Monday, March 23, 2026
Monday, March 23, 2026
Home Blog Page 1429

ಜೋಡಿಗಳ ಅಂದ ಹೆಚ್ಚಿಸುವ ವೆಡಿಂಗ್ ಶೂಟ್

0

ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಎಂಬುವುದು ಸರ್ವೇಸಾಮಾನ್ಯವಾಗಿದೆ. ವಿಭಿನ್ನವಾದಂತಹ ಕಾನ್ಸೆಪ್ಟ್ಗಳನ್ನ ಇಟ್ಟುಕೊಂಡು ನಾನಾ ಬಗೆಯ ಫೋಟೋ ಶೂಟ್ ಗಳನ್ನು ಮಾಡ್ತಾರೆ. ಜೊತೆಗೆ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮುಖಾಂತರ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

ಸಾಮಾನ್ಯವಾಗಿ ಪ್ರಿ ವೆಡ್ಡಿಂಗ್ ಶೂಟ್ ನನ್ನು ಟ್ರೆಡಿಷನಲ್ ವೇ ಕಾನ್ಸೆಪ್ಟ್ ನಲ್ಲಿ ಹೆಚ್ಚು ಫೋಟೋಶೂಟ್ ನೋಡಿರುತ್ತೇವೆ. ಅದೇ ರೀತಿ ಓರ್ವ ಮದುಮಗಳು ತನ್ನ ವೆಡ್ಡಿಂಗ್ ಫೋಟೋಶೂಟ್ ವಿಭಿನ್ನ ಶೈಲಿಯಲ್ಲಿ ಮಾಡಿಸಿಕೊಂಡಿದ್ದಾಳೆ. ಅದೇನು ಅಂದ್ರೆ ತನ್ನ ವೆಡ್ಡಿಂಗ್ ಫೋಟೋಶೂಟ್ ನನ್ನು ಜಿಮ್ ನಲ್ಲಿ ಮಾಡಿಸಿಕೊಂಡಿದ್ದಾಳೆ.

ಹೌದು, ಚಂದದ ಸೀರೆಯನ್ನುಟ್ಟು, ಅಂದದ ಒ ಡವೆಯನ್ನ ಹಾಕಿ, ಮದುಮಗಳ ಡ್ರೆಸ್ ತೊಟ್ಟು ಜಿಮ್ ನಲ್ಲಿ 25 ಕೆಜಿ ಡಂಬಲ್ಸ್ ಎತ್ತಿ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದಾಳೆ. ಈಕೆಯ ಈ ಫೋಟೋ ಶೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿದೆ.

ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಈ ವಿಡಿಯೋ 17ಸಾವಿರ ಜನರು ವೀಕ್ಷಿಸಿದ್ದಾರೆ. ವೆಡ್ಡಿಂಗ್ ಫೋಟೋ ಶೂಟ್ ನಲ್ಲೂ ಈ ರೀತಿಯ ವಿಭಿನ್ನ ಫೋಟೋಶೂಟ್ ಮಾಡಿಸಬಹುದು ಎಂದು ಈ ಮದುಮಗಳು ತೋರಿಸಿಕೊಟ್ಟಿದ್ದಾಳೆ. ಈಕೆಯ ಈ ಫೋಟೋ ಶೂಟಿಗೆ ಮಹಿಳೆಯರ ಶಕ್ತಿಯನ್ನು ಹಾಗೂ ಸೌಂದರ್ಯವನ್ನು ಪ್ರತಿನಿಧಿಸುತ್ತಿದ್ದಾಳೆ ಎಂದು ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಮೋದೀಜಿಯವರ ಬಗ್ಗೆ ಮೆಚ್ಚುಗೆ ನುಡಿಯಾಡಿದ ಇಮ್ರಾನ್ ಖಾನ್

0

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ.

ಭಾಷಣದಲ್ಲಿ ಮಾತನಾಡುತ್ತಾ ಅವರು, ನರೇಂದ್ರ ಮೋದಿಯವರಿಗೆ ವಿದೇಶದಲ್ಲಿ ಯಾವುದೇ ಆಸ್ತಿ ಇಲ್ಲ. ಆದರೆ ನಮ್ಮ ನಾಯಕರಿಗೆ ಮಾತ್ರ ಇತರ ದೇಶಗಳಲ್ಲಿ ಕೋಟಿಗಟ್ಟಲೆ ಆಸ್ತಿ ಇದೆ ಎಂದು ಹೇಳಿದರು.

ಈ ಬಾರಿ ಅವರು ಮತ್ತೊಮ್ಮೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಟೀಕಿಸಿದರು.

ಪ್ರಜಾಪ್ರಭುತ್ವವಿರುವ ಮತ್ತು ಆ ಪ್ರಜಾಪ್ರಭುತ್ವವಿರುವ ದೇಶದ ಮುಖ್ಯಸ್ಥರಿಗೆ ದೇಶದಲ್ಲಿ ಮತ್ತು ವಿದೇಶಗಳಲ್ಲಿ ಆಸ್ತಿಯನ್ನು ಹೊಂದಿಲ್ಲದ ದೇಶವನ್ನು ನನಗೆ ತಿಳಿಸಿ ಎಂದು ಖಾನ್ ಹೇಳಿದರು.

ಪಾಕಿಸ್ತಾನದ ಪ್ರಧಾನಿ ವಿದೇಶದಲ್ಲಿ ಕೋಟಿಗಟ್ಟಲೆ ರೂಪಾಯಿಗಳ ಆಸ್ತಿ ಮತ್ತು ವ್ಯವಹಾರಗಳನ್ನು ನಿರ್ಮಿಸಿದ್ದಾರೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಅವರ ಮಕ್ಕಳು ಯುನೈಟೆಡ್ ಕಿಂಗ್‌ಡಮ್‌ನ ಪಾಸ್ ಪೋರ್ಟ್‌ಗಳನ್ನು ಹೊಂದಿದ್ದಾರೆ.

ಇದು ಬಲಾಢ್ಯರಿಗೊಂದು ಕಾನೂನು ಮತ್ತು ದುರ್ಬಲರಿಗೊಂದು ಕಾನೂನನ್ನು ಇದ್ದಾಗ ಮಾತ್ರ ಈ ಅಂತರವು ಉದ್ಭವಿಸುತ್ತದೆ.

ಇಮ್ರಾನ್ ಖಾನ್ ಈ ಹಿಂದೆಯೂ ಭಾರತವನ್ನು ಹೊಗಳಿದ್ದಾರೆ. ಭಾರತವು ನಮ್ಮೊಂದಿಗೆ ಸ್ವತಂತ್ರವಾಯಿತು. ಮೋದಿಯವರು ಪ್ರಾಮಾಣಿಕರಾಗಿದ್ದಾರೆ. ಭಾರತವನ್ನು ಮುನ್ನಡೆಸಲು ಯಾವುದೇ ಮಹಾನ್ ಶಕ್ತಿಯ ಅಗತ್ಯವಿಲ್ಲ. ಯಾರೂ ಅವರನ್ನು ಹೆದರಿಸಲು ಸಾಧ್ಯವಿಲ್ಲ. ನಿರ್ಬಂಧದ ಸಂದರ್ಭದಲ್ಲಿ ಅವರು ರಷ್ಯಾದಿಂದ ತೈಲವನ್ನು ಖರೀದಿಸುತ್ತಿದ್ದಾರೆ. ಇದರಲ್ಲಿಯೇ ಎಲ್ಲವೂ ಬರುತ್ತದೆ ಎಂದು ಕೆಲವು ತಿಂಗಳ ಹಿಂದೆ ಹೇಳಿದ್ದರು.

ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ಪಾಸ್ ಸೌಲಭ್ಯ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ

0

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ಬಸ್ ಪಾಸ್ ಯೋಜನೆಯನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ.

ಮುಖ್ಯಮಂತ್ರಿಗಳು 2022-23ನೇ ಸಾಲಿನ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಿದ್ದರು. ಸರ್ಕಾರವು ಈ ಯೋಜನೆಯನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ರಾಜ್ಯಾದ್ಯಂತ ವಿಸ್ತರಿಸಲು ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕಛೇರಿ ಬೆಂಗಳೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ, ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್ ಪಾಸುಗಳನ್ನು ವಿತರಿಸುವ ಬಗ್ಗೆ ಆದೇಶ ಹೊರಡಿಸಿದೆ.

ಪಾಸುಗಳ ದರ, ಪಾಸು ಪಡೆಯುವುದು ಸೇರಿದಂತೆ ಇತರ ನಿರ್ದೇಶನಗಳನ್ನು ನೀಡಿದೆ.

ಪ್ರವಾಸಿಗರ ಆಕರ್ಷಣೆಯಾಗಿದ್ದ ಹುಲಿ ಹನುಮ ಇನ್ನಿಲ್ಲ

0

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ,ಸಿಂಹಧಾಮದಲ್ಲಿ ಅತ್ಯಂತ ಹಿರಿಯ ಹುಲಿ ಎಂದು ಖ್ಯಾತಿ ಪಡೆದಿರುವ 20 ವರ್ಷದ ವಯಸ್ಸಿನ ಹುಲಿ ಹನುಮ ಬುಧವಾರ ರಾತ್ರಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ.

