Wednesday, February 25, 2026
Wednesday, February 25, 2026
Home Blog Page 1634

ಆಧಾರ್ ಕಾರ್ಡ್ ನೊಂದಿಗೆ ಜಾತಿ & ಆದಾಯ ಪ್ರಮಾಣ ಪತ್ರ ಲಿಂಕ್ ಮಾಡಲು ಚಿಂತನೆ

0

ದೇಶದಲ್ಲಿ ಪ್ಯಾನ್ ಕಾರ್ಡ್ ಮತ್ತು ಅನೇಕ ಸರ್ಕಾರಿ ಯೋಜನೆಗಳನ್ನು ಆಧಾರ್ನೊಂದಿಗೆ ಲಿಂಕ್ ಮಾಡಿದ ನಂತರ,ಪ್ರಸ್ತುತ ಕೇಂದ್ರ ಸರ್ಕಾರವು ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಯೋಜಿಸಿದೆ. ಸ್ವಯಂಚಾಲಿತ ಪರಿಶೀಲನಾ ವ್ಯವಸ್ಥೆಯನ್ನು ರಚಿಸಲು ಇದು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎನ್ನಲಾಗಿದೆ.

60 ಮಿಲಿಯನ್ ಜನರು ನೇರವಾಗಿ ವಿದ್ಯಾರ್ಥಿವೇತನವನ್ನು ಪಡೆಯಲಿದ್ದಾರೆ.
ಖಾಸಗಿ ಮಾಧ್ಯಮವೊಂದರ ವರದಿಯ ಪ್ರಕಾರ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜಾತಿಗಳಿಗೆ ಸೇರಿದ 60 ಲಕ್ಷ ಜನರು ವಿದ್ಯಾರ್ಥಿವೇತನವನ್ನು ಪಡೆಯುವುದನ್ನು ಇದು ಖಚಿತಪಡಿಸುತ್ತದೆ ಎಂದು ಸರ್ಕಾರ ತಿಳಿಸಿದೆ. ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿದ ನಂತರ, ಸ್ವಯಂಚಾಲಿತ ಪರಿಶೀಲನಾ ವ್ಯವಸ್ಥೆಯು ನಿಜವಾದ ಫಲಾನುಭವಿಗೆ ಪ್ರಯೋಜನಗಳನ್ನು ವಿಸ್ತರಿಸಲು ಸರ್ಕಾರಕ್ಕೆ ಸಹಾಯವಾಗುತ್ತದೆ.

ಈಗಾಗಲೇ ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಸ್ವಯಂಚಾಲಿತ ಪರಿಶೀಲನಾ ವ್ಯವಸ್ಥೆಯ ಮೂಲಕ ಸರ್ಕಾರವು ಮೊದಲು ವಿದ್ಯಾರ್ಥಿವೇತನ ವಿತರಣೆಯನ್ನು ನಡೆಸುತ್ತದೆ, ಏಕೆಂದರೆ ಈ ರಾಜ್ಯಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಆಧಾರ್ನೊಂದಿಗೆ ಜೋಡಿಸುವ ಕೆಲಸವನ್ನು ಪೂರ್ಣಗೊಳಿಸಿವೆ. ಈ ವ್ಯವಸ್ಥೆಯೊಂದಿಗೆ, ಅರ್ಹ ಮಕ್ಕಳು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿವೇತನವನ್ನು ಪಡೆಯಲು ಸಾಧ್ಯವಾಗುತ್ತದೆ.

ಕಾರ್ಯದರ್ಶಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದನ್ನು ಇಟಿ ಉಲ್ಲೇಖಿಸಿದೆ. ಈ ಸಭೆಯಲ್ಲಿ, ಮೆಟ್ರಿಕ್ಯುಲೇಷನ್ ನಂತರ ಪರಿಶಿಷ್ಟ ಜಾತಿಯ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲು ಸೂಚಿಸಲಾಯಿತು. ಈ ಸಲಹೆಯನ್ನು ಅನುಷ್ಠಾನಗೊಳಿಸಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಗುರಿಯನ್ನು ನಿಗದಿಪಡಿಸಿದೆ.

ರಿಸರ್ವ್ ಬ್ಯಾಂಕ್ ರೆಪೋ ದರ ಬದಲಾವಣೆಯಿಲ್ಲ

0

ಭಾರತೀಯ ರಿಸರ್ವ್ ಬ್ಯಾಂಕ್‌ ರೆಪೊ ದರದಲ್ಲಿ ಬದಲಾವಣೆ ಮಾಡದಿರಲು ಶುಕ್ರವಾರ ನಿರ್ಧರಿಸಿದೆ. ಶೇ. 4ರಷ್ಟು ರೆಪೊ ದರ ಮುಂದುವರಿಯಲಿದೆ. ರಿವರ್ಸ್‌ ರೆಪೊ ದರದಲ್ಲೂ ಯಥಾಸ್ಥಿತಿ ಶೇ. 3.35 ಕಾಯ್ದುಕೊಳ್ಳಲು ತೀರ್ಮಾನಿಸಲಾಗಿದೆ.

