Monday, February 23, 2026
Monday, February 23, 2026
Home Blog Page 1649

ಆಸ್ಟ್ರೇಲಿಯ ಕ್ರಿಕೆಟ್ ಪಟು ಭಾರತೀಯ ವಧು ವಿನಿ ರಾಮನ್ ಗೆ ಬೌಲ್ಡ್

0

ಆಸ್ಟ್ರೇಲಿಯಾದ ಆಲ್‍ರೌಂಡರ್ ಗ್ಲೆನ್ ಮಾಕ್ಸ್‌ವೆಲ್‌, ವಿನಿ ರಾಮನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಜೋಡಿ ಡಾನ್ಸ್ ಮಾಡುತ್ತಾ ಹಾರ ಬದಲಿಸಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಮಾಕ್ಸ್‌ವೆಲ್‌ ಮತ್ತು ವಿನಿ ರಾಮನ್ ಜೋಡಿಯು 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಭಾರತೀಯ ಮೂಲದ ವಿನಿ ರಾಮನ್ ಅವರನ್ನು ಮಾರ್ಚ್ 18 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಭಾರತಕ್ಕೆ ಆಗಮಿಸಿರುವ ದಂಪತಿ ಚೆನ್ನೈನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ತಮಿಳು ಸಂಪ್ರದಾಯದ ಪ್ರಕಾರ ವಿನಿ ರಾಮನ್ ಅವರಿಗೆ ಮಾಕ್ಸ್‌ವೆಲ್‌ ಮಾಂಗಲ್ಯವನ್ನು ಕಟ್ಟಿದ್ದಾರೆ.

ಡ್ಯಾನ್ಸ್ ಮಾಡುತ್ತಾ ಹಾರ ಬದಲಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

ನಮ್ಮ ದೃಷ್ಟಿ ನಮ್ಮ ಕರ್ನಾಟಕ ಉದ್ಘಾಟನೆ

0

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡಾ: ರಾಜ್ ಕುಮಾರ್ ಟ್ರಸ್ಟ್ ಮತ್ತು ಎಸ್ಸಿಲಾರ್ ವಿಷನ್ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ “ನಮ್ಮ ದೃಷ್ಟಿ ನಮ್ಮ ಕರ್ನಾಟಕ” ಅರಿವು ಅಭಿಯಾನವನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು.

ಸಚಿವರಾದ ಬಿ.ಸಿ.ನಾಗೇಶ್, ಶಂಕರ ಪಾಟೀಲ್ ಮುನೇನಕೊಪ್ಪ, ನಟ ರಾಘವೇಂದ್ರ ರಾಜ್ ಕುಮಾರ್, ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಹಿರಿಯ ಅಧಿಕಾರಿಗಳು ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ನೀರಿನಲ್ಲಿ ಮಿತಿ ಮೀರಿದ ಯುರೇನಿಯಂ ಇದ್ದರೆ ವಿಷಕಾರಿ-ಡಾ.ರವಿಚಂದ್ರನ್

0

ಕರ್ನಾಟಕದ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಅಂತರ್ಜಲದ ನೀರಿನಲ್ಲಿ ಅಧಿಕ ಪ್ರಮಾಣದ ಯುರೇನಿಯಂ ಅಂಶಗಳು ಪತ್ತೆಯಾಗಿದೆ. ಈ ನಾಲ್ಕು ಜಿಲ್ಲೆಗಳ 73 ಗ್ರಾಮಗಳಲ್ಲಿ ಇತ್ತೀಚೆಗೆ ಕೈಗೊಂಡ ಅಧ್ಯಯನವೊಂದರ ಪ್ರಕಾರ ಸುಮಾರು 57 ಗ್ರಾಮಗಳಲ್ಲಿ ಯುರೇನಿಯಂ ಅಂಶ ಬೆಳಕಿಗೆ ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆ ನಿಗದಿಗೊಳಿಸಿರುವ 30 ಮೈಕ್ರೋಗ್ರಾಂ ಮಿತಿಯನ್ನು ದಾಟಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಪ್ರಾದೇಶಿಕ ಔದ್ಯೋಗಿಕ ಆರೋಗ್ಯ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಬಿ. ರವಿಚಂದ್ರನ್ ಕಳವಳ ವ್ಯಕ್ತಪಡಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ವಿಭಾಗ ಬುಧವಾರ ‘ಪರಿಸರ ಮತ್ತು ಆರೋಗ್ಯ’ ಕುರಿತು ಜ್ಞಾನಸಹ್ಯಾದ್ರಿ ಆವರಣದಲ್ಲಿ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಅಂಶ ಕಂಡು ಬಂದಿರುವುದು ವಿಷಕಾರಿಯಾಗಿ ಪರಿಣಮಿಸಲಿದ್ದು, ಕ್ಯಾನ್ಸರ್, ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದರು.

