Tuesday, March 24, 2026
Tuesday, March 24, 2026
Home Blog Page 1418

ಶಿವಮೊಗ್ಗ ಎಸ್ ಪಿಲಕ್ಷ್ಮೀಪ್ರಸಾದ್ ಏಕಾಏಕಿ ವರ್ಗಾವಣೆ

ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಶ್ರೀ ಬಿ.ಎಂ.ಲಕ್ಷ್ಮೀಪ್ರಸಾದ್ ಅವರನ್ನ ವರ್ಗಮಾಡಲಾಗಿದೆ.
ಪ್ರಸ್ತುತ ಶಿವಮೊಗ್ಗಕ್ಕೆ
ಶ್ರೀಮಿಥುನ್ ಕುಮಾರ್ ಅವರನ್ನ ಜಿಲ್ಲಾ ರಕ್ಷಣಾಧಿಕಾರಿಗಳನ್ನಾಗಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ಸಿಐಡಿ ಎಸ್‌ಪಿಯಾಗಿದ್ದ.ಜಿ. ಕೆ. ಮಿಥುನ್ ಕುಮಾರ್ 2016ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಶಿವಮೊಗ್ಗದಿಂದ ವರ್ಗಾವಣೆಗೊಂಡಿರುವ ಬಿ. ಎಂ. ಲಕ್ಷ್ಮೀ ಪ್ರಸಾದ್ ಅವರಿಗೆ ಸ್ಥಳ ನಿಗದಿಯಾಗಿಲ್ಲ

ಶಾಲೆಗಾಗಿ ಮಾಡಿದ ಸೇವೆಯನ್ನ ನಾಡು ಪರಿಗಣಿಸಿದೆ ನಾನು ಚಿರ ಋಣಿ-ಪದ್ಮಶ್ರೀ ಹಾಜಬ್ಬ

0

ಊರಿನ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎನ್ನುವ ಆಶಯದಲ್ಲಿ ಕೂಡಿಟ್ಟ ಹಣದಿಂದ ಶಾಲೆ ಕಟ್ಟಸಿದೆ. ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂದು ಪದ್ಮಶ್ರೀ ಪುರಸ್ಕೃತ ಶ್ರೀ ಹರೇಕಳ ಹಾಜಬ್ಬ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಶಿವಮೊಗ್ಗ ನಗರ ಸಮೀಪದ ಒಡ್ಡಿನಕೊಪ್ಪದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ”ಯನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯನಾಗಿದ್ದ ನನ್ನನ್ನು ಶಾಲೆಗಾಗಿ ಮಾಡಿದ ಸೇವೆಯಿಂದ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಯಿತು. ಕುವೆಂಪು ವಿಶ್ವವಿದ್ಯಾಲಯದ ಪಠ್ಯದಲ್ಲಿಯೂ ನನ್ನ ಅಕ್ಷರ ಸೇವೆ ಬಗ್ಗೆ ಪಾಠ ಇರುವುದು ನನ್ನ ಪುಣ್ಯ. ಹೆಚ್ಚಿನ ಪ್ರೀತಿ, ಆತ್ಮೀಯತೆ ತೋರಿಸುತ್ತಿರುವ ಕುವೆಂಪು ನಾಡಿಗೆ ನಾನು ಸದಾ ಚಿರಋಣಿ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ,
ವಿದ್ಯೆ ಎಲ್ಲರಿಗೂ ಅವಶ್ಯಕ. ಪ್ರತಿಭಾವಂತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುತ್ತಿರುವ ಸಮನ್ವಯ ಟ್ರಸ್ಟ್ ಕಾರ್ಯ ಶ್ಲಾಘನೀಯ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಹಾಗೂ ಮಾದರಿ ಶಾಲೆಯಾಗಿ ರೂಪಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯನಾಗಿ ಮೂರು ಶಾಲೆಗಳ ದತ್ತು ಸ್ವೀಕಾರ ಮಾಡಿದ್ದು, ಮೂಲಸೌಕರ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಬೋಧನಾ ಗುಣಮಟ್ಟ ವೃದ್ಧಿಸುವ ಹಾಗೂ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸುವ ಕೆಲಸಕ್ಕೂ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ಶಾಲೆಗಳ ದತ್ತು ಸ್ವೀಕಾರ ಎಂದರೆ ಕೇವಲ ಒಮ್ಮೆ ಅಥವಾ ಅಪರೂಪಕ್ಕೆ ಧನಸಹಾಯ ಮಾಡುವುದಲ್ಲ. ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು. ಸಮನ್ವಯ ಟ್ರಸ್ಟ್ ವತಿಯಿಂದ ದತ್ತು ಸ್ವೀಕಾರದ ಜತೆಯಲ್ಲಿ ಐದು ವರ್ಷಗಳ ಕಾಲ ಮಕ್ಕಳಿಗೆ ಶಾಲೆಯಲ್ಲಿ ಕೌಶಲ್ಯ ಕಲಿಕೆ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಜವಾಬ್ದಾರಿ ಹೊತ್ತಿರುವುದು ಒಳ್ಳೆಯ ಸಂಗತಿ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರಿ ಶಾಲೆ ಉಳಿಸುವ ಮಹತ್ತರ ಕಾರ್ಯವನ್ನು ಸಮನ್ವಯ ಟ್ರಸ್ಟ್ ವತಿಯಿಂದ ನಡೆಸುತ್ತಿದ್ದು, ಸರ್ಕಾರಿ ಶಾಲೆಗಳನ್ನು ಉಳಿಸುವ ಹಾಗೂ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ದೃಷ್ಠಿಯಿಂದ ಎಲ್ಲರ ಸಹಕಾರವು ಮುಖ್ಯ ಎಂದು ಹೇಳಿದರು.

