Sunday, March 22, 2026
Sunday, March 22, 2026
Home Blog Page 1444

ಪೋಲಿಸ್ ಸಿಬ್ಬಂದಿ ರಾತ್ರಿ ಪ್ರಯಾಣ ನಿರ್ಬಂಧ ಆದೇಶ

0

ಇತ್ತೀಚಿಗೆ ಆಂಧ್ರಪ್ರದೇಶದ ಚಿತ್ತೂರು ಬಳಿಯಲ್ಲಿ ಗಾಂಜಾ ಗ್ಯಾಂಗ್ ನ ಮೇಲೆ ದಾಳಿಯ ವೇಳೆಯಲ್ಲಿ ಪೊಲೀಸರ ಕಾರು ಅಪಘಾತಗೊಂಡಿತ್ತು. ಈ ಘಟನೆಯಲ್ಲಿ ಸಬ್ ಇನ್ಸ್ ಪೆಕ್ಟರ್, ಕಾನ್ಸ್ ಟೇಬಲ್ ಸೇರಿ 3ಜನ ಸಾವನ್ನಪ್ಪಿದ್ದರು.

ಈ ನಂತರ ಎಚ್ಚೆತ್ತುಕೊಂಡಿರುವಂತ ಸರ್ಕಾರ, ಪೊಲೀಸರ ರಾತ್ರಿ ಪ್ರಯಾಣವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
ರಾಜ್ಯ ಪೊಲೀಸ್ ಇಲಾಖೆಯ ಸಿಐಡಿ, ಡಿಜಿಪಿ ಆದೇಶ ಹೊರಡಿಸಿದೆ. ಕಾನೂನು ಸುವ್ಯವಸ್ಥೆ ಬಂದೋಬಸ್ತ್, ಚುನಾವಣಾ ಕರ್ತವ್ಯ, ಅಪರಾಧ ಪ್ರಕರಣಗಳ ತನಿಖೆ ಸೇರಿದಂತೆ ಇನ್ನಿತರ ಅನ್ಯ ಕಾರ್ಯದ ಮೇಲೆ ನಿಯೋಜನೆಗೊಳ್ಳುವಂತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಯಾವುದೇ ವಾಹನದಲ್ಲಿ ಕರ್ತವ್ಯದ ನಿಮಿತ್ತ ಅಥವಾ ಕರ್ತವ್ಯದಿಂದ ಬಿಡುಗಡೆಯಾದ ನಂತ್ರ, ಸುರಕ್ಷತೆಯ ದೃಷ್ಠಿಯಿಂದ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಪ್ರಯಾಣ ಮಾಡದಂತೆ ತಿಳಿಸಲಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಪ್ರಕಾರ ದೇಶದಲ್ಲಿ 2021ರಲ್ಲಿ ವಿವಿಧ ದರ್ಜೆಯ 427 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ರಾತ್ರಿ ಪ್ರಯಾಣದ ವೇಳೆಯಲ್ಲಿ ಅಪಘಾತಗಳಿಂದಾಗಿ ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ 4 ಜನ ಮೃತಪಟ್ಟಿದ್ದರೇ, 25 ಮಂದಿ ರಾತ್ರಿ ಕರ್ತವ್ಯದ ಮೇಲೆ ತೆರಳುತ್ತಿದ್ದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿಸಲಾಗಿದೆ.

ಈ ಹಿನ್ನಲೆಯಲ್ಲಿಯೇ ಪೊಲೀಸರ ಹಿತದೃಷ್ಠಿಯಿಂದ ರಾತ್ರಿ ಪ್ರಯಾಣ ನಿರ್ಬಂಧಿಸಿ, ಪೊಲೀಸ್ ಇಲಾಖೆಯಿಂದ ಆದೇಶಿಸಲಾಗಿದೆ.

