Thursday, February 26, 2026
Thursday, February 26, 2026
Home Blog Page 1615

ದಕ್ಷಿಣ ಆಫ್ರಿಕಾ ಕ್ವಾಝುಲು ನಟಾಲ್ ನಲ್ಲಿ ಪ್ರವಾಹ

0

ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್‌ನಲ್ಲಿ ಪ್ರವಾಹದಿಂದಾಗಿ ಸಾವಿನ ಸಂಖ್ಯೆ 435 ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್ ಸಚಿವ ಭೆಕಿ ಸೆಲೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಮೊದಲು ಪ್ರವಾಹದಿಂದಾದ ಸಾವು-ನೋವುಗಳ ಸಂಖ್ಯೆ 448 ಎಂದು ಅಂಕಿ-ಅಂಶವಿತ್ತು. ಅದನ್ನು ಈಗ 435 ಕ್ಕೆ ಪರಿಷ್ಕರಿಸಲಾಗಿದೆ.

ನಾಲ್ಕು ದೇಹಗಳ ಶವಪರೀಕ್ಷೆಯ ಫಲಿತಾಂಶವಾಗಿದೆ. ಗುಂಡಿನ ಗಾಯಗಳೊಂದಿಗೆ ಪತ್ತೆಯಾದ ಸಾವುಗಳು ಕೊಲೆಗೆ ಸಂಬಂಧಿಸಿದೆ. ಒಂಬತ್ತಕ್ಕೂ ಹೆಚ್ಚು ಜನರು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ತುರ್ತು ಪರಿಹಾರ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಅವಕಾಶವಾದಿ ಅಪರಾಧಗಳನ್ನು ತಡೆಗಟ್ಟಲು ಸಹಾಯ ಮಾಡಲು 3,000 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು 900 ಕ್ವಾಜುಲು-ನಟಾಲ್ ಪ್ರಾಂತ್ಯದ ಮೆಟ್ರೋ ಪೊಲೀಸರನ್ನು ನಿಯೋಜಿಸಿದ್ದಾರೆ ಎಂದು ಅವರು ಹೇಳಿದರು.

ಹೀಗಾಗಿ ಒಟ್ಟು ಸಾವಿನ ಸಂಖ್ಯೆ 435 ರಷ್ಟಿದೆ ಎಂದು ಸೆಲೆ ಹೇಳಿದ್ದಾರೆ. ಇಲ್ಲಿನ ಪರಿಸ್ಥತಿಗೆ ಸುಧಾರಿಸಲು, ವೈದ್ಯರು, ದಾದಿಯರು, ಮನಶ್ಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಫಾರ್ಮಾಸಿಸ್ಟ್‌ಗಳನ್ನು ಒಳಗೊಂಡಂತೆ ಸೇನೆಯು 10,000 ಮಂದಿಯನ್ನು ನಿಯೋಜಿಸಿದೆ.

ರಾಜ್ಯದ ಸೇವಾಸಿಂಧು ಪೋರ್ಟಲ್ ಗೆ ವಾರ್ಷಿಕ ಪ್ರಶಸ್ತಿ

0

ಕೇಂದ್ರ ಸರ್ಕಾರ ಸಾರ್ವಜನಿಕ ಆಡಳಿತದಲ್ಲಿ ಅತ್ಯುತ್ತಮ ಸೇವೆಗಾಗಿ ನೀಡುವ 2021ನೇ ಸಾಲಿನ ಪ್ರಶಸ್ತಿಗೆ ಕರ್ನಾಟಕ ಸರ್ಕಾರದ ‘ಸೇವಾಸಿಂಧು’ ಪೋರ್ಟಲ್‌ ಪಾತ್ರವಾಗಿದೆ.

2018ರಲ್ಲಿ ಆರಂಭವಾದ ಪೋರ್ಟಲ್ ಕಂದಾಯ, ಸಾರಿಗೆ ಸೇರಿದಂತೆ ಸರ್ಕಾರದ ಹಲವು ಇಲಾಖೆಗಳಿಗೆ ಸಂಬಂಧಿಸಿದ 2 ಕೋಟಿಗಿಂತ ಹೆಚ್ಚು ಸೇವೆಗಳನ್ನು ನೀಡಿದೆ ಎಂದು ತಿಳಿದುಬಂದಿದೆ.

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕ ವಿದ್ಯುನ್ಮಾನ ಸೇವಾ ವಿಭಾಗದ (ಇಡಿಸಿಎಸ್‌) ನಿರ್ದೇಶಕಿ ದೀಪ್ತಿ ಆದಿತ್ಯ ಕಾನಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸೇವಾಸಿಂಧು ಪೋರ್ಟಲ್‌ ಮೂಲಕ 74 ಇಲಾಖೆಗಳ 789 ಸೇವೆಗಳನ್ನು ನೀಡಲಾಗುತ್ತಿದೆ. ಪ್ರತಿ ದಿನವೂ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಪೋರ್ಟಲ್‌ಗೆ ಭೇಟಿ ನೀಡಿ, ಸರ್ಕಾರದ ವಿವಿಧ ಸೇವೆಗಳನ್ನು ಪಡೆಯುತ್ತಿದ್ದಾರೆ ಎಂದು ದೀಪ್ತಿ ಅವರು ಹೇಳಿದರು.

