Sunday, March 22, 2026
Sunday, March 22, 2026
Home Blog Page 1446

ಪ್ರವಾಸಿ ಬಸ್ ಪಲ್ಟಿ ವಿದ್ಯಾರ್ಥಿಗಳಿಗೆ ಗಾಯ

0

ಶಾಲಾ ವಿದ್ಯಾರ್ಥಿಗಳೆಲ್ಲ ಪ್ರವಾಸದ ಖುಷಿಯಲ್ಲಿದ್ದರು. ಆದರೆ, ಅಲ್ಲಿ ಆಗಿದ್ದೆ ಬೇರೆ, ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ದುರಂತ ನಡೆದಿದೆ.ಹೌದು ವಿದ್ಯಾರ್ಥಿಗಳು ಪ್ರವಾಸಕ್ಕೆ ಎಂದು ಹೊರಟಿದ್ದರು. ಈ ವೇಳೆ ಬಸ್‌ ಪಲ್ಟಿ ಹೊಡೆದ ಪರಿಣಾಮವಾಗಿ ಬಸ್‌ ನಲ್ಲಿದ್ದ 26 ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದೆ.

ವಿದ್ಯಾರ್ಥಿಗಳೆಲ್ಲ ಜೋಗ ಜಲಪಾತ ನೋಡಿ ಸಂತೋಷ ಪಡುತ್ತಿದ್ದರು. ಬಳಿಕ ಅಲ್ಲಿಂದ ಮುರುಡೇಶ್ವರಕ್ಕೆ ಹೋಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್‌ ಬಳಿ ಘಟನೆ ನಡೆದಿದೆ. ಬಸ್‌ ನಲ್ಲಿ 60 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 26 ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಈ ಸಂಬಂಧ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಲ್ಲಿ ಪತಿಯಿಂದಲೇ ಪತ್ನಿಯ ಕೊಲೆ

0

ಶಿವಮೊಗ್ಗ ನಗರದ ಪ್ರಿಯಾಂಕ ಲೇಔಟ್ ನಲ್ಲಿ ತಡರಾತ್ರಿ ಕೊಲೆ ನಡೆದಿದೆ.

ನಿನ್ನೆ ತಡರಾತ್ರಿ ಗಂಡ-ಹೆಂಡತಿ ನಡುವೆ ಗಲಾಟೆ ನಡೆದಿದೆ.ಈ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಮಂಜುಳಾ(35) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.

ಬಳಿಕ ಪತಿ ತನ್ನ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ಪತಿ ದಿನೇಶ್ (42) ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಲಾಗಿದೆ.
ತುಂಗಾನಗರ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮನೆಯಲ್ಲಿ ಖುಷಿ (12) ಮತ್ತು ಮನ್ವಿತಾ (9) ಇಬ್ಬರು ಮಕ್ಕಳು ಮಲಗಿದ ವೇಳೆ ಈ ಘಟನೆ ಸಂಭವಿಸಿದೆ.

ದಿನೇಶಾ ಮೆಸ್ಕಾಂನಲ್ಲಿ ಹಿರಿಯ ಸಹಾಯಕ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕಲಾವಿದೆ ಮಂಜಮ್ಮ ಜೋಗಿತಿ ಸೇರಿದಂತೆ ಐವರಿಗೆಗೌರವ ಡಾಕ್ಟರೇಟ್

0

ಕಲಬುರಗಿ ನಗರದ ಪ್ರತಿಷ್ಠಿತ ಶರಣಬಸವ ವಿಶ್ವವಿದ್ಯಾಲಯದಿಂದ ಮಂಜಮ್ಮ‌ ಜೋಗತಿ ಸೇರಿ ಐವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ‌ ಮಾಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ ತಿಳಿಸಿದರು.

ಹಿರಿಯ ವಿಜ್ಞಾನಿಗಳಾದ ಡಾ.ಕಿರಣ್ ಕುಮಾರ್, ಡಾ.ಸತೀಶ್ ರೆಡ್ಡಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಡಾ ಮಂಜಮ್ಮ ಜೋಗತಿ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕದ ಹರಿಹರದ ಶಿವಯೋಗಾಶ್ರಮದ ಶರಣಬಸವಲಿಂಗ ಶಿವಯೋಗಿಗಳಿಗೆ ಮತ್ತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ದಿ.ಬಸವರಾಜಪ್ಪ ಅಪ್ಪ(ಮರಣೋತ್ತರ) ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ ಎಂದು ಕುಲಾಧಿಪತಿ ತಿಳಿಸಿದರು.