2022-23ನೇ ಸಾಲಿನ ಮೊದಲ ದ್ವೈ ಮಾಸಿಕ ಹಣಕಾಸು ನೀತಿ ಸಭೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳನ್ನು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಪ್ರಕಟಿಸಿದರು.

ಸತತ 11ನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಇದರಿಂದಾಗಿ ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿದರದಲ್ಲಿ ಬದಲಾವಣೆಗಳು ಆಗುವ ಸಾಧ್ಯತೆ ಇಲ್ಲ.

ರಷ್ಯಾ-ಉಕ್ರೇನ್‌ ಸಂಘರ್ಷ, ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯ ಕಾರಣಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ. 5.7ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಹಣದುಬ್ಬರವು ಶೇ. 4.5ರಷ್ಟಿರಲಿದೆ ಎಂದು ಫೆಬ್ರುವರಿ ತಿಂಗಳಲ್ಲಿ ಅಂದಾಜಿಸಲಾಗಿತ್ತು.

ಈ ಹಣಕಾಸು ವರ್ಷದಲ್ಲಿ ಅರ್ಥ ವ್ಯವಸ್ಥೆಯ ಬೆಳವಣಿಗೆ ದರ ಶೇ. 7.2ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಜಿಡಿಪಿ ಶೇ. 7.8ರಷ್ಟು ಇರಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು.

ಯುರೋಪ್‌ ನ ಪರಿಸ್ಥಿತಿಯು ಜಾಗತಿಕ ಆರ್ಥಿಕತೆಯ ಹಳಿ ತಪ್ಪಿಸಬಹುದು ಎಂದು ಶಕ್ತಿಕಾಂತ್‌ ದಾಸ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಆರ್‌ಬಿಐ ಪ್ರಕಟಣೆಯ ಬೆನ್ನಲ್ಲೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 110 ಅಂಶ ಕಡಿಮೆಯಾಗಿ 58,927 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 17,628 ಅಂಶಗಳಲ್ಲಿ ವಹಿವಾಟು ನಡೆದಿದೆ.

ಜಾತಿ ಧರ್ಮ ಮೀರಿದ ಸ್ನೇಹದ ಮಾದರಿ ಇಲ್ಲಿದೆ

0

ಪ್ರಸ್ತುತ ದಿನಗಳಲ್ಲಿ ಕೋಮುಗಲಭೆ ಎಲ್ಲೆಡೆ ವ್ಯಾಪಕವಾಗಿದೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ಕೇರಳದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಎಲ್ಲರಿಗೂ ಮಾದರಿಯಾಗಿದ್ದಾರೆ.

ಸ್ನೇಹ ಎಲ್ಲ ಸಂಬಂಧಗಳನ್ನು ಮೀರಿಸಿದ ಬಂಧ ಎಂಬ ಮಾತನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಇದಕ್ಕೆ ಉತ್ತಮ ಉದಾಹರಣೆ ಈ ಸ್ಟೋರಿ ಯಾಗಿದೆ. ಕೇರಳದ ಮುಸ್ಲಿಂ ವಿಕಲಚೇತನ ಯುವಕ ಅಲಿಫ್ ಅಹಮದ್ ಎಂಬಾತ ಹುಟ್ಟಿನಿಂದಲೂ ತನ್ನ ಎರಡು ಕಾಲುಗಳು ಕೂಡ ಸ್ವಾಧೀನ ಕಳೆದುಕೊಂಡಿದ್ದಾನೆ. ಆತ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ಥಳಾಂತರ ವಾಗಬೇಕಾದರೆ ಯಾರನ್ನಾದರೂ ಅವಲಂಬಿಸಲೇಬೇಕಾಗಿದೆ. ಇಂತಹ ಸಂದರ್ಭದಲ್ಲಿ ಆತನ ನೆರವಿಗೆ ಅಲಿಫ್ ಸ್ನೇಹಿತೆಯರು ಆತನನ್ನು ಮನೆಯಿಂದ ಕರೆದುಕೊಂಡು ಕಾಲೇಜಿಗೆ ಬರುವುದು. ಹಾಗೂ ಕಾಲೇಜಿನಿಂದ ಮನೆಗೆ ಕರೆದುಕೊಂಡು ಹೋಗುವ ಕಾರ್ಯವನ್ನು ಮಾಡುತ್ತಿದ್ದಾರೆ.

