Monday, March 9, 2026
Monday, March 9, 2026
Home Blog Page 1529

ಕೊರೆಯುವ ಚಳಿಯಲ್ಲಿಯೂ ಯೋಗ ದಿನಾಚರಣೆ

0

ಇಂದು ವಿಶ್ವದಾದ್ಯಂತ 8ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗ ತವರು ಭಾರತದ ಮೂಲೆ ಮೂಲೆಯಲ್ಲಿ ಯೋಗ ದಿನದ ಸಂಭ್ರಮ ಮನೆ ಮಾಡಿದೆ.

ಮೈಸೂರಿನಲ್ಲಿ ಪ್ರಧಾನಿ ಮೋದಿ ಯೋಗ ದಿನದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಯೋಗ ದಿನದ ಕೇಂದ್ರ ಬಿಂದುವಾದರೆ, ದೇಶದ ಹಲವೆಡೆ ಅನೇಕ ಗಣ್ಯಾತಿಗಣ್ಯರು ಯೋಗಾಭ್ಯಾಸ ಮಾಡುವ ಮೂಲಕ ವಿಶೇಷ ದಿನದಲ್ಲಿ ಭಾಗಿಯಾದರು.

ಎಲ್ಲರ ಗಮನ ಸೆಳೆದಿದ್ದರೆ, ಕೇಂದ್ರಾಡಳಿತ ಪ್ರದೇಶ ಲಡಾಖ್​ನ ಸಮುದ್ರ ಮಟ್ಟದಿಂದ 17 ಸಾವಿರ ಅಡಿ ಎತ್ತರವಿರುವ ಪ್ರದೇಶದಲ್ಲಿ ಇಂಡೋ-ಟಿಬೆಟನ್​ ಬಾರ್ಡರ್​ ಪೊಲೀಸ್ (ಐಟಿಬಿಪಿ)​ ಪಡೆಯ ಹಿಮವೀರರು ಕೊರೆಯುವ ಚಳಿಯಲ್ಲಿ ಪ್ಯಾಂಟ್​ ಮಾತ್ರ ಧರಿಸಿ, ಬರಿ ಮೈಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಿದರು.

ಇಷ್ಟೇ ಅಲ್ಲದೆ, ಹಿಮಾಚಲ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 16,500 ಅಡಿ ಎತ್ತರವಿರುವ ಪ್ರದೇಶದಲ್ಲಿ ಹಾಗೂ ಉತ್ತರಾಖಂಡದಲ್ಲಿ ಸಮುದ್ರ ಮಟ್ಟದಿಂದ 14,500 ಅಡಿ ಎತ್ತರ ಇರುವ ಪ್ರದೇಶದಲ್ಲಿ ಐಟಿಬಿಪಿ ಹಿಮವೀರರು ಯೋಗಾಸನ ಮಾಡಿ ಯೋಗ ದಿನವನ್ನು ಸಂಭ್ರಮಿಸಿದರು.

ಯೋಧರ ಯೋಗಾಭ್ಯಾಸದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರ ಸಾಮರ್ಥ್ಯ ಮತ್ತು ಕರ್ತವ್ಯ ನಿಷ್ಠೆ ಹಾಗೂ ಬದ್ಧತೆಯನ್ನು ನೋಡಿ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಇಂಡೋ-ಚೀನಾ ಗಡಿಗಳಾದ ಲಡಾಖ್​, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಅತಿ ಎತ್ತರ ಪ್ರದೇಶಗಳಲ್ಲಿ ಹಿಮವೀರರು ಕನಿಷ್ಠ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಯೋಗಾಸನ ಮಾಡಿದ್ದು, ಭಾರತೀಯ ಸೇನೆಯ ಸಾಮರ್ಥ್ಯವನ್ನು ಸಾರುವಂತಿತ್ತು.

ಸ್ವಯಂ ಮೋದೀಜಿ ಅವರಿಂದ ಯೋಗ ದಿನ ಶೋಭಾಯಮಾನ

0

ಪ್ರವಾಸಿಗರನ್ನು ಆಕರ್ಷಿಸುವ ವಿಶ್ವವಿಖ್ಯಾತ ಮೈಸೂರು ಅರಮನೆ ಇಂದು ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯ ಸಮಾರಂಭ ಚರಿತ್ರಾರ್ಹ ಕ್ಷಣಗಳಿಗೆ ವೇದಿಕೆ ಆಯಿತು.

