ದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಆರಂಭಿಸಿರುವ ‘ರಾಮಾಯಣ ಯಾತ್ರೆ’ಗೆ ವಿಧ್ಯುಕ್ತ ಚಾಲನೆ ನೀಡಲಾಗಿದೆ. ದಿಲ್ಲಿಯ
ಸಫ್ದರ್ ಜಂಗ್ ನಿಲ್ದಾಣದಿಂದ ಸಂಜೆ 6:30ಕ್ಕೆ ಪ್ರಯಾಣ ಆರಂಭಿಸಿದ ಐಷಾರಾಮಿ ಹವಾನಿಯಂತ್ರಿತ ರೈಲು, 17 ದಿನಗಳ ಬಳಿಕ ಸಫ್ದರ್ ಜಂಗ್ ನಿಲ್ದಾಣಕ್ಕೆ ಮರಳಲಿದೆ. ಉತ್ತರ ಪ್ರದೇಶದ ಅಯೋಧ್ಯೆ ಯಲ್ಲಿ ರೈಲು ಮೊದಲ ನಿಲುಗಡೆ ಹೊಂದಿದೆ. ‘ದೇಖೋ ಅಪ್ನಾ ದೇಶ್’ (ನಮ್ಮ ದೇಶ ನೋಡಿ) ಅಭಿಯಾನದ ಅಡಿಯಲ್ಲಿ ಐಆರ್ ಸಿಟಿಯು ಈ ಪ್ಯಾಕೇಜ್ ಯಾತ್ರೆ ಆರಂಭಿಸಿದೆ.
ಹವಾನಿಯಂತ್ರಿತ ರೈಲಿನಲ್ಲಿ ‘ರಾಮಾಯಣ ಯಾತ್ರೆ’ ಕೈಗೊಳ್ಳುವ ಪ್ರಯಾಣಿಕರು ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಂಡಿರಬೇಕು. 18 ವರ್ಷ ಮೇಲ್ಪಟ್ಟವರು ಮಾತ್ರ ಪ್ರಯಾಣ ಕೈಗೊಳ್ಳಬಹುದು ಎಂಬ ನಿಯಮಗಳನ್ನು ವಿಧಿಸಲಾಗಿದೆ.
ಎರಡು ಅತ್ಯಾಧುನಿಕ ರೆಸ್ಟೋರೆಂಟ್ ಗಳನ್ನು ರೈಲು ಹೊಂದಿದೆ. ಅಯೋಧ್ಯೆ, ಜನಕಪುರ, ಸೀತಾಮಂಡಿ, ಕಾಶಿ, ಪ್ರಯಾಗ್ ರಾಜ್, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರ ಸೇರಿದಂತೆ ಶ್ರೀರಾಮನಿಗೆ ಸಂಬಂಧಿಸಿದ ಪ್ರಮುಖ ಕ್ಷೇತ್ರಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡನೆಯ ಸಂಚಾರವು ಡಿಸೆಂಬರ್ 12 ರಿಂದ ಆರಂಭವಾಗಲಿದೆ. ಅಯೋಧ್ಯೆಯು ಈ ಯಾತ್ರೆಯ ಮೊದಲ ಕ್ಷೇತ್ರವಾದರೆ, ರಾಮೇಶ್ವರ ಕೊನೆಯ ಕ್ಷೇತ್ರವಾಗಿದೆ ಎಂಬ ಮಾಹಿತಿ ದೊರೆತಿದೆ.
ರೈಲ್ವೆ ಇಲಾಖೆ ತಿಳಿಸಿರುವ ಪ್ರಯಾಣ ದರ ಹೀಗಿದೆ – ಪ್ರತಿ ಪ್ರಯಾಣಿಕರಿಗೆ
82,950ರೂ. -2ಎಸಿ.
1,02,095ರೂ.- 1ಎಸಿ.
ಡಿ:12 ರೈಲ್ವೆ ‘ರಾಮಾಯಣ ಯಾತ್ರೆ’
ಮಾಲಿನ್ಯಯುಕ್ತ ದೆಹಲಿ, ಕೋವಿಡ್ ಆತಂಕದಲ್ಲಿ
ದೀಪಾವಳಿ ಹಿನ್ನೆಲೆಯಲ್ಲಿ, ದೇಶದ ಹಲವು ನಗರಗಳಲ್ಲಿ ಮಿತಿಮೀರಿದ ವಾಯು ಮಾಲಿನ್ಯದಿಂದ ಕೋವಿಡ್ ಸಂಖ್ಯೆ ಹೆಚ್ಚಳವಾಗುವ ಕಾರಣದ ಬಗ್ಗೆ ವೈದ್ಯರು ಎಚ್ಚರಿಕೆಯನ್ನು ನೀಡಿದ್ದಾರೆ.