ಅಲಿಫ್ ಅಹಮದ್ ಆತನ ಸ್ನೇಹಿತರು ಅರ್ಚನ ಹಾಗೂ ಆರ್ಯ. ಇವರು ಅಲಿಫ್ ನ
ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದುಕೊಂಡು ಬರಲು ಆತನ ಹೆಗಲಿಗೆ ಹೆಗಲು ಕೊಟ್ಟು ಕರೆದುಕೊಂಡು ಬರುತ್ತಾರೆ.

ಆರ್ಯ ಹಾಗೂ ಅರ್ಚನಾ ಅವರು ತಮ್ಮ ಹೆಗಲಿಗೇ ಅಲಿಫ್ ಹೆಗಲನ್ನು ಕೊಟ್ಟು ಕರೆದುಕೊಂಡು ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿದ್ಯಾರ್ಥಿಗಳು ಕೇರಳದ ಕೊಲ್ಲಂ ಜಿಲ್ಲೆಯ ಸ್ತಾಸ್ತಾಂಕೊಟ್ಟ ಡಿಬಿ ಕಾಲೇಜಿನಲ್ಲಿ ಬಿಕಾಂ ಪದವಿಯ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಾಗಿದ್ದಾರೆ. ಅಲಿಫ್ ಅವರು ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಲಿಫ್ ನ ತಂದೆ-ತಾಯಿಯರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಈ ವಿಡಿಯೋವನ್ನು ನೋಡಿ ಅವರಿಬ್ಬರು ಸಂತೋಷಪಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಧರ್ಮದ ಹೆಸರಿನಲ್ಲಿ ಅನೇಕ ಕೃತಿಗಳು ನಡೆದ ಸಂದರ್ಭದಲ್ಲಿ ಸ್ನೇಹ ಬಾಂಧವ್ಯ, ಸಹಾಯ ಗುಣ ಎಲ್ಲರ ಗಮನವನ್ನು ಸೆಳೆದಿದೆ.

ಪಿಎಂ ಆವಾಸ್ ಯೋಜನೆ ಮೂರು ಕೋಟಿ ಮನೆಗಳ ನಿರ್ಮಾಣ-ಪ್ರಧಾನಿ

0

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿಗೂ ಹೆಚ್ಚು ಕಾಂಕ್ರೀಟ್ ಮನೆಗಳನ್ನು ಸರ್ಕಾರ ನಿರ್ಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಈ ಯೋಜನೆ ಬಡವರ ಸಬಲೀಕರಣ ಮತ್ತು ಮಹಿಳಾ ಸಬಲೀಕರಣದ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.

ಟ್ವಿಟರ್‌ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪ್ರಧಾನಿ, ದೇಶದ ಪ್ರತಿ ಬಡ ಕುಟುಂಬಕ್ಕೆ ಪಕ್ಕಾ ಮನೆಯನ್ನು ಒದಗಿಸುವ ನಮ್ಮ ಸಂಕಲ್ಪದಲ್ಲಿ ನಾವು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದೇವೆ. ಭಾರತೀಯರ ಸಹಕಾರದಿಂದ ಮಾತ್ರ ಮೂರು ಕೋಟಿಗೂ ಹೆಚ್ಚು ನಿರ್ಮಿಸಲು ಸಾಧ್ಯವಾಗಿದೆ. ಮೂಲ ಸೌಕರ್ಯಗಳಿರುವ ಈ ಮನೆಗಳು ಇಂದು ಮಹಿಳಾ ಸಬಲೀಕರಣದ ಸಂಕೇತವಾಗಿ ಮಾರ್ಪಟ್ಟಿವೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ 2.52 ಕೋಟಿ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಇದಕ್ಕಾಗಿ 1.95 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ) ಅಡಿಯಲ್ಲಿ ಇದುವರೆಗೆ 58 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ 1.18 ಲಕ್ಷ ಕೋಟಿ ರೂ. ವೆಚ್ಚವಾಗಿದೆ.

2015 ರಲ್ಲಿ ಪ್ರಾರಂಭವಾದ, ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ), ದೇಶದ ಬಡ ಜನಸಂಖ್ಯೆಗೆ ಕಾಂಕ್ರೀಟ್ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

31 ಮಾರ್ಚ್ 2022 ರೊಳಗೆ 2 ಕೋಟಿ ಕೈಗೆಟುಕುವ ಮನೆಗಳನ್ನು ನಿರ್ಮಿಸುವ ಗುರಿಯೊಂದಿಗೆ ಯೋಜನೆ ಪ್ರಾರಂಭಿಸಲಾಗಿದೆ.

ಪ್ರತಿ ಮನೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ, ನೀರಿನ ಸಂಪರ್ಕ ಮತ್ತು ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತದೆ.

