Tuesday, February 24, 2026
Tuesday, February 24, 2026
Home Blog Page 1642

ಬೆಂಗಳೂರು ವಿಮಾನ ನಿಲ್ದಾಣದ ಮಾರ್ಗಜಾಲವು ಮತ್ತಷ್ಟು ವಿಸ್ತಾರ

0

ಅಂತಾ ರಾಷ್ಟ್ರೀಯ ವಿಮಾನಗಳು ಭಾರತಕ್ಕೆ ಹಾಗೂ ಭಾರತದಿಂದ ವಿದೇಶಗಳಿಗೆ ಮತ್ತೆ ಪ್ರಯಾಣ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿ ದಿನ 25 ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ನಡೆಸಲಾಗುತ್ತಿದೆ. ಈ ಹಿಂದೆ ದಿನಕ್ಕೆ 10 ಮಾತ್ರವಿದ್ದು ನಿರ್ಗಮನ ಪ್ರಯಾಣಗಳು, ಇದೀಗ 25ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಕಾರ್ಯಾಚರಣೆಗಳು ಕ್ರಮೇಣ ಹೆಚ್ಚಾಗುತ್ತಿರುವುದರಿಂದ ಬೇಡಿಕೆ ಪೂರೈಸಲು ಸಂಚಾರ ಮಾರ್ಗಗಳು ಮತ್ತು ಹೆಚ್ಚುವರಿ ವಿಮಾನಗಳು ಸಂಚರಿಸುತ್ತಿರುವುದರಿಂದ ಬೆಂಗಳೂರು ವಿಮಾನ ನಿಲ್ದಾಣದ ಮಾರ್ಗದ ಜಾಲವು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಿದೆ.

ಪ್ರಸ್ತುತ ಬೆಂಗಳೂರು ವಿಮಾನ ನಿಲ್ದಾಣವು 21 ಅಂತಾರಾಷ್ಟ್ರೀಯ ತಾಣಗಳೊಂದಿಗೆ ಸಂಪರ್ಕ ಹೊಂದಿದ್ದು ,24 ವಿಮಾನ ನಿಲ್ದಾಣಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ವಿಮಾನ ನಿಲ್ದಾಣವು ಈ ವರ್ಷದಲ್ಲಿ ಹೊಸ ಮಾರ್ಗಗಳ ಸೇರ್ಪಡೆ ಮಾಡಲಿದ್ದು ಸಿಯಾಟಲ್(ಅಮೆರಿಕನ್ ಏರ್‍ಲೈನ್ಸ್) ಮತ್ತು ಪ್ರಸ್ತುತ ಈಗಿನ ಮಾರ್ಗಗಳನ್ನು ಸ್ಯಾನ್ ಫ್ರಾನ್ಸಿಸ್ಕೊ(ಏರ್ ಇಂಡಿಯಾ) ಯುನೈಟೆಡ್ ಏರ್‍ಲೈನ್ಸ್‍ನೊಂದಿಗೆ ಅಕ್ಟೋಬರ್ ತಿಂಗಳಲ್ಲಿ ವಾರಕ್ಕೊಮ್ಮೆ ವಿಮಾನಗಳ ಹಾರಾಟ ಪ್ರಾರಂಭಿಸಲಿದ್ದು ವಿಶ್ವದ ಎರಡು ಅತ್ಯಂತ ದೊಡ್ಡ ತಂತ್ರಜ್ಞಾನ ಕೇಂದ್ರ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊಗಳನ್ನು ಸಂಪರ್ಕಿಸುತ್ತದೆ.

ತಿನ್ನೋದೇ ಪ್ರಾಣಿವಧೆ ಮಾಡಿ, ಅದರಲ್ಲಿ ಮಾನವತೆ ಪ್ರಶ್ನೆ ಎಲ್ಲಿ?-ದೇವನೂರ

0

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ದ್ವೇಷ ಹೆಚ್ಚಿಸಿ ಜನ ಸಮುದಾಯಗಳನ್ನು ಒಡೆಯಲು ಸರ್ಕಾರವೇ ಕುಮ್ಮಕ್ಕು ಕೊಡುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.

ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರಿನ ಶಾಂತಿ ನಗರ( ಮಹದೇವ ಪುರ ರಿಂಗ್ ರಸ್ತೆ) ದಲ್ಲಿರುವ ಸೈಯ್ಯದ್ ರಿಜ್ವಾನ್ ಅವರ ಅಂಗಡಿಯಲ್ಲಿ ಶಾಂತಿ ಸೌಹಾರ್ದತೆ, ಸಹಬಾಳ್ವೆಯ ಸಂದೇಶ ಸಾರುವ ಕಾರಣಕ್ಕಾಗಿ ಮಾಂಸ ಖರೀದಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ವೋಟ್ ಬ್ಯಾಂಕಿಗಾಗಿ ಜನರನ್ನು ಒಡೆದು, ದ್ವೇಷವನ್ನು ಎಲ್ಲೆಡೆ ಹಬ್ಬಿಸಿದೆ. ದ್ವೇಷವೇ ಸರ್ಕಾರಕ್ಕೆ ಎನರ್ಜಿ ಡ್ರಿಂಕ್ಸ್ ಆಗಿದೆ ಎಂದರು.

