Saturday, February 28, 2026
Saturday, February 28, 2026
Home Blog Page 1598

ಹೊರಗೆ ಉಕ್ರೇನ್ ಯುದ್ಧ ಪುಟಿನ್ ಗೆ ಕ್ಯಾನ್ಸರ್ ನ ಆತಂಕ

0

ವ್ಲಾಡಿಮಿರ್ ಪುಟಿನ್ ಅವರು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ.
ಆದ್ದರಿಂದ, ತಾತ್ಕಾಲಿಕವಾಗಿ ಅಧಿಕಾರವನ್ನು ದೇಶದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಅವರಿಗೆ ಹಸ್ತಾಂತರಿಸಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ಪುಟಿನ್‌ಗೆ ಸ್ವಲ್ಪ ಸಮಯದ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದೆ. ಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಸೇರಿದಂತೆ ಇತರ ಗಂಭೀರ ಕಾಯಿಲೆಗಳಿಂದ ಅವರು ಬಳಲುತ್ತಿರುವ ಬಗ್ಗೆ ವದಂತಿಗಳಿವೆ.

ಕೆಲವು ದಿನಗಳ ಹಿಂದೆ ಪುಟಿನ್ ಅವರು ನಿಕೊಲಾಯ್ ಪಟ್ರುಶೆವ್ ಅವರೊಂದಿಗೆ 2 ಗಂಟೆಗಳ ಕಾಲ ಸಂಭಾಷಣೆ ನಡೆಸಿದ್ದರು. ಪಟ್ರುಶೆವ್ ಅವರನ್ನು ಏಕೈಕ ವಿಶ್ವಾಸಾರ್ಹ ಮಿತ್ರ ಹಾಗೂ ಸರ್ಕಾರದಲ್ಲಿ ಸ್ನೇಹಿತ ಎಂದು ಪುಟಿನ್ ಪರಿಗಣಿಸುತ್ತಾರೆ. ಒಂದು ಸಂದರ್ಭದಲ್ಲಿ ಆರೋಗ್ಯ ತೀರಾ ಹದಗೆಟ್ಟರೆ, ತಾತ್ಕಾಲಿಕವಾಗಿ ಮತ್ತಷ್ಟು ದಿನಗಳ ಕಾಲ ದೇಶದ ಅಧಿಕಾರ ಪಟ್ರುಶೆವ್ ಅವರ ಬಳಿ ಮುಂದುವರೆಯುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ.

ಆದರೆ, ಪುಟಿನ್ ದೀರ್ಘಕಾಲದವರೆಗೆ ಅಧಿಕಾರವನ್ನು ಹಸ್ತಾಂತರಿಸಲು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ದೇಶದ ನಿಯಂತ್ರಣವು ಹೆಚ್ಚೆಂದರೆ 2 ರಿಂದ 3 ದಿನಗಳ ಕಾಲ ಪಟ್ರುಶೇವ್ ಅವರ ಕೈಯಲ್ಲಿರಬಹುದಷ್ಟೇ ಎಂದು ಮಾಹಿತಿ ಇದೆ.

ಬೆಂಗಳೂರಿನಲ್ಲಿ ಇ- ಬೀಟ್,ನೃಪತುಂಗ ವಿವಿ ಉದ್ಘಾಟನೆ

0

ಸ್ಮಾರ್ಟ್ ಪೊಲೀಸ್ ಇ ಬೀಟ್ ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಚಾಲನೆ ನೀಡಿದರು.

ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ನೂತನ ಯೋಜನೆಗೆ ಚಾಲನೆ ನೀಡಿ, ಕರ್ನಾಟಕ ಸರ್ಕಾರದ ಮಹತ್ವದ ಪ್ರಯತ್ನವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಜನರ ಮಾನ ಪ್ರಾಣ ರಕ್ಷಿಸುವುದು ಪೊಲೀಸ್ ಇಲಾಖೆಯ ಸವಾಲಿನ ಕೆಲಸ. ಅಪರಾಧಗಳ ತಡೆಗೆ ಸ್ಮಾರ್ಟ್ ಪೊಲೀಸ್ ಇ ಬೀಟ್ ನೆರವು ಪಡೆದುಕೊಳ್ಳಬೇಕಿದೆ. ಅಪರಾಧ ಪ್ರಕರಣಗಳ ಶೀಘ್ರ ಪತ್ತೆಗೆ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ನೆರವು ಪಡೆದುಕೊಳ್ಳಬೇಕಿದೆ. ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ, ಬಳ್ಳಾರಿ ಸೇರಿದಂತೆ 7 ಕಡೆ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಯಾಗಿದೆ ಎಂದು ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಲೋಕಪ್ರಿಯ ಮುಖ್ಯಮಂತ್ರಿ ಎಂದು ಕರೆದರು. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷ. ನೃಪತುಂಗ ವಿಶ್ವವಿದ್ಯಾಲಯವು ಉದ್ಘಾಟನೆ ಆಗಿರುವುದು ಸಂತಸದ ವಿಚಾರ. ದೇಶವನ್ನು ಸರ್ವೊತ್ತಮ ಸ್ಥಾನದಲ್ಲಿ ಇರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಮಾಡಿದ್ದಾರೆ. ವೈದ್ಯಕೀಯ ಕಾಲೇಜು, ಕೇಂದ್ರೀಯ ವಿಶ್ವವಿದ್ಯಾಲಯ, ಐಐಟಿಗಳನ್ನು ಬಿಜೆಪಿ ನೇತೃತ್ವದ ಮೋದಿ ಸರ್ಕಾರ ದೇಶದಲ್ಲಿ ಹೊಸದಾಗಿ ಸ್ಥಾಪನೆ ಮಾಡಿದೆ.

2014ಕ್ಕೂ ಮೊದಲು ಉಗ್ರಗಾಮಿಗಳ ಮಾತಿಗೆ ಸರ್ಕಾರಗಳು ಸಮರ್ಪಕ ಉತ್ತರ ಕೊಡುತ್ತಿರಲಿಲ್ಲ. ಆದರೆ ಮೋದಿ ಅಧಿಕಾರಕ್ಕೆ ಬಂದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಮಾಡಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಮುಂದಾದರು. ಭಾರತವನ್ನು ಕೈಗಾರಿಕೆ ಹಬ್ ಮಾಡಲು ಮೋದಿ ಶ್ರಮಿಸುತ್ತಿದ್ದಾರೆ. ಉದ್ಯೋಗ ಸೃಜನಗೆ ಕ್ರಮವಹಿಸಿದ್ದಾರೆ. ಗಡಿವಿವಾದಗಳನ್ನು ಪರಿಹರಿಸಲು ಭಾರತ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. 370ನೇ ವಿಧಿ ರದ್ದುಪಡಿಸಿದೆ. ಸಿಎಎ ಜಾರಿಯಂಥ ಮಹತ್ವದ ನಿರ್ಧಾರಗಳನ್ನು ಮೋದಿ ಸರ್ಕಾರ ತೆಗೆದುಕೊಂಡಿದೆ ಎಂದು ಹೇಳಿದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಕಾಶ್ಮೀರವನ್ನು ದೇಶದ ಜೊತೆ ಸೇರಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದರು. ಹಲವು ಜನಪರ ಕಾರ್ಯಕ್ರಮಗಳ ಮೂಲಕ ಪ್ರಧಾನಿ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ. ಇ ಬೀಟ್ ಮೂಲಕ ಪೊಲೀಸರ ಕಾರ್ಯ ಮತ್ತಷ್ಟು ಜನರಿಗೆ ಬಹು ಬೇಗ ತಲುಪಲು ಸಾಧ್ಯವಿದೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟರು.