ಚಳಿಗಾಲ, ವಿಷಗಾಳಿ ಮತ್ತು ಕೋರೋನಾ ಬಾಧೆಗಳಿಂದ ದೇಶದಾದ್ಯಂತ ಶ್ವಾಸ ಸಂಬಂಧಿತ ಸಮಸ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವ ಆತಂಕವನ್ನು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ವ್ಯಕ್ತಪಡಿಸಿದ್ದಾರೆ.
“ಹಲವು ಜನರಲ್ಲಿ ಅಲರ್ಜಿಯ ಕೆಮ್ಮು, ಅಸ್ತಮಾ, ಸಿ.ಓ.ಪಿ.ಡಿ ಮತ್ತು ಇತರ ಶ್ವಾಸಕೋಶ ಸಂಬಂಧಿತ ಅನಾರೋಗ್ಯಗಳು ಗೌಪ್ಯವಾಗಿರುತ್ತದೆ. ಹೊರಗಿನ ವಾತಾವರಣದ ಪ್ರೇರಣೆ ಮೇಲೆ ಸಮಸ್ಯೆಗಳು ಉದ್ಭವಿಸಿ ಕೊಂಡು ಜನರನ್ನು ಬಾಧಿಸಲಾರಂಭಿಸುತ್ತದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ನೈಜುಲೇಜರ್ ಅಥವಾ ಇನ್ಹೇಲರ್ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ರೀತಿ ದುರ್ಬಲ ಶ್ವಾಸಕೋಶ ಹೊಂದಿರುವವರಿಗೆ ಕೋರೋನಾ ಸೋಂಕು ತಗಲಿ ಮರಣ ಹೊಂದುವ ಅಪಾಯ ಹೆಚ್ಚಿದೆ” ಎಂದು ಗುಲೇರಿಯಾ ತಿಳಿಸಿದ್ದಾರೆ.
ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ವಾಯುಮಾಲಿನ್ಯ ಮಿತಿಮೀರಿದ ಸಂದರ್ಭದಲ್ಲಿ, ಮೊದಲಿಗೆ ಮಕ್ಕಳು ತೊಂದರೆಗೊಳಗಾಗುತ್ತಾರೆ. ಚಿಕಿತ್ಸೆ ವಾರ್ಡಗಳಿಗೆ ಹೆಚ್ಚು ಪ್ರಮಾಣದಲ್ಲಿ ಮಕ್ಕಳು ಉಸಿರಾಟ ಸಮಸ್ಯೆ, ದೀರ್ಘಕಾಲದ ಶೀತ -ಕೆಮ್ಮು ಸಮಸ್ಯೆಗಳಿಂದಾಗಿ ದಾಖಲಾಗುತ್ತಾರೆ. ಹೀಗಾಗಿ ಮಕ್ಕಳು ಹೆಚ್ಚು ಜಾಗೃತರಾಗಿರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೆಳಿಗ್ಗಿನ ವೇಳೆಯಲ್ಲಿ ವಾಹನದ ಓಡಾಟ ಹೆಚ್ಚಾಗಿರುವ ಕಾರಣ ಜನರ ಓಡಾಟ ಕಡಿಮೆಗೊಳಿಸುವುದು ಉತ್ತಮ ಎಂದು ಗುಲೇರಿಯಾ ಅವರು ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ತಿಳಿಹೇಳಿದ್ದಾರೆ.
ಡ್ರೋನ್ ಮೂಲಕ ಕೊಲ್ಲುವುದು ಹೇಡಿತನ – ಕಧಿಮಿ
ಡ್ರೋನ್ ಮೂಲಕ ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕಧಿಮಿ ಅವರ ಹತ್ಯೆಗೆ ಸಂಚು ರೂಪಿಸಿ ಪ್ರಧಾನಿ ನಿವಾಸದ ಮೇಲೆ ಧಾಳಿ ನಡೆಸಲಾಗಿದೆ.
ಈ ಧಾಳಿ ವಿಫಲವಾಗಿದ್ದು, ಪ್ರಧಾನಿ ಅಲ್ ಕಧಿಮಿ ಅವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಇರಾಕ್ ಸಂಸತ್ತಿಗೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳಲು ಉಗ್ರ ಸಂಘಟನೆಯು ನಿರಾಕರಿಸಿತ್ತು. ಈ ಧಾಳಿಯಿಂದಾಗಿ ಇರಾಕ್ ದೇಶದಲ್ಲಿ ಉದ್ಭವಿಸಿರುವ ಅನಿಶ್ಚಿತ ಮತ್ತು ಆತಂಕದ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.ಈ ಡ್ರೋನ್ ಧಾಳಿಯಲ್ಲಿ ಏಳು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಇರಾಕ್ ನ ಇಬ್ಬರು ಅಧಿಕಾರಿಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಈ ಧಾಳಿಯ ಬಳಿಕ ಪ್ರಧಾನಿ ಮುಸ್ತಾಫಾ ಅಲ್ ಕಧಿಮಿ ಅವರು ‘ನಾನು ನನ್ನ ಜನರ ನಡುವೆ ಕ್ಷೇಮದಿಂದ ಇದ್ದೇನೆ. ದೇವರಿಗೆ ಕೃತಜ್ಞತೆಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಇರಾಕ್ ನ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು ‘ಹೇಡಿತನದ ರಾಕೆಟ್ ಮತ್ತು ಡ್ರೋನ್ ಅನ್ನು ಬಳಸಿ ಧಾಳಿ ನಡೆಸುವುದರಿಂದ ನಾಡು ಮತ್ತು ಭವಿಷ್ಯವನ್ನು ಕಟ್ಟಲಾಗದು’ ಎಂದು ಪ್ರತಿಪಾದಿಸಿದ್ದಾರೆ.
ಟಿ-20 ಸೆಮಿಗೆ ಕಿವೀಸ್ ಲಗ್ಗೆ
ಟಿ-20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಗೆ ನ್ಯೂಜಿಲೆಂಡ್ ತಂಡ ಪ್ರವೇಶಿಸುವ ಮೂಲಕ ಭಾರತ ತಂಡದ ಕನಸು ನುಚ್ಚು- ನೂರಾಗಿದೆ. ಅಫ್ಘಾನಿಸ್ತಾನ್ ವಿರುದ್ಧ ಅಬುಧಾಬಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಜಯಗಳಿಸಿ ನಾಲ್ಕರ ಘಟ್ಟ ಪ್ರವೇಶಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನವು 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳನ್ನು ಮಾತ್ರಗಳಿಸಿತ್ತು. ನ್ಯೂಜಿಲೆಂಡ್ ತಂಡದ ಆಕ್ರಮಣಕಾರಿ ಬೌಲರ್ ಗಳ ದಾಳಿಗೆ ಅಫ್ಘಾನಿಸ್ತಾನ ತಂಡವು ಸೋತು ಶರಣಾಯಿತು. 125 ರನ್ ಗಳನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡವು 18.1 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿ ಜಯಭೇರಿ ಬಾರಿಸಿತು.
ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್ (40) ಮತ್ತು ಡೆವೊನ್ ಕಾನ್ವೇ (36) ಅವರ 68 ರನ್ ಗಳ ಜೊತೆಯಾಟದಿಂದ ಗೆಲುವು ಸಾಧಿಸಿತು.
ನ್ಯೂಜಿಲೆಂಡ್ ತಂಡದ ಗೆಲುವಿನಿಂದಾಗಿ ಭಾರತ ತಂಡವು ಕೊನೆಯ ಪಂದ್ಯವನ್ನು ಆಡುವ ಮುನ್ನವೇ, ಟಿ-20ವಿಶ್ವಕಪ್ ನಿಂದ ಹೊರ ಬಿದ್ದಿರುವುದು ಅಭಿಮಾನಿಗಳಲ್ಲಿ ಭಾರಿ ನಿರಾಶೆ ಉಂಟುಮಾಡಿದೆ. ಉಳಿದಿರುವ ನಮೀಬಿಯಾ ತಂಡದ ವಿರುದ್ಧದ ಪಂದ್ಯ ನಾಮಕವಸ್ತೆ ಆಗಿದೆ.
