Adichunchanagiri Mahasansthan Math ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಪರಮ ಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಬೆಳೆದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಕನಸಿನಂತೆ 1998 ರಂದು ನಿರ್ಮಿಸಿದ ಸಮುದಾಯ ಭವನ ಉದ್ಘಾಟನೆ ದಿನದಿಂದ ಆರಂಭಗೊಂಡ ವಿವಾಹ ಮಹೋತ್ಸವಕ್ಕೆ ಇಂದು 26ರ ಸಂಭ್ರಮ. ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯುವ ಈ ಶುಭ ವಿವಾಹ ಅಂದಿನಿಂದ ಇಂದಿನವರೆಗೆ ಸರಿಸುಮಾರು 500 ಕ್ಕಿಂತ ಹೆಚ್ಚು ದಾಂಪತ್ಯಜೀವನಗಳನ್ನು ಕಟ್ಟಿಕೊಟ್ಟಿದೆ.
ಇಂದಿನ ಪ್ರತಿ ವಿವಾಹ ಮಹೋತ್ಸವದ ವಿಶೇಷತೆ ಎಂದರೆ ಮದುವೆಯಾಗುವ ವಧು ವರರಿಗೆ ವಿವಾಹಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಮಠವೇ ನೀಡುತ್ತದೆ.ಹೆಣ್ಣಿಗೆ ತಾಳಿ, ಕಾಲುಂಗುರ, ಬಟ್ಟೆ ನೀಡಿದರೆ. ಗಂಡಿಗೆ ಅಂಗಿ,ಪಂಚೆ, ಕಲ್ಪವೃಕ್ಷ ನೀಡುತ್ತಾರೆ.
ಕಳೆದ 2013 ರಿಂದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ನಡೆಯುತ್ತಿರುವ. ಇಡೀ ವಿವಾಹ ಮಹೋತ್ಸವದ ಸಂಪೂರ್ಣ ಹೊಣೆಗಾರಿಕೆ ಹಾಗೂ ಜವಾಬ್ದಾರಿಯನ್ನು ಹೊತ್ತುಕೊಂಡು ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿಗಳೂ ಆದ ಶಿವಮೊಗ್ಗ ಶಾಖಾಮಠದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಲ್ಲಿಸುತ್ತಿರುವ ಸೇವೆ ಗೌರವಾನ್ವಿತವಾದದ್ದು.
Adichunchanagiri Mahasansthan Math ಆಸಕ್ತ ವಧುವರರು ತಮ್ಮ ಇತ್ತೀಚಿನ ಭಾವಚಿತ್ರ,ಆಧಾರ್ ಕಾರ್ಡ್, ಜಾತಿ ಹಾಗೂ ಜನನ ಪ್ರಮಾಣ ಪತ್ರ,ಗ್ರಾಮ ಪಂಚಾಯಿತಿ ಅಥವಾ ನಗರಸಭೆಯಿಂದ ಪಡೆದ ದೃಢೀಕರಣ ಪತ್ರದೊಂದಿಗೆ ತಾವು ಹಾಗೂ ತಮ್ಮ ಪೋಷಕರೊಂದಿಗೆ ಬಂದು, ದಿನಾಂಕ : 24 /03 /2025 ರೊಳಗೆ ತಮ್ಮ ಹೆಸರನ್ನು ಮೇಲ್ಕಂಡ ವಿಳಾಸದಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಕೋರುತ್ತೇವೆ.
ಆದರ್ಶ ಹಿರಿಯ ದಂಪತಿಗಳಿಗೆ ಸನ್ಮಾನ :
ಪ್ರತಿ ವರ್ಷದಂತೆ ವಿವಾಹವಾಗಿ 50 ವರ್ಷ ತುಂಬಿದ ಹಿರಿಯ ಆದರ್ಶ ದಂಪತಿಗಳಿಗೆ ಸನ್ಮಾನವೂ ಸಹ ಇರುತ್ತದೆ. ಶ್ರೀ ಪ್ರಸನ್ನನಾಥ ಸ್ವಾಮೀಜಿ ನೇತೃತ್ವದಲ್ಲಿ ಇಂತಹ ಉಚಿತ ಸಾಮೂಹಿಕ ವಿವಾಹ ಸಮಾರಂಭಗಳನ್ನು ಎಂತಹುದೇ ಸಂದರ್ಭದಲ್ಲಿ ನಿಲ್ಲಿಸದೇ ಕಳೆದ 25 ವರ್ಷಗಳಿಂದ ನಿರಂತರವಾಗಿ, ವೈಭವಯುತವಾಗಿ ನಡೆಸಿಕೊಂಡು ಬರುತ್ತಿರುವ ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಾಖಾಮಠದ ಪ್ರಯತ್ನ ಶ್ಲಾಘನೀಯ ಹಾಗೂ ಗೌರವಾನ್ವಿತವಾದುದೇ ಹೌದು. ಈ ಬಾರಿಯ 26ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಏಪ್ರಿಲ್ 11ರ ಶುಕ್ರವಾರ ಬೆಳಿಗ್ಗೆ 9:30ಕ್ಕೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀ ಕಾಲಭೈರವೇಶ್ವರ ದೇವಾಲಯದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ ಎಂದು ಮಠದ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, 08182-257958, 254141, 9742885627, 9844201506 ನಂಬರಿಗೆ ಸಂಪರ್ಕಿಸಿ.
Adichunchanagiri Mahasansthan Math ಆದಿಚುಂಚನಗಿರಿ ಶಾಖಾಮಠದ ಆಶ್ರಯದಲ್ಲಿಉಚಿತ ಸಾಮೂಹಿಕ ವಿವಾಹ. ಆಸಕ್ತರಿಗೆ ಪೂರ್ವಭಾವಿ ಪ್ರಕಟಣೆ
DC Shivamogga ದಲಿತ ವಿರೋಧಿ ಧೋರಣೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ
DC Shivamogga ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಕಂದಾಯ ಅಧಿಕಾರಿಗಳ ವಿರುದ್ಧ ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿಯ ಅಹೋರಾತ್ರಿ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿದೆ.
