Friday, February 27, 2026
Friday, February 27, 2026
Home Blog Page 1610

ಡಾ.ರಾಜ್‍ಕುಮಾರ್ ಜಯಂತಿ ಆಚರಣೆ

0

ಶಿವಮೊಗ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಾರ್ತಾ ಇಲಾಖೆ ಕಚೇರಿಯಲ್ಲಿ ಏ.24 ರಂದು ಕನ್ನಡದ ಮೇರುನಟ ಡಾ.ರಾಜ್‍ಕುಮಾರ್‍ರವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಟ ಅರ್ಪಿಸುವ ಮೂಲಕ ಆಚರಿಸಲಾಯಿತು.
ಈ ವೇಳೆ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್, ಸಹಾಯಕ ನಿರ್ದೇಶಕ ಮಾರುತಿ.ಆರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಉಕ್ರೇನ್ ಯುದ್ಧ ಸನ್ನಿವೇಶದಲ್ಲಿ ಜನರಿಗೆ ಆಹಾರದ ಅಭಾವ

0

ರಷ್ಯಾ ಸೇನೆ ಬಹುತೇಕ ವಶಕ್ಕೆ ಪಡೆದುಕೊಂಡಿರುವ ಬಂದರು ನಗರ ಮರಿಯುಪೋಲ್‌ನಲ್ಲಿ ಉಳಿದಿರುವ ಉಕ್ರೇನ್‌ನ ಕೊನೆಯ ತುಕಡಿಯನ್ನು ಹೊರಹಾಕುವ ಉದ್ದೇಶದಿಂದ ಇಲ್ಲಿನ ಉಕ್ಕು ಕಾರ್ಖಾನೆಯ ಮೇಲೆ ರಷ್ಯಾ ಪಡೆಗಳು ವಾಯುದಾಳಿ ನಡೆಸಿವೆ ಎಂದು ತಿಳಿದುಬಂದಿದೆ.

ರಷ್ಯಾದ ಉಕ್ಕು ಕಾರ್ಖಾನೆಯಲ್ಲಿ ವಶಪಡಿಸಿಕೊಳ್ಳಲು ಸುಮಾರು 2000 ಯೋಧರು ಹೋರಾಟ ನಡೆಸುತ್ತಿದ್ದಾರೆ.

ಅತಿ ದೂರಕ್ಕೆ ದಾಳಿ ಮಾಡಬಲ್ಲ ವಿಮಾನಗಳನ್ನುಬಳಸಿ ರಷ್ಯಾ ದಾಳಿ ನಡೆಸುತ್ತಿದೆ. ಮರಿಯುಪೋಲ್‌ನಲ್ಲಿ ಉಳಿದಿರುವ ಜನರಿಗೆ ಆಹಾರದ ಅಭಾವ ಎದುರಾಗಿದೆ. ಇದೇ ವೇಳೆ ರಾಜಧಾನಿ ಕೀವ್‌ನಿಂದ ತನ್ನ ಸೇನೆಯನ್ನು ಹಿಂಪಡೆಯುತ್ತಿರುವ ರಷ್ಯಾ ಉಳಿದ ನಗರ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ.

ರಷ್ಯಾ-ಉಕ್ರೇನ್‌ ನಡುವೆ ಯುದ್ಧ ನಡೆಯುತ್ತಿರುವ ನಡುವೆಯೇ, ಅಮೆರಿಕದ ವಿದೇಶಾಂಗ ಸಚಿವ ಆಯಂಟನಿ ಬ್ಲಿಂಕನ್‌ ಮತ್ತು ರಕ್ಷಣಾ ಕಾರ‍್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವರು ಶೀಘ್ರದಲ್ಲೇ ಉಕ್ರೇನಿಗೆ ಭೇಟಿ ನೀಡಲಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ತಿಳಿಸಿದ್ದಾರೆ.

ಆದರೆ ಅಮೆರಿಕ ಅಧ್ಯಕ್ಷರ ನಿವಾಸ ಶ್ವೇತಭವನ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ರಷ್ಯಾ-ಉಕ್ರೇನ್‌ ನಡುವೆ ಕಳೆದ 60 ದಿನಗಳಿಂದ ಭೀಕರ ಯುದ್ಧ ನಡೆಯುತ್ತಿದ್ದು ಸಾವಿರಾರು ಮಂದಿ ರಷ್ಯಾದ ಕ್ರೌರ‍್ಯಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಯುದ್ಧ ಆರಂಭವಾದಾಗಿನಿಂದಲೂ ಬಂದರು ನಗರ ಮಾರಿಯುಪೋಲ್‌ ಮೇಲೆ ರಷ್ಯಾ ಭೀಕರ ದಾಳಿ ನಡೆಸುತ್ತಲೇ ಇದೆ.

ಖೇರ್ಸನ್‌ನಲ್ಲಿ ನಿರ್ಮಿಸಲಾಗಿದ್ದ ರಷ್ಯಾದ ಸೇನಾ ಕಮಾಂಡ್‌ ನೆಲೆಯನ್ನು ನಾಶ ಮಾಡಿರುವುದಾಗಿ ಉಕ್ರೇನ್‌ ಸೇನೆ ಹೇಳಿದೆ. ಶುಕ್ರವಾರ ಈ ದಾಳಿ ನಡೆಸಲಾಗಿದ್ದು, ಇಬ್ಬರು ಸೇನಾ ಜನರಲ್‌ಗಳು ಹತರಾಗಿದ್ದಾರೆ.
ಈ ಕಮಾಂಡ್‌ನಲ್ಲಿ 50ಕ್ಕೂ ಹೆಚ್ಚು ರಷ್ಯಾ ಸೇನೆಯ ಹಿರಿಯ ಅಧಿಕಾರಿಗಳಿದ್ದರು ಎಂದು ಉಕ್ರೇನ್‌ ಹೇಳಿದೆ.

ಸಾಲ ಮನ್ನಾ ದಿಂದ ರೈತರ ಆತ್ಮಹತ್ಯೆ ಕಡಿಮೆಯಾಗಿದೆಯೆಂದು ಒಪ್ಪಲಾಗದು

0

ರಾಜ್ಯದಲ್ಲಿ ರಾಜಕೀಯವಾಗಿ ತಲ್ಲಣ ಮೂಡಿಸುತ್ತಿದ್ದ ರೈತರ ಆತ್ಮಹತ್ಯೆ ಪ್ರಕರಣಗಳ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಇಳಿಕೆಮುಖವಾಗುತ್ತಿವೆ.‌

ಒಂದು ಕಾಲ ಘಟ್ಟದಲ್ಲಿ ಸಮೂಹ ಸನ್ನಿ ರೀತಿ ರೈತರು ನೇಣಿಗೆ ಶರಣಾಗುತ್ತಿದ್ದುದು ಸರ್ಕಾರಗಳಿಗೆ ಬಹು ದೊಡ್ಡ ತಲೆನೋವಾಗಿತ್ತು. ಆದರೆ, ಇತ್ತೀಚಿಗಿನ ವರ್ಷಗಳಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಕಡಿಮೆಯಾಗುತ್ತಿವೆ ಎಂದು ತಿಳಿದುಬಂದಿದೆ.

ರೈತರ ಆತ್ಮಹತ್ಯೆಗಳು ರಾಜಕೀಯ ಗುದ್ದಾಟದ ಕೇಂದ್ರ ಬಿಂದುವಾಗಿವೆ. ಕರ್ನಾಟಕ ರಾಜ್ಯ ಇಂಥ ರಾಜಕೀಯ ಕಂಪನಕ್ಕೆ ಸಾಕ್ಷಿಯಾಗಿದೆ.

ಎಸ್.ಎಂ.ಕೃಷ್ಣ ಅಧಿಕಾರವಧಿಯಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆ ಸರಣಿ ಸರ್ಕಾರವನ್ನೇ ಅಲುಗಾಡಿಸಿತ್ತು. ಸಾಲು ಸಾಲು ಬರದ ಹಿನ್ನೆಲೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿದ್ದವು.‌ ಪ್ರತಿ ದಿನ ರೈತರ ಆತ್ಮಹತ್ಯೆ ಪ್ರಕರಣ ಬಗ್ಗೆ ಎಸ್.ಎಂ.ಕೃಷ್ಣ ವಿರುದ್ಧ ಪ್ರತಿಪಕ್ಷಗಳು ಮುಗಿ ಬಿದ್ದಿದ್ದವು.‌ ಬಳಿಕ ರೈತರ ಹಾಗೂ ಗ್ರಾಮೀಣ ಭಾಗದ ಜನರ ಆಕ್ರೋಶಕ್ಕೆ ತುತ್ತಾಗಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನವಾಣೆಯಲ್ಲಿ ಸೋತು ಅಧಿಕಾರ ಕಳೆದುಕೊಳ್ಳಬೇಕಾಯಿತು. 1998ರಿಂದ 2006ರವರೆಗೆ ರಾಜ್ಯದಲ್ಲಿ ಸುಮಾರು 19,000 ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗಿವೆ. ಇದರಲ್ಲಿ ವೈಯ್ಯಕ್ತಿಕ‌ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಸೇರಿವೆ ಎಂದು ಹೇಳಲಾಗಿದೆ.

ಉತ್ತಮ ಮಳೆ-ಬೆಳೆ, ಸಾಲ‌ಮನ್ನದಿಂದಾಗಿ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅನ್ನದಾತನ ಆತ್ಮಹತ್ಯೆ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಅದರಲ್ಲೂ ಕಳೆದ ನಾಲ್ಕು ವರ್ಷಗಳಲ್ಲಿ ನೇಗಿಲಯೋಗಿಯ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗುತ್ತಿರುವುದು ಸರ್ಕಾರವೂ ಸೇರಿ ನಾವೆಲ್ಲರೂ ನಿಟ್ಟುಸಿರು ಬಿಡುವ ವಿಚಾರವಾಗಿದೆ. ಆವತ್ತು ರಾಜಕೀಯವಾಗಿ ಬಿರುಗಾಳಿ ಎಬ್ಬಿಸುತ್ತಿದ್ದ ರೈತರ ಆತ್ಮಹತ್ಯೆ ಪ್ರಕರಣಗಳು ಸದ್ಯ ಇಳಿಮುಖವಾಗಿವೆ.

2018-19ರಲ್ಲಿ ಆರ್ಥಿಕ ಸಂಕಷ್ಟಕ್ಕೆ ರೈತರ ಆತ್ಮಹತ್ಯೆ ಪ್ರಕರಣ 867 ದಾಖಲಾಗಿದ್ದರೆ, 2019- 20ರಲ್ಲಿ 884 ಹಾಗೂ 2020-21ರಲ್ಲಿ 637 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಅಂಕಿ-ಅಂಶ ಪರಿಹಾರಕ್ಕಾಗಿ ಸರ್ಕಾರ ಪರಿಗಣಿಸಿದ ಅರ್ಹ ಆತ್ಮಹತ್ಯೆ ಪ್ರಕರಣವಾಗಿವೆ. ರೈತರ ಆತ್ಮಹತ್ಯೆ ಇಳಿಮುಖವಾಗುತ್ತಿರುವುದರಿಂದ ಇತ್ತೀಚಿನ‌ ಕೆಲ ವರ್ಷಗಳಿಂದ ಅದು ರಾಜಕೀಯ ಹೊಯ್ದಾಟದ ವಿಚಾರವಾಗಿ ಮುನ್ನಲೆಗೆ ಬರುತ್ತಿಲ್ಲ.

