Friday, February 27, 2026
Friday, February 27, 2026
Home Blog Page 1607

ಪಾಕ್ ನ ಕರಾಚಿಯಲ್ಲಿ ಸ್ಫೋಟ, ಚೀನಿ ಪ್ರಜೆಗಳ ಸಾವು

0

ಪಾಕಿಸ್ತಾನದಲ್ಲಿ ಉಗ್ರರ ದಾಳಿಗಳು ಮುಂದುವರೆದಿದೆ.
ಅದರಲ್ಲೂ ಚೀನಾದ ಪ್ರಜೆಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿದ್ದು ಮಂಗಳವಾರದ ಕರಾಚಿ ಸ್ಫೋಟದಲ್ಲಿ ಮೂವರು ಚೀನಿಯರ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕರಾಚಿಯಲ್ಲಿರುವ ಪಾಕಿಸ್ತಾನ್​​ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಸಂಭವಿಸಿದ ಕಾರು ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇದರಲ್ಲಿ ಮೂವರು ಚೀನಾ ಪ್ರಜೆಗಳೂ ಸೇರಿದ್ದರು. ಪಾಕಿಸ್ತಾನ್ ವಿಶ್ವವಿದ್ಯಾನಿಲಯದ ಚೀನಿ ಭಾಷಾ ಬೋಧನಾ ಕೇಂದ್ರವಾದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿಯಲ್ಲಿದ್ದ ವ್ಯಾನ್‌ನಲ್ಲಿ ಈ ಸ್ಫೋಟ ಸಂಭವಿಸಿತ್ತು. ಈ ಬೆನ್ನಲ್ಲೇ ಚೀನಾದ ಸರ್ಕಾರಿ ಮಾಧ್ಯಮವು ಸ್ಫೋಟವನ್ನು ಖಂಡಿಸಿದ್ದು, ಚೀನಾ ಪ್ರಜೆಗಳ ಸುರಕ್ಷತೆಗಾಗಿ ಪಾಕಿಸ್ತಾನದ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ಮೂಲ ಕಾರಣವನ್ನು ಕಂಡು ಹಿಡಿಯಬೇಕೆಂದು ಚೀನಾ ಪಾಕಿಸ್ತಾನವನ್ನು ಒತ್ತಾಯಿಸಿದೆ.

ಪಾಕಿಸ್ತಾನದಲ್ಲಿ ತನ್ನ ಯೋಜನೆಗಳನ್ನು ಕಾಪಾಡಿಕೊಳ್ಳಲು ಮತ್ತು ಪಾಕ್​ನಲ್ಲಿರುವ ತನ್ನ ಸಿಬ್ಬಂದಿಯನ್ನು ರಕ್ಷಿಸಲು ಪಾಕ್​ ಸರ್ಕಾರ ಹೆಚ್ಚಿನ ಪ್ರಯತ್ನ ಪಡಬೇಕು ಎಂದು ಚೀನಾ ಆಗ್ರಹಿಸಿದೆ.

ಪಾಕಿಸ್ತಾನದಲ್ಲಿರುವ ಚೀನಾ ಸಂಸ್ಥೆಗಳು, ಯೋಜನೆಗಳು ಮತ್ತು ಸಿಬ್ಬಂದಿಯನ್ನು ಪಾಕಿಸ್ತಾನ ರಕ್ಷಿಸಬೇಕಿದೆ. ಚೀನಿಯರನ್ನು ನೋಯಿಸಲು ಪ್ರಯತ್ನಿಸುವವರು ತಮ್ಮ ವಿನಾಶವನ್ನು ತಾವೇ ಕಾಣುತ್ತಾರೆ ಎಂದು ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಎಚ್ಚರಿಕೆ ನೀಡಿದೆ.

ಆದರೂ ಈ ಘಟನೆಯ ಹೊಣೆ ಹೊತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ), ಚೀನಾದ ಕಂಪನಿಗಳು ಮತ್ತು ಪಾಕಿಸ್ತಾನದ ನಾಗರಿಕರ ಮೇಲೆ ದಾಳಿ ನಡೆಸುವುದಾಗಿ ಪದೇ ಪದೆ ಬೆದರಿಕೆ ಹಾಕುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
ಇದಕ್ಕೂ ಮುನ್ನ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ 20180ರಲ್ಲಿ ಕರಾಚಿಯಲ್ಲಿರುವ ಚೀನಾ ಕಾನ್ಸುಲೇಟ್ ಮೇಲೆ ದಾಳಿ ಮಾಡಿತ್ತು.

ನಂತರ ಆಗಸ್ಟ್ 2021ರಲ್ಲಿ ಗ್ವಾದರ್ ಬಂದರಿನ ಬಳಿ ಆತ್ಮಹತ್ಯಾ ದಾಳಿಯನ್ನು ನಡೆಸಿ, ಚೀನಾದ ಪ್ರಜೆಯನ್ನು ಗಾಯಗೊಳಿಸಿತ್ತು. ಈಗಲೂ ಕೂಡಾ ದಾಳಿಗಳು ಮುಂದುವರೆಯುತ್ತಿದ್ದು, ಚೀನಾಗೆ ತಲೆನೋವಾಗಿ ಪರಿಣಮಿಸಿದೆ.

