Monday, August 10, 2026
Monday, August 10, 2026
Home Blog Page 182

DVS College of Arts, Science and Commerce ಈಗ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ : ಕೆ.ಎಸ್.ಶ್ರೀಕಾಂತ್

0

DVS College of Arts, Science and Commerce ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವಲ್ಲಿ ಜನರು ಹೆಚ್ಚಿನ ಆಸಕ್ತಿ ಹೊಂದಿದ್ದು, ಪ್ರತಿ ವರ್ಷ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತದೆ ಎಂದು ಕುವೆಂಪು ವಿವಿ ಪ್ರವಾಸೋದ್ಯಮ ನಿರ್ವಹಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಎಸ್.ಶ್ರೀಕಾಂತ್ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಸಮಾಜ ಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಮತ್ತು ನಿರ್ವಹಣೆ ವಿಷಯ ಕುರಿತು ಮಾತನಾಡಿದರು.

ಪ್ರವಾಸಕ್ಕೆ ಹೊರಡುವ ವ್ಯಕ್ತಿಯು ಅನೇಕ ಅಂಶಗಳನ್ನು ಪರಿಗಣಿಸಿ ವರ್ಷದಲ್ಲಿ ಆಗಾಗ್ಗೆ ಪ್ರವಾಸ ಕೈಗೊಳ್ಳುತ್ತಾನೆ. ಪ್ರವಾಸಿ ಸ್ಥಳದ ಮಾಹಿತಿ, ಊಟ ವಸತಿ ಸೌಲಭ್ಯ, ಪ್ರಯಾಣ ಮಾಡುವ ರಸ್ತೆ ಹೀಗೆ ಅನೇಕ ಅಂಶಗಳು ಪ್ರವಾಸಿ ಸ್ಥಳದ ಮಹತ್ವ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್ ಮಾತನಾಡಿ, ಪ್ರವಾಸೋದ್ಯಮ ಎಂದರೆ ಅದೊಂದು ಆರ್ಥಿಕತೆಯ ಉದ್ಯಮ. ಈಗ ನಮ್ಮ ಭಾರತದಲ್ಲಿ ಸಣ್ಣ ಹಳ್ಳಿ, ಗುಡಿಸಲುಗಳಿಗೂ ತುಂಬಾ ಬೇಡಿಕೆ ಬರುವ ಸಾಧ್ಯತೆ ಇದೆ. ಏಕೆಂದರೆ ನಗರ ಜೀವನಕ್ಕೆ ಬೇಸತ್ತು ತಮ್ಮ ಆತ್ಮ ಸಂತೋಷಕ್ಕಾಗಿ ಪ್ರಕೃತಿಯ ಮಡಿಲಲ್ಲಿ ಇರುವ ಗುಡಿಸಲು, ಜಲಪಾತಗಳನ್ನು ನೋಡಿ ಜೀವನವನ್ನು ಕಳೆಯಲು ಬಯಸುತ್ತಾರೆ ಎಂದು ತಿಳಿಸಿದರು.

DVS College of Arts, Science and Commerce ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಿ.ಎಸ್.ಪರಮೇಶ್ ಮಾತನಾಡಿ, ಪ್ರವಾಸೋದ್ಯಮ ಎನ್ನುವುದು ಕೇವಲ ಸ್ಥಳದ ಭೇಟಿಯಲ್ಲ ನಮ್ಮ ದೃಶ್ಯಮಾಧ್ಯಮದಲ್ಲಿ ಸ್ಥಳವನ್ನು ವೀಕ್ಷಿಸುವುದಲ್ಲ. ಬದಲಾಗಿ ಸ್ಥಳದ ಹಿನ್ನೆಲೆ, ಸಂಸ್ಕೃತಿ, ಸ್ಥಳದ ಮೌಲ್ಯ, ಜನರ ಜೀವನಶೈಲಿಗಳನ್ನು ತಿಳಿದುಕೊಳ್ಳುವುದು ಮತ್ತು ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾಗಿಸುವ ವೇದಿಕೆಯೇ ಪ್ರವಾಸೋದ್ಯಮ ಆಗಿದೆ ಎಂದು ತಿಳಿಸಿದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಚ್.ಎಸ್.ಪವಿತ್ರಾ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರು- ಆಟೋ ಡಿಕ್ಕಿ ಕಾರು ಪಲ್ಟಿ

0

ಶಿವಮೊಗ್ಗದ ಬೈಪಾಸ್ ರಸ್ತೆಯ ಕಿಯಾ ಶೋ ರೂಂ ಮುಂಭಾಗದಲ್ಲಿ ಕಾರು ಆಟೋ ನಡುವೆ ಮುಖಾ ಮುಖಿಡಿಕ್ಕಿಯಾಗಿರುವ
ಘಟನೆ ನಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿ ಹೊಡೆದಿದೆ. ಅಪಘಾತದಲ್ಲಿ ಆಟೋ ಸಂಪುರ್ಣ ಜಖಂಗೊಂಡಿದೆ. ಆಟೋ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ದಾಖಲಿಸಲಾಗಿದೆ.

India Scouts and Guides ಶಿಕಾರಿಪುರದಲ್ಲಿ ಸ್ಕೌಟ್ & ಗೈಡ್ಸ್ ಸಂಸ್ಥಾಪಕರ ದಿನಾಚರಣೆ

0

India Scouts and Guides ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಶಿಕಾರಿಪುರ ಇಂದು ಸ್ಕೌಟ್ಸ್ ಅಂಡ್ ಗೈಡ್ಸ್ ಅಂತಾರಾಷ್ಟ್ರೀಯ ಸಂಸ್ಥೇಯ ಸಂಸ್ಥಾಪಕರಾದ ಶ್ರೀ ಬೆಡನ್ ಪೊವೆಲ್ ರವರ ಜನ್ಮದಿನಾಚರಣೆ ಮತ್ತು ವಿಶ್ವ ಚಿಂತಕರ ದಿನಾಚರಣೆ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಶತಮಾನೋತ್ಸವ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ಶಿಕಾರಿಪುರ ತಾಲೂಕಿನ ಶಾಲಾ-ಕಾಲೇಜುಗಳಿಂದ ಕಬ್ ಬುಲ್ ಬುಲ್ ಸ್ಕೌಟ್ ಮತ್ತು ಗೈಡ್ ರೋವರ್ಸ್ ಮತ್ತು ರೇಂಜರ್ಸ್ ‌ಬನ್ನಿಸ್ ಮಕ್ಕಳು ಆಗಮಿಸಿದ್ದರು ಕಾರ್ಯಕ್ರಮವು ಸ್ಕೌಟ್ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು ಮುಖ್ಯ ರಸ್ತೆಗಳಲ್ಲಿ ಪತ ಸಂಚಲನ ಮಾಡಿ ಮಾನವ ಸರಪಳಿಯನ್ನು ನಿರ್ಮಿಸಿ, ಕಾರ್ಯಕ್ರಮವನ್ನು ಅಮೋಘವಾಗಿ ನೆರವೇರಿಸಲಾಯಿತು. India Scouts and Guides ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಯ ಕಾರ್ಯ ಅಧ್ಯಕ್ಷರಾದ ಸಿಎಂ ಪರಮೇಶ್ವರಯ್ಯ ಕಾರ್ಯದರ್ಶಿಗಳಾದ ಶ್ರೀರಾಮಚಂದ್ರಪ್ಪ ಖಜಾಂಚಿಗಳಾದ ಶ್ರೀ ಎಸ್ ಕೆ ಚಂದ್ರಪ್ಪ ಜಿಲ್ಲಾ ಸಾಹಾಯಕ. ಆಯುಕ್ತರಾದ ಶ್ರೀ ಡಾ. ಸುನಿಲ್ ಕುಮಾರ್. ರೊವರ್ಸ ಲೀಡರ್ಸ್ ಶ್ರೀ ಸದಾಶಿವಯ್ಯ ಜಿ ಜೆ ಸಿ ಶಿಕಾರಿಪುರ ಫ್ಲಾಗ್ ಲೀಡರ್ಸ್ ಆದ ಶ್ರೀಮತಿ ಶಾರದಮ್ಮ ಜಿ ಹೆಚ್ ಪಿ ಎಸ್ ಈಸೂರು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಲಾಯಿತು

Chamber of commerce shivamogga ಮೌಲ್ಯಾಧಾರಿತ ಸಮಾಜ ಸ್ಥಾಪನೆಯ ಗುರಿ ಬ್ರಹ್ಮಕುಮಾರಿ ಸಂಸ್ಥೆಯದ್ದಾಗಿದೆ- ಜಿ. ವಿಜಯ ಕುಮಾರ್

0

Chamber of commerce shivamogga ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯು ಸಮಾಜದ ಕಲ್ಯಾಣಕ್ಕಾಗಿ ಸಮರ್ಪಣೆಯಾಗಿದ್ದು, ತ್ಯಾಗ ಮನೋಭಾವ ಹೊಂದಿರುವ ಮಹಿಳೆಯರು ನಡೆಸುತ್ತಿರುವ ಸೇವಾ ಸಂಸ್ಥೆಯಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.

ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ 90ನೇ ವಾರ್ಷಿಕೋತ್ಸವ ಸಮಾರಂಭ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಂತರಾಷ್ಟ್ರೀಯ ಸಂಸ್ಥೆಯಾಗಿ ಎಲ್ಲ ಹಿನ್ನೆಲೆಯ ಜನರಿಗೆ ಧ್ಯಾನವನ್ನು ಕಲಿಯಲು ಮತ್ತು ಸಾರ್ವತ್ರಿಕ ತತ್ವಗಳು ಮತ್ತು ಮೌಲ್ಯಗಳ ಬಗ್ಗೆ ಅವರ ತಿಳವಳಿಕೆ ಹೆಚ್ಚಿಸಲು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಕಲಿಕಾ ಸಂಪನ್ಮೂಲಗಳ ಮೂಲಕ ಅವಕಾಶ ನೀಡುತ್ತಿದೆ. ಮೌಲ್ಯಾಧಾರಿತ ಸಮಾಜವನ್ನು ಸ್ಥಾಪಿಸುವ ಗುರಿಗೆ ಸಮರ್ಪಿತವಾಗಿವೆ. ಸಂಸ್ಥೆಯು ಕಾಳಜಿಯುಳ್ಳ, ಸಹಕಾರಿ ಮತ್ತು ಬೆಂಬಲ ನೀಡುವ ವಾತಾವರಣವನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಸ್ವಾತಿ ಅಕ್ಕ ಮಾತನಾಡಿ, ಸಂಸ್ಥೆಯು ನೀಡುವ ಶಿಕ್ಷಣವು ಸ್ಪಷ್ಟವಾಗಿ ಆಧ್ಯಾತ್ಮಿಕವಾಗಿದ್ದರೂ, ನೀತಿಶಾಸ್ತ್ರ, ಪ್ರಾಯೋಗಿಕ ಮನೋವಿಜ್ಞಾನ, ತತ್ವಶಾಸ್ತ್ರ, ವಿಶ್ವ ಇತಿಹಾಸ ಮತ್ತು ಸಂಸ್ಕೃತಿಯ ಸಾರಾಂಶ, ಸಮಾಜಶಾಸ್ತ್ರ, ರಾಜಕೀಯ ವಿಜ್ಞಾನ ಮತ್ತು ಹಲವಾರು ಇತರ ವಿಷಯಗಳ ಮಿಶ್ರಣವಾಗಿದೆ ಎಂದರು.

ಈ ಸಂಸ್ಥೆಯು ಪ್ರತಿಯೊಬ್ಬ ಮನುಷ್ಯನ ಆಂತರಿಕ ಆಧ್ಯಾತ್ಮಿಕತೆಯನ್ನು ಗುರುತಿಸುತ್ತದೆ ಮತ್ತು ಜನರು ತಮ್ಮೊಳಗಿನ ಒಳ್ಳೆಯತನವನ್ನು ಮರುಶೋಧಿಸಲು ಸಹಾಯ ಮಾಡುತ್ತದೆ. ಕಲಿಕೆಯ ಪ್ರಕ್ರಿಯೆಯ ಮೂಲಕ ಆಧ್ಯಾತ್ಮಿಕ ಅರಿವಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಸುಗಮಗೊಳಿಸುತ್ತದೆ. ಪ್ರೀತಿ ಮತ್ತು ಸಹಕಾರದ ಮನೋಭಾವವನ್ನು ಉತ್ತೇಜಿಸಲು ಜನರ ವರ್ತನೆಗಳು ಮತ್ತು ದೃಷ್ಟಿಕೋನಗಳನ್ನು ಬದಲಾಯಿಸುವತ್ತ ಗಮನಹರಿಸುತ್ತವೆ. ಜಾತಿ, ಮತ, ವಯಸ್ಸು ಮತ್ತು ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ ಸ್ಥಾನಮಾನವನ್ನು ಲೆಕ್ಕಿಸದೆ ಸಂಸ್ಥೆ ಎಲ್ಲರಿಗೂ ಮುಕ್ತವಾಗಿದೆ ಎಂದರು.

Chamber of commerce shivamogga ಉಪ ತಹಸೀಲ್ದಾರ್ ಗಿರಿರಾಜ್ ಎಸ್.ಒ., ತೆರಿಗೆ ಸಲಹೆಗಾರ ಆರ್.ಮನೋಹರ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ಬಾಲ್ಯದ ನೆನಪು ಕೊಡುವ ಕ್ರೀಡಾಕೂಟಗಳು ಶಿಕ್ಷಕರಿಗೂ ಅಗತ್ಯವಾಗಿದೆ- ಕಾಳನಾಯ್ಕ