ಇದಕ್ಕೆ ಪ್ರಮುಖ ಕಾರಣ ಉತ್ತಮ ಮುಂಗಾರು, ಹಿಂಗಾರು. ಕಳೆದ ನಾಲ್ಕು ವರ್ಷಗಳಲ್ಲಿ ಬರಗಾಲ ಕಣ್ಮರೆಯಾಗಿದ್ದು, ಉತ್ತಮ ಮಳೆ, ಬೆಳೆಯಾಗುತ್ತಿದೆ. ಇದರ ಜೊತೆಗೆ ಸರ್ಕಾರದಿಂದ ರೈತರ ಸಾಲ‌ಮನ್ನಾವೂ ದೊಡ್ಡ ಕೊಡುಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರ, ಜಗದೀಶ್ ಶೆಟ್ಟರ್ ಸರ್ಕಾರ, ಕುಮಾರಸ್ವಾಮಿಯವರ ಮೈತ್ರಿ ಸರ್ಕಾರದಲ್ಲಿನ ಸಾಲ ಮನ್ನಾ ಯೋಜನೆ ರೈತರ ನೆರವಿಗೆ ಬಂದಿದೆ. ಇನ್ನು ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಪರ ಯೋಜನೆಗಳಿಂದ ಆತ್ಮಹತ್ಯೆ ಪ್ರಕರಣ ಇಳಿಮುಖ‌ವಾಗುತ್ತಿವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ರೈತ ಮುಖಂಡರು ಈ ವಾದವನ್ನು ಅಲ್ಲಗಳೆದಿದ್ದಾರೆ.‌ ಸಾಲ‌ಮನ್ನಾದಿಂದ ರೈತರ ಆತ್ಮಹತ್ಯೆ ಕಡಿಮೆಯಾಗಿಲ್ಲ. ಕೋವಿಡ್‌ನಿಂದ ರೈತರು ಮಾನಸಿಕವಾಗಿ ಕುಗ್ಗಿದ್ದಾರೆ. ಅವರ ಸಮಸ್ಯೆ ಉಲ್ಬಣವಾಗಿದೆ. ಸರ್ಕಾರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಲು ಕ್ರಮವಹಿಸಬೇಕು. ಆಗ ರೈತರಿಗೆ ಅನುಕೂಲವಾಗಲಿದೆ. ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ಇಳಿಮುಖವಾಗಿವೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯ ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ಇಳಿಮುಖವಾಗಿವೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯ ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಡಾ.ರಾಜ್ ಅವರ ಸಿನಿಪಯಣ ಅಧ್ಯಯನ ಯೋಗ್ಯ- ಬೊಮ್ಮಾಯಿ

0

ಚಿತ್ರರಂಗಕ್ಕೆ ರಾಜ್ಯ ಸರ್ಕಾರ ಸದಾ ಬೆಂಬಲವಾಗಿದೆ. ಈ ವರ್ಷವೇ ಮೈಸೂರಿನಲ್ಲಿ ಚಿತ್ರ ನಗರಿ ನಿರ್ಮಾಣ ಆರಂಭಿಸಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ಸರ್ಕಾರದಿಂದ ರಾಜ್‌ಕುಮಾರ್‌ ಜನ್ಮದಿನ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಇಲಾಖೆ ಏರ್ಪಡಿಸಿದ್ದ ಡಾ.ರಾಜ್‌ಕುಮಾರ್‌ ಅವರ ಜನ್ಮದಿನಾಚರಣೆ ಮತ್ತು 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸಿಯನ್ನು ಶೀಘ್ರ ನೀಡಲಾಗುವುದು ಎಂದರು.

ಡಾ.ರಾಜ್‌ಕುಮಾರ್‌ ಅವರ ಬಾಲ್ಯ, ಸಿನಿ ಪಯಣ, ಪಾತ್ರದಲ್ಲಿ ಮಾಡುತ್ತಿದ್ದ ಪರಕಾಯ ಪ್ರವೇಶದ ಬಗ್ಗೆ ಅಧ್ಯಯನ ನಡೆಯಬೇಕು. ರಾಜ್‌ ಕುಮಾರ್‌ ಅವರ ಪ್ರತಿ ಚಿತ್ರವೂ ವಿಭಿನ್ನವಾಗಿದ್ದು ಅದ್ಭುತವಾಗಿ ಮೂಡಿ ಬಂದಿವೆ. ಪೌರಾಣಿಕ, ಸಾಂಸಾರಿಕ, ಬಾಂಡ್‌ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಅಮೋಘವಾಗಿ ನಟಿಸಿದ್ದಾರೆ.

ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಜನಿಸಿದಾಗ ಇದ್ದ ಮುಗ್ಧತೆ ಕೊನೆಯವರೆಗೂ ಹಾಗೆಯೇ ಇತ್ತು. ಸ್ಥಿತಪ್ರಜ್ಞೆ ಕಳೆದುಕೊಳ್ಳಲಿಲ್ಲ. ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ವೈಜ್ಞಾನಿಕ ಅಧ್ಯಯನ ನಡೆಯುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ರಾಜಕಾರಣಿಗಳು ಚುನಾವಣೆಯಲ್ಲಿ ಜಯಗಳಿಸಿದಾಗ, ಚಿತ್ರಗಳು ಯಶಸ್ವಿಯಾದಾಗ ನಟ-ನಟಿಯರ ಬಾಡಿ ಲಾಂಗ್ವೇಜ್‌ ಬದಲಾಗುತ್ತದೆ. ನಡೆಯುವ ಧಾಟಿಯೇ ವಿಭಿನ್ನವಾಗಿರುತ್ತದೆ. ಆದರೆ ಇಷ್ಟೆಲ್ಲಾ ಸಾಧನೆ ಮಾಡಿದರೂ ರಾಜ್‌ಕುಮಾರ್‌ ಅವರು ಸಮಚಿತ್ತರಾಗಿಯೇ ಇದ್ದರು. ಕನ್ನಡ ನಾಡಿನಲ್ಲಿ ಜನಿಸಿ ನಮಗೆಲ್ಲಾ ಆದರ್ಶವಾಗಿದ್ದಾರೆ ಎಂದು ಬಣ್ಣಿಸಿದರು.

ಭಾರತದ ಚಲನಚಿತ್ರ ರಂಗದಲ್ಲಿ ರಾಜ್‌ಕಪೂರ್‌, ಎನ್‌.ಟಿ.ರಾಮರಾವ್‌, ಎಂ.ಜಿ.ರಾಮಚಂದ್ರನ್‌ ಸೇರಿದಂತೆ ಕೆಲವೇ ಕೆಲವು ಶೋಮ್ಯಾನ್‌ಗಳಿದ್ದಾರೆ. ಆದರೆ ರಾಜ್‌ಕುಮಾರ್‌ ಅವರು ಅತ್ಯಂತ ಶ್ರೇಷ್ಠ ಶೋಮ್ಯಾನ್‌ ಆಗಿದ್ದಾರೆ. ಯಾರ ಮನಸ್ಸನ್ನೂ ನೋಯಿಸಿದವರಲ್ಲ. ಕಾಡುಗಳ್ಳ ವೀರಪ್ಪನ್‌ನಿಂದ ಅಪಹರಣವಾಗಿದ್ದರೂ ವೀರಪ್ಪನ್‌ ಬಗ್ಗೆ ಕೆಟ್ಟದಾಗಿ ಮಾತನಾಡಲಿಲ್ಲ. ರಾಜ್‌ಕುಮಾರ್‌ ಅವರ ಅಪಾರ ಸಾಧನೆಯ ಹಿಂದೆ ಪಾರ್ವತಮ್ಮ ಅವರಿದ್ದಾರೆ ಎಂದು ಹೇಳಿದರು.

