Sunday, March 22, 2026
Sunday, March 22, 2026
Home Blog Page 1447

ಶಿವಮೊಗ್ಗ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ : ಪೋಲಿಸ್ ಮಾರ್ಗಸೂಚಿ

0

ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿಯನ್ನು ಸೆಪ್ಟೆಂಬರ್ 09 ರಂದು ಮೆರವಣಿಗೆ ಮೂಲಕ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಿದ್ದು ಸಾರ್ವಜನಿಕ ಹಿತದೃಷ್ಟಿ ಹಾಗೂ ವಾಹನಗಳ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೆಳಕಂಡಂತೆ ವಾಹನಗಳ ಸುಗಮ ಸಂಚಾರ, ನಿಲುಗಡೆ ಮತ್ತು ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ಆದೇಶಿಸಿದ್ದಾರೆ.

ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಎಸ್‍ಪಿಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿ ಬಜಾರ್ ಮುಖ್ಯರಸ್ತೆ, ಎಸ್‍ಎನ್ ಸರ್ಕಲ್, ಬಿ.ಹೆಚ್.ರಸ್ತೆ, ಎ.ಎ.ಸರ್ಕಲ್, ನೆಹರು ರಸ್ತೆ ಮುಖಾಂತರ, ಗೋಪಿ ಸರ್ಕಲ್, ದುರ್ಗಿಗುಡಿ ಮುಖ್ಯರಸ್ತೆ, ಜೈಲ್ ಸರ್ಕಲ್, ಕುವೆಂಪು ರಸ್ತೆ ಮಾರ್ಗವಾಗಿ, ಶಿವಮೂರ್ತಿ ಸರ್ಕಲ್, ಸವಳಂಗ ಮುಖ್ಯರಸ್ತೆ, ಮಹಾವೀರ ಸರ್ಕಲ್, ಡಿವಿಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಬಿ.ಹೆಚ್.ರಸ್ತೆ, ಪೊಲೀಸ್ ಕಾರ್ನರ್, ಕೋಟೆ ಪೊಲೀಸ್ ಠಾಣೆ ರಸ್ತೆ, ಕೋಟೆ ರಸ್ತೆ ಮಾರ್ಗವಾಗಿ ಭೀಮೇಶ್ವರ ದೇವಸ್ಥಾನದಿಂದ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು.

• ಈ ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತಮುತ್ತ 100 ಅಡಿ ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ.

• ಭದ್ರಾವತಿ, ಬೆಂಗಳೂರು ಕಡೆಯಿಂದ ಬರುವ ಎಲ್ಲಾ ಭಾರೀ ವಾಹನ, ಎಲ್ಲಾ ಬಸ್‍ಗಳು ಮತ್ತು ಸಿಟಿ ಬಸ್‍ಗಳು ಹಾಗೂ ಕಾರು ವಾಹನಗಳು ಎಂಆರ್‍ಎಸ್ ಸರ್ಕಲ್, ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

• ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಭಾರೀ ವಾಹನ ಮತ್ತು ಬಸ್‍ಗಳು ಹೊಳೆಹೊನ್ನೂರು ಸರ್ಕಲ್, ಎಂಆರ್‍ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

• ಹೊನ್ನಾಳಿ, ಹರಿಹರ, ದಾವಣಗೆರೆಯಿಂದ ಬರುವ ಮತ್ತು ಹೋಗುವ ಎಲ್ಲಾ ಭಾರೀ ವಾಹನ ಮತ್ತು ಬಸ್‍ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಶಂಕರಮಠ ಸರ್ಕಲ್, ಹೊಳೆಹೊನ್ನೂರು ಕ್ರಾಸ್, ಎಂ.ಆರ್.ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರವಾಗಿ ಹೋಗುವುದು.