ದಟ್ಟಣೆಯ ಸಂಚಾರ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರದ ಚಿಂತನೆ- ಬೊಮ್ಮಾಯಿ

0

ಬೆಂಗಳೂರು ನಗರದ ಸಂಚಾರ ದಟ್ಟಣೆಯ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚಿಸಲು ತೀರ್ಮಾನಿಸಲಾಗಿದ್ದು, ಮುಂದಿನ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿ, ಕಾಯ್ದೆ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಇಂದು ಬೆಂಗಳೂರಿನಲ್ಲಿ ಕೇಂದ್ರದ ಭೂ ಸಂಪರ್ಕ ಮತ್ತು ಹೆದ್ದಾರಿಗಳ ಸಚಿರ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಸಿಎಂ ನಂತ್ರ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬಿಬಿಎಂಪಿ, ಬಿಡಿಎ, ಬಿಎಂಆರ್ ಡಿಎ, ಲೋಕೋಪಯೋಗಿ ಇಲಾಖೆ ಗಳಿಂದ ಹಲವು ಕಾಮಗಾರಿಗಳು ನಡೆಯುತ್ತಿರುತ್ತವೆ. ಈ ಬಗ್ಗೆ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಿದರೆ ಬಹಳಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಎಲ್ಲ ಸಂಸ್ಥೆಗಳ ಜೊತೆಗೆ ರೈಲ್ವೆ , ಮಟ್ರೋ ವನ್ನು ಒಳಗೊಂಡಂತೆ ಬೆಂಗಳೂರು ಮತ್ತು ಬೆಂಗಳೂರು ಸುತ್ತಮುತ್ತಲಿನ ಸಂಚಾರ ದಟ್ಟಣೆಯ ನಿರ್ವಹಣೆಗೆ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಇಡೀ ರಾಷ್ಟ್ರದ ರಸ್ತೆ ಸಾರಿಗೆ ವ್ಯವಸ್ಥೆ ಬಗ್ಗೆ ‘ಮಂಥನ’ ಸಮಾವೇಶವನ್ನು 3 ದಿನಗಳ ಕಾಲ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ರಸ್ತೆ ಹಾಗೂ ಸಂಚಾರದಟ್ಟಣೆಯ ಬಗ್ಗೆ ಕೇಂದ್ರ ಸಚಿವರೊಂದಿಗೆ ಸಭೆ ನಡೆಸಲಾಗಿದ್ದು, ಕೇಂದ್ರದ ಸಹಯೋಗ ಮತ್ತು ಸಹಕಾರವನ್ನು ಕೋರಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಬೆಂಗಳೂರಿನ ಒಳಗೆ ಮತ್ತು ಹೊರಗೆ ಹಾದುಹೋಗುತ್ತವೆ. ಸಂಚಾರ ದಟ್ಟಣೆಯ ನಿವಾರಣೆಗೆ ರಸ್ತೆ ನಿರ್ಮಾಣಗಳು ಬಲು ಮುಖ್ಯವಾಗಿದೆ. ಹಲವು ವಿಚಾರಗಳನ್ನು ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಆಯುಷ್ಮಾನ್ ಭಾರತ್ ಗೆ ಪರಿಶಿಷ್ಟ ವರ್ಗಗಳ ವಿರಳ ಕಾಯಿಲೆ ಚಿಕಿತ್ಸೆಗೂ ಅನುವು

0

ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ ಅಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿರಳ ಕಾಯಿಲೆಗಳಿಗೂ ಚಿಕಿತ್ಸಾ ವೆಚ್ಚ ಭರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗೆಯೇ, ಹೆಚ್ಚು ಚಿಕಿತ್ಸಾ ವೆಚ್ಚ ತಗುಲುವ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ.

ಈ ಮೂಲಕ ಬಡವರ ಆರೋಗ್ಯ ರಕ್ಷಣೆಗೆ ಹೊಸ ಕೊಡುಗೆಯನ್ನು ಸರ್ಕಾರ ನೀಡಿದೆ.

ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ ಅಡಿ ವಿವಿಧ ಕಾಯಿಲೆಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ. ಆದರೆ, ಕೆಲ ವಿರಳ ಕಾಯಿಲೆಗಳನ್ನು ಈ ಯೋಜನೆಯಡಿ ಸೇರಿಸಲಾಗಿಲ್ಲ. ಅಲ್ಲದೇ ಇಂತಹ ರೋಗಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಆ ವೆಚ್ಚವನ್ನು ಭರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಚಿಕಿತ್ಸೆಗಳು ಹಾಗೂ ವೆಚ್ಚದ ಪಟ್ಟಿಯನ್ನು ಸಿದ್ಧಪಡಿಸಿದ್ದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌, ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ.

ಮೊಬೈಲ್ ಚಟ ಬಿಡು ಎಂದ ಪೋಷಕರ ಮಾತಿಗೆ ಜೀವವನ್ನೇ ಬಿಟ್ಟ ಮಗ

0

ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಭದ್ರಾವತಿಯ ಎಚ್.ಕೆ. ಜಂಕ್ಷನ್‌ನ ಯಶವಂತ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯಾಗಿದ್ದಾನೆ.

ಯಶವಂತ್ ಆರ್.ಪ್ರಾಜೆಕ್ಟ್ ನಲ್ಲಿರುವ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ. ಕರೊನಾ ಸಂದರ್ಭದಲ್ಲಿ ಆನ್‌ಲೈನ್ ತರಗತಿಗಾಗಿ ಯಶವಂತನಿಗೆ ಪಾಲಕರು ಮೊಬೈಲ್ ಕೊಡಿಸಿದ್ದರು. ಇದೀಗ ರೆಗ್ಯುಲರ್ ತರಗತಿಗಳು ನಡೆಯುತ್ತಿದ್ದರೂ ಕಾಲೇಜಿನಿಂದ ಮನೆಗೆ ಬಂದಾಗ ಯಶವಂತ್ ಮೊಬೈಲ್ ಹಿಡಿದುಕೊಂಡಿರುತ್ತಿದ್ದ.

ಮೊಬೈಲ್ ಹೆಚ್ಚಾಗಿ ಬಳಸಬೇಡ ಎಂದು ತಂದೆ ಸುರೇಶ್ ಯಶವಂತ್‌ಗೆ ಬುದ್ಧಿಮಾತು ಹೇಳಿದ್ದರು. ಇಷ್ಟಕ್ಕೆ ಬೇಸರಗೊಂಡ ಯಶವಂತ್ ಸೆ.3ರಂದು ಕಾಲೇಜಿಗೆ ಹೋಗುವುದಾಗಿ ಹೇಳಿ ಹೋಗಿದ್ದಾನೆ. ಮನೆಗೆ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಸುರೇಶ್ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಆದರೆ ಗುರುವಾರ ಎಚ್.ಕೆ.ಜಂಕ್ಷನ್ ಬಳಿಯ ಭದ್ರಾ ನಾಲೆಯಲ್ಲಿ ಯಶವಂತ್ ಮೃತದೇಹ ಪತ್ತೆಯಾಗಿದೆ. ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಶ್ರೀನರಸಿಂಹ ದೇಗುಲ ಅಭಿವೃದ್ಧಿಗೆ₹4 ಕೋಟಿ ಅನುದಾನಕ್ಕೆ ಮನವಿ- ಬಿ.ವೈ.ರಾಘವೇಂದ್ರ

0

ಭದ್ರಾವತಿಯ ಐತಿಹಾಸಿಕ ಪ್ರಸಿದ್ದ ಶ್ರೀ ಲಕ್ಷಿನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಸುಮಾರು 50 ಲಕ್ಷ ರೂ. ಅನುದಾನದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಶಿಥಿಲಗೊಳ್ಳುತ್ತಿರುವ ದೇವಾಲಯವನ್ನು ಜೀರ್ಣೋದ್ದಾರ ಮಾಡಲು ಹಾಗೂ ದೇವಾಲಯ ಅಭಿವೃದ್ಧಿಗಾಗಿ ಕೇಂದ್ರ ಪುರಾತತ್ವ ಇಲಾಖೆಯಿಂದ ಸುಮಾರು 4 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದರು.

