Wednesday, March 4, 2026
Wednesday, March 4, 2026
Home Blog Page 1549

ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಆಜಾದ್ ಹೆಸರಿಲ್ಲ

0

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಗೆ ಸ್ಥಾನ ನೀಡಿಲ್ಲ.

ರಾಜ್ಯಸಭಾ ಸ್ಥಾನದ ಟಿಕೆಟ್ ನಿರಾಕರಣೆಗೊಂಡಿದ್ದರಿಂದ ಪಕ್ಷದ ವಿರುದ್ಧ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ. ಆದ್ದರಿಂದ, ಪಕ್ಷ ಸಂಘಟನೆಯಲ್ಲಿ ಯಾವುದೇ ರೀತಿಯ ಆಸಕ್ತಿ ತೋರಿಸುತ್ತಿಲ್ಲ ಎಂದು ಮಾಹಿತಿ ತಿಳಿದು ಬಂದಿದೆ.

ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳಲು ಪಕ್ಷದಿಂದ ಟಿಕೆಟ್​ ನಿರಾಕರಣೆಯಾಗುತ್ತಿದ್ದಂತೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೂರವಾಣಿ ಮೂಲಕ ಕೆಲಹೊತ್ತು ಗುಲಾಂ ನಬಿ ಆಜಾದ್​ ಜೊತೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷೆ ನೀಡಿರುವ ಪಕ್ಷದಲ್ಲಿ 2ನೇ ಸ್ಥಾನವನ್ನು ಕೂಡ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಗುಲಾಂ ನಬಿ ಆಜಾದ್​ ಅವರಿಗೆ ದೂರವಾಣಿ ಕರೆ ಮಾಡಿರುವ ಸೋನಿಯಾ ಗಾಂಧಿ, ಪಕ್ಷಕ್ಕೆ ಸಂಬಂಧಿಸಿದ ಕೆಲವೊಂದು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ನಿಮಗೆ ಪಕ್ಷದಲ್ಲಿ 2ನೇ ಸ್ಥಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಇದನ್ನು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಇದಕ್ಕೆ ನಿರಾಕರಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ರಾಜಸ್ಥಾನದಲ್ಲಿ ನಡೆದ ಚಿಂತನ್ ಶಿವಿರ್ ನಲ್ಲಿ ಗುಲಾಂ ನಬಿ ಆಜಾದ್ ಮತ್ತು ಅವರ ಬೆಂಬಲಿಗರು ಭಾಗಿಯಾಗಿರಲಿಲ್ಲ. ಆದ್ದರಿಂದ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಗಿತ್ತು. ಇದರ ಬೆನ್ನಲ್ಲೇ ಅವರಿಗೆ ಟಿಕೆಟ್ ನಿರಾಕರಣೆಯಾಗಿದೆ. ಈ ಸಲದ ಕಾಂಗ್ರೆಸ್ ಪಟ್ಟಿಯಲ್ಲಿ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ವೀರಪ್ಪ ಮೊಯ್ಲಿ ಹೆಸರು ಇಲ್ಲ. ಇವರ ಬದಲಿಗೆ ಬೇರೆಯವರಿಗೆ ಕಾಂಗ್ರೆಸ್ ಅವಕಾಶ ಕೊಟ್ಟಿದೆ.

ಕಾಂಗ್ರೆಸ್​ನ ಜಿ -23 ಗುಂಪಿನ ಪ್ರಮುಖ ಸದಸ್ಯರಾಗಿರುವ ಗುಲಾಂ ನಬಿ ಆಜಾದ್​​ ಈಗ ಪಕ್ಷದ ವಿರುದ್ಧ ರೆಬೆಲ್ ಆಗಿದ್ದಾರೆ. ಮುಂದೆ ಯಾವ ರೀತಿಯ ನಿರ್ಧಾರ ತೆಗೆದು ಕೊಳ್ಳುತ್ತಾರೆ ಎಂಬುವುದು ಎಲ್ಲರಲ್ಲೂ ಕುತೂಹಲ ಮೂಡಿಸುವಂತಾಗಿದೆ.

ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜನೆ ಮುಖ್ಯಮಂತ್ರಿ ಆದೇಶ

0

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಮಹತ್ವದ ವರದಿಯನ್ನು ಸಲ್ಲಿಸಿದ ನಂತರ ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯ ಮುಗಿದಿರುವುದರಿಂದ ಸದರಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶವನ್ನು ನೀಡಿದ್ದಾರೆ.

ಈ ವಿಷಯದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಹಾಗೂ ಪಠ್ಯ ಪುಸ್ತಕಗಳನ್ನು ಕಾಲ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ರಾಜ್ಯದಲ್ಲಿ ಅನೇಕ ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಕೆಲವು ಪಠ್ಯಪುಸ್ತಕಗಳಲ್ಲಿ ಅನೇಕ ಆಕ್ಷೇಪಾರ್ಹ ಅಂಶಗಳು ಇದ್ದ ಕಾರಣ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳ ಅಲ್ಪ ಪರಿಷ್ಕರಣೆಯನ್ನು ಮಾಡಲಾಗಿದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳು ಮತ್ತು ನಾಡಿನ ಇತರೆ ಸ್ವಾಮೀಜಿಗಳು ಪ್ರಸ್ತುತ ಪಠ್ಯ ಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಣೆಗಳನ್ನು ಮಾಡಿರುತ್ತಾರೆ. ಬಸವಣ್ಣನವರ ಇದೇ ವಿಷಯಾಂಶಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಾರಿಯಲ್ಲಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ಇವರ ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಮತ್ತು ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯವಾದ ಅಂಶಗಳಿವೆ. ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶವನ್ನು ಯಾರ ಭಾವನೆಗೂ ಧಕ್ಕೆ ಆಗದಂತೆ ಪರಿಷ್ಕರಿಸಲಾಗುವುದು ಎಂದು ತಿಳಿಸಿದ್ದಾರೆ.

