ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಲ್ಲಿ ಭಾರಿ ಮಳೆ ಆರ್ಭಟ ಮುಂದುವರಿದಿದೆ. ಜೊತೆಗೆ ಮುಂದಿನ 48 ಗಂಟೆಗಳಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರೊಂದಿಗೆ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲಾ ರಾಜ್ಯಗಳಿಗೂ ತಟ್ಟಿದೆ.
ಸೋಮವಾರ ಉಡುಪಿ ಜಿಲ್ಲೆಯ ಹೆಬ್ರಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬೆಳಗಾವಿ ಜಿಲ್ಲೆಯ ಹೋಳಿನಗರಪುರ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ಭಾರಿ ಮಳೆಯಾಗಿದೆ.
ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಕೋಲಾರ, ಮೈಸೂರು, ಮಂಡ್ಯ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮತ್ತು ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ ಚಿಕ್ಕಮಗಳೂರು ಕೊಡಗು ಹಾಗೂ ಹಾಸನದಲ್ಲಿ ನವೆಂಬರ್ 11 ಮತ್ತು 12 ರಂದು ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ನೀಡಿದೆ.
ನವೆಂಬರ್ 9 ಮತ್ತು 10 ರಂದು ಕೆಲವು ಕಡೆ ಗುಡುಗು ಸಿಡಿಲಿನಿಂದ ಕೂಡಿದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮತ್ತೆ ಮಳೆ… ಹಲವೆಡೆ ಯಲ್ಲೊ ಅಲರ್ಟ್
ಕನ್ನಡಿಗರ ಮುಡಿಗೆ ಪದ್ಮ ಪುರಸ್ಕಾರ
ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕದ ಅನೇಕ ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ನೀಡಲಾಯಿತು.
ಶ್ರೀ ವಿಶ್ವೇಶತೀರ್ಥ ಶ್ರೀ ಪಾದರಿಗೆ ನೀಡಲಾದ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿಯನ್ನು , ಹಾಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಮಾನ್ಯ ರಾಷ್ಟ್ರಪತಿಗಳಿಂದ
ಪ್ರಶಸ್ತಿ ಸ್ವೀಕರಿಸಿದರು.
ಧಾರ್ಮಿಕ ಕ್ಷೇತ್ರದಲ್ಲಿದ್ದು ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಅವರ ಅನೇಕ ಸಮಾಜಪರ ಕಾಳಜಿಗಳು ಉಳಿದ ಮಠಾಧೀಶರಿಗೆ ಮಾದರಿ ಎನಿಸಿವೆ. ಸನಾತನ ಹಿಂದೂ ಧರ್ಮ ರಕ್ಷಣೆಯಲ್ಲಿ ಸರಳ ನೀತಿಯನ್ನು ಪ್ರತಿಪಾದಿಸಿದ ಶ್ರೀಗಳು, ತಮ್ಮದೇ ಆದ ವಿಚಾರಗಳಿಂದ ಅನೇಕರಿಗೆ ಸ್ಪೂರ್ತಿ ನೀಡಿದ್ದಾರೆ. ಜೀವಿತ ಕಾಲದಲ್ಲಿಯೇ ಹುಡುಕಿಕೊಂಡು ಬರಬೇಕಾಗಿದ್ದ, ದೇಶಸಮ್ಮಾನ ಅವರಿಗೆ ಮರಣೋತ್ತರ ಸಂದಿದೆ.

ಕಿತ್ತಲೆ ಮಾರಿ ಶಾಲೆ ಕಟ್ಟಿದ ಮಂಗಳೂರಿನ ಅಕ್ಷರ ಸಂತ ಹರೇಕಳ ಹಾಜಬ್ಬ, ಕಾಡಿನ ವೃಕ್ಷ ದೇವತೆ ಎಂದೇ ಹೆಸರುವಾಸಿಯಾದ ಅಂಕೋಲದ ತುಳಸಿ ಗೌಡ, ಕರ್ನಾಟಕದ ನೆಲದಲ್ಲಿ ಸರಕು ಸಾರಿಗೆ ಸಾಮ್ರಾಜ್ಯವನ್ನು ನಿರ್ಮಿಸಿದ ಶ್ರೀ.ವಿಜಯ ಸಂಕೇಶ್ವರ ಮತ್ತು ಭಾರತೀಯ ಹಾಕಿ ತಂಡದ ನಾಯಕರಾಗಿ ಘನತೆಯನ್ನು ಎತ್ತರಕ್ಕೆರಿಸಿದ ಕೊಡಗಿನ ಯೋಧ ಎಂ. ಪಿ. ಗಣೇಶ್ ಹಾಗೂ ಮೈಸೂರಿನ ಸುಧರ್ಮ ಸಂಸ್ಕೃತ ಪತ್ರಿಕೆಯ ದಿ. ಸಂಪತ್ ಕುಮಾರ್, ಜಯಲಕ್ಷ್ಮಿ ಇವರುಗಳಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.
ಹಾಜಬ್ಬ ಅವರನ್ನು ಪ್ರಧಾನಿ ಅವರು ಕಂಡ ಕೂಡಲೇ ಅವರನ್ನು ಅಕ್ಕಕ್ಕದವರಿಗೆ ಪರಿಚಯಿಸಿದ ಪ್ರಸಂಗವನ್ನು ನೆನೆದು ಹಾಜಬ್ಬ ರೋಮಾಂಚನಗೊಂಡರು. ಹಾಗೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹತ್ತಿರ ಹೋಗಿ ಊರಿಗೆ ಕಾಲೇಜು ಕಟ್ಟಲು ಒಂದು ಕೋಟಿ ರೂಪಾಯಿ ನೀಡಬೇಕೆಂದು ಕೋರಿದರು.
ಲಕ್ಷಾಂತರ ಗಿಡಗಳನ್ನು ಬೆಳೆಸಿ, ಗಿಡ-ಮರಗಳ ಮಾಹಿತಿ ಕಣಜ ಎಂದೇ ಪ್ರಸಿದ್ದಿ ಯಾಗಿದ್ದಾರೆ ಶ್ರೀಮತಿ ತುಳಸಿ ಗೌಡ. ಈ ಹಿಂದೆ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ವೃಕ್ಷ ದೇವತೆ ಎಂದೇ ಪ್ರಸಿದ್ದಿಯಾಗಿದ್ದಾರೆ. ಅವರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.