ಹುಲಿ,ಸಿಂಹ ಧಾಮದಲ್ಲಿಯೇ ಇದ್ದ ಚಾಮುಂಡಿ ಮತ್ತು ಮಲೇಶಂಕರ ಹುಲಿಗಳ ಸಾಂಗತ್ಯದಿಂದಾಗಿ ರಾಮ, ವಾಲಿ ಮತ್ತು ಹನುಮ ಎಂಬ 3 ಗಂಡು ಹುಲಿಗಳು 2002ರಲ್ಲಿ ಜನಿಸಿದ್ದವು.

ಅದರಲ್ಲಿ ಹನುಮ ಅತಿ ದೀರ್ಘ ಅವಧಿಯಿಂದ ಈ ವನ್ಯಧಾಮದಲ್ಲಿ ಇರುವ ಹುಲಿ ಎಂಬ ಶ್ರೇಯಕ್ಕೆ ಪಾತ್ರವಾಗಿತ್ತು. ಜೊತೆಗೆ ಪ್ರವಾಸಿಗರ ಆಕರ್ಷಣೆಗೂ ಕಾರಣವಾಗಿತ್ತು.

ಹನುಮನ ಸಾವಿನಿಂದ ವನ್ಯಧಾಮದಲ್ಲಿ ಈಗ ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಹುಲಿ, ಸಿಂಹಧಾಮದಲ್ಲಿ ವಾಲಿ, ಭರತ, ಹನುಮ ಸೇರಿ 3 ಹುಲಿಗಳು ಸಾವನ್ನಪ್ಪಿವೆ.

ಸಾವಿಗೀಡಾದ ಹುಲಿ ಹನುಮನ ಮರಣೋತ್ತರ ಪರೀಕ್ಷೆ ನಡೆಸಿ ಗುರುವಾರ ವನ್ಯಧಾಮದಲ್ಲಿಯೇ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಕಾರ್ಯನಿರ್ವಾಹಕ ಅಧಿಕಾರಿ ಮುಕುಂದ್‌ ಚಂದ್ರ ಅವರು ಮಾಹಿತಿ ನೀಡಿದ್ದಾರೆ.

ರಷ್ಯಾಬಿಟ್ಟು ಹೊರಟ ಪುರುಷರಿಗೆ ವಿಮಾನ ಟಿಕೆಟ್ ನಿರಾಕರಣೆ

0

ರಷ್ಯಾ ಸೇನೆಯೂ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧರಿಸಿದಂತೆ. ಹೀಗಾಗಿ ತನ್ನ ಸೇನೆಯನ್ನು ಭಾಗಶಃ ಸಜ್ಜುಗೊಳಿಸುವಂತೆ ಆದೇಶ ನೀಡಿದ್ದಾರೆ.

ಇದರ ಬೆನ್ನಲ್ಲೇ ರಷ್ಯಾದಲ್ಲಿ 18 ರಿಂದ 65 ವಯಸ್ಸಿನವರೆಗಿನ ಪುರುಷರಿಗೆ ವಿಮಾನದ ಟಿಕೆಟ್ ನೀಡುವುದನ್ನು ತಡೆಯಲು ರಷ್ಯಾದ ಏರ್‌ಲೈನ್ಸ್ ಆದೇಶ ನೀಡಿದೆ.

ಪುಟಿನ್ ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಇನ್ನಷ್ಟು ಹೆಚ್ಚಿಸಲು ಸೇನೆಯನ್ನು ಸಜ್ಜುಗೊಳಿಸುತ್ತಿರುವುದಾಗಿ ತಿಳಿಸಿದ ತಕ್ಷಣ ರಷ್ಯಾದಿಂದ ಹೊರಡುತ್ತಿರುವ ಎಲ್ಲಾ ವಿಮಾನಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿದೆ ಎಂದು ವರದಿಯಾಗಿದೆ.