ಶಿವಮೊಗ್ಗ ತಾಲ್ಲೂಕು, ಹಸೂಡಿ ಗ್ರಾಮದ ಸರ್ವೆ ನಂ. 134/6 ರಲ್ಲಿ 2 ಎಕರೆ ಜಮೀನನ್ನು ಪಿ.ಟಿ.ಸಿ.ಎಲ್. ಕಾಯ್ದೆ ಅಡಿಯಲ್ಲಿ ಜಮೀನನ್ನು ಮರುಸ್ವಾಧೀನಪಡಿಸಿ ಕೊಡಬೇಕೆಂದು ಈ ಹಿಂದೆ ಮಾನ್ಯ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪಿ.ಟಿ.ಸಿ.ಎಲ್. ಸಿ.ಆರ್. ನಂ. 29/1980-81,, ದಿನಾಂಕ: 11-12-1985 ರಂದು ಆದೇಶವಾಗಿದ್ದು ಹಾಗೂ ಹೈಕೋರ್ಟ್‌ನಲ್ಲಿ ಜಮೀನು ತೆರವುಗೊಳಿಸುವ ನೋಟಿಸ್ ನೀಡಿ ಶೀಘ್ರದಲ್ಲಿ ಜಮೀನನ್ನು ಸ್ವಾಧೀನ ಮರುಸ್ಥಾಪಿಸಬೇಕೆಂದು ಆದೇಶಿಸಿದ್ದು, ಕಂದಾಯ ಅಧಿಕಾರಿಗಳು ಹೈಕೋರ್ಟ್ ಆದೇಶಕ್ಕೂ ಮನ್ನಣೆ ನೀಡದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೈಕೋರ್ಟ್ ಆದೇಶದಂತೆ ಜ.09ರಂದು ಜಮೀನನ್ನು ನಮಗೆ ಜಿ.ಜೆ. ವೆಂಕಟೇಶ್ ಬಿನ್ ಜಗದೀಶ್ ಕೆ ಇವರಿಂದ ಬಿಡಿಸಿಕೊಡಬೇಕೆಂದು ಜಿ.ಪಿ.ಉಮಾದೇವಿ ಅವರು ಕೇಳಿಕೊಂಡಿದ್ದರು ಸಹ ಉಪವಿಬಾಗಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ನಿರ್ಲರ್ಕ್ಷ್ಯ ವಹಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
DC Shivamogga ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ರಾಜ್ಯಾಧ್ಯಕ್ಷ ಮಂಜುನಾಥ್, ಉಪಾದ್ಯಕ್ಷ ಜಗದೀಶ್, ಉಮಾದೇವಿ, ಶಿರಾ,ವೇಣುಗೋಪಾಲ್,ಚಂದ್ರಪ್ಪ,ಕರಿಯಪ್ಪ, ಚನ್ನಕೇಶವ ಬಾಧಿತರು,ರುದ್ರಮ್ಮ ಸೇರಿದಂತೆ ಮತ್ತಿತರರಿದ್ದರು.
Rotary Club Shivamogga ಮಾತೆಯ ಋಣ ತೀರಿಸಲಾಗದ್ದು- ಡಾ.ಕೆ.ಆರ್.ಪವಿತ್ರಾ
Rotary Club Shivamogga ನಾನು ಮನೋವೈಧ್ಯೆಯಾಗುವುದಕ್ಕೂ ಮೊದಲು ನಾನೊಬ್ಬ ಕಲಾವಿದೆ. ವಿವಿಧ ವಿಷಯಾಧಾರಿತವಾದ ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿರುವ ನಾನು ಇಂದು “ಮಾತೃಭೂಮಿ” ಎಂಬ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದೇನೆ. ಆದಿ ಶಂಕರಾಚಾರ್ಯರು ನುಡಿದ “ಕೆಟ್ಟ ಮಕ್ಕಳಿರಬಹುದು ಕೆಟ್ಟ ತಾಯಿ ಇರುವುದಿಲ್ಲ” ಎಂಬ ತತ್ವಾಧಾರಿತವಾದ ದೇಶ ನಮ್ಮದು. ಕುಟುಂಬ ಸಮಾಜದ ಘಟಕ. ಈ ಘಟಕದ ವ್ಯಕ್ತಿಗಳಲ್ಲಿ ಸಂಸ್ಕೃತಿ, ನಡೆ, ನುಡಿಗಳನ್ನು ಅರೆದು ಕುಡಿಸಿ, ವ್ಯಕ್ತಿಗಳು ಕುಟುಂಬದ, ಸಮಾಜದ, ದೇಶದ ಸಮರ್ಥ ವ್ಯಕ್ತಿಗಳನ್ನಾಗಿಸುವವಳು ಮಾತೆಯೇ ಹಾಗಾಗಿ ಮಾತೃ ವಂದನಾ ಈ ದಿನದ ನೃತ್ಯದ ತಿರುಳು ಎಂದರು. ಭಾರತ ದೇಶದ ಹಲವು ಕವಿ ಪುಂಗವರು, ಸಾಹಿತಿಗಳು, ದಾರ್ಶನಿಕರು, ಚಿಂತಕರು, ಸಮಸ್ತ ಕಲಾ ಪ್ರಕಾರದವರು ಎಲ್ಲರೂ ಕೂಡ ಮಾತೆಯ ಬಗ್ಗೆ ತಮ್ಮದೇ ಆದ ಸೃಷ್ಠಿತತ್ವ ದೃಷ್ಠಿತತ್ವ ಮತ್ತು ಸಮರ್ಪಣಾ ತತ್ವದ ನೆಲೆಯಲ್ಲಿ ಹಲವು ವಿಚಾರಗಳನ್ನು ಹರಿಸಿದ್ದಾರೆ ಮಾತೆಯ ಋಣ ತೀರಿಸಲಾಗದ್ದು ಎಂದು ರೋಟರಿ ಕ್ಲಬ್ ಶಿವಮೊಗ್ಗದಲ್ಲಿ ಸೇವಾ ಮಾಸಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಮನೋರೋಗ ತಜ್ಙೆ ಹಾಗೂ ಖ್ಯಾತ ನೃತ್ಯಗಾರ್ತಿಯಾದ ಡಾ: ಪವಿತ್ರಾರವರು ‘ಮಾತೃ ಭೂಮಿ’ ಪರಿಕಲ್ಪನೆಯಲ್ಲಿ ವಿಶೇಷ ಉಪನ್ಯಾಸ ಭರಿತ ನೃತ್ಯ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.
