ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೌಕರರು ಕೂಡ ಸಮನ್ವತೆಯನ್ನು ಸಾಧಿಸಿಕೊಂಡು ಕೆಲಸ ನಿರ್ವಹಿಸಬೇಕು ಹಾಗಾದಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಅನುಕೂಲವಾಗುತ್ತದೆ,ಸರ್ಕಾರಿ ಯೋಜನೆಗಳು ಬಡ ಜನರಿಗೆ ಮತ್ತು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಶ್ರಮಿಸಬೇಕು ಎಂದು ಪುರದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರದೀಪ್ ಎಸ್ ಹೆಬ್ಬೂರ್ ರವರು ಅಧಿಕಾರಿ ಗಳಿಗೆ ಕರೆ ನೀಡಿದರು. ಪುರದಾಳು ಗ್ರಾಮ ಪಂಚಾಯತ್ ಕಾರ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪಂಚಾಯತ್ ಕೆ ಡಿ ಪಿ ಸಭೆಯ ಅಧ್ಯಕ್ಷತೆವಯಿಸಿ ಮಾತನಾಡಿದರು. ಸಭೆಯಲ್ಲಿ ಅಂಗನವಾಡಿ ಮತ್ತು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಸಂಖ್ಯೆ ಹೆಚ್ಚಾಗಿದ್ದು ಈ ಬಗ್ಗೆ ಅಬಕಾರಿ ಮತ್ತು ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದ್ದು ಅಕ್ರಮ ಮಧ್ಯ ಮಾರಾಟ ತಡೆಯಲು ಕ್ರಮವಹಿಸಬೇಕೆಂದು ಕೋರುವ ನಿರ್ಣಯವನ್ನು ಮಾಡಲಾಯಿತು. ಹಾಗೂ ಸಭೆಗೆ ಗೈರಾದ ಅಧಿಕಾರಿಗಳಿಗೆ ಶಿಸ್ತುಕ್ರಮ ವಹಿಸಬೇಕೆಂದು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ವ್ಯವಹಾರ ನಡೆಸಲು ಅಧ್ಯಕ್ಷರು ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀ ಎಸ್ ಆರ್ ಗಿರೀಶ್, ಜಿ ರಾಮಣ್ಣ, ಶ್ರೀಮತಿ ಮಾನಸ ಸತೀಶ್, ಶ್ರೀಮತಿ ಕಮಲಾಕ್ಷಿ, ಶ್ರೀಮತಿ ಕುಸುಮ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್, ಗ್ರಾಮ ಪಂಚಾಯತ್ ನೋಡಲ್ ಅಧಿಕಾರಿ ಪಶುವೈದ್ಯಾಧಿಕಾರಿ ಮಾದೇವ ಶರ್ಮ, ಹಾಗೂ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು, ಶಾಲೆಗಳ ಮುಖ್ಯ ಉಪಾಧ್ಯಾಯರು, ಮತ್ತು ಗ್ರಾಮ ಪಂಚಾಯತ್ ಮಟ್ಟದ ನೌಕರವರ್ಗದವರು , ಹಾಜರಿದ್ದರು.
ಸರ್ಕಾರಿ ಯೋಜನೆಗಳು ಬಡವರಿಗೆ ,ಅರ್ಹ ಫಲಾನುಭವಿಗಳಿಗೆ ತಲುಪಿಸಲು ಶ್ರಮಿಸಿ- ಪ್ರದೀಪ್ ಎಸ್ .ಹೆಬ್ಬೂರ್ಕರ್
Shivamogga District Consumer Disputes Redressal Commission ಸೇವಾ ನ್ಯೂನತೆ ಎಸಗಿದ ಜೊಮೋಟೋ & ಹೋಟೆಲ್ ಮಾಲಿಕರಿಗೆ ದಂಡ ವಿಧಿಸಿ, ಗ್ರಾಹಕರ ಪರ ಆಯೋಗ ತೀರ್ಪು