ಸಮನ್ವಯ ಟ್ರಸ್ಟ್ ನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ನಮ್ಮ ಟ್ರಸ್ಟ್ 15 ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಗಾಂಧಿ ಜಯಂತಿ ವಿಶೇಷ ಸಂದರ್ಭದಲ್ಲಿ ಒಡ್ಡಿನಕೊಪ್ಪದ ಸರ್ಕಾರಿ ಶಾಲೆಯನ್ನು ಸಮನ್ವಯ ಟ್ರಸ್ಟ್ ವತಿಯಿಂದ ದತ್ತು ಸ್ವೀಕಾರ ಮಾಡಲಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಲ್ಲ ರೀತಿಯ ಸಹಕಾರ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಒಡ್ಡಿನಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ತ್ರಿವೇಣಿ.ಜಿ, ಸ್ಮಿತಾ, ವಿಜಯ್, ಅಭಿ ಎಚ್.ಎನ್.ಗೌಡ, ಮಲ್ಲಿಕಾರ್ಜುನ್, ಸಿದ್ದನಗೌಡ, ನಾರಾಯಣ್, ಶರಣ್ಯ ಹಾಗೂ ಸ್ಥಳೀಯ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದಸರೆಯಲ್ಲಿ ಕಣ್ಸೆಳೆದ ಕೋಟಿಗಟ್ಟಲೆ ಕಿಮ್ಮತ್ತಿನ ಶ್ವಾನ

0

ಶಿವಮೊಗ್ಗದ ಗಾಂಧಿ ಪಾರ್ಕ್​ನಲ್ಲಿ ದಸರಾ ಹಬ್ಬದ ಹಿನ್ನೆಲೆ ರೈತ ದಸರಾ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಬರೋಬ್ಬರಿ ಹತ್ತು ಕೋಟಿಯ ಟಿಬೆಟಿಯನ್ ಮಸ್ತಿಫ್ ಎಂಬ ಶ್ವಾನ ನೋಡುಗರ ಗಮನ ಸೆಳೆಯಿತು.

ಬೆಂಗಳೂರಿನ ಸತೀಶ್ ಎಂಬುವರು ಖರೀದಿಸಿರುವ ಶ್ವಾನ ಪ್ರದರ್ಶನದ ಮುಖ್ಯ ಕೇಂದ್ರ ಬಿಂದುವಾಗಿದ್ದ ಭೀಮ ಎನ್ನುವ ಹೆಸರಿನ ಟಿಬೆಟಿಯನ್ ಮಸ್ತಿಫ್ ಎಂಬ ತಳಿಯ ಶ್ವಾನ ನೋಡಲು ನೂರಾರು ಜನ ಮುಗಿಬಿದ್ದಿದ್ದರು.