ಸರಕು,ಸಾರಿಗೆ ಸಾಮ್ರಾಜ್ಯವನ್ನು ನಿರ್ಮಿಸಿದ,ಉದ್ಯಮಿ ವಿಜಯ ಸಂಕೇಶ್ವರ್ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರು ಸ್ಥಾಪಿಸಿರುವ, ವಿಆರ್ಎಲ್ ಸಂಸ್ಥೆಯು ದೇಶದ ಅತಿ ದೊಡ್ಡ ಸಾರಿಗೆ ಉದ್ಯಮ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪತ್ರಿಕಾ ಲೋಕರಂಗ ಹಾಗೂ ಖಾಸಗಿ ಟಿವಿ ಚಾನಲ್ ಮಾಲೀಕರಾಗಿ ಮಾಲೀಕರಾಗಿ ಯಶಸ್ವಿಯಾಗಿದ್ದಾರೆ. ಅದು ಅವರು ಸಂಸದ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಹಾಕಿ ಕ್ರೀಡಾ ಕ್ಷೇತ್ರದಲ್ಲಿ ಸಾಧಕ ಎಂಪಿ ಗಣೇಶ್ ಭಾರತಕ್ಕೆ ಒಲಿಂಪಿಕ್ ಪದಕ ತಂದವರು. ಪದ್ಮಶ್ರೀ ಪ್ರಶಸ್ತಿ ನನಗೆ ಸಂತಸವನ್ನುಂಟು ಮಾಡಿದೆ. ಪ್ರಶಸ್ತಿ ಎಲ್ಲಾ ಹಾಕಿ ವಿದ್ಯಾರ್ಥಿಗಳಿಗೆ, ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಕೊಡವ ಜನತೆಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಸುಧರ್ಮ ಎಂಬ ಸಂಸ್ಕೃತಭಾಷೆಯ ಪತ್ರಿಕೆಯನ್ನು ನಡೆಸಿಕೊಂಡು ಬಂದವರು ಮೈಸೂರಿನ ದಿ. ಸಂಪತ್ ಕುಮಾರ್ ಹಾಗೂ ಅವರ ಧರ್ಮಪತ್ನಿ ಜಯಲಕ್ಷ್ಮಿ ಅವರಿಗೆ 2020 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಸಂಪತ್ ಕುಮಾರ್ ಇಹಲೋಕ ತ್ಯಜಿಸಿರುವುದರಿಂದ ಜಯಲಕ್ಷ್ಮಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು.
ಲಿಖಿಂಪುರ-ಖೇರಿ ರೈತರ ಹತ್ಯೆ,ತನಿಖಾ ಪ್ರಗತಿ
ಲಿಖಿಂಪುರ – ಖೇರಿ ಪ್ರಕರಣದ ತನಿಖೆಯು ಸಮರ್ಪಕವಾಗಿಲ್ಲ. ಒಬ್ಬ ಆರೋಪಿಯನ್ನು ರಕ್ಷಿಸುವ ಉದ್ದೇಶದಿಂದಲೇ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ತೋರುತ್ತಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಲಿಕಿಂಗ್ ಪುರ ಕೇರಿ ಪ್ರಕರಣದಲ್ಲಿ ನ್ಯಾಯ ಸಿಗಬೇಕಾದರೆ ಸ್ವತಂತ್ರ ತನಿಖೆ ಅಗತ್ಯ ಎಂಬುದು ಸುಪ್ರೀಂಕೋರ್ಟ್ ಅಭಿಪ್ರಾಯದಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ರೈತರ ಹತ್ಯೆ ಮಾಡಿದವರ ಜೊತೆಗೆ ಉತ್ತರಪ್ರದೇಶ ಸರ್ಕಾರ ನಿಂತಿದೆ ಎಂಬುದು ಈಗ ಸ್ಪಷ್ಟವಾಗಿದೆ. ರೈತನ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ತಂದೆಗೆ ( ಶ್ರೀ ಅಜಯ್ ಮಿಶ್ರಾ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ) ನರೇಂದ್ರ ಮೋದಿ ಅವರ ರಕ್ಷಣೆ ಇದೆ” ಎಂದು ಅವರು ಆರೋಪಿಸಿದ್ದಾರೆ.
ಎಸ್ ಯುವಿ ವಾಹನ ಹರಿಸಿ ನಾಲ್ವರು ರೈತರ ಹತ್ಯೆ ಮತ್ತು ನಂತರದ ಹಿಂಸಾಚಾರದಲ್ಲಿ ನಾಲ್ವರ ಹತ್ತಿ ಪ್ರಕರಣವು ಉತ್ತರಪ್ರದೇಶದ ಲಖಿಂಪುರ- ಖೇರಿಯಲ್ಲಿ ಅಕ್ಟೋಬರ್ 3ರಂದು ನಡೆದಿತ್ತು. ಆಶಿಶ್ ಅವರೇ ರೈತರ ಮೇಲೆ ಎಸ್ ವಿಯು ವಾಹನ ಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಾಕ್ಷಿಗಳನ್ನು ಬೇರೆಬೇರೆ ಎಫ್ ಐಆರ್ ಗಳಲ್ಲಿ ದಾಖಲಿಸಿ ಗೋಜಲು ಮಾಡಲಾಗಿದೆ ಎಂದು ಪೀಠವು ಹೇಳಿದೆ.
ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಬಿಟ್ಟರೆ ಉಳಿದ ಆರೋಪಿಗಳ ಮೊಬೈಲ್ ಫೋನ್ ಗಳನ್ನು ಏಕೆ ಜಪ್ತಿ ಮಾಡಿಕೊಂಡಿಲ್ಲ ಎಂದು ಕೋರ್ಟ್ ಪ್ರಶ್ನಿಸಿದೆ. ಉಳಿದ ಆರೋಪಿಗಳು ಮೊಬೈಲ್ ಫೋನ್ ಬಳಸಿಲ್ಲವೇ ಎಂದು ಕೇಳಿದೆ.
ತನಿಖೆಯ ಸ್ಥಿತಿಗತಿ ವರದಿಯಲ್ಲಿ ಏನೂ ಇಲ್ಲ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಹತ್ತು ದಿನ ಸಮಯ ಕೊಡಲಾಗಿತ್ತು. ಆದರೆ, ಪ್ರಯೋಗಾಲಯದ ವರದಿಗಳನ್ನೇ ಸಲ್ಲಿಸಲಾಗದೇ ಇದ್ದುದ್ದೇ ಸುಪ್ರೀಂಕೋರ್ಟ್ ಸಿಟ್ಟಿಗೆ ಕಾರಣವಾಗಿದೆ.
