Friday, March 27, 2026
Friday, March 27, 2026
Home Blog Page 1373

ಪ್ಯಾರಾ ಮತ್ತು ನಾನ್ ಪ್ಯಾರಾ ಮೆಡಿಕಲ್ ಆನ್ ಲೈನ್ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

0

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ಯಾರಾ ಮೆಡಿಕಲ್ ಮತ್ತು ನಾನ್ ಪ್ಯಾರಾ ಮೆಡಿಕಲ್ ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ವಸತಿಸಹಿತ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನಿರುದ್ಯೋಗಿ ಯುವಕ/ಯುವತಿಯರಿಗೆ 500 ಕ್ಕಿಂತ ಹೆಚ್ಚು ಹಾಸಿಗೆ ಹೊಂದಿರುವ ಹಾಗೂ ಎನ್‍ಎಬಿಹೆಚ್(NABH) ನಿಂದ ಮಾನ್ಯತೆ ಪಡೆದ ಆಸ್ಪತ್ರೆಗಳ ಮೂಲಕ ಶೇ.75 ಉದ್ಯೋಗ ಖಾತರಿಯೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ನವೆಂಬರ್ 30 ರೊಳಗೆ ವೆಬ್‍ಸೈಟ್ www.sw.kar.nic.in ಲ್ಲಿ ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಸೇವಾ ನ್ಯೂನತೆ ಎಸ್ ಬಿ ಐ ಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕ ಪರಿಹಾರ ಆಯೋಗ

0

ಸೇವಾ ನ್ಯೂನತೆ ಎಸಗಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡಸಹಿತ ಮರುಪಾವತಿಗೆ ಆದೇಶಿಸಿದೆ.

ಶಿವಮೊಗ್ಗದ ನಿವಾಸಿ ಲತಾ ರಮೇಶ್ ಮತ್ತು ಮಕ್ಕಳು ಇವರು 1ನೇ ಎದುರುದಾರರಾದ ಪ್ರಧಾನ ವ್ಯವಸ್ಥಾಪಕರು, ಮುಖ್ಯ ಶಾಖೆ, ಶಿವಮೊಗ್ಗ ಹಾಗೂ 2ನೇ ಎದುರುದಾರರಾದ ಮ್ಯಾನೇಜರ್ ಹೊಸ ಯಲ್ಲಾಪುರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಧಾರವಾಡ ಇವರ ವಿರುದ್ದ ದೂರು ಸಲ್ಲಿಸಿದ್ದರು.

ಲತಾ ರಮೇಶ್ ಇವರ ಪತಿ ದಿವಂಗತ ರಮೇಶ್ ಎಕ್ಸ್ ಸರ್ವಿಸ್‍ಮೆನ್ ಆಗಿದ್ದು ವಾಸದ ಮನೆ ನಿರ್ಮಾಣಕ್ಕೆ ಶಿವಮೊಗ್ಗದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ರೂ.17,60,000/- ಸಾಲ ಪಡೆದಿದ್ದು, ಸಾಲ ಮರುಪಾವತಿಗೆ ವಿಮಾ ಸೌಲಭ್ಯಕ್ಕಾಗಿ ರೂ.80,000/- ಗಳ ಹೆಚ್ಚುವರಿ ಸಾಲ ಸಹ ಪಡೆದು ಅಧಿಕೃತಗೊಳಿಸುವಲ್ಲಿ ವಿಫಲರಾಗಿರುತ್ತಾರೆ. ಹಾಗೂ ಸಾಲದ ಮೊತ್ತವನ್ನು ದಿವಂಗತ ರಮೇಶ್‍ರವರ ಧಾರವಾಡದ ಶಾಖೆಯಿಂದ ಶಿವಮೊಗ್ಗದ ಸಾಲದ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿದ್ದು, ಈ ಹಿಂದೆ ಶಿವಮೊಗ್ಗ ಗ್ರಾಹಕ ಆಯೋಗದ ಪ್ರಕರಣ ಸಂಖ್ಯೆ 84/2020 ರಲ್ಲಿ ಎದುರುದಾರ ಬ್ಯಾಂಕ್ ವಿರುದ್ದ ಸೇವಾ ನ್ಯೂನತೆ ಸರಿಪಡಿಸಲು ದಂಡ ಸಹಿತವಾಗಿ ಆದೇಶ ಆಗಿರುತ್ತದೆ.

