
ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಇನ್ನೋವೇಟಿವ್ ಕಿಡೋಸ್ ಪ್ರೀಸ್ಕೂಲ್ ವಾರ್ಷಿಕೋತ್ಸವದಲ್ಲಿ ಮಾತನಾಡಿ, ನಟನೆ, ಅಭಿನಯ, ರಂಗ ಚಟುವಟಿಕೆಗಳ ಮೂಲಕ ಪಾಠ ಪ್ರವಚನ ಮಾಡಬೇಕು. ಸ್ವಚ್ಛತೆ, ಶುಭ್ರತೆಗಳ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳ ಕೌಶಲ್ಯವನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ನಿವೃತ್ತ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಎಚ್.ವಿಶಾಲಾಕ್ಷಿ ಮಾತನಾಡಿ, ಪೋಷಕರು ಮನೆಯಲ್ಲಿ ಮಕ್ಕಳೊಂದಿಗೆ ಮಾತೃಭಾಷೆಯಲ್ಲಿ ಮಾತನಾಡಬೇಕು. ಶಿಕ್ಷಣ ಮತ್ತು ವೃತ್ತಿಗೆ ಅವಶ್ಯವಿರುವ ಆಂಗ್ಲ ಭಾಷೆ ಕಲಿಕೆಯು ಮುಖ್ಯ ಎಂದು ಹೇಳಿದರು.
Innovative Kid’s Preschool ಕನ್ನಡ ಭಾಷೆಯ ಸಣ್ಣಪುಟ್ಟ ಕಥೆಗಳನ್ನು ಪೋಷಕರು ಮನೆಯಲ್ಲಿ, ಶಿಕ್ಷಕರು ಶಾಲೆಯಲ್ಲಿ ಹೇಳುತ್ತಿರಬೇಕು. ಇದರಿಂದ ಅವರ ಭಾವ ಪ್ರಪಂಚ ಹಿರಿದಾಗುತ್ತದೆ. ಮೌಲ್ಯಗಳು ಅರ್ಥವಾಗುತ್ತವೆ. ಶ್ರಮ ಸಂಸ್ಕೃತಿ, ಮೌಲ್ಯಗಳು ಇತ್ಯಾದಿಗಳನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಇನ್ನೋವೇಟಿವ್ ಶಾಲೆ ಅತ್ಯಂತ ಕಡಿಮೆ ಸಮಯದಲ್ಲಿ ಪಾಠ ಪ್ರವಚನಗಳ ಜತೆಗೆ ಮೌಲ್ಯಧಾರಿತ ಶಿಕ್ಷಣವನ್ನು ಕೊಡುತ್ತಿದೆ. ಬೊಮ್ಮನಕಟ್ಟೆ ಭಾಗದಲ್ಲಿ ಒಂದು ಅತ್ಯುತ್ತಮವಾದ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಶಿಕ್ಷಣದ ಜತೆಗೆ ಸಾಮಾಜಿಕ ಕಳಕಳಿ ಹೊಂದಿ ಅನೇಕ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಭೂರಿಧಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಬಸವರಾಜ ಎಚ್. ದೇಸಾಯಿ, ಇನ್ನೊವೆಟಿವ್ ಕಿಡ್ಡೋಸ್ ಪ್ರಿ ಸ್ಕೂಲ್ ಪ್ರಾಂಶುಪಾಲರಾದ ರೇಖಾ.ಕೆ., ಶಿಕ್ಷಕರಾದ ಬಿಂದು, ಭಾಗ್ಯಶ್ರೀ, ಸುಮಾ, ಭರತ್ , ಸಂಗೀತ ಇದ್ದರು.
Unlock Raghava Film ಜನವರಿ 7 ಶಿವಮೊಗ್ಗದಲ್ಲಿ “ಅನ್ ಲಾಕ್ ರಾಘವ” ಸಿನಿಮಾ ಟೈಟಲ್ ಬಿಡುಗಡೆ
Unlock Raghava Film ಶಿವಮೊಗ್ಗ ನಗರದ ಭಾರತ್ ಸಿನಿಮಾಸ್‌ನಲ್ಲಿ ಜ. 07ರಂದು ಬೆಳಿಗ್ಗೆ 11:00ಗಂಟೆಗೆ ಅನ್ಲಾಕ್ ರಾಘವ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ ಸಮಾರಂಭ ಆಯೋಜನೆಗೊಂಡಿದೆ.
ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ, ಶಿವಮೊಗ್ಗ ಶಾಸಕ ಎಸ್.ಎನ್ ಚನ್ನಬಸಪ್ಪ, ಸಿನಿಮೊಗೆ – ಶಿವಮೊಗ್ಗ ಚಿತ್ರ ಸಮಾಜದ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ, ಸೂಡ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಕೃಷಿಕರು ಹಾಗೂ ಉದ್ಯಮಿಗಳಾದ ಮದನ್ ಗೌಡ್ರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಯೂರ ಮೋಷನ್ ಪಿಕ್ಚರ್ಸ್ನ ಡಿ. ಮಂಜುನಾಥ ಹಾಗೂ ಗಿರೀಶ್ ಕುಮಾರ್, ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜದ ಸಂಚಾಲಕ ವೈದ್ಯನಾಥ್ ಹೆಚ್. ಯು. (ವೈದ್ಯ), ಚಲನಚಿತ್ರ ನಿರ್ಮಾಪಕ ಕಿಳಂಬಿ ಮೀಡಿಯಾ ಲ್ಯಾಟ್ ಪ್ರವೈಟ್ ಲಿಮಿಟೆಡ್‌ನ ರಾಜೇಶ್ ಕಿಳಂಬಿ, ಕೆಂಪಣ್ಣ ಪ್ರೊಡಕ್ಷನ್‌ನ ಚಂದ್ರು ಕೆ. ಗೌಡ, ಶುಭಂ ಹೋಟೆಲ್‌ನ ಚಂದ್ರಹಾಸ ಶೆಟ್ಟಿ, ಜೆಸಿಐನ ವಲಯ ಅಧ್ಯಕ್ಷ ಸಿ.ಎ. ಗೌರೀಶ್ ಭಾರ್ಗವ್, ಮಹಾರಾಜ ಗೃಹ ವೈಭವದ ಗಣೇಶ್ ಪ್ರಸಾದ್, ನೆಸ್ಟ್ ಹೋಂ ಸ್ಟೇನ ಶ್ರೀನಾಥ್ ಜೋಯಿಸ್, ನಾಗೇಂದ್ರ ಜೋಯಿಸ್, ಭಾರತ್ ಸಿನಿಮಾಸ್‌ನ ಪುರುಷೋತ್ತಮ ಪೂಜಾರಿ, ಸ್ಟೈಲ್ ಡ್ಯಾನ್ಸ್ ಕ್ರೂವ್‌ನ ಶಶಿಕುಮಾರ್, ಶಿವಮೊಗ್ಗ ಸಿನಿಮಾಸ್ ಅಡ್ಡ ಸಂಸ್ಥೆಯ ರಘು ಗುಂಡ್ಲು , ಕುಟ್ಟಿ ಸಿನಿಮಾದ ಎಂ. ಮುರಳಿ ಉಪಸ್ಥಿತರಿರಲಿದ್ದಾರೆ.
Unlock Raghava Film ಚಿತ್ರಕ್ಕೆ ಜೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ವಿಜಯ್ ಪ್ರಕಾಶ್‌ರವರ ಗಾಯನ, ಪ್ರಮೋದ್ ಮರವಂತೆರವರ ಸಾಹಿತ್ಯ, ಮುರಳಿ ನೃತ್ಯ ಸಂಯೋಜನೆ ಇದೆ.
ಸ್ಯಾಂಡಲ್‌ವುಡ್ ಭರವಸೆ ನಾಯಕ ಮಿಲಿಂದ್, ಲವ್ ಮಾಕ್ಟೇಲ್ 2 ಬೆಡಗಿ ರಚೆಲ್ ಡೇವಿಡ್ ನಾಯಕ ನಾಯಕಿಯಾಗಿ ಅಭಿನಯಿಸಿದ್ದು, ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸಿದ್ದಾರೆ.
ಚಲನಚಿತ್ರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