ಆದಿಚುಂಚನಗಿರಿ ಪೀಠದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಹಾಗೂ ಇತರರ ಆಶಯದಂತೆ ರಾಷ್ಟ್ರಕವಿ ಕುವೆಂಪುರವರು ವಿರಚಿತ ನಾಡಗೀತೆಯನ್ನು ವಿಕೃತಗೊಳಿಸುವ ರೀತಿಯಲ್ಲಿ ನಾಡಗೀತೆಯ ದಾಟಿಯಲ್ಲಿ ಮೂಲ ಕವನವನ್ನು ಬರೆದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸೈಬರ್‌ ಕ್ರೈಮ್‌ ಬೆಂಗಳೂರು ಇವರಿಗೆ ತನಿಖೆಯನ್ನು ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ 5 ದಿನಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ

0

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ನೈಋತ್ಯ ಮಾನ್ಸೂನ್ ನಿನ್ನೆ ಶುಕ್ರವಾರದಂದು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದೆ.ನಂತರ 5 ದಿನಗಳ ಕಾಲ ಈಶಾನ್ಯ ರಾಜ್ಯಗಳು ಸೇರಿದಂತೆ ಬಂಗಾಳದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳದಲ್ಲಿ ಜೂನ್ 8 ರ ಬೆಳಿಗ್ಗೆ ತನಕ ಕೂಚ್ ಬೆಹಾರ್, ಜಲ್ಪೈಗುರಿ, ಅಲಿಪುರ್ದೂರ್, ಡಾರ್ಜಿಲಿಂಗ್ ಹಾಗೂ ಕಾಲಿಂಪಾಂಗ್ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ. ಮುಂದಿನ 5 ದಿನಗಳ ಕಾಲ ಈಶಾನ್ಯ ರಾಜ್ಯಗಳ ಹವಾಮಾನದ ಮೇಲೆ ಪರಿಣಾಮ ಬೀರಲಿದೆ. ಬಂಗಾಳದ ಜಿಲ್ಲೆಗಳಲ್ಲಿ ಮಿಂಚು ಮತ್ತು ಲಘು ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಡಿಶಾದ ಕರಾವಳಿ ಭಾಗದಲ್ಲಿ ಮತ್ತು ಪಶ್ಚಿಮ ಬಂಗಾಳದ ಗಂಗಾನದಿ ಭಾಗದಲ್ಲಿ ಚಂಡಮಾರುತದ ಪರಿಚಲನೆ ಮತ್ತು ಬಂಗಾಳಕೊಲ್ಲಿಯಿಂದ ಈಶಾನ್ಯ ಭಾರತದ ಕಡೆಗೆ ಬಲವಾದ ನೈಋತ್ಯ ಮಾರುತಗಳು ಬೀಸುತ್ತಿರುವ ಕಾರಣ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.

ನೈಋತ್ಯ ಮಾನ್ಸೂನ್ ಸಂಪೂರ್ಣ ಈಶಾನ್ಯ ರಾಜ್ಯಗಳು ಮತ್ತು ಉಪಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಕೆಲವು ಭಾಗಗಳನ್ನು ಆವರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿನ್ನೆ ಶುಕ್ರವಾರ ತಿಳಿಸಿದೆ. ಆದ್ದರಿಂದ ಅಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ಮೊದಲು, ಮುಂದಿನ 5 ದಿನಗಳಲ್ಲಿ ಕೇರಳ, ಕರಾವಳಿ ಕರ್ನಾಟಕ ಹಾಗೂ ಲಕ್ಷದ್ವೀಪದಲ್ಲಿ ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆ ಮತ್ತು ಗುಡುಗು ಸಹಿತ ಮಳೆ ಮತ್ತು ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಪ್ರತ್ಯೇಕ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಪ್ರಜಾಸತ್ತಾತ್ಮಕ ಭಾರತ: ನಂಬಿಕಸ್ಥ ಪಾಲುದಾರ- ಮೋದೀಜಿ

0

ಜಿ-20 ರಾಷ್ಟ್ರಗಳ ಪೈಕಿ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆ. ಜೊತೆಗೆ ಜಗತ್ತು ಈಗ ಎದುರು ನೋಡುತ್ತಿರುವ ಅತ್ಯುತ್ತಮ ಮತ್ತು ನಂಬಿಕಸ್ತ ಪಾಲುದಾರನಾಗಲು ಭಾರತಕ್ಕೆ ಸಾಧ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ನಿನ್ನೆ ಶುಕ್ರವಾರ ಆಯೋಜಿಸಲಾಗಿದ್ದ 3ನೇ ಆವೃತ್ತಿಯ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಅವರು ಮಾತನಾಡಿದರು.

ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ 80 ಸಾವಿರ ಕೋಟಿ ರೂ. ವೆಚ್ಚದ 1,406 ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಅವುಗಳ ಉದ್ಘಾಟನೆಯನ್ನೂ ನೆರವೇರಿಸಿದ್ದಾರೆ. ಕೃಷಿ, ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್‌, ಮಧ್ಯಮ, ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆ ಕ್ಷೇತ್ರ, ಉತ್ಪಾದನೆ, ನವೀಕೃತ ಇಂಧನ, ಔಷಧೋದ್ಯಮ, ಪ್ರವಾಸೋದ್ಯಮ, ರಕ್ಷಣೆ ಹಾಗೂ ವಾಯುಯಾನ, ಜವುಳಿ ಮತ್ತು ಕೈಮಗ್ಗ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆಗಳು ಉದ್ಘಾಟನೆಗೊಂಡ ಯೋಜನೆಗಳಲ್ಲಿ ಸೇರಿವೆ.

ಜಗತ್ತಿನಲ್ಲಿ ಸದ್ಯ ಉಂಟಾಗಿರುವ ಬೆಳವಣಿಗೆಗಳು ನಮ್ಮ ದೇಶಕ್ಕೆ ಪ್ರಧಾನ ಭೂಮಿಕೆ ನಿರ್ವಹಿಸುವ ಅವಕಾಶ ತಂದುಕೊಟ್ಟಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಸತ್ತಾತ್ಮಕವಾಗಿರುವ ನಮ್ಮ ಭಾರತಕ್ಕೆ ಮಾತ್ರ ಸದ್ಯ ಜಗತ್ತು ಎದುರು ನೋಡುತ್ತಿರುವ ನಂಬಿಕಸ್ತ ಪಾಲುದಾರ ನಾಗಲು ಸಾಧ್ಯ. ಏಕೆಂದರೆ ನಮಗೆ ಆ ರೀತಿಯ ಸಾಮರ್ಥ್ಯ ಮತ್ತು ಶಕ್ತಿ ಇದೆ ಎಂದು ಹೇಳಿದ್ದಾರೆ.

ಪಠ್ಯ ವಿವಾದ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

0

ಶಿವಮೊಗ್ಗ ನಗರದಲ್ಲಿ ಎಲ್ಲಾ ಕನ್ನಡ ಪರ, ಪ್ರಗತಿಪರ ಸಂಘಟನೆಗಳು, ಸಾಹಿತಿಗಳು, ಹೋರಾಟಗಾರರ ಜೊತೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿದ, ಅಣ್ಣ ಬಸವಣ್ಣನವರ, ಅಂಬೇಡ್ಕರ್ ಅವರ ವಿರುದ್ಧ ವಿಕೃತ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಅವಮಾನಿಸಿದ ವ್ಯಕ್ತಿ ನೇತೃತ್ವದಲ್ಲಿ ಪಠ್ಯ ಪುಸ್ತಕ ರಚನಾ ಸಮಿತಿ ರಚಿಸಿ ಅವರಿಂದಾದ ಪಠ್ಯ ಪುಸ್ತಕ ವಿರೂಪವನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಲಾಯಿತು.

ಶಿವಮೊಗ್ಗದ ಕುವೆಂಪು ರಂಗಮಂದಿರದ ಮುಂಭಾಗದಲ್ಲಿರುವ ಕುವೆಂಪು ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಪ್ರತಿಭಟನೆ ಆರಂಭಗೊಂಡಿತು. ನಂತರ ಬಸವೇಶ್ವರ ವೃತ್ತಕ್ಕೆ ತೆರಳಿ ಬಸವಣ್ಣನವರ ಪುತ್ಥಳಿಗೆ ಪುಷ್ಪಮಾಲೆ ಅರ್ಪಿಸಿ, ಮಹಾನಗರ ಪಾಲಿಕೆಯ ಮುಂಭಾಗದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಪುತ್ಥಳಿ ಗೆ ಪುಷ್ಪ ನಮನ ಸಲ್ಲಿಸಿ ಶಿವಪ್ಪನಾಯಕ ಪ್ರತಿಮೆಬಳಿ ಸೇರಿದ್ದ ಎಲ್ಲರೊಂದಿಗೆ ಪಾದಯಾತ್ರೆ ಕೈಗೊಳ್ಳಲಾಯಿತು.
ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ ಸಭೆ ನಡೆಸಲಾಯಿತು.

ಈ ಸಭೆಯನ್ನು ಉದ್ದೇಶಿಸಿ ವಿವಿಧ ಸಂಘಟನೆಗಳ ಕೆ. ಪಿ. ಶ್ರೀಪಾಲ್, ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ, ಸಾಹಿತಿಗಳು, ಚಿಂತಕರಾದ ಪ್ರೊ. ರಾಜೇಂದ್ರ ಚೆನ್ನಿ, ರೈತಸಂಘದ ಅಧ್ಯಕ್ಷ ಎಚ್. ಆರ್. ಬಸವರಾಜಪ್ಪ, ರೈತನಾಯಕ ಕೆ. ಟಿ. ಗಂಗಾಧರ, ಡಾ. ಶಾಂತಸುರೇಂದ್ರ, ಡಾ. ಭಾಗ್ಯಲಕ್ಷ್ಮಿ, ಅಕ್ಷತಾ ಹುಂಚದಕಟ್ಟೆ, ಎಂ. ಗುರುಮೂರ್ತಿ, ಮಹಾನಗರ ಪಾಲಿಕೆಯ ಸದಸ್ಯರಾದ ಬಿ. ಎ. ರಮೇಶ್ ಹೆಗಡೆ, ಅನನ್ಯ ಶಿವು ಸೇರಿದಂತೆ ಇನ್ನೂ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ನೀಡಲಾಯಿತು.