ಮನಸ್ಫೂರ್ತಿಯಿಂದ ಮಕ್ಕಳಿಗೆ ಮನಸೂರೆ ಬೇಸಿಗೆ ಶಿಬಿರ

0

ಮಕ್ಕಳಿಗೆ ಶೈಕ್ಷಣಿಕ ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ಆರ್. ಪರಮೇಶ್ವರಪ್ಪನವರು ತಿಳಿಸಿದರು.

ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಮಾನಸ ಟ್ರಸ್ಟ್, ನಮ್ಮ ಹಳ್ಳಿ ಥಿಯೇಟರ್ ಶಿವಮೊಗ್ಗ, ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗದ ಮಾನಸ ನರ್ಸಿಂಗ್ ಹೋಮ್ ನಲ್ಲಿ ಮನಸ್ಪೂರ್ತಿ ಶಿಬಿರ ಕಾರ್ಯಕ್ರಮ ಆರಂಭಗೊಂಡಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಕಾರಣದಿಂದ ಎರಡು ವರ್ಷ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗಿದೆ. ಹಲವಾರು ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ದಾರೆ. ಎರಡು ವರ್ಷಗಳ ನಂತರ ಈಗ ಮತ್ತೆ ಮಕ್ಕಳೆಲ್ಲರೂ ಶಾಲೆಯತ್ತ ಮುಖ ಮಾಡಿದ್ದಾರೆ. ಇದು ಸಂತೋಷದ ವಿಚಾರ. ಐದು ವರ್ಷಗಳಿಂದ ಮನಸ್ಪೂರ್ತಿ ಶಿಬಿರವನ್ನು ಮಾನಸ ನರ್ಸಿಂಗ್ ಹೋಮ್ ನವರು ನಡೆಸುತ್ತಾ ಬಂದಿದ್ದಾರೆ. ಈಗ ಯಶಸ್ವಿಯಾಗಿ ಐದನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಶಿಬಿರದಲ್ಲಿ ಆಗಮಿಸಿದ ಎಲ್ಲಾ ಮಕ್ಕಳು 12 ದಿನಗಳ ಈ ಶಿಬಿರದಲ್ಲಿ ಯೋಗ, ಚಿತ್ರಕಲೆ, ಸಾಂಸ್ಕೃತಿಕ ಕಾರ್ಯಕ್ರಮ, ಕ್ಲೇ ಮಾಡ್ಲಿಂಗ್ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ. ಎಲ್ಲ ಮಕ್ಕಳು ಈ ಬೇಸಿಗೆ ರಜೆಯನ್ನು ವ್ಯರ್ಥ ಮಾಡದೇ ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.

ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.

ವಿಶೇಷ ಅತಿಥಿಗಳಾಗಿ ಆಗಮಿಸಿದ ಶಿವಮೊಗ್ಗ ಎಂ.ಸಿ.ಸಿ.ಎಸ್. ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿಯವರು ಮಾತನಾಡಿ, ವಿದ್ಯಾರ್ಥಿಗಳಿಗೆ ಗಣಿತ ಇಷ್ಟವೋ ಅಥವಾ ಕತೆ ಕೇಳುವುದು ಇಷ್ಟವೋ ಎಂದು ಪ್ರಶ್ನಿಸಿದರು. ಶಾಲೆಗಳಲ್ಲಾದರೆ ಒಂದಾದ ನಂತರ ಒಂದು ತರಗತಿಗಳು ನಡೆಯುತ್ತಲೇ ಇರುತ್ತವೆ. ಪರೀಕ್ಷೆಗಳು, ಹೋಮ್ ವರ್ಕ್ ಇವುಗಳಲ್ಲಿಯೇ ಕಾಲಕಳೆಯುತ್ತಿರಾ. ಆದರೆ ಇಂತಹ ಬೇಸಿಗೆ ಶಿಬಿರಗಳಿಂದ ಪಠ್ಯೇತರ ಚಟುವಟಿಕೆಗಳಲ್ಲಿಯೂ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು. ಇಲ್ಲಿ, ನಾಟಕ, ಗಾಯನ, ಯೋಗ, ಆಟೋಟಗಳು ಹಾಗೂ ಇನ್ನಿತರ ಪಠ್ಯೇತರ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಇದರಿಂದ ಪ್ರತಿಯೊಂದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಈ ಶಿಬಿರ ಉಪಯೋಗಕರವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಮೊಗ್ಗ ಮಾನಸ ಟ್ರಸ್ಟ್ ನಿರ್ದೇಶಕರಾದ ಡಾ. ರಜನಿ ಎ.ಪೈ ಅವರು ಮಾತನಾಡಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಪುಟ್ಟ ಕತೆಯನ್ನು ಹೇಳಿದರು. ಮಕ್ಕಳಲ್ಲಿ ವಿವಿಧ ಬಗೆಯಲ್ಲಿ ಕಥೆಯನ್ನು ಹೇಳುವ ಮತ್ತು ತಮ್ಮ ಕಲ್ಪನೆಯ ಮುಖಾಂತರ ವಿವಿಧ ಬಗೆಯ ಕತೆಗಳನ್ನು ಸೃಷ್ಟಿಸುವ ಸಾಮರ್ಥ್ಯ ಇರುತ್ತದೆ. ಆದರೆ ಈಗಿನ ಆಧುನಿಕತೆಯಿಂದ ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ವಿದ್ಯಾರ್ಥಿಗಳ ಸಾಮರ್ಥ್ಯ ಕ್ಷೀಣಿಸುತ್ತಿದೆ. ಆದ್ದರಿಂದ ಚಿಕ್ಕ ಮಕ್ಕಳಿಗೆ ಮೊಬೈಲ್ ಕಂಪ್ಯೂಟರ್ ಬದಲಿಗೆ ವಿವಿಧ ಬಗೆಯ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಬೇಕು.
ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಅವರಿಗೆ ಪ್ರೋತ್ಸಾಹ ನೀಡಬೇಕು.
ಈ ನಿಟ್ಟಿನಲ್ಲಿ ಮಾನಸ ನರ್ಸಿಂಗ್ ಹೋಮ್ ಪ್ರತಿವರ್ಷವೂ ಮನಸ್ಪೂರ್ತಿ ಶಿಬಿರವನ್ನು ಹಮ್ಮಿಕೊಂಡು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 12 ದಿನಗಳ ಶಿಬಿರದಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸುವ ಮುಖಾಂತರ ಅವರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ಇದು ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮದಲ್ಲಿ ಮಾನಸ ನರ್ಸಿಂಗ್ ಹೋಮ್ ನ ವಿವಿಧ ಸಿಬ್ಬಂದಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಹಾಗೂ ಪೋಷಕರು ಉಪಸ್ಥಿತರಿದ್ದರು.

