ಪಿಎಸ್ ಐ ನೇಮಕಾತಿ ಪರೀಕ್ಷೆ ಹಗರಣ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮಾಜಿ ಸಚಿವ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಹೊಸ ಆಡಿಯೋ ಟೇಪ್ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲವೂ ತನಿಖೆ ಆಗುತ್ತದೆ. ನಾನು ಆ ಆಡಿಯೋ ನೋಡಿಲ್ಲ.ಆಡಿಯೋ ಇಬ್ಬರ ಮದ್ಯೆ ಮಾತುಕತೆ ಆಗಿದೆ. ಆ ಇಬ್ಬರು ಯಾರು? ಅವರ ಅರ್ಹತೆ, ಕ್ರೆಡಿಬಿಲಿಟಿ ಏನು? ಎಲ್ಲವೂ ತನಿಖೆ ಆಗುತ್ತದೆ. ಆಡಿಯೋ ಕೂಡ ತನಿಖೆಗೆ ಒಳಪಡಿಸುತ್ತೇವೆ. ಯಾರೇ ತಪ್ಪಿತಸ್ಥರು ಆಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.
ಸಿಜೆ ಹಾಗೂ ಸಿಎಂ ಕಾನ್ಫರೆನ್ಸ್ ಇದೆ. ಆದ್ದರಿಂದ, ದೆಹಲಿಗೆ ಹೋಗುತ್ತೇನೆ. ಶಾಲೆಗಳಿಗೆ ಹುಸಿ ಬಾಂಬ್ ಕರೆ ಬಂದಿರುವ ಪ್ರಕರಣ ನನಗೆ ಗೊತ್ತಿಲ್ಲ. ನಾನು ಕಮಿಷನರ್ ಜೊತೆಗೆ ಮಾತನಾಡುತ್ತೇನೆ. ಶಾಂತಿ ಕದಡಲು ಆಗಾಗ ಇಂಥ ಪ್ರಯತ್ನ ಆಗುತ್ತಿದೆ. ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ತನಿಖೆ ಮಾಡುತ್ತೇವೆ. ಇಮೇಲ್ ಟ್ರ್ಯಾಕ್ ಮಾಡಿ ತನಿಖೆ ಮಾಡುತ್ತೇವೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿ ಉಚಿತ ಕುಡಿಯುವ ನೀರಿನ ಸಂಚಾರಿ ವಾಹನವನ್ನು ಇಂದು ಶಿವಮೊಗ್ಗದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಉದ್ಘಾಟಿಸಿದರು.
ಶಿವಮೊಗ್ಗದ ಜನರಿಗೆ ಬೇಸಿಗೆಯಲ್ಲಿ ತಂಪು ನೀಡುವ ಸುದ್ದಿ ಇದಾಗಿದೆ. ಬಸ್ ನಿಲ್ದಾಣದಲ್ಲಿ ಅನೇಕರಿಗೆ ಬಾಯಾರಿಕೆ ನೀಗಿಸುವ ಪರೋಪಕಾರಿ ಚಟುವಟಿಕೆ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದೆ.
ಸಾರ್ವಜನಿಕರಿಗೆ ಹಾಗೂ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಪಾನಕ, ಮಜ್ಜಿಗೆ ಹಾಗೂ ನೀರನ್ನು ವಿತರಿಸಲಾಗುತ್ತದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎಲ್ಲೆಲ್ಲಿ ಸಾರ್ವಜನಿಕರು ಇರುತ್ತಾರೋ ಮತ್ತು ಎಲ್ಲೆಲ್ಲಿ ನೀರಿನ ಅಗತ್ಯವಿದಿಯೋ, ಅಲ್ಲಲ್ಲಿ ವಾಹನವನ್ನು ನಿಲ್ಲಿಸಿ ಅವರಿಗೆ ನೀರು ಮಜ್ಜಿಗೆ ಹಾಗೂ ಪಾನಕವನ್ನು ವಿತರಿಸಲಾಗುತ್ತದೆ.
ಪ್ರತಿ ಸೋಮವಾರ ಬೆಲ್ಲದ ಪಾನಕ,ಹಾಗೂ ಗುರುವಾರ ಮಜ್ಜಿಗೆ ಯನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಪ್ರತಿದಿನ ಸುಮಾರು 500 ಲೀಟರ್ ಮಜ್ಜಿಗೆ ಅಥವಾ ಪಾನಕವನ್ನು ವಿತರಿಸಲಾಗುತ್ತದೆ. ಇದರಿಂದ ಸುಮಾರು ನಾಲ್ಕು ಸಾವಿರ ಜನರಿಗೆ ಉಪಯೋಗವಾಗುವ ದೃಷ್ಟಿಯಿಂದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.