ಮಾಧ್ಯಮಗಳ ಕ್ಯಾಮೆರಾ ಮೆನ್​ಗಳು ಕ್ಯಾಮೆರಾ ಸೆಟ್ ಮಾಡಿ ಕುಳಿತುಕೊಳ್ಳಿ. ಇಂದು ನಾನು ವಿದ್ಯಾರ್ಥಿಗಳ ಜೊತೆಗೆ ಮಾತನಾಡಬೇಕು. ಇವತ್ತು ಅಕ್ಷಯ ತೃತೀಯದ ದಿನದ ಪವಿತ್ರ ದಿನ. ದೇಶದಲ್ಲಿ ಕೃಷಿಕರು ಹಸುವಿನ ಪೂಜೆ ನೆರವೇರಿಸಿ ವರ್ಷವನ್ನು ಆರಂಭಿಸುತ್ತಾರೆ. ಇವತ್ತು ಬಸವಣ್ಣನವರ ಜಯಂತಿ ಕೂಡ ಇದೆ. ಲೋಕತಂತ್ರದ ಸ್ಪಷ್ಟ ಉದಾಹರಣೆಯನ್ನು ಅನುಭವ ಮಂಟಪದ ಮೂಲಕ ಬಸವಣ್ಣ ಬೋಧಿಸಿದ್ದಾರೆ. ಯುವಜನರು ಬಸವಣ್ಣನವರ ವಚನಗಳನ್ನು ಓದಬೇಕು. ಜೀವನದಲ್ಲಿ ಯಾವ ಸಮಸ್ಯೆ ಕೂಡ ಬರೋದಿಲ್ಲ. ಇದು ಅತ್ಯಂತ ಗೌರವದ ದಿನ ಎಂದು ಹೇಳಿದರು.

ನನ್ನ ಮುಂದೆ ಕರ್ನಾಟಕ, ದೇಶದ ಭವಿಷ್ಯ ಕೂತಿದೆ. ಯುವಕರು ದೇಶದ ಭವಿಷ್ಯ. ಮೊದಲು ಇದು ಸರ್ಕಾರಿ ವಿಜ್ಞಾನ ಕಾಲೇಜು ಆಗಿತ್ತು. ಕಳೆದ 100 ವರ್ಷಗಳಿಂದ ಇಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ನೃಪತುಂಗ ವಿವಿಯಾಗಿ ಅಧಿಕೃತ ಉದ್ಘಾಟನೆ ಆಗಿದೆ. ರಾಷ್ಟ್ರಕೂಟದ ಪ್ರಸಿದ್ಧ ರಾಜನಾದ ನೃಪತುಂಗನ ಹೆಸರನ್ನು ವಿವಿಗೆ ಇಟ್ಟಿರುವುದು ಹರ್ಷ ತಂದಿದೆ. ದೇಶಕ್ಕೆ ಸ್ವತಂತ್ರ ಸಿಕ್ಕಿದೆ. ಪ್ರತಿ ಹಂತದಲ್ಲಿಯೂ ಹಲವರು ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ವಿವರಿಸಿದರು.

ಪ್ರಧಾನಿಗಳು 3 ವಿಚಾರಗಳಿಗೆ ಮಹತ್ವ ಕೊಡುತ್ತಾರೆ. ಸೈನಿಕರಿಗೆ ವಿಶೇಷ ಗೌರವ ಕೊಡುತ್ತಿದ್ದಾರೆ. ಸಂಕಲ್ಪ ಮಾಡುವುದು ಜೀವನದಲ್ಲಿ ಬಹಳ ಮುಖ್ಯ. ಚಿಕ್ಕ ಚಿಕ್ಕ ಸಂಕಲ್ಪ ಕೂಡ ದೇಶದ ಅಭಿವೃದ್ಧಿಗೆ ನೆರವಾಗುತ್ತವೆ. ತೆರಿಗೆ ವಂಚಿಸುವುದಿಲ್ಲ. ಸಂಚಾರ ನಿಯಮ ಉಲ್ಲಂಘಿಸುವುದಿಲ್ಲ ಎಂದು ಎಲ್ಲರೂ ಸಂಕಲ್ಪ ಮಾಡಬೇಕು. ಹೊಸ ಶಿಕ್ಷಣ ನೀತಿಯನ್ನು ಸ್ವೀಕರಿಸಿದ ಮೊದಲ ರಾಜ್ಯ ಕರ್ನಾಟಕ. ಇದು ಅತ್ಯಂತ ಸಂತಸದ ವಿಚಾರ.ಎನ್ಇಪಿ ನೀತಿ ಮೂಲಕ ದೇಶವನ್ನು ಸೂಪರ್ ನಾಲೆಡ್ಜ್​ ದೇಶವನ್ನಾಗಿ ಮಾಡಲು ಪ್ರಧಾನಿಗಳು ಪಣ ತೊಟ್ಟಿದ್ದಾರೆ. ಮೋದಿ ಸರ್ಕಾರ ಉನ್ನತ ಶಿಕ್ಷಣಕ್ಕೆ ವಿಶೇಷ ಒತ್ತು‌ ನೀಡಿದೆ. ನಮ್ಮ ಸರ್ಕಾರ‌ವು ದೇಶದಲ್ಲಿ 370ಕ್ಕೂ ಹೆಚ್ಚು ವಿವಿಗಳನ್ನು ಸ್ಥಾಪಿಸಿದೆ ಎಂದರು.

ಕೇಂದ್ರ ಗೃಹ ಸಚಿವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೇಸ್​ಕೋರ್ಸ್​ ರಸ್ತೆಯಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಒಂದು ಬದಿ ಸಂಚಾರ ಬಂದ್ ಮಾಡಿಸಿದ್ದರು ಇದರಿಂದ ವಾಹನ ಸವಾರರು ಮತ್ತು ಟ್ರಾಫಿಕ್ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಕೇವಲ ಶಾಸಕರು ಮತ್ತು ಮಂತ್ರಿಗಳನ್ನು ಮಾತ್ರವೇ ಒಳಗೆ ಬಿಡುತ್ತಿದ್ದಾರೆ ಎಂದು ವಾಹನ ಸವಾರರು ಆಕ್ಷೇಪಿಸಿದರು.

ಹುಬ್ಬಳ್ಳಿ- ಬೆಂಗಳೂರು ನಡುವೆ ವೇಗದ ರೈಲು

0

ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ಮುಂಬರುವ ದಿನಗಳಲ್ಲಿ ವಂದೇ ಭಾರತ ರೈಲು 160 ಕಿಮೀ ವೇಗದಲ್ಲಿ ಸಂಚರಿಸಲಿದೆ. ಆರಂಭದಲ್ಲಿ ಐದಾರು ನಿಲ್ದಾಣದಲ್ಲಿ ಮಾತ್ರ ನಿಲುಗಡೆ ಹೊಂದಲಿದೆ. ಶೀಘ್ರದಲ್ಲೇ ಹುಬ್ಬಳ್ಳಿ-ದಾವಣಗೆರೆಗೆ ಡೆಮೋ ರೈಲು ಸಂಚರಿಸಲಿದೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ಹೇಳಿದರು.

ತಾಲೂಕಿನ ಕರಜಗಿ ಗ್ರಾಮದ ರೈಲ್ವೆ ನಿಲ್ದಾಣದ ಬಳಿ .21.13ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಸ್ತೆ ಮೇಲ್ಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕಳೆದ ರೈಲ್ವೆ ಬಜೆಟ್‌ನಲ್ಲಿ 2.39 ಲಕ್ಷ ಕೋಟಿ ವ್ಯಯಿಸಲಾಗುತ್ತಿದೆ. ನೈಋುತ್ಯ ರೈಲ್ವೆ ವಿಭಾಗಕ್ಕೆ .6,900 ಕೋಟಿ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 43 ಹೆಚ್ಚುವರಿಯಾಗಿ ಕೊಡಲಾಗಿದೆ. ಮೂಲಭೂತ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ಕೊಟ್ಟಿದ್ದೇವೆ. ಹೊಸ ಲೈನ್‌, ಡಬ್ಲಿಂಗ್‌ಗೆ 2325 ಕೋಟಿ ಕೊಟ್ಟಿದ್ದೇವೆ. ರಸ್ತೆ ಹಾಗೂ ಹಳಿ ಸುರಕ್ಷತೆಗೆ 625 ಕೋಟಿ, ಸೇತುವೆ ನಿರ್ಮಾಣಕ್ಕೆ 254 ಕೋಟಿ ಅನುದಾನವನ್ನು ಕೇಂದ್ರ ಬಜೆಟ್‌ನಲ್ಲಿ ಕೊಡಲಾಗಿದೆ ಎಂದರು.

