Saturday, March 28, 2026
Saturday, March 28, 2026
Home Blog Page 1364

ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು -ಡಾ.ಕೆ.ಶಿವಶಂಕರ್

0

“ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಅವಶ್ಯ” -ವಾಣಿಜ್ಯೋತ್ಸವ 2022 ಉದ್ಘಾಟನೆಯಲ್ಲಿ ದಾವಣಗೆರೆ ವಿವಿ ರಿಜಿಸ್ಟಾರ್ ಡಾ. ಕೆ. ಶಿವಶಂಕರ್- ದಾವಣಗೆರೆ.ಡಿ. 3. ಆಧುನಿಕ ತಂತ್ರಜ್ಞಾನದ ಬಳಕೆಯಿಂದ ವಾಣಿಜ್ಯ ರಂಗವನ್ನು ಸರಳ ಸದೃಢ ಮತ್ತು ವ್ಯಾಪಕಗೊಳಿಸಲು ಕೌಶಲ್ಯ ಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ರಿಜಿಸ್ಟಾರ್ ಇವ್ಯಾಲುವೇಶನ್ ಡಾ. ಕೆ. ಶಿವಶಂಕರ್ ಅಭಿಪ್ರಾಯಪಟ್ಟರು. ಅವರಿಂದು ಬಾಪೂಜಿ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ನ ವಾಣಿಜ್ಯ ವಿಭಾಗದ ವತಿಯಿಂದ ಏರ್ಪಡಿಸಿದ್ದ ಅಂತರ್ ರಾಜ್ಯ ವಾಣಿಜ್ಯ ಪ್ರದರ್ಶನ ‘ವಾಣಿಜ್ಯೋತ್ಸವ 2022’ ರ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಸಾಂಪ್ರದಾಯಿಕವಾದ ಪಠ್ಯ ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣಕ್ಕೂ ಒತ್ತು ಕೊಡುವ ಅವಶ್ಯಕತೆ ಇದೆ, ವಿದ್ಯಾರ್ಥಿಗಳು ಬದಲಾಗುತ್ತಿರುವ ಜಗತ್ತಿನ ಅಗತ್ಯಗಳಿಗೆ ತಕ್ಕಂತೆ ತಂತ್ರಜ್ಞಾನಗಳನ್ನು ಬಳಸಬೇಕು.

ಮೊಬೈಲ್ ಫೋನ್ ಗಳು ಸಹಾ ರಚನಾತ್ಮಕ ಕಾರ್ಯಗಳಿಗೆ ಬಳಕೆಯಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಚೇರ್ಮನ್ ಅಥಣಿ ಎಸ್. ವೀರಣ್ಣನವರು ತಂತ್ರಜ್ಞಾನವು ತೀವ್ರ ಗತಿಯಲ್ಲಿ ಬದಲಾಗುತ್ತಿದ್ದು ವಿನೂತನ ಆಲೋಚನೆಗಳ ಮೂಲಕ ಅವುಗಳ ಅಳವಡಿಕೆಗೆ ವಿದ್ಯಾರ್ಥಿಗಳು ಸಿದ್ಧಪಡಿಸುವ ವಾಣಿಜ್ಯ ಮಾದರಿಗಳು ಸಹಕಾರಿಯಾಗಲಿವೆ ಎಂದರು. ಪ್ರಾಂಶುಪಾಲ ಡಾ. ಬಿ. ವೀರಪ್ಪನವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಸ್ವಾಗತ ಕೋರುತ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೂಪ ಮತ್ತು ಸಂಜನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪವನ್ ಹಾಡಿದರು. ಸ್ವಾತಿ ಮತ್ತು ಸೌಮ್ಯ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಸಹಾಯಕ ಪ್ರಾಧ್ಯಾಪಕ ಪ್ರೊ.ಮಂಜುನಾಥ್ ಬಿ.ಬಿ.ವಂದನೆ ಸಲ್ಲಿಸಿದರು. ವಿವಿಧ ಕಾಲೇಜುಗಳಿಂದ ವಾಣಿಜ್ಯ ವಿದ್ಯಾರ್ಥಿಗಳು ಸಿದ್ಧಪಡಿಸಿಕೊಂಡು ತಂದ ಅನೇಕ ಮಾದರಿಗಳ ಪ್ರದರ್ಶನವನ್ನು ಮುಖ್ಯ ಅತಿಥಿಗಳು ವೀಕ್ಷಿಸಿದರು.

ವರದಿ ಕೃಪೆ :ಎಚ್. ಬಿ .ಮಂಜುನಾಥ

ಜಿ 20 ರಲ್ಲಿ ಭಾರತದ ಅಧ್ಯಕ್ಷತೆಯ ಗುರುತಿಗೆ ಹಂಪಿಯಲ್ಲಿ ಸಂಭ್ರಮ

0

ನೂರು ವಿಶ್ವ ಪರಂಪರೆಯ ತಾಣಗಳು ಮತ್ತು ಸರ್ಕಾರ ಸಂರಕ್ಷಿತ ಸ್ಮಾರಕಗಳನ್ನು ಬೆಳಗಿಸುವ ಮೂಲಕ ಜಿ20 ಅಧ್ಯಕ್ಷತೆಯ ಅಂಗೀಕಾರವನ್ನು ಗುರುತಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಡಿಸೆಂಬರ್ 1 ರಂದು ಭಾರತವು G-20(G-20 presidency) ಅಧ್ಯಕ್ಷತೆ ವಹಿಸಿಕೊಂಡ ನಂತರ ದೇಶದಾದ್ಯಂತವಿರುವ 100 ಸ್ಮಾರಕಗಳು G-20 ಲಾಂಛನದೊಂದಿಗೆ ಬೆಳಗಿವೆ.

ಕರ್ನಾಟಕದ ಹಂಪಿಯಲ್ಲಿರುವ ಸ್ಮಾರಕಗಳು ಮತ್ತು ಪಾರಂಪರಿಕ ತಾಣಗಳು ಕೂಡಾ ವಿದ್ಯುದ್ದೀಪದಿಂದ ಘಮಘಮಗಿಸಿವೆ. ನೂರು ವಿಶ್ವ ಪರಂಪರೆಯ ತಾಣಗಳು ಮತ್ತು ಸರ್ಕಾರ ಸಂರಕ್ಷಿತ ಸ್ಮಾರಕಗಳನ್ನು ಬೆಳಗಿಸುವ ಮೂಲಕ ಜಿ20 ಅಧ್ಯಕ್ಷತೆಯ ಅಂಗೀಕಾರವನ್ನು ಗುರುತಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

G20 ಜಾಗತಿಕ ಸಮಸ್ಯೆಗಳಾದ ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ, ವಿಶ್ವವ್ಯಾಪಿ ಆರ್ಥಿಕತೆ ಮತ್ತು ಇನ್ನೂ ಹೆಚ್ಚಿನವುಗಳನ್ನು ಪರಿಹರಿಸಲು 19 ದೇಶಗಳು ಮತ್ತು ಯುರೋಪಿಯನ್ ಯೂನಿಯನ್ (EU) ಅನ್ನು ಒಳಗೊಂಡಿರುವ ಒಂದು ಅಂತರ್ ಸರ್ಕಾರಿ ವೇದಿಕೆಯಾಗಿದೆ.

ಭಾರತದ 55 ಸ್ಥಳಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳು ನಡೆಯುವ ನಿರೀಕ್ಷೆಯಿದೆ. ಗುರುವಾರ ಜಿ20 ಲಾಂಛನದೊಂದಿಗೆ ಹಲವಾರು ಸ್ಮಾರಕಗಳು ಮತ್ತು ತಾಣಗಳು ಬೆಳಗಿದವು. ಕರ್ನಾಟಕದ ಹಂಪಿ ಅವುಗಳಲ್ಲಿ ಒಂದಾಗಿದೆ.

ಎಎಸ್‌ಐ ಭಾರತಕ್ಕೆ ಜಿ20 ಪ್ರತಿನಿಧಿಗಳನ್ನು ಸ್ವಾಗತಿಸುತ್ತದೆ. ದೇಶಾದ್ಯಂತ ಜಿ20 ಲಾಂಛನದಲ್ಲಿ ಪ್ರಕಾಶಿತ ಸ್ಮಾರಕಗಳ ಒಂದು ನೋಟ ಎಂದು ಭಾರತೀಯ ಪುರಾತತ್ವ ಇಲಾಖೆ ಟ್ವೀಟ್ ಮಾಡಿದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಪಟ್ಟಣವಾಗಿದೆ. ಇದು ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಇದು ಕಲ್ಲಿನ ರಥ, ವಿಟ್ಟಲ ದೇವಸ್ಥಾನ, ಹೇಮಕೂಟ ಬೆಟ್ಟಗಳು, ಅಂಜನಾದ್ರಿ ಬೆಟ್ಟಗಳು, ವಿರೂಪಾಕ್ಷ ದೇವಸ್ಥಾನ, ಮುಂತಾದ ಪ್ರಸಿದ್ಧ ತಾಣಗಳನ್ನು ಹೊಂದಿದೆ.
100 ಶಾರ್ಟ್‌ಲಿಸ್ಟ್ ಮಾಡಲಾದ ಸ್ಮಾರಕಗಳ ಪಟ್ಟಿಯಲ್ಲಿ ಟಿಪ್ಪು ಸುಲ್ತಾನನ ಅರಮನೆ ಮತ್ತು ಕರ್ನಾಟಕದ ಗೋಲ್ ಗುಂಬಜ್, ಹುಮಾಯೂನ್ ಸಮಾಧಿ ಮತ್ತು ದೆಹಲಿಯ ಪುರಾಣ ಕ್ವಿಲಾ, ಗುಜರಾತ್‌ನ ಮೊಧೇರಾ ಸೂರ್ಯ ದೇವಾಲಯ, ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯ, ಬಿಹಾರದಲ್ಲಿರುವ ಶೇರ್ ಶಾ ಸೂರಿಯ ಸಮಾಧಿ ಮೊದಲಾದ ಸ್ಮಾರಕಗಳಲ್ಲಿ ಜಿ-20 ಲಾಂಛನದೊಂದಿಗೆ ಪ್ರಕಾಶಿಸಿದೆ.

ಅಕ್ರಮ ಸಂಬಂಧ ಸಾಬೀತಿಗೆ ಫೋಟೋಗಳು ಸಾಕ್ಷ್ಯವಲ್ಲ-ಗುಜರಾತ್ ಹೈಕೋರ್ಟ್

0

ಕೇವಲ ಛಾಯಾಚಿತ್ರಗಳನ್ನು ತೋರಿಸುವ ಮೂಲಕ ಅಕ್ರಮ ಸಂಬಂಧದ ಬಗ್ಗೆ ಸಾಬೀತು ಮಾಡಲಾಗುವುದಿಲ್ಲ ಎಂದು ಗುಜರಾತ್​ ಹೈಕೋರ್ಟ್​ ಹೇಳಿದೆ.

ಪತ್ನಿ ವ್ಯಭಿಚಾರ ನಡೆಸುತ್ತಿದ್ದಾಳೆ ಎಂದು ಫೋಟೋ ತೋರಿಸುತ್ತಾ ಪತಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿದೆ.
ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ಪತ್ನಿಯಿಂದ ವಿಚ್ಛೇದನ ಕೋರಿದ್ದ ಪತಿಯೊಬ್ಬ ಜೀವನಾಂಶಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದ. ತನ್ನ ಪತ್ನಿ ವ್ಯಭಿಚಾರಿಣಿ ಎಂದಿದ್ದ ಆತ ಕೆಲವೊಂದು ಫೋಟೋ ತೋರಿಸಿದ್ದ. ಆದರೆ ಕೇವಲ ಫೋಟೋದಿಂದ ಇದನ್ನು ಸಾಬೀತು ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಉಮೇಶ್ ತ್ರಿವೇದಿ ಹೇಳಿದ್ದಾರೆ.

ವಿಚ್ಛೇದನ ಪಡೆದ ನಂತರ ಪತ್ನಿ ಜೀವನಾಂಶಕ್ಕೆ ಕೋರಿ ಕೌಟುಂಬಿಕ ಕೋರ್ಟ್​ನಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ತನಗೆ ಮತ್ತು ತನ್ನ ಹೆಣ್ಣುಮಕ್ಕಳಿಗೆ ಮಧ್ಯಂತರ ಜೀವನಾಂಶ ನೀಡುವಂತೆ ಆಕೆ ಕೋರಿದ್ದರಿಂದ ಕೋರ್ಟ್​ ಪ್ರತಿ ತಿಂಗಳು ರೂ.30 ಸಾವಿರ ನೀಡುವಂತೆ ಪತಿಗೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಪತಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದ. ತನ್ನ ಪತ್ನಿಗೆ ಅಕ್ರಮ ಸಂಬಂಧವಿದ್ದು ತಾನು ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದಿದ್ದ. ಆದರೆ ಕೋರ್ಟ್​ ಇದನ್ನು ಮಾನ್ಯ ಮಾಡಲಿಲ್ಲ.

ವ್ಯಭಿಚಾರದ ಆರೋಪಕ್ಕೆ ಸ್ಪಷ್ಟ ಸಾಕ್ಷ್ಯವನ್ನು ನೀಡಬೇಕು ಮತ್ತು ಪ್ರಸ್ತುತ ಸಲ್ಲಿಸಿರುವ ಛಾಯಾಚಿತ್ರಗಳು ಪತ್ನಿ ವ್ಯಭಿಚಾರ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ತೋರಿಸಲು ಸಾಕಾಗುವುದಿಲ್ಲ ಎಂದು ನ್ಯಾಯಮೂರ್ತಿ ಉಮೇಶ್ ತ್ರಿವೇದಿ ಹೇಳಿದ್ದಾರೆ.

ಕಬ್ಬು ಕೃಷಿಕರಿಗೆ ಸರ್ಕಾರದಿಂದ ಎಥೆನಾಲ್ ಮೇಲಿನ ಲಾಭಾಂಶ ನೀಡಲು ನಿರ್ಧಾರ

0

ರಾಜ್ಯದ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ರೈತರಿಗೆ ಸರ್ಕಾರ ಎಥೆನಾಲ್ ಮೇಲಿನ ಲಾಭಾಂಶ ನೀಡಲು ನಿರ್ಧರಿಸಿದೆ.

ಹೌದು, ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಬಾಗಲಕೋಟೆ ಸೇರಿ ಹಲವು ಕಡೆ ಕಬ್ಬು ಬೆಳೆಗಾರರು ಭಾರೀ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆ ರೈತರ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ ಎಥೆನಾಲ್ ಮೇಲಿನ ಲಾಭಾಂಶ ನೀಡಲು ನಿರ್ಧರಿಸಿದೆ.

ವಿಕಾಸಸೌಧದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆದಿದ್ದು, ಎಫ್‌ಆರ್ ಪಿ ದರ ಪಾವತಿ ಬಳಿಕ ಪ್ರತಿ ಟನ್ ಗೆ ಹೆಚ್ಚುವರಿಯಾಗಿ 50 ರೂ ನಂತೆ ಒಟ್ಟು 204.47 ಕೋಟಿ ಬಿಡುಗಡೆ ಮಾಡಿದೆ. ಇಂದೇ ಆದೇಶ ಹೊರಡಿಸುವಂತೆ ಕಬ್ಬು ಅಭಿವೃದ್ದಿ ಆಯುಕ್ತರಿಗೆ ಸಚಿವರು ಸೂಚನೆ ನೀಡಿದ್ದಾರೆ.

ಜಾಗತಿಕ ಪರಿಸ್ಥಿತಿ ಪರಿಶೀಲಿಸಿ ಬೃಹತ್ ಪ್ರಮಾಣದ ಆಹಾರ ಸಂಗ್ರಹಣಾ ಯೋಜನೆ

0

ದೇಶದ ನಾಗರಿಕರಿಗೆ ಅರ್ಹರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಗತ್ತಿನಲ್ಲಿಯೇ ಅತೀ ಬೃಹತ್‌ ಪ್ರಮಾಣದ ಆಹಾರ ಸಂಗ್ರಹಣ ಯೋಜನೆ ಹಮ್ಮಿಕೊಳ್ಳಲು ಕೇಂದ್ರ ಸರಕಾರ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವಕೃಷಿ ಸಚಿವಾಲಯ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಆಹಾರ ಸಂಸ್ಕರಣ ಇಲಾಖೆಗಳ ಯೋಜನೆಗಳನ್ನು ವಿಲೀನಗೊಳಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ, ಹೆಚ್ಚುತ್ತಿರುವ ಆಹಾರ ಉತ್ಪನ್ನಗಳ ಬೆಲೆ, ರಾಜಕೀಯ ಬೆಳವಣಿಗೆಗಳ ಏರಿಳಿತಗಳನ್ನು ಗಮನಿಸಿರುವ ಕೇಂದ್ರ ಸರಕಾರ ಈ ತೀರ್ಮಾನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಉಕ್ರೇನ್‌ ಮೇಲಿನ ದಾಳಿಯಿಂದಾಗಿದ ಈಗಾಗಲೇ ಆಹಾರ ಪೂರೈಕೆಯ ಸರಪಳಿ ಜಗತ್ತಿನ ಕೆಲವು ಹಂತಗಳಲ್ಲಿ ತಪ್ಪಿ ಹೋಗಿ ಬೆಲೆಯ ಏರಿಕೆಗೆ ಕೂಡ ಕಾರಣವಾಗಿದೆ. ದೇಶದಲ್ಲಿ ಆಹಾರ ಧಾನ್ಯಗಳ ಸಂಗ್ರಹಣೆಗೆ ಸಾಮರ್ಥ್ಯದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಹೆಜ್ಜೆಗಳನ್ನು ಇರಿಸಿದೆ ಎಂದು ಕೃಷಿ ಆರ್ಥಿಕ ತಜ್ಞ ಅಶೋಕ್‌ ಗುಲಾಟಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಡಾ.ಧನಂಜಯ ಸರ್ಜಿ,ಸಾಗರದಪ್ರಶಾಂತ್ ಬಿಜೆಪಿ ಸೇರ್ಪಡೆ

0

ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳಿದ್ದಾಗಲೇ ಶಿವಮೊಗ್ಗ ಬಿಜೆಪಿ ಕೆಲಸ ಆರಂಭಿಸಿದೆ. ಸೊರಬ, ಶಿಕಾರಿಪುರ ಬಳಿಕ ಸಾಗರ ಹಾಗೂ ಶಿವಮೊಗ್ಗ ಕ್ಷೇತ್ರದ ಪ್ರಮುಖರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಚುನಾವಣಾ ತಂತ್ರಗಾರಿಕೆ ಅಧಿಕೃತವಾಗಿ ಆರಂಭವಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಗರದ ಕೆ.ಎಸ್.ಪ್ರಶಾಂತ್ ಹಾಗೂ ಖ್ಯಾತ ಮಕ್ಕಳ ತಜ್ಞ ಡಾ ಧನಂಜಯ್ ಸರ್ಜಿ ಬಿಜೆಪಿಗೆ ಸೇರ್ಪಡೆಯಾದರು.

ಮಾಜಿ ಸಂಸದ ಕೆ.ಜಿ.ಶಿವಪ್ಪ ಅವರ ಪುತ್ರ, ಸಾಗರದ ಯುವ ಮುಖಂಡರಾಗಿರುವ ಕೆ.ಎಸ್.‌ಪ್ರಶಾಂತ್ ಈ ಹಿಂದೆ ರಾಜಕೀಯವಾಗಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ತನ್ನದೇ ಸಂಘಟನೆ ಮೂಲಕ ಸಾಮಾಜಿಕ ಚಟುವಟಿಕೆ ಮಾಡುತ್ತಿದ್ದ ಕೆ.ಎಸ್.ಪ್ರಶಾಂತ್ ಸೇರ್ಪಡೆ ಸಾಗರ ಭಾಗದಲ್ಲಿ ಬಿಜೆಪಿಗೆ ಬಲ ತುಂಬಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶಿವಮೊಗ್ಗ ನಗರದ ಖ್ಯಾತ ಮಕ್ಕಳ ತಜ್ಞರಾಗಿರುವ ಡಾ.ಧನಂಜಯ್ ಸರ್ಜಿ ಅವರು ಸಾಮಾಜಿಕ ಕಾರ್ಯಕ್ರಮದ ಶಿವಮೊಗ್ಗದಲ್ಲಿ ಗುರುತಿಸಿಕೊಂಡಿದ್ದಾರೆ.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಇವರುಗಳು ಬಿಜೆಪಿ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಶಾಸಕರಾದ ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಎಸ್.ರುದ್ರೇಗೌಡ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಉಪಸ್ಥಿತರಿದ್ದರು.

ಕೊರೋನ ಚೀನಾದಲ್ಲೇ ಮಾನವ ನಿರ್ಮಿತವಾದ ವೈರಸ್- ಆಂಡ್ರೂ ಹಫ್

0

ಇಡೀ ವಿಶ್ವವನ್ನೇ ಮಾರಣಾಂತಿಕವಾಗಿ ಕಾಡಿದ, ಲಕ್ಷಾಂತರ ಜನರ ಜೀವ ಬಲಿಪಡೆದ ಕೊರೋನಾ ʼಮಾನವ ನಿರ್ಮಿತ ವೈರಸ್ʼ.. ಹೀಗೆಂದು ಹೇಳಿದ್ದು ಕೊರೋನಾ ವೈರಸ್ ಮೊದಲು ಹೊರಹೊಮ್ಮಿದ ನಗರವಾದ ಚೀನಾದ ವುಹಾನ್‌ನಲ್ಲಿರುವ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಅಮೆರಿಕಾ ಮೂಲದ ವಿಜ್ಞಾನಿ.

ಹೌದು, ಕೊರೋನಾ ವೈರಸ್‌ ಚೀನಾದ ಪ್ರಯೋಗಾಲಯದಲ್ಲಿ ಸೋರಿಕೆಯಾಗಿದೆ. ಎರಡು ವರ್ಷಗಳ ಹಿಂದೆ ಸರ್ಕಾರಿ ಮತ್ತು ಅನುದಾನಿತ ಸಂಶೋಧನಾ ಸೌಲಭ್ಯವಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ನಿಂದ ಕೋವಿಡ್ ಸೋರಿಕೆಯಾಗಿದೆ ಎಂದು ಬ್ರಿಟಿಷ್ ಪತ್ರಿಕೆ ದಿ ಸನ್‌ ನಲ್ಲಿ ಯುಎಸ್ ಮೂಲದ ಸಂಶೋಧಕ ಆಂಡ್ರ್ಯೂ ಹಫ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಅವರ ಇತ್ತೀಚಿನ ಪುಸ್ತಕ, “ದಿ ಟ್ರೂತ್ ಎಬೌಟ್ ವುಹಾನ್” ನಲ್ಲಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಡ್ರ್ಯೂ ಹಫ್ ಅವರು ಚೀನಾ ಈ ಮಾರಕ ಸಾಂಕ್ರಾಮಿಕ ರೋಗದ ಸೃಷ್ಟಿಕರ್ತ ಎಂದು ಹೇಳಿದ್ದಾರೆ.

ಆಂಡ್ರ್ಯೂ ಹಫ್ ಅವರು ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ.
ಅಮೆರಿಕಾದ ಧನಸಹಾಯದೊಂದಿಗೆ ಚೀನಾದಲ್ಲಿ ಈ ವೈರಸ್‌ ನ ಪ್ರಯೋಗಗಳನ್ನು ಅಸಮರ್ಪಕ ಭದ್ರತೆಯೊಂದಿಗೆ ನಡೆಸಲಾಯಿತು.
ಇದರ ಪರಿಣಾಮವಾಗಿ ವುಹಾನ್ ಲ್ಯಾಬ್‌ನಲ್ಲಿ ಸೋರಿಕೆಯಾಗಿದೆ ಎಂದು ಆಂಡ್ರ್ಯೂ ಹಫ್ ಹೇಳಿದ್ದಾರೆ.

“ಸರಿಯಾದ ಜೈವಿಕ ಸುರಕ್ಷತೆ, ಜೈವಿಕ ಸುರಕ್ಷತೆ ಮತ್ತು ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಚೀನಾ ಪ್ರಯೋಗಾಲಯಗಳು ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಹೊಂದಿಲ್ಲ. ಅಂತಿಮವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಲ್ಯಾಬ್ ಸೋರಿಕೆಗೆ ಕಾರಣವಾಯಿತು” ಎಂದು ಆಂಡ್ರ್ಯೂ ಹಫ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಇದು ದೇಶಿಯವಾಗಿ ವಿನ್ಯಾಸಗೊಳಿಸಲಾದ ರೋಗದ ತಳಿ ಎಂದು ಚೀನಾಕ್ಕೆ ಮೊದಲ ದಿನದಿಂದಲೇ ತಿಳಿದಿತ್ತು” ಎಂದು ಆಂಡ್ರ್ಯೂ ಹಫ್ ಬರೆದಿದ್ದಾರೆ. “ಈ ಅಪಾಯಕಾರಿ ಜೈವಿಕ ತಂತ್ರಜ್ಞಾನವನ್ನು ಚೀನಿಯರಿಗೆ ವರ್ಗಾಯಿಸಿದ ಯುಎಸ್ ಸರ್ಕಾರವು ಸಹ ಕೊರೋನಾ ಸೃಷ್ಟಿಸಿದ ಅನಾಹುತಗಳಿಗೆ ಹೊಣೆಯಾಗಿದೆ. ನಾನು ನೋಡಿದ ಸಂಗತಿಯಿಂದ ನಾನು ಭಯಭೀತನಾಗಿದ್ದೆ ಎಂದು ಅವರು ಹೇಳಿದ್ದಾರೆ.

ಶಿಸ್ತಿನ ಬದುಕು ಅತ್ಯಂತ ಉತ್ತಮ- ಡಾ.ನಿರ್ಮಲಾನಂದನಾಥ ಸ್ವಾಮೀಜಿ

0

ಜೀವನದಲ್ಲಿ ಶಿಸ್ತಿನ ಮೂಲಕ ದಾರಿ ಸಾಗಿಸಿದಲ್ಲಿ ಮಾತ್ರ ಬದುಕಿನ ಪ್ರತಿ ಹಂತಗಳಲ್ಲಿ ಒಂದೊಂದು ಮೆಟ್ಟಿಲನ್ನು ಹತ್ತಲು ಸಾಧ್ಯ, ಶಿಸ್ತಿನ ಬದುಕು ಅತ್ಯಂತ ಉತ್ತಮ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.

ಅವರು ಭದ್ರಾವತಿ ತಾಲೂಕು ಕಾರೇಹಳ್ಳಿಯ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಶ್ರೀ ಆದಿಚುಂಚನಗಿರಿ ಶಾಲಾ ಕಾಲೇಜುಗಳ ರಾಜ್ಯಮಟ್ಟದ ರಜತ ಚುಂಚಾದ್ರಿ ಕ್ರೀಡೋತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಾವು ಜೀವನದಲ್ಲಿ ಓಡುವುದು, ಆಟ ಆಡುವುದು ಮುಖ್ಯವಾಗುವುದಿಲ್ಲ ಅದು ಶಿಸ್ತಿನಿಂದ ಇದ್ದಾಗ ಮಾತ್ರ ಸಮರ್ಪಕವಾಗಿರುತ್ತದೆ ಎಂದು ವಿವರಣೆ ನೀಡಿದರು.

ಕ್ರೀಡೆ ಎಂದರೆ ಕೇವಲ ಆಟವಲ್ಲ ,ಅದು ಪ್ರತಿ ವಿದ್ಯಾರ್ಥಿಗಳ ಪ್ರಮುಖ ಘಟ್ಟವಾಗುತ್ತದೆ.ಕ್ರೀಡೆ ಶಿಸ್ತು ಬದ್ದ ಜೀವನವನ್ನು ಕಲಿಸುತ್ತದೆ ಎಂದರು. ಭಾರತ ದೇಶದಲ್ಲಿ ಸುಮಾರು 124 ಹೆಚ್ಚು ಕ್ರೀಡೆಗಳು ಅಸ್ತಿತ್ವದಲ್ಲಿವೆ ಆದರೆ ನಮ್ಮ ರಾಜ್ಯದಲ್ಲಿ 24 ಕ್ರೀಡೆಗಳು ಮಾತ್ರ ಆಡಲಾಗುತ್ತಿದೆ. ಆದಿಚುಂಚನಗಿರಿ ಮಠವು ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಕ್ರೀಡೆಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಕ್ರೀಡೋತ್ಸವವನ್ನು ನಡೆಸಲು ಚಿಂತಿಸಿದೆ ಎಂದರು.

ಕ್ರೀಡೆಯಲ್ಲಿ ಗೆಲುವು ಸಂತಸ ನೀಡಿದರೆ, ಸೋಲನ್ನು ಅದೇ ಚಿತ್ತದಿಂದ ಕ್ರೀಡಾಪಟುಗಳು ಸ್ವೀಕರಿಸಿ ಮುಂದೆ ಗೆಲುವು ಸಿಗುತ್ತದೆ ಎಂದು ಆಟವಾಡಿ ಎಂದು ಮಕ್ಕಳನ್ನು ಹುರಿದುಂಬಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಹಿಂದಿನಿಂದಲೂ ಕ್ರೀಡೆಯ ಬಗ್ಗೆ ಆದಿಚುಂಚನಗಿರಿ ಮಹಾಸಂಸ್ಥಾನ ವಿಶೇಷವಾದ ಆಸಕ್ತಿಯನ್ನು ವಹಿಸಿ, ಲೆಕ್ಕವಿಲ್ಲದಷ್ಟು ಮಕ್ಕಳನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದೆ.

ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ಸರ್ವರನ್ನೂ ಅಭಿನಂದಿಸಿದರು. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡುತ್ತಾ , ಕ್ರೀಡೆ ಧ್ಯಾನವಿದ್ದಂತೆ ಕ್ರೀಡೆಯಲ್ಲಿನ ಸೋಲು ಹಾಗೂ ಗೆಲುವನ್ನು ಕ್ರೀಡಾಪಟುಗಳು ಸಮಾನವಾಗಿ ಸ್ವೀಕರಿಸಬೇಕು ಎಂದರು.

ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ಶ್ರೀಮಠದ ಶೈಕ್ಷಣಿಕ ಸಂಸ್ಥೆಗಳು ಸಮಾಜದ ಎಲ್ಲಾ ವರ್ಗದ ಸಾವಿರಾರು ಮಕ್ಕಳಿಗೆ ಅನ್ನ, ಅರಿವು, ಆಶ್ರಯ ನೀಡಿದ ಪರಿಣಾಮ ಇಂದು ಅವರೆಲ್ಲ ಉನ್ನತ ಹುದ್ದೆ, ಸ್ಥಾನಮಾನಗಳನ್ನು ಅಲಂಕರಿಸುವಂತಾಗಿದೆ. ವಿದ್ಯಾರ್ಥಿಗಳಿಗೆ ಓದಿನೊಂದಿಗೆ ಕ್ರೀಡೆಗಳಲ್ಲಿಯೂ ಭಾಗವಹಿಸುವಂತೆ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ ಸಂಗತಿ ಆಗಿದೆ ಎಂದರು.

ಶಿವಮೊಗ್ಗ ಆದಿಚುಂಚನಗಿರಿ ವಿಭಾಗಕ್ಕೆ ಸಮಗ್ರ ಪ್ರಶಸ್ತಿ, ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಬಿಜಿ ನಗರ ಶಾಲೆಯ ಮಕ್ಕಳು ಚಾಂಪಿಯನ್ ಆಗಿ ಹೊರಹಮ್ಮಿದ್ದಾರೆ. ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಭದ್ರಾವತಿಯ ಶಾಲಾ ಮಕ್ಕಳು ಚಾಂಪಿಯನ್ ಆಗಿದ್ದು ವಿಶೇಷ. ಪ್ರೌಢಶಾಲಾ ವಿಭಾಗದ ಬಾಲಕರ ವಿಭಾಗದಲ್ಲಿ ಆದಿಚುಂಚನಗಿರಿ ಕ್ಷೇತ್ರದ ಶಾಲೆಗಳು ಚಾಂಪಿಯನ್ ಶಿಫ್ ಪಡೆದಿದ್ದರೆ, ಬಾಲಕಿಯರ ವಿಭಾಗದಲ್ಲಿ ಶಿವಮೊಗ್ಗ ವಿಭಾಗದ ಕ್ರೀಡಾಪಟುಗಳು ಚಾಂಪಿಯನ್ ಶಿಫ್ ಪಡೆದಿದ್ದಾರೆ.

ಶಿವಮೊಗ್ಗ ಕಾಲೇಜು ವ್ಯಾಸಂಗದ ಬಾಲಕರ ತಂಡ ಚಾಂಪಿಯನ್ ಶಿಫ್ ಪಡೆದಿದ್ದರೆ, ಆದಿಚುಂಚನಗಿರಿ ಕ್ಷೇತ್ರದ ಬಾಲಕಿಯರ ತಂಡ ಚಾಂಪಿಯನ್ ಶಿಫ್ ನ್ನು ಮುಡಿಗೇರಿಸಿಕೊಂಡಿದೆ. ಗುಂಪು ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಶಿವಮೊಗ್ಗ ವಿಭಾಗವು ವೀರಗ್ರಹಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸುಳ್ಯದ ಕೆವಿಜಿ ಸಮೂಹ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಜಿ.ಎಸ್. ಅಕ್ಷಯ್, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಶ್ರೀ ಸ್ವಾಮಿನಾಥ ಸ್ವಾಮೀಜಿ , ತಿಪಟೂರು ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಕಾರೆ ಹಳ್ಳಿಯ ಶ್ರೀ ವಿಶ್ವದೇವಾನಂದ ಸ್ವಾಮೀಜಿ, ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಲೀಲಾಧರ್, ಸಂಸ್ಥೆಯ ನಿರ್ದೇಶಕರಾದ ಪಾಸಪ್ಪಗೌಡ, ಗುಂಡೇಗೌಡ ಹಾಗೂ ಆಡಳಿತಾಧಿಕಾರಿಗಳು, ಪ್ರಾಂಶುಪಾಲರುಗಳು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಓದುಗರನ್ನ ತಲುಪಿದಾಗ ಮಾತ್ರ ಲೇಖಕರಿಗೆ ತೃಪ್ತಿ- ಸವಿತಾ ನಾಗಭೂಷಣ

0

ಕನ್ನಡ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ ಕನ್ನಡ ಲೇಖಕರ ಶ್ರಮ ಸಾರ್ಥಕವಾಗಲಿದೆ ಎಂದು ಕವಯತ್ರಿ ಸವಿತಾ ನಾಗಭೂಷಣ ಅವರು ಹೇಳಿದರು.

ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶನಿವಾರ ಸಂಜೆ ಆಯೋಜಿಸಿದ್ಧ ಪುಸ್ತಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬರಹಗಾರ, ಲೇಖಕನಿಗೆ ಹತ್ತಾರು ಪ್ರಶಸ್ತಿಗಳು ಬರುತ್ತಿವೆ. ಆದರೆ, ಅವರು ಬರೆದ ಕಥೆ ಅಥವಾ ಕವನ ಓದುಗರನ್ನು ತಲುಪಿದಾಗ ಮಾತ್ರ ಬದುಕಿಗೆ ತೃಪ್ತಿ ಸಿಗುತ್ತದೆ ಎಂದು ಹೇಳಿದರು.

ಕನ್ನಡ ಸಾಂಸ್ಕೃತಿಕ, ಸಾರಸ್ವತ ಲೋಕದಲ್ಲಿ ಕರ್ನಾಟಕ ಸಂಘದ ಹೆಸರು ಚಿರಸ್ಥಾಯಿ ಆಗಿದೆ. ಕೆಲವು ಸಂಘ ಸಂಸ್ಥೆಗಳು ಐದರಿಂದ ಹತ್ತು ವರ್ಷಗಳವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಕೆಲವು ಅನುದಾನ ಬಂದಾಗ ಮಾತ್ರ ಕಾರ್ಯ ಚಟುವಟಿಕೆ ನಡೆಸುತ್ತವೆ. ಆದರೆ,92 ವಸಂತಗಳನ್ನು ಕಂಡಿರುವ ಸಂಘವು ಕನ್ನಡವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ಪ್ರಶಸ್ತಿ ಪುರಸ್ಕೃತರಾದ ಮೋಹನ್ ಅವರು ಮಾತನಾಡಿದರು.

ಕಾರ್ಯಕ್ರಮ ದ ಬಹುಮಾನಿತರ ವಿವರಗಳು ಹೀಗಿದೆ…

ಕುವೆಂಪು ಪ್ರಶಸ್ತಿ: ವೈಷ್ಣವ ಜನತೋ (ಕಾದಂಬರಿ): ಲೋಕೇಶ ಅಗಸನಕಟ್ಟೆ ಎಂ.ಕೆ. ಇಂದಿರಾ ಪ್ರಶಸ್ತಿ: ಅಮ (ಕೃತಿ); ಸ್ನೇಹಲತಾ ದಿವಾಕರ ಕುಂಬ್ಳೆ ಎನ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ: ಪ್ರೇಮ ಪತ್ರ (ಅನುವಾದಿತ ಸಾಹಿತ್ಯ); ಡಾ.ಎ. ಮೋಹನ್ ಕುಂಟಾರು

ಡಾ.ಶೋಭಾ ನಾಯಕ

ಡಾ.ಜಿ.ಎಸ್‌. ಶಿವರುದ್ರಪ್ಪ ಪ್ರಶಸ್ತಿ: ಶಯ್ಯಾಗೃಹದ ಸುದ್ದಿಗಳು (ಕವನ ಸಂಕಲನ); ಡಾ.ಹಾ.ಮಾ. ನಾಯಕ ಪ್ರಶಸ್ತಿ: ಓದಿನ ಮನೆ (ಅಂಕಣ ಬರಹ): ದೀಪಾ ಪಡೆ ಡಾ.ಯು.ಆರ್. ಅನಂತಮೂರ್ತಿ ಪ್ರಶಸ್ತಿ: ಬೊಗಸೆ ತುಂಬಾ ನಕ್ಷತ್ರಗಳು;

ವಸುಮತಿ ಉಡುಪ

ಡಾ.ಕೆ.ವಿ. ಸುಬ್ಬಣ್ಣ ಪ್ರಶಸ್ತಿ: ಪಂಚಾವರಂ (ನಾಟಕ): ಮಹಾಂತೇಶ ನವಲಕಲ್‌ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರಶಸ್ತಿ: ತಿರೆಯ ತೀರಗಳಲ್ಲಿ ನಾ ಕಂಡಂತೆ (ಪ್ರವಾಸ

ಕಥನ): ಎಸ್.ಪಿ. ವಿಜಯಲಕ್ಷ್ಮೀ

ಹಸೂಡಿ ವೆಂಕಟಶಾಸ್ತ್ರಿ ಪ್ರಶಸ್ತಿ: ಡೇಟಾ ದೇವರು ಬಂದಾಯ್ತು (ವಿಜ್ಞಾನ ಕೃತಿ); ಗುರುರಾಜ್ ಎಸ್. ದಾವಣಗೆರೆ ನಾ.ಡಿಸೋಜ ಪ್ರಶಸ್ತಿ: ಕಥೆಗಳ ತೋರಣ ಭಾಗ-2 (ಮಕ್ಕಳ ಸಾಹಿತ್ಯ): ಶಾಲಿನಿ ಮೂರ್ತಿ.

ಕೃತಕ ಬುದ್ದಿಮತ್ತೆ ಬಳಕೆ ಮಾನವಸಮುದಾಯಕ್ಕೆ ಸಂಚಕಾರ ತರಬಾರದು

0

“ಕೃತಕ ಬುದ್ಧಿಮತ್ತೆಯು ಮಾನವ ಉದ್ಯೋಗಗಳಿಗೆ ಸಂಚಕಾರ ತರಬಾರದು” -ವಿಜ್ಞಾನ ವಿಚಾರ ಸಂಕಿರಣದ ಸಮಾರೋಪದಲ್ಲಿ ಬಿಇಎ ಖಜಾಂಚಿ ನಿರಂಜನ್- ದಾವಣಗೆರೆ.ಡಿ.5. ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಈಗಿನ ಕಂಪ್ಯೂಟರ್ ಯುಗದಲ್ಲಿ ಅನುಷ್ಠಾನಕ್ಕೆ ಬರುತ್ತಿದ್ದು ಇದು ಯಾವುದೇ ಕಾರ್ಯಗಳ ನೈಪುಣ್ಯತೆಯನ್ನು ಹೆಚ್ಚಿಸಬೇಕೇ ಹೊರತು ಮಾನವೀಯ ಉದ್ಯೋಗಗಳಿಗೆ, ಕೆಲಸ ಮಾಡುವ ಕೈಗಳಿಗೆ ಸಂಚಕಾರ ತರಬಾರದು ಎಂದು ಬಾಪೂಜೆ ವಿದ್ಯಾ ಸಂಸ್ಥೆಯ ಖಜಾಂಚಿ ಎ.ಎಸ್.ನಿರಂಜನ ಅಭಿಪ್ರಾಯಪಟ್ಟರು. ಅವರು ದಿ.ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ 14ನೇ ವಿಜ್ಞಾನ ವಿಚಾರ ಸಂಕಿರಣದ ಸಮರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಆರೋಗ್ಯ ಕ್ಷೇತ್ರ, ಬ್ಯಾಂಕಿಂಗ್, ಕೃಷಿ, ಶಿಕ್ಷಣ, ಮಾರ್ಕೆಟಿಂಗ್,ಕೈಗಾರಿಕೆ, ರೋಬೋಟ್ಗಳ ತಯಾರಿಕೆ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯ ಪ್ರಯೋಜನ ಪಡೆಯುವಲ್ಲಿ ಮುಂದಾಗಿದೆ, ಇವುಗಳ ಬಳಕೆ ಹೆಚ್ಚಾದಂತೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಬಾರದು, ದುಡಿಯುವ ಕೈಗಳಿಗೆ ಎಂದಿನಂತೆ ಕೆಲಸ ಇರಬೇಕು, ಕೃತಕ ಬುದ್ಧಿಮತ್ತೆಯಿಂದ ಕೆಲಸದಲ್ಲಿನ ಕೌಶಲ್ಯ ಹೆಚ್ಚಿ ಗುಣಮಟ್ಟ ವೃದ್ಧಿಯಾಗಬೇಕು ಎಂದರು. ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿದ್ದು ದೇಶದಲ್ಲಿ ಕರ್ನಾಟಕ ಸೈಬರ್ ಅಪರಾಧ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದೆ, ವಾಟ್ಸಾಪ್ ಬಳಕೆದಾರರು ಆನ್ಲೈನ್ ವ್ಯವಹಾರ ಮಾಡುವವರು ಹಿಂದೆಂದಿಗಿಂತಲೂ ಈಗ ಬಹಳ ಜಾಗರೂಕರಾ ಗಿರಬೇಕಾಗಿದೆ ಈ ನಿಟ್ಟಿನಲ್ಲೂ ಸಹ ವಿಶೇಷ ಚಿಂತನೆಗಳನ್ನು ನಡೆಸಲು ಈ ವಿಜ್ಞಾನ ವಿಚಾರ ಸಂಕಿರಣ ಸಹಕಾರಿಯಾಗಿರುವುದು ಸ್ವಾಗತಾರ್ಹ ಎಂದರು.

ಮುಖ್ಯ ಅತಿಥಿಗಳಾಗಿ ಬಾಪೂಜಿ ಪ್ರೌಢಶಾಲೆಯ ಪ್ರಾಚಾರ್ಯ ಜೆ ಪದ್ಮನಾಭ, ಗುತ್ತೂರು ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಶ್ರೀಧರ ಮಯ್ಯ ಉಪಸ್ಥಿತರಿದ್ದು ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಪಿ. ರುದ್ರಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಣಿತ ಉಪನ್ಯಾಸಕ ಕೆ.ಸಿ. ಶಿವಶಂಕರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕಾವ್ಯ ಮತ್ತು ಸಂಗಡಿಗರು ಹಾಡಿದರು. ರಸಾಯನ ಶಾಸ್ತ್ರ ಉಪನ್ಯಾಸಕ ಶಿವಕುಮಾರ್ ಬಿ.ಎಂ. ಸ್ವಾಗತ ಕೋರಿದರು. ವಿದ್ಯಾರ್ಥಿಗಳು ಕಾರ್ಯಕ್ರಮದ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಉಪನ್ಯಾಸಕಿ ಶರ್ಮಿಳ ಎಲ್.ಎಸ್.ಹಾಗೂ ಶ್ರುತಿ ಕೆ.ಎಸ್. ಮಾಡಿದರು. ಉಪನ್ಯಾಸಕ ಕೆ ಸಿ ವಿಜಯಕುಮಾರ್ ವಂದನೆ ಸಲ್ಲಿಸಿದರು.

ವರದಿ ಕೃಪೆ – -ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ-