Thursday, March 5, 2026
Thursday, March 5, 2026
Home Blog Page 355

Ugadi Festival ಯುಗಾದಿ ಕೆಲವು ವಿಚಾರ ತರಂಗಗಳು.. ಲೇ: ಎನ್.ಜಯಭೀಮ ಜೊಯಿಸ್.ಶಿವಮೊಗ್ಗ

0

Ugadi Festival “ ಯುಗಾದಿ “ಹಬ್ಬ ಬಂತೆಂದರೆ ಹೊಸಸಂವತ್ಸರ ಪ್ರಾರಂಭವಾದಂತೆ.ಹೊಸ ಸಂವತ್ಸರದ ಪ್ರಾರಂಭವನ್ನೇ “ಯುಗಾದಿ”ಹಬ್ಬವನ್ನಾಗಿ ಆಚರಿಸುವುದು ಪದ್ಧತಿಯಾಗಿದೆ.ವಸಂತ ಋತು,ಚೈತ್ರಮಾಸ,ಶುಕ್ಲಪಕ್ಷದ ಪಾಡ್ಯ….ಎಲ್ಲವೂ ಮೊದಲಾಗಿರುತ್ತೆ.ಋತುಗಳಲ್ಲಿ ವಸಂತ ಋತು ಮೊದಲನೇ ಋತು,ಮಾಸಗಳಲ್ಲಿ ಚೈತ್ರಮಾಸ ಮೊದಲನೇ ಮಾಸವಾಗಿರುತ್ತೆ.ಪಕ್ಷಗಳಲ್ಲಿ ಶುಕ್ಲಪಕ್ಷ ಮೊದಲನೆಯಪಕ್ಷವಾಗಿದೆ.ಪಾಡ್ಯ(ಪ್ರತಿಪದ)ತಿಥಿಗಳಲ್ಲಿ ಮೊದಲ ತಿಥಿಯಾಗಿದೆ.ಯುಗಾದಿಹಬ್ಬ ಸಂವತ್ಸರದ ಪ್ರಾರಂಭವೂ ಹೌದು ಮತ್ತು ಸಂವತ್ಸರದ ಮೊದಲನೆಯ ಹಬ್ಬವಾಗಿದೆ.
“ಚೈತ್ರ”ಎಂಬ ಪದ ಕೇಳಿದ ಕೂಡಲೇ ಸಮೃದ್ಧ ಹಸಿರು,ಚಿಗುರು,ಕೋಗಿಲೆಯ ಕುಹೂಕುಹೂ ಇಂಪಾದ ಗಾನ ,ಮಾವು, ಬೇವು ಮಲ್ಲಿಗೆಯ ಘಮ ಘಮ…ಅಬ್ಬಾ !ನಿಸರ್ಗ ಸೌಂದರ್ಯದ ಗುಟ್ಟೇನಮ್ಮೆದುರುಮೈದಳೆದುನಿಲ್ಲುತ್ತದೆ.ಮನದಂಗಳದಲ್ಲಿಹೊಸತರಂಗಗಳು ಪಲ್ಲವಿ-ಪಂಕ್ತಿಗಳಾಗಿ ಹಾದು ಹೋಗುತ್ತವೆ.ಯುಗಾದಿ ಹಿಂದೂಗಳಿಗೆ ಹೊಸವರ್ಷದ ಆರಂಭದ ಮೊದಲನೆಯ ದಿನ. ಹೊಸ ವರ್ಷವನ್ನು ಹೊಸ ಸಂವತ್ಸರವೆಂದು ಕರೆಯುತ್ತೇವೆ.
ಮತ್ತು ಹೊಸ ಸಂವತ್ಸರದ ಪ್ರಾರಂಭದ ದಿನ ,ಹೊಸ ಸಂಕಲ್ಪಗಳನ್ನು ಮಾಡಿ ಮುನ್ನಡಿಯಿಡುವ ದಿನವೂ ಹೌದು.ಹಿಂದಿನ ವರ್ಷದ ಸಾಧನೆಯನ್ನು ಅವಲೋಕಿಸಿಈ ಸಂವತ್ಸರದಲ್ಲಿ ನಮ್ಮ ಪಾಲಿಗೆ ಬೇಕಾದ ನೀತಿ-ನಿಯಮಗಳನ್ನು ಹಾಕಿಕೊಳ್ಳುವ ಶುಭಗಳಿಗೆ.ವೇದಮಂತ್ರದಲ್ಲಿವರ್ಷವನ್ನುರಥಕ್ಕೂ ,ಆಯನಗಳನ್ನು(ಉತ್ತರಾಯಣ,ದಕ್ಷಿಣಾಯನ)ಅದರಚಕ್ರಗಳಿಗೂಹೋಲಿಕೆಮಾಡಿದ್ದಾರೆ.ಆದ್ದರಿಂದವರ್ಷವನ್ನುಯುಗಎಂದೂ,ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.
Ugadi Festival ಯುಗಾದಿಯು ಚಾಂದ್ರಮಾನ ಪದ್ಧತಿಯ ಹೊಸ
ವರ್ಷದ ಪ್ರಾರಂಭದ ದಿನ.ಯುಗಾದಿ ಹಬ್ಬಕ್ಕೆ ಮತ್ತು ದೀಪಾವಳಿ ಹಬ್ಬಕ್ಕೆ ಒಂದು ನಾಣ್ಣುಡಿ ಇದೆ..”ಉಂಡದ್ದೇ ಉಗಾದಿ,ಮಿಂದದ್ದೇ ದೀಪಾವಳಿ”ಎಂದು.ಯುಗಾದಿಯಲ್ಲಿ ಊಟದ ವೈವಿಧ್ಯತೆಯೇ ಒಂದು ಸೊಗಸು.
