Thursday, March 26, 2026
Thursday, March 26, 2026
Home Blog Page 1391

ಹಾಸನಾಂಬ ದೇಗುಲ ದೇವಿಯ ದರ್ಶನಕ್ಕೆ ತೆರೆಯಲಾಗಿದೆ

ಅ. 13 ರಿಂದ ಹಾಸನಾಂಬೆ ದೇವಾಲಯದ ಬಾಗಿಲು ತೆರೆದಿದೆ. ದೇವಿ ಹಾಸನಾಂಬೆಯ ಪವಾಡ ಕಂಡು ಜನರು ಬೆರಗಾಗಿದ್ದಾರೆ. ಅದೇನು ಅನ್ನೋದನ್ನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ…

ವರ್ಷಕೊಮ್ಮೆ ತೆರೆಯುವ ಹಾಸನಾಂಬೆ ದೇವಸ್ಥಾನದ ಗರ್ಭಗುಡಿ ಬಾಗಿಲನ್ನು ತೆರೆಯುವ ಮುಖಾಂತರ ಭಕ್ತರಿಗೆ ಹಾಸನಾಂಬೆಯ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಅ.27ರವರೆಗೂ ದೇವಸ್ಥಾನದ ಬಾಗಿಲು ತೆರೆದಿರಲಿದೆ. ಮತ್ತೊಂದು ವಿಶೇಷ ಎಂದರೆ
ಆರದ ದೀಪ, ಬಾಡದ ಹೂ
ಆಶ್ವೀಜ ಮಾಸದ ಮೊದಲ ಗುರುವಾರ ನಿನ್ನೆ ಮಧ್ಯಾಹ್ನ 12.12 ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಸಂಪ್ರದಾಯದಂತೆ ಗೊನೆಯುಳ್ಳ ಬಾಳೆ ಕಂಬ ಕಡಿದ ಬಳಿಕ ಅನೇಕ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಈ ಸಂದರ್ಭದಲ್ಲಿ ಒಂದು ವರ್ಷದ ಹಿಂದೆ ಹಚ್ಚಿಟ್ಟದ್ದ ದೀಪ ಇನ್ನು ಉರಿಯುತ್ತಿತ್ತು. ಮತ್ತು ಅಲಂಕರಿಸಿದ ಹೂಗಳು ಕೂಡ ಬಾಡದೇ ಇರುವುದನ್ನು ಕಂಡು ಜನರು ಬೆರಗಾದರು.

ಅ. 14 ಪ್ರಥಮ ದಿನವೇ ಭಾರಿ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.

ಪತ್ರಕರ್ತರ ಮಾಸಾಶನ ಆಯ್ಕೆ ಸಮಿತಿಗೆ ಪತ್ರಕರ್ತ ಮಂಜುನಾಥ್ ನೇಮಕ

0

ಕರ್ನಾಟಕ ಸರ್ಕಾರವು ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ನೀಡಲು ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲು ರಚಿಸಿರುವ ನೂತನ ಮಾಸಾಶನ ಸಮಿತಿಗೆ ಹಿರಿಯ ಪತ್ರಕರ್ತ, ಶಿವಮೊಗ್ಗ ಟ್ರಸ್ಟ್ ಪ್ರೆಸ್ ಅಧ್ಯಕ್ಷ, ಕ್ರಾಂತಿ ದೀಪ ಸಂಪಾದಕರಾದ ಎನ್. ಮಂಜುನಾಥ್ ಅವರನ್ನು ಸದಸ್ಯರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ಪುನರ್ ರಚಿತ ಸಮಿತಿಯನ್ನು ಪ್ರಕಟಿಸಲಾಗಿದೆ. ಸಮಿತಿಯ ಅವಧಿಯನ್ನು ಎರಡು ವರ್ಷ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರಲಿದೆ.

ವಾರ್ತಾ ಇಲಾಖೆ ಆಯುಕ್ತರು ಅಥವಾ ನಿರ್ದೇಶಕರು ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಸದಸ್ಯರಾಗಿ ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ಕ್ರಾಂತಿದೀಪ ಸಂಪಾದಕ ಎನ್. ಮಂಜುನಾಥ್, ವಿಶ್ರಾಂತ ಪತ್ರಕರ್ತೆ ಗಾಯತ್ರಿ ಶ್ರೀನಿವಾಸ್, ಟಿವಿ 18 ವಾಹಿನಿಯ ಸ್ಥಾನಿಕ ಸಂಪಾದಕ ಸಿದ್ದು ಕಾಳೋಜಿ, ಹಿರಿಯ ಪತ್ರಕರ್ತ ಎಂ.ಎಸ್. ರಾಜೇಂದ್ರ ಕುಮಾರ್ ಇನ್ನು ಮುಂತಾದವು ನೂತನ ಸಮಿತಿಯ ಸದಸ್ಯರಾಗಿದ್ದಾರೆ.

ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ವಯೋಮಿತಿ ನಿಗದಿ 2025-26 ಕ್ಕೆ ಜಾರಿ ತರಲು ಚಿಂತನೆ

1ನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ 6 ವರ್ಷಗಳು ಪೂರ್ಣಗೊಂಡಿರಬೇಕು. ಈ ನಿಯಮವನ್ನು 2025-26ರಿಂದ ಜಾರಿಗೊಳಿಸುವ ಚಿಂತನೆ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಅವರು ತಿಳಿಸಿದ್ದಾರೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಶಾಲಾ ಶಿಕ್ಷಣಕ್ಕೆ ಮಗು ಪ್ರವೇಶ ಪಡೆಯಲು 6 ವರ್ಷಗಳು ಪೂರ್ಣಗೊಂಡಿರುವುದು ಕಡ್ಡಾಯ. ಶಿಕ್ಷಣ ತಜ್ಞರ ಸಲಹೆಯೂ ಅದೇ ಆಗಿದೆ. 23 ರಾಜ್ಯಗಳು ಈಗಾಗಲೇ ನಿಯಮ ಅಳವಡಿಸಿಕೊಂಡಿವೆ. ರಾಜ್ಯದಲ್ಲೂ ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. ಆ ಮಕ್ಕಳು ಎರಡು ವರ್ಷಗಳ ನಂತರ (2025-26) 1ನೇ ತರಗತಿಗೆ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಕೊರೋನಾದ ಬಳಿಕ ದಿನಗಳಲ್ಲಿ ಬಹಳಷ್ಟು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಅವರ ಕಲಿಕಾ ಮಟ್ಟ ಮೌಲ್ಯಮಾಪನ ಮಾಡಲು, ಕಲಿಕೆಯ ಸಾಮರ್ಥ್ಯ ವೃದ್ಧಿಸಲು 5 ಮತ್ತು 8ನೇ ತರಗತಿಗಳಿಗೆ ಸಾಮಾನ್ಯ ಪರೀಕ್ಷೆ ನಡೆಸುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.

ಕೈಗಾದ ಘಟಕ ವಿಸ್ತರಣೆಗೆ ಹಸಿರು ನ್ಯಾಯ ಮಂಡಳಿ ಬ್ರೇಕ್

0

ಕೈಗಾ ಅಣು ವಿದ್ಯುತ್‌ ಸ್ಥಾವರದ ವಿಸ್ತರಣೆಗೆ ನ್ಯೂಕ್ಲಿಯರ್‌ ಪವರ್‌ ಕಾರ್ಪೋರೇಷನ್‌ ಆಫ್ ಇಂಡಿಯಾ ಗೆ ನೀಡಲಾಗಿದ್ದ ಅನುಮತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಡೆ ಹಿಡಿದಿದೆ.

ಕೈಗಾದ ಘಟಕ 5 ಮತ್ತು 6ನ್ನು ವಿಸ್ತರಣೆ ಮಾಡಲು ನೀಡಿರುವಂತಹ ಜಾಗವು ಪಶ್ಚಿಮ ಘಟ್ಟದ ಸೂಕ್ಷ್ಮ ವಲಯದಲ್ಲಿ ಬರುತ್ತದೆ.

ಈ ವಿಸ್ತರಣೆಯಿಂದಾಗಿ ಅಲ್ಲಿನ ಜೀವವೈವಿಧ್ಯತೆಗೆ ತೊಂದರೆಯಾಗಲಿದೆ ಎಂದು ಕೈಗಾ ಅಣು ವಿದ್ಯುತ್‌ ಸ್ಥಾವರ ಮತ್ತು ಘಟಕ ವಿರೋಧಿ ಹೋರಾಟ ಸಮಿತಿಯು ಎನ್‌ಜಿಟಿಗೆ ಅರ್ಜಿ ಸಲ್ಲಿಸಿತ್ತು. ಆ ಅರ್ಜಿ ವಿಚಾರಣೆ ಮಾಡಿರುವ ನ್ಯಾಯಮೂರ್ತಿ ಕೆ.ರಾಮಕೃಷ್ಣನ್‌ ಮತ್ತು ಸತ್ಯಗೋಪಾಲ್‌ ಕೊರ್ಲಪಾರ್ಟಿ ಅವರನ್ನೊಳಗೊಂಡ ಎನ್‌ಜಿಟಿ ಪೀಠವು ಅನುಮತಿಯನ್ನು ತಡೆಹಿಡಿದಿದೆ.

ಎನ್‌ಪಿಸಿಐಎಲ್‌ ಮತ್ತೆ ಅನುಮತಿ ಸಿಗುವವರೆಗೆ ಯಾವುದೇ ರೀತಿಯಲ್ಲಿ ವಿಸ್ತರಣೆಯ ಕಾರ್ಯಾರಂಭ ಮಾಡುವಂತಿಲ್ಲ. ಹಾಗಿದ್ದರೂ, ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸುವ ನಿರ್ದೇಶನಗಳಿಗೆ ಒಳಪಟ್ಟು ನಿರ್ಮಾಣ ಕಾರ್ಯವನ್ನು ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೈಗಾದ 5 ಮತ್ತು 6ನೇ ಘಟಕ ಪಶ್ಚಿಮ ಘಟ್ಟದ ಸೂಕ್ಷ್ಮ ವಲಯದಲ್ಲಿ ಬರುತ್ತದೆಯೇ ಎನ್ನುವುದನ್ನು ಪರಿಶೀಲನೆ ಮಾಡಬೇಕು. ಹಾಗೆಯೇ ಈ ಯೋಜನೆಯಿಂದ ಕೈಗಾ ಗ್ರಾಮದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎನ್ನುವುದನ್ನೂ ಪರಿಶೀಲನೆ ಮಾಡಿ ಎಂದು ಪರಿಸರ ಮತ್ತು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ.