ವಿರೋಧ ಪಕ್ಷಗಳು ಮಂಕಾಗಿ ಕುಳಿತಿರುವ ಈ ಹೊತ್ತಿನಲ್ಲಿ ಎಲ್ಲ ಹದಿನೆಂಟು ಜಾತಿಗಳಲ್ಲೂ ವಿವೇಕ ಇರುವವರು ಮಾತನಾಡಬೇಕು. ಕ್ರಿಯಾಶೀಲರಾಗಬೇಕು ಎಂದು ಕರೆ ನೀಡಿದರು.

ಹಳೆ ಪೇಪರ್, ಖಾಲಿ ಸೀಸ ಕೊಳ್ಳುತ್ತಿದ್ದ ಹೊಟ್ಟೆಪಾಡಿನ ಜನರು ಕಲುಷಿತ ವಾತಾರಣಕ್ಕೆ ಹೆದರಿ ಹೊರಗಡೆ ಕಾಣಿಸುತ್ತಿಲ್ಲ. ಇವರಿಂದ ಪರಿಸರ ಉಳಿಯುತ್ತಿತ್ತು. ಮಠಗಳಲ್ಲಿರುವ ಮರಿಗಳು(ಶಿಷ್ಯಂದಿರು) ಈ ಕೆಲಸ ಮಾಡಲಿ.‌ ಕನಿಷ್ಠ ದೇಶಸೇವೆಯಾದರೂ ಆಗುತ್ತದೆ ಎಂದು ಹೇಳಿದರು.

ಜಾತ್ರೆಗಳಲ್ಲಿ ಮುಸ್ಲಿಮರನ್ನು ನಿಷೇಧಿಸುವ ಮೂಲಕ ಬಡವರ ಹೊಟ್ಟೆಗೆ ಒಡೆಯಲಾಗಿದೆ. ಇದು ಧರ್ಮ ಅಲ್ಲ. ಇಂದು ಧರ್ಮದ ಮುಖವಾಡದಲ್ಲಿ ಅಧರ್ಮವೇ ಕುಣಿದು ಕುಪ್ಪಳಿಸುತ್ತಿದೆ.
ಇದು ಜನಸಮುದಾಯದ ವಿವೇಕವನ್ನು ಕಡಿಮೆ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಂಸ ತಿನ್ನದವರೇ ಮಾಂಸ ಕತ್ತರಿಸುವುದರ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಹಾಗೆ ಕತ್ತರಿಸಬಾರದು ಹೀಗೆ ಕತ್ತರಿಸಬಾರದು ಎಂದು ಅಪ್ಪಣೆ ಕೊಡಿಸಲು ಅವರು ಯಾರು ಎಂದು ಪ್ರಶ್ನಿಸಿದ ಅವರು ತಿನ್ನೋದೆ ಪ್ರಾಣಿ ವಧೆ ಮಾಡಿ, ಅದರಲ್ಲಿ ಮಾನವತೆ ಪ್ರಶ್ನೆ ಎಲ್ಲಿ ಎಂದರು.

ದೀರ್ಘಾವಧಿ ಬೆಂಬಲ ನೀಡುವುದಾಗಿ ಅಮೆರಿಕ ಹೇಳಿಕೆಗೆ ಝೆಲೆನ್ಸ್ಕಿ ಸ್ವಾಗತ

0

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 38ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಅನ್ನು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ)ಗೆ ಸೇರಲು ಬಿಡದಿರುವುದು ತಪ್ಪು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ನ್ಯಾಟೋ ಬಗ್ಗೆ ಮಾತನಾಡಲು ನಮಗೆ ಕಷ್ಟ, ಏಕೆಂದರೆ ನ್ಯಾಟೋ ನಮ್ಮನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ. ಇದು ತಪ್ಪು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾವು ನ್ಯಾಟೋಗೆ ಸೇರಿದರೆ, ನಾವು ನ್ಯಾಟೋವನ್ನು ಹೆಚ್ಚು ಬಲಪಡಿಸುತ್ತೇವೆ, ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.

ನಮ್ಮದು ದುರ್ಬಲ ರಾಜ್ಯವಲ್ಲ. ನಾವು ನ್ಯಾಟೋ ಖರ್ಚಿನಲ್ಲಿ ಬಲಪಡಿಸಿಕೊಳ್ಳುವುದಕ್ಕೆ ಪ್ರಸ್ತಾಪ ಮಾಡುತ್ತಿಲ್ಲ. ಬದಲಿಗೆ ಅದನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದೇವೆ. ನಮ್ಮ ಪ್ರಕಾರ, ನಾವು ಯುರೋಪಿಯನ್ ಖಂಡದಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ, ಎಂದಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರಗಳ ಪೈಕಿ ನ್ಯಾಟೋ ಸದಸ್ಯತ್ವ ಪಡೆದುಕೊಳ್ಳುವ ಉಕ್ರೇನ್ ನಿರ್ಧಾರವನ್ನು ರಷ್ಯಾ ವಿರೋಧಿಸಿತ್ತು. ಕಳೆದ ಫೆಬ್ರವರಿ 24ರಂದು ಯುದ್ಧ ಘೋಷಣೆ ಮಾಡುವುದಕ್ಕೂ ಪೂರ್ವದಲ್ಲಿ ತನ್ನ ದಾಳಿಗೆ ಉಕ್ರೇನ್ ತೆಗೆದುಕೊಂಡ ಅದೊಂದು ನಿರ್ಧಾರವೇ ಕಾರಣ ಎಂದು ದೂಷಿಸಿತ್ತು.

