Thursday, March 19, 2026
Thursday, March 19, 2026
Home Blog Page 1480

ಆರೋಪಿ ಐಎಎಸ್ ಅಧಿಕಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

0

ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಿಗೆ ಲಂಚ ಪಡೆಯುವುದೇ ನಿಯಮವಾಗಿ ಹೋಗಿದೆ ಹಾಗೂ ಇದು ಕ್ಯಾನ್ಸರ್‌ಗಿಂತ ಗಂಭೀರವಾಗಿದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಜಾಮೀನು ಕೋರಿ ಹಿಂದಿನ ಜಿಲ್ಲಾಧಿಕಾರಿ ಜೆ.
ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ, ತೀರ್ಪಿನಲ್ಲಿ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಟು ಶಬ್ದಗಳಿಂದ ಟೀಕಿಸಿದೆ.
ಮಂಜುನಾಥ್ ಹಾಗೂ ದೂರುದಾರ ಅಜಂ ಪಾಷಾ ನಡುವಿನ ಸಂಭಾಷಣೆಯನ್ನು ಪೊಲೀಸರ ಪಂಚನಾಮೆಯಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ, ದೂರುದಾರರು ಮತ್ತು ಆರೋಪಿಗಳು ಪ್ರಕರಣದ ಬಗ್ಗೆ ಚರ್ಚಿಸಿದ್ದಾರೆ ಎನ್ನುವುದು ಬಹಿರಂಗವಾಗಿದ್ದು, ದಾಖಲೆಯಲ್ಲಿ ಉಲ್ಲೇಖಿಸಿರುವಷ್ಟು ಹಣಕ್ಕೆ ಮೊದಲ ಆರೋಪಿ ಉಪ ತಹಸೀಲ್ದಾರ್ ಪಿ.ಎಸ್. ಮಹೇಶ್ ಬೇಡಿಕೆ ಇಟ್ಟಿದ್ದಾರೆ.
ಮಹೇಶ್ ಮತ್ತು ಅಜಂ ಪಾಷಾ ನಡುವಿನ ಸಂಭಾಷಣೆಯ ಡಿವಿಡಿಯನ್ನೂ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅರ್ಜಿದಾರ ಮಂಜುನಾಥ್ ಪರ ವಕೀಲರು, ಸಾಮಾನ್ಯವಾಗಿ ಜಿಲ್ಲಾಧಿಕಾರಿ ಆದೇಶ ಸಿದ್ಧಪಡಿಸಿ, ಅದನ್ನು ಅಧೀನ ಅಧಿಕಾರಿಗಳಿಗೆ ನೀಡುತ್ತಾರೆ. ಆನಂತರ ಜಿಲ್ಲಾಧಿಕಾರಿ ಆದೇಶ ಓದುತ್ತಾರೆ ಎಂದು ವಾದಿಸಿದ್ದಾರೆ. ಇದು, ಆದೇಶ ಸಿದ್ಧಪಡಿಸಿ ಓದದೇ ಇಟ್ಟುಕೊಳ್ಳುವುದು ಲಂಚಕ್ಕಾಗಿ ಬೇಡಿಕೆ ಇಡುವ ಕಂದಾಯ ಇಲಾಖೆಯ ಮೋಡಸ್ ಆಪರಂಡಿಯನ್ನು (ಕಾರ್ಯ ವಿಧಾನ) ಬಹಿರಂಗಪಡಿಸಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಮೇಲಿನ ಶ್ರೇಣಿಯಿಂದ ಕೆಳ ಹಂತದವರೆಗೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಲಂಚವಿಲ್ಲದೆ ಅಲ್ಲಿ ಯಾವುದೇ ಕಡತ ಮುಂದಕ್ಕೆ ಹೋಗುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿನ ಅಧಿಕೃತ ಕೆಲಸಗಳಿಗೆ ಲಂಚ ಪಡೆಯುವುದೇ ನಿಯಮವಾಗಿ ಹೋಗಿದ್ದು, ಇದು ಕ್ಯಾನ್ಸರ್‌ಗಿಂತ ಗಂಭೀರವಾಗಿದೆ. ಈ ಪ್ರಕರಣದಲ್ಲಿ ಎಲ್ಲ ತಿಳಿದಿದ್ದರೂ ಅರ್ಜಿದಾರ ಮಂಜುನಾಥ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ಅವರನ್ನು ಬೇರೆ ಇಲಾಖೆಗೆ ವರ್ಗಾಯಿಸಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಥಮ ಮಾಹಿತಿ ಹೇಳಿಕೆಯಲ್ಲಿ ದೂರುದಾರ ಅಜಂ ಪಾಷಾ ಅರ್ಜಿದಾರರ ಹೆಸರು ಉಲ್ಲೇಖಿಸಿದ್ದರೂ ಎಫ್‌ಐಆರ್‌ನಲ್ಲಿ ಅವರ ಹೆಸರು ಇಲ್ಲ. ಒಂದೊಮ್ಮೆ ಮಂಜುನಾಥ್‌ಗೆ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಎಲ್ಲ ಸಾಧ್ಯತೆಗಳಿದ್ದು, ಸಾಕ್ಷ್ಯ ತಿರುಚುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಆದ್ದರಿಂದ, ತನಿಖೆಗೆ ಬಾಕಿ ಇರುವ ಪ್ರಕರಣದ ಮೂರನೇ ಆರೋಪಿಯಾಗಿರುವ ಮಂಜುನಾಥ್‌ಗೆ ಜಾಮೀನು ನೀಡಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕೃತಿ ವಿಕೋಪ ತಡೆಗೆ ರಾಜ್ಯದಲ್ಲಿ ಪ್ರತ್ಯೇಕ ಮತ್ತೆರಡು ಎಸ್ಡಿಆರ್ಎಫ್ ತಂಡ

