Wednesday, March 4, 2026
Wednesday, March 4, 2026
Home Blog Page 1550

ಸಾಮಾಜಿಕ ಮಾಧ್ಯಮ: ಮೇಲ್ಮನವಿ ಸಮಿತಿ ರಚನೆ ಪ್ರಸ್ತಾವನೆ

0

ಡಿಜಿಟಲ್ ಮಾಧ್ಯಮ ಬಳಕೆದಾರರ ಹಿತರಕ್ಷಣೆ.

ಸಾಮಾಜಿಕ ಮಾಧ್ಯಮಗಳ ಕುಂದುಕೊರತೆ ಅಧಿಕಾರಿಗಳು ತಮಗೆ ಇಷ್ಟ ಬಂದ ಹಾಗೆ ತಮ್ಮ ಬಳಕೆದಾರರ ಖಾತೆಗಳನ್ನು ಅಮಾನತ್ತು ಅಥವಾ ರದ್ದು ಪಡಿಸುವ ಕ್ರಮ ನಡೆದುಕೊಂಡು ಬಂದಿದೆ.

ಸಾಮಾಜಿಕ ಮಾಧ್ಯಮಗಳವರು
ಹಠಾತ್ತನೆ ತೀರ್ಪು ನೀಡಿ ಬಳಕೆದಾರರ ಖಾತೆಗೆ ನಿರ್ಬಂಧ ವಿಧಿಸುವ ಕ್ರಮ ಈಗ ಜಾರಿಯಲ್ಲಿದೆ.

ಈ ಬಗ್ಗೆ ಮನವಿ ಸಲ್ಲಿಸಲು ಇನ್ನುಮುಂದೆ ಅನುವು ಮಾಡಿಕೊಡುವ ಚಿಂತನೆ ಸರ್ಕಾರಕ್ಕಿದೆ.

ಇಂತಹ ತೀರ್ಪುಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಿತಿಯೊಂದನ್ನ ರಚಿಸುವ ಬಗ್ಗೆ
ನಿಯಮಗಳಿಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.
ಈವರೆಗೆ ಜಾರಿಯಲ್ಲಿರುವ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿರುವ ಸಾಮಾಜಿಕ ಮಾಧ್ಯಮಗಳು ಅನೇಕ ಬಳಕೆದಾರರ ಖಾತೆಗಳನ್ನು ಸ್ಥಗಿತಗೊಳಿಸಿವೆ. ಇದರಲ್ಲಿ ಗಣ್ಯರ ಖಾತೆಗಳೇ ಜಾಸ್ತಿಯಾಗಿವೆ.

ಸಾಮಾಜಿಕ ಮಾಧ್ಯಮ ವೇದಿಕೆಗಳ
ಕುಂದುಕೊರತೆ ಅಧಿಕಾರಿಗಳ ವಿರುದ್ಧ ಮನಿವಿ ಸಲ್ಲಿಸಲು ಮೇಲ್ಮನವಿ ಸಮಿತಿಯೊಂದನ್ನ ಸರ್ಕಾರ ರಚಿಸಲುದ್ಯುಕ್ತವಾಗಿದೆ
ನಿರ್ಬಂಧ ವಿಧಿಸಿದ 30 ದಿನಗಳೊಳಗಾಗಿ ಮೇಲ್ಮನವಿ ಸಲ್ಲಿಸಬೇಕಿದೆ. ಈ ಬಗ್ಗೆ ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ಅಧಿಕಾರಿಗಳ ಜೊತೆ ನಾಗರಿಕರು ಅಶಿಸ್ತಿನ ವರ್ತನೆ ತೋರಿಸುವಂತಿಲ್ಲ

0

ಬಾಂಬೆ ಹೈಕೋರ್ಟ್, ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ ನ ಅಶಿಸ್ತಿನ ವರ್ತನೆ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಪುಣೆ ಜಿಲ್ಲೆಯ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಆರೋಪಿಗೆ 25,000 ರೂ.ಆರೋಪಿ ಪ್ರವೀಣ್ ಸಾಹೇಬರಾವ್ ಭೋಗವಾಡೆ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ವ್ಯಕ್ತ ಪಡಿಸಿದ ನಂತರ, ಒಬ್ಬ ಸಾಮಾನ್ಯ ಪ್ರಜೆಯು ತನ್ನ ಕುಂದುಕೊರತೆ ಎಷ್ಟೇ ಗಂಭೀರವಾಗಿದ್ದರೂ, ಭೋಗವಾಡೆ ಪ್ರತಿಕ್ರಿಯಿಸಿದ ರೀತಿಯಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಭಾರತಿ ಎಚ್ ಡಾಂಗ್ರೆ ಅವರು ಮೇ 24 ರಂದು ಭೋಗವಾಡೆ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದರು. ಪುಣೆ ಜಿಲ್ಲೆಯ ರಂಜನ್‌ಗಾಂವ್ ಎಂ ಐ ಡಿಸಿ ಪೊಲೀಸ್ ಠಾಣೆಯಲ್ಲಿ ಭೋಗವಾಡೆ ಎಂಬುವವರ ಬಂಧನಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿತ್ತು.

