Thursday, February 26, 2026
Thursday, February 26, 2026
Home Blog Page 1616

ಕಾಂಗ್ರೆಸ್ ಪಕ್ಷಕ್ಕೆ ಕ್ಲಾಸ್ ತೆಗೆದುಕೊಂಡ ಗೃಹ ಸಚಿವ ಜ್ಞಾನೇಂದ್ರ

0

ನಾನು ಡಮ್ಮಿ ಗೃಹಸಚಿವ ಅಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ. ಯಾವ ಪ್ರಕರಣದಲ್ಲೂ ಗೃಹ ಇಲಾಖೆ ವಿಳಂಬ ನೀತಿ ಅನುಸರಿಸಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜಕಾರಣದಲ್ಲಿ ಟೀಕೆ ಮಾಡಲೂ ಒಂದು ಇತಿ-ಮಿತಿ ಇರಬೇಕು. ಎದುರಾಳಿ ಕೂಡಾ ಹೌದು ಎನ್ನುವ ರೀತಿಯಲ್ಲಿ ಟೀಕೆ ಅಥವಾ ಆರೋಪ ಮಾಡಬೇಕು. ಎಲ್ಲ ದುರ್ಘ‌ಟನೆಗಳಿಗೂ ತತ್‌ಕ್ಷಣ ಕ್ರಮವಾಗಿದೆ ಎಂದರು.

ಹಿಂದೆ ನನ್ನದೇ ಕ್ಷೇತ್ರದವರು ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಪ್ರಶ್ನೆ ಪತ್ರಿಕೆ ಹಗರಣ ನಡೆಯಲಿಲ್ಲವೇ? ಎಷ್ಟು ಬಾರಿ ಪರೀಕ್ಷೆ ಮುಂದೂಡಲಾಗಿತ್ತು. ಅದೇ ರೀತಿ ಕಾಂಗ್ರೆಸ್‌ ಸರಕಾರ ಇದ್ದಾಗ ರಾಜ್‌ಕುಮಾರ್‌ ನಿಧನವಾಗಿತ್ತು. ಅವರ ಅಂತ್ಯಸಂಸ್ಕಾರ ಸಂದರ್ಭ 6 ಜನ ಮೃತಪಟ್ಟಿದ್ದರು. ಆದರೆ ಪುನೀತ್‌ ಅಂತ್ಯಸಂಸ್ಕಾರ ವೇಳೆ 25 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಜಮಾಯಿಸಿದ್ದರೂ ಯಾವುದೇ ಗಲಾಟೆ ನಡೆಯದಂತೆ ನಮ್ಮ ಸರಕಾರ ಸಮರ್ಥವಾಗಿ ನಿಭಾಯಿಸಿತ್ತು. ತಮ್ಮಲ್ಲಿ ತಪ್ಪಿಟ್ಟುಕೊಂಡು ಕಾಂಗ್ರೆಸ್‌ನವರು ಮತ್ತೂಬ್ಬರ ಮೇಲೆ ಗೂಬೆ ಕೂರಿಸುವಲ್ಲಿ ನಿರತರಾಗಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು .

ಕಾಂಗ್ರೆಸ್‌ ಸರಕಾರದಲ್ಲಿ ಗೃಹ ಸಚಿವರನ್ನು ಡಮ್ಮಿಯಾಗಿ ಇಟ್ಟುಕೊಳ್ಳಲಾಗಿತ್ತು.
ಆದರೆ, ಬಿಜೆಪಿ ಸರಕಾರದಲ್ಲಿ ಗೃಹ ಸಚಿವರನ್ನು ಡಮ್ಮಿಯಾಗಿ ನಡೆಸಿಕೊಳ್ಳುತ್ತಿಲ್ಲ. ಸರಕಾರದ ಭಾಗವಾಗಿ ಗೃಹ ಖಾತೆಯನ್ನು ಸ್ವತಂತ್ರವಾಗಿ ನಿಭಾಯಿಸುತ್ತಿದ್ದೇನೆ ಎಂದರು.

ರಷ್ಯ ನಿರ್ಬಂಧಕ್ಕೆ ಸಿಲುಕಿದೆ.ಇತರ ದೇಶಗಳಿಗೂ ಅದರ ಬಿಸಿ ತಟ್ಟಿದೆ.

0

ಯೂಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ ಎರಡು ತಿಂಗಳಾಗುತ್ತಿದೆ. ಫೆ.24ರಂದು ಈ ದಾಳಿ ಆರಂಭವಾದ ಬೆನ್ನಿಗೆ ರಷ್ಯಾದ ಮೇಲೆ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧಗಳನ್ನು ಹೇರಲಾರಂಭಿಸಿದವು. ರಷ್ಯಾದ ವಾಣಿಜ್ಯ, ವ್ಯಾಪಾರ ಚಟುವಟಿಕೆ ಮತ್ತು ಬ್ಯಾಂಕಿಂಗ್ ಮೇಲೆ ಇದರ ಕರಿಛಾಯೆ ಬಿದ್ದು, ಆದಾಯಕ್ಕೆ ಹೊಡೆತ ಬಿದ್ದಿದೆ.

ಯೂಕ್ರೇನ್ ಮೇಲೆ ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ದಾಳಿ ನಡೆಸಿದ್ದು, ಅದು ಈಡೇರದ ಹೊರತು ಯುದ್ಧ ನಿಲ್ಲಿಸುವುದಿಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿದೆ. ಈ ನಡುವೆ, ಪಾಶ್ಚಾತ್ಯ ರಾಷ್ಟ್ರಗಳು ಹೇರಿದ ನಿರ್ಬಂಧಗಳು ರಷ್ಯನ್ನರನ್ನು ಬಾಧಿಸಿದಂತೆಯೇ, ಇತರೆ ದೇಶಗಳ ಜನರನ್ನೂ ಬಾಧಿಸಿರುವುದು ವಾಸ್ತವ. ನಿರ್ಬಂಧಗಳ ಮೂಲಕ ರಷ್ಯಾವನ್ನು ಹಿಮ್ಮೆಟ್ಟಿಸಬಹುದು ಎಂಬ ಪಾಶ್ಚಾತ್ಯ ರಾಷ್ಟ್ರಗಳ ಚಿಂತನೆ ಫಲ ನೀಡುವಲ್ಲಿ ವಿಫಲವಾಗುತ್ತಿರುವುದು ಗೋಚರವಾಗಿದೆ.