0

ರಾಜ್ಯದಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಎರಡು ಎಸ್ಡಿಆರ್‌ಎಫ್ ತಂಡಗಳನ್ನು ರಚಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಿಎಂ ಬೊಮ್ಮಾಯಿ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ, ಭೂಕುಸಿತ, ಬೆಳೆಹಾನಿ ಮೊದಲಾದ ವಿಷಯಗಳ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಈಗಾಗಲೇ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ತಂಡಗಳನ್ನು ನಿಯೋಜಿಸಿದ್ದು, ಜಿಲ್ಲಾಧಿಕಾರಿಗಳು ಈ ತಂಡದೊಂದಿಗೆ ನಿಕಟ ಸಂಪರ್ಕ ಹೊಂದಿ, ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿರಬೇಕು ಎಂದು ಸೂಚಿಸಿದರು.

ಗದಗ ಜಿಲ್ಲೆಯ ಬೆಣ್ಣಿಹಳ್ಳ, ಹಾವೇರಿ ಜಿಲ್ಲೆಯ ವರದಾ ನದಿ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.

ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡುವಾಗ ಆಣೆಕಟ್ಟುಗಳ ಕೆಳ ಭಾಗದ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಬೇಕು. ರಾಜ್ಯದ ಹಲವಾರು ಕೆರೆಗಳು ತುಂಬಿದ್ದು, ಅಪಾಯದ ಅಂಚಿನ ಕೆರೆಗಳು ಒಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಣ್ಣಿನ ಕುಸಿತ, ಭೂಕುಸಿತದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಜನರನ್ನು ಕಡ್ಡಾಯವಾಗಿ ಸ್ಥಳಾಂತರಿಸಬೇಕು. ರಸ್ತೆಗಳ ಮೇಲೆ ಭೂಕುಸಿತ ಉಂಟಾದಲ್ಲಿ ತೆರವುಗೊಳಿಸಲು ತಂಡಗಳನ್ನು ದಿನದ 24 ಗಂಟೆಯೂ ಸನ್ನದ್ಧವಾಗಿರಿಸುವಂತೆ ಸೂಚಿಸಿದರು.
ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಉತ್ತಮ ಆಹಾರ ಒದಗಿಸಬೇಕು. ಕಾಳಜಿ ಕೇಂದ್ರಕ್ಕೆ ಬರದ ನಿರಾಶ್ರಿತರಿಗೆ ಡ್ರೈ ರೇಷನ್ ಕಿಟ್ ಒದಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಇನ್ನುಮುಂದೆ ರೈಲು ಪ್ರಯಾಣದಲ್ಲಿ ಟಿಕೆಟ್ ಖಚಿತಪಡಿಸಲು HHT ಸಾಧನ

0

ಭಾರತೀಯ ರೈಲ್ವೆ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಕನ್ಫರ್ಮ್ ಆಗದ ಅಥವಾ ಆರ್ ಎಸಿ ಟಿಕೆಟ್ ಅನ್ನು ಕನ್ಫರ್ಮ್ ಮಾಡಿಸಿಕೊಡಲು TTಯ ಹಿಂದೆ ಓಡಬೇಕಾಗಿಲ್ಲ. ಟಿಟಿ ಕೈಯಲ್ಲಿ ಹಿಡಿದಿರುವ ಟರ್ಮಿನಲ್ ಸಾಧನದ ಸಹಾಯದಿಂದ ಅದಾಗಿಯೇ ಟಿಕೆಟ್ ಕನ್ಫರ್ಮ್ ಆಗಲಿದೆ.