• ಕೋಟೆ ರಸ್ತೆ ಮತ್ತು ಓಲ್ಡ್ ಬಾರ್‍ಲೈನ್ ರಸ್ತೆಯ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡುವುದು.
• ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್‍ನಿಲ್ದಾಣದಿಂದ ಶಿಕಾರಿಪುರ, ಸೊರಬ ಕಡೆ ಹೋಗುವ ಎಲ್ಲಾ ಬಸ್‍ಗಳು ಮತ್ತು ಭಾರೀ ಸರಕು ವಾಹನಗಳು ಸಾಗರ ರಸ್ತೆ ಮುಖಾಂತರವಾಗಿ ಹೆಲಿಪ್ಯಾಡ್ ಸರ್ಕಲ್-ಆಲ್ಕೊಳ ಸರ್ಕಲ್-ಪೊಲೀಸ್ ಚೌಕಿ-ರಾಜ್‍ಕುಮಾರ್ ಸರ್ಕಲ್, ಬೊಮ್ಮನಕಟ್ಟೆ ಮುಖಾಂತರ ಸವಳಂಗ ರಸ್ತೆಗೆ ಹೋಗುವುದು.

• ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆಯ ಮುಖಾಂತರ ಎಂ.ಆರ್.ಎಸ್ ಸರ್ಕಲ್ ಕಡೆಗೆ ಹೋಗುವುದು.
• ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು ಆಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ರಿಷಿ ಸುನಾಕ್ ಹಿಂದಿಕ್ಕಿ ಬ್ರಿಟನ್ ಪ್ರಧಾನಿ ಯಾಗಿ ಲಿಜ್ ಟ್ರಸ್

0

ಯುನೈಟೆಡ್‌ ಕಿಂಗ್ಡಮ್‌ನ ನೂತನ ಪ್ರಧಾನಿಯಾಗಿ ಬ್ರಿಟನ್‌ನ ಹಾಲಿ ವಿದೇಶಾಂಗ ಸಚಿವೆ ಲಿಜ್‌ಟ್ರಸ್‌ ಆಯ್ಕೆಯಾಗಿದ್ದಾರೆ.

ಈ ಮೂಲಕ ಕಳೆದ ಕೆಲ ವಾರಗಳಿಂದ ಮನೆಮಾಡಿದ್ದ ಕುತೂಹಲಕ್ಕೆ ಅಂತಿಮ ತೆರೆ ಬಿದ್ದಿದೆ. ಅಂದ್ಹಾಗೆ ಪ್ರಧಾನಿ ಹುದ್ದೆಯ ಪ್ರಬಲ ಸ್ಪರ್ಧಿಯಾಗಿದ್ದ ರಿಷಿ ಸುನಾಕ್‌ ಆರಂಭದಲ್ಲಿ ಭಾರಿ ಮುನ್ನಡೆ ಕಾದುಕೊಂಡಿದ್ದರು.

ಆದರೆ ಅಂತಿಮವಾಗಿ ಗೆಲುವು ಸಾಧಿಸೋಕೆ ವಿಫಲವಾಗಿದ್ದಾರೆ. ಒಟ್ಟು 81,326 ಮತಗಳನ್ನ ಪಡೆಯೋ ಮೂಲಕ ಲಿಜ್‌ಟ್ರಸ್‌ ಪ್ರಧಾನಿ ಹುದ್ದೆಯನ್ನ ಬಾಚಿಕೊಂಡಿದ್ದಾರೆ. ಇದೇ ಸಂಧರ್ಭದಲ್ಲಿ ಹಲವು ವಿವಾದಗಳು, ಅದಕ್ಕೆ ಸಮರ್ಥನೆಗಳು ಹೀಗೆ ಎಲ್ಲದರ ನಡುವೆಯೇ ಬರೋಬ್ಬರಿ 60,399 ಮತಗಳನ್ನ ಪಡೆಯೋ ಮೂಲಕ ರಿಷಿ ಸುನಾಕ್‌ ರೇಸ್‌ನಲ್ಲಿ ಸೆಕೆಂಡ್‌ ಪ್ಲೇಸ್‌ನಲ್ಲಿ ಉಳಿದುಕೊಂಡಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗಾವಕಾಶ

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವಂತ ವಿವಿಧ 558 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಸಂಬಂಧ ಆರೋಗ್ಯ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಳಿಕೆ ಮೂಲ ವೃಂದದ ವಿವಿಧ ಅರೆ-ವೈದ್ಯಕೀಯ 558 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದೆ.