0

ಪ್ರತಿ ನಿತ್ಯ ಮಕ್ಕಳಿಗೆ ಶಿಸ್ತು,ಕ್ರೀಡೆಯ ಬಗ್ಗೆ ಹರಿವು ಮೂಡಿಸುವಂತಹ ಕೆಲಸವನ್ನು ಮಾಡುತ್ತಿರುವ ಶಿಕ್ಷಕರು,ಇಂದು ಪ್ರತಿನಿತ್ಯ ಕೆಲಸದ ಒತ್ತಡದಿಂದ ಒಂದು ದಿನ ಬಿಡುವು ಮಾಡಿಕೊಂಡು ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆಯಲ್ಲಿ ಭಾಗವಹಿಸಿ ಅವರ ಬಾಲ್ಯದ ನೆನಪು ಮಾಡಿಕೊಳ್ಳುವಂಥ ಒಂದು ಸಂದರ್ಭದ ದಿನ ಎಂದು ತಾಲ್ಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕಾಳನಾಯ್ಕ ಅಭಿಪ್ರಾಯಪಟ್ಟರು.
ಅವರು ಶಿವಮೊಗ್ಗದ ಶಾರದಾದೇವಿ ಅಂದರ ವಿಕಾಸ ಶಾಲಾ ಕ್ರೀಡಾಂಗಣದಲ್ಲಿ ಸ್ನೇಹ ಮಿಲನ ಸಂಸ್ಥೆ ವತಿಯಿಂದ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ಶಿವಮೊಗ್ಗ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ನಾಲ್ಕನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡುತ್ತಾ, ಕ್ರೀಡಾಕೂಟದಲ್ಲಿ ಪ್ರೀತಿ,ವಿಶ್ವಾಸದಿಂದ ಭಾಗವಹಿಸಿ,ವರ್ಷಕ್ಕೊಮ್ಮೆ ಇಂತಹ ಕ್ರೀಡೆಗಳು ಶಿಕ್ಷಕರಿಗೆ ಅಗತ್ಯವಾಗಿ ಬೇಕಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ. ಹ. ತಿಮ್ಮೇನಹಳ್ಳಿ ಮಾತನಾಡುತ್ತಾ,ಕ್ರೀಡೆಯನ್ನು ಆಯೋಜನೆ ಮಾಡಿರುವಂತಹ ನವೀನ್ ರವರ ಕಾರ್ಯ ವೈಕರಿಯನ್ನು ಶ್ಲಾಗಿಸಿದರು. ಇದೇ ಸಂದರ್ಭದಲ್ಲಿ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು ಸಮವಸ್ತ್ರದೊಂದಿಗೆ, ಸುಮಾರು 6 ತಂಡಗಳು ಲೀಗ್ ಮಾದರಿಯ ಕ್ರಿಕೆಟ್ ನಲ್ಲಿ ಪ್ರೀತಿ,ವಿಶ್ವಾಸ,ಸಂತೋಷದಿಂದ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಇನ್ನೂ ವಿಶೇಷವಾಗಿ ಕ್ರೀಡೆಗಳನ್ನು ಆಯೋಜನೆ ಮಾಡೋಣ ಎಂದು ತಮ್ಮ ವೃತ್ತಿ ಬಾಂಧವರಿಗೆ ತಿಳಿಸಿದರು.
ವಿಜೇತ ತಂಡಗಳಿಗೆ ಅತ್ಯಾಕರ್ಷಕ ಟ್ರೋಪಿ,ವೈಯಕ್ತಿಕ ಬಹುಮಾನಗಳು ನೀಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರುಗಳಿಗೆ ಸಂಸ್ಥೆಯ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ್ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವತ್ತೂ ನೆನಪಿನಲ್ಲಿರು ವಂತಹ ಯಾರಾದರೂ ಶಿಕ್ಷಕರಿದ್ದಾರೆ ಅಂದರೆ ಅದು ದೈಹಿಕ ಶಿಕ್ಷಣ ಶಿಕ್ಷಕರು ಮಾತ್ರ, ಆತನನ್ನು ತಿದ್ದಿ,ತೀಡಿ,ಶಿಸ್ತಿನಿಂದ ಒಬ್ಬ ಸತ್ಪ್ರಜೆಯನ್ನಾಗಿ ಮಾಡುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದರು.
ಶಿವಮೊಗ್ಗ ಜಿಲ್ಲಾ ಅನುದಾನಕಾರ್ಯದರ್ಶಿ ಮಹೇಶ್ ಹುಲ್ಲತ್ತಿ, ಸೋಮಶೇಖರ್, ರಾಕೇಶ್, ಯೋಗೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಸ್ವಾಭಿಮಾನ ಮತ್ತು ಸಂಘಟನೆಯ ಮೂಲಕ ಮಾದಿಗ ಸಮಾಜ ಮುಂದೆ ಬರಬೇಕು-ಶಿವಾಜಿ

0

ಸ್ವಾಭಿಮಾನ ಮತ್ತು ಸಂಘಟನೆಯ ಮೂಲಕ ಮಾದಿಗ ಸಮಾಜ ಮುಂದೆ ಬರಬೇಕು, ಮಕ್ಕಳನ್ನು ಉತ್ತಮ ಶಿಕ್ಷಿತರನ್ನಾಗಿಸಬೇಕು ಎಂದು ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಾಜಿ ಕರೆ ನೀಡಿದರು.
ತಾಲೂಕಿನ ಆನವಟ್ಟಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾದ ತಾಲೂಕು ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದರ ಮಹಾಸಭಾದ ಮುಖ್ಯ ಉದ್ದೇಶ ಕಡು ಬಡವರಿಗೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು, ಸಮಾಜದಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಬೇಕು. ಈ ಮೂಲಕ ಮುಂದುವರೆದ ಸಮಾಜದಂತೆ ಬದುಕು ಕಟ್ಟಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ.ಎಚ್. ಮುನಿಯಪ್ಪ ಅವರ ಮಾರ್ಗದರ್ಶನ ಮತ್ತು ಹಿರಿಯರ ಆಶೀರ್ವಾದದಿಂದ ಸಂಘಟನೆ ಬಲಿಷ್ಠವಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾಗಿ ಗುಡ್ಡಪ್ಪ ದೊಡ್ಡಮನಿ ಅವರನ್ನು ಆಯ್ಕೆ ಮಾಡಲಾಯಿತು, ಗೌರವಾಧ್ಯಕ್ಷರಾಗಿ ನಾಗರಾಜ ಆನವಟ್ಟಿ, ಉಪಾಧ್ಯಕ್ಷರಾಗಿ ಲಿಂಗರಾಜ ನೀರಲಿಗಿ, ಹನುಮಂತಪ್ಪ ತಲ್ಲೂರು, ಕಾರ್ಯದರ್ಶಿಗಳಾಗಿ ರಮೇಶ್ ಗಿಣಿವಾಲ, ಅಭಿಲಾಷ್ ಎನ್. ಹುರುಳಿ ಕೊಪ್ಪ ಅವರನ್ನು ಆಯ್ಕೆಮಾಡಿ ಅಭಿನಂದಿಸಲಾಯಿತು.
ಲೋಕೇಶ್ ತಿಮ್ಲಾಪುರ, ಹೊಳಿಯಪ್ಪ ಗಾಮಾ, ಮಂಜಣ್ಣ ಬೀರನಕರೆ, ನಾಗರಾಜ ಹುರುಳಿ ಕೊಪ್ಪ ಸೇರಿದಂತೆ ತಾಲೂಕು ಮತ್ತು ಸುತ್ತಲಿನ ಹತ್ತಾರು ಗ್ರಾಮಗಳ ನೂರಾರು ಸಮಾಜ ಬಾಂಧವರು ಸೇರಿದ್ದರು.
ಪ್ರಸ್ತಾವಿಕವಾಗಿ ನಾಗಪ್ಪ ಮಾಸ್ತರ್ ಮಾತನಾಡಿದರು. ಅಭಿಲಾಷ್ ಹುರುಳಿಕೊಪ್ಪ ಸ್ವಾಗತಿಸಿದರು. ನಾಗರಾಜ ಹುರುಳಿಕೊಪ್ಪ ಕ್ರಾಂತಿಗೀತೆ ಹಾಡಿದರು.
ಫೋಟೋ
೨೩ ಸೊರಬ ೦೧ : ಸೊರಬ ತಾಲೂಕಿನ ಆನವಟ್ಟಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಮೂಲ್ಯ ‘ಸಂ’ಶೋಧಕ , ಎಚ್.ಖಂಡೋಬ ಅವರಿಗೆ ಸ್ವಗೃಹದಲ್ಲೇ ಸನ್ಮಾನ

