ರಾಜ್ಯದಾದ್ಯಂತ ನ.11ರಂದು ಓಬವ್ವ ಜಯಂತಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಚಿತ್ರದುರ್ಗದ ಇತಿಹಾಸದಲ್ಲಿ ಒನಕೆ ಓಬವ್ವಳ ಹೆಸರು ಮರೆಯಲು ಸಾಧ್ಯವಿಲ್ಲ. ನವೆಂಬರ್ 11ರಂದು ಓಬವ್ವನ ಜನ್ಮದಿನವಾದ ಕಾರಣ ಈ ದಿನವೇ ಓಬವ್ವ ಜಯಂತಿಯನ್ನಾಗಿ ಘೋಷಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಣೆ ನಡೆಯಲಿದೆ.
ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಕರ್ನಾಟಕದ ಇತರೆ ರಾಣಿಯರ ಸಾಲಿನಲ್ಲಿ ಓಬವ್ವ ಕೂಡ ಒಬ್ಬಳು ಎಂದು ಪರಿಗಣಿಸಲಾಗಿದೆ.
ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಫ್ರೀಶಿಪ್ ಕಾರ್ಡ್ ವಿತರಣೆ, ಶುಲ್ಕ ಕಟ್ಟದೆ ಫ್ರೀಶಿಪ್ ಕಾರ್ಡ್ ತೋರಿಸಿದರೆ ಕಾಲೇಜು ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಹಲವು ವಿದ್ಯಾರ್ಥಿಗಳು ಕಾಲೇಜು ಪ್ರವೇಶದ ಸಂದರ್ಭದಲ್ಲಿ ಹಣವಿಲ್ಲದೆ ಇರಬಹುದು. ಇದರಿಂದ ಅನೇಕ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಾರೆ.ಇದನ್ನು ತಪ್ಪಿಸಲು ಸರಕಾರ ಫ್ರೀಶಿಪ್ ಕಾರ್ಡ್ ಯೋಜನೆ ಜಾರಿಗೆ ತಂದಿದೆ. ಫ್ರೀಶಿಪ್ ಕಾರ್ಡ್ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯದೆ ಇರಲಿ ಎಂಬ ದೃಷ್ಟಿಯಿಂದ ರಚಿಸಲಾದ ಯೋಜನೆಯಾಗಿದೆ. ಫ್ರೀಶಿಪ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ತಾವು ಪ್ರವೇಶ ಪಡೆದಿರುವ ಕಾಲೇಜಿಗೆ ಹೋಗಿ ಕಾರ್ಡನ್ನು ತೋರಿಸಿದಲ್ಲಿ, ಯಾವುದೇ ಶುಲ್ಕವಿಲ್ಲದೆ ಉಚಿತ ಪ್ರವೇಶ ಪಡೆಯಬಹುದು.
ಕಾಲೇಜಿಗೆ ಸಮಾಜ ಕಲ್ಯಾಣ ಇಲಾಖೆಯು ವಿದ್ಯಾರ್ಥಿವೇತನ ನೀಡಿ, ಏಳು ದಿನಗಳೊಳಗೆ ಶುಲ್ಕ ಕಟ್ಟುವ ಬಗ್ಗೆ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಇದರಿಂದ ಕಾಲೇಜು ಉಚಿತ ಪ್ರವೇಶ ನೀಡಲಿದೆ. ಉಚಿತ ಪ್ರವೇಶ ಪಡೆದ ನಂತರ ಕಾಲೇಜು ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆ ಪಾವತಿಸಲಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಎಸ್.ಎಸ್.ಪಿ ಪೋರ್ಟಲ್ ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಈ ವೆಬ್ ಪೋರ್ಟಲ್ ನಲ್ಲಿ ಹೋಗಿ ಕಾರ್ಡ್ ಗೆ ಅಪ್ಲೈ ಮಾಡಬೇಕು. ತದನಂತರ ಅದೇ ಪೋರ್ಟಲ್ ನಲ್ಲಿ ಫ್ರೀಶಿಪ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಕಾರ್ಡ್ ಗೆ ವಿದ್ಯಾರ್ಥಿವೇತನದ ನಂಬರ್ ನೀಡಲಾಗಿರುತ್ತದೆ. ಈ ಯೋಜನೆಯಿಂದ ವಿದ್ಯಾರ್ಥಿಗಳು ಶುಲ್ಕ ಪಾವತಿಯ ಸಂಕಷ್ಟದಿಂದ ಪಾರಾಗಬಹುದು.
