Wednesday, March 4, 2026
Wednesday, March 4, 2026
Home Blog Page 1554

ಪ್ರತೀವರ್ಷ ತಂಬಾಕು ಸೇವನೆಯಿಂದ 8 ಮಿಲಿಯನ್ ಜನ ಮರಣ

0

ಧೂಮಪಾನ ಅಥವಾ ತಂಬಾಕು ಸೇವನೆಯು ಆರೋಗ್ಯಕ್ಕೆ ಮಾರಕವಾಗುವುದರ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ತಂಬಾಕು ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತೀ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲು ಹಲವಾರು ಅಭಿಯಾನಗಳು, ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ತಂಬಾಕು ಸೇವನೆಯಿಂದಾಗುವ ಸಮಸ್ಯೆಗಳು ಇಂದು ಇಡೀ ವಿಶ್ವ ಎದುರಿಸುತ್ತಿರುವ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ವಿಶ್ವಾದ್ಯಂತ ಸುಮಾರು 1.1 ಬಿಲಿಯನ್ ಧೂಮಪಾನಿಗಳಲ್ಲಿ ಸುಮಾರು ಶೇ.80 ರಷ್ಟು ಧೂಮಪಾನಿಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದು ಆ ದೇಶಗಳ ಆರ್ಥಿಕ ಪರಿಸ್ಥಿತಿಗೆ ಮಾರಕವಾಗಿದೆ. ತಂಬಾಕು ಸೇವನೆಯಿಂದಾಗಿ ಮೂಲಭೂತ ಅಗತ್ಯಗಳಿಗೆ ಮಾಡಬೇಕಾದ ಖರ್ಚು, ವೆಚ್ಚವನ್ನು ತಂಬಾಕಿಗೆ ಬಳಸುವುದರಿಂದ ಜನರ ಜೀವನ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಧೂಮಪಾನವು ಕೇವಲ ಸೇವಿಸುವ ವ್ಯಕ್ತಿಯ ಮೇಲೆ ಪರಿಣಾಮ ಉಂಟು ಮಾಡದೇ ಪರೋಕ್ಷವಾಗಿ ಸೇವಿಸುವ ವ್ಯಕ್ತಿಗಳ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಿಗರೇಟ್, ಬೀಡಿ ಮತ್ತು ಹುಕ್ಕಾದಂತಹ ತಂಬಾಕು ಉತ್ಪನ್ನಗಳನ್ನು ಬಳಸಿದಾಗ ಅದರಿಂದ ಉಂಟಾಗುವ ಹೋಗೆಯನ್ನು ಆ ಸ್ಥಳದಲ್ಲಿರುವ ಬೇರೆ ವ್ಯಕ್ತಿಗಳು ಉಸಿರಾಟದ ಮೂಲಕ ಸೇವಿಸಿದವರು ಪರೋಕ್ಷ ಧೂಮಪಾನಿಗಳಾಗುತ್ತಾರೆ.
ತಂಬಾಕಿನಿಂದ ಆರೋಗ್ಯದ ಮೇಲಾಗುವ ಸಮಸ್ಯೆಗಳು :
ಬಾಯಿಯ ಕ್ಯಾನರ್, ಧ್ವನಿ ಪೆಟ್ಟಿಗೆ ಮತ್ತು ಗಂಟಲು ಕುಳಿ, ಶ್ವಾಸಕೋಶದ ಕ್ಯಾನ್ಸರ್, ಹೊಗೆ ಸಂಬಂಧಿ ಕಾಯಿಲೆಗಳು ದೀರ್ಘ ಕಾಲದ ಶ್ವಾಸಕೋಶದ ಕಾಯಿಲೆಗಳು, ಕಡಿಮೆ ತೂಕದ ಮಕ್ಕಳ ಜನನ ಮತ್ತು ಪುರುಷರಲ್ಲಿ ಫಲವತ್ತತೆ ಹಾಗೂ ಲೈಂಗಿಕ ದುರ್ಬಲತೆ ಇತ್ಯಾದಿ ಸಮಸ್ಯೆಗಳು ತಲೆದೋರುತ್ತವೆ. ಹಾಗಾಗಿ ತಂಬಾಕು ಸೇವನೆಯಿಂದಾಗುವ ಖಾಯಿಲೆಗಳು ಸಾಂಕ್ರಮಿಕವಲ್ಲದ ಆರೋಗ್ಯ ಸಮಸ್ಯೆಗಳ ಬೆಳವಣಿಗೆಗೆ ಕಾರಣವಾಗಿದೆ.
ಪ್ರಪಂಚದಲ್ಲಿ ತಂಬಾಕಿನ ಬಳಕೆಯಿಂದಾಗುವ ಸಾವುಗಳನ್ನು ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆಯು 1987ರಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಘೋಷಿಸಿತು.
ಪ್ರಸ್ತುತ ವರ್ಷದ ತಂಬಾಕು ರಹಿತ ದಿನದಂದು ತಂಬಾಕಿನಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದುವುದರ ಜೊತೆಗೆ ”ತಂಬಾಕು ಪರಿಸರಕ್ಕೆ ಹಾನಿಕಾರಕ”ವೆಂಬ ಧ್ಯೆಯ ವಾಕ್ಯವನ್ನು ಅಳವಡಿಸಿಕೊಂಡಿದ್ದು, ತಂಬಾಕು ಕೃಷಿ, ಉತ್ಪಾದನೆ ಮತ್ತು ವಿತರಣೆಯಿಂದಾಗುವ ವಿಷಕಾರಿ ತ್ಯಾಜ್ಯಗಳ ಬಗ್ಗೆ ಅರಿಮೂಡಿಸುವುದಾಗಿದೆ.
ತಂಬಾಕು ಸೇವನೆಯು ಪ್ರತಿ ಹಂತದಲ್ಲೂ ಹಾನಿಕಾರಿಕ:
ಪ್ರಾರಂಭದಿಂದ ಅಂತ್ಯದವರೆಗೂ ತಂಬಾಕು ಜೀವನ ಚಕ್ರವು ಅಗಾಧವಾದ ಮಾಲಿನ್ಯಕಾರಕ ಮತ್ತು ಹಾನಿಕಾರಕ ಪ್ರಕ್ರಿಯೆಯಾಗಿದೆ. ಇಂದು ಹಲವರಿಗೆ ಧೂಮಪಾನದಿಂದ ಉಂಟಾಗುವ ಗಾಳಿಯ ಮಾಲಿನ್ಯವಷ್ಟೆ ಕಾಣುತ್ತಿದೆ. ಆದರೆ ತಂಬಾಕಿನ ಸಂಪೂರ್ಣ ಸರಪಳಿಯು ಹೆಚ್ಚು ಹಾನಿಯನ್ನು ಉಂಟು ಮಾಡುತ್ತದೆ.
ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 3.5 ಮಿಲಿಯನ್ ಹೆಕ್ಟೇರ್ ಭೂಮಿ ತಂಬಾಕು ಬೆಳೆಯಿಂದಾಗಿ ನಾಶವಾಗುತ್ತಿದೆ. ಇದರಿಂದ ವರ್ಷಕ್ಕೆ 20 ಸಾವಿರ ಹೆಕ್ಟೇರ್ ಅರಣ್ಯ ನಾಶ ಮತ್ತು ಮಣ್ಣಿನ ಅವನತಿಗೆ ಕಾರಣವಾಗಿದೆ. ಇದರ ಜೊತೆಗೆ ತಂಬಾಕು ಉತ್ಪಾದನೆಯು ನೀರು, ಪಳಯುಳಿಕೆ ಇಂಧನ ಮತ್ತು ಖನಿಜ ಸಂಪನ್ಮೂಲಗಳ ನಾಶಕ್ಕೆ ಕಾರಣವಾಗಿದೆ.
ಪ್ರಪಂಚದಾದ್ಯಂತ ಪ್ರತಿ ವರ್ಷ ಧೂಮಪಾನದಿಂದ ಉಂಟಾಗುವ 4.5 ಟ್ರಿಲಿಯನ್ ಸಿಗರೇಟ್ ತುಂಡುಗಳ ಸರಿಯಾದ ವಿಲೇವಾರಿಯಾಗದೆ ಸುಮಾರು 1.69 ಶತಕೋಟಿ ಪೌಂಡ್ ವಿಷಕಾರಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಮತ್ತು ಸಾವಿರಾರು ರಾಸಯನಿಕಗಳು ಗಾಳಿ, ನೀರು ಮತ್ತು ಮಣ್ಣಿನಲ್ಲಿ ಸೇರುತ್ತಿದೆ. ಹೊಗೆಯಾಡಿಸಿದ ಪ್ರತಿಯೊಂದು ಸಿಗರೇಟ್ ಅಥವಾ ತಂಬಾಕು ಉತ್ಪನ್ನವು ನಮ್ಮ ಅಸ್ತಿತ್ವವನ್ನು ಅವಲಂಬಿಸಿರುವ ಅತ್ಯಾಮೂಲ್ಯ ಸಂಪನ್ಮೂಲಗಳನ್ನು ನಾಶ ಪಡಿಸುತ್ತಿದೆ. ತಂಬಾಕು ಕೃಷಿ , ಉತ್ಪಾದನೆ ಮತ್ತು ಬಳಕೆಯಿಂದಾಗಿ ನಮ್ಮ ನೀರು, ಮಣ್ಣು, ಕಡಲ ತೀರಗಳು ಮತ್ತು ಊರಿನ ಬೀದಿಗಳು ವಿಷಪೂರಿತ ತ್ಯಾಜ್ಯಗಳಿಂದ ಮಲಿನವಾಗಿವೆ.
ಈವರೆಗೂ ತಂಬಾಕುವಿನಿಂದ ಪರಿಸರದ ಮೇಲಾಗಿರುವ ಪರಿಣಾಮಗಳೆಂದರೆ ಸುಮಾರು 60 ಕೋಟಿ ಮರಗಳನ್ನು ಸಿಗರೇಟ್ ತಯಾರಿಸಲು ಕಡಿಯಲಾಗಿದೆ, ಇದರಿಂದ ಉಂಟಾದ 8 ಕೋಟಿ 40 ಲಕ್ಷ ಟನ್‍ಗಳಷ್ಟು ಕಾರ್ಬನ್ ಡೈ ಆಕ್ಸೈಡ್ ಜಾಗತಿಕ ತಾಪಮಾನ ಹೆಚ್ಚಲು ಕಾರಣವಾಗಿದೆ.
ತಂಬಾಕು ಪ್ರತಿ ವರ್ಷ 8 ಮಿಲಿಯನ್ ಜನರನ್ನು ಕೊಲ್ಲುವುದರ ಜೊತೆಗೆ ಪರಿಸರವನ್ನು ನಾಶ ಪಡಿಸಿ ಕೃಷಿ ಉತ್ಪಾದನೆ, ವಿತರಣೆ ಮತ್ತು ನಂತರದ ಗ್ರಾಹಕ ತ್ಯಾಜ್ಯದ ಮೂಲಕ ಆರೋಗ್ಯಕ್ಕೆ ಮತ್ತಷ್ಟು ಹಾನಿಯನ್ನು ಉಂಟು ಮಾಡುತ್ತದೆ.
2022ರ ವಿಶ್ವ ತಂಬಾಕು ರಹಿತ ದಿನದ ಗುರಿಗಳು:
• ತಂಬಾಕಿನಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ತಂಬಾಕು ಬೆಳೆಗಾರರಿಗೆ ಪರ್ಯಾಯ ಕೃಷಿಯ ಬಗ್ಗೆ ಪ್ರೋತ್ಸಾಹಿಸುವುದು.
• ತಂಬಾಕು ಸೇವನೆಯಿಂದಾಗುವ ವಿಶ್ವವ್ಯಾಪಿ ರೋಗಗಳು ಮತ್ತು ಸಾವುಗಳನ್ನು ಕಡಿಮೆ ಮಾಡುವುದು.
• ತಂಬಾಕು ಸೇವನೆಯ ಅಗತ್ಯಗಳನ್ನು ಕಡಿಮೆ ಮಾಡಿ, ಆರೋಗ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು.
• ಪರಿಸರ ಮತ್ತು ಆರ್ಥಿಕತೆಯ ವೆಚ್ಚದಲ್ಲಿ ತಂಬಾಕು ಉತ್ಪನ್ನಗಳ ತ್ಯಾಜ್ಯಕ್ಕೆ ತಂಬಾಕು ಉತ್ಪಾದಕರನ್ನು (ಕೈಗಾರಿಕೆಗಳನ್ನು) ಜವಾಬ್ದಾರರನ್ನಾಗಿ ಮಾಡಲು ಕೆಲವು ನಿಯಮಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸುವುದು.
ಅಂಕಿಅಂಶದ ಪ್ರಕಾರ ತಂಬಾಕು ಸೇವನೆಯಿಂದ ಪ್ರತಿ ವರ್ಷ ಸಾವಿಗೀಡಗುವವರ ಸಂಖ್ಯೆ 8 ಮಿಲಿಯನ್‍ಗೂ ಹೆಚ್ಚು ಮತ್ತು ಇದು 2030 ರ ವೇಳೆಗೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ತಂಬಾಕು ಕೇವಲ ಅದನ್ನು ಸೇವಿಸುವ ವ್ಯಕ್ತಿಯ ಮೇಲೆ ಪರಿಣಾಮ ಬೀರದೆ ಅದನ್ನು ಉತ್ಪಾದಿಸುವ ಭೂಮಿಯ ಮೇಲೂ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ಸರ್ಕಾರಗಳು ತಂಬಾಕು ಸೇವನೆ ಬಗ್ಗೆ ಜಾಗೃತಿ ಮೂಡಿಸಿ, ತಂಬಾಕು ಉತ್ಪಾದನೆಯ ಮೇಲೆ ಹಲವು ನಿರ್ಬಂಧಗಳನ್ನು ಹೇರುವುದರ ಮೂಲಕ ತಂಬಾಕಿನಿಂದಾಗುವ ಪರಿಣಾಮಗಳನ್ನು ನಿಯಂತ್ರಿಸಬಹುದಾಗಿದೆ.