ವಿವಿಯ 3ನೇ ಮತ್ತು 4ನೇ ಘಟಿಕೋತ್ಸವ ಸಂದರ್ಭದಲ್ಲಿ‌ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.

ಇದಲ್ಲದೆ ಹಿರಿಯ ಪ್ರಾಧ್ಯಾಪಕ ಡಾ.ಎಸ್.ಜಿ.ಡೊಳ್ಳೇಗೌಡರಿಗೆ ಡಿ.ಲಿಟ್ ಪ್ರಶಸ್ತಿ ಹಾಗೂ 2,382 ವಿದ್ಯಾರ್ಥಿಗಳಿಗೆ ಪದವಿ, 337 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸುವುದಾಗಿಯೂ ಅವರು ಮಾಹಿತಿ ನೀಡಿದರು.

ಮಳೆಹಾನಿ: ಸೀಎಂ ಅವರಿಂದ ಉನ್ನತ ಮಟ್ಟದ ಸಭೆ

0

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಮಳೆಹಾನಿ ಅಧ್ಯಯನಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶಿಶ್ ಕುಮಾರ್ ನೇತೃತ್ವದ ಕೇಂದ್ರ ಅಧ್ಯಯನ ತಂಡದೊಂದಿಗೆ ಸಭೆ ನಡೆಸಿದ್ದು ಸಭೆಯಲ್ಲಿ ಚಿತ್ರದುರ್ಗ ಮತ್ತು ಗದಗ ಉಸ್ತುವಾರಿಗಳೂ ಆಗಿರುವ ಕೃಷಿ ಸಚಿವರಾದ ಬಿ.ಸಿ.ಪಾಟೀಲರು ಪಾಲ್ಗೊಂಡು ಬೆಳೆ ರೈತರಿಗಾದ ಹಾನಿ‌ಬಗ್ಗೆ ಚರ್ಚಿಸಿ ಕೇಂದ್ರದ ಗಮನಕ್ಕೆ ತಂದರು.

ಸಭೆಯಲ್ಲಿ ಇತರ ಸಚಿವರಾದ
ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರನಾಯಕ್, ವಿಪತ್ತು ನಿರ್ವಹಣೆ ಆಯುಕ್ತ ಮನೋಜ್ ರಾಜನ್ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಖ್ಯಾತ ಕನ್ನಡಚಿತ್ರ ನಿರ್ದೇಶಕ ನಾರಾಯಣ್ ಅವರಿಂದ ಫಿಲ್ಮ್ ಅಕಾಡೆಮಿ ಆರಂಭ

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ ಪವನ್ ‘ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ’ ಆರಂಭಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಎಸ್.ನಾರಾಯಣ್ ಕಲಾ ಸಾಮ್ರಾಟ್ ಎಂದೇ ಖ್ಯಾತಿ ಪಡೆದವರು.
ಇದೀಗ ಅವರ ಮಗ ಪವನ್ ತಂದೆಯ ಹೆಸರಿನ್ನೇ ಇಟ್ಟುಕೊಂಡು ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ ಆರಂಭಿಸಿದ್ದಾರೆ.

ಸಿನಿಮಾದಲ್ಲಿ ಆಸಕ್ತಿಯುಳ್ಳವರಿಗೆ ಈ ಅಕಾಡೆಮಿ ತರಬೇತಿ ನೀಡಲಿದೆ.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಎಸ್.ನಾರಾಯಣ್ ನನ್ನ ಮಗ ಸ್ವಂತಿಕೆಯಿಂದ ಫಿಲ್ಮ್ ಅಕಾಡೆಮಿ ಆರಂಭಿಸಿದ್ದಾನೆ. ಆತ ಹೆಚ್ಚು ಮಾತನಾಡುವವನಲ್ಲ, ಸೈಲೆಂಟ್ ಆಗಿ ಕೆಲಸ ಮಾಡುತ್ತಾನೆ. ಜನರು ನನಗೆ ಕೊಟ್ಟ ಕಲಾ ಸಾಮ್ರಾಟ್ ಹೆಸರಿನಲ್ಲಿಯೇ ಅಕಾಡೆಮಿ ಶುರು ಮಾಡಿದ್ದು, ಆ ಹೆಸರು ಹಾಳಾಗದಂತೆ ಸಂಸ್ಥೆ ನಡೆಸು ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

ತರಗತಿ ಪ್ರವೇಶಕ್ಕೆ ಹಿಜಾಬ್ ಅಗತ್ಯವೆ? ಸುಪ್ರೀಂ ಪ್ರಶ್ನೆ

0

ಒಬ್ಬ ವ್ಯಕ್ತಿಗೆ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುವ, ಆಚರಿಸುವ ಹಕ್ಕು ಇದೆ, ಆದರೆ ಸಮವಸ್ತ್ರ ಧರಿಸುವ ಶಾಲೆಯವರೆಗೆ ಅದನ್ನು ತೆಗೆದುಕೊಂಡು ಹೋಗುವ ಔಚಿತ್ಯವನ್ನು ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಕುರಿತ ವಿಚಾರಣೆ ವೇಳೆ ಪ್ರಶ್ನಿಸಿದೆ.

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿ ರಾಜ್ಯ ಸರ್ಕಾರ ಹೊರಡಿಸಿದ್ದ ನಿಯಮವನ್ನು ಪುರಸ್ಕರಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ರೀತಿ ಪ್ರಶ್ನಿಸಿದೆ.

ಸಮವಸ್ತ್ರ ಧರಿಸುವ ಶಾಲೆಯಲ್ಲಿ ಹಿಜಾಬ್ ಏಕೆ ಎಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಪ್ರಶ್ನಿಸಿದೆ.
ನಿಮ್ಮನಿಮ್ಮ ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸುವ ಹಕ್ಕು ನಿಮಗಿದೆ. ಆದರೆ ನೀವು ಧರಿಸಬೇಕಾದ ಉಡುಪಿನ ಭಾಗವಾಗಿ ಸಮವಸ್ತ್ರವನ್ನು ಹೊಂದಿರುವ ಶಾಲೆಗೆ ನಿಮ್ಮ ಧಾರ್ಮಿಕ ಸಂಪ್ರದಾಯಗಳನ್ನು ತೆಗೆದುಕೊಂಡು ಹೋಗಬಹುದೇ ಎಂಬುದು ಪ್ರಶ್ನೆ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ನೇತೃತ್ವದ ನ್ಯಾಯಪೀಠ ಕೇಳಿದೆ.

ಕೆಲವು ಅರ್ಜಿದಾರರ ಪರ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರಿಗೆ ಸುಪ್ರೀಂ ಕೋರ್ಟ್ ಈ ಪ್ರಶ್ನೆಯನ್ನು ಕೇಳಿದೆ.

ನಿರ್ದಿಷ್ಟ ಅಧಿಕಾರವಿಲ್ಲದಿದ್ದರೆ, 161 ನೇ ವಿಧಿ ಅನ್ವಯವಾಗುತ್ತದೆ, ಸಮವಸ್ತ್ರವನ್ನು ಸೂಚಿಸುವ ಅಧಿಕಾರವಿಲ್ಲದಿದ್ದರೆ, ಹುಡುಗಿಯರು ಮಿಡಿ ಮಿನಿಸ್ಕರ್ಟ್‌ಗಳು ಏನು ಬೇಕಾದರೂ ಬರಬಹುದೇ ಯಾವುದೇ ನಿಯಮಗಳು ಜಾರಿಯಿಲ್ಲದಿದ್ದರೆ, ರಾಜ್ಯದ ಕಾರ್ಯನಿರ್ವಾಹಕ ಅಧಿಕಾರವು ಕಾರ್ಯರೂಪಕ್ಕೆ ಬರುತ್ತದೆ.

ಹೈಕೋರ್ಟ್ ಹೇಳಿದ್ದನ್ನು ನಾವು ಪಾಲಿಸಬೇಕಾಗಿಲ್ಲ. ಕಾಯ್ದೆಯು ಯಾವುದೇ ಡ್ರೆಸ್ ಕೋಡ್ ನ್ನು ನಿಷೇಧಿಸದಿದ್ದರೆ ಅಥವಾ ಸೂಚಿಸದಿದ್ದರೆ, ರಾಜ್ಯ ಸರ್ಕಾರದ ಕಾರ್ಯನಿರ್ವಾಹಕ ಅಧಿಕಾರ ಬರುತ್ತದೆಯೇ ಅಥವಾ ಇಲ್ಲವೇ ಎಂದು ನ್ಯಾಯಪೀಠ ಕೇಳಿತು.