ಶ್ವಾನಕ್ಕೆ ಎಸಿ ಜೊತೆಗೆ ಕ್ಲಾಸಿ ಫುಡ್ ನೀಡಲಾಗುತ್ತದೆ. ತಿಂಗಳಿಗೆ ಕನಿಷ್ಠ 25 ಸಾವಿರ ನಿರ್ವಹಣೆಗೆ ಬೇಕಾಗುತ್ತದೆ. ಒಟ್ಟಾರೆ ಶ್ವಾನ ಪ್ರದರ್ಶನದಲ್ಲಿ 10 ಕೋಟಿಯ ಶ್ವಾನ ನೋಡಲು ಹಾಗೂ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ನೂರಾರು ಜನ ಭಾಗವಹಿಸಿದ್ದು ವಿಶೇಷವಾಗಿತ್ತು.

ಅಬ್ಬಬ್ಬಾ ಇದು 10 ಕೋಟಿ ಮೌಲ್ಯದ ಶ್ವಾನ
ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಡಿ‌ ಎಸ್ ಅರುಣ್ ಚಾಲನೆ ನೀಡಿದರು. ಮುಖ್ಯ ಅಥಿತಿಯಾಗಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಭಾಗವಹಿಸಿದ್ದರು‌. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.

ದಾವಣಗೆರೆ ಮಂಜುನಾಥ್ ಗೆ ವಿಪ್ರಶ್ರೀ ಪ್ರಶಸ್ತಿ

0

ಕರ್ನಾಟಕ ಸರ್ಕಾರದ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ದಾವಣಗೆರೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ್ ರವರಿಗೆ ‘ವಿಪ್ರಶ್ರೀ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.

ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ನಿರ್ದೇಶಕ ಪಿ.ಸಿ. ಶ್ರೀನಿವಾಸ್, ಶಾಸಕ ಪ್ರೊಫೆಸರ್ ಲಿಂಗಣ್ಣ, ಮೇಯರ್ ಜಯಮ್ಮ ಗೋಪಿನಾಥ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಶೃಂಗೇರಿ ಪೀಠದಿಂದ ಕಾಶ್ಮೀರದ ನೀಲಂಗೆ ಶ್ರೀಶಾರದಾದೇವಿ ವಿಗ್ರಹದ ಹಸ್ತಾಂತರ

0

ಭರತ ಖಂಡದ ತುತ್ತ ತುದಿಯ ಕಾಶ್ಮೀರದ ನೀಲಂ ಕಣಿವೆಯ ತ್ರಿತ್ವಾಲ್‌ನ ನವೀಕೃತ ಶ್ರೀಶಾರದಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಡುವ ನೂತನ ಶ್ರೀಶಾರದಾದೇವಿ ವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ಹಸ್ತಾಂತರ ಕಾರ್ಯ ವಿಜಯ ದಶಮಿಯಂದು ಶೃಂಗೇರಿಯಲ್ಲಿ ನಡೆಯಲಿದೆ.

ಈ ದೇವಸ್ಥಾನ ನಿರ್ಮಾಣದ ಹೊಣೆಯನ್ನು ಶ್ರೀಮಠ ವಹಿಸಿಕೊಂಡಿದ್ದು, ಕಾಮಗಾರಿ ಬಹುತೇಕ ಮುಗಿದಿದೆ. ಛಾವಣಿ ನಿರ್ಮಾಣ ವಷ್ಟೇ ಬಾಕಿಯಿದ್ದು, ಅಕ್ಟೋಬರ್‌ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.
ಪಂಚಲೋಹದಲ್ಲಿ ನಿರ್ಮಿತ ನೂತನ ಶ್ರೀದೇವಿಯ ವಿಗ್ರಹ ವನ್ನು ಶೃಂಗೇರಿ ಶ್ರೀ ಮಠ ದಿಂದ ನೀಡಲಾ ಗುತ್ತಿದೆ. ವಿಜಯ ದಶಮಿ ಶುಭ ದಿನವಾದ ಬುಧವಾರ ವಿಶೇಷ ಪೂಜೆ ಸಲ್ಲಿಸಿ ತ್ರಿತ್ವಾಲ್‌ನ ಶಾರದಾ ಸಂರಕ್ಷಣಾ ಸಮಿತಿಯ ರವೀಂದ್ರ ಪಂಡಿತ್‌ ಮತ್ತು ತಂಡದವರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿದ್ಯುತ್ ದರ ಏರಿಕೆ ಕ್ರಮವನ್ನ ಸರ್ಕಾರ ಹಿಂಪಡೆಯುವ ಪ್ರಸ್ತಾಪ