ಹಾವೇರಿ,ಸವಣೂರು 20 ಕಿಮಿ ರೈಲ್ವೆ ಡಬ್ಲಿಂಗ್‌ ಕಾಮಗಾರಿ ಪೂರ್ಣಗೊಂಡಿದೆ. ಕರಜಗಿ ಮತ್ತು ಹಾವೇರಿಯಲ್ಲಿ ಸ್ಟೇಷನ್‌ ಕಟ್ಟಡ ನಿರ್ಮಿಸಲಾಗುತ್ತಿದೆ. ಕರಜಗಿ, ಸವಣೂರಿನಲ್ಲಿ ಹೈ ಲೆವಲ್‌ ಪ್ಲಾಟ್‌ಫಾರಂ ಮಾಡುತ್ತಿದ್ದೇವೆ. ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕೆ ,50 ಕೋಟಿ ಕೇಂದ್ರ ಸರ್ಕಾರ ಅನುದಾನ ನೀಡಿದೆ. ರಾಣಿಬೆನ್ನೂರು ಪ್ಲಾಟ್‌ಫಾರಂನ ವಿಸ್ತರಣೆ ಕೆಲಸ ನಡೆದಿದೆ. ಗದಗ-ಯಲವಿಗಿ 55 ಕಿಮೀ ಉದ್ದದ ರೈಲು ಮಾರ್ಗ ಯೋಜನೆಗೆ ಭೂಸ್ವಾಧೀನಕ್ಕಾಗಿ ರಾಜ್ಯ ಸರ್ಕಾರ 125 ಕೋಟಿ ಮೀಸಲಿಟ್ಟಿದೆ ಎಂದು ತಿಳಿಸಿದರು.

ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಮೋಟೆಬೆನ್ನೂರ, ರಾಣಿಬೆನ್ನೂರ ಬಳಿ ಕಾಮಗಾರಿ ಮಂದಗತಿಯಲ್ಲಿ ನಡೆಯತ್ತಿದೆ. ಗುಣಮಟ್ಟದೊಂದಿಗೆ ಶೀಘ್ರದಲ್ಲಿ ಯಾರು ಕಾಮಗಾರಿಯನ್ನು ಪೂರ್ಣಗೊಳಿಸುತ್ತಾರೋ ಅವರಿಗೆ ಟೆಂಡರ್‌ ಕೊಡಿ. ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಸೂಚಿಸಿದರು.

ಕರಜಗಿ ಗ್ರಾಮದ ಬಳಿ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಬಹುಬೇಡಿಕೆ ಇತ್ತು. ಆದ್ದರಿಂದ,21.13ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಪಾದಚಾರಿಗಳಿಗೆ ಅನುಕೂಲ ಕಲ್ಪಿಸಲು ಫುಟ್‌ಪಾತ್‌ ಸಹ ನಿರ್ಮಿಸಲಾಗಿದೆ. 2018ರಲ್ಲಿ ಆರಂಭವಾಗಿದ್ದ ಕಾಮಗಾರಿ ಕೋವಿಡ್‌ ಕಾರಣದಿಂದ ಒಂದು ವರ್ಷ ತಡವಾಗಿ ಮುಗಿದಿದೆ. ಈ ವರ್ಷದ ಬಜೆಟ್‌ನಲ್ಲಿ ನಮ್ಮ ಜಿಲ್ಲೆಯ 6 ರಸ್ತೆ ಕೆಳ ಸೇತುವೆ ಮತ್ತು ರಸ್ತೆ ಮೇಲ್ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಕೆಳ ಸೇತುವೆಗಳನ್ನು ಮೇಲ್ಸೇತುವೆಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತದೆ. ನಾಗೇಂದ್ರಮಟ್ಟಿಯಲ್ಲಿ ಸೇತುವೆ ನಿರ್ಮಾಣದ ಬೇಡಿಕೆ ಇದೆ. ರೈಲ್ವೆ ಇಲಾಖೆಯ ಎಂಜಿನಿಯರ್‌ ಭೇಟಿ ನೀಡಿ ಪರಿಶೀಲಿಸಿ ಡಿಪಿಆರ್‌. ತಯಾರಿಸಲು ಸೂಚಿಸಲಾಗಿದೆ. ರಾಣೆಬೆನ್ನೂರ-ಗುತ್ತಲ ಮಾರ್ಗದಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ನಡೆದಿದೆ ಎಂದರು.

ರಕ್ತದಾನದ ಬಗ್ಗೆ ಸಾರ್ವಜನಿಕ ಗಮನ ಸೆಳೆಯಲು, ಕಿರಣ್ ಪಾದಯಾತ್ರೆ

0

ರಕ್ತದಾನ ಮಹಾದಾನ ಎಂದು ನಾವು ಕೇಳಿರುತ್ತೇವೆ. ಇಲ್ಲೊಬ್ಬ ವ್ಯಕ್ತಿ ರಕ್ತದಾನದ ಜಾಗೃತಿ ಮೂಡಿಸುವುದಕ್ಕೆ, ಪಾದಯಾತ್ರೆಯನ್ನು ಕಳೆದ 4ತಿಂಗಳಿನಿಂದ ಆರಂಭಿಸಿದ್ದಾನೆ.

ಈತ ದೆಹಲಿ ಮೂಲದ 37 ವರ್ಷದ ಕಿರಣ್ ವರ್ಮಾ. ಕೇರಳ ರಾಜಧಾನಿ ತಿರುವನಂತಪುರದಿಂದ ದೇಶದ ಅನೇಕ ರಾಜ್ಯಗಳಲ್ಲಿ ಸುತ್ತಾಡಿ ದೆಹಲಿ ತಲುಪುವ ಗುರಿ ಹೊಂದಿದುವ ಕಿರಣ್ ವರ್ಮಾ ನಿನ್ನೆ (ಸೋಮವಾರ) ಬೆಳಗಾವಿಗೆ ಆಗಮಿಸಿದ್ದಾರೆ.

2021ರ ಡಿಸೆಂಬರ್ 28 ರಂದು ತಿರುವನಂತಪುರಂನಿಂದ ಪಾದಯಾತ್ರೆ ಪ್ರಾರಂಭಿಸಿದ್ದರು. ಕಿರಣ್ ವರ್ಮಾ 3300 ಕಿಲೋಮೀಟರ್ ಸಂಚರಿಸಿ ಬೆಳಗಾವಿ ತಲುಪಿದ್ದಾರೆ.

2024ರ ಜೂನ್ 14ರ ವಿಶ್ವ ರಕ್ತದಾನ ದಿನದಂದು ದೆಹಲಿ ತಲುಪುವ ಗುರಿ ಹೊಂದಿರುವ ಕಿರಣ್ ವರ್ಮಾ ನಿತ್ಯ 30 ರಿಂದ 40 ಕಿಲೋಮೀಟರ್ ಸಂಚರಿಸುತ್ತಾರೆ. ಇದುವರೆಗೆ 3330 ಕಿಮೀ ನಡಿಗೆ ಪೂರ್ಣಗೊಳಿಸಿರುವ ಕಿರಣ್ ವರ್ಮಾ ಕೇರಳ, ಪಾಂಡಿಚೇರಿ, ಗೋವಾ, ತಮಿಳುನಾಡು, ಕರ್ನಾಟಕದ ವಿವಿಧ ನಗರಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ.