ನಟ ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿ, ತಂದೆಯವರು ಆತ್ಮಕತೆ ಬರೆಯವುದಕ್ಕೆ ಒಪ್ಪಿರಲಿಲ್ಲ. ಆತ್ಮ ದೇಹ ತ್ಯಜಿಸಿ ಹೋಗುವಾಗ ಆತ್ಮಕತೆ ಏಕೆ ಬೇಕು ಎಂದು ಪ್ರಶ್ನಿಸಿದ್ದರು. ಆದರೂ ಒತ್ತಾಯ ಮಾಡಿದಾಗ ಎರಡೇ ನಿಮಿಷದಲ್ಲಿ ಆತ್ಮಕತೆ ಹೇಳಿ ಮುಗಿಸಬಹುದು. ತಂದೆಯ ಬಗ್ಗೆ ಮಕ್ಕಳೇ ಬರೆಯುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದರು.
ಆದರೂ ಪುನೀತ್‌ ಒತ್ತಾಯ ಮಾಡಿದ್ದರಿಂದ ಒಪ್ಪಿಗೆ ಸೂಚಿಸಿದ್ದರು ಎಂದು ಸ್ಮರಿಸಿಕೊಂಡರು.

ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ದೊರೆತಾಗಲೂ ಸರಳತೆ ತೋರಿದ್ದರು. ನಟ ಭಯಂಕರ ಗಂಗಾಧರ ನಾಯ್ಡು, ವರದಾಚಾರ್ಯ ಅವರಂತಹ ಶ್ರೇಷ್ಠ ಕಲಾವಿದರು ಇದ್ದಿದ್ದರೆ ನನಗೆ ಇಷ್ಟೆಲ್ಲಾ ಪ್ರಶಸ್ತಿ ಸಿಗುತ್ತಿರಲಿಲ್ಲ ಎಂದು ಅಪ್ಪಾಜಿ ಹೇಳುತ್ತಿದ್ದರು ಎಂದು ನೆನಪಿಸಿಕೊಂಡರು.

ಜೀವಿತಾವಧಿ ಸಾಧನೆಗಾಗಿ ಹಿರಿಯ ನಟಿ ಲಕ್ಷ್ಮೀ ಅವರಿಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ, ನಿರ್ದೇಶಕ ಎಸ್‌.ನಾರಾಯಣ್‌ ಅವರಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ, ನಿರ್ಮಾಪಕ ದಿ.ಜಿ.ಎನ್‌.ಲಕ್ಷ್ಮೇಪತಿ ಪರವಾಗಿ ಪುತ್ರ ರಾಮಪ್ರಸಾದ್‌ ಅವರಿಗೆ ಡಾ.ವಿಷ್ಣುವರ್ಧನ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ತಲಾ 5 ಲಕ್ಷ ರು. ನಗದು, 50 ಗ್ರಾಂ ಚಿನ್ನದ ಪದಕ ಒಳಗೊಂಡಿತ್ತು.

ಅತ್ಯತ್ತಮ ಚಿತ್ರ, ಮಕ್ಕಳ ಚಿತ್ರ, ಪ್ರಾದೇಶಿಕ ಚಿತ್ರ, ಅತ್ಯುತ್ತಮ ನಟ, ನಟಿ ಸೇರಿದಂತೆ ಹಲವು ವಿಭಾಗಗಳ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ಆಯುಕ್ತ ಡಾ.ಪಿ.ಎಸ್‌.ಹರ್ಷ, ನಿರ್ಮಾಪಕ ಸಾ.ರಾ.ಗೋವಿಂದ್‌, ವಿತರಕ ಚಿನ್ನೇಗೌಡ ಮತ್ತಿತರರು ಹಾಜರಿದ್ದರು.

ನಾನು ತುಂಬಾ ಪುಣ್ಯ ಮಾಡಿದ್ದೆ. ಅದಕ್ಕಾಗಿ ಡಾ.ರಾಜ್‌ಕುಮಾರ್‌ ಅವರ ಹೆಸರಿನ ಪ್ರಶಸ್ತಿ ಪಡೆದಿದ್ದೇನೆ. ರಾಜ್‌ಕುಮಾರ್‌ ಅವರ ಆಶೀರ್ವಾದವೇ ಸಿಕ್ಕಂತೆ ಆಗಿದೆ. ರಾಜ್‌ಕುಮಾರ್‌ ಅವರೊಂದಿಗೆ ಅಭಿನಯಿಸಲು ತುಂಬಾ ಪುಣ್ಯ ಮಾಡಿರಬೇಕು ಎಂದು ಲಕ್ಷ್ಮಿ ಯವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ನಿರ್ದೇಶಕ ಪುಟ್ಟಣ ಕಣಗಾಲ್‌ ಅವರ ಬಳಿ ಕೆಲಸ ಕೇಳಿಕೊಂಡು ಹೋಗಿದ್ದೆ. ಆದರೆ ಅವಕಾಶ ಸಿಕ್ಕಿರಲಿಲ್ಲ. ಈಗ ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ಅತ್ಯಂತ ಸಂತಸ ಉಂಟು ಮಾಡಿದೆ. ಅದರಲ್ಲೂ ಡಾ.ರಾಜ್‌ಕುಮಾರ್‌ ಅವರ ಜನ್ಮದಿನದಂದೇ ಪ್ರಶಸ್ತಿ ಸ್ವೀಕರಿಸಿರುವುದು ಸಂತೋಷವನ್ನುಂಟು ಮಾಡಿದೆ.
ಎಸ್‌.ನಾರಾಯಣ್‌, ನಿರ್ದೇಶಕ

ಆಯಾ ವರ್ಷವೇ ನೀಡಲಿ
ಐದು ವರ್ಷದ ಬಳಿಕ ಈಗ 2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಆಯಾ ವರ್ಷದ ಪ್ರಶಸ್ತಿಯನ್ನು ಆಯಾ ವರ್ಷವೇ ನೀಡಬೇಕು. 5 ವರ್ಷದ ನಂತರವಾದರೂ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದು ಸಂತಸ ತಂದಿದೆ ಎಂದು ಹೆಬ್ಬೆಟ್ಟು ರಾಮಕ್ಕ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ ತಾರಾ ಅನುರಾಧಾ ಅವರು ಅಭಿಪ್ರಾಯಪಟ್ಟರು.

ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ 2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೀವಿತಾವಧಿ ಸಾಧನೆಗಾಗಿ ಹಿರಿಯ ನಟಿ ಲಕ್ಷ್ಮೀ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ.ರಾಜ್‌ಕುಮಾರ್‌ ಪ್ರಶಸ್ತಿ ಪ್ರದಾನ ಮಾಡಿದರು.

ನಟ ರಾಘವೇಂದ್ರ ರಾಜ್‌ಕುಮಾರ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌, ವಾರ್ತಾ ಇಲಾಖೆ ಪ್ರಧಾನ ಆಯುಕ್ತ ಡಾ.ಪಿ.ಎಸ್‌.ಹರ್ಷ, ನಿರ್ಮಾಪಕ ಸಾ.ರಾ.ಗೋವಿಂದ್‌, ವಿತರಕ ಚಿನ್ನೇಗೌಡ ಮತ್ತಿತರರು ಹಾಜರಿದ್ದರು.

ಚಿತ್ರಗ್ರಾಹಕರೊಂದಿಗೆ ಚಲನಚಿತ್ರಸಿರಿ

0

ಇಂದು ವರನಟ ಡಾ.ರಾಜಕುಮಾರ್ ರವರ 94ನೇ ಜನ್ಮದಿನ. ದಶಕಗಳ ಹಿಂದೆ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಎಚ್.ಬಿ.ಮಂಜುನಾಥರವರು ತೆಗೆದ ತಮ್ಮ ವಿಶೇಷ ಚಿತ್ರವೊಂದನ್ನು ರಾಜಣ್ಣನವರು ವೀಕ್ಷಿಸುತ್ತಿರುವುದು ಮತ್ತು ಅದಕ್ಕೆ ತಮ್ಮ ಹಸ್ತಾಕ್ಷರ ನೀಡುತ್ತಿರುವುದು.

ದಾವಣಗೆರೆಯ ಮಂಜುನಾಥ್ ಅವರು ಹಿರಿಯ ಛಾಯಾಗ್ರಾಹಕರು.
ಅಷ್ಟೇ ಅಲ್ಲ ಹಿರಿಯ ವ್ಯಂಗ್ಯ ಚಿತ್ರಕಾರರು.
ಡಾ ರಾಜ್ ಅವರ ಹಲವಾರು ಚಿತ್ರಗಳನ್ನ ಸೆರೆಹಿಡಿದಿದ್ದಾರೆ.
ಡಾ .ರಾಜ್ ಜನ್ಮದಿನದ ನೆನಪಿಗೆ
ಈ ಚಿತ್ರದ ಮೂಲಕ ಶುಭಹಾರೈಸಿದ್ದಾರೆ.

ರಷ್ಯ ಉಕ್ರೇನ್ ಕದನ ವಿರಾಮಕ್ಕೆ ವಿಶ್ವಸಂಸ್ಥೆ ಮಧ್ಯಸ್ಥಿಕೆ

0

ನಾಗರಿಕರನ್ನು ಸುರಕ್ಷಿತವಾಗಿ ಯುದ್ಧಭೂಮಿಯಿಂದ ಹೊರ ಕರೆತರಬೇಕಾಗಿದೆ. ಇದಕ್ಕಾಗಿ ಕದನವಿರಾಮ ಘೋಷಣೆ ಅಗತ್ಯ. ಆದ್ದರಿಂದ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರ ಭೇಟಿಗೆ ವಿಶ್ವಸಂಸ್ಥೆ ಮುಖ್ಯಸ್ಥ ಆಂಟನಿಯೋ ಗುಟೆರೆಸ್ ಅವರು ಮುಂದಾಗಿದ್ದಾರೆ.

ಏ.26ಕ್ಕೆ ಮಾಸ್ಕೊಗೆ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸರ್ಗೆ ಲಾವೋವ್ ಜೊತೆಗೆ ಮಾತುಕತೆ ನಡೆಸುವರು. ಉಕ್ರೇನ್ ಮೇಲೆ ರಷ್ಯಾದ ಆಲ್ ಔಟ್ ಸಮರವನ್ನು ಕೊನೆಗೊಳಿಸುವುದಕ್ಕೆ ಈ ಪ್ರಯತ್ನ ಒಂದು ಮೆಟ್ಟಿಲಾದೀತು ಎಂಬ ಆಶಾವಾದವನ್ನು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.

ಏ.28ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಮತ್ತು ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಜೊತೆಗೆ ಮಾತುಕತೆ ನಡೆಸುವರು. ಇಲ್ಲಿ, ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳ ಪ್ರತಿನಿಧಿಗಳಿಗೆ ಮಾನವೀಯ ನೆರವು ವಿಸ್ತರಿಸುವುದಕ್ಕೆ ಸೂಚನೆ ನೀಡಲಿದ್ದಾರೆ.

ಪೂರ್ವ ಉಕ್ರೇನ್ ಮೇಲೆ ದಾಳಿ ತೀವ್ರಗೊಳಿಸಿದ ರಷ್ಯಾ ಪಡೆಗೆ ಅಲ್ಲಿಂದ ಪ್ರತಿರೋಧ ಹೆಚ್ಚಾಗಿದೆ. ಆದ್ದರಿಂದ ಡೊನ್​ಬಾಸ್ ಪ್ರಾಂತ್ಯ ವಶಪಡಿಸುವ ಅದರ ಇರಾದೆ ವಿಳಂಬವಾಗಿದೆ. ಶನಿವಾರ ಈ ದಾಳಿ ತೀವ್ರಗೊಂಡಿದೆ ಎಂದು ಉಕ್ರೇನ್ ಮಾಧ್ಯಮಗಳು ವರದಿ ಮಾಡಿವೆ.

ದೆಹಲಿಯಲ್ಲಿ ಕೋವಿಡ್ ಆರ್ ವ್ಯಾಲ್ಯೂ 2ಕ್ಕಿಂತ ಹೆಚ್ಚು ದಾಖಲೆಯಾಗಿದೆ

0

ದೆಹಲಿಯಲ್ಲಿ ಸತತ 2ನೇ ವಾರವೂ ಆರ್‌- ವ್ಯಾಲ್ಯೂ (ಒಬ್ಬರಿಂದ ಎಷ್ಟು ಜನರಿಗೆ ಕೊರೋನಾ ಸೋಂಕು ಹರಡುತ್ತಿದೆ ಎಂದು ತಿಳಿಯಲು ಬಳಸುವ ಮಾನದಂಡ )2ಕ್ಕಿಂತ ಹೆಚ್ಚು ದಾಖಲಾಗಿದೆ ಎಂದು ಐಐಟಿ ಮದ್ರಾಸ್‌ನ ತಜ್ಞರ ತಂಡ ಮಾಹಿತಿ ನೀಡಿದೆ.