ಈ ಪ್ರಕರಣದಲ್ಲಿ ಉತ್ತರಪ್ರದೇಶ ಸರ್ಕಾರವನ್ನು ಸುಪ್ರೀಂಕೋರ್ಟ್ ಮೂರನೇ ಬಾರಿ ತರಾಟೆಗೆ ತೆಗೆದುಕೊಂಡಿದೆ. ಪ್ರಮುಖ ಆರೋಪಿ ಆಶಿಶ್ ಅವರನ್ನು ಬಂಧಿಸಿದ ಬಗ್ಗೆ ಸುಪ್ರೀಂಕೋರ್ಟ್ ಅಕ್ಟೋಬರ್ 11ರಂದು ಆಕ್ಷೇಪ ವ್ಯಕ್ತಪಡಿಸಿತ್ತು. ಅದಾದ ಮೂರು ದಿನಗಳ ಬಳಿಕ, ಆಶಿಶ್ ಬಂಧನವಾಗಿತ್ತು. ಸಾಕ್ಷಿಗಳ ಹೇಳಿಕೆ ದಾಖಲು ವಿಚಾರದಲ್ಲಿಯೂ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು.
ಚೆನ್ನೈ : ಎಡೆಬಿಡದೆ ಕಾಡುತ್ತಿರುವ ಮಳೆರಾಯ
ತಮಿಳುನಾಡಿನಲ್ಲಿ ಸೋಮವಾರವೂ ಮಳೆ ಮುಂದುವರೆದಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಮಿಳು ನಾಡಿನ ಮೆಟ್ಟೂರು ಜಲಾಶಯದ ನೀರಿನ ಸಂಗ್ರಹ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕರ್ನಾಟಕದ ಜಲಾಶಯಗಳಿಂದ ನೀರನ್ನು ಹೊರ ಬಿಡುತ್ತಿರುವುದು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೋಮವಾರ ಬೆಳಿಗ್ಗೆ ಮೆಟ್ಟೂರು ಜಲಾಶಯದ ಮಟ್ಟ 118.32 ಅಡಿ ಇತ್ತು. ಗರಿಷ್ಠ ಮಟ್ಟ 120 ಅಡಿ. ಜಲಾಶಯದಲ್ಲಿ 90 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 150 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ. ನದಿಗೆ 100 ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂಬುದನ್ನು ಮೂಲಗಳು ತಿಳಿಸಿವೆ.
ರಾಜಧಾನಿ ಚೆನ್ನೈ ವಲಯ ಹಾಗೂ ರಾಜ್ಯದ ಉತ್ತರ ಭಾಗದ ಜಿಲ್ಲೆಗಳಾದ ಚೆಂಗಲ್ ಪೇಟ್, ಕಾಂಚಿಪುರಂ, ತಿರುವಳ್ಳೂರ್, ಮತ್ತು ವೆಲ್ಲೂರಿನಲ್ಲಿ ಮುಂಜಾನೆಯಿಂದ ಮಳೆಯಾಗುತ್ತಿತ್ತು. ಮುಂಜಾಗೃತ ಕ್ರಮವಾಗಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.
ಚೆನ್ನೈನ ಬಹುತೇಕ ರಸ್ತೆಗಳು, ಅಂಡರ್ ಪಾಸ್ ಗಳು ಜಲಾವೃತಗೊಂಡಿದೆ. ಇದರಿಂದ ವಾಹನ ಸವಾರರಿಗೆ ತೊಂದರೆ ಯಾಗಿದೆ. ಜಲಾವೃತ ಆಡಂಬಾಕಂ ಪೊಲೀಸ್ ಠಾಣೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಪರಿಹಾರ ಕಾರ್ಯಾಚರಣೆಗೆ ಚೆನ್ನೈ ಪಾಲಿಕೆಯು ಸುಮಾರು 23 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಿದೆ. ಮಳೆಯಿಂದ ಸಂತ್ರಸ್ತರಾಗಿರುವ ಎರಡು ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 3.36 ಲಕ್ಷ ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ ಸೋಮವಾರ ಬೆಳಗಿನವರೆಗಿನ ಮಾಹಿತಿ ಪ್ರಕಾರ, ಜಲಾವೃತ ಪ್ರದೇಶಗಳ 889 ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಚೆನ್ನೈ 15 ವಲಯಗಳ ಮೇಲುಸ್ತುವಾರಿಗೆ 15 ಐಎಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ನಿಯೋಜಿಸಿದ್ದಾರೆ. 200 ವಿಶೇಷ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ. ತಗ್ಗು ಪ್ರದೇಶಗಳನ್ನು ಆವರಿಸಿರುವ ಕೆಸರು ಹಾಗೂ ಕಸವನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಬುಧವಾರ ಮತ್ತು ಗುರುವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ಚಂಡಮಾರುತ ಉಂಟಾಗಿದ್ದು, ಇದರ ಪರಿಣಾಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸರ್ಕಾರದ ಮರಳು ನೀತಿ ಇನ್ನಷ್ಟು ಸರಳ
ಸರ್ಕಾರಿ ಏಜೆನ್ಸಿ ಗಳಾದ ಎಚ್ ಜಿಎಂಎಲ್ ಮತ್ತು ಕರ್ನಾಟಕ ರಾಜ್ಯ ಖನಿಜಗಳ ನಿಗಮ ಮರಳು ಗಣಿಗಾರಿಕೆ ಮಾಡಿ ಮಾರಾಟ ಮಾಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದ್ದಾರೆ.