ಈಗಾಗಲೇ ಭೇಟಿಯಾದ ಕಡೆಗಳಲ್ಲಿ ಕಿರಣ್ ವರ್ಮಾ ನಡಿಗೆಯಿಂದ ಸ್ಪೂರ್ತಿಗೊಂಡು ವಿವಿಧೆಡೆ 26 ರಕ್ತದಾನ ಶಿಬಿರ ಆಯೋಜನೆ ಮಾಡಿ 2037 ಯೂಟಿನ್ ರಕ್ತ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

ರಕ್ತದ ಕೊರತೆ ನೀಗಿಸಲು ಪ್ರೇರಣೆ ತುಂಬಲು ಏಕಾಂಗಿಯಾಗಿ ಪಾದಯಾತ್ರೆ ಮಾಡುತ್ತಿದ್ದೇನೆ. ನನ್ನ ಈ ಪಾದಯಾತ್ರೆಗೆ ಕುಟುಂಬಸ್ಥರು, ಸ್ನೇಹಿತರ ಪ್ರೋತ್ಸಾಹ ಇದೆ.‌ನನ್ನ ಪತ್ನಿ ಕೆಮಿಕಲ್ ಇಂಜಿನಿಯರ್ ಇದ್ದು ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ.ನಿತ್ಯದ ಖರ್ಚು ವೆಚ್ಚಕ್ಕೆ ಸ್ನೇಹಿತರು ಕುಟುಂಬಸ್ಥರು ಧನಸಹಾಯ ಮಾಡುತ್ತಿದ್ದಾರೆ‌. ಯಾವುದೇ ಸರ್ಕಾರದಿಂದ ನಾನು ನೆರವು ಪಡೆದಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ಬಾರಿ ಕೊರೋನಾ ಸಂಕಷ್ಟದಲ್ಲಿದ್ದಾಗ ಪ್ಲಾಸ್ಮಾ ಕೊರತೆ ಎದುರಾಗಿದ್ದು ಎಲ್ಲರಿಗೂ ಗೊತ್ತು‌. ದೇಶದಲ್ಲಿ 5 ಮಿಲಿಯನ್ ಯುವಕರು ರಕ್ತದಾನ ಮಾಡಿದ್ರೆ ರಕ್ತದ ಕೊರತೆಯಿಂದ ಯಾರೂ ಸಾಯಲ್ಲ ಅಂತಾರೆ ಕಿರಣ್ ವರ್ಮಾ. ಪಾದಯಾತ್ರೆ ವೇಳಡ ಆಯಾ ನಗರದ ಹೋಟೆಲ್‌ಗಳಲ್ಲಿ ಆಹಾರ ಸೇವಿಸಿ ಲಾಡ್ಜ್‌ಗಳಲ್ಲಿ ವಾಸ್ತವ್ಯ ಹೂಡುತ್ತೇನೆ. ಕೆಲವೆಡೆ ತಮ್ಮ ಸ್ನೇಹಿತರು ಹಾಗೂ ಪಾದಯಾತ್ರೆ ವೇಳೆ ಪರಿಚಯವಾದವರು ಆಶ್ರಯ ನೀಡ್ತಾರೆ. ಬಸ್ ನಿಲ್ದಾಣಗಳಲ್ಲೂ ರಾತ್ರಿ ಕಳೆದಿದ್ದೇನೆ. ಕೆಲವೆಡೆ ನಾನು ಏಕಾಂಗಿಯಾಗಿ ಪಾದಯಾತ್ರೆ ಹೊರಟಾಗ ಕೆಲ ಪುಂಡರು ಹಲ್ಲೆ ಮಾಡಿ ಮೊಬೈಲ್ ವಾಚ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ ಎಂದು ತಮ್ಮ ಪಾದಯಾತ್ರೆ ಅನುಭವ ಮಾಧ್ಯಮಗಳ ಜೊತೆ ಕಿರಣ್ ವರ್ಮಾ ಹಂಚಿಕೊಂಡಿದ್ದಾರೆ.

ಇನ್ನು ಇಂತಹ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಖುಷಿ ಇದೆ. ರಕ್ತದಾನ ಮಾಡುವುದರಿಂದ ಆರೊಗ್ಯವಂತರಾಗಿಯೂ ಇರಬಹುದು, ಒಂದು ಜೀವ ಉಳಿಸಿದ ಸಾರ್ಥಕತೆಯೂ ಇರುತ್ತದೆ‌. ಹೀಗಾಗಿ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು ಅಂತಾ ಯುವಕರಲ್ಲಿ ಕಿರಣ್ ವರ್ಮಾ ಮನವಿ ಮಾಡಿದ್ದಾರೆ.

ಖಾಕಿಯವರಲ್ಲೂ ಮಾನವೀಯತೆ ಬತ್ತಿಲ್ಲ!

0

ಪೊಲೀಸ್ ವಾಲೆ ಬುಲಾ ರಹೆ! ಅಂತ ಕರೆ ಬಂತು. ಮನೆಯಲ್ಲಿದ್ದ ತಂದೆ ತಾಯಿಗಳಿಗೆ ಹೃದಯವೇ ಬಾಯಿಗೆ ಬಂದಂತೆ ಭಯ. ಒಂದು ಕ್ಷಣ ಬೆವತು ಬಿಟ್ಟರು.  ಇದ್ದ ಮಗ ಏನು ಮಾಡಿಕೊಂಡನೋ ಏನೋ!. ನೌಕರಿ ಬಗ್ಗೆ ಹೇಳಿ ಕೊಳ್ಳುವಂಥದ್ದಿಲ್ಲ. ಕಂಗಾಲಾದರು ತಂದೆ ತಾಯಿಗಳು.

ಅವರ ಮಗ ಜೈ ಹಲ್ದೆ ದಿನಾಲೂ ರಾತ್ರಿ ಸೈಕಲ್ ತುಳೀತಿದ್ದ.ಅಂದರೆ ಸುಮ್ಮನೆ ಅಲ್ಲ. ಜೊಮಾಟೋ ಕಂಪನಿಯ ಆಹಾರದ ಪೊಟ್ಟಣಗಳನ್ನ ಮನೆಮನೆಗೆ ತಲುಪಿಸುತ್ತಿದ್ದ‌. ಅಲ್ಲೇನಾದರೂ ಹೆಚ್ಚು ಕಮ್ಮಿ ಆಯ್ತ?ಅಂತ ಚಿಂತೆ.

ದಿನಾ ರಾತ್ರಿ ಸೈಕಲ್ ತುಳಿದು ಹೋಗುತ್ತಿದ್ದ ಜೈ ಹಲ್ದೆ ಯನ್ನ ಒಂದು ರಾತ್ರಿ

ಸೈಕಲ್ ಹಿಡಿದು ಪೋಲಿಸ್ ಖಾಜಿ ಎನ್ನುವವರು ನೀನು ದಿನಾಲೂ ರಾತ್ರಿಯೇ ಸೈಕಲ್ ತುಳೀಬೇಕ? ಬೆಳಿಗ್ಗೆ ಹಂಚಬಾರ್ದ? ಅಂತ ಕೇಳಿದರು.

ನನ್ನ ಹತ್ರ ಬೈಕ್ ಕೊಳ್ಳೋಕೆ ಆಗಲ್ಲ .ಸೈಕಲ್ಲೇ ಆಧಾರ ಅಂತ.

ಆತ ಬಡತನದಬಗ್ಗೆ ಹೇಳಿಕೊಂಡ. ಪೋಲಿಸ್ ಖಾಜಿ ಸುಮ್ಮನೆ ಕೂರಲಿಲ್ಲ.ಪೋಲಿಸ್ ಠಾಣೆಗೆ ಬಂದು.ಸಹೋದ್ಯೋಗಿಗಳ ಬಳಿ ಈ ಪ್ರಸಂಗದ ಬಗ್ಗೆ ಮಾತಾಡಿದರು. ಅದೇನು ಅದೃಷ್ಟವೋ ಏನೋ ಹಲ್ದೆಗೆ ಹೇಗಾದರೂ ಸಹಾಯ ಮಾಡಬೇಕು ಅಂತ ಎಲ್ಲರೂ ನಿಶ್ಚಯಿಸಿದರು.

ಎಲ್ಲರೂ ಒಂದುಷ್ಟು ಹಣ ಕೂಡಿಸಿದರು.ಒಂದು ಬೈಕ್ ಕೊಳ್ಳುವಷ್ಟು ಸಂಗ್ರಹವಾಯಿತು.ಬೈಕನ್ನೂ ಖರೀದಿಸಿ ತಂದರು. ಜೈ ಹಲ್ದೆ ಮನೆಗೆ ಹೇಳಿ ಕಳಿಸಿದರು.

