Friday, March 20, 2026
Friday, March 20, 2026
Home Blog Page 1466

ರಾಜ್ಯದಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿ- ಬೊಮ್ಮಾಯಿ

0

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಬೇಕು. ಈ ದೃಷ್ಟಿಯಿಂದ ಪರಿಣಾಮಕಾರಿ ಪ್ರಚಾರ ಕಾರ್ಯ ಹಾಗೂ ಪ್ರವಾಸಿ ತಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ರಾಜ್ಯದ ಆರ್ಥಿಕ ಪ್ರಗತಿಗೆ ಹಾಗೂ ಸಾಂಸ್ಕೃತಿಕವಾಗಿಯೂ ಪ್ರವಾಸೋದ್ಯಮ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಿಳಿಸಿದರು.

ಆಯವ್ಯಯದಲ್ಲಿ ಘೋಷಿಸಿದಂತೆ ಮೈಸೂರು- ಬೇಲೂರು-ಹಳೇಬೀಡು ಹಾಗೂ ಹಂಪಿ- ಬಾದಾಮಿ- ಐಹೊಳೆ-ಪಟ್ಟದಕಲ್ಲು ಪ್ರವಾಸೋದ್ಯಮ ಸಕ್ಯುìಟ್‌ಗಳನ್ನು ಶೀಘ್ರವೇ ಅಭಿವೃದ್ಧಿಪಡಿಸಿ, ದಸರಾ ವೇಳೆಗೆ ಮೈಸೂರು ಸರ್ಕ್ಯುಟ್‌ ಹಾಗೂ ದೀಪಾವಳಿ ವೇಳೆಗೆ ಹಂಪಿ ಸರ್ಕ್ಯುಟ್‌ ಉದ್ಘಾಟನೆಗೆ ಸಿದ್ಧವಾಗಬೇಕೆಂದು ಸೂಚಿಸಿದರು. ಈ ಸರ್ಕ್ಯುಟ್‌ ನಲ್ಲಿ ಸಾಹಸ ಕ್ರೀಡೆ ಹಾಗೂ ಮನರಂಜನಾ ಚಟುವಟಿಕೆಗಳನ್ನೂ ಸೇರ್ಪಡೆಗೊಳಿಸುವಂತೆ ತಿಳಿಸಿದರು.

ಕಡಲ ತೀರದಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಉತ್ತೇಜಿಸಲು ಸಿಆರ್‌ಝಡ್‌ ಮಾನದಂಡಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಅನುಮೋದನೆ ಪಡೆಯಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ರಾಜ್ಯದಲ್ಲಿ ಕಾಳಿ ನದಿ, ಆಲಮಟ್ಟಿ ಹಾಗೂ ಕಾವೇರಿ ನದಿ ಪ್ರದೇಶಗಳಲ್ಲಿ ಜಲಮಾರ್ಗಗಳನ್ನು ರೂಪಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ರಾಜ್ಯದ 10-12 ಕೆರೆಗಳ ಬಳಿ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ, ಚಾರಣಕ್ಕೆ ಉತ್ತೇಜನ ಮೊದಲಾದ ಕ್ರಮ ಕೈಗೊಳ್ಳುವ ಮೂಲಕ ವಿದೇಶಿ ಪ್ರವಾಸಿಗರಷ್ಟೇ ಅಲ್ಲ, ಸ್ಥಳೀಯ ಪ್ರವಾಸಿಗರನ್ನೂ ಆಕರ್ಷಿಸಬೇಕೆಂದು ತಿಳಿಸಿದರು.

ಇದರಿಂದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ. ಬೀದರ್‌ ಹಾಗೂ ಕಲಬುರಗಿ ಕೋಟೆಗಳ ಪುನರುಜ್ಜೀವನಕ್ಕೆ ಕ್ರಮ ವಹಿಸಲಾಗುತ್ತಿದ್ದು, ಇದರೊಂದಿಗೆ ಸುರಪುರ ಕೋಟೆಯನ್ನೂ ಸೇರ್ಪಡೆಗೊಳಿಸುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶ

0

ರಾಜ್ಯ ಸರ್ಕಾರವು 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದೆ.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರನ್ನು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೇಲ್ವಕುಮಾರ್ ಅವರನ್ನು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

ಅರ್ಚನಾ ಅವರನ್ನು ಹಾಸನ ಡಿಸಿಯಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ಡಿಪಿಎಆರ್ ಕಾರ್ಯದರ್ಶಿ ವಿ.ಪೊನ್ನುರಾಜ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಇನ್ನು ಆಹಾರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರಿಗೆ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಥಾನ, ಸೆಲ್ವಕುಮಾರ್ ಅವರಿಗೆ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆ ಹೆಚ್ಚುವರಿಯಾಗಿ ನೀಡಲಾಗಿದೆ.
ಹಾಸನ ಜಿಲ್ಲಾಧಿಕಾರಿ ಗಿರೀಶ್ ಅವರನ್ನು ಕೆಐಎಡಿಬಿಸಿಇಒ, ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ವರ್ಗಾಯಿಸಲಾಗಿದೆ.