ಆದಾಗ್ಯೂ ಸಹ ಸದರಿ ಬ್ಯಾಂಕಿನವರ ಮತ್ತೆ ವಿವಿಧ ದಿನಾಂಕಗಳಲ್ಲಿ ಒಟ್ಟು ರೂ.1,73,000/- ಗಳನ್ನು ಧಾರವಾಡ ಶಾಖೆಯ ಮೃತ ರಮೇಶ್‍ರವರ ಖಾತೆಯಿಂದ ಶಿವಮೊಗ್ಗದ ಬ್ಯಾಂಕಿನ ಸಾಲದ ಖಾತೆಗೆ ಮೃತರ ವಾರಸುದಾರರ ಗಮನಕ್ಕೆ ತಾರದೇ ಮತ್ತು ಒಪ್ಪಿಗೆ ಪಡೆಯದೇ ಬ್ಯಾಂಕಿನ ನಿಯಮಾವಳಿಗೆ ವಿರುದ್ದವಾಗಿ, ಅನಧಿಕೃತವಾಗಿ ವರ್ಗಾಯಿಸಿರುತ್ತಾರೆ.

ಈ ಹಿನ್ನೆಯಲ್ಲಿ ಸದರಿ ದೂರನ್ನು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರಡಿ ಪರಿಶೀಲಿಸಿದ ಆಯೋಗವು ಬ್ಯಾಂಕ್ ಸೇವಾ ನ್ಯೂನತೆ ದೃಢಪಟ್ಟಿರುವುದು ಕಂಡು ಬಂದಿದ್ದರಿಂದ ಬ್ಯಾಂಕ್ ಕಾನೂನುಬಾಹಿರವಾಗಿ ವರ್ಗಾಯಿಸಿದ ಮೊತ್ತ ರೂ.1,73,000/- ಗಳನ್ನು ಶೇ.8 ಬಡ್ಡಿಸಹಿತ ಮೃತ ರಮೇಶ್‍ರ ಧಾರವಾಡದ ಉಳಿತಾಯ ಖಾತೆಗೆ ಮರುಪಾವತಿಸಲು ಆದೇಶಿಸಿದೆ.

ಹಾಗೂ ದೂರದಾರರಿಗೆ ಉಂಟಾದ ಮಾನಸಿಕ ಹಿಂಸೆ ಮತ್ತು ತೊಂದರೆಗಳಿಗೆ ರೂ.1,00,000/- ಗಳ ಪರಿಹಾರ ಹಾಗೂ ವ್ಯಾಜ್ಯ ವೆಚ್ಚ ರೂ.5000/- ಗಳನ್ನು ಬ್ಯಾಂಕಿನವರು ದೂರುದಾರರಿಗೆ ಪಾವತಿಸುವಂತೆ ಆದೇಶಿಸಿದೆ.

ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಬಿ.ಡಿ.ಯೋಗಾನಂದ ಹಾಗೂ ಮಹಿಳಾ ಸದಸ್ಯೆ ಸವಿತಾ ಬಿ ಪಟ್ಟಣಶೆಟ್ಟಿ ಇವರ ಪೀಠವು ಈ ಆದೇಶ ನೀಡಿದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ ಆತ್ಮವಿಶ್ವಾಸ ಬೆಳೆಯುತ್ತದೆ-ಸಮನ್ವಯ ಕಾಶಿ

0

ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಬೇಕು. ಸೋಲು ಗೆಲವು ಮುಖ್ಯವಲ್ಲ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ಹಾಗೂ ಮನೋಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಹೇಳಿದರು.

ಮರ್ಕಝ್ ಸಆದಃ ಫೌಂಡೇಷನ್ ವತಿಯಿಂದ ಡಿಸೆಂಬರ್ 1, 2 ಮತ್ತು 3ರಂದು ನಡೆಯಲಿರುವ ಮೇಘಲಿಯೋ – ಮಕ್ಕಳ ಹಬ್ಬದ ಪೋಸ್ಟರ್ ರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಅತ್ಯಂತ ಮುಖ್ಯ. ಹಣ, ಆಸ್ತಿ ಯಾವುದು ಶಾಶ್ವತವಲ್ಲ. ನಾವು ಗಳಿಸಿರುವ ಜ್ಞಾನ ಹಾಗೂ ಕೌಶಲ್ಯ ಪ್ರಮುಖ ಆಗಿದೆ. ಪ್ರಪಂಚದಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆದವರು ಕೌಶಲ್ಯ ಹಾಗೂ ಜ್ಞಾನ ಹೊಂದಿದವರೇ ಆಗಿದ್ದಾರೆ ಎಂದು ತಿಳಿಸಿದರು.

ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜೀವನಹಾದಿಯೇ ನಮಗೆಲ್ಲರಿಗೂ ಸ್ಫೂರ್ತಿ. ಎಲ್ಲ ವಿದ್ಯಾರ್ಥಿಗಳು ಸಾಧಕರ ಜೀವನಚರಿತ್ರೆಯಿಂದ ಪ್ರೇರಣೆ ಪಡೆದು ಸಾಧಿಸಲು ಮುಂದಾಗಬೇಕು. ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಸೇವೆ ಮಾಡಬೇಕು. ಉನ್ನತ ಸ್ಥಾನ ತಲುಪಿ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಮರ್ಕಝ್ ಸಆದಃ ಫೌಂಡೇಷನ್ ಮುಖ್ಯಸ್ಥ ಅಬ್ದುಲ್ ಲತೀಫ್ ಸಅದಿ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಕೌಶಲ್ಯ ಕಲಿಸುವ ಜತೆಯಲ್ಲಿ ವೈವಿಧ್ಯಮಯ ಸ್ಪರ್ಧೆಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಮಕ್ಕಳಲ್ಲಿ ಜ್ಞಾನಸಾಮರ್ಥ್ಯ ವೃದ್ಧಿಸಲು ಹಾಗೂ ಕೌಶಲ್ಯ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ. ಎಲ್ಲ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಉತ್ತಮ ಮನೋಭಾವ ಹಾಗೂ ಕಲಿಕಾ ಕೌಶಲ್ಯ ಹೊಂದಬೇಕು ಎಂದು ತಿಳಿಸಿದರು.

ಮರ್ಕಝ್ ಸಆದಃ ಫೌಂಡೇಷನ್ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಸಅದಿ, ಶಾಕಿರ್ ಸಖಾಫಿ, ಸಾದತ್ ಶಿವಮೊಗ್ಗ, ಸೈಫುಲ್ಲಾ ಮದನಿ, ಅಕ್ಬರ್ ಶಿವಮೊಗ್ಗ, ಅಶ್ರಫ್ ಶಿವಮೊಗ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗೋವಾ ಮತ್ತು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರ

0

ಗೋವಾ ಮತ್ತು ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಗೋವಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರಾಲ್ಫ್ ಡಿ ಸೋಜಾ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಯೋಗದೊಂದಿಗೆ ಗೋವಾ ರಾಜ್ಯದ, ಗೋವಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳೊಂದಿಗೆ ಆಯೋಜಿಸಿದ್ದ ವಿಶೇಷ ಸಂವಾದ ಹಾಗೂ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಗೋವಾ ವಾಣಿಜ್ಯ ಸಂಘವು 114 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಗೋವಾ ರಾಜ್ಯದಲ್ಲಿನ ಉದ್ಯಮಿಗಳು ಹಾಗೂ ಕೈಗಾರಿಕಾ ಸಂಘದ ಪ್ರತಿನಿಧಿಗಳು ಸರ್ಕಾರದ ಹಂತದಲ್ಲಿ ನಾಮನಿರ್ದೇಶಿತರಾಗಿ ಗೋವಾ ರಾಜ್ಯದ ಆರ್ಥಿಕ ಪ್ರಗತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಆಶಯಕ್ಕೆ ಪೂರಕವಾಗಿ ಉದ್ಯಮಿಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಿದ್ದೇವೆ. ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳನ್ನು ನಡೆಸಲು ಸಿದ್ಧರಿದ್ದೇವೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು, ಟೂರಿಸಂ ಸರ್ಕ್ಯೂಟ್ ರೂಪಿಸುವ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಲೋಕಸಭೆ ಸದಸ್ಯರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಟೂರಿಸಂ ಹಬ್ ಆಗಿ ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಮೊಟ್ಟ ಮೊದಲ ಬಾರಿಗೆ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (FICCI) ಜತೆಗೂಡಿ, ಕೌಟುಂಬಿಕ ವ್ಯವಹಾರ ಸಮ್ಮೇಳನ ( ಫ್ಯಾಮಿಲಿ ಬಿಸಿನೆಸ್ ಸಮ್ಮಿಟ್ ) ನಡೆಸಿದ್ದು, ಅಂತರಾಜ್ಯ, ಗೋವಾ ಜತೆಯು ವಿಶೇಷ ಒಪ್ಪಂದ ಹಾಗೂ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಮುಂದಾಗಿದೆ.

ದ್ವಿಪಕ್ಷೀಯ ಚಟುವಟಿಕೆ ರೂಪದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಗೋವಾ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಅದೇ ರೀತಿಯಲ್ಲಿ ಶಿವಮೊಗ್ಗ ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಗೋವಾ ರಾಜ್ಯದಲ್ಲಿ ಆಯೋಜಿಸಲು ಮುಂದಿನ ದಿನಗಳಲ್ಲಿ ಆಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ತಾಲೂಕು ಕೇಂದ್ರಗಳಲ್ಲಿಯು ವಾಣಿಜ್ಯ ಮತ್ತು ಕೈಗಾರಿಕೆಗೆ ಪ್ರೋತ್ಸಾಹಿಸುವ ದೃಷ್ಠಿಯಿಂದ ಜಿಲ್ಲಾ ಸಂಘವು ಸಕಲ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಪ್ರವಾಸೋದ್ಯಮದ ಬಗ್ಗೆ ರೋಡ್ ಶೋ ನಡೆಸುವ ಆಲೋಚನೆ ಇದೆ ಎಂದು ವಿವರಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಮಾಜಿ ಅಧ್ಯಕ್ಷರಾದ ಡಿ.ಎಂ.ಶಂಕರಪ್ಪ, ಜೆ.ಆರ್.ವಾಸುದೇವ್, ನಿರ್ದೇಶಕರಾದ ಎಂ.ರಾಜು, ಸುಕುಮಾರ್, ಜಗದೀಶ್ ಮಾಥನವರ್, ಗಣೇಶ್ ಎಂ.ಅಂಗಡಿ, ಪ್ರದೀಪ್ ಎಲಿ, ಮರಿಸ್ವಾಮಿ, ಮಂಜೇಗೌಡ, ಪರಮೇಶ್ವರ್, ರಮೇಶ್ ಹೆಗ್ಡೆ, ಗೋವಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷೆ ಪ್ರತಿಮಾ ದೋಂದ್, ಖಜಾಂಚಿ ಚಂದ್ರಕಾಂತ್, ನಿರ್ದೇಶಕ ಸೋಹನ್ ಪ್ರಭು, ಕಿರಣ್ ಮತ್ತಿತರರು ಭಾಗವಹಿಸಿದ್ದರು.

ಹಿರಿಯ ನಟ ದ್ವಾರಕೀಶ್ ಅವರಿಗೆ ಗೌರವ ಡಾಕ್ಟರೇಟ್

0

ಸ್ಯಾಂಡಲ್ ವುಡ್ ನ ಹಿರಿಯ ನಟ ದ್ವಾರಕೀಶ್ ಗೆ ಗೌರವ ಡಾಕ್ಟರೇಟ್ ಅನ್ನು ಘೋಷಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯವು ಚಿತ್ರರಂಗದಲ್ಲಿನ ಅವರ ಹಲವಾರು ವರ್ಷಗಳ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪ್ರಧಾನ ಮಾಡಿ ಗೌರವಿಸಲಿದೆ.

ಡಿಸೆಂಬರ್ 5ರಂದು ನಡೆಯಲಿರುವ ವಿಶ್ವವಿದ್ಯಾಲಯದ 57ನೇ ಘಟಿಕೋತ್ಸವದಂದು ನಟ ದ್ವಾರಕೀಶ್ ಗೌರವ ಡಾಕ್ಟರೇಟ್ ಗೆ ಭಾಜನರಾಗಲಿದ್ದಾರೆ.