ಮಾತೃ ಭೂಮಿಯೆಂದರೆ ಭಾರತ ಮಾತೆ, ಭಾರತ ಮಾತೆಯ ಪುತ್ರಿ ಕನ್ನಡಮ್ಮ, ಕನ್ನಡಮ್ಮನ ಮಕ್ಕಳು ನಾವೆಲ್ಲರು ಎಂಬ ದಿಸೆಯಲ್ಲಿ ಪು.ತಿ.ನಾ, ಬೇಂದ್ರೆ, ಕುವೆಂಪು, ರೂಪಾ ಹಾಸನ್, ಠಾಗೋರ್ ಮುಂತಾದವರ ಆಯ್ದ ಗೀತೆಗಳಲ್ಲಿ ಇದ್ದಂತಹ ಮಾತೃತ್ವದ ಸೆಲೆಯ ವಿಷಯಗಳೊಂದಿಗೆ ನೃತ್ಯವನ್ನು ಪ್ರಸ್ತುತಪಡಿಸಿ ಆ ಮೂಲಕ ನಮ್ಮ ಜವಾಬ್ದಾರಿ ಮತ್ತು ರಾಷ್ಟçದ ಹಿತ ಕಾಯುವ ಬಗ್ಗೆ ಮನೋಜ್ಙವಾಗಿ ತಿಳಿಸಿದರು.
Rotary Club Shivamogga ವೃತ್ತಿ ಮಾಸಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಶಿವಮೊಗ್ಗದಿಂದ ಡಾ: ಕೃಷ್ಣ ಭಟ್ ಫಿಜಿಶಿಯನ್ ಭದ್ರಾವತಿ, ಶ್ರೀ ಸನಿಲ್ ಕುಮಾರ್ ಭೂಮರೆಡ್ಡಿ ಹೆಚ್ಚುವರಿ ಪೋಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಹಾಗೂ ಶ್ರೀಮತಿ. ಸಂಧ್ಯಾ ಕಾವೇರಿ ಪ್ರಾಂಶುಪಾಲರು ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಶಿವಮೊಗ್ಗ ಇವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ: ಸೂರ್ಯನಾರಾಯಣ ಉಡುಪರು ವಹಿಸಿದ್ದು, ಕಾರ್ಯದರ್ಶಿ ರೊ: ಉಷಾ ಎನ್.ಜಿ. ಕಾರ್ಯಕ್ರಮ ನಿರೂಪಿಸಿದರು.
ಶ್ರೀಮತಿ. ಶ್ರೀರಂಜಿನಿ ದತ್ತಾತ್ರಿ, ಡಾ: ಪಿ. ನಾರಾಯಣ್ ರೊ: ಅನುರಾಧಾ ಶೀರ್ನಾಳಿ, ರೊ: ರಮಾಗೋಪಾಲ್, ರೊ: ಶೈಲಿನ್ ರೊ: ಉಷಾ ಪ್ರಭುರವರು ಡಾ: ಪವಿತ್ರಾರವನ್ನು ಗೌರವಿಸಿದರು.
ರೊ: ಸುಮಲತಾ ಭೂಪಾಳಂ ಪ್ರಾರ್ಥಿಸಿ, ರೊ: ಗೋಪಾಲಕೃಷ್ಣ ಗುಪ್ತ ಸ್ವಾಗತಿಸಿ, ರೊ: ಭಾರ್ಗವಿ ಭಟ್, ರೊ: ವೈ.ವಿ. ಜೋಯ್ಸ್, ರೊ ಕಿಶೋರ್ ಶೀರ್ನಾಳಿ, ರೊ: ಎನ್.ವಿ. ಭಟ್ ರವರು ಸನ್ಮಾನಿತರ ಪರಿಚಯ ಮಾಡಿಕೊಟ್ಟರು.
Congress Shivamogga ರಾಜ್ಯ ಯುವ ಕಾಂಗ್ರೆಸ್ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಶಿವಮೊಗ್ಗದ ಎಂ.ಸೋನಿಯಾ ಆಯ್ಕೆ
Congress Shivamogga ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಚುನಾವಣೆ ಶಿವಮೊಗ್ಗ ಜಿಲ್ಲೆಯಿಂದ ಮೊಟ್ಟಮೊದಲ ಬಾರಿಗೆ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ – ಸೋನಿಯಾ ಎಂ
ಇತ್ತೀಚಿಗೆ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ಆಂತರಿಕ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಏಕೈಕ ಮಹಿಳಾ ಅಭ್ಯರ್ಥಿಯಾಗಿ 15 ಸಾವಿರಕ್ಕೂ ಹೆಚ್ಚು ಮತಗಳಿಂದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೋನಿಯಾ .ಎಂ ಆಯ್ಕೆಯಾಗಿದ್ದಾರೆ
ಯುವ ಕಾಂಗ್ರೆಸ್ ಬೂತ್ ಅಧ್ಯಕ್ಷರಾಗಿ, ವಾರ್ಡ್ ಅಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಗೆ ನಡೆದ ಆಂತರಿಕ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಮುಖಾಂತರ ಮಹಿಳಾ ಕೋಟದಡಿ ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಿಂದ ಏಕೈಕ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
Akashavani Bhadravati ಭದ್ರಾವತಿ ಬಾನುಲಿ ಜನಮಾನಸ ತಲುಪಿ ಜನಪ್ರಿಯವಾಗಿದೆ- ಬಿ.ಗೋಪಿನಾಥ್
Akashavani Bhadravati ಆಕಾಶವಾಣಿ ಕೇಂದ್ರಕ್ಕೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಕಾಶವಾಣಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಆಕಾಶವಾಣಿ ಭದ್ರಾವತಿ ಮತ್ತು ಚಿತ್ರದುರ್ಗ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮತ್ತು ಪದಾಧಿಕಾರಿಗಳು ಸನ್ಮಾನಿಸಿದರು.