ಸದ್ಯ ಜಗತ್ತಿನ ಅತಿಹೆಚ್ಚು ನಿರ್ಬಂಧಿತ ರಾಷ್ಟ್ರ ರಷ್ಯಾ ಆಗಿದ್ದು, 6,900ಕ್ಕೂ ಹೆಚ್ಚು ನಿರ್ಬಂಧಗಳನ್ನು ಎದುರಿಸುತ್ತಿದೆ. 40ಕ್ಕೂ ಹೆಚ್ಚು ದೇಶಗಳು ರಷ್ಯಾ ಮೇಲೆ ಮತ್ತು ಪ್ರಮುಖ ರಷ್ಯನ್ನರ ಮೇಲೆ ನಿರ್ಬಂಧ ಹೇರಿವೆ. ಇದು ರಷ್ಯಾದ ಆರ್ಥಿಕತೆ ಕುಸಿಯಲು ಕಾರಣವಾಗದಿದ್ದರೂ, ಒಂದಷ್ಟು ಹೊಡೆತ ನೀಡುವುದು ಖಚಿತ. ಜಗತ್ತಿನಾದ್ಯಂತ ಸಹ ಇದರ ವ್ಯತಿರಿಕ್ತ ಪರಿಣಾಮ ಆಗತೊಡಗಿದೆ.

ಯುದ್ಧ ಆರಂಭವಾಗುತ್ತಿದ್ದಂತೆ ಕಚ್ಚಾ ತೈಲ ದರ ಏರಿಕೆ ಕಂಡರೆ, ರಷ್ಯಾ ಕರೆನ್ಸಿ ರೂಬಲ್ ಮೌಲ್ಯ ಕುಸಿಯುತ್ತ ಸಾಗಿದೆ. ಫೆ.23 ಮತ್ತು ಮಾರ್ಚ್ 15ರ ನಡುವೆ ರೂಬಲ್ ಭಾರಿ ಕುಸಿತ ಕಂಡಿದೆ. ಆದಾಗ್ಯೂ, ರಷ್ಯಾದ ಕೇಂದ್ರೀಯ ಬ್ಯಾಂಕ್ ಮಧ್ಯಪ್ರವೇಶ ಮಾಡಿ ಪಾಲಿಸಿ ದರವನ್ನು ಶೇಕಡ 20ಕ್ಕೆ ಏರಿಸಿದಾಗ ನಾಟಕೀಯವಾಗಿ ಕರೆನ್ಸಿ ಬೆಲೆಯೂ ಏರಿತ್ತು. ಏಪ್ರಿಲ್ 7ಕ್ಕೆ ಮತ್ತೆ ಯುದ್ಧಪೂರ್ವದ ಸ್ಥಿತಿಗೆ ತಲುಪಿದೆ.

ರಷ್ಯಾ ಇಂಧನ ಸಂಪದ್ಭರಿತ ರಾಷ್ಟ್ರವಾಗಿದ್ದು, ವಿವಿಧ ದೇಶಗಳೊಂದಿಗೆ ರಷ್ಯಾದ ದ್ವಿಪಕ್ಷೀಯ ಸಂಬಂಧಗಳಿಗೆ ಇಂಧನವೇ ಮೂಲಾಧಾರವಾಗಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ರಷ್ಯಾಕ್ಕೆ ದೊಡ್ಡ ಪಾಲಿದೆ. ಅಲ್ಲಿ ಉತ್ಪಾದನೆ ಯಾಗುವ ಅರ್ಧಕ್ಕಿಂತ ಹೆಚ್ಚು ಇಂಧನ ಯುರೋಪ್​ಗೆ ರಫ್ತಾಗುತ್ತದೆ. 2030ಕ್ಕಿಂತ ಮುಂಚಿತವಾಗಿ ರಷ್ಯಾದಿಂದ ಇಂಧನ ಆಮದು ಮಾಡುವುದನ್ನು ನಿಲ್ಲಿಸಲಾಗದು. ಇದಕ್ಕೆ ಹೋಲಿಸಿದರೆ ಭಾರತ ಆಮದು ಮಾಡಿಕೊಳ್ಳುವ ಇಂಧನ ಪ್ರಮಾಣ ತುಂಬಾ ಕಡಿಮೆ. ಯುರೋಪ್ ಒಕ್ಕೂಟದಲ್ಲಿ ಈಗ ರಷ್ಯಾದಿಂದ ಇಂಧನ ಆಮದು ಕಡಿಮೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಯುದ್ಧದ ಪರಿಣಾಮ, ಭಾರತದಲ್ಲಿ ಮಾರ್ಚ್ ತಿಂಗಳ ಹಣದುಬ್ಬರ ಪ್ರಮಾಣ 17 ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಚಿಲ್ಲರೆ ಹಣದುಬ್ಬರ ಶೇಕಡ 6.95 ಮತ್ತು ಸಗಟು ಹಣದುಬ್ಬರ ಶೇಕಡ 14.55 ಆಗಿದೆ. ಭಾರತದ ವಿದೇಶಿ ಮೀಸಲು ನಿಧಿ ಕೂಡ ಏ.8ರ ದತ್ತಾಂಶ ಪ್ರಕಾರ, 11.173 ಶತಕೋಟಿ ಡಾಲರ್ ಕುಸಿದು 606.475 ಶತಕೋಟಿ ಡಾಲರ್​ಗೆ ತಲುಪಿದೆ. ವಾರದ ಅವಧಿಯಲ್ಲಿ ಅತ್ಯಧಿಕ ಕುಸಿತ ಮಾರ್ಚ್ 11ಕ್ಕೆ ಕೊನೆಗೊಂಡ ವಾರದಲ್ಲಿ 9.6 ಶತಕೋಟಿ ಡಾಲರ್ ಕುಸಿತ ದಾಖಲಾಗಿತ್ತು.