ಅಲ್ಲಿನ ಜನರು ಅರ್ಮೇನಿಯಾ, ಜಾರ್ಜಿಯಾ, ಅಜರ್‌ಬೈಜಾನ್, ಕಝಾಕಿಸ್ತಾನ ಸೇರಿದಂತೆ ಹತ್ತಿರದ ದೇಶಗಳಿಗೆ ಹೋಗಲು ಮುಂದಾಗುತ್ತಿದ್ದಾರೆ.
ಪುಟಿನ್ ಅವರ ಭಾಷಣದ ಬಳಿಕ ರಷ್ಯಾದ ರಕ್ಷಣಾ ಸಚಿವ ಸರ್ಗೆ ಶೋಯಿಗು ಅವರು ದೇಶದ ಸುಮಾರು 3 ಲಕ್ಷ ಪುರುಷರನ್ನು ಸೇನೆಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದೀಗ ಸಮರ ಕಾನೂನನ್ನು ವಿಧಿಸುವ ಸಾಧ್ಯತೆಗಳ ನಡುವೆಯೇ ರಷ್ಯಾದ ವಿಮಾನಯಾನ ಸಂಸ್ಥೆ 18 ರಿಂದ 65 ವಯಸ್ಸಿನ ನಡುವಿನ ಪುರುಷರಿಗೆ ರಷ್ಯಾದಿಂದ ಹೊರ ಹೋಗಲು ಟಿಕೆಟ್ ನೀಡುವುದನ್ನು ತಡೆಹಿಡಿದಿದೆ.

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಆದರೂ ವ್ಲಾಡಿಮಿರ್ ಪುಟಿನ್ ಯುದ್ಧವನ್ನು ನಿಲ್ಲಿಸಲು ನಿರಾಕರಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಸಹಾಯ ಮಾಡುತ್ತಿರುವುದಕ್ಕೆ ಕೋಪಗೊಂಡಿರುವ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳನ್ನೂ ಬಳಸುವ ಬಗ್ಗೆ ಸುಳಿವು ನೀಡಿದ್ದಾರೆ.

ಆ ಕಡೆ ಉಕ್ರೇನ್‌ನಲ್ಲಿ ಯುದ್ಧಕ್ಕೆ ಸೇರಲು ಜೈಲಿನಲ್ಲಿರುವ ಕೈದಿಗಳನ್ನೂ ನೇಮಿಸಲಾಗುತ್ತಿರುವುದಾಗಿ ವರದಿಯಾಗಿದೆ. ಸೇನೆಗೆ ಸೇರುವ ಎಲ್ಲಾ ಕೈದಿಗಳಿಗೂ 6 ತಿಂಗಳ ಬಳಿಕ ಅಧ್ಯಕ್ಷೀಯ ಕ್ಷಮಾದಾನ ಹಾಗೂ ತಿಂಗಳಿಗೆ ಭಾರೀ ಮೊತ್ತದ ಸಂಬಳ ನೀಡುವುದಾಗಿ ಭರವಸೆಯ ಆಫರ್ ನೀಡಲಾಗಿದೆ.

ಮೈಸೂರು ದಸರಾ ನಂತರ ಶಿವಮೊಗ್ಗ ದಸರಾ ಹೆಸರುವಾಸಿ- ರೇಖಾ ರಂಗನಾಥ್

0

ಮೈಸೂರು ದಸರಾ ಮಹೋತ್ಸವ ನಂತರ ದಸರಾ ಉತ್ಸವಕ್ಕೆ ನಮ್ಮ ಶಿವಮೊಗ್ಗವೇ ಹೆಸರುವಾಸಿ ಎಂದು ಮಹಿಳಾ ದಸರಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರೇಖಾ ರಂಗನಾಥ್ ಅವರು ತಿಳಿಸಿದ್ದಾರೆ.

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮಹಿಳಾ ದಸರಾ ಕುರಿತು ಮಾಹಿತಿ ಹಂಚಿಕೊಂಡರು. ಈಗಾಗಲೇ ಮಹಿಳಾ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಒಳ್ಳೆಯ ರೀತಿಯಲ್ಲಿ ನಡೆದಿವೆ.
ಮುಂದಿನ ಸೆಪ್ಟೆಂಬರ್ 26ರಂದು ಮಹಿಳಾ ದಸರಾ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮಹಿಳಾ ದಸರಾದ ಅಂಗವಾಗಿ ಶಿವಮೊಗ್ಗದ ಒಂಬತ್ತು ಮಹಿಳಾ ಸಾಧಕಿಯರಿಂದ ಉದ್ಘಾಟನಾ ಕಾರ್ಯಕ್ರಮವು ನೆರವೇರಲಿದೆ.
ಶಿವಮೊಗ್ಗ ನಗರದ ವಿವಿಧ ಮಹಿಳಾ ಸಂಘಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಸೆ.27ರಂದು ಸಂಜೆ 4 ಗಂಟೆಗೆ ಗೋಪಿ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ಮಹಿಳಾ ಸ್ವಾತಂತ್ರ್ಯ ನಡಿಗೆ ಹಾಗೂ ವಿವಿಧ ಮಹಿಳಾ ಸಂಘಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅತ್ಯುತ್ತಮವಾಗಿ ಸಾಂಸ್ಕೃತಿಕ ಉಡುಗೆಗಳನ್ನು ಧರಿಸಿದ ಮೂರು ಮಹಿಳೆಯರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಮಹಿಳಾ ದಸರಾ ಸಮಿತಿಯ ಸದಸ್ಯರಾದ ಎಸ್‌. ಜ್ಞಾನೇಶ್ವರ್ , ಶ್ರೀಮತಿ ಆರತಿ ಆ.ಮ .ಪ್ರಕಾಶ್ , ಶ್ರೀಮತಿ ಸಂಗೀತಾ ನಾಗರಾಜ್ , ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಅನುಪಮಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮೈಸೂರು ಮಾಹಿತಿ