ಸಮಾಜ ಸೇವೆಗೆ ಸ್ಪೂರ್ತಿ- ಪುನೀತ್
ಪುನೀತ್ ಅವರು 46 ವರ್ಷಗಳ ಕಾಲ ಬದುಕಿದ್ದರು ಅವರು ಮಾಡಿದ ಸಾಧನೆ ಬಹುದೊಡ್ಡದು. ಅನೇಕ ಸದಭಿರುಚಿ ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳ ಹೃದಯಗಳಲ್ಲಿ ಮನೆ ಮಾಡಿದ್ದಾರೆ. ಅವರು ತಮ್ಮ ಜೀವನದಲ್ಲಿ ರೂಡಿಸಿಕೊಂಡಿದ್ದ ಮೌಲ್ಯಗಳು ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಶಿವಮೊಗ್ಗ ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು ಹೇಳಿದ್ದಾರೆ.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ “ಅಪ್ಪು- ಅಮರ ಪುನೀತ್ ರಾಜಕುಮಾರ್”ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪ್ಪು ಅಭಿಮಾನಿಗಳ ಹೃದಯದಲ್ಲಿ ಈಗಲೂ ಚಿರಸ್ಥಾಯಿಯಾಗಿದ್ದಾರೆ. ಇದಕ್ಕೆ ಕಾರಣ ಅವರ ಪರಿಪೂರ್ಣ ವ್ಯಕ್ತಿತ್ವ ಎಂದು ಅವರು ತಿಳಿಸಿದರು.
ಎಂಡೋಸಲ್ಫಾನ್ ಸಂತ್ರಸ್ತರ ಪರ ದನಿಯತ್ತಿದ್ದರು.ಆ ಮೂಲಕ ಪುನೀತ್ ಅವರು ಸರ್ಕಾರ ಮತ್ತು ಸಂಬಂಧಪಟ್ಟ ಕಂಪನಿಯವರು ಪರಿಹಾರ ನೀಡುವಷ್ಟರ ಮಟ್ಟಿಗೆ ಹೋರಾಟವನ್ನು ರೂಪಿಸಿದ್ದರು. ಇದು ಅವರಲ್ಲಿ ಸಮಾಜದ ಪರವಾಗಿದ್ದ ಬದ್ಧತೆಯ ಪ್ರತೀಕ ಎಂದರು.
ಕಾರ್ಯಕ್ರಮದಲ್ಲಿ ಗೋಣಿಬೀಡು ಶೀಲ ಸಂಪಾದನಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು.
ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರು ತಮ್ಮ ಗಾಯನದ ಮೂಲಕ ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸಿದರು. ಗಾಯಕರಾದ ಋತ್ವಿಕ್ ಮುರುಳಿಧರ್, ಗಾಯಕಿ ವಿದುಷಿ ಸುರೇಖಾ ಹೆಗಡೆ, ಚಾರ್ವಿ ಮುರುಳಿಧರ್, ಎಸ್.ಪಿ. ವಿಶಾಲ್, ಸೂಡಾ ಮಾಜಿ ಅಧ್ಯಕ್ಷ ರಮೇಶ್, ಸದ್ಭಾವನಾ ಟ್ರಸ್ಟ್ ಅಧ್ಯಕ್ಷ ಶ್ರೀಕಾಂತ್, ನಿರ್ಮಲಾ ಕಾಶಿ ಇನ್ನಿತರರು ಉಪಸ್ಥಿತರಿದ್ದರು.
ಧಾರಾಕಾರ ಮಳೆ: ಚೆನ್ನೈ ಜಲಾವೃತ
ಚೆನ್ನೈ ಮತ್ತು ಹೊರವಲಯದ ಪ್ರದೇಶಗಳಲ್ಲಿ ಕಳೆದ ಒಂದೆರಡು ದಿನಗಳಿಂದ ಧಾರಾಕಾರ ಮಳೆ ಸುರಿದಿದ್ದು, ಇದರಿಂದ ಚೆನ್ನೈ ನಗರ ಜಲಾವೃತಗೊಂಡಿದೆ.