0

ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಕಾರಣ ರಾಜ್ಯ ಸರ್ಕಾರ ಮೂರು ದಿನಗಳ ಹಿಂದೆಯಷ್ಟೇ ಪರಿಷ್ಕರಣೆ ಮಾಡಿದ್ದ ವಿದ್ಯುತ್ ದರವನ್ನು ಹಿಂಪಡೆಯಲು ತೀರ್ಮಾನಿಸಿದೆ.

ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದ್ದು, ವಿದ್ಯುತ್ ದರ ಪರಿಷ್ಕರಣೆಯಿಂದಾಗಿ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಹೀಗಾಗಿ ಸರ್ಕಾರ ಪರಿಷ್ಕೃತ ದರವನ್ನು ವಾಪಸ್ ಪಡೆಯಲು ನಿರ್ಧರಿಸಿದೆ.

ದಸರಾ ಹಬ್ಬದ ನಂತರ ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಇಂಧನ ಸಚಿವ ಸುನೀಲ್‍ ಕುಮಾರ್ ಅವರು ಚರ್ಚಿಸಿ ಪರಿಷ್ಕೃತ ದರವನ್ನು ಕೈಬಿಡಲಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಈ ಬಗ್ಗೆ ಈಗಾಗಲೇ ಸುಳಿವು ಕೊಟ್ಟಿರುವ ಅವರು, ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಿರುವುದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

ಒಂದು ಕಡೆ ಅಗತ್ಯವಸ್ತುಗಳ ಬೆಲೆ ಏರಿಕೆ, ಮತ್ತೊಂದು ಕಡೆ ವಿದ್ಯುತ್ ದರ ಏರಿಕೆಯಿಂದಾಗಿ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಹಿಂಪಡೆಯದಿದ್ದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದರು.
ಇದಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಕೂಡ ದನಿಗೂಡಿಸಿದ್ದವು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ವಿಪಕ್ಷಗಳು ಇದನ್ನು ಅಸ್ತ್ರವಾಗಿಸಿಕೊಂಡರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಆತಂಕ ಸರ್ಕಾರಕ್ಕಿದೆ.
ಹೀಗಾಗಿ ಪರಿಷ್ಕೃತ ದರವನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.

ಪ್ರಪಂಚದ ಸಮಸ್ಯೆಗಳಿಗೆ ಗಾಂಧೀ ಚಿಂತನೆಗಳಿಂದ ಪರಿಹಾರ-ಆಂಟೋನಿಯೊ ಗುಟ್ರೆಸ್

0

ಮಹಾತ್ಮ ಗಾಂಧಿಯವರ ವಿಚಾರ ಧಾರೆಗಳನ್ನು ಅನುಸರಿಸಿದರೆ ಪ್ರಪಂಚದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟನಿಯೋ ಗುಟ್ರೆಸ್‌ ಹೇಳಿದ್ದಾರೆ.

ಗಾಂಧಿಜಿಯವರ ಹುಟ್ಟುಹುಬ್ಬದ ಪ್ರಯುಕ್ತ ವಿಶ್ವದಲ್ಲಿ ಅಂತರಾಷ್ಟ್ರೀಯ ಅಂಹಿಸಾ ದಿನಾಚರಣೆಯನ್ನ ಆಚರಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಶಾಂತಿಯ ಮಹತ್ವವನ್ನ ಪ್ರತಿಯೊಬ್ಬರು ಅರಿತುಕೊಳ್ಳೋದು ಅತ್ಯಗತ್ಯ. ಅಲ್ಲದೆ ಅವರ ತತ್ವಗಳನ್ನು ಅಳವಡಿಸಿಕೊಂಡರೆ ವಿಶ್ವದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ನಾಟೆಡ್‌ ಗನ್‌ ಅನ್ನ ಟ್ವಿಟರ್‌ನಲ್ಲಿ ಶೇರ್‌ ಮಾಡಿ ಅದಕ್ಕೆ ಕ್ಯಾಪ್ಶನ್‌ ಹಾಕಿದ್ದಾರೆ.