ಕೆಸಿಎಸ್ಆರ್ ನಿಯಮದಡಿ ಮುಖ್ಯಶಿಕ್ಷಕರಿಗೆ ಮುಂಬಡ್ತಿ ಕೌನ್ಸೆಲಿಂಗ್ ದಿನಾಂಕ ಪ್ರಕಟ

0

ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-ಬಿ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳನ್ನು ಕೆಸಿಆರ್ ನಿಯಮದಡಿ ಶಿಕ್ಷಣಾಧಿಕಾರಿ ವೃಂದಕ್ಕೆ ಮುಂಬಡ್ತಿ ನೀಡೋದಕ್ಕೆ ಕೌನ್ಸಿಲಿಂಗ್ ದಿನಾಂಕವನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದು, ದಿನಾಂಕ 04-08-2022ರಂದು ಇಲಾಖಾ ಮುಂಬಡ್ತಿ ಸಮಿತಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಗ್ರೂಪ್-ಬಿ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳನ್ನು ಗ್ರೂಪ್-ಎ ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1958ರ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲು ಅನುವಾಗುವಂತೆ, ಕೌನ್ಸಿಲಿಂಗ್ ಮೂಲಕ ಭರ್ತಿ ಮಾಡಲು ಶೈಕ್ಷಣಿಕ ಆಡಳಿತ ಹಿತದೃಷ್ಠಿಯಿಂದ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

ಈ ಕೌನ್ಸಿಲಿಂಗ್ ಪ್ರಕ್ರಿಯೆಗೆ ಅರ್ಹ ಅಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಎಲ್ಲಾ ಅಧಿಕಾರಿಗಳು ದಿನಾಂಕ 23-08-2022ರಂದು ಬೆಳಿಗ್ಗೆ 10.30ಕ್ಕೆ ಶಿಕ್ಷಕರ ಸದನ, ಕೆಜಿ ರಸ್ತೆ, ಬೆಂಗಳೂರು ಇಲ್ಲಿ ನಡೆಯಲಿರುವ ಕೌನ್ಸಿಲಿಂಗ್ ಪ್ರಕ್ರಿಯೆಗೆ ಕಡ್ಡಾಯವಾಗಿ ಹಾಜರಾಗುವಂತೆ ತಿಳಿಸಿದ್ದಾರೆ.

ಕನ್ನಡಪರ ಸಂಘಟನೆ ಅಧ್ಯಕ್ಷರಿಗೆ ಕದಂಬ ರತ್ನ ಪ್ರಶಸ್ತಿ

0

ಬನವಾಸಿ ತಾಲೂಕಿನ ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ ಅವರಿಗೆ ರಾಜ್ಯ ಕನ್ನಡ ಪರ ಸಂಘಟನೆ ಕದಂಬ ಸೈನ್ಯ ವತಿಯಿಂದ ‘ಕದಂಬರತ್ನ ಪ್ರಶಸ್ತಿ – 2022’ ನೀಡಿ ಗೌರವಿಸಿದೆ.
ಜುಲೈ 26ರಂದು ಮಂಡ್ಯದಲ್ಲಿ ನಡೆದ ಕನ್ನಡ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಘೋಷಿಸಲಾಗಿತ್ತು.
ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಅವರು ಕಾನಳ್ಳಿ ಅವರ ಮನೆಗೆ ಬಂದು ಈ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
ಈ ಹಿಂದೆ ಎಂಟು ವರ್ಷಗಳ ಕಾಲ ಉದಯ್ ಕಾನಳ್ಳಿ ಅವರು ಸಂಘಟನೆಯ ರಾಜ್ಯ ಸಂಚಾಲಕರಾಗಿ ಕೆಲಸ ಮಾಡಿದ್ದರು.
ಉದಯಕುಮಾರ್ ಕಾನಳ್ಳಿ ಅವರ ಕುರಿತು ಮಾತನಾಡಿದ ರಾಜ್ಯಾಧ್ಯಕ್ಷ ರಮೇಶ್ ಅವರು, ಕನ್ನಡ ಪರ ಸಂಘಟನೆ ಕಟ್ಟುವಲ್ಲಿ ಮತ್ತು ಬೆಳೆಸುವಲ್ಲಿ ಕಾನಳ್ಳಿ ಅವರು ನಿರಂತರವಾಗಿ ಶ್ರಮಿಸಿದ್ದಾರೆ. ಇವರ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದರು.

ಉದಯ್ ಕಾನಳ್ಳಿ ಅವರ ಸಾಮಾಜಿಕ ಸೇವೆ , ಕನ್ನಡಪರ ಕಾರ್ಯಗಳನ್ನು ಮನಗಂಡು ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ರಾಜ್ಯ ಸಮಿತಿ ಸದಸ್ಯ ಮಹಾದೇವ್ ಸ್ವಾಮಿ ಮೈಸೂರ್ ಗುತ್ಯಪ್ಪ ಮಾದರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲೆಯ ನಾಲ್ಕು ಅದ್ಭುತಗಳಿಗೆ ನೀವೀಗ ವೋಟ್ ಮಾಡಬೇಕು

0

ವಿಶ್ವದ ಏಳು ಅದ್ಭುತಗಳು ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಈಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದೆ. ಈ ವಿಶೇಷ ಅಭಿಯಾನದಲ್ಲಿ ನೀವು ಪಾಲ್ಗೊಂಡು ಶಿವಮೊಗ್ಗದ ಅದ್ಭುತಗಳನ್ನು ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಿಸುವ ಸುವರ್ಣಾವಕಾಶವಿದೆ.