2015ರ ಪ್ರವಾಹದ ಕರಾಳ ನೆನಪನ್ನು ಮರುಕಳಿಸಿದೆ. ತಮಿಳುನಾಡುಅತಿ ಹೆಚ್ಚು ಮಳೆಯಾಗಿರುವುದು ಚೆನ್ನೈನಲ್ಲಿ. ಎರಡರಿಂದ ಮೂರು ಅಡಿಗಳಷ್ಟು ನೀರು ನಿಂತಿರುವುದರಿಂದ ವಾಹನ ಸಂಚಾರಕ್ಕೂ ತೊಡಕುಂಟಾಗಿತ್ತು. ರೈಲು ಹಳಿಗಳ ಮೇಲೆ ಭಾರಿ ಪ್ರಮಾಣದ ನೀರು ನಿಂತಿರುವುದರಿಂದ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ವಿಮಾನದ ಹಾರಾಟವು ಸಹ ವ್ಯತ್ಯಯಗೊಂಡಿದೆ. ಮಳೆಯಲ್ಲಿ ಸಿಲುಕಿಕೊಂಡಿದ್ದ 81 ಜನರನ್ನು ರಕ್ಷಿಸಲಾಗಿದೆ. ಚೆನ್ನೈ ನಗರಕ್ಕೆ ಕುಡಿಯುವ ನೀರನ್ನು ಪೂರೈಸುತ್ತಿರುವ ಪ್ರಮುಖ ಮೂಲಗಳಾದ ಚೆಂಬರಂಬಕ್ಕಮ್ ಮತ್ತು ,ಪುಝಲ್ ಜಲಾಶಯಗಳಿಂದ ನೀರು ಹೊರಬಿಡಲಾಗಿದೆ.
ನಿನ್ನೆ ರಾತ್ರಿ ಚೆಂಬರಂಬಕ್ಕಮ್ ನಿಂದ 2000 ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ. ಗ್ರೇಟರ್ ಚೆನ್ನೈ ಮಹಾನಗರಪಾಲಿಕೆಯು 160 ಪುನರ್ವಸತಿ ಕೇಂದ್ರ ಆರಂಭಿಸಿದೆ.
ಚೆನ್ನೈ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಶೀಘ್ರ ಕೈಗೊಳ್ಳುವಂತೆ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ರಾಜ್ಯದ ಸಂಸದರು ಮತ್ತು ಶಾಸಕರು ಪರಿಹಾರ ಕಾರ್ಯಗಳಲ್ಲಿ ಕೈಜೋಡಿಸಬೇಕು. ಮತ್ತು ದೀಪಾವಳಿಗಾಗಿ ಊರಿಗೆ ತೆರಳಿರುವ ಜನರು ಇನ್ನೂ ಮೂರುದಿನ ಚೆನ್ನೈಗೆ ಮರುಕಳಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.
ಪುನೀತ್, ಅಭಿಮಾನಿಗಳ ಆತ್ಮಶ್ರೀ – ಅಮರಶ್ರೀ
” ತಮ್ಮ ಪುನೀತ್ ನನಗೆ ಕೇವಲ ಸಹೋದರ ಅಲ್ಲ ನನ್ನ ಮಗ ಇದ್ದ ಹಾಗೆ ಅವನನ್ನು ಚಿಕ್ಕಂದಿನಿಂದಲೂ ಅತ್ಯಂತ ಪ್ರೀತಿಯಿಂದ ಬೆಳೆಸಿದ್ದೇವೆ. ಅವನ ಆಟ, ಪಾಠ ಬಹಳ ವಿಶಿಷ್ಟವಾಗಿದ್ದವು. ನಮಗೆಲ್ಲಾ ಅಚ್ಚು ಮೆಚ್ಚಿ ನವನಾಗಿದ. ಅವನ ಅಗಲಿಕೆ ನಮ್ಮ ಕುಟುಂಬಕ್ಕೆ ಬಲಗೈ ಹೋದಂತಾಗದೆ. ಪುನೀತ್ ಅಭಿಮಾನಿಗಳಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾರು ಕೂಡ ಪ್ರಾಣ ಕಳೆದುಕೊಳ್ಳ ಬೇಡಿ. ಇದರಿಂದ ನಿಮ್ಮ ಮನೆಯವರಿಗೆ ತೊಂದರೆ ಆಗುತ್ತದೆ. ಮತ್ತೆ ಪುನೀತ್ ಆತ್ಮಕ್ಕೆ ನೋವಾಗುತ್ತದೆ. ಅದರ ಬದಲಾಗಿ ಅವನ ಆದರ್ಶಗಳನ್ನು ಪಾಲಿಸಿ. ಬಡಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ, ಅಪ್ಪುಗೆ ಇದರಿಂದ ಸಂತೋಷವಾಗುತ್ತದೆ ಎಂದು ಪುನೀತ್ ಅವರ ಹಿರಿಯಣ್ಣ ಶಿವರಾಜ್ ಕುಮಾರ್ ಅವರು ಅಭಿಮಾನಿಗಳಲ್ಲಿ ಕಳಕಳಿಯ ಮನವಿ ಮಾಡಿದರು”.