ರೈಲ್ವೆ ಹಳಿ ದಾಟಲು ಅವಸರ ಬೇಡ: ಜೀವ ಜೋಪಾನ

0

ರೈಲ್ವೆ ಗೇಟ್ ದಾಟುವಾಗ ಅವಸರ ಮಾಡಿಕೊಂಡು ಅಪಘಾತಗಳಿಗೆ ಅವಕಾಶ ನೀಡಬಾರದು. ನಿಧಾನವಾಗಿ ಲೆವೆಲ್ ಕ್ರಾಸಿಂಗ್ ಮಾಡಿ, ಎರಡು ನಿಮಿಷ ತಡವಾದರೂ ಪರವಾಗಿಲ್ಲ ಹೆಚ್ಚಿನ ಸುರಕ್ಷತೆ ವಹಿಸುವ ಮೂಲಕ ನಿಮ್ಮ ಅಮೂಲ್ಯ ಜೀವನ ಮತ್ತು ರೈಲ್ವೆ ಇಲಾಖೆ ಆಸ್ತಿಯನ್ನು ರಕ್ಷಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ನೀರಜ್ ಭಾಫ್ನಾ ತಿಳಿಸಿದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗ ವತಿಯಿಂದ ಜೂನ್ 9 ರಂದು ಇರುವ ಅಂತರರಾಷ್ಟ್ರೀಯ ರೈಲ್ವೆ ಲೆವೆಲ್ ಕ್ರಾಸಿಂಗ್ ಜಾಗೃತ ದಿನದ ಅಂಗವಾಗಿ ಇಂದು ಶಿವಮೊಗ್ಗ ನಗರದ ಹೊಳೆ ಬಸ್ ಸ್ಟಾಪ್ ಹತ್ತಿರವಿರುವ ರೈಲ್ವೆ ಗೇಟ್ ನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಜಾಗೃತಿ ಅಭಿಯಾನವು ಇಂದಿನಿಂದ ಜೂನ್ 9 ರವರೆಗೆ ಒಂದು ವಾರ ಕಾಲ ನಡೆಯಲಿದ್ದು, ಸಾರ್ವಜನಿಕರು ರೈಲ್ವೆ ಗೇಟ್ ಬಳಿ ಗೇಟ್ ಮ್ಯಾನ್ ಇಲ್ಲದಿದ್ದರೆ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಬೇಕೆಂದರು.

ಆರ್‍ಪಿಎಫ್ ನಿರೀಕ್ಷಕ ಬಿ.ಎನ್ ಕುಬೇರಪ್ಪ ಮಾತನಾಡಿ, ರೈಲ್ವೇಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದಲ್ಲಿ ರೈಲ್ವೆ ಕಾಯ್ದೆ 160 ರ ಪ್ರಕಾರ ಜಾಮೀನುರಹಿತ ಪ್ರಕರಣ ದಾಖಲಿಸಲಾಗುವುದು. ಆದ್ದರಿಂದ ಬೈಕ್, ಸೈಕಲ್ ಮತ್ತು ಇತರೆ ವಾಹನ ಸವಾರರು ಲೆವೆಲ್ ಕ್ರಾಸಿಂಗ್ ಮಾಡುವಾಗ ಹೆಚ್ಚಿನ ಜಾಗೃತಿ ವಹಿಸಿ, ರೈಲ್ವೆ ಇಲಾಖೆಯ ಕಾನೂನುಗಳ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದರು

ಆರ್.ಟಿಓ ಅಧಿಕಾರಿ ಡಿ ಮೋಹನ್ ಕುಮಾರ್ ಮಾತನಾಡಿ, ತಮ್ಮ ರಕ್ಷಣೆ ಬಗ್ಗೆ ಅರಿವು ಮತ್ತು ಜಾಗರೂಕತೆಯಿಂದ ವರ್ತಿಸಿದಾಗ ಮಾತ್ರ ಅಪಘಾತಗಳನ್ನು ತಡೆಗಟ್ಟಲು ಸಾಧ್ಯವೆಂದು ಹೇಳಿದರು.

ಈ ಜಾಗೃತಿ ಕಾರ್ಯಕ್ರಮದಲ್ಲಿ ಜಿ. ಆರ್. ಪಿ ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ಜಾನ್ ಕುರಿಯಕೋಸ್ , ಡಿ ಎಂ ಇ,(ಪವರ್) ಅಧಿಕಾರಿ ರೋನಕ್ ಪ್ರತೀಕ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಭಾರತದಲ್ಲಿ ಧಾರ್ಮಿಕ ಸ್ಥಳಗಳು & ಅಲ್ಪಸಂಖ್ಯಾತರ ಮೇಲೆ ನಿರಂತರ ಧಾಳಿ-ಬ್ಲಿಂಕನ್

0

ಭಾರತದಲ್ಲಿ ಧಾರ್ಮಿಕ ಹಕ್ಕುಗಳು ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಕುರಿತಾಗಿ ಅಮೆರಿಕ ಮತ್ತೊಮ್ಮೆ ತನ್ನ ಮಾತುಗಳನ್ನು ಹರಿಬಿಟ್ಟಿದೆ. ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ಭಾರತದ ಕುರಿತಾಗಿ ಮತ್ತೊಮ್ಮೆ ದೊಡ್ಡ ಹೇಳಿಕೆ ನೀಡಿದ್ದು, ಭಾರತದಲ್ಲಿ ಧಾರ್ಮಿಕ ಸ್ಥಳಗಳು ಮತ್ತು ಅಲ್ಪ ಸಂಖ್ಯಾತರ ಮೇಲಿನ ದಾಳಿ ನಿರಂತರವಾಗಿ ಏರಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ವಿಶ್ವದ ಮೂಲೆ ಮೂಲೆಯಲ್ಲಿಯೂ ಧಾರ್ಮಿಕ ಸ್ವಾಂತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಡೆಸುವ ಪ್ರಯತ್ನಕ್ಕೆ ಅಮೆರಿಕ ಸದಾ ಬೆಂಬಲ ನೀಡುತ್ತದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.

ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವಾರ್ಷಿಕ ವರದಿಯನ್ನು ಮಂಡಿಸುವಾಗ ಆಂಟೋನಿ ಬ್ಲಿಂಕೆನ್ ಈ ಮಾತು ಹೇಳಿದ್ದಾರೆ. ಅವರು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಚೀನಾದ ಬಗ್ಗೆಯೂ ಇಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಲ್ಲಿ ಅಲ್ಪಸಂಖ್ಯಾತ ಸಮುದಾಯ ಹಾಗೂ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯದ ಕುರಿತು ಮಾತನಾಡಿದ ಬ್ಲಿಂಕೆನ್ ಉದಾಹರಣೆಯಾಗಿ ಭಾರತದ ವಿಚಾರವನ್ನು ತೆಗೆದುಕೊಂಡಿದ್ದರು.

ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ, ಅನೇಕ ಧರ್ಮಗಳ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಜನರು ಮತ್ತು ಧಾರ್ಮಿಕ ಸ್ಥಳಗಳ ಮೇಲೆ ದಾಳಿಗಳು ಹೆಚ್ಚಾಗುತ್ತಿರುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡಿದ್ದೇವೆ. ವಿಯೆಟ್ನಾಂನಲ್ಲಿನ ಅಧಿಕಾರಿಗಳು ನೋಂದಾಯಿಸದ ಧಾರ್ಮಿಕ ಸಮುದಾಯಗಳ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ನೈಜೀರಿಯಾದಲ್ಲಿ, ಕೆಲವು ರಾಜ್ಯಗಳ ಸರ್ಕಾರಗಳು ಅವರ ನಂಬಿಕೆಗಳನ್ನು ವ್ಯಕ್ತಪಡಿಸುವುದಕ್ಕಾಗಿ ಮಾನನಷ್ಟ ಮತ್ತು ಧರ್ಮನಿಂದೆಯ ಕಾನೂನುಗಳ ಅಡಿಯಲ್ಲಿ ಅವರನ್ನು ಶಿಕ್ಷಿಸುತ್ತವೆ.

ಚೀನಾವನ್ನು ಉಲ್ಲೇಖಿಸಿ ಮಾತನಾಡಿದ ಆಂಟೋನಿ ಬ್ಲಿಂಕೆನ್ ಅವರು ಬೌದ್ಧ, ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಟಾವೊ ಸಮುದಾಯಗಳ ಜನರ ಧಾರ್ಮಿಕ ಸ್ಥಳಗಳನ್ನು ಚೀನಾದಲ್ಲಿ ನಾಶಪಡಿಸಲಾಗಿದೆ ಎಂದು ಹೇಳಿದರು.

ಟಿಬೆಟಿಯನ್ ಬೌದ್ಧ, ಕ್ರಿಶ್ಚಿಯನ್, ಮುಸ್ಲಿಂ ಇತ್ಯಾದಿ ಜನರಿಗೆ ಅಲ್ಲಿ ಮನೆ ಮತ್ತು ಉದ್ಯೋಗ ನೀಡಲಾಗಿಲ್ಲ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಲ್ಲಿಗೆ ಬಂದ ನಂತರ ಅಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕೊನೆಗೊಂಡಿದೆ ಎಂದು ಬ್ಲಿಂಕನ್ ಹೇಳಿದರು.

ಹೆಣ್ಣುಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯಗಳು, ಅವರ ಮೇಲಿನ ನಿರ್ಬಂಧಗಳ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆಂಟೋನಿ ಬ್ಲಿಂಕನ್ ಅವರು 2021 ರಲ್ಲಿ ಧರ್ಮನಿಂದೆಯ ಆರೋಪದ ಮೇಲೆ 16 ಜನರಿಗೆ ಮರಣದಂಡನೆ ವಿಧಿಸಲಾಯಿತು ಎಂದು ಹೇಳಿದ್ದಾರೆ.

ಬೂದಿ ಮುಚ್ಚಿದ ಕೆಂಡವಾಗಿರುವ ಕಾಶ್ಮೀರ:ಸರ್ಕಾರಿ ಸಿಬ್ಬಂದಿಗಳಿಗೆ ಅಭದ್ರತೆ

0

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ನಿತ್ಯವೂ ಈಗ ಹತ್ಯೆಗಳು ಸಂಭವಿಸುತ್ತಿವೆ.

ಉಗ್ರಗಾಮಿಗಳು ಉದ್ದೇಶಿತ ಹತ್ಯೆ ನಿರಂತರವಾಗಿ ನಡೆಸುತ್ತಿದ್ದಾರೆ. ಸರಕಾರಿ ನೌಕರರು, ಮುಸ್ಲಿಮೇತರರನ್ನೇ ಉಗ್ರರು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ.