0

ಶಿವಮೊಗ್ಗ ಶ್ರೀ ಅಂಬಾಭವಾನಿ ದೇವಸ್ಥಾನದ ಜೀಜಾಬಾಯಿ ಮರಾಠ ಮಹಿಳಾ ಮಂಡಳಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಅಮೂಲ್ಯ ಶೋಧ ಮ್ಯೂಸಿಯಂನ ಸ್ಥಾಪಕರು, ಇತಿಹಾಸ ಸಂಶೋಧಕರೂ ಆದ ಮರಾಠ ಸಮಾಜದ ಗಣ್ಯ ವ್ಯಕ್ತಿಗಳಲ್ಲಿ ಓರ್ವರಾದ ಹೆಚ್. ಖಂಡೋಬರಾವ್ ಅವರನ್ನು ಮನೆಬಾಗಿಲಲ್ಲೇ ಸನ್ಮಾನಿಸಿ, ಗೌರವಿಸಲಾಯಿತು.ಮಂಡಳಿ ಅಧ್ಯಕ್ಷೆ ಉಷಾ ಪಿ. ಮೋರೆ, ಪ್ರಧಾನ ಕಾರ್ಯದರ್ಶಿ ಕೆ. ಮಂಜುಳಾ, ಖಜಾಂಚಿ ಗೀತಾ ಗೋಪಾಲ್ ಮೋಹಿತೆ, ಉಪಾಧ್ಯಕ್ಷೆ ಆರ್. ವೀಣಾ, ಸಹಕಾವ್ಯದರ್ಶಿ ಪೂಜಾ, ಕೋಶಾಧ್ಯಕ್ಷೆ ಲೋಲಾಕ್ಷಿ ಬಾಯಿ, ಸಂಘಟನಾ ಕಾವ್ಯದರ್ಶಿ ಎಸ್.ಕೆ. ಲಕ್ಷ್ಮಿ ಹಾಗೂ ನಿರ್ದೇಶಕರಿದ್ದರು

Sahyadri Narayana Multispeciality Hospital ಕ್ಯಾನ್ಸರ್ ಗೆದ್ದ ವೃದ್ಧೆ. ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವೈದ್ಯರ ತಂಡದ ಸಾಧನೆ ತಿಳಿಯಲು ಈ ಸುದ್ದಿ ಓದದೇ ಬಿಡಬೇಡಿ

0

Sahyadri Narayana Multispeciality Hospital ಸಕಾಲದಲ್ಲಿ ರೋಗ ಪತ್ತೆ, ಪರಿಣತ ವೈದ್ಯರ ಕೌಶಲ್ಯ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ರೋಗಿಯೊಬ್ಬರ ಜೀವವನ್ನು ಹೇಗೆ ಉಳಿಸಬಹುದು ಎಂಬುದಕ್ಕೆ ಇತ್ತೀಚೆಗೆ ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಘಟನೆ ಒಂದು ಉತ್ತಮ ಉದಾಹರಣೆಯಾಗಿದೆ.

ಈ ಮೂಲಕ 75 ವರ್ಷದ ವೃದ್ಧೆಯೊಬ್ಬರನ್ನು ಗ್ಯಾಸ್ಟ್ರಿಕ್ ಕ್ಯಾನ್ಸರ್ (ಜಠರದ ಕ್ಯಾನ್ಸರ್) ನಿಂದ ಸಂಪೂರ್ಣವಾಗಿ ಗುಣಪಡಿಸಲಾಗಿದೆ.

ಸಂಕೀರ್ಣ ಪ್ರಕರಣಗಳನ್ನು ನಿಭಾಯಿಸುವಲ್ಲಿ ಹೆಸರುವಾಸಿಯಾಗಿರುವ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಶಿವಕುಮಾರ್ ವಿ. ಅವರು, ಯಾವುದೇ ದೊಡ್ಡ ಶಸ್ತ್ರಚಿಕಿತ್ಸೆಯಿಲ್ಲದೆ ‘ಮಿನಿಮಲಿ ಇನ್ವೇಸಿವ್ ಎಂಡೋಸ್ಕೋಪಿಕ್’ ತಂತ್ರಜ್ಞಾನದ ಮೂಲಕ ಈ ವೃದ್ಧೆಯಲ್ಲಿದ್ದ ಆರಂಭಿಕ ಹಂತದ ಜಠರದ ಕ್ಯಾನ್ಸರನ್ನು ಯಶಸ್ವಿಯಾಗಿ ಗುಣಪಡಿಸಿದ್ದಾರೆ.

ಇಂತಹ ಅತ್ಯಂತ ಸಂಕೀರ್ಣ ಹಾಗೂ ಅಪರೂಪದ ಚಿಕಿತ್ಸಾ ವಿಧಾನವನ್ನು ಈ ಭಾಗದ ಆಸ್ಪತ್ರೆಯೊಂದರಲ್ಲಿ ಯಶಸ್ವಿಯಾಗಿ ನಿರ್ವಹಿಸಿರುವುದು ಬಹುಶಃ ಇದೇ ಮೊದಲು.

ದೀರ್ಘಕಾಲದ ಹೊಟ್ಟೆನೋವು ಹಾಗೂ ಅಸ್ವಸ್ಥತೆಯಿಂದ ಬಳಲುತ್ತಿದ್ದ ಈ ವೃದ್ಧೆ ಹೊರರೋಗಿ ವಿಭಾಗಕ್ಕೆ (OPD) ಭೇಟಿ ನೀಡಿದ್ದರು. ಪ್ರಾಥಮಿಕ ತಪಾಸಣೆಯಲ್ಲಿ ಎಲ್ಲವೂ ಸಾಮಾನ್ಯವೆನಿಸಿದರೂ, ರಕ್ತಪರೀಕ್ಷೆಯಲ್ಲಿ ಸ್ವಲ್ಪ ಮಟ್ಟದ ರಕ್ತಹೀನತೆ (ಅನೀಮಿಯಾ) ಇರುವುದು ಕಂಡುಬಂತು.

