Friday, March 20, 2026
Friday, March 20, 2026
Home Blog Page 1475

ಸಿ ಎ ಫೌಂಡೇಷನ್ ಅರ್ಹತಾಪರೀಕ್ಷೆ: ಕ್ರಿಯೇಟಿವ್ ಕಾಲೇಜಿನ ಮೂವರು ತೇರ್ಗಡೆ

0

ಸಿ.ಎ ಫೌಂಡೇಶನ್‌ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನ 3 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ನಡೆಸುವ ಸಿ.ಎ (C.A) ಫೌಂಡೇಶನ್‌ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಶ್ವಿತಾ, ಅಮರ್‌ ಎ ಎಂ ಹಾಗೂ ಅಭಿಷೇಕ್‌ ಲಕ್ಷ್ಮಣ್‌ ನಾಯ್ಕ್‌ ಇವರು ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ಪ್ರಥಮ ವರ್ಷದ ಸಿ. ಎ ಫೌಂಡೇಶನ್‌ ಫಲಿತಾಂಶದಲ್ಲಿಯೇ ಅರ್ಹತೆ ಪಡೆದಿರುವುದು ಪ್ರಶಂಸನೀಯ.

ಮುಂದಿನ ಸಿ.ಎ ಮತ್ತು ಸಿ.ಎಸ್‌.ಇ.ಇ.ಟಿ ಪರೀಕ್ಷೆಯನ್ನು ಗುರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.

ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಅಶ್ವಿತಾ, ಅಮರ್‌ ಎ ಎಂ ಹಾಗೂ ಅಭಿಷೇಕ್‌ ಲಕ್ಷ್ಮಣ್‌ ನಾಯ್ಕ್‌ ಇವರನ್ನು ಸಂಸ್ಥೆಯ ಪ್ರಾಂಶುಪಾಲರು, CA ಫೌಂಡೇಶನ್‌ ಸಂಯೋಜಕರಾದ ರಾಘವೇಂದ್ರ ಬಿ ರಾವ್‌, ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

ಗಮನಿಸಿ ರಾಜ್ಯದ ನಾಲ್ಕು ಇಂಜಿನಿಯರಿಂಗ್ ಕಾಲೇಜಿಗೆ VTU ಮಾನ್ಯತೆ ಇಲ್ಲ

0

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದ ಜೊತೆಗೆ ಸಿಇಟಿ ಫಲಿತಾಂಶವೂ ಈಗಾಗಲೇ ಪ್ರಕಟಗೊಂಡಿದೆ. ಹೀಗಾಗಿ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಕೋರ್ಸ್ ಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಇದರ ಮಧ್ಯೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ.

ಅಗತ್ಯ ಮೂಲ ಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳ ಮಾನ್ಯತೆಯನ್ನು ರದ್ದುಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಪ್ರವೇಶ ಪಡೆಯದಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಈ ಕಾಲೇಜುಗಳಲ್ಲಿ ಸೀಟು ಹಂಚಿಕೆ ಮಾಡದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮನವಿ ಮಾಡಿದೆ.

ಮಾನ್ಯತೆ ಕಳೆದುಕೊಂಡಿರುವ ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಇಲ್ಲಿದೆ. ಕಾರವಾರದ ಗಿರಿಜಾಬಾಯಿ ಸೈಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರಿನ ಅಚ್ಯುತಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೆಜಿಎಫ್ ನ ಶ್ರೀ ವಿನಾಯಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ತಿಪಟೂರಿನ ಶ್ರೀ ಬಸವೇಶ್ವರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಾನ್ಯತೆ ಕಳೆದುಕೊಂಡಿವೆ.

ರಾಜ್ಯಪಾಲರಿಂದ ಸ್ವಾತಂತ್ರ್ಯಹೋರಾಟಗಾರರ ಮನೆಗೆ ಭೇಟಿ: ಸನ್ಮಾನ

0

ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂದು ಒತ್ತಾಯಿಸಿದ ಕ್ವಿಟ್ ಇಂಡಿಯಾ ಚಳವಳಿಯ 80ನೇ ವರ್ಷಾಚರಣೆ ಹಾಗೂ ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವ ಭಾಗವಾಗಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ನಿನ್ನೆ ಬೆಂಗಳೂರಿನಲ್ಲಿರುವ ಮೂವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಭೇಟಿ ನೀಡಿ ಅವರನ್ನು ಗೌರವಿಸಿದರು.

ರಾಜ್ಯಪಾಲರು ಮೊದಲಿಗೆ ಜೆ.ಪಿ.ನಗರದಲ್ಲಿರುವ ಆರ್.ನಾರಾಯಣಪ್ಪ ಅವರ ಮನೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ನಂತರ ಶಂಕರನಾರಾಯಣ ರಾವ್ ಅವರನ್ನು ಬನಶಂಕರಿಯಲ್ಲಿರುವ ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ರಾಜ್ಯಪಾಲರು 101 ವರ್ಷದ ನಾಗಭೂಷಣ ರಾವ್ ಅವರನ್ನು ಮಲ್ಲೇಶ್ವರಂನಲ್ಲಿರುವ ಅವರ ಮನೆಯಲ್ಲಿ ಸನ್ಮಾನಿಸಿದರು. ನಾಗಭೂಷಣ್ ನಾಸ್ಟಾಲ್ಜಿಕ್ ಆಗಿ ತಿರುಗಿ ತಮ್ಮ ಸ್ವಾತಂತ್ರ್ಯ ಹೋರಾಟದ ದಿನಗಳ ಉಪಾಖ್ಯಾನಗಳನ್ನು ನೆನಪಿಸಿಕೊಂಡರು. ಅವರು ಬ್ರಿಟಿಷ್ ರಾಜ್ ವಿರುದ್ಧದ ಅಸಹಕಾರ ಚಳವಳಿಯ ಭಾಗವಾಗಿದ್ದರು. ರಸ್ತೆಗಳನ್ನು ಅಗೆದು, ಟೆಲಿಫೋನ್ ತಂತಿಗಳನ್ನು ಕತ್ತರಿಸಿದರು, ಸ್ವಾತಂತ್ರ್ಯ ಚಳವಳಿಗೆ ಜನರನ್ನು ಪ್ರೋತ್ಸಾಹಿಸಿದ್ದರು.

ನಾಗಭೂಷಣ್ ರಾವ್ ಎರಡು ಬಾರಿ ಜೈಲುವಾಸ ಅನುಭವಿಸಿದರು — 1942 ರಲ್ಲಿ ಒಮ್ಮೆ ಶಿವಮೊಗ್ಗ ಜೈಲಿನಲ್ಲಿ ಮತ್ತು ಮುಂದಿನ ಬಾರಿ 1945 ರಲ್ಲಿ ಮತ್ತು ಬೆಂಗಳೂರು ಜೈಲಿನಲ್ಲಿ ಬಂಧಿಯಾದರು. ರಾಜ್ಯಪಾಲರು ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಹೋಗಿ ಸನ್ಮಾನಿಸಿದ್ದು, ಇದುವರೆಗೆ ಸ್ವಾತಂತ್ರ್ಯ ಹೋರಾಟಗಾರರನ್ನು ರಾಜಭವನಕ್ಕೆ ಆಹ್ವಾನಿಸಿ ಚಹಾಕೂಟ ಏರ್ಪಡಿಸುತ್ತಿದ್ದರು.

ನಮ್ಮ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕುಟುಂಬಗಳನ್ನು ಅವರ ನಿಸ್ವಾರ್ಥ ಸಮರ್ಪಣೆ ಮತ್ತು ತ್ಯಾಗಕ್ಕಾಗಿ ಗೌರವಿಸುವುದು ಮತ್ತು ಸೇವೆ ಮಾಡುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯ ಹೋರಾಟಗಾರರಿಲ್ಲದೆ ನಮ್ಮ ದೇಶದ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಆಚರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ರಾಜ್ಯಪಾಲರ ಭೇಟಿಯ ವೇಳೆ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮತ್ತು ಆರ್.ಅಶೋಕ, ಜಿಲ್ಲಾಧಿಕಾರಿ ಶ್ರೀನಿವಾಸ್ ಮತ್ತು ಇತರ ಅಧಿಕಾರಿಗಳು ಜೊತೆಗಿದ್ದರು.