ದೇಶದಲ್ಲೇ ಅತಿ ಹೆಚ್ಚು ಕೇಸು ದಾಖಲಾಗುತ್ತಿರುವ ದೆಹಲಿಯಲ್ಲಿ ಕಳೆದ ವಾರ 2.12ರಷ್ಟುಆರ್‌- ವ್ಯಾಲ್ಯೂ ದಾಖಲಾಗಿತ್ತು. ಇದೀಗ ಏ.18-23 ವಾರದಲ್ಲೂ ಆರ್‌ ವ್ಯಾಲ್ಯೂ 2.1ರಷ್ಟಿದೆ. ಅಂದರೆ ಒಬ್ಬ ಸೋಂಕಿತನಿಂದ 2.1 ಜನರಿಗೆ ಸೋಂಕು ಹಬ್ಬುತ್ತಿದೆ ಎಂದು ತಜ್ಞರ ತಂಡ ತಿಳಿಸಿದೆ.

ಆರ್‌ ವ್ಯಾಲ್ಯೂ 1ಕ್ಕಿಂತ ಕಡಿಮೆ ಇದ್ದರೆ ಸಾಂಕ್ರಾಮಿಕ ಮುಕ್ತಾಯದ ಹಂತದತ್ತ ಸಾಗುತ್ತಿದೆ ಎಂದು ಪರಿಗಣಿಸಲಾಗುತ್ತದೆ.

ಆದರೆ, ದೆಹಲಿಯಲ್ಲಿ ಕಳೆದ 3 ತಿಂಗಳಲ್ಲೇ ಮೊದಲ ಬಾರಿಗೆ, ಕಳೆದ ವಾರ ಆರ್‌ ವ್ಯಾಲ್ಯೂ ಶೇ.1ರ ಗಡಿ ದಾಟುವ ಮೂಲಕ ಆತಂಕ ಹುಟ್ಟುಹಾಕಿತ್ತು. ಇದೀಗ ಸತತ 2ನೇ ವಾರ ಕೂಡಾ ಹರಡುವಿಕೆ ಪ್ರಮಾಣ ಹೆಚ್ಚು ಕಡಿಮೆ ಅದೇ ಮಟ್ಟದಲ್ಲಿ ಇರುವ ಕಾರಣ, ಮುಂದಿನ ವಾರಗಳಲ್ಲಿ ಸೋಂಕಿತರ ಪ್ರಮಾಣ ಮತ್ತಷ್ಟುಹೆಚ್ಚುವ ಆತಂಕ ಎದುರಾಗಿದೆ.

ದೆಹಲಿಯಲ್ಲಿ ಸೋಂಕು ಉಲ್ಬಣಕ್ಕೆ ಕಾರಣವಾದ ಒಮಿಕ್ರೋನ್‌ನ 2 ಹೊಸ ಉಪತಳಿಗಳು ಬೆಂಗಳೂರಿನಲ್ಲೂ ಪತ್ತೆಯಾಗಿವೆ. ಬೆಂಗಳೂರಿನ ಮೂಲದ ಇಬ್ಬರು ಸೋಂಕಿತರಲ್ಲಿ ಬಿಎ.2 ವಿಭಾಗಕ್ಕೆ ಸೇರುವ ಬಿಎ.2.10 ಮತ್ತು ಬಿಎ.2.12 ಎಂಬ ಓಮಿಕ್ರಾನ್ ಉಪತಳಿಗಳು ದೃಢಪಟ್ಟಿವೆ ಎಂದು ತಿಳಿದು ಬಂದಿದೆ.

ಆದರೆ, ಎರಡೂ ಉಪತಳಿಗಳ ಪತ್ತೆಯನ್ನು ಆರೋಗ್ಯ ಇಲಾಖೆ ಅಧಿಕೃತವಾಗಿ ಖಚಿತಪಡಿಸಿಲ್ಲ. ಈ ನಡುವೆ, ರಾಜ್ಯದಲ್ಲಿ ಸದ್ಯದಲ್ಲೇ 4ನೇ ಅಲೆ ಏಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಖಾಸಗಿ ಪ್ರಯೋಗಾಲಯದ ಮೂಲಗಳ ಪ್ರಕಾರ ಬಿಎ.2 ವಿಭಾಗಕ್ಕೆ ಸೇರಿದ ಒಮಿಕ್ರೋನ್‌ನ ಎರಡು ಹೊಸ ಉಪತಳಿಗಳು ರಾಜ್ಯದಲ್ಲಿ ಕಾಣಿಸಿಕೊಂಡಿವೆ. ಬೆಂಗಳೂರಿನ ಖಾಸಗಿ ಪ್ರಯೋಗಾಲಯ ನಡೆಸಿರುವ ವಂಶವಾಹಿ ಪರೀಕ್ಷೆಯಲ್ಲಿ ಉಪತಳಿಗಳು ಪತ್ತೆಯಾಗಿದೆ. ಇಬ್ಬರೂ ಸೋಂಕಿತರು ಬೆಂಗಳೂರಿನ ಮೂಲದವರು ಎಂದು ತಿಳಿದುಬಂದಿದೆ.

ಆರ್ಥಿಕ ಪಲಾಯನಕಾರರನ್ನ ಬ್ರಿಟನ್ ಸ್ವಾಗತಿಸುವುದಿಲ್ಲ-ಜಾನ್ಸನ್

0

ಭಾರತೀಯ ಬ್ಯಾಂಕ್ ಗಳಿಗೆ ಬಹುಕೋಟಿ ವಂಚನೆ ಮಾಡಿ ಬ್ರಿಟನ್ ಗೆ ಪಲಾಯನ ಗೈದಿರುವ ಉದ್ಯಮಿಗಳಾದ ನೀರವ್ ಮೋದಿ ಹಾಗೂ ವಿಜಯ್ ಮಲ್ಯಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಘಾತ ನೀಡಿದ್ದಾರೆ.