ಪ್ರಸ್ತುತ ಈ ಕಾರ್ಡ್ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಈ ಯೋಜನೆ ಜಾರಿಗೆ ತರುವ ಸಂಭವವಿದೆ.
ಕುವೆಂಪು ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯ ನಿಧಾನಗತಿಯಿಂದಾಗಿ ವಾಹನ ಚಾಲಕರಿಗೆ ದಿನನಿತ್ಯವೂ ನರಕ ದರ್ಶನವಾಗುತ್ತಿದೆ.
ಪ್ರತಿಯೊಂದು ರಸ್ತೆಯು ಗುಂಡಿಮಯವಾಗಿದೆ. ಜೈಲು ಸರ್ಕಲ್ ನಲ್ಲಿ ಕುವೆಂಪು ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಲಾಗಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ರಸ್ತೆಯ ಗುಂಡಿಗಳಿಗೆ ಸರಿಯಾಗಿ ಮಣ್ಣು ಮುಚ್ಚಿಸದೆ ಇರುವುದರಿಂದ, ವಾಹನ ಸವಾರರು ಇಲ್ಲಿ ಸಂಚರಿಸಲು ಪರದಾಡುತ್ತಿದ್ದಾರೆ. ಇದನ್ನು ಗಮನಿಸಿದ ಸಂಚಾರಿ ಪೊಲೀಸರು ತಾವೇ ರಸ್ತೆ ಗುಂಡಿಗಳಿಗೆ ಮಣ್ಣು ಹಾಕಿ, ವಾಹನ ಸವಾರರಿಗೆ ನೆರವಾಗುವಂತೆ ಮಾಡಿದ್ದಾರೆ. ಇದರಿಂದ ವಾಹನ ಸಂಚಾರರಿಗೆ ಸಹಾಯಕವಾಗಿದೆ ಪೊಲೀಸರ ಕಾರ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಚಾರಿ ಠಾಣೆ ಎಸ್.ಎಸ್.ಐ. ಮಂಜುನಾಥ್ ಹಾಗೂ ಚಾಲಕ ಪ್ರಕಾಶ್ ಸಿಬ್ಬಂದಿ ಹನುಮಂತಪ್ಪ ಇವರುಗಳು ಜೈಲು ಸರ್ಕಲ್ ನಲ್ಲಿ ಗುಂಡಿ ಮುಚ್ಚಿದ್ದಾರೆ. ಇದರಿಂದ ವಾಹನ ಸವಾರರು ಕೊಂಚ ನಿರಾಳರಾಗಿದ್ದಾರೆ.
ಕೋವಿಡ್-19 ಕಾರಣದಿಂದಾಗಿ ಸುಮಾರು ಒಂದೂವರೆ ವರ್ಷದಿಂದ ದೇಶದಾದ್ಯಂತ ಅಂಗನವಾಡಿ ಕೇಂದ್ರಗಳು ಸ್ಥಗಿತಗೊಂಡಿದ್ದವು. ರಾಜ್ಯದಾದ್ಯಂತ ಅಂಗನವಾಡಿ,ಎಲ್.ಕೆ. ಜಿ-ಯುಕೆಜಿ ಬೌದ್ಧಿಕ ತರಗತಿಗಳು ಆರಂಭಗೊಂಡಿದೆ. ಅಂಗನವಾಡಿಯತ್ತ ಆಗಮಿಸಿದ ಪುಟಾಣಿಗಳಿಗೆ ಚಾಕಲೇಟ್,ಸಿಹಿ ತಿನಿಸುಗಳು, ಬಲೂನನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಚಿಣ್ಣರನ್ನು ಸ್ವಾಗತಿಸಲು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತರಗತಿಗಳನ್ನು ಸಂಪೂರ್ಣವಾಗಿ ಶುಚಿ ಗೊಳಿಸಿ, ಸ್ಯಾನಿಟೈಸ್ ಮಾಡಲಾಗಿದೆ.