Saturday, March 21, 2026
Saturday, March 21, 2026
Home Blog Page 1451

ನೆಚ್ಚಿನ ಮೋದೀಜಿಯವರನ್ನ ಶಿವಮೊಗ್ಗಕ್ಕೂ ಆಹ್ವಾನಿಸುವೆ-ಯಡಿಯೂರಪ್ಪ

0

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ಮೇಲೆ ಮತ್ತಷ್ಟು ಶಕ್ತಿ ಬಂದಿದೆ. ಶಿವಮೊಗ ಜಿಲ್ಲೆಗೂ ಪ್ರಧಾನಿ ಮೋದಿ ಅವರನ್ನು ಕರೆಸುವ ಚಿಂತನೆ ನಡೆಸುತ್ತಿದ್ದೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಮುಂದಿನ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಚಿಂತನೆ ನಡೆಸುತ್ತಿದ್ದೇವೆ. ಸಮಯ ಕೊಟ್ಟರೆ ಶಿವಮೊಗ್ಗದಲ್ಲಿ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ದೇಶಾಭಿಮಾನ ಉದ್ದೀಪಿಸಿದ ಈಸೂರು ಚಳವಳಿ ಕುರಿತ ನಾಟಕ

0

ಭಾವುಟಗಳನ್ನು ಹಿಡಿದು ಏರುದನಿಯಲ್ಲಿ ‘ವಂದೇ ಮಾತರಂ’, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’, ‘ಭಾರತ್ ಮಾತಾಕೀ ಜೈ’ ಎಂಬ ಘೋಷಣೆಗಳನ್ನು ಕೂಗುತ್ತ ಇದ್ದಕ್ಕಿದ್ದಂತೆ ಸಭಾಭವನದ ಏಳೂ ದ್ವಾರಗಳಿಂದ ಒಳಪ್ರವೇಶಿಸಿದ ಸ್ವಾತಂತ್ರ ಹೋರಾಟಗಾರ ನಾಟಕಧಾರಿಗಳು ಒಂದು ಕ್ಷಣ ಪ್ರೇಕ್ಷಕವಲಯವನ್ನು ಸ್ವಾತಂತ್ರ ಸಂಗ್ರಾಮದಲ್ಲಿ ಮುಳುಗೇಳಿಸಿತು ಹಾಗೂ ಮುಂದಿನ 45 ನಿಮಿಷಗಳ ಸ್ವಾತಂತ್ರ ಹೋರಾಟದ ಕಿಚ್ಚನ್ನು ಮೈಮನಗಳಿಗೇರಿಸಿದ ಅಪೂರ್ವ ಕ್ಷಣಗಳು ಕುವೆಂಪು ವಿವಿಯಲ್ಲಿ ನಡೆಯಿತು.

ಭಾರತದ ಸ್ವಾತಂತ್ರೋತ್ಸವಕ್ಕೆ ಅಮೃತ ಮಹೋತ್ಸವ ಸಂಭ್ರಮ ಒದಗಿಬಂದಿರುವುದರ ಸವಿನೆನಪಿಗಾಗಿ ಕರ್ನಾಟಕ ಸರ್ಕಾರವು ಸ್ವಾತಂತ್ರ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ನಡೆಸುತ್ತಿದೆ. ಅದರ ಭಾಗವಾಗಿ ದೇಶದಲ್ಲಿಯೇ ಮೊದಲ ಸ್ವಾತಂತ್ರ ಗ್ರಾಮ ಎಂದು ಘೋಷಿಸಿಕೊಂಡು ಹೆಸರುವಾಸಿಯಾಗಿದ್ದ ಶಿಕಾರಿಪುರದ ಈಸೂರು ಗ್ರಾಮದ ಸ್ವಾತಂತ್ರ ಹೋರಾಟ ನೆನೆಯುವ ಸಾಸ್ವೆಹಳ್ಳಿ ಸತೀಶ್ ರಚಿಸಿರುವ ಶ್ರೀಪಾದ್ ತೀರ್ಥಹಳ್ಳಿ ನಿರ್ದೇಶನದ ‘ಈಸೂರ ಕೊಡೆವು’ ನಾಟಕವನ್ನು ಶಿವಮೊಗ್ಗ ರಂಗಾಯಣ ವತಿಯಿಂದ ವಿವಿಯ ಬಸವ ಸಭಾ ಭವನದಲ್ಲಿ ಪ್ರದರ್ಶಿಸಲಾಯಿತು.