ಜಗತ್ತಿನಾದ್ಯಂತ ಜೀವನ ವೆಚ್ಚ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಣದುಬ್ಬರ ಏರಿಕೆ ಇದಕ್ಕೆ ಕಾರಣ. ಕೆಪಿಎಂಜಿಯ ಏಪ್ರಿಲ್ 1ರ ವರದಿ ಪ್ರಕಾರ, ಜಾಗತಿಕ ಹಣದುಬ್ಬರ ಪ್ರಮಾಣ ಈ ವರ್ಷ 4.5%ನಿಂದ 7.7% ತನಕ ಏರಿದೆ. 2023ರಲ್ಲಿ ಶೇಕಡ 2.9ರಿಂದ ಶೇಕಡ 4.3ರ ತನಕ ಏರಲಿದೆ. ಹಣದುಬ್ಬರ ಕೆಲವು ರಾಷ್ಟ್ರಗಳಲ್ಲಿ ಕಡಿಮೆ ಎಂದೆನಿಸಿದರೂ, ಅಲ್ಲಿ ದಶಕಗಳಲ್ಲೇ ಹೆಚ್ಚಿನ ಹಣದುಬ್ಬರ ದಾಖಲಾಗಿದೆ ಎಂದು ತಿಳಿದುಬಂದಿದೆ.

ಸಿಡಿಲು ಮಳೆಗೆ ಸಿಲುಕಿದರೆ… ಮಂಜಾಗ್ರತಾ ಕ್ರಮಗಳು

0

ಮಳೆ ಬರುವ ಮುನ್ನ ಮಿಂಚು, ಗುಡುಗು ಬರುವುದು ಸಾಮಾನ್ಯ. ಮೊದಲು ಬೆಳಕು ಬಂದು ಅಂತರ ಜೋರಾಗಿ ಶಬ್ದ ಬರುತ್ತೆ. ಇದನ್ನು ಕೇಳೋಕೆ ಭಯವಾಗುವ ಜೊತೆಗೆ, ಸಿಡಿಲಿನಿಂದ ಅನೇಕರ ಪ್ರಾಣ ಪಕ್ಷಿ ಕೂಡ ಹಾರಿಹೋಗುವ ಅದೆಷ್ಟೋ ಘಟನೆ ಗಳನ್ನು ನಾವು ಕೇಳಿರುತ್ತೇವೆ. ಸಿಡಿಲು ಬಂದಾಗ ಏನು ಮಾಡಬೇಕು? ಎಂಬುದು ನಮಗೆ ತಿಳಿದಿದ್ದರೆ, ಇಂತಹ ಅಪಾಯಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಹಾಗಾದ್ರೆ ಆ ಉಪಾಯಗಳಾವುವು ತಿಳಿದುಕೊಳ್ಳೋಣ.

ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ. ಅದರಿಂದಾಗುವ ಸಾವು ನೋವು ಗಳನ್ನು ತಪ್ಪಿಸಬಹುದು.

  • ಗುಡುಗು-ಮಿಂಚು ಬರುತ್ತಿದೆ ಎಂದು ತಿಳಿದ ಕೂಡಲೇ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ. ಆದರೆ ನಿಲ್ಲ ಬೇಡಿ.

-ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ. ಇದು ಮಿಂಚಿನಿಂದ ಮೆದುಳಿಗೂ,ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.

ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು.(ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.)

  • ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿರಿ
  • ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ, ( ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಆರಿಸಿಕೊಳ್ಳುತ್ತದೆ.)

-ಕೆರೆಯಲ್ಲಿ ಈಜುವುದು,ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ .

  • ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.

-ತಂತಿಬೇಲಿ,ಭಟ್ಟ ಒಣಹಾಕುವ ತಂತಿ, ಇವುಗಳಿಂದ ದೊರವಿರಿ

  • ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸ ಬೇಡ.
  • ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.
  • ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಸಹಸವೂ ಬೇಡ.
  • ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.
  • ಕಂಪ್ಯೂಟರ್ ಗಳಿಂದ ದೂರ ಇರಿ
  • ಮನೆಯ ಕಾoಕ್ರೇಟ್ ಗೋಡೆಗಳನ್ನು ಸ್ಪೆರ್ಶಿಸದೆ.ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ. ಈ ಎಲ್ಲಾ ಸುಲಭ ಉಪಾಯದಿಂದ ನಾವು ಸಿಡಿಲಿನಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಸಿಡಿಲು ಬಂದಾಗ ನೀವು ಜಾಗೃತರಾಗಿ. ನಿಮ್ಮವರನ್ನು ಜಾಗೃತಗೊಳಿಸಿ.

ಬಯಲಲ್ಲಿ ಮಾತ್ರ ಭೇದ ಜೈಲಲ್ಲಿ ನಾವೆಲ್ಲ ಒಂದೇ

0

ದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಮಧ್ಯೆ ದ್ವೇಷದ ಭಾವನೆ ಬಿತ್ತಲಾಗುತ್ತಿರುವುದು ಈಗ ಎಲ್ಲೆಡೆ ಕಂಡು ಬರುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಈ ಘಟನೆಯು ಮಾನವೀಯತೆಯ ಮೇಲಿನ ನಮ್ಮ ನಂಬಿಕೆಯನ್ನು ಮತ್ತೊಮ್ಮೆ ಸ್ಥಾಪಿಸುತ್ತಿದೆ.

ಉತ್ತರ ಪ್ರದೇಶದ ಈ ಜೈಲಿನಲ್ಲಿ ಖೈದಿಗಳು ಕೋಮು ಸೌಹಾರ್ದತೆ ಮೆರೆದಿದ್ದಾರೆ.
ಬಾರಾಬಂಕಿ ಜೈಲಿನಲ್ಲಿ ರಂಜಾನ್ ಸಂದರ್ಭದಲ್ಲಿ ಹಿಂದೂಗಳು ಮತ್ತು ಮುಸ್ಲಿಂ ಖೈದಿಗಳು ಒಟ್ಟಾಗಿ ಉಪವಾಸ ಮುರಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಜೈಲು ಆಡಳಿತ ಸಿಬ್ಬಂದಿಯೇ ಇಫ್ತಾರ್ ಕೂಟ ಆಯೋಜಿಸಿದ್ದರು. ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿವಿಧ ಧರ್ಮಗಳ ನಡುವಿನ ಈ ಸಾಮರಸ್ಯವನ್ನು ಕಂಡು ನೆಟ್ಟಿಗರು ಕೊಂಡಾಡಿದ್ದಾರೆ. ಇದು ಏಕತೆಯ ಶಕ್ತಿ ಅಂತೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕಾಲದಲ್ಲಿ ಹೊರಗಿಗಿಂತ ಜೈಲಿನಲ್ಲಿ ಹೆಚ್ಚು ಮಾನವೀಯತೆ ಉಳಿದಿದೆ ಎಂದು ತೋರುತ್ತದೆ ಅಂತೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಮೌಖಿಕ ಆದೇಶದ ಮೇಲೆ ಕಾಮಗಾರಿ ಮಾಡುವಂತಿಲ್ಲ-ಬೊಮ್ಮಾಯಿ