ಶಿಕ್ಷಣವನ್ನು ಸ್ಥಗಿತಗೊಳಿಸಿದ ನಿರುದ್ಯೋಗಿ ಯುವಕರಿಗೆ ಸಹಾಯ ಮಾಡಲು ಹಾಗೂ ಅವರ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸಹಾಯ ಮಾಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯುವಜನ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಅವರನ್ನು ಸ್ವತಂತ್ರರನ್ನಾಗಿಸಲು ತರಬೇತಿ ನೀಡುತ್ತಿದೆ.
ಕರ್ನಾಟಕದಲ್ಲಿ 18 ರಿಂದ 27 ವರ್ಷದೊಳಗಿನ 60,000 ಯುವಕರಿಗೆ ತರಬೇತಿ ನೀಡಲಾಗುವುದು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ವರದಿ ಪ್ರಕಾರ ರಾಜ್ಯದಲ್ಲಿ ಸುಮಾರು 75,000 ಯುವಕರು ತಮ್ಮ ಶಿಕ್ಷಣವನ್ನು ಸ್ಥಗಿತಗೊಳಿಸಿದ್ದಾರೆ. ಆರ್‌ಡಿಪಿಆರ್ ಇಲಾಖೆಯು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 10 ಯುವಕರನ್ನು ಗುರುತಿಸುತ್ತದೆ. ಜೊತೆಗೆ ಯುವ ಸ್ವ ಸಹಾಯ ಗುಂಪುಗಳನ್ನು ರಚಿಸುತ್ತದೆ. ಅವರಿಗೆ ಸ್ವಯಂ ಉದ್ಯೋಗಕ್ಕಾಗಿ ತರಬೇತಿ ಮತ್ತು ಆರ್ಥಿಕ ನೆರವು ನೀಡುತ್ತದೆ.
ಕರ್ನಾಟಕದಲ್ಲಿ 6,000ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿವೆ. ಯುವಜನ ಮತ್ತು ಕ್ರೀಡಾ ಇಲಾಖೆಯು ಪ್ರತಿ ಪಂಚಾಯತ್‌ನಲ್ಲಿ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳನ್ನು ರಚಿಸಲು ವಿವರವಾದ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಪ್ರತಿಯೊಂದು ಗುಂಪುಗಳಲ್ಲಿ ಕನಿಷ್ಠ 10 ಸ್ಥಳೀಯ ಯುವಕರು ತಮ್ಮ ಶಿಕ್ಷಣವನ್ನು ಸ್ಥಗಿತಗೊಳಿಸಿದ್ದಾರೆ.ಹಾಗೂ ನಿರುದ್ಯೋಗಿಗಳನ್ನು ಹೊಂದಿರುತ್ತಾರೆ. ಇದರಿಂದ ಸುಮಾರು 60,000 ಯುವಕರಿಗೆ ಅನುಕೂಲವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ತಿಂಗಳು ಮಂಡಿಸಿದ ಬಜೆಟ್‌ನಲ್ಲಿ ಇದನ್ನೇ ಘೋಷಿಸಿದ್ದರು. ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಹೆಚ್ಚಿನ ಜನರಿಗೆ ಅನುಕೂಲ ಮಾಡಿಕೊಡುವಂತೆ ರಾಜ್ಯ ಸರ್ಕಾರ ಹಾಗೂ ಬಿಜೆಪಿ ಮೇಲೆ ಒತ್ತಡವಿದೆ.
ನಿಮ್ಹಾನ್ಸ್‌ನಿಂದ ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಪ್ರತಿ ಜಿಲ್ಲೆಯ ಯುವ ಸಂಚಾಲಕರಿಗೆ ಮಾಸ್ಟರ್ ತರಬೇತಿ ನೀಡಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ.
ಈ ಮೂಲಕ ಅವರನ್ನು ಮಾನಸಿಕವಾಗಿ ಸದೃಢರನ್ನಾಗಿಸಲು ವೃತ್ತಿ ಕೌನ್ಸೆಲಿಂಗ್ ಹಾಗೂ ಇತರೆ ಕೌನ್ಸೆಲಿಂಗ್ ತರಬೇತಿ ನೀಡಲಾಗುತ್ತದೆ. ಇಷ್ಟಲ್ಲದೇ, ಕೌಶಲಾಭಿವೃದ್ಧಿ ಇಲಾಖೆಯ ಮೂಲಕವೂ ತರಬೇತಿ ನೀಡಲಾಗುತ್ತದೆ. ಈ ಮಾಸ್ಟರ್ ತರಬೇತುದಾರರು, ಯುವ ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡುತ್ತಾರೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಧಿಕಾರಿಗಳು ಸ್ವ-ಸಹಾಯ ಸಂಘದ ಸಂವಿಧಾನವನ್ನು ಖಚಿತಪಡಿಸಿಕೊಳ್ಳುತ್ತಾರೆ.