ಅರವತ್ತು ವರ್ಷಗಳಿಂದ ಆಕಾಶವಾಣಿ ಭದ್ರಾವತಿಯು ನಡೆಸಿಕೊಡುತ್ತಿರುವ ಅನೇಕ ಉಪಯುಕ್ತ ಕಾರ್ಯಕ್ರಮಗಳಿಂದ ಕೇಳುಗರ ಸಂಖ್ಯೆ ಹೆಚ್ಚಾಗಿದೆ. ಅಪಾರವಾದ ಕೇಳುಗರನ್ನು ಹೊಂದಿರುವ ಆಕಾಶವಾಣಿ, ಗುಣಮಟ್ಟದ ಪ್ರಸಾರ, ತಾಂತ್ರಿಕ ವರ್ಗ, ಅತ್ಯುತ್ತಮವಾದ ನಿರೂಪಕರು, ಸಿಬ್ಬಂದಿ ಸಹಕಾರ ಮತ್ತು ಶ್ರಮದಿಂದ ಅನೇಕ ಕಾರ್ಯಕ್ರಮಗಳು ಜನಮಾನಸ ತಲುಪುವುದರ ಮುಖಾಂತರ ಆಕಾಶವಾಣಿ ಕೇಂದ್ರವು ಜನಪ್ರಿಯವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
Akashavani Bhadravati ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಖಜಾಂಚಿ ಆರ್.ಮನೋಹರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನದ ವಿಶ್ವವಿದ್ಯಾಲಯ ಕುಲಸಚಿವ ಡಾ. ಕೆ.ಸಿ.ಶಶಿಧರ್, ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಸಚಿವ ಡಾ. ಕೆ.ಆರ್.ಮಂಜುನಾಥ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜನರು, ಆಕಾಶವಾಣಿ ಕೇಂದ್ರದ ಅನೇಕ ಸಿಬ್ಬಂದಿ ಭಾಗವಹಿಸಿದ್ದರು.
Department of School Education ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ. ಆದಿಚುಂಚನಗಿರಿ ಪ್ರೌಢಶಾಲೆಗೆ ದ್ವಿತೀಯ ಸ್ಥಾನ
Department of School Education ಜಿಲ್ಲಾಡಳಿತ ಚಿತ್ರದುರ್ಗ ಹಾಗೂ ಶಾಲಾ ಶಿಕ್ಷಣ ಇಲಾಖೆ ಚಿದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 7 ಮತ್ತು 8ರಂದು ಆಯೋಜಿಸಿದ್ದ, ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಹತ್ತನೇ ತರಗತಿಯ ಸಹಿಷ್ಣು ಎನ್., ಒಂಬತ್ತನೇ ತರಗತಿಯ ದೀಕ್ಷಿತ್ ಎಂ. ಎನ್. ಈ ಪ್ರತಿಭಾನ್ವಿತರು ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ, ಮೊದಲ ಸುತ್ತಿನಿಂದ ಅಂತಿಮ ಸುತ್ತಿನವರೆಗೂ ಉತ್ತಮ ಚಾಣಾಕ್ಷತೆ, ಬುದ್ದಿವಂತಿಕೆಯಿಂದ ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದು, ಪ್ರಶಸ್ತಿ ಪತ್ರ ಮತ್ತು ಅತ್ಯಾಕರ್ಷಕ ಟ್ರೋಪಿಯನ್ನು ಸಂಸ್ಥೆಯ ಮಡಿಲಿಗೆ ತಂದುಕೊಟ್ಟು, ಜಿಲ್ಲೆ, ಹಾಗೂ ರಾಜ್ಯಕ್ಕೂ ಕೀರ್ತಿ ತಂದುಕೊಟ್ಟಿರುತ್ತಾರೆ.
ಸಹಿಷ್ಣು ಎನ್. ನಗರದ ಮಂಜುನಾಥ್ ನಾಡಿಗ್ ಹಾಗು ಶಿಲ್ಪಾ ದಂಪತಿಗಳ ಪುತ್ರ. ಹಾಗು ದೀಕ್ಷಿತ್ ಎಂ. ಎನ್.ನಗರದ ನಾಗರಾಜ್ ಮತ್ತು ಪ್ರತಿಮಾ ದಂಪತಿಗಳ ಪುತ್ರ.
Department of School Education ಈ ಪ್ರತಿಭಾನ್ವಿತ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು,ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿಯವರು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ದಿವ್ಯ ಕರಣಮ್ ಹಾಗೂ ಅಧ್ಯಾಪಕ ವೃಂದದವರು, ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.
Akhil Karnataka Cultural Council ಕನ್ನಡನಾಡು ನುಡಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು- ವೈ.ಎಸ್.ವಿ.ದತ್ತ
Akhil Karnataka Cultural Council ಶಿಕ್ಷಕರ ತಂಡ ಕಟ್ಟಿಕೊಂಡು ಕನ್ನಡ ಭಾಷೆ, ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿಯೋಜಿತರಾಗಿರುವುದು ಬಹಳ ಸಂತೋಷ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.