ತೀರ್ಥಹಳ್ಳಿಯಲ್ಲಿ ನವೀಕೃತ ಸರ್ಕಾರಿ ಆಸ್ಪತ್ರೆ ಬಗ್ಗೆ ಗೃಹಸಚಿವರ ಶ್ಲಾಘನೆ

0

ಕಟ್ಟಡ, ಸುಸಜ್ಜಿತ ಚಾವಣಿ, ಯಂತ್ರೋಪಕರಣ, ಆಕ್ಸಿಜನ್‌ ಪ್ಲಾಂಟ್‌ ಸೌಲಭ್ಯ ಒದಗಿಸಿ ವೈದ್ಯಕೀಯ ಕಾರ್ಯಕ್ಷಮತೆ ಹೆಚ್ಚಿಸಲಾಗುತ್ತಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ತೀರ್ಥಹಳ್ಳಿ ಪಟ್ಟಣದ ಜಯಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆಯಲ್ಲಿ 1.50 ಕೋಟಿ ರೂಪಾಯಿ ವೆಚ್ಚದಲ್ಲಿ 25 ಹಾಸಿಗೆಯ ಐಸಿಯು ಘಟಕ, ಮಳೆಯಿಂದ ಸೋರುತ್ತಿದ್ದ ಆಸ್ಪತ್ರೆಯ ಚಾವಣಿ ಉದ್ಘಾಟಿಸಿ ಮಾತನಾಡಿದರು.

ಆಸ್ಪತ್ರೆಯ ಪರಿವರ್ತನೆಯಿಂದ ಬಡವರು, ದಲಿತರು, ಕೂಲಿಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದವರಿಗೂ ಉತ್ತಮ ಚಿಕಿತ್ಸೆ ಸಿಗಲಿದೆ. ತಾಲ್ಲೂಕು ಕಚೇರಿ, ಸರ್ಕಾರಿ ಆಸ್ಪತ್ರೆಯ ಉನ್ನತೀಕರಣಕ್ಕೆ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಶೇಷ ಆದ್ಯತೆಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಯಿ ಮಕ್ಕಳ ಆಸ್ಪತ್ರೆ ತಾಲ್ಲೂಕಿಗೆ ಮಂಜೂರು ಮಾಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಜೆಸಿ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಉತ್ತಮ ಸೇವಾ ಮನೋಭಾವದಿಂದ ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ, ಅಧ್ಯಕ್ಷೆ ಶಬನಮ್,‌ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ವೈದ್ಯಾಧಿಕಾರಿ ನಟರಾಜ್‌, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಗಣೇಶ ಭಟ್, ಡಾ. ನಾರಾಯಣ ಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ನಾಗರಾಜ್ ಶೆಟ್ಟಿ, ಸಂದೇಶ್ ಜವಳಿ ಉಪಸ್ಥಿತರಿದ್ದರು.

ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಬಮವರ್ಣರಂಜಿತ ತೆರೆ

0

ಬ್ರಿಟನ್ನಿನ ಬರ್ಮಿಂಗ್ಹ್ಯಾಮ್ ನಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿದ್ದ 22ನೇ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸೋಮವಾರ ತಡ ರಾತ್ರಿ ತೆರೆ ಬಿದ್ದಿದೆ. ಈ ಕ್ರೀಡಾಕೂಟದಲ್ಲಿ ಭಾರತೀಯರು ಭರ್ಜರಿ ದರ್ಶನ ನೀಡಿದ್ದು, ಪದಕಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿದೆ.

ಸೋಮವಾರ ನಡೆದ ಸಮಾರೋಪ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಭಾರತೀಯ ಮೂಲದ ಸಂಗೀತಗಾರ ಸ್ಟೀವನ್ ಕಪೂರ್ ವಿವಿಧ ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ ಭಾಂಗ್ರಾ ನೃತ್ಯ ಎಲ್ಲರ ಗಮನ ಸೆಳೆದಿದೆ.

22ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 72 ದೇಶಗಳಿಂದ 4500 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಮುಂದಿನ ಕ್ರೀಡಾಕೂಟ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ 2026 ಕ್ಕೆ ನಡೆಯಲಿದೆ. ಹೀಗಾಗಿ ಕಾಮನ್ವೆಲ್ತ್ ಧ್ವಜವನ್ನು ವಿಕ್ಟೋರಿಯಾ ರಾಜ್ಯದ ಪ್ರತಿನಿಧಿಗೆ ಹಸ್ತಾಂತರಿಸಲಾಗಿದೆ.