ದಿನನಿತ್ಯ ಬಳಸುವ ಪದಾರ್ಥಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶಗಳಿರುತ್ತವೆ. ಅದರಲ್ಲಿಯೂ ಹೆಂಗಸರು ಬಳಸುವ ಕಾಸ್ಮೆಟಿಕ್ ಉತ್ಪನ್ನಗಳಲ್ಲಿ ಮೈಕ್ರೋಪ್ಲಾಸ್ಟಿಕ್, ಸೀಸ, ಮತ್ತಿತರ ವಿಷಯುಕ್ತ ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು, ಇವುಗಳ ನಿಯಮಿತ ಬಳಕೆಯಿಂದ ಚರ್ಮರೋಗ, ಕ್ಯಾನ್ಸರ್ ನಂತಹ ಮಾರಕ ಖಾಯಿಲೆಗಳಿಗೀಡಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಮಾಜಕ್ಕೆ ಅನಿವಾರ್ಯ. ಆದರೆ ಜಗತ್ತು ಇಂದು ತೈಲ ಮತ್ತು ಇಂಧನ ಆಧಾರಿತ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರೀತ್ಯ, ಮಾನವ ನಿರ್ಮಿತ ನೈಸರ್ಗಿಕ ವಿಕೋಪಗಳು ಘಟಿಸುತ್ತಿವೆ ಎಂದು ಹೇಳಿದರು.

ಕುಲಸಚಿವೆ ಜಿ. ಅನುರಾಧ, ಸುಬ್ಬಯ್ಯ ಆಸ್ಪತ್ರೆಯ ಜನರಲ್ ಸರ್ಜನ್ ಮತ್ತು ಕ್ಯಾನ್ಸರ್ ತಜ್ಞೆ ಡಾ. ಆರತಿ ಐತಾಳ್, ಬೆಂಗಳೂರಿನ ಟೆಲ್ಸ್ಟ್ರಾ ಟೆಲಿಕಮ್ಯೂನಿಕೇಷನ್ ಸಂಸ್ಥೆಯ ಸೌಮ್ಯ ಶಿವರಾಂ ಸಮಕಣ ಮಾತನಾಡಿದರು. ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಹೀನಾ ಕೌಸರ್, ಪ್ರೊ. ಜೆ. ನಾರಾಯಣ, ಪ್ರೊ. ಎಸ್. ವಿ. ಕೃಷ್ಣಮೂರ್ತಿ, ಡಾ. ಯೋಗೇಂದ್ರ, ಡಾ. ಬಸವರಾಜಪ್ಪ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಿಎಂ ಬೊಮ್ಮಾಯಿ ಅವರು ಕೆಲ ಸಂಘಟನೆಗಳ ಕೈಗೊಂಬೆಯಾಗಿದ್ದಾರೆ- ಎಚ್ ಡಿ ಕೆ

0

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲ ಸಂಘಟನೆಗಳ ಕೈಗೊಂಬೆ ಆಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.

ಮುಸ್ಲಿಂ ಸಮುದಾಯದ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಹಾಡುತ್ತಿರುವ ಕಿಡಿಗೇಡಿಗಳಿಗೆ ಮುಲಾಜಿಲ್ಲದೆ ಕಡಿವಾಣ ಹಾಕಬೇಕು.
ಈ ವಿಷಯದಲ್ಲಿ ಸರಕಾರ ಸುಮ್ಮನಿರಬಾರದು ಎಂದು ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದರು.

ವಿಧಾನಸೌಧ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಇಷ್ಟೆಲ್ಲಾ ಆಗಿದ್ದರೂ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎಲ್ಲವನ್ನೂ ನೋಡಿಕೊಂಡು ಮುಖ್ಯಮಂತ್ರಿಗಳು ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಒಂದು ಸಮುದಾಯಕ್ಕೆ ಮೀಸಲಿಲ್ಲ. ಆರೂವರೆ ಕೋಟಿ ಕನ್ನಡಿಗರಿಗೆ ಸೇರಿದವರು. ಎಲ್ಲರ ರಕ್ಷಣೆ ಸರಕಾರದ ಹೊಣೆ. ಒಂದು ಸಮುದಾಯವನ್ನು ರಕ್ಷಣೆ ಮಾಡಿಕೊಂಡು ಸರಕಾರ ನಡೆಸಲು ಆಗದು. ಇಂತದ್ದನ್ನು ಕನ್ನಡಿಗರು ಸಹಿಸುವುದಿಲ್ಲ. ಅವರನ್ನು ಕಿತ್ತೆಸೆಯುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.

ನಾನು ವಾಟ್ಸಪ್ ನಲ್ಲಿ ಬಂದ ಈ ಸಂದೇಶವನ್ನು ಗಮನಿಸಿದೆ. ಇಂಥ ಕಿಡಿಗೇಡಿ ಸಂದೇಶಗಳನ್ನು ಯಾರು ಹರಡುತ್ತಿದ್ದಾರೆ? ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಮಟ್ಟ ಹಾಕಬೇಕು. ಒಂದು ವೇಳೆ ಶಾಸಕರು, ಸಚಿವರೇ ಇದ್ದರೂ ಅವರನ್ನು ಬಂಧಿಸಬೇಕು ಹಾಗೂ ಅವರಿಗೆ ಜನರೇ ಬಹಿಷ್ಕಾರ ಹಾಕಬೇಕು ಆಗ್ರಹಪಡಿಸಿದರು.

ಮುಸ್ಲಿಂ ಸಮುದಾಯದ ವ್ಯಾಪಾರಗಳಿಗೆ ನಿಷೇಧ ಹೇರಬೇಕು ಎನ್ನುವ ಸಂದೇಶದಲ್ಲಿ ಸುಮಾರು 23 ವಿಚಾರಗಳ ವಿಷಯಗಳ ಬಗ್ಗೆ ಪ್ರೋತ್ಸಾಹ ಕೊಡಬೇಡಿ ಅಂತ ಬರೆಯಲಾಗಿದೆ. ಹಣ್ಣಿನ ವ್ಯಾಪಾರ, ಹೋಟೆಲ್ , ಹಾರ್ಡ್ ವೇರ್, ಟ್ರಾವೆಲ್, ಕಿರಾಣಿ ಶಾಪುಗಳಿಗೆ ಹೋಗಬೇಡಿ. ಟ್ರಾವಲ್ ಬುಕಿಂಗ್, ಕಿರಾಣಿ ಅಂಗಡಿ, ಮುಸ್ಲಿಂ ವೈದ್ಯರ ಬಳಿ‌ ಹೋಗಬೇಡಿ ಎಂದು ಜನರಿಗೆ ತಲೆ ಕೆಡಿಸುವ ಕೆಲಸ ಆಗುತ್ತಿದೆ. ಹಿಂದುಗಳ ಅಂಗಡಿಗಳಿಗೆ ಮಾತ್ರ ಹೋಗಿ ಅಂತ ಸಂದೇಶ ಹರಡುತ್ತಿದ್ದಾರೆ. ಇವರು ನಮ್ಮ ದೇಶವನ್ನು ಎಲ್ಲಿಗೆ ಒಯ್ಯುತ್ತಿದ್ದಾರೆ? ಸರ್ವ ಜನಾಂಗದ ತೋಟವನ್ನು ಸರ್ವನಾಶ ಮಾಡುತ್ತಿದ್ದಾರೆ.

ಇಂತವರನ್ನು ಸುಮ್ಮನೆ ಬಿಡಬಾರದು. ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಿ ಎಂದರೆ ಅರ್ಥವೇನು? ಎಂದು ಅವರು ಪ್ರತಿಕ್ರಿಯಿಸಿದರು.

ಕರ್ನಾಟಕದಲ್ಲಿ ಈ ರೀತಿಯ ಪರಿಸ್ಥಿತಿ ಬರಲಿಕ್ಕೆ ಜೆಡಿಎಸ್ ಆಗಲಿ ಅಥವಾ ಕುಮಾರಸ್ವಾಮಿ ಕಾರಣ ಅಲ್ಲ. ಕಾಂಗ್ರೆಸ್ ನೇರ ಕಾರಣ. ಅವರಿಂದಲೇ ಇಂಥ ಸರಕಾರ ಬಂದಿತು ಎಂದು ಮಾಜಿ ಮುಖ್ಯಮಂತ್ರಿಗಳು ನೇರ ವಾಗ್ದಾಳಿ ನಡೆಸಿದರು.