ವಿಶ್ವ ಆರ್ಥಿಕತೆಯಲ್ಲಿ ಭಾರತಕ್ಕೆ5 ನೇ ಸ್ಥಾನ ಪಾಕ್ ಮಾಧ್ಯಮಗಳ ಪ್ರಶಂಸೆ

0

ನೆರೆಯ ಪಾಕಿಸ್ತಾನದ ಮಾಧ್ಯಮಗಳು ಸಹ ಭಾರತದ ಆರ್ಥಿಕತೆಯನ್ನ ಶ್ಲಾಘಿಸಿವೆ.
ಐಎಂಎಫ್ʼನಿಂದ ವಿಶ್ವ ಆರ್ಥಿಕತೆಯಲ್ಲಿ ಭಾರತಕ್ಕೆ 5ನೇ ಶ್ರೇಯಾಂಕವನ್ನ ನೀಡಿದ್ದಕ್ಕಾಗಿ ಪಾಕಿಸ್ತಾನದ ಮಾಧ್ಯಮಗಳು ಭಾರತದ ಜನರನ್ನ ಅಭಿನಂದಿಸಿವೆ.

10 ವರ್ಷಗಳ ಹಿಂದೆ, ಆರ್ಥಿಕತೆಯ ವಿಷಯದಲ್ಲಿ ಭಾರತವು 11ನೇ ಸ್ಥಾನದಲ್ಲಿತ್ತು.
ಆದರೆ, ಈಗ ಅದು ಐದನೇ ಸ್ಥಾನದಲ್ಲಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ತಿಳಿಸಿವೆ.

ಇನ್ನು ಭಾರತದಲ್ಲಿ ಅಭಿವೃದ್ಧಿಯು ವೇಗವಾಗಿ ನಡೆಯುತ್ತಿದೆ ಎಂಬುದನ್ನ ಇದು ಸ್ಪಷ್ಟವಾಗಿ ತೋರಿಸುತ್ತದೆ. ಇನ್ನು ಭಾರತ, ಪಾಕಿಸ್ತಾನ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡಿದರೆ, ನಾವೆಲ್ಲರೂ ತ್ವರಿತವಾಗಿ ಪ್ರಗತಿ ಸಾಧಿಸಬಹುದು ಎಂದಿವೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಭಾರತ ಭೇಟಿಯ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಪಾಕಿಸ್ತಾನದ ಮಾಧ್ಯಮಗಳು ಭಾರತದ ಆರ್ಥಿಕತೆಯ ಬಗ್ಗೆ ಮಾತನಾಡುತ್ತಾ, ಭಾರತವು ಶೀಘ್ರದಲ್ಲೇ ವಿಶ್ವದ ಪ್ರಬಲ ಆರ್ಥಿಕತೆಯಾಗಲಿದೆ ಎಂದು ಹೇಳಿವೆ.

ಪಾಕಿಸ್ತಾನದ ಜನರ ನೈತಿಕ ಸ್ಥೈರ್ಯ ಈಗ ಮುರಿದಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಸರ್ಕಾರಗಳು ಜೀವಂತ ಶವಗಳಂತೆ ಮಾರ್ಪಟ್ಟಿವೆ, ಅವು ತಮ್ಮನ್ನ ತಾವು ಎಳೆದುಕೊಳ್ಳುತ್ತಿವೆ. ಅದೇ ಸಮಯದಲ್ಲಿ, ಪಾಕಿಸ್ತಾನದ ಮಾಧ್ಯಮಗಳು ಐಎಂಎಫ್ ಎಚ್ಚರಿಕೆಯ ಬಗ್ಗೆ ಶಹಬಾಜ್ ಷರೀಫ್ ವಿರುದ್ಧ ವಾಗ್ದಾಳಿ ನಡೆಸಿವೆ. ಸರ್ಕಾರವು ಐಎಂಎಫ್ ಎಚ್ಚರಿಕೆಯನ್ನ ಸ್ವೀಕರಿಸಬೇಕು ಎಂದು ಆಗ್ರಹಿಸಿವೆ.

ಹಿರಿಯ ರಾಜಕಾರಣಿ ಸಚಿವ ಉಮೇಶ ಕತ್ತಿ ಇನ್ನಿಲ್ಲ

0

ಹೃದಯಾಘಾತದಿಂದ ಸಚಿವ ಉಮೇಶ್‌ ಕತ್ತಿ ಅವರಿಂದು ವಿಧಿವಶರಾಗಿದ್ದಾರೆ.ಡಾಲರ್ಸ್‌ ಕಾಲೋನಿ ನಿವಾಸದಲ್ಲಿದ್ದಾಗ ಅವರಿಗೆ ರಾತ್ರಿ 10 ಗಂಟೆ ಸಚಿವ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಉಮೇಶ್ ಕತ್ತಿ ಅಸುನೀಗಿದ್ದಾರೆ..