ನದಿ, ತೊರೆ, ಹಳ್ಳ, ಕೆರೆ ಜಲಾಶಯಗಳ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಸಿ, ಅಗ್ಗದ ದರದಲ್ಲಿ ಗ್ರಾಹಕರಿಗೆ ಮರಳು ಪೂರೈಕೆ ಮಾಡುವ ಹೊಸ ಮರಳು ನೀತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 50 ಕೋಟಿ ರೂಪಾಯಿಗೂ ಮೇಲ್ಪಟ್ಟ ಟೆಂಡರ್ ಗಳು ಮತ್ತು ಅವುಗಳ ಅಂದಾಜುಗಳ ಪೂರ್ವ ಪರಿಶೀಲನೆ ನಡೆಸಬೇಕಿದೆ. ಅದಕ್ಕೆ ಒಪ್ಪಿಗೆ ಪ್ರಕ್ರಿಯೆ ನಡೆಸಲು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಸರ್ಕಾರ ನಿರ್ಧರಿಸಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಮತ್ತು ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿವಿಧ ನಿರ್ಮಾಣ ಕಾಮಗಾರಿಗಳು, ಸರಕು ಮತ್ತು ಸೇವೆಗಳ ಸಂಗ್ರಹಣೆಯ ಟೆಂಡರ್ ಹಾಗೂ ಅಂದಾಜುಗಳನ್ನು ನ್ಯಾಯಮೂರ್ತಿ ಅಧ್ಯಕ್ಷತೆಯ ಸಮಿತಿಯೇ ಪರಿಶೀಲಿಸಿ ಅಂತಿಮಗೊಳಿಸುತ್ತದೆ. ಸಮಿತಿಯ ಒಪ್ಪಿಗೆಯ ಬಳಿಕ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ, ಗ್ರಾಮೀಣ ವಸತಿ ಯೋಜನೆಗಳಿಗೆ ಮತ್ತು ಗ್ರಾಮೀಣ ಜನರು ಮನೆ ಕಟ್ಟಿಕೊಳ್ಳಲು ರಿಯಾಯಿತಿ ದರದಲ್ಲಿ ಮರಳು ಪೂರೈಕೆ ಮಾಡಲು ನೀತಿಯಲ್ಲಿ ಅನುಮತಿ ನೀಡಲಾಗಿದೆ. ನದಿಯಲ್ಲಿ ಮುಳುಗಿ ಮರಳು ತೆಗೆಯುವ ಪದ್ಧತಿ ದಕ್ಷಿಣ ಕನ್ನಡದಲ್ಲಿ ಇತ್ತು. ಅದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಇದಕ್ಕೆ ಯಾವುದೇ ರೀತಿಯ ಯಂತ್ರಗಳನ್ನು ಬಳಸುವಂತಿಲ್ಲ. ಸ್ಥಳೀಯರು ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಈ ರೀತಿಯಲ್ಲಿ ಮರಳು ತೆಗೆಯಬಹುದಾಗಿದೆ. ಪರಿಸರಕ್ಕೆ ಹಾನಿಯಾಗುವಂತೆ ಮರಳು ತೆಗೆಯುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಈ ಕ್ರಮ ಸ್ವಾಗತಾರ್ಹವಾಗಿದೆ.
ಜನ ಮನೆ ಕಟ್ಟುವ ಆತುರದಲ್ಲಿ ನದಿ ಪಾತ್ರದೊಳಗೆ ಎಲ್ಲೆಂದರಲ್ಲಿ ಮರಳು ತೆಗೆಯುವ ಯತ್ನಕ್ಕೆ ತೊಡಗುತ್ತಾರೆ. ಜನರ ಜೀವಹಾನಿಯಾಗದಂತಹ ಸೂಕ್ತ ಮರಳು ತೆಗೆಯುವ ಸ್ಥಳಗಳನ್ನ ಸರ್ಕಾರವೇ ಗುರುತಿಸುವುದು ಒಳ್ಳೆಯದು. ಅಂತಹ ತಾಣಗಳಲ್ಲಿ ಮುನ್ನೆಚ್ಚರಿಕೆಯಾಗಿ ಅಗ್ನಿ ಶಾಮಕ ದಳದ ವ್ಯವಸ್ಥೆ ಮಾಡುವುದು ಬಹಳ ಸೂಕ್ತವಾಗಿದೆ.
ಟಿ – 20 ವಿಶ್ವಕಪ್ ಕನಸು ನನಸಾಗದೇ ತವರಿಗೆ ವಾಪಸ್ಸು
ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ B – ಗುಂಪಿನಲ್ಲಿರುವ ಭಾರತ ಮತ್ತು ನಮೀಬಿಯಾ ತಂಡಗಳ ನಡುವೆ ನಡೆಯಿತು. ಭಾರತ ತಂಡವು ನಮೀಬಿಯಾ ಎದುರು ಜಯ ಸಾಧಿಸಿತು.
ದುಬೈ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದ ನಡೆದ ಟಾಸ್ ನಲ್ಲಿ ಮೊದಲು ಬ್ಯಾಟಿಂಗ್ ಆಡಿದ ನಮೀಬಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳನ್ನ ಗಳಿಸಿತು. ಜಡೇಜಾ ಮತ್ತು ಅಶ್ವಿನ್ ಅವರ ಸ್ಪಿನ್ ಮೋಡಿಯಿಂದ ಸಾಧಾರಣ ಮೊತ್ತವನ್ನು ಕಲೆಹಾಕಿತು. ಅದರಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಟ್ರಂಪಲ್ ಮ್ಯಾನ್ ಔಟಾಗದೆ ಬೌಂಡರಿ ಮತ್ತು ಸಿಕ್ಸರ್ ಗಳನ್ನ ಸಿಡಿಸಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸುವಲ್ಲಿ ಪಾತ್ರರಾದರು.
ಭಾರತದ ಬೌಲರ್ ಗಳ ದಿಟ್ಟತನದಿಂದ ಎದುರಿಸಿ ಉತ್ತಮ ಪ್ರದರ್ಶನ ತೋರಿದ ನಮೀಬಿಯಾ ತಂಡ 132 ರನ್ ಗಳಿಸಿ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ.
132 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಭಾರತ ಕೇವಲ 15.2 ಓವರ್ ಗಳಲ್ಲಿ 1 ವಿಕೆಟ್ ಕಳದುಕೊಂಡು 136 ರನ್ ಗಳಿಸಿ ರೋಚಕ ಜಯ ಸಾಧಿಸಿತು. ಭಾರತ ತಂಡದ ಪರ ಮೊದಲ ವಿಕೆಟ್ ಹಂತದಲ್ಲಿ ಅಂಕಣಕ್ಕೆ ಇಳಿದು ಆಟ ಆಡಿದ K.Lರಾಹುಲ್ ಮತ್ತು ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ ತಂಡದ ಗೆಲುವಿಗೆ ಕಾರಣರಾದರು.K.L ರಾಹುಲ್ ಕೇವಲ 36 ಎಸೆತಗಳಲ್ಲಿ 54 ರನ್ ಗಳಿಸಿಕೊಂಡರು ಹಾಗೆಯೇ 37 ಎಸೆತಗಳಲ್ಲಿ 56 ರನ್ ಗಳಿಸಿಕೊಂಡ ರೋಹಿತ್ ಶರ್ಮಾ ಔಟಾದರು. ಶರ್ಮಾ ಔಟದ ಬಳಿಕ 2 ನೇ ವಿಕೆಟ್ ಹಂತಕ್ಕೆ ಕಾಲಿಟ್ಟು ಅಂಕಣಕ್ಕೆ ಇಳಿದ ಸುರ್ಯಕುಮರ್ ರವರು ರಾಹುಲ್ ಜೊತೆಗೂಡಿ 19 ಎಸೆತಗಳಲ್ಲಿ 25 ರನ್ ಗಳಿಸಿ ತಂಡದ ಗೆಲುವಿಗೆ ಈ 3 ಜನ ಬ್ಯಾಟಿಂಗ್ ಗಾರರು ಪ್ರಮುಖ ಕಾರಣರಾದರು .