ಕೇಂದ್ರದ ಅನುದಾನ ದೊರೆಯುವುದು ತಡವಾದರೆ, ಸದ್ಯ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆಗೊಂಡಿರುವ 50 ಲಕ್ಷ ರೂ. ಅನುದಾನದಲ್ಲಿ ದೇವಾಲಯದ ಆವರಣದಲ್ಲಿ ಯಾತ್ರಿ ನಿವಾಸ, ಶೌಚಾಲಯ ಸೇರಿದಂತೆ ಭಕ್ತರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳ ನಿರ್ಮಾಣ ಹಾಗೂ ದೇವಾಲಯದಲ್ಲಿ ಸೋರುವುದನ್ನು ತಡೆಯಲು ತುರ್ತು ಕ್ರಮವನ್ನು ಶೀಘ್ರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿ ಶೇಜೇಶ್ವರ್, ಎಸಿ ದೊಡ್ಡಣ್ಣ ಗೌಡ, ಪ್ರಮುಖರಾದ ಎಸ್. ದತ್ತಾತ್ರಿ,ಕೆಂಚೇನಳ್ಳಿ ಕುಮಾರ್, ಆನಂದ್, ಮಂಗೋಟೆ ರುದ್ರೇಶ್, ತಹಶೀಲ್ದಾರ್ ಪ್ರದೀಪ್ ನಿಕ್ಕಂ, ಎಇಇ ದಯಾನಂದ್, ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾರುತಿ, ಪ್ರಧಾನ ಅರ್ಚಕ ರಂಗನಾಥ್ ಶರ್ಮಾ, ಸಹಾಯಕ ಅರ್ಚಕ ಶ್ರೀನಿವಾಸ್, ಪ್ರಮುಖರಾದ ನರಸಿಂಹಾಚಾರ್, ರಾಮಲಿಂಗಯ್ಯ, ನಗರಸಭಾ ಸದಸ್ಯೆ ಅನುಪಮಾ ಚೆನ್ನೇಶ್ ಹಾಗೂ ಹಲವರು ಉಪಸ್ಥಿತರಿದ್ದರು.

ಎಪ್ಪತ್ತು ಸಂವತ್ಸರ ಇಂಗ್ಲೆಂಡ್ ಆಳಿದ ಹಿರಿಯರಸಿ ಎಲಿಜಬೆತ್ 2 ನಿಧನ

0

ಬರೋಬ್ಬರಿ 70 ವರ್ಷಗಳ ಕಾಲ ಇಂಗ್ಲೆಂಡ್‌ ಅನ್ನು ಆಳಿದ್ದ ರಾಣಿ 2ನೇ ಎಲಿಜಬೆತ್‌(96) ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ದೀರ್ಘ‌ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಸಾರ್ವಜನಿಕ ವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ಲಿಜ್‌ ಟ್ರಾಸ್‌ ಅವರನ್ನು ನೂತನ ಪ್ರಧಾನಿಯಾಗಿ ಅಧಿಕೃತವಾಗಿ ನೇಮಕ ಮಾಡಿದ ಕಾರ್ಯಕ್ರಮದಲ್ಲಿ ಸಂಪ್ರದಾಯದಂತೆ ರಾಣಿ ಭಾಗಿಯಾಗಿದ್ದರು.

