Friday, February 27, 2026
Friday, February 27, 2026
Home Blog Page 1608

ಎಸ್ ಸಿ,ಎಸ್ ಟಿಯವರಿಗೆ ಮನೆ-ನಿವೇಶನ ನೀಡಲು ಮಾಹಿತಿ ಸಂಗ್ರಹ

0

ರಾಜ್ಯ ಸರ್ಕಾರವು ಮನೆ ಅಥವಾ ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸಂತೋಷದ ವಿಚಾರವನ್ನು ನೀಡಿದೆ.

ಪರಿಶಿಷ್ಟ ಜಾತಿ ಸಮುದಾಯದ ಪಟ್ಟಿಮಾಡಿ ತ್ವರಿತವಾಗಿ ನಿವೇಶನ ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ 4 ವಿಭಾಗಗಳ ಒಂದೊಂದು ಜಿಲ್ಲೆಯನ್ನು ಮಾದರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಿನ್ನೆ (ಸೋಮವಾರ) ನಡೆದ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಗಿದೆ.
ರಾಜ್ಯಾದ್ಯಂತ ಮನೆ ಅಥವಾ ನಿವೇಶನ ರಹಿತ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬಗಳಿಗೆ ಮನೆ ಅಥವಾ ನಿವೇಶನಗಳನ್ನು ನೀಡಲು ಆರಂಭಿಕವಾಗಿ 4 ವಿಭಾಗಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ 4 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಒಟ್ಟು 5.46 ಲಕ್ಷ ಕುಟುಂಬಗಳು ಮನೆ ಹೊಂದಿಲ್ಲ. ಅವರಿಗೆ ಭೂಮಿ ಕೊಡುವುದು ಸರ್ಕಾರದ ಜವಾಬ್ದಾರಿ. ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆದ್ಯತೆಯಲ್ಲಿ ಶೀಘ್ರವೇ ಮನೆ ನೀಡಲು ಆಯ್ದ ಜಿಲ್ಲೆಗಳಲ್ಲಿ ಸರ್ಕಾರಿ ಭೂಮಿ ಲಭ್ಯತೆ, ವಸತಿ ರಹಿತ ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಎಸ್ ಟಿ ವ್ಯಾಪ್ತಿಗೆ ಮತ್ತೆ 143 ವಸ್ತುಗಳು ಸೇರಲಿವೆ

0

ಈಗಾಗಲೇ ಬೆಲೆ ಏರಿಕೆಯ ಹೊಡೆತ ಅನುಭವಿಸುತ್ತಿರುವ ದೇಶದ ಜನರಿಗೆ, ಸರ್ಕಾರ ಮತ್ತೆ ದೊಡ್ಡ ಪ್ರಮಾಣದ ತೆರಿಗೆ ದರದ ಏರಿಕೆಯ ಶಾಕ್‌ ನೀಡಲು ಸಜ್ಜಾಗಿದೆ. ಹಾಲಿ ಇರುವ ಶೇ.5, 12,18 ಮತ್ತು ಶೇ.28ರ ಸ್ತರ ಬದಲಾಯಿಸಲು ನಿರ್ಧರಿಸಿರುವ ಸರ್ಕಾರ, ಅದರ ಜೊತೆಜೊತೆಗೆ ಸುಮಾರು 143 ವಸ್ತುಗಳನ್ನು ಹೊಸ ತೆರಿಗೆ ಸ್ತರಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ರಾಜ್ಯಗಳ ಮುಂದಿಟ್ಟಿದೆ.

ಒಂದು ಸಂದರ್ಭದಲ್ಲಿ ಕೇಂದ್ರೀಯ ಜಿಎಸ್‌ಟಿ ಮಂಡಳಿಯ ಪ್ರಸ್ತಾಪವನ್ನು ರಾಜ್ಯಗಳು ಒಪ್ಪಿಕೊಂಡರೆ, ಶೀಘ್ರವೇ 143 ವಸ್ತುಗಳ ದರ ಮತ್ತಷ್ಟು ಏರಿಕೆಯಾಗಲಿದೆ. ಜೊತೆಗೆ ಇದುವರೆಗೂ ತೆರಿಗೆ ವ್ಯಾಪ್ತಿಗೆ ಒಳಪಡಬಲ್ಲ. ಹಪ್ಪಳದಂಥ ವಸ್ತುಗಳು ಕೂಡಾ ಇನ್ನು ತೆರಿಗೆ ವ್ಯಾಪ್ತಿಗೆ ಸೇರಲಿವೆ.

ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ನಂತರ ರಾಜ್ಯಗಳು ಅನುಭವಿಸುತ್ತಿದ್ದ ನಷ್ಟವನ್ನು 5 ವರ್ಷಗಳ ಕಾಲ ಭರಿಸಲು ಸರ್ಕಾರ ಒಪ್ಪಿತ್ತು. ಆದರೆ, ಈ ಪದ್ಧತಿ ಮುಂದಿನ ಜೂನ್‌ನಿಂದ ಸ್ಥಗಿತವಾಗಲಿದೆ. ಆದ್ದರಿಂದ ರಾಜ್ಯಗಳ ನಷ್ಟಭರಿಸಿಕೊಡಲು, ತೆರಿಗೆ ವ್ಯಾಪ್ತಿಗೆ ಒಂದಷ್ಟುಹೊಸ ವಸ್ತುಗಳನ್ನು ತರುವ ಮತ್ತು ಕೆಲವೊಂದಿಷ್ಟು ವಸ್ತುಗಳನ್ನು ಹೆಚ್ಚಿನ ತೆರಿಗೆ ಸ್ತರಕ್ಕೆ ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ತುಮಕೂರು ಜಿಲ್ಲೆಯಲ್ಲಿ ಬೆಂಬಲ ಬೆಲೆ ಬೆಂಬತ್ತಿದ ರಾಗಿಕೃಷಿಕ ಹೈರಾಣ

0

ಬೆಂಬಲ ಬೆಲೆ ಯೋಜನೆಯಡಿ ತುಮಕೂರಿನ ಜಿಲ್ಲೆಯ ರೈತರಿಂದ ರಾಗಿ ಖರೀದಿ ಮತ್ತೆ ಆರಂಭವಾಗಿದ್ದರೂ ಆ ಜಿಲ್ಲೆಯ 8 ಕೇಂದ್ರಗಳಲ್ಲಿ ನೋಂದಣಿಯಾಗದೆ ರೈತರು ಕಷ್ಟಪಡುತ್ತಿದ್ದಾರೆ.

ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ಹುಳಿಯಾರು, ತಿಪಟೂರು, ಚಿಕ್ಕನಾಯಕನಹಳ್ಳಿ, ಶಿರಾ ಮತ್ತು ಮಧುಗಿರಿ ಎಪಿಎಂಸಿ ಪ್ರಾಂಗಣಗಳಲ್ಲಿ ಜಮಾಯಿಸಿದ್ದ ಸಾವಿರಾರು ರೈತರು ನೋಂದಣಿಯಾಗದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ರಾಗಿ ಮಾರುವ ಆತುರದಲ್ಲಿರುವ ರೈತರು ಕೃಷಿ ಇಲಾಖೆಯಿಂದ ಪಡೆದುಕೊಂಡಿರುವ ಫೂಟ್ ನಂಬರ್ ಸಮೇತರಾಗಿ ಆಯಾ ಖರೀದಿ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ, ಖರೀದಿ ಕೇಂದ್ರದ ಬಾಗಿಲು ಕೂಡ ತೆರೆಯದೇ ರೈತರಿಗೆ ಮಾಹಿತಿ ನೀಡದೆ ಸಿಬ್ಬಂದಿ ಕಾಣೆಯಾಗಿದ್ದರು. ಸರ್ಕಾರ ಈ ಹಿಂದಿನ ಮಾರ್ಗಸೂಚಿಯಂತೆ 4 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಮಾತ್ರ ರಾಗಿ ಖರೀದಿಗೆ ಮುಂದಾಗಿರುವುದು ಶೇ .60 ರೈತರನ್ನು ಕಂಗಾಲಾಗಿಸಿದೆ. ಆತಂಕದಿಂದಲೇ ಖರಿದೀ ಕೇಂದ್ರದ ಮುಂಭಾಗ ಅಳಲು ತೋಡಿಕೊಂಡರು.

ರಾಜ್ಯದಲ್ಲಿ 1.14 ಲಕ್ಷ ಮೆಟ್ರಿಕ್‌ ಟನ್ ರಾಗಿ ಖರೀದಿ ಮಾಡಲು ಅವಕಾಶ ಕಲ್ಪಿಸಿದೆ. 1,14 ಲಕ್ಷ ಮೆ.ಟನ್ ರಾಗಿ ಖರೀದಿಗೆ ನೋಂದಣಿಯಾದ ಕೂಡಲೇ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂಬ ಆತಂಕದಿಂದ ಒಮ್ಮೆಲೆ ಸಾವಿರಾರು ಸಂಖ್ಯೆಯಲ್ಲಿ ರೈತರು ನೋಂದಣಿಗೆ ಮುಗಿಬಿದ್ದಿದ್ದಾರೆ.