ಮೋದಿ ನೇತೃತ್ವದಲ್ಲಿ 45 ನಿಮಿಷ ಕಾಲ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ 15 ಸಾವಿರ ಜನ ಯೋಗ ಮಾಡಿ ಗಮನ ಸೆಳೆದರು.
ಮಂಗಳವಾರ ಬೆಳಗ್ಗೆ 7ರಿಂದ 7.45ರ ವರೆಗೆ ಒಟ್ಟು 19 ಆಸನಗಳು ಪ್ರದರ್ಶನಗೊಂಡವು.

ಇದರಲ್ಲಿ ಮೊದಲ ಒಂದು ನಿಮಿಷ ಪ್ರಾರ್ಥನೆ, 4 ನಿಮಿಷ ಚಲನಕ್ರಿಯೆ, 25 ನಿಮಿಷ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ-1, ಪಾದಹಸ್ತಾಸನ-2, ಅರ್ಧಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ, ಶವಾಸನ ಪ್ರದರ್ಶನ ನಡೆಯಲಿವೆ. ಬಳಿಕ 14 ನಿಮಿಷ ಪ್ರಾಣಾಯಾಮ, ಧ್ಯಾನ, ಸಂಕಲ್ಪ. ಒಂದು ನಿಮಿಷ ಶಾಂತಿಮಂತ್ರ, ಎರಡು ನಿಮಿಷ ಸಂಕಲ್ಪ… ಹೀಗೆ ಒಟ್ಟು 19 ಆಸನಗಳ ಪ್ರದರ್ಶನ ನಡೆಯಿತು.

ರಾಷ್ಟ್ರಪತಿ ಚುನಾವಣೆ: ಯಶವಂತ ಸಿನ್ಹಾ ಅಭ್ಯರ್ಥಿ?

0

ಪ್ರಸ್ತುತ ತೃಣಮೂಲ ಕಾಂಗ್ರೆಸ್‌ ಸಹ ಅಧ್ಯಕ್ಷರಾಗಿರುವ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಕೆಲವು ಪಕ್ಷಗಳ ನಾಯಕರು ನೀಡಿದ ಸಲಹೆ ಮೇರೆಗೆ ಸಿನ್ಹಾ ಅವರನ್ನು ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ನಾಯಕ ಹೇಳಿದ್ದಾರೆ.

ಕಳೆದ ವರ್ಷ ಟಿಎಂಸಿಗೆ ಸೇರ್ಪಡೆಗೊಂಡ ಬಿಜೆಪಿಯ ಮಾಜಿ ನಾಯಕನ ಹೆಸರನ್ನು ಒಂದೆರಡು ವಿರೋಧ ಪಕ್ಷಗಳು ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿ ಪ್ರಸ್ತಾಪಿಸಿವೆ. ಮತ್ತು ಬೆಂಬಲಿಸಿವೆ ಎಂದು ಹೇಳಲಾಗಿದೆ.

ಈ ಮೊದಲು, ಎನ್‌.ಸಿ.ಪಿ. ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲ್ ಕೃಷ್ಣ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಲಾಯಿತು. ಆದರೆ, ಈ ಮೂವರೂ ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ನಿರಾಕರಿಸಿದರು.

ಸಿನ್ಹಾ ಈಗ ಟಿಎಂಸಿ ನಾಯಕರಾಗಿದ್ದು, ಮೂರ್ನಾಲ್ಕು ಪಕ್ಷಗಳು ಅವರ ಹೆಸರು ಪ್ರಸ್ತಾಪಿಸಿವೆ ಎಂದು ಹಿರಿಯ ಟಿಎಂಸಿ ನಾಯಕ ಹೇಳಿದ್ದಾರೆ.