ಎಂಎಸ್‌ಇಡಿಸಿಎಲ್‌ನ ಸಹಾಯಕ ಇಂಜಿನಿಯರ್ ನೀಡಿದ ದೂರಿನ ಆಧಾರದ ಮೇಲೆ ದಾಖಲಿಸಲಾದ ಎಫ್‌ಐಆರ್‌ನಂತೆ ಫೆಬ್ರವರಿ 26 ರಂದು ಕೆಲವು ಫೀಡರ್ ಲೈನ್‌ಗಳ ಸಂಪರ್ಕ ಕಡಿತಗೊಂಡ ನಂತರ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಭೋಗವಾಡೆ ಸೇರಿದಂತೆ ಅನೇಕ ಗ್ರಾಮಸ್ಥರು ಜಮಾಯಿಸಿದ್ದರು.

ಸಾರ್ವಜನಿಕ ಸೇವಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಭೋಗವಾಡೆ ಅಶಿಸ್ತಿನ ವರ್ತನೆ ತೋರಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಭೋಗವಾಡೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಭೋಗವಾಡೆ ಪರ ವಾದ ಮಂಡಿಸಿದ ವಕೀಲ ರವೀಂದ್ರ ಪಚುಂಡ್ಕರ್, ತಮ್ಮ ಕಕ್ಷಿದಾರರು ಪಶ್ಚಾತ್ತಾಪ ಪಡುತ್ತಿದೆ. ಆತಂಕಗೊಂಡಿದ್ದರಿಂದ ಈ ಘಟನೆ ನಡೆದಿದೆ. ಭೋಗವಾಡೆ ಕ್ರಿಮಿನಲ್ ಪೂರ್ವಾಪರಗಳಿಲ್ಲದ ಯುವಕ ಮತ್ತು ತನಿಖಾ ಅಧಿಕಾರಿಯೊಂದಿಗೆ ಸಹಕರಿಸಲು ಸಿದ್ಧರಿದ್ದಾರೆ ಎಂದು ಪಚುಂಡ್ಕರ್ ಅವರು ಹೇಳಿದರು.

ಆದಾಗ್ಯೂ, ಪೊಲೀಸರ ಪರವಾಗಿ ಹಾಜರಾದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಜಕ್ತಾ ಪಿ ಶಿಂಧೆ, ಭೋಗವಾಡೆ ಅವರು ಅಧಿಕಾರಿಗಳೊಂದಿಗೆ ಘರ್ಷಣೆಯನ್ನು ಮುಂದುವರೆಸುತ್ತಾರೆ. ಮತ್ತು ಕೊರೋನಾ ಮಾರ್ಗಸೂಚಿಗಳು ಕಾರ್ಯನಿರ್ವಹಿಸುತ್ತಿದ್ದಾಗ ಇದೇ ರೀತಿಯ ಕೃತ್ಯದಲ್ಲಿ ತೊಡಗಿದ್ದರು ಎಂದು ಹೇಳಿದರು.

ನ್ಯಾಯಮೂರ್ತಿ ಡಾಂಗ್ರೆ ಅವರು ಭೋಗವಾಡೆಯವರು ಯಾವುದೇ ಸರ್ಕಾರಿ ಅಧಿಕಾರಿಗಳ ಜೊತೆ ಸಾಗರಿಕರು ಅನುಚಿತವಾಗಿ ವರ್ತಿಸಿಲು ಅವಕಾಶವಿಲ್ಲ ಎಂದು ಆದೇಶ ನೀಡಿತು. ಇದರ ಜೊತೆಗೆ ವ್ಯಕ್ತಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಿದರು. 8 ವಾರಗಳಲ್ಲಿ ಶಿರೂರು ತಾಲೂಕಿನ ಗಣೇಗಾಂವ್ ಖಾಲ್ಸಾ ಗ್ರಾಮ ಪಂಚಾಯಿತಿಗೆ 25 ಸಾವಿರ ರೂ.ಗಳನ್ನು ಪಾವತಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಈ ಮೊತ್ತವನ್ನು ಗ್ರಾಮ ಪಂಚಾಯಿತಿಯಿಂದ ಜನರ ಕಲ್ಯಾಣಕ್ಕೆ ಬಳಸಬೇಕು ಎಂದು ತಿಳಿಸಿದೆ.

ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ಪಾಸ್ ವಿತರಣೆ

0

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಳ್ಳಾರಿ ಘಟಕದ ವತಿಯಿಂದ 2022-23ನೇ ಸಾಲಿನ ವಿವಿಧ ದರ್ಜೆಯ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್‍ಗಳನ್ನು ಜೂ.06ರಿಂದ ವಿತರಿಸಲಾಗುತ್ತದೆ ಎಂದು ಕಕರಸಾ ಸಂಸ್ಥೆ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಇನಾಯತ್ ಬಾಗ್‍ಖಾನ್ ಅವರು ಹೇಳಿದ್ದಾರೆ.

ಅಗತ್ಯ ದಾಖಲಾತಿಗಳನ್ನು ಸಲ್ಲಿಸುವುದರೊಂದಿಗೆ ಬಸ್‍ಪಾಸ್‍ಗಳನ್ನು ಬಳ್ಳಾರಿ ಕೇಂದ್ರ ಬಸ್‍ನಿಲ್ದಾಣ, ಕುರುಗೋಡು, ಕಂಪ್ಲಿ, ಸಿರುಗುಪ್ಪ ಹಾಗೂ ಸಂಡೂರು ಬಸ್‍ನಿಲ್ದಾಣಗಳಲ್ಲಿ ಪಡೆಯಬಹುದು.

ವಿಧ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸುವ ವಿಧಾನ ಹೀಗಿದೆ. ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಆನ್‍ಲೈನ್ ಸೇವಾಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ಅರ್ಜಿಯನ್ನು ಶಾಲಾ ಕಾಲೇಜು ಮುಖ್ಯಸ್ಥರು, ದೃಢೀಕರಣ ಮಾಡಿದ ಅರ್ಜಿ, ಶಾಲಾ ಕಾಲೇಜಿನಲ್ಲಿ ಪ್ರವೇಶ ಪಡೆದ ಬಗ್ಗೆ ಶುಲ್ಕ ಪಾವತಿ ಚೀಟಿಗಳೊಂದಿಗೆ ಶಾಲಾ ಕಾಲೇಜುಗಳಿಂದ ನಿಯೋಜಿಸಿದ ಜವಾಬ್ದಾರಿಯುತ ಪ್ರತಿನಿಧಿಗೆ ಸಲ್ಲಿಸುವುದು. ಮನೆ ವಿಳಾಸಕ್ಕೆ ಸಂಬಂಧಿಸಿದಂತೆ ಕುಟುಂಬ ಪಡಿತರಚೀಟಿ ಅಥವಾ ದೂರವಾಣಿ ಅಥವಾ ವಾಸಸ್ಥಳ ಪ್ರಮಾಣಪತ್ರ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ. ಕಡ್ಡಾಯವಾಗಿ ವಿದ್ಯಾರ್ಥಿ ಆಧಾರ್‍ಕಾರ್ಡ್. ಇತ್ತೀಚಿನ 3 ಭಾವಚಿತ್ರಗಳು, ಸರಕಾರದಿಂದ ನೀಡಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಾನ್ಯತಾ ಅವಧಿ ಹೊಂದಿರುವ ಮೀಸಲಾತಿ ಪ್ರಮಾಣ ಪತ್ರ. ಶೈಕ್ಷಣಿಕ ಸಂಸ್ಥೆಯಿಂದ ವಾಸಸ್ಥಳಕ್ಕೆ 60 ಕಿ.ಮೀ. ಗರಿಷ್ಟ ಅಂತರವಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರಿರುತ್ತಾರೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ನೇರವಾಗಿ ಬಸ್ ಪಾಸ್ ಕೌಂಟರ್‍ಗೆ ಬಂದಲ್ಲಿ ಬಸ್‍ಪಾಸ್ ನೀಡಲಾಗುವುದಿಲ್ಲ. ಶಾಲೆ ಅಥವಾ ಕಾಲೇಜುಗಳಿಂದ ನಿಯೋಜಿಸಿದ ಜವಾಬ್ದಾರಿಯುತ ಪ್ರತಿನಿಧಿಗಳು, ಬಸ್ ಪಾಸ್ ಕೌಂಟರ್ ಗೆ ಪಾಸ್ ಅರ್ಜಿ ಮತ್ತು ಪಾಸ್ ಮೊತ್ತವನ್ನು ಪಾವತಿಸಿ, ನಂತರ ಬರೆದ ಪಾಸ್‍ಗಳನ್ನು ಕೌಂಟರ್ ಗಳಿಂದ ಪ್ರತಿನಿಧಿಗಳಿಗೆ ನೀಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ.