ಆಳುವ ರೀತಿ ಬದಲಿಸೋಣ ಹೊಸ ವ್ಯವಸ್ಥೆ ಜನಕ್ಕೆ ನೀಡೋಣ-ಬೊಮ್ಮಾಯಿ

0

ಸರ್ಕಾರ ಮತ್ತು ಜನ ಸಾಮಾನ್ಯರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಹಿತ ಕಾಯಲು ಸರ್ಕಾರ ಸದಾ ಬದ್ದವಾಗಿದೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹೇಳಿದರು.

ಶಿವಮೊಗ್ಗ ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ಯೂನ್‍ನಿಂದ ಹಿಡಿದು ಅಧಿಕಾರಿವರೆಗೆ ತಮ್ಮ ಅಧಿಕಾರವನ್ನು ಜನಪರವಾಗಿ ಬಳಸಬೇಕು. ಕಾನೂನು ಬದ್ದವಾಗಿ ಕೆಲಸ ಮಾಡಬೇಕು. ವಿವೇಚನೆ ಬಳಸುವ ಸಂದರ್ಭದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಪರವಾಗಿ ಚಿಂತಿಸಿ ನಿರ್ಣಯ ಕೈಗೊಳ್ಳಬೇಕು. ಶ್ರೀಮಂತನ ಪರವಾಗಿ ಅಲ್ಲ. ಬಡವರು, ಜನ ಸಾಮಾನ್ಯರ ಪರವಾದ ನಿರ್ಣಯ ಕೈಗೊಳ್ಳಬೇಕು ಎಂದರು.

ದೇಶದಲ್ಲೇ ನಮ್ಮ ರಾಜ್ಯ ಸರ್ಕಾರಿ ನೌಕರರು ದಕ್ಷ ಅಧಿಕಾರಿಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಇದಕ್ಕೆ ಹಲವಾರು ದಶಕಗಳಿಂದ ಸೇವೆ ಸಲ್ಲಿಸಿದ ಹಿರಿಯ ಸರ್ಕಾರಿ ಅಧಿಕಾರಿ/ನೌಕರರ ಶ್ರಮವೂ ಕಾರಣವಾಗಿದೆ. ಅವರನ್ನು ಈ ಸಮಯದಲ್ಲಿ ಸ್ಮರಿಸುತ್ತಾ ಅಭಿನಂದಿಸುತ್ತೇನೆ. ಈ ಪರಂಪರೆ ಹೀಗೇ ಮುಂದುವರೆಸುವ ಕರ್ತವ್ಯ ಮತ್ತು ನೈತಿಕ ಜವಾಬ್ದಾರಿ ನಿಮ್ಮ ಮೇಲಿದೆ. ನಮ್ಮ ಜವಾಬ್ದಾರಿಯನ್ನು ಸ್ಪಷ್ಟವಾಗಿ ತಿಳಿದುಕೊಂಡಲ್ಲಿ ನಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸಬಹುದಾದ್ದರಿಂದ ಆಡಳಿತ ಯಂತ್ರದ ಬಗ್ಗೆ ಸ್ಪಷ್ಟತೆ ಇರಬೇಕು ಎಂದರು.

ಗ್ರಾ.ಪಂ ಯಿಂದ ಹಿಡಿದು ವಿಧಾನಸೌಧದ ವರೆಗೆ ಈ ತಂತ್ರಜ್ಞಾನ ಬಳಕೆಯ ವ್ಯವಸ್ಥೆ ಬಂದಿದೆ. ನೀವು ನಿಗದಿತ ಅವಧಿಯಲ್ಲಿ ಕೈಗೊಳ್ಳುವ ನಿರ್ಧಾರ ನಿಮ್ಮ ಜನಪರ ಕಳಕಳಿಯನ್ನು ತೋರುತ್ತದೆ. ಜನರ ಓಡಾಟ ತಪ್ಪಿಸುತ್ತದೆ, ಭ್ರಷ್ಟರನ್ನಾಗುವುದನ್ನು ತಪ್ಪಿಸುತ್ತದೆ, ಆರೋಪವನ್ನು ತಪ್ಪಿಸುತ್ತದೆ ಎಂದರು.