ಹೊಸಪೇಟೆಯಲ್ಲಿ ದೇಶದ ಅತಿ ಎತ್ತರದ ಧ್ವಜಸ್ಥಂಭ

0

ರಾಜ್ಯದ 31ನೇ ಜಿಲ್ಲೆಯಾಗಿ ಉದಯಿಸಿರುವ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲಿ ದೇಶದಲ್ಲೇ ಮೊದಲ ಬಾರಿಗೆ 405 ಅಡಿ ಎತ್ತರದ ರಾಷ್ಟ್ರ ಧ್ವಜಸ್ತಂಭ ತಲೆಯೆತ್ತಲಿದ್ದು, ಈ ಕುರಿತ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಜಗತ್ತಿನ ಜನಮನ ಸೆಳೆದ ಹಂಪಿ ಸ್ಮಾರಕಗಳನ್ನು ಹೊಂದಿದ್ದ ಹೊಸಪೇಟೆ ಇದೀಗ ದೇಶದಲ್ಲಿ ಮೊದಲ, ವಿಶ್ವದಲ್ಲಿ 9ನೇ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭದ ಹೆಗ್ಗಳಿಕೆ ಪಾತ್ರವಾಗಲಿದೆ.

ಹಾಲಿ ಬೆಳಗಾವಿಯ ಕೋಟೆಕೆರೆ ಪ್ರದೇಶದಲ್ಲಿರುವ 110 ಮೀಟರ್‌ ಎತ್ತರದ ಧ್ವಜಸ್ತಂಭ ದೇಶದ ಅತಿದೊಡ್ಡ ಧ್ವಜಸ್ತಂಭ ಎಂಬ ದಾಖಲೆಗೆ ಪಾತ್ರವಾಗಿತ್ತು. ಇದೀಗ ಹೊಸಪೇಟೆಯಲ್ಲಿ ನಿರ್ಮಿಸಲಾಗುತ್ತಿರುವ ಧ್ವಜಸ್ತಂಭ ಅದಕ್ಕಿಂತಲೂ 13 ಮೀಟರ್‌ ಹೆಚ್ಚು ಎತ್ತರವಿರಲಿದೆ.

ದೇಶದ ಅತೀ ಎತ್ತರದ ಧ್ವಜಸ್ತಂಭ ನಿರ್ಮಿಸುವ ಸಲುವಾಗಿ ಹೊಸಪೇಟೆ ನಗರದ ಹೃದಯಭಾಗದಲ್ಲಿನ ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ 2-3 ತಿಂಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಧ್ವಜಸ್ತಂಭದ ಕಟ್ಟೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕಳೆದ ಮೂರು ದಿನಗಳಿಂದ ಧ್ವಜಸ್ತಂಭ ಅಳವಡಿಸುವಕಾರ್ಯ ಭರದಿಂದ ಸಾಗಿದ್ದು, ಆ. 15ರಂದು ತ್ರಿವರ್ಣ ಧ್ವಜ ಹಾರಲಿದೆ.

ಈ ಅತೀ ಎತ್ತರದ ಧ್ವಜಸ್ತಂಭ ನಿರ್ಮಿಸುವ ರೂವಾರಿ ವಿಜಯನಗರ ಶಾಸಕ, ಪ್ರವಾಸೋದ್ಯಮ ಸಚಿವ ಬಿ.ಎಸ್‌. ಆನಂದ್‌ಸಿಂಗ್‌ ಅವರು. ಈ ಧ್ವಜಸ್ಥಂಭ 6 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಲಿದೆ.

ಚುನಾವಣಾ ಸಂದರ್ಭದಲ್ಲಿ ಪಕ್ಷಗಳು ನೀಡಿದ ಉಚಿತ ಭರವಸೆಗಳು ಊರ್ಜಿತವಿಲ್ಲ

0

ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನೀಡಿದ ಉಚಿತವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿರುದ್ಧ ಇಂದು ಅರ್ಜಿ ಸಲ್ಲಿಸಿದೆ. ಉಚಿತ ನೀರು, ವಿದ್ಯುತ್ ಮತ್ತು ಸಾರಿಗೆ ಸೌಲಭ್ಯಗಳನ್ನ ಒದಗಿಸುವುದಾಗಿ ಚುನಾವಣಾ ಸಮಯದಲ್ಲಿ ನೀಡಿದ ಭರವಸೆಗಳು ಉಚಿತ ಅಡಿಯಲ್ಲಿ ಬರುವುದಿಲ್ಲ ಎಂದು ಅದು ಹೇಳಿದೆ.

ಅಸಮಾನ ಸಮಾಜದಲ್ಲಿ ಉಚಿತ ನೀರು, ವಿದ್ಯುತ್ ಮತ್ತು ಸಾರಿಗೆ ಸೌಲಭ್ಯಗಳನ್ನ ಒದಗಿಸುವುದು ಅತ್ಯಗತ್ಯ ಎಂದು ಹೇಳಿದರು.