ಸೋವಿಯತ್ ಒಕ್ಕೂಟದಿಂದ ಯುರೋಪ್ ಅನ್ನು ರಕ್ಷಿಸಲು ಶೀತಲ ಸಮರದ ಪ್ರಾರಂಭದಲ್ಲಿ ರಚಿಸಲಾದ ಅಟ್ಲಾಂಟಿಕ್ ಒಕ್ಕೂಟವಾದ ನ್ಯಾಟೋಗೆ ಉಕ್ರೇನ್ ಸೇರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ರಷ್ಯಾ ಪದೇ ಪದೇ ಹೇಳಿದೆ.

ಆದರೆ ರಷ್ಯಾದೊಂದಿಗೆ ಒಂದು ತಿಂಗಳ ಯುದ್ಧದ ನಂತರ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕದನ ವಿರಾಮಕ್ಕೆ ಬದಲಾಗಿ ನ್ಯಾಟೋ ಸದಸ್ಯತ್ವವನ್ನು ಪಡೆಯದಿರಲು ಸಿದ್ಧವಾಗಿರುವಂತೆ ಹೇಳಿದರು.

ಅದಕ್ಕೆ ಪ್ರತಿಯಾಗಿ ರಷ್ಯಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವುದು ಮತ್ತು ಉಕ್ರೇನ್‌ನ ಭದ್ರತೆಗೆ ಸಂಬಂಧಿಸಿದಂತೆ ಭರವಸೆ ನೀಡಿತ್ತು.

ಭವಿಷ್ಯದಲ್ಲಿ ರಷ್ಯಾ ಮತ್ತೆ ಆಕ್ರಮಣ ಮಾಡುವ ಸಾಧ್ಯತೆಯನ್ನು ತೊಡೆದು ಹಾಕಲು ಹಾಗೂ ಉಕ್ರೇನ್‌ಗೆ ದೀರ್ಘಾವಧಿಯ ಬೆಂಬಲ ನೀಡುವುದಕ್ಕೆ ಸಂಬಂಧಿಸಿದಂತೆ ಯುಎಸ್ ಸಿದ್ಧವಾಗಿದೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ಜೊತೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಅಧ್ಯಕ್ಷ ಜೋ ಬೈಡನ್ ಅವರಿಗೆ ತಿಳಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ಫೆಬ್ರವರಿ 24ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದರು. ಉಕ್ರೇನ್‌ನ “ಸೈನ್ಯೀಕರಣ” ಮತ್ತು “ಡೆನಾಜಿಫಿಕೇಶನ್” ಗುರಿಯನ್ನು ಹೊಂದಿರುವ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಕಳೆದ ಒಂದು ತಿಂಗಳ ಯುದ್ಧದ ಅವಧಿಯಲ್ಲಿ, ರಷ್ಯಾವು ಉಕ್ರೇನ್ ವಿರುದ್ಧ ಪುನರಾವರ್ತಿತ ದಾಳಿಗಳನ್ನು ಪ್ರಾರಂಭಿಸಿದೆ. ಅದರ ನಗರಗಳನ್ನು ಧ್ವಂಸಗೊಳಿಸಿದೆ, ಸಾವಿರಾರು ಜನರನ್ನು ಕೊಂದಿದ್ದು, ಲಕ್ಷಾಂತರ ಉಕ್ರೇನಿಯನ್ನರನ್ನು ಸ್ಥಳಾಂತರಿಸಿದೆ.

ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಆಸ್ಟ್ರೇಲಿಯ ಚಾಂಪಿಯನ್ಸ್

0

12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವನಿತೆಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

71 ರನ್​ಗಳ ಅಮೋಘ ಗೆಲುವು ಸಾಧಿಸಿ ದಾಖಲೆಯ ಏಳನೇ ಬಾರಿ ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.
ನ್ಯೂಜಿಲೆಂಡ್​ನಲ್ಲಿ ನಡೆದ 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವನಿತೆಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಕ್ರಿಸ್ಟ್​​ಚರ್ಚ್​ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ 71 ರನ್​ಗಳ ಅಮೋಘ ಗೆಲುವು ಸಾಧಿಸಿದೆ.

ಈ ಮೂಲಕ ದಾಖಲೆಯ ಏಳನೇ ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮಹಿಳಾ ತಂಡ 50 ಓವರ್​ಗೆ ಬರೋಬ್ಬರಿ 356 ರನ್ ಸಿಡಿಸಿತು. ವಿಕೆಟ್ ಕೀಪರ್ ಬ್ಯಾಟರ್ ಅಲಿಸಾ ಹೀಲಿ ( ಅವರ ದಾಖಲೆ 170 ರನ್ ಮತ್ತು, ರಚೆಲ್‌ ಹೇನ್ಸ್ ಮತ್ತು ಬೆತ್ ಮೂನೆ ಅವರ ಅರ್ಧಶತಕದ ನೆರವಿನಿಂದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್​ಗೆ ಕಠಿಣ ಟಾರ್ಗೆಟ್ ನೀಡಿತ್ತು.