ಗಣೇಶಚತುರ್ಥಿಯಲ್ಲಿಚಂದ್ರದರ್ಶನವನ್ನೇನಾದರೂ ಮಾಡಿದರೆ ಮಿಥ್ಯಾಪವಾದ ಬರುತ್ತದೆ ಎಂಬುದುಪುರಾಣದಕಥೆಗಳಿಂದ ಪ್ರತಿಪಾದ್ಯವಾಗಿದೆ.ಇದು ಗಣಪತಿಯು ಚಂದ್ರನಿಗೆ ಕೊಟ್ಟ ಶಾಪದ ಪರಿಣಾಮದಿಂದ ಆಗಿದೆ.ಯುಗಾದಿ ಹಬ್ಬದ ಬಿದಿಗೆ ಯಂದು ಚಂದ್ರದರ್ಶನ ಮಾಡುವ ಪರಿಪಾಠವುಂಟು.ಚಂದ್ರದರ್ಶನವನ್ನು ಮಾಡಿ ಎಲ್ಲರಿಗೂ ಒಳ್ಳೆಯದನ್ನು ಮಾಡುವಂತೆ ಚಂದ್ರನನ್ನು ಪ್ರಾರ್ಥಿಸುವ ಸಂಪ್ರದಾಯವುಂಟು.
ಕ್ರೋಧಿನಾಮಸಂವತ್ಸರವು ಮುಗಿದು ಹೊಸದಾದ “ವಿಶ್ವಾವಸು”ನಾಮಸಂವತ್ಸರಬರುತ್ತಿದೆ.ಸಂವತ್ಸರದಹೆಸರಿನಲ್ಲಿಇರುವಂತೆಯೇಎಲ್ಲರಮನದಲ್ಲಿಯೂ ವಿಶ್ವಾಸವನ್ನುಹೆಚ್ಚುಮಾಡುತ್ತದೆಎಂಬನಂಬಿಕೆಯಿದೆ
ಯುಗಾದಿ ಹಬ್ಬವನ್ನು ಬೇವುಬೆಲ್ಲದಹಬ್ಬವೆಂತಲೂ ಕರೆಯುತ್ತೇವೆ.ಬೇವು ಬೆಲ್ಲ ಜೀವನದಲ್ಲಿ ಬರುವ ಕಷ್ಟಸುಖಗಳಸಂಕೇತವಾಗಿದೆ.ಯುಗಾದಿಎಂದಾ
ಕ್ಷಣಬಾಲ್ಯದಲ್ಲಿ ನಾವುಸೇವಿಸುತ್ತಿದ್ದಬೇವು-ಬೆಲ್ಲದ ನೆನಪಾಗುತ್ತದೆ.ಆಗನಮ್ಮಹಿರಿಯರು ದೇವರಪೂಜೆ ಮಾಡಿದ ಮೇಲೆ ಬೇವುಬೆಲ್ಲದ ಮಿಶ್ರಣವನ್ನು ಕೊಡುತ್ತಿದ್ದರು. ಬೆಲ್ಲದಸಿಹಿಬೇಕೆನಿಸುತ್ತಿತ್ತು.ಬೇವಿನ ಕಹಿ ನಿಜವಾಗಿಯೂ ಬೇಡವೆನಿಸುತ್ತಿತ್ತು.ಬಾಲ್ಯದಲ್ಲಿ ಬೇವುಬೆಲ್ಲದಸಂಕೇತಏನೆಂಬುದುಗೊತ್ತಿರಲಿಲ್ಲ.ಬೇವು ಬೆಲ್ಲವನ್ನು ಸ್ವೀಕರಿಸುವಸಂಕೇತವೆಂದರೆಜೀವನ
ದಲ್ಲಿ ಬರುವ ಕಷ್ಟಸುಖಗಳನ್ನು ಸಮರಸವಾಗಿ ಕಾಣಬೇಕುಎಂದುಸೂಚಿಸುತ್ತದೆ.ಬದುಕುಬೇವು
ಬೆಲ್ಲದಂತೆಸುಖವೂಇರುತ್ತದೆ,ದು:ಖವೂಇರುತ್ತದೆ.ಸುಖ ಬಂದಾಗ ಹಿಗ್ಗದೆ,ದು:ಖ ಬಂದಾಗ ಕುಗ್ಗದೆ ಬಾಳನ್ನು ನಡೆಸಬೇಕುಎಂಬ ಸಂದೇಶವನ್ನು ಬೇವುಬೆಲ್ಲ ಕೊಡುತ್ತದೆ..ಈ ಭಗವಂತನು ಎಲ್ಲೆಡೆ ಸುಖ,ಶಾಂತಿನೆಮ್ಮದಿಗಳನ್ನುನೆಲೆಸುವಂತೆಮಾಡಲಿ.ನಮ್ಮೊಳಗಿನದುಷ್ಟಶಕ್ತಿಗಳನ್ನುನಿಯಂತ್ರಿಸಿ,ನಾಶಮಾಡಿಜ್ಞಾನದಬೆಳಕನ್ನುಎಲ್ಲರಿಗೂಕರುಣಿಸುವಂತೆಪ್ರಾರ್ಥಿಸೋಣ.
ಕ್ರೋಧಿನಾಮಸಂವತ್ಸರಕೆಶುಭವಿದಾಯಹೇಳೋಣಮತ್ತು ನೂತನ ಸಂವತ್ಸರ ವಿಶ್ವಾವಸು ನಾಮ
ಸಂವತ್ಸರವನ್ನುಸಂತಸದಿಂದಸ್ವಾಗತಿಸೋಣ.
ನೂತನ ಸಂವತ್ಸರ ಎಲ್ಲರಿಗೂ ಸನ್ಮಂಗಳವನ್ನು ತರಲಿ ಎಂದು ಪ್ರಾರ್ಥಿಸೋಣ.