ಆರ್ಥಿಕ ಪಲಾಯನಕಾರರು, ಉಗ್ರಗಾಮಿಗಳನ್ನು ಬ್ರಿಟನ್‌ನಲ್ಲಿ ಸ್ವಾಗತಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಈಗ ಭಾರತ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾರತ ಮತ್ತು ಬ್ರಿಟನ್ ದ್ವಿಪಕ್ಷೀಯ ಚರ್ಚೆಯಲ್ಲಿ ಆರ್ಥಿಕ ಅಪರಾಧಿಗಳು ಹಾಗೂ ಖಲಿಸ್ತಾನಿ ಗುಂಪುಗಳ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದಾಗಿ ವಿವರಿಸಿದ್ದಾರೆ.

ನೀರವ್ ಮೋದಿ, ವಿಜಯ್ ಮಲ್ಯ ಹಾಗೂ ಖಲಿಸ್ತಾನಿ ಉಗ್ರಗಾಮಿಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಇತರೆ ದೇಶಗಳು ಮತ್ತು ಭಾರತಕ್ಕೆ ಬೆದರಿಕೆ ಹಾಕುವ ಉಗ್ರಗಾಮಿ ಗುಂಪುಗಳನ್ನು ಬ್ರಿಟನ್ ಸಹಿಸುವುದಿಲ್ಲ. ನಾವು ಉಗ್ರಗಾಮಿ ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಿದ್ದೇವೆ. ಹಸ್ತಾಂತರ ಪ್ರಕರಣಗಳ ವಿಷಯದಲ್ಲಿ, ಕಾನೂನು ತಾಂತ್ರಿಕತೆಗಳು ಕಷ್ಟಕರವಾಗಿಸಿದೆ. ನಮ್ಮ ದೃಷ್ಟಿಕೋನದಿಂದ, ಅವರು ಹಿಂತಿರುಗಬೇಕೆಂದು ನಾವು ಬಯಸುತ್ತೇವೆ. ನಮ್ಮ ಕಾನೂನು ವ್ಯವಸ್ಥೆಯನ್ನು ಬಳಸಿಕೊಂಡು ಕಾನೂನಿನಿಂದ ತಪ್ಪಿಸಿಕೊಳ್ಳಲು ಬಯಸುವ ಜನರನ್ನು ನಾವು ಎಂದಿಗೂ ಸ್ವಾಗತಿಸುವುದಿಲ್ಲ ಎಂದು ಜಾನ್ಸನ್ ಅವರು ಹೇಳಿದ್ದಾರೆ.

ತಮ್ಮ ದ್ವಿಪಕ್ಷೀಯ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬೋರಿಸ್ ಜಾನ್ಸನ್ ಅವರು ಖಲಿಸ್ತಾನಿ ಗುಂಪುಗಳು ಮತ್ತು ಭಾರತದ ವಾಟೆಂಡ್ ಆರ್ಥಿಕ ಅಪರಾಧಿಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ. ಈ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಉಭಯ ದೇಶಗಳು ಹೇಳಿವೆ.

ಸನ್ ರೈಸರ್ಸ್ ಮಾರಕ ಬೌಲಿಂಗ್ ದಾಳಿಗೆ ಆರ್ ಸಿ ಬಿ ತತ್ತರ

0

ಟಿ20 ಕ್ರಿಕೆಟ್​​ನಲ್ಲಿ ಹೆಚ್ಚು ಬ್ಯಾಟರ್​​ಗಳದ್ದೇ ಪಾರುಪತ್ಯ ಎಂಬ ಕಾಲವಿತ್ತು. ಆದರೆ ಈಗ ನಿಧಾನವಾಗಿ ಬದಲಾಗುತ್ತಿದೆ. ಬೌಲರ್​​ಗಳು ಕೂಡ ತಮ್ಮ ಮಾರಕ ದಾಳಿಯಿಂದ ಮೇಲುಗೈ ಸಾಧಿಸುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಐಪಿಎಲ್ 2022 ರಲ್ಲಿರುವ ಸನ್​ರೈಸರ್ಸ್​ ಹೈದರಾಬಾದ್ ತಂಡ.

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮೊದಲ 2 ಪಂದ್ಯ ಸೋತು ಕಳಪೆ ಆರಂಭ ಪಡೆದುಕೊಂಡಿದ್ದ ಕೇನ್ ವಿಲಿಯಮ್ಸನ್ ಪಡೆ ನಂತರ ಕಮ್​ಬ್ಯಾಕ್ ಮಾಡಿದೆ. ಇದು ಊಹಿಸಲಾಗದ ರೀತಿ. ತಮ್ಮ ಘಾತಕ ಬೌಲರ್​​ಗಳಿಂದಲೇ ಹೈದರಾಬಾದ್ ಇದೀಗ ಸತತವಾಗಿ 5ನೇ ಪಂದ್ಯ ಗೆದ್ದಿದೆ. ನಿನ್ನೆ (ಶನಿವಾರ) ನಡೆದ ರಾಯಲ್ ಚಾಲೆಂಜರ್ಸ್​​ ಬೆಂಗಳೂರು ವಿರುದ್ಧದ ಪಂದ್ಯದಲ್ಲಂತು ಎಸ್​ಆರ್​ಹೆಚ್ ಬೌಲರ್​ಗಳು ನೀಡಿದ ಪ್ರದರ್ಶನಕ್ಕೆ ಇತರೆ ತಂಡಗಳು ಕೂಡ ತಲೆಕೆಡಿಸಿಕೊಂಡಿದೆ. ಸಂಘಟಿತ ಪ್ರದರ್ಶನ ತೋರಿದ ಹೈದರಾಬಾದ್ 9 ವಿಕೆಟ್​ಗಳ ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲೂ 2ನೇ ಸ್ಥಾನಕ್ಕೆ ಜಿಗಿದಿದೆ.

ಒಂದು ಕಡೆಯಲ್ಲಿ ಸನ್​ರೈಸರ್ಸ್​​ಗೆ ಅದೃಷ್ಟ ಕೂಡ ಕೈಹಿಡಿಯುತ್ತಿದೆ ಎನ್ನಬಹುದು. ಯಾಕೆಂದರೆ ಐಪಿಎಲ್ 2022 ರಲ್ಲಿ ಕೇನ್ ವಿಲಿಯಮ್ಸನ್ ಎಲ್ಲ ಟಾಸ್ ಅನ್ನು ಕೂಡ ಗೆದ್ದಿದ್ದಾರೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲೂ ಟಾಸ್ ಗೆದ್ದ ಕೇನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಬೆಂಗಳೂರಿಗೆ 2ನೇ ಓವರ್​ನಲ್ಲೇ ಕಾದಿತ್ತು ಆಘಾತ.