ಪ್ರತಿದಿನ ಪಾಠ-ಪ್ರವಚನ, ಪ್ರಯೋಗಾಲಯದ ಶೈಕ್ಷಣಿಕ ಚಟುವಟಿಕೆಗೆಳಲ್ಲಿ ತಲ್ಲೀನರಾಗಿರುತ್ತಿದ್ದ ವಿವಿಯ ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟದ ನಾಟಕ ವೀಕ್ಷಿಸಿ ಸ್ವಾತಂತ್ರ ಘೋಷಣೆಗಳನ್ನು ಮೊಳಗಿಸುತ್ತಿದ್ದಿದುದು ಕಂಡುಬಂದಿತು. ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಸ್ವಾತಂತ್ರ ಹೋರಾಟದ ಚರಿತ್ರಾರ್ಹ ಘಟನೆಗಳಲ್ಲಿ ಈಸೂರಿನ ಹೋರಾಟವು ಒಂದು. ಇಂದಿನ ಯುವ ಪೀಳಿಗೆಗೆ ಗಾಂಧಿ, ನೆಹರು, ಅಂಬೇಡ್ಕರ್‌ರ ಹೋರಾಟಗಳು, ಕೊಡುಗೆಗಳೇನು ಎಂದು ಅರ್ಥಮಾಡಿಸುವ ಜೊತೆಗೆ ಸ್ವಾತಂತ್ರ ಸಂಗ್ರಾಮದಲ್ಲಿ ಮಡಿದ ಅನೇಕ ಅನಾಮಧೇಯ ಹುತಾತ್ಮರನ್ನು ಪರಿಚಯಿಸಬೇಕಿದೆ. ವಿದ್ಯಾರ್ಥಿಗಳು ಸ್ವಾತಂತ್ರದ ಮೌಲ್ಯವನ್ನು ಅರಿಯಲು ಹಾಗೂ ದೇಶಾಭಿಮಾನ ಮೂಡಿಸಿಕೊಳ್ಳಲು ಈಸೂರ ಕೊಡೆವು ನಂತಹ ಈ ನೆಲದ ಸತ್ಯ ಘಟನೆಗಳ ಕುರಿತ ನಾಟಕಗಳು ಬಹುಸಹಕಾರಿ ಎಂದು ತಿಳಿಸಿದರು.

ಶಿವಮೊಗ್ಗ ರಂಗಾಯಣದ ಮುಖ್ಯಸ್ಥ ಸಂದೇಶ್ ಜವಳಿ ಮಾತನಾಡಿ, ಶಿವಮೊಗ್ಗ ರಂಗಾಯಣ ವತಿಯಿಂದ ಎರಡು ತಂಡಗಳನ್ನು ರಚಿಸಿ ಈಸೂರ ಕೊಡೆವು ನಾಟಕವನ್ನು ಕರ್ನಾಟಕದಾದ್ಯಂತ 100ಕ್ಕೂ ಹೆಚ್ಚು ಕಡೆ ಪ್ರದರ್ಶನ ಮಾಡಲಾಗುತ್ತಿದೆ. ಸ್ವಾತಂತ್ರ ಹೋರಾಟದಲ್ಲಿ ಕರ್ನಾಟಕದ ಕೊಡುಗೆಯು ಕಡಿಮೆಯೇನೆಲ್ಲ ಎಂಬುದನ್ನು ನಮ್ಮ ಜನರು ಅರಿಯಬೇಕು. ಚಳುವಳಿಯಲ್ಲಿ ಕರ್ನಾಟಕದ ಕೊಡುಗೆಗಳನ್ನು, ಸ್ವಾತಂತ್ರ ಸೇನಾನಿಗಳ ತ್ಯಾಗ, ವೀರಗಾಥೆಗಳನ್ನು ಅರಿತು ತಾಯ್ನಾಡಿನ ಮೇಲಿನ ಪ್ರೀತಿಯನ್ನು, ಅಭಿಮಾನವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದು ಕರೆಕೊಟ್ಟರು.

ಶಿಕಾರಿಪುರ ತಾಲೂಕಿನ ಈಸೂರು ಗ್ರಾಮಸ್ಥರು ಗಾಂಧೀಜಿಯವರ ಘೋಷಣೆಯಂತೆ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅದರ ಭಾಗವಾಗಿ ಬ್ರಿಟಿಷ್ ಸರ್ಕಾರಕ್ಕೆ ಕಂದಾಯ ಭರಿಸಲು ನಿರಾಕರಿಸಿ, ಶಾನುಭೋಗ ಮತ್ತು ಪಟೇಲರಿಂದ ಕೈಯಿಂದ ಕಂದಾಯ ಪುಸ್ತಕವನ್ನು ಕಿತ್ತುಕೊಂಡು ಕಳಿಸುವ ಮೂಲಕ ಆರಂಭವಾಗುವ ಸಂಘರ್ಷವು ಬ್ರಿಟಿಷ್ ಸರ್ಕಾರದ ಸೇನೆಯೊಡಗಿನ ಹೋರಾಟ, ಅದರ ದಬ್ಬಾಳಿಕೆ, ಅನ್ಯಾಯಗಳನ್ನು ಅನುಭವಿಸಿ ಕಡೆಗೆ ಸ್ವಾತಂತ್ರವೇ ಮುಖ್ಯ ಎಂದು ಗಲ್ಲಿಗೇರುವವರೆಗಿನ ಕಥಾನಕವನ್ನು ತೀರ್ಥಹಳ್ಳಿಯ ಪ್ರಥಮ ದರ್ಜೆ ಕಾಲೇಜು ಹಾಗೂ ತುಂಗಾ ಕಾಲೇಜಿನ ವಿದ್ಯಾರ್ಥಿಗಳು ಮೈನವಿರೇಳಿಸುವಂತೆ ಅಭಿನಯಿಸಿದರು.