ಎನ್.ಜಯಭೀಮ್ ಜೊಯ್ಸ್


Canara Bank Rural Self Employment Training Institute  ಆಯ್ದ ಸ್ವ ಉದ್ಯೋಗಗಳಿಗೆ ಕೌಶಲ್ಯ ತರಬೇತಿ ಪಡೆಯಲು‌ ಅರ್ಹ ಆಸಕ್ತರಿಂದ ಅರ್ಜಿಗೆ ಆಹ್ವಾನ

0

Canara Bank Rural Self Employment Training Institute  ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರು (ಶಿವಮೊಗ್ಗ ತಾಲ್ಲೂಕು) ಇಲ್ಲಿ ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು ಮತ್ತು 8ನೇ ತರಗತಿ ಉತ್ತೀರ್ಣರಾಗಿರಬೇಕು. ಮತ್ತು ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದು ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು.

ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ತರಬೇತಿಗಳು
01.ಜೇನು ಸಾಕಾಣಿಕೆ 10 ದಿನಗಳು
01/04/2025
ತರಬೇತಿಯು ಪ್ರಾರಂಭವಾಗಲಿದ್ದು ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-577 216 (ಶಿವಮೊಗ್ಗ ತಾಲ್ಲೂಕು)
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9743429595, 9164411580, 8722384541, 8105378735 9449371579, 9481955721

Shivamogga City Corporation ಆಸ್ತಿ ತೆರಿಗೆ ಪಾವತಿಗೆ ಮಹಾನಗರ ಪಾಲಿಕೆಯಿಂದ ಹೆಚ್ಚುವರಿ ಕೌಂಟರ್ ಪ್ರಾರಂಭ

0

Shivamogga City Corporation ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಪಾಲಿಕೆ ಕಚೇರಿಯ ಆವರಣದಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ಪ್ರಾರಂಭ ಮಾಡಲಾಗಿದ್ದು, ಸಾರ್ವಜನಿಕರು ನೇರವಾಗಿ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಅವಕಾಶವಿರುತ್ತದೆ.
ಅಲ್ಲದೇ ಈಗಾಗಲೇ ಜಾರಿಯಲ್ಲಿರುವಂತೆ ಆಸ್ತಿ ತೆರಿಗೆ ಪಾವತಿಯನ್ನು ಮಹಾನಗರಪಾಲಿಕೆಯ ವೆಬ್‌ಸೈಟ್ ವಿಳಾಸ www.shivamoggacitycorp.org ಮುಖಾಂತರ ಆನ್‌ಲೈನ್‌ನಲ್ಲಿ ಹಾಗೂ ಯುಪಿಐ/ನೆಟ್‌ಬ್ಯಾಂಕಿಂಗ್/ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯಡಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿರುತ್ತದೆ. ವಿಶೇಷವಾಗಿ 2025-26 ರ ಖಾತೆದಾರರಿಗೆ ಇಡಿಸಿ (ಪಿಓಎಸ್) ಯಂತ್ರಗಳ ಮೂಲಕ ಸ್ವತಿನ ಆಸ್ತಿ ತೆರಿಗೆಯನ್ನು ಪಾವತಿಸಿದ ರಸೀದಿಯನ್ನು ನೀಡಲಾಗುತ್ತದೆ.
2025-26 ನೇ ಸಾಲಿನ ಆಸ್ತಿ ತೆರಿಗೆ ಪಾವತಿದಾರರು ಏಪ್ರಿಲ್ 2025ರೊಳಗಾಗಿ ಪಾವತಿಸಿದ್ದಲ್ಲಿ ಶೇ. 5% ರ ತೆರಿಗೆ ವಿನಾಯಿತಿಯನ್ನು ನೀಡಲಾಗುವುದು. ಜೂನ್ 2025 ರ ಅಂತ್ಯದವರೆಗೆ ದಂಡವಿಲ್ಲದೆ ಪಾವತಿಸಬಹುದು ಹಾಗೂ ಜುಲೈ 1 ರಿಂದ ಪ್ರತಿ ತಿಂಗಳಿಗೆ ಶೇ. 2 ರಂತೆ ದಂಡ ಪಾವತಿಸ ಬೇಕಾಗಿರುತ್ತದೆ.
ಸಾರ್ವಜನಿಕರು ಏಪ್ರಿಲ್ ತಿಂಗಳಲ್ಲೇ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯುವಂತೆ ಹಾಗೂ ಆಸ್ತಿ ತೆರಿಗೆ ಪಾವತಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಎಂದು ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

CM Siddharamaiah ಬೇವಿನಂಥ ಕಹಿ ಅನುಭವಗಳಿಂದ ಕಲಿತ‌ ಪಾಠವು ಬೆಲ್ಲದಂಥ ಸಿಹಿ ಬದುಕಿಗೆ ಮುನ್ನುಡಿಯಾಗಲಿ- ಸೀಎಂ ಸಿದ್ಧರಾಮಯ್ಯ

0

CM Siddharamaiah ನೋವು – ನಲಿವು, ಸೋಲು – ಗೆಲುವು, ಕಷ್ಟ – ಸುಖಗಳ ಜೀವನ ಸಂದೇಶ ಸಾರುವ ಹಬ್ಬ ಯುಗಾದಿ.
ದುಃಖದ ಕಹಿಬೇವು, ಸಂತಸದ ಸಿಹಿಬೆಲ್ಲ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ,
ಭರವಸೆಯೊಂದಿಗೆ ಮುನ್ನಡೆಯೋಣ, ಬೇವಿನಂತ ಕಹಿ ಅನುಭವಗಳಿಂದ ಕಲಿತ ಪಾಠವು ಬೆಲ್ಲದಂತ ಸಿಹಿ ಬದುಕಿಗೆ ಮುನ್ನುಡಿಯಾಗಲಿ. ಯುಗದ ಆದಿಯು ನಾಡಿನಲ್ಲಿ‌ ಸುಖ, ಶಾಂತಿ ಸಮೃದ್ಧಿಯನ್ನು ತರಲಿ‌ ಎಂದು ಹಾರೈಸುತ್ತೇನೆ.

CM Siddharamaiah ನಾಡಿನ ಸಮಸ್ತರಿಗೂ ಯುಗಾದಿಯ ಶುಭಾಶಯಗಳು‌ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಯುಗಾದಿ ಶುಭಕೋರಿದ್ದಾರೆ.