ಆಳುವುದೇ ಬೇರೆ ಮತ್ತು ಆಡಳಿತ ಮಾಡುವುದೇ ಬೇರೆ. ಆದ್ದರಿಂದ ನಾವು ಈ ಎರಡರ ನಡುವಿನ ವ್ಯತ್ಯಾಸ ಸ್ಪಷ್ಟಪಡಿಸಿಕೊಳ್ಳಬೇಕು. ನಮ್ಮ ಪಾತ್ರವನ್ನು ನಿಷ್ಟೆಯಿಂದ ನಿರ್ವಹಿಸಿದಲ್ಲಿ ನಾವು ಇಡೀ ರಾಜ್ಯದ ಜನತೆಗೆ ಅಭಿವೃದ್ದಿಯ ಫಲ ನೀಡಲು ಸಾಧ್ಯ ಎಂದು ತಿಳಿಸಿದರು.

ಆಡಳಿತ ಸುಧಾರಣೆ 2ನೇ ಆಯೋಗದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ತೆಗುಕೊಂಡಿದ್ದೇವೆ. ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳು ಸರ್ಕಾರದ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ನಾವು ಸರ್ಕಾರಿ, ಖಾಸಗಿ ಎಲ್ಲರ ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕಿದೆ. ಈಗ ನಮ್ಮ ಚಿಂತನೆ, ಕಾರ್ಯವೈಖರಿಗಳು ಬದಲಾಗಬೇಕು ಎಂದು ತಿಳಿಸಿದರು.

ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುತ್ತವೆ. ಅದಕ್ಕೆ ನಾವು ನಮ್ಮ ಸಾಮಾಜಿಕ, ಜನಪರ ಕೆಲಸ, ಕಾರ್ಯಕ್ಷಮತೆಯ ಮೂಲಕ ಉತ್ತರ ನೀಡಬೇಕು. ಅದನ್ನು ನಾನು ನಿಮ್ಮಿಂದ ಬಯಸುತ್ತಿದ್ದೇನೆ. ಬನ್ನಿ ಬದಲಾವಣೆ ಮಾಡೋಣ. ಆಡಳಿತ ಯಂತ್ರದಲ್ಲಿ ಬದಲಾವಣೆ ಮಾಡೋಣ, ಆಳುವ ರೀತಿಯನ್ನು ಬದಲಾಯಿಸೋಣ, ಜನಸಾಮಾನ್ಯರ ಬಳಿಗೆ ವ್ಯವಸ್ಥೆಯನ್ನು ಕೊಂಡೊಯ್ಯೋಣ. ಬಡವರು, ರೈತರು, ದೀನ ದಲಿತರು ಸೇರಿದಂತೆ ಎಲ್ಲರ ಅಭಿವೃದ್ದಿಗಾಗಿ ಸ್ಥಿತಪ್ರಜ್ಞ ಮತ್ತು ಸಮಯಪ್ರಜ್ಞೆಯಿಂದ ಕೆಲಸ ಮಾಡೋಣವೆಂದು ಕರೆ ನೀಡಿದರು.

ಪ್ರಸ್ತುತ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದರೂ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡು ಅಧಿಕಾರಿ/ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರಿ ನೌಕರರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಪರಿಶ್ರಮವೂ ಕಾರಣವಾಗಿದೆ ಎಂದು ಶ್ಲಾಘಿಸಿದ ಅವರು, ಷಡಾಕ್ಷರಿ ಅವರ ಹಿಂದಿನ ಧೀಶಕ್ತಿ ಯಡಿಯೂರಪ್ಪನವರು ಎಂದು ಹೇಳಿದರು.

ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ನಮ್ಮ ರಾಜ್ಯ ಘನ ಸರ್ಕಾರವು ಸರ್ಕಾರಿ ನೌಕರರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತಹ ವೇತನ ಮತ್ತು ಸೌಲಭ್ಯಗಳನ್ನು ನೀಡಿದೆ. ಕಾನೂನು ರೂಪಿಸುವವರು ನಾವಾದರೂ ಅದನ್ನು ಜಾರಿಗೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ. ಸಾಕಷ್ಟು ಅಭಿವೃದ್ದಿ ಕಾರ್ಯಗಳಾದ ಬಗ್ಗೆ ಹೆಮ್ಮ, ಗೌರವ ಸಲ್ಲುತ್ತಿರುವುದು ಕೂಡ ನಿಮ್ಮ ಪರಿಶ್ರಮದಿಂದ ಎಂದ ಹೇಳಬಯಸುತ್ತೇನೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ನೌಕರರಿದ್ದು, ದೇಶದಲ್ಲೇ ಪ್ರಥಮವಾಗಿ ರಾಜ್ಯದಲ್ಲಿ ಸರ್ಕಾರಿ ನೌಕರರ ದಿನಾಚರಣೆ ಘೋಷಿಸಿರುವ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ 31 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಸರ್ಕಾರಿ ನೌಕರರ ದಿನಾಚರಣೆ ಮತ್ತು ಸರ್ವೋತ್ತಮ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಕೆಲಸ ದೇವರ ಕೆಲಸವಾಗಿದ್ದು ಎಲ್ಲರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯ ಒದಗಿಸಬೇಕು. ನಾವೆಲ್ಲ ಸೇರಿ ಸರ್ವಾಂಗೀಣ ಅಭಿವೃದ್ದಿ ಮಾಡೋಣ ಎಂದರು.