ಹುದ್ದೆಗಳ ವಿವರ
ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನೀಷಿಯನ್ – 15 ಹುದ್ದೆಗಳು
ಫಾರ್ಮಸಿ ಆಫೀಸರ್ – 400 ಹುದ್ದೆಗಳು
ಜೂನಿಯರ್ ಮೆಡಿಕಲ್ ರೇಡಿಯಾಲಜಿ ಟೆಕ್ನಾಲಟಿಸ್ಟ್ – 08 ಹುದ್ದೆಗಳು

ಫಾರ್ಮಸಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ನಂತ್ರ ಡಿಪ್ಲೊಮಾ ಇನ್ ಫಾರ್ಮಸಿ ಓದಿರಬೇಕು. ಜೊತೆಗೆ ಫಾರ್ಮಸಿ ಕೌನ್ಸಿಲಿಂಗ್ ನಲ್ಲಿ ನೋಂದಾಯಿಸಿಕೊಂಡಿರಬೇಕು.
ಜೂನಿಯರ್ ಮೆಡಿಕಲ್ ರೇಡಿಯಾಲಜಿಸ್ಟ್ ಟೆಕ್ನಾಲಜಿಸ್ ಗೆ ಎಸ್ ಎಸ್ ಎಲ್ ಸಿ ನಂತ್ರ ಮೂರು ವರ್ಷದ ಡಿಪ್ಲೊಮಾ ಇನ್ ಎಕ್ ರೇ ಟೆಕ್ನಾಲಜಿ ಓದಿರಬೇಕು. ಇಲ್ಲವೇ ಪಿಯುಸಿ ನಂತ್ರ ಎರಡು ವರ್ಷದ ಎಕ್ಸ್ ರೇ ಟೆಕ್ನಾಲಜಿ ಓದಿರಬೇಕು.

ವೇತನ ಶ್ರೇಣಿ

  1. ಜೂನಿಯರ್ ಮೆಡಿಕಲ್ ಲ್ಯಾಬರೇಟರಿ ಟೆಕ್ನಾಲಟಿಸ್ಟ್ – ರೂ.26,650 ರಿಂದ ರೂ.52,650
  2. ಫಾರ್ಮಸಿ ಆಫೀಸರ್ – ರೂ.27,650 ರಿಂದ ರೂ.52,650
  3. ಜೂನಿಯರ್ ಮೆಡಿಕಲ್ ರೇಡಿಯಾಲಜಿಕಲ್ ಟೆಕ್ನಾಲಜಿಸ್ಟ್ – ರೂ.27,650 ರಿಂದ ರೂ.52,650
    ವಿದ್ಯಾರ್ಹತೆ
    ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್ ಗೆ ಎಸ್ ಎಸ್ ಎಲ್ ಸಿ ( SSLC ) ತತ್ಸಮಾನ ಹಾಗೂ ಎರಡು ವರ್ಷದ ಡಿಪ್ಲೋಮಾ ಲ್ಯಾಬೊರೇಟರಿ ಟಕ್ನಿಸಿಯನ್ ಓದಿರಬೇಕು. ಇಲ್ಲವೇ ಪಿಯುಸಿ ಸೈನ್ಸ್ ( PUC Science ) ಜೊತೆಗೆ ಎರಡು ವರ್ಷದ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆನ್ನೀಷಿಯಲ್ ಕೋರ್ಸ್ ಮುಗಿಸಿರಬೇಕು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ದಿನಾಂಕ 07-09-2022ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಆನ್ ಲೈನ್ ಮೂಲಕ ಕೊನೆಯ ದಿನಾಂಕ 06-10-2022 ಆಗಿದೆ. ಅಂಚೆ ಇಲಾಖೆಯಲ್ಲಿ ಶುಲ್ಕ ಪಾತಿಸಲು ಕೊನೆಯ ದಿನಾಂಕ 07-10-2022 ಆಗಿದೆ.

ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ ರೂ.700, ಪ್ರವರ್ಗ 2ಎ, 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ ರೂ.400, ಮಾಜಿ ಸೈನಿಕರಿಗೆ ರೂ.200 ಹಾಗೂ ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆದ್ರೇ ಪ್ರೋಸೆಸಿಂಗ್ ಫೀ ಎಂಬುದಾಗಿ ರೂ.100 ಸಂದಾಯ ಮಾಡಬೇಕಿದೆ.

ಅರ್ಜಿ ಸಲ್ಲಿಕೆ ವಿಧಾನ
ಅರ್ಹ ಅಭ್ಯರ್ಥಿಗಳು https://karunadu.karnataka.gov.in/hfw/pages/hfws_sections_drc.aspx ನಲ್ಲಿ ಭೇಟಿ ನೀಡಿ, ಸಲ್ಲಿಸಬಹುದಾಗಿದೆ.
ನೇಮಕಾತಿ ವಿಧಾನ
ವಿದ್ಯಾರ್ಹತೆಯಲ್ಲಿ ಗಳಿಸಿದ ಒಟ್ಟು ಶೇಕಡವಾರು ಅಂಕಗಳು, ಸೇವಾ ಕೃಪಾಂಕ ಮತ್ತು ಕಾಲಕಾಲಕ್ಕೆ ಜಾಲ್ತಿಯಲ್ಲಿರುವಂತ ಮೀಸಲಾತಿ ನಿಯಮಗಳ ಅನ್ವಯ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಗುತ್ತಿಗೆ ನೌಕರರಿಗೆ ಸೇವಾ ಕೃಪಾಂಕ ಮತ್ತು ವಯೋಮಿತಿಯಲ್ಲಿ ಸಡಿಲಿಕೆ
ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ ನೌಕರರಿಗೆ ಒಂದು ವರ್ಷಕ್ಕೆ ಶೇ.2ರಂತೆ ಗರಿಷ್ಠ ಶೇ.20 ಕೃಪಾಂಕ ಕಲ್ಪಿಸಲಾಗಿದೆ. ಇದಲ್ಲದೇ ವಯೋಮಿತಿಯಲ್ಲೂ ಗರಿಷ್ಠ 10 ವರ್ಷ ಸಡಿಲಿಕೆ ಮಾಡಲಾಗಿದೆ. ಆದ್ರೇ.. ವಯೋಮಿತಿ ಸಡಿಲಿಕೆಯನ್ನು ನೀಡಿದಾಗ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಗರಿಷ್ಠ ವಯೋಮಿತಿ 50 ವರ್ಷ ಮೀರಿರಬಾರದು ಎಂದು ಹೇಳಿದೆ.

ವಯೋಮಿತಿ
ಸಾಮಾನ್ಯ ವರ್ಗದವರಿಗೆ 35 ವರ್ಷ, 2ಎ, ಬಿ ಹಾಗೂ 3ಎ, ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಮತ್ತು ಎಸ್ಸಿ, ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ ನಿಗದಿ ಪಡಿಸಲಾಗಿದೆ.
ಈ ಅಧಿಸೂಚನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು https://karunadu.karnataka.gov.in/hfw/pages/home.aspx ಲಿಂಕ್ ಪಡೆಯಬಹುದಾಗಿದೆ.

ಜನತಾ ಪರಿವಾರ ಒಗ್ಗೂಡುವ ಪ್ರಯತ್ನ-ಸಿ.ಎಂ.ಇಬ್ರಾಹಿಂ

0

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ನವದೆಹಲಿಯಲ್ಲಿ ಸಮಾಲೋಚನೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕುಮಾರಸ್ವಾಮಿ, ‘ಜನತಾ ಪರಿವಾರ ಒಗ್ಗೂಡುವ ಬಗ್ಗೆ ಮಾತುಕತೆ ನಡೆಯಿತು.
ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ’ ಎಂದರು.