ಈಸೂರಿನ ಐವರು ವೀರರು ಗಲ್ಲಿಗೇರಿದ ನಂತರ ಮೊಳಗಿದ ವಂದೇಮಾತರಂ ಗೀತೆಗೆ ಸಭಿಕರು ಎದ್ದುನಿಂತು ಗೌರವಿಸುವಾಗ ಕಣ್ಣಾಲಿಗಳು ತೇವಗೊಂಡದ್ದು ಕಂಡುಬಂದಿತು. ಇನ್‌ಸ್ಪೆಕ್ಟರ್ ಕೆಂಚೇಗೌಡ, ಲಂಗೋಜಿರಾವ್ ಹಾಗೂ ಗ್ರಾಮಸ್ಥರ ಪ್ರಾತ್ರಗಳಲ್ಲಿ ವಿದ್ಯಾರ್ಥಿಗಳು ಪರಕಾಯ ಪ್ರವೇಶ ಮಾಡಿದಂತೆ, ಸ್ವಾತಂತ್ರ ಹೋರಾಟದ ಸ್ಫೂರ್ತಿ ಮನತುಂಬಿ ಬಂದಿತೆಂದು ಸಭಿಕರು ಕಡೆಗೆ ಅಭಿಪ್ರಾಯ ವ್ಯಕ್ತಪಡಿಸಿದರು. ನಾಟಕ ವೀಕ್ಷಿಸಲು ವಿವಿಯ ಕುಲಸಚಿವೆ ಅನುರಾಧ ಜಿ, ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ನಾಟಕ ವೀಕ್ಷಿಸಿ ದೇಶಾಭಿಮಾನದ ಕಿಚ್ಚಿನಲ್ಲಿ ಮಿಂದೆದ್ದರು.

ಸಂಭಾವನೆ ಅಪೇಕ್ಷಿಸದೇ ಕಿಚ್ಚ ಸುದೀಪ್ ಈಗ ಪುಣ್ಯಕೋಟಿ ಯೋಜನೆ ರಾಯಭಾರಿ

0

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರು ತಿಳಿಸಿದ್ದಾರೆ.

ಈ ಕುರಿತು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದಿರುವ ಪ್ರಭು ಚವ್ಹಾಣ್, ತಾವು ಈ ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ, ಗೋಮಾತಾ ರಕ್ಷಣೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಲಾಗಿದೆ. ಹೈನುಗಾರಿಕೆಗೆ ಉತ್ತೇಜನ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈ ಜೋಡಿಸಿ, ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ಪುಣ್ಯಕೋಟಿ ರಾಯಭಾರಿ​​ಯಾಗಿ ನೇಮಿಸಲಾಗಿದೆ. ತಮ್ಮ ಜನ್ಮದಿನದ ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ.

ಸುದೀಪ್​ ಅವರನ್ನು ಪಶು ಸಂಗೋಪನೆ ಇಲಾಖೆಯ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಸುದೀಪ್ ಅವರು ಯಾವುದೇ ಸಂಭಾವನೆ ಇಲ್ಲದೆ ಈ ಕೆಲಸವನ್ನು ನಿರ್ವಹಿಸುವುದಾಗಿ ಒಪ್ಪಿಕೊಂಡಿದ್ದಾರೆ. ಎಂದು ಪ್ರಭು ಚವ್ಹಾಣ್ ಮಾಹಿತಿ ಹಂಚಿಕೊಂಡಿದ್ದಾರೆ.

ಚುಟುಕು ಸುದ್ದಿಗಳು

0

ಭಾರತ ಸರ್ಕಾರ, ಯುವ ವ್ಯವಹಾರ ಮತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಶಿವಮೊಗ್ಗ ಹಾಗೂ ಪ್ರತಿಭಾ ವೇದಿಕೆ ಸುರಾನಿ, ಯುವ ಮಿತ್ರರು, ತೀರ್ಥಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ತೀರ್ಥಹಳ್ಳಿಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು.

ಕ್ರೀಡಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ಪುರುಷರಿಗೆ ವಾಲಿಬಾಲ್ ಪಂದ್ಯಾವಳಿ ಮತ್ತು ಮಹಿಳೆಯರಿಗೆ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ನಡೆಸಲಾಯಿತು.

ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ಗಣೇಶ ಬಾಯ್ಸ್ ತಂಡದವರಿಗೆ ರೂ.2,222/- ನಗದು ಮತ್ತು ಮೆಡಲ್‍ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ನೇಮಲೆಸ್ ಬಾಯ್ಸ್ ತಂಡಕ್ಕೆ ರೂ.1,111 ನಗದು ಮತ್ತು ಟ್ರೋಫಿ ನೀಡಲಾಯಿತು.

ಮಹಿಳೆಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಬಿಂದು ಮತ್ತು ದ್ವಿತೀಯ ಸ್ಥಾನವನ್ನು ಸುಷ್ಮಾ ಪಡೆದರು.

