Monday, March 9, 2026
Monday, March 9, 2026
Home Blog Page 1532

ದೇವೇಗೌಡರಿಗೆ ರಾಷ್ಟ್ರಪತಿ ಸ್ಥಾನದ ಸ್ಪರ್ಧೆಗೆ ಒಲವಿಲ್ಲ-ಕುಮಾರಸ್ವಾಮಿ

0

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಬಿಬಿಎಂಪಿ ಚುನಾವಣೆ ಮತ್ತು ಜನತಾ ಮಿತ್ರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಕರೆದಿದ್ದ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆಗೆ ದೇವೇಗೌಡರ ಹೆಸರು ಪ್ರಸ್ತಾಪವೇ ಆಗಿಲ್ಲ ಎಂದರು.

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಚರ್ಚೆ ಆಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಮ್ಮ ಕುಟುಂಬದ ಬಗ್ಗೆ ಗೌರವ ಇಟ್ಟು ಸಭೆಗೆ ಆಹ್ವಾನ ನೀಡಿದ್ದರು. 17 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಜೂನ್ 20ರಂದು ಮತ್ತೊಂದು ಸುತ್ತಿನ ಸಭೆ ಇದೆ. ಅಂದು ಅಭ್ಯರ್ಥಿ ಆಯ್ಕೆ ಅಂತಿಮ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ದೇವೇಗೌಡರಿಗೆ ಜೀವನದಲ್ಲಿ ಒಮ್ಮೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಸ್ವತಂತ್ರ ಸರ್ಕಾರ ಬರಬೇಕು ಎಂಬ ಆಸೆ ಇದೆ. ಸ್ವತಂತ್ರ ಸರ್ಕಾರದ ಬಗ್ಗೆ ಅವರ ಆಸೆ ಪೂರೈಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಆದರ ಹೊರತಾಗಿ, ರಾಷ್ಟ್ರಪತಿ ಹುದ್ದೆಯ ಬಗ್ಗೆ ದೇವೇಗೌಡರ ಒಲವು ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಸುವರ್ಣಪದಕ ಬಾಚಿದ ಪ್ರತಿಭಾಸಂಪನ್ನ ವಿದ್ಯಾರ್ಥಿನಿಯರು

0

ಕುವೆಂಪು ವಿಶ್ವವಿದ್ಯಾಲಯದಲ್ಲಿ ಈ ಬಾರಿಯು ವಿದ್ಯಾರ್ಥಿನಿಯರು ಚಿನ್ನದ ಬೇಟೆ ಮುಂದುವರೆಸಿದ್ದಾರೆ.

31 ಮತ್ತು 32ನೇ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಮತ್ತು ನಗದು ಪುರಸ್ಕಾರಗಳನ್ನು ವಿದ್ಯಾರ್ಥಿನಿಯರೆ ಬಾಚಿಕೊಂಡಿದ್ದಾರೆ.
ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಘಟಿಕೋತ್ಸವವನ್ನು ಆಯೋಜಿಸಲಾಗಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಸನ್ಮಾನಿಸಿದ್ದಾರೆ.

31ನೇ ಘಟಿಕೋತ್ಸವದಲ್ಲಿ ಕನ್ನಡ ಎಂ.ಎ ವಿಭಾಗದ ಪ್ರಣೀತಾ ಎಂ.ಟಿ ಅವರು 8 ಸ್ವರ್ಣ ಪದಕ ಮತ್ತು 2 ನಗದು ಬಹುಮಾನ ಪಡೆದಿದ್ದಾರೆ. ಎಂಬಿಎ ವಿಭಾಗದ ಯತೀಶ್ ಕೆ.ಯು, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಎಂ.ಎಸ್ಸಿ ಜೈವಿಕ ತಂತ್ರಜ್ಞಾನ ವಿಭಾಗದ ಅನುಷಾ ಎಸ್, ಎನ್.ಇ.ಎಸ್. ಇನ್ಸ್ ಟಿಟ್ಯೂಟ್ ಆಪ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಬಿ.ಕಾಂ ವಿಭಾಗದ ನಿವ್ಯಾ ಕೆ.ನಾಯಕ್ ಅವರು ತಲಾ 5 ಸ್ವರ್ಣ ಪದಕ ಪಡೆದಿದ್ದಾರೆ.