‘ಬಿಹಾರದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳ ನಂತರ ಮತ್ತೆ ಈ ಚರ್ಚೆಗೆ ಚಾಲನೆ ಸಿಕ್ಕಿದೆ. ಜೆ.ಪಿ. ಅವರಿಂದ ಪ್ರಾರಂಭವಾದ ಜನತಾ ಪರಿವಾರ ಮತ್ತೆ ಒಂದುಗೂಡಬೇಕಿದೆ. ಈಗ ದೇಶದಲ್ಲಿ ಬಲವಾದ ವಿರೋಧ ಪಕ್ಷದ ಅವಶ್ಯಕತೆ ಇದೆ’ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು, ಬಿಹಾರದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಂತರ ಈ ಭೇಟಿ ನಿರ್ಣಾಯಕವಾಗಿದೆ ಎಂದು ಹೇಳಿದರು. ಇದು ದೇಶದ ರಾಜಕೀಯ ಮತ್ತು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಎಂದು ಅವರು ಹೇಳಿದರು.

ಭಾರತದಾದ್ಯಂತ 14,500 ಶಾಲೆಗಳ ಉನ್ನತೀಕರಣ- ಮೋದಿ

ಪ್ರಧಾನಮಂತ್ರಿ ಶ್ರೀ ಯೋಜನೆಯಡಿ 14500 ಶಾಲೆಗಳನ್ನ ಮೇಲ್ದರ್ಜೆಗೇರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗಳನ್ನ ಪಡೆದ ಶಿಕ್ಷಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.

ಶಿಕ್ಷಕರ ದಿನದಂದು, ಹೊಸ ಉಪಕ್ರಮವನ್ನ ಘೋಷಿಸಲು ನನಗೆ ಸಂತೋಷವಾಗಿದೆ. ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ ಯೋಜನೆಯಡಿ, ಭಾರತದಾದ್ಯಂತ 14,500 ಶಾಲೆಗಳನ್ನ ಅಭಿವೃದ್ಧಿಪಡಿಸಲಾಗುವುದು ಮತ್ತು ಮೇಲ್ದರ್ಜೆಗೇರಿಸಲಾಗುವುದು.
ಇವು ರಾಷ್ಟ್ರೀಯ ಶಿಕ್ಷಣ ನೀತಿಯ ಸಂಪೂರ್ಣ ಸ್ಫೂರ್ತಿಯನ್ನ ಅಳವಡಿಸಿಕೊಳ್ಳುವ ಮಾದರಿ ಶಾಲೆಗಳಾಗಲಿವೆ.

ಭಾರತವು ತನ್ನ ಶೈಕ್ಷಣಿಕ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ.
ಯುವ ಮನಸ್ಸನ್ನು ರೂಪಿಸಿದ್ದಕ್ಕಾಗಿ ನಾವು ಶಿಕ್ಷಕರಿಗೆ ಕೃತಜ್ಞರಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಲ್ಲಿ ನಮ್ಮ ಶಿಕ್ಷಕರು ದೊಡ್ಡ ಪಾತ್ರ ವಹಿಸಿದ್ದಾರೆ.

ರಷ್ಯಾದಿಂದ ಮಾನವೀಯ ನೀತಿಶೀರ್ಷಿಕೆಯ ವಿದೇಶಾಂಗ ನೀತಿ ಬಿಡುಗಡೆ

0

‘ರಷ್ಯಾ ಜಗತ್ತು’ ಹೆಸರಿನ ನೂತನ ವಿದೇಶಾಂಗ ನೀತಿ ಸಿದ್ಧಾಂತವು ವಿದೇಶಗಳಲ್ಲಿರುವ ರಷ್ಯಾದ ಹಿತಾಸಕ್ತಿಗಳು ಹಾಗೂ ಬೆಂಬಲಿಗರಿಗೆ ಅಗತ್ಯ ನೆರವು ಒದಗಿಸುವ ನೀತಿಯನ್ನು ಬೆಂಬಲಿಸುತ್ತದೆ. ಉಕ್ರೇನ್​ನೊಂದಿಗೆ ಯುದ್ಧ ಆರಂಭಿಸಿ ಆರು ತಿಂಗಳಾದ ನಂತರ 31 ಪುಟಗಳ ನೂತನ ವಿದೇಶಾಂಗ ನೀತಿಯ ಮಾರ್ಗದರ್ಶಿ ಸೂತ್ರಗಳನ್ನು ರಷ್ಯಾ ಪ್ರಕಟಿಸಿದೆ.