ಸಿಇಟಿ ಪರೀಕ್ಷಾ ಪ್ರವೇಶ ಪತ್ರ: ವಿದ್ಯಾರ್ಥಿಗಳಿಗೆ ಮಾಹಿತಿ

0

2022 ರ ಸಿಇಟಿ ಪರೀಕ್ಷೆಯು ಜೂನ್ 16 ರಿಂದ 18 ರವರೆಗೆ ನಡೆಯಲಿದೆ. ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ http://kea.kar.nic.in ಗೆ ಭೇಟಿ ನೀಡಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳವ ಕಾರ್ಯವಿಧಾನವನ್ನು ತಪ್ಪದೇ ಅನುಸರಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ.

ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ಮುದ್ರಿಸಿರುವ ಎಲ್ಲ ವಿವರಗಳನ್ನು ಪರಿಶೀಲಿಸಿ ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಸೂಚಿಸಿದೆ.

ಸಿಇಟಿ ಪರೀಕ್ಷಾ ವೇಳಪಟ್ಟಿ ಹೀಗಿದೆ
ಜೂನ್ -16 ಬೆಳಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ

ಜೂನ್ -17 ಬೆಳಗ್ಗೆ ಭೌತಶಾಸ್ತ್ರ ಮಧ್ಯಾಹ್ನ ರಸಾಯನ ಶಾಸ್ತ್ರ

ಜೂನ್ -18 ಹೊರನಾಡು ಮತ್ತು ಗಡಿ ನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಸಿಇಟಿ ಪರೀಕ್ಷೆ ನಡೆಯಲಿದೆ.

ದೇಶದಲ್ಲಿ ಅಡಿಕೆ ಅಕ್ರಮ ವ್ಯವಹಾರ ತಡೆಯಲು ಪ್ರಧಾನಿಗೆಡಾ.ವೀರೇಂದ್ರ ಹೆಗ್ಡೆ ಪತ್ರ

0

ದೇಶದೊಳಕ್ಕೆ ಅಡಿಕೆಯ ಅಕ್ರಮ ಪ್ರವೇಶವನ್ನು ತಡೆಯುವಂತೆ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಡಿಆರ್‌ಎಫ್‌)ದ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಹಣಕಾಸು ರಾಜ್ಯ ಸಚಿವ ಪಂಕಜ್‌ ಚೌಧರಿ ಅಡಿಕೆ ಕಳ್ಳಸಾಗಣೆ ಇನ್ನೂ ಅಸ್ತಿತ್ವದಲ್ಲಿದೆ ಎಂದಿರುತ್ತಾರೆ. ತೆರಿಗೆ ಜಾಲದ ಹೊರಗೆ ವ್ಯಾಪಾರ ಮಾಡುವ ಅಡಿಕೆಯ ಪ್ರಮಾಣವು ಲಭ್ಯವಿಲ್ಲ ಎಂದೂ ಹೇಳಿದ್ದರು. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯದ ಪ್ರಕಾರ ಶೇ. 15 ಅಡಿಕೆಯನ್ನು ಮಾತ್ರ ಕ್ಯಾಂಪ್ಕೋ ಮಂಗಳೂರು ಸೇರಿದಂತೆ ಸಹಕಾರಿ ಸಂಸ್ಥೆಗಳು ವ್ಯಾಪಾರ ಮಾಡುತ್ತವೆ ಮತ್ತು ಶೇ. 85ನ್ನು ಖಾಸಗಿ ವ್ಯಾಪಾರಿಗಳು ಖರೀದಿಸುತ್ತಾರೆ. ಹೀಗಿರುವಾಗ ಕಳ್ಳಸಾಗಾಣಿಕೆದಾರರ ಅಕ್ರಮ ಚಟುವಟಿಕೆಗಳು ಸ್ಥಳೀಯವಾಗಿ ಬೆಳೆದ ಅಡಿಕೆಯ ಬೆಲೆಯನ್ನು ಅಸ್ಥಿರಗೊಳಿಸುವುದಲ್ಲದೆ ಲಕ್ಷಾಂತರ ಅಡಿಕೆ ರೈತರ ಜೀವನ ಮತ್ತು ಆರ್ಥಿಕ ಸ್ಥಿತಿಯ ಮೇಲೆ, ಜಿಎಸ್‌ಟಿ ರೂಪದಲ್ಲಿ ಉತ್ಪತ್ತಿಯಾಗುವ ಆದಾಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಡಾ| ಹೆಗ್ಗಡೆ ಅಭಿಪ್ರಾಯ ಪಟ್ಟಿದ್ದಾರೆ.