0

ಶ್ರೀ ಲಕ್ಷ್ಮಿ ರಮಣ ಸ್ವಾಮಿ ದೇವಸ್ಥಾನ , ಅಂಬಾವಿಲಾಸ ಅರಮನೆ ,ಮೈಸೂರು :
ಇದೊಂದು ಪುರಾತನದೇವಾಲಯ. ಇದರ ಅಭಿವೃದ್ದಿಗೆ ಆಗಿನ ವಿಜಯನಗರ ಸಾಮ್ರಾಜ್ಯದ ಅರಸರು , ಮೈಸೂರು ಅರಸರು ಕಾರಣ ಕರ್ತರು . ಕೋಟೆಯ ಪಶ್ಚಿಮ ಭಾಗದಲ್ಲಿ ಅರಮನೆಯ ವಸ್ತು ಸಂಗ್ರಹಾಲಯದ ಸಮೀಪ ಈ ದೇವಸ್ಥಾನವಿದೆ . ರಾಜ ಒಡೆಯರ್ ಮತ್ತು ಮೂರನೇ ರಾಜ ಒಡೆಯರ್ ರವರು ಮುಖ್ಯ ದ್ವಾರದ ನಿರ್ಮಾಣ ನಂತರ ನವೀಕರಣಕ್ಕೆ ಮೂಲ ಕಾರಣಕರ್ತರು .
ವಿಷ್ಣುವಿನ ಮತ್ತೊಂದು ರೂಪದಲ್ಲಿ ಶ್ರೀ ನಂಬಿ ನಾರಾಯಣ ಮತ್ತು ಶ್ರೀ ಲಕ್ಷ್ಮೀದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ದೇವಳದ ಹಿಂಭಾಗದಲ್ಲಿ ಭವ್ಯವಾದ ಸುಂದರ ಮಂಟಪವನ್ನು ಶ್ರೀ ಕಂಠೀರವ ನರಸರಾಜ ಒಡೆಯರ್ರವರ ಆಡಳಿತಕಾಲ 1638 – 1659 ರಲ್ಲಿ ನಿರ್ಮಾಣಗೊಂಡಿದೆ .
4 ಅಡಿ ಎತ್ತರದ ಆಕರ್ಷಕ ವೇಣುಗೋಪಾಲ ಮೂರ್ತಿಯ ವಿಗ್ರಹ 2 ಅಡಿ ಎತ್ತರದ ರಾಜ ಒಡೆಯರವರ ಮೂರ್ತಿ ಗಮನ ಸೆಳೆಯುತ್ತವೆ.