Shivamogga District Consumer Disputes Redressal Commission ಗ್ರಾಹಕರೊಬ್ಬರು ಆರ್ಡರ್ ಮಾಡಿದ ಸಸ್ಯಹಾರಿ ಬರ್ಗರ್ ಬದಲಿಗೆ ಮಾಂಸಹಾರಿ ಬರ್ಗರ್ ನೀಡಿ ಸೇವಾನ್ಯೂನತೆ ಎಸಗಿದ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ‘ಜೊಮೊಟೊ’ ಹಾಗೂ ಸಂಬಂಧಪಟ್ಟ ಹೋಟೆಲ್ ಮಾಲೀಕರಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶಿವಮೊಗ್ಗದ ಜೆ.ಪಿ.ಎನ್ ರಸ್ತೆಯ ನಿವಾಸಿ ನಂದೀಶ್ ಎಂಬುವವರು 2025 ರ ಆಗಸ್ಟ್27 ರಂದು ಗಣೇಶ ಚತುರ್ಥಿ ಹಬ್ಬದ ದಿನದಂದು ಜೊಮೊಟೊ ಆ್ಯಪ್ ಮೂಲಕ ಸಸ್ಯಹಾರಿ ಬರ್ಗರ್ ಆರ್ಡರ್ ಮಾಡಿದ್ದರು. ಇದಕ್ಕಾಗಿ ಅವರು ರೂ. 313.15 ಪಾವತಿಸಿದ್ದರು. ಆದರೆ ಹಬ್ಬದ ದಿನದಂದೇ ಅವರಿಗೆ ಸಸ್ಯಹಾರದ ಬದಲಾಗಿ ಮಾಂಸಹಾರಿ ಬರ್ಗರ್ ಅನ್ನು ವಿತರಿಸಲಾಗಿತ್ತು. ಈ ಬಗ್ಗೆ ಅವರು ಸಂಸ್ಥೆಗೆ ದೂರು ನೀಡಿದಾಗ, ಸಂಸ್ಥೆಯು ಬರ್ಗರ್‌ನ ಹಣವನ್ನು ದೂರುದಾರರ ಖಾತೆಗೆ ಮರುಪಾವತಿಸಿತ್ತು.
ಆದರೆ, ಗಣೇಶ ಹಬ್ಬ ಆಚರಿಸುತ್ತಿದ್ದ ಸಂದರ್ಭದಲ್ಲಿ ಮನೆಯೊಳಗೆ ಮಾಂಸಹಾರಿ ಬರ್ಗರ್ ತಂದು ತಲುಪಿಸುವ ಮೂಲಕ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ನಂದೀಶ್ ಅವರು ವಕೀಲರ ಮೂಲಕ ಜೊಮೊಟೊ ಇಂಡಿಯಾ ಸಂಸ್ಥೆಯ ಸಿ.ಇ.ಒ, ಗುರಂಗಾವ್, ಹರಿಯಾಣ, ಜೋನಲ್ ಹೆಡ್, ಬೆಂಗಳೂರು ಹಾಗೂ ಶಿವಮೊಗ್ಗದ ಫೈವ್ ಸ್ಟಾರ್ ದರ್ಶನ್ ಕಾಂಪ್ಲೆಕ್ಸ್‌ನ ಹೋಟೆಲ್ ಮಾಲೀಕರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
Shivamogga District Consumer Disputes Redressal Commission ದೂರನ್ನು ದಾಖಲಿಸಿಕೊಂಡ ಆಯೋಗವು ಎದುರುದಾರರಿಗೆ ನೋಟಿಸ್ ಜಾರಿ ಮಾಡಿತ್ತು. ವಿಚಾರಣೆ ವೇಳೆ ಜೊಮೊಟೊ ಸಂಸ್ಥೆಯು, “ತಮ್ಮದು ಕೇವಲ ಆರ್ಡರ್ ತೆಗೆದುಕೊಳ್ಳುವ ವೇದಿಕೆಯಾಗಿದ್ದು (ಪ್ಲಾಟ್‌ಫಾರ್ಮ್), ಗ್ರಾಹಕರು ನೇರವಾಗಿ ಹೋಟೆಲ್‌ಗೆ ಆರ್ಡರ್ ಮಾಡಿರುತ್ತಾರೆ. ಇದರಲ್ಲಿ ನಮ್ಮ ಯಾವುದೇ ಲೋಪ ಅಥವಾ ಸೇವಾನ್ಯೂನತೆ ಇರುವುದಿಲ್ಲ” ಎಂದು ವಾದಿಸಿತ್ತು.
ಆದರೆ ಉಭಯ ಪಕ್ಷಗಳ ವಾದ-ವಿವಾದಗಳು ಮತ್ತು ದೂರುದಾರರು ಸಲ್ಲಿಸಿದ ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಜಿಲ್ಲಾ ಗ್ರಾಹಕ ಆಯೋಗವು, ಎದುರುದಾರರು ಸೇವಾನ್ಯೂನತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿತು.