ಈ ಸಮಸ್ಯೆಯನ್ನು ಬಗೆಹರಿಸಲು ತೆಗೆದುಕೊಳ್ಳಬಹುದಾದಂತಹ ಕ್ರಮ, ಅಲ್ಲಿನ ನೀರಿನ ಲಭ್ಯತೆ, ಸೂಕ್ಷ್ಮ ವಲಯದ ಮೇಲೆ ಯೋಜನೆಯಿಂದಾಗಬಹುದಾದ ಪರಿಣಾಮ, ಅಲ್ಲಿನ ನೀರಿನ ಮೂಲಗಳ ಮೇಲಾಗಬಹುದಾದ ಪರಿಣಾಮ, ಘಟಕಗಳಲ್ಲಿ ಅಣು ವಿಕಿರಣದಿಂದಾಗಿ ಸ್ಥಳೀಯ ಜನರ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮದ ಮೇಲೆ ಅಧ್ಯಯನ ನಡೆಸಿ, ವರದಿ ಸಲ್ಲಿಸುವಂತೆ ಎನ್‌ಪಿಸಿಐಎಲ್‌ಗೆ ಸೂಚಿಸಲಾಗಿದೆ.

ಕೈಗಾ ಅಣು ಸ್ಥಾವರದ ಘಟಕ 5 ಮತ್ತು 6 ಅನ್ನು 235 ಮೆಗಾವ್ಯಾಟ್‌ನಿಂದ 700ಮೆಗಾವ್ಯಾಟ್‌ಗೆ ವಿಸ್ತರಿಸಲು 2019ರಲ್ಲಿ ಅನುಮತಿ ನೀಡಲಾಗಿತ್ತು.

ಪ್ರೊ ಕಬಡ್ಡಿ ಟೂರ್ನಿ ಬುಲ್ಸ್ ವಿರುದ್ಧ ವಾರಿಯರ್ಸ್ ವಿಜಯ

0

ಪಂದ್ಯದ ಆರಂಭದಲ್ಲಿ ಉತ್ತಮವಾಗಿ ಆಡಿದ ಬೆಂಗಳೂರು ಬುಲ್ಸ್‌ ತಂಡವನ್ನು ಬೆಂಗಾಲ್ ವಾರಿಯರ್ಸ್ ತಂಡವು ಕೊನೆಗೂ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬುಲ್ಸ್ ತಂಡದ ಹ್ಯಾಟ್ರಿಕ್ ಜಯದ ಕನಸು ಕೈಗೂಡಲಿಲ್ಲ.

ಬೆಂಗಾಲ್ ತಂಡವು 42-33ರಿಂದ ಗೆದ್ದಿತು. ಬೆಂಗಳೂರು ತಂಡವು ಮೊದಲೆರಡು ಪಂದ್ಯಗಳಲ್ಲಿ ಜಯಿಸಿತ್ತು.

ತವರಿನ ಪ್ರೇಕ್ಷಕರ ಮುಂದೆ ಮೊದಲಾರ್ಧದದಲ್ಲಿಯೇ 14-15ರಿಂದ ಬೆಂಗಳೂರು ತಂಡವು ಹಿನ್ನಡೆ ಅನುಭವಿಸಿತ್ತು. ವಿರಾಮದ ನಂತರ ಬೆಂಗಳೂರು ತಂಡವು ತಿರುಗೇಟು ನೀಡುವ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರಿಗೆ ನಿರಾಶೆಯಾಯಿತು. ತಂಡದ ಭರತ್‌ (8) ಹಾಗೂ ವಿಕಾಶ್ ಖಂಡೋಲಾ (7) ಉತ್ತಮವಾಗಿ ಆಡಿದರು.

ಆದರೆ ಬೆಂಗಾಲ್ ತಂಡಕ್ಕೆ ನಾಯಕ ಮಣಿಂದರ್‌ ಸಿಂಗ್‌ (11) ಸೂಪರ್‌ ಟೆನ್‌ ರೇಡ್‌ಗಳ ಬಲದಿಂದ ಜಯ ಒಲಿಯಿತು. ತಂಡವು ಮೂರು ಪಂದ್ಯಗಳಲ್ಲಿ ಎರಡು ಜಯ ಹಾಗೂ ಒಂದರಲ್ಲಿ ಡ್ರಾ ಸಾಧಿಸಿದೆ. ಶ್ರೀಕಾಂತ್‌ ಜಾಧವ್‌ (6) ಹಾಗೂ ಗಿರೀಶ್‌ ಮಾರುತಿ (5) ಆಲ್‌ರೌಂಡ್ ಆಟವಾಡಿದರು.

ಆದರೆ ಬೆಂಗಾಲ್ ತಂಡದ ಪ್ರಮುಖ ಆಟಗಾರ ದೀಪಕ್‌ ಹೂಡಾ 10 ಬಾರಿ ದಾಳಿಗೆ ತೆರಳಿದರೂ ಒಂದು ಅಂಕ ಮಾತ್ರ ಗಳಿಸಿದರು.