ಒಂದೆರಡು ಘಟನೆಗಳು ಈ ದೇವಾಲಯದ ಐತಿಹ್ಯದಲ್ಲಿ ಐಕ್ಯವಾಗಿವೆ .
ಪ್ರತಿನಿತ್ಯದಂತೆ ರಾಜಒಡೆಯರ್ರವರು ದೇವರ ನ್ನು ದರ್ಶಿಸಿ ಪ್ರಾರ್ಥಿಸಿ ತೀರ್ಥ ಸ್ವೀಕರಿಸುವಾಗ ತೀರ್ಥ ನೀಡುತ್ತಿದ್ದ ಪುರೋಹಿತನ ಕೈ ನಡುಗುತ್ತಿದ್ದುದ್ದನ್ನು ಕಂಡು ಪ್ರಶ್ನಿಸಲಾಗಿ ಹಣದಾಸೆಗಾಗಿ ತೀರ್ಥದಲ್ಲಿ ವಿಷ ಬೆರಿಸಿರುವುದಾಗಿ ಪುರೋಹಿತ ತಪ್ಪೊಪ್ಪಿ ಕೊಂಡನು.
ಆದರೆ ಆ ವಿಷ ಬೆರೆಸಿದ ತೀರ್ಥವನ್ನೇ ರಾಜ ಒಡೆಯರ್ ಭಯ ಭಕ್ತಿಯಿಂದ ಕುಡಿದುಬಿಟ್ಟರು . ಆದರೂ ದೇವರ ದಯದಿಂದ ರಾಜರಿಗೇನೂ ತೊಂದರೆಯಾಗಲಿಲ್ಲ . ಪುರೋಹಿತನನ್ನು ಚಿತಾವಣೆಗೊಳಿಸಿದ ಕರುಗರಳ್ಳಿ ದಂಡ ನಾಯಕನ ಮೇಲೆ ದಂಡೆತ್ತಿ ಹೋಗಿ ಸೋಲಿಸಿ ಅವನಲ್ಲಿದ್ದ ಅಪಾರ ಐಶ್ವರ್ಯವನ್ನು ಪಡೆದುಕೊಂಡು ಚಾಮುಂಡೇಶ್ವರಿ ದೇವಿಗೆ ಅರ್ಪಿಸಿದರು . ಮತ್ತೊಂದು ಘಟನೆ : ರಾಜ ಒಡೆಯರ ರವರಿಗೆ 1599 ರಲ್ಲಿ ಅಂಧತ್ವ ಕಾಡುತ್ತಿತ್ತು .ಆದರೆ ಒಬ್ಬ ಒಕ್ಕಣ್ಣ ಬ್ರಾಹ್ಮಣ ಅವರ ಅಂಧತ್ವವನ್ನು ನಿವಾರಿಸಿದನು . ಈ ವಿಸ್ಮಯದ ನೆನಪಿಗೆ ಆ ಬ್ರಾಹ್ಮಣನ ಗೌರವಾರ್ಥ ” ಅರೆ ಅಂಧ ಬ್ರಾಹ್ಮಣ ಕೈ ಮುಗಿದು ನಿಂತಿರುವ ಪ್ರತಿಮೆ”ಯನ್ನು ಈ ದೇವಸ್ಥಾನದ ಲ್ಲಿ ಪ್ರತಿಷ್ಟಾಪಿಸಿ ಚಿರಸ್ಥಾಯಿ ಗೊಳಿಸಲಾಗಿದೆ .

ಅಲ್ಲದೆ ಮತ್ತೊಂದು ವಿಶೇಷತೆ ಎಂದರೆ ಟಿಪ್ಪು ಮರಣಾನಂತರ , ಬ್ರಿಟಿಷರು ಐದು ವರ್ಷದ ರಾಜಕುಮಾರ ಮೂರನೇ ಕೃಷ್ಣ ರಾಜ ಒಡೆಯರ ಪಟ್ಟಾಭಿಷೇಕ ವನ್ನು ದಿನಾಂಕ 30 .06 .1799 ರಂದು ನೆರವೇರಿಸಿ ಸಿಂಹಾಸನದ ಮೇಲೆ ಆಸೀನರಾಗಿಸಿದ್ದು ಈ ದೇವಾಲಯದಲ್ಲೇ . ಹಾಗಾಗಿ ಈ ದೇಗುಲ ಚಾರಿತ್ರಿಕ ಮಹತ್ತ್ವ ಪಡೆದಿದೆ.

