Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ, ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 14ರಂದು ಶನಿವಾರ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಫೆರೋಕಾಸ್ಟ್ ಸಭಾಂಗಣದಲ್ಲಿ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 14ರಂದು ಬೆಳಗ್ಗೆ 10ಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಶಿಬಿರ ಉದ್ಘಾಟಿಸುವರು. ಜನನಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಶ್ ಪಾದೇಕಲ್ ಅಧ್ಯಕ್ಷತೆ ವಹಿಸುವರು. ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ಜನನಿ ಸಮೂಹ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸಂತೋಷ್ ಕುಮಾರ್ ಬಿ.ಎನ್, ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿಜಯಕುಮಾರ್ ಅತಿಥಿಗಳಾಗಿ ಭಾಗವಹಿಸುವರು.
ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಉಚಿತ ವೈದ್ಯಕೀಯ ಸಮಾಲೋಚನೆ ಮತ್ತು ಆಹಾರ ಸಲಹೆ, ರಕ್ತದಲ್ಲಿನ ಸಕ್ಕರೆ ಅಂಶ ತಪಾಸಣೆ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಸಮಾಲೋಚನೆ, ಆಕ್ಯುಪಂಕ್ಚರ್ ಮತ್ತು ಆಕ್ಯುಪ್ರೆಶರ್, ಬೊಜ್ಜು ಮತ್ತು ಬೆನ್ನು ನೋವು ಸಮಸ್ಯೆಗೆ ಚಿಕಿತ್ಸೆ ಮತ್ತಿತರ ಸೌಲಭ್ಯಗಳಿರುತ್ತವೆ.
Rotary Club Shimoga ಬೆನ್ನುನೋವು, ಕೀಲುನೋವು, ಅಧಿಕ ರಕ್ತದ ಒತ್ತಡ, ಬೊಜ್ಜು, ಮಧುಮೇಹ, ಹೈಪರ್‌ಟೆನ್ಷನ್, ಥೈರಾಯ್ಡ್ ತೊಂದರೆ, ಗ್ಯಾಸ್ಟ್ರೈಟೀಸ್, ಮೈಗ್ರೇನ್, ನಿದ್ರಾಹೀನತೆ, ಉದ್ವಿಗ್ನತೆ, ಪಾಶ್ರ‍್ವವಾಯು, ಸ್ಪಾಂಡಿಲೈಟಿಸ್ ಮತ್ತಿತರ ಸಮಸ್ಯೆಗಳಿಂದ ಬಳಲುವವರು ಶಿಬಿರದ ಪ್ರಯೋಜನ ಪಡೆಯಬಹುದು. ವಿವರಗಳಿಗೆ ಮೊಬೈಲ್ ಸಂಖ್ಯೆ 9448105198 ಸಂಪರ್ಕಿಸಬಹುದಾಗಿದೆ.
Rotary Club Shimoga ಫೆಬ್ರವರಿ 14. ಶಿವಮೊಗ್ಗದಲ್ಲಿ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರ
ಮೂಲ ಸೌಕರ್ಯ ಒದಗಿಸುವಂತೆ ಅರಬಿಳಚಿ ಗ್ರಾಮಸ್ಥರ ಸತ್ಯಾಗ್ರಹ
ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಆರೊಪಿಸಿ ಶಿವಮೊಗ್ಗದ ಅರಬಿಳಚಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರು. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಅರಬಿಳಚ್ಚಿ ಗ್ರಾಮದಲ್ಲಿ ಮೂಲ ಸೌಕರ್ಯಗಳು ಮರಿಚಿಕೆ ಆಗಿವೆ. ಮನೆಗಳಿಗೆ ರಸ್ತೆ ಚರಂಡಿ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯ ಗಳನ್ನು ಕೊಡುವಂತೆ ಗ್ರಾಮಸ್ಥರು ಪಂಚಾಯಿತಿ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿ ಕೂಡಲೆ ಕ್ರಮ ಕೈಗೊಳ್ಳುವಂತೆ ಕೆ.ಪಿ.ಸಿ.ಸಿ ರಾಜ್ಯ ಪರಿಶಿಷ್ಟ ಜಾತಿ ವಿಭಾಗ ಸಂಚಾಲಕ ಮಂಜುನಾಥ್ ಆಗ್ರಹಿಸಿದರು.
ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಫೆ. 24 ರಿಂದ ಮಾರ್ಚ್ 4 ವರೆಗೆ ಜಾತ್ರಾ ಮಹೋತ್ಸವ
ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ,ಶಿವಮೊಗ್ಗ ಶಾಖೆಯಲ್ಲಿ
ದಿ :15.02.2026 ರಂದು ಭಾನುವಾರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಶ್ರೀ ಆದಿಚುಂಚನಗಿರಿ ಶಾಖಾ ಮಠ ಶಿವಮೊಗ್ಗ ಶಾಖೆಯ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ರವರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ನಗರದ ಭಜನಾ ಪರಿಷತ್ ಶಿವಮೊಗ್ಗ, ಮತ್ತು ನಗರದ ಎಲ್ಲಾ ಭಜನಾ ಮಂಡಳಿಗಳ ಒಕ್ಕೂಟ ಇವರುಗಳ ಸಹಯೋಗದಲ್ಲಿ 18ನೇ ವರ್ಷದ ಅಖಂಡ ಭಜನೆಯನ್ನು ಏರ್ಪಡಿಸಲಾಗಿದೆ.
ಶರಾವತಿ ನಗರ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆಬ್ರವರಿ 15 ರ ಬೆಳಿಗ್ಗೆ 6:00 ಗಂಟೆಗೆ ದೇವರಿಗೆ ವಿಶೇಷ ಪೂಜೆ,ಮತ್ತು ಸಾಯಂಕಾಲ 6:00. ಗಂಟೆಗೆ ಜಲಾಭಿಷೇಕ, ಕ್ಷೀರಾಭಿಷೇಕ. ಪಂಚಾಮೃತ ಅಭಿಷೇಕ. ರುದ್ರಾಭಿಷೇಕ,ಪೂಜಾ ಕೈಂಕರ್ಯ ಗಳನ್ನು ಶ್ರೀಮಠದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ವಿಶೇಷ ಪೂಜಾ ಕೈಂಕರ್ಯಗಳು:
ಫೆ 15 ರಂದು ಬೆಳಿಗ್ಗೆ 5.30 ರಿಂದ ಏಕವಾರ ರುದ್ರಾಭಿಷೇಕ ಆರಂಭಿಸಲಾಗುವುದು, 6ಕ್ಕೆ ಅಖಂಡ ಭಜನೆ ಉದ್ಘಾಟನೆ,ಬೆಳಗ್ಗೆ 7 ಕ್ಕೆ ಮಹಾಮಂಗಳಾರತಿ ಮಾಡಲಾಗುವುದು.
ಸಂಜೆ 6 ಗಂಟೆಗೆ ರುದ್ರಾಭಿಷೇಕ, ರಾತ್ರಿ 7:30ಕ್ಕೆ ಮಹಾ ಮಂಗಳಾರತಿ ನಡೆಯುವುದು.
ರಾತ್ರಿ 10 ರಿಂದ ರುದ್ರಾಭಿಷೇಕ, ರಾತ್ರಿ 11:30 ಗಂಟೆಗೆ ಮಹಾಮಂಗಳಾರತಿ ನಡೆಯುವುದು.
ರಾತ್ರಿ 1 ಗಂಟೆಗೆ ರುದ್ರಾಭಿಷೇಕ,ರಾತ್ರಿ 2.30 ಗಂಟೆಗೆ ಮಹಾ ಮಂಗಳಾರತಿ ನಡೆಸಲಾಗುವುದು, ರಾತ್ರಿ 3:00ಗೆ ರುದ್ರಾಭಿಷೇಕ,ಬೆಳಿಗ್ಗೆ 4:30 ಗಂಟೆಗೆ ಮಹಾಮಂಗಳಾರತಿ ಮಾಡಲಾಗುವುದು.
ಫೆ. 9ರ ಸೋಮವಾರದಂದು ಬೆಳಿಗ್ಗೆ 5:00 ಗಂಟೆಗೆ ರುದ್ರಾಭಿಷೇಕ, ಬೆಳಗೆ 6 ಗಂಟೆಗೆ ಅಖಂಡ ಭಜನೆ ಸಮಾರೋಪ, 6:15 ಗಂಟೆಗೆ ಮಹಾಮಂಗಳಾರತಿ ನಡೆಯುವುದು. ದೇವರಿಗೆ ರುದ್ರಾಭಿಷೇಕ, ಬಿಲ್ವಪತ್ರೆ, ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗುವುದು.
ವಿಶೇಷವೆಂದರೆ ಫೆ. 15 ರ ಬೆಳಿಗ್ಗೆ 6 ರಿಂದ ನಗರದ ವಿವಿಧ ಭಜನಾ ತಂಡಗಳಿಂದ ಸೋಮವಾರ ಬೆಳಿಗ್ಗೆ 6:00 ಗಂಟೆಯ ವರೆಗೆ ಅಖಂಡ ಭಜನೆ ಮತ್ತು ಶಿವ ಸಂಕೀರ್ತನೆಗಳನ್ನು ಭಜನಾ ತಂಡಗಳಿಂದ ಏರ್ಪಡಿಸಲಾಗಿದೆ.