ಭಾರತವು ಪ್ರತಿ ವರ್ಷ 15.63 ಲಕ್ಷ ಟನ್‌ ಅಡಿಕೆಯನ್ನು ಉತ್ಪಾದಿಸುತ್ತದೆ ಮತ್ತು ನಮ್ಮ ದೇಶದ ಸುಮಾರು 16 ಮಿಲಿಯ ಜನರ ಬೆನ್ನೆಲುಬಾಗಿದೆ. ಭಾರತವು ಅಡಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೂ ಪ್ರತೀ ವರ್ಷ ಸುಮಾರು 24,000 ಟನ್‌ ಅಡಿಕೆಯನ್ನು ಕಾನೂನುಬದ್ಧವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ.

ಅಡಿಕೆಯ ಸರಕು ಪಟ್ಟಿಯಲ್ಲಿ ಕಡಿಮೆ ದರವನ್ನು ನಮೂದಿಸಿ ಮಾರಾಟ ಮಾಡುವುದನ್ನು ತಡೆಯಲು, ನಮ್ಮ ದೇಶದ ಬಿಳಿ ಮತ್ತು ಕೆಂಪು ಅಡಿಕೆಗಳೆರಡರಲ್ಲೂ ಪರಿಣತರಾಗಿರುವ ಸಹಕಾರಿ ವಲಯದ ಸಮರ್ಥ ನೋಡಲ್‌ ಏಜೆನ್ಸಿ ಕ್ಯಾಂಪ್ಕೋ ಅಥವಾ ಎಡಿಆರ್‌ಎಫ್‌ ಅನ್ನು ಅಂತಹ ಸರಕುಗಳ ಮೌಲ್ಯಮಾಪನ ಮತ್ತು ವರದಿಗಳನ್ನು ನೀಡಲು ಗುರುತಿಸಬಹುದು ಎಂದರು.

ಈ ವಿಷಯಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಚಿವಾಲಯಗಳಿಗೆ ಸೂಚನೆ ನೀಡಬೇಕೆಂದು ಪ್ರಧಾನಿ ಅವರಿಗೆ ಸ್ವತಃ ಅಡಿಕೆ ಬೆಳೆಗಾರರಾಗಿರುವ ಡಾ| ಹೆಗ್ಗಡೆ ಅವರು ಆಗ್ರಹಿಸಿದ್ದಾರೆ.

ಕೊರೋನ ಸೋಂಕು ಪತ್ತೆ: ಮುಂಬೈ ಹೈ ಅಲರ್ಟ್ ಘೋಷಣೆ

0

ದೇಶದಲ್ಲಿ ಕೊರೋನಾ ಮಹಾಮಾರಿ ಜೂನ್ ತಿಂಗಳಿಗೆ ಮತ್ತೆ ಬರಲಿದೆ ಎಂಬ ಲೆಕ್ಕಾಚಾರ, ಎಚ್ಚರಿಕೆಗಳ ಮಧ್ಯೆ ಮಹಾರಾಷ್ಟ್ರದಲ್ಲಿ ಅಪಾಯಕಾರಿ ಸೋಂಕು ಪತ್ತೆಯಾಗಿದೆ. ಒಂದೂವರೆ ತಿಂಗಳ ನಂತರ ದಿಢೀರ್ 7 ಪಟ್ಟು ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.

626 ರಿಂದ 4,500ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಮುಂಬೈ, ಪುಣೆಯಲ್ಲಿ ಶೇ.97ರಷ್ಟು ಸಕ್ರಿಯ ಪ್ರಕರಣಗಳಿವೆ.

ಮುಂಬೈ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತುರ್ತಾಗಿ ಕೊರೋನಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಹೈಅಲರ್ಟ್ ಘೋಷಿಸಿದ್ದಾರೆ.

ಕೊರೋನಾ ಸ್ಥಿತಿಗತಿಗಳು, ವೈದ್ಯಕೀಯ ಸೇವೆಗಳ ಉಪಲಭ್ಯತೆ ಬಗ್ಗೆ ಚರ್ಚಿಸಿದ ಉದ್ಧವ್ ಠಾಕ್ರೆ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗದಂತೆ, ಆಕ್ಸಿಜನ್ ಪೂರೈಕೆ, ಔಷಧಗಳ ದಾಸ್ತಾನು ಕಡಿಮೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು. ಜ್ವರ, ಶೀತ, ಕೆಮ್ಮು ಅಥವಾ ಎದೆನೋವು ಕಂಡು ಬಂದರೆ ಕೊರೋನಾ ಪರೀಕ್ಷೆ ಮಾಡಿಸಿ ಎಂದು ರಾಜ್ಯದ ಜನರಿಗೆ ಸಂದೇಶ ನೀಡಿದ್ದಾರೆ. ಕರ್ನಾಟಕದಲ್ಲೂ ಕೊರೊನಾ ಏರಿಳಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ 297 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲೇ 276 ಮಂದಿಗೆ ಸೋಂಕು ಪತ್ತೆಯಾಗಿದೆ.