ರಿತೇಶ್ ನಾಯ್ಕ
ಅಪ್ರೆಂಟಿಸ್ ವಾರ್ತಾ ಇಲಾಖೆ, ಶಿವಮೊಗ್ಗ

ಜೆಎಸ್ಎಸ್ ವಿಶೇಷ ಚೇತನರ ತಾಂತ್ರಿಕ ಶಾಲೆಗೆ ಪ್ರವೇಶಾವಕಾಶ

0

ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ವತಿಯಿಂದ 2022-23 ನೇ ಸಾಲಿಗೆ ಮೂರು ವರ್ಷಗಳ ಅವಧಿಯ ಡಿಪ್ಲೊಮಾ ಕೋರ್ಸ್‍ಗಳ ಪ್ರವೇಶಕ್ಕೆ(ಅಖಿಲ ಭಾರತ ಮಟ್ಟದಲ್ಲಿ) ವಿಶೇಷಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅನುದಾನಿತ ಕೋರ್ಸ್‍ಗಳಾದ ಆರ್ಕಿಟೆಕ್ಟ್ ಅಸಿಸ್ಟೆಂಟ್‍ಷಿಪ್, ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಹಾಗೂ ಅನುದಾನರಹಿತ ಕೋರ್ಸ್‍ಗಳಾದ ಜ್ಯುವೆಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್ಸ್ ಡಿಪ್ಲೋಮಾ ಕೋರ್ಸ್‍ಗಳಿಗೆ ಅರ್ಹರು ಜೂನ್ 20 ರೊಳಗೆ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಟ ಶೇ.35 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು, ಮೂಳೆ ಮತ್ತು ಕೀಲು ಅಂಗವಿಕಲತೆ ಶೇ.40 ಮತ್ತು ಮೇಲ್ಪಟ್ಟು, ಕಿವುಡು ಮತ್ತು ಮೂಗು ಅಂಗವಿಕಲತೆ 60 ಡಿಬಿ ಮತ್ತು ಮೇಲ್ಪಟ್ಟು ಹಾಗೂ ಭಾಗಶಃ ಮತ್ತು ಪೂರ್ಣ ಅಂಧತ್ವ ಲಕ್ಷಣಗಳಿರಬೇಕು.

ರಾಜ್ಯ ಮತ್ತು ರಾಷ್ಟ್ರಮಟ್ಟದ ವಿದ್ಯಾರ್ಥಿವೇತನದ ಆರ್ಥಿಕ ಸಹಾಯ ದೊರೆಯುತ್ತದೆ. ಪಾಲಿಟೆಕ್ನಿಕ್‍ನ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯದ ಸೌಲಭ್ಯ ಕಲ್ಪಿಸಲಾಗಿದೆ.

ಅರ್ಜಿಗಳನ್ನು ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಚಯ, ಮೈಸೂರು 570 006 ಇಲ್ಲಿ ಪಡೆದು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.100 ಹಾಗೂ ಎಸ್‍ಸಿ/ಎಸ್‍ಟಿ/ಸಿ-1 ವರ್ಗದವರಿಗೆ ರೂ.50 ನಗದು ಅಥವಾ ಡಿಡಿ ಮೂಲಕ ಮೈಸೂರಿನಲ್ಲಿ ಸಂದಾಯವಾಗುವಂತೆ ಕಳುಹಿಸಬಹುದು. ಅಥವಾ ವೆಬ್‍ಸೈಟ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ : www.jsspda.org ಇಮೇಲ್/ದೂರವಾಣಿ/ಮೊಬೈಲ್ ಸಂಖ್ಯೆ: 96866 77236 ಮೂಲಕ ಸಂಪರ್ಕಿಸಬಹುದು ಎಂದು ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಪ್ರಾಂಶುಪಾಲರು ತಿಳಿಸಿದ್ದಾರೆ.

ರಾಜ್ಯಸಭೆ ಜೆಡಿಎಸ್ ಬೆಂಬಲಿಸಲು ಮಾಜಿ ಪ್ರಧಾನಿ ಕಾಂಗ್ರೆಸ್ ಜತೆ ಮಾತುಕತೆ

0

ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಅಭ್ಯರ್ಥಿಗಳ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಮಾತನಾಡಿದ್ದಾರೆ ಎಂದು ಶಾಸಕ ಹೆಚ್.ಡಿ.ರೇವಣ್ಣ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ರೇವಣ್ಣ, ಈಗ ನಮ್ಮ ಬಳಿ 32 ಮತಗಳಿವೆ.
2 ರಾಷ್ಟ್ರೀಯ ಪಕ್ಷಗಳಿವೆ. ಒಂದು ಕೋಮುವಾದಿ ಪಕ್ಷ. ಮತ್ತೊಂದು ಕೋಮುವಾದ ವಿರುದ್ಧವಾದ ಪಕ್ಷ. ನಾವು ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದೇವೆ. ನಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಚರ್ಚೆ ನಡೆಸಲಾಗಿದೆ ಎಂದರು.