ಭಾರತದ ಸಂವಿಧಾನದ 19ನೇ ವಿಧಿಯ ಪ್ರಕಾರ, ಉಚಿತ ವಿದ್ಯುತ್, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಮತ್ತು ರಾತ್ರಿಯಲ್ಲಿ ಬಡವರಿಗೆ ಶಿಬಿರಗಳನ್ನ ಸ್ಥಾಪಿಸುವ ಬಗ್ಗೆ ಭಾಷಣ ಮಾಡುವುದು ಮತ್ತು ಚುನಾವಣೆಯ ಸಮಯದಲ್ಲಿ ಭರವಸೆಗಳನ್ನ ನೀಡುವುದು ಎಎಪಿಯ ಹಕ್ಕು. ಹಾಗಾಗಿ ಚುನಾವಣೆ ಸಂದರ್ಭದಲ್ಲಿ ಉಚಿತ ವಿದ್ಯುತ್, ನೀರು, ಸಾರಿಗೆ ಸೌಲಭ್ಯದ ಭರವಸೆ ನೀಡಬಾರದು ಎಂಬ ನಿಬಂಧನೆ ತರುವುದು ಸರಿಯಲ್ಲ ಎನ್ನಲಾಗಿದೆ. ಅರ್ಜಿದಾರರು ಚುನಾವಣಾ ಭರವಸೆಗಳಿಂದ ಸಾಮಾಜಿಕ ಮತ್ತು ಕಲ್ಯಾಣ ಕಾರ್ಯಸೂಚಿಯನ್ನು ತೆಗೆದುಹಾಕಲು ಮತ್ತು ಜಾತಿ ಹಾಗೂ ಧಾರ್ಮಿಕ ಭರವಸೆಗಳನ್ನು ನೀಡಲು ಬಯಸುತ್ತಾರೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ಕ್ರಮಗಳು ಶ್ರೀಮಂತರನ್ನು ಶ್ರೀಮಂತರನ್ನಾಗಿಸುವುದಾಗಿದೆ ಎಂದು ಹೇಳಿದೆ.

ಅಂದ ಹಾಗೆ, ಈ ನಡುವೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಘೋಷಿಸಿದ ಉಚಿತಗಳ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಚುನಾವಣೆಗೂ ಮುನ್ನ ಮತದಾರರಿಗೆ ಆಮಿಷ ಒಡ್ಡುವ ಉಚಿತ ಭರವಸೆಗಳು ಗಂಭೀರ ಸಮಸ್ಯೆಯಾಗಿದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. ಆದರೆ, ದೆಹಲಿ ಸಿಎಂ ಕೇಜ್ರಿವಾಲ್ ಉಚಿತ ಶಿಕ್ಷಣ, ವಿದ್ಯುತ್ ಮತ್ತು ನೀರು ನೀಡುವುದು ಅಪರಾಧ ಎಂಬ ವಾತಾವರಣವನ್ನ ನಿರ್ಮಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೆಲವರ 10 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದರು.

ಕೊಡಗು ಬೆಳಗಾವಿ ,ಚಿಕ್ಕಮಗಳೂರು ಜಿಲ್ಲೆಗಳು ಮಳೆಯಿಂದ ಅಸ್ತವ್ಯಸ್ತ

0

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕರ್ತೋಜಿ ಬಳಿ ರಾಷ್ಟ್ರೀಯ ಹೆದ್ದಾರಿ 275 ರ ಬದಿಯಲ್ಲಿ ಇರುವ ಬೆಟ್ಟದಲ್ಲಿ ಭಾರೀ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಮದೆನಾಡಿನಿಂದ ಸಂಪಾಜೆವರೆಗೆ ಎಲ್ಲಾ ವಾಹನಗಳಿಗೆ ರಾತ್ರಿ ಸಂಚಾರವನ್ನು ರಾತ್ರಿ 9 ರಿಂದ ಬೆಳಿಗ್ಗೆ 6.30 ರವರೆಗೆ ಕೊಡಗು ಜಿಲ್ಲಾಡಳಿತ ನಿಷೇಧಿಸಿದೆ.