ರೈಲ್ವೆ ಪ್ರಯಾಣದಲ್ಲಿ ಬೇಕಾಬಿಟ್ಟಿ ಲಗೇಜು ಒಯ್ಯುವಂತಿಲ್ಲ

0

ರೈಲುಗಳಲ್ಲಿ ಪ್ರಯಾಣಿಸುವ ಜನರು ಹೆಚ್ಚುವರಿ ಲಗೇಜ್ ಸಾಗಿಸುತ್ತಾರೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಕೆಲವು ತೊಂದರೆಗಳು ಎದುರಾದ ಪರಿಣಾಮ ರೈಲ್ವೆ ಸಚಿವಾಲಯವು ಹೊಸ ನಿಯಮಗಳನ್ನು ಪ್ರಕಟಿಸಿದೆ.

ರೈಲಿನಲ್ಲಿ ಪ್ರಯಾಣಿಸುವಾಗ ಸಾಮಾನು ಸರಂಜಾಮು ಕೊಂಡೊಯ್ಯಲು ಮಿತಿ ಇದ್ದರೂ ಸಹ ಹೆಚ್ಚಿನ ಪ್ರಯಾಣಿಕರು ಅತಿ ಹೆಚ್ಚು ಲಗೇಜ್‌ನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದು ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೂಲಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಚೈನ್ ಎಳೆಯುವ ಘಟನೆಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಹ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗುತ್ತಿರುವುದರಿಂದ ಪ್ರಯಾಣಿಸುವಾಗ ಹೆಚ್ಚುವರಿ ಲಗೇಜ್ ಅನ್ನು ಸಾಗಿಸುವ ಬಗ್ಗೆ ರೈಲ್ವೆ ಆಡಳಿತವು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.

ರೈಲ್ವೆ ಯಾವಾಗಲೂ ದೂರದ ಪ್ರಯಾಣಿಕರಿಗೆ ವಿಶೇಷ ಆಯ್ಕೆಯಾಗಿದೆ. ಏಕೆಂದರೆ, ದೇಶದಲ್ಲಿ ಪ್ರಯಾಣಿಕರು ವಿಮಾನಕ್ಕಿಂತ ರೈಲಿನಲ್ಲಿ ಪ್ರಯಾಣದ ಸಮಯದಲ್ಲಿ ಹೆಚ್ಚು ಲಗೇಜ್‌ನೊಂದಿಗೆ ಪ್ರಯಾಣಿಸಬಹುದು. ಆದರೆ, ಈಗ ಇದು ರೈಲ್ವೆ ಹಾಗೂ ಸಹ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.

ರೈಲ್ವೇಯ ಈಗಿರುವ ನಿಯಮಗಳ ಪ್ರಕಾರ, ರೈಲಿನ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು 40 ರಿಂದ 70 ಕೆಜಿಯಷ್ಟು ಲಗೇಜ್ ಅನ್ನು ಮಾತ್ರ ಸಾಗಿಸಬಹುದು. ವಾಸ್ತವವಾಗಿ, ರೈಲ್ವೇಯ ಕೋಚ್‌ಗೆ ಅನುಗುಣವಾಗಿ ಲಗೇಜ್‌ನ ತೂಕವು ವಿಭಿನ್ನವಾಗಿರುತ್ತದೆ. ಸ್ಲೀಪರ್, ಎಸಿ ಚೇರ್ ಕಾರ್ ಮತ್ತು ಎಸಿ 3 ಟೈಯರ್ ಕೋಚ್‌ಗಳಲ್ಲಿ ಪ್ರಯಾಣಿಕರು 40 ಕೆಜಿ ವರೆಗೆ ಸಾಗಿಸಬಹುದು. 2ನೇ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರು 50 ಕೆಜಿ ಮತ್ತು 1ನೇ ಎಸಿ ದರ್ಜೆಯ ಪ್ರಯಾಣಿಕರು 70 ಕೆಜಿ ವರೆಗೆ ಸಾಗಿಸಬಹುದು. ಸಾಮಾನ್ಯ ವರ್ಗದಲ್ಲಿ ಈ ಮಿತಿ ಕೇವಲ 35 ಕೆ.ಜಿ.ವರೆಗೆ ಇರಲಿದೆ.