ಶಿವಮೊಗ್ಗ ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ವತಿಯಿಂದ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು ನುಡಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಂಸ್ಥಾಪಕ ರಾಜ್ಯಾಧ್ಯಕ್ಷ ಮನೋಹರ್ ನಾಯಕ್ ಮಾತನಾಡಿ, ಕನ್ನಡ ನಾಡು ನುಡಿಗಾಗಿ ಪರಿಷತ್ ರಚನೆಯಾಗಿದೆ. ಶ್ರೀ ಸಿದ್ದೇಶ್ಚರ ಸ್ವಾಮಿಗಳ ಕೃಪಾಶೀರ್ವಾದಿಂದ ಕನ್ನಡ ನಾಡು ನುಡಿ ಕಟ್ಟುವ, ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವ, ಸಮಾಜಮುಖಿ ಕೆಲಸ ಮಾಡಿ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುವ ಗುರಿ ಪರಿಷತ್ ಮಾಡಲಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷೆ ಶಾಹಿನ್ ಬಾನು ಮಾತನಾಡಿ, ನಾಡು ನುಡಿಗಾಗಿ ಅಳಿಲು ಸೇವೆ ಮಾಡಲು ಜವಾಬ್ದಾರಿ ಪಡೆದಿದ್ದೇನೆ. ನನ್ನ ಕುಟುಂಬದ ಸಹಕಾರವಿದೆ. ನಾನು ಕನ್ನಡ ಮಣ್ಣಿಗೆ ಚಿರಋಣಿ ಎಂದರು.
ಸಾಂಸ್ಕೃತಿಕ ಪರಿಷತ್ ನುಡಿಸಿರಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಮೇರಿ ಡಿಸೋಜಾ ಅವರು ವಿವಿಧ ದೇಶಗಳ ನಾಣ್ಯಗಳು, ನೋಟುಗಳು, ಸ್ಟಾö್ಯಂಪ್‌ಗಳ ಸಂಗ್ರಹಣೆಯನ್ನು ಪ್ರದರ್ಶಿಸಿದರು. ಆಶಾರಾಣಿ ಅವರು ಕನ್ನಡ ನಾಡು ನುಡಿಯನ್ನು ಪ್ರತಿಬಿಂಬಿಸುವ ಸಾಹಿತ್ಯ ಕ್ಯಾಲೆಂಡರ್ ಪ್ರದರ್ಶಿಸಿದರು.
ಹಸನ್ ಸಾಬ್ ಬೆಳ್ಳಿಗನೂಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲೆಗಳಲ್ಲಿ ಮಕ್ಕಳಿಗೆ ಸ್ಪಷ್ಟವಾಗಿ ಕನ್ನಡ ಭಾಷೆ ಓದುವುದು, ಬರೆಯುವುದನ್ನು ಕಲಿಸಬೇಕು. ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ತಿಳಿಸಬೇಕು. ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಮಥುರಾ ನಾಗರಾಜ್, ಡಾ. ಪಂಚಯ್ಯ ಆರ್.ಹಿರೇಮಠ, ಸಾಜಿದ್ ಅಹಮದ್, ನಾಗಭೂಷಣ್, ನಾರಾಯಣ ನಾಯ್ಕ, ಗಿರೀಶ್ ವರ್ಮ, ವಿನ್ನಿ ಮ್ಯಾಥ್ಯೂ, ಶಶಿರೇಖಾ, ಮೇರಿ ಡಿಸೋಜ, ಸತೀಶ್, ಪ್ರಕಾಶ್ ಮರವಂಜಿ, ಬಸವನಗೌಡ, ವಾಗೀಶ್ ಆರಾಧ್ಯ, ಜರಿನಾ, ಪೂರ್ಣಿಮಾ ದಾದಾವಲ್ಲಿ, ಪ್ರಭಾಕರ್, ತ್ರಿವೇಣಿ, ಶಿಕ್ಷಕರ ತಂಡ ಉಪಸ್ಥಿತರಿದ್ದರು. ಜಿಲ್ಲಾ ಪದಾಧಿಕಾರಿಗಳಿಗೆ ಸೇವಾದೀಕ್ಷೆ ನೀಡಲಾಯಿತು. ಶೋಭಾ ಸತೀಶ್ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಸೂರ್ಯ ನಿರೂಪಿಸಿದರು. ಪೂರ್ಣಿಮಾ ಎಲ್ಲರನ್ನು ವಂದಿಸಿದರು.
DC Shivamogga ಜಿಲ್ಲೆಯಲ್ಲಿನ ಕೆರೆಗಳ ವಾಸ್ತವ ಸ್ಥಿತಿಗತಿಗಳ ಬಗ್ಗೆ ಪೂರಕ ಮಾಹಿತಿ ಒದಗಿಸಿ- ಗುರುದತ್ತ ಹೆಗಡೆ
DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ನೀರಾವರಿ ನಿಗಮ, ನಗರ ಯೋಜನೆ ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆಗಳ ವ್ಯಾಪ್ತಿಗೊಳಪಡುವ ಹಾಗೂ ಕೃಷಿ, ಕುಡಿಯುವ ನೀರು ಮತ್ತು ಗ್ರಾಮೀಣ ಕೈಗಾರಿಕೆಗಳ ಮೂಲಗಳಾಗಿರುವ ಕೆರೆಗಳನ್ನು ಗುರುತಿಸಿ, ಅವುಗಳ ವಾಸ್ತವ ಸ್ಥಿತಿಗತಿ, ಒತ್ತುವರಿ, ಒತ್ತುವರಿ ತೆರವು ಮಾಡಿದ ಕೆರೆಗಳು, ಆಕಾರ, ಚೆಕ್ಕುಬಂದಿ, ಸರ್ವೇ ನಂಬರ್, ಪ್ರದೇಶದ ವಿಸ್ತಾರ ಮತ್ತಿತರ ಪೂರಕ ಹಾಗೂ ನಿಖರವಾದ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ಕೂಡಲೇ ಒದಗಿಸುವಂತೆ ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಕೆರೆಗಳ ನಿರ್ವಹಣೆ, ರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂಬಂಧ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ವಿಸ್ತೃತ ಮಾಹಿತಿಯನ್ನು ನೀಡುವಂತೆ ಕೋರಿದ್ದು, ಇಲಾಖಾಧಿಕಾರಿಗಳು ಕೂಡಲೇ ಮಾಹಿತಿಯನ್ನು ಒದಗಿಸುವಂತೆ ಅವರು ಸೂಚಿಸಿದರು.