0

50 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತದ ಟೆಂಡರ್ ಗಳ ಪರಿಶೀಲನೆಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು, ಆರ್ಥಿಕ ತಜ್ಞರು ಮತ್ತು ಸಂಬಂಧಪಟ್ಟ ಇಲಾಖೆಯ ತಾಂತ್ರಿಕ ತಜ್ಞರನ್ನು ಒಳಗೊಂಡಿರುವ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಮಟ್ಟದ ಸಮಿತಿಯನ್ನು ಕೆಟಿಟಿಪಿ ಕಾಯ್ದೆಯನ್ವಯ ರಚಿಸಲಾಗಿದೆ . ಸಮಿತಿಯು ಕಾಮಗಾರಿಯ ಅಂದಾಜು ಮೊತ್ತ, ಕೆಟಿಟಿಪಿ ಕಾಯ್ದೆಯನ್ವಯ ಟೆಂಡರ್ ನಿಯಮಗಳು ಇವುಗಳನ್ನು ಪರಿಶೀಲಿಸಿದ ನಂತರವೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಬೇಕು. ಈ ಸಮಿತಿಯು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಸರ್ಕಾರದ ಎಲ್ಲ ಇಲಾಖೆಗಳ 50 ಕೋಟಿ ರೂ. ಮೀರಿದ ಟೆಂಡರ್ ಗಳಿಗೂ ಈ ನಿಯಮ ಜಾರಿಯಾಗುತ್ತದೆ. ಟೆಂಡರ್ ಗಳು ಹೆಚ್ಚಾದ ಸಂದರ್ಭದಲ್ಲಿ ಶೀಘ್ರ ಟೆಂಡರ್ ಪರಿಶೀಲನೆಗೆ ಅನುಕೂಲವಾಗುವಂತೆ ಪರ್ಯಾಯ ಸಮಿತಿಯೊಂದನ್ನೂ ರಚಿಸಲಾಗುವುದು ಎಂದರು.

ಮೌಖಿಕ ಆದೇಶದ ಮೇಲೆ ಕಾಮಗಾರಿಗಳು ಮಾಡುವಂತಿಲ್ಲ:
ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳು ಮೌಖಿಕ ಆದೇಶಗಳ ಮೇಲೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೂ ಈ ರೀತಿ ನಡೆದರೆ ಸಂಬಂಧಪಟ್ಟ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್, ಎಇಇ,ಶಾಖಾಧಿಕಾರಿಗಳು ಜವಾಬ್ದಾರರಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಪಿಡಿಓ ಮತ್ತು ಇಓಗಳು ಜವಾಬ್ದಾರರಾಗುತ್ತಾರೆ ಎಂದು ಸ್ಪಷ್ಟವಾದ ಲಿಖಿತ ಸೂಚನೆ ನೀಡಲಾಗುವುದು ಎಂದರು.

ಸಂತೋಷ್ ಪಾಟೀಲ್ ಪ್ರಕರಣ-ತನಿಖೆ ನಡೆಯುತ್ತಿದೆ.
ಟೆಂಡರ್ ಪ್ರಕ್ರಿಯೆ ಹಾಗೂ ಪರ್ಸೆಂಟೇಜ್ ರಹಿತ ವ್ಯವಸ್ಥೆಗೆ ಸರ್ಕಾರ ಕ್ರಮ ಕೈಗೊಂಡಿದೆಯೇ, ಸಂತೋಷ್ ಪಾಟೀಲ್ ಆತ್ಮಹತ್ಯೆ ಒಂದು ಪಾಠವಾಗಿ ಇವೆಲ್ಲಕ್ಕೆ ಒಂದು ತಾತ್ವಿಕ ಅಂತ್ಯ ಕಾಣಬೇಕು ಎಂಬುದಕ್ಕೆ ಪ್ರತಿಕ್ರಿಯಿಸಿ ಪರ್ಸಂಟೇಜ್ ಅನ್ನುವಂಥದ್ದು ವ್ಯಾಪಕವಾಗಿ ಮಾತನಾಡುವಂತಹ ವಿಚಾರ. ಇದನ್ನು ನಿಯಂತ್ರಿಸುವುದು ಬಹಳ ಮುಖ್ಯ. ಸಂತೋಷ್ ಪಾಟೀಲ್ ಪ್ರಕರಣ ಪ್ರತ್ಯೇಕವಾದುದು. ಇದರಲ್ಲಿ ಕಾರ್ಯಾದೇಶವಿಲ್ಲದೇ ಕೆಲಸ ಮಾಡಿ ಬಿಲ್ ಕ್ಲೇಮು ಮಾಡಿರುವುದು ಆದ್ದರಿಂದ ಈ ಬಗ್ಗೆ ಆರ್ ಡಿ ಪಿಆರ್ ನಿಂದ ಹಿಡಿದು ಪೊಲೀಸ್ ಇಲಾಖೆವರೆಗೆ ತನಿಖೆ ನಡೆಯುತ್ತಿದೆ. ಇವೆರಡೂ ವಿಷಯಗಳಿಗೆ ಹೋಲಿಕೆ ಇಲ್ಲ ಎಂದರು.