ಅಂದಹಾಗೆ ಅಮೆರಿಕಾದಲ್ಲಿರುವ ಈ ನಾಟೆಡ್‌ ಗನ್‌ ಶಾಂತಿ ಮತ್ತು ಅಹಿಂಸೆಯ ಸಂಕೇತವಾಗಿದ್ದು, ಜಾಗತಿಕ ವಾಸ್ತು ಶಿಲ್ಪ ಅನ್ನೋ ಮಾನ್ಯತೆಯನ್ನ ಪಡೆದಿದೆ.

ದಕ್ಷಿಣ ಒಳ ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ

0

ನೈರುತ್ಯ ಮುಂಗಾರು ಹಿಂದಿರುಗುವುದರೊಂದಿಗೆ ವಿವಿಧ ಹವಾಮಾನ ವ್ಯವಸ್ಥೆಗಳಿಂದಾಗಿ ಮುಂದಿನ ಐದು ದಿನಗಳ ಕಾಲ ಉತ್ತರ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ನೈರುತ್ಯ ಮುಂಗಾರು ಹಿಂದಿರುಗುವುದರೊಂದಿಗೆ ವಿವಿಧ ಹವಾಮಾನ ವ್ಯವಸ್ಥೆಗಳಿಂದಾಗಿ ಮುಂದಿನ ಐದು ದಿನಗಳ ಕಾಲ ಉತ್ತರ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಷ್ಟೇ ಅಲ್ಲದೇ ಈಶಾನ್ಯ ಮಾನ್ಸೂನ್ ಪ್ರಾರಂಭವಾಗುವುದರೊಂದಿಗೆ ಅಕ್ಟೋಬರ್ನಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿ ಮತ್ತು ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಬೀಸುತ್ತಿದೆ.ಇದರಿಂದಾಗಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ಕರ್ನಾಟಕದಲ್ಲಿ ಈ ಋತುವಿನಲ್ಲಿ ಶೇ.29ರಷ್ಟು ಅಧಿಕ ಮಳೆಯಾಗಿದೆ.

ರಾಜ್ಯದಲ್ಲಿ ವಾಡಿಕೆಯಂತೆ ಸಾಮಾನ್ಯ 831.8 ಮಿ.ಮೀ ವಿರುದ್ಧವಾಗಿ 1,075.2 ಮಿಮೀ ಮಳೆಯಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ವಾಡಿಕೆ ಮಳೆ 550 ಮಿ.ಮೀ ವಿರುದ್ಧವಾಗಿ 1,066 ಮಿ.ಮೀ ಮಳೆಯಾಗಿದೆ.

ಅಂಚೆ ಇಲಾಖೆಯ ನೌಕರಿ ಆಕಾಂಕ್ಷಿಗಳಿಗೆಅಮೂಲ್ಯ ಮಾಹಿತಿ

0

ಭಾರತೀಯ ಪೋಸ್ಟ್‌ ಆಫೀಸ್‌ ಪೋಸ್ಟ್‌ ಮ್ಯಾನ್‌, ಪೋಸ್ಟ್‌ ಗಾರ್ಡ್‌ ಸೇರಿದಿಂತೆ ಒಟ್ಟೂ 98,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ ವೆಬ್‌ಸೈಟ್‌ ನಿಂದ ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ದೇಶದ ಹಲವು ಭಾಗಗಳಲ್ಲಿ ಉದ್ಯೋಗಾವಕಾಶವಿದೆ.

ಭಾರತೀಯ ಪೋಸ್ಟ್ ಒಂದು ವಿಶಾಲ ವಲಯ ಹೊಂದಿರುವುದರಿಂದ ಉದ್ಯೋಗ ಅವಕಾಶಗಳು ಹೆಚ್ಚಿರುತ್ತವೆ.