ಯಾರಾದರೂ ಹೆಚ್ಚು ಲಗೇಜ್‌ನೊಂದಿಗೆ ಪ್ರಯಾಣಿಸುತ್ತಿರುವುದು ಕಂಡುಬಂದರೆ, ಪ್ರಯಾಣದ ದೂರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುವ ದಂಡದೊಂದಿಗೆ ಹೆಚ್ಚುವರಿ ಲಗೇಜ್‌ಗೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ರೈಲ್ವೇ ಸಚಿವಾಲಯ ಎಚ್ಚರಿಸಿದೆ.

ಸಾಹಿತಿಗಳ ಮನವಿಗೆ ಬೆಲೆಯಿಲ್ಲ: ದೇವನೂರು ವಿಷಾದ

0

ನಾಡಿನ ಗಣ್ಯರು, ಮಠಾಧಿಪತಿಗಳು, ಲೇಖಕರು, ಪ್ರಜ್ಞಾವಂತರು ತಮ್ಮ ನೋವನ್ನು ವ್ಯಕ್ತಪಡಿಸಿ ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಿ ಎಂದು ಕೇಳಿಕೊಂಡರೂ ತಾವು ಅದನ್ನು ಕಾಲುಕಸ ಮಾಡಿ ಲೆಕ್ಕಿಸದಿರುವುದನ್ನು ನೋಡಿದಾಗ ಇದು ನಾಡಿಗೆ ಕೇಡಿನ ಲಕ್ಷಣಗಳು ಎಂದೆನ್ನಿಸುತ್ತದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಭಿನ್ನಾಭಿಪ್ರಾಯಗಳನ್ನು ಟೂಲ್ಕಿಟ್ ಎಂದು ರಾಜಕೀಯಗೊಳಿಸಿ ಪರಾರಿಯಾಗಲು ನೋಡುವುದು ಇವೆಲ್ಲ ತುಂಬಾ ನೋವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದೆ ಅವರು 10 ನೇ ತರಗತಿಯಲ್ಲಿ ಸೇರಿಸಿರುವ ತಮ್ಮ ಪಠ್ಯವನ್ನು ಹಿಂತೆಗೆದುಕೊಳ್ಳಬೇಕು ಎಂದು ಹೇಳಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಆದರೆ ಸರ್ಕಾರ ಇದಕ್ಕೆ ಸ್ಪಂದಿಸದೇ ತನ್ನ ನಡೆಯನ್ನು ಸಮರ್ಥಿಸಿಕೊಂಡಿರುವ ಬೆನ್ನಲ್ಲೇ ದೇವನೂರು ಮಹದೇವ ಅವರು ಈಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರಿಗೆ ಮತ್ತೊಮ್ಮೆ ಪತ್ರ ಬರೆದು ಇದನ್ನು ದಯವಿಟ್ಟು ಮುಂದುವರೆಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿ: 47.83 ಲಕ್ಷ ರೈತ ಫಲಾನುಭವಿಗಳು

0

ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಜ್ಯದ 47.83 ಲಕ್ಷ ರೈತರಿಗೆ 956.71 ಕೋಟಿ ರೂ.ಗಳ ಆರ್ಥಿಕ ಸಹಾಯಧನ ವರ್ಗಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ರೈತರ ಖಾತೆಗಳಿಗೆ ಸಹಾಯಧನ ವರ್ಗಾಯಿಸಿದ್ದು, 2018-19 ರಿಂದ 2021-22 ರವರೆಗೆ ಭಾರತ ಸರ್ಕರದಿಂದ ಅನುಮೋದಿಸಲ್ಪಟ್ಟ ರೈತ ಕುಟುಂಬಗಳಿಗೆ ಒಟ್ಟು 3864.66 ಕೋಟಿ ರೂ. ರಾಜ್ಯದ ರೈತರಿಗೆ ಪಾವತಿಯಾದಂತಾಗಿರುತ್ತದೆ.

ಈ ಯೋಜನೆಯಡಿ ಎಲ್ಲಾ ಪಾವತಿಗಳನ್ನು ಸಾಧ್ಯವಾದಷ್ಟು ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಮಾಡಲಾಗಿದೆ. ದೇಶದ ಎಲ್ಲಾ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯವು ಅತಿಹೆಚ್ಚು ಅಂದರೆ 96% ರಷ್ಟು ಆಧಾರ್ ಆಧಾರಿತ ಪಾವತಿಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ರಾಜ್ಯವಾಗಿದ್ದು, ಕಳೆದ ಬಾರಿ 2020-21 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯದ ಕೃಷಿಇಲಾಖೆಗೆ ಪ್ರಶಸ್ತಿಯು ಲಭಿಸಿದೆ.