ಒಟ್ಟಿನಲ್ಲಿ ದುಬೈ ಕ್ರೀಡಾಂಗಣದ ನಿನ್ನೆ ನಡೆದ ಪಂದ್ಯದಲ್ಲಿ ಸೂಪರ್ – 12 ರ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಪ್ರದರ್ಶನ ತೋರಿದ ಭಾರತ ಸೆಮಿಫೈನಲ್ ಬಾಗಿಲು ಮುಚ್ಚಿದ್ದರೂ ಕೂಡ ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ ಗೆದ್ದು ಬೀಗಿ ತವರಿನತ್ತ ಸಾಗಿತು.
ಹರೆಕಳ ಹಾಜಬ್ಬ
ಅರವತ್ತೈದು ವರ್ಷದ ಮನುಷ್ಯ, ಮಂಗಳೂರು ತಾಲೂಕಿನ ಕೊಣಾಜೆ ಸನಿಹದ ಹರೇಕಳ ಗ್ರಾಮದವರು. ಕಿತ್ತಳೆಹಣ್ಣು ಮಾರಾಟ ಅವರ ವೃತ್ತಿ. ಅವರ ಚಿಕ್ಕಂದಿನಲ್ಲಿ ಓದಲು ಶಾಲೆಯಿರಲಿಲ್ಲ. ಆ ವಂಚನೆ ಊರಿನ ಮಕ್ಕಳಿಗಾಗಬಾರದು ಎಂಬ ಯೋಚನೆ ಬಂತು. ಆಗಿನ್ನೂ ಬೀಡಿ ಕಟ್ಟುವ ಕೆಲಸವಿತ್ತು. ಹೊತ್ತಿನೂಟಕ್ಕೂ ಪರದಾಡುವಷ್ಟು ಬಡತನದ ಕುಟುಂಬ ಅವರದ್ದು. ಆದರೆ ಊರಿಗೊಂದು ಶಾಲೆ ಬೇಕು ಎಂಬ ದೃಢ ನಿಶ್ಚಯ ಮಾಡಿದರು.
ಕಿತ್ತಳೆ ಹಣ್ಣು ಮಾರುವದನ್ನ ಆರಂಭಿಸಿದರು. ಒಳಿತು ಮಾಡುವ
ಸೇವಾ ಸಂಕಲ್ಪಕ್ಕೆ ದೇವರೂ ಸಹಾಯಮಾಡುತ್ತಾನಂತೆ. ಅವರಿಗೆ ಮಾರಾಟದ ಹಣದಿಂದ ಶಾಲೆಯ ಕಟ್ಟಡ ಕಟ್ಟಲು ಶಕ್ತಿ ಬಂತು. ಸರ್ಕಾರಿ ಆಫೀಸುಗಳಿಗೆ ಅಲೆದಾಟ ಆರಂಭವಾಯಿತು. ಅವರ ಈ ತುಡಿತ, ಉತ್ಸಾಹ ನೋಡಿ ಜನಪ್ರತಿನಿಧಿಗಳು ಸಹಕಾರ ನೀಡಿದರು.
ಜಿಲ್ಲಾ ಪಂಚಾಯತಿ ಅನುಮತಿಯಿಂದ ಪ್ರಾಥಮಿಕ ಶಾಲೆ ಆರಂಭಮಾಡಿದರು.
ಸದ್ಯ ಸ್ವಂತ ಕಟ್ಟಡವಿಲ್ಲ. ಕೈಯಲ್ಲಿದ್ದದ್ದು ಕೇವಲ ಇಪ್ಪತೈದು ಸಾವಿರ ರೂ. ಧೃತಿಗೆಡಲಿಲ್ಲ. ಊರಿನ ಮದರಸಾದಲ್ಲೇ ತಾತ್ಕಾಲಿಕವಾಗಿ ಶಾಲೆ ಶುರುವಾಯಿತು.
ಶಾಶ್ವತ ನಿವೇಶನಕ್ಕಾಗಿ ಹುಡುಕಾಡಿದರು. ಸರ್ಕಾರದ ಜಾಗವೊಂದು ಯಾರಿಂದಲೋ ಅತಿಕ್ರಮಣವಾಗಿತ್ತು.
ಸಾರ್ವಜನಿಕರ ಗಮನ ಸೆಳೆದ ಅವರ ದಿಟ್ಟ ಹೆಜ್ಜೆಗಳಿಂದ ಎಲ್ಲರ ಬೆಂಬಲ ಸಿಕ್ಕಿತು.

ಅವರ ಹಣ್ಣು ಮಾರಾಟಕ್ಕೆ ಸಮಯವಿಲ್ಲದೇ ಬರಿಗೈ ಆಗುವ ಪರಿಸ್ಥಿತಿ ಬಂತು.
ಪತ್ರಿಕೆಯೊಂದು ಅವರ ಸಾಹಸ ಗುರುತಿಸಿ 2004 ರಲ್ಲಿ ಒಂದು ಲಕ್ಷ ರೂ. ಬಹುಮಾನ ನೀಡಿತು. ಸರಿ ಆ ಹಣವನ್ನೇ ತಮ್ಮ ಕಾರ್ಯಕ್ಕೆ ವಿನಿಯೋಗಿಸಿದರು.
ಅವರ ಪ್ರಯತ್ನ ಕ್ಕೆ ಸಿಕ್ಕ ಪ್ರತಿಫಲವಾಗಿ ಊರಿಗೆ ಪ್ರೌಢಶಾಲೆಯ ಭಾಗ್ಯ ದೊರಕಿತು.
ಇದು ಶ್ರೀ ಹಾಜಬ್ಬ ಅವರ ಸಾಹಸಗಾಥೆ. ಅವರು ಸಾಮಾನ್ಯ ಹಣ್ಣು ಮಾರಾಟಗಾರ ಆದರೆ ಅನನ್ಯ , ಅಪರೂಪದ ಸಮಾಜ ಸೇವಕ.
ಈಗ ಅವರನ್ನರಿಸಿ
ದೇಶದ ಪ್ರತಿಷ್ಠಿತ ಪದ್ಮ ಪುರಸ್ಕಾರ ಬಂದಿದೆ.
ಪುಟ್ಟ ಹಳ್ಳಿಯ ಸಣ್ಣ ಮನುಷ್ಯ,ಈಗ ದೇಶದ ಗಮನ ಸೆಳೆದಿದ್ದಾರೆ. ಪದ್ಮಶ್ರೀ ಅವರ ಕೊರಳನ್ನ ಅಲಂಕರಿಸಿದೆ.
ಮಾನ್ಯ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ ಅವರಿಂದ ಈ ಪುರಸ್ಕಾರ ಸ್ವೀಕರಿಸಿದ್ದಾರೆ.