ಹುದ್ದೆ
ಪೋಸ್ಟ್‌ ಮ್ಯಾನ್‌, ಪೋಸ್ಟ್‌ ಗಾರ್ಡ್

ಸಂಸ್ಥೆ
ಭಾರತೀಯ ಪೋಸ್ಟ್‌ ಆಫೀಸ್‌

ಖಾಲಿ ಹುದ್ದೆ
98,083

ವಯೋಮಿತಿ
18 ರಿಂದ 32

ವಿದ್ಯಾರ್ಹತೆ
10 – 12 ನೇ ತರಗತಿ ಪಾಸ್ ಆಗಿರಬೇಕು

ಕೊನೆ ದಿನಾಂಕ
ನವೆಂಬರ್ 2022

ಆರಂಭಿಕ ದಿನಾಂಕ
ಅಕ್ಟೋಬರ್ 2022
ದೇಶದಾದ್ಯಂತ ಹಲವೆಡೆ ಈ ಹುದ್ದೆಗಳು ಖಾಲಿ ಇದ್ದು ಉದ್ಯೋಗಕ್ಕೆ ಹೆಚ್ಚಿನ ಅವಕಾಶವಿದೆ.

ಭಾರತೀಯ ಪೋಸ್ಟ ಇಲಾಖೆ ಬಹಳ ವಿಸ್ತಾರವಾದ ವಲಯವನ್ನು ಹೊಂದಿದ್ದು ಉದ್ಯೋಗಾವಕಾಶಗಳ ಸಂಖ್ಯೆಯೂ ಸಹ ಹೆಚ್ಚಿದೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳೆರಡರಲ್ಲೂ ಉದ್ಯೋಗಾವಕಾಶವಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಇದರ ಜೊತೆಗೆ ಸ್ಟೆನೋಗ್ರಾಫರ್‌ ಸಂಬಂಧಿತ ಹುದ್ದೆಗಳನ್ನು ಸಹ ವೃತ್ತವಾರು ಅನುಮೋದಿಸಲಾಗಿದೆ.

ಆಂದ್ರ ಪ್ರದೇಶದಲ್ಲಿ 108 ಮೇಲ್‌ ಗಾರ್ಡ್‌, 1166 MTS, ಮತ್ತು 2289 ಪೋಸ್ಟ್‌ಮೆನ್‌ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.

ತೆಲಂಗಾಣ ವೃತ್ತದಲ್ಲಿ 82 ಮೇಲ್‌ ಗಾರ್ಡ್‌ಗಳು, 878 MTS ಮತ್ತು 1553 ಪೋಸ್ಟ್‌ಮ್ಯಾನ್‌ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.

ವಯಸ್ಸಿನ ಮಿತಿ :
ಪೊಸ್ಟ್‌ ಆಫೀಸ್‌ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 32 ವರ್ಷದೊಳಗಿನವರಾಗಿರಬೇಕು.

ಖಾಲಿ ಇರುವ ಹುದ್ದೆಗಳ ವಿವಿರ :
ಪೋಸ್ಟ್‌ಮ್ಯಾನ್‌ : 59,099 ಹುದ್ದೆಗಳು
ಮಲ್ಟಿ-ಟಾಸ್ಕಿಂಗ್‌ : 37,539 ಹುದ್ದೆಗಳು
ಮೇಲ್‌ಗಾರ್ಡ್‌ : 1445 ಹುದ್ದೆಗಳು

ಅರ್ಹತೆ :
10 ನೇ ತರಗತಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್‌ ಬೇಸಿಕ್‌ ತಿಳಿದರಿರಬೇಕು.
ಕೆಲವು ಹುದ್ದೆಗಳಿಗೆ 12 ನೇತರಗತಿ ಅಥವಾ ಪಿಯುಸಿ ಪಾಸಾಗಿರಬೇಕು.

ಅರ್ಜಿ ಪ್ರಕ್ರಿಯೆ ಹೇಗೆ?
ಮೊದಲು ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡಿ.
ರಿಜಿಸ್ಟರ್ ಮಾಡಿಕೊಳ್ಳಿ
ನಿಗದಿತ ಶುಲ್ಕ ಪಾವತಿಸಿ
ದೂರವಾಣಿ ಸಂಖ್ಯೆ ನಮೂದಿಸಿ