ಭಾರತೀಯ ರೈಲ್ವೆಯು ಈ ಹಿಂದೆ ಕೆಲವು ಪ್ರೀಮಿಯಂ ರೈಲುಗಳಲ್ಲಿ ಪ್ರಾಯೋಗಿಕವಾಗಿ ಟಿಟಿಗಳಿಗೆ HHT ಸಾಧನಗಳನ್ನು ನೀಡಿತ್ತು. ಈ ಸೇವೆ ಪ್ರಯಾಣಿಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಈ ಯಶಸ್ಸಿನ ನಂತರ, ಭಾರತೀಯ ರೈಲ್ವೆಯು 559 ರೈಲುಗಳಲ್ಲಿ TT ಗೆ 5850 HHT ಸಾಧನಗಳನ್ನು ನೀಡಿದೆ. ರೈಲ್ವೇ ನೀಡಿದ ಮಾಹಿತಿಯ ಪ್ರಕಾರ, ಪ್ರೀಮಿಯಂ ರೈಲುಗಳ ಜೊತೆಗೆ ಎಲ್ಲಾ ಮೇಲ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕ್ರಮೇಣ ಸಾಧನವನ್ನು ಅಳವಡಿಸಲಾಗುವುದು.

ಚಲಿಸುತ್ತಿರುವ ರೈಲಿನಲ್ಲಿ ಒಂದು ದಿನದಲ್ಲಿ 523604 ರಿಸರ್ವೇಶನ್ ಮಾಡಲಾಗುತ್ತದೆ. ಇದರಲ್ಲಿ 242825 ಟಿಕೆಟ್‌ಗಳನ್ನು ಚಲಿಸುವ ರೈಲಿನಲ್ಲಿ HHT ಸಾಧನದೊಂದಿಗೆ ಪರಿಶೀಲಿಸಲಾಗಿದೆ. ಇವುಗಳಲ್ಲಿ 18 ಸಾವಿರಕ್ಕೂ ಹೆಚ್ಚು ಆರ್‌ಎಸಿಗಳು ಮತ್ತು ಒಂಬತ್ತು ಸಾವಿರಕ್ಕೂ ಹೆಚ್ಚು ವೇಟಿಂಗ್ ಟಿಕೆಟ್‌ಗಳನ್ನು ಖಚಿತಪಡಿಸಲಾಗಿದೆ.

ರೈಲ್ವೆ ಸಚಿವಾಲಯದ ಪ್ರಕಾರ, ಸಾಮಾನ್ಯ ದಿನಗಳಲ್ಲಿ ದಿನಕ್ಕೆ 12.5 ಲಕ್ಷ ರಿಸರ್ವೇಶನ್ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೇಲ್, ಎಕ್ಸ್‌ಪ್ರೆಸ್ ರೈಲುಗಳಲ್ಲಿ HHT ಸಾಧನಗಳೊಂದಿಗೆ ಟಿಕೆಟ್‌ಗಳನ್ನು ಪರಿಶೀಲಿಸಿದರೆ, ಕನ್ಫರ್ಮ್ ಟಿಕೆಟ್‌ಗಳ ಸಂಖ್ಯೆ ಹೆಚ್ಚಾಗುತ್ತದೆ.

ಹರ್ ಘರ್ ತಿರಂಗ ರಾಜ್ಯದ ಎಲ್ಲಾ ನ್ಯಾಯಾಲಯ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ

0

ಅಜಾದಿ ಕಾ ಅಮೃತ್‌ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ‘ಹರ್‌ ಘರ್‌ ತಿರಂಗಾ’ ಅಭಿಯಾನದ ಭಾಗವಾಗಿ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಮತ್ತು ನ್ಯಾಯಾಂಗ ಅಧಿಕಾರಿಗಳ ಮನೆಗಳಲ್ಲಿ ಆಗಸ್ಟ್‌ 13ರಿಂದ 15ರವರೆಗೆ ರಾಷ್ಟ್ರಧ್ವಜ ಹಾರಾಡಲಿದೆ.