ಈ ಕಾಂಗ್ರೆಸ್ ನಾಯಕರ ತೀರ್ಮಾನಗಳು ಮತ್ತು ನಮಗೆ ಕಾಂಗ್ರೆಸ್‌ನವರು ಜೆಡಿಎಸ್‌ಗೆ ಕೊಟ್ಟ ಕಿರುಕುಳ ಇಂಥ ಪರಿಸ್ಥಿತಿಗೆ ಕಾರಣ. ಈ ನಾಡಿನ ಜನರು ಈ ಪರಿಸ್ಥಿತಿ ಅನುಭವಿಸಲಿಕ್ಕೆ ಒಂದು ಕಡೆ ಕಾಂಗ್ರೆಸ್, ಮತ್ತೊಂದು ಕಡೆ ಬಿಜೆಪಿಯವರೆ ಕಾರಣ. ಈ ಕಾರಣಕ್ಕೆ ನಾನು ಹಿಂದು ಸಮುದಾಯದ ಕೆಲ ಯುವಕರಿಗೆ ಕೈ ಮುಗಿದು ಹೇಳುತ್ತೇನೆ. ರಾಜ್ಯ ಹಾಳು ಮಾಡಿಕೊಳ್ಳಬೇಡಿ. ರಾಜಕೀಯಕ್ಕಾಗಿ ಮನಸುಗಳನ್ನು ಕೆಡಿಸುವ ಕಿಡಿಗೇಡಿಗಳ ಮಾತು ಕೇಳಬೇಡಿ. ಯಾರು ಕೂಡ ಇಲ್ಲಿ ಶಾಶ್ವತ ಅಲ್ಲ.

ಕರ್ನಾಟಕ ಶಾಂತಿಯ ತೋಟ, ಇದನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.

ಸಮಾಜವನ್ನು ಒಡೆಯುವ ಸಂದೇಶ ಮುಖ್ಯವಲ್ಲ. ಹೊಟ್ಟೆಗೆ ತಿನ್ನಲು ಏನು ಕೊಟ್ಟಿದ್ದಾರೆ. ಹೊಟ್ಟೆಗೆ ತಣ್ಣಿರ್ ಬಟ್ಟೆ ಅಷ್ಟೇ. ಈ ಸಮಾಜವನ್ನು ವಿಘಟನೆ ಮಾಡುತ್ತಿರುವವರು ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತಾರಾ? ದೇವಸ್ಥಾನ ಕಟ್ಟುವರು ಓಬಿಸಿ , ದಲಿರು. ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ಇಂಥ ವಿದ್ರೋಹದ ಕೆಲಸ ಮಾಡುವವರು ಎಂದ ಅವರು, ನಾನೆಂದೂ ಇಷ್ಟು ಕಠಿಣವಾಗಿ ಮಾತಾಡಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕರ್ನಾಟಕ ವಿವಿಯಲ್ಲಿ ಕವಿ ಕಣವಿ ಸ್ಮಾರಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಯೋಜನೆ

0

ಕವಿ, ನಾಡೋಜ ದಿವಂಗತ ಡಾ. ಚೆನ್ನವೀರ ಕಣವಿ ನೆನಪಿಗಾಗಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಎಸ್‍ಡಿಎಂ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಚಿನ್ನದ ಪದಕಗಳನ್ನು ಸ್ಥಾಪಿಸಲಾಗುವುದು ಎಂದು ಚೆನ್ನವೀರ ಕಣವಿ ಪುತ್ರಿ ಪ್ರಿಯದರ್ಶಿ ಕಣವಿ ಹೇಳಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ 93 ವರ್ಷದ ಡಾ. ಚೆನ್ನವೀರ ಕಣವಿ ಚಿಕಿತ್ಸೆ ಫಲಕಾರಿಯಾಗದೇ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಫೆಬ್ರವರಿ 16ರಂದು ಮೃತಪಟ್ಟಿದ್ದರು.