ಈ ದಾಖಲೆಗೆ ‘ಮಾನವೀಯ ನೀತಿ’ಎನ್ನುವ ಹೆಸರು ಕೊಡಲಾಗಿದೆ. ‘ರಷ್ಯಾದ ಜಗತ್ತಿಗೆ ಸಂಬಂಧಿಸಿದ ಎಲ್ಲ ಪರಂಪರೆ, ಆದರ್ಶಗಳನ್ನು ರಕ್ಷಿಸಬೇಕು, ಕಾಪಾಡಬೇಕು ಮತ್ತು ಮುನ್ನಡೆಸಬೇಕು’ ಎಂದು ಈ ನೀತಿಯು ತನ್ನ ಆಶಯವನ್ನು ಮುಂದಿಟ್ಟಿದೆ.

ವಿಶ್ವದಲ್ಲಿ ಒಂದೇ ಶಕ್ತಿ ಇರುವ ಬದಲು, ಹಲವು ಶಕ್ತಿಕೇಂದ್ರಗಳು ಇರುವುದನ್ನು ರಷ್ಯಾ ಬಯಸುತ್ತದೆ. ಇದಕ್ಕೆ ಪೂರಕವಾಗಿ ವಿದೇಶಗಳಲ್ಲಿರುವ ರಷ್ಯಾದ ಜನರು ಅಲ್ಲಿನ ಸರ್ಕಾರಗಳೊಂದಿಗೆ ಬಾಂಧವ್ಯ ವೃದ್ಧಿಗೆ ನೆರವಾಗುತ್ತಾರೆ’ ಎಂದು ನೀತಿಯು ಆಶಯ ವ್ಯಕ್ತಪಡಿಸಿದೆ.

ರಷ್ಯಾ ಪರವಾಗಿ ವಿಶ್ವದಲ್ಲಿ ಸಾಫ್ಟ್​ ಪವರ್ ಹೆಚ್ಚಿಸುವ ಕಾರ್ಯತಂತ್ರದ ಭಾಗವಾಗಿ ಈ ನೀತಿಯನ್ನು ಘೋಷಿಸಲಾಗಿದೆ. ಉಕ್ರೇನ್ ಮೇಲಿನ ಆಕ್ರಮಣ ಹಾಗೂ ರಷ್ಯಾದ ಪೂರ್ವಭಾಗದಲ್ಲಿರುವ ರಷ್ಯಾ ಪರ ಸಂಘಟನೆಗಳಿಗೆ ಸರ್ಕಾರದ ಬೆಂಬಲವನ್ನು ಈ ನೀತಿಯ ಮೂಲಕ ಪುಟಿನ್ ಸಮರ್ಥಿಸಿಕೊಂಡಿದ್ದಾರೆ.

‘ರಷ್ಯಾದಿಂದ ದೂರ ಇರುವ ದೇಶಗಳಲ್ಲಿ ವಾಸವಿರುವ ರಷ್ಯಾ ಪರ ಇರುವ ಜನತೆ ಮತ್ತು ರಷ್ಯಾದ ಹಿತಾಸಕ್ತಿಗೂ ರಷ್ಯಾ ಸರ್ಕಾರವು ಬೆಂಬಲ-ರಕ್ಷಣೆ ಖಾತ್ರಿಪಡಿಸುತ್ತದೆ. ಅವರು ಅನುಸರಿಸುವ, ಬೆಂಬಲಿಸುವ ರಷ್ಯಾದ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸುತ್ತದೆ.

ಶೀಘ್ರ ಏಳನೇ ವೇತನ ಆಯೋಗ ರಚಿಸಲು ಆಗ್ರಹ

0

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ವೇತನ ಆಯೋಗ ರಚಿಸಬೇಕೆಂದು ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಜೆ. ಕುಮಾರ್, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ, ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್ ತೇಜ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

6ನೇ ವೇತನ ಆಯೋಗದ ಶಿಫಾರಸುಗಳ ಪರಿಷ್ಕರಣೆ ಅವಧಿ ಮುಕ್ತಾಯವಾಗಿದ್ದು, 7ನೇ ವೇತನ ಆಯೋಗ ರಚಿಸಬೇಕು. ಮಧ್ಯಂತರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ವಿವಿಧ ಇಲಾಖೆ ಮತ್ತು ವೃಂದ ಸಂಘಟನೆಗಳ ಒಕ್ಕೂಟದ ಜಂಟಿ ಕ್ರಿಯಾ ಸಮಿತಿ ವೇತನ ಆಯೋಗ ರಚನೆಗೆ ಒತ್ತಾಯಿಸಿದೆ.