ಅದರ ಬೆನ್ನಲ್ಲೇ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಸ್ಕಾಟ್ಲೆಂಡ್‌ನ‌ಲ್ಲಿರುವ ನಿವಾಸದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ತಡರಾತ್ರಿ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು ಎಂದು ಬಕಿಂಗ್‌ಹ್ಯಾಂ ಅರಮನೆ ತಿಳಿಸಿದೆ.

ರಾಣಿ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅರಮನೆಯ ವೈದ್ಯರ ಸಲಹೆ ಮೇರೆಗೆ, 2ನೇ ಎಲಿಜಬೆತ್‌ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸ್ಕಾಟ್ಲೆಂಡ್‌ನ‌ ಬಲ್ಮೋರಾಲ್‌ನ ನಿವಾಸಕ್ಕೆ ಧಾವಿಸಿದ್ದರು.

ಯುಕೆಯಾದ್ಯಂತ 10 ದಿನಗಳ ಶೋಕಾಚರಣೆ ನಡೆಯಲಿದೆ. 2ನೇ ಎಲಿಜಬೆತ್‌ ಅವರು 1952ರ ಫೆ. 6ರಂದು ತಮ್ಮ 25ನೇ ವಯಸ್ಸಿನಲ್ಲಿ ರಾಣಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಅಧಿಕಾರಾವಧಿಯಲ್ಲಿ 15 ಪ್ರಧಾನಿಗಳನ್ನು ನೋಡಿದ್ದಾರೆ.

ವಿನ್‌ಸ್ಟನ್‌ ಚರ್ಚಿಲ್‌ರಿಂದ ಲಿಜ್‌ ಟ್ರಾಸ್‌ವರೆಗೆ ಪ್ರಧಾನಿಗಳ ನೇಮಕವನ್ನು ಇವರು ಮಾಡಿದ್ದರು.

ರಾಣಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಯುಕೆ ಪ್ರಧಾನಿ ಲಿಜ್‌ ಟ್ರಾಸ್‌ ಸೇರಿದಂತೆ ಅನೇಕ ವಿಶ್ವನಾಯಕರು ಕಂಬನಿ ಮಿಡಿದಿದ್ದಾರೆ.

ಶಿಮುಲ್ ಗೆ ಆಹಾರ ಸಂರಕ್ಷಣಾ ಮಾನ್ಯತಾ ಪ್ರಮಾಣ ಪತ್ರ

0

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ 2022 ರ ಜುಲೈ ಮಾಹೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಹಾಗೂ ಆಹಾರ ಸುರಕ್ಷತೆ ಪ್ರತೀಕವಾದ ಎಫ್‍ಎಸ್‍ಎಸ್‍ಸಿ(ಫುಡ್ ಸೇಫ್ಟಿ ಸಿಸ್ಟಂ ಸರ್ಟಿಫಿಕೇಟ್) ದೃಢೀಕರಣ ಪ್ರಮಾಣ ಪತ್ರ ಲಭಿಸಿರುತ್ತದೆ.

ಒಕ್ಕೂಟದ ಮಾಚೇನಹಳ್ಳಿ ಕಚೇರಿಯಲ್ಲಿ ಈSSಅ:22000:ಗಿ5.1 ದೃಢೀಕರಣ ಪತ್ರವನ್ನು ಅಧ್ಯಕ್ಷರಾದ ಶ್ರೀಪಾದರಾವ್‍ರವರು ನಿರ್ದೇಶಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