ಇತ್ತ ಕುಪೇಂದ್ರ ರೆಡ್ಡಿ ಕೂಡ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಭೇಟಿಗೂ ಅವಕಾಶ ಕೇಳಿದ್ದೇವೆ. ರಾಮಲಿಂಗಾ ರೆಡ್ಡಿ ಭೇಟಿಯಾಗಿ ಮಾತನಾಡಿದ್ದೇವೆ. ಆದರೆ ನಿನ್ನೆ ಕಾಂಗ್ರೆಸ್ 2ನೇ ಅಭ್ಯರ್ಥಿಯನ್ನು ಹಾಕಿದೆ. ಕೋಮುವಾದವನ್ನು ದೂರವಿಡಲು ಪ್ರಾದೇಶಿಕ ಪಕ್ಷ ಬೆಂಬಲಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಡಾ.ಪ್ರಿಯಾಂಕ ಐಎಎಸ್ ಗುರಿ: ಯಶೋಗಾಥೆ

0

UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅನೇಕ ಜನರ ಕನಸಾಗಿದೆ. ಆದರೆ ಕೆಲವೇ ಜನರು ಈ ಕನಸನ್ನು ನನಸಾಗಿಸಿಕೊಳ್ಳಲು ಸಮರ್ಥರಾಗಿದ್ದಾರೆ. UPSC ಪರೀಕ್ಷೆಯು ನಮ್ಮ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ.

ಈ ಪರೀಕ್ಷೆಯಲ್ಲಿ ಯಶಸ್ವಿಯಾಗಲು, ಅಭ್ಯರ್ಥಿಗಳು ಹಗಲಿರುಳು ಶ್ರಮಿಸಬೇಕು. ಅಂತಹ ಕಠಿಣ ಪರಿಶ್ರಮ ಮತ್ತು ಸ್ಫೂರ್ತಿದಾಯಕ ಕಥೆಯೆಂದರೆ ಐಎಎಸ್ ಅಧಿಕಾರಿ ಪ್ರಿಯಾಂಕಾ ಶುಕ್ಲಾ ಅವರು ವೈದ್ಯಕೀಯ ವೃತ್ತಿಯನ್ನು ತೊರೆದು ನಾಗರಿಕ ಸೇವೆಗಳಿಗೆ ಸೇರಲು ನಿರ್ಧರಿಸಿದ್ದರು.

2009 ರಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು IAS ಅಧಿಕಾರಿಯಾದರು. ಆದಾಗ್ಯೂ, ಅವರು ಐಎಎಸ್ ಆದ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ಯಾರೋ ಮಾಡಿದ ಅಪಹಾಸ್ಯದಿಂದಾಗಿ ಐಎಎಸ್ ಆಗಲು ನಿರ್ಧರಿಸಿದರು.

ಪ್ರಿಯಾಂಕಾ ಶುಕ್ಲಾ ಅವರು ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಓದಿದ್ದಾರೆ. ಆದರೆ ಪ್ರಿಯಾಂಕಾ ಅವರ ಇಡೀ ಕುಟುಂಬವು ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಅವರ ತಂದೆ ಹರಿದ್ವಾರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಕಲೆಕ್ಟರ್ ಆಗಿ ತಮ್ಮ ಮನೆಯ ಮುಂದೆ ಪ್ರಿಯಾಂಕಾ ಅವರ ಹೆಸರಿನ ನಾಮಫಲಕವನ್ನು ಮುದ್ರಿಸುವುದು ತನ್ನ ತಂದೆಯ ಕನಸಾಗಿತ್ತು ಎಂದು ಪ್ರಿಯಾಂಕಾ ಹೇಳಿದ್ದಾರೆ.

ಪ್ರಿಯಾಂಕಾ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ದಾಖಲಾದರು. ಎಂಬಿಬಿಎಸ್ ಪದವಿ ಪಡೆದ ನಂತರ ಲಖನೌದಲ್ಲಿಯೇ ಅಭ್ಯಾಸ ಆರಂಭಿಸಿದರು. ಪ್ರಿಯಾಂಕಾ ಡಾಕ್ಟರ್ ಆದ ಬಳಿಕ ತುಂಬಾ ಸಂತೋಷಪಟ್ಟರು.
ಒಮ್ಮೆ ಪ್ರಿಯಾಂಕಾ ತಪಾಸಣೆ ಮಾಡಲು ಕೊಳಚೆ ಪ್ರದೇಶಕ್ಕೆ ಹೋಗಿದ್ದರು. ತನಿಖೆಯ ವೇಳೆ ಮಹಿಳೆಯೊಬ್ಬರು ಕೊಳಕು ನೀರು ಕುಡಿಯುತ್ತಿದ್ದು, ಮಗುವಿಗೆ ಆಹಾರ ನೀಡುತ್ತಿರುವುದನ್ನು ಪ್ರಿಯಾಂಕಾ ನೋಡಿದ್ದಾರೆ.

ಪ್ರಿಯಾಂಕಾ ಮಹಿಳೆಗೆ ಕೊಳಕು ನೀರು ಕುಡಿಯದಂತೆ ನಿರಾಕರಿಸಿದ್ದಾರೆ. ಅದಕ್ಕೆ ಮಹಿಳೆ ಹಿಂತಿರುಗಿ ಉತ್ತರಿಸಿದ್ದಾಳೆ. ನೀವೇನು ಕಲೆಕ್ಟರಾ? ಅಂತಾ. ಇದನ್ನು ಕೇಳಿದ ಪ್ರಿಯಾಂಕಾ ದಿಗ್ಭ್ರಮೆಗೊಂಡಿದ್ದಾರೆ. ನಂತರ ಅವರು ಕಲೆಕ್ಟರ್ ಆಗಲು ನಿರ್ಧರಿಸಿದರಂತೆ.