ಇದಲ್ಲದೇ, ಸ್ವಸಹಾಯ ಗುಂಪು ರಚನೆಯಾದ ನಂತರ, ಈ ಗುಂಪುಗಳ ಸದಸ್ಯರಿಗೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್‌ಮೆಂಟ್ ರೂಪಿಸಿರುವ ತರಬೇತಿ ಘಟಕದ ಪ್ರಕಾರ ತರಬೇತಿ ನೀಡಲಾಗುವುದು. ಹಂತ ಹಂತವಾಗಿ ತರಬೇತಿ ನೀಡಲಾಗುವುದು. ಇದರ ಭಾಗವಾಗಿ, 2022 ರ ಮೇ ಅಂತ್ಯದ ವೇಳೆಗೆ ಮೈಸೂರು ವಲಯದಿಂದ ಯುವ ಸ್ವ-ಸಹಾಯ ಗುಂಪುಗಳನ್ನು ರಚಿಸಲಾಗುವುದು. ಆರ್ಥಿಕ ಸಹಾಯವನ್ನು ಸಹ ಮಾಡಲಾಗುವುದು. ಅವರು ಒಂದು ಗ್ರಾಮ-ಒಂದು ಉತ್ಪನ್ನ ಪರಿಕಲ್ಪನೆಯನ್ನು ರೂಪಿಸಲು ಸಹ ಪ್ರಸ್ತಾಪಿಸುತ್ತಿದ್ದಾರೆ, ಇದರಿಂದಾಗಿ ಯುವ ಸ್ವಸಹಾಯ ಗುಂಪು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ತಮ್ಮ ವ್ಯಾಪಾರವನ್ನು ರಚಿಸಲು ಬಯಸುವ ಒಂದು ಉತ್ಪನ್ನವನ್ನು ಆಯ್ಕೆ ಮಾಡಬಹುದು.
ಉತ್ತಮ ಸಮನ್ವಯಕ್ಕಾಗಿ ಸಮನ್ವಯಗೊಳಿಸಲು ಸಮಿತಿಗಳನ್ನು ರಚಿಸಲಾಗುವುದು. ಈ SHG ಸದಸ್ಯರಿಗೆ ಗುರುತಿನ ಚೀಟಿಗಳನ್ನು ನೀಡಲಾಗುವುದು. ಪ್ರತಿ ತಾಲ್ಲೂಕಿನಲ್ಲಿ ಯುವ ಸ್ಪಂದನ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುವುದು. ಈ ವರ್ಷ, SHG ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರಾರಂಭವಾಗಲಿದೆ.ಹಾಗೂ ಹಂತ ಹಂತವಾಗಿ, ಈ ಗುಂಪುಗಳ ಒಕ್ಕೂಟವನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ರಚಿಸಲಾಗುತ್ತದೆ.
ಈಗ ನಿಮಗೆ ತಿಳಿದೇ ಇದೆ ಎಲ್ಲವಕ್ಕೂ ಒಂದು ದಿನಾಚರಣೆ ಇದೆ. ಪುಸ್ತಕಗಳಿಗೂ ಏಪ್ರಿಲ್ 23 ರಂದು ದಿನವನ್ನ ಆಚರಿಸಲಾಗುತ್ತದೆ. ಪುಸ್ತಕಗಳು ನಿಜಕ್ಕೂ ನಮ್ಮ ಗೆಳೆಯ, ದಾರ್ಶನಿಕ ಮತ್ತು ಮಾರ್ಗದರ್ಶಿ.
ಮೊಟ್ಡಮೊದಲ ಬಾರಿಗೆ ಅಂದರೆ ಏಪ್ರಿಲ್ 23 ,1995 ರಿಂದ ಯುನೆಸ್ಕೋ ಈ ಪುಸ್ತಕಗಳ ಸಮಗ್ರ ಭವಿಷ್ಯದ ಬಗ್ಗೆ ಚಿಂತಿಸಿ ದಿನವನ್ನ ಆಚರಿಸಲು ತೀರ್ಮಾನಿಸಿತು. ಇಲ್ಲಿ ಪುಸ್ತಕಗಳ ಭವಿಷ್ಯ ಅಂದರೆ ಬರಹಗಾರರ ಹಕ್ಕು ಅರ್ಥಾತ್ ಹಕ್ಕು ಸ್ವಾಮ್ಯಗಳ ಬಗ್ಗೆ ಎಲ್ಲರನ್ನೂ ಜಾಗೃತಗೊಳಿಸುವ ದಿನವೂ ಆಗಿದೆ. ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ ಜಗತ್ತಿನ ಮಹಾ ನಾಟಕಕಾರ ವಿಲಿಯಂ ಷೇಕ್ಸ್ಪಿಯರ್ ಮರಣ ಹೊಂದಿದ ದಿನವೂ ಆಗಿದೆ.