2019 ರಿಂದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಅರ್ಹ ರೈತರಿಗೆ ಹೆಚ್ಚುವರಿಯಾಗಿ 4 ಸಾವಿರ ರೂ.ಗಳ ಆರ್ಥಿಕ ನೆರವನ್ನು ಎರಡು ಕಂತುಗಳಲ್ಲಿ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ ನೀಡುತ್ತಿದೆ. ಆಧಾರ್ ಗುರುತಿನ ಸಂಖ್ಯೆಯಾಧಾರದ ಮೇಲೆ ನೇರ ನಗದು ವರ್ಗಾವಣೆ ಪ್ರಕ್ರಿಯೆ ಮೂಲಕ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.

2021-22 ನೇ ಸಾಲಿನಲ್ಲಿ 50.35 ಲಕ್ಷ ರೈತರಿಗೆ 1975.12 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ, ಕೃಷಿ ಇಲಾಖೆ ಆಯುಕ್ತ ಶರತ್, ನಿರ್ದೇಶಕಿ ನಂದಿನಿಕುಮಾರಿ, ಜಲಾನಯನ ಇಲಾಖೆ ಆಯುಕ್ತ ಡಾ. ವೆಂಕಟೇಶ್, ನಿರ್ದೇಶಕ ಶ್ರೀನಿವಾಸ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರದಿಂದ ಗ್ರಾಹಕರಿಗೆ ಬರೆ ಗೃಹಬಳಕೆ ಸಿಲಿಂಡರ್ ಗಳಿಗೆ ಸಹಾಯಧನ ಸ್ಟಾಪ್

0

ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಆಘಾತ ವಿಷಯವನ್ನು ತಿಳಿಸಿದೆ. ಅದೇನು ಅಂದರೆ, ಗೃಹ ಬಳಕೆಯ ಎಲ್‍ಜಿಪಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ. ಸಾಮಾನ್ಯ ಗ್ರಾಹಕರು ಮಾರ್ಕೆಟ್ ದರಕ್ಕೆ ಅಡುಗೆ ಅನಿಲವನ್ನು ಖರೀದಿ ಮಾಡಬೇಕಾಗುತ್ತದೆ.

ಇಂಧನ ಇಲಾಖೆಯ ಕಾರ್ಯದರ್ಶಿ ಪಂಕಜ್ ಚೌಧರಿ ಮಾತನಾಡಿ, ಕೊರೋನಾ ಆರಂಭ ದಿನದಿಂದ ಎಲ್‍ಪಿಜಿ ವಿನಿಯೋಗದಾರರಿಗೆ ಸಬ್ಸಿಡಿ ನೀಡಿಲ್ಲ. ಇನ್ನು ಮುಂದೆ ಕೂಡ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಹೊಂದಿದವರಿಗೆ ಮಾತ್ರ ಈಗ ಸಬ್ಸಿಡಿ ನೀಡಲಾಗುತ್ತದೆ. ದೇಶದ ಎಲ್ಲ ಪ್ರಜೆಗಳಿಗೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್ ಬೆಲೆ 1006 ರೂಪಾಯಿ ಇದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂಪಾಯಿ ಸಬ್ಸಿಡಿ ಸಿಗಲಿದೆ.

ಈ ಮುಂಚೆ ಸಬ್ಸಿಡಿ ಸಹಿತವಾಗಿಯೇ ಸಿಗುತಿತ್ತು. ಗೃಹ ಬಳಕೆಗೆ ನೀಡಲಾಗುತ್ತಿದ್ದ ಸಬ್ಸಿಡಿ ಸಿಲಿಂಡರ್‌ ದುರುಪಯೋಗ ಆಗುತ್ತಿರುವ ವಿಚಾರ ತಿಳಿದು ಮೋದಿ ಸರ್ಕಾರ ಸಿಲಿಂಡರ್‌ ಖರೀದಿ ಮಾಡಿದ ನಂತರ ಬ್ಯಾಂಕ್‌ ಖಾತೆಗೆ ಸಬ್ಸಿಡಿ ದುಡ್ಡನ್ನು ಹಾಕುತ್ತಿತ್ತು. ಆದರೆ ಕೊರೋನಾ ನಂತರ ಸಬ್ಸಿಡಿ ಮೊತ್ತ ಹಾಕುವುದನ್ನು ಸ್ಥಗಿತಗೊಳಿಸಿದೆ.