ಇದರಿಂದ ಸಂತೃಪ್ತರಾಗದ ಡಾ. ಶಿವಕುಮಾರ್ ಅವರು ‘ಅಪ್ಪರ್ ಗ್ಯಾಸ್ಟ್ರೋಇಂಟಸ್ಟೈನಲ್ ಎಂಡೋಸ್ಕೋಪಿ’ (Upper GI Endoscopy) ಪರೀಕ್ಷೆ ನಡೆಸಿದರು. ಈ ವೇಳೆ ಜಠರದ ಒಳಭಾಗದಲ್ಲಿ ರಕ್ತಸ್ರಾವದ ಲಕ್ಷಣಗಳು (hyperaemia) ಹಾಗೂ ಹೊಟ್ಟೆಯ ಕೆಳಭಾಗದಲ್ಲಿ ಸಣ್ಣ ಗಡ್ಡೆಯಂತಹ ರಚನೆ ಇರುವುದು ಪತ್ತೆಯಾಯಿತು.

ನಂತರ ನಡೆಸಲಾದ ಬಯಾಪ್ಸಿ (Biopsy) ಪರೀಕ್ಷೆಯಿಂದ ಇದು ಆರಂಭಿಕ ಹಂತದ ಗ್ಯಾಸ್ಟ್ರಿಕ್ ಕಾರ್ಸಿನೋಮ (ಜಠರದ ಕ್ಯಾನ್ಸರ್) ಎಂದು ದೃಢಪಟ್ಟಿತು. ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡಿದೆಯೇ ಎಂದು ತಿಳಿಯಲು ಸಿಟಿ (CT) ಹಾಗೂ ಪೆಟ್-ಸಿಟಿ (PET-CT) ಸ್ಕ್ಯಾನ್ ಮಾಡಲಾಯಿತು, ಅದೃಷ್ಟವಶಾತ್ ಕ್ಯಾನ್ಸರ್ ಎಲ್ಲೂ ಹರಡಿರಲಿಲ್ಲ. ‘ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್’ (EUS) ಪರೀಕ್ಷೆಯಲ್ಲಿ ಕೇವಲ 1.5 ಸೆಂಟಿಮೀಟರ್ ಗಾತ್ರದ ಸಣ್ಣ ಗಡ್ಡೆಯು ಜಠರದ ಮೇಲ್ಪದರಕ್ಕೆ ಮಾತ್ರ ಸೀಮಿತವಾಗಿದ್ದು, ಒಳಪದರಗಳಿಗೆ ವ್ಯಾಪಿಸಿಲ್ಲ ಎಂಬುದು ಖಚಿತವಾಯಿತು.

ಕ್ಯಾನ್ಸರ್ ಗಡ್ಡೆಯು ಪ್ರಾಥಮಿಕ ಹಂತದಲ್ಲಿದ್ದು, ಸಣ್ಣ ಗಾತ್ರದಲ್ಲಿದ್ದ ಕಾರಣ, ಡಾ. ಶಿವಕುಮಾರ್ ನೇತೃತ್ವದ ವೈದ್ಯರ ತಂಡವು ‘ಎಂಡೋಸ್ಕೋಪಿಕ್ ಸಬ್ಮ್ಯೂಕೋಸಲ್ ಡಿಸೆಕ್ಷನ್’ (ESD) ಎಂಬ ಅತ್ಯಾಧುನಿಕ ಚಿಕಿತ್ಸಾ ವಿಧಾನವನ್ನು ಆಯ್ಕೆಮಾಡಿಕೊಂಡಿತು. ಎಂಡೋಸ್ಕೋಪಿ ಮೂಲಕವೇ ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವ ವಿಶೇಷ ವಿಧಾನ ಇದಾಗಿದೆ. ಜನರಲ್ ಅರಿವಳಿಕೆ (ಅನಸ್ತೇಶಿಯಾ) ನೀಡಿ, ಹೈ-ಡೆಫಿನಿಷನ್ ಅಪ್ಪರ್ ಜಿಐ ಎಂಡೋಸ್ಕೋಪ್ ಜೊತೆಗೆ ಸುಧಾರಿತ ERBE VIO 3 ಬೈಪೋಲಾರ್ ತಂತ್ರಜ್ಞಾನವನ್ನು ಬಳಸಿ ಈ ಚಿಕಿತ್ಸೆಯನ್ನು ನೆರವೇರಿಸಲಾಯಿತು ಎಂದು ಡಾ. ಶಿವಕುಮಾರ್ ತಿಳಿಸಿದ್ದಾರೆ.

ಸತತ ಮೂರು ಗಂಟೆಗಳ ಕಾಲ ನಡೆದ ಈ ಚಿಕಿತ್ಸೆಯಲ್ಲಿ, ಗಡ್ಡೆಯ ಅಂಚುಗಳನ್ನು ಎಚ್ಚರಿಕೆಯಿಂದ ಗುರುತಿಸಿ, ಅದನ್ನು ಮೇಲಕ್ಕೆತ್ತಿ ಸಬ್ಮ್ಯೂಕೋಸಲ್ ಪದರದಿಂದ ಬೇರ್ಪಡಿಸಲಾಯಿತು. ರಕ್ತಸ್ರಾವವಾಗದಂತೆ ಎಚ್ಚರವಹಿಸಿ ರಕ್ತನಾಳಗಳನ್ನು ಕರಾರುವಾಕ್ಕಾಗಿ ಮುಚ್ಚಲಾಯಿತು. ಚಿಕಿತ್ಸೆಯ ನಂತರ ಚೇತರಿಸಿಕೊಂಡ ರೋಗಿಯನ್ನು ಮೂರನೇ ದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು ಎಂದು ಅವರು ವಿವರಿಸಿದರು.

Sahyadri Narayana Multispeciality Hospital ಚಿಕಿತ್ಸೆಯ ನಂತರದ ಹಿಸ್ಟೋಪ್ಯಾಥಾಲಾಜಿಕಲ್ (Histopathological) ಪರೀಕ್ಷೆಯಲ್ಲಿ ಕ್ಯಾನ್ಸರ್ ಗಡ್ಡೆಯನ್ನು ಅದರ ಅಂಚುಗಳ ಸಮೇತ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ದೇಹದಲ್ಲಿ ಕ್ಯಾನ್ಸರ್ನ ಯಾವುದೇ ಅಂಶಗಳು ಉಳಿದಿಲ್ಲ ಎಂಬುದು ದೃಢಪಟ್ಟಿದೆ.

ಈ ಕುರಿತು ಮಾತನಾಡಿದ ಡಾ. ಶಿವಕುಮಾರ್, “ದೀರ್ಘಕಾಲದ ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಆರಂಭದಲ್ಲಿಯೇ ರೋಗವನ್ನು ಪತ್ತೆಹಚ್ಚುವುದು ಎಷ್ಟು ಮುಖ್ಯ ಹಾಗೂ ಅದು ಹೇಗೆ ಜೀವ ಉಳಿಸಬಲ್ಲದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಿದರೆ, ದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಕೇವಲ ಸುಧಾರಿತ ಎಂಡೋಸ್ಕೋಪಿಕ್ ವಿಧಾನಗಳ ಮೂಲಕವೇ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಇದರಿಂದ ರೋಗಿಯೂ ವೇಗವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ,” ಎಂದರು.

ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವರ್ಗೀಸ್ ಪಿ. ಜಾನ್ ಅವರು ಮಾತನಾಡಿ, “ರೋಗವನ್ನು ತ್ವರಿತವಾಗಿ ಪತ್ತೆಹಚ್ಚುವಿಕೆ, ಸುಧಾರಿತ ಎಂಡೋಸ್ಕೋಪಿಕ್ ತಂತ್ರಜ್ಞಾನ ಮತ್ತು ನುರಿತ ವೈದ್ಯರ ಸಮೂಹದ ಪ್ರಯತ್ನವೇ ಈ ಯಶಸ್ಸಿಗೆ ಕಾರಣ. ನಮ್ಮ ಭಾಗದ ಜನರಿಗೆ ವಿಶ್ವದರ್ಜೆಯ, ಕನಿಷ್ಠ ನೋವಿನ (ಮಿನಿಮಲಿ ಇನ್ವೇಸಿವ್) ಕ್ಯಾನ್ಸರ್ ಚಿಕಿತ್ಸೆಯನ್ನು ಸ್ಥಳೀಯವಾಗಿಯೇ ಒದಗಿಸುವುದು ನಮ್ಮ ಆಸ್ಪತ್ರೆಯ ಪ್ರಮುಖ ಉದ್ದೇಶವಾಗಿದೆ,” ಎಂದರು. ಈ ಯಶಸ್ವಿ ಚಿಕಿತ್ಸೆಗಾಗಿ ಅರಿವಳಿಕೆ (ಅನಸ್ತೇಶಿಯಾ) ವಿಭಾಗ, ತಂತ್ರಜ್ಞರು ಹಾಗೂ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಡಾ. ಸುಮೇಶ್ ನಾಯರ್, ಡಾ. ಪೂಜಾ ಮತ್ತು ಡಾ. ಉಮೇಶ್ ಅವರನ್ನೊಳಗೊಂಡ ತಂಡವನ್ನು ಅವರು ಅಭಿನಂದಿಸಿದರು.

Klive Special Article ಇಂದಿನ ರಾಜಕಾರಣಕ್ಕೆ ಅಂದೇ ಕನ್ನಡಿಯಾದ ಕಲ್ಲಿನ ಪಾಠಗಳು…

0

ಲೇ: ಡಾ.ರವಿ.ಎಂ‌.ಸಿದ್ಲಿಪುರ

Klive Special Article ನಾನು ನಮ್ಮ ಫಸ್ಟ್ ಇಯರ್ ಕನ್ನಡ ಆಪ್ಷನಲ್ ಮಕ್ಕಳ ಮುಂದೆ ನಿಂತು, ಕನ್ನಡ ಶಾಸನಗಳ ಬಗ್ಗೆ ಬಹಳ ಗಂಭೀರವಾಗಿ ಪಾಠ ಶುರುಮಾಡಿಕೊಂಡಿದ್ದೆ. ‘ವಿದ್ಯಾರ್ಥಿಗಳೇ, ಹಲ್ಮಿಡಿ ಶಾಸನ, ಕ್ರಿಸ್ತ ಶಕ 450… ಕನ್ನಡದ ಪ್ರಾಚೀನತೆ… ಭಾಷೆಯ ಸೊಗಸು…’ ಅಂತೆಲ್ಲಾ ಪೀಠಿಕೆ ಹಾಕುತ್ತಿದ್ದಾಗ, ಹಿಂಬದಿಯ ಬೆಂಚಿನಲ್ಲಿ ಯಾರೋ ಆಕಳಿಸುತ್ತಿದ್ದುದು ಕೇಳಿಸಿತು. ಅವರನ್ನು ಎಚ್ಚರಿಸೋಣವೆಂದು ನೋಡಿದರೆ, ನನಗೇ ನಗು ಬಂದುಬಿಟ್ಟಿತು! ಯಾಕೆಂದರೆ, ಆ ಹಲ್ಮಿಡಿಯ ಕಲ್ಲನ್ನು ಕೆತ್ತಿದವನು ಅಂದು ಬರೆದದ್ದು ಇತಿಹಾಸವನ್ನಲ್ಲ, ಬದಲಿಗೆ ನಮ್ಮ ದೇಶದ ರಾಜಕೀಯದ ಕಾಲಾತೀತ ಸತ್ಯವನ್ನು! ಅಂಥ ನನ್ನ ತಲೆಯಲ್ಲಿ ಟ್ಯೂಬ್‌ಲೈಟ್ ಹೊತ್ತಿಕೊಂಡಿತ್ತು. ಕಲ್ಲಿನ ಮೇಲಿನ ವಿವರಗಳು ಇಂದಿನ ರಾಜಕೀಯ ನಾಯಕರ ದಿನಚರಿಯಂತೆ ಕಾಣಿಸತೊಡಗಿದ್ದವು! ಆ ಕಾಲದ ಕಲ್ಲುಗಳು ಇಂದಿನ ವಾಟ್ಸಾಪ್ ಫಾರ್ವರ್ಡ್‌ಗಳಿಗಿಂತ ಹೆಚ್ಚು ಪ್ರಸ್ತುತ ಅನ್ನಿಸಿದ್ದು ಸುಳ್ಳಲ್ಲ.

ಮೊದಲಿಗೆ ಹಲ್ಮಿಡಿ ಶಾಸನವನ್ನೇ ತೆಗೆದುಕೊಳ್ಳೋಣ? ಅದರ ಕಥೆಯೇನು? ವಿಜಅರಸನೆಂಬ ಯೋಧ ಕೇಕಯ-ಪಲ್ಲವರ ವಿರುದ್ಧ ಭರ್ಜರಿಯಾಗಿ ಹೋರಾಡಿ ಗೆಲ್ಲುತ್ತಾನೆ. ಆಗ ರಾಜನ ಪರವಾಗಿ ಪಶುಪತಿ ಎಂಬ ಅಧಿಕಾರಿ, ಆತನ ಪರಾಕ್ರಮಕ್ಕೆ ಮೆಚ್ಚಿ ‘ಪಲ್ಮಡಿ’ ಮತ್ತು ‘ಮೂಳಿವಳ್ಳಿ’ ಎಂಬ ಎರಡು ಸಮೃದ್ಧ ಗ್ರಾಮಗಳನ್ನೇ ‘ಬಾಳ್ಗಳ್ಚು’ (ವೀರರ ಕೊಡುಗೆ) ಆಗಿ ಕೊಡುತ್ತಾನೆ. ಈ ಹಳ್ಳಿಗಳೇನು ಅರಸನ ಹೆಸರಲ್ಲಿ ಇದ್ದವು ಅಲ್ಲ. ಅವು ಊರಿನ ಆಸ್ತಿ. ಅಷ್ಟೇ ಅಲ್ಲ, ‘ಸೇನ್ದ್ರಕ ಬಣೋಭಯ ದೇಶದಾ ವೀರಪುರುಷ ಸಮಕ್ಷದೆ’ ಅಂದರೆ, ಎಲ್ಲ ಪ್ರಮುಖರ ಸಮ್ಮುಖದಲ್ಲಿ ಈ ದಾನವನ್ನು ಘೋಷಿಸಲಾಗುತ್ತದೆ.

