ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನ, ಈಗ ವಿದ್ಯುತ್ ಸಮಸ್ಯೆ ಕೂಡ ಎದುರಿಸುವ ಪರಿಸ್ಥಿತಿ ಬಂದೊಡ್ಡಿದೆ. ಅಲ್ಲಿನ ನಾಗರಿಕರು ಕತ್ತಲಿನಲ್ಲಿ ತಮ್ಮ ಜೀವನ ಕಳೆಯುವ ಕೆಟ್ಟ ಪರಿಸ್ಥಿತಿ ಎದುರಾಗಿದೆ.
ರಂಜಾನ್ ತಿಂಗಳ ಹಿನ್ನೆಲೆಯಲ್ಲಿ ಉಪವಾಸ ಆಚರಿಸುತ್ತಿರುವ ಮುಸ್ಲಿಮರು ಇಫ್ತಾರ್ ಅಂದರೆ ರಾತ್ರಿಯ ಊಟ ಮತ್ತು ಸೆಹ್ರಿ ಅಂದರೆ ನಸುಕಿನ ಜಾವದ ಊಟ ಕತ್ತಲಲ್ಲೇ ಮಾಡುವಂತಾಗಿದೆ.
ಹಣಕಾಸಿನ ಬಿಕ್ಕಟ್ಟಿನಿಂದಾಗಿ ವಿದ್ಯುತ್ ಉತ್ಪಾದನೆಗೆ ಬೇಕಿರುವ ಇಂಧನ ಕೊರತೆ ಇದೆ. ಇನ್ನೊಂದು ಕಡೆ ಕೆಲವು ಪ್ರಮುಖ ವಿದ್ಯುತ್ ಉತ್ಪಾದನಾ ಘಟಕಗಳ ನಿರ್ವಹಣೆಗೆ ತೊಂದರೆಯಾಗಿದೆ. ಆದ್ದರಿಂದ ದೇಶದಲ್ಲಿ ದಿನಕ್ಕೆ ಕನಿಷ್ಠ 12 ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಕರಾಚಿ, ಹೈದರಾಬಾದ್, ರಾವಲ್ಪಿಂಡಿ, ಲಾಹೋರ್, ಫೈಸಲಾಬಾದ್ ಮತ್ತು ಸಿಯಾಲ್‌ಕೋಟ್ ನಗರಗಳಲ್ಲಿ ದಿನಕ್ಕೆ 4-10 ಗಂಟೆಗಳ ಕಾಲ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ 10-12 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಮಳೆಯಿಲ್ಲದೆ ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾದ ಕಾರಣ ಜಲವಿದ್ಯುತ್ ಉತ್ಪಾದನೆಯೂ ಕಡಿಮೆಯಾಗಿದೆ. ಇದು ಸಹ ವಿದ್ಯುತ್ ಅಭಾವ ಸೃಷ್ಟಿಯಾಗಲು ಪ್ರಮುಖ ಕಾರಣ ಎಂದು ಮಾಧ್ಯಮಗಳು ತಮ್ಮ ವರದಿಯಲ್ಲಿ ತಿಳಿಸಿದೆ.