ಪ್ರಿಯಾಂಕಾ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಆದಾಗ್ಯೂ, ತಮ್ಮ ಪ್ರಯತ್ನ ಮಾತ್ರ ಬಿಡಲಿಲ್ಲ. ಅಂತಿಮವಾಗಿ 2009 ರಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು. ಐಎಎಸ್ ಅಧಿಕಾರಿಯಾದ ನಂತರ, ಜನರ ಜೀವನವನ್ನು ಬದಲಾಯಿಸುವ ಗುರಿಯನ್ನು ಪ್ರಿಯಾಂಕಾ ಹೊಂದಿದ್ದರು.

ಯುಪಿಎಸ್ ಸಿ ವಿನಯ್ ಕುಮಾರ್ ಯಶ ಪಡೆದ ಯುವಕ

0

ಹೊಸದುರ್ಗದ ಎಂಜಿನಿಯರಿಂಗ್‌ ಪದವೀಧರ ಡಿ.ಎಚ್‌.ವಿನಯ್‌ಕುಮಾರ್‌ ಸತತ ಆರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

352ನೇ ರ‍್ಯಾಂಕ್‌ ಪಡೆದು ಕನಸು ಕೈಗೂಡಿಸಿಕೊಂಡಿದ್ದಾರೆ.
ಉಪನ್ಯಾಸಕ ಡಿ.ಎಚ್‌.ಹೊರಕೇರಪ್ಪ ಹಾಗೂ ಶಿಕ್ಷಕಿ ಎನ್‌.ರೇಖಾ ದಂಪತಿಯ ಪುತ್ರ ವಿನಯ್‌ಕುಮಾರ್‌ ಯುಪಿಎಸ್‌ಸಿ ಪರೀಕ್ಷೆಯ ಕನಸು ಕಂಡಿದ್ದು ಚಿಕ್ಕಂದಿನಲ್ಲಿ.
1ರಿಂದ 5ನೇ ತರಗತಿವರೆಗಿನ ವ್ಯಾಸಂಗವನ್ನು ಹೊಸದುರ್ಗದ ಜ್ಞಾನವಾಹಿನಿ ಶಾಲೆಯಲ್ಲಿ ಮುಗಿಸಿದ್ದಾರೆ.

6ರಿಂದ ಪಿಯುಸಿವರೆಗಿನ ವ್ಯಾಸಂಗವನ್ನು ಜವಾಹರ್‌ ನವೋದಯ ವಿದ್ಯಾಲಯದಲ್ಲಿ ಪಡೆದಿದ್ದರು. ಸುರತ್‌ಕಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮಗ ಉತ್ತೀರ್ಣರಾನಾಗಬೇಕು ಎಂದು ಪೋಷಕರು ಕನಸು ಕಂಡಿದ್ದರು. ಹೀಗಾಗಿ, 2015ರಿಂದ ವಿನಯ್‌ಕುಮಾರ್‌ ಸತತವಾಗಿ ಪ್ರಯತ್ನ ನಡೆಸಿದರು. 6ನೇ ಪ್ರಯತ್ನದಲ್ಲಿ ಕೊನೆಗೂ ಯಶಸ್ಸು ಸಿಕ್ಕಿತು.

ಬೇಷ್ ಡಾ.ಪ್ರಶಾಂತ್: ಅಭಿನಂದನೆಗಳು

0

ಕೇಂದ್ರ ನಾಗರಿಕ ಸೇವಾ ಆಯೋಗ 2021ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ.

ಯುಪಿಎಸ್​​​ಸಿ ಪರೀಕ್ಷೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳು ಅಬ್ಬರ ಜೋರಾಗಿದೆ.
ಶಿವಮೊಗ್ಗದ ಪ್ರಶಾಂತ್ ಕುಮಾರ್ ಬಿಒ ಎಂಬ ಅಭ್ಯರ್ಥಿ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್​​ಸಿ ಪಾಸ್ ಮಾಡಿದ್ದಾರೆ. ಯಾವುದೇ ಕೋಚಿಂಗ್ ಸೆಂಟರ್​ಗೆ ಹೋಗದೇ 641ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಪ್ರಶಾಂತ್ ಕುಮಾರ್​ ತಂದೆ ಓಂಕಾರಪ್ಪ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯ ಉಪನ್ಯಾಸಕರಾಗಿದ್ದು,ತಾಯಿ ರೇಖಾ ಜೆ, ಗೃಹಿಣಿಯಾಗಿದ್ದಾರೆ. ಪ್ರಶಾಂತ್​​ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​​ನಲ್ಲಿ ಎಂಬಿಬಿಎಸ್ ಪದವಿ ಪಡೆದುಕೊಂಡಿದ್ದಾರೆ.
ಸಾರ್ವಜನಿಕರ ವಲಯದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಮತ್ತು ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಬಯಕೆಯನ್ನ ಹೊಂದಿದ್ದು, ಹೀಗಾಗಿ ಯುಪಿಎಸ್​​ಸಿ ಆಯ್ಕೆ ಮಾಡಿಕೊಂಡಿರುವುದಾಗಿ ಪ್ರಶಾಂತ್ ತಿಳಿಸಿದ್ದಾರೆ.

ಬೆಂಗಳೂರಿನ ಇನ್ಸೈಟ್ಸ್ ಐಎಎಸ್ ಅಕಾಡೆಮಿಯ 20 ಮಂದಿ ಟಾಪರ್ಸ್ ಆಗಿದ್ದಾರೆ. ಉಳಿದಂತೆ ಅಕ್ಕ ಐಎಎಸ್ ಅಕಾಡೆಮಿಯ 6 ಮಂದಿ ಪಾಸ್​​ ಆಗಿದ್ದಾರೆ. ಒಟ್ಟಾರೆ ಕರ್ನಾಟಕದಿಂದ 27 ಅಭ್ಯರ್ಥಿಗಳು ಈ ಸಲದ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಇನ್ನೂ ಗಂಗಾವತಿಯ ದಂತ ವೈದ್ಯೆ ಅಪೂರ್ವ ಬಾಸೂರು 191ನೇ ರ್‍ಯಾಂಕ್ ಗಳಿಸಿದ್ದು, ದಾವಣಗೆರೆಯ ಅವಿನಾಶ್ 31ನೇ ಸ್ಥಾನ ಪಡೆದಿದ್ದಾರೆ.