ಸರ್ಕಾರಿ ಶಾಲೆಗಳ ಜಾಗ ಕಬಳಿಸಲು ಬಿಡುವುದಿಲ್ಲ- ಸಚಿವ ನಾಗೇಶ್

0

ಸರ್ಕಾರಿ ಶಾಲೆಗಳ ಬೆಲೆಬಾಳುವ ಜಾಗದ ಮೇಲೆ ಭೂಮಾಫಿಯಾ, ರಿಯಲ್ ಎಸ್ಟೇಟ್, ಕಣ್ಣು ಬಿದ್ದಿದ್ದು, ಕಬಳಿಸುವ ಹುನ್ನಾರ ಸದೆಬಡಿಯಲು ಸರ್ಕಾರ ಅಗತ್ಯ ಕ್ರಮವಹಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಬಿ.ಸಿ. ನಾಗೇಶ್​ ಮಾತನಾಡಿದರು.

ಸರ್ಕಾರಿ ಶಾಲೆಗಳ ಜಾಗ ಸಂರಕ್ಷಣೆಗೆ ವ್ಯವಸ್ಥಿತ ದಾಖಲೀಕರಣ ಕಳೆದ ಮೂರು ತಿಂಗಳಿಂದ ಪ್ರಗತಿಯಲ್ಲಿದೆ. ಈಗಾಗಲೇ ಮೂರ್ನಾಲ್ಕು ಸಾವಿರ ಶಾಲೆಗಳ ದಾಖಲೀಕರಣ ಮುಗಿದಿದೆ. ಇನ್ನೂ ಏಳು ಸಾವಿರ ಶಾಲೆಗಳ ದಾಖಲೆಗಳ ಕ್ರೋಢೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ನ 1 ರಿಂದ ಆಸ್ತಿ ನೋಂದಣಿ ಕೇವಲ ಐದೇ ನಿಮಷದಲ್ಲಿ- ಅಶೋಕ್

0

ಆಸ್ತಿ ನೋಂದಣಿಗಾಗಿ ಜನ ಅಲೆಯುವುದನ್ನು ತಪ್ಪಿಸಲು ಕೇವಲ ಐದೇ ನಿಮಿಷಗಳ ನೋಂದಣಿ ಪದ್ಧತಿಯನ್ನು ಜಾರಿಗೊಳಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಸ್ತಿನೋಂದಣಿಗಾಗಿ ರಾಜ್ಯಾದ್ಯಂತ ಜನರ ಅಲೆದಾಟ ನಡೆಯುತ್ತಲೇ ಇದ್ದು ಇದನ್ನು ತಪ್ಪಿಸಲು ಕಾವೇರಿ-2 ಎಂಬ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದರು.

ಇನ್ನು ಮುಂದೆ ಆಸ್ತಿ ನೋಂದಣಿ ಮಾಡಿಸಲು ಜನ ಉಪನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಡಬೇಕಿಲ್ಲ. ಬದಲಿಗೆ ಮನೆಯಲ್ಲಿ ಕುಳಿತೇ ಆನ್​ಲೈನ್ ಮೂಲಕ ಆಸ್ತಿ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿಯ ಜತೆ ದಾಖಲೆ ಸಲ್ಲಿಸಿದರೆ ಉಪನೋಂದಣಾಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ. ಅದರಲ್ಲಿ ಏನಾದರೂ ಕೊರತೆ ಇದ್ದರೆ, ತಪ್ಪಿದ್ದರೆ ಅರ್ಜಿದಾರರಿಗೆ ತಿಳಿಸುತ್ತಾರೆ ಎಂದು ವಿವರಿಸಿದರು.