ವಿರೋಧ ಪಕ್ಷಗಳ ನಾಯಕರ ಈ ಸಭೆಯಲ್ಲಿ ಸಿನ್ಹಾ ಅವರ ಹೆಸರನ್ನು ಪರಿಶೀಲಿಸಲಾಗುವುದು. ಮಮತಾ ಬ್ಯಾನರ್ಜಿ ಕಳೆದ ವಾರ 22 ಬಿಜೆಪಿಯೇತರ ಪಕ್ಷಗಳ ಸಮಾವೇಶವನ್ನು ಆಯೋಜಿಸಿದ್ದರು. ಅದರಲ್ಲಿ 17 ಮಂದಿ ಭಾಗವಹಿಸಿದ್ದರು.
ಸಿನ್ಹಾ ಅವರು ಎರಡು ಬಾರಿ ಕೇಂದ್ರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಒಮ್ಮೆ ಚಂದ್ರಶೇಖರ್ ಸಂಪುಟದಲ್ಲಿ ಮತ್ತು ಮತ್ತೊಮ್ಮೆ ವಾಜಪೇಯಿ ಮಂತ್ರಿಮಂಡಲದಲ್ಲಿ ಹಣಕಾಸು ಸಚಿವರಾಗಿದ್ದರು. ವಾಜಪೇಯಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಷ್ಟ್ರಪತಿ ಚುನಾವಣೆಗೆ ಜುಲೈ 18 ರಂದು ಮತದಾನ ಆರಂಭವಾಗಲಿದ್ದು, ಜುಲೈ 21 ರಂದು ಫಲಿತಾಂಶ ಪ್ರಕಟವಾಗಲಿದೆ.

ಅಗ್ನಿವೀರರಿಗೆ ನೌಕರಿ ಅವಕಾಶ: ಮತ್ತೋರ್ವ ಉದ್ಯಮಿ ಭರವಸೆ

0

ಕೇಂದ್ರದ ಅಗ್ನಿಪಥ್ ಯೋಜನೆಗೆ ವ್ಯಾಪಕ ವಿರೋಧದ ನಡುವೆ ಆರ್ ಪಿ ಜಿ ಎಂಟರ್‌ ಪ್ರೈಸಸ್‌ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಅಗ್ನಿವೀರ್‌ ಗಳಿಗೆ ಉದ್ಯೋಗದ ಭರವಸೆ ನೀಡಿದ್ದಾರೆ.

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಯೋಜನೆಯ ವಿರುದ್ಧದ ಹಿಂಸಾಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿ, ಮುಂದೆ ಅಗ್ನಿವೀರರಿಗೆ ಉದ್ಯೋಗದ ಭರವಸೆ ನೀಡಿದ್ದಾರೆ.

ಇದೇ ರೀತಿಯಲ್ಲೇ ಆರ್‌.ಪಿ.ಜಿ. ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾ ಟ್ವೀಟ್ ಮಾಡಿ, ಆರ್‌.ಪಿ.ಜಿ. ಗ್ರೂಪ್ ಕೂಡ ಅಗ್ನಿವೀರ್‌ ಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಸ್ವಾಗತಿಸುತ್ತದೆ. ಈ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ಮತ್ತು ನಮ್ಮ ಯುವಕರಿಗೆ ಭವಿಷ್ಯದ ಭರವಸೆ ನೀಡಲು ಇತರ ಕಾರ್ಪೊರೇಟ್‌ಗಳು ಸಹ ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಎಂದಿದ್ದಾರೆ

ಪ್ರಧಾನಿ ಕರ್ನಾಟಕ ಭೇಟಿ: ಸಿದ್ಧರಾಮಯ್ಯ ವ್ಯಂಗ್ಯ

0

ರಾಜ್ಯದಲ್ಲಿ 2019 ಮತ್ತು 2020 ರಲ್ಲಿ ದೊಡ್ಡ ಪ್ರವಾಹ ಬಂದಾಗ ಪ್ರಧಾನಿ ಅವರು ಇಲ್ಲಿಗೆ ಬರಲಿಲ್ಲ. ನೊಂದ ಜನರಿಗೆ ಸಾಂತ್ವನ ಹೇಳಲಿಲ್ಲ. ಆದರೆ, ಈಗ ಅವರಿಗೆ ಕರ್ನಾಟಕದ ನೆನಪಾಗಿದೆ ಎಂದು ಪ್ರಧಾನಿ ಮೋದಿ ರಾಜ್ಯ ಪ್ರವಾಸದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಕೊರೋನಾ ವೇಳೆ ಮೋದಿ ರಾಜ್ಯದ ಜನರಿಗೆ ಆಕ್ಸಿಜನ್ ಕೊಟ್ಟಿದ್ದಾರಾ? ಹೈಕೋರ್ಟ್ ಹೇಳಿದರೂ ಆಕ್ಸಿಜನ್ ಕೊಟ್ಟಿರಲಿಲ್ಲ. ಸುಪ್ರೀಂಕೋರ್ಟ್ ಚಾಟಿಬೀಸಿದ ಮೇಲೆ ಕೊಟ್ಟರು. ಆಕ್ಸಿಜನ್ ಇಲ್ಲದೆ ಸಾವಿರಾರು ಜನ ಸತ್ತರು. ಚಾಮರಾಜನಗರದಲ್ಲಿ 36 ಜನ ಸಾವನ್ನಪ್ಪಿದರು.ರಾಜ್ಯದ ಬೇರೆಡೆಯೂ ಆಕ್ಸಿಜನ್ ಇಲ್ಲದೆ ಸತ್ತರು .ಇದಕ್ಕೆಲ್ಲ ಯಾರು ಕಾರಣ ? ಇದೇ ಮೋದಿಯವರು ಎಂದು ಆರೋಪಿಸಿದ್ದಾರೆ.