ಹಾಗೂ ಚಿಣ್ಣರ ಆಗಮನಕ್ಕೆ ಬಲೂನ್ ಗಳಿಂದ ತರಗತಿಗಳನ್ನು ಸಿಂಗರಿಸಲಾಗಿತ್ತು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಅಮೆರಿಕ ನೌಕಾಪಡೆಯ ಯುದ್ಧ ವಿಮಾನಗಳ ಪೂರ್ಣ ಮಾದರಿ, ಆರ್ ಲೀಗ್ ಬರ್ಕ್ ಮಾರ್ಗದರ್ಶಿ ಕ್ಷಿಪಣಿ ಧ್ವಂಸದ ಎರಡು ಮಾದರಿಗಳು, ಆರು ಮೀಟರ್ ಉದ್ದದ ರೈಲು ವ್ಯವಸ್ಥೆ, ಅದರ ಮೇಲೆ ಹಡುಗು ಗಾತ್ರದ ನಿರ್ದಿಷ್ಟ ಗುರಿ ಇರುವಂತೆ ಮಾದರಿಯನ್ನು ರೂಪಿಸಲಾಗಿದೆ. ಈ ಸಂಕೀರ್ಣವನ್ನು ಭೂಮಿಯಿಂದ ಭೂಮಿಗೆ ಉಡಾವಣೆ ಮಾಡಬಹುದಾದ ಕ್ಷಿಪಣಿಗಳ ಪ್ರಯೋಗಕ್ಕೆ ಬಳಸಲಾಗುತ್ತಿದೆ ಎಂದು ಜಿಯೊಸ್ಪೆಷಿಯಲ್ ಇಂಟೆಲಿಜೆನ್ಸ್ ಕಂಪನಿಯ ಮೂಲಗಳನ್ನು ಆಧರಿಸಿ ಅಮೇರಿಕಾದ ನೌಕಾ ಸಂಸ್ಥೆಯು ತಿಳಿಸಿದೆ. ಅಮೆರಿಕ ನೌಕಾಪಡೆ ಯುದ್ಧ ವಿಮಾನಗಳು, ಇತರೆ ಯುದ್ಧ ಹಡಗುಗಳ ಮಾದರಿಗಳನ್ನು ಚೀನಾ ಸೇನೆಯು, ಅಲ್ಲಿನ ಮರುಭೂಮಿ ಕ್ಸಿನ್ ಜಿಯಾಂಗ್ ನಲ್ಲಿ ರೂಪಿಸಿದೆ. ತರಬೇತಿ ಗುರಿಯಾಗಿ ಬಳಸುವುದು ಇದರ ಉದ್ದೇಶ ಎನ್ನಲಾಗಿದೆ. ಚೀನಾದ ಹಡಗು ನಿರೋಧಕ ಕ್ಷಿಪಣಿ ಕಾರ್ಯಕ್ರಮದ ಉಸ್ತುವಾರಿಯನ್ನು ಅಲ್ಲಿನ ಪೀಪಲ್ಸ್ ಲಿಬರೇಷನ್ ಆರ್ಮಿ ರಾಕೆಟ್ ಫೋರ್ಸ್ (ಪಿಎಲ್ಎಆರ್ ಎಫ್) ಹೊಂದಿದೆ. ಚೀನಾದ ರಕ್ಷಣಾ ಸಚಿವಾಲಯ ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಲ್ಲಿ ಭಾರಿ ಮಳೆ ಆರ್ಭಟ ಮುಂದುವರಿದಿದೆ. ಜೊತೆಗೆ ಮುಂದಿನ 48 ಗಂಟೆಗಳಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರೊಂದಿಗೆ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲಾ ರಾಜ್ಯಗಳಿಗೂ ತಟ್ಟಿದೆ. ಸೋಮವಾರ ಉಡುಪಿ ಜಿಲ್ಲೆಯ ಹೆಬ್ರಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬೆಳಗಾವಿ ಜಿಲ್ಲೆಯ ಹೋಳಿನಗರಪುರ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ಭಾರಿ ಮಳೆಯಾಗಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಕೋಲಾರ, ಮೈಸೂರು, ಮಂಡ್ಯ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮತ್ತು ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ ಚಿಕ್ಕಮಗಳೂರು ಕೊಡಗು ಹಾಗೂ ಹಾಸನದಲ್ಲಿ ನವೆಂಬರ್ 11 ಮತ್ತು 12 ರಂದು ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ನೀಡಿದೆ. ನವೆಂಬರ್ 9 ಮತ್ತು 10 ರಂದು ಕೆಲವು ಕಡೆ ಗುಡುಗು ಸಿಡಿಲಿನಿಂದ ಕೂಡಿದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕದ ಅನೇಕ ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ನೀಡಲಾಯಿತು.