ಆದರೆ, ಆಂಗ್ಲರು 285 ರನ್​ಗೆ ಆಲೌಟ್ ಆಗುವ ಮೂಲಕ ರನ್ನರ್ ಅಪ್​ಗೆ ತೃಪ್ತಿ ಪಟ್ಟಿತು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ಮಹಿಳಾ ತಂಡ ಬೊಂಬಾಟ್ ಆರಂಭ ಪಡೆದುಕೊಂಡಿತು. ಓಪನರ್​​ಗಳಾದ ಅಲಿಸಾ ಹೀಲಿ ಹಾಗೂ ರಚೆಲ್‌ ಹೇನ್ಸ್ ಭರ್ಜರಿ ರನ್ ಕಲೆಹಾಕಿದರು. ಇಂಗ್ಲೆಂಡ್ ಬೌಲರ್​ಗಳನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ ಮೊದಲ ವಿಕೆಟ್​ಗೆ 160 ರನ್​ಗಳ ಜೊತೆಯಾಟ ಆಡಿದರು.

ರಚೆಲ್‌ ಹೇನ್ಸ್ 93 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು. ನಂತರ ಹೀಲಿ ಜೊತೆಯಾದ ಬೆತ್ ಮೂನೆ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಅದರಲ್ಲೂ ಅಲಿಸಾ ಸ್ಫೋಟಕ ಆಟವಾಡಿದರು.

ಎದುರಾಳಿ ಬೌಲರ್​ಗಳ ಬೆಂಡೆತ್ತಿದ್ದ ಅಲಿಸಾ ಮೈದಾನದ ಮೂಲೆ ಮೂಲೆಗೆ ಬೌಂಡರಿ ಮೂಲಕ ಚೆಂಡನ್ನು ಅಟ್ಟಿ ಬೆವರಿಳಿಸಿದರು.

ವಿಶ್ವಕಪ್ ಇತಿಹಾಸದಲ್ಲೇ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರಿದ ಅಲಿಸಾ ಕೇವಲ 138 ಎಸೆತಗಳಲ್ಲಿ 26 ಬೌಂಡರಿಯೊಂದಿಗೆ 170 ರನ್ ಚಚ್ಚಿದರು. ಕೊನೇ ಹಂತದಲ್ಲಿ ಮೂನೇ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ಕೇವಲ 47 ಎಸೆತಗಳಲ್ಲಿ 62 ರನ್ ಸಿಡಿಸಿ ಔಟಾದರು. ಆಸ್ಟ್ರೇಲಿಯಾ ಮಹಿಳಾ ತಂಡ ಅಂತಿಮವಾಗಿ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು. ಇಂಗ್ಲೆಂಡ್ ಪರ ಆಯನಿ ಶ್ರುಬ್​ಸೊಲೆ 3 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ 100 ರನ್​ಗೂ ಮೊದಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಓಪನರ್​ಗಳಾದ ಟಾಮಿ ಬ್ಯೂಮೊಂಟ್ (27) ಹಾಗೂ ಡೆನಿಯಲ್ ವ್ಯಾಟ್ 4 ರನ್​ಗೆ ನಿರ್ಗಮಿಸಿದರು. ನಾಯಕಿ ಹೆದರ್ ನೈಟ್ ಕೂಡ 26 ರನ್​ಗೆ ಬ್ಯಾಟ್ ಕೆಳಗಿಟ್ಟಿದ್ದು ತಂಡ ಸೋಲಿನ ಸುಳಿಗೆ ಸಿಲುಕಿತು. ನಂತರ ಬಂದ ಬ್ಯಾಟರ್​ಗಳ ಪೈಕಿ ನಥಾಲಿ ಕೀವರ್ ಬಿಟ್ಟು ಉಳಿದವರು ಯಾರೂ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಆಯಮಿ ಜೋನ್ಸ್ 20 ಮತ್ತು ಸೋಫಿಯ ಡಂಕ್ಲೆ 23 ರನ್​ಗೆ ಸುಸ್ತಾದರು. ಆದರೆ, ನಥಾಲಿ ಕೀವರ್ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರು.

ಆಸ್ಟ್ರೇಲಿಯಾ ಪರ ಅಲನ್ ಕಿಂಗ್ ಹಾಗೂ ಜೆಸ್ ಜಾನ್ಸೆನ್ ತಲಾ 3 ವಿಕೆಟ್ ಕಿತ್ತರೆ ಮೆಗನ್ ಸ್ಕಟ್ 2 ವಿಕೆಟ್ ಪಡೆದರು.

71 ರನ್​ಗಳ ಗೆಲುವಿವೊಂದಿಗೆ ಆಸ್ಟ್ರೇಲಿಯಾ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಏಳನೆ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗುವ ತಂಡ ಕಳೆದ ಬಾರಿಗಿಂತ ದುಪ್ಪಟ್ಟು ಎಂದರೆ 1.32 ಮಿಲಿಯನ್‌ ಅಮೆರಿಕನ್‌ ಡಾಲರ್‌(ಸುಮಾರು 9.94 ಕೋಟಿ ರು.) ಬಹುಮಾನ ಪಡೆದುಕೊಂಡಿದೆ.