ಎಂ.ಎ ಸಮಾಜಶಾಸ್ತ್ರ ವಿಭಾಗದ ನವೀನ್ ಕುಮಾರ್.ಸಿ, ಎಂ.ಎಸ್ಸಿ ಸಸ್ಯಶಾಸ್ತ್ರ ವಿಭಾಗದ ರಕ್ಷಿತಾ ಹೆಚ್.ಎಂ ಜೈನ್, ರಸಾಯನಶಾಸ್ತ್ರ ವಿಭಾಗದ ದಿವ್ಯಾ ಎಂ.ಸಿ, ಪರಿಸರ ವಿಜ್ಞಾನ ವಿಭಾಗದ ಸಂಪದಾ ಶಾಸ್ತ್ರಿ ತಲಾ 4 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ.

ಎಂ.ಎ ರಾಜ್ಯಶಾಸ್ತ್ರ ವಿಭಾಗದ ಸೌರಭ ಎಸ್.ಕಾಮತ್, ಉರ್ದು ವಿಭಾಗದ ಅಬ್ದುಲ್ ಫತಾ, ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ವಿಭಾಗದ ಶ್ವೇತಾ ಎಸ್, ಎಂ.ಎಸ್ಸಿ ಪ್ರಾಣಿಶಾಸ್ತ್ರ ವಿಭಾಗದ ಸರಳ ವೈ.ಪಿ, ಎಂ.ಸಿ.ಎ ಸಂಜನಾ ಕೆ ಅವರು ತಲಾ 3 ಸ್ವರ್ಣ ಪದಕ ಪಡೆದಿದ್ದಾರೆ.

32ನೇ ಘಟಿಕೋತ್ಸವ
ಎಂ.ಎ ಕನ್ನಡ ವಿಭಾಗದ ದಿವ್ಯಾ ಹೆಚ್.ಎನ್ ಅವರು 11 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ಪಡೆದರೆ, ಎಂಬಿಎ ವಿಭಾಗದ ಪ್ರಿಯಾಂಕಾ ಟಿ ಅವರು 6 ಸ್ವರ್ಣ ಪದಕಗಳನ್ನು ಪಡೆದುಕೊಂಡರು.

ಎಂ.ಎ ಸಮಾಜಶಾಸ್ತ್ರ ವಿಭಾಗದ ತನೂಷಾ, ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದ ಸಂಯುಕ್ತಾ ಪೈ, ಎ.ಟಿ.ಎನ್.ಸಿ ಕಾಲೇಜು ಬಿ.ಕಾಂ ವಿದ್ಯಾರ್ಥಿನಿ ಮೇಘನಾ.ವಿ ಅವರು ತಲಾ 5 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ.

ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಂಜುಮ್ ಬಷೀರ್ ಸಾಬ್ , ಎಂ.ಎ ಇಂಗ್ಲೀಷ್ ವಿಭಾಗದ ಅಲೀಶಾ ಜೋಸೆಫ್, ಎಂ.ಕಾಂ ವಿಭಾಗದ ಗಾಯತ್ರಿ ಕೆ.ಎ, ಎಂ.ಸಿ.ಎ ವಿಭಾಗದ ರಂಜಿತಾ ಸಿ.ಕೆ, ಎಂ.ಎಸ್ಸಿ ಸಸ್ಯಶಾಸ್ತ್ರ ವಿಭಾಗದ ಯಶಸ್ವಿನಿ ಎಂ, ಎಂ.ಎಸ್ಸಿ ಪ್ರಾಣಿಶಾಸ್ತ್ರ ವಿಭಾಗದ ರುಚಿತಾಶ್ರೀ, ಎಂ.ಎಸ್ಸಿ ಜೀವ ರಸಾಯನಶಾಸ್ತ್ರ ವಿಭಾಗದ ಸೃಷ್ಟಿ ಬಿ.ಎಂ ಅವರು ತಲಾ 3 ಸ್ವರ್ಣ ಪದಕ ಪಡೆದಿದ್ದಾರೆ.