ಬೆಳಗಾವಿ ಹಾಗೂ ಖಾನಾಪುರ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವರುಣನ ಅಬ್ಬರ ಮುಂದುವರಿದಿದೆ. ಅನೇಕ ಬಡಾವಣೆಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಅದೃಷ್ಠವಶಾತ್ ಕುಟುಂಬವೊಂದು ಅಪಾಯದಿಂದ ಪಾರಾಗಿದೆ.

ಬೆಳಗಾವಿಯಲ್ಲಿ ಮಳೆಯಿಂದ ಅನೇಕ ಬಡಾವಣೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಜಮೀನುಗಳು ಜಲಾವೃತಗೊಂಡಿವೆ. ಬೆಳಗಾವಿ ನಗರದಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಮಳೆಯ ಅಬ್ಬರಿಸುತ್ತಿದ್ದು, ನಗರದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಶ್ಲೇಷಮಳೆ ಅಬ್ಬರಿಸುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನಮಟ್ಟ ಏರಿಕೆಯಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ನಿರಂತರ ಮಳೆಯಿಂದ ಜನರು ತೊಂದರೆಗೆ ಸಿಲುಕಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಭೂಕುಸಿತವಾಗಿದ್ದ ಬೆಟ್ಟದ ಸ್ಥಳದಲ್ಲೇ ಮತ್ತೆ ಭಾರೀ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಬೆಟ್ಟ ಕುಸಿದು ರಾಷ್ಟ್ರೀಯ ಹೆದ್ದಾರಿ ಬಂದ್ ಆಗುವ ಆತಂಕ ಎದುರಾಗಿದೆ.

ಮಡಿಕೇರಿಯಲ್ಲಿ ಮಳೆ ಮಣ್ಣುಕುಸಿತಜನತೆಯಲ್ಲಿ ಆತಂಕ

0

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಗ್ರಾಮದ ಗುಡ್ಡ ಪ್ರದೇಶದಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡಿದೆ. ಇದರಿಂದ ಮಣ್ಣು ಕುಸಿತದೊಂದಿಗೆ ಸಂಪರ್ಕ ಕಡಿತದ ಆತಂಕ ಎದುರಾಗಿದೆ.

ಕಳೆದ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಮಡಿಕೇರಿ ಸಮೀಪದ ಮದೆನಾಡು ಗ್ರಾಮದ ಕರ್ತೋಜಿ ಎಂಬಲ್ಲಿ, ರಸ್ತೆ ಪಕ್ಕದ ಗುಡ್ಡದಲ್ಲಿ ಭಾರೀ ಬಿರುಕು ಮೂಡಿದೆ.
ಅಲ್ಪಸ್ವಲ್ಪ ಕುಸಿತವೂ ಸಂಭವಿಸಿದೆ. ಮಳೆಯ ಪ್ರಮಾಣ ಹೆಚ್ಚಿದಲ್ಲಿ ಯಾವುದೇ ಕ್ಷಣದಲ್ಲೂ ಮಣ್ಣು ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
ಮಹಾಮಳೆಯೊಂದಿಗೆ ಪ್ರಾಕೃತಿಕ ವಿಕೋಪಗಳು ಘಟಿಸಿದ 2018ನೇ ಸಾಲಿನಲ್ಲಿ ಈಗ ಬಿರುಕು ಬಿಟ್ಟಿರುವ ಬೆಟ್ಟ ಪ್ರದೇಶದಲ್ಲೆ ಭಾರೀ ಪ್ರಮಾಣದ ಭೂ ಕುಸಿತವುಂಟಾಗಿ, ರಾಷ್ಟ್ರೀಯ ಹೆದ್ದಾರಿ ಕುಸಿದು ಸಂಪರ್ಕ ಕಡಿತಗೊಂಡಿತ್ತು.

ಇದೀಗ ಮತ್ತೆ ಇದೇ ಪ್ರದೇಶದ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಶಾಸಕ ಕೆ.ಜಿ.ಬೋಪಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಹೆದ್ದಾರಿ ಬಳಿ ಮಣ್ಣು ಕುಸಿಯುವ ಸಾಧ್ಯತೆ ಇದ್ದು, ಈ ಸಂಬಂಧ ಮುನ್ನೆಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ವಿದ್ಯುತ್ ಮಾರ್ಗ ಬದಲಿಸಲಾಗುತ್ತಿದೆ ಎಂದರು.