ತಂದೆತಾಯಿಗಳು ಗಡಿಬಿಡಿಯಿಂದ ಪೋಲಿಸ್ ಠಾಣೆಗೆ ಬಂದರು.ಅಲ್ಲಿನ ಪರಿಸ್ಥಿತಿ ನೋಡಿದಾಗ ಅವರ ಆನಂದಕ್ಕೆ ಪಾರವೇ ಇಲ್ಲ. ಪೋಲಿಸರ ನೆರವಿಗೆ
ಕೃತಜ್ಞತೆ ಹೇಳಿದರು.ಯುವಕ ಹಲ್ದೆ ಸ್ವಾಭಿಮಾನಿ. ಅದರ ಹಣವನ್ನ ಕಂತುಗಳಲ್ಲಿ ತೀರಿಸುತ್ತೇನೆ ಎಂದು ಹೇಳಿದ.

ಇಂದೋರ್ ನ ವಿಜಯನಗರ ಪೋಲಿಸ್ ಠಾಣೆಯ ಪೊಲೀಸರ ನಡವಳಿಕೆ ಮಾನವೀಯತೆಗೆ ಒಂದು ಮಾದರಿ. 

ಸತತ ಐದು ಸೋಲುಗಳ ನಂತರ ಗೆದ್ದ ಕಲ್ಕತ್ತಾ ತಂಡ

ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 15ನೇ ಆವೃತ್ತಿಯ 47ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್ ಗಳಿಂದ ಜಯ ಸಾಧಿಸಿತು.
ಈ ಮೂಲಕ ಸತತ ಐದು ಸೋಲುಗಳ ನಿರಾಸೆಯಿಂದ ಹೊರಬಂತು. ಅದ್ಯಾಗೋ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ನಾಲ್ಕನೆ ಜಯ ಸಾಧಿಸಿದ್ದು 18 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಮಾಡಿದ ರಾಜಸ್ಥಾನ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಕಲ್ಕತ್ತಾ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 158 ರನ್ ಬಾರಿಸಿ ಗೆಲುವು ಸಾಧಿಸಿತು.
ಉತ್ತಮ ಜೊತೆಯಾಟ ಆಡಿದ ನಿತೀಶ್ ರಾಣ (48) ಹಾಗೂ ರಿಂಕು ಸಿಂಗ್ (42) ಗೆಲುವಿನ ರೂವಾರಿ ಎನಿಸಿಕೊಂಡರು.
ಪ್ಲೇಆಫ್ ಸನಿಹ ಗೊಳ್ಳುತ್ತಿರುವ ಕಾರಣ ಅಂಕಪಟ್ಟಿಯಲ್ಲಿ ಮೇಲೇರುವ ವಿಶ್ವಾಸದಲ್ಲಿ ಕಣಕ್ಕಿಳಿದ ರಾಯಲ್ಸ್ ಪರ ಇನಿಂಗ್ಸ್ ಆರಂಭಿಸಿದ ದೇವದತ್ ಪಡಿಕ್ಕಲ್ ಹಾಗೂ ಬಟ್ಲರ್ ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲಗೊಂಡರು.
ಆರ್ಸಿಬಿ ಮತ್ತು ಮುಂಬೈ ವಿರುದ್ಧ ನಿರಾಸೆ ಮೂಡಿಸಿದ್ದ ಪಡಿಕಲ್, ಈ ಪಂದ್ಯದಲ್ಲಿ ಅಬ್ಬರಿಸಿ ಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಕೇವಲ ಎರಡು ರನ್ ಗಳಿಗೆ ಉಮೇಶ್ ಯಾದವ್ ಗೆ ಟಿಕೆಟ್ ಕೊಟ್ಟು ಪೆವಿಲಿಯನ್ ಗೆ ಮರಳಿದರು. ಇಂದಿನ ಆವೃತ್ತಿಯಲ್ಲಿ ಮಿಂಚಿದ್ದ ಪಡಿಕಲ್, ತಮ್ಮ ಎಂದಿನ ಲಯಕ್ಕೆ ಮರಳಲು ಸಾಧ್ಯವಾಗಲಿಲ್ಲ. ಅತ್ತ ತಲಾ ಎರಡು ಶತಕ ಮತ್ತು ಅರ್ಧಶತಕ ಗಳಿಸಿರುವ ಇಂಗ್ಲೆಂಡ್ ಬ್ಯಾಟರ್ ಬಟ್ಲರ್, ಎಚ್ಚರಿಕೆ ಆಟವಾಡಿದರು 22 ರನ್ ಗಳಿಗೆ ಸೀಮಿತಗೊಂಡಿದ್ದು , ರೈಮ್ಸ್ ಗೇಮ್ ಆರಂಭಿಕ ಹಿನ್ನಡೆಯಾದರೆ , ಕೊಲ್ಕತ್ತಾಗೆ ಮೇಲುಗೈ ತಂದುಕೊಟ್ಟಿತು.
ಎರಡನೇ ವಿಕೆಟ್ಗೆ ಬಟ್ಲರ್ ಜೊತೆ 48 ಜೊತೆಯಾಟದಲ್ಲಿ ಭಾಗಿಯಾದ ಸಂಜು ಸಮ್ಸನ್, ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ಆದರೆ ಹಾಲಿ ಟೂರ್ನಮೆಂಟ್ ನಲ್ಲಿ ಮೂರನೇ ಪಂದ್ಯವಾಡಿದ ಕರ್ನಾಟಕದ ಕರುಣ್ ನಾಯರ್ ಎದುರಾಳಿ ಬೌಲರ್ ಗಳ ಬಿಗು ದಾಳಿಗೆ ರನ್ ಗಳಿಸಲು ತಡಕಾಡಿದರು. ಅಂತಿಮವಾಗಿ 13 ರನ್ ಗಳಿಗೆ ಅನುಕೂಲ್ ರಾಯ್ ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಶಾಂತಚಿತ್ತರಾಗಿ ಬ್ಯಾಟಿಂಗ್ ನಡೆಸಿದ ಸಂಜು ಸಮ್ಸನ್, ಮತ್ತೆಂಟು ಎಸೆತದಲ್ಲಿ ಅರ್ಧ ಶತಕ ಪೂರೈಸಿ ಸಂಭ್ರಮಿಸಿದರು. ಇದು ಪ್ರಸಕ್ತ ಸಾಲಿನಲ್ಲಿ ಸಂಜು ಸಾಮ್ಸಂಗ್ ಗಳಿಸಿದ ಎರಡನೇ ಅರ್ಧಶತಕ.
14 ಓವರ್ ಗಳಲ್ಲಿ ಮೂರಂಕಿ ಮೊತ್ತ ಮುಟ್ಟಿದ ರಾಜಸ್ಥಾನ ಬಿರುಸಿನ ಆಟದೊಂದಿಗೆ ರನ್ ಗಳಿಸುವ ಲೆಕ್ಕಾಚಾರದಲ್ಲಿತ್ತು. ಆದರೆ 15ನೇ ಓವರ್ ಎಸೆದ ಉಮೇಶ್ ಯಾದವ್ ಕೇವಲ 5 ರನ್ ನೀಡಿ ವೇಗಕ್ಕೆ ಇನ್ನಷ್ಟು ಕಡಿವಾಣ ಹಾಕಿದರು. ಸುನಿಲ್ ನರೈನ್ ಎಸೆದ ಮರು ಓವರ್ ನಲ್ಲಿಯೂ ರನ್ ಗಳಿಸಲು ತಿಣುಕಾಡಿದ ರಾಯಲ್ಸ್ ಬ್ಯಾಟ್ಸ್ ಮ್ಯಾನ್ ಗಳು ಕೇವಲ ಮೂರು ರನ್ ಗೆ ಸೀಮಿತ ಗೊಂಡರು. ಹೀಗೆ ನಿರೀಕ್ಷಿತ ಮೊತ್ತಕ್ಕೆ ಕತ್ತರಿ ಬಿದ್ದಿತ್ತು. ಈ ಮಧ್ಯೆ, ಉತ್ತಮವಾಗಿ ಆಡುತ್ತಿದ್ದ ರಿಯನ್ ಪರಾಗ್ (19) ಮತ್ತು ಸಂಜು ಸಮ್ಸನ್ ವಿಕೆಟ್ ಒಪ್ಪಿಸಿದರು.

ದೇಶದಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ98.74ರಷ್ಟಿದೆ

0

ಕೊರೊನಾ ಏರಿಳಿತ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿನ್ನೆ ಸೋಮವಾರ ದೈನಂದಿನ ಸೋಂಕಿನಲ್ಲಿ 2,568 ಪ್ರಕರಣಗಳು ವರದಿಯಾಗಿದೆ. 20 ಸಾವುಗಳು ಸಂಭವಿಸಿವೆ. ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 4,30,84,913 ಕ್ಕೆ ತಲುಪಿದೆ.

ಸಕ್ರಿಯ ಪ್ರಕರಣಗಳು 19,137 ಕ್ಕೆ ಇಳಿದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಒಟ್ಟು ಸೋಂಕಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.0.04ರಷ್ಟಿದೆ. ಚೇತರಿಕೆ ದರ ಶೇ.98.74ರಷ್ಟು ದಾಖಲಾಗಿದೆ.

24 ಗಂಟೆಗಳ ಅವಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 363ಕ್ಕೆ ಇಳಿಕೆಯಾಗಿದೆ. ದಿನದ ಪಾಸಿಟಿವಿಟಿ ದರ ಶೇ. 0.61 ವಾರದ ಪಾಸಿಟಿವಿಟಿ ದರ ಶೇ.0.71 ಎಂದು ತಿಳಿಸಲಾಗಿದೆ.

ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,25,41,887 ಕ್ಕೆ ಏರಿದೆ, ಸಾವಿನ ಪ್ರಮಾಣ ಶೇ.1.22 ರಷ್ಟಿದೆ. 20 ಹೊಸ ಸಾವುಗಳಲ್ಲಿ ಕೇರಳದಿಂದ 15, ಪಂಜಾಬ್‍ನಿಂದ 3 ಮತ್ತು ಮಹಾರಾಷ್ಟ್ರ ಮತ್ತು ಮಿಜೋರಾಂನಿಂದ ತಲಾ ಒಂದು ಪ್ರಕರಣ ಸೇರಿದೆ. ಒಟ್ಟು ಸಾವಿನ ಸಂಖ್ಯೆ 5,23,889 ಕ್ಕೆ ಏರಿದೆ.

ವಿದ್ಯುತ್-ಉದ್ಯೋಗ-ರೈತರ ಸಮಸ್ಯೆ -ಹಣದುಬ್ಬರ ರಾಹುಲ್ ಮೋದಿಯತ್ತ ಟ್ವಿಟರ್ ಬಾಣ

0

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ದುರಾಡಳಿತವು, ಒಂದು ಕಾಲದಲ್ಲಿ ವಿಶ್ವದ ಅತಿ ವೇಗದ ಆರ್ಥಿಕತೆಗಳಲ್ಲಿ ಒಂದಾಗಿದ್ದ ದೇಶದ ಆರ್ಥಿಕತೆಯನ್ನು ಹೇಗೆ ಹಾಳು ಮಾಡಬಹುದು ಎಂಬುದರ ಅಧ್ಯಯನವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಬೇಸಿಗೆಯಲ್ಲಿ ಅತಿಹೆಚ್ಚು ಬೇಡಿಕೆಯಿರುವ ವಿದ್ಯುತ್ ಮತ್ತು ಕಲ್ಲಿದ್ದಲು ಕೊರತೆ ತೀವ್ರವಾಗಿರುವ ನಡುವೆಯೇ, ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಟ್ವಿಟರ್ ಮೂಲಕ ತಮ್ಮ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ನಿನ್ನೆ ಸೋಮವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ವಿದ್ಯುತ್ ಬಿಕ್ಕಟ್ಟು. ಉದ್ಯೋಗಗಳ ಬಿಕ್ಕಟ್ಟು, ರೈತರ ಬಿಕ್ಕಟ್ಟು. ಹಣದುಬ್ಬರದ ಬಿಕ್ಕಟ್ಟು. ಪ್ರಧಾನಿ ಮೋದಿ ಅವರ 8 ವರ್ಷಗಳ ದುರಾಡಳಿತವು ವಿಶ್ವದ ವೇಗದ ಆರ್ಥಿಕತೆಗಳಲ್ಲಿ ಒಂದಾಗಿದ್ದ ದೇಶದ ಆರ್ಥಿಕತೆಯನ್ನು ಹೇಗೆ ಹಾಳು ಮಾಡಬಹುದು ಎಂಬುದರ ಅಧ್ಯಯನವಾಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಶುಭದಿನ ಶುಭಮಯ ಅಕ್ಷಯ ತೃತೀಯ

0

ಅಕ್ಷಯ ತೃತೀಯ ಎಂದರೆ ಅಕ್ಷಯ ತದಿಗೆಯ ವೈಶಾಖದ ಶುಕ್ಲಪಕ್ಷದ ಮೂರನೇ ದಿನ. ಇಂದು ನಾವು ಅಕ್ಷಯ ತೃತೀಯವನ್ನು ಎಲ್ಲೆಡೆ ಆಚರಿಸುತ್ತಿದ್ದೇವೆ.

ಅಕ್ಷಯ ತೃತೀಯ ಎಂದಾಕ್ಷಣ ನಮಗೆ ನೆನಪಾಗುವುದು ಬಂಗಾರದ ಮಳಿಗೆಗಳು. ಅದರಲ್ಲೂ ಮಹಿಳೆಯರಂತೂ ಬಂಗಾರ ಕೊಂಡುಕೊಳ್ಳುವಲ್ಲಿ ಈ ದಿನ ಬ್ಯುಸಿ ಆಗಿಬಿಡುತ್ತಾರೆ.

ಭಾರತವು ವೈವಿಧ್ಯತೆಗಳ ಬೀಡು. ಹಿಂದೂಗಳಲ್ಲಿ ಅನೇಕ ಹಬ್ಬಗಳಿವೆ. ಅದರಲ್ಲಿ ಅಕ್ಷಯತೃತೀಯ ಕೂಡ ಒಂದಾಗಿದೆ. ಈ ಹಬ್ಬವು ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ ಎಂಬ ನಂಬಿಕೆ ಇದೆ.

ಹಾಗಾದ್ರೆ, ಅಕ್ಷಯ ತೃತೀಯದ ಮಹತ್ವವೇನು ಎಂಬುದನ್ನು ತಿಳಿದುಕೊಳ್ಳೋಣ.

ಹಿಂದೂ ಪುರಾಣಗಳ ಪ್ರಕಾರ ತ್ರೇತಾಯುಗ ಅಕ್ಷಯತೃತಿಯ ದಿನವೇ ಆರಂಭವಾಯಿತು.ಹಾಗೂ ಅಕ್ಷಯ ತೃತೀಯ ದ್ರೌಪದಿಗೆ ಶ್ರೀಕೃಷ್ಣ ಅಕ್ಷಯ ಪಾತ್ರೆಯನ್ನು ಕರುಣಿಸಿದ ದಿನವೆಂದೂ ಪ್ರತೀತಿ. ಈ ದಿನದಂದು ಎಲ್ಲರೂ ಚಿನ್ನ, ಬೆಳ್ಳಿ ವಸ್ತುಗಳನ್ನು ಖರೀದಿಸುತ್ತಾರೆ. ಕಾರಣ ಏನು ಎಂದರೆ ಬಂಗಾರವನ್ನು ಕೊಂಡು ಕೊಳ್ಳುವುದರಿಂದ ಭವಿಷ್ಯದಲ್ಲಿ ಅದು ದುಪ್ಪಟ್ಟಾಗುತ್ತದೆ. ಅಥವಾ ಹೆಚ್ಚಾಗುತ್ತಿದೆ ಎಂಬ ನಂಬಿಕೆಯಿದೆ. ಆದ್ದರಿಂದ ಎಲ್ಲರೂ ಹೆಚ್ಚು ಹೆಚ್ಚು ಚಿನ್ನದ ಆಭರಣಗಳನ್ನು ಕೊಂಡುಕೊಳ್ಳಲು ಬಯಸುತ್ತಾರೆ.