ಎಪಿಎಂಸಿ ಸಿಬ್ಬಂದಿ ತಮಗೆ ಬೇಕಾದವರಿಗೆ ನೋಂದಣಿ ಮಾಡಿಕೊಡುತ್ತಿದ್ದಾರೆ ಎಂಬ ದೂರುಗಳೂ ಬಂದಿದೆ.
ಈ ಬಗ್ಗೆ ಸೂಕ್ತ ನಿಗಾವಹಿಸಬೇಕು ಎಂದು ಜಿಲ್ಲೆಯಲ್ಲೆಡೆ ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿ ಜಾರಿಗೆ

0

ರಾಜ್ಯಾದ್ಯಂತ ಕೊರೋನಾ 4ನೇ ಅಲೆ ಬರುವ ಸಾಧ‍್ಯತೆ ಇರುವುದರಿಂದ ರಾಜ್ಯ ಸರ್ಕಾರ ಹೊಸ ಕೊರೋನಾ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಅವುಗಳೆನ್ನು ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಈ ಮಾರ್ಗ ಸೂಚಿಯನ್ನು ಕಡ್ಡಾಯಗೊಳಿಸಿ ಸರ್ಕಾರ ನಿನ್ನೆ (ಸೋಮವಾರ) ಆದೇಶ ಹೊರಡಿಸಿದೆ.

ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ‍್ಯಕ್ಷತೆಯಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಸಂಚಾರದ ವೇಳೆ ಉಗುಳುವುದನ್ನು ನಿರ್ಬಂಧಿಸಿ ಆದೇಶಿಸಲಾಗಿದೆ. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಂಚರಿಸುವ ವೇಳೆ ಉಗುಳಿದರೆ ದಂಡ ವಿಧಿಸಲು ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಫೆಬ್ರವರಿ 28ರಿಂದ ಕೊರೋನಾ ನಿರ್ಬಂಧಗಳನ್ನು ತೆಗೆದು ಹಾಕಲಾಗಿತ್ತು. ಆದರೆ,ಕೊರೋನಾ ಪ್ರಕರಣಗಳು ಕಡಿಮೆಯಾದ ಕಾರಣ ಸಾರ್ವಜನಿಕರಿಗೆ ಕೊರೋನಾ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿತ್ತು. ಪ್ರಸ್ತುತ ದೆಹಲಿ, ಹರಿಯಾಣ ಮತ್ತು ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪ್ರತಿದಿನ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚಳಗೊಳ್ಳುತ್ತಿವೆ.

ರಾಜ್ಯ ಸಂಪುಟ ವಿಸ್ತರಣೆ‌ ಹಲವು ಲೆಕ್ಕಾಚಾರದಲ್ಲಿ ಸಿಎಂ

0

ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ಹಲವು ಬಾರಿ ಪ್ರಯಾಣ ನಡೆಸಿದ್ದಾರೆ. ರಾಜ್ಯದಲ್ಲಿ ಎಲೆಕ್ಷನ್​ ಕ್ಯಾಬಿನೆಟ್​ ರಚನೆಯಾಗುತ್ತದೆ ಎಂಬ ನಿರೀಕ್ಷೆ ಮಾತ್ರ ಹಾಗೆ ಇದೆ. ಕಳೆದ ಬಾರಿ ಸರಿಯಾಗಿ ಸಿದ್ಧತೆ ಮಾಡಿಕೊಳ್ಳದೆ ವರಿಷ್ಠರ ಭೇಟಿಯಾಗಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಈಗ ಸಂಪೂರ್ಣ ಸಿದ್ಧರಾಗಿ ಏಪ್ರಿಲ್​ 29ಕ್ಕೆ ದೆಹಲಿ ಪತ್ತೆ ಪ್ರಯಾಣ ಮಾಡಲಿದ್ದಾರೆ.

ಈ ಭೇಟಿಯಲ್ಲಿ ಮುಖ್ಯಮಂತ್ರಿಗಳು ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ? ಎಂಬುವುದರ ಕಂಪ್ಲೀಟ್​ ಡೀಟೇಲ್ಸ್ ಇಲ್ಲಿದೆ.