ಕೃಷಿ ಗಣತಿಯನ್ನು ಡಿ. 31 ರೊಳಗೆ ಪೂರೈಸಿ- ಡಾ.ಸೆಲ್ವಮಣಿ

0

ಇದೇ ಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳಲಾಗುತ್ತಿರುವ 11ನೇ ಕೃಷಿ ಗಣತಿ ಕಾರ್ಯವನ್ನು ಡಿಸೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದರು.

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷಿ ಗಣತಿ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದರು.

ಕೃಷಿ ಗಣತಿ ಕಾರ್ಯಕ್ಕೆ ಗ್ರಾಮಲೆಕ್ಕಾಧಿಕಾರಿಗಳು ಮೂಲ ಕ್ಷೇತ್ರ ಕಾರ್ಯಕರ್ತರಾಗಿದ್ದು, ಕಂದಾಯ ನಿರೀಕ್ಷಕರನ್ನು ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿದೆ. ಇವರು ಗಣತಿ ಕಾರ್ಯವನ್ನು ನಿಖರವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಶ್ವರಪ್ಪ ಅವರು ಮಾತನಾಡಿ, ದೇಶದಲ್ಲಿ ಕೃಷಿಗೆ ಸಂಬಂಧಿಸಿದ ಬಹುತೇಕ ಮಾಹಿತಿಯನ್ನು ಕೃಷಿ ಗಣತಿಯಿಂದಲೆ ಸಂಗ್ರಹಿಸಲಾಗುತ್ತದೆ. ಪ್ರತಿ 5 ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರವು ದೇಶಾದ್ಯಂತ ಕೃಷಿ ಗಣತಿಯನ್ನು ಕೈಗೊಳ್ಳುತ್ತದೆ. ಕೃಷಿಗಣತಿಯಿಂದ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ವಿವಿಧ ಹಿಡುವಳಿದಾರರ ಪ್ರಮಾಣ ತಿಳಿದುಬರುತ್ತದೆ. ಇದು 3 ಹಂತಗಳಲ್ಲಿ ನಡೆಯುತ್ತದೆ.

ಮೊದಲನೇ ಹಂತದಲ್ಲಿ ಕೃಷಿ ಗಣತಿಯ ಮೂಲಕ ಗ್ರಾಮವಾರು ಹಿಡುವಳಿದಾರರ ಮಾಹಿತಿ, ವಿವಿಧ ಸಾಮಾಜಿಕ ಗುಂಪುವಾರು, ಲಿಂಗವಾರು, ಹಿಡುವಳಿ ವರ್ಗಗಳವಾರು ಮಾಹಿತಿ ಧಾಖಲಿಸಲಾಗುತ್ತದೆ. ಎರಡನೇ ಹಂತದಲ್ಲಿ ಸಕಾಲಿಕ ಗ್ರಾಮಗಳಲ್ಲಿ ಹಿಡುವಳಿದಾರರ ಬೆಳೆವಾರು, ನೀರಾವರಿ ಮೂಲವಾರು ಅಂಕಿ-ಅಂಶಗಳನ್ನು ದಾಖಲಿಸಲಾಗುತ್ತದೆ. ಮೂರನೇ ಹಂತದಲ್ಲಿ ಇನ್ ಪುಟ್ ಸಮೀಕ್ಷೆಯನ್ನು ಆಯ್ದ ಹಿಡುವಳಿದಾರರು ಬಳಸುವ ಕೃಷಿ ಉಪಕರಣ/ಕೃಷಿ ಪರಿಕರಗಳು,ಉಪಯೋಗಿಸಿದ ಗೊಬ್ಬರ, ಜಾನುವಾರು, ಕೃಷಿ ಸಾಲ, ಹಿಡುವಳಿದಾರರ ವಿದ್ಯಾಭ್ಯಾಸ ಮಟ್ಟ, ಇತ್ಯಾದಿಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.

ಬೆಳೆ ಕಟಾವು ಸಮೀಕ್ಷೆ ಕಾರ್ಯದ ಪ್ರಗತಿಯನ್ನು ತಾಲೂಕು ಮಟ್ಟದಲ್ಲಿ ಪರಿಶೀಲಿಸಬೇಕು. ಅಸಮರ್ಪಕ ಸಮೀಕ್ಷೆಯಿಂದ ರೈತರಿಗೆ ನಷ್ಟ ಉಂಟಾದರೆ ಸಂಬಂಧಪಟ್ಟವರು ಜವಾಬ್ದಾರರಾಗಿರುತ್ತಾರೆ. ಸಮೀಕ್ಷೆ ಕಾರ್ಯಕ್ಕೆ ಯಾವುದೇ ಸಬೂಬು ಹೇಳದೆ ಆದಷ್ಟು ಬೇಗನೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಬೇಕು. ಸಕಾಲದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು. ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಯಾವುದೇ ಲೋಪ ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಜನನ-ಮರಣ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ನೋಂದಣಿಯನ್ನು ತ್ವರಿತವಾಗಿ ಮಾಡಲು ಅನುಕೂಲವಾಗುವಂತೆ ನೋಂದಣಧಿಕಾರಿಗೆ ಮಾಹಿತಿಯನ್ನು ಸಕಾಲದಲ್ಲಿ ಒದಗಿಸಲು ಅಂಗನವಾಡಿ, ಆಶಾ ಕಾರ್ಯಕರ್ತರು, ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು, ಎ.ಎನ್.ಎಂ, ಪಿಡಿಒ, ನಗರ ಸಭೆ/ಪುರಸಭೆ ವಾರ್ಡಗಳ ಕಂದಾಯ ಸಿಬ್ಬಂದಿ, ಆರೋಗ್ಯ ಸಿಬ್ಬಂದಿಗಳನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ಗಳನ್ನು ರಚಿಸುವಂತೆ ಅವರು ತಿಳಿಸಿದರು.