2016 ರ ಜುಲೈ ಮಾಹೆಯಲ್ಲಿ ಐಎಸ್‍ಓ(ಇಂಟರ್‍ನ್ಯಾಷನಲ್ ಆರ್ಗನೈಸೇಷನ್ ಫಾರ್ ಸ್ಟ್ಯಾಂಡರ್ಡ್) 22000-2005 ದೃಢೀಕರಣ ಪ್ರಮಾಣ ಪತ್ರ ಪಡೆದಿದ್ದು ಈ ದೃಢೀಕರಣವು ರಾಷ್ಟ್ರಮಟ್ಟದಲ್ಲಿ ಮಹತ್ವ ಹೊಂದಿರುತ್ತದೆ ಹಾಗೂ ಉತ್ತಮ ಗುಣಮಟ್ಟದ ಪ್ರತೀಕವಾಗಿರುತ್ತದೆ. ಆದಕಾರಣ ಉತ್ತಮ ಮಾರುಕಟ್ಟೆ ಒದಗಿಸಲು ಸಹಕಾರಿಯಾಗಿರುತ್ತದೆ. ಇದರ ಮುಂದುವರೆದು ಆವೃತ್ತಿಯಾದ ಈSSಅ:22000:ಗಿ5.1 ದೃಢೀಕರಣ ಪತ್ರವು ಈ ವರ್ಷದ ಜುಲೈ ಮಾಹೆಯಲ್ಲಿ ಲಭಿಸಿರುತ್ತದೆ.

ಐಎಸ್‍ಓ ವಿಶ್ವಮಾನ್ಯತೆ ಪಡೆದ ಸಂಸ್ಥೆಯಾಗಿದ್ದು ಈ ಸಂಸ್ಥೆಯು ಆಹಾರ ಸಂಸ್ಕರಣಾ ಘಟಕಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳ ಗುಣಮಟ್ಟವನ್ನು, ಗ್ರಾಹಕರ ಹಂತದಲ್ಲಿ ಪರೀಕ್ಷೆ ಮಾಡಿ, ಆಹಾರ ಪದಾರ್ಥಗಳಿಂದ ಗ್ರಾಹಕರಿಗೆ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಗಮನಿಸಲಾಗಿರುತ್ತದೆ. ವಿವಿಧ ರಾಷ್ಟ್ರಗಳ ಸದಸ್ಯತ್ವ ಹೊಂದಿದ ತಾಂತ್ರಿಕ ಅಧ್ಯಯನ ಸಮಿತಿಯು ಸಂಸ್ಕರಣ ಪದ್ದತಿ, ಮೂಲಭೂತ ಸೌಕರ್ಯ ಲಭ್ಯತೆ, ತಾಂತ್ರಿಕ ನೈಪುಣ್ಯತೆ ಹೊಂದಿದ ಅಧಿಕಾರಿ/ಸಿಬ್ಬಂದಿ ಇರುವಿಕೆ, ಇತ್ಯಾದಿ ಕುರಿತು ಆಹಾರ ಸುರಕ್ಷತಾ ಪ್ರಾಧಿಕಾರದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಉತ್ಪಾದನಾ ವಿಧಿವಿಧಾನಗಳು, ಆಹಾ ಪದಾರ್ಥಗಳ ಗುಣಮಟ್ಟ, ಸ್ವಚ್ಚತೆ ಹಾಗೂ ಮೂಲಭೂತ ಸೌಕರ್ಯಗಳ ಪರಿಶೋಧನೆ ಮಾಡಿಸಿ, ನಿಯಮಾವಳಿಗಳ ಪ್ರಕಾರ ಆಹಾರ ಉತ್ಪನ್ನ ಘಟಕಗಳು ಉತ್ಪಾದನೆ ಮಾಡಿದ್ದು ಕಂಡುಬಂದರೆ ಮಾತ್ರ ಐಎಸ್‍ಓ ದೃಢೀಕರಣ ಪ್ರಮಾಣ ನೀಡಲಾಗುತ್ತದೆ. ಅಂತಹ ಪ್ರಮಾಣಪತ್ರವನ್ನು ಒಕ್ಕೂಟ ಪಡೆದಿದೆ.