ಬರಹ: ಎಂ.ತುಳಸಿರಾಂ

ರೈತ ಮತ್ತು ಕೃಷಿಭೂಮಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ಬೇಕು

0

ಕ್ರಿಯೇಟಿವ್‌ ಪಿಯು ಕಾಲೇಜು ಕಾರ್ಕಳ “ಕ್ರಿಯೇಟಿವ್‌ ಕೆಸರ್ಡೊಂಜಿ ದಿನ” ಕಾರ್ಯಕ್ರಮ
ಕಾರ್ಕಳದ ಕ್ರಿಯೇಟಿವ್‌ ಪ.ಪೂ. ಕಾಲೇಜಿನಲ್ಲಿ ʼಹಸಿರೊಡನೆ ಕಲಿಕೆಯ ಕಲರವʼ ಕಾರ್ಯಕ್ರಮ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಶ್ರೀ ಹರಿಶ್ಚಂದ್ರ ಕುಲಾಲ್‌ ಇಂದು ನಾವು ವಿದ್ಯಾಭ್ಯಾಸದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಮಾತ್ರ ಗಮನಿಸುತ್ತಿದ್ದೇವೆ ಆದರೆ ನಮಗೆ ಅನ್ನ ನೀಡುವ ಕೃಷಿ ಭೂಮಿ ಮತ್ತು ಕೃಷಿಕರ ಕುರಿತು ತಿಳುವಳಿಕೆ ಪಡೆಯಲು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳು ಕೆಸರನ್ನು ಅಸಹ್ಯ ಎಂದು ಭಾವಿಸದೇ ಮಣ್ಣಿನ ಮಕ್ಕಳಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿಯವರು ಮಾತನಾಡಿ ಜಗತ್ತಿನಲ್ಲಿ ಹಿಂದೆ ಎಲ್ಲರೂ ದೀರ್ಘಾಯುಷಿಗಳಾಗಿದ್ದರು. ಸಾವಯವ ಕೃಷಿಯನ್ನು ಉತ್ತೇಜಿಸಿದರೆ ನಮ್ಮ ಮಣ್ಣಿನ ಸಂಸ್ಕೃತಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಸ್ಥಳೀಯ ರಮಣಿ ಕಂಪೌಂಡ್‌ ನಿವಾಸಿ ಶ್ರೀ ರಾಜು ಶೆಟ್ಟಿಯವರನ್ನು ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಸುರೇಶ್‌ ಆನಂದ್‌ ರಾವ್‌, ಶ್ರೀ ಸುನಿಲ್‌ ಶೆಟ್ಟಿ, ಶ್ರೀ ರಾಕೇಶ್‌ ಇವರನ್ನು ಗೌರವಿಸಲಾಯಿತು. ಕ್ರಿಯೇಟಿವ್‌ನ ಸಹ ಸಂಸ್ಥಾಪಕರಾದ ಅಮೃತ್‌ ರೈ, ಪ್ರವೀಣ್‌ ಕುಮಾರ್‌ ಹಿರ್ಗಾನ, ಉಪನ್ಯಾಸಕರಾದ ರಾಘವೇಂದ್ರ ರಾವ್‌, ಉಮೇಶ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಕೃಷಿ ಭೂಮಿಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಸಮಾರೋಪ ಸಮಾರಂಭವು ಮಧ್ಯಾಹ್ನ 3.30 ಕ್ಕೆ ನೆರವೇರಿತು. ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸಿ.ಪಿ ಹರಿಕೃಷ್ಣ ಭಟ್‌ ಮುಖ್ಯ ಅತಿಥಿಯಾಗಿ ಆಗಮಿಸಿ ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಿದರು. ಸಂಸ್ಥೆಯ ಸಂಸ್ಥಾಪಕರುಗಳಾದ ಶ್ರೀ ಅಶ್ವಥ್‌ ಎಸ್.ಎಲ್, ಶ್ರೀ ಆದರ್ಶ ಎಂ. ಕೆ, ಉಪನ್ಯಾಸಕ ವರ್ಗದವರು ಹಾಗೂ ಉಪನ್ಯಾಸಕೇತರ ಬಳಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿನಾಯಕ್‌ ಜೋಗ್ ಹಾಗೂ ಶಿವಕುಮಾರ್‌, ರಾಜೇಶ್‌, ನವೀನ್‌, ರವಿರಾಜ್‌ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಶ್ವ ಆರ್ಥಿಕ ಹಿಂಜರಿತಅಮೆರಿಕ ಜಪಾನ್ ನಲ್ಲಿ ಮುಂಜಾಗ್ರತೆ

0

ವಿಶ್ವದಲ್ಲಿ ಆರ್ಥಿಕ ಹಿಂಜರಿತದ ಭಯವು ಉದ್ಯೋಗಿಗಳಲ್ಲಿ ಹೆಚ್ಚಿನ ಭಯವನ್ನು ಹುಟ್ಟುಹಾಕಿದೆ ಏಕೆಂದರೆ ಕೋವಿಡ್ ಸಮಯದಲ್ಲಿ ಕೆಲಸದಿಂದ ತೆಗೆದುಹಾಕಲಾಗಿದ್ದ ನೆನಪುಗಳು ಅವರ ಮನಸ್ಸಿನಿಂದ ಇನ್ನೂ ಅಳಿಸಿಹೋಗಿಲ್ಲ. ಆರ್ಥಿಕ ಪ್ಯಾಕೇಜ್ ಹೆಸರಿನಲ್ಲಿ ಅತಿಯಾದ ಖರ್ಚು, ಚೀನಾದಲ್ಲಿ ಕೋವಿಡ್ ನಿರ್ಬಂಧಗಳಿಂದ ಪೂರೈಕೆ ಸರಪಳಿಗೆ ಹಾನಿ ಮತ್ತು ಉಕ್ರೇನ್ ಮೇಲೆ ರಷ್ಯಾದ ದಾಳಿಗಳು ಪೆಟ್ರೋಲ್ ಮತ್ತು ಡೀಸೆಲ್ ಮತ್ತು ಆಹಾರ ಧಾನ್ಯಗಳ ಬೆಲೆಗಳನ್ನು ದಶಕಗಳ ಉತ್ತುಂಗಕ್ಕೆ ಏರಿಸಿದೆ.