ನಗರದ ಕೆಲವು ಆಸ್ಪತ್ರೆಗಳು ಮರಣ ಕಾರಣ ಪ್ರಮಾಣ ಪತ್ರವನ್ನು ಇ-ಜನ್ಮ ತಂತ್ರಾಂಶದಲ್ಲಿ ಸಮರ್ಪಕವಾಗಿ ಅಪ್ ಲೋಡ್ ಮಾಡದಿರುವ ಬಗ್ಗೆ ದೂರುಗಳು ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಅವರಿಗೆ ಸೂಚನೆ ನೀಡಿದರು.

ರಾಜಕೀಯ ಪಕ್ಷಗಳು ಸಭೆ ಜಾಥಾಗಳಲ್ಲಿ ಸೀರೆ ಶರ್ಟ್ ಗಳನ್ನ ಹಂಚುವಂತಿಲ್ಲ

0

ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರುಗಳಿಂದ ಘೋಷಣೆಗಳ ಮಹಾಪೂರವೇ ಹರಿದು ಬರುತ್ತದೆ. ಅಲ್ಲದೆ ಉಚಿತ ಕೊಡುಗೆಗಳ ಭರವಸೆ ನೀಡಲಾಗುತ್ತದೆ. ಈ ಕುರಿತ ಚರ್ಚೆ ನಡೆದಿರುವುದರ ಮಧ್ಯೆ ಇದೀಗ ಕೇಂದ್ರ ಚುನಾವಣಾ ಆಯೋಗ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ.

ರ್ಯಾಲಿಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಅದರಲ್ಲಿ ಪಾಲ್ಗೊಂಡಿದ್ದವರಿಗೆ ಸೀರೆ – ಶರ್ಟ್ ಮೊದಲಾದವುಗಳ ವಿತರಣೆಗೆ ಬ್ರೇಕ್ ಹಾಕಲಾಗಿದೆ.

ಆದರೆ ಕ್ಯಾಪ್, ಮಾಸ್ಕ್ ಕರ್ಚೀಫ್ ನೀಡಲು ಕೇಂದ್ರ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ.

ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳ ಮೈದಾನಗಳನ್ನು ಬಳಸಿಕೊಳ್ಳದಂತೆ ಸೂಚಿಸಲಾಗಿದೆ. ಜೊತೆಗೆ ಜಾಹೀರಾತು ಫಲಕಗಳನ್ನು ಹಾಕಲು ಎಲ್ಲ ಪಕ್ಷಗಳಿಗೂ ಸ್ಥಳೀಯಾಡಳಿತ ಸಮಾನ ಅವಕಾಶ ನೀಡಬೇಕೆಂದು ತಿಳಿಸಲಾಗಿದೆ.

ಗೋಡೆ ಮೇಲೆ ಪೋಸ್ಟರ್ ಅಂಟಿಸುವ ಕುರಿತು ಸ್ಥಳೀಯ ಆಡಳಿತ ನಿಷೇಧ ವಿಧಿಸಿದ್ದ ಸಂದರ್ಭದಲ್ಲಿ ಅದು ಖಾಸಗಿಯವರಿಗೆ ಸೇರಿದ ಸ್ವತ್ತಾದರೂ ಸಹ ನಿಯಮವನ್ನು ಉಲ್ಲಂಘಿಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಸುರಕ್ಷತೆ ಬಗ್ಗೆ ವಿಚಾರ ಸಂಕಿರಣ

0

ಬಳ್ಳಾರಿ-ವಿಜಯನಗರ- ಕೊಪ್ಪಳ ವಲಯ ಸುರಕ್ಷತಾ ಸಮಿತಿ ವತಿಯಿಂದ ಸುರಕ್ಷತೆಯ ವಿಷಯದ ಮೇಲೆ ಒಂದು ದಿನದ ಸೆಮಿನಾರ್*