ಹರ್‌ ಘರ್‌ ತಿರಂಗಾ ಅಭಿಯಾನದ ಭಾಗವಾಗಿ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಮತ್ತು ನ್ಯಾಯಾಂಗ ಅಧಿಕಾರಿಗಳು ಆಗಸ್ಟ್‌ 13ರಿಂದ 15ರ ನಡುವೆ ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಈ ಸಂಬಂಧ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಅವರ ಆದೇಶದಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಟಿ.ಜಿ. ಶಿವಶಂಕರೇಗೌಡ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಸಚಿವರು ಪತ್ರ ಬರೆದು, ಸ್ವಾತಂತ್ರ್ಯ ಅಮೃತ ಮಹೋತ್ಸವ ಭಾಗವಾಗಿ ಮನೆ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾಜರಿಸುವ ಅಭಿಯಾನದ ಮಾಹಿತಿ ನೀಡಿದ್ದಾರೆ .

ಭಾರತೀಯ ತ್ರಿವರ್ಣ ಧ್ವಜವು ರಾಷ್ಟ್ರೀಯ ಹೆಮ್ಮಯ ಸಂಕೇತವಾಗಿದೆ. ಧ್ವಜಕ್ಕೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅನುಷ್ಠಾನ ಸಮಿತಿಯು ಪ್ರತಿ ಭಾರತೀಯ ಪ್ರಜೆ ತನ್ನ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದಕ್ಕೆ ಪ್ರೋತ್ಸಾಹ ನೀಡಲು ಅಮೃತ ಮಹೋತ್ಸವ ಅಡಿಯ ‘ಹರ್‌ ಗರ್‌ ತಿರಂಗಾ’ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಜನರ ಹೃದಯದಲ್ಲಿ ರಾಷ್ಟ್ರಭಕ್ತಿ ಹುಟ್ಟುಹಾಕುವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವಿರತವಾಗಿ ಕೊಡುಗೆ ನೀಡಿದವರನ್ನು ಸ್ಮರಿಸಿಕೊಳ್ಳುವ ಆಲೋಚನೆ ಈ ಅಭಿಯಾನದ ಹಿಂದಿದೆ.

ಹೀಗಾಗಿ, ಆಗಸ್ಟ್‌ 13ರಿಂದ 15ರ ನಡುವೆ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅಭಿಯಾನದಲ್ಲಿ ನ್ಯಾಯಾಂಗವು ಸಕ್ರಿಯವಾಗಿ ಪಾಲ್ಗೊಂಡರೆ ಜನಮಾನಸದ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರುತ್ತದೆ ಹಾಗೂ ಅಭಿಯಾನವು ದೊಡ್ಡ ಮಟ್ಟದ ಯಶಸ್ವಿಯಾಗಲು ಸಾಧ್ಯವಾಗುತ್ತದೆ.

ಆದ್ದರಿಂದ ಹೈಕೋರ್ಟ್‌ ಹಾಗೂ ಎಲ್ಲಾ ವಿಚಾರಣಾ ನ್ಯಾಯಾಲಯಗಳಲ್ಲಿ, ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಯಲ್ಲಿ ತಿರಂಗಾ ಹಾರಿಸಲು ಪ್ರೋತ್ಸಾಹ ನೀಡುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡುವಂತೆ ಕೇಂದ್ರ ಕಾನೂನು ಸಚಿವರು ಕೋರಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಹಾಗೂ ನ್ಯಾಯಾಂಗ ಅಧಿಕಾರಿಗಳು ತಮ್ಮ ತಮ್ಮ ಮನೆಯಲ್ಲಿ ಆ.13ರಿಂದ 15ರ ನಡುವೆ ರಾಷ್ಟ್ರ ಧ್ವಜ ಹಾಜರಿಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.

ನಮ್ಮ ಕ್ಲಿನಿಕ್ ಗೆ ಲೋಗೋ ರಚಿಸಿ ಸರ್ಕಾರದ ಗೌರವ ಪಡೆಯಿರಿ

0

ರಾಜ್ಯದ ಜನತೆಯ ಆರೋಗ್ಯ ಸೇವೆಗೆ ರಾಜ್ಯ ಸರ್ಕಾರ ಶ್ರೀಘ್ರದಲ್ಲೇ ನಮ್ಮ ಕ್ಲಿನಿಕ್‌ ಅನ್ನು ಆರಂಭ ಮಾಡಲಿದೆ.

ಆದರೆ ಅದಕ್ಕೂ ಮುನ್ನವೇ ನಮ್ಮ ಕ್ಲಿನಿಕ್‌ ಜೊತೆ ಕೈ ಜೋಡಿಸಲು ಆರೋಗ್ಯ ಇಲಾಖೆ ಸುವರ್ಣಾವಕಾಶ ಮಾಡಿಕೊಟ್ಟಿದೆ.