ರನ್ನರ್‌ ಅಪ್‌ ಆದ ಇಂಗ್ಲೆಂಡ್ ತಂಡ 4.51 ಕೋಟಿ ರು. ಬಹುಮಾನ ಸ್ವೀಕರಿಸಿದೆ.

ನಮ್ಮ ಜನ ಬದುಕನ್ನ ಯಾವರೀತಿ ನಡೆಸುತ್ತಿದ್ದಾರೋ ಅದರಂತೆ ಸಾಗಲು ಬಿಡಿ

0

ಕಳೆದ ಒಂದು ವಾರದಿಂದ ರೈತರ ಬದುಕಿನ ಮೇಲೆ ಗದಾಪ್ರಹಾರ ನಡೆಯುತ್ತಿದೆ.
ಸಮಾಜದಲ್ಲಿ ಅಶಾಂತಿ ಮೂಡಿಸಲು, ರಾಜಕೀಯದ ಗುರಿ ಇಟ್ಟುಕೊಂಡು ಒಂದು ಧರ್ಮದ ಮೇಲೆ ಪ್ರಯೋಗ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ನಿನ್ನೆ ಪಶುಸಂಗೋಪನಾ ಇಲಾಖೆಯಿಂದ ಆದೇಶ ಹೊರಡಿಸಿ, ಪೊಲೀಸ್ ಹಾಗೂ ಇತರ ಅಧಿಕಾರಿಗಳು ಸೇರಿ ಕೋಳಿ, ಕುರಿ ವ್ಯಾಪಾರ ನಡೆಸುತ್ತಿರುವವರ ಮೇಲೆ ನಿಯಂತ್ರಣ ಮಾಡಲು ಹೊರಟಿದ್ದಾರೆ. ರಾಜ್ಯದ ವಿವಿಧ ಕಡೆಗಳಿಂದ ರೈತರು ಕರೆ ಮಾಡಿ, ‘ಸರ್ಕಾರದ ಈ ಆದೇಶದಿಂದ ನಮ್ಮ ಕುರಿ, ಕೋಳಿಗಳನ್ನು ಕೊಳ್ಳುವವರಿಲ್ಲದಂತಾಗಿದೆ. ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ.

ಒಂದು ಪಕ್ಷದ ಅಧ್ಯಕ್ಷನಾಗಿ ನೀವು ಯಾಕೆ ಸುಮ್ಮನೆ ಕೂತಿದ್ದೀರಿ? ಎಂದು ಕೇಳುತ್ತಿದ್ದಾರೆ ಎಂದು ಹೇಳಿದರು.

ನಾನು ಕೂಡ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ನಮ್ಮ ಊರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಕೋಳಿ ಫಾರಂ ಇಟ್ಟುಕೊಂಡಿದ್ದೆ. ನನಗೆ ಇದರ ವ್ಯಾಪಾರ, ವ್ಯವಹಾರ ಎಲ್ಲವೂ ಗೊತ್ತಿದೆ. ನಮ್ಮ ಮನೆಯಲ್ಲಿ ಕುರಿಗಳನ್ನು ಸಾಕಿದ್ದೆವು. ಕೋಳಿಗಳ ವಧೆಗೆ ಇಂತಿಷ್ಟು ಸಮಯ ಎಂದು ಇರುತ್ತದೆ. ಆ ಸಮಯ ಮೀರಿದರೆ, ಅದು ಸಾಕಣೆ ಮಾಡುವವರಿಗೆ ಹೊರೆಯಾಗಿ ನಷ್ಟ ಅನುಭವಿಸುವಂತಾಗುತ್ತದೆ.

ಹೀಗಾಗಿ ನಮ್ಮ ರೈತರು, ವರ್ತಕರು, ಅವರು ಯಾವುದೇ ಸಮುದಾಯದವರಿರಲಿ, ತಮ್ಮ ಬದುಕನ್ನು ಯಾವ ರೀತಿ ನಡೆಸಿಕೊಂಡು ಹೋಗುತ್ತಿದ್ದಾರೋ ಅದರಂತೆ ಸಾಗಲು ಸರ್ಕಾರ ಅವಕಾಶ ನೀಡಬೇಕು ಎಂದು ಹೇಳಿದರು.

ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಹಾಳು ಮಾಡುವುದು ಬೇಡ. ಈ ಹೊಸತೊಡುಕು ಆಚರಣೆಯನ್ನು ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ. ಇಷ್ಟು ದಿನಗಳ ಕಾಲ ಮಾಂಸ ವ್ಯಾಪಾರ ಮಾಡುವವರು ಇಂತಿಷ್ಟು ದರ ಎಂದು ಹಾಕುತ್ತಿದ್ದರು. ಈಗ ಅವರ ಸ್ಥಿತಿ ಏನಾಗಿದೆ ಎಂದು ಹೋಗಿ ನೋಡಿ. ಆರ್‌ಎಸ್‌ಎಸ್, ಬಿಜೆಪಿಯವರ ಈ ಆದೇಶಕ್ಕೆ ಯಾರೂ ಅಂಜಿಕೊಳ್ಳಬೇಡಿ. ರೈತರು ಹಾಗೂ ವ್ಯಾಪಾರಿಗಳ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲಲಿದೆ ಎಂದು ಭರವಸೆ ನೀಡಿದರು.