ರಾಜ್ಯದಲ್ಲಿ ಸದ್ಯದಲ್ಲೇ ಎಲೆಕ್ಷನ್​ ಕ್ಯಾಬಿನೆಟ್​ ರಚನೆಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅದಕ್ಕಾಗಿಯೇ ಸಿದ್ಧರಾಗಿದ್ದಾರೆ. ವರಿಷ್ಠರನ್ನ ಭೇಟಿಯಾಗಲು ಇದೇ ಏಪ್ರಿಲ್​ 29ಕ್ಕೆ ದೆಹಲಿಗೆ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಈ ಭಾರೀ ಸಿಎಂ 3 ವಿಷಯ,ನೂರು ಲೆಕ್ಕಾಚಾರ ಹಾಕಿಕೊಂಡು ದೆಹಲಿ ಪ್ರಯಾಣ ಬೆಳೆಸಲಿದ್ದಾರೆ.

ಮೂರು ಪ್ರತ್ಯೇಕ ವಿಷಯಗಳನ್ನು ಸಿದ್ಧಪಡಿಸಿಕೊಂಡ ಸಿಎಂ ಬೊಮ್ಮಾಯಿ, ವರಿಷ್ಠರ ಬಳಿ ಮೂರು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಹಾಗಾದ್ರೆ, ಆ ಪತ್ತಿಗಳೆನ್ನು ಎಂಬುವುದಕ್ಕೆ ಉತ್ತರ ಇಲ್ಲಿದೆ.

ಮೊದಲಿಗೆ ಸಂಪುಟ ವಿಸ್ತರಣೆ ಬಗ್ಗೆ ಕೆಲವು ಹೆಸರುಗಳನ್ನ ಪ್ರಸ್ತಾಪಿಸಲಿದ್ದಾರೆ. ಮೊದಲೇ ಖಾಲಿಯಿರುವ 4 ಮತ್ತೆ ಈಶ್ವರಪ್ಪ ರಾಜೀನಾಮೆಯಿಂದ ತೆರವಾಗಿರೋ 1 ಸ್ಥಾನ ಸೇರಿ ಸದ್ಯ ಖಾಲಿಯಿರುವ 5 ಸಚಿವ ಸ್ಥಾನಗಳ ಭರ್ತಿ ಮಾಡಲು ಸಿಎಂ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ಇನ್ನೂ ಎರಡನೇಯದಾಗಿ ಬಹಳ ವಿಭಿನ್ನವಾದ ಆಯ್ಕೆಯ ಪ್ರಕ್ರಿಯೆತನ್ನು ಸಿಎಂ ವರಿಷ್ಟರ ಮುಂದಿಡಲಿದ್ದಾರೆ. ಕ್ಯಾಬಿನೆಟ್‌ನಲ್ಲಿನ ಎಲ್ಲಾ ಸಚಿವರನ್ನು ಹೊರಗೆ ಕಳುಹಿಸಿ, ಚುನಾವಣೆಗೆ ಮುನ್ನ ಸಂಪೂರ್ಣ ನೂತನ ಸಂಪುಟ ರಚನೆ ಕುರಿತು ಚರ್ಚಿಸಲಿದ್ದಾರೆ.

ಖಾಲಿಯಿರುವ 5 ಸಚಿವ ಸ್ಥಾನ ಭರ್ತಿ ಜೊತೆಗೆ 6 ರಿಂದ 8 ಸಚಿವರಿಗೆ ಕೊಕ್​​ ಕೊಟ್ಟು ಮತ್ತೆ ರಚನೆ ಮಾಡುವ ಬಗ್ಗೆ ಸಿಎಂ ಚಿಂತನೆ ನಡೆಸಿದ್ದಾರೆ. ಈ 3ವಿಷಯಗಳನ್ನು ಚರ್ಚೆ ಮಾಡಲು ಸಿಎಂ ನಿರ್ಧರಿಸಿದ್ದಾರೆ.

ಒಟ್ಟಿನಲ್ಲಿ ಕಳೆದ ಬಾರೀ ಸಂಪುಟ ಭರ್ತಿಗೆ ವರಿಷ್ಠರು ಅಸ್ತು ಎಂದಿರಲಿಲ್ಲ. ಆದ್ದರಿಂದ ಈ ಭಾರೀ ಸಿಎಂ ಬೊಮ್ಮಾಯಿ 3 ಪಟ್ಟಿಯೊಂದಿಗೆ ಸಿಎಂ ದೆಹಲಿ ಯಾತ್ರೆ ಆರಂಭಿಸಲಿದ್ದಾರೆ. ಯಾವ ಪಟ್ಟಿಗೆ ಹೈಕಮಾಂಡ್​ ಅಸ್ತು ಅನ್ನುತ್ತೆ ಅನ್ನೋದೇ ಕಾದು ನೋಡಬೇಕಾಗಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿಸುದ್ದಿ