ಶ್ರೀ ವಿಶ್ವೇಶತೀರ್ಥ ಶ್ರೀ ಪಾದರಿಗೆ ನೀಡಲಾದ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿಯನ್ನು , ಹಾಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಮಾನ್ಯ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಧಾರ್ಮಿಕ ಕ್ಷೇತ್ರದಲ್ಲಿದ್ದು ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಅವರ ಅನೇಕ ಸಮಾಜಪರ ಕಾಳಜಿಗಳು ಉಳಿದ ಮಠಾಧೀಶರಿಗೆ ಮಾದರಿ ಎನಿಸಿವೆ. ಸನಾತನ ಹಿಂದೂ ಧರ್ಮ ರಕ್ಷಣೆಯಲ್ಲಿ ಸರಳ ನೀತಿಯನ್ನು ಪ್ರತಿಪಾದಿಸಿದ ಶ್ರೀಗಳು, ತಮ್ಮದೇ ಆದ ವಿಚಾರಗಳಿಂದ ಅನೇಕರಿಗೆ ಸ್ಪೂರ್ತಿ ನೀಡಿದ್ದಾರೆ. ಜೀವಿತ ಕಾಲದಲ್ಲಿಯೇ ಹುಡುಕಿಕೊಂಡು ಬರಬೇಕಾಗಿದ್ದ, ದೇಶಸಮ್ಮಾನ ಅವರಿಗೆ ಮರಣೋತ್ತರ ಸಂದಿದೆ.
ಕಿತ್ತಲೆ ಮಾರಿ ಶಾಲೆ ಕಟ್ಟಿದ ಮಂಗಳೂರಿನ ಅಕ್ಷರ ಸಂತ ಹರೇಕಳ ಹಾಜಬ್ಬ, ಕಾಡಿನ ವೃಕ್ಷ ದೇವತೆ ಎಂದೇ ಹೆಸರುವಾಸಿಯಾದ ಅಂಕೋಲದ ತುಳಸಿ ಗೌಡ, ಕರ್ನಾಟಕದ ನೆಲದಲ್ಲಿ ಸರಕು ಸಾರಿಗೆ ಸಾಮ್ರಾಜ್ಯವನ್ನು ನಿರ್ಮಿಸಿದ ಶ್ರೀ.ವಿಜಯ ಸಂಕೇಶ್ವರ ಮತ್ತು ಭಾರತೀಯ ಹಾಕಿ ತಂಡದ ನಾಯಕರಾಗಿ ಘನತೆಯನ್ನು ಎತ್ತರಕ್ಕೆರಿಸಿದ ಕೊಡಗಿನ ಯೋಧ ಎಂ. ಪಿ. ಗಣೇಶ್ ಹಾಗೂ ಮೈಸೂರಿನ ಸುಧರ್ಮ ಸಂಸ್ಕೃತ ಪತ್ರಿಕೆಯ ದಿ. ಸಂಪತ್ ಕುಮಾರ್, ಜಯಲಕ್ಷ್ಮಿ ಇವರುಗಳಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.
ಹಾಜಬ್ಬ ಅವರನ್ನು ಪ್ರಧಾನಿ ಅವರು ಕಂಡ ಕೂಡಲೇ ಅವರನ್ನು ಅಕ್ಕಕ್ಕದವರಿಗೆ ಪರಿಚಯಿಸಿದ ಪ್ರಸಂಗವನ್ನು ನೆನೆದು ಹಾಜಬ್ಬ ರೋಮಾಂಚನಗೊಂಡರು. ಹಾಗೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹತ್ತಿರ ಹೋಗಿ ಊರಿಗೆ ಕಾಲೇಜು ಕಟ್ಟಲು ಒಂದು ಕೋಟಿ ರೂಪಾಯಿ ನೀಡಬೇಕೆಂದು ಕೋರಿದರು.