ಶ್ರೀ ಆದಿಚುಂಚನ ಗಿರಿ ಶಿಕ್ಷಣ ಟ್ರಸ್ಟ್, ಶಿವಮೊಗ್ಗ ಶಾಖೆಯ
ಹೊರವಲಯ ಗುರುಪುರದ “ಶ್ರೀ ವೀರಸೋಮೇಶ್ವರಸ್ವಾಮಿ ದೇವಾಲಯ” ದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಭಾನುವಾರ ಬೆಳಿಗ್ಗೆ 6:30ಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ,ವಿಶೇಷ ಪೂಜೆ ಅಲಂಕಾರಗಳನ್ನು ಮತ್ತು ಜಾಗರಣೆ ಮತ್ತು ಶಿವ ಸಂಕೀರ್ತನೆಗಳನ್ನು,ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುವುದು.
ಸೋಮವಾರ ಬೆಳಿಗ್ಗೆ ವೀರ ಸೋಮೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ,ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ಕೃಪೆಗೆ ಪಾತ್ರರಾಗಬೇಕಾಗಿ,ಶ್ರೀಮಠದ ವ್ಯವಸ್ಥಾಪಕರು ಪತ್ರಿಕಾ ಕೋರಿದ್ದಾರೆ.
S.N. Channabasappa ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಅಭಿವೃದ್ಧಿಗೆ ಅನುದಾನ ನೀಡಿ- ಎಸ್.ಎನ್.ಚನ್ನಬಸಪ್ಪ
S.N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಮಾನ್ಯ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಶ್ರೀ ಕೆ. ವೆಂಕಟೇಶ್ ಅವರನ್ನು ಭೇಟಿಯಾಗಿ, ಪಶುಸಂಗೋಪನಾ ಇಲಾಖೆ ಹಾಗೂ ವೈದ್ಯಕೀಯ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಮನವಿ ಸಲ್ಲಿಸಿದರು.
ವಿಧಾನಸೌಧದಲ್ಲಿ ನಡೆದ ಸಮಿತಿ ಸಭೆಯ ಬಳಿಕ ಸಚಿವರನ್ನು ಭೇಟಿಯಾದ ಶಾಸಕರು, ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿರುವ ‘ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ’ದ ಬಲವರ್ಧನೆಗಾಗಿ 10 ಕೋಟಿ ರೂಪಾಯಿಗಳ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಕೇಂದ್ರಕ್ಕೆ ಅಗತ್ಯವಿರುವ 16 ತಾಂತ್ರಿಕ ಸಿಬ್ಬಂದಿಗಳನ್ನು ತಕ್ಷಣವೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಇಲಾಖೆಗೆ ಮಂಜೂರಾಗಿರುವ 2 ಎಕರೆ ಜಮೀನಿನಲ್ಲಿ ಆರ್‌ಐಡಿಎಫ್ (RIDF) ಯೋಜನೆಯಡಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ಚಿಕಿತ್ಸಾ ಸಂಕೀರ್ಣಕ್ಕೆ ಆಧುನಿಕ ಉಪಕರಣಗಳನ್ನು ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದರು. ಶಿವಮೊಗ್ಗದ ಈ ಸಂಸ್ಥೆಗಳು ಜಿಲ್ಲೆಯ ರೈತರ ಮತ್ತು ಪಶುಪಾಲಕರ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಇಲ್ಲಿನ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.
S.N. Channabasappa ಶಾಸಕರ ಪ್ರಸ್ತಾವನೆಗಳನ್ನು ಆಲಿಸಿದ ಸಚಿವರು, ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗಾಜನೂರಿನಿಂದ ವೀರೇಶ್ ಎಂಬ ವ್ಯಕ್ತಿ ನಾಪತ್ತೆ. ಪೊಲೀಸ್ ಪ್ರಕಟಣೆ
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಜನೂರು ಜನತಾ ಕಾಲೋನಿ ವಾಸಿ ಲಕ್ಷ್ಮೀ ಎಂಬುವವರ ಪತಿ ವೀರೇಶ್ ಎಂಬ 47 ವರ್ಷ ವ್ಯಕ್ತಿ 2025ರ ಡಿಸೆಂಬರ್‌ನಲ್ಲಿ ಬೇರೆ ಊರಿಗೆ ಕೂಲಿ ಕೆಲಸಕ್ಕೆಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ.