0

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಚ್ಯುಟಿ ಪಡೆಯಲು ಅರ್ಹ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಚ್ಯುಟಿ ಪಾವತಿ ಕಾಯ್ದೆ 1972 ರ ಅಡಿಯಲ್ಲಿ ಗ್ರಾಚ್ಯುಟಿ ಪಡೆದುಕೊಳ್ಳಲು ಅರ್ಹ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ಅಂಗನವಾಡಿಗಳು ಶಾಸನಬದ್ಧ ಕರ್ತವ್ಯವನ್ನು ನಿರ್ವಹಿಸುತ್ತಿವೆ.
ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡಲು ನೇಮಕಗೊಂಡ ಕಾರ್ಯಕರ್ತೆಯರು 1972 ರ ಕಾಯ್ದೆಯಡಿ ಅರ್ಹರಾಗಿದ್ದಾರೆಯೇ ಎಂದು ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಕೋರ್ಟ್ ಈ ಅನಿಸಿಕೆ ವ್ಯಕ್ತಪಡಿಸಿದೆ.

ದೇಶದ ಶೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕ ಇಳಿಕೆ!

0

ಎರಡು ವಹಿವಾಟಿನ ದಿನಗಳಲ್ಲಿ ದೇಶದ ಷೇರು ಮಾರುಕಟ್ಟೆಗಳಲ್ಲಿ ಆಗಿರುವ ಕುಸಿತದ ಪರಿಣಾಮವಾಗಿ ಹೂಡಿಕೆದಾರರ ಸಂಪತ್ತಿನ ಮೌಲ್ಯವು ಒಟ್ಟು ₹ 6.47 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ.

ದೇಶದ ಷೇರು ಮಾರುಕಟ್ಟೆಗಳಲ್ಲಿ ಅಸ್ಥಿರ ವಹಿವಾಟು ಮುಂದುವರಿಯಲಿದೆ ಎಂಬುದು ನಮ್ಮ ನಿರೀಕ್ಷೆ. ಹಣದುಬ್ಬರ ಹೆಚ್ಚಳ ಹಾಗೂ ಅದರಿಂದ ಕಂಪನಿಗಳ ಲಾಭಾಂಶದ ಮೇಲೆ ಆಗಬಹುದಾದ ಪರಿಣಾಮದ ಬಗ್ಗೆ ಆತಂಕ ವ್ಯಕ್ತವಾಗಿದೆ.

ಬಿಎಸ್‌ಇ ಸ್ಮಾಲ್‌ ಕ್ಯಾಪ್ ಸೂಚ್ಯಂಕವು ಶೇ 1.88ರಷ್ಟು, ಮಿಡ್‌ ಕ್ಯಾಪ್‌ ಸೂಚ್ಯಂಕವು ಶೇ 1.86ರಷ್ಟು ಇಳಿಕೆ ಕಂಡಿದೆ.
‘ಚೀನಾದಲ್ಲಿ ಕೆಲವೆಡೆ ಲಾಕ್‌ಡೌನ್‌ ಜಾರಿಗೆ ಬಂದಿರುವ ಕಾರಣ ಕಚ್ಚಾ ತೈಲದ ಬೆಲೆ ಕುಸಿಯಿತು. ದೇಶದ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂದಕ್ಕೆ ಪಡೆಯುವುದು ನಿಂತಿಲ್ಲ. ಇದರ ಜೊತೆಗೆ ಇತರ ಜಾಗತಿಕ ಅನಿಶ್ಚಿತತೆಗಳು ಕೂಡ ಮಾರುಕಟ್ಟೆಯಲ್ಲಿ ಕರಡಿಯ ಹಿಡಿತ ಬಲವಾಗುವಂತೆ ಮಾಡಿವೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಸೋಮವಾರದ ವಹಿವಾಟಿನಲ್ಲಿ ಮುಂಬೈ ಷೇರು‍ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 617 ಅಂಶ ಇಳಿಕೆಯಾಗಿ, 56,579ಕ್ಕೆ ತಲುಪಿತು.

ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 714 ಅಂಶ ಇಳಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಸೋಮವಾರ 218 ಅಂಶ ಕುಸಿದಿದೆ ಎಂದು ತಿಳಿದುಬಂದಿದೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಶೀಘ್ರದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಬಡ್ಡಿ ದರ ಹೆಚ್ಚಿಸಬಹುದು ಎಂಬ ಕಳವಳವೂ ಇದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಣ್ಣ ಹೂಡಿಕೆಗಳ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕ ಹೇಳಿದ್ದಾರೆ.