ಪ್ರಧಾನಮಂತ್ರಿ ಆವಾಸ್ ಯೋಜನಾ ಅರ್ಬನ್ ವೆಬ್‌ಸೈಟ್ ಪ್ರಕಾರ, ಕೇಂದ್ರದಿಂದ ಇದುವರೆಗೆ ಸುಮಾರು 122.69 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗ- ರೇಣಿಗುಂಟ ಹಾಗೂ ಶಿವಮೊಗ್ಗ-ಚನ್ನೈ ರೈಲು ಸಂಚಾರ ಆರಂಭ

0

ಕೊರೊನಾ ಕಾರಣಕ್ಕೆ ಸ್ಥಗಿತವಾಗಿದ್ದ ಶಿವಮೊಗ್ಗ-ರೇಣಿಗುಂಟ (ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಮದ್ರಾಸ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ಏ.17ರಿಂದ ‍ಪುನರಾರಂಭಗೊಳ್ಳಲಿದೆ.

ಶಿವಮೊಗ್ಗದಿಂದ ಭಾನುವಾರ ಹಾಗೂ ಮಂಗಳವಾರ ಮತ್ತು ಮದರಾಸ್‌ನಿಂದ ಸೋಮವಾರ ಮತ್ತು ಬುಧವಾರ ಈ ರೈಲು ಸಂಚರಿಸಲಿದೆ.

ವಾರಕ್ಕೆ ಎರಡು ದಿನ ಸಂಚರಿಸುವ ಈ ರೈಲು ಸೇವೆಯು ಶಿವಮೊಗ್ಗದಿಂದ ಸಂಜೆ 7ಕ್ಕೆ ಹೊರಟು ಮರುದಿನ ಬೆಳಿಗ್ಗೆ 8.20ಕ್ಕೆ ರೇಣಿಗುಂಟವನ್ನು ಹಾಗೂ 11.10ಕ್ಕೆ ಮದ್ರಾಸ್‌ ತಲುಪುತ್ತದೆ. ಅದೇ ದಿನ ಮದ್ರಾಸ್‌ನಿಂದ ಸಂಜೆ 3.50ಕ್ಕೆ ಹೊರಡುವ ಈ ರೈಲು ರೇಣಿಗುಂಟಕ್ಕೆ ಸಂಜೆ 6.10ಕ್ಕೆ ತಲುಪಿ ಮರುದಿನ ಬೆಳಿಗ್ಗೆ 7.55ಕ್ಕೆ ಶಿವಮೊಗ್ಗವನ್ನು ತಲುಪಲಿದೆ.

ಮಲೆನಾಡು, ಕರಾವಳಿ ಮತ್ತು ಶಿವಮೊಗ್ಗ ಭಾಗದ ಜನರು ರೇಣಿಗುಂಟಕ್ಕೆ ಮುಂಜಾನೆ ತಲುಪಿ ಸಂಜೆಯ ವೇಳೆಗೆ ತಿರುಪತಿಯಲ್ಲಿ ದೇವರ ದರ್ಶನ ಪಡೆದು ಅದೇ ದಿನ ರಾತ್ರಿ ಶಿವಮೊಗ್ಗ ಮರುಪ್ರಯಾಣ ಆರಂಭಿಸಲು ಈ ಬದಲಾದ ಸಮಯ ನೆರವಾಗಲಿದೆ. ಈ ಮೊದಲಿನ ರೈಲು ಸೇವೆಯು ಶಿವಮೊಗ್ಗದಿಂದ ಮುಂಜಾನೆ ತನ್ನ ಪ್ರಯಾಣವನ್ನು ಆರಂಭಿಸುತ್ತಿರುವುದರಿಂದ ಶಿವಮೊಗ್ಗದಿಂದ ತಿರುಪತಿಗೆ ತೆರಳಲು ಬಯಸುತ್ತಿದ್ದ ಪ್ರಯಾಣಿಕರು ಇಡೀ ದಿನವನ್ನು ರೈಲಿನಲ್ಲಿ ಕಳೆಯಬೇಕಾಗಿತ್ತು.

ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ಶಿವಮೊಗ್ಗ-ರೇಣಿಗುಂಟ(ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಮದ್ರಾಸ್‌ ಎಕ್ಸ್‌ಪ್ರೆಸ್‌ ವಾರಕ್ಕೆ ಎರಡು ಭಾರಿ ಸಂಚರಿಸುವ ರೈಲು ಸೇವೆಗಳನ್ನು ಆರಂಭಿಸಲಾಗಿತ್ತು.

ದೇಶದಲ್ಲಿ 185.38 ಕೋಟಿಗೂ ಅಧಿಕ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದೆ

0

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 1,109 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದೆ. 43 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶದಿಂದ ತಿಳಿದು ಬಂದಿದೆ.

ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 4,30,33,067ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 5,21,492ಕ್ಕೆ ತಲುಪಿದೆ.

ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 11,492ಕ್ಕೆ ಇಳಿಕೆಯಾಗಿದೆ. ಒಂದೇ ದಿನದಲ್ಲಿ ದೇಶದಲ್ಲಿ 1,213 ಮಂದಿ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ 147 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ.