ರಾಜ್ಯದ ಐಟಿ ಕ್ಷೇತ್ರದಲ್ಲಿ ಭವಿಷ್ಯದಲ್ಲಿ 55 ಕೋಟಿ ಉದ್ಯೋಗಾವಾಶ

0

ರಾಜ್ಯದ ಐಟಿ ಉದ್ಯಮದಲ್ಲಿ ಮುಂದಿನ 5 ವರ್ಷಗಳಿಗೆ 55 ಲಕ್ಷ ನುರಿತ ಉದ್ಯೋಗಿಗಳ ಅವಶ್ಯಕತೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಹೇಳಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, 55 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲಾಗುತ್ತದೆ.

ಈ ಅವಧಿಯಲ್ಲಿ ಐಟಿ ಕ್ಷೇತ್ರದ ವಹಿವಾಟನ್ನು 300 ಶತಕೋಟಿ ಡಾಲರ್‌ ಮಟ್ಟಕ್ಕೆ ಬೆಳೆಸಲಾಗುತ್ತದೆ ಎಂದು ಅಶ್ವತ್ಥ ನಾರಾಯಣ ಅವರು ತಿಳಿಸಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಶೃಂಗ ಭೌತಿಕ ರೂಪದಲ್ಲಿ ನಡೆಯಲಿದೆ. ಇದಕ್ಕೆ ಪೂರಕವಾಗಿ ಅಮೆರಿಕ, ಇಂಗ್ಲೆಂಡ್‌, ಜಪಾನ್‌ ಮುಂತಾದ ಕಡೆಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ ದೇಶಕ್ಕೆ ಹರಿದು ಬಂದಿರುವ ಒಟ್ಟು ವಿದೇಶಿ ಹೂಡಿಕೆಯಲ್ಲಿ ಶೇ 40 ಪಾಲು ಕರ್ನಾಟಕದಲ್ಲೇ ಹೂಡಿಕೆಯಾಗಿದೆ ಎಂದು ಅಶ್ವತ್ಥನಾರಾಯಣ ಅವರು ಮಾಹಿತಿ ನೀಡಿದ್ದಾರೆ

ಜಿಎಸ್ ಟಿ ಕಾನೂನಿನ ಅರಿವಿದ್ದಲ್ಲಿ ಸಮಸ್ಯೆ ಇರದು- ನವೀನ್ ಕುಮಾರ್

0

ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಟೆರೋ ಕ್ಯಾಸ್ಟ್ ಸಭಾಂಗಣದಲ್ಲಿ ಹೌ ಟು ಫೇಸ್ ಜಿಎಸ್ಟಿ ಇನ್ವೆಸ್ಟಿಗೇಶನ್ ಅಂಡ್ ಆಡಿಟ್ ಪ್ರಾಕ್ಟಿಕಲ್ ಟಿಪ್ಸ್ ಈ ವಿಷಯ ಕುರಿತು ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬೆಂಗಳೂರಿನ ಹೆಸರಾಂತ ಕಾನೂನು ಸಲಹೆಗಾರ ಕೆಎಸ್ ನವೀನ್ ಕುಮಾರ್ ಅವರು ಕಾರ್ಯಗಾರವನ್ನು ಉದ್ಘಾಟಿಸಿದರು. ಅನಂತರದಲ್ಲಿ ಮಾತನಾಡಿದ ಅವರು, ಜಿಎಸ್ಟಿ ಕಾನೂನಿನ ಅರಿವಿದ್ದಲ್ಲಿ ಉದ್ದಿಮೆದಾರರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಇರುವುದಿಲ್ಲ. ಕಾನೂನಿನ ಅಡಿಯಲ್ಲಿ ಸಮನ್ಸ್ ಬಂದಾಗ ಯಾರು ಜಾರಿ ಮಾಡಿರಬೇಕು, ಯಾರಿಗೆ ಜಾರಿ ಮಾಡಿರಬೇಕು, ಮತ್ತು ಯಾರು ಅದನ್ನು ಹಾಜರಾಗಿ ಪ್ರತಿನಿಧಿಸಬೇಕು, ಹೇಗೆ ಪ್ರತಿನಿಧಿಸಬೇಕು, ಅದನ್ನು ಪ್ರತಿನಿಧಿಸುತ್ತಿದ್ದರೆ ಉದ್ದಿಮೆಗಳಿಗೆ ಆಗುವ ತೊಂದರೆಗಳೇನು ಎಂಬುದರ ಬಗ್ಗೆ ವಿವರಿಸಿದರು.

ಜೆಸ್ಸಿ ಕಾನೂನಿನ ಅಡಿಯಲ್ಲಿ ಅಧಿಕಾರಿಗಳು ವ್ಯವಹಾರದ ಸ್ಥಳಗಳ ಪರಿಶೀಲನೆ ಸಮಯದಲ್ಲಿ ಅಧಿಕಾರದ ದುರುಪಯೋಗವಾಗದಂತೆ ವ್ಯಾಪಾರಸ್ಥರು ಯಾವ ರೀತಿಯಲ್ಲಿ ಪ್ರತಿನಿಧಿಸಬೇಕು. ಯಾವ ದಾಖಲೆಗಳನ್ನು ಒದಗಿಸಬೇಕು ಹೀಗೆ ಮುಂತಾದ ವಿವರವಾದ ಸಲಹೆಗಳನ್ನು ಉದ್ಯಮಿಗಳಿಗೆ ನೀಡಿದರು.

ತೆರಿಗೆ ಇಲಾಖೆ ಅಧಿಕಾರಿಗಳು ಪರಿವೀಕ್ಷಣೆಯ ಸಮಯದಲ್ಲಿ, ಬರವಣಿಗೆ ರೂಪದಲ್ಲಿ ತೆಗೆದುಕೊಳ್ಳುವ ಉದ್ಯಮಿಗಳ ಹೇಳಿಕೆಗಳನ್ನು ಒತ್ತಾಯಿಸಿ ತೆಗೆದುಕೊಂಡ ಸಂದರ್ಭಗಳಲ್ಲಿ, ಉದ್ಯೋಗಿಗಳು ತಾವು ಕೊಟ್ಟ ಹೇಳಿಕೆಗಳನ್ನು ಯಾವರೀತಿಯಲ್ಲಿ ಹಿಂಪಡೆದು ಸಮಂಜಸವಾದ ಹೇಳಿಕೆಗಳನ್ನು ಕೊಡಬೇಕೆಂದು ತಿಳಿಸಿದರು.

ಸಂಘದ ಅಧ್ಯಕ್ಷ ಎನ್ ಗೋಪಿನಾಥ್ ಅಧ್ಯಕ್ಷತೆಯನ್ನು ವಹಿಸಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉದ್ದಿಮೆದಾರರು ಹಲವಾರು ತೆರಿಗೆ ಸಂಬಂಧಿತ ತೊಂದರೆಗಳನ್ನು ಅನುಭವಿಸುತ್ತಿದ್ದು, ಕಾನೂನಿನ ಮಾಹಿತಿಯ ಕೊರತೆಯಿದೆ. ಇಂತಹ ಉತ್ತಮ ಕಾರ್ಯಗಾರಗಳನ್ನು ನಡೆಸಿದಾಗ ಮಾಹಿತಿಯನ್ನು ಪಡೆದು ತಮ್ಮ ಉದ್ದಿಮೆಗಳನ್ನು ಧೈರ್ಯದಿಂದ ಮುನ್ನಡೆಸಿಕೊಂಡು ಹೋಗಬಹುದು ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಚಾರ್ಟೆಡ್ ಅಕೌಂಟೆಂಟ್ ನಾಗರಾಜ್ ಸಿಂಗ್ ಸ್ವಾಗತಿಸಿ, ತೆರಿಗೆ ಸಲಹಾ ಸಮಿತಿ ಚೇರ್ಮನ್ ಇ. ಪರಮೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಂ.ರಾಜು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ, ವಸಂತ ಹೋಬಳಿದಾರ್ ನಿರೂಪಿಸಿದರು. ಸಹಕಾರ್ಯದರ್ಶಿ ಜೆ ವಿಜಯ್ ಕುಮಾರ್ ವಂದಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಖಜಾಂಚಿ ಮಧುಸೂದನ್ ಐತಾಳ್, ಮಾಜಿ ಅಧ್ಯಕ್ಷರಾದ ಡಿ.ಎಂ.ಶಂಕರಪ್ಪ, ನಿರ್ದೇಶಕರಾದ ಬಿ.ಆರ್. ಸಂತೋಷ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಪಾಕ್ ಪ್ರಧಾನಿ ಶಹಬಾಜ್, ಕಾಶ್ಮೀರಕ್ಕೆ ಮೋದಿ ಭೇಟಿ ಬಗ್ಗೆ ಟೀಕೆ

0

ಪಾಕಿಸ್ತಾನ ತನ್ನ ಹಳೆಯ ಚಾಳಿಯನ್ನು ಇನ್ನೂ ಬಿಟ್ಟಿಲ್ಲ. ಅಧಿಕಾರ ಸ್ವೀಕರಿಸಿ ಕೇವಲ 15 ದಿನಗಳಷ್ಟೇ ಕಳೆದಿರುವ ನೂತನ ಪಾಕಿಸ್ತಾನದ ಪ್ರಧಾನಿ ಶೆಹ್​ಬಾಝ್​​ ಷರೀಫ್​ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ಭೇಟಿಯನ್ನು ಆಕ್ಷೇಪಿಸಿ ಟ್ವೀಟ್ ಮಾಡಿದ್ದಾರೆ.