ಚೀನಾದ ಷೇರುಪೇಟೆಗಳಲ್ಲಿ ಕೂಡ ಸೋಮವಾರ ಕುಸಿತ ಕಂಡುಬಂದಿದೆ. ಟೋಕಿಯೊ, ಹಾಂಗ್‌ಕಾಂಗ್‌, ಸೋಲ್‌ ಮಾರುಕಟ್ಟೆಗಳೂ ಕುಸಿದಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಶೇಕಡ 4.44ರಷ್ಟು ಕಡಿಮೆ ಆಗಿ, 101.92 ಡಾಲರ್‌ಗೆ ತಲುಪಿದೆ.

ರಾಜ್ಯದಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಘಟಕ ಸ್ಥಾಪನೆಯಾಗಲಿದೆ

0

ಕರ್ನಾಟಕ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಉತ್ಪಾದನಾ ಘಟಕದ ತವರಾಗಲಿದೆ ಎಂದು EV ತಯಾರಕ ಒಮೆಗಾ ಸೀಕಿ ಮೊಬಿಲಿಟಿ ಸಂಸ್ಥೆ ತಿಳಿಸಿದೆ.

ಸಂಘಟಿತ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮಾರುಕಟ್ಟೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ 200 ಪ್ರತಿಶತದಷ್ಟು ಬೃಹತ್ ಪ್ರಮಾಣದಲ್ಲಿ ಬೆಳೆದಿದೆ ಎಂದು OSM ಅಧ್ಯಕ್ಷ ಮತ್ತು ಸಂಸ್ಥಾಪಕ ಉದಯ್ ನಾರಂಗ್ ಅಭಿಪ್ರಾಯಪಟ್ಟಿದ್ದಾರೆ.

250 ಎಕರೆ ಭೂಮಿಯಲ್ಲಿ‌, 250 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಅತಿದೊಡ್ಡ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ. ಸುಮಾರು 10 ಲಕ್ಷ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಮೂರು ಹಂತಗಳಲ್ಲಿ ನಿರ್ಮಾಣವಾಗಲಿರುವ ಘಟಕದಲ್ಲಿ Rage+, Rage+ rapid EV, Rage+ Frost, Rage+Swap and Rage+Tipper ಹಾಗೂ ಒಎಸ್‌ಎಂ ಅನ್ನು ಪರಿಚಯಿಸಲಿದ್ದಾರೆ ಎಂದು ತಿಳಿದುಬಂದಿದೆ.

1 ಮಿಲಿಯನ್ ಯೂನಿಟ್‌ಗಳ ಸಾಮರ್ಥ್ಯ ಹೊಂದಿರುವ ಘಟಕ ಕರ್ನಾಟಕದಲ್ಲಿ ಸ್ಥಾಪನೆಯಾಗಲಿದೆ. ಈ ಘಟಕವು ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಜಾಗತಿಕ ನಾಯಕನಾಗುವ ಗುರಿಯತ್ತ ಇದು ಮೊದಲ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಕರ್ನಾಟಕವು ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ, EV ಬಳಕೆ ಇತ್ತೀಚೆಗೆ 1 ಲಕ್ಷ ಮೈಲಿಗಲ್ಲನ್ನು ದಾಟಿದೆ ಎಂದು ವರದಿಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಾರ, ಕರ್ನಾಟಕವು ಏಪ್ರಿಲ್ 15 ರವರೆಗೆ 100,432 ಇವಿಗಳನ್ನು ನೊಂದಾಯಿಸಿದೆ‌.

ಮೊದಲ ಸ್ಥಾನದಲ್ಲಿ ಉತ್ತರ ಪ್ರದೇಶ (3 ಲಕ್ಷ ಇವಿ) ಮತ್ತು ದೆಹಲಿ (1.4 ಲಕ್ಷ) ವಾಹನಗಳನ್ನು ಹೊಂದಿದೆ ಎನ್ನಲಾಗಿದೆ.

ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ಬಸ್ಪಾಸ್ ನೀಡಲು ಆದೇಶ

0

ಇದುವರೆಗೆ ಬೆಂಗಳೂರು ನಗರದ ಕಟ್ಟಡ ಕಾರ್ಮಿಕರಿಗೆ ಮಾತ್ರವೇ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ವಿತರಣೆಯನ್ನು ಕಟ್ಟಡ ಕಾರ್ಮಿಕರಿಗೆ ನೀಡಲಾಗುತ್ತಿತ್ತು. ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸೋದಾಗಿ ಕಳೆದ ಬಜೆಟ್ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು.