ರಾಜ್ಯದಲ್ಲಿ ಸುಮಾರು 436 ಕಡೆಗಳಲ್ಲಿ ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ. ಇದು ರಾಜ್ಯದ ಆರೋಗ್ಯ ವ್ಯವಸ್ಥೆಗೆ ಹೊಸ ಸ್ಪರ್ಶವನ್ನು ತಂದು ಕೊಡಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ ಕಾರ್ಯಾರಂಭ ಮಾಡಲಿದೆ.

ಸರ್ಕಾರವು ‘ನಮ್ಮ ಕ್ಲಿನಿಕ್‌”ಗೆ ವಿಶಿಷ್ಟವಾದ ಗುರುತನ್ನು ಎದುರು ನೋಡುತ್ತಿದೆ. ಸೃಜನಾತ್ಮಕ ಮತ್ತು ನವೀನ ಲೋಗೋ ವಿನ್ಯಾಸ ಮಾಡಲು ರಾಜ್ಯದ ಜನತೆ ಅವಕಾಶವಿದೆ. ನಮ್ಮ ಕ್ಲಿನಿಕ್‌ನ ವಿಭಿನ್ನ ಮತ್ತು ಆಕರ್ಷಕ ಗುರುತು ಹೇಗಿರಬೇಕು ಅನ್ನುವುದನ್ನು ನೀವು ನಿರ್ಧಾರ ಮಾಡಲು ಅವಕಾಶವಿದೆ.

ಆಡಳಿತ ಮತ್ತು ಅಭಿವೃದ್ಧಿಯಲ್ಲಿ ರಾಜ್ಯದ ಜನತೆಯ ಸಕ್ರಿಯ ಭಾಗವಹಿಸುವಿಕೆಯನ್ನು ಸರ್ಕಾರ ನಿರೀಕ್ಷೆ ಮಾಡುತ್ತಿದೆ. ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ಉದ್ದೇಶವನ್ನು ಬಿಂಬಿಸುವಂತೆ ಆಕರ್ಷಕ ಲೋಗೋ ವಿನ್ಯಾಸ ಮಾಡಿ logo4nammaclinic@gmail.com ಕಳುಹಿಸಬೇಕು.

ಆಯ್ಕೆಯಾದ ವಿನ್ಯಾಸವನ್ನು ಡಿಸೈನ್‌ ಮಾಡಿದವರಿಗೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರಿಂದ ವಿಶೇಷ ವೈಯಕ್ತಿಕ ಗೌರವ ಸಿಗಲಿವೆ. ಆಗಸ್ಟ್‌ 5ರಿಂದ ಆಗಸ್ಟ್‌ 15ರ ಒಳಗೆ ಲೊಗೋ ವಿನ್ಯಾಸ ಕಳುಹಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.

ಕಾಮನ್ ವೆಲ್ತ್ ಕ್ರೀಡಾಕೂಟ: ಮುಂದುವರೆದ ಪದಕ ಬೇಟೆ

0

ಕಾಮನ್ವೆಲ್ತ್‌ ಗೇಮ್ಸ್‌ ಕುಸ್ತಿಯಲ್ಲಿ ಶುಕ್ರವಾರ ಭಾರತದ ದಿನವಾಗಿದೆ. ನಮ್ಮವರು ಭರ್ಜರಿ ಪದಕ ಬೇಟೆಯಲ್ಲಿ ತೊಡಗಿದ್ದಾರೆ.

ಬಜರಂಗ್‌ ಪುನಿಯ ಮತ್ತು ಸಾಕ್ಷಿ ಮಲಿಕ್‌ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ಅಂಶು ಮಲಿಕ್‌ ಬೆಳ್ಳಿ ಗೆದ್ದರು.

ಪುರುಷರ 65 ಕೆಜಿ ವಿಭಾಗದಲ್ಲಿ ಬಜರಂಗ್‌ ಪುನಿಯ ಸತತ 2ನೇ ಗೇಮ್ಸ್‌ ಬಂಗಾರಕ್ಕೆ ಮುತ್ತಿಟ್ಟರು. ಅವರು ಕೆನಡಾದ ಮೆಕ್‌ನೀಲ್‌ ಅವರನ್ನು 9-2 ಅಂತರದಿಂದ ಚಿತ್‌ ಮಾಡಿದರು. ಮೊದಲ ಸುತ್ತಿನಲ್ಲೇ 4-0 ಮುನ್ನಡೆ ಸಾಧಿಸಿದ ಬಜರಂಗ್‌ ಚಿನ್ನವನ್ನು ಖಾತ್ರಿಗೊಳಿಸಿದ್ದರು. ಸೆಮಿಫೈನಲ್‌ನಲ್ಲೂ ಬಜರಂಗ್‌ ಭರ್ಜರಿ ಪ್ರದರ್ಶನ ನೀಡಿ ಇಂಗ್ಲೆಂಡ್‌ನ‌ ಜಾರ್ಜ್‌ ರ್ಯಾಮ್‌ ವಿರುದ್ಧ 10-0 ಅಂತರದ ಗೆಲುವು ಸಾಧಿಸಿದ್ದರು.