ಲಕ್ಷಾಂತರ ಗಿಡಗಳನ್ನು ಬೆಳೆಸಿ, ಗಿಡ-ಮರಗಳ ಮಾಹಿತಿ ಕಣಜ ಎಂದೇ ಪ್ರಸಿದ್ದಿ ಯಾಗಿದ್ದಾರೆ ಶ್ರೀಮತಿ ತುಳಸಿ ಗೌಡ. ಈ ಹಿಂದೆ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ವೃಕ್ಷ ದೇವತೆ ಎಂದೇ ಪ್ರಸಿದ್ದಿಯಾಗಿದ್ದಾರೆ. ಅವರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.
ಸರಕು,ಸಾರಿಗೆ ಸಾಮ್ರಾಜ್ಯವನ್ನು ನಿರ್ಮಿಸಿದ,ಉದ್ಯಮಿ ವಿಜಯ ಸಂಕೇಶ್ವರ್ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರು ಸ್ಥಾಪಿಸಿರುವ, ವಿಆರ್ಎಲ್ ಸಂಸ್ಥೆಯು ದೇಶದ ಅತಿ ದೊಡ್ಡ ಸಾರಿಗೆ ಉದ್ಯಮ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪತ್ರಿಕಾ ಲೋಕರಂಗ ಹಾಗೂ ಖಾಸಗಿ ಟಿವಿ ಚಾನಲ್ ಮಾಲೀಕರಾಗಿ ಮಾಲೀಕರಾಗಿ ಯಶಸ್ವಿಯಾಗಿದ್ದಾರೆ. ಅದು ಅವರು ಸಂಸದ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಹಾಕಿ ಕ್ರೀಡಾ ಕ್ಷೇತ್ರದಲ್ಲಿ ಸಾಧಕ ಎಂಪಿ ಗಣೇಶ್ ಭಾರತಕ್ಕೆ ಒಲಿಂಪಿಕ್ ಪದಕ ತಂದವರು. ಪದ್ಮಶ್ರೀ ಪ್ರಶಸ್ತಿ ನನಗೆ ಸಂತಸವನ್ನುಂಟು ಮಾಡಿದೆ. ಪ್ರಶಸ್ತಿ ಎಲ್ಲಾ ಹಾಕಿ ವಿದ್ಯಾರ್ಥಿಗಳಿಗೆ, ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಕೊಡವ ಜನತೆಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಸುಧರ್ಮ ಎಂಬ ಸಂಸ್ಕೃತಭಾಷೆಯ ಪತ್ರಿಕೆಯನ್ನು ನಡೆಸಿಕೊಂಡು ಬಂದವರು ಮೈಸೂರಿನ ದಿ. ಸಂಪತ್ ಕುಮಾರ್ ಹಾಗೂ ಅವರ ಧರ್ಮಪತ್ನಿ ಜಯಲಕ್ಷ್ಮಿ ಅವರಿಗೆ 2020 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಸಂಪತ್ ಕುಮಾರ್ ಇಹಲೋಕ ತ್ಯಜಿಸಿರುವುದರಿಂದ ಜಯಲಕ್ಷ್ಮಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು.