ಅದರಂತೆ, ಕಟ್ಟಡ ಕಾರ್ಮಿಕರಿಗೆ ರಾಜ್ಯಾದ್ಯಂತ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡುವಂತೆ ಯೋಜನೆಯನ್ನು ಅನುಷ್ಠಾನಕ್ಕಾಗಿ ಸರ್ಕಾರ ಆದೇಶ ಹೊರಡಿಸಿದೆ.

ಈ ಯೋಜನೆ ಜಾರಿ ಸಂದರ್ಭದಲ್ಲಿ ಕೆಟಿಟಿಪಿ ಕಾಯಿದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯೋಜನೆ ಜಾರಿಗೊಳಿಸುವ ವೆಚ್ಚವನ್ನು ಮಂಡಳಿ ನಿಧಿಯಿಂದ ಭರಿಸಬೇಕು. 10 ಕೋಟಿ ರೂಗಿಂತ ಹೆಚ್ಚಾದಲ್ಲಿ ಸಚಿವ ಸಂಪುಟ ಸಭೆಯಿಂದ ಅನುಮೋದನೆ ಪಡೆಯಬೇಕು ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯು ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೂಚಿಸಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ರಾಜ್ಯಾದ್ಯಂತ ಬಸ್ ಪಾಸ್ ಯೋಜನೆಯನ್ನು ಎಲ್ಲಾ ಕಟ್ಟಡ ಕಾರ್ಮಿಕರಿಗೆ ವಿಸ್ತರಿಸಲು ಆರ್ಥಿಕ ಇಲಾಖೆಯು ಏಪ್ರಿಲ್ 16ರಂದು ಅನುಮೋದನೆ ನೀಡಿದೆ. ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲೂ ಕಟ್ಟಡ ಕಾರ್ಮಿಕರು ಪ್ರಯಾಣಿಸಲು ರಿಯಾಯಿತಿ ದರದ ಬಸ್ ಪಾಸ್ ನೀಡಬಹುದು.

ಇದಕ್ಕಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅನುದಾನ ಇಟ್ಟಿರದ ಕಾರಣ, ಕಾರ್ಮಿಕ ಕಲ್ಯಾಣ ಮಂಡಳಿಯ ಅನುದಾನವನ್ನೇ ಬಳಸಿಕೊಂಡು,ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದೆ.

ಬೆಂಗಳೂರನ್ನ ಜಾಗತಿಕ ನಂ.1 ಸಿಲಿಕಾನ್ ಸಿಟಿ ಮಾಡುವ ಚಿಂತನೆ- ಸಿಎಂ

0

ಬೆಂಗಳೂರು ಟೆಕ್ ಸಮ್ಮಿಟ್ 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಬೆಂಗಳೂರು ಟೆಕ್ ಸಮ್ಮಿಟ್‌ನನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರು ಟೆಕ್ ಸಮ್ಮಿಟ್ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂತರ ಮಾಧ್ಯಮದವರೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡರು.

ಮುಂಬರುವ ದಿನಗಳಲ್ಲಿ ವಿವಿಧ ಕೈಗಾರಿಕಾ ವಲಯಗಳಿಗೂ ಸರ್ಕಾರ ಇಂಬು ನೀಡಲಿದೆ. ಬೆಂಗಳೂರನ್ನು ವಿಶ್ವದಲ್ಲಿಯೇ ನಂ.1 ಸಿಲಿಕಾನ್ ಸಿಟಿ ಮಾಡುವ ಚಿಂತನೆ ಸರ್ಕಾರಕ್ಕಿದೆ. ಬೆಂಗಳೂರಿನ ಹೊರವಲಯಗಳಲ್ಲಿಯೂ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಗಿದೆ ಎಂದರು.