ಸರ್ಕಾರಿ ನೌಕರರು ಅನೇಕ ಒತ್ತಡಗಳು, ಸಮಸ್ಯೆಗಳು ಮತ್ತು ಸವಾಲುಗಳ ನಡುವೆಯೂ ತಮ್ಮ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ನಮ್ಮ ಮನವಿಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕೇಂದ್ರಕ್ಕೆ ಸಮಾನ ವೇತನ ನೀಡಲು ವೇತನ ಆಯೋಗ ರಚನೆ ಸೇರಿದಂತೆ ನೌಕರರ ಹಿತರಕ್ಷಕರಾಗಿರುವ ಅವರಿಗೆ ಎಲ್ಲ ನೌಕರರ ಪರವಾಗಿ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಮಾಸ್ಕ್ ಧರಿಸಿ ಲಸಿಕೆ ಪಡೆಯಿರಿ ಕೋವಿಡ್ ನಿಬಂಧನೆ ಪಾಲಿಸಿ – ಸುಧಾಕರ್

0

ರಾಜ್ಯದಲ್ಲಿ ಕೊರೊನಾದ ನಾಲ್ಕನೇ ಅಲೆ ಬಂದಿಲ್ಲ. ಆದರೂ ಮಾಸ್ಕ್ ಧರಿಸುವ ಹಾಗೂ ಲಸಿಕೆ ಪಡೆಯುವ ಮೂಲಕ ಜನರು ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೆಹಲಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕಳೆದೊಂದು ವಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಮನಿಸಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ಜೊತೆಗೆ ಆರೋಗ್ಯ ಇಲಾಖೆಯ ಸಭೆ ನಡೆಸಿ ಕ್ರಮ ವಹಿಸಲಾಗುವುದು. ಜನರ ಸುರಕ್ಷತಾ ದೃಷ್ಟಿಯಿಂದ ಮಾಸ್ಕ್ ಧರಿಸುವುದು ಹಾಗೂ ಕೋವಿಡ್ ಮೂರನೇ ಡೋಸ್ ಪಡೆಯಲು ಸೂಚಿಸಲಾಗಿದೆ. ಆದರೆ ಇದನ್ನು ಹೆಚ್ಚಿನವರು ಪಾಲಿಸುತ್ತಿಲ್ಲ. ಇನ್ನೂ 29-30 ಲಕ್ಷ ಜನರು ಎರಡನೇ ಡೋಸ್ ಪಡೆಯಬೇಕಿದೆ ಎಂದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇಡುವುದು ಸೇರಿದಂತೆ ಹಲವು ಕ್ರಮ ವಹಿಸಲಾಗಿದೆ. ಆದರೂ ಬೇರೆ ರಾಜ್ಯಗಳಲ್ಲಿ ಸೋಂಕು ಹೆಚ್ಚಾದಾಗ ಸಹಜವಾಗಿ ಹರಡುತ್ತದೆ. ಆದ್ದರಿಂದ ಜನರು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕಿದೆ. ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಲಸಿಕೆ ಹೆಚ್ಚಾಗಿ ನೀಡಿರುವುದರಿಂದ ಮೂರನೇ ಅಲೆ ನಿಯಂತ್ರಣಕ್ಕೆ ಬಂದಿದೆ. ಆದರೆ ರಾಜ್ಯದಲ್ಲಿ ನಾಲ್ಕನೇ ಅಲೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 97.9% ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಮೊದಲ ಡೋಸ್ ಅನ್ನು ಪಡೆದವರ ಪ್ರಮಾಣ 100% ದಾಟಿದೆ. 12 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಿನವರಿಗೆ ಲಸಿಕೆ ಕೊಡಿಸಬೇಕಿದೆ. ಪೋಷಕರು ಈ ಬಗ್ಗೆ ಗಮನ ನೀಡಬೇಕು ಎಂದರು.

ಶಿವಮೊಗ್ಗದಲ್ಲಿ ಪ್ರಸಾರ ಕಾರ್ಯ ಆರಂಭಿಸಲಿರುವ ಶಿವಮೊಗ್ಗ FM ರೇಡಿಯೊ

0

ಶಿವಮೊಗ್ಗ ಎಫ್ಎಂ 90.8 ಸಮುದಾಯ ರೇಡಿಯೋ ಕೇಂದ್ರ ಹೊಸ ರೀತಿಯಲ್ಲಿ ನಾಳೆಯಿಂದ (ಏ.22ರಿಂದ) ತನ್ನ ಪ್ರಸಾರವನ್ನು ಆರಂಭಿಸಲಿದೆ ಎಂದು ನಿಲಯದ ನಿರ್ದೇಶಕ ಜಿ .ಎಲ್. ಜನಾರ್ಧನ್ ಅವರು ತಿಳಿಸಿದ್ದಾರೆ.