ಕಾರ್ಯಕ್ರಮದಲ್ಲಿ ನೆರಟೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸವಿತಾ ಸತೀಶ್, ಉಪಾಧ್ಯಕ್ಷೆ ಸವಿತಾ ಭಾಸ್ಕರ್, ಗ್ರಾಮದ ಮುಖ್ಯಸ್ಥರಾದ ಉಮಾಪತಿ ಪಾಂಡುರಂಗಪ್ಪ, ರಾಜ್ಯಮಟ್ಟದ ಆಟಗಾರ ಸಚಿನ್, ಕ್ರೀಡಾಪಟುಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ವಿವಿಧ ಯೋಜನೆಗಳ ರಾಜ್ಯ ಮಟ್ಟದ ಮಾಹಿತಿ ಕಾರ್ಯಾಗಾರವನ್ನು ಸೆಪ್ಟೆಂಬರ್ 3 ರ ಬೆಳಿಗ್ಗೆ 9.30 ಕ್ಕೆ ಪ್ರೇರಣ ಕನ್ವೆನ್ಷನ್ ಹಾಲ್, ಪೆಸಿಟ್ ಕಾಲೇಜು ಆವರಣ, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಾಗೂ ವಿವಿಧ ಅಭಿವೃದ್ದಿ ನಿಗಮಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕರಾದ ಬಿ.ಎಸ್.ಯಡಿಯೂರಪ್ಪ ನೆರವೇರಿಸುವರು. ರೇಷ್ಮೆ, ಯುವಜನ, ಕ್ರೀಡಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಬಿ.ಶ್ರೀರಾಮುಲು ಇವರ ಘನ ಉಪಸ್ಥಿತಿ ಇರಲಿದೆ. ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭಾ, ವಿಧಾನ ಪರಿಷತ್ ಶಾಸಕರು, ಮಹಾನಗರಪಾಲಿಕೆ ಮೇಯರ್, ವಿವಿಧ ನಿಗಮ, ಪ್ರಾಧಿಕಾರ, ಆಯೋಗ, ಮಂಡಳಿಗಳ ಅಧ್ಯಕ್ಷರು, ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಸರ್ಕಾರದ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು, ಇತರೆ ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ತಿಳಿಸಲಾಗಿದೆ.

2022-23 ನೇ ಸಾಲಿನ 14 ರಿಂದ 17 ವರ್ಷ ವಯೋಮಿತಿಯೊಳಗಿನ ಶಾಲಾ ಬಾಲಕ/ಬಾಲಕಿಯರ ನೇರ ಜಿಲ್ಲಾ ಮಟ್ಟದ ಫುಟ್‍ಬಾಲ್ ಹಾಗೂ ಹಾಕಿ ಪಂದ್ಯಾವಳಿಯನ್ನು ಸೆಪ್ಟೆಂಬರ್ 6 ಮತ್ತು 7 ರಂದು ನಗರದ ಸೇಕ್ರೆಡ್ ಹಾರ್ಟ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯ 07 ತಾಲ್ಲೂಕಿನ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು(ಆಡಳಿತ) ತಿಳಿಸಿದ್ದಾರೆ.

ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ

0

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ನವರು ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ನೀಡಲು ನಿರ್ಧರಿಸಿದೆ.

ಆಸಕ್ತರು ದಿನಾಂಕ: 06.09.2022 ರೊಳಗಾಗಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ದೂ.ಸಂ. 0821-2515944 ನ್ನು ಸಂಪರ್ಕಿಸಬಹುದೆಂದು ಕರಾಮುವಿ ಪ್ರಭಾರ ಕುಲಸಚಿವರಾದ ಡಾ. ಎ. ಖಾದರ್ ಪಾಷ ತಿಳಿಸಿದ್ದಾರೆ.

80 ವಸಂತ ಕಂಡ ಹಿರಿಯ ಯೋಗಗುರು ರುದ್ರಾರಾಧ್ಯರು

0

ಶಿವಮೊಗ್ಗ ನಗರದ ಶ್ರೀ ಶಿವಗಂಗಾ ಯೋಗಕೇಂದ್ರದ ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ. ಸಿ.ವಿ.ರುದ್ರಾರಾಧ್ಯ ಅವರು 80ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿ ವರ್ಗ ಹಾಗೂ ಶಿಷ್ಯರು ಗೌರವ ಸಮರ್ಪಿಸಿ ಶುಭಹಾರೈಸಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ. ಸಿ.ವಿ.ರುದ್ರಾರಾಧ್ಯ ಅವರು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಯೋಗ ತರಗತಿ ಕೇಂದ್ರಗಳ ಮೂಲಕ ಸಾವಿರಾರು ಜನರಿಗೆ ಯೋಗ ತರಬೇತಿ ನೀಡಿದ್ದಾರೆ. ಇವರ ಜನ್ಮದಿನದ ಪ್ರಯುಕ್ತ ಶಿಷ್ಯರು ಗೌರವ ಸಮರ್ಪಿಸಿದರು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಯೋಗಕ್ಕಾಗಿ ಅವರ ಜೀವನವನ್ನು ಸಮರ್ಪಿಸಿ ಶಿಷ್ಯ ವೃಂದದವರಿಗೆ ಚೈತನ್ಯ ಚಿಲುಮೆಯಂತೆ ರುದ್ರಾ ಆರಾಧ್ಯರು ಇದ್ದಾರೆ. ಯೋಗ ಕೇಂದ್ರಕ್ಕೆ ಸಲ್ಲಿಸುತ್ತಿರುವ ನಿಷ್ಕಾಮ ಸೇವೆ ಮತ್ತು ಅವರ ಸಾರ್ಥಕ ಜೀವನ ಎಲ್ಲರಿಗೂ ಪ್ರೇರಣೆ ಎಂದು ತಿಳಿಸಿದರು.
ಮನುಷ್ಯನ ಹುಟ್ಟು ಸಾರ್ಥಕವಾಗ ಬೇಕಾದರೆ ಸಮಾಜಮುಖಿಯಾಗಿ ಜೀವನ ನಡೆಸಬೇಕು. ನಮ್ಮ ಸೇವೆಯು ಸಮಾಜದ ಎಲ್ಲರಿಗೂ ತಲುಪಬೇಕು. ಸಾರ್ಥಕ ಹಾಗೂ ಸಾಧನೆಯ ಜೀವನ ನಮ್ಮದಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಗಂಗಾ ಯೋಗ ಟ್ರಸ್ಟ್ ಅಧ್ಯಕ್ಷ, ಕೈಗಾರಿಕೋದ್ಯಮಿ ಬಿ.ಸಿ.ನಂಜುಡ ಶೆಟ್ಟಿ ಮಾತನಾಡಿ, ಯೋಗ ಕೇಂದ್ರದ ನಿರ್ಮಾಣದಲ್ಲಿ ರುದ್ರಾರಾಧ್ಯರ ಶ್ರಮ ಅಪಾರ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ರುದ್ರಾರಾಧ್ಯರು ಇಳಿವಯಸ್ಸಿನಲ್ಲೂ ಯುವಕರಂತೆ ಚಟುವಟಿಕೆಯಿಂದ ಯೋಗ ಸಮಾಜದ ಸೇವೆಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಶ್ರೀ ಶಿವಗಂಗಾ ಯೋಗ ಕೇಂದ್ರದ ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ. ಸಿ.ವಿ.ರುದ್ರರಾಧ್ಯ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಯೋಗಕೇಂದ್ರದ ಯಶಸ್ಸಿಗೆ ಎಲ್ಲರ ಸಹಕಾರವು ಕಾರಣ. ಜೀವನದಲ್ಲಿ ಉತ್ತಮ ಕಾರ್ಯ ನಡೆಸಲು ಸಹಕರಿಸಿದ ಎಲ್ಲರಿಗೂ ಚಿರಋಣಿ ಎಂದು ತಿಳಿಸಿದರು.