ಈಗ ಇದೇ ದೃಶ್ಯವನ್ನು ನಮ್ಮ ಕಾಲಕ್ಕೆ ತಂದುಕೊಳ್ಳಿ. ನಮ್ಮ ಕಾಲದ ‘ವಿಜಅರಸರು’ ಯಾರು? ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರಿ, ಸರ್ಕಾರ ರಚಿಸಲು ಅಥವಾ ಬೀಳಿಸಲು ಸಹಾಯ ಮಾಡುವ ಶಾಸಕರು! ಅವರೂ ಒಂದು ರೀತಿಯಲ್ಲಿ ‘ರಾಜಕೀಯ ಯುದ್ಧ’ ಗೆದ್ದವರೇ. ನಡುವೆಯೇ ನಾನು ಹುಡುಗರನ್ನು ಕೇಳಿದೆ, ‘ವಿದ್ಯಾರ್ಥಿಗಳೆ, ಇವತ್ತಿನ ಬಾಳ್ಗಳ್ಚು ಅಂದ್ರೆ ಏನು?’ ಯಾರೋ ಒಬ್ಬ ಚುರುಕ, ‘ಸರ್, ಮಿನಿಸ್ಟರ್ ಪೋಸ್ಟ್ ಸರ್!’ ಅಂದ. ಕರೆಕ್ಟ್! ಅಂದು, ಅವರಿಗೆ ಸಿಗುವ ‘ಬಾಳ್ಗಳ್ಚು’ ಹಳ್ಳಿಗಳಲ್ಲ, ಬದಲಾಗಿ ಯಾವುದೋ ಪ್ರಬಲ ಖಾತೆ, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಅಥವಾ ಮುಂದಿನ ಚುನಾವಣೆಗೆ ಗಟ್ಟಿ ಟಿಕೆಟ್! ಅಂದಿನ ‘ವೀರಪುರುಷರ ಸಮಕ್ಷದಲ್ಲಿ’ ನಡೆದ ಸಮಾರಂಭ, ಇಂದಿನದು ರಾಜಭವನದ ಹುಲ್ಲುಹಾಸಿನ ಮೇಲೆ, ಟಿವಿ ಕ್ಯಾಮೆರಾಗಳ ಸಮ್ಮುಖದಲ್ಲಿ ‘ಪ್ರಮಾಣ ವಚನ’ವಾಗಿ ನಡೆಯುತ್ತದೆ! ಆಗ ‘ಪಲ್ಮಡಿ’ ಸಿಕ್ಕರೆ, ಈಗ ‘ಇಂಧನ ಖಾತೆ’ ಅಥವಾ ‘ಬೆಂಗಳೂರು ನಗರಾಭಿವೃದ್ಧಿ’ಯಂತಹ ಫಲವತ್ತಾದ ‘ಹಳ್ಳಿಗಳು’ ಸಿಗುತ್ತವೆ.

ನಾನು ಪಾಠ ಮುಂದುವರೆಸಿದೆ. ‘ಹಲ್ಮಿಡಿ ಶಾಸನದ ಕೊನೆಯಲ್ಲಿ ‘ಕಳ್ದೋನ್ ಮಹಾಪಾತಕನ್’ ಅಂತ ಶಾಪ ಇದೆ. ಅಂದ್ರೆ, ಈ ದಾನವನ್ನು ಕದ್ದವನು ಮಹಾಪಾಪಿ…’ ಅಂದೆ. ಕ್ಲಾಸಿನಲ್ಲಿದ್ದವರೆಲ್ಲಾ ನಗಲು ಶುರುಮಾಡಿದರು. ನಾನು ಯಾಕ್ರಲ್ಲಾ ಅಂದೆ, ಅದಕ್ಕೆ ‘ಇಂದಿನ ರಾಜಕೀಯದಲ್ಲಿ ಒಬ್ಬರು ಕೊಟ್ಟ ‘ಬಾಳ್ಗಳ್ಚು’ ಅನ್ನು ಇನ್ನೊಬ್ಬರು ‘ಆಪರೇಷನ್’ ಮಾಡಿ ಕಸಿದುಕೊಂಡರೆ, ಅವರನ್ನು ‘ಮಹಾಪಾತಕಿ’ ಅನ್ನಲ್ಲ, ‘ಚಾಣಾಕ್ಷ ರಾಜಕಾರಣಿ’ ಅಂತ ಕರೆಯುತ್ತಾರೆ ಸಾರ್’ ಅಂದುಬಿಟ್ಟರು!

Klive Special Article ಹಲ್ಮಿಡಿಯ ಕಥೆ ಹೀಗಾದರೆ, ನನ್ನ ಪಾಠದ ಗಾಡಿ ಬಾದಾಮಿಯ ಕಡೆಗೆ ಹೊರಳಿತು. ಇಲ್ಲಿ ಸಿಕ್ಕಿದ ಕಪ್ಪೆ ಅರಭಟ್ಟನಂತೂ ಇಂದಿನ ರಾಜಕೀಯ ‘ಪಿ.ಆರ್. ಟೀಮ್’ಗಳ ಪಿತಾಮಹ ಇದ್ದ ಹಾಗೆ. ಅವನ ‘ಬಯೋ’ ನೋಡಿ: ‘ಶಿಷ್ಟಜನಪ್ರಿಯನ್'(ಜೈಕಾರ ಕೂಗುವ ಸಜ್ಜನರಿಗೆ ಫೇವರಿಟ್), ‘ಕಷ್ಟಜನವರ್ಜಿತನ್'(ಸಮಸ್ಯೆ ಬಗೆಹರಿಸಿ ಎಂದವರನ್ನೇ ಕೆಟ್ಟವರೆಂದು ಭಾವಿಸಿ ಅವರಿಂದ ದೂರ) ಮತ್ತು ಎಲ್ಲದಕ್ಕಿಂತ ದೊಡ್ಡ ಬಿರುದು ‘ಕಲಿಯುಗ ವಿಪರೀತನ್’! ಇದು ಕೇಳಿ ನನಗೆ ಯಾರ್ಯಾರೋ ನಾಯಕರ ಟ್ವಿಟರ್ ಪ್ರೊಫೈಲ್‌ಗಳು ನೆನಪಾದವು. ‘ಜನಸೇವಕ’, ‘ರೈತ ನಾಯಕ’, ‘ಹೋರಾಟದ ಕಿಡಿ’, ‘ಬಡವರ ಬಂಧು’, ‘ಭ್ರಷ್ಟಾಚಾರ ವಿರುದ್ಧದ ಹೋರಾಟಗಾರ’, ‘ಆ ಪರ-ಈ ಪರ’… ಎಲ್ಲರೂ ತಮ್ಮನ್ನು ‘ಕಲಿಯುಗ ವಿಪರೀತರು’ ಅಂತಾನೇ ತಾನೇ ಬಿಂಬಿಸಿಕೊಳ್ಳೋದು?