ಅಧಿಕಾರ ಸ್ವೀಕರಿಸುವ ಮೊದಲಿನಿಂದಲೂ ಅವರು ಕಾಶ್ಮೀರ ವಿಷಯವೇ ಭಾರತ ಮತ್ತು ಪಾಕಿಸ್ತಾನಗಳ ನಡುವಣ ಶಾಂತಿಗೆ ಇರುವ ತಡೆ ಎಂದು ಪ್ರತಿಪಾದಿಸುತ್ತಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಭಾನುವಾರ ಕಾಶ್ಮೀರ ಕಣಿವೆಗೆ ಭೇಟಿ ನೀಡಿ ಸುಮಾರು 20,000 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಪತ್ರ ವಿನಿಮಯ ಮಾಡಿಕೊಂಡಿದ್ದಾರೆ. ದ್ವಿಪಕ್ಷೀಯ ಮಾತುಕತೆ ಮತ್ತು ವ್ಯಾಪಾರ ಒಪ್ಪಂದದ ಬಗ್ಗೆ ಅವರು ಈ ಪತ್ರಗಳಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಶಹಬಾಝ್ ಷರೀಫ್ ಹೇಳಿಕೆಗೆ ಭಾರತ ಸರ್ಕಾರ ಈವರೆಗೆ ಪ್ರತಿಕ್ರಿಯಿಸಿಲ್ಲ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕಾಶ್ಮೀರ ಭೇಟಿ ಮತ್ತು ವಿವಿಧ ಜಲವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕಾಮಗಾರಿಗಳು ಸಿಂಧು ನದಿ ಒಪ್ಪಂದದ ಆಶಯವನ್ನು ಉಲ್ಲಂಘಿಸಿವೆ. ಇದು ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ, ಸಾಮಾನ್ಯ ಸ್ಥಿತಿ ನೆಲೆಗೊಂಡಿದೆ ಎಂದು ಬಿಂಬಿಸುವ ಭಾರತದ ಹತಾಶ ಪ್ರಯತ್ನ ಎಂದು ಟ್ವೀಟ್ ಮಾಡಿದ್ದಾರೆ.

ರಷ್ಯಾಗೆ ನಾಗರಿಕರ ಬಗ್ಗೆ ಕರುಣೆ ಉಕ್ಕಿ ಯುದ್ಧಕ್ಕೆ ಸಣ್ಣ ಬ್ರೇಕ್

0

ತನ್ನ ವಶದಲ್ಲಿರುವ ಉಕ್ರೇನ್ ಬಂದರುನಗರ ಮರಿಯುಪೋಲ್ ನ ಅಝೊವ್ಸ್ತಲ್ ಸ್ಟೀಲ್ ಸ್ಥಾವರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಕದನ ವಿರಾಮ ಘೋಷಿಸಿರುವುದಾಗಿ ರಷ್ಯದ ರಕ್ಷಣಾ ಇಲಾಖೆ ಘೋಷಿಸಿದೆ.

ಸ್ಟೀಲ್ ಸ್ಥಾವರದೊಳಗೆ ಇನ್ನೂ ಕೆಲವು ಉಕ್ರೇನ್ ಯೋಧರಿದ್ದು ಪ್ರತಿರೋಧ ಒಡ್ಡುತ್ತಿದ್ದಾರೆ.
ಜತೆಗೆ ಹಲವು ನಾಗರಿಕರೂ ಸ್ಥಾವರದೊಳಗೆ ಆಶ್ರಯ ಪಡೆದಿದ್ದಾರೆ. ಅವರು ಸುರಕ್ಷಿತವಾಗಿ ಹೊರಹೋಗಲು ಅವಕಾಶ ನೀಡುವ ಹಿನ್ನೆಲೆಯಲ್ಲಿ ಕದನ ವಿರಾಮ ಜಾರಿಯಾಗಿದೆ.

ಎಪ್ರಿಲ್ 25ರ ಮಧ್ಯಾಹ್ನ 2 ಗಂಟೆ(ರಷ್ಯ ಸಮಯ)ಯಿಂದ ರಷ್ಯ ಸೇನೆ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿದೆ ಎಂದು ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ.

ಸ್ಟೀಲ್ ಸ್ಥಾವರದಲ್ಲಿ ಇರುವವರು ಸುರಕ್ಷಿತವಾಗಿ ತೆರಳಲು ಅವಕಾಶವಿದೆ ಮತ್ತು ತಮಗೆ ಇಷ್ಟಬಂದ ಕಡೆ ಅವರು ತೆರಳಬಹುದು. ಸುರಕ್ಷಿತವಾಗಿ ಹೊರತೆರಳಲು ಒದಗಿಸಿದ ಅವಕಾಶ ಬಳಸಿಕೊಳ್ಳಲು ಇಚ್ಛಿಸುವವರು ಬಿಳಿ ಧ್ವಜವನ್ನು ಎತ್ತಿಹಿಡಿದು ಸ್ಥಾವರದಿಂದ ಹೊರಬರಬೇಕು ಎಂದು ರಕ್ಷಣಾ ಇಲಾಖೆ ಹೇಳಿದೆ.