ದೇಶದ ಕೋವಿಡ್ 19 ಚೇತರಿಕೆ ಪ್ರಮಾಣ ಶೇ.98.78ರಷ್ಟಿದೆ. ಪ್ರತಿದಿನ ಪಾಸಿಟಿವಿಟಿ ದರ ಶೇ.0.24ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ.0.23ರಷ್ಟಿದೆ. ದೇಶಾದ್ಯಂತ ಈವರೆಗೆ ಕೋವಿಡ್ 19 ಲಸಿಕೆ ಅಭಿಯಾನದಡಿ 185.38 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ.

ಚಂದ್ರು ಹತ್ಯೆ ಪ್ರಕರಣ ಗೃಹಸಚಿವರ ಹೇಳಿಕೆ ಪ್ರಚೋದನಕಾರಿ ಕಾಂಗ್ರೆಸ್ ದೂರು

0

ಉರ್ದು ಮಾತನಾಡದಿದ್ದಕ್ಕೆ ಬೆಂಗಳೂರಿನಲ್ಲಿ ಚಂದ್ರು ಕೊಲೆಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಅವರು ವಿರುದ್ದ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ.

ತುಮಕೂರು ಯುವ ಕಾಂಗ್ರೆಸ್ ಘಟಕದಿಂದ ದೂರು ದಾಖಲಾಗಿದೆ. ಹಾಗೂ ಶಿವಮೊಗ್ಗದಲ್ಲೂ ಸಹ ದೂರು ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆಮಠ್ ನೇತೃತ್ವದಲ್ಲಿ ತುಮಕೂರು ಎಎಸ್ಪಿ ಉದೇಶ್ಗೆ ದೂರು ಸಲ್ಲಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಜಾತಿಗಳ ಮಧ್ಯೆ ಕೋಮುಗಲಭೆ ಸೃಷ್ಟಿ ಮಾಡುವ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಧಾರ್ಮಿಕ ಭಾವನೆ ಕೆರಳಿಸುವುದು ಮತ್ತು ಸಾಮಾಜಿಕ ಶಾಂತಿ ಹದಗೆಡಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿದ್ದಾರೆ.

ಸಮಾಜದಲ್ಲಿ ಶತ್ರುತ್ವ ಬೆಳೆಯಲು ಕಾರಣವಾಗಿ, ಅದರ ಲಾಭ ಪಡೆಯುವ ಉದ್ದೇಶವನ್ನು ಅವರು ಹೊಂದಿದ್ದಾರೆ. ರಾಜ್ಯದಲ್ಲಿ ಶಾಂತಿ ಕದಡಲು ಮುಂದಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಐಪಿಸಿ ಸೆಕ್ಷನ್ 153, 153ಎ, 295ಎ, 298, 505ಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡುವಾಗ ಉರ್ದು ಮಾತನಾಡದಿದ್ದಕ್ಕೆ ಹತ್ಯೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಹಳಷ್ಟು ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಸಚಿವರ ವಿರುದ್ಧ ಹಲವರು ಸಿಟ್ಟಿಗೆದ್ದಿದ್ದಾರೆ.

ತಕ್ಷಣದ ಮಾಹಿತಿ ಆಧರಿಸಿ ನಾನು ಹೇಳಿಕೆ ನೀಡಿದ್ದೆ. ನಾನು ನೀಡಿರುವ ಹೇಳಿಕೆ ತಪ್ಪಾಗಿದೆ. ಪೊಲೀಸರು ವಿಸ್ತೃತವಾದ ಮಾಹಿತಿ ನೀಡಿದ್ದಾರೆ. ಬೈಕ್ ಡಿಕ್ಕಿಯಾಗಿ ಗಲಾಟೆಯಾಗಿ ಚಂದ್ರುಗೆ ಚೂರಿ ಇರಿತ ಆಗಿದೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ರಕ್ತಸ್ರಾವವಾಗಿ ಚಂದ್ರು ಸಾವನ್ನಪ್ಪಿದ್ದಾರೆ. ಈ ಹಿಂದೆ ನಾನು ನೀಡಿದ್ದ ಹೇಳಿಕೆ ತಪ್ಪಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದರು.

ಶಕ್ತಿ ಧಾಮಕ್ಕೆ 5 ಕೋಟಿ ರೂ.ಗಳ ಅನುದಾನ ನೀಡಿಕೆ – ಸಿಎಂ

0

ಶಕ್ತಿಧಾಮ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.