ಸರ್ಕಾರ ಅವರ ಚಿಕಿತ್ಸಾ ವೆಚ್ಚ ಭರಿಸಿದ ಕಾರಣ ಕುಟುಂಬವು ಭರಿಸಲು ಸಿದ್ಧವಿದ್ದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾವಂತರನ್ನು ಪ್ರೋತ್ಸಾಹಿಸಲು ಕರ್ನಾಟಕ ವಿವಿ ಹಾಗೂ ಎಸ್‍ಡಿಎಂ ಡೀಮ್ಡ್ ವಿವಿಯಲ್ಲಿ ನಿಧಿ ಸ್ಥಾಪನೆ ಮಾಡಿ, ವಿದ್ಯಾರ್ಥಿಗಳಿಗೆ ಸ್ವರ್ಣಪದಕಗಳನ್ನು ನೀಡಲು ಕುಟುಂಬದ ಸದಸ್ಯರು ತೀರ್ಮಾನಿಸಿದ್ದಾರೆ.

ಡಾ. ಚನ್ನವೀರ ಕಣವಿ ಅವರ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಅವರಿಗಾಗಿ ಮಿಡಿದ ನಾಡಿನ ಸಮಸ್ತ ಜನತೆಗೆ, ಮಾಧ್ಯಮಗಳಿಗೆ, ಮಠಾಧೀಶರಿಗೆ ಕೃತಜ್ಞತೆಗಳನ್ನು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಡಾ. ಚೆನ್ನವೀರ ಕಣವಿ ಅವರು ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಹಾಲಪ್ಪ ಆಚಾರ್, ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ಎಸ್‍ಡಿಎಂ ಆಸ್ಪತ್ರೆಯ ನಿರ್ದೇಶಕರು, ವೈದ್ಯರು, ಸಿಬ್ಬಂದಿ ನೀಡಿದ ಸಹಕಾರ, ತುಂಬಿದ ನೈತಿಕ ಸ್ಥೈರ್ಯಕ್ಕೆ ಕುಟುಂಬ ಚೆನ್ನವೀರ ಕಣವಿ ಕುಟುಂಬ ಸದಸ್ಯರು ಧನ್ಯವಾದ ತಿಳಿಸಿದ್ದಾರೆ.

ಸಾಂಪ್ರದಾಯಿಕ ವೈದ್ಯ ಪದ್ಧತಿ ಅಧ್ಯಯನಕ್ಕೆ ಶೈಕ್ಷಣಿಕ ಅರ್ಹತೆ ಕಡ್ಡಾಯ

0

ಸಾಂಪ್ರಾದಾಯಿಕ ವೈದ್ಯ ಪದ್ಧತಿ ಅಧ್ಯಯನ ಮಾಡುವವರಿಗೆ ಶೈಕ್ಷಣಿಕ ಅರ್ಹತೆ ಕಡ್ಡಾಯ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರು ತಿಳಿಸಿದ್ದಾರೆ.

ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಆಯುಷ್‌ ವೈದ್ಯ ಪದ್ಧತಿಗಳ ಕುರಿತು ಕೇಂದ್ರ ಸರ್ಕಾರವೇ ನೀತಿ ರೂಪಿಸಿದೆ.
ರಾಜ್ಯದಲ್ಲಿ ಪ್ರತ್ಯೇಕ ನೀತಿ ರೂಪಿಸಲು ಅವಕಾಶವಿಲ್ಲ. ಸಾಂಪ್ರಾದಾಯಿಕ ವೈದ್ಯ ಪದ್ಧತಿ ಅಧ್ಯಯನ ಮಾಡುವವರಿಗೆ ಶೈಕ್ಷಣಿಕ ಅರ್ಹತೆ ಕಡ್ಡಾಯ ಎಂದು ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಆಯುಷ್‌ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಂಪ್ರದಾಯಿಕವಾಗಿ ಆಯುರ್ವೇದವನ್ನು ಅಭ್ಯಾಸ ಮಾಡುತ್ತಿರುವವರು ಬಳ್ಳಾರಿ ಮತ್ತು ಬೆಂಗಳೂರಿನ ಆಯುರ್ವೇದ ವಿಶ್ವವಿದ್ಯಾಲಯಗಳಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬಹುದು.ಅವರಿಗೆ ಸರ್ಕಾರ ಉಚಿತ ಸೀಟುಗಳನ್ನು ಕಾಯ್ದಿರಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಪಂಚಾಯತ್ ರಾಜ್ ಇಲಾಖೆಉದ್ಯೋಗಾವಕಾಶಗಳು