ಈ ಸಂದೇಶವನ್ನು ಪ್ರತೀ ಅರ್ಧಗಂಟೆಗೊಮ್ಮೆ ಪ್ರಸಾರ ಮಾಡಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಚುನಾವಣಾ ತಂತ್ರಗಾರ ಕಿಶೋರ್ ಈಗ ಕಾಂಗ್ರೆಸ್ ಗೆ ಆಧಾರ

0

ಸತತ 2 ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು, ಹಲವು ರಾಜ್ಯಗಳಲ್ಲಿ ಇದ್ದ ಅಧಿಕಾರವನ್ನೂ ಕಳೆದುಕೊಂಡ ಕಾಂಗ್ರೆಸ್‌, ಇದೀಗ 2024ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಎದುರಾಗಬಹುದಾದ ರಾಜಕೀಯ ಸವಾಲುಗಳನ್ನು ಮೆಟ್ಟಿನಿಲ್ಲಲು ಉನ್ನತಾಧಿಕಾರವುಳ್ಳ ಕಾರ್ಯಪಡೆ- 2024 ರಚಿಸಿದೆ ಎಂದು ತಿಳಿದುಬಂದಿದೆ.

ಜೊತೆಗೆ ದೇಶದ ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲು ಮೇ 13ರಿಂದ ರಾಜಸ್ಥಾನದ ಉದಯ್‌ಪುರದಲ್ಲಿ 3 ದಿನಗಳ ಚಿಂತನ ಶಿಬಿರ ಆಯೋಜನೆಗೂ ನಿರ್ಧರಿಸಿದೆ.

ಈ ಶಿಬಿರದಲ್ಲಿ 400ಕ್ಕೂ ಹೆಚ್ಚು ಆಹ್ವಾನಿತ ಸದಸ್ಯರು ಭಾಗಿಯಾಗಲಿದ್ದಾರೆ.
ವಿಶೇಷವೆಂದರೆ, 2024ರ ಚುನಾವಣೆ ಗೆಲ್ಲುವ ರಣತಂತ್ರಗಳ ಕುರಿತು, ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಇತ್ತೀಚೆಗಷ್ಟೇ ಸೋನಿಯಾ ಗಾಂಧಿ ಒಳಗೊಂಡ ಪಕ್ಷದ ಹಿರಿಯ ನಾಯಕರ ತಂಡಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದರು. ಮತ್ತೊಂದೆಡೆ ಇಂಥದ್ದೇ ವಿಷಯದ ಕುರಿತು ವರದಿ ಸಲ್ಲಿಸಲು ಸ್ವತಃ ಸೋನಿಯಾ ಕೂಡಾ 8 ಜನರ ಸಮಿತಿ ರಚಿಸಿದ್ದು, ಅದು ಏ.21ರಂದು ತನ್ನ ವರದಿ ಸಲ್ಲಿಸಿತ್ತು.

ಈ ವರದಿಗಳ ಬಗ್ಗೆ ಚರ್ಚಿಸಲು ಸೋನಿಯಾ ನೇತೃತ್ವದಲ್ಲಿ ಮಂಗಳವಾರ ಪಕ್ಷದ ಹಿರಿಯ ನಾಯಕರು ಇಲ್ಲಿ ಸಭೆ ಸೇರಿದ್ದರು. ಅದರಲ್ಲಿ ಎರಡೂ ವರದಿಗಳ ಬಗ್ಗೆ ಚರ್ಚಿಸಿದ ಬಳಿಕ, ‘ಉನ್ನತಾಧಿಕಾರವುಳ್ಳ ಕಾರ್ಯಪಡೆ- 2024’ ರಚನೆ ಮತ್ತು ಉದಯ್‌ಪುರದಲ್ಲಿ ಚಿಂತನ ಶಿಬಿರ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆ ಬಳಿಕ ಪಕ್ಷದ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಸಭೆಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ, ಅಂಬಿಕಾ ಸೋನಿ, ಕೆ.ಸಿ.ವೇಣುಗೋಪಾಲ್‌, ಸುರ್ಜೇವಾಲಾ, ಮುಕುಲ್‌ ವಾಸ್ನಿಕ್‌, ದಿಗ್ವಿಜಯ್‌ ಸಿಂಗ್‌, ಜೈರಾಮ್‌ ರಮೇಶ್‌, ಪಿ.ಚಿದಂಬರಂ ಉಪಸ್ಥಿತರಿದ್ದರು.

ಪ್ರಶಾಂತ್‌ ಸೇರ್ಪಡೆಗೆ ಕಾಂಗ್ರೆಸ್‌ನಲ್ಲೇ ಅಪಸ್ವರ
ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು, ಅವರಿಗೆ ಪಕ್ಷದ ನೀತಿ ನಿರ್ಧಾರ ಕೈಗೊಳ್ಳಲು ಮುಕ್ತ ಅವಕಾಶ ನೀಡುವ ಬಗ್ಗೆ ಕಾಂಗ್ರೆಸ್‌ ನಾಯಕರಲ್ಲೇ ಅಪಸ್ವರ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಪ್ರಶಾಂತ್‌ ಸೇರ್ಪಡೆ ಬಗ್ಗೆ ಮಂಗಳವಾರ ಸೋನಿಯಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಈ ವೇಳೆ ಸತತ ಸೋಲಿನ ಹಿನ್ನೆಲೆಯಲ್ಲಿ, ಪಕ್ಷಕ್ಕೆ ಮತ್ತೆ ಜೀವ ತುಂಬಲು ಪ್ರಶಾಂತ್‌ ಕಿಶೋರ್‌ ಸೇರ್ಪಡೆ ಅಗತ್ಯ ಮತ್ತು ಅವರಿಗೆ ಮುಕ್ತ ಅವಕಾಶ ನೀಡುವ ಬಗ್ಗೆ ಪ್ರಿಯಾಂಕಾ ವಾದ್ರಾ ಮತ್ತು ಅಂಬಿಕಾ ಸೋನಿ ಒಲವು ವ್ಯಕ್ತಪಡಿಸಿದರು ಎನ್ನಲಾಗಿದೆ.