ಸಮಾರಂಭದಲ್ಲಿ ಕಲಗೋಡು ರತ್ನಾಕರ್, ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್, ಜಿ.ವಿಜಯಕುಮಾರ್, ವಿಜಯ ಬಾಯರ್, ಪ್ರೊ. ಎ.ಎಸ್.ಚಂದ್ರಶೇಖರ್, ಡಾ. ಪದ್ಮನಾಭ ಅಡಿಗ, ಕಾಟನ ಜಗದೀಶ, ಪರಿಸರ ನಾಗರಾಜ್, ಹೊಸತೋಟ ಸೂರ್ಯನಾರಾಯಣ, ಜಿ.ಎಸ್.ಓಂಕಾರ, ಲವಕುಕುಮಾರ್ ಉಪಸ್ಥಿತರಿದ್ದರು.

ರಾಜ್ಯಮಟ್ಟದಲ್ಲಿ ಮಿಂಚಿದ ಶಿವಮೊಗ್ಗದ ಕ್ರೀಡಾಪ್ರತಿಭೆಗಳು

0

ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರಿ.ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಶರಾವತಿ ನಗರದ ಶ್ರೀ.ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಅವಳಿ ಸಹೋದರಿಯರಾದ ಗೌತಮಿಗೌಡ, ಗೌರಂಗಿಗೌಡ ಹಾಗೂ c
16ವರ್ಷದ ವಯೋಮಿತಿ ಒಳಗಿನ ವಿಭಾಗದಲ್ಲಿ ಗೌತಮಿ ಗೌಡ ಎತ್ತರ ಜಿಗಿತದಲ್ಲಿ ಭಾಗವಹಿಸಿ 1.65ಮೀಟರ‍್ಸ್ ಜಿಗಿದು ಬಂಗಾರದ ಪದಕ ಪಡೆದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಗೌರಂಗಿ ಗೌಡ 80ಮೀಟರ‍್ಸ್ ಹರ್ಡಲ್ಸ್‌ನಲ್ಲಿ ಭಾಗವಹಿಸಿ ಬೆಳ್ಳಿ ಪದ ಪಡೆದುಕೊಂಡಿದ್ದಾರೆ.
ಈ ಅವಳಿ ಸಹೋದರಿಯರು ನಗರದ ಕೆ.ಯು.ವಿಷ್ಣುವರ್ಧನ ಮತ್ತು ಸುಷ್ಮಾ ಇವರ ದಂಪತಿಗಳ ಪುತ್ರಿಯಾಗಿರತ್ತಾರೆ.
ಈ ಪ್ರತಿಭಾವಂತ ಕ್ರೀಡಾಪಟುಗಳು ಸೆ.09ರಿಂದ 11ರವರೆಗೆ ಆಂದ್ರಪ್ರದೇಶದ ಗುಂಟೂರಿನಲ್ಲಿ ನಡೆಯಲಿರುವ ಸೌತ್‌ಜೋನ್ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ.
ಕ್ರೀಡೆಯ ಜೊತೆಗೆ ಓದಿನಲ್ಲೂ ಮುಂದಿದ್ದು, ಈ ಕ್ರೀಡಾಪ್ರತಿಭೆಗಳ ಸಾಧನೆಯನ್ನು ಮೆಚ್ಚಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ.ಶ್ರೀ.ಪ್ರಸನ್ನನಾಥ ಸ್ವಾಮೀಜಿಯವರು, ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಹೇಮಾ ಎಸ್.ಆರ್., ಅಧ್ಯಾಪಕವೃಂದ, ಸಿಬ್ಬಂಧಿವರ್ಗ ಶುಭಹಾರೈಸಿದ್ದಾರೆ

ಮುರುಘಾಶ್ರೀಗಳ ಬಂಧನ:ಮಕ್ಕಳ ಮಾಹಿತಿ ಸಿಗದೇ ಪೋಷಕರು ಕಂಗಾಲು

ಮುರುಘಾಮಠದ ಶ್ರೀಗಳಾದ
ಶಿವಮೂರ್ತಿ ಶರಣರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಪೋಕ್ಸ್‌ ಪ್ರಕರಣ ದಾಖಲಾಗಿ ಸತತ ಆರು ದಿನಗಳ ಬಳಿಕ ಪೊಲೀಸರು ಮುರುಘಾ ಶರಣರನ್ನು ಬಂಧಿಸಿದ್ದಾರೆ.