ಇನ್ನೂ ದೆಹಲಿಯ ಜಾಮಿಯಾ ಮಿಲಿಯಾ ಕೋಚಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡಿರುವ ಒಟ್ಟು 23 ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಡಾ.ರಾಜ್ ಕುಮಾರ್ ಅಕಾಡೆಮಿಯ 8 ಮಂದಿ ಸಿವಿಲ್ ಪರೀಕ್ಷೆಯಲ್ಲಿ ತೇರ್ಗಡೆ

0

ಕೇಂದ್ರ ಲೋಕಸೇವಾ ಆಯೋಗ ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ಪರೀಕ್ಷೆಯನ್ನು ನಡೆಸಿತ್ತು. 2021ನೇ ಸಾಲಿನ ಈ ಪರೀಕ್ಷೆಯ ಫಲಿತಾಂಶ ( ಮೇ 30 ಪ್ರಕಟವಾಗಿದೆ.

ಈ ಅತ್ಯುನ್ನತ ಪರೀಕ್ಷೆಯಲ್ಲಿ ದೇಶದ ಸುಮಾರು 685 ಮಂದಿ ತೇರ್ಗಡೆಯಾಗಿದ್ದಾರೆ.
2021ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದಿಂದ 27 ಮಂದಿ ತೇರ್ಗಡೆಯಾಗಿದ್ದರ ಬಗ್ಗೆ ಇದೂವರೆಗೂ ಮಾಹಿತಿ ಸಿಕ್ಕಿದೆ. ವಿಶೇಷ ಅಂದರೆ ಇವರಲ್ಲಿ ಡಾ.ರಾಜ್​ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ 8 ಮಂದಿ ಕೂಡ ಸೇರಿಕೊಂಡಿದ್ದಾರೆ.

ಯುಪಿಎಸ್‌ಸಿಗೆ ಡಾ.ರಾಜ್‌ಕುಮಾರ್ ಅಕಾಡೆಮಿ ತರಬೇತಿ
ಡಾ.ರಾಜ್​ಕುಮಾರ್ ಅಕಾಡೆಮಿ ಹಲವು ವರ್ಷಗಳಿಂದ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಅಕಾಡೆಮಿ ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದು, ಪ್ರತಿ ವರ್ಷ ಈ ಅಕಾಡೆಮಿಯಿಂದ ಹಲವು ಮಂದಿ ಉತ್ತಮ ರ್‍ಯಾಂಕ್ ಪಡೆದು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿದ್ದಾರೆ ಅದರಂತೆ, ಈ ಬಾರಿ ಕೂಡ 8 ಮಂದಿ ಇದೇ ಅಕಾಡೆಮಿಯಿಂದ ತೇರ್ಗಡೆಯಾಗಿದ್ದಾರೆ.

ಇದೇ ಈ ಬಾರಿ ಕೂಡ ಹಲವು ಮಂದಿ ಈ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು.
ಡಾ.ರಾಜ್​ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಿಂದ ತೇರ್ಗಡೆಯಾದ 8 ಮಂದಿಯ ಲಿಸ್ಟ್ ಇಲ್ಲಿದೆ

ಡಾ.ರಾಜ್​ಕುಮಾರ್ ಅಕಾಡೆಮಿಯಿಂದ ತೇರ್ಗಡೆಯಾದವರ ಪಟ್ಟಿ
ಬೇನಕ ಪ್ರಸಾದ್ 92ನೇ ರ್‍ಯಾಂಕ್
ಮೇಘನಾ ಕೆ ಟಿ 425ನೇ ರ್‍ಯಾಂಕ್
ರಾಜೇಶ್ ಪೊನ್ನಪ್ಪ 222ನೇ ರ್‍ಯಾಂಕ್
ಪ್ರೀತಿ ಪಂಚಾಲ್ 449ನೇ ರ್‍ಯಾಂಕ್
ಪ್ರಶಾಂತ್ ಕುಮಾರ್ ಬಿಓ 641 ನೇ ರ್‍ಯಾಂಕ್
ರವಿನಂದನ್ ಬಿಎಂ 455ನೇ ರ್‍ಯಾಂಕ್
ನಿಖಿಲ್ ಬಿ ಪಾಟೀಲ್ 139ನೇ ರ್‍ಯಾಂಕ್
ದೀಪಕ್ ಆರ್ ಸೇಟ್ 311ನೇ ರ್‍ಯಾಂಕ್
ದೃಷ್ಟಿ ಸಮಸ್ಯೆಯ ಮೇಘನಾ 2ನೇ ಬಾರಿನೂ ಪಾಸ್
ಡಾ.ರಾಜ್​ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಿಂದ ಯುಪಿಎಸ್​ಸಿ ಪಾಸ್ ಆದವರಲ್ಲಿ ಮೇಘನಾ ಎಂಬುವವರಿಗೆ ಪೂರ್ಣ ಪ್ರಮಾಣದಲ್ಲಿ ಕಣ್ಣುಕಾಣುವುದಿಲ್ಲ. ಇವರು 425ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.

ಈ ಹಿಂದೆ ಕೂಡ ಇದೇ ಅಕಾಡೆಮಿಯಲ್ಲಿ ಪರೀಕ್ಷೆ ಬರೆದು 465ನೇ ರ್‍ಯಾಂಕ್ ಪಡೆದಿದ್ದರು. ಮೇಘನಾ ಮೂಲತಃ ಮೈಸೂರು ಜಿಲ್ಲೆಯ ಪರಿಯಾಪಟ್ಟಣದವರಾದ ಮೇಘನಾ ದೃಷ್ಟಿ ಸಮಸ್ಯೆಯ ಹೊರತಾಗಿಯೂ ಯುಪಿಎಸ್​ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.

ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಜಿಲ್ಲೆಯಲ್ಲಿ ಐದು ಮಕ್ಕಳನ್ನ ಗುರುತಿಸಲಾಗಿದೆ

0

ವಿಶ್ವದಾದ್ಯಂತ ಇನ್ನಿಲ್ಲದಂತೆ ಕಾಡಿದ ಮಹಾಮಾರಿ ಕೊರೋನ-19ರಿಂದಾಗಿ ತಮ್ಮ ಪೋಷಕರನ್ನೆ ಕಳೆದುಕೊಂಡು ಅನಾಥರಾಗಿರುವ ಅಪ್ರಾಪ್ತ ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಪಿ.ಎಂ.ಕೇರ್ಸ್ ಫಾರ್ ಚಿಲ್ಡ್ರನ್ಸ್ ಯೋಜನೆ ಅನುಷ್ಠಾನದ ಕುರಿತು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ದೇಶದ ಎಲ್ಲಾ ಜಿಲ್ಲೆಗಳಲ್ಲಿನ ಸಂತ್ರಸ್ಥ ಕುಟುಂಬಗಳ ಮಕ್ಕಳಿಗೆ ಸಾಂತ್ವನ ಹೇಳುವ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸಂತ್ರಸ್ಥ ಮಕ್ಕಳಿಗೆ ಸೌಲಭ್ಯಗಳ ಕಿಟ್‍ನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಕೊರೋನದಿಂದಾಗಿ ರಾಜ್ಯದಲ್ಲಿ ಸುಮಾರು 216ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತರಾಗಿರುವುದು ಅತ್ಯಂತ ನೋವಿನ ಸಂಗತಿ. ಇಂತಹ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಒದಗಿಸಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿರುವುದು ಸಮಾಧಾನಕರ ವಿಷಯ ಎಂದರು.

ಜಿಲ್ಲಾಧಿಕಾರಿಗಳು ಮತ್ತು ಸಂತ್ರಸ್ಥ ಪ್ರತಿ ಮಗುವಿನ ಹೆಸರಲ್ಲಿ ಜಂಟಿಯಾಗಿ ಠೇವಣಿ ಇರಿಸಿದ ಹಣವನ್ನು ಮಗುವಿನ 23ವಯಸ್ಸಿಗೆ ಒಟ್ಟು 10ಲಕ್ಷ ರೂ.ಗಳ ಹಣವನ್ನು ಮಗುವಿನ ಮುಂದಿನ ಭವಿಷ್ಯಕ್ಕಾಗಿ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಇಂತಹ 05 ಮಕ್ಕಳನ್ನು ಗುರುತಿಸಲಾಗಿದ್ದು, ಈಗಾಗಲೇ ಸಂತ್ರಸ್ಥ ಮಕ್ಕಳ ಹೆಸರಲ್ಲಿ 5.0 ಲಕ್ಷ ರೂ.ಗಳ ಠೇವಣಿಯನ್ನು ಅಂಚೆ ಕಚೇರಿಯಲ್ಲಿ ಇರಿಸಲಾಗಿದೆ. ಅಲ್ಲದೇ ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯಡಿ ಸೌಲಭ್ಯ ನೀಡಲಾಗುತ್ತಿದೆ ಎಂದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಲು ಕ್ರಮವಹಿಸಲಾಗಿದೆ.

ಇದರೊಂದಿಗೆ 5.00ಲಕ್ಷ ರೂ.ಗಳ ವರೆಗೆ ಉಚಿತ ಆರೋಗ್ಯವಿಮೆ ಸೌಲಭ್ಯ ಒದಗಿಸಲಾಗಿದೆ ಎಂದರು.
ಸವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಪ್ರಧಾನಮಂತ್ರಿ ಸುರಕ್ಷಾ ಯೋಜನೆಯ ಎಲ್ಲಾ ಅನುಮೋದಿತ ಮಕ್ಕಳಿಗೆ ರೂ.50,000/-ಗಳ ಪರಿಹಾರಧನವನ್ನು ರಾಜ್ಯದ ವಿಪತ್ತು ನಿರ್ವಹಣಾ ನಿಧಿಯಿಂದ ನೀಡಲಾಗಿದೆ.

ಅಲ್ಲದೇ ಮಾಹೆಯಾನ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ರೂ.2,000/-ಗಳ ಆರ್ಥಿಕ ಸೌಲಭ್ಯವನ್ನು 2021-22ನೇ ಆರ್ಥಿಕ ಸಾಲಿಗೆ ಒದಗಿಸಲಾಗಿದೆ ಎಂದವರು ನುಡಿದರು.

ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾತನಾಡಿ, ಪೋಷಕರನ್ನು ಕಳೆದುಕೊಂಡ ಮಕ್ಕಳ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರ ಉಜ್ವಲ ಭವಿಷ್ಯ ರೂಪಿಸುವಲ್ಲಿ ಸರ್ಕಾರ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಅವರ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿರುವಂತೆ ನೋಡಿಕೊಳ್ಳಲಿದೆ. ಅವರ 23ನೇ ವಯಸ್ಸಿಗೆ 10ಲಕ್ಷ ರೂ.ಗಳ ಇಡಿಗಂಟನ್ನು ಒದಗಿಸಲು ಕ್ರಮ ಕೈಗೊಂಡಿದೆ ಎಂದರು.

ಕೊರೋನ ಮಹಾಮಾರಿ ಅನೇಕ ಮಕ್ಕಳ ಬದುಕಲ್ಲಿ ಕಪ್ಪುಛಾಯೆ ಮೂಡಿಸಿದೆ. ಇನ್ನೂ ಅನೇಕ ಕುಟುಂಬಗಳು ಆಶ್ರಯದಾತರಾಗಿದ್ದ ಮನೆಯ ಯಜಮಾನನನ್ನೆ ಕಳೆದುಕೊಂಡು ಬದುಕು ದುಸ್ತರವಾಗಿಸಿದೆ. ಎದುರಾಗುವ ಸಮಸ್ಯೆ-ಸವಾಲುಗಳನ್ನು ಎದುರಿಸಲಾಗದೆ ಪ್ರತಿ ಕ್ಷಣವೂ ತಪಸ್ಸಿನಂತೆ ಕಳೆಯುವಂತಾಗಿರುವುದು ನೋವು ತಂದಿದೆ. ಇಂತಹ ಕುಟುಂಬಗಳ ಸದಸ್ಯರ ನೆರವಿಗೆ ಸರ್ಕಾರ ಜೊತೆಗಿರಲಿದೆ ಎಂದರು.