DC Shivamogga ಸಂಭಾವ್ಯ ಬರ ನಿರ್ವಹಣೆಗೆ ಸಜ್ಜಾಗಿರಿ. ಅಧಿಕಾರಿಗಳಿಗೆ ಡೀಸಿ ಗುರುದತ್ತ ಹೆಗಡೆ ಸೂಚನೆ

0

DC Shivamogga ಕಳೆದ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ರೀತಿಯಲ್ಲಿ ಮಳೆಯಾಗಿರುವ ಕಾರಣದಿಂದಾಗಿ ಇಂದಿಗೂ ಜಿಲ್ಲೆಯ ಕೆರೆ-ಕಟ್ಟೆ-ಕಾಲುವೆಗಳಲ್ಲಿ ಅಲ್ಪ ಪ್ರಮಾಣದ ನೀರು ಉಳಿದುಕೊಂಡಿದ್ದು, ಪ್ರಸಕ್ತ ಬೇಸಿಗೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಒಂದು ಅಂದಾಜಿನ ಪ್ರಕಾರ ಜುಲೈ ಮಾಹೆಯವರೆಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಎದುರಾಗಲಾರದು.

ಆದಾಗ್ಯೂ ಜಿಲ್ಲೆಯ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಬಹುದಾದ ಸಂಭಾವ್ಯ ಬರದ ನಿರ್ವಹಣೆಗೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಬರ ನಿರ್ವಹಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಆಯಾ ತಾಲೂಕಿನ ತಹಶೀಲ್ದಾರರು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರೆ ಸಂಬಂಧಿತ ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ತುರ್ತು ಸಭೆ ಕರೆದು, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ಮತ್ತು ಜಾನುವಾರು ಮೇವಿನ ದಾಸ್ತಾನು ಕುರಿತು ಮಾಹಿತಿ ಪಡೆದುಕೊಳ್ಳಬೇಕಲ್ಲದೇ, ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳಿಗೆ ಸಾಂದರ್ಭಿಕವಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ರೂಪು-ರೇಷೆಗಳನ್ನು ಸಿದ್ಧಪಡಿಸಿಟ್ಟುಕೊಂಡಿರಬೇಕೆಂದವರು ನುಡಿದರು.

DC Shivamogga ನೀರಿನ ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕಾಗಿ ಬೋರ್‌ವೆಲ್‌ಗಳನ್ನು ಕೊರೆಸಲು, ಕೊಳವೆಬಾವಿಗಳನ್ನು ಎರವಲು ಪಡೆಯಲು, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬಹುದಾದ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸುವಂತೆ ಹಾಗೂ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು. ಒಂದು ವೇಳೆ ಈಗಾಗಲೇ ಸಮಸ್ಯೆಯನ್ನು ಗುರುತಿಸಲಾಗಿದ್ದು, ಅದರ ಪರಿಹಾರ ಕಾರ್ಯದ ಭಾಗವಾಗಿ ಕಾಮಗಾರಿ ಮತ್ತು ಅದರ ಅಂದಾಜು ವೆಚ್ಚಗಳ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಲ್ಲಿ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸುವಂತೆ ಸೂಚಿಸಿದ ಅವರು, ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣವನ್ನು ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರ ಖಾತೆಗೆ ಮೂರ್ನಾಲ್ಕು ದಿನಗಳಲ್ಲಿ ವರ್ಗಾಯಿಸುವುದಾಗಿ ತಿಳಿಸಿದ ಅವರು, ಬರವನ್ನು ಸಮರ್ಥವಾಗಿ ಎದುರಿಸಲು ಸದಾ ಸಿದ್ಧರಾಗಿರುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸ್ತುತ ಸಮಯದಲ್ಲಿ ಶಿವಮೊಗ್ಗ ನಗರದಲ್ಲೂ ಎದುರಾಗಬಹುದಾದ ಸಮಸ್ಯೆಯ ಕುರಿತು, ಜುಲೈ ಮಾಸಾಂತ್ಯದವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮುಂಗಾರು ಅವಧಿಯಲ್ಲಿ ಮಳೆಯಾದರೆ ನಗರದ ಚರಂಡಿಗಳಲ್ಲಿ ಕಸ-ಕಡ್ಡಿ ಕಟ್ಟಿಕೊಂಡು ಚರಂಡಿಯ ನೀರು ಸಮರ್ಪಕವಾಗಿ ಹರಿದುಹೋಗದೇ ನಿವಾಸಿಗಳ ಮನೆಗೆ ನುಗ್ಗಬಹುದಾದ ಸಾಧ್ಯತೆಗಳಿವೆ. ಅದಕ್ಕಾಗಿ ನಗರದ ಎಲ್ಲಾ ಚರಂಡಿಗಳಲ್ಲಿ ಹುದುಗಿರುವ ಮಣ್ಣು ಮತ್ತು ಕಸವನ್ನು ಸ್ವಚ್ಚಗೊಳಿಸಿಟ್ಟುಕೊಳ್ಳಬೇಕು. ವಿಶೇಷವಾಗಿ ರಾಜಾಕಾಲುವೆಗಳ ಸ್ವಚ್ಚತೆ ಮತ್ತು ದುರಸ್ತಿಗೆ ಆದ್ಯತೆ ನೀಡುವಂತೆ ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಶಿವರಾತ್ರಿಯ ನಂತರ ಸಹಜ ಪ್ರಮಾಣಕ್ಕಿಂತ ಹೆಚ್ಚಿನ ತಾಪಮಾನ ಕಂಡುಬರುತ್ತಿದೆ. ಮಕ್ಕಳು ವಯಸ್ಕರು ಬಿಸಿಲಿಗೆ ಹೋಗದಂತೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ ಅವರು, ಆಸ್ಪತ್ರೆಗಳಲ್ಲಿ ಓಆರ್‌ಎಸ್‌ಮತ್ತು ನಿರ್ಜಲೀಕರಣದಿಂದಾಗಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಹಾಗೂ ಅಗತ್ಯವಾಗುವ ಔಷಧಗಳನ್ನು ಹೊಂದಿರುವಂತೆ ಅವರು ಸೂಚಿಸಿದ ಅವರು, ಅದಕ್ಕಾಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಸೂಚಿಸಿದರು.

ವಿದ್ಯುತ್‌ಸರಬರಾಜಿನಲ್ಲಿ ವ್ಯತ್ಯಯವುಂಟಾಗುತ್ತಿರುವ ಕಾರಣ ನಗರ ಕೆಲವು ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಅಡಚಣೆ ಉಂಟಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಮೆಸ್ಕಾಂನ ಅಭಿಯಂತರರು ವಿಶೇಷ ಗಮನಹರಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್‌ಭೂಮರೆಡ್ಡಿ, ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್‌, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

DC Shivamogga ಜಿಲ್ಲೆಯಲ್ಲಿ‌ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪನೆಗೆ ಮಾರ್ಗಸೂಚಿ, ಕಾರ್ಮಿಕರ ಅಭಿಪ್ರಾಯಗಳಿಗೆ ಆಹ್ವಾನ- ಗುರುದತ್ತ ಹೆಗಡೆ

0

DC Shivamogga ಶಿವಮೊಗ್ಗ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಈ ಸಂಘ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಿಬ್ಬಂಧಿಗಳು ತ್ವರಿತವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮನವಿ ಮಾಡಿದ್ದಾರೆ.

ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನಿಯೋಜಿತ ಶಿವಮೊಗ್ಗ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮದ್ಯವರ್ತಿಗಳ ಹಾವಳಿ, ಏಜೆನ್ಸಿಗಳ ಶೋಷಣೆಯಿಂದ ಹೊರಗುತ್ತಿಗೆ ನೌಕರರನ್ನು ಸಂರಕ್ಷಿಸುವ ನಿಟ್ಟನಿಲ್ಲಿ ಕಾರ್ಮಿಕ ಇಲಾಖೆ ಮಹತ್ವದ ಹೆಜ್ಜೆ ಇರಿಸಿದ್ದು, ಅಧಿಕಾರಿಗಳು ಹಾಗೂ ಕಾರ್ಮಿಕ ಪ್ರತಿನಿಧಿಗಳನ್ನೊಳಗೊಂಡ ಕಾರ್ಮಿಕ ಸೇವೆಗಳ ಸಹಕಾರ ಸಂಘವನ್ನು ಪ್ರಾರಂಭಿಸುವ ಸಲುವಾಗಿ ಅಭಿಪ್ರಾಯ ಸಂಗ್ರಹಿಸಿ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದವರು ನುಡಿದರು. ರಾಜ್ಯದ ಹಲವಾರು ಏಜೆನ್ಸಿಗಳು ಸರಕಾರದ ನಾನಾ ಇಲಾಖೆ ಮತ್ತು ಅವುಗಳ ಅಧೀನದಲ್ಲಿರುವ ನಿಗಮ, ಮಂಡಳಿಗಳು ಹಾಗೂ ಖಾಸಗಿ ಸಂಸ್ಥೆಗಳ ಬೇಡಿಕೆಗೆ ತಕ್ಕಂತೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ಒದಗಿಸುವ ಕೆಲಸ ಮಾಡುತ್ತಿವೆ. ಆದರೆ, ನಿಗದಿತ ಕನಿಷ್ಠ ವೇತನ, ಇಎಸ್‌ಐ, ಪಿಎಫ್‌ಸಂದಾಯ ಮಾಡದಿರುವುದು ಹಾಗೂ ಕಾಲಮಿತಿಯೊಳಗೆ ವೇತನ ಪಾವತಿ ಮಾಡದೇ ಇರುವುದರಿಂದ ಗುತ್ತಿಗೆ ನೌಕರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಅವೆಲ್ಲದಕ್ಕೂ ಪರಿಹಾರ ಕಲ್ಪಿಸಲು ಕಾರ್ಮಿಕ ಇಲಾಖೆ, ಮೈಸೂರು, ಧಾರವಾಡ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಾಯೋಗಿಕವಾಗಿ ಸೊಸೈಟಿ ಪ್ರಾರಂಭಿಸಲು ಆದೇಶ ಹೊರಡಿಸಿದೆ.

ಈಗಾಗಲೇ ಬೀದರ್‌ಜಿಲ್ಲೆಯಲ್ಲಿ ರಚಿಸಲಾದ ಸಂಘದ ಚಟುವಟಿಕೆಗಳ ಮಾದರಿಯಾಗಿದ್ದು, ಅದನ್ನು ಅನುಸರಿಸಿ, ಸಂಘ ರಚನೆಗೆ ಮುಂದಾಗುವಂತೆಯೂ ಕಾರ್ಮಿಕ ಇಲಾಖಾ ಸಚಿವರು ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.