ಲಿಖಿಂಪುರ – ಖೇರಿ ಪ್ರಕರಣದ ತನಿಖೆಯು ಸಮರ್ಪಕವಾಗಿಲ್ಲ. ಒಬ್ಬ ಆರೋಪಿಯನ್ನು ರಕ್ಷಿಸುವ ಉದ್ದೇಶದಿಂದಲೇ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ತೋರುತ್ತಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಲಿಕಿಂಗ್ ಪುರ ಕೇರಿ ಪ್ರಕರಣದಲ್ಲಿ ನ್ಯಾಯ ಸಿಗಬೇಕಾದರೆ ಸ್ವತಂತ್ರ ತನಿಖೆ ಅಗತ್ಯ ಎಂಬುದು ಸುಪ್ರೀಂಕೋರ್ಟ್ ಅಭಿಪ್ರಾಯದಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ರೈತರ ಹತ್ಯೆ ಮಾಡಿದವರ ಜೊತೆಗೆ ಉತ್ತರಪ್ರದೇಶ ಸರ್ಕಾರ ನಿಂತಿದೆ ಎಂಬುದು ಈಗ ಸ್ಪಷ್ಟವಾಗಿದೆ. ರೈತನ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ತಂದೆಗೆ ( ಶ್ರೀ ಅಜಯ್ ಮಿಶ್ರಾ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ) ನರೇಂದ್ರ ಮೋದಿ ಅವರ ರಕ್ಷಣೆ ಇದೆ” ಎಂದು ಅವರು ಆರೋಪಿಸಿದ್ದಾರೆ. ಎಸ್ ಯುವಿ ವಾಹನ ಹರಿಸಿ ನಾಲ್ವರು ರೈತರ ಹತ್ಯೆ ಮತ್ತು ನಂತರದ ಹಿಂಸಾಚಾರದಲ್ಲಿ ನಾಲ್ವರ ಹತ್ತಿ ಪ್ರಕರಣವು ಉತ್ತರಪ್ರದೇಶದ ಲಖಿಂಪುರ- ಖೇರಿಯಲ್ಲಿ ಅಕ್ಟೋಬರ್ 3ರಂದು ನಡೆದಿತ್ತು. ಆಶಿಶ್ ಅವರೇ ರೈತರ ಮೇಲೆ ಎಸ್ ವಿಯು ವಾಹನ ಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಾಕ್ಷಿಗಳನ್ನು ಬೇರೆಬೇರೆ ಎಫ್ ಐಆರ್ ಗಳಲ್ಲಿ ದಾಖಲಿಸಿ ಗೋಜಲು ಮಾಡಲಾಗಿದೆ ಎಂದು ಪೀಠವು ಹೇಳಿದೆ. ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಬಿಟ್ಟರೆ ಉಳಿದ ಆರೋಪಿಗಳ ಮೊಬೈಲ್ ಫೋನ್ ಗಳನ್ನು ಏಕೆ ಜಪ್ತಿ ಮಾಡಿಕೊಂಡಿಲ್ಲ ಎಂದು ಕೋರ್ಟ್ ಪ್ರಶ್ನಿಸಿದೆ. ಉಳಿದ ಆರೋಪಿಗಳು ಮೊಬೈಲ್ ಫೋನ್ ಬಳಸಿಲ್ಲವೇ ಎಂದು ಕೇಳಿದೆ. ತನಿಖೆಯ ಸ್ಥಿತಿಗತಿ ವರದಿಯಲ್ಲಿ ಏನೂ ಇಲ್ಲ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಹತ್ತು ದಿನ ಸಮಯ ಕೊಡಲಾಗಿತ್ತು. ಆದರೆ, ಪ್ರಯೋಗಾಲಯದ ವರದಿಗಳನ್ನೇ ಸಲ್ಲಿಸಲಾಗದೇ ಇದ್ದುದ್ದೇ ಸುಪ್ರೀಂಕೋರ್ಟ್ ಸಿಟ್ಟಿಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಉತ್ತರಪ್ರದೇಶ ಸರ್ಕಾರವನ್ನು ಸುಪ್ರೀಂಕೋರ್ಟ್ ಮೂರನೇ ಬಾರಿ ತರಾಟೆಗೆ ತೆಗೆದುಕೊಂಡಿದೆ. ಪ್ರಮುಖ ಆರೋಪಿ ಆಶಿಶ್ ಅವರನ್ನು ಬಂಧಿಸಿದ ಬಗ್ಗೆ ಸುಪ್ರೀಂಕೋರ್ಟ್ ಅಕ್ಟೋಬರ್ 11ರಂದು ಆಕ್ಷೇಪ ವ್ಯಕ್ತಪಡಿಸಿತ್ತು. ಅದಾದ ಮೂರು ದಿನಗಳ ಬಳಿಕ, ಆಶಿಶ್ ಬಂಧನವಾಗಿತ್ತು. ಸಾಕ್ಷಿಗಳ ಹೇಳಿಕೆ ದಾಖಲು ವಿಚಾರದಲ್ಲಿಯೂ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು.