ತೆರಿಗೆ ಪಾಲು ರಾಜ್ಯಕ್ಕೆ ಕಡಿಮೆಯಾಗುತ್ತಿದೆ. ರಾಜ್ಯವೊಂದೇ 19 ಲಕ್ಷ ಕೋಟಿ ಹಣವನ್ನು ಕೊಟ್ಟಿದೆ.ತೆರಿಗೆ ಮೂಲಕ ಕಲೆಕ್ಟ್ ಮಾಡಿದ ಹಣ ನೀಡಿದೆ. ನಮಗೆ 45 ಸಾವಿರ ಕೋಟಿ ರೂ. ತೆರಿಗೆ ಬಾಕಿ ಬರಬೇಕು. ಆದರೆ ಬಂದಿಲ್ಲ. ಕೇಂದ್ರ ಹಣಕಾಸು ಸಚಿವರು ನಮ್ಮ ರಾಜ್ಯದವರೇ. 15 ಪೇ ಕಮಿಷನ್ ಹಣ ವನ್ನೂ ನೀಡಲಿಲ್ಲ. ರಾಜ್ಯಕ್ಕೆ ಬರುವ ಶೇ 1.07 ಹಣ ಕಡಿಮೆಯಾಯಿತು ಎಂದು ಆಪಾದಿಸಿದ್ದಾರೆ.

ಆಕ್ಸಿಜನ್ ಕೊಡುವುದಕ್ಕೆ ಆಗದವರು ಈಗ ಯೋಗ ಮಾಡುವುದಕ್ಕೆ ಬಂದಿದ್ದಾರೆ.ಆಕ್ಸಿಜನ್ ಬಗ್ಗೆ ಪ್ರಧಾನಿಯವರು ಹೇಳಬೇಕು.40 % ಕಮಿಷನ್ ಬಗ್ಗೆ ದೂರು ಕೊಟ್ಟರು ಯಾಕೆ‌ ಚೌಕಿದಾರ್ ಇಲ್ಲಿಯವರೆಗೆ ಉತ್ತರ ಕೊಟ್ಟಿಲ್ಲ ?ಸಬರ್ಬನ್ ಯೋಜನೆ ಹೇಳುತ್ತಲೇ ಬರುತ್ತಿದ್ದಾರೆ. ಅನಂತ್ ಕುಮಾರ್ ಕಾಲದಿಂದ ಹೇಳುತ್ತಿದ್ದಾರೆ.

ಆದರೆ, ಯೋಜನೆ ಮಾತ್ರ ಏನೂ ಆಗಿಲ್ಲ. ಮೋದಿಯವರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅವರ ಸರ್ಕಾರ ಕರ್ನಾಟಕದಲ್ಲಿದ್ದು, ಲೂಟಿ ಹೊಡೆಯುತ್ತಿದೆ. ಭ್ರಷ್ಟಾಚಾರ ಹೆಚ್ಚಾಗುತ್ತಿದೆ.ಇದಕ್ಕೆಲ್ಲ ಪ್ರಧಾನಿಯವರು ಅನುಮತಿ ಕೊಟ್ಟಿದ್ದಾರಾ? ಈ ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ.