ಈ ವ್ಯಕ್ತಿ ಬಗ್ಗೆ ಸುಳಿವು ದೊರತಲ್ಲಿ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ವ್ಯಕ್ತಿ ನಾಪತ್ತೆ. ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ಪ್ರಕಟಣೆ
ಭದ್ರಾವತಿ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗಿನಗರ ವಾಸಿ ತನ್ಸೀಮಾ ಅಂಜುಮ್ ಎಂಬುವವರ ಪತಿ ಮೊಹಮ್ಮದ್ ಜುನೈದ್ ಬಿನ್ ಮೊಹಮ್ಮದ್ ಜಲಾಲ್ ಎಂಬ 26 ವರ್ಷ ವ್ಯಕ್ತಿ 2025ರ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಎಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಈ ವ್ಯಕ್ತಿ ಬಗ್ಗೆ ಸುಳಿವು ದೊರತಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಮರಾಠ ಅಭಿವೃದ್ದಿ ನಿಗಮದಿಂದ ಆಹಾರ ವಾಹಿನಿ ಯೋಜನೆ ಸೌಲಭ್ಯದ ಪ್ರಕಟಣೆ
ಶಿವಮೊಗ್ಗ ಜಿಲ್ಲಾ ಮರಾಠ ಸಮುದಾಯದ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಲ್ಲಿ ನಿಗಮದಿಂದ ವಾಹನ ಖರೀದಿಗೆ ರೂ. 3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯು ಮರಾಠ ಜನಾಂಗದಲ್ಲಿ ಪ್ರವರ್ಗ 3-ಬಿ ಅಡಿಯಲ್ಲಿ 2(ಎ) ರಿಂದ 2 (ಎಫ್) ವರೆಗೆ ಬರುವ (ಎ) ಮರಾಠ, ಮರಾಠ (ಬಿ) ಅರೆಕ್ಷತ್ರಿಯ, ಅರೆ ಮರಾಠ, ರ‍್ಯ ಮರಾಠ (ಸಿ), ಆರ್ಯ, ಅರ್ಯರು (ಡಿ), ಕೊಂಕಣ ಮರಾಠ (ಇ), ಕ್ಷತ್ರಿಯ ಮರಾಠ/ಕ್ಷತ್ರಿಯ ಮರಾಠ (ಎಫ್), ಕುಳವಾಡಿ ಜಾತಿಗಳಿಗೆ ಅನ್ವಯವಾಗುತ್ತದೆ.
ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡಿನಲ್ಲಿರುವಂತೆ ಅರ್ಜಿದಾರರ ಹೆಸರು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇರುವಂತೆ ಹೊಂದಾಣಿಕೆಯಾಗಬೇಕು. ಕುಟುಂಬ ವಾರ್ಷಿಕ ವರಮಾನ 3 ಲಕ್ಷ ಒಳಗಿರಬೇಕು ಮತ್ತು ವಯಸ್ಸು 21 ರಿಂದ 45 ವರ್ಷ ಒಳಗಿನವರಾಗಿರಬೇಕು. ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವಂತಿಲ್ಲ.
ಆಸಕ್ತರು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಮಾ. 05 ರೊಳಗಾಗಿ ಸಲ್ಲಿಸುವಂತೆ ಕ. ಮ. ಸ. ಅ. ನಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ನಿಗಮದ ಜಾಲತಾಣ http://kmcdc.karnataka.gov.in/kn/ ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಾಲರಾಜ್ ಅರಸ್ ರಸ್ತೆ, ಕೆ,ಇ.ಬಿ. ಸರ್ಕಲ್ ಹತ್ತಿರ, ಶಿವಮೊಗ್ಗ, ದೂ.ಸಂ: 08182-229634 ನ್ನು ಸಂಪರ್ಕಿಸುವುದು.
Backward Classes Development Corporation ಆಹಾರ ವಾಹಿನಿ ಯೋಜನೆ: ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಮಾಹಿತಿ
Backward Classes Development Corporation ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಾಗಿದ್ದು, ನಿಗಮದಿಂದ ವಾಹನ ಖರೀದಿಗೆ ರೂ. 3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯು ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಅಲೆಮಾರಿ/ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ ಮತ್ತು ಇತರ ಉಪ ಸಮುದಾಯಗಳನ್ನು ಹೊರತುಪಡಿಸಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ನಲ್ಲಿ ಉಳಿದ ಸಮುದಾಯಗಳಿಗೆ ಅನ್ವಯವಾಗುತ್ತದೆ.
ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡಿನಲ್ಲಿರುವಂತೆ ಅರ್ಜಿದಾರರ ಹೆಸರು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇರುವಂತೆ ಹೊಂದಾಣಿಕೆಯಾಗಬೇಕು. ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವಂತಿಲ್ಲ.
Backward Classes Development Corporation ಆಸಕ್ತರು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಮಾ. 06 ರೊಳಗಾಗಿ ಸಲ್ಲಿಸುವಂತೆ ಡಿ.ಬಿ.ಸಿ.ಡಿ.ಸಿ. ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ನಿಗಮದ ಜಾಲತಾಣ www.dbcdc.karnataka.gov.in ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಾಲರಾಜ್ ಅರಸ್ ರಸ್ತೆ, ಕೆ,ಇ.ಬಿ. ಸರ್ಕಲ್ ಹತ್ತಿರ, ಶಿವಮೊಗ್ಗ, ದೂ.ಸಂ: 08182-229634 ನ್ನು ಸಂಪರ್ಕಿಸುವುದು.
H.S. Sundaresh ನಗರದ ಸೌಂದರ್ಯ ವೃದ್ಧಿಗೆ ₹45 ಕೋಟಿ ವೆಚ್ಚದಲ್ಲಿ ಸೂಡಾ ವತಿಯಿಂದ ಕೆರೆಗಳ ಹೈಟೆಕ್ ಅಭಿವೃದ್ಧಿ – ಹೆಚ್.ಎಸ್.ಸುಂದರೇಶ್
H.S. Sundaresh ಪರಿಸರ ಸಂರಕ್ಷಣೆ ಮತ್ತು ನಗರವನ್ನು ಸುಂದರ ಹಾಗೂ ಹಸಿರಾಗಿಸುವ ಉದ್ದೇಶದಿಂದ ರೂ.43 ಕೋಟಿ ವೆಚ್ಚದಲ್ಲಿ 15 ಕೆರೆಗಳನ್ನು ಸೂಡಾ ವ್ಯಾಪ್ತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ಶಿವಮೊಗ್ಗ, ನಗರದ ಪ್ರಿಯದರ್ಶಿನಿ ಬಡಾವಣೆಯಲ್ಲಿ ಬರುವ ಆಲ್ಕೊಳ ಗ್ರಾಮದ ಸರ್ವೇ ನಂ 110 ರ ಕೆರೆ ಪ್ರದೇಶದಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಗಳ ಮಾಹಿತಿಯನ್ನು ಹಂಚಿಕೊಂಡು ಅವರು ಮಾತನಾಡಿದರು.
ಕೆರೆಯಲ್ಲಿ ಹೂಳು ತೆಗೆಸಿ, ಸುತ್ತಲೂ ಬೇಲಿ ಹಾಕಿಸಿ,ಬಂಡಿಂಗ್ ಮಾಡುವುದು, ಜೊತೆಗೆ ಕೆರೆ ಸುತ್ತಲೂ ಗಿಡಗಳನ್ನು ನೆಡಲಾಗುವುದು. ಮಕ್ಕಳಿಗೆ ಆಟಿಕೆಗಳನ್ನು ಅಳವಡಿಸಲಾಗುವುದು. ಚರಂಡಿ ನೀರು ಕೆರೆಗಳಿಗೆ ಬರುವುದನ್ನು ತಪ್ಪಿಸಲು ಕ್ರಮ ವಹಿಸಲಾಗುವುದು. ಕೆಲವು ಕೆರೆಗಳನ್ನು ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ದಿಪಡಿಸಲಾಗುವುದು. ಈ ಕೆರೆಗಳ ಅಭಿವೃದ್ದಿಯಿಂದ ಪರಿಸರ ಸಂರಕ್ಷಣೆಯೊAದಿಗೆ ಅಂತರ್ಜಲ ಮಟ್ಟವೂ ಹೆಚ್ಚಲಿದೆ. ವಾತಾವರಣವೂ ಉತ್ತಮವಾಗಿರಲಿದೆ ಎಂದು ತಿಳಿಸಿದರು.