ಧ್ವನಿವರ್ಧಕ ಬಳಕೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

0

ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಗೆ ಈ ಹಿಂದೆ ಹೊರಡಿಸಿದ್ದ ನಿಷೇಧವನ್ನು ಜಾರಿಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲಾ ಧ್ವನಿವರ್ಧಕಗಳ ಮೇಲೆ ನಿಷೇಧ ಹೇರಲಾಗಿದೆ.

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರ ವಿಭಾಗೀಯ ಪೀಠವು ಧ್ವನಿವರ್ಧಕಗಳು, ಸಾರ್ವಜನಿಕ ವಿಳಾಸ ವ್ಯವಸ್ಥೆಗಳು ಮತ್ತು ಸಂಗೀತ ಉಪಕರಣಗಳ ದುರುಪಯೋಗವನ್ನು ತಡೆಯಲು ಅಭಿಯಾನವನ್ನು ಕೈಗೊಳ್ಳುವಂತೆ ಮತ್ತು ಮೂರು ವಾರಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಅನುಮತಿಸಲಾದ ಡೆಸಿಬೆಲ್ ಗಿಂತ ಹೆಚ್ಚಿನ ಶಬ್ದಗಳನ್ನು ಉತ್ಪಾದಿಸುವ ಧ್ವನಿವರ್ಧಕಗಳು, ಸಾರ್ವಜನಿಕ ವಿಳಾಸ ವ್ಯವಸ್ಥೆ ಮತ್ತು ಇತರ ಸಂಗೀತ ಉಪಕರಣಗಳನ್ನು ಬಳಸಲು ಅವರು ಅನುಮತಿಸಬಾರದು ಎಂದು ನ್ಯಾಯಾಲಯ ಹೇಳಿದೆ.

ಅಗ್ನಿಪಥ್ ನೇಮಕಾತಿಗೆ 21 ರಿಂದ 23 ವರ್ಷ ವಯೋಮಿತಿ ಏರಿಕೆ

0

ದೇಶದ ಅನೇಕ ಭಾಗಗಳಲ್ಲಿ ಅಗ್ನಿಪಥ್ ಯೋಜನೆಯ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುತ್ತಿದೆ. ಈ ನಡುವೆಯೇ ಕೇಂದ್ರ ಸರ್ಕಾರವು ಗುರುವಾರ ಅಗ್ನಿಪಥ್ ನೇಮಕಾತಿ ಯೋಜನೆಯ ಗರಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 23 ವರ್ಷಗಳಿಗೆ ವಿಸ್ತರಿಸಿದೆ.

2022 ರ ಪ್ರಸ್ತಾವಿತ ನೇಮಕಾತಿಗೆ ವಯೋಮಿತಿ ವಿನಾಯಿತಿಯನ್ನು ಒಂದು ಬಾರಿ ಮಾತ್ರ ನೀಡಲಾಗುತ್ತದೆ. ಕಳೆದ 2 ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಅಗ್ನಿಪಥ್ ಯೋಜನೆಯ ಪ್ರಾರಂಭದ ಪರಿಣಾಮವಾಗಿ, ಸಶಸ್ತ್ರ ಪಡೆಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳ ಪ್ರವೇಶ ವಯೋಮಿತಿಯನ್ನು 17.5 ರಿಂದ 21 ವರ್ಷಗಳು ಎಂದು ನಿಗದಿಪಡಿಸಲಾಗಿದೆ.

ಕಳೆದ 2 ಅವಧಿಯಲ್ಲಿ ನೇಮಕಾತಿಯನ್ನು ಕೈಗೊಳ್ಳಲು ಸಾಧ್ಯವಾಗದಿರುವ ಅಂಶವನ್ನು ಅರಿಯಲಾಗಿದೆ. 2022ರ ಪ್ರಸ್ತಾವಿತ ನೇಮಕಾತಿ ಚಕ್ರಕ್ಕೆ ಒಂದು ಬಾರಿ ಮಾತ್ರ ಮನ್ನಾ ನೀಡಲು ಸರ್ಕಾರ ನಿರ್ಧರಿಸಿದೆ. ಅದರಂತೆ, 2022 ಕ್ಕೆ ಅಗ್ನಿಪಥ್ ಯೋಜನೆಗೆ ನೇಮಕಾತಿ ಪ್ರಕ್ರಿಯೆಯ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮಾಹಿತಿ ನೀಡಿದೆ.