1960ರಂದು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಆಗರ್ಭ ಶ್ರೀಮಂತ ಕತ್ತಿ ಮನೆತನದಲ್ಲಿ ಉಮೇಶ ಜನಿಸಿದರು. ಇವರ ತಂದೆ ಹಿರಿಯ ಸಹಕಾರಿ ವಿಶ್ವನಾಥ ಹಾಗೂ ತಾಯಿ ರಾಜೇಶ್ವರಿ.

ಸ್ವಗ್ರಾಮದಲ್ಲಿಯೇ ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದು ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು.
ಹುಕ್ಕೇರಿ ಶಾಸಕರಾಗಿದ್ದ ತಂದೆ ವಿಶ್ವನಾಥ ಕತ್ತಿ ಅಕಾಲಿಕ ನಿಧನದ ಬಳಿಕ 1985ರಲ್ಲಿ ರಾಜಕಾರಣ ಪ್ರವೇಶಿಸಿ, ಹುಕ್ಕೇರಿ ವಿಧಾಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು.

ಇಲ್ಲಿಯವೆರೆಗೆ 8 ಬಾರಿ ಶಾಸಕರಾಗಿರುವ ಇವರು ಇಲ್ಲಿಯವರೆಗೆ ಆರು ಪಕ್ಷಗಳನ್ನು ಬದಲಿಸಿದ್ದಾರೆ. ಇಷ್ಟೆಲ್ಲ ಪಕ್ಷ ಬದಲಿಸಿಯೂ ಇವರು ಸೋತಿದ್ದು ಒಮ್ಮೆ ಮಾತ್ರ. ಮೇಲಿಂದ ಮೇಲೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಯ ಪ್ರಸ್ತಾಪ, ನಾನು ಡಿಸಿಎಂ ಅಲ್ಲ- ಸಿಎಂ ಸ್ಥಾನದ ಆಕಾಂಕ್ಷಿ ಎನ್ನುವುದು; ಹೀಗೆ ಆಗಾಗ ಸುದ್ದಿಗೆ ಗ್ರಾಸವಾಗುತ್ತಿದ್ದ ಉಮೇಶ ಕತ್ತಿ ವರ್ಣರಂಜಿತ ರಾಜಕಾರಣಿಯಾಗಿದ್ದರು.

ಮನಮೋಹಕ ಸಿಹಿಮೊಗೆ ಪರಿಸರಕೈ ಬೀಸಿ ಕರೆಯುತಿದೆ

0

ನಮ್ಮ ಕರ್ನಾಟಕದ ಸುಂದರ ಸ್ಥಳಗಳಲ್ಲೊಂದು ಶಿವಮೊಗ್ಗ. ಇಲ್ಲಿನ ನೈಸರ್ಗಿಕ ಚೆಲುವು ನೋಡುಗರನ್ನು ಕೈ ಬೀಸಿ ಕರೆಯುತ್ತದೆ. ಶಿವಮೊಗ್ಗ ‘ಗೇಟ್ ವೇ ಟು ಮಲ್ನಾಡ್’ ಎಂದೇ ಪ್ರಸಿದ್ಧ.

ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಈ ಸುಂದರ ತಾಣದ ಪ್ರಮುಖ ಪ್ರವಾಸಿ ತಾಣಗಳು ಹೀಗಿವೆ.

ಹೊನ್ನೆಮರಡು
ಇದು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಚಿಕ್ಕ ಊರು. ಇದರ ನಿಸರ್ಗ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಪಕ್ಷಿ ಪ್ರಿಯರ ಸ್ವರ್ಗ.

ಕುಂದಾದ್ರಿ
ಸಮುದ್ರ ತೀರದಿಂದ 3,200 ಅಡಿ ಎತ್ತರದಲ್ಲಿರುವ ಕಲ್ಲು ಇಲ್ಲಿಯ ಪ್ರಮುಖ ಆಕರ್ಷಣೆ. ಇಲ್ಲೊಂದು ಅತ್ಯಾಕರ್ಷಕ ಜೈನ ದೇವಾಲಯವಿದ್ದು, ಇದನ್ನು 17ನೇ ಶತಮಾನದಲ್ಲಿ ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ.