0

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕವು ಅಧಿಕೃತ ಅಧಿಸೂಚನೆ ಮೂಲಕ ಪ್ರೋಗ್ರಾಮರ್‌ ಹುದ್ದೆಗಳ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ ಸರ್ಕಾರದಲ್ಲಿ ಬಹಳ ದಿನಗಳಿಂದ ಕೆಲಸ ಹುಡುಕುತ್ತಿರುವ ಮತ್ತು ಮೈಸೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 8ರ ಮೊದಲು ಆಫ್​ಲೈನ್​ (Offline) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಖಾಲಿ ಇರುವ 2 ಪ್ರೋಗ್ರಾಮರ್‌ ಹುದ್ದೆಗಳ ಭರ್ತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅರ್ಜಿ ಆಹ್ವಾನಿಸಿದ್ದು, ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿದೆ.

ಬ್ಯಾಚುಲರ್ ಆಫ್ ಇಂಜಿನಿಯರಿಂಗ್, ಮಾಸ್ಟರ್ಸ್ ಇನ್ ಕಂಪ್ಯೂಟರ್ ಅಪ್ಲಿಕೇಶನ್‌ ಪದವಿ ಪೂರ್ಣಗೊಳಿಸಿರುವ 56 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಏಪ್ರಿಲ್ 8 ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಇನ್ನು ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.40000/- ವೇತನ ನೀಡಲಾಗುತ್ತದೆ.

ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಬ್ಯಾಚುಲರ್ ಆಫ್ ಇಂಜಿನಿಯರಿಂಗ್, ಮಾಸ್ಟರ್ಸ್ ಇನ್ ಕಂಪ್ಯೂಟರ್ ಅಪ್ಲಿಕೇಶನ್‌ಗಳನ್ನು ಪೂರ್ಣಗೊಳಿಸಿರಬೇಕು.

ಅಭ್ಯರ್ಥಿಗಳು ವೆಬ್ ಅಭಿವೃದ್ಧಿ ಮತ್ತು ವಿನ್ಯಾಸದಲ್ಲಿ ಕನಿಷ್ಠ 02 ವರ್ಷಗಳ ಅನುಭವವನ್ನು ಹೊಂದಿರಬೇಕು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 28-03-2022 ರಂತೆ 55 ವರ್ಷಗಳು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ನಿರ್ದೇಶಕರು, ಅಬ್ದುಲ್ ನಜೀರ್ ಸಾಬ್ ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್‌ಮೆಂಟ್ ಮತ್ತು ಪಂಚಾಯತ್ ರಾಜ್, ಲಲಿತಮಹಲ್ ರಸ್ತೆ, ಮೈಸೂರು – 570011 ಇವರಿಗೆ ಕಳುಹಿಸಬೇಕಾಗುತ್ತದೆ.

ವೆಬ್​ಸೈಟ್: rdpr.karnataka.gov.in

ಪ್ರಮುಖ ದಿನಾಂಕಗಳು ಹೀಗಿವೆ‌:

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24-03-2022

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-04-202

ಶ್ರೀಲಂಕಾ- ಭಾರತ ದ್ವಿಪಕ್ಷೀಯ ಅಭಿವೃದ್ಧಿ ಸಭೆ 6 ಒಪ್ಪಂದಗಳಿಗೆ ಸಹಿ

0

ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ ನಿಟ್ಟಿನಲ್ಲಿ 6 ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ.

ಶ್ರೀಲಂಕಾ ರಾಜಧಾನಿ ಕೊಲೊಂಬೋದಲ್ಲಿ 18ನೇ ಬಂಗಾಲ ಕೊಲ್ಲಿ ಬಹು ಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿಕ ಸಹ ಕಾರ ಒಕ್ಕೂಟ (ಬಿಮ್‌ಸ್ಟೆಕ್‌)ರಾಷ್ಟ್ರಗಳ ಸಚಿವರ ಸಭೆಯ ವೇಳೆ ಈ ಒಪ್ಪಂದಗಳು ನಡೆದಿವೆ.