ಕ್ಷೀಣಿಸುತ್ತಿರುವ ಅಂತರ್ಜಲವನ್ನು ಮರುಪೂರಣಗೊಳಿಸುವುದು, ಪರಿಸರಾತ್ಮಕ ಪ್ರಭಾವಗಳ ನಿರ್ಧರಣಾ ಅಧ್ಯಯನ ಸೇರಿದಂತೆ ಅವುಗಳ ವ್ಯವಸ್ಥಿತ ನಿರ್ವಹಣೆ ದೃಷ್ಟಿಯಿಂದ ಸಹಕಾರಿಯಾಗಲಿರುವ ಈ ಮಹತ್ವದ ಕಾರ್ಯಕ್ಕೆ ಸಂಬಂಧಿತ ಇಲಾಖಾಧಿಕಾರಿಗಳು ಕೆರೆಗಳ ಸಮಗ್ರ ಮಾಹಿತಿಯನ್ನು ನೀಡುವಂತೆ ಅವರು ಸೂಚಿಸಿದರು. ಸ್ಥಳೀಯ ಮತ್ತು ಇತರೆ ಪ್ರಾಧಿಕಾರಿಗಳ ನೆರವಿನೊಂದಿಗೆ ಸಮನ್ವಯತೆ ಸಾಧಿಸಿಕೊಳ್ಳುವ ಮೂಲಕ ಕೆರೆ-ಕಟ್ಟೆಗಳನ್ನು ಸಂರಕ್ಷಿಸುವುದು, ಜೀರ್ಣೋದ್ಧಾರಗೊಳಿಸುವುದು. ಪುನರ್‌ರೂಪಿಸುವುದು ಮತ್ತು ಮೂಲಸ್ಥಿತಿಗೆ ತರುವಲ್ಲಿ ಸಹಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಇರುವ ಭೌಗೋಳಿಕ ಮಾಹಿತಿಯೊಂದಿಗೆ ಕೆರೆಗಳು ಮತ್ತು ಸುತ್ತಮುತ್ತಲ ಪ್ರದೇಶಗಳ ಪರಿಸರಾತ್ಮಕ ಯೋಜನೆ ಮತ್ತು ನಕ್ಷೆಯ ರಚನೆಯಂತೆ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆಯೂ ಅವರು ಸೂಚಿಸಿದರು.
ಕೆರೆಗಳ ಗಡಿ ಗುರುತಿಸುವುದು, ಒತ್ತುವರಿ ತೆರವುಗೊಳಿಸುವುದು, ರಕ್ಷಣೆ ಮತ್ತು ಅಭಿವೃದ್ಧಿ ಮುಂತಾದ ಮಾಹಿತಿ ನೀಡುವ ಅಧಿಕಾರಿಗಳು ಸರಿಯಾದ ನಿಖರವಾದ ಮಾಹಿತಿಯನ್ನು ನೀಡಬೇಕು. ಈಗಾಗಲೇ ಒತ್ತುವರಿಯನ್ನು ಗುರುತಿಸಿರುವ ಕೆರೆಗಳ ಒತ್ತುವರಿಯನ್ನು ತೆರೆವುಗೊಳಿಸಬೇಕು. ಅಗತ್ಯವಿದ್ದಲ್ಲಿ ಪೊಲೀಸ್‌ಇಲಾಖೆಯ ಸಹಕಾರವನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ಕಾಲಮಿತಿಯನ್ನು ನಿಗಧಿಪಡಿಸಿಕೊಳ್ಳುವಂತೆಯೂ ಅವರು ಸೂಚಿಸಿದರು.
ತಹಶೀಲ್ದಾರರು, ನಗರ ಯೋಜನಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯ ಕೆರೆಗಳನ್ನು ಗುರುತಿಸಬೇಕು. ಅವುಗಳ ಸರ್ವೇ ಕಾರ್ಯಕ್ಕೆ ಆದ್ಯತೆಯ ಮೇಲೆ ಕ್ರಮ ವಹಿಸಬೇಕು. ಒತ್ತುವರಿಯನ್ನು ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸಬೇಕು. ಅದಕ್ಕಾಗಿ ಅಧಿಕಾರಿಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
DC Shivamogga ಅದಕ್ಕೂ ಮುನ್ನ ಇಲಾಖೆಗಳಲ್ಲಿರುವ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸ್ಥಳ ಪರಿಶೀಲನೆ ನಡೆಸಬೇಕು. ಕೆರೆಗಳು ಅಥವಾ ಜಲಮೂಲಗಳ ಮೂಲ ಮಾಲಿಕತ್ವ ಯಾರಿಗೆ ಸೇರಿದ್ದಾಗಿದೆ ಎಂಬುದನ್ನು ನೋಡಿಕೊಂಡು ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕೆಂದ ಅವರು, ಸಂಬಂಧಿತ ಇಲಾಖಾಧಿಕಾರಿಗಳು ತಾಲೂಕು ಮಟ್ಟದಲ್ಲಿ ಸಭೆ ನಡೆಸಿ, ಸಮರ್ಪಕವಾದ ಮಾಹಿತಿಯನ್ನು ನೀಡುವಂತೆ ಅವರು ಸೂಚಿಸಿದರು.
ಒತ್ತುವರಿ ತೆರವುಗೊಳಿಸಿದ ಪ್ರದೇಶದಲ್ಲಿ ಪುನಃ ಒತ್ತುವರಿ ಕಾರ್ಯ ನಡೆಸದಂತೆ ನೋಡಿಕೊಳ್ಳಬೇಕಲ್ಲದೇ ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡನೆಡಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ಸೊರಬ, ಶಿಕಾರಿಪುರ ತಾಲೂಕುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕೆರೆಗಳಿದ್ದು, ಅಲ್ಲಿನ ಕೆರೆಗಳ ಮಾಹಿತಿಯನ್ನು ಸಂಗ್ರಹಿಸಿ, ಕೂಡಲೇ ಸಲ್ಲಿಸುವಂತೆ ಅವರು ಸೂಚಿಸಿದರು.