ಇನ್ನು, -ಶ್ರೀಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ನ್ಯಾಯಧೀಶರು ಆದೇಶ ನೀಡುತ್ತಿದ್ದಂತೆ ಮುರುಘಾ ಶ್ರೀಗಳನ್ನ ಬಿಗಿ ಪೊಲೀಸರ ಭದ್ರತೆಯೊಂದಿಗೆ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶ್ರೀಗಳು ನಿದ್ದೆಯಿಲ್ಲದೆ ರಾತ್ರಿ ಪೂರ್ತಿ ಕಳೆದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ರಾತ್ರಿ ಮೂರು ಗಂಟೆ ಸುಮಾರಿಗೆ
ಶ್ರೀಗಳನ್ನ ಕೇಂದ್ರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಆ ನಂತರ ಶ್ರೀಗಳು ನಿದ್ದೆಗೆ ಜಾರಿಲ್ಲ ರಾತ್ರಿಯಿಂದಲೂ ಬೇಸರದಲ್ಲೇ ಶ್ರೀಗಳು ಸಮಯವನ್ನು ಕಳೆದಿದ್ದಾರೆ ಈ ರೀತಿ ಆಯ್ತಲ್ಲ ಅಂತ ನೊಂದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸ್ವಾಮೀಜಿಯವರು ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆಯ ಮೂಲಕ ದೂರು ನೀಡಿದ್ದರು. ಒಡನಾಡಿ ಸಂಸ್ಥೆಯ ನೆರವು ಪಡೆದು ಬಾಲಕಿಯರು ಆಗಸ್ಟ್ 26ರಂದು ಮೈಸೂರಿನಲ್ಲಿ ಕೇಸ್ ದಾಖಲು ಮಾಡಿದ್ದರು. ನಂತರ ಈ ಪ್ರಕರಣವನ್ನು ಚಿತ್ರದುರ್ಗಕ್ಕೆ ವರ್ಗಾಯಿಸಲಾಯಿತು. ಶ್ರೀಗಳ ಬಂಧನಕ್ಕೆ ಒತ್ತಾಯಿಸಿ ಹಲವು ಪ್ರತಿಭಟನೆ ಹಾಗೂ ಒತ್ತಡದಿಂದಾಗಿ ಪೊಲೀಸರು ಶ್ರೀಗಳನ್ನು ಬಂಧಿಸಿದ್ದಾರೆ.

ಸಿಪಿಐ ಬಾಲಚಂದ್ರ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುರುಘಾ ಮಠದ ಹಾಸ್ಟೆಲ್ ನಲ್ಲಿ ಓದುತ್ತಿರುವ ಮಕ್ಕಳನ್ನು ಸಂಪರ್ಕಿಸಲು ಪೋಷಕರು ಪ್ರಯತ್ನ ನಡೆಸಿದ್ದಾರೆ.ಆದರೆ ಸೂಕ್ತ ಮಾಹಿತಿ ಇಲ್ಲದೇ ಕಂಗಾಲಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಪ್ರಮುಖ ಮಾಹಿತಿ

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ ಸಿಇಟಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.

ಅಭ್ಯರ್ಥಿಗಳ ದಾಖಲೆಗಳಲ್ಲಿ ತಪ್ಪುಗಳಿದ್ದರೆ ಅದನ್ನು ಸರಿಪಡಿಸಲು ಮತ್ತೊಂದು ಅವಕಾಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಲ್ಪಿಸಿಕೊಟ್ಟಿದ್ದು, ಶಾಲಾ ವಿವರಗಳು ಅಪೂರ್ಣವಾಗಿದ್ದರೆ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 7ರವರೆಗೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಮರುದಿನ ಬೆಳಗ್ಗೆ 8 ರ ವರೆಗೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಇನ್ನು ಅರ್ಜಿಯನ್ನು ಪೂರ್ಣ ಭರ್ತಿ ಮಾಡದೆ ಖಾಲಿ ಬಿಟ್ಟಿದ್ದ ಸಂದರ್ಭದಲ್ಲಿ ಸೆಪ್ಟೆಂಬರ್ 1ರಿಂದ 7ರ ವರೆಗೆ ಆಯಾ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಲಾಗಿದ್ದು, ಒಂದು ಅಥವಾ ಎರಡು ವರ್ಷದ ವಿವರ ಸೇರ್ಪಡೆಗೆ ಸೆಪ್ಟೆಂಬರ್ 8ರ ನಂತರ ಹಾಗೂ ಜಾತಿ ಆದಾಯ ಪ್ರಮಾಣ ಪತ್ರ ಆರ್ ಡಿ ಸಂಖ್ಯೆ ತಿದ್ದುಪಡಿಗೆ ಸೆಪ್ಟೆಂಬರ್ 4ರ ಬೆಳಿಗ್ಗೆ 8 ರಿಂದ ಸೆಪ್ಟೆಂಬರ್ 5 ರ ಸಂಜೆ 5 ರ ವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಪಿಯುಸಿ ನಂತರ ಮುಂದೇನು? ಉತ್ತರ ಇಲ್ಲಿದೆ

ಇನ್ನೇನು ಪಿಯುಸಿ ಮುಗಿತು ಎಂದ ತಕ್ಷಣ ವಿದ್ಯಾರ್ಥಿಗಳಿಗೆ ಮುಂದೇನು? ಎಂಬ ಪ್ರಶ್ನೆ ಬರುವುದು ಸಹಜ. ಅದರಲ್ಲೂ ಪಿಯುಸಿ ಅಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ಅನೇಕ ಕ್ಷೇತ್ರಗಳು ಕೈಬೀಸಿ ಕರೆಯುತ್ತವೆ ಎಂದರೆ ತಪ್ಪಾಗಲಾರದು.

ಅದರಲ್ಲೂ ವೈದ್ಯಕೀಯ ವಿಭಾಗವನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳು ಮುಂದೆ ವೈದ್ಯರಾಗಿ ಜನರ ಸೇವೆ ಮಾಡಬೇಕೆಂಬ ಹಂಬಲ ಹೊಂದಿರುತ್ತಾರೆ. ವೈದ್ಯಕೀಯ ಪದವಿಯನ್ನು ಪಡೆದ ನಂತರ, ಅವರು ವಿವಿಧ ಪರಿಣಿತ ಕ್ಷೇತ್ರಗಳನ್ನು ಆಯ್ಕೆ ಮಾಡಬಹುದು. ಅದರಲ್ಲಿ ಪ್ರಮುಖವಾಗಿ ಶಿಶುವೈದ್ಯರು, ಸ್ತ್ರೀರೋಗತಜ್ಞರು, ಇಎನ್ಟಿ ತಜ್ಞರು, ಅಂತಃಸ್ರಾವಶಾಸ್ತ್ರಜ್ಞರು, ಮಧುಮೇಹ ತಜ್ಞರು, ಮೂಳೆಚಿಕಿತ್ಸಕರು ಮತ್ತು ಹೃದ್ರೋಗ ತಜ್ಞರಾಗಿ ತಮಗೆ ಇಷ್ಟ ಇರುವ ಪರಿಣಿತ ಕ್ಷೇತ್ರದಲ್ಲಿ ಮುಂದುವರಿಯಬಹುದು.

ಕರ್ನಾಟಕದ ಹಲವು ನಗರಗಳಲ್ಲಿ ವೈದ್ಯಕೀಯ ಕೋರ್ಸ್‌ಗಳು ಇರುವ ಅನೇಕ ವೈದ್ಯಕೀಯ ಕಾಲೇಜುಗಳನ್ನು ನಾವು ಕಾಣಬಹುದು. ಈ ಕಾಲೇಜುಗಳಿಗೆ ಸೇರಬೇಕೆಂದರೆ ಹೆಚ್ಚಿನ ಅಂಕಗಳನ್ನು ಗಳಿಸುವುದರ ಜೊತೆಗೆ, ವಿದ್ಯಾರ್ಥಿಗಳು ನೀಟ್‌ ಎಂಬ ಕೆಲವು ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.

ಹಾಗಿದ್ರೆ ಕೆಲವು ಸಮೀಕ್ಷೆಗಳು, ಮತ್ತು ಮಾಧ್ಯಮ ವರದಿಗಳ ಆಧಾರದ ಮೇಲೆ, ನಾವು ಕರ್ನಾಟಕದ ಟಾಪ್ 10 ವೈದ್ಯಕೀಯ ಕಾಲೇಜುಗಳ ಪಟ್ಟಿಯನ್ನು ನಿಮಗಾಗಿ ಇಲ್ಲಿ ನೀಡಿದ್ದೇವೆ.

1) ಕಸ್ತೂರಬಾ ವೈದ್ಯಕೀಯ ಕಾಲೇಜು, ಮಣಿಪಾಲ( ಸ್ಥಾಪನೆ – 1953)
ಟಿ.ಎಂ.ಎ. ಪೈ ಅವರ ಮಾರ್ಗದರ್ಶನದಲ್ಲಿ 30ನೇ ಜೂನ್ 1953 ರಂದು ಈ ಕಸ್ತೂರಬಾ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಯಿತು. ಕಸ್ತೂರಿ ಬಾ ವೈದ್ಯಕೀಯ ಕಾಲೇಜು ಮಣಿಪಾಲ ವಿಶ್ವವಿದ್ಯಾಲಯದ ಒಂದು ಪ್ರಮುಖ ಘಟಕ ಆಗಿದೆ.

2) ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು, ಬೆಂಗಳೂರು (ಸ್ಥಾಪನೆ – 1979)
ಇದನ್ನು 1979 ರಲ್ಲಿ ಸ್ಥಾಪಿಸಲಾಯಿತು. ರಾಮಯ್ಯ ವೈದ್ಯಕೀಯ ಕಾಲೇಜು ಅನ್ನು ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ದೃಷ್ಟಿಯಿಂದ ಸ್ಥಾಪಿಸಲಾಗಿದೆ. ಈ ಕಾಲೇಜು ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ ಮತ್ತು ಇದನ್ನು ಭಾರತೀಯ ವೈದ್ಯಕೀಯ ಮಂಡಳಿ ಗುರುತಿಸಿದೆ.

3) ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಸ್ಥಾಪನೆ – 1955)
BMCRI ಎಂದೂ ಕರೆಯಲ್ಪಡುವ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು 1955 ರಲ್ಲಿ ಡಾ. ಮೇಖ್ರಿ ಮತ್ತು ಡಾ. ಶಿವರಾಂ ಅವರು ಖಾಸಗಿ ಕಾಲೇಜ್‌ ಆಗಿ ಸ್ಥಾಪಿಸಿದರು.

4) ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು, ಬೆಳಗಾವಿ (ಸ್ಥಾಪನೆ – 1963)
ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು, ಬೆಳಗಾವಿಯು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್‌ನ ಪ್ರಮುಖ ಘಟಕವಾಗಿದ್ದು, ಇದನ್ನು 1963 ರಲ್ಲಿ ಸ್ಥಾಪಿಸಲಾಯಿತು. ಈ ಕಾಲೇಜನ್ನು ಭಾರತೀಯ ವೈದ್ಯಕೀಯ ಮಂಡಳಿಯಿಂದ ಗುರುತಿಸಲ್ಪಟ್ಟಿದೆ.

5) ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಂಗಳೂರು (ಸ್ಥಾಪನೆ – 1980)
ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಯನ್ನು ಬೆಂಗಳೂರು ಒಕ್ಕಲಿಗರ ಸಂಘದಿಂದ 1980 ರಲ್ಲಿ ಸ್ಥಾಪಿಸಲಾಯಿತು ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಈ ಸಂಸ್ಥೆಯು ಸಂಯೋಜಿತವಾಗಿದೆ ಮತ್ತು ಭಾರತೀಯ ವೈದ್ಯಕೀಯ ಮಂಡಳಿಯಿಂದ ಗುರುತಿಸಲ್ಪಟ್ಟಿದೆ.

6) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ (ಸ್ಥಾಪನೆ – 1996)
ಜೂನ್ 1, 1996 ರಂದು ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರವು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವನ್ನು ತೆರೆಯಿತು. ಅರ್ಹ ಆಕಾಂಕ್ಷಿಗಳಿ ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ಕೋರ್ಸ್‌ಗಳನ್ನು ಒದಗಿಸುವ ಪ್ರಮುಖ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಇದಾಗಿದೆ.

7) ಕಸ್ತೂರಬಾ ವೈದ್ಯಕೀಯ ಕಾಲೇಜು, ಮಂಗಳೂರು (ಸ್ಥಾಪನೆ – 1955)
ಕಸ್ತೂರಬಾ ಮೆಡಿಕಲ್ ಕಾಲೇಜ್, ಮಂಗಳೂರು 1955 ರಲ್ಲಿ ಸ್ಥಾಪಿನೆಗೊಂಡಿದೆ. ಇದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರಮುಖ ಘಟಕ ಸಂಸ್ಥೆಯಾಗಿದೆ. ಈ ಕಾಲೇಜು, 1958 ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯಿಂದ ಗುರುತಿಸಲ್ಪಟ್ಟಿದೆ.

8) ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು, ತುಮಕೂರು (ಸ್ಥಾಪನೆ – 2008)
ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜನ್ನು 1988 ರಲ್ಲಿ ಶ್ರೀ ಸಿದ್ಧಾರ್ಥ ಎಜುಕೇಶನಲ್ ಸೊಸೈಟಿ (SSES) ಸ್ಥಾಪಿಸಿತು. ಕಾಲೇಜು ತುಮಕೂರು ನಗರದ ಹೊರವಲಯದಲ್ಲಿದೆ. ಕಾಲೇಜು ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ಗೆ ಸಂಯೋಜಿತವಾಗಿದೆ.

9) ಖಾಜಾ ಬಂದಾ ನವಾಜ್ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗುಲ್ಬರ್ಗ (ಸ್ಥಾಪನೆ – 2000)
ಖಾಜಾ ಬಂದಾ ನವಾಜ್ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು 2000 ರಲ್ಲಿ ಖಾಜಾ ಎಜುಕೇಶನ್ ಸೊಸೈಟಿ ಸ್ಥಾಪಿಸಿತು. ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸರ್ಕಾರದಿಂದ ಗುರುತಿಸಲ್ಪಟ್ಟಿದೆ.

10) ಎಸ್‌ಡಿಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ & ಆಸ್ಪತ್ರೆ, ಧಾರವಾಡ (ಸ್ಥಾಪನೆ – 2003)
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ವಿಜ್ಞಾನಗಳ ಕಾಲೇಜು ಎಸ್‌ಡಿಎಂ ಎಜುಕೇಶನಲ್ ಸೊಸೈಟಿಯ ಆಶ್ರಯದಲ್ಲಿ ಸ್ಥಾಪಿಸಲಾದ ಮೊದಲ ಆಧುನಿಕ ವೈದ್ಯಕೀಯ ಕಾಲೇಜು. ಇದು MCI, ನವದೆಹಲಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ನವದೆಹಲಿಯಿಂದ ಗುರುತಿಸಲ್ಪಟ್ಟಿದೆ.