ಈ ಸಂಬಂಧ ಸ್ಥಳೀಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಬೀದರ್‌ಜಿಲ್ಲೆಗೆ ಭೇಟಿ ನೀಡಿ, ಬೀದರ್‌ಸಂಘದ ವಾಸ್ತವ ಸ್ಥಿತಿಗತಿಗಳನ್ನು ಅರಿತು ವರದಿ ನೀಡುವಂತೆ ಸೂಚಿಸಲಾಗಿದೆ ಎಂದ ಅವರು, ಸಂಘದ ರಚನೆಯಿಂದಾಗಿ ಹೊರಗುತ್ತಿಗೆ ಮೂಲಕ ನೇಮಕಗೊಳ್ಳುವ ನೌಕರರಿಗೆ ಅನುಕೂಲವಾಗಲಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಈ ಸೊಸೈಟಿಯು ವಿವಿಧ ಇಲಾಖೆಗಳು, ಮಂಡಳಿಗಳು, ಕಾರ್ಪೊರೇಷನ್‌ಸೇರಿದಂತೆ ಇತರೆ ಸಂಸ್ಥೆಗಳು, ಡಾಟಾ ಎಂಟ್ರಿ ಆಪರೇಟರ್‌, ಸ್ವಚ್ಛತಾ ಮತ್ತು ಭದ್ರತಾ ಸಿಬ್ಬಂದಿ, ಗ್ರೂಪ್‌ಡಿ, ಟೆಕ್ನಿಕಲ್‌ಸೇರಿದಂತೆ ವಿವಿಧ ಬಗೆಯ ಕಾರ್ಮಿಕರು ಬೇಕೆಂದು ಬೇಡಿಕೆ ಸಲ್ಲಿಸಿದಾಗ ಅಂತಹ ನೌಕರರ ಸೇವೆ ಒದಗಿಸಲಿದೆ. ವೇತನ ಹಾಗೂ ಇತರೆ ಭತ್ಯೆಯ ಮೊತ್ತವನ್ನು ಸಂಸ್ಥೆಗಳಿಂದ ಸ್ವೀಕರಿಸಿ, ಸೊಸೈಟಿಯಿಂದಲೇ ನೌಕರರ ಖಾತೆಗೆ ನೇರವಾಗಿ ವೇತನ ಪಾವತಿಸುವ ಉದ್ದೇಶ ಹೊಂದಲಾಗಿದೆ ಎಂದವರು ತಿಳಿಸಿದ್ದಾರೆ.

ಸಂಘವು ಸೇವಾ ಶುಲ್ಕ ಹಾಗೂ ಇತರೆ ಮೂಲಗಳಿಂದ ಸಂಗ್ರಹಿಸಿದ ಮೊತ್ತವನ್ನು ಸೊಸೈಟಿಯಲ್ಲಿ ಸದಸ್ಯತ್ವ ಪಡೆದ ಎಲ್ಲ ಕಾರ್ಮಿಕರಿಗೆ ಸಾಲಸೌಲಭ್ಯ ಹಾಗೂ ಕೆಲಯೋಜನೆಗಳ ಜಾರಿಗೆ ಬಳಕೆ ಮಾಡಲಿದೆ. ಸಹಕಾರ ಸಂಘದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಪತ್ರವ್ಯವಹಾರ ನಡೆಸಿ, 4ಜಿ ವಿನಾಯಿತಿ ಪಡೆದುಕೊಳ್ಳಲು ಯತ್ನಿಸಲಾಗುವುದು ಎಂದರು.

DC Shivamogga ಸಂಘದ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ, ಕಾರ್ಯದರ್ಶಿಯಾಗಿ ಜಿಪಂ ಸಿಇಒ, ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ನಿರ್ದೇಶಕರಾಗಿ ಯೋಜನಾ ನಿರ್ದೇಶಕರು, ಯೋಜನಾ ಅಧಿಕಾರಿಗಳು, ಸಹಕಾರ ಸಂಘಗಳ ಉಪನಿರ್ದೇಶಕರು ಹಾಗೂ ಗುತ್ತಿಗೆ ನೌಕರರ ಸಂಘದ ಚುನಾಯಿತ ಅಧ್ಯಕ್ಷರೂ ಸೇರಿ 14ಜನರ ಆಡಳಿತ ಮಂಡಳಿ ಇರಲಿದೆ ಎಂದವರು ತಿಳಿಸಿದರು.

ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಇಲಾಖೆಗಳು, ಅಲ್ಲಿನ ಸಿಬ್ಬಂಧಿಗಳಿಗೆ ಈ ಕುರಿತಾದ ಮಾಹಿತಿ ನೀಡಿ, ಸಂಘ ರಚನೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯೋಜನೆಯ ಲಾಭ ಪಡೆದುಕೊಳ್ಳಲು ಮುಂದಾಗುವಂತೆ ಅವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್‌ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Devara Dasimayya Jayanti ಏಪ್ರಿಲ್ 2 ಶ್ರೀದೇವರ ದಾಸಿಮಯ್ಯ ಜಯಂತಿ ಆಚರಣೆಗೆ ಜಿಲ್ಲಾಡಳಿತ ಸಜ್ಜು

0

Devara Dasimayya Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೇಕಾರ ಸಮುದಾಯಗಳ ಒಕ್ಕೂಟ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಏ.02 ರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.

ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.

Devara Dasimayya Jayanti ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಬೆಂಗಳೂರಿನ ಸಾಹಿತಿಗಳು ಮತ್ತು ಸಂಶೋಧಕರೂ ಆದ ಬಾಗೂರು ಆರ್. ನಾಗರಾಜಪ್ಪರವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ತಿಳಿಸಿದೆ.

Sahyadri Lalitha Kala Academy ಲಲತಕಲೆಗಳಿಗೆ & ಸಾಹಿತ್ಯಕ್ಕೆ ತನ್ನದೇ ಮಹತ್ವವಿದೆ- ರಮ್ಯಾ

0

Sahyadri Lalitha Kala Academy ಇಂದಿನ ದಿನಗಳಲ್ಲಿ ಲಲಿತ ಕಲೆಗಳಿಗೆ ಮತ್ತು ಸಾಹಿತ್ಯಕ್ಕೆ ತನ್ನದೇ ಆದ ಮಹತ್ವವಿದೆ. ಇದು ಕೇವಲ ಕಳೆಯಲು ಇರುವ ಹವ್ಯಾಸವಲ್ಲ. ಬದಲಾಗಿ ವ್ಯಕ್ತಿಗಳಲ್ಲಿ ಇರುವ ಪ್ರತಿಭೆಯನ್ನು ಹೊರ ಹಾಕಲು ಇರುವ ವೇದಿಕೆಯಾಗಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲ ಕವಿಗಳೂ ಪ್ರತಿಭಾವಂತರಾಗಿದ್ದು ಹೆಸರು ಗಳಿಸಿದ್ದಾರೆ.