ದೇಶದಲ್ಲಿ ಕೊರೋನ ಸೋಂಕಿನಿಂದ 24 ಮಂದಿ ಸಾವು

0

ಭಾರತದಲ್ಲಿ ಕಳೆದ ಒಂದು ದಿನದಲ್ಲಿ ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿದೆ. 24 ಜನ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶಾದ್ಯಂತ ಕೊರೋನಾ ದಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,24,840ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಒಂದೇ ದಿನದಲ್ಲಿ ದೇಶದಲ್ಲಿ 5,045 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದೀಗ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 68,108ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

24ಗಂಟೆಯಲ್ಲಿ ಕೊರೋನಾ ಸೋಂಕಿನಿಂದ 8,148 ಮಂದಿ ಗುಣಮುಖರಾಗಿದ್ದಾರೆ.
ದೇಶಾದ್ಯಂತ ಕೋವಿಡ್ ನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,26,90,845ಕ್ಕೆ ಹೆಚ್ಚಳವಾಗಿದೆ. ಭಾರತದಲ್ಲಿನ ಕೊರೋನಾ ಚೇತರಿಕೆ ದರ ಶೇ.98.63ರಷ್ಟಿದೆ.

ದೇಶದಲ್ಲಿ ಪ್ರತಿದಿನದ ಪಾಸಿಟಿವಿಟಿ ದರ ಶೇ.2.73ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ.2.47ರಷ್ಟಿದೆ. ಭಾರತದಾದ್ಯಂತ ಕೊರೋನಾ ಲಸಿಕೆ ಅಭಿಯಾನದಡಿ ಇದುವರೆಗೆ 196 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿಯಿಂದ ತಿಳಿದುಬಂದಿದೆ.

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಯೋಗ ದಿನಾಚರಣೆಗೆ ಆದೇಶ

0

ದಿನಾಂಕ 21-06-2022ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ದಿನಾಂಕ 21-06-2022ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಎಸ್ ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ಸ್ಥಳೀಯ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ತಿಳಿಸಿದ್ದಾರೆ.

ದಿನಾಂಕ 21-06-2022ರ ಮಂಗಳವಾರದಂದು ದಿನದ ಮೊದಲ ಒಂದೂವರೆ ಗಂಟೆಯ ಅವಧಿಯಲ್ಲಿ ವಿದ್ಯಾರ್ಥಿಗಳ ವಯಸ್ಸಿಗೆ ಅನುಗಣವಾದ ಯೋಗಾಸನಗಳ ಅಭ್ಯಾಸಗಳನ್ನು ಹಾಗೂ ಪ್ರದರ್ಶನಗಳನ್ನು ಹಮ್ಮಿಕೊಳ್ಳಲು ತಿಳಿಸಿದೆ.

ಈ ದಿನದ ಪಾಠವನ್ನು ದಿನಾಂಕ 25-06-2022 ಶನಿವಾರದಂದು ಇಡೀ ದಿನ ತೆರೆದು ಸರಿದೂಗಿಸುವಂತೆ ಸೂಚಿಸಿದೆ.

ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ಕಡ್ಡಾಯ

0

ಕೋವಿಡ್ -19 ಪ್ರಕರಣಗಳ ಹೆಚ್ಚಳದ ನಂತರ, ರಾಜ್ಯ ಸರ್ಕಾರವು ರಾಜ್ಯದಲ್ಲಿ ಒಳಬರುವ ಅಂತರರಾಷ್ಟ್ರೀಯ ವಿಮಾನಗಳ ಯಾದೃಚ್ಛಿಕ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

ಎಲ್ಲಾ ಸಕಾರಾತ್ಮಕ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್‌ಗೆ ಒಳಪಡಿಸಿ. ಪಾಸಿಟಿವ್ ಬಂದ ಪ್ರಯಾಣಿಕರನ್ನ ನಿಗಾದಲ್ಲಿ ಇರಿಸಿ, ಕ್ವಾರಂಟೈನ್‌ನಲ್ಲಿರಿ. ಇನ್ನು ಚಾಲ್ತಿಯಲ್ಲಿರುವ ಮಾರ್ಗಸೂಚಿಗಳ ಪ್ರಕಾರಧ ನಿರ್ವಹಿಸಿ’ ಎಂದು ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.