1 ರಿಂದ 3ನೇ ಎದುರುದಾರರಾದ ಜೊಮೊಟೊ ಸಿ.ಇ.ಒ, ಜೋನಲ್ ಹೆಡ್ ಮತ್ತು ಹೋಟೆಲ್ ಮಾಲೀಕರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಗೆ ರೂ. 10,000/- ಗಳನ್ನು ಮಾನಸಿಕ ಹಿಂಸೆಗಾಗಿ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ, ಈ ಮೊತ್ತಕ್ಕೆ ವಾರ್ಷಿಕ ಶೇ. 12ರಷ್ಟು ಬಡ್ಡಿ ಸೇರಿಸಿ ಪಾವತಿಸತಕ್ಕದ್ದು.
ಪ್ರಕರಣದ ವೆಚ್ಚಕ್ಕಾಗಿ ರೂ. 10,000/- ಗಳನ್ನು ಸಹ 45 ದಿನಗಳ ಒಳಗೆ ಪಾವತಿಸಬೇಕು. ಇದಕ್ಕೂ ತಪ್ಪಿದಲ್ಲಿ ವಾರ್ಷಿಕ ಬಡ್ಡಿ ದರ ಅನ್ವಯವಾಗಲಿದೆ ಎಂದು
ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ. ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಜುಲೈ 9 ರಂದು ಆದೇಶಿಸಿದೆ.
ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕ ಆಯ್ಕೆಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳು ಒಳಗೊಂಡಂತೆ) 2026-27ನೇ ಶೈಕ್ಷಣಿಕ ಸಾಲಿಗೆ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಣ ನಿರ್ದೇಶಕರು ಒಳಗೊಂಡಂತೆ) ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ನಿಗದಿತ ವೇಳಾಪಟ್ಟಿಯೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು / ತಿದ್ದುಪಡಿ (EDIT) ಮಾಡಲು ಪ್ರಾರಂಭದ ದಿನಾಂಕ: 11.07.2026,
ಅರ್ಜಿ ಸಲ್ಲಿಸಲು / ತಿದ್ದುಪಡಿ ಮಾಡಲು ಕೊನೆಯ ದಿನಾಂಕ: 18.07.2026,
ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸುವ ದಿನಾಂಕ: 19.07.2026,
ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಿದ ನಂತರ ಅರ್ಜಿಯನ್ನು EDIT ಮಾಡಲು ಅವಕಾಶ: 19.07.2026 ರಿಂದ 22.07.2026,
ತಾತ್ಕಾಲಿಕ ಕಾರ್ಯಭಾರ (Workload) ಪ್ರಕಟಿಸುವ ದಿನಾಂಕ: 25.07.2026
ಕೌನ್ಸಿಲಿಂಗ್ ಮೆರಿಟ್ ಪಟ್ಟಿ ಹಾಗೂ ಕಾರ್ಯಭಾರ ಪ್ರಕಟಿಸುವ ದಿನಾಂಕ: 26.07.2026
ಮೆರಿಟ್ ಪಟ್ಟಿಯನ್ವಯ ಕಾಲೇಜು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: 28.07.2026
ವಿದ್ಯಾರ್ಹತೆ ಮತ್ತು ಆಯ್ಕೆ ಮಾನದಂಡಗಳು
ಯುಜಿಸಿ 2018ರ ಮಾರ್ಗಸೂಚಿಗಳನ್ವಯ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕಗಳನ್ನು (ಎಸ್‌ಸಿ/ಎಸ್ ಟಿ/ಓಬಿಸಿ/ವಿಶೇಷ ಚೇತನರಿಗೆ ಶೇ.50) ಹೊಂದಿರಬೇಕು. ಇದರೊಂದಿಗೆ ಎನ್‌ಇಟಿ / ಎಸ್‌ಎಲ್‌ಇಟಿ / ಕೆ.ಸೆಟ್ / ಪಿಹೆಚ್.ಡಿ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯ.
ಮೆರಿಟ್ ಅಂಕಗಳ ಹಂಚಿಕೆ (ಒಟ್ಟು 100 ಅಂಕಗಳು) :
ಸ್ನಾತಕೋತ್ತರ ಪದವಿ ಅಂಕಗಳು: ಅಭ್ಯರ್ಥಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ 25% ಭಾಗವನ್ನು ಪರಿಗಣಿಸಲಾಗುವುದು (ಗರಿಷ್ಠ 25 ಅಂಕಗಳು).