ಅಭಿವೃದ್ಧಿ ಕೆಲಸಗಳು ಕುಂಠಿತವಾಗಬಾರದು.
ಸಂತೋಷ್ ಪಾಟೀಲ್ ಅವರ 2 ರಿಂದ 3 ಕೋಟಿ ರೂ.ಗಳ ಕಾಮಗಾರಿ ಪ್ರಕರಣವಾಗಿದೆ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ 50 ಕೋಟಿ ರೂ. ಕ್ಕಿಂತ ಕಡಿಮೆ ಇರುವ ಟೆಂಡರ್ ಗಳೂ ಪರಿಶೀಲನೆಗೆ ಒಳಪಡಲು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಬಹುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ಉನ್ನತ ಮಟ್ಟದ ಸಮಿತಿ ಕಾರ್ಯನಿರ್ವಹಣೆಯನ್ನು ಗಮನಿಸಿ ನಂತರ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಸಮಿತಿಯನ್ನು ರಚಿಸಲಾಗುವುದು. ಅಭಿವೃದ್ಧಿ ಕೆಲಸಗಳ ವೇಗವೂ ಕುಂಠಿತವಾಗಬಾರದು ಎಂದರು.

ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಭೂಕುಸಿತದ ಸಮಸ್ಯೆಯ ಇರುವ ಬಗ್ಗೆ ಪ್ರಶ್ನಿಸಿದಾಗ, ಪಶ್ಚಿಮಘಟ್ಟ ದುರ್ಬಲವಾದ ವಲಯವಾಗಿದೆ. ಜಿಯೋ ಫಿಸಿಕಲ್ ಸರ್ವೆ ಮಾಡಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಭೂಕುಸಿತ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಿದ್ದಾರೆ. ಈ ವರದಿಯನ್ನು ಪರಿಶೀಲಿಸಿದ ನಂತರ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ವಿಶೇಷವಾಗಿ ತಳಮಟ್ಟದಲ್ಲಿ ಇರುವ ಮನೆಗಳಿರುವ ಪ್ರದೇಶಗಳಲ್ಲಿ ವಿಶೇಷ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ದುರ್ಬಲ ವಲಯವಿರುವ ನಿಸರ್ಗವನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಸೂಕ್ತ ಪ್ಲಾನಿಂಗ್ ನ ಅವಶ್ಯಕತೆ ಇದೆ ಎಂದರು.

ಗ್ರಾಮೀಣ ಭಾಗದಲ್ಲಿ ವಿದ್ಯುತ್ಛಕ್ತಿಯ ಸಮಸ್ಯೆ ಹೆಚ್ಚಿದೆ ಎಂಬುದಕ್ಕೆ ಉತ್ತರಿಸಿ, ಕರ್ನಾಟಕದಲ್ಲಿ ವಿದ್ಯುತ್ ಹೇರಳವಾಗಿದೆ. ಆದರೆ ವಿತರಣೆಯ ಸಮಸ್ಯೆಯಿದೆ. ಬಹಳ ವರ್ಷಗಳಿಂದ ಸರ್ಕಾರಗಳು ವಿತರಣಾ ವ್ಯವಸ್ಥೆ , ಟ್ರಾನ್ಸ್ಮಿಷನ್ ಬಗ್ಗೆ ಗಮನಹರಿಸಿಲ್ಲ. ಆದ್ದರಿಂದ 100 ವಿದ್ಯುತ್ ಸ್ಟೇಷನ್ ಗಳ ಸ್ಥಾಪನೆಗೆ ಮಂಜೂರಾತಿ ನೀಡಿದ್ದು ಕಾಮಗಾರಿಗಳು ಪ್ರಾರಂಭವಾಗಲಿವೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ವಿದ್ಯುತ್ ವಿತರಣೆಯಲ್ಲಿ ಸಮಸ್ಯೆ ಇದೆ.ಇಂತಹ ಪ್ರದೇಶದಲ್ಲಿ ಸ್ಟೇಷನ್ ಮತ್ತು ಟ್ರಾನ್ಸ್ ಮಿಷನ್ ವ್ಯವಸ್ಥೆಗೆ ಹೆಚ್ಚಿನ ಅನುದಾನವನ್ನು ನೀಡಿ ಕಾಮಗಾರಿಗಳನ್ನು ಪೂರೈಸಲಾಗುವುದು. ಸಣ್ಣಪುಟ್ಟ ಸಮಸ್ಯೆಗಳಿಂದ ಕೆಲವೆಡೆ ಸ್ಟೇಷನ್ ಸ್ಥಾಪನೆ ವಿಳಂಬವಾಗುತ್ತಿದ್ದು, ಭೂ ಸ್ವಾಧೀನ ಸೇರಿದಂತೆ ಇತರೆ ಸಮಸ್ಯೆಗಳನ್ನು ತಕ್ಷಣ ನಿವಾರಿಸಿ, ಕಾಮಗಾರಿಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರದ ಯೋಜನೆಯಂತೆ ಯಾವೆಲ್ಲಾ ಗ್ರಿಡ್ ಗಳಲ್ಲಿ ಸೌರಶಕ್ತಿಯ ಬಳಕೆ ಮಾಡಬಹುದು ಅಂತಹ ಗ್ರಿಡ್ ಗಳಲ್ಲಿ ಸೌರಶಕ್ತಿಯ ಸರಬರಾಜಿಗೆ ಅವಕಾಶ ಕಲ್ಪಿಸಿದ್ದಾರೆ. ಸೋಲಾರ್ ಪಂಪ್ ಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲು ವಿಶೇಷ ರಿಯಾಯಿತಿಯನ್ನು ನೀಡಿದ್ದಾರೆ. ಈ ಸೋಲಾರ್ ವ್ಯವಸ್ಥೆಗೆ ಸಹಾಯಧನ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುವುದು. ಇವೆಲ್ಲಾ ಕ್ರಮಗಳಿಂದ ವಿದ್ಯುಚ್ಛಕ್ತಿ ಸಬರಾಜಿನ ಸಮಸ್ಯೆಯನ್ನು ನಿವಾರಿಸಲಾಗುವುದು ಎಂದರು.

ಜಾತಿಗಣತಿ ವರದಿ ಇನ್ನೂ ಬಹಿರಂಗವಾಗದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವರದಿ ಪೂರ್ಣ ಪ್ರಮಾಣದಲ್ಲಿ ಮಂಡನೆಯಾಗಿಲ್ಲ. ಈ ಬಗ್ಗೆ ಹಿಂದುಳಿದ ವರ್ಗದ ಆಯೋಗಕ್ಕೆ ವರದಿ ಮಂಡನೆಗೆ ಸೂಚನೆ ನೀಡಲಾಗಿದೆ. ದೀರ್ಘಕಾಲೀನ ಪರಿಣಾಮಗಳಿರುವಂತಹ ಇಂತಹ ವಿಷಯಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು

ಗುಜರಾತ್ ದಾಹೋದ್ ನಲ್ಲಿ ಪ್ರಧಾನಿ ಮೋದಿ ಪ್ರವಾಸ

0

ಗುಜರಾತ್ ನ ದಾಹೋದ್ ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, 22 ಸಾವಿರ ಕೋಟಿ ರೂಪಾಯಿ ಮೊತ್ತದ ನಾನಾ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದರು.