ಪಾಕಿಸ್ತಾನಕ್ಕೆ ಐಎಂಎಫ್ ಜೊತೆ ಸಾಲ ಮಂಜೂರಾತಿಗೆ ಅಮೆರಿಕ ಒಪ್ಪಿಗೆ

0

ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಅಂತರ ರಾಷ್ಟ್ರೀಯ ಹಣಕಾಸು ನಿಧಿ ಜೊತೆಗೂಡಿ ಸಾಲ ನೀಡುವ ಮೂಲಕ ನೆರವಾಗಲು ಅಮೆರಿಕ ಒಪ್ಪಿಗೆ ನೀಡಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಐಎಂಎಫ್‌ ಹಾಗೂ ಪಾಕಿಸ್ತಾನ ನಡುವೆ ಅನುದಾನ ವಿಸ್ತರಣೆ ಸೌಲಭ್ಯ ಕುರಿತ ಒಪ್ಪಂದದ ಬಗ್ಗೆ ಸಿಬ್ಬಂದಿ ಮಟ್ಟದಲ್ಲಿ ಮಾತುಕತೆ ನಡೆದಿಲ್ಲ.

ಆದರೆ, ಈ ಒಪ್ಪಂದದ ಮೂಲಕ ಪಾಕಿಸ್ತಾನಕ್ಕೆ ನೆರವು ನೀಡಲು ಅಮೆರಿಕ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿದ್ದಾಗಿ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

2019 ಜುಲೈನಲ್ಲಿ ಪಾಕಿಸ್ತಾನ ಐಎಂಎಫ್‌ನಿಂದ 39 ತಿಂಗಳಲ್ಲಿ 6 ಬಿಲಿಯನ್‌ ಡಾಲರ್‌ ಇಎಫ್‌ಎಫ್‌ ಪಡೆಯುವ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಹಿಂದಿನ ಸರ್ಕಾರ ಒಪ್ಪಂದದಿಂದ ಹಿಂದೆ ಸರಿದಾಗ 3 ಬಿಲಿಯನ್‌ ಡಾಲರ್‌ ಬಟಾವಡೆಯನ್ನು ಐಎಂಎಫ್‌ ನಿಲ್ಲಿಸಿತ್ತು. ಸದ್ಯ ಈ 3 ಬಿಲಿಯನ್‌ ಡಾಲರ್‌ ಜೊತೆಗೆ ಇನ್ನೂ ಹೆಚ್ಚಿನ ಮೊತ್ತವನ್ನು ಪಡೆಯಲು ಪಾಕಿಸ್ತಾನ ನಿರ್ಧರಿಸಿದೆ.

ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

0

2021-22 ನೇ ಸಾಲಿನ ಎಸ್‌ಎಸ್ ಎಲ್ ಸಿ ಪೂರಕ ಪರೀಕ್ಷೆಯ ವೇಳಾ ಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಜೂನ್ 27 ರಿಂದ ಜುಲೈ4 ರವರೆಗೆ ಪರೀಕ್ಷೆ ನಡೆಯಲಿದೆ.

ಎಸ್‌ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಶಾಲೆಗಳು ಪ್ರವೇಶ ಪತ್ರವನ್ನು ಮಂಡಳಿಯ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಬಹುದು ಎಂದು ಮಾಹಿತಿ ನೀಡಿದೆ.

ಎಸ್‌ಎಸ್‌ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ.

ಜೂನ್ 27 ವಿಜ್ಞಾನ, ರಾಜ್ಯಶಾಸ್ತ್ರ ಕರ್ನಾಟಕ ಸಂಗೀತ ಅಥವಾ ಹಿಂದೂಸ್ಥಾನಿ ಸಂಗೀತ

ಜೂನ್ 28 ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ಸಂಸ್ಕೃತ

ಜೂನ್ 29 ದ್ವಿತೀಯ ಭಾಷೆ ಇಂಗ್ಲಿಷ್,ಕನ್ನಡ

ಜೂನ್ 30 ಸಮಾಜವಿಜ್ಞಾನ

ಜುಲೈ 1- ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಎನ್ ಎಸ್, ಕ್ಯೂ, ಎಫ್ ಪರೀಕ್ಷಾ ವಿಷಯಗಳು ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟ್ ಅಂಡ್ ವೆಲ್ ನೆಸ್

ಜುಲೈ 2 ರಂದು ಎಲಿಮೆಂಟ್‌ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಲ್ ಇಂಜಿನಿಯರಿಂಗ್ 2, ಇಂಜಿನಿಯರಿಂಗ್ ಗ್ರಾಫಿಕ್ಸ್ 2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ

ಜುಲೈ4 ಗಣಿತ, ಸಮಾಜಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

ಶ್ರೀಲಂಕಾದಲ್ಲಿ ಮಾಜಿ ಕ್ರಿಕೆಟಿಗನ ಮಾನವೀಯತೆ

0

ಶ್ರೀಲಂಕಾದ ಮಾಜಿ ಕ್ರಿಕೆಟಿಗ ರೋಶನ್ ಮಹಾನಾಮ ಪೆಟ್ರೋಲ್ ಬಂಕ್ ಮುಂದೆ ಸರದಿಯಲ್ಲಿ ನಿಂತಿರುವ ಜನರಿಗೆ ಟೀ ಹಾಗೂ ಬನ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿರುವ ಶ್ರೀಲಂಕಾದಲ್ಲಿ ಜನರು ಪ್ರತಿನಿತ್ಯ ಪೆಟ್ರೋಲ್, ಡೀಸೆಲ್, ಆಹಾರ ಸೇರಿದಂತೆ ಹಲವೆಡೆ ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಅಗತ್ಯ ವಸ್ತುಗಳಿಗೆ ಜನರು ಸರದಿಯಲ್ಲಿ ನಿಂತಿದ್ದರಿಂದ ಮಾಜಿ ಕ್ರಿಕೆಟಿಗ ಅವರಿಗೆ ನೆರವು ನೀಡುತ್ತಿದ್ದಾರೆ.

ನಾವು ಒಂದು ತಂಡವಾಗಿ ಪ್ರತಿನಿತ್ಯ ಜನರಿಗೆ ಟೀ ಬನ್ಸ್ ವಿತರಿಸುತ್ತಿದ್ದೇವೆ. ಕೆಲವು ಬಾರಿ ಸಂಜೆ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ. ಜನರು ಅಗತ್ಯ ವಸ್ತುಗಳಿಗಾಗಿ ಇಡೀ ದಿನ ರಸ್ತೆಯಲ್ಲಿ ನಿಂತಿರುವುದು ನೋಡುವುದು ಕಷ್ಟ ಎಂದು ಅವರು ಹೇಳಿದ್ದಾರೆ.

ಮೂರನೇ ವಿಶ್ವಯುದ್ಧ ಸಂಭಾವ್ಯತೆಯಿದೆ-ಸ್ಯಾಂಡರ್ಸ್ ಕರೆ

0

ಸಂಭಾವ್ಯ 3ನೇ ವಿಶ್ವಯುದ್ಧಕ್ಕೆ ಸನ್ನದ್ಧರಾಗಿರುವಂತೆ ಬ್ರಿಟನ್ ನ ಉನ್ನತ ಸೇನಾ ಜನರಲ್ ಸರ್ ಪ್ಯಾಟ್ರಿಕ್ ಸ್ಯಾಂಡರ್ಸ್ ನಿನ್ನೆ ಭಾನುವಾರ ಬ್ರಿಟಿಶ್ ಸೈನಿಕರಿಗೆ ಕರೆ ನೀಡಿದ್ದಾರೆ.

ಉಕ್ರೇನ್ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಯುರೋಪ್ ನಲ್ಲಿ ಮತ್ತೊಮ್ಮೆ ಹೋರಾಡಲು ಬ್ರಿಟಿಷ್ ಸೈನಿಕರು ಸಿದ್ಧರಾಗಿರಬೇಕೆಂದು ಅವರು ಹೇಳಿದ್ದಾರೆ.

ಜನರಲ್ ಮಾರ್ಕ್ ಕ್ಯಾರ್ಲ್ಟನ್ ಸ್ಮಿತ್ ಅವರಿಂದ ಅಧಿಕಾರವನ್ನು ಹಸ್ತಾಂತರಿಸಿಕೊಂಡ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ನಮ್ಮ ಮಿತ್ರರ ಜೊತೆಗೂಡಿ ಕಾದಾಡುವ ಮತ್ತು ಯುದ್ಧದಲ್ಲಿ ರಷ್ಯಾನ್ನರನ್ನು ಸೋಲಿಸಲು ಸಮರ್ಥವಾದಂತಹ ಸೇನೆಯನ್ನು ರೂಪಿಸುವುದು ಈಗಿನ ಜ್ವಲಂತ ಅನಿವಾರ್ಯತೆಯಾಗಿದೆ ಎಂದು ಪ್ಯಾಟ್ರಿಕ್ ತಿಳಿಸಿದ್ದಾರೆ.