ಹೆಚ್ಚುವರಿ ವಿದ್ಯಾರ್ಹತೆ: ಪಿಹೆಚ್.ಡಿ ಹೊಂದಿದ್ದಲ್ಲಿ 12 ಅಂಕಗಳು; ಎನ್‌ಇಟಿ/ಕೆ-ಸೆಟ್/ಎಸ್‌ಎಲ್‌ಇಟಿ ಹೊಂದಿದ್ದಲ್ಲಿ 09 ಅಂಕಗಳು; ಎಂ.ಫಿಲ್ ಹೊಂದಿದ್ದಲ್ಲಿ 06 ಅಂಕಗಳು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಪ್ರತಿ ಶೈಕ್ಷಣಿಕ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 48 ಅಂಕಗಳನ್ನು (ಮಿತಿ 16 ವರ್ಷಗಳು) ನೀಡಲಾಗುವುದು.
ಅರ್ಹ ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 10 ಅಂಕಗಳನ್ನು ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು :
2025-26 ನೇ ಸಾಲಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ, ತಮ್ಮ ಅರ್ಜಿಯಲ್ಲಿನ ಮಾಹಿತಿಯನ್ನು ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.
ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸಲ್ಲಿಸಿದ ಸೇವೆಯನ್ನು ಮಾತ್ರ ಪರಿಗಣಿಸಲಾಗುವುದು. ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸುವುದಿಲ್ಲ.
ಸಾಮಾನ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು- https://emis.karnataka.gov.in/application.aspx ಮತ್ತು ಸರ್ಕಾರಿ ಚಿತ್ರಕಲಾ / ಸಂಸ್ಕೃತ ಕಾಲೇಜುಗಳು – https://emis.karnataka.gov.in/AppSFC.aspx ಲಿಂಕ್ ಗಳ ಮೂಲಕ ಅನ್ ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದಲ್ಲಿ ಅಭ್ಯರ್ಥಿತನವನ್ನು ತಿರಸ್ಕರಿಸಲಾಗುವುದು. ಒಂದು ವೇಳೆ ಹಾಜರುಪಡಿಸಿದ ದಾಖಲೆಗಳು ನಕಲಿ ಎಂದು ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾದ ನಂತರ ಪ್ರಸೂತಿ ರಜೆ ಮೇಲೆ ತೆರಳುವ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ 90 ದಿನಗಳ ವೇತನ ಸಹಿತ ಮಾತೃತ್ವ ರಜೆಯ ಸೌಲಭ್ಯವನ್ನು ನೀಡಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್ https://dce.karnataka.gov.in ಅನ್ನು ಪ್ರತಿ ನಿತ್ಯ ಗಮನಿಸುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
B.Y. Raghavendra ಮಹಾರಾಜ ಟ್ರೋಫಿ: ಶಿವಮೊಗ್ಗ ಯೋಧಾಸ್ಗೆ ಚೊಚ್ಚಲ ಗೆಲುವು.ಸಂಸದ ರಾಘವೇಂದ್ರ ಅಭಿನಂದನೆ
B.Y. Raghavendra ಪ್ರತಿಷ್ಠಿತ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ನಮ್ಮ ಹೆಮ್ಮೆಯ ‘ಶಿವಮೊಗ್ಗ ಯೋಧಾಸ್’ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.
ಮಲೆನಾಡಿನ ಕ್ರೀಡಾ ಇತಿಹಾಸದಲ್ಲಿ ಇದು ಸುವರ್ಣಾಕ್ಷರಗಳ ಮುನ್ನುಡಿಯಾಗಿದ್ದು, ನಮ್ಮ ಜಿಲ್ಲೆಯ ಪ್ರತಿಭಾವಂತರ ಕ್ರೀಡಾ ಯಾನ ಹೀಗೆಯೇ ಎಲ್ಲಾ ಕ್ರೀಡೆಗಳಲ್ಲಿ ಯಶಸ್ವಿಯಾಗಿ ಮುಂದುವರಿಯಲಿ ಎಂದು ಹಾರೈಸುತ್ತೇನೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಿಟಿ ಬಸ್ ಮಾಲೀಕರು, ಚಾಲಕರು & ನಿರ್ವಾಹಕರ ಸಭೆ
ಶಿವಮೊಗ್ಗ ಜಿಲ್ಲಾ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಎಲ್ಲಾ ಸಿಟಿ ಬಸ್ ಮಾಲೀಕರು, ಚಾಲಕರು ಹಾಗೂ ನಿರ್ವಾಹಕರ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾನ್ಯ ಶ್ರೀ ಸಂಜೀವ್ ಕುಮಾರ್, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಉಪವಿಭಾಗ ಅವರು ಭಾಗವಹಿಸಿ ಬಸ್ ಮಾಲೀಕರು, ಚಾಲಕರು ಹಾಗೂ ನಿರ್ವಾಹಕರ ಸಮಸ್ಯೆಗಳು ಮತ್ತು ಸಲಹೆಗಳನ್ನು ಆಲಿಸಿ, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಹತ್ವದ ಸೂಚನೆಗಳನ್ನು ನೀಡಿದರು.
ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ತಳಹದಿ – ಬಿ.ವೈ.ರಾಘವೇಂದ್ರ
ಶಿಕಾರಿಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ” ಹಾಗೂ “ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮ”ದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡಿದ್ದರು..
ವಿದ್ಯಾರ್ಥಿ ಜೀವನದಲ್ಲಿ ಕೇವಲ ಪಠ್ಯವಷ್ಟೇ ಅಲ್ಲದೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಕೂಡ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಪ್ರಮುಖ ತಳಹದಿಯಾಗಿವೆ. ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಇಂತಹ ವೇದಿಕೆಗಳು ಸೂಕ್ತ ಅವಕಾಶ ಕಲ್ಪಿಸುತ್ತವೆ.
ಕಾಲೇಜಿಗೆ ನೂತನವಾಗಿ ಪಾದಾರ್ಪಣೆ ಮಾಡಿರುವ ಎಲ್ಲಾ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿಯರಿಗೆ ಆತ್ಮೀಯ ಸ್ವಾಗತ ಕೋರುತ್ತಾ, ಮುಂಬರುವ ಸಾಲಿನಲ್ಲಿ ಎಲ್ಲರೂ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಲೇಜಿಗೆ ಹಾಗೂ ನಮ್ಮ ಜಿಲ್ಲೆಗೆ ಕೀರ್ತಿ ತರಲಿ ಎಂದು ಸಂಸದ ರಾಘವೇಂದ್ರ ಹಾರೈಸಿದರು.
ನಮ್ಮ ಭಾಗದ ಹೆಣ್ಣುಮಕ್ಕಳ ಉನ್ನತ ಶಿಕ್ಷಣ ಮತ್ತು ಕ್ರೀಡಾ ಪ್ರೋತ್ಸಾಹಕ್ಕೆ ನಮ್ಮ ಕೇಂದ್ರ ಸರ್ಕಾರ ಹಾಗೂ ಇಲಾಖೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ, ಪ್ರಮುಖ ಜನಪ್ರತಿನಿಧಿಗಳು ಹಾಗೂ ಉತ್ಸಾಹಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಸಿಎಸ್ ಸಿ ಕಾರ್ಯಕ್ರಮದಡಿ ಶಿವಮೊಗ್ಗ ತಾಲೂಕಿನಲ್ಲಿ 530 ವಿದ್ಯಾರ್ಥಿಗಳಿಗೆ ಒಲಂಪಿಯಾಡ್ 6.೦ ಪರೀಕ್ಷೆ ಏರ್ಪಾಡು
ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ), ವತಿಯಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರ ಮಾರ್ಗದರ್ಶನದಂತೆ ದಿನಾಂಕ 11.07.2026 ರಂದು ವಿದ್ಯಾನಗರ ಚೈತನ್ಯಸೌಧ ಕಟ್ಟಡದಲ್ಲಿ ಸಿ.ಎಸ್.ಸಿ ಕಾರ್ಯಕ್ರಮದಡಿಯಲ್ಲಿ ಒಲಿಂಪಿಯಾಡ್ 6.0 ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಿವಮೊಗ್ಗ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀಮತಿ ಯಶೋಧರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಗೂ ಮಿಳಘಟ್ಟ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶೇಕ್ ನಿಖತ್ ಇವರು ಉಪಸ್ಥಿತರಿದ್ದರು.