ಕೆ ಲೈವ್ ಮಾಧ್ಯಮ ದೊಂದಿಗೆ ಮಾತನಾಡಿದ ಅವರು, ರೇಡಿಯೋ ಶಿವಮೊಗ್ಗ, ಸಮುದಾಯ ಬಾನುಲಿ ಕೇಂದ್ರ, ಕೊಡಚಾದ್ರಿ ಸಮಗ್ರ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಪ್ರಸಾರ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಿಂದಲೇ ಎಫ್ ಎಂ ರೇಡಿಯೋ ಕೇಂದ್ರ ಪ್ರಾಯೋಗಿ ಪ್ರಸಾರವಾಗುತ್ತಿದೆ. ನಾಳೆಯಿಂದ ಇದರ ಅಧಿಕೃತ ಪ್ರಸಾರವು ಆರಂಭವಾಗಲಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಲಿದೆ ಎಂದು ಜಿ.ಎಲ್. ಜನಾರ್ಧನ್ ಅವರು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ರೇಡಿಯೋ ವಿಶೇಷ ತರಂಗ ತರಗಳು ಹಾಗೂ ಆನ್ಲೈನ್ ಮೂಲಕ ನೇರವಾಗಿ ಪ್ರಸಾರವಾಗಲಿದೆ. ಆನ್ಲೈನ್ ಮೂಲಕ ವಾದರೆ ವಿಶ್ವದ ಯಾವುದೇ ಭಾಗದಿಂದ ಕೇಳಬಹುದಾಗಿದೆ. ನೇರವಾಗಿ ಸುಮಾರು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಇದರ ಪ್ರಸಾರವಾಗಲಿದೆ. ಆದ್ದರಿಂದ ರೇಡಿಯೋ ಶಿವಮೊಗ್ಗ ಎಫ್ಎಂ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಕೇಳಬಹುದು ಎಂದು ತಿಳಿಸಿದ್ದಾರೆ.

ಯಾವೆಲ್ಲ ಕಾರ್ಯಕ್ರಮಗಳು ಪ್ರಸಾರವಾಗಲಿದೆ ಎಂಬುದಕ್ಕೆ ಉತ್ತರ.
ಸಮಗ್ರ ಶಿಕ್ಷಣ, ಸಾಂಸ್ಕೃತಿಕ ವೈಭವ, ಉದ್ಯೋಗ, ಕೃಷಿ, ಕ್ರೀಡೆ, ಸಂಗೀತ, ಕುಶಲಕಲೆ, ಕೈಗಾರಿಕೆ, ಇನ್ನು ಮುಂತಾದ ವಿಷಯಗಳ ಕುರಿತು ವಿಶಿಷ್ಟವಾದ ಕಾರ್ಯಕ್ರಮಗಳನ್ನು ಶಿವಮೊಗ್ಗ ರೇಡಿಯೋ ಪ್ರಸಾರ ಮಾಡಲಿದೆ. ಇದರ ಮೂಲಕ ಹೊಸ ಪ್ರತಿಭೆಗಳಿಗೆ ಸ್ಪೂರ್ತಿ ನೀಡಲಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ವಿವಿಧ ಸೇವೆ ಮಾಡುತ್ತಿರುವ ವ್ಯಾಪಾರಿಗಳು, ಕೈಗಾರಿಕೆಗಳು, ವಾಣಿಜ್ಯೋದ್ಯಮಿಗಳು, ಸಹಕಾರ ಸಂಸ್ಥೆಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ತಮ್ಮ ಸೇವೆಗಳ ಕುರಿತು ಜಾಹೀರಾತು ನೀಡುವ ಮೂಲಕ ಸಹಕರಿಸಬೇಕು ಎಂದು ಜಿ.ಎಲ್. ಜನಾರ್ಧನ್ ಅವರು ಹೇಳಿದ್ದಾರೆ

ಪಾನ್ ಮಸಾಲ ಜಾಹೀರಾತಿನಿಂದ ಹಿಂದೆ ಸರಿದ ನಟ ಅಕ್ಷಯ್

0

ಸದಾ ಕಾಲ ಫಿಟ್ನೆಸ್ ಬಗ್ಗೆ ಮಾತನಾಡುವ, ಶಿಸ್ತಿನ ಜೀವನ ನಡೆಸುವ, ಇತರರಿಗೂ ಮಾದರಿ ಆಗಿರುವ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಅವರು ವಿಮಲ್ ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿರುವುದು ಸರಿಯಲ್ಲ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