ಪುಸ್ತಕಗಳು ಗೆಳೆಯ ಎನ್ನುವ ಸಂಗತಿ ನಮಗೀಗ ಅನುಭವ ವೇದ್ಯ. ಏಕೆಂದರೆ ಕಳೆದ ಎರಡು ವರ್ಷಗಳಲ್ಲಿ ಕಾಡಿದ ಕೋವಿಡ್ ಒಂದು ಪಾಠ ಹೇಳಿತು. ಆಗ ಮನೆಯಿಂದ ಹೊರಹೋಗುವಂತಿಲ್ಲ ಅರ್ಥಾತ್ ಹೋಂ ಕ್ವಾರಂಟೈನ್. ಆಗ ನಮಗೆ ಆಪ್ತವಾಗಿ ಸಿಕ್ಕಿದ್ದು ಓದಲು ಪುಸ್ತಕಗಳು. ಅಂತಾರಾಷ್ಟ್ರಿಯ ಲೆಕ್ಕಾಚಾರದ ಪ್ರಕಾರ ಕೋವಿಡ್ ಅವಧಿಯಲ್ಲಿ ಓದುಗರ ಸಂಖ್ಯೆ ಹಿಂದಿನದಕ್ಕಿಂತ ಇಮ್ಮಡಿಯಾಯಿತಂತೆ.
ಒಳ್ಳೊಳ್ಳೆಯ ಪುಸ್ತಕಗಳಿಗೆ ಸಕತ್ ಮಾರುಕಟ್ಟೆ ಸಿಕ್ಕಿತು. ಪುಸ್ತಕಗಳ ಪೀಳಿಗೆಗೆ ನಾವು ನೀಡುವ ಶಾಶ್ವತ ಉಡುಗೊರೆ ಎಂದೂ ಹೇಳಬಹುದು.ಏಕೆಂದರೆ ಮನುಷ್ಯನ ವಿಚಾರವಂತಿಕೆ ಜೀವನದ ಅನುಭವಗಳು, ಹಿರಿಯರ ಸಾಮಾಜಿಕ ವ್ಯವಸ್ಥೆ ರೀತಿ ನೀತಿಗಳು ನಮಗೆ ಓದುವುದರಿಂದ ಲಭ್ಯ. ಒಂದು ರೀತಿಯ ಅಮೌಖಿಕ ಪರಂಪರೆಯನ್ನ ನಮ್ಮ ಬೆನ್ನಿಗೆ ಇರಿಸಿಕೊಂಡಂತಹ ಅನುಭವವಾಗುತ್ತದೆ. ಒಳ್ಳೆಯ ಪುಸ್ತಕಗಳು ಒಳ್ಳೆಯ ಮಿತ್ರರು.ವಿಶ್ವ ಪುಸ್ತಕ ದಿನ ನಮ್ಮೆಲ್ಲರ ಒಡನಾಡಿಯಾಗಿ ಚಂದದ ಪುಸ್ತಕಗಳು ಇರಲಿ.
ಪ್ರತಿಷ್ಠಿತ ಶಿವಮೊಗ್ಗ ಕಂಟ್ರಿ ಕ್ಲಬ್ ಆವರಣದಲ್ಲಿ ಮೇ 1ರಂದು ನೂತನ ಕ್ರೀಡಾ ಸಂಕೀರ್ಣದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಶಿವಮೊಗ್ಗ ಕಂಟ್ರಿ ಕ್ಲಬ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಡಿ. ಎಸ್. ಅರುಣ್ ಅವರು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು, ಅತ್ಯಾಧುನಿಕ ವ್ಯವಸ್ಥೆಯೊಂದಿಗೆ 5 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗ ಕಂಟ್ರಿ ಕ್ಲಬ್ ಆವರಣದಲ್ಲಿ ದೊಡ್ಡ ಕ್ರೀಡಾ ಸಂಕೀರ್ಣ ನಿರ್ಮಾಣ ಪೂರ್ಣಗೊಂಡಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕ್ರೀಡಾ ಸಂಕೀರ್ಣ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
1991 ರಲ್ಲಿ ಸಮಾನವಯಸ್ಕರು ಸೇರಿ ತುಂಗಾನದಿ ತೀರದಲ್ಲಿ ಮೂರುವರೆ ಎಕರೆ ಪ್ರದೇಶದಲ್ಲಿ ಆರಂಭವಾದ ಶಿವಮೊಗ್ಗ ಕಂಟ್ರಿ ಕ್ಲಬ್ ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಆಗಿರುತ್ತದೆ. ಪ್ರಭಾವಿ ಸಂಸ್ಥೆಯಲ್ಲಿ ಸದೃಢವಾಗಿ ರೂಪುಗೊಳ್ಳುತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಡಿ.ಎಸ್. ಅರುಣ್ ಅವರು ಹೇಳಿದರು.