ಭಾರತೀಯ ಸಂಸ್ಕೃತಿ ನಾಶಮಾಡಲು ಯಾರಿಗೂ ಸಾಧ್ಯವಿಲ್ಲ- ಪಟ್ಟಾಭಿರಾಮ್

ವಿದೆಶೀ ಸಂಸ್ಕೃತಿಯಿಂದ ಭಾರತಕ್ಕೆ ಸ್ವಲ್ಪ ದಕ್ಕೆಯಾಗಿದೆ. ಭಗವಂತ ಅವತಾರ ಮಾಡಿದ ದೇಶ ಭಾರತ, ಯಾರೂ ನಮ್ಮನ್ನು ನಾಶಮಾಡಲು ಸಾದ್ಯವಿಲ್ಲ ಇಲ್ಲಿ ಗುರುಶಿಷ್ಯ ಪದ್ಧತಿ ಇನ್ನೂ ಜೀವಂತವಾಗಿ ಇದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ತಿಳಿಸಿದರು.

ಅವರು ಶನಿವಾರ ನಗರದ ಬಾಪೂಜಿ ಅಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನವದೆಹಲಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಅನೌಪಚಾರಿಕ ಸಂಸ್ಕೃತ ಅಧ್ಯಯನದ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತ ಭಾರತದಲ್ಲಿ ಭರತನಾಟ್ಯ, ಸಂಗೀತ, ಸಂಸ್ಕೃತ ಇನ್ನೂ ಮುಂತಾದ ವಿದ್ಯೆ ಕಲಿಯುವ ಮುನ್ನ ವಿದ್ಯಾರ್ಥಿಗಳು ಗುರುವಿಗೆ ನಮಸ್ಕರಿಸಿ ತಮ್ಮ ವಿದ್ಯಾಬ್ಯಾಸ ಆರಂಬಿಸುತ್ತಾರೆ.

ಇಂತಹ ಶಿಕ್ಷಣ ನೀಡುವ ಸಂಸ್ಕೃತವನ್ನು ಬ್ರಿಟೀಷ್ ಆಡಳಿತದಲ್ಲಿ ಮೆಕಾಲೆ ಎಂಬ ಅಧಿಕಾರಿ ಗಮನಿಸಿ ಸಂಸ್ಕೃತ ಕಲಿಕೆಗೆ ಕಡಿವಾಣ ಹಾಕುತ್ತಾನೆ ಅಲ್ಲದೆ‌ ನಳಂದ ವಿಶ್ವ ವಿದ್ಯಾಲಯದ ಮಹತ್ವವಾದ ಸಂಸ್ಕೃತ ಗ್ರಂಥ ಭಂಡಾರವನ್ನು ಸುಟ್ಟುಹಾಕುತ್ತಾನೆ.

ಸಂಸ್ಕೃತ, ಸಂಸ್ಕೃತಿ ಕಲಿಸುವ ಒಂದು ಪ್ರಭಾವಿ ಭಾಷೆಯಾಗಿದೆ. ಈ ದೇಶದ ಪ್ರಮುಖ ಗ್ರಂಥಗಳು, ಸಂಸ್ಕೃತ ಸಾಹಿತ್ಯದಲ್ಲಿ ಅಡಗಿದೆ, ಅದು ಪುರಾಣ, ಮಹಾಭಾರತ, ರಾಮಾಯಣ, ಮಂತ್ರ, ನಾಟಕ, ಶ್ಲೋಕ, ಸುಭಾಷಿತ, ಕಥೆ ವೇದಗಳು ಹೀಗೆ ಒಂದೊಂದು ಕಡೆಯಲ್ಲೂ ಒಂದೊಂದು ರೂಪದಲ್ಲಿ ನಮ್ಮ ನೆಲದ ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ತುಂಬಿ ನಮ್ಮ ಋಷಿ ಮುನಿಗಳು ನಮಗೆ ನೀಡಿದ್ದಾರೆ.

ಇಂತಹ ಸಂಪತ್ಭರಿತ ವಾದ ಭಾಷೆಯ ಪುನರುಜ್ಜೀವನ ಯಶಸ್ವಿಯಾಗಿ ನಡೆಯುತ್ತ ಮುಂದೆ ಬರುತ್ತಿದೆ ಎಂದರು. ಇದಕ್ಕಾಗಿಯೇ ದೇಶ ವಿದೇಶದಲ್ಲಿ ಸಂಸ್ಕೃತ ಭಾರತಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತ ಬಂದಿದೆ. ಹಾಗಾಗಿ ಇಂದು ಕೋಟ್ಯಾಂತರ ಜನ ವಯೋಮಿತಿ, ಜಾತಿಬೇದ ವಿಲ್ಲದೆ ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ಸಂಸ್ಕೃತ ಭಾರತಿಯ ಚಟುವಟಿಕೆಗಳನ್ನು ಅಭಿನಂದಿಸಿದರು.