ನಾನು ಮುಖ್ಯಮಂತ್ರಿಗಳಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ನೀವು ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದು, ಅದಕ್ಕೆ ಗೌರವ ನೀಡಿ. ಎಲ್ಲರನ್ನು ಒಟ್ಟಾಗಿ ಸೌಹಾರ್ದತೆಯಿಂದ ತೆಗೆದುಕೊಂಡು ಹೋಗುತ್ತೇವೆ ಎಂದು ಪ್ರಮಾಣ ಮಾಡಿದ್ದೀರಿ. ಅವರ ಬದುಕು, ಹೊಟ್ಟೆ ಮೇಲೆ ಹೊಡೆಯಬೇಡಿ. ಈಗಾಗಲೇ ಉದ್ಯೋಗ ನಷ್ಟ ಆಗುತ್ತಿದೆ. ವ್ಯಾಪಾರ, ವ್ಯವಹಾರ ನಷ್ಟ ಆಗುತ್ತಿದೆ. ಎಲ್ಲರೂ ಒಟ್ಟಾಗಿ ಬದುಕಲು ಅವಕಾಶ ಮಾಡಿಕೊಡಿ. ಈ ಕೂಡಲೇ ನಿಮ್ಮ ಪಕ್ಷ ಹಾಗೂ ಸಂಘಟನೆ ಹೆಸರು ಹೇಳಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿದ್ದಾರೋ ಅದನ್ನು ನಿಲ್ಲಿಸಿ. ಎಲ್ಲರೂ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

ಸರ್ಕಾರದ ಏಕಾಏಕಿ ಆದೇಶದ ಉದ್ದೇಶ ಏನು ಎಂಬ ಪ್ರಶ್ನೆಗೆ, ‘ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಮಾಡುವ ಉದ್ದೇಶ. ಚುನಾವಣೆಯನ್ನು ಸರಿಯಾಗಿ ಮಾಡಲು ಅವರ ಬಳಿ ಯಾವುದೇ ಸಾಧನೆಗಳಿಲ್ಲ. ಹೀಗಾಗಿ ಇಂತಹ ಭಾವನಾತ್ಮಕ ವಿಚಾರವನ್ನು ತರುತ್ತಿದ್ದಾರೆ. ನಾವು ಸಂವಿಧಾನದ ಆಶಯದಂತೆ ಸಮಾಜವನ್ನು ಒಂದು ಮಾಡಲು ಪ್ರಯತ್ನಿಸಿದರೆ, ಅವರು ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಉತ್ತರಿಸಿದರು.

ಹಲಾಲ್ ಕಟ್ ಗೆ ಅವಕಾಶ ನೀಡಬಾರದು ಎಂದು ಕೆಲವು ಸಂಘಟನೆಗಳು ಆಗ್ರಹಿಸುತ್ತಿವೆ ಎಂಬ ಪ್ರಶ್ನೆಗೆ, ‘ಕೋಳಿ ಮತ್ತು ಕುರಿಗಳಿಗೆ ಪ್ರಜ್ಞೆ ತಪ್ಪಿಸಬೇಕಂತೆ. ಹೇಗೆ ತಪ್ಪಿಸಬೇಕು? ತಲೆಗೆ ಹೊಡೆದರೆ ಅವು ಸಾಯುವುದಿಲ್ಲವೇ? ಅದು ಹಿಂಸೆ ಅಲ್ಲವೇ? ಮಾಂಸ ವ್ಯಾಪಾರದಲ್ಲೂ ಅನೇಕ ಉಪ ವ್ಯಾಪಾರಗಳಿವೆ. ಇವು ಸಾಮಾಜಿಕವಾಗಿ ಬೆಸೆದುಕೊಂಡಿರುವ ವ್ಯಾಪಾರಗಳು. ನಾನು ಈ ವಿಚಾರದಲ್ಲಿ ಧ್ವನಿ ಎತ್ತದಿದ್ದರೆ ನನ್ನ ಸ್ಥಾನ ಹಾಗೂ ಜವಾಬ್ದಾರಿಗೆ ದ್ರೋಹ ಬಗೆದಂತಾಗುತ್ತದೆ.

ಮುಖ್ಯಮಂತ್ರಿಗಳು ಸಂಜೆ ಒಳಗಾಗಿ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.

ಆಂಧ್ರ ಪ್ರದೇಶದಲ್ಲಿ ಸದ್ಯ ಜಿಲ್ಲೆಗಳ ಪುನಾರಚನೆ

0

ಆಂಧ್ರಪ್ರದೇಶ ಸರ್ಕಾರವು ಅಸ್ತಿತ್ವದಲ್ಲಿರುವ 13 ಜಿಲ್ಲೆಗಳ ಪೈಕಿ 26 ಜಿಲ್ಲೆಗಳನ್ನು ರಚನೆ ಮಾಡುವ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಎಲ್ಲಾ ಹೊಸ ಜಿಲ್ಲೆಗಳು ಏಪ್ರಿಲ್ 4 (ಸೋಮವಾರ) ರಿಂದ ಅಸ್ತಿತ್ವಕ್ಕೆ ಬರಲಿವೆ ಎಂದು ಶನಿವಾರ ರಾತ್ರಿ ಹೊರಡಿಸಲಾದ ಗೆಜೆಟ್ ತಿಳಿಸಿದೆ.