ಶಿವಮೊಗ್ಗ ಕಂಟ್ರಿ ಕ್ಲಬ್ ನಲ್ಲಿ 1200 ಸದಸ್ಯರು ಇದ್ದಾರೆ. ಎಲ್ಲಾ ಸದಸ್ಯರ ಸಹಕಾರದಿಂದ ಸಕಲ ರೀತಿಯಲ್ಲಿ ಅನುಕೂಲ ಹಾಗೂ ಸೌಲಭ್ಯ ಒದಗಿಸಲಾಗುತ್ತಿದೆ. 1200 ಸಕ್ರಿಯ ಸದಸ್ಯರಿಗೆ ಕ್ರೀಡಾ ಚಟುವಟಿಕೆಗೆ ಪೂರ್ವಕವಾಗಿ ಅನುಕೂಲವಾಗುವಂತೆ ಕ್ರೀಡಾ ಸಂಕೀರ್ಣ ರೂಪಿಸಲಾಗಿದೆ. ರೆಸ್ಟೋರೆಂಟ್ ವ್ಯವಸ್ಥೆಯಿದೆ. ಎಲ್ಲ ಸದಸ್ಯರ ಕನಸು ಮತ್ತು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶಿವಮೊಗ್ಗ ಕಂಟ್ರಿಕ್ಲಬ್ ವೇದಿಕೆಯಾಗಿ ಕೆಲಸ ಮಾಡಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಶಿವಮೊಗ್ಗ ಕಂಟ್ರಿ ಕ್ಲಬ್ ಸದಸ್ಯರ ಅನುಕೂಲಕ್ಕಾಗಿ ಎಲ್ಲಾ ಸೌಲಭ್ಯ ಒಳಗೊಂಡಿರುವ ನೂತನ ಕ್ರೀಡಾ ಸಂಕೀರ್ಣದ ಒಳಾಂಗಣ ಶೇಟಲ್ ಕೋರ್ಟ್, ಬ್ಯಾಂಕೆಟ್ವ ಹಾಲ್, ಹೋಂ ಥಿಯೇಟರ್, ಬೌಲಿಂಗ್, ಮೋಶನ್ ಕ್ರಿಕೆಟ್, ಕೇರಂ, ಚೆಸ್, ಅಧ್ಯಯನ ಕೊಠಡಿ, ಜಿಮ್ ಹೀಗೆ ಹಲವಾರು ಉತ್ತಮ ಹಾಗೂ ಅತ್ಯಾಧುನಿಕ ಸೌಕರ್ಯದ ವ್ಯವಸ್ಥೆ ರೂಪಿಸಲಾಗಿದೆ ಎಂದು ಡಿ.ಎಸ್. ಅರುಣ್ ಕುಮಾರ್ ಅವರು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ಜೆ. ರಘುರಾಮ್, ಸೂಡಾ ಅಧ್ಯಕ್ಷ ನಾಗರಾಜ್, ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಶಿವಮೊಗ್ಗ ಮತ್ತು ರಾಜ್ಯದ ಪ್ರಮುಖ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಎಲ್ಲಾ ಸದಸ್ಯರ ಸಹಕಾರ, ಮಾರ್ಗದರ್ಶನ, ಪ್ರೋತ್ಸಾಹದಿಂದ ಕ್ರೀಡಾ ಸಂಕೀರ್ಣದ ನಿರ್ಮಾಣ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸುವ ಆಶಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಕಂಟ್ರಿ ಕ್ಲಬ್ ನೂತನ ಕ್ರೀಡಾ ಸಂಕಿರಣದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಭೂಪಾಳಂ ಶಶಿಧರ್, ಕಾರ್ಯದರ್ಶಿ ಜಿ.ಎನ್. ಪ್ರಕಾಶ್, ಉಪಾಧ್ಯಕ್ಷರಾದ ಎಚ್. ಜಿ. ಅಶೋಕ್, ಖಜಾಂಚಿ ಮದನ್ ಲಾಲ್, ನಿರ್ದೇಶಕರಾದ ಕಡಿದಾಳ್ ಸದಾನಂದ್ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವಿಜಯನಗರ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಟಸಾರ್ವಭೌಮ ಡಾ.ರಾಜ್‍ಕುಮಾರ್ ಜಯಂತಿಯನ್ನು ಏ.24ರಂದು ಬೆಳಗ್ಗೆ 9.30ಕ್ಕೆ ಹೊಸಪೇಟೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಚರಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಮಹೇಶಬಾಬು ಅವರು ಮಾಹಿತಿ ನೀಡಿದ್ದಾರೆ.