ಮಾರ್ಕೋ ಜಾನ್ಸನ್ ಎಸೆದ ಈ ಓವರ್‌ನಲ್ಲಿ ಆರ್‌ಸಿಬಿ ತನ್ನ ಅಗ್ರ ಕ್ರಮಾಂಕದ ಮೂರು ದಾಂಡಿಗರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಾಯಕ ಫಾಫ್ ಡುಪ್ಲೆಸಿಸ್ (5), ವಿರಾಟ್ ಕೊಹ್ಲಿ ಮತ್ತು ಅನುಜ್ ರಾವತ್ 2ನೇ ಓವರ್‌ನಲ್ಲಿ ಫೆವಿಲಿಯನ್‌ಗೆ ಸೇರಿಕೊಂಡರು.

ಕೊಹ್ಲಿ ಸತತ 2ನೇ ಬಾರಿಗೆ ಗೋಲ್ಡನ್ ಡಕ್‌ಗೆ ಔಟ್ ಆದರು. ನಂತರ ಬಂದ ಬ್ಯಾಟರ್‌ಗಳು ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾದರು. ಗ್ಲೆನ್ ಮ್ಯಾಕ್ಸ್‌ವಲ್ ಮತ್ತು ಸುಯೇಶ್ ಪ್ರಭುದೇಸಾಯಿ ಮಾತ್ರವೇ ಈ ಪಂದ್ಯದಲ್ಲಿ ಎರಡಂಕಿ ದಾಟಿದರು.

ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ರನ್ ಖಾತೆ ತೆರೆಯಲು ವಿಫಲರಾದರು. ಉಳಿದ ಎಲ್ಲಾ ಆಟಗಾರರು ಕೂಡ ಒಂದಂಕಿಗೆ ವಿಕೆಟ್ ಒಪ್ಪಿಸಿದ್ದಾರೆ. ಮೂವರು ಆಟಗಾರರು ಶೂನ್ಯ ಸಂಪಾದನೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ವಿಭಾಗ ಸಂಪೂರ್ಣ ಶ್ರೇಯಸ್ಸು ತನ್ನದಾಗಿಸಿಕೊಂಡಿತು. ಮಾರ್ಕೋ ಜಾನ್ಸನ್ ಮತ್ತು ಟಿ ನಟರಾಜನ್ ತಲಾ ಮೂರು ವಿಕೆಟ್ ಸಂಪಾದಿಸಿದರೆ ಸ್ಪಿನ್ನರ್ ಜಗದೀಶ ಸುಚಿತ್ 2 ವಿಕೆಟ್ ಹಾಗೂ ಭುವನೇಶ್ವರ್ ಕುಮಾರ್ ಹಾಗೂ ಉಮ್ರಾನ್ ಮಲಿಕ್ ತಲಾ ಒಂದು ವಿಕೆಟ್ ತನ್ನದಾಗಿಸಿಕೊಂಡರು. ಆರ್​ಸಿಬಿ 16.1 ಓವರ್​ನಲ್ಲಿ ಕೇವಲ 68 ರನ್​ಗೆ ಆಲೌಟ್ ಆಯಿತು. ಇದರೊಂದಿಗೆ ಐಪಿಎಲ್​ನಲ್ಲಿ 70 ರನ್ ಅಥವಾ ಅದಕ್ಕಿಂತ ಕಡಿಮೆ ರನ್​ಗಳ ಒಳಗೆ ಅತೀ ಹೆಚ್ಚು ಬಾರಿ ಆಲೌಟ್ ಆದ ತಂಡ ಎಂಬ ಕೆಟ್ಟ ದಾಖಲೆಯೊಂದು ಆರ್​ಸಿಬಿ ಪಾಲಾಯಿತು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೇವಲ 8 ಓವರ್‌ಗಳಲ್ಲಿ ಈ ಗುರಿಯನ್ನು ತಲುಪಿತು.

ಆರಂಭಿಕ ಆಟಗಾರ ಅಭಿಶೇಕ್ ಶರ್ಮಾ 28 ಎಸೆತಗಳಲ್ಲಿ 47 ರನ್‌ ಸಿಡಿಸಿ ವಿಕೆಟ್ ಕಳೆದುಕೊಂಡರೆ ನಾಯಕ ಕೇನ್ ವಿಲಿಯಮ್ಸನ್ 16 ರನ್ ಹಾಗೂ ರಾಹುಲ್ ತ್ರಿಪಾಠಿ 7 ರನ್‌ಗಳಿಸಿ ಅಜೇಯವಾಗುಳಿದರು. ಈ ಗೆಲುವಿನೊಂದಿಗೆ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ನೆಟ್ ರನ್‌ರೇಟ್ ಕೂಡ ಹೆಚ್ಚಿಸಿಕೊಂಡಿದೆ. ಸೋಲು ಅನುಭವಿಸಿರುವ ಆರ್​ಸಿಬಿ 4ನೇ ಸ್ಥಾನಕ್ಕೆ ಕುಸಿದಿದೆ.

ಸೆಪ್ಟೆಂಬರ್ 23 ಕ್ಕೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

0

ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಸೆಪ್ಟೆಂಬರ್ 23 ರಿಂದ 3 ದಿನಗಳ ಕಾಲ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಕೊರೋನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗಿರಲಿಲ್ಲ.

ಆದ್ದರಿಂದ, ಈ ಬಾರಿ ದಸರಾ ಉತ್ಸವದಂತೆ ಅದ್ದೂರಿಯಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ರಾಜ್ಯ ಸರ್ಕಾರ 20 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಿದೆ.

ಹಾವೇರಿಯ ಹಳೆ ನ್ಯಾಷನಲ್ ಹೈವೇ ರಸ್ತೆಯಲ್ಲಿರುವ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಪಕ್ಕದಲ್ಲಿ 22 ಎಕರೆ ಜಾಗದಲ್ಲಿ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಹಾವೇರಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರ ತವರು ಜಿಲ್ಲೆ ಕೂಡ ಎಂಬುದು ಗಮನಾರ್ಹ ಸಂಗತಿ.