ತಮಿಳುನಾಡಿನಲ್ಲಿ ಸೋಮವಾರವೂ ಮಳೆ ಮುಂದುವರೆದಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಮಿಳು ನಾಡಿನ ಮೆಟ್ಟೂರು ಜಲಾಶಯದ ನೀರಿನ ಸಂಗ್ರಹ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕರ್ನಾಟಕದ ಜಲಾಶಯಗಳಿಂದ ನೀರನ್ನು ಹೊರ ಬಿಡುತ್ತಿರುವುದು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸೋಮವಾರ ಬೆಳಿಗ್ಗೆ ಮೆಟ್ಟೂರು ಜಲಾಶಯದ ಮಟ್ಟ 118.32 ಅಡಿ ಇತ್ತು. ಗರಿಷ್ಠ ಮಟ್ಟ 120 ಅಡಿ. ಜಲಾಶಯದಲ್ಲಿ 90 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 150 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ. ನದಿಗೆ 100 ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂಬುದನ್ನು ಮೂಲಗಳು ತಿಳಿಸಿವೆ. ರಾಜಧಾನಿ ಚೆನ್ನೈ ವಲಯ ಹಾಗೂ ರಾಜ್ಯದ ಉತ್ತರ ಭಾಗದ ಜಿಲ್ಲೆಗಳಾದ ಚೆಂಗಲ್ ಪೇಟ್, ಕಾಂಚಿಪುರಂ, ತಿರುವಳ್ಳೂರ್, ಮತ್ತು ವೆಲ್ಲೂರಿನಲ್ಲಿ ಮುಂಜಾನೆಯಿಂದ ಮಳೆಯಾಗುತ್ತಿತ್ತು. ಮುಂಜಾಗೃತ ಕ್ರಮವಾಗಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಚೆನ್ನೈನ ಬಹುತೇಕ ರಸ್ತೆಗಳು, ಅಂಡರ್ ಪಾಸ್ ಗಳು ಜಲಾವೃತಗೊಂಡಿದೆ. ಇದರಿಂದ ವಾಹನ ಸವಾರರಿಗೆ ತೊಂದರೆ ಯಾಗಿದೆ. ಜಲಾವೃತ ಆಡಂಬಾಕಂ ಪೊಲೀಸ್ ಠಾಣೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಪರಿಹಾರ ಕಾರ್ಯಾಚರಣೆಗೆ ಚೆನ್ನೈ ಪಾಲಿಕೆಯು ಸುಮಾರು 23 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಿದೆ. ಮಳೆಯಿಂದ ಸಂತ್ರಸ್ತರಾಗಿರುವ ಎರಡು ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 3.36 ಲಕ್ಷ ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ ಸೋಮವಾರ ಬೆಳಗಿನವರೆಗಿನ ಮಾಹಿತಿ ಪ್ರಕಾರ, ಜಲಾವೃತ ಪ್ರದೇಶಗಳ 889 ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಚೆನ್ನೈ 15 ವಲಯಗಳ ಮೇಲುಸ್ತುವಾರಿಗೆ 15 ಐಎಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ನಿಯೋಜಿಸಿದ್ದಾರೆ. 