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತಡ ಮುಕ್ತ ವಾತಾವರಣವನ್ನು ಸೃಷ್ಟಿಸುವುದು, ವೃತ್ತಿಪರ ಕಲಿಕೆಗೆ ಸಹಕಾರಿ ಮತ್ತು ನಾಯಕತ್ವ ಸಂವಹನ ಕೌಶಲ್ಯಗಳನ್ನು ಮಕ್ಕಳಲ್ಲಿ ಬೆಳೆಸಲು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದಲ್ಲಿ ಸಲಹೆ ನೀಡಲು ಉತ್ತಮ ಪರಿಸರ ವ್ಯವಸ್ಥೆ ನಿರ್ಮಿಸುವುದು, ಪ್ರಾಥಾಮಿಕ ಶಾಲಾ ಹಂತದಲ್ಲಿ Digital Platform ಗಳ ಮೂಲಭೂತ ತಿಳುವಳಿಕೆ ನೀಡಲು, ವಿಧ್ಯಾರ್ಥಿಗಳಿಗೆ ಬಿಡುವಿನ ವೇಳೆಯನ್ನು ಸದುಪಯೋಗ ಮಾಡಿಕೊಳ್ಳಲು ಮತ್ತು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ 2025-26ನೇ ಸಾಲಿನಲ್ಲಿ ತಾಲೂಕಿನಲ್ಲಿ 530 ವಿಧ್ಯಾರ್ಥಿಗಳಿಗೆ ಒಲಂಪಿಯಾಡ್ 6.0 ಪರೀಕ್ಷೆಗಳನ್ನು ನಡೆಸಿ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಸಮಾಜಸೇವೆ ಅರ್ಥಪೂರ್ಣ- ಜೆಸಿ ವಿಜಯಲಕ್ಷ್ಮೀ ಕದಂಬ
ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆ ಹಾಗೂ ಪರಿಸರ ಜಾಗೃತಿಯ ಧೀಮಂತ ಹೆಜ್ಜೆಯಾಗಿ, ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆ ಹಾಗೂ ಹೋಟೆಲ್ ಶುಭಂ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪುರದಾಳು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾಜಮುಖಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
‘ಸಸ್ಟೈನೆಬಲ್ ಸಿಪ್ಪಿಂಗ್’ ಮೂಲಕ ಪರಿಸರ ಕಾಳಜಿ:
‘ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ನಾಯಕರು’ ಎಂಬ ಧ್ಯೇಯದೊಂದಿಗೆ, ಮಕ್ಕಳ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸಸ್ಟೈನೆಬಲ್ ಸಿಪ್ಪಿಂಗ್’ ಪ್ರಾಜೆಕ್ಟ್‌ನಡಿ ಪುರದಾಳಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಲು ಕರೆ ನೀಡಲಾಯಿತು. ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ ಸ್ಟೀಲ್ ಬಾಟಲಿಗಳನ್ನು ಬಳಸುವಂತೆ ಪ್ರೇರೇಪಿಸಿ, ಶಾಲೆಯ ಸುಮಾರು 150 ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಟೀಲ್ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.
450 ಜನರಿಗೆ ಆಯುಷ್ಮಾನ್ ಹಾಗೂ ಹಿರಿಯ ನಾಗರಿಕರ ಕಾರ್ಡ್ ವಿತರಣೆ:
ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರ ಆರೋಗ್ಯ ಭದ್ರತೆಗಾಗಿ ಪುರದಾಳು ಗ್ರಾಮದ ಸುಮಾರು 450 ಕ್ಕೂ ಹೆಚ್ಚು ಜನರಿಗೆ ಆಯುಷ್ಮಾನ್ ಕಾರ್ಡ್ ಹಾಗೂ ಅರ್ಹ ಹಿರಿಯ ನಾಗರಿಕರಿಗೆ ಸೀನಿಯರ್ ಸಿಟಿಜನ್ ಕಾರ್ಡ್‌ಗಳನ್ನು ಸ್ಥಳದಲ್ಲೇ ಮಾಡಿಕೊಟ್ಟು ವಿತರಿಸಲಾಯಿತು.