ದಾಹೋದ್ ನ ರೈಲ್ವೆ ಉತ್ಪಾದನಾ ಘಟಕದಲ್ಲಿ 9 ಸಾವಿರ ಎಚ್.ಪಿ ಎಲೆಕ್ಟ್ರಿಕ್ ಲೋಕೊಮೋಟಿವ್ಸ್ ಉತ್ಪಾದನಾ ಯೋಜನೆ ಇವುಗಳಲ್ಲಿ ಸೇರಿವೆ. 1926 ರಲ್ಲಿ ಸ್ಥಾಪನೆಯಾಗಿರುವ ದಾಹೋದ್ ರೈಲ್ವೆ ಕಾರ್ಯಾಗಾರವನ್ನು ಸ್ಟೀಮ್ ಲೋಕೊಮೋಟಿವ್ಸ್ನಿಂದ ಎಲೆಕ್ಟ್ರಿಕ್ ಲೋಕೊಮೋಟಿವ್ಸ್ಗೆ ಪರಿವರ್ತಿಸುವ ಉತ್ಪಾದನಾ ಯೋಜನೆಯು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣವಾಗಲಿದೆ. ಈ ಯೋಜನೆಯು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ನೀಡಲಿದೆ ಎಂದು ತಿಳಿದುಬಂದಿದೆ.

335 ಕೋಟಿ ರೂಪಾಯಿ ವೆಚ್ಚದ ದಾಹೋದ್ ಸ್ಮಾರ್ಟ್ಸಿಟಿ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು. ದಾಹೋದ್ ಮತ್ತು ಪಂಚಮಹಲ್ ಜಿಲ್ಲೆಗಳ 10 ಸಾವಿರ ಬುಡಕಟ್ಟು ಜನಾಂಗಗಳಿಗೆ 120ಕೋಟಿ ರೂಪಾಯಿ ಮೊತ್ತದ ಪ್ರಯೋಜನಗಳನ್ನು ಒದಗಿಸುವ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು.

ಮೂರು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದಾಹೋದ್ ಜಿಲ್ಲೆಯಲ್ಲಿ ಮೊದಲ ದಿನದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಾಹೋದ್ ನಗರವು ಮೇಕ್ ಇನ್ ಇಂಡಿಯಾದ ಬಹುದೊಡ್ಡ ಕೇಂದ್ರವಾಗಿ ಬದಲಾಗುತ್ತಿದೆ. 20ಸಾವಿರ ಕೋಟಿ ರೂಪಾಯಿ ವೆಚ್ಚದ ಎಲೆಕ್ಟ್ರಿಕ್ ಲೋಕೊಮೋಟಿವ್ಸ್ ಉತ್ಪಾದನಾ ಕೇಂದ್ರವು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ನಾಂದಿಯಾಡಲಿದೆ ಎಂದರು.

ನರ್ಮದಾ ಜಲಾನಯನ ಭಾಗದಿಂದ ಕುಡಿಯುವ ನೀರು ಪೂರೈಸುವ 1ಸಾವಿರದ 400 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ದಾಹೋದ್ ಜಿಲ್ಲೆಯ 280 ಹಳ್ಳಿಗಳು ಮತ್ತು ದೇವಗಢ ನಗರಕ್ಕೆ ಈ ಯೋಜನೆಯು ನೀರು ಪೂರೈಸಲಿದೆ ಎನ್ನಲಾಗುತ್ತಿದೆ.

ಆದಿ ಜಾತಿ ಮಹಾಸಮ್ಮೇಳನ ಉದ್ದೇಶಿಸಿ ಮಾತನಾಡಿ, ಹೊರ ರಾಷ್ಟ್ರಗಳಲ್ಲಿ ಎಲೆಕ್ಟ್ರಿಕ್ ಲೋಕೊಮೋಟಿವ್ಸ್ ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ ಹಾಗಾಗಿ, ದಾಹೋದ್ ನ ಲೋಕೊಮೋಟಿವ್ಸ್ ಉತ್ಪಾದನಾ ಕೇಂದ್ರವು ಈ ಬೇಡಿಕೆಗಳನ್ನು ಪೂರೈಸುವ ಪ್ರಮುಖ ಕೇಂದ್ರವಾಗಲಿದೆ ಎಂದರು.

ದಾಹೋದ್ ಜಿಲ್ಲೆಯ ಬುಡಕಟ್ಟು ಜನಾಂಗಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನೀರು ಪೂರೈಕೆ ಯೋಜನೆಗಳು ಸಹಾಯಕವಾಗಲಿದೆ. ಕೇಂದ್ರ ಸರ್ಕಾರ ಈ ಬುಡಕಟ್ಟು ಜನಾಂಗಗಳ ಮಕ್ಕಳಿಗೆ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಒದಗಿಸಲು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಬ್ರಹ್ಮೋಸ್ ಕ್ಷಿಪಣಿ ಡಬಲ್ ಹಿಟ್ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

0

ಭಾರತದ ಬ್ರಹ್ಮೋಸ್ ಕ್ಷಿಪಣಿಯ ‘ಡಬಲ್ ಹಿಟ್’ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಇದರಿಂದಾಗಿ ನೌಕೆ ಮತ್ತು ಯುದ್ಧ ವಿಮಾನದ ಮೂಲಕ ಒಂದೇ ಗುರಿ ಧ್ವಂಸ ಮಾಡುವ ಪರೀಕ್ಷೆ ಯಶಸ್ವಿಯಾಗಿದೆ.