ಅಲ್ಲದೇ ಅರಣ್ಯ ಇಲಾಖೆಯ ವ್ಯಾಪ್ತಿಗೊಳಪಡುವ ಕೆರೆಗಳ ಮಾಹಿತಿಯನ್ನು ಸಂಬಂಧಿಸಿದ ಅರಣ್ಯಾಧಿಕಾರಿಗಳಿಂದಲೇ ಪಡೆದುಕೊಳ್ಳಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್‌ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಸಣ್ಣ ನೀರಾವರಿ, ಸ್ಥಳೀಯ ಸಂಸ್ಥೆಗಳ ಅಭಿಯಂತರರು, ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.
United Nations ಮಹಿಳಾ ಕೇಂದ್ರಿತ ಗ್ಯಾರಂಟಿ ಯೋಜನೆಗಳ ಜಾರಿಗೆ ಫಿಲೆಮನ್ ಯಾಂಗ್ ಮೆಚ್ಚುಗೆ
United Nations ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಕರ್ನಾಟಕ ಸಾಧಿಸಿರುವ ಲಿಂಗ ಸಮಾನತೆಯ ಉಪಕ್ರಮಗಳಿಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಕ್ಯಾಮರೂನ್‌ನ ಫಿಲೆಮನ್ ಯಾಂಗ್ ಮೆಚ್ಚುಗೆ ಸೂಚಿಸಿದ್ದಾರೆ.
ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್ ತಾಜ್ ವೆಸ್ಟೆಂಡ್‌ನಲ್ಲಿ
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸ್ವಸಹಾಯ ಗುಂಪಿನ ಮಹಿಳೆಯರು ರೇಷ್ಮೆ ಗೂಡುಗಳಿಂದ ತಯಾರಿಸಿದ ಪುಷ್ಪಗುಚ್ಛದೊಂದಿಗೆ ಸ್ವಾಗತಿಸಿದರು. ಒಂದು ಜಗತ್ತು ಹಲವು ಸಾಧ್ಯತೆಗಳನ್ನು ಬಿಂಬಿಸುವ ಕರ್ನಾಟಕ ಕುರಿತಾದ ಪುಸ್ತಕವನ್ನು ನೀಡಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಸಾಧನೆಯಲ್ಲಿ ಕರ್ನಾಟಕವು ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿರುವ ಬಗ್ಗೆ ವಿಶ್ವಸಂಸ್ಥೆಯ ಅಧ್ಯಕ್ಷರು ಆಸಕ್ತಿಯಿಂದ ಹೆಚ್ಚು ಮಾಹಿತಿ ಹಾಗೂ ವಿವರಗಳನ್ನು ಬಯಸಿದರು.
ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರ ಕೈಗೆ ನಗದು ಹಣ ನೀಡುವ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ ಶಕ್ತಿ, ಕಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ದರವನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳು , ಹಸಿವು ಮತ್ತು ಅಪೌಷ್ಟಿಕತೆಯನ್ನು ತಡೆಗಟ್ಟಲು ತಲಾವಾರು ಪೋಷಕಾಂಶ ನೀಡಿಕೆ , ಕೌಶಲ್ಯದ ಮೂಲಕ ಉದ್ಯೋಗ ಗಳಿಕೆ, ಅಡುಗೆ ಅನಿಲ ಪೂರೈಕೆ,ಉಚಿತ ವಿದ್ಯುತ್ ಪೂರೈಕೆ ಕುರಿತ ಕಾರ್ಯಕ್ರಮಗಳ ವಿವರಗಳನ್ನು ಮುಖ್ಯ ಕಾರ್ಯದರ್ಶಿಗಳು ನೀಡಿದರು.
ಮಹಿಳೆಯರು ಸ್ವಸಹಾಯ ಗುಂಪುಗಳನ್ನು (SHG) ಸಂಘಟಿಸಲು , ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರೋತ್ಸಾಹ, ವಿಷಕಾರಿ ಮುಕ್ತ ವಾತಾವರಣಕ್ಕಾಗಿ ಸಮಗ್ರ ಮತ್ತು ಸಾವಯವ ಕೃಷಿಗೆ ಪ್ರೋತ್ಸಾಹ ಕ್ರಮಗಳು ಸಮಗ್ರ ಹವಾಮಾನ ಬದಲಾವಣೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
United Nations ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಉತ್ತೇಜಿಸಲು ಮಹಿಳಾ ಪರ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯನ್ನು ವಿಶ್ವಸಂಸ್ಥೆಯ ಅಧ್ಯಕ್ಷರು ಶ್ಲಾಘಿಸಿದರು.ಮುಂಬರುವ ವಿಶ್ವಸಂಸ್ಥೆಯ ಕಾರ್ಯಾಗಾರಗಳಲ್ಲಿ ಕರ್ನಾಟಕದ ಯಶೋಗಾಥೆಗಳನ್ನು ಹಂಚಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು, ಇದರಿಂದ ಇತರ ದೇಶಗಳು ಸಹ ಈ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.
ನವೀಕರಿಸಬಹುದಾದ ಇಂಧನ ಉತ್ಪಾದನೆ ರಾಜ್ಯಕ್ಕೆ ಅಗ್ರಸ್ಥಾನ
ಒಟ್ಟು ಇಂಧನ ಉತ್ಪಾದನೆಯಲ್ಲಿ ಶೇ. 40 ರಷ್ಟು ಪಾಲು ನವೀಕರಿಸಬಹುದಾದ ಮೂಲಗಳಿಂದ ಬರುತ್ತಿರುವುದರಿಂದ ಕರ್ನಾಟಕವು ಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನ ಪಡೆದಿರುವುದಕ್ಕೆ ವಿಶ್ವಸಂಸ್ಥೆಯ ಅಧ್ಯಕ್ಷರು ಸಂತೋಷ ವ್ಯಕ್ತಪಡಿಸಿದರು.