ಎಲಾನ್ ಮಸ್ಕ್ ಭುಜದ ಮೇಲೆ ಟ್ವಿಟ್ಟರ್ ಚೀವ್ ಚೀವ್

0

ವಿಶ್ವದ ನಂಬರ್‌ 1 ಶ್ರೀಮಂತ, ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ (ಮೈಕ್ರೋಬ್ಲಾಗಿಂಗ್‌ ತಾಣ ಟ್ಟಿಟ್ಟರ್‌ನ್ನು ಖರೀದಿಸುವುದಾಗಿ ಹೇಳಿದ್ದಾರೆ. 44 ಬಿಲಿಯನ್‌ (44 B USD) ಡಾಲರ್‌ಗೆ ಈ ಖರೀದಿ ನಡೆಯಲಿದೆ. ಈ ಮೂಲಕ ಈವರೆಗೆ ಉದ್ಯಮ ಜಗತ್ತಿನಲ್ಲಿ ನಡೆದ ಬೃಹತ್‌ ಡೀಲ್‌ ಇದಾಗಲಿದೆ.

16 ವರ್ಷ ಹಿಂದೆ ಆರಂಭವಾಗಿ ಸದ್ಯ ಸಾರ್ವಜನಿಕ ಕಂಪನಿಯಾಗಿರುವ ಈ ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಅನ್ನು ಮಸ್ಕ್ ಖರೀದಿಸಿದ್ದಾರೆ.

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್‌ ಮಸ್ಕ್ ಎಪ್ರಿಲ್ ತಿಂಗಳ ಆರಂಭದಲ್ಲಿ ಪ್ರಸಿದ್ಧ ಸಾಮಾಜಿಕ ಜಾಲತಾಣವಾದ ಟ್ವಿಟರಿನ 7.35 ಕೋಟಿ ಷೇರು ಖರೀದಿಸಿದ್ದಾರೆ.

ಈ ಮೂಲಕ ಟ್ವೀಟರಿನ ಶೇ.9.2 ರಷ್ಟುಪಾಲುದಾರಿಕೆ ಪಡೆದುಕೊಂಡಿದ್ದಾರೆ. ಈ ಖರೀದಿಯೊಂದಿಗೆ ಮಸ್ಕ್, ಟ್ವೀಟರ್‌ನ ಅತಿದೊಡ್ಡ ಷೇರುದಾರರಾಗಿ ಹೊರಹೊಮ್ಮಿದ್ದರು.

ಮಾರ್ಚ್ ತಿಂಗಳಲ್ಲಿ ಮಸ್ಕ್ ಟ್ವೀಟರ್‌ನಲ್ಲಿ ಮುಕ್ತವಾಗಿ ಸಂವಹನ ನಡೆಸುವ ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿದ್ದರು. ಮುಂದೊಂದು ದಿನ ಮಸ್ಕ್ ಆಕ್ರಮಣಕಾರಿ ಮಾಲೀಕತ್ವ ನೀತಿ ಮೂಲಕ ಟ್ವಿಟರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದಾರೆ. ಇದೀಗ ಈ ಎಲ್ಲಾ ವಿಚಾರ ನಿಜವಾಗಿದೆ.

ವಿಶ್ವದ ಶ್ರೀಮಂತ ಉದ್ಯಮಿ ಇದೀಗ ಸಾಮಾಜಿಕ ಜಾಲತಾಣ ದಿಗ್ಗಜನನ್ನೇ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಉಕ್ರೇನಿಗೆ ಇತರೆ ದೇಶಗಳ ನೆರವು, ರಷ್ಯದಿಂದ 3ನೇ ಮಹಾಯುದ್ಧ ಬೆದರಿಕೆ

0

ಉಕ್ರೇನ್‌ಗೆ ಪಾಶ್ಚಾತ್ಯ ರಾಷ್ಟ್ರಗಳು ಶಸ್ತ್ರಾಸ್ತ್ರ ಪೂರೈಸುವುದನ್ನು ವಿರೋಧಿಸಿರುವ ರಷ್ಯಾ, ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ಉಕ್ರೇನ್‌ಗೆ ಮತ್ತಷ್ಟು ಶಸ್ತ್ರಾಸ್ತ್ರ ಪೂರೈಕೆ ಮಾಡುವ ಕುರಿತು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ನಡುವೆ ಇಂದು ಸಭೆ ನಡೆ. ಈ ಹಿನ್ನೆಲೆಯಲ್ಲಿ ರಷ್ಯಾ ಹೇಳಿಕೆ ಕುತೂಹಲ ಕೆರಳಿಸಿದೆ.

