ರೈತರ ಗ್ರಾಹಕರ ವಿರೋಧಿ ವಿದ್ಯುತ್ ತಿದ್ದುಪಡಿ ಮಸೂದೆ ಕಾಯ್ದೆಯನ್ನ ಜಾರಿಗೆ ತರಬಾರದು ಎಂದು ಒತ್ತಾಯಿಸಿ ರಾಜ್ಯಾದ್ಯಂತ ಎಲ್ಲಾ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ತಿಳಿಸಿದರು.
ಮೀಡಿಯಾ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಸವರಾಜಪ್ಪನವರು, ಕೇಂದ್ರ ಸರ್ಕಾರ 3 ರೈತ ವಿರೋಧಿ ಕೃಷಿ ಕಾಯ್ದೆಯನ್ನ ಜಾರಿಗೊಳಿಸಲು ಹೊರಟಿತ್ತು. ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ 1 ವರ್ಷ 4 ತಿಂಗಳು ರೈತರ ಧೀರ್ಘಕಾಲದ ಪ್ರತಿಭಟನೆ ನಡೆಸಿತ್ತು. ಪರಿಣಾಮ ವಾಪಾಸ್ ಪಡೆಯಲಾಯಿತು.
ವಿದ್ಯುತ್ ಸಂಸ್ಥೆಯನ್ನ ಖಾಸಗಿ ಕರಣವಾದರೆ ಮೊಬೈಲ್ ಸಿಮ್ಸ್ ಗೆ ರೀಚಾರ್ಜ್ ಮಾಡಿದ ರೀತಿಯಲ್ಲಿ ಮಾಡಲು ಹೊರಟಿದೆ. ಈ ಬಿಲ್ ಜಾರಿಯಾದರೆ ಮತ್ತೆ 14 ತಿಂಗಳ ಪ್ರತಿಭಟನೆ ನಡೆಯಲಿದೆ. ಸೆ.12 ರಂದು ಈ ಬಿಲ್ ವಿರೋಧಿಸಿ ರೈತ ಸಂಘ ಪ್ರತಿಭಟನೆ ನಡೆಸಲಿದೆ ಎಂದರು.
ರೈತರ, ಜನಸಾಮಾನ್ಯರ ವಿರೋಧಿ ಕಾಯ್ದೆಯಂತಹ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನ ಜಾರಿಗೆ ತರುವುದಿಲ್ಲವೆಂದು ಕೇಂದ್ರ ಸರ್ಕಾರ ರೈತ ಮುಖಂಡರಿಗೆ ಆಶ್ವಾಸನೆ ನೀಡಲಾಯಿತು. ಆದರೆ ಈಗ ಲೋಕ ಸಭೆಯಲ್ಲಿ ವಿದ್ಯುತ್ ತಿದ್ದುಪಡಿ ಮಸೂದೆಯನ್ನ ಮಂಡಿಸಿ ಸ್ಥಾಯಿ ಸಮಿತಿ ಒಪ್ಪಿಸಿ ಈ ಜಾರಿಗೆ ತರಲು ಹೊರಟಿದೆ ಎಂದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬುಧವಾರವೂ ವರುಣಾರ್ಭಟ ಮುಂದುವರಿದ್ದು, ಮುಂದಿನ 4 ದಿನ ಇನ್ನೂ ಹೆಚ್ಚು ಮಳೆ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಬೆಳಗಾವಿಯಲ್ಲಿ ಮುಂದಿನ 48 ಗಂಟೆ ಸುರಿಯುತ್ತಿರುವ ಮಳೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಹಾಸನ, ಶಿವಮೊಗ್ಗ, ಬಾಗಲಕೋಟೆ, ಯಾದಗಿರಿ, ಗದಗ, ಹಾವೇರಿ, ಬಳ್ಳಾರಿ, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಸೆ.8 ಮತ್ತು ಸೆ.9ರಂದು ಯೆಲ್ಲೋ ಅಲರ್ಟ್ ಇರಲಿದೆ.
ಹಾವೇರಿಯ ಗುಟ್ಟಲ್, ಯಾದಗಿರಿಯ ಕಕ್ಕೇರಿ, ಗದಗ, ತುಮಕೂರಿನ ತಿಪಟೂರು, ಚಿಕ್ಕಮಗಳೂರಿನ ಅಜ್ಜಂಪುರ, ಮಂಗಳೂರು, ಉಡುಪಿ ಬ್ರಹ್ಮವಾರ ಮತ್ತು ಪುತ್ತೂರಿನಲ್ಲಿ ಸರಾಸರಿ 10-12 ಸೆಂಮೀ ಮಳೆ ಬಿದ್ದಿದೆ.
ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಾತ್ರ ಮಳೆ ಆರ್ಭಟ ಇದ್ದರೆ, ಉಳಿದೆಡೆ ಆಗಾಗ್ಗೆ ಸಾಧಾರಣ ಮಳೆ ಬೀಳಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು 2022-23ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣಕ್ಕಾಗಿ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದ ಮಾಜಿ ಸೈನಿಕರು ಮತ್ತು ಮಾಜಿ ಸೈನಿಕರ ಅವಲಂಭಿತರ ಮಕ್ಕಳು ಕೇಂದ್ರೀಯ ಸೈನಿಕ ಮಂಡಳಿ ಮುಖಾಂತರ ವಿತರಿಸಲಾಗುವ ಸೀಟುಗಳನ್ನು ಪಡೆಯಲಿಚ್ಛಿಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ನೀಟ್ ಅರ್ಹತಾ ಪರೀಕ್ಷೆಯ ಫಲಿತಾಂಶದ 30 ದಿನಗಳೊಳಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಂದ ಮಾಜಿ ಸೈನಿಕ ಅರ್ಹತಾ ಪ್ರಮಾಣ ಪತ್ರವನ್ನು ಪಡೆದು, ಇಲಾಖೆಯ ನಿರ್ದೇಶನಾಲಯದಿಂದ ಮೇಲು ರುಜು ಪಡೆದ ಬಳಿಕ ಆನ್‍ಲೈನ್ ಮೂಲಕ ಕೆ.ಎಸ್.ಬಿ. ಜಾಲತಾಣ www.ksb.gov.in ರಲ್ಲಿ ಅವಶ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ www.ksb.gov.in ಮತ್ತು ದೂ.ಸಂ.: 08182-220925 ನ್ನು ಸಂಪರ್ಕಿಸಬಹುದು.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶೇಷ ಸಂದರ್ಶನವೊಂದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಹಾಗೂ ಭಾರತವು ನನಗಿಂತ ಉತ್ತಮ ಸ್ನೇಹಿತನನ್ನು ಹೊಂದಿಲ್ಲ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಥವಾ ಬರಾಕ್ ಒಬಾಮಾ ಅವರಿಗಿಂತ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ನನ್ನ ಸಂಬಂಧದ ಬಗ್ಗೆ ನೀವು ಪ್ರಧಾನಿ ಮೋದಿಯನ್ನು ಕೇಳಬೇಕಾಗುತ್ತದೆ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಎಲ್ಲರೂ ಮತ್ತೊಮ್ಮೆ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂದು ಬಯಸುತ್ತಾರೆ. ನಾನು ಚುನಾವಣೆಯಲ್ಲಿ ಮುನ್ನಡೆ ಸಾಧಿಸುತ್ತಿದ್ದೇನೆ. ನಾನು ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ನನಗೆ ಭಾರತ ಮತ್ತು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಸಂಬಂಧವಿದೆ. ನಾವು ಸ್ನೇಹಿತರಾಗಿದ್ದೇವೆ. ಮೋದಿ ಅವರು ಉತ್ತಮ ವ್ಯಕ್ತಿ ಮತ್ತು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದು ಅವರಿಗೆ ಸಿಕ್ಕಿರುವುದು ಸುಲಭದ ಕೆಲಸವಲ್ಲ. ಆದ್ದರಿಂದ, ನಾವು ಬಹಳ ಸಮಯದಿಂದ ಒಬ್ಬರಿಗೊಬ್ಬರು ಪರಿಚಿತರು, ಅವರು ಒಳ್ಳೆಯ ಮನುಷ್ಯ ಎಂದಿದ್ದಾರೆ.
ಎಸ್ಬಿಐ ಕ್ಲರ್ಕ್ ನೇಮಕಾತಿ ಅಥವಾ ಬ್ಯಾಂಕಿನಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಆಕಾಂಕ್ಷಿಗಳಾಗಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸೆಪ್ಟೆಂಬರ್ 7 ರಿಂದ ದೇಶಾದ್ಯಂತ ಇರುವ ತನ್ನ ಶಾಖೆಗಳಲ್ಲಿ ಕ್ಲರಿಕಲ್ ಕೇಡರ್ ನಲ್ಲಿ ಒಟ್ಟು 5008 ಜೂನಿಯರ್ ಅಸೋಸಿಯೇಟ್ಸ್ (ಜೆಎ) ಹುದ್ದೆಗಳ ನೇಮಕಾತಿಗೆ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್ ಬಿಐ ಕ್ಲರ್ಕ್ ಅಧಿಸೂಚನೆ ಡೌನ್ಲೋಡ್ ಮಾಡಬಹುದು. 2022 ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಒದಗಿಸಲಾದ ಲಿಂಕ್ ಯಿಂದ sbi.co.in ಅಥವಾ ಕೆಳಗೆ ನೀಡಲಾದ ನೇರ ಲಿಂಕ್ ಮತ್ತು ನೇರವಾಗಿ ಎಸ್ಬಿಐ ಕ್ಲರ್ಕ್ ಆನ್ಲೈನ್ ಅಪ್ಲಿಕೇಶನ್ 2022 ಪುಟಕ್ಕೆ ಹೋಗಬಹುದು.
ಎಸ್ ಬಿಐ ಕ್ಲರ್ಕ್ ನೇಮಕಾತಿ 2022 ಬ್ಯಾಂಕ್ ಅಧಿಸೂಚನೆ (ನಂ. ಸಿಆರ್ಪಿಡಿ /ಸಿಆರ್ /2022-23/15) ಅನ್ನು ಸೆಪ್ಟೆಂಬರ್ 6 ರ ಮಂಗಳವಾರ ಬಿಡುಗಡೆ ಮಾಡಲಾಯಿತು. ಎಸ್ಬಿಐ ಕ್ಲರ್ಕ್ ಅಧಿಸೂಚನೆ 2022 ಡೌನ್ಲೋಡ್ ಲಿಂಕ್ : https://ibpsonline.ibps.in/sbijajul22/
ಎಸ್ಬಿಐ ಕ್ಲರ್ಕ್ ನೇಮಕಾತಿ 2022 ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಅರ್ಜಿ ಪುಟದಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ನಂತರ ಅಭ್ಯರ್ಥಿಗಳು ನೋಂದಾಯಿತ ವಿವರಗಳ ಮೂಲಕ ಲಾಗಿನ್ ಮಾಡುವ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ.
ಅರ್ಜಿಯ ಸಮಯದಲ್ಲಿ, ಅಭ್ಯರ್ಥಿಗಳು ಆನ್ಲೈನ್ ಮೂಲಕ 750 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಎಸ್ಸಿ, ಎಸ್ಟಿ ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಸಂಪೂರ್ಣ ಸಡಿಲಿಕೆ ಇದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲರಿಕಲ್ ಕೇಡರ್ನ ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳ ನೇಮಕಾತಿಗಾಗಿ ಬಿಡುಗಡೆಯಾದ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಅರ್ಜಿಗಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಇತರ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಅಲ್ಲದೆ, ಅಭ್ಯರ್ಥಿಗಳ ವಯಸ್ಸು ಆಗಸ್ಟ್ 1, 2022 ಕ್ಕೆ 20 ವರ್ಷಗಳಿಗಿಂತ ಕಡಿಮೆ ಇರಬಾರದು ಮತ್ತು 28 ವರ್ಷಗಳನ್ನು ಮೀರಿರಬಾರದು. ಇದರರ್ಥ ಅಭ್ಯರ್ಥಿಗಳು ಆಗಸ್ಟ್ 1, 2002 ರ ನಂತರ ಮತ್ತು ಆಗಸ್ಟ್ 2, 1994 ಕ್ಕಿಂತ ಮುಂಚಿತವಾಗಿ ಜನಿಸಬಾರದು.
ಮೀಸಲು ವರ್ಗಗಳ (ಎಸ್ಸಿ, ಎಸ್ಟಿ, ಒಬಿಸಿ, ಇತ್ಯಾದಿ) ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಹೆಚ್ಚಿನ ವಿವರಗಳು ಮತ್ತು ಇತರ ವಿವರಗಳಿಗಾಗಿ ಎಸ್ಬಿಐ ಕ್ಲರ್ಕ್ ನೇಮಕಾತಿ 2022 ಅಧಿಸೂಚನೆಯನ್ನು ಪರಿಶೀಲಿಸಿ.
1 ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ ದಿನಾಂಕ ಸೆಪ್ಟೆಂಬರ್ 7, 2022
2 ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 27, 2022
3 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 27, 2022
ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕತ್ರಾದಿಂದ 62 ಕಿಮೀ ಪೂರ್ವ-ಈಶಾನ್ಯ-ಪೂರ್ವದಲ್ಲಿ ಇಂದು ಬೆಳಿಗ್ಗೆ 7.52 ಕ್ಕೆ ಭೂಮಿಯಿಂದ 10 ಕಿ.ಮೀ ಆಳದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್‌ಎಸ್‌ಇ ಟ್ವೀಟ್‌ನಲ್ಲಿ ತಿಳಿಸಿದೆ.
ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ದೇಶದಲ್ಲಿ ಭೂಕಂಪದ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ.
ಕನ್ನಡ ಕಟ್ಟುವ ಕೆಲಸ ಹೇಗೆ ಮಾಡಬಹುದು ಎಂಬ ವಿಷಯ ಪ್ರಸ್ತಾಪಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮೂರುವರ್ಷದಲ್ಲಿ ಒಂದು ವರೆ ವರ್ಷ ಕೊರೋನಗೆ ಅವಧಿ ಕಳೆಯಿತು. ನಂತರ ಹೊಸ ಅವಿಷ್ಕಾರದೊಂದಿಗೆ ಆರಂಭವಾಗಿತು ಎಂದರು.
ಅವರು ಮೀಡಿಯಾ ಹೌಸ್ ನ ಸುದ್ದಿಗೋಷ್ಠಿ ಯಲ್ಲಿ , ಕನ್ನಡ ಕಲಿಕಾ ಕಾರ್ಯಗಾರ ಅನಿವಾಸಿ ಶಿಕ್ಷಕರಿಗೆ ನಡೆಸಲಾಯಿತು. ನಿರಂತರವಾಗಿ ನಡೆದಿದೆ. 68 ರಾಷ್ಟ್ರಗಳಿಂದ ಟೈಮ್ ಜೋನ್ ಮಾಡಿಕೊಂಡು 13 ರಿಂದ 20 ರಾಷ್ಟ್ರಗಳನ್ನ ಒಗ್ಗೂಡಿಸಲಾಯಿತು ಎಂದರು.
ಪ್ರತಿ ರಾಷ್ಟ್ರದಲ್ಲಿ ತಮಿಳು ಮತ್ತು ಸ್ಥಳೀಯ ಭಾಷೆ ಇದೆ. ಜರ್ಮನಿ ಸಿಂಗಾಪುರದಲ್ಲಿ ಫಾರೀನ್ ಲಾಂಗ್ವೇಜ್ ಆಪ್ಷನಲ್ ಭಾಷೆಯಾಗಿ ಕನ್ನಡ ಭಾಷೆಯೂ ಈಗ ಒಂದಾಗಿದೆ. ಮೊದಲು ಇರಲಿಲ್ಲ. ಇದು ಕೊರೋನ ಸಂಧರ್ಭದಲ್ಲಿ ಉಂಟಾದ ಬದಲಾವಣೆ ಆಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಮಾರ್ಗವನ್ನ ಕಂಡುಕೊಂಡಿದೆ ಎಂದರು.
ಕನ್ನಡ ಶಾಲೆಗಳಲ್ಲಿ ಕನ್ನಡ ಗೊತ್ತಿರುವರು ಹೊರ ರಾಷ್ಟ್ರಗಳಲ್ಲಿ ಕನ್ಬಡ ಶಾಲೆ ಆರಂಭಿಸಿದರು. ಮಾದರಿ ಇರಲಿಲ್ಲ. ನಲಿಕಲಿ ರವೀಂದ್ರರವರು ಹೊರ ರಾಷ್ಟ್ರಗಳ ತೊಡಕುಗಳನ್ನ ನಿವಾರಿಸಿದರು. ಅವರನ್ನ ಗ್ರೂಪ್ ಮಾಡಿ ಪಟ್ಟಿ ಸಿದ್ದ ಪಡಿಸಲಾಯಿತು. ಪಠ್ಯ ಕ್ರಮಗಳನ್ನ ಆಯಾ ರಾಷ್ಟ್ರಗಳಿಗೆ ಬೇಕಾಗುವಂತೆ ಮಾರ್ಪಾಟು ಮಾಡಿಕೊಂಡರು. ಹಿಂದೆ ಶಾಲೆಗಳು ನಮ್ಮ ಮಾದರಿ ಆರಂಭಿಸಿದರು. ಈಗ ಹೊರ ರಾಷ್ಟ್ರಗಳಲ್ಲಿ ಚೇಂಜ್ ಆಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಶಾಖೆಯ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್ ಮತ್ತು ರಾಜ್ಯಸಮಿತಿ ಸದಸ್ಯ ಟೆಲೆಕ್ಸ್ ರವಿ ಕುಮಾರ್ ಸಂವಾದದಲ್ಲಿ ಉಪಸ್ಥತಿತರಿದ್ದರು.
ಮಹಾಜ್ಞಾನಿಯಾದಂತಹ ಯಾಜ್ಞವಲ್ಕ್ಯರು ಒಮ್ಮೆ ಸಂಸಾರ ತ್ಯಜಿಸಿ ಸನ್ಯಾಸಿ ಆಗಬೇಕೆಂಬ ಬಯಕೆಯಿಂದ ತಮ್ಮ ಪತ್ನಿಯರಾದ ಕಾತ್ಯಾಯಿನಿ ಹಾಗೂ ಮೈತ್ರೇಯಿಯರಿಗೆ ಅವರ ಜೀವನ ನಿರ್ವಹಣೆಗಾಗಿ ತನ್ನ ಸಕಲ ಆಸ್ತಿಗಳನ್ನೆಲ್ಲ ಪಾಲು ಮಾಡಿಕೊಡಲು ಮುಂದಾಗುತ್ತಾರೆ.
ಇದಕ್ಕೆ ಕಾತ್ಯಾಯಿನಿ ಒಪ್ಪಿದರರೂ ಮೈತ್ರೇಯಿ ಮಾತ್ರ ಮುಕ್ತಿ ದೊರಕಿಸಿಕೊಡದ ಐಶ್ವರ್ಯ ನನಗೆ ಬೇಕಾಗಿಲ್ಲ. ಮುಕ್ತಿಯ ಮಾರ್ಗ ತೋರಿಸಿ… ಎಂದಾಗ ಅವಳನ್ನು ಅತ್ಯಂತ ಪ್ರೀತಿಯಿಂದ ತನ್ನ ಬಳಿ ಕೂರಿಸಿಕೊಂಡು ಹೆಂಡತಿಗೆ ಉಪದೇಶ ಮಾಡುತ್ತಾ ಹೋಗುತ್ತಾರೆ. ಮೊದಲು ಶ್ರವಣ, ನಂತರ ಮನನ ಮಾಡಿಕೋ ಎಂದು ಒಂದೊಂದಾಗಿ ಹೇಳುತ್ತಾ ಹೋಗುತ್ತಾರೆ.
ಪತಿಗಾಗಿ ಅಲ್ಲ ಪತ್ನಿ ಪ್ರೀತಿಸುವುದು ಆತ್ಮನಿಗಾಗಿ ಪ್ರೀತಿಸುವಳು. ಯಾವ ಗಂಡನೂ ಹೆಂಡತಿಗಾಗಿ ಹೆಂಡತಿಯನ್ನು ಪ್ರೀತಿಸುವುದಿಲ್ಲ ಆತ್ಮನನ್ನು ಪ್ರೀತಿಸುವುದರಿಂದ ಅದಕ್ಕಾಗಿ ಅವಳನ್ನು ಪ್ರೀತಿಸುತ್ತಾನೆ. ಮಕ್ಕಳಿಗಾಗಿ ಅಲ್ಲ ಮಕ್ಕಳನ್ನು ಪ್ರೀತಿಸುವವರು ಒಟ್ಟಾರೆಯಾಗಿ ಯಾರೂ ಸಹ ವಸ್ತುವಿಗೋಸ್ಕರ ಪ್ರೀತಿಸದೇ ಆತ್ಮನಿಗೋಸ್ಕರ ಅದನ್ನು ಪ್ರೀತಿಸುವರು ಎಂಬುದನ್ನೇ ಅದ್ಭುತವಾಗಿ “ಆತ್ಮನಸ್ತು ಕಾಮಾನ್ ಸರ್ವಃ ಪ್ರಿಯೋಭವತಿ” ಎಂದು ನಿರೂಪಿಸಿದರು.
ಯಾರು ಆತ್ಮನ ಅರಿವಿಲ್ಲದೇ ಪ್ರೀತಿಸುವರೋ ಅದು ಸ್ವಾರ್ಥ ಪ್ರೀತಿ. ಆತನನ್ನು ಅರಿತು ಯಾರು ಪ್ರೀತಿಸುವರು ಅದು ನಿಸ್ವಾರ್ಥ ಪ್ರೇಮ. ಅವರೇ ಜ್ಞಾನಿಗಳು ಎಂದು ಯಾಜ್ಞವಲ್ಕ್ಯರು ಉಪದೇಶಿಸುತ್ತಾರೆ. ಈ ರೀತಿಯಾಗಿ ಪ್ರೀತಿಯನ್ನು ವಿವರಿಸಿ ಪೂರ್ಣಾನಂದದ ವಿವರಣೆ ನೀಡುತ್ತಾ ಹೋಗುತ್ತಾರೆ. ಆತ್ಮನ ಮೂಲಕ ನಾವು ಪ್ರೀತಿಸಿದೆಲ್ಲವೂ ಅದರಿಂದ ದುಃಖ ಇರುವುದಿಲ್ಲ. ಅನಂತ ವಿಶ್ವದಲ್ಲಿ ಯಾವುದಾದರೂ ಒಂದು ಪ್ರತ್ಯೇಕ ವಸ್ತು ತೆಗೆದುಕೊಂಡು ಆತ್ಮನ ಅರಿವಿಲ್ಲದೆಯೇ ಅದನ್ನು ಆತ್ಮನೆಂದು ಹೇಗೆ ನೋಡುವುದು ಎಂದಾಗ ನಾವು ಒಂದು ಮೃದಂಗದಿಂದ ದೂರವಿರುವವರೆಗೆ ನಮಗೆ ಧ್ವನಿ ಕೇಳಿಸುವುದಿಲ್ಲ.
ಧ್ವನಿ ನಮ್ಮ ಸ್ವಾಧೀನವಲ್ಲ. ಸಮೀಪಕ್ಕೆ ಬಂದು ಕೈ ಇಟ್ಟೊಡನೆ ಶಂಖ ಊದಿದಾಗ ದ್ವನಿ ಹಿಡಿಯಲಾರವು ಅದರ ಸಮೀಪಕ್ಕೆ ಬಂದು ಸ್ವಾಧೀನ ಪಡಿಸಿಕೊಂಡಾಗ ಅದನ್ನು ಗೆಲ್ಲುವೆವು. ಹಾಗೆಯೇ ಹಸಿ ಸೌದೆ ಉರಿಸಿದಾಗ ಬರುವ ಹೊಗೆ ಕಿಡಿಯಂತೆ ಮಹಾ ಸತ್ಯದಿಂದ ಜ್ಞಾನ ವ್ಯಕ್ತವಾಗಿದೆ.
ನೀರಿಗೆಲ್ಲ ಸಾಗರ, ಎಲ್ಲ ಸ್ಪರ್ಶಕ್ಕೆ ಚರ್ಮ, ವಾಸನೆಗೆ ಮೂಗು, ರುಚಿಗೆ ನಾಲಗೆ, ಆಕಾರಕ್ಕೆ ಕಣ್ಣು, ಶಬ್ದಕ್ಕೆ ಕಿವಿ, ಆಲೋಚನೆಗೆ ಮನಸ್ಸು, ಕರ್ಮಕ್ಕೆ ಕೈಗಳು ಗುರಿಯಾದಂತೆ ಸಮುದ್ರಕ್ಕೆ ಹಾಕಿದ ಉಪ್ಪು ಕರಗಿ ನಮಗೆ ದೊರಕದಂತೆ, ಎಲ್ಲಕ್ಕೂ ವಿಶ್ವಾತ್ಮನು ನಿತ್ಯವಾಗಿರುವನು. ಜನನ ಮರಣಗಳಿಲ್ಲದೆ ನಾವೆಲ್ಲ ಪುರುಷನಿಂದ ಸಿಡಿದ ಕಿಡಿಗಳಂತೆ ತೋರುವೇವು.
ಅದನ್ನು ಅರಿತರೆ ಪುನಃ ಅಲ್ಲಿಗೆ ಹೋಗಿ ಐಕ್ಯರಾಗುವೆವು. ಅಂತಿಮವಾಗಿ ನಾವೇ ಉಪದೇಶವನ್ನು, ಆತ್ಮ ಸಾಕ್ಷಾತ್ಕಾರದ ಬಗೆಯನ್ನು ತಿಳಿಸಿ ಕೊಡುವವರು. ಬಾಹ್ಯ ವಸ್ತುವಿಗಾಗಿ ಪರಸ್ಪರ ಸತಿಪತಿಯರು ಪ್ರೀತಿಸದೇ ಏಕಾತ್ಮತೆಗೆ ಪ್ರೀತಿಸಬೇಕೆಂಬ ಸಾಲನ್ನು ತಿಳಿಸಿದ್ದು ಅಷ್ಟೇ ಅಲ್ಲ ಈ ಪ್ರೀತಿ ಎಲ್ಲದರಲ್ಲೂ ಇರಬೇಕು.
ನಾವು ಪರಮಾತ್ಮ ಎಲ್ಲದರಲ್ಲೂ ಇದ್ದಾನೆ ಎಂದು ಪ್ರೀತಿಸಬೇಕೆಂಬ ಅದ್ಭುತವಾದ ಸಂಗತಿಯನ್ನು ಬ್ರಹ್ಮ ಜಿಜ್ಞಾಸು ಮೈತ್ರೇಯಿ ಎಂಬ ಪರಿಕಲ್ಪನೆಯೊಂದಿಗೆ ತಾವೇ ನಿರ್ದೇಶಿಸಿ ಪ್ರಸ್ತುತಪಡಿಸಿದ ಅದ್ಭುತ ನೃತ್ಯರೂಪಕ ಶಿವಮೊಗ್ಗದ ಸಹಚೇತನ ನಾಟ್ಯಾಲಯದವರಿಂದ ರಾಷ್ಟ್ರೀಯ ನೃತ್ಯೋತ್ಸವವಾದ ನಾಟ್ಯಾರಾಧನಾ -11ರ ಕಾರ್ಯಕ್ರಮದಲ್ಲಿ ಆಯೋಜನೆಗೊಂಡಿತ್ತು.
ಅದು ಪ್ರೇಕ್ಷಕರ ಮನಗೆದ್ದಿದ್ದೇ ಅಲ್ಲದೆ ಶ್ರೀಮತಿ ಸಹನಾ ಚೇತನ್ ಅವರು ಮನೋಜ್ಞ ಅಭಿನಯದೊಂದಿಗೆ ಮನಸ್ಸು, ದೇಹ ಒಂದಾಗಿಸಿದ ತಾದಾತ್ಮ್ಯ ಭಾವದ ನೃತ್ಯವನ್ನು ನಿರೂಪಿಸಿದರು. ಈ ರೂಪಕವು ಬೃಹದಾರಣ್ಯಕ ಉಪನಿಷತ್ತಿನ ಒಂದು ಭಾಗವಾದರೂ ಮೂಲ ಸಂಸ್ಕೃತದ ಸಾಹಿತ್ಯ, ಅಭಿನಯದಲ್ಲಿನ ಏಕತಾನತೆಯ ಸೊಗಸಾದ ದೃಶ್ಯ ಕಣ್ಣೆದುರಿಗೆ ತರುವಲ್ಲಿ ಯಶಸ್ವಿಯಾದರು.
ಅಭಿನಯ ತಾದಾತ್ಮ್ಯತೆಯಂತೂ ಓಂಕಾರದ ಶಂಖನಾದಕ್ಕಿಂತ ಕಿಂಚಿದೂನಂ ಎನಿಸುವಂತಿತ್ತು. ಎಲ್ಲ ದೃಶ್ಯಗಳು ಸಹ ಸೊಗಸಾಗಿದ್ದುದಲ್ಲದೇ ಅಂದಿನ ಮತ್ತೊಂದು ಪ್ರಸ್ತುತಿಯಾದ ನಾಟ್ಯಾಧಿ ದೇವತೆಯ ನರ್ತನೋಲ್ಲಾಸ ಓಂ ನಮಃ ಶಿವಾಯವೂ ಸಹ ನಟರಾಜನ ಪುರಾಣ ಪ್ರಸಂಗಗಳ ನಾಟ್ಯ ಪ್ರಸ್ತುತಿಯಾಗಿ ‘ಶಂಕರಾಭರಣಂ ಕಥನ ರುಚಿರಂ’ ಎನ್ನುವಲ್ಲಿ ಸಾರ್ಥಕತೆ ಪಡೆಯಿತು.
ಸಾಂಸ್ಕೃತಿಕ ತವರೂರಾದ ಶಿವಮೊಗ್ಗದಲ್ಲಿ ಕಾರ್ಯಕ್ರಮಗಳ ಆಯೋಜನೆ ಮಾಡಿದ ಸಹಚೇತನ ನಾಟ್ಯಾಲಯದ ಸರ್ವರಿಗೂ ಅಭಿನಂದನೆಗಳು ತುಂಬು ಹೃದಯದ ಧನ್ಯವಾದಗಳು.
-ಡಾ. ಮೈತ್ರೇಯಿ ಆದಿತ್ಯ ಪ್ರಸಾದ್ ಸಂಸ್ಕೃತ ಉಪನ್ಯಾಸಕರು ಶಿವಮೊಗ್ಗ.
ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಪ್ರಕಟಿಸಿದೆ.
ಟಾಪರ್ಗಳ ಸಾಲಿನಲ್ಲಿ ರಾಜ್ಯದ ಆರು ವಿದ್ಯಾರ್ಥಿಗಳು ಮಿಂಚಿದ್ದಾರೆ. ಬಾಲಕರ ಟಾಪ್ ಟೆನ್ ಪಟ್ಟಿಯಲ್ಲಿ ರಾಜ್ಯದ ಮೂವರು ಹಾಗೂ ಬಾಲಕಿಯರ ವಿಭಾಗದಲ್ಲಿ ಮೂವರು ಸೇರಿದ್ದಾರೆ.
ರಾಜ್ಯದ ಹೃಷಿಕೇಶ್ ನಾಗಭೂಷಣ ಗಂಗೂಲೆ 715 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಾರೆ. ಎಸ್.ಆರ್. ಕೃಷ್ಣ 710 ಅಂಕ ಪಡೆದು 8ನೇ ಸ್ಥಾನದಲ್ಲಿದ್ದಾರೆ. ವೃಜೇಶ್ ವೀಣಾಧರ ಶೆಟ್ಟಿ 13ನೇ ರ್ಯಾಂಕ್ ಗಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ರುಚಾ ಪಾವಶೆ ಎರಡನೇ ರ್ಯಾಂಕ್ ಪಡೆದಿದ್ದರೆ, ಅಖಿಲ ಭಾರತ ಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬಾಲಕಿಯರಲ್ಲಿ ಶುಭಾ ಕೌಶಿಕ್ 7, ಮುರುಕಿ ಶ್ರೀ ಬಾರುಣಿ ಬಾಲಕಿಯರಲ್ಲಿ 10ನೇ ರ್ಯಾಂಕ್ ಗಳಿಸಿದ್ದಾರೆ.
ದೇಶಾದ್ಯಂತ 3,750 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ 16 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು.
ಜನ ಸಾಮಾನ್ಯರಿಗೆ ಆರೋಗ್ಯ, ಶಿಕ್ಷಣದ ಬಗ್ಗೆ ಅರಿವು ಮೂಡಿಸಿದರೆ ರೋಗಗಳ ಬಗ್ಗೆ ಮುಂಜಾಗ್ರತೆವಹಿಸಲು ಸಾದ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಸೂಚಿಸಿದರು.
ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ರೋಗಗಳ ಹರಡುವಿಕೆ, ಲಕ್ಷಣ, ಮುಂಜಾಗ್ರತಾ ಕ್ರಮ, ಚಿಕಿತ್ಸೆಯ ಬಗ್ಗೆ ಮಾಹಿತಿ ಹೊಂದಿರಬೇಕು.
ಇದರಿಂದ, ಸಾಂಕ್ರಾಮಿಕ ರೋಗಗಳು ಹರಡುವುದನ್ನು ನಿಯಂತ್ರಿಸಬಹುದು ಎಂದರು.
ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ರೋಗವಾಹಕಗಳಾದ ಸೊಳ್ಳೆ ಸೇರಿದಂತೆ ಇತರ ಕೀಟಗಳ ಹತೋಟಿಯ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಯೋಜನೆ ರೂಪಿಸಿ ತಿಂಗಳವಾರು ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಕಡಿಮೆಯಾಗುತ್ತಿದೆ. 2028ರೊಳಗೆ ಜಿಲ್ಲೆ ಮಲೇರಿಯ ಮುಕ್ತವಾಗಬೇಕು. ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದೆ. ಹತೋಟಿಗೆ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಸಹಕಾರ ಅಗತ್ಯ ಎಂದರು.
ಬಾಣಂತಿಯರಿಗೆ ಆರಂಭದಲ್ಲಿಯೇ ತಾಯಿ ಕಾರ್ಡ್‌ಗಳನ್ನು ನೀಡಿ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಬೇಕು. ಪೌಷ್ಟಿಕ ಆಹಾರ ಸೇವನೆಗೆ ಮಾಹಿತಿ ನೀಡಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮತುವರ್ಜಿ ವಹಿಸಿ ಕೆಲಸ ಮಾಡಿದರೆ ಶಿಶು ಹಾಗೂ ತಾಯಿ ಮರಣ ಪ್ರಮಾಣ ಕಡಿಮೆಗೊಳಿಸಬಹುದು ಎಂದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 217 ಹಂದಿ ಜ್ವರ ಪ್ರಕರಣಗಳು ಕಂಡುಬಂದಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಮಂಕಿ ಫಾಕ್ಸ್ ಪ್ರಕರಣ ಸಂಬಂಧ 21 ಶಂಕಿತರ ನಿಗಾವಹಿಸಲಾಗಿದೆ. ಯಾರಲ್ಲೂ ಸೋಂಕು ಪತ್ತೆಯಗಿಲ್ಲ. ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆಗೆ ಬರುವ ಜಿಲ್ಲೆಯ ರೋಗಿಗಳಿಗೆ ಶೇ. 50ರಷ್ಟು ಹಾಸಿಗೆ ಮೀಸಲಿಡಲು ಖಾಸಗಿ ಆರೋಗ್ಯ ಸಂಸ್ಥೆಗಳು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಕ್ಷಯ ರೋಗ ನಿಯಂತ್ರಣಕ್ಕೆ ಹೆಚ್ಚು ಪರೀಕ್ಷೆ ಮಾಡಿ, ಸಂಭಾವ್ಯ ಕ್ಷಯರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಇದರಿಂದ ಕ್ಷಯ ಹರಡುವುದನ್ನು ತಡೆಯಬಹುದು. ಜಿಲ್ಲೆಯಲ್ಲಿ ಪ್ರಸ್ತುತ 9,540 ಜನರಿಗೆ ಕ್ಷಯ ಪರೀಕ್ಷೆ ನಡೆಸಲಾಗಿದೆ. 703 ಮಂದಿಯಲ್ಲಿ ರೋಗ ಪತ್ತೆಯಾಗಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ತಂಬಾಕು ಮುಕ್ತ ಗ್ರಾಮವಾಗಿ ಘೋಷಿಸಲಾಗಿರುವ ಕೋಡಿಬೆಂಗ್ರೆ ಗ್ರಾಮದ ಗ್ರಾಮಸ್ಥರಿಗೆ ಪ್ರಶಂಸನೀಯ ಪ್ರಮಾಣಪತ್ರ ನೀಡಲಾಯಿತು. ಇತರೆ ಗ್ರಾಮಗಳನ್ನು ತಂಬಾಕು ಹಾಗೂ ಮದ್ಯಮುಕ್ತಗೊಳಿಸಲು ಮುಂದಾಗಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಇದ್ದರು.