ಅಧಿಸೂಚನೆ ಹೊರಡಿಸಿದ ಕೂಡಲೇ ಆಂಧ್ರ ಸಿಎಂ ವೈ. ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಪುನರ್ರಚಿಸಿ ಹೊಸದಾಗಿ ರಚಿಸಲಾದ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸಿತು.

ರಾಜ್ಯ ಸರ್ಕಾರವು ಜನವರಿಯಲ್ಲಿ ಅಸ್ತಿತ್ವದಲ್ಲಿರುವ 13 ಜಿಲ್ಲೆಗಳಿಂದ 26 ಜಿಲ್ಲೆಗಳಿಗೆ ಹೆಚ್ಚಿಸಲು ಕರಡು ಅಧಿಸೂಚನೆಯನ್ನು ಹೊರಡಿಸಿ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು.

2019 ರ ವಿಧಾನಸಭಾ ಚುನಾವಣೆಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರೆಡ್ಡಿ ಅವರು ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ, ಪ್ರತಿ ಲೋಕಸಭಾ ಕ್ಷೇತ್ರವನ್ನು ಜಿಲ್ಲೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ರಾಜ್ಯವು 25 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಪೂರ್ವ ಗೋದಾವರಿ ಮತ್ತು ವಿಶಾಖಪಟ್ಟಣಂನಲ್ಲಿನ ಬುಡಕಟ್ಟು ಪ್ರದೇಶಗಳನ್ನು ಕೆತ್ತಿ ಒಂದು ಜಿಲ್ಲೆಯನ್ನು ಹೆಚ್ಚುವರಿಯಾಗಿ ರಚಿಸಲಾಯಿತು.

ಶ್ರೀಲಂಕಾಗೆ ಭಾರತದಿಂದ 40,000 ಮೆಟ್ರಿಕ್ ಟನ್ ಡೀಸೆಲ್ ರವಾನೆ

0

ಆರ್ಥಿಕ ಸಂಕಷ್ಟ ಮತ್ತು ಡೀಸೆಲ್ ಕೊರತೆಯಿಂದ ನಲುಗಿರುವ ನೆರೆಯ ಶ್ರೀಲಂಕಾಗೆ ಭಾರತ ಮತ್ತೆ ನೆರವಿನ ಹಸ್ತ ಚಾಚಿದೆ.

40,000 ಮೆಟ್ರಿಕ್ ಟನ್ ನಷ್ಟು ಪ್ರಮಾಣದ ಡೀಸೆಲ್ ಅನ್ನು ಭಾರತ ಶ್ರೀಲಂಕಾಗೆ ರವಾನಿಸಿದ್ದು, ಇದೀಗ ಸರಕು ಕೊಲಂಬೊ ತಲುಪಿದೆ.

ಶ್ರೀಲಂಕಾದಲ್ಲಿ 13 ಗಂಟೆಗಳ ಪವರ್ ಕಟ್ ಘೋಷಿಸಲಾಗಿದ್ದು ಈ ಪ್ರಮಾಣದ ವಿದ್ಯುತ್ ಅಭಾವವನ್ನು ದೇಶವು 1996ರಿಂದಲೂ ಎದುರಿಸಿರಲಿಲ್ಲ. ಭಾರತ ಕಳಿಸಿರುವ ಡೀಸೆಲ್ ನಿಂದಾಗಿ ಪವರ್ ಕಟ್ ಅವಧಿ ಇಳಿಕೆಯಾಗುವುದಾಗಿ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗಷ್ಟೆ ಭಾರತ 100 ಕೋಟಿ ಡಾಲರ್ ಹಣದ ನೆರವನ್ನು ಶ್ರೀಲಂಕಾಗೆ ನೀಡಿತ್ತು. ಅಲ್ಲದೆ ಅಗತ್ಯ ಬಿದ್ದಲ್ಲಿ ಅದಕ್ಕೂ ಹೆಚ್ಚಿನ ಆರ್ಥಿಕ ನೆರವು ನೀಡುವಲ್ಲಿ ಭಾರತ ಬದ್ಧವಾಗಿದೆ ಎಂದು ಭಾರತ ಘೋಷಿಸಿತ್ತು.

ಶ್ರೀಲಂಕಾ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ನವೀಕರಣ ಮತ್ತು ತಪಾಸಣಾ ನ್ಯೂನತೆ ಪರಿಹರಿಸಲು ಕೊವ್ಯಾಕ್ಸೀನ್ ಪೂರೈಕೆ ಸ್ಥಗಿತ

0

ಭಾರತ್ ಬಯೋಟೆಕ್‌ ನ ಕೋವಾಕ್ಸಿನ್ ಕೋವಿಡ್ -19 ಲಸಿಕೆಯನ್ನು ಪೂರೈಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ಥಗಿತಗೊಳಿಸಿದೆ.