ಇದಕ್ಕೂ ಮೊದಲು ನಡೆದ ವನಿತೆಯರ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಅಂಶು ಮಲಿಕ್‌ ನೈಜೀರಿಯಾದ ಒಡೊನಾಯೊ ಲಡೆಕ್ಯುರೋಯ್‌ ವಿರುದ್ಧ 4-8 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟರು. ಕಳೆದೆರಡು ಬಾರಿಯ ಚಾಂಪಿಯನ್‌ ಆಗಿರುವ ಒಡೊನಾಯೊ ಹ್ಯಾಟ್ರಿಕ್‌ ಚಿನ್ನ ಗೆದ್ದರು.
ವನಿತೆಯರ 62 ಕೆಜಿ ಫೈನಲ್‌ನಲ್ಲಿ ಸಾಕ್ಷಿ ಮಲಿಕ್‌ ಕೆನಡಾದ ಅನಾ ಗೊಂಜಾಲೆಸ್‌ ಅವರನ್ನು ಮಣಿಸಿದರು.

ಫೈನಲ್‌ಗೆ ಲಗ್ಗೆಯಿಟ್ಟ ಮತ್ತೊಬ್ಬರೆಂದರೆ ದೀಪಕ್‌ ಪುನಿಯ (86 ಕೆಜಿ). ಸೆಮಿಫೈನಲ್‌ನಲ್ಲಿ ಪರಾಭವಗೊಂಡ ಮೋಹಿತ್‌ ಗ್ರೇವಾಲ್‌ ಹಾಗೂ ದಿವ್ಯಾ ಕಕ್ರಾನ್‌ ಕಂಚಿನ ಪದಕಕ್ಕೆ ಪೈಪೋಟಿ ನಡೆಸಲಿದ್ದಾರೆ.

ದೀಪಕ್‌ ಪುನಿಯ ಅವರಿಗೆ ಸೆಮಿಫೈನಲ್‌ ಸವಾಲು ಕಠಿನವಾಗಿ ಪರಿಣಮಿಸಿತು. ಅವರು ಕೆನಡಾದ ಅಲೆಕ್ಸಾಂಡರ್‌ ಮೂರ್‌ ವಿರುದ್ಧ 3ರಿಂದ 1 ಅಂತರದಿಂದ ಗೆದ್ದು ಬಂದರು. ಪಾಕಿಸ್ಥಾನದ ಹಾಲಿ ಚಾಂಪಿಯನ್‌ ಮುಹಮ್ಮದ್‌ ಇನಾಮ್‌ ಇವರ ಫೈನಲ್‌ ಎದುರಾಳಿ.

ಡಾ.ಪುನೀತ್ ಗೆ ರಾಜ್ಯೋತ್ಸವ‌ ದಿನ ಕರ್ನಾಟಕ ರತ್ನ ಪ್ರದಾನ- ಬೊಮ್ಮಾಯಿ

0

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದಂದು ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕೃತ ಘೋಷಣೆ ಮಾಡಿದರು.

ಲಾಲ್‍ಬಾಗ್‍ನಲ್ಲಿ ಆರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಭಿಮಾನಿಗಳ ಒತ್ತಾಸೆಯಂತೆ ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನಮ್ಮ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ.

ನವೆಂಬರ್ 1ರಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತೇವೆ ಎಂದು ಹೇಳಿದರು.

ಫಲಪುಷ್ಪ ಪ್ರದರ್ಶನಕ್ಕೆ ನಿರೀಕ್ಷೆಗೂ ಮೀರಿದ ಬೆಂಬಲ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಆ.15ರವರೆಗೆ ನಡೆಯಲಿದ್ದು, ಲಕ್ಷಾಂತರ ಮಂದಿ ಆಗಮಿಸುವ ಸಾಧ್ಯತೆ ಇದೆ ಎಂದರು. ತೋಟಗಾರಿಕೆ ಇಲಾಖೆ ಸಚಿವರಾದ ಮುನಿರತ್ನ ಹಾಗೂ ಇತರ ಅಧಿಕಾರಿಗಳು ಬಹಳ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಆಯೋಜಿಸಿದರು.

ಇದಕ್ಕಾಗಿ ನಾನು ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ಲಾಲ್‍ಬಾಗ್‍ನಲ್ಲಿ ಈ ಬಾರಿ ವಿಶೇಷವಾಗಿ ನಿರ್ಮಿಸಿರುವ ವರನಟ ಡಾ.ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಅವರ ಪುಷ್ಪಾಲಂಕೃತ ಪ್ರತಿಮೆಗಳಿಗೆ ಸಿಎಂ ಬೊಮ್ಮಾಯಿ, ಸಚಿವ ಮುನಿರತ್ನ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಅಶ್ವಿನಿ ಪುನೀತ್‍ರಾಜ್‍ಕುಮಾರ್ ಸೇರಿದಂತೆ ಮತ್ತಿತರರು ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ಕೊಟ್ಟರು.

ಪ್ರಶಸ್ತಿಗಾಗಿ ಡಾ.ರಾಜ್‍ಕುಮಾರ್ ಕುಟುಂಬದ ಸದಸ್ಯರು ಹಾಗೂ ಸರ್ಕಾರದ ವತಿಯಿಂದ ಸಮಿತಿಯನ್ನು ರಚಿಸಲಾಗುವುದು. ಕಾರ್ಯಕ್ರಮ ಯಾವ ರೀತಿ ಇರಬೇಕು ಎಂಬುದು ಸೇರಿದಂತೆ ಅವರ ಸಹೋದರರ ಸಲಹೆ ಪಡೆದು ತೀರ್ಮಾನಿಸುವುದಾಗಿ ತಿಳಿಸಿದರು.

ವಿಜ್ಞಾನ ವಿಸ್ಮಯ ನರ್ಮದಾ ನದಿಯ ಮೇಲೆ‌ ತೇಲುವ ಸೌರ ವಿದ್ಯುತ್ ಸ್ಥಾವರ

0

ವಿಶ್ವದ ಅತಿ ದೊಡ್ಡ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ನರ್ಮದಾ ನದಿಯ ಮೇಲೆ ನಿರ್ಮಿಸಲು ನಿರ್ಧರಿಸಲಾಗಿದೆ. ಮಧ್ಯಪ್ರದೇಶ ಸರಕಾರ ಈ ಯೋಜನೆಯ ಮೊದಲ ಹಂತದ ಗುತ್ತಿಗೆಗೆ ಗುರುವಾರ ಸಹಿ ಹಾಕಿದೆ.

ಈ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ನರ್ಮದಾ ನದಿಗೆ ಕಟ್ಟಲಾದ ಓಂಕಾರೇಶ್ವರ ಅಣೆಕಟ್ಟಿನ ಹಿನ್ನೀರಿನಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಇದು ವಿಶ್ವದ 10 ತೇಲುವ ಸೌರ ವಿದ್ಯುತ್ ಸ್ಥಾವರಗಳಲ್ಲಿ ಅತಿ ದೊಡ್ಡದಾಗಿದೆ.

2027ರ ಒಳಗೆ ಮಧ್ಯಪ್ರದೇಶದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 20,000 ಮೆಗಾ ವ್ಯಾಟ್‌ಗಳು ಆಗಲಿವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ.

ಮಧ್ಯಪ್ರದೇಶ ಭಾರತದ ಹೃದಯವಾಗಿದೆ. ಶ್ವಾಸಕೋಶವನ್ನಾಗಿ ಮಾಡುವ ಪಥದಲ್ಲಿ ರಾಜ್ಯ ಸರಕಾರ ಇದೆ. ಭಾರತದ ಎಲ್ಲ ಬದ್ಧತೆಗಳನ್ನು ಪೂರೈಸಲು ಹಾಗೂ ಗ್ಲಾಸ್‌ಗೋದಲ್ಲಿ ನಡೆದ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಪಂಚಾಮೃತ ಮಂತ್ರಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಕೊಡುಗೆಯನ್ನು ಮಧ್ಯಪ್ರದೇಶ ನೀಡಲಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

ಈ ಯೋಜನೆಗೆ ಯಾವುದೇ ರೀತಿಯ ಭೂಮಿಯ ಅಗತ್ಯತೆ ಇಲ್ಲ. ಜನರನ್ನು ಸ್ಥಳಾಂತರಗೊಳಿಸುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ನೀರಿನ ಮೇಲ್ಮೈಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸುವುದರಿಂದ ನೀರು ಆವಿಯಾಗಲಾರದು. ಇದರಿಂದ ಶೇ. 60ರಿಂದ 70 ನೀರು ಉಳಿತಾಯವಾಗಲಿದೆ. ಇದು ಭೋಪಾಲದ ಜನತೆಯ 124 ದಿನದ ಕುಡಿಯುವ ನೀರಿಗೆ ಸಮವಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ಸೌರ ಫಲಕ ಸ್ಥಾಪಿಸುವುದರಿಂದ ನೀರಿನಲ್ಲಿ ಪಾಚಿಗಳ ಬೆಳವಣಿಗೆ ಕಡಿಮೆಯಾಗಲಿದೆ. ಅಲ್ಲದೆ, ನೀರು ಕುಡಿಯಲು ಯೋಗ್ಯವಾಗಲಿದೆ ಎಂದು ಚೌಹಾಣ್ ಅವರು ತಿಳಿಸಿದ್ದಾರೆ.