ಅದರ ಬೆನ್ನಲ್ಲೇ ಅಕ್ಷಯ್​ ಕುಮಾರ್​ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಮಲ್​ ಜಾಹೀರಾತಿನಲ್ಲಿ ಇನ್ಮುಂದೆ ನಟಿಸುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, ನನ್ನನ್ನು ಕ್ಷಮಿಸಿ. ಎಲ್ಲಾ ಆಪ್ತರಿಗೂ, ಅಭಿಮಾನಿಗಳಿಗೂ ನಾನು ಕ್ಷಮೆ ಕೇಳಲು ಬಯಸುತ್ತೇನೆ. ಕಳೆದ ಕೆಲ ದಿನಗಳಿಂದ ನೀವು ನೀಡಿದ ಪ್ರತಿಕ್ರಿಯೆ ನನ್ನ ಮೇಲೆ ಆಳ ಪ್ರಭಾವ ಬೀರಿದೆ. ಇನ್ನು ಮುಂದೇ ಯಾವುದೇ ತಂಬಾಕು ಜಾಹೀರಾತಿನಲ್ಲಿ ನಟಿಸುವುದಿಲ್ಲ. ವಿಮಲ್ ಎಲೈಚಿ ಸಂಸ್ಥೆಯೊಂದಿಗಿನ ನನ್ನ ಒಡನಾಟ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ. ಆದ್ದರಿಂದ ಈ ಜಾಹೀರಾತಿನಿಂದ ಹಿಂದೆ ಸರಿಯುತ್ತಿದ್ದೇನೆ. ಇದರಿಂದ ಗಳಿಸಿದ ಹಣವನ್ನು ಉತ್ತಮ ಕೆಲಸಕ್ಕೆ ಬಳಸಲು ನಿರ್ಧರಿಸಿದ್ದೇನೆ. ಈಗಾಗಲೇ ಬ್ರ್ಯಾಂಡ್ ಆಗಿರೋ ಕಾರಣ ಕಾನೂನಿನ ನಿಯಮಗಳ ಅನ್ವಯ ಜಾಹೀರಾತು ಪ್ರಸಾರ ಆಗಲಿದೆ. ಮುಂದಿನ ಜಾಹೀರಾತು ಆಯ್ಕೆಗಳನ್ನು ಮಾಡೋ ಸಂದರ್ಭದಲ್ಲಿ ಉತ್ತಮವಾಗಿ ಗಮನ ಹರಿಸುತ್ತೇನೆ ಎಂದು ಭರವಸೆ ನೀಡುತ್ತೇನೆ. ಪ್ರತಿಯಾಗಿ ನಾನು ನಿಮ್ಮ ಪ್ರೀತಿ ಮತ್ತು ಶುಭಾಶಯಗಳನ್ನು ನೀಡಿ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಶಾರುಖ್​, ಅಜಯ್​ ದೇವಗನ್​, ಅಕ್ಷಯ್​ ಕುಮಾರ್ ವಿಮಲ್​ ಜಾಹೀರಾತಿನಲ್ಲಿ ನಟಿಸಿದ್ದರು. ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಪ್ರಚಾರ ಜಾಹೀರಾತಿಗಳಲ್ಲಿ ನಟಿಸಿದಕ್ಕೆ ಅಕ್ಷಯ್​ ಕುಮಾರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

ಮನೆ ಕಟ್ಟುವವರೇ ಗಮನಿಸಿ ಸಿಮೆಂಟ್ ಬೆಲೆ ಏರಲಿದೆ

0

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಶೀಘ್ರವೇ ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.

ಉತ್ಪಾದನಾ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಿರುವ ಕಾರಣ ದೇಶಿಯ ಸಿಮೆಂಟ್ ಕಂಪನಿಗಳು ಶೀಘ್ರವೇ ಸಿಮೆಂಟ್ ಬೆಲೆಯನ್ನು 25-50 ರೂಪಾಯಿವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹಣಕಾಸು ಸೇವಾ ಸಂಸ್ಥೆ ಕ್ರಿಸಿಲ್ ಮಾಹಿತಿ ತಿಳಿಸಿದೆ.

ಸಿಮೆಂಟ್ ದರದಲ್ಲಿ ಸಾಗಣೆ ವೆಚ್ಚವೇ ಶೇ. 50 ರಷ್ಟು ಇರುವ ಕಾರಣ ಡೀಸೆಲ್ ದರ ಏರಿಕೆ ಸಹಜವಾಗಿಯೇ ಪರಿಣಾಮ ಬೀರಲಿದೆ. ಆದ್ದರಿಂದ, ಕಂಪನಿಗಳು ಪ್ರತಿ ಚೀಲದ ಬೆಲೆಯಲ್ಲಿ 25-50 ರೂ. ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಕ್ರಿಸಿಲ್ ತನ್ನ ವರದಿಯಲ್ಲಿ ಹೇಳಿದೆ.