ಮೂರು ದ್ವೀಪಗಳಲ್ಲಿ ಹೈಬ್ರಿಡ್‌ ವಿದ್ಯುತ್‌ ಯೋಜನೆಗಳು, ಮೀನುಗಾರಿಕೆಗೆ ಅನುಕೂಲವಾಗುವಂಥ ಬಂದರುಗಳ ಅಭಿವೃದ್ಧಿ, ಗಾಲೆ ಜಿಲ್ಲೆಯಲ್ಲಿನ 200 ಶಾಲೆಗಳಿಗೆ ಆಧುನಿಕ ಕಂಪ್ಯೂಟರ್‌ ಲ್ಯಾಬ್‌ಗಳು ಮತ್ತು ಪಠ್ಯಕ್ರಮ ಅಭಿವೃದ್ಧಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದಲ್ಲದೆ ವಿದೇಶಾಂಗ ಸಚಿವಾಲಯ ಭಾಗವೇ ಆಗಿರುವ ಸುಷ್ಮಾ ಸ್ವರಾಜ್‌ ಇನ್‌ಸ್ಟಿಟ್ಯೂಟ್‌ ಆಫ್ ಫಾರಿನ್‌ ಸರ್ವಿಸ್‌ ಮತ್ತು ದ್ವೀಪರಾಷ್ಟ್ರದ ಭಂಡಾರ ನಾಯಕೆ ಇಂಟರ್‌ನ್ಯಾಶನಲ್‌ ಡಿಪ್ಲೊಮ್ಯಾ ಟಿಕ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ ನಡುವೆ ಪ್ರತ್ಯೇಕ ಒಪ್ಪಂದವೂ ನಡೆದಿವೆ ಎನ್ನಲಾಗಿದೆ.

ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜ ಪಕ್ಸ, ಪ್ರಧಾನಿ ಮಹಿಂದಾ ರಾಜಪಕ್ಸ ವಿವಿಧ ಸಚಿವರ ಜತೆಗೆ ಮಾತುಕತೆ ನಡೆಸಿದ್ದಾರೆ.

ಉಗ್ರವಾದ, ಹಿಂಸಾತ್ಮಕವಾಗಿರುವ ತೀವ್ರಗಾಮಿತ್ವದ ವಿರುದ್ಧ ಬಿಮೆಸ್ಟೆಕ್‌ ರಾಷ್ಟ್ರಗಳು ಸಂಘಟಿತವಾಗಿ ಹೋರಾಟ ನಡೆಸಬೇಕು ಎಂದು ಜೈಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

ಸಭೆಯಲ್ಲಿ ಮಾತನಾಡುತ್ತಾ, ಭಯೋತ್ಪಾದನೆ ಮತ್ತು ತೀವ್ರಗಾಮಿತ್ವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅದನ್ನು ತಡೆಯಲು ಒಕ್ಕೂಟದ ಸದಸ್ಯ ರಾಷ್ಟ್ರಗಳು, ಒಗ್ಗೂಡಿ ದುಡಿಯಬೇಕಾಗಿದೆ ಎಂದಿದ್ದಾರೆ.

ಉಕ್ರೇನ್‌ ಬಿಕ್ಕಟ್ಟಿನ ಕುರಿತು ಪ್ರಸ್ತಾವಿಸಿದ ಅವರು, ಅಂತಾರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವುದರಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳಬಾರದು. ಅಂತಾರಾಷ್ಟ್ರೀಯ ವ್ಯವಸ್ಥೆ ಸದ್ಯ ಅತ್ಯಂತ ಸವಾಲಿನ ಸ್ಥಿತಿಯನ್ನು ಎದುರಿಸುತ್ತಿದೆ. ಈಗಷ್ಟೇ ಜಗತ್ತಿನಲ್ಲಿ ಕೊರೊನಾ ಬಿಕ್ಕಟ್ಟು ಕೊನೆಗೊಳ್ಳುತ್ತಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅಂತಾ ರಾಷ್ಟ್ರೀಯ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ ಎಂದಿದ್ದಾರೆ.

ರಾಷ್ಟ್ರಗಳ ನಡುವೆ ಬಹು ಮುಖ್ಯವಾಗಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಉತ್ತಮ ರೀತಿಯದ್ದಾಗಿರುವ ಬಾಂಧವ್ಯ ಹೊಂದಿರ ಬೇಕಾದದ್ದೂ ಅಗತ್ಯವೆಂದು ಜೈಶಂಕರ್‌ ಪ್ರತಿಪಾದಿಸಿದ್ದಾರೆ.