ಭಾರತದ ಶ್ರೇಷ್ಠತೆಯಲ್ಲಿ ಸಂಸ್ಕೃತ ಮುಂದಿದೆ, ಸಂಸ್ಕೃತ ವೈಜ್ಞಾನಿಕ ಭಾಷೆ, ಈ ಭಾಷೆಯಲ್ಲಿ ಸೊಗಡು ಇದೆ, ಭಗವಂತ ನಿರ್ಮಾಣ ಮಾಡಿಕೊಟ್ಟ ಭಾಷೆ ಸಂಸ್ಕೃತ, ಭಾರತೀಯ ಎಲ್ಲಾ ಭಾಷೆಗಳಿಗೂ ಮೂಲ ಸಂಸ್ಕೃತವೇ ಹೊರತು ಆಂಗ್ಲ ಭಾಷೆಯಲ್ಲ.

ಸಂಸ್ಕೃತ ಕಲಿಕಾ ಆಂದೋಲನ ಪ್ರಾಥಮಿಕ ಹಂತದ ವಿದ್ಯಾಲಯದಿಂದ ಆಗಬೇಕು ಎಂದು ತಿಳಿಸಿದರು. ಸಂಸ್ಕೃತ ಕಲಿತರೆ ಇತರೆ ಭಾಷಾ ಜ್ಞಾನಕ್ಕೆ ಉತ್ತಮ ಬುನಾದಿಯಾಗುತ್ತದೆ, ಎಲ್ಲಿ ಸಂಸ್ಕೃತವೊ ಅಲ್ಲಿ ಸಂಸ್ಕೃತಿ, ಎಲ್ಲಿ ಸಂಸ್ಕೃತಿ ನೆಲೆಸುತ್ತದೆಯೋ ಅಲ್ಲಿ ಪ್ರಜೆಗಳು ಅನಂದದಿಂದ ಜೀವನ ನಡೆಸುತ್ತಾರೆ ಎಂದು ಹೇಳಿದರು.

ಇದೀಗ ಕೇಂದ್ರೀಯ ವಿಶ್ವ ವಿದ್ಯಾಲಯದವರು ದೇಶಾದ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಸಂಸ್ಕೃತ ಕಲಿಸಲು ಮುಂದಾಗಿರುವುದು ಸಂತಸ ವಿಷಯ ಇವರೆಲ್ಲರ ಪರಿಶ್ರಮದಿಂದ
ಭಾರತ ಅತೀ ಶೀಘ್ರದಲ್ಲೇ ವಿಶ್ವ ಗುರುವಾಗಿ ಹೊರಹೊಮ್ಮುತ್ತದೆ ಎಂದರು

ಪ್ರಾಸ್ತಾವಿಕವಾಗಿ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕರ್ನಾಟಕ ರಾಜ್ಯ ಸಂಯೋಜಕರಾದ ವೆಂಕಟೇಶ ಮೂರ್ತಿ ಮಾತನಾಡಿದರು.
ಸಮಾರಂಭದಲ್ಲಿ ವಾಸವಿ ಅಕಾಡೆಮಿ ಕಾರ್ಯದರ್ಶಿ ಎಸ್.ಕೆ.ಶೇಷಾಚಲ, ಸಂಸ್ಕೃತ ಭಾರತಿ ಜಿಲ್ಲಾ ಅಧ್ಯಕ್ಷ ಎನ್.ವಿ.ಶಂಕರನಾರಾಯಣ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ, ಕಾಲೇಜಿನ ಶ್ರೀವತ್ಸ, ಕವಿತಾ ದೇವರಾಜ್, ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಬಾಪೂಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಮ್.ವಿ.ಪಿ.ಅರಾದ್ಯ ವಹಿಸಿದ್ದರು.

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಕರಾದ ಸವ್ಯಸಾಚಿ ದಳಪತಿ,
ಸ್ವಾಗತಿಸಿ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪಂಕಜಕುಮಾರ್ ವಂದಿಸಿದರು.