ಮಾಹಿತಿ ತಂತ್ರಜ್ಞಾನ, ತಂತ್ರಾಂಶ ಅಭಿವೃದ್ಧಿ, ಕೃತಕ ಬುದ್ಧಿ ಮತ್ತೆ (AI), ಸಂಶೋಧನೆ ಮತ್ತು ನಾವೀನ್ಯತೆಗಾಗಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಯಲ್ಲಿ ಕರ್ನಾಟಕವು ಸಾಧಿಸಿರುವ ಪ್ರಗತಿಯನ್ನು ವಿಶ್ವಸಂಸ್ಥೆಯ ಮೆಚ್ಚಿದರು. ಇತರ ದೇಶಗಳಿಗೆ ಡಿಜಿಟಲ್ ರೂಪಾಂತರವನ್ನು ಉತ್ತೇಜಿಸುವ ಸಲುವಾಗಿ ಸಹಾಯದ ಅಗತ್ಯವಿದ್ದು, ರಾಜ್ಯದ ಬೆಂಬಲವನ್ನು ಕೋರಿದರು. ರಾಜ್ಯ, ಜಿಲ್ಲೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಸೂಚಕಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ರಚಿಸಿದ ಸುಸ್ಥಿರ ಅಭಿವೃದ್ದಿ ಗುರಿಗಳ (SDG) ಡ್ಯಾಶ್‌ಬೋರ್ಡ್ ವೀಕ್ಷಿಸಿ ಶ್ಲಾಘಿಸಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಜಿ.ಸತ್ಯವತಿ ಮತ್ತಿತರರು ಇದ್ದರು
Aryabhata Abacus ಗಣಿತದ ಕಲಿಕೆ ಕಷ್ಟಕರವೇ ಅಲ್ಲ- ಡಾ.ಎಚ್.ಬಿ.ಮಂಜುನಾಥ್
Aryabhata Abacus ದೇಹದ ಆಂತರಿಕ ಕ್ರಿಯೆಗಳಿಂದ ಮೊದಲ್ಗೊಂಡು ಹೊರಜಗತ್ತಿನ ಎಲ್ಲ ವ್ಯವಹಾರಗಳಲ್ಲೂ ಗಣಿತವು ಹಾಸು ಹೊಕ್ಕಾಗಿದ್ದು ಗಣಿತದ ಕಲಿಕೆ ಕಷ್ಟಕರ ವಿದ್ಯೆ ಅಲ್ಲ ಎಂದು ಹಿರಿಯಪತ್ರಕರ್ತ ಡಾ. ಹೆಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.
ಆರ್ಯಭಟ ಅಬ್ಯಾಕಸ್ ಮತ್ತು ವೇದಿಕ್ ಮ್ಯಾಥ್ಸ್ ನ ನಾಲ್ಕನೇ ಅಂತರ ಕೇಂದ್ರ ಸ್ಪರ್ಧಾ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಸಣ್ಣ ಸಣ್ಣ ಲೆಕ್ಕಗಳಿಗೂ ಕ್ಯಾಲ್ಕುಲೇಟರ್ ಹಾಗೂ ಮೊಬೈಲ್ ಗಳನ್ನು ಬಳಸುತ್ತಾ ಇಂದಿನ ಪೀಳಿಗೆ ಸ್ವಸಾಮರ್ಥ್ಯದ ಗಣಿತವನ್ನು ಮರೆಯುತ್ತಿದ್ದಾರೆ, ಉಪಕರಣಗಳಿಗಿಂತಲೂ ವೇಗವಾಗಿ ಸ್ವತಃ ಗಣಿತ ಮಾಡಬಹುದಾದ ಅಬ್ಯಾಕಸ್ ಹಾಗೂ ವೇದಿಕ್ ಗಣಿತಗಳ ಕಲಿಕೆ ಒಳ್ಳೆಯದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟಿನ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡ್ರು ಅಬಾಕಸ್ ಕಲಿಯುವುದರಿಂದ ಮಕ್ಕಳಲ್ಲಿ ಗಣಿತದ ಬುದ್ಧಿ ಚುರುಕಾಗುತ್ತದೆ, ಸಾಧನೆಗೆ ಇದು ಅನುಕೂಲ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಡಾ ಹರ್ಷ ಬಾಬಾಜಿ ಮಾತನಾಡಿ ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರೊಂದಿಗೆ ಪೋಷಕರ ಪಾತ್ರವೂ ಮಹತ್ತರವಾಗಿದೆ ಎಂದರು. ಆರ್ಯಭಟ ಅಬ್ಯಾಕಸ್ಸಿನ ರಾಜೇಶ್ವರಿ ಚಿದಾನಂದರವರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ನಾಗರತ್ನ ಚಂದ್ರಮೌಳಿಯವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕು.ಸ್ತುತಿ ಪ್ರಾರ್ಥನಾ ಗೀತೆ ಹಾಡಿದರೆ ಮಕ್ಕಳ ಅಬ್ಯಾಕಸ್ ಪ್ರತಿಭಾ ಪ್ರಾತ್ಯಕ್ಷಿಕೆಯನ್ನು ಜಯ ಶ್ರಾವಣಿ ನಿರ್ವಹಿಸಿದರು.
Aryabhata Abacus ನವ್ಯಾ ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ವಂದನೆಗಳನ್ನು ಕು. ಶುದ್ಧಿ ಸಮರ್ಪಿಸಿದರು. ಮಾಗನೂರು ಬಸಪ್ಪ ಪಬ್ಲಿಕ್ ಶಾಲೆಯ ಪ್ರಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು. ವಿಜೇತರಿಗೆ ಬಹುಮಾನಗಳನ್ನೂ ವಿತರಿಸಲಾಯಿತು.
