Mescom ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಏ.12 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿನ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ವಿನಾಯಕನಗರ, ಹನುಮಂತನಗರ, ರವೀಂದ್ರನಗರ, ರಾಜೇಂದ್ರನಗರ, ಸವಳಂಗ ರಸ್ತೆ, ಉಷಾ ನರ್ಸಿಂಗ್ ಹೋಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
Health & Family welfare Shimoga ಹೊಸನಗರ ಎನ್.ಪಿ.ಎನ್.ಸಿ.ಡಿ. ವಿಭಾಗದಲ್ಲಿ ತಾಲ್ಲೂಕು ಆಸ್ಪತ್ರೆಗೆ ಪ್ರಯೋಗಶಾಲಾ ತಂತ್ರಜ್ಞರ ನೇಮಕಾತಿ: ನೇರ ಸಂದರ್ಶನಕ್ಕೆ ಕರೆ.
Health & Family welfare Shimoga ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದ ಎನ್.ಪಿ.ಎನ್.ಸಿ.ಡಿ. ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕು ಆಸ್ಪತ್ರೆಯಲ್ಲಿ ಖಾಲಿಯಿರುವ ಪ್ರಯೋಗಶಾಲಾ ತಂತ್ರಜ್ಞರ 2 ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇರನೇಮಕಾತಿ ಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಕರೆ ನೀಡಲಾಗಿದೆ.
ಆಸಕ್ತರು ಏ.17 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ್ನ 5.00ರವರೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ತಮ್ಮ ದಾಖಲೆಗಳ ಮೂಲಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Health & Family welfare Shimoga ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ಎಸ್.ಎಸ್.ಎಲ್.ಸಿ. + ಪಿ.ಯು.ಸಿ. ಹಾಗೂ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಹೊಂದಿದ್ದು, 2 ವರ್ಷ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿರುವ ಅನುಭವವಿರಬೇಕು. ವಾರ್ಡ್ ಪ್ರೊಸೆಸ್ಸಿಂಗ್, ಡೇಟಾ ಪ್ರೊಸೆಸ್ಸಿಂಗ್ ನಂತರ ಕಂಪ್ಯೂಟರ್‌ನ ಮೂಲಭೂತ ಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಈ ನೇಮಕಾತಿಯು ಎನ್.ಹೆಚ್.ಎಂ ನಿಯಮಾವಳಿ, ಷರತ್ತು ಮತ್ತು ನಿಬಂಧನೆಗಳಿಗೆ ಮತ್ತು ಆಯ್ಕೆ ಸಮಿತಿಯ ತೀರ್ಮಾನಕ್ಕೆ ಒಳಪಟ್ಟಿರುತ್ತದೆ
Krishnashastry ಶ್ವೇತವಸ್ತ್ರದ ಸಂತ, ಬೆಳಗೆರೆ ಕೃಷ್ಣಶಾಸ್ತ್ರಿಗಳು.
ಲೇ: ಪ್ರಸಾದ್ ಶ್ರೀವತ್ಸ.
ದಾವಣಗೆರೆ.
Krishnashastry ಅದು ನಾನು ಹತ್ತನೇ ತರಗತಿಯನ್ನು ಮುಗಿಸಿ, ಪಿಯುಸಿಯ ಮೆಟ್ಟಿಲೇರುವ ಸಮಯ. ಕೇವಲ ಹಳ್ಳಿಯ ಶಾಲೆಗಳಲ್ಲೇ ಓದಿ ಬರೆದ ನಾನು ಸ್ವಲ್ಪ ದಡ್ಡನಾದ್ದರಿಂದ ಅಂದರೆ town ನಲ್ಲಿ ಓದಿದ್ದರೆ ಬುದ್ಧಿವಂತನಾಗಿರುತ್ತಿದ್ದೆ ಎಂದಲ್ಲ. ಪಿಯುಸಿ ಯಲ್ಲಿ ಎಲ್ಲರಂತೆ science ಓದಬೇಕು ಎಂಬ ಇಚ್ಛೆಯಿಂದ ಶಿರಾ ನಗರದ ಕಾಲೇಜೊಂದರಲ್ಲಿ science ಮುಗಿಸಿದೆ. ಆದರೆ ಅದು ಅಪೂರ್ಣವೆನಿಸಿತು. ಆಗ commerce ವಿಭಾಗಕ್ಕಿದ್ದ demand ನನ್ನನ್ನು ಆಕರ್ಷಿಸಿತು. ಆ ಸಂದರ್ಭದಲ್ಲಿ ನನ್ನ ಮನಸ್ಸು ಕೂಡ ವ್ಯಗ್ರವಾಗಿತ್ತು. ಅದಕ್ಕೆ ಕಾರಣವೇನೋ ಗೊತ್ತಿಲ್ಲ. ಅಪ್ಪ ತುಂಬಾ ಭಾವುಕರು ಅದರಲ್ಲೂ ನನ್ನ ವಿಷಯದಲ್ಲಿ ಅವರಿಗೆ ತುಂಬಾ ಕಾಳಜಿ. ಸರಿ, ಮಗ ಕಣ್ಮುಂದೆ ಓದಲಿ ಅಂತ ಬೆಳಗೆರೆ ಕಾಲೇಜಿಗೆ ಮತ್ತೆ ಕಾಮರ್ಸ್ ಓದಲು admission ಮಾಡಿಸಿದರು. ಎರಡು ವಿಭಾಗಗಳಲ್ಲಿ ಪಿಯುಸಿ ಮಾಡಿದವನು ನಾನೇ ಏನೋ ತಿಳಿಯದು. ಬೆಳಗೆರೆ ಎಂದರೆ ಕೃಷ್ಣಶಾಸ್ತ್ರಿಗಳ ಬಗ್ಗೆ ಕೇಳಿದ್ದೆ. ಆ ವ್ಯಕ್ತಿ ಹೇಗಿರಬಹುದು..? ಅಪ್ಪ ಯಾವಾಗ್ಲೂ ಹೇಳ್ತಿರ್ತಾರೆ ” ಶಾಸ್ತ್ರಿ ಮೇಷ್ಟ್ರು ಸಿಕ್ಕಿದ್ರು. ಅವರ ಜೊತೆ ಮಾತಾಡಿ ಬಂದೆ ಸ್ವಲ್ಪ late ಆಯ್ತು” ಅಂತ ರಾತ್ರಿಯ ಕೊನೆಯ ಬಸ್ಸಿಗೆ ಬಂದ ಅದೆಷ್ಟೋ ಘಟನೆಗಳು ನೆನಪಿದೆ. ಮನಸ್ಸಿನಲ್ಲಿ ಹಲವಾರು ಬಾರಿ ಅನಿಸುತ್ತಿತ್ತು, ಯಾರು ಈ ಶಾಸ್ತ್ರಿ ಮೇಷ್ಟ್ರು…? ಕೊನೆಗೂ ಅವರನ್ನು ಭೆಟ್ಟಿಯಾಗುವ ದಿನ ಬಂದಿತು.
ಕಾಲೇಜಿಗೆ ಹೋಗುವ ದಿನ ಅಪ್ಪನೂ ನನ್ನ ಜೊತೆಗೆ ಬಂದಿದ್ದರು. ನಮ್ಮೂರಿನ RTS(Manjunatha) ಬಸ್ಸಿಗೆ ಹೋಗಿ ಅಲ್ಲಿ ನಾಗಭೂಷಣರಾಯರು ನಮ್ಮಿಬ್ಬರನ್ನೂ ಕಾಲೇಜಿನ ಬಳಿಗೆ ಕರೆದುಕೊಂಡು ಹೋದರು. ಬಹುಶಃ ನಾನು ನಾರಾಯಣಪುರ ಬೆಳಗೆರೆಯನ್ನು ನೋಡಿದ್ದು ಆಗಲೇ. ಅಲ್ಲಿಯ ತನಕ ಬರೀ ಹೆಸರು ಕೇಳಿ ಖುಷಿಪಟ್ಟಿದ್ದಾಗಿತ್ತು. ಸರಿ ನಾಗಭೂಷಣರಾಯರು ಸೀದಾ ಶಾಸ್ತ್ರಿ ಮೇಷ್ಟ್ರ ಮನೆಗೆ ಕರೆದುಕೊಂಡು ಹೋದರು.
ಒಳಗೆ ಹೋದೆವು ನಾಗಭೂಷಣರಾಯರು ಮೊದಲು ಒಳಗೆ ಹೋದರು ” ಸಾರ್ ! ಕಣಜನಹಳ್ಳಿಯಿಂದ ನಾಗರಾಜ್ ಬಂದಿದಾರೆ.” ಎಂದರು. ಒಳಗಿದ್ದ ವ್ಯಕ್ತಿ ಹೊರಗೆ ಬಂದರು. ಒಂದು ಬಗಲುಗಸೆ ಬನಿಯನ್ನು, ಹೊಲಿಸಿದ ಒಂದು ನಿಕ್ಕರ್ ನಲ್ಲಿದ್ದ ಆ ವ್ಯಕ್ತಿಯನ್ನು ಕಂಡು ಅಪ್ಪ ಅವರ ಕಾಲಿಗೆ ನಮಸ್ಕಾರ ಮಾಡಿದರು, ನಾನೂ ನಮಸ್ಕಾರ ಮಾಡಿದೆ. ಆ ವ್ಯಕ್ತಿ ಹೇಳಿದರು ” ಹೇ ! ಇದೇ ನಂಗೆ ಆಗಲ್ಲ ನೋಡಿ. ನೀವು ನಂಗೆ ನಮಸ್ಕಾರ ಮಾಡ್ಬಾರ್ದು ನಾಗರಾಜ್ ” ಎಂದರು. ಅದಕ್ಕೆ ಅಪ್ಪ ” ನಾನೆಲ್ಲಿ ನಿಮಗೆ ನಮಸ್ಕಾರ ಮಾಡಿದೆ ನನಗೆ ನಾನೇ ನಮಸ್ಕಾರ ಮಾಡ್ಕೊಂಡೆ ಸರ್” ಅಂದರು. ಆ ವ್ಯಕ್ತಿ ನಾಗಭೂಷಣರಾಯರ ಕಡೆಗೆ ನೋಡಿ ” ನೋಡ್ರೀ ನಾಗಣ್ಣ ಇದಕ್ಕೇನ್ ಹೇಳಲಪ್ಪ.” ಅಂತ ನಕ್ಕರು. ಒಳಗೆ ಹೋದೆವು. ಅಪ್ಪ ಆಗ ಹೇಳುತ್ತಾರೆ ಇವರೇ ಕಣೋ ಕೃಷ್ಣಶಾಸ್ತ್ರಿಗಳು ಅಂತ. ನನಗೆ ಖುಷಿ ಆಶ್ಚರ್ಯ ಒಟ್ಟಿಗೆ ಆದವು. ಮತ್ತೆ ನಮಸ್ಕಾರ ಮಾಡಿದೆ. ಶಾಸ್ತ್ರಿಗಳು ನಕ್ಕು ನನ್ನ ತಲೆ ಸವರಿದರು. ಇಬ್ಬರ ಉಭಯ ಕುಶಲೋಪರಿಗಳು ನಡೆದವು. ಅಪ್ಪ ಹೇಳಿದರು ” ಸಾರ್ ! ಇವನೇ ನನ್ನ ಮಗ ನಿಮ್ಮ ಕಾಲೇಜಿಗೆ ಹಾಕಿದೀನಿ. ಇನ್ನು ನೀವು ಉಂಟು ಇವನು ಉಂಟು ” ಶಾಸ್ತ್ರಿಗಳು ಹೇಳಿದರು ” ನೋಡಪ್ಪಾ ! ಅಪ್ಪ ಹೇಳಿದ್ದು ಕೇಳಿದ್ಯಾ..? ಇನ್ನು ನಾನು ನೀನು ಇಬ್ಬರೇ, ಸರಿಯಾಗಿ ಮಾತು ಕೇಳದಿದ್ದರೆ ಬೀಳ್ತಾವೆ” ಅಂತ ನಕ್ಕರು. ನಾನೂ ನಕ್ಕುಬಿಟ್ಟೆ. ಹೊರಗೆ ಬಂದು ಎಷ್ಟು ಹೊತ್ತಾದರೂ ಆ ಆಕರ್ಷಣೆ ನನ್ನನ್ನು ಬಿಡಲಿಲ್ಲ. ಅವರನ್ನು ಸರ್ ಎನ್ನಲೂ ಮನಸಾಗಲಿಲ್ಲ.
Krishnashastry ಶಾಸ್ತ್ರೀಜಿಯವರು ಗಾಂಧೀವಾದಿಗಳಾದ್ದರಿಂದ ಗಾಂಧೀಜಿಯವರ ತತ್ತ್ವಗಳನ್ನು ಪಾಲಿಸುತ್ತಿದ್ದರು. ಸದಾ ಶ್ವೇತ ವಸ್ತ್ರಧಾರಣೆ ಮಾಡುತ್ತಿದ್ದ ಅವರು ನಾನು ನೋಡುತ್ತಿರುವಾಗ 92 ವರ್ಷ ವಯಸ್ಸಿನವರು. ಆ ವಯಸ್ಸಿನಲ್ಲಿಯೂ ಪ್ರತಿದಿನವೂ ಎರಡು ಬಾರಿ ಅವರು ಶಾಲೆ ಮತ್ತು ಕಾಲೇಜಿಗೆ ಭೇಟಿ ನೀಡಿ ಸ್ವತಃ ತರಗತಿಗಳನ್ನು ವೀಕ್ಷಿಸುತ್ತಿದ್ದರು. ಹಾಗೇ ಒಮ್ಮೆ ನಾನು ಹೊರಗೆ ನಿಂತಾಗ (ತರಗತಿಯ ಅವಧಿಯಲ್ಲಿ) ನನ್ನನ್ನು ಕರೆದು ಕೇಳಿದರು ಏಕೆ ಇಲ್ಲಿದ್ದೀಯ ? ನಾಣು ಹೇಳಿದೆ “ ಕ್ಲಾಸ್ ನಡೀತಿಲ್ಲ ತಾತಾ “. ಸರಿ ಅಂದು ಹೋದರು. ನಂತರ ನಾನು ಹೇಳಿದ ಸುಳ್ಳು ಎಷ್ಟು ಬಾಧಿಸತೊಡಗಿತೆಂದರೆ ತಡೆಯಲಾರದೇ ಮನೆಗೆ ಹೋಗಿ ತಾತನ ಕೋಣೆಯಲ್ಲಿ ಕುಳಿತೆ ಆಗಲೂ ಅವರು ನನ್ನ ನೋಡಿ ಮುಗುಳ್ನಕ್ಕರು ಆ ನಗುವಿನಲ್ಲಿ ನಾನು ಹೇಳಿದ್ದು ಸುಳ್ಳು ಎಂಬ ಕನ್ನಡಿಯಿತ್ತು. “ತಪ್ಪಾಯ್ತು ತಾತ ನಾನು ಸುಳ್ಳು ಹೇಳಿದೆ. ಕ್ಲಾಸ್‌ಗೆ ಹೋಗೋಕೆ ಮನಸಿರಲಿಲ್ಲ ಹಾಗಾಗಿ” ಎನ್ನುವಾಗ ತಪ್ಪಿತಸ್ಥ ಭಾವ ದುಃಖವಾಗಿ ಉಮ್ಮಳಿಸಿತು. ಆಗ ನನ್ನ ಹೆಗಲ ಮೇಲೆ ಕೈಹಾಕಿ ಹೇಳಿದರು “ ಉಪ್ಪನೇ ಸವಿದವನು ಸಕ್ಕರೆಯನೇನ್ ಬಲ್ಲ ಬೆಪ್ಪನವ ಸಕ್ಕರೆಯ ಉಪ್ಪೆಂಬನು “ ಅಂದರೆ “ಯಾವಾಗಲೂ ಸುಳ್ಳು ಅನ್ನೋ ಉಪ್ಪು ತಿನ್ನೋನಿಗೆ ಸಕ್ಕರೆಯ ರುಚಿ ಹೇಗೆ ಗೊತ್ತಾಗಬೇಕು. ಸಕ್ಕರೆ ಅಂದ್ರೆ ಆ ತಪ್ಪನ್ನ ತಿದ್ಕೊಳೋದು. ಸುಳ್ಳು ತಪ್ಪು ಮಾಡೋದು ಧೈರ್ಯಶಾಲಿ ಲಕ್ಷನವಲ್ಲ ಕಣೋ ಅದನ್ನ ಒಪ್ಕೊಂಡು ಮತ್ತೆ ಆ ತಪ್ಪು ಮಾಡೋದಿಲ್ಲ ಅಂತ ನಿರ್ಧಾರ ಮಾಡಿ ಅದನ್ನ ಬಿಟ್ಟು ಬಿಡ್ತೀವಿ ನೋಡು ಅದು ಧೈರ್ಯಶಾಲಿಯ ಲಕ್ಷಣ” ಆ ಕ್ಷಣದಿಂದ ನಾನು ಈ ಕ್ಷಣದವರೆಗೆ ಸುಳ್ಳು ಹೇಳುವ ಸಾಹಸ ಮಾಡಿಲ್ಲ. ʼಸತ್ಯಮಪ್ರಿಯಂ ಭೂಯಾತ್ ʼ ಎನ್ನುವಂತೆ ಅಪ್ರಿಯವಾದ ಸತ್ಯವನ್ನು ಹೇಳುವಾಗ ಒಮ್ಮೆ ಯೋಚಿಸುತ್ತೇನೆ.
ದಿನ ಕಳೆದವು. ದಿನೇ ದಿನೇ ಶಾಸ್ತ್ರಿ ಮೇಷ್ಟ್ರ ಸಹವಾಸ ಮತ್ತೆ ಮತ್ತೆ ಬೇಕೆನಿಸತೊಡಗಿತು. ವಾರದಲ್ಲೊಮ್ಮೆ ಏನಾದರೂ ನೆಪ ಮಾಡಿ ಅರ್ಧಗಂಟೆ ಅವರೊಂದಿಗೆ ಮಾತಾಡಲು ನಿರ್ಧಾರ ಮಾಡಿದೆ. ಸಂದರ್ಭ ತಾನಾಗಿಯೇ ಬಂತು. ನನಗೆ ಮೊದಲಿನಿಂದಲೂ ಹಾಡುವ ಹುಚ್ಚು ಮನ ಬಂದಂತೆ ಹಾಡುವ ನಾನು ಸನ್ಮಾನ – ಅವಮಾನ ಎರಡನ್ನೂ ಈ ನನ್ನ ಸಂಗೀತ ಸಾಧನೆಯಲ್ಲಿ ಅನುಭವಿಸಿದೆ. ಇರಲಿ. ಒಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಪ್ರಾರಂಭವಾಗುವವರೆಗೂ ಸಮಯವಿದ್ದುದರಿಂದ “ಯಾರಾದ್ರೂ ಹಾಡು ಹೇಳ್ತೀರೇನೋ ?” ಅಂತ ನಮ್ಮ ಪ್ರಿನ್ಸಿಪಾಲ್ ಕೇಳಿದರು. ನಮ್ಮಕ್ಕನ ಮಗ ಶ್ರೀನಾಥ ನಾನೂ ಒಂದೇ ವಯಸ್ಸಿನವರು ಇಬ್ಬರೂ ಜೊತೆಗೇ ಪಿಯುಸಿ ಮುಗಿಸಿದವರು. ಅವನು ” ಲೇ ! ಹೋಗಲೇ ನೀನು ಹಾಡು ಹೇಳು ” ಅಂದ. ಹೋದೆ ” ಆಡಿಸಿ ನೋಡು ಬೀಳಿಸಿನೋಡು ” ಹಾಡಿದೆ. ಎಲ್ಲರ ಮೆಚ್ಚುಗೆ ಪಡೆದೆ. ಅದಾದ ನಂತರ ಇನ್ನೊಂದು ಕಾರ್ಯಕ್ರಮದಲ್ಲಿ ಅರವಿಂದ್ ಸರ್, ವಿನಯ್ ಸರ್, ಪ್ರಿನ್ಸಿಪಾಲ್ ಮತ್ತು ಗಿರೀಶ್ ಸರ್ ನನ್ನ ಕರೆದು ” ಸಂಸ್ಥೆಯ ಪ್ರಾರ್ಥನಾ ಗೀತೆಯನ್ನು ಕೈಗಿಟ್ಟು ” ಇವತ್ತು ನೀನೇ ಹಾಡೋ. ” ಅಂದರು. ಗಾಬರಿಯಾಯ್ತು ಏಕೆಂದರೆ ನಾನೇನು ಕುಮಾರ ಗಂಧರ್ವರ ಗ್ವಾಲಿಯರ್ ಘರಾನದಲ್ಲಿನ ಗಾಯಕನಲ್ಲ. ಆದರೂ ಖುಷಿಯಿಂದ ಆಯ್ತು ಎಂದೆ. ಕಾರ್ಯಕ್ರಮ ಪ್ರಾರಂಭ ಪ್ರಾರ್ಥನೆಯೊಂದಿಗೆ ಅಂತ ನನ್ನ ಹೆಸರು ಹೇಳಿಯೇಬಿಟ್ಟರು. ಶಾಸ್ತ್ರಿಗಳು ನನ್ನನ್ನೇ ಗಮನಿಸಿದ್ದು ನಾನು ನೋಡಲಿಲ್ಲ ಹಾಡಿದೆ ಹೊರಗೆ ಬಂದೆ. ಕಾರ್ಯಕ್ರಮವೆಲ್ಲ ಮುಗಿದ ನಂತರ. ಪ್ರಾಂಶುಪಾಲರಿಂದ ಬುಲಾವ್ ಬಂತು ಹೋದೆ.ಅಲ್ಲಿ ಶಾಸ್ತ್ರಿಗಳು, ಪ್ರಿನ್ಸಿಪಾಲರು, ಮತ್ತು ಎಲ್ಲ ಉಪನ್ಯಾಸಕರೂ ಇದಾರೆ ನನ್ನ ಜಂಘಾಬಲ ಅಡಗಿಹೋಯ್ತು. ಏಕೆಂದರೆ ಅದರ ಹಿಂದಿನ ದಿನ ಮೊಬೈಲ್ ಕಾಲೇಜಿಗೆ ಒಯ್ದು ನಮ್ಮ ಧನಂಜಯ( ಆರ್.ಡಿ) ಸರ್ ಅದನ್ನು ನೋಡಿ, ಸುಮ್ಮನಾಗಿದ್ದರು. ಅದರ ವಿಷಯವೇನೋ ಒಂದುವೇಳೆ ಅದೇ ಆಗಿದ್ದರೆ ?! ಮುಗೀತು ಇನ್ನು ನನ್ನ ಕಥೆ ಅನ್ನಿಸಿತು. ಆದರೆ ಅಲ್ಲಿ ಕುಳಿತ ಶಾಸ್ತ್ರಿಗಳು ” ಬಾ ಇಲ್ಲಿ ” ಅಂದರು. ಹೋದೆ ನಗುತ್ತಾ ಹೇಳಿದರು ” ತುಂಬಾ ಚೆನ್ನಾಗಿ ಹಾಡ್ತೀಯ.ಇನ್ಮುಂದೆ prayer ನೀನೇ ಹಾಡು” ಅಂದರು. ಸರಿ ಎಂಬಂತೆ ತಲೆಯಲ್ಲಾಡಿಸಿದೆ. ಹೊರಬಂದೆ ಮುಂದೆ ನನಗೆ ಅವರನ್ನು ಸರ್ ಎನ್ನಲು ಮನಸಾಗಲಿಲ್ಲ. ತಾತಾ ಎಂದೇ ಕರೆಯುತ್ತಿದ್ದೆ. ಅವರ ಒಡನಾಟ ಹೆಚ್ಚಾಯಿತು, ಅವರು ನನಗೆ ತಿಳಿಸಿದ ಅದೆಷ್ಟೋ ವಿಷಯಗಳು ನನ್ನ ಮಸ್ತಕ ಗ್ರಂಥಾಲಯಕ್ಕೆ ಕೊಡುಗೆ ನೀಡಿದ ಪುಸ್ತಕಗಳಂತೆ ಆದವು. ಅವರೊಮ್ಮೆ ಹೇಳಿದರು ” ನೋಡು ಪ್ರಸಾದು, ನೀನು ಜಗತ್ತನ್ನ ಸರಿ ಮಾಡ್ತೀನಿ ಅಂತ ಹೋಗ್ಬೇಡ. ಯಾಕಂದ್ರೆ ನೀನು ಅದು ಮಾಡು ಇದು ಮಾಡು ಅಂದ್ರೆ ಯಾರೂ ಕೇಳಲ್ಲ. ನೀನು ಕೆಲಸ ಮಾಡು ideal ಆಗು ಅಂದರೆ ಜಗತ್ತು ನಿನ್ನ ಅನುಸರಿಸೋಕೆ ಶುರು ಮಾಡುತ್ತೆ” ಆ ದಿನ ಏನೂ ಅರ್ಥವಾಗಲಿಲ್ಲ. ಇಂದು ಅವರು ನನಗೆ ಹೇಳಿದ ಪ್ರತಿ ಶಬ್ದದ ಅನುಭವವಾಗುತ್ತಿದೆ. ಆ ಬೆಳಗೆರೆಯ ಸಂಸ್ಥೆಗೆ ತನ್ನ ಇಡೀ ಜೀವನವನ್ನೇ ಸವೆಸಿದ ಆ ತಾತನಿಗೆ ಏನೆನ್ನಬೇಕು..? ಸಂತನೆಂದೇ ಅನ್ನಬೇಕು. ಜಾತಿ ಮತಗಳಿಗೆ ಅವಕಾಶ ಕೊಡದೇ, ಎಲ್ಲರನ್ನೂ ಒಂದೆಡೆ ಸೇರಿಸಿ ಇಡೀ ಕರ್ನಾಟಕದ ಮೂಲೆ ಮೂಲೆಯಿಂದ ಬಡ ವಿದ್ಯಾರ್ಥಿಗಳು ಬಂದು ಹೋದರು. ಅವರೆಲ್ಲರೂ ಇಂದಿಗೂ ಸಂಸ್ಥೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಇಂದು ಸರ್ಕಾರದ ಅನುದಾನ ಸಿಕ್ಕರೆ ಸಾಕು ಎಂದು ತಿಂದು ತಿಂದು ತೇಗುತ್ತಿರುವ ಎಷ್ಟೋ ವಿದ್ಯಾಸಂಸ್ಥೆಗಳ ಮಧ್ಯೆ ಸರ್ಕಾರದ ಒಂದು ರೂಪಾಯಿ ಅನುದಾನವಿಲ್ಲದೇ ಇಡೀ ಸಂಸ್ಥೆಯನ್ನು ನಡೆಸಿದ ಇವರು ಅತ್ಯಂತ ಸರಳರು. ನಾನೂ ಬಹಳಷ್ಟು ಬಾರಿ ಇಂದಿಗೂ ಹಲವಾರು ಕಾರ್ಯಕ್ರಮಗಳಲ್ಲಿ ಬೆಳಗೆರೆಯ ಸಂಸ್ಥೆಯಲ್ಲಿ ಪ್ರಾರ್ಥನಾ ಗೀತೆಯನ್ನು ಹಾಡುತ್ತೇನೆ. ಇಂದು ಶಾಸ್ತ್ರಿಗಳು ಇಲ್ಲ ಆದರೆ ಒಂದು ಖುಷಿಯೆಂದರೆ ನಾನು ಪ್ರಾರ್ಥನೆಯನ್ನು ಪ್ರಾರಂಭಿಸುತ್ತಿದ್ದಂತೆ ಶಾಸ್ತ್ರಿಗಳ ಭಾವಚಿತ್ರಕ್ಕೆ ಹಾಕಿದ ಹೂಮಾಲೆಯು ಪ್ರಸಾದ ರೂಪದಲ್ಲಿ ಕೆಳಗೆ ಬೀಳುತ್ತದೆ. ಇಡೀ ಸಂಸ್ಥೆಯ ಎಲ್ಲರೂ ಶಾಸ್ತ್ರಿಗಳ ಹಾಗೆಯೇ ಇಂದಿಗೂ ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ. ಇಂಥ ಸುಮಧುರ ಕ್ಷಣಗಳನ್ನು ಮರೆಯಲಾದೀತೇ…. ನಿಮ್ಮೊಂದಿಗೆ ನೆನಪುಗಳ ಮಣಿಹಾರದ ಒಂದೆರೆಡು ಮಣಿಗಳನ್ನು ನಿಮ್ಮೆದುರು ಇಟ್ಟಿದ್ದೇನೆ. ಮತ್ತಷ್ಟು ವಿಷಯಗಳೊಂದಿಗೆ ಇನ್ನೊಮ್ಮೆ ನಿಮ್ಮನ್ನು ಬೇಸರಗೊಳಿಸುವೆ. ಕೃಪೆಯಿರಲಿ.
JCI Shimoga ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ “ಬಾಕ್ಸ್ ಕ್ರಿಕೆಟ್ ಪಂದ್ಯಾವಳಿ” ಟ್ರೋಫಿ ಅನಾವರಣ.
JCI Shimoga ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಶಿವಮೊಗ್ಗ ವತಿಯಿಂದ ದಿನಾಂಕ 11 ಮತ್ತು 12ರಂದು ಆಯೋಜಿಸಿರುವ “ಬಾಕ್ಸ್ ಕ್ರಿಕೆಟ್ ಟೂರ್ನಮೆಂಟ್ 2.0” ಕ್ರೀಡಾಕೂಟದ ಅಂಗವಾಗಿ, ನಗರದ ಆದಿ ಗ್ರ್ಯಾಂಡ್ ಹಾಲ್, ಹೋಟೆಲ್ ಶುಭಂನಲ್ಲಿ ಟ್ರೋಫಿ ಮತ್ತು ಟಿ-ಶರ್ಟ್ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ಯಾಗಿ ನೆರವೇರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಚ್ಚರಿಕೆ ಪತ್ರಿಕೆಯ ಸಂಪಾದಕರಾದ ಸೂರ್ಯನಾರಾಯಣ ಅವರು ಭಾಗವಹಿಸಿ ಟ್ರೋಫಿ ಹಾಗೂ ಟಿ-ಶರ್ಟ್ ಅನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂತಹ ಕ್ರೀಡಾಕೂಟಗಳು ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚಿಸುವುದರ ಜೊತೆಗೆ ಒಗ್ಗಟ್ಟು ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.
ವಲಯ ಅಧ್ಯಕ್ಷರಾದ ಜೆ ಸಿ ಮಧುಸೂಧನ್ ನಾವುಡ , ಹಿರಿಯ ಜೆ ಸಿ ಗಳಾದ ವಸಂತಕುಮಾರ್ ಹಾಗೂ ವಿಲಿಯಂ ಡಿಸೋಜ ಅವರು ಕ್ರೀಡಾಕೂಟದ ಯಶಸ್ಸಿಗೆ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಜೆಸಿ ಚಂದ್ರಹಾಸ್ ಹಾಗೂ ಉಪಾಧ್ಯಕ್ಷರಾದ ಜೆಸಿ ಸುದರ್ಶನ್ ತಾಯಿಮನೆ ಅವರು, ಬಾಕ್ಸ್ ಕ್ರಿಕೆಟ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
JCI Shimoga ಪದಾಧಿಕಾರಿಗಳಾದ ಶ್ರೀನಾಗ್, ಜಗದೀಶ್, ಮೋಹನ್ ಕಲ್ಪತರು, ಪರಮೇಶ್ವರ್, ಉದಯ ಕದಂಬ, ಆದರ್ಶ್, Jc ಸ್ಮಿತಾ ಮೋಹನ್, ಸುಗುಣಾ ಸತೀಶ್, ಪೂರ್ಣಿಮಾ ಸುನಿಲ್ ಹಾಗೂ ಮಮತಾ ರಘು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕ್ಲಬ್‌ನ ಎಲ್ಲಾ ಪದಾಧಿಕಾರಿಗಳು, ವಲಯ 24ರ ಆಡಳಿತ ಮಂಡಳಿ ಸದಸ್ಯರು, JAC, JCOM, ಸಹ ಪ್ರಾಯೋಜಕರು, ಶಿವಮೊಗ್ಗದ ಹಿರಿಯ ಹಾಗೂ ಕಿರಿಯ ಜೇಸಿ ಸದಸ್ಯರು, ಕ್ರಿಕೆಟ್ ತಂಡಗಳ ಮಾಲೀಕರು ಮತ್ತು ಆಟಗಾರರು ಭಾಗವಹಿಸಿದ್ದರು.
Hulikal Ghat ಹುಲಿಕಲ್ ಘಾಟಿಯಲ್ಲಿ ಧರೆ ಕುಸಿತ. ಕಾಮಗಾರಿಯಲ್ಲಿದ್ದ ಮೂವರು ಕಾಣೆ. ಶೋಧಕಾರ್ಯ ಪ್ರಗತಿ.
Hulikal Ghat ಹುಲಿಕಲ್ ಘಾಟಿಯಲ್ಲಿ ರಸ್ತೆ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ.
ಕಾಮಗಾರಿ ವೇಳೆ ಧರೆ ಕುಸಿತದಿಂದಾಗಿ ಮೂವರಿಗೆ ಗಾಯವಾಗಿದೆ. ಹಾಗೂ ಮೂವರು ಕಾಣೆಯಾಗಿದ್ದಾರೆ.
ಕಾಣೆಯಾದ ಮೂವರಿಗಾಗಿ ತೀವ್ರ ಶೋಧ ನಡೆದಿದೆ.
ಹುಲಿಕಲ್ ಹೇರ್ ಪಿನ್ ತಿರುವಿನ ಈ ಘಟನೆ
ಸಂಭವಿಸಿದೆ
ಕುಸಿತದ ಮಣ್ಣಿನಲ್ಲಿ ವ್ಯಕ್ತಿಗಳ ದೇಹ ಮುಚ್ಚಿಹೋಗಿರುವ ಸಾಧ್ಯತೆಯಿದೆ.
Hulikal Ghat ಕಾಮಗಾರಿಯಲ್ಲಿ ತೊಡಗಿದ ಕಾರ್ಮಿಕರು ಮಣ್ಣಿನಲ್ಲಿ ಹುದುಗಿರುವ ಸಾಧ್ಯತೆ ಎಂದು ಹೇಳಲಾಗಿದೆ. ಸ್ಥಳಕ್ಕೆ ನಗರ ಪೊಲೀಸರ ತಂಡ ಆಗಮಿಸಿ ತನಿಖೆ ನಡೆಸುತ್ತಿದೆ.
Dr. B.R. Ambedkar ಏಪ್ರಿಲ್ 14. ಡಾ.ಅಂಬೇಡ್ಕರ್ಜನ್ಮ ದಿನಾಚರಣೆಗೆ ಜಿಲ್ಲಾಡಳಿತದಿಂದ ಸರ್ವಸಿದ್ಧತೆ.
Dr. B.R. Ambedkar ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏ.14 ರ ಬೆಳಗ್ಗೆ 11.00ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ|| ಬಿ.ಆರ್ ಅಂಬೇಡ್ಕರ್‌ರವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್.ಸಿ.ಮಹಾದೇವಪ್ಪ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
Dr. B.R. Ambedkar ಅಂದು ಬೆಳಗ್ಗೆ 9.00ಕ್ಕೆ ಮಹಾನಗರ ಪಾಲಿಕೆಯ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಜನೆ ಸಲ್ಲಿಸಿ, ಪಾಲಿಕೆ ಆವರಣದಿಂದ ಕುವೆಂಪು ರಂಗಮಂದಿರದವರೆಗೆ ಡಾ|| ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರ ಮೆರವಣಿಗೆ ಆಯೋಜಿಸಲಾಗಿದೆ.
ಶಿವಮೊಗ್ಗದ ಸೈನ್ಸ್ ಮೈದಾನದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ನಾಗೇಶ್ ಬಿದರಗೋಡು ಇವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Shivamogga News ಕಾ.ಎಂ.ಲಿಂಗಪ್ಪನವರು, ಅಸಹಾಯಕರು ಮತ್ತು ದುರ್ಬಲ ಜನತೆಯ ಪರ ಧ್ವನಿಯಾಗಿದ್ದರು- ಡಿ.ರವಿಕುಮಾರ್.
Shivamogga News ನಾಡು ಕಂಡಂತಹ ಹಿರಿಯ ದಣಿವರಿಯದ ಅಕ್ಷರದ ದನಿ ಕಾಮ್ರೇಡ್ ಎಂ ಲಿಂಗಪ್ಪರವರು ಸಾಮಾಜಿಕ ಕಳಕಳಿ, ಸಾಮಾಜಿಕ ನ್ಯಾಯ, ಅಸಹಾಯಕರ, ದುರ್ಬಲ ಜನತೆಯ ಪರವಾಗಿ ಪ್ರತಿಧ್ವನಿಸಿದ್ದ ವಿಶೇಷ ವ್ಯಕ್ತಿತ್ವದ ರಾಜಿರಹಿತ ಪತ್ರಕರ್ತರಾಗಿದ್ದರು’ ಎಂದು ತಿಳಿದುಕೊಂಡಿದ್ದೆ, ಅವರನ್ನು ನಗರದ ವಿವಿದೆಡೆ ದರ್ಶಿಸಿಯು ಇದ್ದೆ, ಅವರ ಕೆಂಪು ಪೋಷಾಕು, ಟೋಪಿ, ಹೆಗಲಿಗೆ ಮೈಕ್ ಹಾಕಿಕೊಂಡು, ಕೈಯಲ್ಲಿ ಪತ್ರಿಕೆ ಇಟ್ಟುಕೊಂಡು ಸಾರ್ವಜನಿಕರ ಗಮನ ಸೆಳೆದಿದ್ದರು, ಈ ಮೂಲಕ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುತ್ತಿದ್ದು ಇಂದಿಗೂ ಯಾರು ಮಾಡಲಾಗದ ಹೋರಾಟದ ಗಣಿಯಾಗಿದ್ದರು ಎಂದು ಶಿಕಾರಿಪುರದ “ಅಕ್ಷರ ಎಜುಕೇಷನ್ ಟ್ರಸ್ಟ್ ” ಸಂಸ್ಥಾಪಕರಾದ ಡಿ ರವಿಕುಮಾರ್ ಅಭಿಪ್ರಾಯಪಟ್ಟರು,
ಅವರು ಶಿವಮೊಗ್ಗ ನಗರದ ಆರ್’ಟಿಓ ಕಚೇರಿ ರಸ್ತೆಯಲ್ಲಿರುವ ಶ್ರೀ ಕಲಾ ಕೌಶಲ್ಯ ಅಭಿವೃದ್ದಿ ಕೇಂದ್ರ ಆವರಣದಲ್ಲಿ ಏಪ್ರಿಲ್ 09 ರ ಸಂಜೆ ‘ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ’ ಸಂಘಟನೆವತಿಯಿಂದ ಆಯೋಜಿಸಿದ್ದ ದಿವಂಗತರಾದ ಹಿರಿಯ ಪತ್ರಕರ್ತ ‘ಕಾಮ್ರೇಡ್ ಎಂ ಲಿಂಗಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಬರಪೂರತೆಯಿಂದ ಮಾತನಾಡಿದರು.
ಹಿಂದುಳಿದ ಜನಜಾಗೃತಿ ಸಮಿತಿ ಸಂಚಾಲಕರಾದ ಆರ್ ಟಿ ನಟರಾಜ್ ಅವರು ಮಾತನಾಡಿ, ‘ಕಾಮ್ರೇಡ್ ಎಂ ಲಿಂಗಪ್ಪರೊಂದಿಗೆ ತಮಗೆ ಹಲವು ದಶಕಗಳ ಒಡನಾಟವಿತ್ತು. ಯಾವುದೇ ಮರ್ಜಿ – ಮುಲಾಜಿಗೂ ಒಳಗಾಗುತ್ತಿರಲಿಲ್ಲ. ನೊಂದವರಿಗೆ ನ್ಯಾಯ ಕೊಡಿಸುತ್ತಿದ್ದರು. ಹೋರಾಟದ ದೊಡ್ಡ ಧ್ವನಿಯಾಗಿದ್ದರು’ ಎಂದು ತಿಳಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಕಾರ್ಪೋರೇಟರ್ ಐಡಿಯಲ್ ಗೋಪಿ, ( ಜಿ ಗೋಪಾಲಕೃಷ್ಣ ) ಅವರು ಮಾತನಾಡಿ, ‘ತಾವೊಬ್ಬ ರಾಜಕಾರಣಿಯಾಗಲು ಕಾಮ್ರೇಡ್ ಅವರು ಕಾರಣಕರ್ತರಾಗಿದ್ದಾರೆ. ಅವರ ಹೋರಾಟದ ಸ್ಪೂರ್ತಿಯೇ ಪಾಲಿಕೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗಿದೆ, ದುರ್ಗಿಗುಡಿ ರಸ್ತೆಯ ತಮ್ಮ ಮನೆಯ ಬಳಿಯೇ ಅವರ ಮನೆಯಿತ್ತು. ಬಾಲ್ಯದಿಂದಲೇ ತಮ್ಮಲ್ಲಿ ನಾಯಕತ್ವ ಗುಣ ಬೆಳೆಸಿದ್ದರು. ಅವರು ಚುನಾವಣೆಗೆ ನಿಂತಾಗ ತಾವು ಅವರೊಂದಿಗೆ ಪ್ರಚಾರಕ್ಕೆ ತೆರಳುತ್ತಿದ್ದೆ. ಅವರಂತಹ ಕೆಚ್ಚೆದೆಯ ಹೋರಾಟಗಾರರನ್ನು ತಾವು ನೋಡಿಲ್ಲ’ ಎಂದು ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು.
ವಕೀಲರಾದ ಗೀತಾ ಮಾನೆ ಅವರು ಮಾತನಾಡಿ, ‘ಕಾಮ್ರೇಡ್ ಅವರ ಹೆಸರಿನಲ್ಲಿ ಸಮಾಜದ ವಿವಿಧ ವರ್ಗಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಅಭಿನಂದನೀಯ, ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹೊತ್ತಿನ ತಲೆಮಾರಿನ ಯುವ ಸಮುದಾಯಕ್ಕೆ ಮಾದರಿ ಎಂದು ತಿಳಿಸಿದರು,
ಇದಕ್ಕೂ ಮುನ್ನ ಸಂಘಟನೆಯ ಅಧ್ಯಕ್ಷ ಗಾರಾ ಶ್ರೀನಿವಾಸ್ ಅವರು ಮಾತನಾಡಿದರು. ‘ಕಾಮ್ರೇಡ್ ದೈಹಿಕವಾಗಿ ದೂರವಾಗಿರಬಹುದು. ಆದರೆ ಅವರ ಹೋರಾಟದ ಜೀವನ ಅವಿಸ್ಮರಣೀಯ. ಅವರ ನೆನಪು ಸದಾ ಕಾಲವಿರಬೇಕೆಂಬ ಉದ್ದೇಶದಿಂದ ಅವರ ಹೆಸರಿನಲ್ಲಿ ಪ್ರತಿ ವರ್ಷ ಸಮಾಜದ ವಿವಿಧ ವರ್ಗಗಳ ಸಾಧಕರನ್ನು ಗುರುತಿಸಿ ಸಂಘಟನೆಯಿಂದ ಗೌರವಿಸಲಾಗುವುದು’ ಎಂದು ತಿಳಿಸಿದರು.
Shivamogga News ಜೆಎನ್’ಎನ್’ಸಿಇ ಉಪನ್ಯಾಸಕ ಸುರೇಶ್ ಹೆಚ್ ಬಿ ಅವರು ಕಾಮ್ರೇಡ್ ಒಡನಾಟದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ದಯಾನಂದ್, ಕಾಮ್ರೇಡ್ ಅವರ ಮೊಮ್ಮಗ ಅಶೋಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಪರಮೇಶ್, ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ, ನಿರ್ದೇಶಕರಾದ ಚಿರಂಜೀವಿ ಬಾಬು, ಶೃತಿ ಶೇಟ್, ಅನಿಲ್ ಕುಮಾರ್, ಎಂ ಎನ್ ಸಿಗ್ಬತ್ ಉಲ್ಲಾ, ಕರವೇ ಕಿರಣ್ ಕುಮಾರ್, ಪತ್ರಿಕಾ ವಿತರಕ ಸಂಘದ ಮುಖಂಡ ಮಾಲತೇಶ್ ಸೇರಿದಂತೆ ಮೊದಲಾದವರಿದ್ದರು.
ಸಿನಿಮಾ ನಟ, ಪತ್ರಕರ್ತ, ಬರಹಗಾರ, ವಕೀಲರಿಗೆ ಪ್ರಶಸ್ತಿ ಪ್ರದಾನ
ಸಿನಿಮಾ ನಟ ರಘುರಾಜ್ ಮಲ್ನಾಡ್, ಪತ್ರಕರ್ತ ಬಿ ರೇಣುಕೇಶ್, ಸಾಹಿತಿ ಖಲಂದರ್ ರಜ್ಜಿ ಬೆಜ್ಜವಳ್ಳಿ, ಯುವ ವಕೀಲರಾದ ರೇಖೇಶ್ ಮಾನೆ ಅವರಿಗೆ ‘ಕಾಮ್ರೇಡ್ ಎಂ ಲಿಂಗಪ್ಪ’ ಪ್ರಶಸ್ತಿ ನೀಡಿ ಆತ್ಮೀಯವಾಗಿ ಅಭಿನಂದಿಸಲಾಯಿತು. ಪ್ರಶಸ್ತಿ ಪುರಸ್ಕೃತರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪತ್ರಕರ್ತ ಬಿ ರೇಣುಕೇಶ್ ಅವರು ಮಾತನಾಡಿ, ‘ಕಾಮ್ರೇಡ್ ಅವರು ತಮ್ಮ ಪತ್ರಿಕೋದ್ಯಮದ ಗುರುಗಳಾಗಿದ್ದಾರೆ. ಶೋಷಿತರು, ಬಡವರು, ನೊಂದವರ ಧ್ವನಿಯಾಗಿದ್ದರು. ತಾವು ನಂಬಿದ ತತ್ವ – ಸಿದ್ದಾಂತಗಳಿಗೆ ಬದ್ದರಾಗಿ ಜೀವನ ನಡೆಸಿದ ಅಪರೂಪದ ಪತ್ರಕರ್ತರಾಗಿದ್ದರು’ ಎಂದು ಅವರೊಂದಿಗಿನ ಒಡನಾಟ ಮೆಲುಕು ಹಾಕಿದರು
2nd PUC Exam Result 2026 ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ: ಕಳೆದ ವರ್ಷಕ್ಕಿಂತ ಶೇ10 ಹೆಚ್ಚಿನ ಸಾಧನೆ- ಎನ್.ಹೇಮಂತ್.
2nd PUC Exam Result 2026 ದ್ವಿತೀಯ ಪಿಯುಸಿ ಪರೀಕ್ಷೆ-1 ರಲ್ಲಿ ಶಿವಮೊಗ್ಗ ಜಿಲ್ಲೆಯು ಶೇ. 87.62 ಫಲಿತಾಂಶ ಪಡೆದಿದ್ದು ಕಳೆದ ಬಾರಿಗಿಂತ ಶೇ.10 ರಷ್ಟು ಹೆಚ್ಚು ಫಲಿತಾಂಶ ಪಡೆಯುವ ಮೂಲಕ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಜಿ.ಪಂ ಸಿಇಓ ಹೇಮಂತ್ ಎನ್ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆ – 1 ಫಲಿತಾಂಶ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿ, 2024-25 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ.79.91 ಫಲಿತಾಂಶ ಬಂದಿದ್ದು, ಈ ಸಾಲಿನಲ್ಲಿ ಶೇ.87.62 ಫಲಿತಾಂಶ ಪಡೆಯಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 17532 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15361 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 10123 ಬಾಲಕಿಯರಲ್ಲಿ 9432 ಅಂದರೆ ಶೇ.93 ಬಾಲಕಿಯರು ಪಾಸಾಗಿದ್ದಾರೆ. ಪರೀಕ್ಷೆ ಬರೆದ 7409 ಬಾಲಕರಲ್ಲಿ 5929 ಬಾಲಕರು ಅಂದರೆ ಶೇ.81 ಬಾಲಕರು ಪಾಸಾಗಿದ್ದಾರೆ.
ಕಲಾ ವಿಭಾಗದಲ್ಲಿ 3637 ರಲ್ಲಿ 2701 , ವಾಣಿಜ್ಯ ವಿಭಾಗದಲ್ಲಿ 5865 ರಲ್ಲಿ 5139, ವಿಜ್ಞಾನ ವಿಭಾಗದಲ್ಲಿ 8030 ರಲ್ಲಿ 7521 ಪಾಸಾಗಿದ್ದಾರೆ. ನಗರ ಭಾಗದಲ್ಲಿ ಪರೀಕ್ಷೆಗೆ ಹಾಜರಾದ 10084 ವಿದ್ಯಾರ್ಥಿಗಳಲ್ಲಿ 8721 ಹಾಗೂ ಗ್ರಾಮೀಣ ಭಾಗದಲ್ಲಿ ಪರೀಕ್ಷೆಗೆ ಹಾಜರಾದ 7448 ವಿದ್ಯಾರ್ಥಿಗಳಲ್ಲಿ 6640 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಫಲಿತಾಂಶ ವಿವರ : ಜಿಲ್ಲೆಯಲ್ಲಿ ಉನ್ನತ ಶ್ರೇಣಿ 4622, ಪ್ರಥಮ ದರ್ಜೆ 8308, ದ್ವಿತೀಯ ದರ್ಜೆ 1841 ಮತ್ತು 639 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
2nd PUC Exam Result 2026 ತಾಲ್ಲೂಕುವಾರು ತೀರ್ಥಹಳ್ಳಿ ತಾಲ್ಲೂಕು ಉನ್ನತಶ್ರೇಣಿ 381, ಪ್ರಥಮ ದರ್ಜೆ 519, ದ್ವಿತೀಯ ದರ್ಜೆ 121, ಪಾಸು 26, ಶೇ.93.73 ಫಲಿತಾಂಶದೊAದಿಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಹೊಸನಗರ ಉನ್ನತ ಶ್ರೇಣಿ 177, ಪ್ರಥಮ ದರ್ಜೆ 469, ದ್ವಿತೀಯ ದರ್ಜೆ 103, ಪಾಸು 22 ಶೇ.93 ದ್ವಿತೀಯ ಸ್ಥಾನ. ಶಿವಮೊಗ್ಗ ಉನ್ನತ ಶ್ರೇಣಿ 2541, ಪ್ರಥಮ ದರ್ಜೆ 3379, ದ್ವಿತೀಯ ದರ್ಜೆ 522, ಪಾಸು 198, ಶೇ.91.28 ಮೂರನೇ ಸ್ಥಾನ. ಭದ್ರಾವತಿ ಉನ್ನತ ಶ್ರೇಣಿ 433, ಪ್ರಥಮ ದರ್ಜೆ 1046, ದ್ವಿತೀಯ ದರ್ಜೆ 292, ಪಾಸು 128 ಶೇ.84.55 ಫಲಿತಾಂಶ ಲಭಿಸಿದೆ. ಸಾಗರ ಉನ್ನತ ಶ್ರೇಣಿ 362, ಪ್ರಥಮ ದರ್ಜೆ 1070, ದ್ವಿತೀಯ ದರ್ಜೆ 307, 97 ಪಾಸು, ಶೇ83.99 ಫಲಿತಾಂಶ. ಸೊರಬ ಉನ್ನತ ಶ್ರೇಣಿ 147, ಪ್ರಥಮ ದರ್ಜೆ 759, ದ್ವಿತೀಯ ದರ್ಜೆ 256, ಪಾಸು 66, ಶೇ 83.14 ಫಲಿತಾಂಶ. ಶಿಕಾರಿಪುರ ಉನ್ನತಶ್ರೇಣಿ 581, ಪ್ರಥಮ ದರ್ಜೆ 1066, ದ್ವಿತೀಯ ದರ್ಜೆ 240, 102 ಪಾಸು ಶೇ.81.75 ಫಲಿತಾಂಶ ಲಭಿಸಿದೆ.
ಸರ್ಕಾರಿ ಶಾಲೆಗಳಲ್ಲಿ ಉನ್ನತ ಶ್ರೇಣಿ 895, ಪ್ರಥಮ ದರ್ಜೆ 3551, ದ್ವಿತೀಯ ದರ್ಜೆ 1179, ಪಾಸು 421, ಶೇ.81.01 ಫಲಿತಾಂಶ ಲಭಿಸಿದೆ.
ಅನುದಾನಿತ ಶಾಲೆಗಳಲ್ಲಿ ಉನ್ನತ ಶ್ರೇಣಿ 547 ಪ್ರಥಮ ದರ್ಜೆ 1398, ದ್ವಿತೀಯ ದರ್ಜೆ 348, ಪಾಸು 169, ಶೇ.81.01 ಫಲಿತಾಂಶ ಲಭಿಸಿದೆ.
ಅನುದಾನಿತರಹಿತ ಶಾಲೆಗಳಲ್ಲಿ ಉನ್ನತ ಶ್ರೇಣಿ 2971 ಪ್ರಥಮ ದರ್ಜೆ 3298, ದ್ವಿತೀಯ ದರ್ಜೆ 310, ಪಾಸು 49, ಶೇ.96.74 ಫಲಿತಾಂಶ ಲಭಿಸಿದೆ.
ವಸತಿ ಶಾಲೆಗಳಲ್ಲಿ ಉನ್ನತ ಶ್ರೇಣಿ 209, ಪ್ರಥಮ ದರ್ಜೆ 121, ದ್ವಿತೀಯ ದರ್ಜೆ 04, ಪಾಸು 0, ಶೇ.99.11 ಫಲಿತಾಂಶ ಲಭಿಸಿದೆ.
ಮುಂದಿನ ವರ್ಷ ಶೇ.90 ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಶೇ.100 ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜುಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.
2nd PUC Exam Result 2026 ಗುರುಪುರ ಬಿಜಿಎಸ್ ಸ್ವತಂತ್ರ ಪಪೂ. ಕಾಲೇಜಿಗೆ ಶೇ.100 ಫಲಿತಾಂಶ ಸಾಧನೆ.
2nd PUC Exam Result 2026 ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಮಾದರಿಯ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಗ್ರಾಮೀಣ ಭಾಗದ ಹೆಚ್ಚು ಮಕ್ಕಳನ್ನು ಹೊಂದಿರುವ ಈ ಕಾಲೇಜು ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಯಲ್ಲಿ ಅತ್ಯುನ್ನತ ಫಲಿತಾಂಶವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ: 116 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಉನ್ನತ ಶ್ರೇಣಿ,26 ಪ್ರಥಮ ಶ್ರೇಣಿ,89, 1 ದ್ವಿತೀಯ ಶ್ರೇಣಿ ಪಡೆದಿದ್ದು,
ವಿಜ್ಞಾನ ವಿಭಾಗದಲ್ಲಿ ರಚನಾ ಎಸ್. 600 ಕ್ಕೆ 574 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರೆ,ರಾಹುಲ್ ಎ. 570 ಅಂಕಗಳಿಸುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾರೆ.ಐಶ್ವರ್ಯ ಜಿ. 556 ಅಂಕಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 26ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ: 45 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ತೇರ್ಗಡೆಯಾಗಿದ್ದು44 ವಿದ್ಯಾರ್ಥಿಗಳು, 15 ಉನ್ನತ ಶ್ರೇಣಿ ಹಾಗು 28 ಪ್ರಥಮ ಶ್ರೇಣಿಯಲ್ಲಿ, ಒಂದು ದ್ವಿತೀಯ ಶ್ರೇಣಿಯಲ್ಲಿ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಆರಾಧನ ಆರ್. 600 ಕ್ಕೆ 584 ಅಂಕ ಪಡೆದುಕೊಂಡು ಕಾಲೇಜಿಗೆ ಪ್ರಥಮಳಾಗಿದ್ದಾಳೆ,ಕುಶಾಲ್ ಎಂ.ಬಿ. 583 ಅಂಕಗಳಿಸಿದ್ದಾರೆ.ಲಾವಣ್ಯ ಸಿ. ಯು. 555 ಅಂಕಗಳಿಸಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
2nd PUC Exam Result 2026 ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ನಾದಮಯಾನಂದನಾಥ ಸ್ವಾಮೀಜಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್., ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
DVS Independent College ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ.ಡಿವಿಎಸ್ ಪದವಿ ಪೂರ್ವ ಕಾಲೇಜಿನ ಗಮನಾರ್ಹ ಸಾಧನೆ.
DVS Independent College ದ್ವಿತೀಯ ಪಿಯು ಪರೀಕ್ಷೆಯಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಪದವಿಪೂರ್ವ ( ಸ್ವತಂತ್ರ) ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ‍್ಯಾಂಕ್ ಗಳಿಸಿದ್ದಾರೆ.
ಡಿವಿಎಸ್ ಪದವಿಪೂರ್ವ ( ಸ್ವತಂತ್ರ) ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಶೇ. 97.92, ವಾಣಿಜ್ಯ ವಿಭಾಗದಲ್ಲಿ ಶೇ. 97.30 ಮತ್ತು ಕಲಾ ವಿಭಾಗದಲ್ಲಿ ಶೇ 95.83 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 631 ವಿದ್ಯಾರ್ಥಿಗಳಲ್ಲಿ 216 ಅತ್ಯುನ್ನತ ಶ್ರೇಣಿ, 351 ಪ್ರಥಮ ಶ್ರೇಣಿ ಹಾಗೂ 38 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಎನ್.ಎಸ್.ವಸಿಷ್ಠ 595 ಅಂಕ ಪಡೆಯುವ ರಾಜ್ಯಕ್ಕೆ ಆರನೇ ರ‍್ಯಾಂಕ್ ಪಡೆದಿದ್ದು, ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಪಿ.ಪೃಥ್ವಿ, ಕೆ.ಎನ್.ಸ್ನೇಹ, ಮೊಹಮ್ಮದ್ ಹುಸೇನ್ ಪಿಯು ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 591 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಪಿ.ಬೃಂದಾ 590 ಅಂಕ ಪಡೆದು ರಾಜ್ಯಮಟ್ಟದಲ್ಲಿ 7ನೇ ಸ್ಥಾನ ಪಡೆದಿದ್ದು, ಹರಿಪ್ರಿಯಾ ಪಿ.ಸೊರಬ 587 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ 10ನೇ ಸ್ಥಾನ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಡಿವಿಎಸ್ ಸಂಸ್ಥೆಯ ನೂತನ ಆಡಳಿತ ಮಂಡಳಿ ನೇತೃತ್ವದಲ್ಲಿ ಸಂಪಾದಿಸಿ ಪ್ರಕಟಿಸಲಾದ ಚೊಚ್ಚಲ ಮಾಸಿಕ ಪತ್ರಿಕೆ ಡಿವಿಎಸ್ DVS Independent College ದೀವಿಗೆಯನ್ನು ಗುರುವಾರ ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನೌಕರರ ಸಾಹಿತ್ಯಾಭಿರುಚಿ ಪ್ರೋತ್ಸಾಹಿಸುವ ದೃಷ್ಟಿಯಿಂದ “ಡಿವಿಎಸ್ ದೀವಿಗೆ” ಸಹಕಾರಿಯಾಗಲಿದೆ. ಆಡಳಿತ ಮಂಡಳಿ ಪದಾಧಿಕಾರಿಗಳು ಸಂಚಿಕೆ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಡಿವಿಎಸ್ ಆಡಳಿತ ಮಂಡಳಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎರಡು ನೂತನ ಬಸ್ ಉದ್ಘಾಟಿಸಲಾಯಿತು.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ರಾಜ್ಯಮಟ್ಟದ ಸಾಧನೆಗೆ ಡಿವಿಎಸ್ ಅಧ್ಯಕ್ಷ ಕೆ.ಬಸಪ್ಪ ಗೌಡ, ಕಾರ್ಯದರ್ಶಿ ಎಸ್.ಪಿ.ದಿನೇಶ್ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