ಶಿವಮೊಗ್ಗ ಜಿಲ್ಲೆಯ ನಾಲ್ಕು ಸ್ಥಳಗಳು ಈಗಾಗಲೇ ಕರ್ನಾಟಕದ ನೂರು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ನಾಲ್ಕು ಸ್ಥಳಗಳಿಗೆ ವೋಟ್ ಮಾಡುವ ಮೂಲಕ ನೀವು ಇವುಗಳನ್ನು ರಾಜ್ಯದ ಅದ್ಭುತವನ್ನಾಗಿ ಮಾಡಬಹುದು.
.ಈಗಾಗಲೇ

https://www.7wondersofkarnataka.com ನಾಮನಿರ್ದೇಶನಗೊಂಡಿರುವ ನೂರು ಅದ್ಭುತಗಳ ಸಾಲಿನಲ್ಲಿ ನಿಂತಿರುವ ಶಿವಮೊಗ್ಗದ ಈ ನಾಲ್ಕು ಸ್ಥಳಗಳ ಪೈಕಿ ನಿಮ್ಮ ಆಯ್ಕೆಯ ಸ್ಥಳಕ್ಕೆ ತಲಾ 10 ವೋಟ್ ಮಾಡಿ ಇವನ್ನು ರಾಜ್ಯದ ಏಳು ಅದ್ಭುತಗಳನ್ನಾಗಿಸಬಹುದು.

ಶಿವಮೊಗ್ಗದ ನಾಮ ನಿರ್ದೇಶನಗಳು

ರಾಜ, ರಾಕೆಟ್, ರೋರರ್, ಲೇಡಿ ಎಂಬ ಶರಾವತಿಯ ನಾಲ್ಕು ಧಾರೆಗಳು ಅಬ್ಬರಿಸಿ ಭೋರ್ಗರೆಯುವ ಜಗತ್ಪಸಿದ್ಧ

ಜೋಗ ಜಲಪಾತ. ಸಹ್ಯಾದ್ರಿ ಶ್ರೇಣಿಯ ಮಳೆಕಾಡಿನಲ್ಲಿರುವ ಸಮುದ್ರಮಟ್ಟದಿಂದ 1354 ಮೀಟರ್ ಎತ್ತರದಲ್ಲಿರುವ ಚಾರಣಿಗರ ನೆಚ್ಚಿನ ತಾಣ ಕೊಡಚಾದ್ರಿ ಬೆಟ್ಟ, ದಕ್ಷಿಣದ ಚಿರಾಪುಂಜಿ ಎಂಬ ಹಿರಿಮೆ ಹೊಂದಿದ್ದ ಅದ್ಭುತ ಪ್ರಕೃತಿ ಸೌಂದರ್ಯದ, ಸೂರ್ಯಾಸ್ತ ವೀಕ್ಷಣೆಗೂ ಪ್ರಸಿದ್ಧವಾದ ತಾಣ ಆಗುಂಬೆ ಘಾಟಿ. 1500 ವರ್ಷ ಹಳೆಯ, ಹಮ್ಮಿಡಿಗಿಂತಲೂ ಪುರಾತನವಾದ ಶಾಸನ ತಾಳಗುಂದ ಶಿಲಾ ಶಾಸನ.

ಪ್ರಸ್ತುತ 100 ಅದ್ಭುತಗಳ ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಅತಿ ಹೆಚ್ಚು ವೋಟ್ ಪಡೆದ ಸ್ಥಳಗಳು ಮುಂದಿನ ಹಂತದಲ್ಲಿ ಅಂತಿಮ 49ರ ಪಟ್ಟಿಗೆ ಬರಲಿವೆ. ತದನಂತರ ಅಂತಿಮ 21ರ ಪಟ್ಟಿಯಲ್ಲಿ ಉಳಿದು ಬಳಿಕ ಪ್ರವಾಸೋದ್ಯಮ ಇಲಾಖೆ ತಜ್ಞರ ಸಮಿತಿಯ ಆಯ್ಕೆಯಂತೆ ಕರ್ನಾಟಕದ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಬಹುದು. ಹೀಗಾಗಿ ಶಿವಮೊಗ್ಗ ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಪಾಲಿನ ಹತ್ತು ವೋಟ್‌ಗಳನ್ನು ತಮ್ಮ ನೆಚ್ಚಿನ ಸ್ಥಳಕ್ಕೆ ನೀಡಬಹುದು.ಜತೆಗೆ ಸ್ನೇಹಿತರು, ಕುಟುಂಬ ಸದಸ್ಯರೂ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬಹುದು.

ಏನಿದು ಅಭಿಯಾನ?

ಪ್ರಪಂಚದ ಏಳು ಅದ್ಭುತಗಳನ್ನು ಎಂದೋ ಹುಡುಕಿಯಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ‘ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್’ ಸಂಸ್ಥೆಯು ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಈ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ.

ವೋಟಿಂಗ್ ನಿಯಮ:

ಆಯ್ಕೆಯಾಗಿರುವ ನೂರು ಅದ್ಭುತಗಳಿಗೂ ವೋಟ್ ಹಾಕಬಹುದು.