ವೇದಿಕೆಗೆ ತೆರಳುವಾಗ ಪಾದರಕ್ಷೆ ಕಳಚಿ ಪಕ್ಕಕ್ಕಿರಿಸಿ ಬರಿಗಾಲಲ್ಲೇ ಹೆಜ್ಜೆಹಾಕಿದರು.
ಅಪ್ಪಟ ಹಳ್ಳಿಯ ಪ್ರಜೆಯ ಸರಳತೆ ಮತ್ತು ಮುಗ್ಧತೆ ಅಲ್ಲಿದ್ದವರನ್ನೆಲ್ಲ ಮೂಕ ವಿಸ್ಮಿತರನ್ನಾಗಿಸಿದೆ.
ಪದ್ಮಶ್ರೀ ಹಾಜಬ್ಬ ಅವರಿಗೆ ತುಂಬು ಹೃದಯದ ಅಭಿನಂದನೆಗಳು. ಇಲ್ಲಿಯವರೆಗೆ ಸಾರ್ವಜನಿಕರ ಸಹಕಾರದಿಂದ ಅಕ್ಷರ ಸಂತ ಎನಿಸಿದ ಶ್ರೀ ಹಾಜಬ್ಬ ಅವರ ಒಂದಿಷ್ಟು ಗುರಿಗಳು ಈಡೇರಿವೆ. ಇನ್ನು ಅವರ ಕನಸು ಪದವಿ ಪೂರ್ವ , ಪದವಿ ಶಿಕ್ಷಣ ಕಾಲೇಜನ್ನ ನಿರ್ಮಿಸುವುದಾಗಿದೆ. ಈಗ ರಾಜ್ಯ ಸರ್ಕಾರ ಪದ್ಮಶ್ರೀ ಪುರಸ್ಕೃತ ಶ್ರೀ ಹಾಜಬ್ಬ ಅವರೊಂದಿಗೆ ಹೆಜ್ಜೆ ಹಾಕಿ ಅವರ ಕನಸನ್ನ ನನಸು ಮಾಡಬೇಕು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಸಾಹಿತ್ಯವಿಹಾರ : ಕವಿತಾಂಕಣ

ಹಾಡುಗಳು ಮುಗಿದಿಲ್ಲ!
ದೂಡಬಹುದೇ ಸುಮ್ಮನೆ
ಯಾರನ್ನಾದರೂ
ಹೇಗೋ ನುಸುಳಿದ ಬೇಡದ ಸಾಲೊಂದನ್ನು
ಕವಿತೆಯೊಳಗಿಂದ ಅನಾಮತ್ತು
ಕಾಟು ಹಾಕಿದಂತೆ!
ಬರೆದ ಪದ್ಯದ ಪದಗಳ ಅದಲು ಬದಲಾಗಿಸಿ
-ದ ಹಾಗೆ
ಎದೆಯ ಗೂಡ ನೆನಪ ಚಿತ್ರಗಳನ್ನು
ಕತ್ತರಿಸಿ ನಕಲಿಸಿ ಅಂಟಿಸಿದಷ್ಟು ಸಲೀಸಲ್ಲ!
ಕೋಗಿಲೆಗೂ ಕಾವಿಗಿಷ್ಟು ಜಾಗ ಬೇಕು
ಕಾಗೆ ತತ್ತಿಯ ಹೊರ
ಹಾಕಿದ್ದು ಮಾಮರಕೂ ನೆನಪಿಲ್ಲ!
ನಾವಾದರೂ ಯಾಕೆ ದೂಡೋಣ?
ಬಂದ ಮಳೆ ಕಳೆದ ಋತುವ ಮತ್ತೆ
ನೆನೆದು ಅತ್ತಿದ್ದೋ, ಸಂಭ್ರಮಿಸಿದ್ದೋ ಬಲ್ಲವರಾರು
ಕಣ್ಣ ಹನಿಗಳ ಕೆನ್ನೆ ಮೇಲೆ
ಉರುಳಿಸಿದಂತೆ ಎದೆಗಿಳಿದವರ ಕೆಡವಲಾದೀತೆ ಹೇಳಿ?
ಬೇಕಾದ ಗಟ್ಟಿ ಬೀಜ ಪಡೆದ ಮಣ್ಣು
ಮೊಳಕೆ ಬರಿಸಿ
ಮುಗಿಲಿಗೆ ಮುಖ
ಮಾಡುವುದನ್ನು ಕಲಿಸಿ ಕಳಿಸುತ್ತದೆ; ಜೊಳ್ಳು
ತನ್ನೊಡಲಲ್ಲಿಯೇ ಕರಗಿಸಿದಂತೆ
ನಾವು ನೀವು ದೂಡಲಾದೀತೇ ?
ಕಣ್ಮುಂದಿನ ಬಂಧನವಿದು ಬೇಡವಾದರೂ
ಬೆರಳ ಹಿಡಿದು ಸಾಗಬೇಕು
ಹಾಡುಗಳು ಮುಗಿದಿಲ್ಲ!
ಜಾಗವಿಲ್ಲ ಅಂದವರಾರು ಮನದ ಮನೆಯೊಳಗೆ
ನೂರು ಮಾತುಗಳ ಜೀರ್ಣಿಸಿಕೊಂಡ ಒಂದು ಹಾಡು
ಎಲ್ಲರೆದಯ ದನಿಯಾಗಿದ್ದು
ಹಳೆಯ ಕತೆ
ಬೇಡದವರ ದೂಡಿ ಫಲವೇನು
ಜೊತೆಗಿದ್ದು ಜತೆಯಾಗುವುದು ಇಂದಿನ ತುರ್ತು
ನಾಳೆ ಮತ್ತೇನಿಹುದೋ…..
ಕವಿತೆಗಳು ಭಾರ ಅನ್ನಿಸುವುದಿಲ್ಲ ಅಷ್ಟೆ!
ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಬುದ್ಧ ರೈತ
ಮನದ ಹೊಲ
ನೂರು ಕಳೆಗಳ ಕಡಲು ಮೂಲೆಗಂಟಿದ ಜೇಡ
ನಿನ್ನೆಗಳ ಕಾಣಿಸಲು ನೇಯ್ದಿದೆ ಬಲೆ!