ಇದು ಸರಕಾರಿ ನೌಕರರು ಮತ್ತು ಮುಸ್ಲಿಮೇತರರನ್ನು ಭಯಭೀತಗೊಳಿಸಿದೆ. ನಿನ್ನೆ ಗುರುವಾರ ನೂರಾರು ಮಂದಿ ಸರಕಾರಿ ನೌಕರರು ತಂತಮ್ಮ ಊರುಗಳಿಗೆ ವರ್ಗಾವಣೆ ಮಾಡುವಂತೆ ಪ್ರತಿಭಟನೆ ಮಾಡಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ ಜಿಲ್ಲಾ ನೌಕರರ ವರ್ಗಾವಣೆ ನೀತಿ ಇದೆ. ಅಂದರೆ, ಒಂದು ಜಿಲ್ಲೆಯ ನೌಕರರನ್ನು ಬೇರೊಂದು ಜಿಲ್ಲೆಗೆ ನಿಯೋಜಿಲಾಗುತ್ತದೆ. ಕಾಶ್ಮೀರ ಪ್ರದೇಶದ ಜಿಲ್ಲೆಗಳಿಗೆ ಜಮ್ಮು ಪ್ರದೇಶದ ನೌಕರರನ್ನು ನಿಯೋಜಿಸಲಾಗುತ್ತಿದೆ.

ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಾಣಕ್ಕೆ ಅನುಕೂಲವಾಗಬಹುದು ಎಂಬುದು ಉದ್ದೇಶ. ಆದರೆ, ಸರಕಾರದ ಎಣಿಕೆ ತಿರುವುಮುರುವು ಆಗಿರುವುದು ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಹತ್ಯಾಕಾಂಡ ಸಾಕ್ಷಿಯಾಗಿದೆ.

ಕಾಶ್ಮೀರದಲ್ಲಿ ಗುಂಡಿಕ್ಕಿ ಬ್ಯಾಂಕ್ ಮ್ಯಾನೇಜರ್‌ ಹತ್ಯೆ
‘ಜಮ್ಮು ಮೂಲದ ಮೀಸಲು ವರ್ಗಗಳ ನೌಕರರ ಸಂಘ’ ಅಡಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ನೌಕರರು, ತಮಗೆ ಸರಕಾರ ಸುರಕ್ಷಿತ ವಾತಾವರಣ ಕಲ್ಪಿಸಲು ಮತ್ತು ಉಗ್ರರ ದಾಳಿಗಳನ್ನು ನಿಲ್ಲಿಸಲು ವಿಫಲವಾಗಿದೆ. ತಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಜಮ್ಮುವಿನ ಪ್ರೆಸ್ ಕ್ಲಬ್‌ನಿಂದ ಆರಂಭಗೊಂಡು ಅಂಬೇಡ್ಕರ್ ಚೌಕ್‌ವರೆಗೂ ಪ್ರತಿಭಟನಾ ಮೆರವಣಿಗೆ ಸಾಗಿತು.
“ಅಂತರ್-ಜಿಲ್ಲಾ ವರ್ಗಾವಣೆ ನೀತಿ ಅಡಿಯಲ್ಲಿ ಜಮ್ಮುವಿನ ವಿವಿಧ ಜಿಲ್ಲೆಗಳಿಂದ ೮೦೦೦ ನೌಕರರು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಿನ ವಾತಾವರಣದಲ್ಲಿ ನಾವು ಕಾಶ್ಮೀರಕ್ಕೆ ಹೋಗಿ ಕೆಲಸ ಮಾಡುವುದಿಲ್ಲ.. ಅಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆಯಾದರೂ ಈಗ ಉದ್ದೇಶಿತ ಹತ್ಯೆಗಳು ಹೆಚ್ಚುತ್ತಿರುವುದರಿಂದ ಅಸುರಕ್ಷಿತ ಭಾವನೆ ಮೂಡಿದೆ ಎಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶಿಕ್ಷಕರಾಗಿರುವ ರಮೇಶ್ ಚಂದ್ ಹೇಳುತ್ತಾರೆ.

ಕಾಶ್ಮೀರದಲ್ಲಿ ಮೇ 31ರಂದು ಶಿಕ್ಷಕಿಯೊಬ್ಬರನ್ನು ಉಗ್ರರು ಹತ್ಯೆ ಮಾಡಿದ್ದರು. ಇವರಿಗೆ ಸಂತಾಪ ಸೂಚಿಸಲೂ ಪ್ರತಿಭಟನಾಕಾರರು ಜಮ್ಮುವಿನಲ್ಲಿ ನಿನ್ನೆ ಸೇರಿದ್ದರು.
ಶ್ರೀನಗರದಲ್ಲಿ ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ
“ಕಾಶ್ಮೀರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯಿಂದ ಹತಾಶರಾಗಿದ್ದೇವೆ. ಹಿಂದು, ಸಿಖ್, ಮುಸ್ಲಿಮರು ಯಾರೂ ಕೂಡ ಇಲ್ಲಿ ಸುರಕ್ಷಿತವಲ್ಲ. ಉಗ್ರರು ಯಾರನ್ನು ಬೇಕಾದರೂ ಗುರಿಯಾಗಿಸುತ್ತಾರೆ” ಎಂದು ಪ್ರತಿಭಟನಾಕಾರರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಬೈಸಿಕಲ್…ಆರೋಗ್ಯ ಜೀವನಕ್ಕೆ ಸುಲಭ ಸಾಧನ.

0

ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಸ್ಮಾರ್ಟ್ ಸಿಟಿ ಮಿಷನ್ ಮೂಲಕ ದೇಶದ 100 ಸ್ಮಾರ್ಟ್ ಸಿಟಿಗಳು ಬೈಸಿಕಲ್ ಪಥ ಗಳನ್ನೂ ನಿರ್ಮಿಸುತ್ತಿದ್ದು, ಸೈಕಲ್ ಸವಾರಿಗೆ ಉತ್ತೇಜನ ನೀಡುತ್ತಿದೆ. ಶಿವಮೊಗ್ಗದಲ್ಲಿ 8 ಸ್ಮಾರ್ಟ್ ರೋಡ್ ಪ್ಯಾಕೇಜ್ ಗಳಿಂದ 120 ಕಿ.ಮಿ ರಸ್ತೆಯನ್ನು ಸೈಕಲ್ ಸವಾರರಿಗೋಸ್ಕರ ಬೈಸಿಕಲ್ ಪಥಗಳನ್ನು ನಿರ್ಮಿಸಲಾಗುತ್ತಿದೆ.

ಬೈಸಿಕಲ್ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಲು ಸಹಕರಿಸುವ ಪರಿಸರಸ್ನೇಹಿ ವಾಹನವಾಗಿದ್ದು, ಪ್ರತಿನಿತ್ಯ ಬೈಸಿಕಲ್ ಓಡಿಸುವುದನ್ನು ರೂಢಿಸಿಕೊಳ್ಳುವ ಮೂಲಕ ಪರಿಸರದ ಸ್ವಾಸ್ಥ್ಯ ಕಾಪಾಡಿಕೊಳ್ಳುವದರ ಜೊತೆಗೆ ನಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಾ ವಿಶ್ವ ಬೈಸಿಕಲ್ ದಿನವನ್ನು ಆಚರಿಸೋಣ.

ವರದಿ;
ಭರತ್ ಎಂ ಎಸ್, 8861197602
ಅಪ್ರೆಂಟಿಸ್ ವಾರ್ತಾ ಇಲಾಖೆ, ಶಿವಮೊಗ್ಗ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು- ಈಶ್ವರಪ್ಪ

0

ಮಕ್ಕಳಿಗೆ ಶಿಕ್ಷಣ ಅತಿ ಮುಖ್ಯವಾಗಿದ್ದು ಸರ್ಕಾರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಶ್ರಮಿಸುತ್ತಿದೆ. ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳಿಗೆ ಅಧಿಕಾರಿ/ಸಿಬ್ಬಂದಿಗಳು ಸೂಕ್ತವಾಗಿ ಸ್ಪಂದಿಸಬೇಕೆಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ನುಡಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಎನ್‍ಟಿ ರಸ್ತೆ ಬಳಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳೊಂದಿಗೆ ಶಾಸಕರು ಸಂವಾದ ನಡೆಸಿದಾಗ, ವಿದ್ಯಾರ್ಥಿ ಮುರಳೀಧರ್ ಮಾತನಾಡಿ, ಹಾಸ್ಟೆಲ್ ಶುಚಿತ್ವ, ನಿರ್ವಹಣೆ ಆಹಾರದ ರುಚಿ ಉತ್ತಮಗೊಳ್ಳಬೇಕು ಎಂದರು.

ವಿದ್ಯಾರ್ಥಿ ಪುನೀತ್ ಮಾತನಾಡಿ, ಶುದ್ದ ಕುಡಿಯುವ ನೀರು ಮತ್ತು ಕಸ ವಿಲೇವಾರಿಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದರು.

ಇನ್ನೋರ್ವ ವಿದ್ಯಾರ್ಥಿ ಉನ್ನತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ಹಾಸ್ಟೆಲ್ ವ್ಯವಸ್ಥೆ ಗಮನಿಸಬೇಕು ಹಾಗೂ ಹಾಸ್ಟೆಲ್ ಗ್ರಂಥಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಅನುಕೂಲಕರವಾದ ಪುಸ್ತಕಗಳಿಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದರು.

ಶಾಸಕರು ಪ್ರತಿಕ್ರಿಯಿಸಿ, ಅಧಿಕಾರಿ/ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಉತ್ತಮ ಊಟ ನೀಡಲು ಅವಶ್ಯಕವಾದ ಕ್ರಮಗಳನ್ನು ವಹಿಸಬೇಕು. ಹಾಗೂ ಹಾಸ್ಟೆಲ್ ನಿರ್ವಹಣೆಗೆ ಸಾಕಷ್ಟು ಸಿಬ್ಬಂದಿ ನೇಮಕ ಮಾಡಲಾಗಿದ್ದು ಅಧಿಕಾರಿ/ಸಿಬ್ಬಂದಿಗಳು ಈ ಬಗ್ಗೆ ಹೆಚ್ಚಿನ ಗಮನ ಮತ್ತು ಕಾಳಜಿ ವಹಿಸಿ ನಿರ್ವಹಣೆ ಮಾಡಬೇಕೆಂದು ಸೂಚನೆ ನೀಡಿದರು.

ಕಸ ವಿಲೇವಾರಿ ಮಾಡಲು ನಗರದಲ್ಲಿ 70 ವಾಹನಗಳು ಇದ್ದು ಹೆಚ್ಚುವರಿಯಾಗಿ ಇನ್ನೂ 20 ವಾಹನಗಳು ಬರಲಿವೆ. ಹಾಸ್ಟೆಲ್‍ಗೂ ವಾಹನ ಬರುವ ವ್ಯವಸ್ಥೆ ಮಾಡಲಾಗುವುದು. ನಗರದ ಸುತ್ತಮುತ್ತ ನಿರಂತರ ಶುದ್ದ ಕುಡಿಯುವ ನೀರಿಗಾಗಿ ರೂ.95 ಕೋಟಿ ವೆಚ್ಚದ ಯೋಜನೆಗೆ ಟೆಂಡರ್ ಕರೆಯಲಾಗಿದ್ದು, ಯೋಜನೆ ಪೂರ್ಣಗೊಂಡ ನಂತರ ನೀರು ನಿರಂತರವಾಗಿ ಲಭಿಸಲಿದೆ. ಹಾಗೂ 24*7 ಯೋಜನೆ ಕೂಡ ಪ್ರಗತಿಯಲ್ಲಿದೆ. ಇನ್ನು ನಗರ ಕೇಂದ್ರ ಗ್ರಂಥಾಲಯ ಅತ್ಯುತ್ತಮವಾಗಿದೆ ಅದನ್ನು ವಿದ್ಯಾಥಿಗಳು ಬಳಕೆ ಮಾಡಿಕೊಳ್ಳಬೇಕು, ಜೊತೆಗೆ ಅಗತ್ಯ ಪುಸ್ತಕಗಳ ಪಟ್ಟಿ ಮಾಡಿ ಅಧಿಕಾರಿಗಳು ತರಿಸಿಕೊಳ್ಳುವಂತೆ ತಿಳಿಸಿದ ಅವರು ವಿದ್ಯಾರ್ಥಿಗಳು ತಮಗೆ ಯಾವುದೇ ರೀತಿಯ ತೊಂದರೆ ಇದ್ದಲ್ಲಿ ತಮ್ಮ ಗಮನಕ್ಕೆ ತರಬೇಕು. ತಾವು ಸಹಕರಿಸಲು ಸದಾ ಸಿದ್ದ ಎಂದು ತಿಳಿಸಿದರು.

ಮಹಾನಗರಪಾಲಿಕೆ ಸುನೀತಾ ಅಣ್ಣಪ್ಪ ಮಾತನಾಡಿ, ಕಟ್ಟಡ ಹೊಸದಾಗಿದ್ದಾಗ ಸುಂದರವಾಗಿರುತ್ತದೆ. ಅದರ ನಿರ್ವಹಣೆ ಕೇವಲ ಇಲಾಖೆ ಅಥವಾ ಪಾಲಿಕೆಗೆ ಸೇರಿಲ್ಲ. ಬದಲಾಗಿ ವಿದ್ಯಾರ್ಥಿಗಳು ಕೂಡ ತಮ್ಮ ಕೊಠಡಿ, ವಿದ್ಯಾರ್ಥಿನಿಲಯವನ್ನು ಸ್ವಚ್ಚವಾಗಿ, ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ಮೂಲಕ ಮುಂದೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಹಾಗೂ ಕಸ ವಿಲೇವಾರಿಗಾಗಿ ಪಾಲಿಕೆ ವತಿಯಿಂದ ನೂತನ ಹಾಸ್ಟೆಲ್‍ಗೆ ವಾಹನವನ್ನು ಕಳುಹಿಸಿಕೊಡಲಾಗುವುದು. ಕಸವನ್ನು ಸಮರ್ಪಕವಾಗಿ ಹಾಕುವುದು ನಿಮ್ಮ ಜವಾಬ್ದಾರಿ ಎಂದು ನುಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕ ವಿದ್ಯಾರ್ಥಿ ನಿಲಯವು 1980 ರಿಂದ ಪ್ರಾರಂಭಗೊಂಡಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಹೊಸ ಕಟ್ಟಡವು ರೂ.6.45 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಪ್ರಸ್ತುತ ಹಾಸ್ಟೆಲ್‍ನಲ್ಲಿ 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಉಚಿತ ಊಟ, ಉಪಹಾರ, ವಸತಿಯೊಂದಿಗೆ ಪ್ರತಿ ಮಾಹೆ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಕಿಟ್ ಒದಗಿಸಲಾಗುತ್ತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಇಲಾಖೆಯಿಂದ ಹಾಸಿಗೆ, ಹೊದಿಕೆ, ಪ್ರತಿ ಎರಡು ವರ್ಷಕ್ಕೊಮ್ಮೆ ಕ್ರೀಡಾ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಮೂರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಲಾಗುತ್ತದೆ. ಬಿ.ಎಡ್ ವ್ಯಾಸಂಗ ಮಾಡಿರುವ ನಿಲಯ ಪಾಲಕರನ್ನು ಹಾಸ್ಟೆಲ್‍ಗೆ ನೇಮಿಸಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕ ವಾತಾವರಣ ನಿರ್ಮಿಸಲಾಗಿದೆ ಎಂದು ಸಹಾಯಕ ನಿರ್ದೇಶಕರಾದ ಮಲ್ಲೇಶಪ್ಪ ಡಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಡಿಎಸ್‍ಎಸ್ ಅಧ್ಯಕ್ಷ ಹಾಲೇಶಪ್ಪ, ಜಗದೀಶ್, ಅಣ್ಣಪ್ಪ, ಶಿವಾಜಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ್, ಸಹಾಯಕ ನಿರ್ದೇಶಕ ಮಲ್ಲೇಶಪ್ಪ ಡಿ ಹಾಗೂ ಇತರರು ಹಾಜರಿದ್ದರು.