ಈಗಾಗಲೇ ಪ್ರತಿ ಚೀಲ ಸಿಮೆಂಟ್ ಬೆಲೆ 360 ರೂ. 420 ರೂ.ವರೆಗೆ ತಲುಪಿದೆ. ಶೀಘ್ರವೇ 450 ರೂ. ಗಡಿ ದಾಟುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸರ್ಕಾರದಿಂದ ಜೋಳ ಬೆಂಬಲ ಬೆಲೆ ಖರೀದಿ

0

ಬಳ್ಳಾರಿ ವಿಜಯನಗರ ಜಿಲ್ಲೆಗಳಲ್ಲಿ 2021-22ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಋತುವಿನಲ್ಲಿ ಬೆಳೆದ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಈಗಾಗಲೇ ನೊಂದಣಿ ಮಾಡಿದ ರೈತರಿಂದ ಏ.30ರವರೆಗೆ ಸರ್ಕಾರದಿಂದ ಖರೀದಿ ಮಾಡಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ರೈತರು ಖರೀದಿ ಏಜೆನ್ಸಿಯಾದ ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ
ಮೊ.9448275015,7483049911 ಹಾಗೂ ಆಯಾ ತಾಲ್ಲೂಕಿನ ಖರೀದಿ ಕೇಂದ್ರಗಳ ಖರೀದಿ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ

ಓದಿದ್ದು ಮನಸ್ಸಿಗೂ ಹೋಗಬೇಕು ಆಗ ಪರೀಕ್ಷೆ ಕಷ್ಟವೆನ್ನಿಸದು- ಮಂಜುನಾಥ

0

ಓದಿದ್ದು ತಲೆಗೆ ಹೋದರೆ ಸಾಲದು ಮನಸ್ಸಿಗೂ ಹೋಗಬೇಕು.ಆಗ ಪರೀಕ್ಷೆ ಎದುರಿಸಲು ಸ್ವಲ್ಪವೂ ಕಷ್ಟವಾಗುವುದಿಲ್ಲ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಅವರು ಅಭಿಪ್ರಾಯಪಟ್ಟಿದ್ದಾರೆ.

ದಾವಣಗೆರೆಯ ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಮತ್ತು ಶ್ರೀ ಶಾರದಾ ಪೂಜಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಅವರು ಪಾಠಗಳನ್ನು ಓದುವಾಗ ಅರ್ಥಮಾಡಿಕೊಳ್ಳುತ್ತಾ ಓದಿದಾಗ ಅದು ಕೇವಲ ತಲೆಯಲ್ಲಿ ಕೂರದೆ ಮನಸ್ಸಿನೊಳಗೂ ಮುಟ್ಟುತ್ತದೆ. ಹೀಗೆ ಮನನವಾದ ವಿಷಯಗಳು ಪರೀಕ್ಷೆಯಲ್ಲಿ ಸುಲಭವಾಗಿ ಹೊರಬರುತ್ತವೆ. ಇದರಿಂದ ಪರೀಕ್ಷೆಯಲ್ಲಿ ಭಯವಿರುವುದಿಲ್ಲ. ಮೊದಲು ಓದಬೇಕೆನ್ನುವ ಮನಸ್ಥಿತಿ ತಂದುಕೊಂಡು, ಓದುವುದನ್ನು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಮರೆತುಹೋಗುವ ಅಂಶಗಳನ್ನು ಗುರುತಿಸಿ ಬರೆದುಕೊಳ್ಳಬೇಕು. ಪುನಹ ಓದಿದಾಗ ಪಾಠಗಳು ಸಂಪೂರ್ಣವಾಗಿ ಮನನವಾಗುತ್ತದೆ ಎಂದು ಮಂಜುನಾಥ್ ಅವರು ಹೇಳಿದರು.

ಪದವಿಪೂರ್ವ ಶಿಕ್ಷಣ ಅವಧಿಯು ಒಂದು ಪರ್ವಕಾಲವಾಗಿದೆ. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ನಿರೀಕ್ಷೆ, ತಂದೆ-ತಾಯಿಗಳ ನಿರೀಕ್ಷೆ, ಸಮಾಜದ ನಿರೀಕ್ಷೆ, ರಾಷ್ಟ್ರದ ನಿರೀಕ್ಷೆಯೊಂದಿಗೆ ಭಾರತದ ವಿದ್ಯಾರ್ಥಿಗಳು ವಿಶ್ವದ ನಿರೀಕ್ಷೆಗೂ ತಕ್ಕನಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿರುವ ಮಹತ್ವವನ್ನು ಉದಾಹರಣೆಗಳ ಸಹಿತ ಮಂಜುನಾಥ್ ಅವರು ವಿವರಿಸಿದರು.