ಹೆದ್ದಾರಿಯಲ್ಲಿ ಮಣ್ಣು ಕುಸಿದರೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಾರಿಗೆ ಸಂಪರ್ಕಕ್ಕೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಮಳೆಯ ನಡುವೆಯೂ ಸೆಸ್ಕ್ ಇಲಾಖೆಯ ಸಿಬ್ಬಂದಿಗಳು ವಿದ್ಯುತ್ ಮಾರ್ಗವನ್ನು ಬದಲಾಯಿಸಿದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್, ಹೆದ್ದಾರಿ ವಿಭಾಗದ ಸಹಾಯಕ ಎಂಜಿನಿಯರ್ ಮುರುಗೇಶ್ ಇತರರು ಇದ್ದರು.

ಮಡಿಕೇರಿ- ಸಂಪಾಜೆ ರಸ್ತೆಯಲ್ಲಿ ಆ.9 ರಾತ್ರಿಯಿಂದ ಆ.10 ರ ಬೆಳಗ್ಗೆ 6.30 ರವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಪ್ರವಾಹಕ್ಕೆ ಕಾರು ಕೊಚ್ಚಿಹೋದ ಪ್ರಸಂಗ

0

ಚಿಕ್ಕ ಮಂಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮಳೆಯಿಂದ ಹಲವು ಅವಾಂತರಗಳು ಸಂಭವಿಸಿದ್ದು, ಒಬ್ಬ ವ್ಯಕ್ತಿ ಜೀವ ಕಳೆದು ಕೊಂಡಿದ್ದಾರೆ.

ಈ ಬಾರಿಯ ಮುಂಗಾರಿನ ಅಬ್ಬರಕ್ಕೆ ಚಿಕ್ಕಮಗಳೂರಿನಲ್ಲಿ ಒಟ್ಟು ಮೂರು ಮಂದಿ ಪ್ರಾಣ ಕಳೆದುಕೊಂಡಂತಾಗಿದೆ.
ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರೊಂದು ಕೊಚ್ಚಿ ಹೋದ ಪರಿಣಾಮ ಚಾಲಕ ಪ್ರಸನ್ನ (51) ಮೃತ ಪಟ್ಟಿರುವ ಘಟನೆ ಎನ್ ಆರ್ ಪುರ ತಾಲೂಕಿನ ಸಾತ್ಕೊಳ ಗ್ರಾಮದಲ್ಲಿ ನಡೆದಿದೆ.

ಅರಿಶಿಣಗೆರೆಯ ಪ್ರಸನ್ನ ಅವರು ಸಂಬಂಧಿಕರ ಮನೆಗೆ ಶ್ರಾವಣ ಪೂಜೆ ಕಾರ್ಯಕ್ರಮಕ್ಕೆಂದು ಹೋಗುವಾಗ ಕಾರು ಸಮೇತ ಹಳ್ಳಕ್ಕೆ ಬಿದ್ದಿದ್ದಾರೆ. ರಭಸವಾಗಿ ನೀರು ಹರಿಯುತ್ತಿದ್ದ ಕಾರಣ ನೂರಾರು ಮೀಟರ್​ನಷ್ಟು ದೂರ ಕಾರು ಕೊಚ್ಚಿಕೊಂಡು ಹೋಗಿದೆ.

ಸ್ಥಳೀಯರು ಹಳ್ಳದಲ್ಲಿ ಬಿದ್ದಿದ್ದ ಕಾರನ್ನು ಕಂಡು ಪೊಲೀಸರ ಗಮನಕ್ಕೆ ತಂದಿದ್ದು, ನಂತರ ಮೇಲೆತ್ತಲಾಗಿದೆ. ಪ್ರಸನ್ನ ಅವರ ಮೃತ ದೇಹ ಕಾರಿನಲ್ಲಿ ಪತ್ತೆಯಾಗಿದೆ.ಈ ಹಿಂದೆ ಚಿಕ್ಕಮಗಳೂರು ತಾಲೂಕು ಹೊಸಪೇಟೆಯ ಶಾಲಾ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಇನ್ನೂ ಆಕೆ ಪತ್ತೆಯಾಗಿಲ್ಲ. ಮತ್ತೊಂದು ಪ್ರಕರಣದಲ್ಲಿ ಕಳಸ ತಾಲೂಕಿನ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಯುವತಿಯೊಬ್ಬಳು ಮೃತ ಪಟ್ಟಿದ್ದರು.

ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕುಟುಂಬಸ್ಥರಿಗೆ ಪರಿಹಾರ ವಿತರಿಸಿದೆ.