ಶಕ್ತಿಧಾಮಕ್ಕೆ 5 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಮೈಸೂರಿನ ಶಕ್ತಿಧಾಮದಲ್ಲಿ ಇನ್‍ಫೋಸಿಸ್ ಪ್ರತಿಷ್ಠಾನ ವತಿಯಿಂದ ನಿರ್ಮಿಸಿರುವ ಇನ್‍ಫೋಸಿಸ್ ಬ್ಲಾಕ್ ಕಟ್ಟಡದ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ನಟ ಶಿವರಾಜ್ ಕುಮಾರ್ ಅವರೊಂದಿಗೆ ಶಕ್ತಿಧಾಮದ ಬಗ್ಗೆ ಚರ್ಚೆ ಮಾಡಿದಾಗ ಸಂಸ್ಥೆಗಳಿಗೆ ಅನುದಾನ ನೀಡಬೇಕೆಂಬ ಪ್ರೇರಣೆ ದೊರೆತಿದ್ದಾಗಿ ತಿಳಿಸಿದ ಮುಖ್ಯಮಂತ್ರಿಗಳು ಶಕ್ತಿಧಾಮದ ಯಶಸ್ಸಿನಿಂದ ಇನ್ನಷ್ಟು ಸಂಸ್ಥೆಗಳು ಹುಟ್ಟಿ ಬರಲಿ ಎಂದು ಆಶಿಸಿದರು.
ನಮ್ಮ ಸರಕಾರ ಹೆಣ್ಣುಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜೊತೆಗೆ ಆರೋಗ್ಯ, ಶಿಕ್ಷಣಕ್ಕೆಂದೆ 40 ಸಾವಿರ ಕೋಟಿ ಮೀಸಲಿಡಲಾಗಿದೆ. ಆಸಿಡ್ ದಾಳಿಗೆ ಒಳಗಾದವರಿಗೆ 2 ಸಾವಿರ ಇದ್ದ ಸಹಾಯಧನವನ್ನು 10 ಸಾವಿರಕ್ಕೆ ವಿಸ್ತರಣೆ ಮಾಡಲಾಗಿದೆ. ಅಲ್ಲದೆ ನಿರಾಶ್ರಿತರಿಗೆ ಹೊಸ ಬದುಕು ಕಟ್ಟಿಕೊಡುತ್ತಿರುವ ಸಂಘಸಂಸ್ಥೆಗಳಿಗೂ ನಮ್ಮ ಸರಕಾರ ಪ್ರೋತ್ಸಾಹ ನೀಡುತ್ತಿದೆ ಎಂದರು.

ಸಮಾಜದ ನೋವಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಶೋಷಿತರು, ದುರ್ಬಲರನ್ನು ಸಮಾಜ ಮತ್ತು ಸರಕಾರ ಕೈ ಹಿಡಿದು ನಿಲ್ಲಿಸಬೇಕು. ಪ್ರೀತಿ ವಿಶ್ವಾಸವನ್ನು ಸಮಾಜಕ್ಕೆ ಕೊಟ್ಟರೇ ಅದೇ ಪ್ರೀತಿ ಗೌರವ ನಮಗೆ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಳ್ಳೆಯದನ್ನೇ ಮಾಡಬೇಕು. ಒಳ್ಳೆಯದನ್ನೇ ಯೋಚಿಸಬೇಕೆಂದರು.

ತಾಯಂದಿರ ಶೋಷಣೆಯನ್ನು ನಿರಂತರವಾಗಿ ಸಮಾಜ ಅನಾದಿ ಕಾಲದಿಂದಲೂ ಮಾಡಿಕೊಂಡು ಬಂದಿರುವುದು ಅತ್ಯಂತ ನೋವಿನ ಸಂಗತಿ.ನಾವೆಲ್ಲಾ ಅಂತ:ಕರಣ ಕಳೆದುಕೊಂಡಾಗ ಬಹಳಷ್ಟು ಮಕ್ಕಳು ಅನಾಥರಾಗುತ್ತಾರೆ, ಶೋಷಣೆಗೆ ಒಳಗಾಗುತ್ತಾರೆ ಎಂದರು.

ಶಕ್ತಿಧಾಮ ಎಂಬುದು ಸರಿಯಾದ ಹೆಸರು. ಸ್ತ್ರೀ ಎಂದರೆ ಶಕ್ತಿ. ಭಗವಂತ ಸೃಷ್ಟಿ ಮಾಡುವ ಅಮೂಲ್ಯ ಗುಣವನ್ನು ಹೆಣ್ಣಿಗೆ ನೀಡಿದ್ದಾನೆ. ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಏನೆಲ್ಲಾ ಮಾಡಿದರೂ ಒಂದು ಮಗುವಿಗೆ ಜನ್ಮ ನೀಡುವ ಶಕ್ತಿಯನ್ನು ಪಡೆದುಕೊಂಡಿಲ್ಲ. ಹಾಗಾಗಿ ಇಂದು ಸರಕಾರ ಮಾಡುವ ಕೆಲಸವನ್ನು ಶಕ್ತಿಧಾಮ ಮಾಡುತ್ತಿದೆ. ಹಾಗಾಗಿ ಬಜೆಟ್‌ನಲ್ಲಿ ಇದಕ್ಕೆ ವಿಶೇಷ ನೆರವು ಘೋಷಿಸಲಾಗಿದೆ ಎಂದರು.