ಅಧ್ಯಕ್ಷರ ಹೆಮ್ಮೆಯ ನುಡಿ:
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ 2026ರ ಸಾಲಿನ ಅಧ್ಯಕ್ಷರಾದ ಜೆಸಿ ವಿಜಯಲಕ್ಷ್ಮಿ ಯು. ಕದಂಬ ಅವರು ಮಾತನಾಡಿ, “ಜೆಸಿಐನಂತಹ ಅದ್ಭುತ ಸಂಸ್ಥೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಇಂತಹ ಅರ್ಥಪೂರ್ಣ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮತ್ತು ಅದಕ್ಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ನನಗೆ ಅತ್ಯಂತ ಹೆಮ್ಮೆ ಮತ್ತು ಸಂತೋಷ ತಂದಿದೆ. ಗ್ರಾಮಸ್ಥರ ಹಾಗೂ ಶಾಲಾ ಸಿಬ್ಬಂದಿಯ ಸಹಕಾರ ಮರೆಯುವಂತಿಲ್ಲ” ಎಂದು ಹರ್ಷ ವ್ಯಕ್ತಪಡಿಸಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಲಯ 24ರ ಜೋನ್ ವೈಸ್ ಪ್ರೆಸಿಡೆಂಟ್ ಜೆಸಿಐ ಸೆನೆಟರ್ ಗಣೇಶ್ ಪೈ, ಝಡ್.ವಿ.ಸಿ (ಜೋನ್ ವೈಸ್ ಚೇರ್ಮನ್) ಉದಯ್ ಕದಂಬ, ಜೆಸಿ ಜಗದೀಶ್, ಜೆಸಿ ಸಚಿನ್ ಜಿ ಹಿಳ್ಳೋಡಿ, ಜೆಸಿ ವಾಣಿ, ಜೆಸಿ ಸುಚಿತಾ ಹಾಗೂ 2026ರ ಕಾರ್ಯದರ್ಶಿ ಜೆಸಿ ಶ್ವೇತಾ ಸಚಿನ್ ಭಾಗವಹಿಸಿದ್ದರು. ಜೂನಿಯರ್ ಜೆಸಿಗಳಾದ ಜಾನವಿ, ಹೇಮಾನ್, ರಾಹುಲ್ ಹಾಗೂ ಸ್ಥಳೀಯ ಗ್ರಾಮಸ್ಥರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಪುರದಾಳು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರಿಗೂ, ಶಾಲಾ ಮುಖ್ಯೋಪಾಧ್ಯಾಯರಿಗೂ ಹಾಗೂ ಅಧ್ಯಾಪಕ ವೃಂದದವರಿಗೂ ಜೆಸಿಐ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
“ಗುರುವಂದನೆ” ಸಲ್ಲಿಸಿದ ಹಳೇ ವಿದ್ಯಾರ್ಥಿಗಳ ಹೃದಯಸ್ಪರ್ಶಿ ಸಮಾರಂಭ
ಮೂವತ್ತೆರಡು ವರ್ಷಗಳ ಹಿಂದೆ ಶಿವಮೊಗ್ಗದ ಶ್ರೀ ನಾಗಪ್ಪ ಶೆಟ್ಟಿ ಸ್ಮಾರಕ ನ್ಯಾಷನಲ್ ಕಾಲೇಜಿನಲ್ಲಿ ತಮಗೆ ಪಾಠ ಮಾಡಿದ ಗುರುಗಳಿಗೆ ಗುರುವಂದನ ವಿಶಿಷ್ಟ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿದ 1992-95 ನೇ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವೀಧರರಾದ ಹಳೆಯ ವಿದ್ಯಾರ್ಥಿಗಳು ಶಿಕ್ಷಕರ ಸಮೂಹವನ್ನು ಭಾವುಕರನ್ನಾಗಿಸಿದರಲ್ಲದೆ, ಪ್ರೇಕ್ಷಕ ವೃಂದದ ಕರತಾಡನ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು.
ಅಂದಿನ ಪ್ರಾಂಶುಪಾಲ ರಾಮ್ ಕುಮಾರ್, ಅಂದಿನ ಶಿಕ್ಷಕ ವೃಂದ ಆರ್ ಕೆ ಬಾಳಿಗಾ, ಹೆಚ್ ಎಸ್ ದತ್ತಾತ್ರಿ, ಬಿ ಎನ್ ಆನಂದರಾಮ್, ವಾಣಿಶ್ರೀ, ಲೀನಾ, ಶ್ರೀಧರ ಅಡಿಗ, ಬಾಲಕೃಷ್ಣ, ಶೈಲಾ ಭಟ್ ಮತ್ತು ಎಸ್ ನಾರಾಯಣ ಭಟ್ ಅವರು ಸನ್ಮಾನ ಸ್ವೀಕರಿಸಿದಾಗ ಅವರೆಲ್ಲರ ಕಣ್ಣಾಲಿಗಳು ತುಂಬಿ ಬಂದವು.
ಇವರಲ್ಲಿ ಸೇವೆಯಲ್ಲಿ ಇರುವ ಹೆಚ್ ಎಸ್ ದತ್ತಾತ್ರಿ ಅವರೊಬ್ಬರನ್ನು ಹೊರತು ಪಡಿಸಿ ಎಲ್ಲರೂ ವಯೋನಿವೃತ್ತಿ ಹೊಂದಿ ಎಂಬತ್ತರ ಆಸುಪಾಸಿನ ಗಡಿಯಲ್ಲಿದ್ದು, ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.