ಕಣ್ಣ ಕಾಡು
ಎದುರಾದ ಮಿಕಗಳ ಹೊಡೆದು
ಕೆಡವಲು ಹುನ್ನಾರ,
ಹೊಲಕ್ಕೆ ಕಾಲಿಟ್ಟವರೆಲ್ಲಾ ಮಾಲೀಕರು
ಹರಗದ ಹೊಲ ಎಷ್ಟು ನೋಡಿಕೊಂಡರೇನು
ಗಡ್ಡ ಕೆರೆವ ನೆಪದಿ ಗಾಯ ಮಾಡಿಕೊಂಡಂತೆ
ಅಂಗುಲಿಮಾಲ ಬದುವಿನಲ್ಲಿ ಪಹರೆ
ಮೇಯಲು ಬಂದವರೆಲ್ಲಾ ಹೊಲಕೆ ಬಲಿ
ಹೊಲವೆಂದರೇನು ಫಸಲು ಇದೆಇಲ್ಲವೆಂಬ
ಮಾಯದ ಕನ್ನಡಿ ಹಿಡಿದು ಕನಸುಗಳಿಗೆ
ಕಿಡಿ ಹೊತ್ತಿಸಬೇಕು
ಕಳೆ ಬೂದಿಯಾಗುವುದಾ ಕಾದು ನೋಡಬೇಕು
ಅವನೊಬ್ಬ ಬರಬೇಕೆಂದು ನಿಟ್ಟುಸಿರ
ತರಂಗದಲ್ಲಿ ಹೊಲದ ಮಾಲೀಕ ಎದರು ನೋಟ!
ನಗುವ ನೇಗಿಲ ಹೆಗಿಲಿಗಿಟ್ಟು ಒಳಹೊರ ಎತ್ತುಗಳ ಕಟ್ಟಿ
ಬರಬೇಕಿದೆ ಬುದ್ಧನೆಂಬೋ ರೈತ
ಶತಮಾನಗಳು ಸವೆದವು, ನಕ್ಕ ಹೂ ಅಲ್ಲೊಇಲ್ಲೋ
ಮತ್ತೆ ಮತ್ತೆ ಬುದ್ಧ ಕೂತು ಏಳುವ ಮರಗಳು
ಅಮ್ಮನ ತುತ್ತಂತೆ ಅಪರೂಪ!
ಹೊಲದ ವಿಷವನಿಳಿಹಿ ಅನ್ನ ಹುಟ್ಟಿಸುವ
ನೇಗಿಲಯೋಗಿ ಇಂದಿನ ತುರ್ತು
ಬುದ್ಧ ಬರುವ ಸೂಚನೆ ಕಮ್ಮಿ!
ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು
ಮೂಲ ಹೆಸರು- ಸೈಯದ್ ಫೈಜುಲ್ಲಾ
ಕಾವ್ಯ ನಾಮ- ಸಂತೆಬೆನ್ನೂರು ಫೈಜ್ನಟ್ರಾಜ್
ಊರು- ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು
ವೃತ್ತಿ- ಕನ್ನಡ ಅಧ್ಯಾಪಕ
ಪುಸ್ತಕ ಪ್ರಕಟಣೆ-
೧. ಎದೆಯೊಳಗಿನ ತಲ್ಲಣ( ಕವನಗಳು)
೨. ಮಂತ್ರದಂಡ( ಮಕ್ಕಳ ಕವನಗಳು)
೩.ಬುದ್ಧನಾಗಹೊರಟು(ಕವನಗಳು)
೪. ಸ್ನೇಹದ ಕಡಲಲ್ಲಿ ( ಮಕ್ಕಳ ಕತೆಗಳು)
೫.ಹಬ್ಬಿದಾ ಮಲೆ ಮಧ್ಯದೊಳಗೆ( ಕಥಾ ಸಂಕಲನ)
೬. ಕೇಳದೆ ನಿಮಗೀಗ ( ಪ್ರೇಮ ಕಾವ್ಯ)
೭ ಲೋಕದ ಡೊಂಕು ( ಆಧುನಿಕ ವಚನಗಳು)
೮ ಬುದ್ಧನಿಗೆ ಕೊರೋನಾ ಸೋಂಕಿಲ್ಲ( ಕವಿತೆಗಳು
ಪ್ರಶಸ್ತಿ:- ಸಂಚಯ ಕಾವ್ಯ ಪುರಸ್ಕಾರ
ಹಾಮಾನಾ ಕಥಾ ಪುರಸ್ಕಾರ
ಸ್ನೇಹಶ್ರೀ ಪ್ರಶಸ
ಮಹಾರಾಷ್ಟ್ರದ ಶಿಕ್ಷಣ ಇಲಾಖೆಯಲ್ಲಿ ಕತೆಯೊಂದು ಪಠ್ಯ
ರಾಜ್ಯ ಮಟ್ಟದ ಕತಾ ಸ್ಪರ್ಧೆ ಯಲ್ಲಿ ಎರಡು ಬಾರಿ
( ಹಾಸನ ಮತ್ತು ಬೆಂಗಳೂರು)
೨೦೨೧ ರ ರಾಜ್ಯ ಮಟ್ಟದ ” ಗವಿಸಿದ್ದ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಲಭಿಸಿದೆ.
ಅಖಿಲ ಭಾರತ ಕ.ಸಾ.ಸಮ್ಮೇಳನದಲ್ಲಿ ಕವಿತೆ, ಸಂವಾದಗೋಷ್ಠಿ ಮತ್ತು ವಿಚಾರ ಮಂಡನೆ
ಆಕಾಶವಾಣಿ ಗಳಲ್ಲಿ ಕತೆ,ಕವನ, ವಿಚಾರಧಾರೆ ಪ್ರಸಾರ
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಸದಸ್ಯರು
ವಾಸ :ಸಂತೆಬೆನ್ನೂರು
ಚನ್ನಗಿರಿ ತಾ, ದಾವಣಗೆರೆ ಜಿಲ್ಲೆ
ಜಾಗತಿಕ ವಿದ್ಯುತ್ ಗ್ರಿಡ್ : ಅಮೆರಿಕ ಆಸಕ್ತಿ
ಸೌರಶಕ್ತಿ ಬಳಕೆಯಲ್ಲಿ ಭಾರತ ಕಳೆದ ಏಳು ವರ್ಷಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಈ ಅವಧಿಯಲ್ಲಿ ಸೌರಶಕ್ತಿ ಉತ್ಪಾದನೆ 17 ಪಟ್ಟು ಹೆಚ್ಚಳವಾಗಿದೆ. ದೇಶದ ಸದ್ಯದ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯ 45 ಗಿಗಾ ವ್ಯಾಟ್ ಗೆ ಏರಿಕೆಯಾಗಿದೆ ಎಂದು ಗ್ಲಾಸ್ಗೊನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಹವಾಮಾನ ಶೃಂಗಸಭೆಯಲ್ಲಿ ಭಾರತ ತಿಳಿಸಿದೆ.