ತಾಯಿ ಕರುಳನ್ನು ತೋರಿದ ಪೋಲಿಸ್ ಅಧಿಕಾರಿ ಕೆಂಪಯ್ಯ ಸಮಾಜದಲ್ಲಿ ಶೋಷಿತ ಹೆಣ್ಣು ಮಕ್ಕಳಿಗೆ ದಾರಿ ತೋರಲು ಡಾ: ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರಲ್ಲಿ ತಿಳಿಸಿದರು. ಶೋಷಿತ ವರ್ಗದ ಹೆಣ್ಣುಮಕ್ಕಳಿಗೆ ಆಶ್ರಯ, ಬದುಕು ನೀಡಬೇಕು ಎಂದು ಆಶ್ರಯದಾತ ಸಂಸ್ಥೆಯಾಗಿ ಶಕ್ತಿಧಾಮವನ್ನು ಡಾ: ರಾಜ್ ಕುಮಾರ್ ಅವರ ಕುಟುಂಬದವರು ಬೆಳೆಸಿದ್ದಾರೆ.

ಸರ್ಕಾರ ಮತ್ತು ಸಮಾಜ ಮಾಡುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಪುನೀತ್ ರಾಜ್ ಕುಮಾರ್ ಅವರಿಗೂ ತಾಯಿ ಕರುಳಿತ್ತು .ಅವರು ಇದ್ದಲ್ಲಿಂದಲೇ ಸಂಸ್ಥೆಗೆ ಶಕ್ತಿ ತುಂಬುತ್ತಿದ್ದಾರೆ. ಸಮಾಜದಲ್ಲಿ ಶೋಷಿತ, ಪೀಡಿತ ದುರ್ಬಲ ವರ್ಗದವರಿಗೆ ಸಮಾಜ ಸರ್ಕಾರ ಕೈ ಹಿಡಿದು ಎತ್ತಿ ನಡೆಸಬೇಕು. ಮಾತುಗಳಲ್ಲಿ ಸಾಮಾಜಿಕ ನ್ಯಾಯ ಆಗುವುದಿಲ್ಲ. ಅವಕಾಶಗಳು ಸಿಕ್ಕಾಗ ಅವರ ಪರವಾಗಿ ಕೆಲಸ ಮಾಡಬೇಕು. ಸಮಾಜದ ನೋವುಗಳಿಗೆ ಚಿಕಿತ್ಸೆ ಕೊಡುವ ಕೆಲಸವನ್ನು ಎಲ್ಲರೂ ಮಾಡಬೇಕು. ಈ ಬಗ್ಗೆ ಎಲ್ಲರೂ ಚಿಂತನೆ ಮಾಡಿ ಎಂದರು.

ಅನ್ನ ದಾಸೋಹ ಯೋಜನೆಯಡಿ ಬಿಸಿಯೂಟ ತಯಾರಕರಿಗೆ ಸಿಹಿ ಸುದ್ದಿ

0

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2022-23ನೇ ಸಾಲಿನ ಅಯವ್ಯಯ ಮಂಡನೆಯ ಸಂದರ್ಭದಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವಂತ ಬಿಸಿಯೂಟ ತಯಾರಕರು, ಸಹಾಯಕರಿಗೆ ಗೌರವ ಧನ ಹೆಚ್ಚಿಸೋದಾಗಿ ಘೋಷಣೆ ಮಾಡಿದ್ದರು.

ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದೆ. 2022-23ನೇ ಸಾಲಿನ ಆಯವ್ಯಯ ಘೋಷಿತ ಕಂಡಿಕೆ-100ರ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು, ಸಹಾಯಕ ಅಡುಗೆಯವರಿಗೆ ನೀಡಲಾಗುವ ಮಾಸಿಕ ಗೌರವ ಸಂಭಾವನೆಯನ್ನು 2022-23ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ತಲಾ ರೂ.1000 ಹೆಚ್ಚಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಖ್ಯ ಅಡುಗೆಯವರಿಗೆ ಮಾಸಿಕ ರೂ.3,700 ಹಾಗೂ ಸಹಾಯಕ ಅಡುಗೆಯವರಿಗೆ ಮಾಸಿಕ ರೂ.3,600 ಗೌರವ ಸಂಭಾವನೆಯನ್ನು ಪಾವತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಅನುಮತಿ ನೀಡಿದೆ.

ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರ ಮಾಸಿಕ ಸಂಭಾವನೆಯನ್ನು ನೇರ ಸೌಲಭ್ಯ ವರ್ಗಾವಣೆ ವೇದಿಕೆ ಮೂಲಕ ಪಾವತಿಸುವಂತೆ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಅಮಾನತುಗೊಂಡ ರಷ್ಯಾ

0

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತು ಮಾಡಿ ವಿಶ್ವ ಸಂಸ್ಥೆಯ ಮಹಾ ಸಭೆಯು ಆದೇಶ ಹೊರಡಿಸಿದೆ.

ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತು ಮಾಡುವ ನಿರ್ಣಯವನ್ನು ಮಹಾ ಸಭೆಯಲ್ಲಿ ಮತಕ್ಕೆ ಹಾಕಲಾಗಿತ್ತು.

ಅಮಾನತು ಮಾಡಬಹುದು ಎಂಬ ನಿರ್ಣಯಕ್ಕೆ ಹೆಚ್ಚಿನ ಮತಗಳು ಬಂದ ಕಾರಣ, ಮಹಾ ಸಭೆಯು ಈ ಕ್ರಮ ತೆಗೆದುಕೊಂಡಿದೆ.

ಉಕ್ರೇನ್‌ನ ಬುಕಾ ನಗರದಿಂದ ವಾಪಸ್ಸಾಗುವಾಗ ರಷ್ಯಾ ಸೇನೆಯು ನೂರಾರು ನಾಗರಿಕರನ್ನು ಕೊಂದು ಹಾಕಿದೆ ಎಂದು ಉಕ್ರೇನ್‌ ಆರೋಪಿಸಿತ್ತು.

ಉಕ್ರೇನ್‌ನಲ್ಲಿ ರಷ್ಯಾ ಎಸಗಿರಬಹುದಾದ ಯುದ್ಧಾಪರಾಧಗಳ ಕಾರಣ ಮಾನವ ಹಕ್ಕುಗಳ ಮಂಡಳಿಯಿಂದ ಅದನ್ನು ಅಮಾನತು ಮಾಡುವ ನಿರ್ಣಯವನ್ನು ಮಹಾ ಸಭೆ ಮಂಡಿಸಿತ್ತು.
ನಿರ್ಣಯವು ಅಂಗೀಕಾರವಾಗಲು ಮತ ಹಾಕಿದ ಸದಸ್ಯರ ಒಟ್ಟು
ಸಂಖ್ಯೆಯ ಮೂರನೇ ಎರಡರಷ್ಟು ಮತಗಳು ಬೇಕಿತ್ತು. 58 ದೇಶಗಳು ಮತದಾನದಿಂದ ದೂರ ಉಳಿದ ಕಾರಣ, ನಿರ್ಣಯದಲ್ಲಿದ್ದ ಸದಸ್ಯ ದೇಶಗಳ ಸಂಖ್ಯೆ 117ಕ್ಕೆ ಕುಸಿದಿತ್ತು. 93 ದೇಶಗಳು ಪರವಾಗಿ ಮತಹಾಕಿದ ಕಾರಣ, ನಿರ್ಣಯವು ಅಂಗೀಕಾರವಾಯಿತು.

193 ಸದಸ್ಯ ರಾಷ್ಟ್ರಗಳ ಮಹಾ ಸಭೆಯಲ್ಲಿ ಈ ನಿರ್ಣಯವನ್ನು ಗುರುವಾರ ಮತಕ್ಕೆ ಹಾಕಲಾಗಿತ್ತು. ನಿರ್ಣಯದ ಪರವಾಗಿ 93 ದೇಶಗಳು ಮತ ಹಾಕಿದವು. ನಿರ್ಣಯದ ವಿರುದ್ಧವಾಗಿ 24 ದೇಶಗಳು ಮತ ಹಾಕಿದವು. ಭಾರತವೂ ಸೇರಿ 58 ದೇಶ
ಗಳು ಮತದಾನದಿಂದ ದೂರ ಉಳಿದವು.

58 ದೇಶಗಳು ಮತದಾನದಿಂದ ದೂರ ಉಳಿದುದ್ದರ ಬಗ್ಗೆ ರಷ್ಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಮತದಾನದಿಂದ ದೂರ ಉಳಿದಿದ್ದನ್ನು ನಾವು, ನಿರ್ಣಯದ ಪರವಾದ ಮತ ಎಂದೇ ಪರಿಗಣಿಸುತ್ತೇವೆ. ಇದು ಆಯಾ ದೇಶಗಳೊಂದಿಗೆ, ನಮ್ಮ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ರಷ್ಯಾ ಎಚ್ಚರಿಕೆ ನೀಡಿದೆ.

ನಾಗರಿಕರ ಹತ್ಯೆಯ ಬಗ್ಗೆ ಭಾರತವು ಆಘಾತ ವ್ಯಕ್ತಪಡಿಸಿತ್ತು. ಬುಕಾದಲ್ಲಿನ ಹತ್ಯೆಗಳ ಕುರಿತು ಸ್ವತಂತ್ರ ತನಿಖೆ ನಡೆಯಬೇಕು ಎಂಬ ಬೇಡಿಕೆಗೆ ಬೆಂಬಲವಿದೆ ಎಂದು ಭಾರತ ಹೇಳಿತ್ತು.