ಪುನೀತ್ ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಿವಣ್ಣ “ಪದ್ಮಶ್ರೀ, ಪದ್ಮಭೂಷಣ ಇವೆಲ್ಲಕ್ಕಿಂತ ಅಪ್ಪು ಅಭಿಮಾನಿಗಳ ಮನಸ್ಸಿನಲ್ಲಿ ಅಮರಶ್ರೀ ಆಗಿದ್ದಾನೆ. ಅಭಿಮಾನಿಗಳ ಆತ್ಮದಲ್ಲೇ ಶ್ರೀ ಅವನು” ಎಂದರು.
ಮಹಾರಾಷ್ಟ್ರ ಅಸ್ಪತ್ರೆ: ಅಗ್ನಿ ಅನಾಹುತ.
ಮಹಾರಾಷ್ಟ್ರದಲ್ಲಿನ ಅಹ್ಮದ್ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಗಢ ಸಂಭವಿಸಿದೆ. ಈ ಅಗ್ನಿ ಅವಗಢದಲ್ಲಿ 11 ರೋಗಿಗಳು ಸಜೀವ ದಹನವಾಗಿದ್ದಾರೆ. ಶನಿವಾರ ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಜಿಲ್ಲಾಸ್ಪತ್ರೆಯ ಐಸಿಯು ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೃತರಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರ ಇದು ಕೋವಿಡ್ ಸೋಂಕಿನಿಂದ ತೀವ್ರ ಉಸಿರಾಟ ಸಮಸ್ಯೆಯಿಂದಾಗಿ ಐಸಿಯುನಲ್ಲಿ 20 ಜನ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಅಗ್ನಿ ಅವಘಡ ಸಂಭವಿಸಿದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುವ ಅಷ್ಟರಲ್ಲಿ ಅಗ್ನಿ ಕೆನ್ನಾಲಿಗೆಗೆ ಹತ್ತು ಜನ ಬಲಿಯಾಗಿದ್ದು. ಅದರಲ್ಲಿ ಕೆಲವರು ಉಸಿರುಗಟ್ಟಿ ಮೃತ ಪಟ್ಟಿದ್ದರು. ಬೆಂಕಿ ಕಾಣಿಸಿಕೊಂಡ ಕೂಡಲೇ ಐಸಿಯುನಲ್ಲಿದ್ದ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೆಂದು ಶಂಕಿಸಲಾಗಿದೆ. ಈ ಸಂಬಂಧ ಇಂಧನ ಸಚಿವ ನಿತಿನ್ ರಾವುತ್ ಆದೇಶಿಸಿದ್ದಾರೆ. ಅಗ್ನಿದುರಂತಕ್ಕೆ ನಿರ್ಲಕ್ಷ ಕಾರಣವೆಂದು ತಿಳಿದು ಬಂದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘಟನೆಯಲ್ಲಿ ವೃತ್ತ ಪಟ್ಟವರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಹಾಗೂ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಸಮೀರ್ ವಾಂಖೆಡೆಗೆ ಕೊಕ್
ದೇಶದೆಲ್ಲೆಡೆ ಸಂಚಲನ ಮೂಡಿಸಿರುವ ಅಂತಹ ಐಷಾರಾಮಿ ಹಡಗಿನಲ್ಲಿ ನಡೆದರೆ ವೇಳೆ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಹಲವರು ಡ್ರಗ್ಸ್ ಸೇವಿಸಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯಿಂದ ಮಾದಕ ವಸ್ತು ನಿಯಂತ್ರಣ ಸಂಸ್ಥೆ ಮುಂಬೈ ವಿಭಾಗದ ಅಧಿಕಾರಿ ಸಮೀರ್ ವಾಂಖೆಡೆಗೆ ಕೊಕ್ ನೀಡಿ ಆಸ್ಥಾನಕ್ಕೆ ಐಪಿಎಸ್ ಹಿರಿಯ ಅಧಿಕಾರಿ ಸಂಜಯ್ ಕುಮಾರ್ ಸಿಂಗ್ ಅವರಿಗೆ ತನಿಖೆಯ ಹೊಣೆ ನೀಡಲಾಗಿದೆ.