ಕರ್ನಾಟಕದ ಕುಳ್ಳ ಎಂದೇ ಖ್ಯಾತರಾದ ದ್ವಾರಕೀಶ್ ಅವರು ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಹೆಸರು ಗಳಿಸಿದ್ದಾರೆ.
ನೂರಾರು ಸಿನಿಮಾಗಳಲ್ಲಿ ನಟಿಸಿ, 40ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿರುವ ನಟ ದ್ವಾರಕೀಶ್‌ ಗೆ ಡಿ.5ರಂದು ಜ್ಞಾನ ಭಾರತಿ ಆಡಿಟೋರಿಯಂನಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.

ಪುಣ್ಯಕೋಟಿ ಯೋಜನೆಗೆ ದೇಣಿಗೆ ನೀಡಿದರೆ ಆದಾಯ ತೆರಿಗೆ ವಿನಾಯಿತಿ

0

ರಾಜ್ಯ ಸರ್ಕಾರಿ ನೌಕರ’ರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪುಣ್ಯಕೋಟಿ ದತ್ತು ಯೋಜನೆ ದೇಣಿಗೆಗೆ ‘ಆದಾಯ ತೆರಿಗೆ’ ವಿನಾಯಿತಿ ಘೋಷಿಸಿ ಆದೇಶ ಹೊರಡಿಸಿದೆ.

ಈ ಕುರಿತು ಬಿ.ಎನ್ ಪ್ರವೀಣ್ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರ ವೇತನದಿಂದ ಕಟಾವು ಮಾಡಲಾದ ವಂತಿಗೆ ಮೊತ್ತಕ್ಕೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಹೊಂದಿರುವ ಆದಾಯ ತೆರಿಗೆ ವಿನಾಯಿತಿ ಅನ್ವಯ ಕ್ರಮಕೈಗೊಂಡು ಆದಾಯ ತೆರಿಗೆ ಅಧಿನಿಯಮ, 1961ರ ಕಲಂ 80(ಜಿ) ವಿನಾಯಿತಿ ನೀಡಿ ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೋರಿದ್ದರ ಹಿನ್ನಲೆಯಲ್ಲಿ ಈ ಬಗ್ಗೆ ಸೂಕ್ತ ಹೊರಡಿಸುವ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಮುಂದಿನ ಕ್ರಮವಹಿಸುವಂತೆ ಕೋರಿರುತ್ತದೆ.

ಅದರಂತೆ ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80G ರನ್ವಯ ತೆರಿಗೆ ವಿನಾಯಿತಿ ಇದ್ದು, ಅದರಂತೆ ಮಣ್ಯಕೋಟಿ ದತ್ತು ಯೋಜನೆಗೆ ವಂತಿಗೆಯನ್ನು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ನೀಡಿದ ಅಧಿಕಾರಿ/ನೌಕರರು ಸೆಕ್ಷನ್ 80G ರನ್ವಯ ವಿನಾಯಿತಿ ಪಡೆಯಬಹುದಾಗಿರುತ್ತದೆ ಎಂದು ಆದೇಶ ಹೊರಡಿಸಿದ್ದಾರೆ.

ಉದ್ಯಮಶೀಲತೆ ತರಬೇತಿಯಲ್ಲಿ ಮುಂಚೂಣಿಯಲ್ಲಿದೆ ಕೆನರಾ ಬ್ಯಾಂಕ್ ಉದ್ಯೋಗ ತರಬೇತಿ ಕೇಂದ್ರ

0

ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಕುಮಟಾ 2000ರಲ್ಲಿ ಅಕ್ಟೋಬರ್ 02 ಪ್ರಾರಂಭಗೊಂಡಿತು.
ಕಳೆದ 20 ವರ್ಷಗಳಲ್ಲಿ ಹಲವಾರು ತರಬೇತಿಗಳನ್ನು ನೀಡುತ್ತಾ ಬಂದಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು 2000 ದಿಂದ 2022 ರವರೆಗೆ ಸುಮಾರು 18 ರಿಂದ 20 ಸಾವಿರ ಜನರಿಗೆ ತರಬೇತಿಯನ್ನು ನೀಡಿದೆ.

ಗ್ರಾಮೀಣ ಭಾಗದಲ್ಲಿರುವಂತಹ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗದ ಕುರಿತು ತರಬೇತಿ ನೀಡಿ ಅವರನ್ನ ಉದ್ಯಮಶೀಲರನ್ನಾಗಿ ಮಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ಯಾರು ಕೂಡ ಉದ್ಯೋಗ ವಂಚಿತರಾಗದಿರಲಿ ಎಂಬ ಮುಖ್ಯ ಉದ್ದೇಶದಿಂದ ಈ ಸಂಸ್ಥೆಯು ಪ್ರಾರಂಭಗೊಂಡಿತು. ಇಂದಿನ ಯುಗದಲ್ಲಿ ಸರ್ಕಾರಿ ಕೆಲಸ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ. ಗ್ರಾಮೀಣ ಭಾಗದ ಜನರು ಸ್ವ ಉದ್ಯೋಗದ ಮೂಲಕ ಬದುಕನ್ನ ರೂಪಿಸಿಕೊಳ್ಳಲು ಈ ಸಂಸ್ಥೆಯು ನೆರವಾಗುತ್ತಿದೆ.

ಈ ತರಬೇತಿ ಕೇಂದ್ರದ ಅಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗಡೆಯವರು ಕಾರ್ಯನಿರ್ವಹಿಸುತ್ತಿದ್ದಾರೆ.
ಕೆನರಾ ಬ್ಯಾಂಕ್ ನ ಪ್ರಯೋಜಿತದಲ್ಲಿ ಈ ಸಂಸ್ಥೆಯು ಬೆಳೆಯುತ್ತಿದೆ.

ಇಲ್ಲಿ ತರಬೇತಿಯನ್ನ ಪಡೆಯಲು 18 ವರ್ಷ ಮೇಲ್ಪಟ್ಟ 45 ವರ್ಷದ ನಿರುದ್ಯೋಗ ಯುವಕ ಯುವತಿಯರು ಅರ್ಹರಾಗಿರುತ್ತಾರೆ.

ಈ ತರಬೇತಿ ಸಂಸ್ಥೆಯಲ್ಲಿ ಮಿಕ್ಸಿ ರಿಪೇರಿ, ಟಿವಿ ರಿಪೇರಿ, ಬ್ಯೂಟಿಷಿಯನ್ ಕೋರ್ಸ್, ಟೈಲರಿಂಗ್, ಕೋಳಿ ಸಾಕಾಣಿಕೆ, ಕಂಪ್ಯೂಟರ್ ಟ್ಯಾಲಿ, ಸೇರಿದಂತೆ ಇನ್ನೂ ಅನೇಕ ರೀತಿಯ ತರಬೇತಿಗಳನ್ನು ನೀಡಲಾಗುತ್ತದೆ.

ಗ್ರಾಮೀಣ ಭಾಗದಲ್ಲಿರುವ ಬಿಪಿಎಲ್ ಕಾರ್ಡ್ ದಾರರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಈಗಾಗಲೇ ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಶೇ. 70%ಕ್ಕೂ ಹೆಚ್ಚು ಜನರು ಸ್ವಉದ್ಯೋಗವನ್ನು ಪ್ರಾರಂಭಿಸಿದ್ದಾರೆ.
ಇಲ್ಲಿ ತರಬೇತಿ ಪಡೆದ ಹಲವರು ಗ್ರಾಮೀಣ ಭಾಗದ ಅನೇಕ ಜನರಿಗೆ ತರಬೇತಿ ನೀಡಿದ್ದಾರೆ.
ತರಬೇತಿಯ ನಂತರದಲ್ಲಿ ತರಬೇತಿದಾರರು ಸ್ವಉದ್ಯೋಗ ಪ್ರಾರಂಭಿಸಲು ಇಚ್ಚಿಸಿದಾಗ ಹಣಕಾಸಿನ ಸಮಸ್ಯೆ ಎದುರಾದಲ್ಲಿ ಅವರು ಯಾವ ಬ್ಯಾಂಕಿನಲ್ಲಿ ವ್ಯವಹರಿಸುತ್ತಾರೋ ಅಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ತರಬೇತಿ ಕೇಂದ್ರದ ವತಿಯಿಂದ ಶಿಫಾರಸು ಮಾಡಲಾಗುತ್ತದೆ.

ಸಿಇಟಿ ಅರ್ಜಿ ತುಂಬಲು ವಿದ್ಯಾರ್ಥಿಗಳಿಗೆ ಪಿಯು ಕಾಲೇಜುಗಳಲ್ಲಿ ಸಹಾಯ ಕೇಂದ್ರ

0

ವಿದ್ಯಾರ್ಥಿಗಳು ಯಾವುದೇ ತಪ್ಪಿಲ್ಲದೆ ಸಿಇಟಿ ಅರ್ಜಿ ತುಂಬುವುದನ್ನು ಕಲಿಸಲು ವಿಜ್ಞಾನ ಪಠ್ಯಕ್ರಮವಿರುವ ಪ್ರತಿಯೊಂದು ಪದವಿ ಪೂರ್ವ ಕಾಲೇಜಿನಲ್ಲೂ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಸಂಬಂಧವಾಗಿ ಪ್ರಾಥಮಿಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಜತೆ ಸಚಿವರು ಮಹತ್ವದ ಸಭೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ಅಶ್ವತ್ಥ್​ ನಾರಾಯಣ ಅವರು, ಎಸ್ಸೆಸ್ಸೆಲ್ಸಿ‌ ಹಂತದಲ್ಲಿನ ವಿದ್ಯಾರ್ಥಿ ಸಾಧನೆ ಟ್ರಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್)ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಜತೆ ಸಂಯೋಜನೆಗೊಳಿಸುವ ಸಂಬಂಧ ಚರ್ಚಿಸಲಾಯಿತು.

ಕೆಇಎ ಕೂಡ ಯಾವ ರೀತಿಯ ಮಾಹಿತಿ ಅಗತ್ಯ ಇದೆ ಎನ್ನುವುದನ್ನು ತಿಳಿಸಲಿದ್ದಾರೆ. ಎರಡೂ ಇಲಾಖೆಗಳ ಸಮನ್ವಯದಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

ಈಗ ಸಾಕಷ್ಟು ವಿದ್ಯಾರ್ಥಿಗಳು ಸಿಇಟಿ ಅರ್ಜಿಯಲ್ಲಿ ಆರ್.ಡಿ. ಸಂಖ್ಯೆ, ತಂದೆಯ ಹೆಸರು, ಜಾತಿಯ ಹೆಸರು ಇತ್ಯಾದಿಗಳನ್ನು ತಪ್ಪಾಗಿ ದಾಖಲಿಸುತ್ತಿದ್ದಾರೆ.

ಇದನ್ನೆಲ್ಲ ಸರಿಪಡಿಸಲು ಏಳೆಂಟು ಬಾರಿ ಅವಕಾಶ ಕೊಡುತ್ತಿದ್ದು, ಇದರಿಂದ ಸಮಯ ವ್ಯರ್ಥವಾಗುತ್ತಿರುವುದರ ಜತೆಗೆ ಉಳಿದ ಪ್ರಕ್ರಿಯೆಗಳು ವಿಳಂಬ ಆಗುತ್ತಿವೆ. ಹೀಗಾಗಿ ಪಿಯುಸಿಯಲ್ಲಿ ಇರುವಾಗಲೇ ಸಿಇಟಿ ಅರ್ಜಿ ತುಂಬಲು ಕಲಿಸುವ ವಿದ್ಯಾರ್ಥಿಸ್ನೇಹಿ ವ್ಯವಸ್ಥೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇದಕ್ಕಾಗಿ ಪ್ರತಿ ಕಾಲೇಜಿನಲ್ಲೂ ತಲಾ 100 ವಿದ್ಯಾರ್ಥಿಗಳಿಗೆ ಒಬ್ಬ ಪುರುಷ ಮತ್ತು ಓರ್ವ ಮಹಿಳಾ ಉಪನ್ಯಾಸಕರನ್ನ ಸಂಯೋಜಕರನ್ನಾಗಿ ನೇಮಿಸಲಾಗುವುದು.

ಇದರ ಜತೆಗೆ ಒಂದು ಜಿಲ್ಲೆಗೆ ತಲಾ ನಾಲ್ವರು ಮಾಸ್ಟರ್ ಟ್ರೈನರ್ ಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಸಂಯೋಜಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ಕೊಡಲಾಗುವುದು. ಹಾಗೆಯೇ ಮಾಸ್ಟರ್ ಟ್ರೈನರ್ ಗಳಿಗೆ ಪ್ರಾಧಿಕಾರದಿಂದ ಪ್ರತ್ಯೇಕವಾಗಿ ತರಬೇತಿ ನೀಡಲಾಗುವುದು ಎಂದು ಅವರು ವಿವರಿಸಿದರು.

ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ

0

ಸಂಗೀತ ನಾಟಕ ಅಕಾಡೆಮಿಯು ಕರ್ನಾಟಕದ 7 ಕಲಾವಿದರಿಗೆ 2022 ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ ಘೋಷಿಸಿದೆ.

ಕರ್ನಾಟಕದ ಐವರು ಸೇರಿ ಒಟ್ಟು 75 ಕಲಾವಿದರಿಗೆ 2022 ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟಿಸಲಾಗಿದ್ದು, ಕರ್ನಾಟಕದ ಇನ್ನಿಬ್ಬರು ಕಲಾವಿದರು 2020 ಹಾಗೂ 2021 ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

2020 ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಕರ್ನಾಟಕದಿಂದ ಜಾನಪದ ಸಂಗೀತ ವಿಭಾಗದಲ್ಲಿ ಎಸ್.ಜಿ. ಲಕ್ಷ್ಮೀದೇವಮ್ಮ ಹಾಗೂ 2021 ನೇ ಸಾಲಿನಲ್ಲಿ ಗರ್ತಿಗೆರೆ ರಾಘಣ್ಣ ಆಯ್ಕೆಯಾಗಿದ್ದಾರೆ.

2022 ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರಾಗಿ ಗೌರಿ ಕುಪ್ಪುಸ್ವಾಮಿ,
ಅನಸೂಯ ಕುಲಕರ್ಣಿ,
ಭರತ ನಾಟ್ಯ ಕಲಾವಿದೆ ಲಲಿತಾ ಶರೀವಾಸನ್,
ರಂಗಭೂಮಿ ಕಲಾವಿದ ಎ.ಎಸ್. ಜಯತೀರ್ಥ,
ಜಾನಪದ ಕಲಾವಿದ ಮಾರಪ್ಪದಾಸ್ ಆಯ್ಕೆಯಾಗಿದ್ದಾರೆ.

ತೀರ್ಥಹಳ್ಳಿ ಕ್ಷೇತ್ರದಲ್ಲಿ ₹50ಕೋಟಿ ವೆಚ್ಚದ ಎರಡು ಸೇತುವೆಗಳಿಗೆ ಮಂಜೂರಾತಿ

0

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಹೊಸ ಸೇತುವೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂ.
ಮಂಜೂರು ಮಾಡಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಬೇಡಿಕೆಗೆ ಆರ್ಥಿಕ ಇಲಾಖೆಯೂ, ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.

ತೀರ್ಥಹಳ್ಳಿ ತಾಲೂಕಿನ ತೂದೂರು,ಮುಂಡುವಳ್ಳಿ ಗ್ರಾಮಗಳ ನಡುವೆ ತುಂಗಾ ನದಿಗೆ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ 25.65 ಕೋಟಿ ರೂ. ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಹೊಸನಗರ ತಾಲೂಕಿನ ಕಾರಣಗಿರಿ-ಬಪ್ಪನಮನೆ ಸಂಪರ್ಕ ರಸ್ತೆಯ ಶರಾವತಿ ಹಿನ್ನೀರಿನ ಬಿಲ್ಸಾಗರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ 24.36 ಕೋಟಿ ರೂ. ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ. 2 ಯೋಜನೆಗಳ ಮಂಜೂರಾತಿಗೆ ಬೇಡಿಕೆ ಮಂಡಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಬಳಿಯ ತುಂಬ್ರಮನೆಯಲ್ಲಿ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ.

ಕೊರೋನಾ ಲಾಕ್ ಡೌನ್ ಮತ್ತು ಮಳೆಗಾಲದ ಕ್ಲಿಷ್ಟಕರ ಸನ್ನಿವೇಶದಲ್ಲಿ, ಅನೇಕ ಅಡೆತಡೆ ಹಾಗೂ ಕಠಿಣ ಸವಾಲು ಎದುರಿಸಿ ಕೇವಲ ಎರಡೇ ತಿಂಗಳಿನ‌ಲ್ಲಿ ಸೇತುವೆ ನಿರ್ಮಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಹಿತಿ ತಿಳಿಸಿದ್ದಾರೆ.