• ಪ್ರತಿಯೊಂದು ಅದ್ಭುತಕ್ಕೂ ಹತ್ತು ವೋಟ್ ಮಾಡಲು ಅವಕಾಶವಿರುತ್ತದೆ

• ಈ ಮೆಗಾ ಅಭಿಯಾನದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ತಿಳಿಸಿ

ತನ್ಮೂಲಕ ನಿಮ್ಮ ಜಿಲ್ಲೆಯ ಸ್ಥಳವನ್ನು ಅದ್ಭುತವನ್ನಾಗಿಸಿ

ದೂರವಾಣಿ ಸಂಪರ್ಕ ಕಾಲುಸಂಕ ನಿರ್ಮಾಣಕ್ಕೆ ಸಂಸದ ರಾಘವೇಂದ್ರ ಮನವಿ

0

ಕೇಂದ್ರ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸ್ಥಾಯಿ ಸಮಿತಿ ದಿನಾಂಕ 20.08.2022ರಂದು ಬೆಂಗಳೂರಿಗೆ ಭೇಟಿ ನೀಡಿದ್ದು, ಈ ಸಭೆಯಲ್ಲಿ ಸಮಿತಿಯ ಸದಸ್ಯರಾದ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ರವರು ಭಾಗವಹಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೂರವಾಣಿ ಸಂಪರ್ಕ, ಅಂಗನವಾಡಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸುವ ಬಗ್ಗೆ ಹಾಗೂ ಕಾಲುಸಂಕಗಳ ( ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಿ ಕೂಡಲೇ ಈ ವಿಷಯಗಳ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರವನ್ನು ನೀಡುವ ಬಗ್ಗೆ ವಿನಂತಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಇಲಾಖೆಗಳ ಮುಖ್ಯಸ್ಥರು, ರಾಜ್ಯ ಲೀಡ್ ಬ್ಯಾಂಕಿನ ಮುಖ್ಯಸ್ಥರಾದ ಕೆನರಾ ಬ್ಯಾಂಕು, ಯೂನಿಯನ್ ಬ್ಯಾಂಕ್ ಮುಖ್ಯಸ್ಥರು ಹಾಗೂ ಇತರ ಅಧಿಕಾರಿಗಳೊಂದಿಗೆ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಟಾನದ ಬಗ್ಗೆ ಸಹ ಚರ್ಚಿಸಲಾಯಿತು. ಹಾಗೂ ರಾಜ್ಯದ ವಿವಿಧ ಕೈಗಾರಿಕೋಧ್ಯಮದವರೊಂದಿಗೆ ಸಿ.ಎಸ್.ಆರ್. ಫಂಡ್ ಅನ್ನು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬಳಸುವ ಬಗ್ಗೆ ಸಹ ಚರ್ಚಿಸಲಾಯಿತು.

ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ಪ್ರತಾಪ್ ರಾವ್ ಜಾಧವ್, ಸಮಿತಿಯ ಇತರ ಸಂಸತ್ ಸದಸ್ಯರು, ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ವಂದಿತಾ ಶರ್ಮ ಮತ್ತು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್ ಕೆ ಅತಿಕ್ ಮತ್ತಿತರೆ ಅಧಿಕಾರಿಗಳು ಭಾಗವಹಿಸಿದ್ದರು.

ಶಿವಮೊಗ್ಗ ತಾಲೂಕಿನಾದ್ಯಂತ ಸೆ.144 ಜಾರಿಮಾಡಿದ ಜಿಲ್ಲಾಧಿಕಾರಿ

0

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಭಾವಚಿತ್ರದ ಫಿಕ್ಸ್ ಹಾಕುವ ಸಂಬಂಧ ಶಿವಮೊಗ್ಗ ನಗರದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಅಳವಡಿಸಿದ ವೀರ ಸಾವರ್ಕರ್ ಫ್ಲೆಕ್ಸ್ ನ್ನು ತೆಗೆದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲೂಕಿನಾದ್ಯಂತ ದಿನಾಂಕ 18-08-2022ರ ರಾತ್ರಿ 10 ಗಂಟೆಯಿಂದ ದಿನಾಂಕ 20-08-2022ರ ಬೆಳಿಗ್ಗೆ 6 ವರೆಗೆ ಉಲ್ಲೇಖ (2)ರಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿತ್ತು. ಶಿವಮೊಗ್ಗದ ಪ್ರಸ್ತುತ ಪರಿಸ್ಥಿತಿಯನ್ನ ಅವಲೋಕಿಸಿ ಸಾರ್ವಜನಿಕರ ಶಾಂತಿ ಮತ್ತು ಕಾನೂನು ವ್ಯವಸ್ಥೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಶಿವಮೊಗ್ಗ ತಾಲೂಕಿನಾದ್ಯಂತ ಸಿ ಆರ್ ಪಿ ಸಿ ಕಲಂ 144ರ ನ್ವಯ ಪ್ರತಿಬಂಧಕಾಜ್ಞೆಯನ್ನು ಆಗಸ್ಟ್ 20ರಿಂದ ಆ. 23ರವರೆಗೆ ವಿಸ್ತರಿಸಲಾಗಿದೆ ಎಂದು ಡಾ. ಸೆಲ್ವಮಣಿ ಅವರು ತಿಳಿಸಿದ್ದಾರೆ.