ಕೆರೆ ಅಭಿವೃದ್ದಿ ಟೆಂಡರ್ ಆದ ಕಾಮಗಾರಿಗಳ ವಿವರ : ರೂ.3.12 ಕೋಟಿ ವೆಚ್ಚದಲ್ಲಿ ಆಲ್ಕೊಳದ ಸ. ನಂ 73 ರಲ್ಲಿ 1 ಕೆರೆ, ನವುಲೆಯ ಸ.ನಂ 110 ಮತ್ತು 88 ರಲ್ಲಿ 2 ಕೆರೆಗಳು, ಮಲ್ಲಿಗೇನಹಳ್ಳಿಯ ಸ.ನಂ 30 ರಲ್ಲಿ 1 ಕೆರೆ, ರೂ.2.24 ಕೋಟಿ ವೆಚ್ಚದಲ್ಲಿ ಬೊಮ್ಮನಕಟ್ಟೆ ಗ್ರಾಮದ ಸ.ನಂ.102 ರಲ್ಲಿ 2 ಎಕರೆ 11 ಗುಂಟೆ ವಿಸ್ತೀರ್ಣದ ಕೆರೆ, ಆಲ್ಕೊಳ ಗ್ರಾಮದ ಸ.ನಂ 5 14 ಎಕರೆ 9 ಗು. ವಿಸ್ತೀರ್ಣದ 1 ಕೆರೆ, ಕಾಶಿಪುರ ಸ.ನಂ 62ರಲ್ಲಿ 7 ಎ 32 ಗು. ವಿಸ್ತೀರ್ಣದ 01 ಕೆರೆ, ಮಲ್ಲಿಗೇನಹಳ್ಳಿ ಗ್ರಾಮದ ಸ.ನಂ.25 ರಲ್ಲಿ 4 ಎಕರೆ 24 ಗುಂಟೆ, ಮತ್ತೂರು ಗ್ರಾಮದ ಸ.ನಂ.793 ರಲ್ಲಿ 1 ಕೆರೆ, ಭದ್ರಾವತಿ ತಾಲ್ಲೂಕಿನ ಜನ್ನಾಪುರ ಗ್ರಾಮದ ಸ.ನಂ 70 ರಲ್ಲಿ 45 ಎಕರೆ 20 ಗುಂಟ 1 ಕೆರೆ, ಭದ್ರಾವತಿ ತಾಲ್ಲೂಕಿನ ಉಜ್ಜಯನಿಪುರ ಸ.ನಂ.13 ರಲ್ಲಿ 6 ಎಕರೆ 18 ಗುಂಟೆ ಯಲ್ಲಿ 1 ಕೆರೆ ಸೇರಿ ಒಟ್ಟು 10 ಕೆರೆಗಳ ಅಭಿವೃದ್ದಿಗೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ.
ತಾಂತ್ರಿಕ ಮಂಜೂರಾತಿಗೆ ಸಲ್ಲಿಸಿದ ವಿವರ : ದೇವಕಾತಿಕೊಪ್ಪ ಗ್ರಾಮದ ಸ.ನಂ 47 ರಲ್ಲಿ 22 ಎ 30 ಗು. 01 ಕೆರೆ, ಚನ್ನಮುಂಬಾಪುರ ಗ್ರಾಮ ಸ.ನಂ.11 ರಲ್ಲಿ 10 ಎ 23 ಗು, ಬೊಮ್ಮನಕಟ್ಟೆ ಸ.ನಂ.114 ರಲ್ಲಿ 24 ಎ 14 ಗುಂಟೆಯಲ್ಲಿ 01, ಆಲ್ಕೊಳ ಗ್ರಾಮದ ಸ.ನಂ 10 ರಲ್ಲಿ 1 ಎ 2 ಗುಂಟೆಯಲ್ಲಿ 01, ಭದ್ರಾವತಿ ತಾಲ್ಲೂಕಿನ ಹೊಸೂರು-ಸಿದ್ದಾಪುರ ಗ್ರಾಮದ ಸ.ನಂ 110 ರಲ್ಲಿ 24 ಎ 19 ಗುಂಟೆಯಲ್ಲಿ 01 ಕೆರೆ ಒಟ್ಟು 5 ಕೆರೆಗಳ ಅಭಿವೃದ್ದಿ ಕಾಮಗಾರಿಗಳು ತಾಂತ್ರಿಕ ಮಂಜೂರಾತಿಗೆ ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಹಾಗೂ ಸೂಡಾ ವತಿಯಿಂದ ಕೈಗೊಳ್ಳಲು ಉದ್ದೇಶಿಸಿರುವ ಪ್ರಾಧಿಕಾರದ ಮಾಲೀಕತ್ವದ ನಿದಿಗೆ ಗ್ರಾಮದ ಸ.ನಂ25 ರ 3 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆಯ ಅಭಿವೃದ್ದಿ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲು ಆಯುಕ್ತಾಲಯಕ್ಕೆ ಸಲ್ಲಿಸಲಾಗಿದೆ.