ಈ ಕುರಿತು ಮಾತನಾಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್‌ ಲಾವ್ರೊವ್ ಅವರು, ನಿಜ, ನೀವು 3ನೇ ಮಹಾ ಯುದ್ಧವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಮೂರನೇ ಮಹಾಯುದ್ಧ ಆರಂಭವಾಗುವ ಅಪಾಯ ಗಂಭೀರಗೊಳ್ಳುತ್ತಿದೆ. ಅಲ್ಲದೆ, ಉಕ್ರೇನ್‌ ಶಾಂತಿ ಮಾತುಕತೆಗಳನ್ನು ವಿಫಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರಷ್ಯಾ ಯುದ್ಧ ಸಾರಿದಾಗಿನಿಂದಲೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಪಾಶ್ಚಾತ್ಯ ರಾಷ್ಟ್ರಗಳಿಂದ ಮಿಲಿಟರಿ ನೆರವು ಕೇಳುತ್ತಲೇ ಬಂದಿದ್ದಾರೆ. ಶಸ್ತ್ರಾಸ್ತ್ರಗಳಿದ್ದರೆ, ಉಕ್ರೇನ್‌ ಪಡೆಗಳು ಯುದ್ಧ ಗೆಲ್ಲುವುದಾಗಿ ಅವರು ಹೇಳಿದ್ದಾರೆ. ಆದ್ದರಿಂದ, ಮಾಸ್ಕೋದ ಎಚ್ಚರಿಕೆಯ ನಡುವೆಯೂ ಪಾಶ್ಚಾತ್ಯ ರಾಷ್ಟ್ರಗಳು ಈಗ ಉಕ್ರೇನ್‌ಗೆ ಹೆಚ್ಚಿನ ಪ್ರಮಾಣದ ಮಿಲಿಟರಿ ನೆರವು ನೀಡಲು ಮುಂದೆ ಬರುತ್ತಿವೆ.

ಈ ಹಿಂದೆ ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ವಾರ ಉಕ್ರೇನ್‌ ರಾಜಧಾನಿ ಕೀವ್‌ಗೆ ತೆರಳಿದ್ದ ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯಸ್ಥ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿ 53 ಸಾವಿರ ಕೋಟಿ ರೂ. ಮೊತ್ತದ ಮಿಲಿಟರಿ ನೆರವಿನ ಭರವಸೆ ನೀಡಿ ಬಂದಿದ್ದಾರೆ.

ಉಕ್ರೇನ್‌ಗೆ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುವ ಕುರಿತು ಚರ್ಚಿಸಲು ಅಮೆರಿಕ ನೀಡಿರುವ ಆಹ್ವಾನದ ಮೇರೆಗೆ 40 ದೇಶಗಳು ಇಂದು ಮಂಗಳವಾರ ಜರ್ಮನಿಯಲ್ಲಿ ಭದ್ರತಾ ಶೃಂಗಸಭೆ ನಡೆಸಲಿವೆ.

ಹಾಗೆಯೇ, ಉಕ್ರೇನ್‌ನಲ್ಲಿ ಯುದ್ಧ ಮುಗಿದ ನಂತರ ದೀರ್ಘಾವಧಿಯ ಭದ್ರತೆಯನ್ನು ಖಚಿತಪಡಿಸುವ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಕೋವಿಡ್ ನಿಬಂಧನೆ ಜಾರಿಗೆ ಹಬ್ಬಗಳ ಬಗ್ಗೆ ನಿಯಮ ವಿಧಿಸಿಲ್ಲ

0

ರಾಜ್ಯಕ್ಕೆ ಕೊರೊನಾ 4 ನೇ ಅಲೆ ಬರುವ ಬಗ್ಗೆ ಆತಂಕ ಎದುರಾಗಿದೆ. ರಾಜ್ಯ ಸರ್ಕಾರ ಹೊಸ ಕೊರೊನಾ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ ಹಬ್ಬಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಎಲ್ಲರೂ ಸರಳ ಮಾರ್ಗಸೂಚಿ ಪಾಲಿಸಿದರೆ ಸಮಸ್ಯೆಯಾಗಲ್ಲ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಸಭೆ ನಡೆಸಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದೇವೆ. ಕೆಲವರು ವಿಶ್ವದಲ್ಲಿ ಕೊರೊನಾ ಸೋಂಕು ಇಲ್ಲ ಎಂದುಕೊಂಡಿದ್ದಾರೆ. ನಮ್ಮ ರಾಜ್ಯಕ್ಕೂ ಕೊರೊನಾ 4 ನೇ ಅಲೆ ಬಗ್ಗೆ ವರದಿಯಾಗಿದೆ.

ಅಂತರರಾಜ್ಯ ಪ್ರಯಾಣಿಕರ ಮೇಲೆ ನಿಗವಹಿಸಲಾಗುವುದು. ಹಬ್ಬ ಮಾಡಬೇಡಿ ಎಂದು ಯಾರೂ ಹೇಳುವುದಿಲ್ಲ. ಯಾವುದೇ ಹಬ್ಬಗಳಿಗೆ ರಾಜ್ಯ ಸರ್ಕಾರ ನಿರ್ಬಂಧಿ ವಿಧಿಸಿಲ್ಲ. ಕೊರೊನಾ ಇರುವುದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.