ವಿವಿಧ ಇಲಾಖೆಗಳ ಅಧಿಕಾರಿಗಳು,ಸಂಘ-ಸಂಸ್ಥೆಗಳ ಮುಖಂಡರು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಏ.24ರಂದು ಸಂಜೆ 5ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ರಾಜಕುಮಾರ್ ಜನ್ಮದಿನಾಚರಣೆ ಮತ್ತು 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಗಜಗರ್ಭ ಅಂದ್ರೆ ಬಹಳ ತಡವಾಗಿ ಪ್ರಸವಕ್ರಿಯೆ ಆಗುವುದಕ್ಕೆ ನಮ್ಮಲ್ಲಿ ಈ ಆಡುಮಾತಿದೆ. ಪ್ರಾಣಿತಜ್ಞರ ಪ್ರಕಾರ ಆನೆಗಳು ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ಪ್ರಸವಿಸುತ್ತವೆ.ವೈದ್ಯರ ಪ್ರಕಾರ ಬಸಿರಿನ ಅವಧಿ ಹದಿನೆಂಟರಿಂದ ಇಪ್ಪತ್ತೆರಡು ತಿಂಗಳು. ಆದರೆ ಮನುಷ್ಯರಲ್ಲಿ ನವಮಾಸಗಳು ಫಿಕ್ಸ್. ಮನುಷ್ಯರಿಗಿಂತ ಎರಡು ಪಟ್ಟು ಅವಧಿ. ಈಗ ಪ್ರಾಣಿಪ್ರಿಯರಿಗೊಂದು ಅಚ್ಚರಿಯ ಸುದ್ದಿ. ಆನೆಯಮ್ಮನಿಗೆ ಮಗು ಜನನ. ಅದೂ ಅವಳಿಜವಳಿ!. ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಎರಡು ಮರಿಗಳು ಕಣ್ಬಿಟ್ಟಿವೆ.
ತಮ್ಮ ಕಾಲ ಮೇಲೆ ತಾವೇ ನಿಂತು ಕೊಂಡಿವೆ. ಬಾಣಂತಿ ಆನೆಯಮ್ಮನ ಬಳಿ ಯಾರೂ ಸುಳಿಯುವ ಹಾಗಿಲ್ಲ.ಮನುಷ್ಯರಾದರೆ ಮಗು ಗಂಡೋ?ಹೆಣ್ಣೋ? ಗೊತ್ತಾಗಿಬಿಡುತ್ತದೆ.ಆದರೆ ವನ್ಯ ಪರಿಸರದ ಆನೆಗಳ ಬಳಿಗೆ ಹೋಗಿ ಲಿಂಗ ನಿರ್ಧರಿಸಲು ಎಂಟೆದೆ ಧೈರ್ಯ ಬೇಕು. ಅವುಗಳ ಚಲನವಲನ ದೂರದಿಂದ ವೀಕ್ಷಿಸಬೇಕಷ್ಟೆ.ಮುದ್ದಿನ ಮರಿಗಳ ಜೊತೆಗಿರುವ ತಾಯಿಗೆ ಮೈಯೆಲ್ಕಾ ಕಣ್ಣಾಗಿರುತ್ತದೆ. ಮನುಷ್ಯ ಪ್ರಾಣಿ ವಾಸನೆ ಬಂದರೆ ಬಿಡುವುದಿಲ್ಲ.!
ಪಶುವೈದ್ಯರು ಹೇಳುವ ಪ್ರಕಾರ ಅವಳಿಜವಳಿ ಪ್ರಸವ ಬಹಳ ಅಪರೂಪ. ಅಲ್ಲಿನ ಗ್ರಾಮವಾಸಿಗಳು ನೋಡಿದಂತೆ ಸುಮಾರು 40 ವರ್ಷದ ಹಿಂದೆ ಹೀಗೆ, ಈ ಅವಳಿಜವಳಿ ಜನನ ಆಗಿತ್ತಂತೆ. ಬಂಡಿಪುರ ಅರಣ್ಯದ ಫಾಸಲೆಯ ಪಶುವೈದ್ಯ ಡಾ.ನಾಗರಾಜ್ ಅವರು ತಮ್ಮ ಎರಡೂವರೆ ದಶಕದ ವೃತ್ತಿಸೇವೆಯಲ್ಲಿ ಇದೇ ಪ್ರಥಮ ಟ್ವಿನ್ಸ್ ಮರಿಗಳನ್ನ ನೋಡಿರುವುದು ಎನ್ನುತ್ತಾರೆ.ಪ್ರಸವದ ನಂತರ ಮರಿಗಳೊಡನೆ ತಾಯಿ ಆನೆ ತನ್ನ ಗುಂಪನ್ನ ಸೇರಿಕೊಳ್ಳುವುದು ರೂಢಿಯಂತೆ. ತಾಯಿಯ ಹೃದಯವೇ ಹಾಗೆ.ಜನಿಸಿದ ಮಗುವಿನ ರಕ್ಷಣೆ. ಸದ್ಯ ಈ ಆನೆ ಮರಿಯೊಡನೆ ಆನೆಗಳ ಹಿಂಡು ಸೇರಿಕೊಂಡಿತು. ಮಗು ಮತ್ತು ಬಾಣಂತಿ ಹುಷಾರಾಗಿದ್ದಾರ? ಸಾಮಾನ್ಯ ನಮ್ಮಲ್ಲಿ ಯಾರಾದರೂ ಕೇಳುವ ಪ್ರಶ್ನೆ.