ಅವರ ಆದೇಶದ ಪ್ರಕಾರ ಐದು ಹಾಗೂ ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನ ನಿಷೇಧಿಸಲಾಗಿದೆ. ಯಾವುದೇ ಮೆರವಣಿಗೆ, ಸಭೆ ,ಸಮಾರಂಭ ಗಳು, ವಿಜಯೋತ್ಸವ ಹಾಗೂ ಸಾರ್ವಜನಿಕ ಪ್ರತಿಭಟನಾ ಮೆರವಣಿಗೆ, ಜಾಥಾ, ಧರಣಿ, ಸಾರ್ವಜನಿಕ ಅಥವಾ ರಾಜಕೀಯ ಸಮಾರಂಭಗಳನ್ನ ನಡೆಸುವಂತಿಲ್ಲ. ಚಿತ್ರಮಂದಿರಗಳನ್ನೂ ಸಹ ರಾತ್ರಿ 10ಗಂಟೆಯ ಒಳಗೆ ಬಂದ್ ಮಾಡಬೇಕು.ಅಂಗಡಿ ಮುಂಗಟ್ಟುಗಳನ್ನು ರಾತ್ರಿ 8ಗಂಟೆಯ ಒಳಗೆಮುಚ್ಚ ಬೇಕು ಎಂದು ಡಾ. ಸೆಲ್ವ ಮಣಿ ಅವರು ಮಾಹಿತಿ ನೀಡಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಜನ್ಮದಿನ ಗಣ್ಯರೆಲ್ಲರ ಗೌರವಾರ್ಪಣೆ

0

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಗಣ್ಯರು ಅವರ ಸ್ಮರಣೆ ಮಾಡಿ, ಗೌರವ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಾಬರ್ಟ್‌ ವಾದ್ರಾ ಸೇರಿದಂತೆ ಕುಟುಂಬಸ್ಥರು ಹಾಗೂ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಪಿ.ಚಿದಂಬರಂ, ಮಲ್ಲಿಕಾರ್ಜುನ ಖರ್ಗೆ ಅವರು ಸಮಾಧಿ ಸ್ಥಳ ವೀರ ಭೂಮಿಗೆ ತೆರಳಿ ಗೌರವ ನಮನ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಗಣ್ಯರು ರಾಜೀವ್ ಗಾಂಧಿ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ.

ನಮ್ಮ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಜನ್ಮದಿನದ ಅಂಗವಾಗಿ ನಮನ ಸಲ್ಲಿಸುತ್ತೇವೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಅಪ್ಪ, ನೀವು ಪ್ರತಿ‌ಕ್ಷಣವೂ ನನ್ನೊಂದಿಗಿದ್ದೀರಿ, ನನ್ನ ಹೃದಯದಲ್ಲಿ ನೆಲೆಸಿದ್ದೀರಿ. ಈ‌ ದೇಶಕ್ಕಾಗಿ ನೀವು ಕಂಡ ಕನಸನ್ನು ಸಾಕಾರಗೊಳಿಸಲು ನಾನು ನಿರಂತರವಾಗಿ ಪ್ರಯತ್ನಿಸುತ್ತೇನೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಸಂಪರ್ಕ ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ರಾಂತಿ, ಮತದಾನದ ವಯಸ್ಸು 18ಕ್ಕೆ ಇಳಿಕೆ, ಪಂಚಾಯತ್ ರಾಜ್ ವ್ಯವಸ್ಥೆ, ಸಾಮೂಹಿಕ ಲಸಿಕಾ ಅಭಿಯಾನ. ಸಾಧನೆಗಳ ಮೂಲಕ ಜನಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹುಟ್ಟುಹಬ್ಬದ ದಿನ ಗೌರವ ಮತ್ತು ಕೃತಜ್ಞತೆಯಿಂದ ಸ್ಮರಿಸೋಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ರೈತ ತನ್ನ ಬೆಳೆಯನ್ನು ಹಳ್ಳಿ ಮತ್ತು ದಿಲ್ಲಿಯಲ್ಲಿ ಮಾರುವಂತಾಗಬೇಕು- ಕೃಷಿಸಚಿವ

0

ರೈತರನ್ನು ರೈತ ರಫ್ತುದಾರರನ್ನಾಗಿ ಮಾಡಿ ರೈತ ಶಕ್ತಿಶಾಲಿಯಾಗಿ ಲಾಭವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರೈತರು ರಫ್ತುದಾರರಾಗಲು ಎಕ್ಸ್ಪೋರ್ಟ್ ಲ್ಯಾಬ್ ಆರಂಭಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಸಮಾವೇಶಕ್ಕೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಐದು ರೈತರ ಎಕ್ಸ್ಪೋರ್ಟ್ ಲ್ಯಾಬ್‌ಗಳನ್ನು ಗುರುತಿಸಲಾಗಿದೆ.

ಇಂಡಿ ಹನುಮನಮಟ್ಟಿ ನಾಗೇನಹಳ್ಳಿ ವರದಗೇರಾ ಬನವಾಸಿಗಳಲ್ಲಿ ರಫ್ತುದಾರರ ಲ್ಯಾಬ್ ಆರಂಭಿಸಲು ಗುರುತಿಸಲಾಗಿದೆ ಎಂದರು.

ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು.ಪ್ರೊಸೆಸ್ ಇಂಡಸ್ಟ್ರಿಯಿಂದ ರೈತ ಲಾಭ ಹೊಂದಬೇಕು.
ಅಪೆಡಾದ ಡಿಜಿಎಂ ನಮ್ಮ ಕರ್ನಾಟಕದವರೇ ಇದ್ದಾರೆ.ಬಾಂಬೆಯಲ್ಲಿ ರಫ್ತುದಾರರನ್ನು ನೋಡಿ ನಮ್ಮಲ್ಲಿಯೂ ರೈತರ್ಯಾಕೆ ರಫ್ತುದಾರರಾಗಬಾರದೆಂದು ಚಿಂತನೆ ನಡೆಸಲಾಯಿತು.

ಎಕ್ಸ್ಪೋರ್ಟ್ ಮಾಡಲು ಫುಡ್ ಯುನಿಟ್‌ಗಳನ್ನು ಬಳಸಿಕೊಳ್ಳಬೇಕು.
ಜನಸಂಖ್ಯೆ ಹೆಚ್ಚಿದಂತೆ ಅನ್ನ ಉಣ್ಣುವವರ ಸಂಖ್ಯೆಯೂ ಹೆಚ್ಚಿದೆ.ಜನಸಂಖ್ಯೆ ಹೆಚ್ಚಿದಂತೆ ಅನ್ನ ಕೊಡುವ ತಾಕತ್ತು ಕೊಡುವ ಶಕ್ತಿಯೂ ನಮ್ಮ ರೈತರದ್ದು ಹೆಚ್ಚಿದೆ.ಅಂಬಾನಿಯಂತವರಿಂದ ಅನ್ನ ಕೊಡಲು ಸಾಧ್ಯವಿಲ್ಲ.ಅನ್ನಕೊಡುವ ಶಕ್ತಿ ಇರುವುದು ನಮ್ಮ ರೈತ ಅನ್ನದಾತನದ್ದು ಇದು ರೈತರ ಹೆಮ್ಮೆ.ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಳ್ಳದಕಾಯಕವೆಂದರೆ ಕೃಷಿ.ಕಾಯಕ ಯೋಗಿ ಎಂದರೆ ರೈತ.ಕೃಷಿ ಇಲಾಖೆ ಕೆಪೆಕ್ ಸ್ಥಾಪಿಸುವ ಮೂಲಕ ರೈತ ತನ್ನ ಬೆಳೆಯನ್ನು ಹಳ್ಳಿಯಲ್ಲ ದಿಲ್ಲಿ ವಿದೇಶಕ್ಕೂ ಮಾರುವಂತಾಗಬೇಕು.ರೈತರೇ ತಮ್ಮ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್ ಮಾಡುವಂತಾಗಬೇಕು.ನಮ್ಮ ರೈತ ರಫ್ತುದಾರ ಉದ್ಯಮಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ರೈತ ಇನ್ನೊಬ್ಬರಿಗೆ ಪರಾವಲಂಭನೆಯಾಗದೇ ತಾನೇ ವೈಜ್ಞಾನಿಕ ಬೆಲೆ‌ ಪಡೆಯುವಂತಾಗಬೇಕು.ಸೃಷ್ಟಿಸುವಂತಾಗಬೇಕು.ಸಾಮಾನ್ಯ ರೈತ ಸ್ವಾವಲಂಬಿಯಾಗಬೇಕು.ರೈತ ಮತ್ತು ರಫ್ತುದಾರರ ಮಧ್ಯೆ ಸೇತುವೆಯಂತೆ ಕೊಂಡಿ ಜೋಡಿಸುವ ಕೆಲಸ ಕೆಪೆಕ್ ಮಾಡುತ್ತಿದೆ ಎಂದು ಬಿ.ಸಿ.ಪಾಟೀಲರು ವಿವರಿಸಿದರು.

ಇಡೀ ಜಗತ್ತಿನ ಬಹುತೇಕ ಕಡೆ ಆರ್ಗನಿಕ್ ಫುಡ್(ಸಾವಯವ ಆಹಾರ) ಬಗ್ಗೆ ಹೆಚ್ಚು ಜನರು ಒಲವು ತೋರುತ್ತಿದ್ದಾರೆ.ಗ್ಲೋಬಲೈಜೇಷನ್ ವಾರ್ಮ್ ಹೆಚ್ಚು ರಾಸಾಯನಿಕ ಬಳಕೆಯಿಂದಾಗುತ್ತಿದೆ.ಹಸಿರೆಲೆ ಗೊಬ್ಬರ ಸೆಣಬು ಸೇರಿದಂತೆ ಭೂಮಿಯ ಫಲವತ್ತತೆ ಹೆಚ್ಚಿಸಬೇಕು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ದ
ಐದು ನೂರು ಜನರಿಗೆ ಸಿಎಫ್‌ಡಿಆರ್‌ಐ ನಲ್ಲಿ ರೈತರಿಗೆ ತರಬೇತಿ ನೀಡಲಾಗಿದ್ದು ಅವರೆಲ್ಲ ಈಗ ರೈತೋದ್ಯಮಿಗಳಾಗಿದ್ದಾರೆ.ಕಿರು ಉದ್ಯಮಗಳನ್ನು ರೈತರು ಆರಂಭಿಸಬೇಕು ಎಂದು ಕರೆ ನೀಡಿದರು.

ಒಟ್ಟು 11 ಲಕ್ಷ ರೈತರಿಗೆ ಎರಡೆರಡು ಲಕ್ಷ‌ರೈತರಂತೆ ಮುಂದಿನ ದಿನಗಳಲ್ಲಿ ಸಮಾವೇಶ ಮಾಡಲಾಗುವುದು ಎಂದು ಬಿ.ಸಿ.ಪಾಟೀಲ್ ತಮ್ಮ ದೂರದೃಷ್ಟಿಯನ್ನು ವಿವರಿಸಿದರು.

ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಎಂ.ವಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ,ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಇರುವ ಸಂಸ್ಥೆ ರೈತ ಉತ್ಪಾದಕ ಸಂಸ್ಥೆಯಾಗಿದೆ.ಕೃಷಿ‌ ಸಚಿವರು ರೈತರಿಗೆ ಲಾಭ‌‌ ಒದಗಿಸುವ ನಿಟ್ಟಿನಲ್ಲಿ ರೈತರನ್ನು ಎಂಟರ್‌ಪ್ರೈನರ್ಸ್‌ಗಳಾಗಿ ಮಾಡಿ ರೈತರು‌ ರೈತೋದ್ಯಮಿಗಳಾಗಬೇಕಂಬ ನಿಟ್ಟಿನಲ್ಲಿ ದೇಶದ ಹಲವು ರಾಜ್ಯಗಳಿಗೆ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ಅಧ್ಯಯನ ಮಾಡಿ ನಮ್ಮ ರಾಜ್ಯದ ರೈತರ‌ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ಹಾಗೂ ರಫ್ತುದಾರರ ಸಮಾವೇಶ ಆಯೋಜಿಸಿ ರೈತರನ್ನು ಉತ್ತೇಜಿಸುತ್ತಿದ್ದಾರೆ ಎಂದರು.

ಐದು ಪ್ರಾಂತ್ಯಗಳಲ್ಲಿ ರಫ್ತುಉದ್ಯಮ ಕೇಂದ್ರಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ.ನಮ್ಮ ಇಲಾಖೆ ಇಡೀ ದೇಶದಲ್ಲಿ ನಂ.1ಆಗಿದೆ.ಇದರ ಮುಂದಾಳತ್ವ ಕೃಷಿ ಸಚಿವ ಬಿ.ಸಿ.ಪಾಟೀಲರಾಗಿದೆ.ರೈತರು ಬೆಳೆದರಷ್ಟೇ ಅಲ್ಲ ಹೊಸಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಾಲಕ್ಕೆ ತಕ್ಕಂತೆ ಬದಲಾಗಿ ರೈತರು ನೇರವಾಗಿ ಮಾರುಕಟ್ಟೆ ನೇರವಾಗಿ ರಫ್ತುದಾರರಾಗಬೇಕು ನೇರವಾಗಿ ಗ್ರಾಹಕರನ್ನು ಮುಟ್ಟಬೇಕೆಂಬ ಎಂಬ ಉದ್ದೇಶ ನಮ್ಮದು ಎಂದರು.

ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಮಾತನಾಡಿ,ಜರ್ಮನಿ,ಇಟಲಿ,ಸ್ವಿಜರ್ಲೆಂಡ್ ದೇಶಗಳಿಗೆ ಇಲಾಖೆಯ ಅಧಿಕಾರಗಳಿಗೆ ಸಚಿವರೊಂದಿಗೆ ಇತ್ತೀಚೆಗೆ ಕೃಷಿ ಅಧ್ಯಯನಕ್ಕೆ ಭೇಟಿ ನೀಡಲಾಗಿದೆ.ನಿಜವಾದ ಅರ್ಥದಲ್ಲಿ ಬೆಳೆದ ರೈತನಿಗೆ ಯೋಗ್ಯ ಬೆಲೆಯ ಜೊತೆಗೆ ಮೌಲ್ಯಾಧರಿತ ಉತ್ಪನ್ನಗಳನ್ನು ತಯಾರಿಸುವ ಉದ್ದೇಶ ಹೊಂದಲಾಗಿದೆ.ರೈತ ಬೆಳೆಗಷ್ಟೇ ಸೀಮಿತವಾಗದೇ ರೈತನ ಲಾಭವನ್ನು ದ್ಚಿಗುಣಗೊಳಿಸಲು ರೈತರನ್ನು ತಂಡತಂಡವಾಗಿ ತರಬೇತುಗೊಳಿಸಿ ರೈತ ಉದ್ಯಮಿಯಾಗಿ ಆದಾಯವನ್ನು ಹೆಚ್ಚಿಸುವುದು ಈ ಸಮಾವೇಶವಾಗಿದೆ.ರೈತ ಸಿಂಗಲ್ ವಿಂಡೋ ಏಜೆನ್ಸಿ ಮೂಲಕ ನೇರವಾಗಿ ರಫ್ತುದಾರರನಾಗಿ ಮಾಡುವ ಉದ್ದೇಶ ಯೋಜನೆ ಇದಾಗಿದ್ದು,ಈಗಾಗಲೇ ರಾಜ್ಯದಲ್ಲಿ ಹತ್ತು ಲಕ್ಷ ರೈತೋತ್ಪಾದನ ಸಂಘಟನೆ‌ ಸದ್ಯ ನಮ್ಮ ರಾಜ್ಯದಲ್ಲಿ ಆಗಿದೆ.ಮುಂದಿನ ದಿನಗಳಲ್ಲಿ ಇವು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದರು.

ಐಐಪಿಎಂ ಬೆಂಗಳೂರು ಇದರ ನಿರ್ದೇಶಕ ಡಾ.ರಾಕೇಶದ ಮೋಹನ್ ಜೋಷಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ನಿರ್ದೇಶಕ ಬಿ.ವೈ.ಶ್ರೀನಿವಾಸ್ ಸ್ವಾಗತಿಸಿ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಹೆಚ್.ಬಂಥನಾಳ ವಂದಿಸಿದರು.

ಕೃಷಿ ಸಚಿವರು ಜೈಕಿಸಾನ್ ಎಂಬ ರೂಢಿಯನ್ನು ಇಲಾಖೆಯಲ್ಲಿ ತರುವ ಮೂಲಕ ಮಾಜಿ ಪ್ರಧಾನಿ ಲಾಲದ ಬಹದ್ದೂರ್ ಶಾಸ್ತ್ರಿಯವರ ನುಡಿಯನ್ನು ಸದಾ ಅಮರವಾಗಿಸಿದ್ದಾರೆ.
ಕೃಷಿ ಸಚಿವರ‌ ದೂರದೃಷ್ಟಿಯ ಫಲವಾಗಿ ಈ ಸಮಾವೇಶ ನಡೆಯುತ್ತಿದೆ ಎಂದರು.

ಕೃಷಿ ರಫ್ತು ಅಗತ್ಯತೆಗಳ ಬಗ್ಗೆ, ಕೃಷಿ ರಫ್ತಿಗ ಇರುವ ಅವಕಾಶಗಳು ಹಾಗೂ ಕೃಷಿ ರಫ್ತು ಯೋಜನೆಗಳು,ರಫ್ತಿದಾರರ ಅನಹಭವ ಹಂಚಿಕೆ,ಕೃಷಿ ರಫ್ತಿನಲ್ಲಿ ಎಫ್‌ಪಿ‌ಒಗಳು ಎದುರಿಸುತ್ತಿರುವ ಸವಾಲುಗಳು, ಕೃಷಿ ರಫ್ತಿನಲ್ಲಿ ವಿವಿಧ ನಿಗಮ‌ಮಂಡಳಿಗಳ ಪಾತ್ರ,ಕೃಷಿ ರಫ್ತಿಗೆ ಲಭ್ಯವಿರುವ ಮೂಲಭೂತ ಸೌಲಭ್ಯಗು,ರಫ್ತು ಕುರಿತಾದ ಯೋಜನೆ ಕುರಿತು ಸಮಾವೇಶದಲ್ಲಿ ಕಾರ್ಯಾಗಾರ ನಡೆಯಿತು.

ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್, ಕೃಷಿ ಆಯುಕ್ತರಾದ ಶರತ್ ಕುಮಾರ್, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ,ಜಿಕೆವಿಕೆ ಉಪಕುಲಪತಿ ಡಾ.ರಾಜೇಂದ್ರ ಪ್ರಸಾದ್,ತೋಟಗಾರಿಕಾ ನಿರ್ದೇಶಕ ನಾಗೇಂದ್ರ ಪ್ರಸಾದ್,ಕೃಷಿ ಇಲಾಖೆ‌ನಿರ್ದೇಶಕಿ ನಂದಿನಿಕುಮಾರಿ,ಕೆಪೆಕ್ ಸಂಸ್ಥೆ ನಬಾರ್ಡ್ನ ಪ್ರಮುಖರು ಅಂತರಗಂಗೆ ಇಲಾಖೆ ನಿರ್ದೇಶಕರು ಕೃಷಿ ಇಲಾಖೆಯ ಅಪರ ಕೃಷಿನಿರ್ದೇಶಕರು ಸೇರಿದಂತೆ ಮತ್ತಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಶ್ರೀಕೃಷ್ಷ ಜಯಂತಿ

0

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ(ಯಾದವ) ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಸ್.ಈಶ್ವರಪ್ಪ ಇವರು ಶ್ರೀ ಕೃಷ್ಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಎಲ್ಲರಿಗೂ ಶ್ರೀ ಕೃಷ್ಣ ಜಯಂತಿಯ ಶುಭ ಕೋರಿದರು.

ಈ ವೇಳೆ ಮಹಾನಗರಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಜಿಲ್ಲಾ ಗೊಲ್ಲರ(ಯಾದವ) ಸಂಘದ ಅಧ್ಯಕ್ಷ ಕೆ.ಅಂಜನಪ್ಪ, ತಾಲ್ಲೂಕು ಗೊಲ್ಲರ(ಯಾದವ) ಸಂಘದ ಅಧ್ಯಕ್ಷ ಎಸ್.ಹೆಚ್.ಜಗದೀಶ್, ಸಮಾಜದ ಮುಖಂಡರು, ಬಾಂಧವರು, ಡಿಯುಡಿಸಿ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್.ಹೆಚ್, ಇತರರು ಹಾಜರಿದ್ದರು.