ಸಂತ್ರಸ್ಥ ಮಕ್ಕಳ ಉನ್ನತ ಶಿಕ್ಷಣ, ವೃತ್ತಿಪರ ತರಬೇತಿಗೂ ಅಗತ್ಯ ಸಹಕಾರ ನೀಡಲಿದೆ. ಮಾತ್ರವಲ್ಲ ಉನ್ನತ ವಿದ್ಯಾಬ್ಯಾಸಕ್ಕೆ ಶೈಕ್ಷಣಿಕ ಸಾಲ ನೀಡಲು ಕ್ರಮವಹಿಸಲಾಗಿದೆ. ಅನಾರೋಗ್ಯದಿಂದ ಬಳಲುವ ಮಕ್ಕಳ ಚಿಕಿತ್ಸೆಗೆ ಆಯುಷ್ಮಾನ್ ಕಾರ್ಡನ್ನು ನೀಡಲಾಗಿದೆ. ಇದರಿಂದಾಗಿ ರೂ.5.00ಲಕ್ಷ ರೂ.ಗಳ ವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಅಲ್ಲದೇ ಒಟ್ಟಾರೆಯಾಗಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಫಿಟ್‍ಇಂಡಿಯಾ, ಖೇಲೋ ಇಂಡಿಯಾ ಅಭಿಯಾನ ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಇದರೊಂದಿಗೆ ಯೋಗವನ್ನು ಜೋಡಿಸಲಾಗಿದೆ. ಕೊರೋನದಂತಹ ಸಂದಿಗ್ದ ಸಂದರ್ಭದಲ್ಲಿಯೂ ದೇಶದಲ್ಲಿ ಮಾತ್ರವಲ್ಲ ವಿದೇಶಗಳಿಗೆ ಔಷಧ ಪೂರೈಸಿ, ಮಾನವೀಯತೆ ಮೆರೆದಿದೆ ಎಂದ ಅವರು, ದೇಶ ಅಭಿವೃದ್ಧಿಯಡೆಗೆ ಮುನ್ನಡೆಯುತ್ತಿದೆ. ಈ ದೇಶದ ನಿರೀಕ್ಷಿತ ಪ್ರಗತಿಯಲ್ಲಿ ಯುವಜನತೆ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬ ಆಶಯವಿದೆ. ಎಲ್ಲಾ ಯುವಜನರು ತಮ್ಮ ಕನಸನ್ನು ಸಾಕಾರಗೊಳಿಸುವ ಸಂಕಲ್ಪ ಮಾಡುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರು, ಶಾಸಕ ಕೆ.ಬಿ.ಅಶೋಕನಾಯ್ಕ್, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಡಾ ಆರ್.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಡಾ ನಾಗೇಂದ್ರ ಎಫ್.ಹೊನ್ನಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಜಿ.ಜಿ.ಸುರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿದೇಶಕ ನಾಗರಾಜ ಕಾಗಲ್ಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂತ್ರಸ್ಥ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

8 ವರ್ಷಗಳಲ್ಲಿ ಮೋದಿ ಅವರ ಜನಪ್ರಿಯತೆ ಹೆಚ್ಚಳ

0

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷಗಳಾಗಿವೆ. ಮೊದಲ ಅವಧಿಯಲ್ಲಿ ಹೆಚ್ಚಿನ ಸವಾಲುಗಳು ಇಲ್ಲದೆ 2ನೇ ಬಾರಿಗೆ ಗದ್ದುಗೆಗೇರಿದ ಬಳಿಕ ಕೊರೋನಾ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿದ್ದವು. ಇವೆಲ್ಲವುಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಮೋದಿ ಸರ್ಕಾರ ಜನಪ್ರಿಯತೆಯಲ್ಲಿ ಈಗಲೂ ಮುನ್ನಡೆಯಲ್ಲಿದೆ.

ಲೋಕಲ್ ಸರ್ಕಲ್ಸ್ ಎಂಬ ಖಾಸಗಿ ಸಂಸ್ಥೆ ಸಮೀಕ್ಷೆ ನಡೆಸಿದ ವೇಳೆ ಈ ಅಂಶ ಬಹಿರಂಗವಾಗಿದೆ. 2020ಕ್ಕೆ ಹೋಲಿಸಿದರೆ ಈ ಬಾರಿ ಮೋದಿ ಸರ್ಕಾರದ ಜನಪ್ರಿಯತೆ ಶೇ. 16ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ಶೇ. 67 ರಷ್ಟು ಮಂದಿ ಮೋದಿ ಸರ್ಕಾರ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 47ರಷ್ಟು ಮಂದಿ, ನಿರುದ್ಯೋಗ ವಿಚಾರದಲ್ಲಿ ಮೋದಿ ಸರ್ಕಾರ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದರೆ, ಇನ್ನು ಶೇಕಡ 60ರಷ್ಟು ಮಂದಿ ಕೋಮು ಸೌಹಾರ್ದ ಸಮನ್ವಯಕ್ಕೆ ಈ ಸರ್ಕಾರ ಶ್ರಮಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಮಾಹಿತಿ

0

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11ನೇ ಕಂತು ಇಂದು ಬಿಡುಗಡೆಯಾಗಲಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಯಂತೆ ವಾರ್ಷಿಕ 6000 ರೂ. ಸಹಾಯಧನ ನೀಡಲಾಗುತ್ತದೆ.

ದೇಶದ 10 ಕೋಟಿಗೂ ಹೆಚ್ಚು ರೈತ ಫಲಾನುಭವಿಗಳ ಖಾತೆಗೆ ನೇರವಾಗಿ ಸಹಾಯಧನ ಜಮಾ ಮಾಡಲಾಗುತ್ತದೆ. ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿಲ್ಲದ ರೈತರು ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಅಲ್ಲದೇ, ಆನ್ಲೈನ್ನಲ್ಲಿಯೂ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಬಹುದಾಗಿದೆ.

pmkisan.gov.in ವೆಬ್ಸೈಟ್ ನಲ್ಲಿ ಫಲಾನುಭವಿ ಸ್ಥಿತಿ ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ, pm-kisan ಖಾತೆಯ ಸಂಖ್ಯೆ ಮತ್ತು ನೊಂದಾಯಿತ ಮೊಬೈಲ್ ಸಂಖ್ಯೆ ಭರ್ತಿ ಮಾಡಿ ಮಾಹಿತಿ ಪಡೆಯಬಹುದು ಎನ್ನಲಾಗಿದೆ.