H.S. Sundaresh ಗೋಪಿಶೆಟ್ಟಿ ಗ್ರಾಮದ ವಿವಿಧ ಸರ್ವೇ ನಂ.ಗಳಲ್ಲಿ ಒಟ್ಟು 3 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸಲು ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ಪಡೆಯಲು ಇಲಾಖೆಗೆ ಸಲ್ಲಿಸಲಾಗಿರುತ್ತದೆ. ನಿದಿಗೆ ಹೋಬಳಿ ಊರಗಡೂರು ಗ್ರಾಮದ ಉದ್ದೇಶಿತ ವಸತಿ ಬಡಾವಣೆಯಲ್ಲಿ ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಸಂಬAಧ ಪೂರ್ವಾನುಮತಿಗೆ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭದ್ರಾವತಿ ತಾಲ್ಲೂಕಿನ ಕಸಬಾ ಗ್ರಾಮದಲ್ಲಿ ಒಟ್ಟು 32 ಎಕರೆ 21 ಗುಂಟೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸಲು ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ನಗರದಲ್ಲಿ ಉಷ್ಣಾಂಶ ಹೆಚ್ಚುತ್ತಿದ್ದು, ನಗರವನ್ನು ಹಸಿರಾಗಿ ಇಟ್ಟುಕೊಳ್ಳುವುದು ಅತಿ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪಾರ್ಕ್ಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಈ ಹಿಂದೆ 40 ಪಾರ್ಕ್ಗಳನ್ನು ಅಭಿವೃದ್ದಿಪಡಿಸಲಾಗಿತ್ತು. ಇದೀಗ 50 ಪಾರ್ಕ್ಗಳ ಅಭಿವೃದ್ದಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸ್ಥಳೀಯ ಜನ ಪ್ರತಿನಿಧಿಗಳು, ಬಡಾವಣೆಗಳ ನಿವಾಸಿಗಳು ಹಾಜರಿದ್ದರು.
Hampi Utsava ಫ್ರೆಬ್ರವರಿ 13 ರಿಂದ 15 ವರೆಗೆ ವೈಭವದ “ಹಂಪಿ ಉತ್ಸವ,” : ಸಚಿವ ಜಮೀರ್ ಅಹ್ಮದ್ ಖಾನ್
ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಲ್ಲಿ ಫೆಬ್ರವರಿ 13, 14 ಮತ್ತು 15ರಂದು ‘ಹಂಪಿ ಉತ್ಸವ–2026’ ಅದ್ದೂರಿಯಾಗಿ ಜರುಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಉತ್ಸವದ ಸಿದ್ಧತೆಗಳು ಹಾಗೂ ವಿಶೇಷತೆಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಫೆಬ್ರವರಿ 13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡಲಿದ್ದಾರೆ.
ಉದ್ಘಾಟನೆಯ ದಿನದಂದು ಮುಖ್ಯಮಂತ್ರಿಗಳು ಹಂಪಿಯಲ್ಲೇ ವಾಸ್ತವ್ಯ ಹೂಡಲಿದ್ದು, ಮರುದಿನ ಹಾವೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.
ಹಂಪಿ ಉತ್ಸವದ ಅಂಗವಾಗಿ ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಸೌರಭ ನಡೆಯಲಿದೆ. ಉತ್ಸವಕ್ಕಾಗಿ ಎಂ.ಪಿ. ಪ್ರಕಾಶ್ ವೇದಿಕೆ, ಶ್ರೀಕೃಷ್ಣದೇವರಾಯ (ಎದುರು ಬಸವಣ್ಣ) ವೇದಿಕೆ, ಸಾಸಿವೆಕಾಳು ಗಣಪ ವೇದಿಕೆ, ವಿದ್ಯಾರಣ್ಯ (ಮಹನಾವಮಿ ದಿಬ್ಬ) ವೇದಿಕೆ ಹಾಗೂ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೇದಿಕೆ ಸೇರಿದಂತೆ ಒಟ್ಟು ಆರು ಬೃಹತ್ ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ.
ಎಂ.ಪಿ. ಪ್ರಕಾಶ್ ವೇದಿಕೆ ಪ್ರಧಾನ ವೇದಿಕೆಯಾಗಿದ್ದು, ಇಲ್ಲಿ 50,000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ 8 ರಿಂದ 10 ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, 15 ಸಾವಿರ ಆಸನಗಳನ್ನು ಕಾಯ್ದಿರಿಸಲಾಗಿದೆ.