ಕಳೆದ ವಾರ ನಡೆದ ಗ್ರೀನ್ ಗ್ರಿಡ್ಸ್ ಇನ್ಷಿಯೇಟಿವ್ ಸ್ಟೀರಿಂಗ್ ಕಮಿಟಿ ಸಭೆಯಲ್ಲಿ ವಿದ್ಯುತ್ ವಿನಿಮಯಕ್ಕಾಗಿ ‘ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್’ ( ಒಂದೇ ಸೂರ್ಯ, ಒಂದೇ ಜಗತ್ತು, ಒಂದೇ ಗ್ರಿಡ್) ಯೋಜನೆಗೆ ಸಮ್ಮತಿ ಸೂಚಿಸಲಾಗಿತ್ತು. ಈ ಯೋಜನೆಯ ಆಕರ್ಷಕ ಸ್ವರೂಪ ಗಮನಿಸಿದ ಅಮೆರಿಕ ಪಾಲುದಾರಿಕೆಯ ಆಸಕ್ತಿ ತೋರಿದೆ.
“ಹವಾಮಾನ ಮಾತುಕತೆಗೆ ಅಮೆರಿಕ ವಾಪಸ್ಸಾಗಿದೆ. ನೂತನವಾಗಿ ಆರಂಭಗೊಂಡಿರುವ ವಿದ್ಯುತ್ ವಿನಿಮಯ ಕುರಿತ ಹೊಸ ಯೋಜನೆ ಜೊತೆ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದೇವೆ” ಎಂದು ಅಮೆರಿಕ ಇಂಧನ ಸಚಿವೆ ಜೆನ್ನಿಫರ್ ಗ್ರಾನ್ಹೋಮ್
ತಿಳಿಸಿದ್ದಾರೆ.
ಭಾರತ, ಇಂಗ್ಲೆಂಡ್, ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ಗ್ರಿಡ್ ಇನಿಷಿಯೇಟಿವ್ ಸ್ಟೀರಿಂಗ್ ಕಮಿಟಿಯ ಸದಸ್ಯ ರಾಷ್ಟ್ರಗಳಾಗಿವೆ. ‘ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್’ ಯೋಜನೆ ಅಡಿಯಲ್ಲಿ 80 ರಾಷ್ಟ್ರಗಳು ಗುರುತಿಸಿಕೊಂಡಿದ್ದು, ಸೌರ ವಿದ್ಯುತ್ ವಿನಿಮಯಕ್ಕೆ ಆಸಕ್ತಿ ತೋರಿವೆ.
ಸೌರ ವಿದ್ಯುತ್ ಸದ್ಬಳಕೆ ಕುರಿತು ರೂಪುಗೊಂಡಿರುವ ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್ ಅಧ್ಯಕ್ಷತೆಯನ್ನು ಭಾರತ ವಹಿಸಿದೆ. ಗ್ಲಾಸ್ಗೊ ವಿಶ್ವ ಹವಾಮಾನ ಶೃಂಗಸಭೆ ವೇಳೆ ಭಾರತ ಈ ನೂತನ ಯೋಜನೆ ಪ್ರಸ್ತಾಪಿಸಿತ್ತು.
ಇಂಗ್ಲೆಂಡ್ ಪ್ರಥಮ ಪಾಲುದಾರ ರಾಷ್ಟ್ರವಾಗಿ ಸೇರಿಕೊಂಡಿತ್ತು.
ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಭಾರತ-ಇಂಗ್ಲೆಂಡ್ ನೇತೃತ್ವದ ‘ಜಾಗತಿಕ ವಿದ್ಯುತ್ ಗ್ರಿಡ್’ ಜೊತೆಗೆ ಅಮೆರಿಕ ಪಾಲುದಾರಿಕೆ ಪಡೆಯಲು ಆಸಕ್ತಿ ತೋರಿಸಿರುವುದು ಗಮನಾರ್ಹ.
ಪ್ರಸ್ತುತ ವಿಶ್ವದ ಇತರ ರಾಷ್ಟ್ರಗಳು ಏನೆಲ್ಲಾ ಯೋಜನೆಗಳಿಗೆ ಅಮೇರಿಕದ ಬೆನ್ನು ಬೀಳುತ್ತಿದ್ದವು. ಆದರೆ, ‘ಜಾಗತಿಕ ವಿದ್ಯುತ್ ಗ್ರಿಡ್’ ವಿಶೇಷ ಯೋಜನೆಗೆ ಅಮೇರಿಕಾ ಆಸಕ್ತಿ ವಹಿಸಿರುವುದು ತಜ್ಞರ ಗಮನ ಸೆಳೆದಿದೆ.
ಶಿವಮೊಗ್ಗ ಮೃಗಾಲಯಕ್ಕೆ ದಿವ,ಹೊಸ ಅತಿಥಿ
ಶಿವಮೊಗ್ಗ ತಾವರೆಕೊಪ್ಪ ಹುಲಿ ಸಿಂಹ ಧಾಮಕ್ಕೆ ಆಗಮಿಸಿರುವ ಆಫ್ರಿಕಾ ಮೂಲದ ನೀರು ಕುದುರೆ ದಿವಾ.
ಮೈಸೂರು ಮೃಗಾಲಯದಿಂದ ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ಗಂಡು ನೀರು ಕುದುರೆಯನ್ನು ಉಡುಗೊರೆಯಾಗಿ ನೀಡಲಾಗಿದೆ. ಮೂಲತಹ ಆಫ್ರಿಕಾ ಪ್ರಾಣಿಯಾಗಿದೆ.ಇದು ಸುಮಾರು 40 ವರ್ಷಗಳ ಕಾಲ ಬದುಕಬಹುದಾದ ಪ್ರಾಣಿಯಾಗಿದೆ. ಬನ್ನೇರುಘಟ್ಟದಲ್ಲಿ ಮಾತ್ರ ನೋಡಬಹುದಾದ ಪ್ರಾಣಿಯಾಗಿತ್ತು. ಆದರೆ ಈಗ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ತಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ನೀರು ಕುದುರೆ ಆಗಮಿಸಿದೆ. ಇದು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿದ್ದು ಪ್ರವಾಸಿಗರಿಗೆ ಇದರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ತಿಳಿಸಿದರು.

ಸಿಂಹ ಧಾಮಕ್ಕೆ ಗಂಡು ನೀರು ಕುದುರೆ ಬಂದಿರುವುದರಿಂದ ಹೆಣ್ಣು ನೀರು ಕುದುರೆಯೊಂದು ಕಳುಹಿಸಿಕೊಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಮೈಸೂರು ಮೃಗಾಲಯದ ಅಧಿಕಾರಿ ಸ್ಪಂದಿಸಿದ್ದಾರೆ. ನೀರು ಕುದುರೆಯು ಎಲ್ಲಾ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಮುಕುಂದನ್ ಹೇಳಿದ್ದಾರೆ.