ಸಹ್ಯಾದ್ರಿ ಲಲಿತಕಲಾ ಅಕಾಡೆಮಿಯ ಮೊದಲ ಕಾರ್ಯಕ್ರಮಕ್ಕೆ ಆಗಮಿಸಿದ ತಮ್ಮೆಲ್ಲರಿಗೂ ಉತ್ತಮ ಭವಿಷ್ಯ ಖಂಡಿತಾ ಇದೆ ಎಂದು ರಂಗೋಲಿ ಕಲಾವಿದೆ ರಮ್ಯಾ ತಿಳಿಸಿದ್ದಾರೆ.

ಅವರು ಕೀರ್ತಿನಗರದ ವನಿತಾ ವಿದ್ಯಾಲಯದಲ್ಲಿ ಸಹ್ಯಾದ್ರಿ ಲಲಿತಕಲಾ ಅಕಾಡೆಮಿಯ ವತಿಯಿಂದ ನಡೆದ ಯುಗಾದಿ ಕವಿಗೋಷ್ಠಿ ಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕವಿಗಳೂ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರೂ ಆದ ಪ್ರೊ.ಸತ್ಯನಾರಾಯಣ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅವರು ಸಹ್ಯಾದ್ರಿ ಲಲಿತಕಲಾ ಅಕಾಡೆಮಿಯ ವತಿಯಿಂದ ನಡೆದ ಕವಿಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

Sahyadri Lalitha Kala Academy ಅಧ್ಯಕ್ಷತೆ ವಹಿಸಿದ್ದ ತಾರಾ ಪ್ರಸಾದ್ ಮಾತನಾಡಿ ಹೊಸ ಕಾರ್ಯಕಾರಿ ಸಮಿತಿ ರಚನೆಯಾದ ಮೇಲೆ ನಡೆದ ಮೊದಲ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಮುಂದೆಯೂ ಸಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತಾವೆಲ್ಲರೂ ಭಾಗವಹಿಸಿ ಹಾಗೂ ಸದಸ್ಯರಾಗಿ ಎಂದು ಕರೆನೀಡಿದರು.

ಕವಿಗೋಷ್ಠಿಯಲ್ಲಿ ಒಟ್ಟು 20 ಕವಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಲಲಿತಮ್ಮ ಮತ್ತು ಶ್ರೀವಳ್ಳಿಯವರು ಪಾಲ್ಗೊಂಡಿದ್ದರು.

ಪ್ರಾರಂಭದಲ್ಲಿ ಲಲಿತಮ್ಮ ಅವರಿಂದ ಪ್ರಾರ್ಥನೆ, ಎಂ.ಎನ್.ಸುಂದರ ರಾಜ್ ರಿಂದ ಸ್ವಾಗತ ನಡೆಯಿತು.

ಹರಿಪ್ರಸಾದ್ ಕಾರ್ಯಕ್ರಮನಡೆಸಿ ಕೊಟ್ಟರು.
ಕವಿತಾ ವಾಚನದಲ್ಲಿ ಬಹುಮಾನ ಗಳಿಸಿದವರು.ಮೊದಲ ಬಹುಮಾನ. ಶ್ರೀಮತಿ ಪುಟ್ಟಮ್ಮ
ಎರಡನೇ ಬಹುಮಾನ ಪ್ರೊ. ಸತ್ಯನಾರಾಯಣ
ಮೂರನೇ ಬಹುಮಾನ ಜೆ.ಎನ್. ಬಸವರಾಜ್
ಸಮಾಧಾನಕರ ಬಹುಮಾನ ಗಾಯತ್ರಿ ರಮೇಶ್, ಸತೀಶ್ ಹು.ಮ.ಹರಿಪ್ರಸಾದ್ ಇದ್ದರು

Government Polytechnic Harihara ಡಿಪ್ಲೊಮೋದಾರರು ಮಧ್ಯಮ & ಸಣ್ಣದಾದರೂ ಪರವಾಗಿಲ್ಲ, ಕೈಗಾರಿಕೆ ‌ಸ್ಥಾಪನೆಗೆ ಮುಂದಾಗಬೇಕು- ಡಾ.ಎಚ್.ಬಿ.ಮಂಜುನಾಥ್

0

Government Polytechnic Harihara ಜಾಗತಿಕ ಆರ್ಥಿಕ ಕ್ಷೇತ್ರದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿರುವ ಭಾರತದಲ್ಲಿ ಹೂಡಿಕೆ ಮಾಡಲು ಅನೇಕ ರಾಷ್ಟ್ರಗಳು ಮುಂದಾಗಿದ್ದು ಈ ಅವಕಾಶವನ್ನು ಬಳಸಿಕೊಂಡು ಭಾರತದ ಯುವ ಜನತೆ ಉದ್ಯಮಶೀಲತೆಯತ್ತ ಗಮನಹರಿಸಬೇಕಾಗಿದೆ ಎಂದು ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.