ಅಂದಿನ ಬೋಧಕೇತರ ಸಿಬ್ಬಂದಿ ಜ್ಯೋತಿ, ಭಾಗ್ಯ, ವಾಸುದೇವ ಕುಲಕರ್ಣಿ, ಶೋಭಾ, ರವಿ ಸರ್ಕಾರ್, ಮಾಧವ ಮತ್ತು ವಿಜಯ್ ಕುಮಾರ್ ಅವರಿಗೂ ಎದೆ ತುಂಬಿ ಬಂದಿದ್ದು ಗಮನಿಸಬಹುದಾಗಿತ್ತು.
ಇನ್ನು ಅಂದಿನ ಹಳೆಯ ವಿದ್ಯಾರ್ಥಿಗಳಲ್ಲಿ ಕೆಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ಅಮೆರಿಕ, ಜಪಾನ್ ನಿಂದ ಆಗಮಿಸಿದ್ದು ವಿಶೇಷವಾಗಿತ್ತು.
ಅಂದು ಪದವಿ ತರಗತಿಯಲ್ಲಿ ಒಂದೇ ನಿಕಾಯ. ವಿದ್ಯಾರ್ಥಿಗಳ ಸಂಖ್ಯೆ ಕೇವಲ ಮೂವತ್ತು. ಇಂದು ಹಲವು ನಿಕಾಯಗಳು. ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರ ಗಡಿ ದಾಟಿದೆ ಎಂಬುದು ಗಮನಾರ್ಹವಾಗಿತ್ತು.
ಗೃಹಲಕ್ಷ್ಮಿ ಯೋಜನೆಗೆ ಇ-ಕೆವೈಸಿ ಕಡ್ಡಾಯವಲ್ಲ: ವದಂತಿಗಳಿಗೆ ಕಿವಿಗೊಡಬೇಡಿ- ಸಿ.ಎಸ್.ಚಂದ್ರಭೂಪಾಲ್
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಅಪ್ಡೇಟ್ ಮಾಡಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಸುಳ್ಳಾಗಿದ್ದು, ಸಾರ್ವಜನಿಕರು ಇವುಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ಅವರು ಸ್ಪಷ್ಟಪಡಿಸಿದ್ದಾರೆ.
ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯನ್ನು ನಂಬಿ, ಯೋಜನೆಯ ಲಾಭವನ್ನು ಮುಂದುವರೆಸಲು ಫಲಾನುಭವಿಗಳು ಖಾಸಗಿ ಸೈಬರ್ ಕೇಂದ್ರಗಳು, ಗ್ರಾಮ್ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಿಗೆ ಮುಗಿಬೀಳುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿನಾಕಾರಣ ಸೈಬರ್ ಕೇಂದ್ರಗಳಿಗೆ ಅಲೆದಾಡಿ ತೊಂದರೆಗೆ ಒಳಗಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಅಧಿಕೃತ ಆದೇಶ ಬಂದಿಲ್ಲ:
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆ ಮಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದರೂ ಸಹ, ಈ ಪರಿಷ್ಕರಣೆ ಯಾವ ಮಟ್ಟದಲ್ಲಿ ನಡೆಯಬೇಕು ಮತ್ತು ಯಾವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾರ್ಗದರ್ಶನ ಅಥವಾ ಸೂಚನೆಗಳು ಸರ್ಕಾರದಿಂದ ಇನ್ನು ಹೊರಬಿದ್ದಿಲ್ಲ.
ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಎ.ಪಿ.ಎಲ್, ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ನೀಡಲಾಗುತ್ತಿದೆ. ಯೋಜನೆ ಆರಂಭವಾದಾಗಿನಿಂದ ಇದುವರೆಗೆ ಒಟ್ಟು 30 ಕಂತುಗಳಲ್ಲಿ ಹಣವನ್ನು ಫಲಾನುಭವಿಗಳ ಖಾತೆಗೆ ಡಿ.ಬಿ.ಟಿ ಮೂಲಕ ಯಶಸ್ವಿಯಾಗಿ ಜಮೆ ಮಾಡಲಾಗಿದೆ. ಪ್ರಸ್ತುತ ಯಾವುದೇ ಅಡಚಣೆಯಿಲ್ಲದೆ ಹಣ ಪಾವತಿಯಾಗುತ್ತಿದ್ದು, ಇ-ಕೆವೈಸಿ ನೆಪದಲ್ಲಿ ಸಾರ್ವಜನಿಕರು ಗೊಂದಲಕ್ಕೀಡಾಗಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