ಈಶಾನ್ಯ ಸಮುದ್ರ ತೀರದಲ್ಲಿ ಭಾರತೀಯ ನೌಕಾಪಡೆಯ ಸಹಕಾರದೊಂದಿಗೆ ಭಾರತೀಯ ವಾಯುಪಡೆ ಸುಖೋಯ್-30 ಜೆಟ್ ಯುದ್ಧ ವಿಮಾನದ ಮೂಲಕ ನಿಖರ ಗುರಿ ತಲುಪುವ ಪರೀಕ್ಷೆ ಮಾಡಿತ್ತು.

ಈ ವೇಳೆ ಮೊದಲು ನೌಕಾ ಮಾರ್ಗವಾಗಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು.

ಭಾರತೀಯ ವಾಯುಪಡೆ ಯುದ್ಧ ನೌಕೆ ಮತ್ತು ಯುದ್ಧ ವಿಮಾನ ಸುಖೋಯ್30 ಜೆಟ್ ನಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.

ಎರಡೂ ಪರೀಕ್ಷೆಯಲ್ಲಿ ಒಂದೇ ಗುರಿ ನಿಗದಿ ಪಡಿಸಲಾಗಿತ್ತು.
ಎರಡೂ ಮಾರ್ಗದಲ್ಲಿ ಒಂದೇ ಗುರಿಯನ್ನು ಧ್ವಂಸ ಮಾಡುವಲ್ಲಿ ಕ್ಷಿಪಣಿ ಯಶಸ್ವಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ವಾಯುಸೇನೆ ಮತ್ತು ನೌಕಾದಳದ ಅಧಿಕಾರಿಗಳು, ಕ್ಷಿಪಣಿಯು ಪ್ರತೀ ಗಂಟೆಗೆ 3000 ಕಿ.ಮೀ ವೇಗದಲ್ಲಿ ಗುರಿಯನ್ನು ನಿಖರವಾಗಿ ಧ್ವಂಸ ಮಾಡಿದೆ. ಕ್ಷಿಪಣಿಯ ಈ ವೇಗವು ಶತ್ರುರಾಷ್ಟ್ರಗಳ ವಾಯು ರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿಕೊಂಡು ಗುರಿಯನ್ನು ತಲುಪಲು ನೆರವಾಗುತ್ತದೆ. ಈ ವೇಗದಲ್ಲಿ ಕ್ಷಿಪಣಿಯನ್ನು ಗುರುತಿಸುವುದೂ ಕೂಡ ಕಷ್ಟಕರವಾಗುತ್ತದೆ ಎಂದು ಹೇಳಿದ್ದಾರೆ.

ಐಎನ್‌ಎಸ್ ಡೆಲ್ಲಿ ಯುದ್ಧನೌಕೆ ಮೂಲಕ ಕ್ಷಿಪಣಿ ಪ್ರಯೋಗ ಮಾಡಲಾಗಿದೆ. ಈ ವೇಳೆ ಕ್ಷಿಪಣಿಗೆ ಗುರಿಯಾಗಿ ಮತ್ತೊಂದು ನೌಕೆಯನ್ನು ನೀಡಲಾಗಿತ್ತು. ಮೊದಲ ಪರೀಕ್ಷೆಯಲ್ಲಿ ನೌಕೆಯನ್ನು ಹೊಡೆದುರುಳಿಸುವಲ್ಲಿ ಕ್ಷಿಪಣಿ ಯಶಸ್ವಿಯಾಗಿತ್ತು.

ಬಳಿಕ ಭಾರತೀಯ ವಾಯುಪಡೆಯ Su-30MKI ಯುದ್ಧ ವಿಮಾನದ ಮೂಲಕ ವಾಯುನೆಲೆಯಿಂದ ಹೊರಟು ಅದೇ ಹಡಗಿನ ಮೇಲೆ ದಾಳಿ ಮಾಡಿತ್ತು. ಈ ವೇಳೆಯೂ ಬ್ರಹ್ಮೋಸ್ ಕ್ಷಿಪಣಿ ಹಡಗನ್ನು ಯಶಸ್ವಿಯಾಗಿ ಹೊಡೆದರುಳಿಸಿತ್ತು.

ಇನ್ನು ಸಿಡಿತಲೆಯೊಂದಿಗೆ ಕ್ಷಿಪಣಿ ಸತತ ಎರಡು ಬಾರಿ ಹೊಡೆದ ಪರಿಣಾಮ ಹಡಗು ಭಾರಿ ಹಾನಿಗೀಡಾಗಿ ಸಮುದ್ರದಲ್ಲೇ ಮುಳುಗಿತು ಎನ್ನಲಾಗಿದೆ.

ಶಿವಮೊಗ್ಗ ಏರ್ ಪೋರ್ಟಿಗೆ ಯಡಿಯೂರಪ್ಪ ಹೆಸರು-ಬೊಮ್ಮಾಯಿ

0

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ
ಬಿ.ಎಸ್‌ಯಡಿಯೂರಪ್ಪ ಅವರ ಹೆಸರಿಡುವ ತೀರ್ಮಾನವನ್ನು ತಮ್ಮ ಸಚಿವ ಸಂಪುಟ ಕೈಗೊಂಡಿದೆ ಎಂದು ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ ಅವರು ಇಂದು ಶಿವಮೊಗ್ಗ ಭೇಟಿಯಲ್ಲಿ ತಿಳಿಸಿದರು .
ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿ ವೀಕ್ಷಿಸಿ ಅವರು ಮಾತನಾಡುತ್ತಿದ್ದರು.
ಇಷ್ಟು ದಿನ ವಿಮಾನ ನಿಲ್ದಾಣದ ಹೆಸರಿನ ಬಗ್ಗೆ ಇದ್ದ ಊಹಾಪೋಹಗಳಿಗೆ
ಈಗ ವಿರಾಮ ಸಿಕ್ಕಂತಾಗಿದೆ.
ಬಹುತೇಕ ನಾಯಕರು ಈ ಹೆಸರಿನ ಆಯ್ಕೆಯನ್ನ ಬೆಂಬಲಿಸಿದ್ದಾರೆಂದು ಸ್ಥಳೀಯ ರಾಜಕೀಯ ಮುಂಖಂಡರ ಅಭಿಪ್ರಾಯವಾಗಿದೆ.

ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ಕೈವಾಡವಿದ್ದರೆ ವಿಚಾರಣೆ ನಡೆಸಲಿ

0

ಹುಬ್ಬಳ್ಳಿ ಗಲಭೆಯಲ್ಲಿ ಕಾಂಗ್ರೆಸ್‌ನವರ ಕೈವಾಡವಿದೆ ಎಂದು ಬಿಜೆಪಿ ನಾಯಕರು ಆಪಾದಿಸುತ್ತಿದ್ದಾರೆ. ಅವರದ್ದೇ ಸರ್ಕಾರವಿದ್ದು, ಕ್ರಮಕೈಗೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.

ಹುಬ್ಬಳ್ಳಿ ಗಲಭೆಯಲ್ಲಿ ತಪ್ಪು ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಕಾಂಗ್ರೆಸ್‌ ಮಧ್ಯ ಪ್ರವೇಶ ಮಾಡುವುದಿಲ್ಲ. ಆದರೆ, ಅಮಾಯಕರ ವಿರುದ್ಧ ಕ್ರಮ ಆಗಬಾರದು. ಪೊಲೀಸರು ಹೆಚ್ಚಿನ ಅನಾಹುತ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಪೊಲೀಸ್‌ಗಿರಿ ವಿಚಾರದಲ್ಲಿ ಅವರು ಕಠಿಣ ಪದ ಪ್ರಯೋಗ ಮಾಡಿದ್ದರೆ, ಪೊಲೀಸರಿಗೆ ಹೆಚ್ಚಿನ ಶಕ್ತಿ ಬರುತ್ತಿತ್ತು ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್‌ ಕಮಿಷನರ್‌ ಲಾಭೂರಾಮ್‌ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ನಿರತರನ್ನು ಸಮಾಧಾನಗೊಳಿಸಲು ಮಹಾನಗರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಯತ್ನಿಸಿದ್ದಾರೆ.
ಈಗ ಅವರನ್ನೇ ಆರೋಪಿಯನ್ನಾಗಿಸಲಾಗುತ್ತಿದೆ. ತಪ್ಪು ಮಾಡಿದ್ದರೆ ಬಂಧಿಸಲಿ ಎಂದರು.

ಮಾಧ್ಯಮದಲ್ಲಿ ಬರುತ್ತಿರುವುದಕ್ಕೂ, ವಾಸ್ತವಕ್ಕೂ ದೂರ ಇದೆ. ಮಾಧ್ಯಮದವರನ್ನು ಹುಬ್ಬಳ್ಳಿಯನ್ನು ಕೊಲ್ಲುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಕಾನೂನು ಕೈಗೆತ್ತಿಕೊಳ್ಳುವುದನ್ನು ಖಂಡಿಸುತ್ತೇನೆ. ರಾಜ್ಯ ಶಾಂತಿಯ ತೋಟ ಆಗಬೇಕು. ಯಾವುದೇ ಧರ್ಮದವರು ಅಶಾಂತಿ, ಪ್ರಚೋದನೆಗೆ ಅವಕಾಶ ಕೊಡಬಾರದು ಎಂದರು.

ಹುಬ್ಬಳ್ಳಿ ವಾಣಿಜ್ಯ ನಗರವಾಗಿದೆ. ವ್ಯಾಪಾರ ನಡೆಯುವಂತಾಗಬೇಕು. ಕಾನೂನು ಕೈಗೆತ್ತಿಕೊಳ್ಳಬೇಡಿ. ಸರ್ಕಾರ, ಪೊಲೀಸರಿಗೆ ಬಿಡಿ. ಸಮಸ್ಯೆ ಇದ್ದರೆ ಹೇಳಿ, ಕಾಂಗ್ರೆಸ್‌ ಹೋರಾಟ ಮಾಡಲಿದೆ. ದೇಶದೆಲ್ಲೆಡೆ ಕೋಮುಗಲಭೆ ಹುಟ್ಟುಹಾಕುವ ವ್ಯವಸ್ಥಿತ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ದೇಶ ಉಳಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಲಿದೆ ಎಂದು ಹೇಳಿದರು.

ಫಂಡರಾಪುರದಲ್ಲಿ ರಾಜ್ಯ ಸರ್ಕಾರದ ಅತಿಥಿಗೃಹ ನಿರ್ಮಾಣ

0

ಮಹಾರಾಷ್ಟ್ರದ ಪಂಡರಾಪುಕ್ಕೆ ರಾಜ್ಯದಿಂದ ಸಾವಿರಾರು ಮಂದಿ ಭಕ್ತಾದಿಗಳು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ಭಕ್ತಾದಿಗಳ ಅನುಕೂಲಕ್ಕಾಗಿ ಪಂಡರಾಪುರದಲ್ಲಿ ಅತಿಥಿಗೃಹ ನಿರ್ಮಾಣ ಮಾಡುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಕುರಿತು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದು, ಈ ಕುರಿತು 2022-23ನೇ ಸಾಲಿನ ಆಯವ್ಯದಲ್ಲಿ ಘೋಷಣೆ ಮಾಡಲಾಗಿದೆ. ಈ ಕುರಿತ ಪ್ರಸ್ತಾವನೆಗೆ 750 ಲಕ್ಷ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಅತಿಥಿಗೃಹ ನಿರ್ಮಾಣಕ್ಕೆ ಸರ್ಕಾರದ ಮಂಜೂರಾತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೊಲ್ಲಾಪುರ ಜಿಲ್ಲೆಯ ಪಂಡರಾಪುರ ಶ್ರೀಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿದ್ದು, ಅವರ ಅನುಕೂಲಕ್ಕಾಗಿ ಪಂಡರಾಪುರದಲ್ಲಿ ರಾಜ್ಯದ ಛತ್ರ ನಿರ್ಮಾಣ ಮಾಡಬೇಕೆನ್ನುವುದು ಅನೇಕ ವರ್ಷಗಳ ಬೇಡಿಕೆಯಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.

ಇನ್ನು ಕಾಶಿಯಾತ್ರೆ ಮತ್ತು ಪಂಡರಾಪುರದಲ್ಲಿ ಕರ್ನಾಟಕ ಛತ್ರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಶ್ರೀಮತಿ ಶಶಿಕಲಾ ಜೊಲ್ಲೆ ಕೃತಜ್ಞತೆ ಸಲ್ಲಿಸಿದ್ದಾರೆ.