ಸೌಲಭ್ಯಗಳನ್ನು ನವೀಕರಿಸಲು ಮತ್ತು ತಪಾಸಣೆಯಲ್ಲಿ ಕಂಡುಬರುವ ನ್ಯೂನತೆಗಳನ್ನು ಪರಿಹರಿಸಲು ತಯಾರಕರಿಗೆ ಅನುವು ಮಾಡಿಕೊಡಲು ಈ ಕ್ರಮ ಕೈಗೊಂಡಿದೆ.

ಭಾರತದ ಭಾರತ್ ಬಯೋಟೆಕ್ ತಯಾರಿಸಿದ ಕೋವಿಡ್ -19 ಲಸಿಕೆ ವಿಶ್ವಸಂಸ್ಥೆಯ ಏಜೆನ್ಸಿಗಳ ಮೂಲಕ ಪೂರೈಕೆಯನ್ನು ಸ್ಥಗಿತಗೊಳಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಯ ಪ್ರಕಾರ, ಲಸಿಕೆಯನ್ನು ಪಡೆದ ದೇಶಗಳಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿದೆ. ಆದರೆ ಸೂಕ್ತವಾದ ಕ್ರಮಗಳು ಏನೆಂದು ಸ್ಪಷ್ಟಪಡಿಸಿಲ್ಲ.

ಲಸಿಕೆ ಪರಿಣಾಮಕಾರಿಯಾಗಿದೆ. ಯಾವುದೇ ಸುರಕ್ಷತಾ ಕಾಳಜಿ ಹೊಂದಿಲ್ಲ. ಆದರೆ. ರಫ್ತುಗಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸುವುದರಿಂದ ಕೋವಾಕ್ಸಿನ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ.

ಮಾರ್ಚ್ 14 ರಿಂದ 22 ರವರೆಗೆ ನಡೆಸಲಾದ ತುರ್ತು ಬಳಕೆಯ ಪಟ್ಟಿಯ ತಪಾಸಣೆಯ ಫಲಿತಾಂಶಗಳಿಗೆ ಪ್ರತಿಕ್ರಿಯೆಯಾಗಿ ಅಮಾನತುಗೊಳಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಅಂಜನಾದ್ರಿ ಕ್ಷೇತ್ರ ಅಭಿವೃದ್ದಿಗೆ ಬಜೆಟ್ನಲ್ಲಿ ₹100 ಕೋಟಿ ಅನುದಾನ- ಬೊಮ್ಮಾಯಿ

0

ಹಂಪಿ ಬಳಿ ಇರುವ ಅಂಜನಾದ್ರಿ ಶ್ರೀ ಕ್ಷೇತ್ರವನ್ನು ಸರ್ಕಾರ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ.

ಈ ಉದ್ದೇಶಕ್ಕಾಗಿ 100 ಕೋಟಿ ರೂ.ಗಳ ಅನುದಾನವನ್ನು ಬಜೆಟ್ ನಲ್ಲಿ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶ್ರೀ ರಾಮಸೇವಾ ಮಂಡಳಿ ಆಯೋಜಿಸಿರುವ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೇ ವರ್ಷ ಯೋಜನೆ ಸಿದ್ಧಪಡಿಸಿ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗುವುದು.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ಕೆಲಸ ಈ ವರ್ಷವೇ ಪ್ರಾರಂಭವಾಗಲಿದೆ.

ವಿಶಿಷ್ಟವಾದ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಮುಖರ ಸಲಹೆ ಮೇರೆಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನಿವೃತ್ತ ಪೊಲೀಸ್ ಎಡಿಜಿಪಿ ಭಾಸ್ಕರ್ ರಾವ್ ರಾಜಕೀಯಕ್ಕೆ ಎಂಟ್ರಿ?

0

ರೈಲ್ವೆ ಪೊಲೀಸ್ ಎಡಿಜಿಪಿ ಆಗಿದ್ದ ಐಪಿಎಸ್ ಅಧಿಕಾರಿ ಬಿ.ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ (ಎಎಪಿ) ಸೇರಲಿದ್ದಾರೆ.

2021ರ ಸೆಪ್ಟೆಂಬರ್ ನಲ್ಲಿ ತಮ್ಮ ಹುದ್ದೆಗೆ ಭಾಸ್ಕರರಾವ್ ಸಲ್ಲಿಸಿದ್ದ ರಾಜೀನಾಮೆಯನ್ನು ಸರ್ಕಾರ ಕಳೆದ ವಾರ‌ವಷ್ಟೇ ಅಂಗೀಕರಿಸಿತ್ತು.

ನವದೆಹಲಿಯ ದೀನ್ ದಯಾಳ್ ಉಪಾದ್ಯಾಯ ಮಾರ್ಗದಲ್ಲಿರುವ ಪಕ್ಷದ‌ ಕಚೇರಿಯಲ್ಲಿ ಸೋಮವಾರ‌ ಮಧ್ಯಾಹ್ನ ಅವರು ಪಕ್ಷ‌ ಸೇರಲಿದ್ದಾರೆ. ಈ ಸಂದರ್ಭ ಪಕ್ಷದ‌ ಹಿರಿಯ ಮುಖಂಡ‌ ಮನೀಷ್ ಸಿಸೋಡಿಯಾ‌ ಮತ್ತಿತರರು ಹಾಜರಿರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.