ದೇಶದ ಪ್ರಧಾನಿಗಳ ಸಾಧನೆ ಗುರುತಿಸುವಮಾಜಿ ಪಿಎಂ ಗಳ ಸಂಗ್ರಹಾಲಯ

0

ದೇಶದ 14 ಮಾಜಿ ಪ್ರಧಾನಿಗಳು ತಮ್ಮ ಆಡಳಿತಾವಧಿಯಲ್ಲಿ ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಗೌರವಿಸಲು ದೆಹಲಿಯ ನೆಹರು ಮ್ಯೂಸಿಯಂನಲ್ಲಿ ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಸಂಗ್ರಹಾಲಯ’ವನ್ನು ಸ್ಥಾಪನೆ ಮಾಡಿದೆ. ಇದನ್ನು ಏ.14ರಂದು ಉದ್ಘಾಟನೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ ಅವರು, ಯಾವ ಪಕ್ಷದವರು ಎಂದು ಲೆಕ್ಕಿಸದೆ ಮಾಜಿ ಪ್ರಧಾನಿಗಳ ಕೊಡುಗೆಯನ್ನು ಗುರುತಿಸುತ್ತಿರುವ ಏಕೈಕ ಸರ್ಕಾರ ಎನ್‌ಡಿಎ ಸರ್ಕಾರವಾಗಿದೆ. ಎಲ್ಲ ಮಾಜಿ ಪ್ರಧಾನಿಗಳ ಸಾಧನೆಗೂ ಮನ್ನಣೆ ನೀಡಲಾಗಿದೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದ್ದಾರೆ.

ಸ್ವಾತಂತ್ರ್ಯಾ ನಂತರ 14 ಮಾಜಿ ಪ್ರಧಾನಿಗಳು ದೇಶವನ್ನು ಆಳಿದ್ದರೂ, ನೆಹರು- ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರನ್ನು ಕಾಂಗ್ರೆಸ್‌ ನಿರ್ಲಕ್ಷಿಸಿದೆ ಎಂದು ಬಿಜೆಪಿ ಮೊದಲಿನಿಂದಲೂ ಆರೋಪ ಮಾಡಿಕೊಂಡು ಬಂದಿದೆ. ಆದರೆ ಈಗ ಮಾಜಿ ಪ್ರಧಾನಿಗಳ ಮ್ಯೂಸಿಯಂ ಸ್ಥಾಪಿಸುವ ಮೂಲಕ ಆ ಪಕ್ಷಕ್ಕೆ ಹೊಸ ಠಕ್ಕರ್‌ ನೀಡಲು ಯತ್ನಿಸಿದೆ.

ಹಳೇ ಶ್ರೀನಗರದಲ್ಲಿ ಭದ್ರತಾ ಪಡೆಗಳಿಂದ ಇಬ್ಬರು ಉಗ್ರರ ಹತ್ಯೆ

0

ಇಂದು ನಸುಕಿನ ಜಾವ ಭದ್ರತಾ ಪಡೆಗಳು ಉಗ್ರರನ್ನು ಭೇಟೆಯಾಡಿದ್ದು, ಈ ಭೇಟೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಹಳೆ ಶ್ರೀನಗರದ ರೈನಾವಾರಿ ಪ್ರದೇಶದಲ್ಲಿ ಈ ಕಾರ್ಯಾಚಾರಣೆ ನಡೆದಿದ್ದು, ಹತ್ಯೆಯಾದವರ ಪೈಕಿ ಓರ್ವ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿ ಸದಸ್ಯನಾಗಿದ್ದು, ಮತ್ತೊಬ್ಬ ಉಗ್ರ ಮಾಧ್ಯಮದ ಗುರುತಿನ ಚೀಟಿ (ಐಡಿ)ಯನ್ನು ದುರ್ಬಳಕೆ ಮಾಡಿಕೊಂಡಿದ್ದವನನ್ನು ಸಂಹಾರ ಮಾಡಿದ್ದಾರೆ.

ಇದು ಮಾಧ್ಯಮದ ದುರ್ಬಳಕೆಯ ಸ್ಪಷ್ಟ ಪ್ರಕರಣ ಸೂಚಿಸುತ್ತದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್‌ ಮಾಡಿದ್ದಾರೆ.