ಕೊಡಚಾದ್ರಿ‌
ಕೊಡಚಾದ್ರಿ ಕರ್ನಾಟಕದ ಹತ್ತನೇ ಅತಿ ಎತ್ತರದ ಶಿಖರ. ಇದು ಟ್ರಕ್ಕಿಂಗ್ ಗೆ ಫೇಮಸ್ ಆಗಿದೆ.

ಜೋಗ ಜಲಪಾತ
ಅತೀ ಎತ್ತರದಿಂದ ಧುಮ್ಮಿಕ್ಕುವ ಜೋಗ ಜಲಪಾತದ ಸೌಂದರ್ಯವನ್ನು ನೋಡುವುದೇ ಚೆಂದ. ರಾಜ, ರಾಣಿ, ರಾಕೆಟ್ ಮತ್ತು ರೋರರ್ ನಾಲ್ಕು ದಿಕ್ಕುಗಳಿಂದ ಧುಮ್ಮಿಕ್ಕುತ್ತಿರುವ ಆ ಚೆಲುವನ್ನು ನೋಡಲು ಕಣ್ಣುಗಳೇ ಸಾಲದು.

ಸಕ್ಕರೆಬೈಲು
ಇದೊಂದು ಆನೆ ಕ್ಯಾಂಪ್ ಆಗಿದ್ದು, ಇಲ್ಲಿಗೆ ಬಹಳಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ.

ಆಟೋ ಚಾಲಕ ಆರಂಭಿಸಿದ ಬಿಂದುಅಂಬಾನಿ ಚಿತ್ತಸೆಳೆದಿದೆ

0

ಉದ್ಯಮ ಕ್ಷೇತ್ರದ ಪ್ರಸಿದ್ಧ ರಿಲಯನ್ಸ್ ಕಂಪನಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತಂಪು ಪಾನಿಯ ಸಂಸ್ಥೆಯ ಮೇಲೆ ಕಣ್ಣು ಹಾಕಿದೆ. ಪುತ್ತೂರಿನ ಸಣ್ಣ ಗ್ರಾಮದಲ್ಲಿ ಆರಂಭವಾದ ಸಣ್ಣ ಉದ್ಯಮ, ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯ ರಿಲಯನ್ಸ್ ಕಣ್ಣಿಗೆ ಬಿದ್ದಿದ್ದು,ಬಹುಕೋಟಿ ಆಫರ್ ಕೂಡಾ ಮಾಡಿದೆ.

ಆದರೆ ಪುತ್ತೂರಿನ ಕಂಪನಿ ಮಾತ್ರ ಅಂಬಾನಿಯ ಆಫರ್ ಅನ್ನು ತಿರಸ್ಕರಿಸಿದೆ. ಕಂಪನಿ ಬೆಳೆಸುವ ಉದ್ದೇಶ ವ್ಯಕ್ತಪಡಿಸಿದೆ. ಮಾರಾಟ ಮಾಡುವ ಉದ್ದೇಶವಿಲ್ಲವೆಂದು ನೇರವಾಗಿ ಹೇಳಿದೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮೂಲದ ‘ಬಿಂದು’ ಬ್ರ್ಯಾಂಡ್ ಖ್ಯಾತಿಯ ಎಸ್ ಜಿ ಕಂಪನಿಯ ಮೆಗಾ ಫ್ರೂಟ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮೇಲೆ ಸದ್ಯ ರಿಯಾಲನ್ಸ್ ಕಣ್ಣು ಹಾಕಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಎಸ್ ಜಿ ಕಾರ್ಪೋರೇಟ್ಸ್ ಆಡಳಿತ ನಿರ್ದೇಶಕ ಸತ್ಯ ಶಂಕರ್, ಈ ಹಿಂದೆಯೂ ವಿಪ್ರೋ, ಕೋಕೋ ಕೋಲಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕಂಪನಿಗಳು ನಮ್ಮ ಕಂಪನಿ ಖರೀದಿಗೆ ಆಸಕ್ತಿ ತೋರಿಸಿದ್ದವು.

ಈಗ ರಿಲಯನ್ಸ್ ಕಂಪೆನಿ ಕೂಡಾ ದೊಡ್ಡ ಆಫರ್ ನೀಡಿದೆ. ಉದ್ಯಮ ವಲಯದಲ್ಲಿ ಇದೆಲ್ಲಾ ಸಾಮಾನ್ಯವಾಗಿರುವ ವಿಷಯ. ಆದರೆ ನಾವು ಯಾವುದೇ ಕಾರಣಕ್ಕೂ ಕಂಪೆನಿ ಮಾರಾಟ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.