ತಾರಾ ಮೆರುಗು
ಈ ಬಾರಿಯ ಉತ್ಸವದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ, ರಚಿತಾ ರಾಮ್, ಡಾಲಿ ಧನಂಜಯ್ ಮತ್ತು ಬಿಗ್ ಬಾಸ್ ವಿಜೇತ ಗಿಲ್ಲಿನಟ ಭಾಗವಹಿಸುವುದು ಖಚಿತವಾಗಿದೆ ಎಂದು ತಿಳಿಸಿದರು.
ವಿಶೇಷ ಆಕರ್ಷಣೆಯ ವಿದ್ಯುತ್ ದೀಪಾಲಂಕಾರ
ಹಂಪಿ ಹಾಗೂ ಸುತ್ತಮುತ್ತಲಿನ ಸುಮಾರು 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇಡೀ ಹಂಪಿ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ.
ಹಂಪಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ಉಂಟಾಗದಂತೆ ಭದ್ರತಾ ದೃಷ್ಟಿಯಿಂದ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ ಒಬ್ಬ ಎಸ್‌ಪಿ, 8 ಅಡಿಷನಲ್ ಎಸ್‌ಪಿ, 15 ಡಿವೈಎಸ್‌ಪಿ ಹಾಗೂ 61 ಇನ್ಸ್ಪೆಕ್ಟರ್‌ಗಳು ಒಳಗೊಂಡಿದ್ದಾರೆ.
ಧ್ವನಿ ಮತ್ತು ಬೆಳಕು ಕಾರ್ಯಕ್ರಮ
ಹಕ್ಕ-ಬುಕ್ಕರ ಇತಿಹಾಸವನ್ನು ಸಾರುವ ವಿಶೇಷ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜಿಸಲಾಗಿದೆ. ಉತ್ಸವ ಮುಗಿದ ಬಳಿಕವೂ ಈ ಕಾರ್ಯಕ್ರಮ 7 ದಿನಗಳ ಕಾಲ ಮುಂದುವರಿಯಲಿದೆ ಎಂದು ತಿಳಿಸಿದರು.
Hampi Utsava ಉಚಿತ ಊಟದ ವ್ಯವಸ್ಥೆ
ಭಕ್ತಾದಿಗಳು ಮತ್ತು ಸಾರ್ವಜನಿಕರಿಗಾಗಿ ಕೃಷ್ಣ ದೇವಸ್ಥಾನದ ಬಳಿ ಸರ್ಕಾರದಿಂದ ಉಚಿತ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿದೆ.
ಉತ್ಸವಕ್ಕಾಗಿ ಸುಮಾರು 14 ರಿಂದ 15 ಕೋಟಿ ರೂಪಾಯಿ ಬಜೆಟ್ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಸಿಇಓ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ, ಎಸ್‌ಪಿ ಜಾಹ್ನವಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯನಗರ ಬೈಕ್ ರ‍್ಯಾಲಿ
ಉತ್ಸವದ ಅಂಗವಾಗಿ ಇಂದು ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಸ್ವತಃ ಬೈಕ್‌ನಲ್ಲಿ ಪಾಲ್ಗೊಂಡು ಅಧಿಕೃತ ಚಾಲನೆ ನೀಡಿದರು.
ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ರ‍್ಯಾಲಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಬೈಕ್‌ಗಳು ಭಾಗವಹಿಸಿತು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾದ ರ‍್ಯಾಲಿ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ, ಅನಂತಶಯನಗುಡಿ, ಕೊಂಡನಾಯಕನಹಳ್ಳಿ, ಮಲಪನಗುಡಿ, ಗಾಳೆಮ್ಮನಗುಡಿ ಹಾಗೂ ಕಡ್ಡಿರಾಂಪುರ ಮಾರ್ಗವಾಗಿ ಹಂಪಿಯ ಶ್ರೀ ವಿರೂಪಾಕ್ಷ ದೇಗುಲದವರೆಗೆ ಯಶಸ್ವಿಯಾಗಿ ತಲುಪಿತು.
ರ‍್ಯಾಲಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಜಿಲ್ಲಾ ಪಂಚಾಯತ್ ಸಿಇಒ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ್ ಷಾ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಸ್ಥಳೀಯ ಕಲಾವಿದರಿಗೆ ಆದ್ಯತೆ
ಸ್ಥಳೀಯ ಕಲಾವಿದರ ಪಟ್ಟಿಯನ್ನೂ ಇದೇ ದಿನ ಬಿಡುಗಡೆ ಮಾಡಲಾಗಿದ್ದು, ಅವರಿಗೆ ಉತ್ಸವದ 6 ವೇದಿಕೆಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗಿದೆ.
ವರದಿ:
ಮುರುಳೀಧರ್ ನಾಡಿಗೇರ್