ಈ ದಿನದಂದು ದಾನ, ಯಜ್ಞಗಳನ್ನು, ಶುಭ ಕಾರ್ಯಗಳನ್ನು ಮಾಡುವುದರಿಂದ ವ್ಯಕ್ತಿಯು ಜೀವನದಲ್ಲಿ ಒಳ್ಳೆಯ ಫಲಿತಾಂಶಗಳನ್ನು ಪಡೆಯುತ್ತಾನೆ. ಮತ್ತು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎಂಬ ಪ್ರತೀತಿ ಇದೆ. ಅಕ್ಷಯ ತೃತೀಯ ದಿನದಂದು ವಿಶೇಷವಾಗಿ ಮಹಾವಿಷ್ಣುವಿನ ಪೂಜೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಸೂರ್ಯ ಹಾಗೂ ಚಂದ್ರ ಏಕಕಾಲದಲ್ಲಿ ಅತ್ಯುಚ್ಛ ಪ್ರಮಾಣ ತಲುಪಿ ಉಚ್ಚ ರಾಶಿಯಲ್ಲಿ ಉಜ್ವಲತೆ ಉಂಟಾಗುವುದರಿಂದ ಎಲ್ಲಾ ಶುಭಕಾರ್ಯಗಳಿಗೆ ಪ್ರಶಸ್ತವಾಗಿರುತ್ತದೆ. ಸೂರ್ಯ ಆತ್ಮ ಮತ್ತು ದೇಹಕಾರಕ, ಚಂದ್ರ ಮನಸ್ಸುಕಾರಕ. ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಹೊಂದುವ ದಿನವಾಗಿದೆ. ಆದ್ದರಿಂದ ಈ ದಿನವನ್ನು ಶುಭದಿನ ಎಂದು ಕೂಡ ಕರೆಯಲಾಗುತ್ತದೆ.

ಈ ಸಲದ ಅಕ್ಷಯ ತೃತೀಯ ಹಬ್ಬವನ್ನು ಆಚರಿಸುತ್ತಾ, ಬಡವರಿಗೆ ಒಂದಿಷ್ಟು ನಿಮ್ಮ ಕೈಲಾದ ಸಹಾಯ ಮಾಡಿ. ನೀವು ಸಂತೋಷದಿಂದ ಹಬ್ಬವನ್ನು ಆಚರಿಸಿ, ಇನ್ನೊಬ್ಬರಿಗೆ ನಿಮ್ಮ ಸಂತೋಷವನ್ನು ಹಂಚಿ. ಈ ಸಲದ ಅಕ್ಷಯ ತೃತೀಯ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಒಳಿತು ಮಾಡಲಿ ಎಂದು ನಮ್ಮ ಕೆಲೈವ್ ಬಳಗ ಹಾರೈಸುತ್ತದೆ.

ಶಿವಮೊಗ್ಗಕ್ಕೆ ಕ್ಯಾನ್ಸರ್ ಆಸ್ಪತ್ರೆ ಮಂಜೂರಾಗಿದೆ-ಸುಧಾಕರ್

0

ಶಿವಮೊಗ್ಗಕ್ಕೆ ಕ್ಯಾನ್ಸರ್ ಆಸ್ಪತ್ರೆ ಮಂಜೂರಾಗಿದೆ. ಸದ್ಯದಲ್ಲೇ ಶಿಲಾನ್ಯಾಸ ಆಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಹೇಳಿದರು.

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ನಿನ್ನೆ ಸೋಮವಾರ ಏರ್ಪಡಿಸಲಾಗಿದ್ದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊರೋನಾ ಸಮಯದಲ್ಲಿ ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ನರ್ಸಿಂಗ್ ಕಾಲೇಜು ತೆರೆಯಬೇಕೆಂಬ ನೂತನ ನೀತಿ ರೂಪಿಸಲಾದನ್ವಯ ಶಿವಮೊಗ್ಗದಲ್ಲಿ ಕಾಲೇಜು ಉದ್ಘಾಟನೆಗೊಂಡು 100 ನರ್ಸಿಂಗ್ ವಿದ್ಯಾರ್ಥಿಗಳ ದಾಖಲಾತಿಗೆ ಕೇಂದ್ರದಿಂದ ಅನುಮೋದನೆ ದೊರೆತಿದೆ.

ಅನೇಕ ಸಮಸ್ಯೆಗಳಿಗೆ ಉಪಯುಕ್ತವಾದ 128 ಸ್ಲೈಸ್ ಸಿಟಿ ಯಂತ್ರ ಉದ್ಘಾಟನೆಗೊಂಡಿದೆ.ಕೊರೋನಾ 2ನೇ ಅಲೆಯಲ್ಲಿ ಆಮ್ಲಜನಕ ಕೊರತೆ ಅತೀವವಾಗಿ ಕಾಡಿದೆ. ಅಂತಹ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಆಮ್ಲಜನಕ ಸ್ಟೋರೇಜ್ ಟ್ಯಾಂಕ್ಸ್‍ನ್ನು ದ್ವಿಗುಣಗೊಳಿಸಲಾಗಿದೆ.

ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಕೆ ಆಗಿರುವುದು ಒಂದು ದಾಖಲೆ ಆಗಿದೆ. ಲಿಕ್ವಿಡ್ ಆಕ್ಸಿಜನ್ ಫಿಲ್ಲಿಂಗ್ ಸ್ಟೇಷನ್ ಶಿವಮೊಗ್ಗದ ವಿಶೇಷ. ಶಿವಮೊಗ್ಗದ ಸಂಸ್ಥೆಗೆ 130 ಐಸಿಯು ಬೆಡ್, 108 ಹೆಚ್‍ಡಿಡಿ ಮತ್ತು 120 ವೆಂಟಿಲೇಟರ್ ನೀಡಲಾಗಿದೆ. ಎನ್‍ಐಸಿಯು ಘಟಕ, ಸ್ಕಿಲ್ ಲ್ಯಾಲ್ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳ ಅಭಿವೃದ್ದಿಯಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳ ಹಿಂದೆ ಬದ್ದತೆಯುಳ್ಳ ನಾಯಕರಿದ್ದಾರೆ ಎಂದು ಹೇಳಿದರು.

50 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮೂಲಕ ಉಚಿತವಾಗಿ ಆರೋಗ್ಯ ವಿಮೆ ನೀಡಿದ ಏಕೈಕ ದೇಶ ನಮ್ಮದು. ಪ್ರಾಥಮಿಕ ಮತ್ತು ದ್ವಿತೀಯ ಹಂತದ ಚಿಕಿತ್ಸೆಗಳು ಇತರೆ ಆಸ್ಪತ್ರೆಗಳಲ್ಲಿ ದೊರೆತರೆ ತೃತೀಯ ಹಂತದ ಚಿಕಿತ್ಸೆ ವೈದ್ಯಕೀಯ ಕಾಲೇಜುಗಳಿರುವೆಡೆ ಲಭಿಸುತ್ತದೆ. ಗುಣಮಟ್ಟದ ಸೇವೆ ನೀಡದಿದ್ದಲ್ಲಿ ಜನರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ಸುಧಾಕರ್ ಅವರು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳು ಸಂಜೀವಿನಿ ಆಗಿ ಸೇವೆ ಸಲ್ಲಿಸಬೇಕು. ಉತ್ಕøಷ್ಟ ಚಿಕಿತ್ಸೆ ಸರ್ಕಾರದ ಕಾಯಕಲ್ಪವಾಗಿದೆ. ಜನರು ಉಪಕಾರ ಸ್ಮರಣೆ ಮಾಡುವ ರೀತಿಯಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಕೆಲಸ ಮಾಡಬೇಕು ಎಂದು ಡಾ. ಕೆ. ಸುಧಾಕರ್ ಅವರು ಮಾಹಿತಿ ನೀಡಿದರು.

ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಮಾತನಾಡಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಡವರ ಆರೋಗ್ಯ ರಕ್ಷಣೆಯ ಕನಸು ನನಸಾಗಬೇಕು. ಮೆಡಿಕಲ್ ಕಾಲೇಜು ಮತ್ತಷ್ಟು ಬೆಳೆಯಬೇಕು. ಪ್ರಸ್ತುತ ನೀಡಿರುವ ಸೌಲಭ್ಯಗಳ ಉಪಯೋಗದ ಆತ್ಮಾವಲೋಕನ ಮಾಡಿಕೊಳ್ಳಬೇಕು. 133 ವೈದ್ಯಾಧಿಕಾರಿಗಳಿರುವ ಕಾಲೇಜಿನಲ್ಲಿ ಯಾರೂ ಚಿಕಿತ್ಸೆಯಿಂದ ಹೊರಗುಳಿಯದಂತೆ, ಜನರಿಗೆ ಹೆಚ್ಚು ಓಡಾಡಿಸದೆ ಸೇವೆ ನೀಡಬೇಕು. ಹೆಚ್ಚಿನ ಚಿಕಿತ್ಸೆಗೆ ಜನರು ಮಣಿಪಾಲಕ್ಕೆ ತೆರಳುತ್ತಿರುವುದು ಇಲ್ಲಿ ಹೆಚ್ಚಿನ ಸೌಲಭ್ಯವಿಲ್ಲವೆಂಬುದನ್ನು ತೋರುತ್ತದೆ. ಆದ್ದರಿಂದ ವೈದ್ಯಾಧಿಕಾರಿಗಳಿಂದ ಹಿಡಿದು ಸಿಬ್ಬಂದಿವರೆಗೆ ಕರ್ತವ್ಯಪರತೆಯಿಂದ ಕೆಲಸ ಮಾಡಿದರೆ ನಿಮ್ಮ ಗೌರವ ಸಹ ಹೆಚ್ಚುತ್ತದೆ ಎಂದು ಆರಗ ಜ್ಞಾನೇಂದ್ರ ಅವರು ತಿಳಿಸಿದರು.

ಸಂಸದರಾದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಮೆಗ್ಗಾನ್ ಆಸ್ಪತ್ರೆಯಲ್ಲಿ ನರ್ಸಿಂಗ್ ಕಾಲೇಜು ಉದ್ಘಾಟನೆಯೊಂದಿಗೆ ರೂ.38.676 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ರೂ. 29.62 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿದೆ. ಕ್ಯಾನ್ಸರ್ ಆಸ್ಪತ್ರೆ ಮಂಜೂರಾಗಿದೆ. ಮೆಗ್ಗಾನ್ ಆವರಣದಲ್ಲಿ ಮುಂಭಾಗದಲ್ಲಿ ನಿರ್ಮಿಸುವುದಕ್ಕೆ ಯೋಜನೆ ತಯಾರಿಸಲಾಗುತ್ತಿದೆ. ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೇಲ್ಮಹಡಿಯಲ್ಲಿ ಸಹ ಕಾರ್ಯ ನಿರ್ವಹಿಸಿದಲ್ಲಿ ಸರ್ಕಾರಕ್ಕೆ ಹಣ ಸಹ ಉಳಿತಾಯವಾಗುತ್ತದೆ. ಕಿದ್ವಾಯಿಯಿಂದಲೇ ಕ್ಯಾನ್ಸರ್ ತಜ್ಞ ವೈದ್ಯರಿಂದ ಚಿಕಿತ್ಸೆ ವ್ಯವಸ್ಥೆ ಮಾಡಿದಲ್ಲಿ ಕ್ಯಾನ್ಸರ್ ಆಸ್ಪತ್ರೆ ಶೀಘ್ರವಾಗಿ ಉದ್ಘಾಟಿಸಲು ಅನುಕೂಲವಾಗುತ್ತದೆ. ಆಯುರ್ವೇದಿಕ್ ಆಸ್ಪತ್ರೆಯನ್ನೂ ಬೇಗ ಶುರು ಮಾಡಲು ಆರೋಗ್ಯ ಸಚಿವರ ಸಹಕಾರ ಬೇಕು. ನಗರಾಭಿವೃದ್ದಿ ಸಚಿವರು ಸಹ ಆಸ್ಪತ್ರೆ ಆವರಣದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ರೂ.10 ಕೋಟಿ ನೀಡಿದೆ. ಎಲ್ಲರೂ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸುತ್ತಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಶಾಸಕರು ಮತ್ತು ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಶಿವಮೊಗ್ಗ ನಮ್ಮ ನಿರೀಕ್ಷೆ ಮೀರಿ ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿದೆ. ಇನ್ನು ಆರೇಳು ತಿಂಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಮುಗಿಯಲಿದೆ. ನಮ್ಮ ಪ್ರಧಾನಿ ಮೋದಿಯವರನ್ನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲೇ ಕರೆತಂದು ಉದ್ಘಾಟನೆ ಮಾಡಿಸುವ ಅಪೇಕ್ಷೆ ಇದೆ. ನಾನು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಜೂರಾದ ಶಿವಮೊಗ್ಗ ಮೆಡಿಕಲ್ ಕಾಲೇಜು ಇಂದು ರಾಜ್ಯದಲ್ಲೇ ಟಾಪ್ ಕಾಲೇಜಾಗಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಉತ್ತಮ ಸೇವೆ ನೀಡಿದೆ. ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಜನರು ಮಣಿಪಾಲಗೆ ಹೆಚ್ಚು ಹೋಗುತ್ತಿದ್ದರು. ಆದರೆ ಈಗ ಅದು ಶೇ.90 ಕಡಿಮೆ ಆಗಿದೆ. ಆ ರೀತಿಯ ವ್ಯವಸ್ಥೆಗಳು, ಸೌಲಭ್ಯ ಶಿವಮೊಗ್ಗದಲ್ಲೇ ದೊರಕುತ್ತಿದೆ. ಯಾವುದೇ ರೋಗಿಗೆ ಅಗತ್ಯವಾದ ಎಲ್ಲ ರೀತಿಯ ಚಿಕಿತ್ಸೆ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ವೈದ್ಯರು ಸೇರಿದಂತೆ ಎಲ್ಲ ಸಿಬ್ಬಂದಿ ಮಾಡಬೇಕೆಂದು ಯಡಿಯೂರಪ್ಪ ಅವರು ಮನವಿ ಮಾಡಿದರು.

ನಗರಾಭಿವೃದ್ದಿ ಸಚಿವರಾದ ಬೈರತಿ ಬಸವರಾಜ ಅವರು ಮಾತನಾಡಿ, ನಮ್ಮ ಸರ್ಕಾರ ಅಭಿವೃದ್ದಿ ಮತ್ತು ಜನಪರ ಕೆಲಸಗಳನ್ನು ಮಾಡುತ್ತಿದೆ. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕಾಲೇಜಿಗೆ ಅಗತ್ಯವಾದ ಯುಜಿಡಿ ಸೇರಿದಂತೆ ಇತರೆ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಲಾಗುವುದು ಎಂಬ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಮಹಾಪೌರರಾದ ಸುನೀತ ಅಣ್ಣಪ್ಪ, ಜ್ಯೋತಿ ಪ್ರಕಾಶ್ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿ.ಪಂ ಸಿಇಓ ಎಂ.ಎಲ್.ವೈಶಾಲಿ, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಡಾ.ಶ್ರೀಧರ್, ಡಾ.ರಾಜೇಶ್ ಸುರಗಿಹಳ್ಳಿ, ಡಾ.ಸಿದ್ದನಗೌಡ ಪಾಟಿಲ್, ಸಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ಡಾ.ವಾಣಿ ಕೋರಿ, ಡಾ.ಗೌತಮ್, ದಿವಾಕರ್ ಶೆಟ್ಟಿ, ಇತರರು ಉಪಸ್ಥಿತರಿದ್ದರು.