13.09.2022 ನೇ ಮಂಗಳವಾರದಂದು ಒಂದು ದಿನದ ಸೆಮಿನಾರ್ ಕಾರ್ಯಕ್ರಮ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಸೆಮಿನಾರ್‌ ಕಾರ್ಯಕ್ರಮದಲ್ಲಿ ಟೊಯೋಟಾ ಕಿಲೋಸ್ಕರ್ ಮೋಟಾರ್ ಲಿಮಿಟೆಡ್ ನಿವೃತ್ತ ಇ ಹೆಚ್ ಎಸ್ ವಿಭಾಗದ ಮುಖ್ಯಸ್ಥರು, ರಾಷ್ಟೀಯ ಸುರಕ್ಷತಾ ಸಂಸ್ಥೆ ಕರ್ನಾಟಕ ಪ್ರಾಂತ್ಯದ ಸದಸ್ಯರಾದ ಶ್ರೀ ರಾಮಮೂರ್ತಿಯವರು, Safety Culture & Effective Leadership ಈ ವಿಷಯವಾಗಿ ಉಪನ್ಯಾಸ ನೀಡಿದರು. ನಂತರ ಡಾ.ಮಲ್ಲಿಕಾರ್ಜುನ ಗೌಡರು Today’s challenge in creating behavioral changes among workers to ensure safety ಈ ವಿಷಯವಾಗಿ ಚರ್ಚಿಸಿದರು. ದಾರವಾಡದ ಉಪನ್ಯಾಸಕರು ಮತ್ತು ಚಾರ್ಟಡ್ ಇಂಜಿನಿಯರಿಂಗ್ ಶ್ರೀ ವಿಠಲ ಹನುಮಂತರಾವ್ ಜಾದವ್
Stability certification of industrial buildings and structures ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಬಳ್ಳಾರಿ, ವಿಜಯನಗರ, ರಾಯಚೂರು, ಗದಗ್ ಮತ್ತು ಕೊಪ್ಪಳ ಜಿಲ್ಲೆಯ ವಿವಿಧ ಕಾರ್ಖಾನೆಗಳಿಂದ ಉದ್ಯೋಗಿಗಳು ಮತ್ತು ಸುರಕ್ಷತಾ ವಿಭಾಗದ ಅಧಿಕಾರಿಗಳು ಹಾಜರಾಗಿ ಪ್ರಯೋಜನವನ್ನು ಪಡೆದರು.

ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಯಿತು.ಪ್ರಾರಂಭದಲ್ಲಿ ಉದ್ಘಾಟನೆಯನ್ನು ಕಿರ್ಲೋಸ್ಕರ್ ಕಾರ್ಖಾನೆಯ ಪ್ಲಾಂಟ್ ಹೆಡ್ ಶ್ರೀ ರಮೇಶ್ , ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಪಿ. ನಾರಾಯಣ ,ಬೀಡು ಕಬ್ಬಿಣ ವಿಭಾಗದ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಎಂಜಿ ನಾಗರಾಜ್, ಹುಬ್ಬಳ್ಳಿ ವಲಯದ ಕಾರ್ಖಾನೆಗಳ ಜಂಟಿ ನಿರ್ದೇಶಕರಾದಂತಹ ಶ್ರೀ ರವೀಂದ್ರನಾಥ ಎನ್ ರಾಥೋಡ್, ಬಳ್ಳಾರಿ ವಿಭಾಗದ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ವರುಣ್ , ಕೊಪ್ಪಳ ಮತ್ತು ರಾಯಚೂರು ವಿಭಾಗದ ಸಹಾಯಕ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಹಾಗೂ ಉಪನ್ಯಾಸಕರು ಸೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಭಾಗವಹಿಸಿದಂತಹ ಉದ್ಯೋಗಗಳು ಉತ್ತಮವಾದ ಪ್ರತಿಕ್ರಿಯೆಯನ್ನು ನೀಡುವುದರ ಮೂಲಕ ಮುಂಬರುವ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಸುರಕ್ಷತೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಸಿಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸೆಮಿನಾರ್ ಕೊನೆಯಲ್ಲಿ ಭಾಗವಹಿಸಿದ ಎಲ್ಲಾರಿಗೂ ಸರ್ಟಿಫಿಕೇಟ್ ನೀಡಲಾಯಿತು. ಎಲ್ಲಾ ಕಾರ್ಖಾನೆಗಳ ಆಡಳಿತ ಮಂಡಳಿಗೆ ಕಿರ್ಲೋಸ್ಕರ್ ಮತ್ತು ಬಿ ಕೆ ರೈಸ್ ವತಿಯಿಂದ ಧನ್ಯವಾದವನ್ನು ಅರ್ಪಿಸಲಾಯಿತು.

ಕೊನೆಯದಾಗಿ ಈ ಕಾರ್ಯಕ್ರಮ ಯಶಸ್ಸಿನ ಹಿಂದೆ ಶ್ರಮವಹಿಸಿ ಈ ಕಾರ್ಯಕ್ರಮದ ಆತಿಥ್ಯತೆ ವಹಿಸಿಕೊಂಡಿದ್ದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಆಡಳಿತ ಮಂಡಳಿಗೆ ಮತ್ತು ಸುರಕ್ಷತಾ ವಿಭಾಗದ ಅಧಿಕಾರಿಗಳಿಗೆ ಮತ್ತು ಎಸ್ ಎಲ್ ಆರ್ ಕಾರ್ಖಾನೆಯ ಸುರಕ್ಷತಾ ವಿಭಾಗದ ಅಧಿಕಾರಿಗಳಿಗೆ ಅಭಿನಂದನೆಯನ್ನು ಕಾರ್ಖಾನೆಗಳು, ಬಾಯ್ಲರ್ ಗಳ ಸ್ವಾಸ್ಥ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ರವೀಂದ್ರನಾಥ್ ಎನ್ ರಾಥೋಡ್ ತಿಳಿಸಿದರು. ಕಾರ್ಯಕ್ರಮ ಗ್ರೂಪ್ ಫೋಟೋ ಮೂಲಕ ಮುಕ್ತಾಯವಾಯಿತು.