ಆರ್ಟಿ-ಪಿಸಿಆರ್ ಮೂಲಕ ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ ಎರಡು ಪ್ರತಿಶತವನ್ನ ಪರೀಕ್ಷಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯದ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ಆದೇಶದ ನಂತರ, ರಾಜ್ಯವೂ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಯಾದೃಚ್ಛಿಕವಾಗಿ ಪರೀಕ್ಷಿಸುತ್ತದೆ ಮತ್ತು ಎಲ್ಲಾ ಸಕಾರಾತ್ಮಕ ಮಾದರಿಗಳ ಜೀನೋಮಿಕ್ ಸೀಕ್ವೆನ್ಸಿಂಗ್ ಸಹ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಸಮಗ್ರ ಆರೋಗ್ಯ ಮಾಹಿತಿ ಪೋರ್ಟಲ್ ಮೂಲಕ ಅನಾರೋಗ್ಯ ಮತ್ತು ತೀವ್ರ ಉಸಿರಾಟದ ಅಸ್ವಸ್ಥತೆಯ ಎಲ್ಲಾ ಪ್ರಕರಣಗಳನ್ನು ವರದಿ ಮಾಡಲು ಆರೋಗ್ಯ ಸೌಲಭ್ಯಗಳನ್ನು ಕೇಳಲಾಗಿದೆ.

ಐಎಲ್‌ಐ ಮತ್ತು ಎಸ್‌ಎಆರ್‌ ರೋಗಲಕ್ಷಣಗಳನ್ನ ಹೊಂದಿರುವ ಪ್ರತಿ 20 ರೋಗಿಗಳಲ್ಲಿ ಒಬ್ಬರನ್ನು ಕೋವಿಡ್ -19 ಗಾಗಿ ಪರೀಕ್ಷಿಸಲಾಗುವುದು. ಕೋವಿಡ್ -19 ಗಾಗಿ ಲ್ಯಾಬ್ ಪರೀಕ್ಷಾ ದತ್ತಾಂಶವನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ಹಂಚಿಕೊಳ್ಳಲಾಗುವುದು.

ಅಡಿಕೆ ಧಾರಣೆ ಬಗ್ಗೆ ಆತಂಕ ಬೇಡ- ಆರಗ ಜ್ಞಾನೇಂದ್ರ

0

ಅಡಕೆಗೆ ನಿಗದಿಪಡಿಸಿರುವ ಬೆಲೆಯನ್ನು ಪರಿಷ್ಕರಿಸಿ ಹೆಚ್ಚಳ ಮಾಡುವಂತೆ ಒತ್ತಾಯಿಸಲು ಕೇಂದ್ರ ಸರ್ಕಾರಕ್ಕೆ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದು ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಹಣದುಬ್ಬರ ಹಾಗೂ ಇನ್ನಿತರ ಕಾರಣಗಳಿಂದಾಗಿ ಅಡಕೆ ಬೆಳೆ ಉತ್ಪಾದನಾ ವೆಚ್ಚವೂ ಹೆಚ್ಚಿದ್ದು ಪ್ರಸ್ತುತ ಪ್ರತಿ ಕಿಲೋ ಅಡಕೆ ಅಂದಾಜು ವೆಚ್ಚ ರೂಪಾಯಿ 25 ರಷ್ಟಿದೆ. ಸುಮಾರು ಆರು ವರ್ಷಗಳ ಹಿಂದೆ ಈ ದರ ನಿಗದಿ ಪಡಿಸಲಾಗಿದೆ. ಇದನ್ನು ಸದ್ಯದ ಖರ್ಚುವೆಚ್ಚಗಳಿಗೆ ಅನುಗುಣವಾಗಿ ಪರಿಷ್ಕರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಅಡಕೆ ಧಾರಣೆ ಸಂಬಂಧ ರೈತರು ಯಾವುದೇ ಆತಂಕ ಪಡುವುದು ಬೇಡ. ರಾಜ್ಯದ ಮಲೆನಾಡು ಭಾಗದ ಲಕ್ಷಾಂತರ ರೈತ ಹಾಗೂ ರೈತ_ಕಾರ್ಮಿಕ ಕುಟುಂಬಗಳ ಆರ್ಥಿಕ ಬೆನ್ನೆಲುಬಾಗಿರುವ ಅಡಕೆ ಬೆಳೆಗೆ ಸುಸ್ಥಿರ ಬೆಲೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿದ್ದು, ಈ ಕುರಿತು ರೈತ ಸಮುದಾಯ ಯಾವುದೇ ಆತಂಕ ಪಡುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಈ ಹಿಂದೆ ಕೇಂದ್ರ ಸರಕಾರ ದೇಶಿಯ ಅಡಿಕೆ ಉತ್ಪನ್ನ ಅಂದಾಜು ವೆಚ್ಚವನ್ನು ಹೆಚ್ಚಳ ಮಾಡಿದಾಗ, ವಿದೇಶದಿಂದ ಅಮದಾಗುತ್ತಿದ್ದ ಕಡಿಮೆ ಗುಣಮಟ್ಟದ ಅಡಿಕೆ ಪ್ರಮಾಣ ಗಣನೀಯವಾಗಿ ತಗ್ಗಿತ್ತು. ವಿದೇಶದಿಂದ ಆಮದಾಗುವ ಅಡಿಕೆ, ಗುಣಮಟ್ಟದಲ್ಲಿ ಅತ್ಯಂತ ನಿಕೃಷ್ಟ ವಾಗಿದ್ದು ದೇಶಿಯ ಅಡಿಕೆ, ಗುಣಮಟ್ಟದಲ್ಲಿ ಆತ್ಯುಕೃಷ್ಟ ವಾಗಿದೆ ಎಂದು, ಪ್ರಮಾಣೀಕೃತ ವಾಗಿದೆ ಎಂದೂ ತಿಳಿಸಿದ್ದಾರೆ.

ಕೇಂದ್ರ ಕೃಷಿ ಸಚಿವರನ್ನು ರಾಜ್ಯ ಟಾಸ್ಕ್ ಫೋರ್ಸ್ ನಿಯೋಗ ಭೇಟಿಯಾಗಿ, ಅಡಿಕೆ ಉತ್ಪನ್ನ ಅಂದಾಜು ವೆಚ್ಚ ಪರಿಷ್ಕರಿಸಿ ಹೆಚ್ಚಳ ಮಾಡಲು ಮನವರಿಕೆ ಮಾಡಿ ಕೊಡಲಾಗುವುದು, ರೈತರು ಅಡಿಕೆ ಧಾರಣೆ ಬಗ್ಗೆ ಯಾವುದೇ ಆತಂಕ ಹಾಗೂ ಭಯಪಡುವುದು ಬೇಡ ಎಂದೂ ಸಚಿವರು ವಿನಂತಿಸಿದ್ದಾರೆ.

ಅಗ್ನಿಪಥ ಕ್ಕೆ ಜೂನ್ 24 ರಿಂದ ನೇಮಕಾತಿ ಪ್ರಕ್ರಿಯೆ ಆರಂಭ

0

ಅಗ್ನಿಪಥ’ ಯೋಜನೆಯಡಿ ಜೂನ್ 24 ರಿಂದ ಭಾರತೀಯ ವಾಯುಪಡೆಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಾಯುಪಡೆ ಮುಖ್ಯಸ್ಥ ವಿ.ಆರ್ ಚೌಧರಿ ಅವರು ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಅಲ್ಪಾವಧಿ ನೇಮಕಾತಿ ಯೋಜನೆಯ ಬಗ್ಗೆ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಸಶಸ್ತ್ರ ಪಡೆಗಳ ನೇಮಕಾತಿಗಾಗಿ ಸರ್ಕಾರವು ಇತ್ತೀಚೆಗೆ ‘ಅಗ್ನಿಪಥ’ ಯೋಜನೆಯನ್ನು ಘೋಷಿಸಿತು. ಯೋಜನೆಗೆ ವಯೋಮಿತಿ ಹದಿನೇಳುವರೆ ವರ್ಷದಿಂದ 21 ವರ್ಷಗಳನ್ನು ನಿಗದಿ ಮಾಡಿತ್ತು. ಆದರೆ, ಮೊದಲ ನೇಮಕಾತಿಯಲ್ಲಿ ವಯೋಮಿತಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗಿದೆ’ ಎಂದು ಏರ್ ಚೀಫ್ ಮಾರ್ಷಲ್ ಚೌಧರಿ ಹೇಳಿದ್ದಾರೆ.

2022ರ ಅವಧಿಯಲ್ಲಿ ಅಗ್ನಿಪಥ ಯೋಜನೆಯಡಿ ನೇಮಕಗೊಳ್ಳಲು ಗರಿಷ್ಠ ವಯಸ್ಸಿನ ಮಿತಿಯನ್ನು 23ಕ್ಕೆ ಹೆಚ್ಚಿಸಲಾಗಿದೆ.

ಹೀಗಾಗಿ ಹೆಚ್ಚಿನ ಸಂಖ್ಯೆಯ ಯುವಕರು ಹೊಸ ಮಾದರಿಯ ನೇಮಕಾತಿಯ ಅಡಿಯಲ್ಲಿ ವಾಯುಪಡೆ ಸೇರಲಿದ್ದಾರೆ ಎಂದು ಅವರು ಹೇಳಿದರು.

‘ಈ ಬದಲಾವಣೆಯು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಗ್ನಿವೀರರಾಗಿ ಸೇರ್ಪಡೆಗೊಳ್ಳಲು ಸಹಾಯವಾಗಲಿದೆ. ವಾಯುಪಡೆಯ ಆಯ್ಕೆ ಪ್ರಕ್ರಿಯೆಯು ಜೂನ್ 24 ರಿಂದ ಪ್ರಾರಂಭವಾಗುತ್ತದೆ’ ಅವರು ಹೇಳಿದರು.

2022ರ ಅವಧಿಯಲ್ಲಿ ಅಗ್ನಿಪಥ ಯೋಜನೆಯಡಿಯಲ್ಲಿ ನೇಮಕಗೊಳ್ಳಲು ಗರಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 23 ವರ್ಷಗಳಿಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಗುರುವಾರ ರಾತ್ರಿ ತೀರ್ಮಾನ ಕೈಗೊಂಡಿತ್ತು.

ಶಿವಮೊಗ್ಗದಲ್ಲಿ ನೂತನ ಯೋಗ ಮಂದಿರದ ಉದ್ಘಾಟನೆ

0

ಶಿವಮೊಗ್ಗ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಯೋಗಚಾರ್ಯ ಶ್ರೀ ಸಿವಿ ರುದ್ರಾರಾಧ್ಯ ಯೋಗ ಮಂದಿರ ನಾಮಕರಣ ಸಮಾರಂಭ

ಶಿವಮೊಗ್ಗ ನಗರದ ಗುಂಡಪ್ಪ ಶೆಡ್ ಬಡಾವಣೆಯಲ್ಲಿ ನಿರ್ಮಿಸಿರುವ ಯೋಗ ಮಂದಿರಕ್ಕೆ ಸೂಕ್ತ ವ್ಯಕ್ತಿಯ ಹೆಸರನ್ನು ನಾಮಕರಣ ಮಾಡಬೇಕೆಂದು ನಿವಾಸಿಗಳು ಸಭೆ ಸೇರಿದ್ದರು. ಸಭೆಯ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಕೆಎಸ್ ಈಶ್ವರಪ್ಪನವರ ವಹಿಸಿದ್ದರು. ಶಿವಮೊಗ್ಗ ನಗರ ದ ವಿವಿಧ ಬಡಾವಣೆಗಳಲ್ಲಿ 29 ಯೋಗ ಶಾಲೆಗಳನ್ನು ಆರಂಭಿಸಿ ಉಚಿತ ಯೋಗ ತರಗತಿಗಳನ್ನು ನಡೆಸುತ್ತಿರುವ ಪ್ರತಿ ಮನೆ -ಮನೆಗೂ ಯೋಗ ಎಂಬ ಧ್ಯೇಯವನ್ನು ಹೊಂದಿ ಆರೋಗ್ಯಪೂರ್ಣ ಸಮಾಜ ದ ಚಿಂತನೆಯನ್ನು ಹೊಂದಿ ಶಿವಮೊಗ್ಗ ಜನತೆಗೆ ಯೋಗ ಉಚಿತ ಶಿಕ್ಷಣವನ್ನು 2004ರಿಂದಲೂ ನೀಡುತ್ತಿರುವ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಗಿ ಶ್ರೀ ಶಿವಗಂಗಾ ಯೋಗ ಮಹಾವಿದ್ಯಾಲಯವನ್ನು ಸ್ಥಾಪಿಸಿ ಜನಸಾಮಾನ್ಯರಿಗೆ ಯೋಗ ಪ್ರಪಂಚದ ದಾರಿಯಲ್ಲಿ ಸಾಗುವಂತೆ ಮಾಡಿದ ಶ್ರೀ ಶಿವಗಂಗಾ ಯೋಗ ಕೇಂದ್ರದ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಶ್ರೀ ಸಿವಿ ರುದ್ರಾರಾಧ್ಯ ಯೋಗ ಮಂದಿರ ಎಂಬುದಾಗಿ ನಾಮಕರಣ ಮಾಡುವುದು ಸೂಕ್ತವೆಂದು ಒಮ್ಮತ ದಿಂದ ನಿರ್ಣಯ ಕೈಗೊಳ್ಳಲಾಯಿತು.

ಈ ಮೂಲಕ ಅವರ ಸೇವೆಯನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಸದಾವಕಾಶ ಶಿವಮೊಗ್ಗ ಜನತೆಗೆ ದೊರೆಯುವುದೆಂಬ ಧನ್ಯತಾಭಾವ ಅದಾಗಿತ್ತು.

ಈ ಉದ್ದೇಶಕ್ಕಾಗಿ ಎಂಟನೇ ಅಂತರರಾಷ್ಟ್ರೀಯ ಯೋಗದಿನದ ಮುನ್ನವೇ ನಾಮಕರಣ ಸಮಾರಂಭ ಏರ್ಪಡಿಸಿ ತನ್ಮೂಲಕ ಯೋಗದಿನದ ಯೋಗೋತ್ಸವ ಕ್ಕೆ ಮುನ್ನುಡಿಯಾಗಿ ನಾಮಕರಣ ಉತ್ಸವ

ಈ ದಿವ್ಯವಾದ ಸಮಾರಂಭಕ್ಕೆ ಶಿವಮೊಗ್ಗ ನಗರದ ಸಾರ್ವಜನಿಕರು, ಯೋಗಾಸಕ್ತರು ಆಗಮಿಸಬೇಕೆಂದು ಕೋರುತ್ತಿದ್ದೇವೆ ಎಂದು ಶಿವಮೊಗ್ಗ ದ ಪತ್ರಿಕಾಭವನದಲ್ಲಿ ಕೆ. ಇ ಕಾಂತೇಶ್ ಮಾಜಿ ಸದಸ್ಯರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್
ಶಿವಮೊಗ್ಗ
ಸುಧಾಕರ್, ಯೋಗ ಶಿಕ್ಷಕರು, ಶಿವಗಂಗಾ ಯೋಗ ಕೇಂದ್ರ
ಶ್ರೀ ವಿಜಯ್ ಕುಮಾರ್, ಶ್ರೀ ಶ್ರೀಧರ್ ಮತ್ತಿತರು ಉಪಸ್ಥಿತರಿದ್ದರು.