ಸಮಾಜ ಪರಿವರ್ತನೆಗೆ ಶಿಕ್ಷಣವೇ ಸಮರ್ಥ ಸಾಧನ ಎಂಬುದರ ಮಹತ್ವ ಅರಿತ ಸಿರಿಗೆರೆಯ ಹಿರಿ ಜಗದ್ಗುರುಗಳು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ ಆದ್ಯತೆ ಕೊಟ್ಟಿದ್ದನ್ನು ಸ್ಮರಿಸಿದ ಎಚ್.ಬಿ. ಮಂಜುನಾಥ ಅವರು, ಭಾರತದ ವಿದ್ಯಾರ್ಥಿಗಳ ಬುದ್ಧಿಮತ್ತೆಯು ವಿಶ್ವದ ಬೇರೆಲ್ಲ ರಾಷ್ಟ್ರಗಳ ವಿದ್ಯಾರ್ಥಿಗಳಿಗಿಂತ ಹೆಚ್ಚಿನದಾಗಿದೆ. ಆಧುನಿಕವಾದ ವಿದ್ಯುನ್ಮಾನ ಸಾಧನಗಳನ್ನು ಮನರಂಜನೆಗಾಗಿ ಬಳಸದೇ ಸದುಪಯೋಗಪಡಿಸಿಕೊಂಡು ವಿಶ್ವದಲ್ಲಿ ದೊಡ್ಡ ಸಾಧನೆಯನ್ನು ನಮ್ಮ ವಿದ್ಯಾರ್ಥಿಗಳು ಮಾಡಬೇಕು ಎಂದು ಎಚ್. ಬಿ.ಮಂಜುನಾಥ್ ಅವರು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಹೆಚ್.ಎನ್.ಪ್ರದೀಪರವರು ಪರೀಕ್ಷಾ ಪೂರ್ವ ಸಿದ್ಧತೆ ಮತ್ತು ಪರೀಕ್ಷಾ ಕೊಠಡಿಯಲ್ಲಿನ ನೀತಿ,ನಿಯಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಅನುಭವ ಮಂಟಪ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀಕುಮಾರ್ ಸಹ ಉಪಸ್ಥಿತರಿದ್ದರು.

ಅಧ್ಯಾಪಕಿ ರಾಧಾ ಜಿ. ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ವಿದ್ಯಾರ್ಥಿನಿಯರಾದ ಮನುಶ್ರೀ, ಕೀರ್ತನಾ ಹಾಡಿದರು. ಶೈಕ್ಷಣಿಕ ಅನುಭವಗಳನ್ನು ವಿದ್ಯಾರ್ಥಿಗಳಾದ ವಿಶಾಲ್, ಸೃಜನ್, ಕುಶಾಲ್, ಪ್ರಜ್ವಲ್, ಪ್ರೇರಣಾ, ಭಾವನಾ ಮುಂತಾದವರು ಹಂಚಿಕೊಂಡರು.

2022-23 ನೇ ಸಾಲಿನ ಶಿಕ್ಷಣ ಇಲಾಖೆ ಕಾರ್ಯಸೂಚಿ

0

2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಕಳೆದ 3 ವರ್ಷಗಳಲ್ಲಿನ ಕಲಿಕಾ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಈ ವೇಳಾಪಟ್ಟಿಯಂತೆ ಪ್ರಸಕ್ತ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಸಂಕಲ್ಪಿಸಲಾಗಿದೆ. ವಾರ್ಷಿಕ ಪಠ್ಯವಸ್ತು ಬೋಧನೆಯನ್ನು ಕಲಿಕಾ ಚೇತರಿಕೆ ಕಾರ್ಯಕ್ರಮದೊಂದಿಗೆ ಸಂಯೋಜಿಸಿ, ವಾರ್ಷಿಕ ಕಾರ್ಯಸೂಚಿಯನ್ನು ತಯಾರಿಸಲಾಗಿದೆ ಎಂದು ತಿಳಿಸಿದೆ.

2022-23ನೇ ಶೈಕ್ಷಣಿಕ ವೇಳಾಪಟ್ಟಿಯಂತೆ ದಿನಾಂಕ 14-05-2022ರಿಂದ ಶಾಲೆ ಪ್ರಾರಂಭ ಮತ್ತು ಪ್ರಾರಂಭೋತ್ಸವದ ಪೂರ್ವ ಸಿದ್ಧತೆ ಆರಂಭಗೊಳ್ಳಲಿದೆ.

ದಿನಾಂಕ 16-05-2022ರಿಂದ ಶಾಲಾ ಪ್ರಾರಂಭೋತ್ಸವ ಆರಂಭವಾಗಲಿದೆ. ಅಲ್ಲದೇ ದಿನಾಂಕ 03-10-2022 ರಿಂದ ದಿನಾಂಕ 16-10-2022ರವರೆಗೆ ದಸರಾ ರಜೆಯನ್ನು ಘೋಷಿಸಲಾಗಿದೆ.