ಮುರುಳೀಧರ್ ಎಂ ನಾಡಿಗೇರ್

ಹಿಜಾಬ್ ವಿವಾದ ಸದ್ಯಕ್ಕೆ ರಾಜ್ಯ ಹೈಕೋರ್ಟ್ ತೀರ್ಪನ್ನೇ ಊರ್ಜಿತಗೊಳಿಸಿರುವ ಸುಪ್ರೀಂ ಕೋರ್ಟ್

ಹಿಜಾಬ್ ವಿವಾದದ ಬಗ್ಗೆ ನ್ಯಾಯಾಧೀಶರು ವಿಭಜಿತ ತೀರ್ಪು ನೀಡಿರುವುದರಿಂದ ಸದ್ಯದ ಮಟ್ಟಿಗೆ ಕರ್ನಾಟಕ ಹೈಕೋರ್ಟ್​ನ ಹಿಜಾಬ್ ತೀರ್ಪು ಊರ್ಜಿತದಲ್ಲಿ ಇರುತ್ತದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಕರಣದ ವಿಚಾರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅನಂತರವಷ್ಟೇ ಸುಪ್ರೀಂಕೋರ್ಟ್​ನ ಆದೇಶ ಪ್ರಕಟವಾಗಲಿದ್ದು, ಅದು ಹೈಕೋರ್ಟ್​ ಆದೇಶದ ಜಾಗದಲ್ಲಿ ಊರ್ಜಿತಕ್ಕೆ ಬರಲಿದೆ.

ಹೀಗಾಗಿ ಸದ್ಯದ ಮಟ್ಟಿಗೆ ಕರ್ನಾಟಕ ಹೈಕೋರ್ಟ್​ನ ಆದೇಶ ಯಥಾಸ್ಥಿತಿ ಮುಂದುವರಿಯಲಿದೆ. ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಕಾನೂನು ತಜ್ಞರು ಹಾಗೂ ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂವಿಧಾನ, ವೈಯಕ್ತಿಕ ಕಾನೂನಿನ ಗಂಭೀರ ವಿಚಾರಣೆ ನಡೆಯುತ್ತಿದೆ. ನಮ್ಮದು ವೈವಿಧ್ಯಮಯ ಸಂಸ್ಕೃತಿ, ಭಾಷೆ, ಧರ್ಮಗಳ ದೇಶ. ಸರ್ಕಾರಕ್ಕೆ ತನ್ನದೇ ಆದ ಧರ್ಮ ಎಂಬುದಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಆಚರಣೆಯ ಹಕ್ಕಿದೆ. ಆದರೆ ಈ ಹಕ್ಕು ಪರಿಪೂರ್ಣ ಹಕ್ಕಲ್ಲ, ನಿರ್ಬಂಧಗಳಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಮಾರ್ಚ್ 15 ತೀರ್ಪು ಪ್ರಕಟಿಸಿದ್ದ ಹೈಕೋರ್ಟ್, ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಹಲವರು ಅರ್ಜಿ ಸಲ್ಲಿಸಿದ್ದರು.
‘ಪ್ರತಿಭಟನೆಗಳಿಂದ ಶಾಲೆ-ಕಾಲೇಜು ಮುಚ್ಚಿದ್ದು ಬೇಸರದ ಸಂಗತಿ.

ತರಗತಿಯಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕೇ ಎಂಬ ಪ್ರಶ್ನೆ ಕೇಳಿಕೊಂಡಿದ್ದ ಹೈಕೋರ್ಟ್, ಈ ಬಗ್ಗೆ ಆಳವಾದ ವಿಚಾರಣೆ ನಡೆಸುವ ಅಗತ್ಯವಿದೆ. ನಮ್ಮದು ನಾಗರಿಕ ಸಮಾಜ. ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿ ಇಂತಹ ಕೃತ್ಯ ನಡೆಸಲು ಅವಕಾಶವಿಲ್ಲ. ಪ್ರತಿಭಟನೆಗಳಿಂದ ಶಾಲೆ-ಕಾಲೇಜುಗಳು ಬಂದ್ ಆಗಬಾರದು ಎಂದು ಹೇಳಿತ್ತು.

ಕನ್ನಡ ಭಾಷಾ ಮಸೂದೆಯಲ್ಲಿನ ಲೋಪ ಸರಿಪಡಿಸಲು ಮನವಿ

0

ಲೋಪಗಳಿಂದ ಕೂಡಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆಯನ್ನು ಪರಿಷ್ಕರಿಸಿ, ಬಲಪಡಿಸಬೇಕು. ಕನ್ನಡದ ಬಗ್ಗೆ ಅಸಡ್ಡೆ ತೋರುತ್ತಿರುವವರನ್ನು ದಂಡಿಸುವ ಅಕಾಶ ಇರಬೇಕು. ಈ ಮಸೂದೆಯ ಜಾರಿ ಪ್ರಾಧಿಕಾರ‌ಗಳಾಗಿ ರಚಿಸಲಾದ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸ್ವಯಸ್ತ ಸಂಸ್ಥೆಗೆ ಸ್ಥಾನ ನೀಡಬೇಕು.

ಇವು ಸ್ವಾಮೀಜಿಗಳು, ಕಾನೂನು ತಜ್ಞರು, ಸಾಹಿತಿಗಳು, ಚಿಂತಕರು, ಕನ್ನಡಪರ ಹೋರಾಟಗಾರರು ಹಾಗೂ ಕನ್ನಡ ಪರ ಸಂಘ-ಸಂಸ್ಥೆಗಳ ಮುಖ್ಯಸ್ಥರ ಆಗ್ರಹ. ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಗರದಲ್ಲಿ ಬುಧವಾರ ಆಯೋಜಿಸಿದ ಚಿಂತನ ಗೋಷ್ಠಿಯಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ 2022’ರ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಸಾಹಿತಿಗಳಾದ ಎಸ್.ಎಲ್. ಭೈರಪ್ಪ, ದೊಡ್ಡರಂಗೇಗೌಡ, ಪ್ರಧಾನ ಗುರುದತ್ತ, ಶಾಸಕ ಎಚ್.ಕೆ. ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ವಕೀಲ ಅಶೋಕ ಹಾರನಳ್ಳಿ, ಕನ್ನಡ ಪರ ಹೋರಾಟಗಾರ ಸಾ.ರಾ. ಗೋವಿಂದು, ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಸೇರಿ ಹಲವರು ಮಸೂದೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

‘ಮಸೂದೆ ಬಗ್ಗೆ ಕುರಿತು ವ್ಯಾಪಕ ಚರ್ಚೆ ನಡೆಯಬೇಕು. ಸದನ ಸಮಿತಿ ರೂಪುಗೊಂಡು ಚರ್ಚೆಯ ಅಂಶಗಳನ್ನು ಪರಿಶೀಲಿಸಿ, ಅಳವಡಿಸಿಕೊಳ್ಳಬೇಕು. ಯಾವುದೇ ಸರ್ಕಾರ ತನ್ನ ಅವಧಿಯ ಕೊನೆಯ ಭಾಗದಲ್ಲಿ ಕಾನೂನು ರೂಪಿಸುವ ಬದಲು, ಆರಂಭಿಕ ಹಂತದಲ್ಲೇ ಮಸೂದೆ ಮಂಡಿಸಿ, ಕಾಯ್ದೆಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಎಚ್‌.ಕೆ. ಪಾಟೀಲ ಹೇಳಿದರು.

‘ಸರ್ಕಾರ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ಜಾರಿಗೊಳಿಸುವ ಅಧಿಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ಇರಬೇಕು. ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಿದವರು ಪರಿಷತ್ತಿನ ಅಧ್ಯಕ್ಷರನ್ನು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಆದ್ದರಿಂದ ಪರಿಷತ್ತಿನ ಅಧ್ಯಕ್ಷರಿಗೆ ವಿಶೇಷ ಅಧಿಕಾರವನ್ನು ಸರ್ಕಾರ ನೀಡಬೇಕು’ ಎಂದು ಎಸ್.ಎಲ್. ಭೈರಪ್ಪ ಆಗ್ರಹಿಸಿದರು.

ನ್ಯಾ. ಅರಳಿ ನಾಗರಾಜ್, ಕನ್ನಡದ ಜಾರಿಗೆ ಪ್ರಾಮುಖ್ಯತೆ ಎಂಬ ಪದ ಮಸೂದೆಯಲ್ಲಿದ್ದು, ಅದು ಕಡ್ಡಾಯ ಎಂದಾಗಬೇಕು. ನ್ಯಾಯಾಲಯದಲ್ಲಿ ಕನ್ನಡ ಬಳಕೆಯ ಪ್ರಸ್ತಾಪ ಜಿಲ್ಲಾ ನ್ಯಾಯಾಲಯಗಳಿಗೆ ಸೀಮಿತವಾಗಿದೆ. ಇದನ್ನು ಹೈಕೋರ್ಟ್‌ಗೂ ವಿಸ್ತರಿಸಬೇಕು ಎಂದು ಹೇಳಿದರು.

ಈ ಮಸೂದೆ ಅಸ್ತಿತ್ವದಲ್ಲಿರುವ ಅನೇಕ ಕಾನೂನುಗಳೊಂದಿಗೆ ಸಂಘರ್ಷ ಹೊಂದಿದೆ. ಜಾರಿಗೊಳಿಸುವಾಗ ಕೆಲ ತೊಡಕುಗಳು ಎದುರಾಗುತ್ತವೆ. ಇದರಲ್ಲಿನ ಕನ್ನಡಿಗ ಎನ್ನುವ ವ್ಯಾಖ್ಯಾನ ಶಾಸನಬದ್ಧವಾಗಿಲ್ಲ. ರಾಜಭಾಷಾ ಆಯೋಗ ಎನ್ನುವ ಸೂಚನೆ ಇದ್ದರೂ ಅದು ಕೇವಲ ಭಾಷಾಂತರಕ್ಕೆ ಸೀಮಿತವಾಗಿ ಅಸ್ಪಷ್ಟವಾಗಿದೆ ಎಂದು ಅಶೋಕ ಹಾರನಹಳ್ಳಿ ಅವರು ತಿಳಿಸಿದರು.