ಎಫ್‍ಎಸ್‍ಎಸ್‍ಸಿ ದೃಢೀಕರಣ ಐಎಸ್‍ಓ ದೃಢೀಕರಣದ ಮುಂದುವರಿದ ಆವೃತ್ತಿಯಾಗಿದ್ದು ಇಲ್ಲಿ ಆಯ್ದ ಪ್ರಮಾಣೀಕರಣ ಸಂಸ್ಥೆಗಳಿಂದ ಅಧಿಕಾರಿಗಳು, ನಿಯೋಜಿಸಿದ ಸಮಯದಲ್ಲಿ ಒಕ್ಕೂಟಕ್ಕೆ ಭೇಟಿ ನೀಡಿ, ಗುಣಮಟ್ಟ ಹಾಗೂ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಕೂಲಂಕುಷವಾಗಿ ಪರಿಶೀಲಿಸಿ ಅವರ ಪ್ರಮಾಣಿತ ನಿಯತಾಂಕಗಳು ಸಮರ್ಪಕವಾಗಿ ಪೂರ್ತಿಯಾದ ನಂತರದಲ್ಲಿ ಸಂಬಂಧಿಸಿದ ದೃಢೀಕರಣ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಒಮ್ಮೆ ದೃಢೀಕರಣ ಪಡೆದ ನಂತರ ಸಂಬಂಧಿಸಿದ ಪ್ರಮಾಣೀಕರಿಸಿದ ಸಂಸ್ಥೆಗಳಿಂದ ಅಧಿಕಾರಿಗಳು ಯಾವುದೇ ಸಮಯದಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಇಲ್ಲದೇ ಒಕ್ಕೂಟಕ್ಕೆ ಭೇಟಿ ನೀಡಿ ಪರಿಶೀಲಿಸಬಹುದಾಗಿರುತ್ತದೆ. ಈ ದೃಢೀಕರಣವು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಮಹತ್ವ ಹೊಂದಿರುತ್ತದೆ. ಮತ್ತು ಈ ದೃಢೀಕರಣ ಪಡೆದ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತವೆ.

ಅದೇ ರೀತಿ ನಮ್ಮ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಒಕ್ಕೂಟಕ್ಕೆ ಸಂಬಂಧಿಸಿದ ಮಾಹಿತಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸುವ ಸಂಸ್ಥೆಗಳಿಗೆ ಸಿಗುತ್ತವೆ. ಇದರಿಂದ ನಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಿಕೊಡುವಲ್ಲಿ ಸಹಕಾರಿಯಾಗುತ್ತದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ಬಸವರಾಜ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಸೆ.12 ರಂದು ಡಾಕ್ ಅದಾಲತ್

0

ಶಿವಮೊಗ್ಗ ಅಂಚೆ ವಿಭಾಗದ 2022 ರ ಸೆಪ್ಟೆಂಬರ್ ಮಾಹೆಗೆ ಕೊನೆಗೊಳ್ಳುವ ತ್ರೈಮಾಸಿಕ ಡಾಕ್ ಅದಾಲತ್ ಕಾರ್ಯಕ್ರಮವನ್ನು ಸೆಪ್ಟೆಂಬರ್ 12 ರಂದು ಬೆಳಿಗ್ಗೆ 11 ರಿಂದ 12 ಗಂಟೆವರೆಗೆ ಅಂಚೆ ಅಧೀಕ್ಷಕರ ಕಚೇರಿ, ಶಿವಮೊಗ್ಗ ಅಂಚೆ ವಿಭಾಗ, ಕೋಟೆ ರಸ್ತೆ, ಶಿವಮೊಗ್ಗ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಅಂಚೆ ಇಲಾಖೆಯ ಕುಂದುಕೊರತೆಗಳು ಅಥವಾ ಸಲಹೆಗಳು ಇದ್ದಲ್ಲಿ ಅಂಚೆ ಅಧೀಕ್ಷಕರ ಕಚೇರಿ, ಶಿವಮೊಗ್ಗ ಇವರಿಗೆ ಸೆ.09 ರೊಳಗೆ ಕಳುಹಿಸಬಹುದು ಹಾಗೂ ಡಾಕ್ ಅದಾಲತ್‍ನಲ್ಲಿ ಭಾಗವಹಿಸಬಹುದೆಂದು ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ

ಕೆಲಸ ಬೇಕೆ?


ಪದವಿಯಾಗಿದ್ದು ಶಿಕ್ಷಣ, ಅಥವಾ ಇಂಜಿನಿಯರಿಂಗ್ ಹಿನ್ನೆಲೆಯುಳ್ಳ ಹತ್ತು ಜನ ಯುವತಿ/ಯುವಕರಿಗೆ ಉದ್ಯೋಗವಿದೆ.
ಸ್ಥಳ: ಶಿವಮೊಗ್ಗ ತಾಲ್ಲೂಕು.
ಶಿವಮೊಗ್ಗ ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಹುದ್ದೆ.
ವೇತನ ಮತ್ತು ಪರ್ಕ್ಸ್ (ಟಿ.ಎ) ಇದ್ದು ಹೆಚ್ಚಿನ ಮಾಹಿತಿಗಾಗಿ ಶ್ರೀ ಸುಧಾಕರ್ ಇವರನ್ನು ಸಂಪರ್ಕಿಸಲು ಕೋರಿದೆ.
ಸಂಖ್ಯೆ 9916448652

ಮಾಹಿತಿ ಕೃಪೆ: ಶ್ರೀ. ಎನ್. ಗೋಪಿನಾಥ್, ಅಧ್ಯಕ್ಷರು, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಶಿವಮೊಗ್ಗ

ಶಿವಮೊಗ್ಗದ ನ್ಯೂ ತುಂಗಾ ಸೇತುವೆ ಬಳಿ ಬಸ್ ಬೈಕ್ ಢಿಕ್ಕಿ: ಬೈಕ್ ಸವಾರರಿಗೆ ತೀವ್ರ ಗಾಯ

0

ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಹತ್ತಿರ ಬೈಕ್ ಹಾಗೂ ಸಿಟಿ ಬಸ್ ಮುಖಾ ಮುಖಿ ಡಿಕ್ಕಿ ಹೊಡೆದ ಹಿನ್ನಲೆಯಲ್ಲಿ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತುಂಗಾ ನದಿ ಹೊಸ ಸೇತುವೆ ಮೇಲೆ ಘಟನೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಳೆ ಬಿಸ್ ಸ್ಟಾಪ್ ಕಡೆಯಿಂದ ಪಲ್ಸರ್‌ ಬೈಕಿನಲ್ಲಿ ತೆರಳುತ್ತಿದ್ದ ಯುವಕರು, ಎದುರುಗಡೆಯಿಂದ ಬರುತ್ತಿದ್ದ ಸಿಟಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾರೆ.

ಈ ಘಟನೆಯಲ್ಲಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಬೈಕ್ ಸವಾರರು ಮೂಲತಃ ಚಿಕ್ಕಲ್ ಐಡಾವಣೆಗೆ ಸೇರಿದವರು ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಬೈಕಿನ ಮುಂಭಾಗ ಸಂಪೂರ್ಣವಾಗಿ ಜಜ್ಜಿ ಹೋಗಿದೆ. ಬಸ್ಸಿನ ಮುಂಭಾಗಕ್ಕೂ ಹಾನಿಯಾಗಿದೆ. ಅಪಘಾತ ನಡೆಯುತ್ತಿದ್ದಂತಯೇ, ತುಂಗಾ ನದಿ ಹೊಸ ಸೇತುವೆ ಮೇಲೆ ಜನಸಂದಣಿ ಉಂಟಾಗಿದೆ. ಇದರಿಂದ ಟ್ರಾಫಿಕ್ ಜಾಮ್ ಕೂಡ ಉಂಟಾಗಿರುವುದು ಈ ಸಂದರ್ಭದಲ್ಲಿ ಕಂಡುಬಂದಿದೆ.