ನವೆಂಬರ್‌ 16ರಿಂದ 18ರವರಿಗೆ ಮೂರು ದಿನಗಳ ಬೆಂಗಳೂರು ಟೆಕ್ ಸಮ್ಮಿಟ್ ಆಯೋಜಿಸಿರುವ ಪ್ರಯುಕ್ತ ವಿವಿಧ ವಲಯದ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಹಲವಾರು ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಕೈಗಾರಿಕೆಗಳಿಗೆ ಪೂರಕವಾದ ನೀತಿಗಳು, ಎಕೋಸಿಸ್ಟಂ ಮೂಲಸೌಕರ್ಯ, ತಾಂತ್ರಿಕತೆಗಳ ಬಗ್ಗೆ ಬಹಳಷ್ಟು ಸಲಹೆಗಳನ್ನು ಕೈಗಾರಿಕೋದ್ಯಮಿಗಳು ನೀಡಿದ್ದು, ಅವುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ದೇಶದ ಹಾಗೂ ಏಷ್ಯಾದ ಮಹತ್ವದ ತಂತ್ರಜ್ಞಾನ ಕಾರ್ಯಕ್ರಮವಾದ ಬೆಂಗಳೂರು ತಂತ್ರಜ್ಞಾನ ಶೃಂಗ’ದ 25ನೇ ಆವೃತ್ತಿಯನ್ನು ನವೆಂಬರ್ 16, 17 ಮತ್ತು 18ರಂದು ವಿಶೇಷವಾದ ರೀತಿಯಲ್ಲಿ ನಡೆಸಲು ಈಗಿನಿಂದಲೇ ಸಿದ್ಧತೆ ಆರಂಭಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಳವಣಿಗೆ ತಂತ್ರಜ್ಞಾನ ಕ್ಷೇತ್ರವು ಅಗಾಧ ನೆರವು ನೀಡುತ್ತಿದೆ. ಪ್ರಧಾನಿ ಮೋದಿ ಅವರು ಘೋಷಿಸಿರುವ 5 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಗೆ ಕರ್ನಾಟಕವು 1.5 ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿ ಇಟ್ಟುಕೊಂಡಿದೆ ಎಂದು ಅವರು ನುಡಿದರು.

ಈ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭೌತಿಕ ರೂಪದಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ (ಬಿಟಿಎಸ್) ಈಗಾಗಲೇ ತಯಾರಿ ಆರಂಭವಾಗಿದೆ. ಇದಕ್ಕೆ ಪೂರಕವಾಗಿ ಅಮೆರಿಕ, ಇಂಗ್ಲೆಂಡ್, ಜಪಾನ್ ಮುಂತಾದೆಡೆಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಇತ್ತೀಚೆಗೆ ಕರ್ನಾಟಕ ಡೇಟಾ ಸೆಂಟರ್ ನೀತಿ-2022’ನ್ನು ಕೂಡ ಜಾರಿಗೆ ತರಲಾಗಿದ್ದು, ಮುಂದಿನ 5 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ 10 ಸಾವಿರ ಕೋಟಿ ರೂ. ಬಂಡವಾಳವನ್ನು ಸೆಳೆಯಲಾಗುವುದು ಎಂದು ಸಚಿವರು ವಿವರಿಸಿದರು.

ಬಿಯಾಂಡ್ ಬೆಂಗಳೂರು’ ಉಪಕ್ರಮದಡಿ ಮೈಸೂರಿನಲ್ಲಿ ಸೈಬರ್ ಸೆಕ್ಯುರಿಟಿಗೆ, ಹುಬ್ಬಳ್ಳಿಯಲ್ಲಿ ಇಎಸ್ ಡಿಎಂ ಮತ್ತು ಕೃತಕ ಬುದ್ಧಿಮತ್ತೆ ಆಧರಿತ ಉದ್ದಿಮೆಗಳಿಗೆ, ಮಂಗಳೂರಿನಲ್ಲಿ ಫಿನ್-ಟೆಕ್ ವಲಯಕ್ಕೆ ಮತ್ತು ಬೆಳಗಾವಿಯಲ್ಲಿ ಏರೋಸ್ಪೇಸ್ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಇವೆಲ್ಲವೂ ಸುಗಮವಾಗಿ ನಡೆಯಬೇಕೆಂಬ ಉದ್ದೇಶದಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್’ ಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದರು.

ರಾಜ್ಯ ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ವಿದ್ಯುನ್ಮಾನ ಹಾಗೂ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಇಲಾಖೆಯ ನಿರ್ದೇಶಕಿ ಸಿ.ಎನ್.ಮೀನಾ ನಾಗರಾಜ್, ಜೈವಿಕ ತಂತ್ರಜ್ಞಾನ ಉದ್ಯಮಗಳ ಒಕ್ಕೂಟ(ಏಬಲ್)ದ ಅಧ್ಯಕ್ಷ ಜಿ.ಎಸ್. ಕೃಷ್ಣನ್, ಭಾರತೀಯ ಸಾಫ್ಟ್ವೇರ್ ಪಾರ್ಕ್ ಗಳ ಅಧ್ಯಕ್ಷ ಶೈಲೇಂದ್ರಕುಮಾರ್ ತ್ಯಾಗಿ, ಜಗದೀಶ್ ಪಟಣ್ಕರ್ ಉಪಸ್ಥಿತರಿದ್ದರು.

ಬಿ.ಟಿ. ವಿಷನ್ ಗ್ರೂಪ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ವರ್ಚುವಲ್ ನಲ್ಲಿ ಭಾಗವಹಿಸಿದ್ದರು.