1941ರಿಂದೀಚೆಗೆ ಯುರೋಪ್ ನಲ್ಲಿ ಭೂಖಂಡದ ಪ್ರಬಲ ಶಕ್ತಿಯೊಂದು ಒಳಗೊಂಡಿರುವ ಭೂಸಮರದಲ್ಲಿ ಬ್ರಿಟಿಷ್ ಸೇನೆಯ ಕಮಾಂಡ್ ವಹಿಸಿರುವ ಪ್ರಪ್ರಥಮ ಸೇನಾ ವರಿಷ್ಠ ನಾನಾಗಿದ್ದೇನೆ ಎಂದು ಜನರಲ್ ಸ್ಯಾಂಡರ್ಸ್ ತಿಳಿಸಿದ್ದಾರೆ.

56 ವರ್ಷ ವಯಸ್ಸಿನ ಸ್ಯಾಂಡರ್ಸ್ ಅವರು ಈ ಹಿಂದೆ ಉತ್ತರ ಐಯರ್ಲ್ಯಾಂಡ್, ಕೊಸೊವೊ,ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಬ್ರಿಟನ್ ಸೇನೆಯ ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದರು.

ಮಣ್ಣು ಉಳಿಸಿ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ- ಯಡಿಯೂರಪ್ಪ

0

ಇಶಾ ಫೌಂಡೇಶನ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮಣ್ಣು ಉಳಿಸಿ ಅಭಿಯಾನದ ಬೃಹತ್ ಸಮಾರಂಭ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸದ್ಗುರು ಜಗ್ಗಿ ವಾಸುದೇವ್ ಅವರ ನಡುವಿನ ಬಾಂಧವ್ಯ ನೆರೆದಿದ್ದವರ ಗಮನ ಸೆಳೆಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಜಗ್ಗಿ ವಾಸುದೇವ್ ಅವರ ಕಾಲು ಮುಟ್ಟಿ ಯಡಿಯೂರಪ್ಪ ನಮಸ್ಕರಿಸಿದ್ದಾರೆ. ಅನಂತರ, ಯಡಿಯೂರಪ್ಪ ಭಾಷಣ ಮಾಡಲು ತೆರಳುವ ಸಂದರ್ಭದಲ್ಲಿಯೂ ಸದ್ಗುರು ಕಾಲಿಗೆ ನಮಸ್ಕರಿಸಿದ್ದಾರೆ.

ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಈ ಶತಮಾನದಲ್ಲಿ ನಾವು ಕಳವಳಕಾರಿ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಪ್ರಪಂಚದಾದ್ಯಂತ ಪ್ರವಾಹ, ಅತಿವೃಷ್ಟಿ, ಪರಿಸರ ಅಸಮತೋಲನ ಹೆಚ್ಚಾಗುತ್ತಿದೆ. ನಾಗರಿಕತೆ ಹೆಚ್ಚಾಗುತ್ತಿದೆ. ಉಸಿರಾಟಕ್ಕೆ ಶುದ್ಧ ಗಾಳಿ, ನೀರೂ ಸಿಕ್ಕಿಲ್ಲ. ಗಾಳಿ, ನೀರಿಗೆ ಪರಿತಪಿಸುವ ಸನ್ನಿವೇಶ ಇದೆ ಎಂದು ವಿಷಾದಿಸಿದ್ದಾರೆ.

ಈ ಹಿಂದೆ ರಾಜರು ಸಾಮ್ರಾಜ್ಯಗಳಿಗಾಗಿ ಹೋರಾಡಿದ್ದರು. ಪೆಟ್ರೋಲ್, ಡೀಸೆಲ್, ನೀರಿಗಾಗಿ ಹೋರಾಟ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನದ ಅವಶ್ಯಕತೆ ಇದೆ. ಈ ಅಭಿಯಾನ ಸಮಯೋಚಿತವಾಗಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಿ ಮಣ್ಣು ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.

ಭಾಷಣದ ಮಧ್ಯೆ ಯಡಿಯೂರಪ್ಪಗೆ ಕೆಮ್ಮು ಬಂದಾಗ ಸದ್ಗುರು ನೀರು ತಂದುಕೊಟ್ಟರು.