ಹೌದು ..( ಪತ್ರಿಕಾ ವರದಿ ಪ್ರಕಾರ) ತಾಯಿ ಮಕ್ಕಳು ಆರಾಮಾಗಿದ್ದಾರೆ. ಬಂಡಿಪುರ ಅರಣ್ಯಕ್ಕೆ ಪ್ರವಾಸ ಬಂದವರ ಮೊಬೈಲು,ಕ್ಯಾಮರಾಗಳಿಗೆ ಈ ಅಪರೂಪದ ತಾಯಿ ,ಅವಳಿಜವಳಿ ಮಕ್ಕಳು ಶಾನೆ ಸೆರೆಯಾಗಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ,ವಿಡಿಯೋಗಳು ಟ್ರೋಲ್ ಆಗಿವೆ…!
ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರದ ಸಾಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಪ್ರತಿಯೊಬ್ಬ ರೈತರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಅವರು ಹೇಳಿದ್ದಾರೆ.
ಸೆಲ್ವಕುಮಾರ್ ಅವರುನಿನ್ನೆ (ಶುಕ್ರವಾರ) ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ಪಿಎಂ ಕಿಸಾನ್ ಯೋಜನೆಯಡಿ ಜಿಲ್ಲೆಯಲ್ಲಿ 1.70ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಇದರ ಪೈಕಿ 1.53ಲಕ್ಷ ಅರ್ಹ ಖಾತೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ತಲಾ 10ಸಾವಿರ ರೂ. ಸಹಾಯಧನ ಒದಗಿಸುತ್ತಿದೆ. ಆದರೆ, ಜಿಲ್ಲೆಯಲ್ಲಿ ಕೇವಲ 1.41ಲಕ್ಷ ರೈತರು ಮಾತ್ರ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದೆ. ಸಾಲ ಪಡೆಯಲು ಅರ್ಹ ರೈತರ ಸಂಖ್ಯೆ ಹೆಚ್ಚಿರುವುದು ಸ್ಪಷ್ಟವಾಗಿದೆ. ಹಾಲು ಉತ್ಪಾದಕರು, ಮೀನುಗಾರರು ಸೇರಿದಂತೆ ಎಲ್ಲಾ ರೈತರಿಗೂ ಸಾಲ ಸೌಲಭ್ಯ ಒದಗಿಸಲು ಅನುಕೂಲವಾಗುವಂತೆ ಪ್ರತಿಯೊಬ್ಬ ಅರ್ಹರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಬೇಕು. ಇದಕ್ಕಾಗಿ ಅಭಿಯಾನದ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.
ಖಾರೀಫ್ ಬಿತ್ತನೆಗೆ ಅಗತ್ಯ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಈಗಲೇ ಸಿದ್ಧತೆಯನ್ನು ಆರಂಭಿಸಬೇಕು. ಕಳೆದ ಒಂದು ವಾರದಲ್ಲಿ ಆಗುತ್ತಿರುವ ಗಾಳಿ ಮಳೆಯಿಂದ ಕೆಲವು ಭಾಗಗಳಲ್ಲಿ ಅಡಿಕೆ ಹಾಗೂ ಬಾಳೆ ತೋಟಗಳಿಗೆ ಉಂಟಾಗಿರುವ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಸೆಲ್ವಕುಮಾರ್ ಅವರು ಹೇಳಿದ್ದಾರೆ.
ಗಂಗಾಕಲ್ಯಾಣ ಯೋಜನೆಯಡಿ ವಿವಿಧ ಅಭಿವೃದ್ಧಿ ನಿಗಮಗಳು ಕೈಗೊಂಡಿರುವ ಕಾಮಗಾರಿಗಳಿಗೆ ಆದಷ್ಟು ಬೇಗನೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವ ಒಟ್ಟು 151 ಅರ್ಜಿಗಳು ಹಾಗೂ ಕುಡಿಯುವ ನೀರು ಯೋಜನೆಗಳ 86 ಅರ್ಜಿಗಳು ಬಾಕಿಯಿದೆ. ಇವುಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆಯನ್ನು ತೆರೆಯಲು ಹೊಸನಗರ ತಾಲೂಕಿನಲ್ಲಿ ಜಮೀನು ಗುರುತಿಸಲಾಗಿದೆ. ಅದನ್ನು ಅಂತಿಮಗೊಳಿಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 11ಖಾಸಗಿ ಗೋಶಾಲೆಗಳಿವೆ. ಕಳೆದ ಹಣಕಾಸು ಸಾಲಿನಲ್ಲಿ ಒಟ್ಟು 27ಲಕ್ಷ ರೂ. ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಶಿವಯೋಗಿ ಎಲಿ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಎಲ್ಲಾ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಯುವಕನಿಗೆ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಟಿ-1ರ ನ್ಯಾಯಾಧೀಶರು ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ರೂ.ದಂಡ ವಿಧಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ದುಮ್ಮಳ್ಳಿಯ ಡಿ.ರಘು ಶಿಕ್ಷೆಗೆ ಒಳಗಾಗಿದ್ದಾನೆ. ಈತ 2020ರ ಮೇ 6ರಂದು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದನು. ಸಿಐಡಿ ಘಟಕದ ಸೈಬರ್ ಟಿಪ್‌ಲೈನ್ ನೀಡಿದ ಮಾಹಿತಿ ಆಧಾರದ ಮೇಲೆ ಶಿವಮೊಗ್ಗದ ಸಿಇಎನ್ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖಾಧಿಕಾರಿ ಸೈಬರ್ ಠಾಣೆ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್ ಅವರು ರಘು ವಿರುದ್ಧ 2020ರ ಡಿ.24ರಂದು ನ್ಯಾಯಾಲಯಕ್ಕೆ ದೋಷಾರೋಷಣ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ನಿನ್ನೆ (ಶುಕ್ರವಾರ) ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಎಚ್.ದಯಾನಂದ್ ಅವರು ರಘು ಮೇಲಿನ ಆರೋಪಗಳು ಸಾಬೀತಾದ ಬಳಿಕ,ಆತನಿಗೆ 2 ವರ್ಷ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿಯಾಗಿ 6 ತಿಂಗಳು ಸದಾ ಕಾರಾಗೃಹ ಶಿಕ್ಷೆ ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ವಾದ ಮಂಡಿಸಿದ್ದರು.
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನ, ಈಗ ವಿದ್ಯುತ್ ಸಮಸ್ಯೆ ಕೂಡ ಎದುರಿಸುವ ಪರಿಸ್ಥಿತಿ ಬಂದೊಡ್ಡಿದೆ. ಅಲ್ಲಿನ ನಾಗರಿಕರು ಕತ್ತಲಿನಲ್ಲಿ ತಮ್ಮ ಜೀವನ ಕಳೆಯುವ ಕೆಟ್ಟ ಪರಿಸ್ಥಿತಿ ಎದುರಾಗಿದೆ.
ರಂಜಾನ್ ತಿಂಗಳ ಹಿನ್ನೆಲೆಯಲ್ಲಿ ಉಪವಾಸ ಆಚರಿಸುತ್ತಿರುವ ಮುಸ್ಲಿಮರು ಇಫ್ತಾರ್ ಅಂದರೆ ರಾತ್ರಿಯ ಊಟ ಮತ್ತು ಸೆಹ್ರಿ ಅಂದರೆ ನಸುಕಿನ ಜಾವದ ಊಟ ಕತ್ತಲಲ್ಲೇ ಮಾಡುವಂತಾಗಿದೆ.
ಹಣಕಾಸಿನ ಬಿಕ್ಕಟ್ಟಿನಿಂದಾಗಿ ವಿದ್ಯುತ್ ಉತ್ಪಾದನೆಗೆ ಬೇಕಿರುವ ಇಂಧನ ಕೊರತೆ ಇದೆ. ಇನ್ನೊಂದು ಕಡೆ ಕೆಲವು ಪ್ರಮುಖ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ವಹಣೆಗೆ ತೊಂದರೆಯಾಗಿದೆ. ಆದ್ದರಿಂದ ದೇಶದಲ್ಲಿ ದಿನಕ್ಕೆ ಕನಿಷ್ಠ 12 ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಕರಾಚಿ, ಹೈದರಾಬಾದ್, ರಾವಲ್ಪಿಂಡಿ, ಲಾಹೋರ್, ಫೈಸಲಾಬಾದ್ ಮತ್ತು ಸಿಯಾಲ್‌ಕೋಟ್ ನಗರಗಳಲ್ಲಿ ದಿನಕ್ಕೆ 4-10 ಗಂಟೆಗಳ ಕಾಲ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ 10-12 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಮಳೆಯಿಲ್ಲದೆ ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾದ ಕಾರಣ ಜಲವಿದ್ಯುತ್ ಉತ್ಪಾದನೆಯೂ ಕಡಿಮೆಯಾಗಿದೆ. ಇದು ಸಹ ವಿದ್ಯುತ್ ಅಭಾವ ಸೃಷ್ಟಿಯಾಗಲು ಪ್ರಮುಖ ಕಾರಣ ಎಂದು ಮಾಧ್ಯಮಗಳು ತಮ್ಮ ವರದಿಯಲ್ಲಿ ತಿಳಿಸಿದೆ.