ಈ ಯೋಜನೆಯ ಮೂಲಕ 12 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಾರ್ಬನ್ ಡಯಾಕ್ಸೈಡ್ ಹೊರ ಸೂಸುವುದನ್ನು ತಡೆಯಬಹುದು. ಇದು 52 ಲಕ್ಷ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ ಎಂದು ಅವರು ತಿಳಿಸಿದ್ದಾರೆ.

10 ವರ್ಷಗಳಿಂದಿರುವ ಕೈದಿಗಳನ್ನ ಬಿಡುಗಡೆಮಾಡಲು ಕ್ರಮ ಕೈಗೊಳ್ಳಿ-ಸುಪ್ರೀಂ ಸೂಚನೆ

0

ಕಳೆದ 10 ವರ್ಷಗಳಿಂದ ಜೈಲಿನಲ್ಲಿರುವ ಕೈದಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಎಸ್‌.ಕೆ.ಕೌಲ್‌ ಮತ್ತು ಎಂ.ಎಂ.ಸುಂದರೇಶ್‌ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಹತ್ತು ವರ್ಷಗಳ ಕಾಲ ಜೈಲಿನಲ್ಲಿದ್ದು ನಿತ್ರಾಣಗೊಂಡಿರುವ ಕೈದಿಗಳನ್ನು ಜಾಮೀನು ಆಧಾರದಲ್ಲಿ ಬಿಡುಗಡೆ ಮಾಡಬೇಕು.

14 ವರ್ಷಗಳ ಕಾಲ ಜೈಲಿನಲ್ಲಿರುವ ಕೈದಿಗಳ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಬೇಕು ಎಂದು ತಿಳಿಸಿದೆ. ಸಾಧ್ಯವಾದರೆ ಶಿಕ್ಷೆ ಕಡಿತಕ್ಕೆ ಏಕರೂಪ ನೀತಿಯನ್ನು ಜಾರಿ ಮಾಡಬಹುದು ಎಂದು ಸಲಹೆ ನೀಡಿದೆ.

ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಕೈದಿಗಳನ್ನು 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಾದರೂ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದೆ.

ಫ್ರಾನ್ಸ್ ಭೀಕರ ಬರಗಾಲ ಎದುರಿಸುತ್ತಿದೆ-ಪ್ರಧಾನಿ ಬೋರ್ನ್

0

ಫ್ರಾನ್ಸ್ ದೇಶವು ಈ ಬಾರಿ ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿದೆ ಎಂದು ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬೋರ್ನ್ ಎಚ್ಚರಿಸಿದ್ದಾರೆ.

ಇದರ ನಿರ್ವಹಣೆಗೆ ಸರ್ಕಾರಿ ಬಿಕ್ಕಟ್ಟು ನಿರ್ವಹಣಾ ಘಟಕವನ್ನು ಸಕ್ರಿಯಗೊಳಿಸುವುದಾಗಿ ತಿಳಿಸಿದ್ದಾರೆ.

ಈ ವರ್ಷದ ಬೇಸಿಗೆಯ ವೇಳೆ ಫ್ರಾನ್ಸ್‌ನಲ್ಲಿ 3ನೇ ಬಾರಿಗೆ ಬಿಸಿಗಾಳಿಯ ಅಲೆ ಮುಂದುವರಿದಿದೆ. ದೇಶದ ಅನೇಕ ಪ್ರದೇಶಗಳು ಬರಪೀಡಿತವಾಗಿವೆ. ಅನೇಕ ಪ್ರದೇಶಗಳು ನೀರಿನಿಂದ ವಂಚಿತವಾಗಿವೆ. ಇದರಿಂದ ನಮ್ಮ ರೈತರು, ನಮ್ಮ ಪರಿಸರ ವ್ಯವಸ್ಥೆ ಮತ್ತು ಜೀವ ವೈವಿಧ್ಯತೆ ತೊಂದರೆಗೀಡಾಗಿವೆ ಎಂದು ಬೋರ್ನ್ ಶುಕ್ರವಾರ ತಮ್ಮ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.