200 ವಿಶೇಷ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ. ತಗ್ಗು ಪ್ರದೇಶಗಳನ್ನು ಆವರಿಸಿರುವ ಕೆಸರು ಹಾಗೂ ಕಸವನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಬುಧವಾರ ಮತ್ತು ಗುರುವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ಚಂಡಮಾರುತ ಉಂಟಾಗಿದ್ದು, ಇದರ ಪರಿಣಾಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸರ್ಕಾರಿ ಏಜೆನ್ಸಿ ಗಳಾದ ಎಚ್ ಜಿಎಂಎಲ್ ಮತ್ತು ಕರ್ನಾಟಕ ರಾಜ್ಯ ಖನಿಜಗಳ ನಿಗಮ ಮರಳು ಗಣಿಗಾರಿಕೆ ಮಾಡಿ ಮಾರಾಟ ಮಾಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದ್ದಾರೆ. ನದಿ, ತೊರೆ, ಹಳ್ಳ, ಕೆರೆ ಜಲಾಶಯಗಳ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಸಿ, ಅಗ್ಗದ ದರದಲ್ಲಿ ಗ್ರಾಹಕರಿಗೆ ಮರಳು ಪೂರೈಕೆ ಮಾಡುವ ಹೊಸ ಮರಳು ನೀತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 50 ಕೋಟಿ ರೂಪಾಯಿಗೂ ಮೇಲ್ಪಟ್ಟ ಟೆಂಡರ್ ಗಳು ಮತ್ತು ಅವುಗಳ ಅಂದಾಜುಗಳ ಪೂರ್ವ ಪರಿಶೀಲನೆ ನಡೆಸಬೇಕಿದೆ. ಅದಕ್ಕೆ ಒಪ್ಪಿಗೆ ಪ್ರಕ್ರಿಯೆ ನಡೆಸಲು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಸರ್ಕಾರ ನಿರ್ಧರಿಸಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಮತ್ತು ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿವಿಧ ನಿರ್ಮಾಣ ಕಾಮಗಾರಿಗಳು, ಸರಕು ಮತ್ತು ಸೇವೆಗಳ ಸಂಗ್ರಹಣೆಯ ಟೆಂಡರ್ ಹಾಗೂ ಅಂದಾಜುಗಳನ್ನು ನ್ಯಾಯಮೂರ್ತಿ ಅಧ್ಯಕ್ಷತೆಯ ಸಮಿತಿಯೇ ಪರಿಶೀಲಿಸಿ ಅಂತಿಮಗೊಳಿಸುತ್ತದೆ. ಸಮಿತಿಯ ಒಪ್ಪಿಗೆಯ ಬಳಿಕ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ, ಗ್ರಾಮೀಣ ವಸತಿ ಯೋಜನೆಗಳಿಗೆ ಮತ್ತು ಗ್ರಾಮೀಣ ಜನರು ಮನೆ ಕಟ್ಟಿಕೊಳ್ಳಲು ರಿಯಾಯಿತಿ ದರದಲ್ಲಿ ಮರಳು ಪೂರೈಕೆ ಮಾಡಲು ನೀತಿಯಲ್ಲಿ ಅನುಮತಿ ನೀಡಲಾಗಿದೆ. ನದಿಯಲ್ಲಿ ಮುಳುಗಿ ಮರಳು ತೆಗೆಯುವ ಪದ್ಧತಿ ದಕ್ಷಿಣ ಕನ್ನಡದಲ್ಲಿ ಇತ್ತು. ಅದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಇದಕ್ಕೆ ಯಾವುದೇ ರೀತಿಯ ಯಂತ್ರಗಳನ್ನು ಬಳಸುವಂತಿಲ್ಲ. ಸ್ಥಳೀಯರು ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಈ ರೀತಿಯಲ್ಲಿ ಮರಳು ತೆಗೆಯಬಹುದಾಗಿದೆ. ಪರಿಸರಕ್ಕೆ ಹಾನಿಯಾಗುವಂತೆ ಮರಳು ತೆಗೆಯುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಈ ಕ್ರಮ ಸ್ವಾಗತಾರ್ಹವಾಗಿದೆ. ಜನ ಮನೆ ಕಟ್ಟುವ ಆತುರದಲ್ಲಿ ನದಿ ಪಾತ್ರದೊಳಗೆ ಎಲ್ಲೆಂದರಲ್ಲಿ ಮರಳು ತೆಗೆಯುವ ಯತ್ನಕ್ಕೆ ತೊಡಗುತ್ತಾರೆ. ಜನರ ಜೀವಹಾನಿಯಾಗದಂತಹ ಸೂಕ್ತ ಮರಳು ತೆಗೆಯುವ ಸ್ಥಳಗಳನ್ನ ಸರ್ಕಾರವೇ ಗುರುತಿಸುವುದು ಒಳ್ಳೆಯದು. ಅಂತಹ ತಾಣಗಳಲ್ಲಿ ಮುನ್ನೆಚ್ಚರಿಕೆಯಾಗಿ ಅಗ್ನಿ ಶಾಮಕ ದಳದ ವ್ಯವಸ್ಥೆ ಮಾಡುವುದು ಬಹಳ ಸೂಕ್ತವಾಗಿದೆ.