ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕರ್ತೋಜಿ ಬಳಿ ರಾಷ್ಟ್ರೀಯ ಹೆದ್ದಾರಿ 275 ರ ಬದಿಯಲ್ಲಿ ಇರುವ ಬೆಟ್ಟದಲ್ಲಿ ಭಾರೀ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಮದೆನಾಡಿನಿಂದ ಸಂಪಾಜೆವರೆಗೆ ಎಲ್ಲಾ ವಾಹನಗಳಿಗೆ ರಾತ್ರಿ ಸಂಚಾರವನ್ನು ರಾತ್ರಿ 9 ರಿಂದ ಬೆಳಿಗ್ಗೆ 6.30 ರವರೆಗೆ ಕೊಡಗು ಜಿಲ್ಲಾಡಳಿತ ನಿಷೇಧಿಸಿದೆ.
ಬೆಳಗಾವಿ ಹಾಗೂ ಖಾನಾಪುರ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವರುಣನ ಅಬ್ಬರ ಮುಂದುವರಿದಿದೆ. ಅನೇಕ ಬಡಾವಣೆಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಅದೃಷ್ಠವಶಾತ್ ಕುಟುಂಬವೊಂದು ಅಪಾಯದಿಂದ ಪಾರಾಗಿದೆ.
ಬೆಳಗಾವಿಯಲ್ಲಿ ಮಳೆಯಿಂದ ಅನೇಕ ಬಡಾವಣೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಜಮೀನುಗಳು ಜಲಾವೃತಗೊಂಡಿವೆ. ಬೆಳಗಾವಿ ನಗರದಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಮಳೆಯ ಅಬ್ಬರಿಸುತ್ತಿದ್ದು, ನಗರದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಶ್ಲೇಷಮಳೆ ಅಬ್ಬರಿಸುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನಮಟ್ಟ ಏರಿಕೆಯಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ನಿರಂತರ ಮಳೆಯಿಂದ ಜನರು ತೊಂದರೆಗೆ ಸಿಲುಕಿದ್ದಾರೆ.
ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಭೂಕುಸಿತವಾಗಿದ್ದ ಬೆಟ್ಟದ ಸ್ಥಳದಲ್ಲೇ ಮತ್ತೆ ಭಾರೀ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಬೆಟ್ಟ ಕುಸಿದು ರಾಷ್ಟ್ರೀಯ ಹೆದ್ದಾರಿ ಬಂದ್ ಆಗುವ ಆತಂಕ ಎದುರಾಗಿದೆ.