ಅವರಿಂದು ಹರಿಹರ ಸರ್ಕಾರಿ ಪಾಲಿಟೆಕ್ನಿಕ್ ನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ದೇಶದ ಸುಮಾರು 15600 ಪಾಲಿಟೆಕ್ನಿಕ್ ಐಟಿಐ ಮತ್ತು ಡಿಪ್ಲೋಮೋ ಕಾಲೇಜುಗಳಿಂದ ವಾರ್ಷಿಕ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಬರುತ್ತಿದ್ದು ಇವರೆಲ್ಲ ನೌಕರಿಯನ್ನೇ ಆರಿಸಿದರೆ ದೇಶದ ನಿವ್ವಳ ಆಂತರಿಕ ಉತ್ಪಾದನೆ ವೃದ್ಧಿಯಾಗುವುದಿಲ್ಲ. ಪಾಲಿಟೆಕ್ನಿಕ್ ಹಾಗೂ ಡಿಪ್ಲೋಮೋ ದಾರರು ಮಧ್ಯಮ ಹಾಗೂ ಸಣ್ಣದಾದರೂ ಪರವಾಗಿಲ್ಲ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು. ಇಂದಿಗೂ ನಮ್ಮ ದೇಶ ಅಮೆರಿಕ ಜರ್ಮನಿ ದಕ್ಷಿಣ ಕೊರಿಯಾ ತೈವಾನ್ ಮುಂತಾದ ದೇಶಗಳಿಂದ ವಾರ್ಷಿಕ ಸಹಸ್ರಾರು ಹಡಗುಗಳಷ್ಟು ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದ್ದು ಇವುಗಳನ್ನು ನಮ್ಮ ಯುವ ಜನತೆ ಭಾರತದಲ್ಲೇ ಉತ್ಪಾದಿಸುವ ಬಗ್ಗೆ ಗಂಭೀರವಾಗಿ ಗಮನಿಸಬೇಕಾಗಿದೆ. ಅನೇಕ ಮುಂದುವರಿದ ರಾಷ್ಟ್ರಗಳ ಯುವ ಜನತೆಯನ್ನು ಗಮನಿಸಿದರೆ ನಮ್ಮ ದೇಶದ ಯುವ ಜನತೆಯಲ್ಲಿ ಬುದ್ಧಿಶಕ್ತಿ ಅಪಾರವಾಗಿದೆ, ಆದರೆ ಅದರ ಬಳಕೆಯಾಗುತ್ತಿಲ್ಲ, ಕಾರಣ ನಮ್ಮ ಯುವ ಜನತೆಗೆ ತಮ್ಮ ಸಾಮರ್ಥ್ಯದ ಅರಿವಿಲ್ಲ ಎಂದರು.

Government Polytechnic Harihara ಕಾಲೇಜಿನ ಪ್ರಾಚಾರ್ಯ ಬಿ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಬೋಧಕ ವರ್ಗದ ಜಕಣಾಚಾರ್ಯ ಕಮ್ಮಾರ್, ಶಾಂತಕುಮಾರ್ ನಾಯ್ಡು, ರಾಜು ಎನ್, ಗುರುಸ್ವಾಮಿ ಟಿ ಬಿ, ಶಿವರಾಜ್ ಕೆ ವಿ, ತನ್ನೀರು ಸ್ವಪ್ನಾ, ವಿದ್ಯಾರ್ಥಿ ಸಂಘದ ಕಿರಣ್ ಟಿ ಪಿ, ಆಕಾಶ್ ಬಿ,ಮಾಲತೇಶ್ ಯು ಕೆ,ಭಾರತಿ ಎಂ ಎ,ಮನೋಜ್ ಎಸ್ ಎಸ್ ಮುಂತಾದವರ ಉಪಸ್ಥಿತಿಯಲ್ಲಿ ವಾಣಿಶ್ರೀ ಹಾಗೂ ಕಸ್ತೂರಿ ಪ್ರಾರ್ಥನೆ ಹಾಡಿದರೆ ನಿರ್ಮಲ ಸ್ವಾಗತ ಕೋರಿದರು ಲಕ್ಷ್ಮಿ ನಯನ ನಿತಿನ್ ಸೌಜನ್ಯ ಅನ್ನಪೂರ್ಣ ಐಶ್ವರ್ಯಾ ಕಾರ್ಯಕ್ರಮ ನಿರೂಪಿಸಿದರು,ಅನುಷಾ ವಂದನೆ ಸಲ್ಲಿಸಿದರು.

ಚೈತ್ರದ ಮೊದಲ ಚಿತ್ತಾರ…

0

– ಶೋಭಾ ಸತೀಶ್

ಚೈತ್ರ ಮಾಸದ ಮೊದಲ ದಿನವು
ಅದುವೇ ನವ ಸಂವತ್ಸರದ ಆಗಮನವು
ಎಲ್ಲೆಡೆ ಬಣ್ಣ ಬಣ್ಣದ ಚಿತ್ತಾರವು
ಬಂದಿದೆ ನೋಡಿ ಯುಗಾದಿ ಸಂಭ್ರಮವು

ಹಬ್ಬದ ಸಾಂಪ್ರದಾಯಕ ಆಚರಣೆಯು
ಹಿರಿಯರಿಂದ ಬಂದಂತಹ ಬಳುವಳಿಯು
ಎಲ್ಲರಲ್ಲಿಯೂ ಮೂಡುವ ಚೈತನ್ಯತೆಯು
ಹಸಿರಾಗಿ ಕಂಗೊಳಿಸುವ ಪ್ರಕೃತಿ ಮಾತೆಯು

ಹೊಸ ವರುಷವೂ ಬರಲಿದೆ
ಹೊಂಗನಸುಗಳ ತರಲಿದೆ
ಮದಮತ್ಸರಗಳ ತೊಲಗಿಸಲಿದೆ
ಸಿಹಿ ಕಹಿಗಳ ಸಮ್ಮಿಲನ ಗೊಳಿಸಲಿದೆ

ಮಾವು ಬೇವುಗಳ ತೋರಣ ಕಟ್ಟಿ
ಬೇವು ಬೆಲ್ಲಗಳ ಮಿಶ್ರಣ ಕುಟ್ಟಿ
ಸಿಹಿ ಊರಣದ ಹೋಳಿಗೆ ತಟ್ಟಿ
ನಮಸ್ಕರಿಸು ಹಿರಿಯರ ಪಾದಮಟ್ಟಿ

ಜೀವ ಭಾವಗಳ ರಿಂಗಣವಾಗಿ
ಸಂಸ್ಕೃತಿಯ ಸಂಕೇತವಾಗಿ
ಕಲೆ ಇತಿಹಾಸದ ಪ್ರತೀಕವಾಗಿ
ಸಂತಸ ಮೂಡಿಸಿದೆ ನವ ಯುಗವಾಗಿ

ಶೋಭಾ ಸತೀಶ್ ಶಿವಮೊಗ್ಗ
ಸ.ಹಿ.ಪ್ರಾ ಶಾಲೆ ಚಿಲಕಾದ್ರಿಹಳ್ಳಿ
ಶಿವಮೊಗ್ಗ
ದೂ. ಸಂಖ್ಯೆ 8762603511