ಸಮೀರ್ ವಾಂಖೆಡೆ ವಿರುದ್ಧ ಲಂಚ ಹಾಗೂ ಸುಲಿಗೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಡ್ರಗ್ಸ್ ಪ್ರಕರಣ ಸೇರಿದಂತೆ ವಾಂಖೆಡೆ ತನಿಖೆ ನಡೆಸುತ್ತಿದ್ದ ಆರು ಕೇಸ್ ಗಳನ್ನು ಸಂಜಯ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ವಹಿಸಿಕೊಡಲಾಗಿದೆ.
ಇಷ್ಟೆಲ್ಲಾ ಆರೋಪಗಳು ಕೇಳಿ ಬಂದರೂ ಸಹ ಸಮೀರ್ ವಾಂಖೆಡೆ ಅವರನ್ನು ಎನ್ ಸಿಬಿ ಮುಂಬೈ ವಲಯದ ನಿರ್ದೇಶಕರಾಗಿಯೇ ಮುಂದುವರೆಯಲಿದ್ದಾರೆ ಎಂದು ತಿಳಿದುಬಂದಿದೆ.
ವಾಂಖೆಡೆ ವಿರುದ್ಧ ತನಿಖೆಯಾಗಬೇಕು ಎಂದು ಎನ್ಸಿಪಿ ಮುಖಂಡ ಮಲ್ಲಿಕ್ ಒತ್ತಾಯಿಸಿದ್ದಾರೆ. ಸಮೀರ್ ವಿರುದ್ಧ ಇತ್ತೀಚೆಗೆ ಎನ್ ಸಿಬಿಯು ತನಿಖೆ ಆರಂಭಿಸಿದೆ, ಆದರೆ “ಪ್ರಕರಣದ ತನಿಖೆ ನಡೆಸಲು ನಾನು ಎಸ್ಐಟಿಗೆ ಸಹಕಾರ ನೀಡುತ್ತೇನೆ” ಎಂದು ಸಮೀರ್ ತಿಳಿಸಿದ್ದಾರೆ.
ಬಿಟ್ ಕಾಯಿನ್ ಆರೋಪಿ ಬಂಧನ
ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮಾಡಿಸಿದಂತಹ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮತ್ತು ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಹಾಗೂ ವೆಬ್ಸೈಟ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿ ಶ್ರೀಕಿ ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಎರಡು ತಿಂಗಳಿನಿಂದ ಜೀವನ್ ಭೀಮಾ ನಗರದಲ್ಲಿರುವ ಪಂಚತಾರಾ ಹೋಟೆಲ್ ನಲ್ಲಿ ನೆಲೆಸಿದ್ದ. ಶ್ರೀಕಿಯನ್ನ ಭೇಟಿಮಾಡಲು ಹೋಟೆಲ್ ಗೆ ಬಂದಿದ್ದ ಉದ್ಯಮಿ ವಿಷ್ಣುಭಟ್ ಅನುಮತಿ ಇಲ್ಲದೆ ಹೋಟೆಲ್ ಕೊಠಡಿಗೆ ನುಗ್ಗಲು ಯತ್ನಿಸಿದ್ದ. ವಿಷ್ಣುಭಟ್ ನನ್ನು ಭದ್ರತಾಸಿಬ್ಬಂದಿ ತಡೆದ ಕಾರಣ ಸಿಬ್ಬಂದಿಯ ಮೇಲೆ ಕೋಪಗೊಂಡು ಶ್ರೀಕಿ ಮತ್ತು ಆತನ ಸ್ನೇಹಿತ ಹಲ್ಲೆ ನಡೆಸಿದ್ದರು. ಅಲ್ಲದೆ ಶ್ರೀಕಿ ಇದ್ದ ಕೊಠಡಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದು ಕೆಲವೊಂದು ವಸ್ತುಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೂ ಮಧ್ಯ ಮತ್ತು ಡ್ರಗ್ಸ್ ಸೇವನೆ ಶಂಕೆಯ ಮೇರೆಗೆ ಶ್ರೀಕಿಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