ನಂತರ ಸದರಿ ದಾಖಲೆ ಪತ್ರದ ನೋಂದಣಿಗೆ ಸಮಯಾವಕಾಶವನ್ನು ನಿಗದಿಗೊಳಿಸಲಾಗುತ್ತದೆ. ಹೀಗೆ ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ಅರ್ಜಿದಾರರು ಹೋದರೆ ಅವರ ಹೆಬ್ಬೆಟ್ಟು ಗುರುತು ಮತ್ತು ಸಹಿ ಪಡೆದು ನೋಂದಣಿ ಪ್ರಕ್ರಿಯೆಯನ್ನು ಐದೇ ನಿಮಿಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ.

ಇದೇ ನವೆಂಬರ್ 1 ರಿಂದ ಜಾರಿಗೊಳಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ರಷ್ಯ ಉಕ್ರೇನ್ ಸಮರ ನಿಂತಿಲ್ಲಅಣುವಿಕರಣದ ಆತಂಕ ಉದ್ಭವಿಸಿದೆ

0

ರಷ್ಯನ್ ಸೇನೆಯ ವಶದಲ್ಲಿರುವ ಝಪೋರಿಝಿಯಾ ಅಣುಸ್ಥಾವರದ ಬಳಿ ಸಂಘರ್ಷ ಮುಂದುವರಿದಿದ್ದು ಸ್ಥಾವರಕ್ಕೆ ಹಾನಿಯಾಗಿ ವಿಕಿರಣ ದುರಂತದ ಭೀತಿ ಸ್ಥಳೀಯರಲ್ಲಿ ಎದುರಾಗಿದೆ.

ಅಣುಸ್ಥಾವರದ ಪ್ರದೇಶದಲ್ಲಿ ನಿರಂತರ ಕ್ಷಿಪಣಿ ಮತ್ತು ಫಿರಂಗಿ ದಾಳಿ ನಡೆಯುತ್ತಿರುವುದಕ್ಕೆ ಎರಡೂ ದೇಶಗಳು ಪರಸ್ಪರರನ್ನು ದೂಷಿಸುತ್ತಿವೆ.
ಅಣುಸ್ಥಾವರದ ಬಳಿ ಭಾರೀ ಶಸ್ತ್ರಾಸ್ತ್ರಗಳನ್ನು ರಶ್ಯ ಪೇರಿಸಿದೆ ಎಂದು ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳು ಆರೋಪಿಸಿವೆ. ಆದರೆ ಇದನ್ನು ತಳ್ಳಿಹಾಕಿರುವ ರಶ್ಯ, ಅಣುಸ್ಥಾವರದ ಬಳಿಯಿಂದ ತನ್ನ ಪಡೆಯನ್ನು ಸ್ಥಳಾಂತರಿಸಲು ಮತ್ತು ಈ ವಲಯವನ್ನು ಸೇನಾಮುಕ್ತಗೊಳಿಸಲು ನಿರಾಕರಿಸುತ್ತಿದೆ.

ಈ ಮಧ್ಯೆ, ಉಕ್ರೇನ್ ಪಡೆ ಅಣುಸ್ಥಾವರನ್ನು ವಶಕ್ಕೆ ಪಡೆಯಲು ಶನಿವಾರ ವಿಫಲ ಪ್ರಯತ್ನ ನಡೆಸಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಆರೋಪಿಸಿದೆ.

ಅಣುಸ್ಥಾವರಕ್ಕೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟರ್ಕಿ ಹೇಳಿದೆ. ಅಣುಸ್ಥಾವರದ ಸಮೀಪದ ಖೆರ್ಸಾನ್ ಬಳಿ ಭೀಕರ ಫಿರಂಗಿ ದಾಳಿ ಮುಂದುವರಿದಿರುವುದರಿಂದ ಸ್ಥಾವರದಲ್ಲಿ ವಿಕಿರಣ ದುರಂತದ ಅಪಾಯವಿದೆ ಎಂದು ಅಂತರಾಷ್ಟ್ರೀಯ ರೆಡ್‌ಕ್ರಾಸ್ ಸಂಸ್ಥೆ ಎಚ್ಚರಿಸಿದೆ.