ಆದ್ದರಿಂದ, ಯುಎಸ್‌ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್, ಬ್ಯಾಂಕ್ ಆಫ್ ಇಂಗ್ಲೆಂಡ್, ಜಪಾನಿನ ಕೇಂದ್ರ ಬ್ಯಾಂಕ್ ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿದರಗಳನ್ನು ಹೆಚ್ಚಿಸಲು ಸಿದ್ಧತೆಗಳನ್ನು ಮಾಡಿದೆ.

ಚೀನಾದ ಸೆಂಟ್ರಲ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಲು ಸಿದ್ಧವಾಗಿಲ್ಲ, ಆದರೆ ಬಡ್ಡಿದರಗಳನ್ನು ಕಡಿತಗೊಳಿಸುವುದನ್ನು ನಿಲ್ಲಿಸಿದೆ.

ಆದರೆ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದ ಮೇಲೆ ಇದರ ಪ್ರಭಾವ ಕಡಿಮೆ ಇರುತ್ತದೆ ಎಂದು ನಂಬಲಾಗಿದೆ. ಭಾರತದಲ್ಲಿ ಇದರ ಪ್ರಭಾವವು ಕಡಿಮೆ ಇರುತ್ತದೆ ಏಕೆಂದರೆ ಅದು ನಿರಂತರವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಅದರಲ್ಲಿ ಬೇಡಿಕೆ ಇನ್ನೂ ಹೆಚ್ಚಾಗಿರುತ್ತದೆ. ಭಾರತದ ಮೂಲಭೂತ ಅಂಶಗಳೂ ಬಲಿಷ್ಠವಾಗಿವೆ.

ಆದ್ದರಿಂದ, ಪಾಶ್ಚಿಮಾತ್ಯ ದೇಶಗಳಿಗಿಂತ ಇಲ್ಲಿ ಆರ್ಥಿಕ ಹಿಂಜರಿತದ ಪರಿಣಾಮ ಕಡಿಮೆ ಇರುತ್ತದೆ. ಆದರೆ, ಜಾಗತಿಕವಾಗಿ ಉದ್ಯೋಗಗಳ ಕಡಿತಗಳು ಇನ್ನಷ್ಟು ಹೆಚ್ಚಲಿವೆ ಎಂದು ವರದಿಯಾಗಿವೆ

ಬೆಂಗಳೂರಿನ ವ್ಯಾಪಕ ಬೆಳೆವಣಿಗೆಕಾರಣ ತುಮಕೂರು ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

0

ಸಿಲಿಕಾನ್‌ ಸಿಟಿ ಬೆಂಗಳೂರು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 10 ವರ್ಷದಲ್ಲಿ ತುಮಕೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಚಿಂತನೆ ಹೊಂದಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದರು.

ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‌ಕೆಸಿಸಿಐ)ಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿಧ ವಲಯಗಳ ಸಾಧಕರಿಗೆ ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗದಿದ್ದರೆ ನಾವು ಈಗ ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ದೇಶೀಯ ವಿಮಾನ ಸಂಚಾರಕ್ಕೂ ಬಳಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಇನ್ನು 10 ವರ್ಷದ ಬಳಿಕ ದೇವನಹಳ್ಳಿಯ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಿತಿಯೂ ಎಚ್‌ಎಎಲ್‌ ವಿಮಾನ ನಿಲ್ದಾಣದಂತೆ ಆಗುತ್ತದೆ. ಆದ್ದರಿಂದ ಮುಂದಿನ 10 ವರ್ಷದಲ್ಲಿ ತುಮಕೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಚಿಂತನೆ ಇದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿಧ ವಲಯಗಳ ಸಾಧಕರಿಗೆ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರು ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಪ್ರಸಾದ್‌, ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಮತ್ತಿತರರು ಹಾಜರಿದ್ದರು.