ಬಾದಾಮಿ ಶಾಸನದ ತ್ರಿಪದಿಗಳಂತೂ ಇವತ್ತಿನ ರಾಜಕೀಯ ಧುರೀಣರ ಪ್ರೆಸ್‌ಮೀಟ್‌ನ ಡೈಲಾಗ್‌ಗಳೇ: ‘ಸಾಧುಗೆ ಸಾಧು, ಮಾಧೂರ್ಯ್ಯಂಗೆ ಮಾಧೂರ್ಯ್ಯಂ, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್’. ಅಂದರೆ, ‘ನಮ್ಮ ಜೊತೆ ಚೆನ್ನಾಗಿದ್ದವರಿಗೆ ನಾವೂ ಒಳ್ಳೆಯವರು, ನಮ್ಮನ್ನು ಕೆಣಕಿದರೆ ನಾವು ಸುಮ್ಮನಿರಲ್ಲ. ನೀವು ಮಾಡಿಲ್ಲವೆ?’ ಎನ್ನುವಂತಹ ನೇರಾನೇರ ವಾರ್ನಿಂಗ್!
ಆದರೆ, ಕಪ್ಪೆ ಅರಭಟ್ಟ ಒಂದು ಕಡೆ ನಮ್ಮನ್ನು ಪೆಚ್ಚು ಮಾಡಿಬಿಟ್ಟ. ‘ವರನ್ತೇಜಸ್ವಿನೋ ಮೃತ್ತ್ಯರ್ನತು ಮಾನಾವಖಂಡನಂ’ ಅಂದರೆ, ‘ಅವಮಾನಕ್ಕಿಂತ ಸಾವೇ ವಾಸಿ’ ಅಂತ. ಈ ಸಾಲನ್ನು ಹೇಳಿದಾಗ ಇಡೀ ಕ್ಲಾಸ್ ಸೈಲೆಂಟ್ ಆಗಿಬಿಟ್ಟಿತು. ಇವತ್ತಿನ ರಾಜಕೀಯದ ಡಿಕ್ಷನರಿಯಲ್ಲಿ ‘ಮಾನ’, ‘ಅವಮಾನ’ ಅನ್ನೋ ಪದಗಳೇ ಇಲ್ಲ. ಸೀಡಿ ಪೆನ್‍ಡ್ರೈವ್ ಗಳೇ ಬರಲಿ, ನಾನಾ ಕಾರಣಗಳಿಗೆ ಜೈಲಿಗೇ ಹೋಗಿರಲಿ, ಟಿವಿ ಕ್ಯಾಮಾರಗಳ ಮುಂದೆ ಬಾಯಿಂಗ್ ಬಂದಾಗೆ ಬೈದೇ ಇರಲಿ, ಬೆಳಿಗ್ಗೆ ಬೈದವರ ಜೊತೆ ಸಂಜೆ ಮೈತ್ರಿ ಮಾಡಿಕೊಳ್ಳುವುದು ‘ರಾಜಕೀಯ ಅನಿವಾರ್ಯತೆ’ ಅಲ್ಲವೇ? ಅವಮಾನದ ಬದಲು ಅಧಿಕಾರವೇ ಪರಮ ಸುಖ ಎಂಬಂತಾಗಿದೆ ಅಲ್ಲವೇ?

ಶಾಸನದ ಕೊನೆಯಲ್ಲಿ ಕಪ್ಪೆ ಅರಭಟ್ಟನನ್ನು ‘ಕಟ್ಟಿದ ಸಿಂಘಮನ್ ಕೆಟ್ಟೊದ್ ಎಮಗೆನ್ದು ಬಿಟ್ಟವೊಲ್’(ಕಟ್ಟಿದ ಸಿಂಹವನ್ನು ತಾವೇ ಬಿಡಿಸಿಕೊಂಡು ಅದರ ಬಾಯಿಗೆ ತುತ್ತಾದಂತೆ) ಎಂದು ವರ್ಣಿಸಲಾಗಿದೆ. ಅವನನ್ನು ಕೆಣಕಿದ ಶತ್ರುಗಳು ನಾಶವಾದರಂತೆ. ಇಂದಿಗೂ ಅಧಿಕಾರದಲ್ಲಿರುವ ನಾಯಕರನ್ನು ಅವರ ಹಿಂಬಾಲಕರು ಇದೇ ರೀತಿ ‘ಸಿಂಹ’ ಎಂದು ಹೊಗಳುತ್ತಾರೆ. ಸಿಂಹಾದ್ರಿ ಸಿಂಹದ ಸಿನಿಮಾದ ‘ಸಿಂಹ ಸಿಂಹ’ ಹಾಡಿನೊಂದಿಗೆ ರೀಲ್ಸ್ ಮಾಡಿಯೂ ಹಾಕಿಕೊಂಡಿರುತ್ತಾರೆ. ವಿರೋಧಿಗಳು ಅವರನ್ನು ಕೆಣಕಿದರೆ, ಇ.ಡಿ., ಸಿ.ಬಿ.ಐ. ಎಂಬ ‘ಬೇಟೆಗಾರರು’ ಅವರ ಹಿಂದೆ ಬೀಳುತ್ತಾರೆ.

ಕೊನೆಗೆ, ಪಾಠ ಮುಗಿಸುವಾಗ ನನಗೆ ಅನ್ನಿಸಿದ್ದು.. ಆ ಹಲ್ಮಿಡಿ, ಬಾದಾಮಿಯ ಕಲ್ಲುಗಳು ಸಾವಿರ ವರ್ಷಗಳ ಹಿಂದೆಯೇ ನಮ್ಮ ಇವತ್ತಿನ ರಾಜಕೀಯವನ್ನು ನೋಡಿ ನಗುತ್ತಿವೆ. ಕಾಲ ಬದಲಾಗಿದೆ, ಕಲ್ಲಿನ ಜಾಗದಲ್ಲಿ ಟ್ವಿಟರ್ ಬಂದಿದೆ, ಅಷ್ಟೇ. ‘ಬಾಳ್ಗಳ್ಚು’ ಮತ್ತು ‘ಭಾಷಣ’ದ ರಾಜಕೀಯ ಮಾತ್ರ ಇನ್ನೂ ಹಸಿರಾಗಿದೆ. ಹುಡುಗರು ಈ ಶಾಸನಗಳ ಬಗ್ಗೆ ಕಲಿತರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರಿಗೆಲ್ಲಾ ಮುಂದಿನ ಚುನಾವಣೆಯಲ್ಲಿ ಯಾರಿಗೆ ಓಟು ಹಾಕಬಾರದು ಅನ್ನೋ ಜ್ಞಾನೋದಯವಾದಂತೆ ಕಾಣುತ್ತಿತ್ತು!

ಆಗುಂಬೆಯ ಮನೆಯೊಂದರಲ್ಲಿ ಶವ ಪತ್ತೆ

0

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಮನೆಯೊಂದರಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.

ಸುಮಾರು 2 ದಿನಗಳ ಹಿಂದೆಯೇ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.

ಅರಣ್ಯ ಇಲಾಖೆಯ ಹಂಗಾಮಿ ನೌಕರನಾಗಿ ಕೆಲಸ ಮಾಡುತಿದ್ದ ರಾಘವೇಂದ್ರ
ಮದ್ಯಪಾನ ಮಾಡಿ ಮಲಗಿದ್ದರು ಎನ್ನಲಾಗುತ್ತಿದೆ.

ಮೃತರ ಪಾರ್ಥವ ಶರೀರವನ್ನು ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಆಗುಂಬೆ ಪೊಲೀಸ್ ಪಿ ಎಸ್ ಐ ಶಿವನ ಗೌಡ ಪಾಟೀಲ್ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ.