Saturday, August 8, 2026
Saturday, August 8, 2026
Home Blog Page 135

ಹುಲಿಕಲ್ ಘಾಟಿ‌ ಕುಸಿತ: ಗುತ್ತಿಗೆದಾರರು ಗೈಡ್ ಲೈನ್ಸ್ ಅನುಸರಿಸಿಲ್ಲ- ಸತೀಶ್ ಜಾರಕಿಹೊಳಿ

0

ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿಯವರು ತೀರ್ಥಹಳ್ಳಿಯಲ್ಲಿ ಹುಲಿಕಲ್ ಘಾಟಿ ಕುಸಿತದಲ್ಲಿ 3 ಸಾವುಗಳಾಗಿರುವ ವಿಚಾರವಾಗಿ ಮಾತನಾಡಿದರು.

ನಾನು ಘಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ‌. ಯಾವ ಕಾರಣಕ್ಕೆ ಆಗಿದೆ ಹಾಗೂ ಮುಂದೆ ಶಾಶ್ವತವಾಗಿ ಈ ರೀತಿಯ ಘಟನೆಗಳು ಆಗದಂತೆ ನೋಡಿಕೊಳ್ಳಲು ಬೇಕಾದ ಚರ್ಚೆ ನಡೆಸಲಿದ್ದೇನೆ. ಸರ್ಕಾರದಿಂದ ಪರಿಹಾರ ಕೊಡುವ ಕೆಲಸ ಈಗಾಗಲೇ ಆಗಿದೆ ಎಂದಿದ್ದಾರೆ.

ಇಲಾಖೆಯಿಂದ ಗೈಡ್ ಲೈನ್ಸ್ ಕೊಡಲಾಗಿದ್ದು, ಅದನ್ನ ಗುತ್ತಿಗೆದಾರರು ಅನುಸರಿಸಬೇಕಿತ್ತು. ಎರಡು ಕಡೆಯಿಂದಲೂ ತಪ್ಪಾಗಿದೆ ಎಂದರು.

ಶಿಕಾರಿಪುರದ ಬಳಿ ಬಸ್ ಅಪಘಾತ 12 ಮಂದಿಗೆ ತೀವ್ರ ಗಾಯ, ಸಂಸದ ರಾಘವೇಂದ್ರ ಅವರಿಂದ ಗಾಯಾಳುಗಳಿಗೆ ಸಾಂತ್ವನ

0

ಇಂದು ಶಿಕಾರಿಪುರದ ಬಳಿ ಬಸ್ ಅಪಘಾತದಲ್ಲಿ ನಡೆದಿದ್ದು, ಸುಮಾರು 12 ಜನ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿವೆ.

ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಬೈಕ್ ಅಪಘಾತ ತಪ್ಪಿಸಲು ಹೋಗಿ ಖಾಸಗಿ ಬಸ್ ಪಲ್ಟಿ ಯಾಗಿದ್ದು ಹಲವರಿಗೆ ಗಾಯಗಳಾಗಿವೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಕುಮದ್ವತಿ ಕಾಲೇಜು ಮುಂಭಾಗದಲ್ಲಿ ಈ ಘಟನೆ ಸಂಭವಿಸಿದೆ.

ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬರುತ್ತಿದ್ದ ವಿಜಯ ಬಸ್ ಪಲ್ಟಿ ಹೊಡೆದಿದ್ದು 12ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಬಸ್ ನ ಮುಂಭಾಗದಲ್ಲಿದ್ದ ಬೈಕ್ ಸವಾರ ಹಂಪ್ ತಪ್ಪಿಸಲು ಹೋಗಿ ಬಸ್ಸಿನ ಬಲಭಾಗಕ್ಕೆ ತಿರುಗಿಸಿದ ಪರಿಣಾಮ, ಬಸ್ ಚಾಲಕ ಅಪಘಾತ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ

ಶಿವಮೊಗ್ಗ ಆಲ್ಕೊಳದ ಬಂಗಾರಪ್ಪ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಇಕ್ಕೆಲ ತಿಂಡಿಗಾಡಿಗಳ‌ ತೆರವು

0

ಶಿವಮೊಗ್ಗ ನಗರದ ಅಲ್ಕೋಳ ಸರ್ಕಲ್‌ನಿಂದ ಡಿ.ವಿ.ಜಿ. ಸರ್ಕಲ್‌ವರೆಗೆ ಇರುವ ಶ್ರೀ ಎಸ್. ಬಂಗಾರಪ್ಪ ರಸ್ತೆಯಲ್ಲಿ, ಸಾರ್ವಜನಿಕ ವಾಹನಗಳು ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ರಸ್ತೆಯ ಎರಡೂ ಬದಿಗಳ ಪುಟ್‌ಪಾತ್ ಹಾಗೂ ರಸ್ತೆಯ ಮೇಲಿಟ್ಟಿದ್ದ ತಿಂಡಿ ಗಾಡಿಗಳು ಮತ್ತು ಹಣ್ಣಿನ ಅಂಗಡಿಗಳನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳ ಸಹಕಾರದೊಂದಿಗೆ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಜೊತೆಗೆ, ಎಲ್ಲಾ ಪುಟ್‌ಪಾತ್ ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ, ಸೋಮವಾರ ಈ ಪ್ರದೇಶದ ವ್ಯಾಪಾರಸ್ಥರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

Asha Bhosle ಭಾರತೀಯ‌ “ಇನಿದನಿ “ಆಶಾ ಭೋಂಸ್ಲೆ ಇನ್ನಿಲ್ಲ.!

0

Asha Bhosle ಭಾರತದ ಜನಪ್ರಿಯ ಗಾಯಕಿ ಆಶಾ ಭೋಂಸ್ಲೆ (92). ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಭಾನುವಾರ(ಏ.12) ನಿಧನರಾದರು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದಾರೆ.

ಇತ್ತೀಚೆಗೆ ಹೃದಯ ಸ್ತಂಭನದಿಂದಾಗಿ ಬೀಚ್ ಕ್ಯಾಂಡಿ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಅವರ ಆರೋಗ್ಯ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು.

ಅವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ‘ಅಭಿ ನಾ ಜಾವೋ ಛೋಡ್ ಕರ್’, ‘ಇನ್ ಆಂಖೋನ್ ಕಿ ಮಸ್ತಿ’, ‘ದಿಲ್ ಚೀಜ್ ‘, ‘ಪಿಯಾ ತೂ ಅಬ್ ತೋ ಆಜಾ’, ‘ದುನಿಯಾ ಮೇ ಗೋನ್ ಕೋ’ ಮತ್ತು ‘ಜರಾ ಸಾ ಝೂಮ್ ಲೂನ್ ಮೈ’ ಸೇರಿದಂತೆ ಹಲವು ಹಾಡುಗಳು ಸೇರಿವೆ. ಮೀನಾ ಕುಮಾರಿ, ಮಧುಬಾಲಾ, ಝೀನತ್ ಅಮಾನ್ ಅವರಿಂದ ಹಿಡಿದು ಕಾಜೋಲ್‌, ಊರ್ಮಿಳಾ ಮಾತೋಂಡ್ಕ‌ರ್ ಮತ್ತು ದಕ್ಷಿಣದ ನಟಿಯರಾದ ಪದ್ಮನಿ ಮತ್ತು ವೈಜಯಂತಿಮಾಲಾ ಅವರವರೆಗೆ ಅನೇಕ ಖ್ಯಾತ ನಟಿಯರಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.

ಎಂಟು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನವನ್ನು ಹೊಂದಿದ್ದ ಆಶಾ ಭೋಸ್ಥೆ, ವಿವಿಧ ಭಾರತೀಯ ಭಾಷೆಗಳಲ್ಲಿ 12 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.

ವಿಶಿಷ್ಟ ಧ್ವನಿ ಹಾಗೂ ವಿಭಿನ್ನ ಗಾಯನ ಶೈಲಿಯಿಂದಲೇ ಹೆಸರುವಾಸಿಯಾಗಿದ್ದರು. ಅವರಿಗೆ ಪದ್ಮ ವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

ಅತ್ಯಧಿಕ ರೆಕಾರ್ಡಿಂಗ್ ಹಾಡುಗಳ ಒಡತಿ ಎಂಬ ಗಿನ್ನಿಸ್ ದಾಖಲೆಯನ್ನೂ ಬರೆದಿದ್ದರು.

ಅಕ್ಷರಾಂಜಲಿ….-ವಿನಯ್, ಶಿವಮೊಗ್ಗ

0

1971ರಲ್ಲಿ hippy sensation ಇದ್ದ ಕಾಲ . ಹರೇ ರಾಮ ಹರೇ ಕೃಷ್ಣ ಅನ್ನುವ ಹಿಂದಿ ಚಿತ್ರ ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿತ್ತು. ಅದರಲ್ಲಿನ ಎಂದು ಹಾಡು ಧಮ್ ಮರೋ ಧಮ್ ಮಿಠ್ ಜಾಯೇ ಗಮ್” ಒಂದು ರೀತಿಯಲ್ಲಿ ಹವಾ ಸೃಷ್ಟಿಸಿತ್ತು !!! ಎಲ್ಲಿನೋಡಿದರೂ ಅದೇ ಹಾಡನ್ನ ಕೇಳ್ತಿದ್ರಂತೆ !!! R D Burman ಸಂಗೀತದಲ್ಲಿ ಅಂಥಹಾ ಮೋಡಿ ಇತ್ತು . ಆ ಹಾಡಿನ ಒಂದು ಸಾಲು ಹೀಗಿದೆ ….

“ದುನಿಯಾ ನೇ ಹಮ್ ಕೋ ದಿಯಾ ಕ್ಯಾ ?…. ದುನಿಯಾ ಸೇ ಹಮ್ ನೇ ಲಿಯಾ ಕ್ಯಾ ? ಹಮ್ ಸಬ್ ಕಿ ಪರವಾ ಕರೇ ಕ್ಯೂ ? ಸಬನೆ ಹಮರಾ ಕೀಯಾ ಕ್ಯಾ ???? (ಈ ಜಗತ್ತು ನನಗೇನು ಕೊಟ್ಟಿದೆ? ಈ ಜಗತ್ತಿನಿಂದ ನಾನೇನು ಪಡೆದೆ ? ನಾನೇಕೆ ಎಲ್ಲರ ಕುರಿತು ಯೋಚಿಸಲಿ ? ಎಲ್ಲರೂ ನನಗೇನು ಮಾಡಿದ್ದಾರೆ ?! ) …. ಈ ಪ್ರಸಿದ್ಧ ಗೀತೆಯನ್ನು ಹಾಡಿದ ಆಶಾ ಭೋಂಸ್ಲೇ ಬದುಕಿದ್ದೂ ಒಂದು ರೀತಿ ಅದೇ ದಾಟಿಯಲ್ಲಿ !!!! Just ಬಿಂದಾಸ್ …..

1971ರಲ್ಲೇ ಬಂದ ಈ ಗೀತೆ my life – my choice ಅನ್ನುವ ಇವತ್ತಿನ ಅದೆಷ್ಟೋ ಮಂದಿಯ ಜೀವನಕ್ಕೆ ಹೆಚ್ಚು ಹತ್ತಿರವಾಗಿದೆ .

ಅಕ್ಕ ಲತಾ ಮಂಗೇಶ್ಕರ್ ಸ್ವರ ಲೋಕದ ಸಾಮ್ರಾಜ್ಞಿ!! ಅಕ್ಕನದು ಆಚಾರ , ವಿಚಾರ , ಸಂಪ್ರದಾಯ, ಸಭ್ಯತೆಯ ಬೇಲಿಯೊಳಗಿನ ಬಿಳಿಯ ಮಲ್ಲಿಗೆಯಂತಹ ಶುಭ್ರ ಜೀವನ . ತಂದೆಯ ನೆರಳಿಲ್ಲದ ಕಷ್ಟಕರ ದಿನಗಳ ಬಾಲ್ಯ . ತನಗೆ ಅಕ್ಕನ ಕುರಿತಾಗಿ ಅಪಾರ ಅಭಿಮಾನವಿದ್ದರೂ ಅಕ್ಕನ ಆಸರೆಯಿಂದ ಹೊರ ಬಂದು ತನ್ನದೇ ಅಸ್ಥಿತ್ವ ಕಂಡುಕೊಳ್ಳುವ ಹಂಬಲ . ಮನೆಯವರ ವಿರೋಧದ ನಡುವೆ ಪ್ರೀತಿಸಿದವನ ಜೊತೆ ಮದುವೆ , ಮದುವೆಯ ಬಂಧ ಬಂಧನವಾದಾಗ ಧಿಕ್ಕರಿಸಿ ಹೊರ ಬಂದ ದಿಟ್ಟೆ . ಹಾಡುವ ಶೈಲಿಯಲ್ಲೂ ಅಕ್ಕನನ್ನು ಅನುಕರಿಸದೇ ತನ್ನದೇ ಆದ ಸೊಗಡನ್ನು ಸೃಷ್ಟಿಸಿಕೊಂಡ ಪ್ರತಿಭೆ . ಅಕ್ಕ ಹಾಡದ ಅದೆಷ್ಟೋ ಜನಪ್ರಿಯ ಕ್ಯಾಬರೆ ಸಾಲುಗಳಿಗೆ ಧ್ವನಿಯಾದ ಹೆಗ್ಗಳಿಕೆ . Versatile ಎಂಬ ವೈವಿಧ್ಯತೆಗೆ ಪರ್ಯಾಯವಾಗಿ ಬೆಳೆದ ಗಾಯಕಿ.

ಅದು ಮರಾಠಿ ಅಭಂಗ್, ಸಂತ ವಾಣಿ, ಭಾವಗೀತ್ , ಲಾವಣಿ , ಸಿನಿಮಾ ಗೀತೆ , ಶಾಸ್ತ್ರೀಯ ಗಾಯನ , ಗಝಲ್ , ಇಂಡಿ ಪಾಪ್ , western, fusion ಮುಂತಾದ ಯಾವುದೇ ಪ್ರಕಾರವನ್ನು ಸಮರ್ಥವಾಗಿ ಹಾಡಬಲ್ಲ ಛಾತಿ. ಮರಾಠಿ, ಹಿಂದಿ , ಬಾಂಗ್ಲ , ಕನ್ನಡ ಸೇರಿದಂತೆ ಹತ್ತು ಹಲವಾರು ಭಾಷೆಗಳಲ್ಲಿ ಹನ್ನೊಂದು ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಜೀವ ಕೊಟ್ಟ ಗಾಯಕಿ . ಜೀವನಕ್ಕೆ ಸಂಗಾತಿ ಬೇಕೆನ್ನಿಸಿದಾಗ ಮತ್ತೆ R. D ಬರ್ಮನ್ ಎಂಬ ಸಂಗೀತ ಮಾಂತ್ರಿಕನ ಕೈಹಿಡಿದ ಗಟ್ಟಿಗತ್ತಿ .

ಉಮ್ರಾವ್ ಜಾನ್ , ಇಝಾಜತ್ ಹಾಡುಗಳ ಮೂಲಕ ಹೊಸ ಎತ್ತರಕ್ಕೆ ಬೆಳೆದ ಕಲಾವಿದೆ …..ಅಂದಿನ ನೂತನ್ ನರ್ಗಿಸಿನಿಂದ ಹಿಡಿದು ಇಂದಿನ ಊರ್ಮಿಳ – ಕಾಜಲ್ ವರೆಗಿನ ನಾಯಕಿಯರಿಗೆ ಧ್ವನಿಯಾದ ಹಿರಿಮೆ . ಅಂದಿನ O P ನಯ್ಯರ್ ನಿಂದ ಇಂದಿನ A R ರೆಹೆಮಾನ್ ವರೆಗಿನ ಸಂಗೀತ ನಿರ್ದೇಶಕರಿಗೆ ಜೊತೆಯಾದ ಮೇರು ಕಲಾವಿದೆ .

ದಾದಾ ಸಾಹೇಬ್ ಫಾಲ್ಕೆ , ಪದ್ಮ ವಿಭೂಷಣ ಈ ಕಲಾ ತಪಸ್ವಿಗೆ ಸಂದ ಅಸಂಖ್ಯಾತ ಉಪಾದಿಗಳಲ್ಲಿ ಕೆಲವು ಮಾತ್ರ ……

ಒಟ್ಟಿನಲ್ಲಿ ನಮ್ಮಂತಹ ಲಕ್ಷಾಂತರ ಅಭಿಮಾನಿಗಳಿಗೆ ಆಶಾ ಭೋಂಸ್ಲೇ ಎಂದರೆ ಅದು ಬರೀ ಹೆಸರಲ್ಲ , ವ್ಯಕ್ತಿಯಲ್ಲ …. ಒಂದು phenomenon …. ಒಂದು ದೃಷ್ಟಾಂತ …. ತನ್ನದೇ ಷರತ್ತಿನಲ್ಲಿ ಬದುಕನ್ನು ಸಂಭ್ರಮಿಸಿ ತೆರಳಿದ ನಿಜ ಕಲಾವಿದೆಗೆ ನಮೋನಮಃ

CM Siddharamaiah ಇಂದಿನ ಪತ್ರಕರ್ತರು ಗಾಂಧೀಜಿ ಮತ್ತು ಅಂಬೇಡ್ಕರ್ ಆವರ ಆಶಯಗಳನ್ನರಿತು ಅವರಂತೆ ಕಾರ್ಯ ನಿರ್ವಹಿಸಬೇಕು- ಮುಖ್ಯಮಂತ್ರಿ ಸಿದ್ಧರಾಮಯ್ಯ

0

CM Siddharamaiah ಪತ್ರಕರ್ತರು ಸದಾಕಾಲ ಜನಪರವಾಗಿ, ಸಮಾಜದ ಪರವಾಗಿರಬೇಕು. ಅಶಕ್ತರಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
ಬೀದರ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ‌ ಪತ್ರಕರ್ತರ ಸಂಘ ಬೀದರ ಜಿಲ್ಲಾ ಘಟಕದಿಂದ ಏಪ್ರಿಲ್ 11ರಂದು ಆರಂಭವಾದ 40ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಜನವಾಡ ರಸ್ತೆಯಲ್ಲಿನ ಝೀರಾ ಕನ್ವೆನ್ಶನ್ ಹಾಲನಲ್ಲಿ ಆಯೋಜ‌ನೆಯಾಗಿದ್ದ ಸಮಾರಂಭದಲ್ಲಿ, ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಸಂತಷದಿಂದ ಉದ್ಘಾಟಿಸಿದ್ದೇನೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, 35 ನಿಮಿಷಗಳಿಗು ಹೆಚ್ಚು ಕಾಲ ಮಾತನಾಡಿ ಪತ್ರಕರ್ತರಿಗೆ ಹಲವು ಕಿವಿಮಾತುಗಳನ್ನು ಹೇಳಿದರು.
ಪತ್ರಕರ್ತರು ಸಮಾಜ ತಿದ್ದುವ, ಜನತೆಯನ್ನು ಜಾಗೃತಗೊಳಿಸುವ ಕಾರ್ಯ ಮಾಡಬೇಕು. ಧ್ವನಿ ಇಲ್ಲದವರಿಗೆ ಧ್ವನಿ ಆಗಬೇಕು ಎಂದು ಒತ್ತಿ ಹೇಳಿದರು.
ನಮ್ಮ ಸಮಾಜದಲ್ಲಿ ಅನೇಕ ಜಾತಿಗಳು, ಧರ್ಮಗಳು, ಭಾಷೆಗಳಿವೆ. ಹಲವು ಸಂಸ್ಕೃತಿ ಇದೆ. ಇಂತಹ ಸಮಾಜದಲ್ಲಿ ನಾವು ಬದುಕಿದ್ದೇವೆ ಎಂಬುದನ್ನು ಅರಿತು ಎಲ್ಲರೂ ಒಪ್ಪುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದರು ಎಂದು ತಿಳಿಸಿದ ಮುಖ್ಯಮಂತ್ರಿಗಳು, ನಮ್ಮ ಸಂವಿಧಾನದ ಆಶಯಗಳು ಸಮಾಜದಲ್ಲಿ ಜಾರಿಯಾಗುತ್ತಿದೆಯಾ ಎಂದು ನೋಡುವ, ತಿಳಿಯುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದರು.
ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ ಅವರು ಸಹ ಪತ್ರಕರ್ತರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಪಡೆಯುವುದೇ ಅವರ ಮುಖ್ಯ ಉದ್ದೇಶವಾಗಿತ್ತು. ಅದಕ್ಕಾಗಿ ಗಾಂಧೀಜಿ, ಅಂಬೇಡ್ಕರ ಅವರು ಪತ್ರಿಕೆಯನ್ನು ಹೊರಡಿಸಿ ನೊಂದವರ ಧ್ವನಿಯಾಗಿ ಕೆಲಸ ಮಾಡಿದರು. ಇಂದಿನ ಪತ್ರಕರ್ತರು ಗಾಂಧೀಜಿಯವರ, ಅಂಬೇಡ್ಕರ ಅವರ ಆಶಯಗಳನ್ನು ಅರಿತು ಅವರಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ನಾವು ಚರಿತ್ರೆಯುದ್ದಕ್ಕೂ ಅನೇಕ ಸಾಧು-ಸಂತರ ಮಾತುಗಳನ್ನು ಕೇಳುತ್ತ ಬಂದಿದ್ದೇವೆ. ಅವರ ಮಾತಿನಂತೆ ನಾವು ನಡೆಯಬೇಕು. ನಮ್ಮ ಸಮಾಜದಲ್ಲಿ ಅನೇಕ ನೂನ್ಯತೆಗಳಿದ್ದು, ಅವುಗಳನ್ನು ಹೋಗಲಾಡಿಸಿ ಸಮಸಮಾಜ ಕಟ್ಟುವ ಕಾರ್ಯ ಮಾಡಬೇಕಿದೆ ಎಂದು ಸಲಹೆ ಮಾಡಿದರು.
ನಮ್ಮಲ್ಲಿ ಜಾತಿ ವ್ಯವಸ್ಥೆ ಈಗಲೂ ಇದೆ. ಸಮಸಮಾಜ ನಿರ್ಮಾಣಕ್ಕೆ ನಮ್ಮ ಅನೇಕ ಶರಣರು ಶ್ರಮಿಸಿದರು. ಸಮಸಮಾಜ ನಿರ್ಮಾಣ ಆಗಲೇಬೇಕು. ಇಲ್ಲದಿದ್ದರೆ ಅಸಮಾನತೆಯು ಹಾಗೆಯೇ ಉಳಿಯುತ್ತದೆ. ಆದರೆ, ಸಮಾಜದಲ್ಲಿ ಈ ಅಸಮಾನತೆಯು ನಿರಂತರ ಇರಲಿ ಎಂದು ಪಟ್ಟಭದ್ರರು ಬಯಸುತ್ತಾರೆ. ಮನುವಾದಿಗಳು ಹುಟ್ಟು ಹಾಕಿದ ಜಾತಿಯತೆಯು ಹೀಗೆಯೇ ಇರಬೇಕು ಎಂದು ಪಟ್ಟಭದ್ರರು ಬಯಸುತ್ತಾರೆ. ಅಸಮಾನತೆ ಇದ್ದರೆ ಶೋಷಣೆ ಮಾಡಲು ಅನುಕೂಲವಾಗುತ್ತದೆ ಎಂಬುದು ಪಟ್ಟಭದ್ರರ ಬುದ್ಧಿವಂತಿಕೆ. ಇಂತಹ ಸೂಕ್ಷ್ಮ ವಿಷಯಗಳನ್ನು ಪತ್ರಕರ್ತರು ಅರಿಯಬೇಕು ಎಂದರು.
ನಮ್ಮ ಮಕ್ಕಳಿಗೆ ವೈಚಾರಿಕತೆ, ವೈಜ್ಞಾನಿಕತೆ ಇಲ್ಲದ ಶಿಕ್ಷಣ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಬಸವಣ್ಣನವರು ಕರ್ಮ ಸಿದ್ದಾಂತವನ್ನು ತಳ್ಳಿ ಹಾಕಿದರು. ಬಸವಣ್ಣನವರು ತಿಳಿಸಿದ ಸಮಾಜಮುಖಿ ವಿಚಾರಗಳು ಪಸರಿಸಬೇಕು. ನಾವೆಲ್ಲರೂ ಮಾನವರಾಗಿ ಬದುಕಬೇಕು. ಮಾನವೀಯತೆ ಇರಬೇಕು.‌ ಮಾನವೀಯತೆ ಇದ್ದರೆ ಶೋಷಣೆಗೆ ಅವಕಾಶವಿರಲ್ಲ ಎಂದು ತಿಳಿದು ಸಮಾಜ ಒಡೆಯುವ ಪಟ್ಟಭದ್ರರನ್ನು ಹತ್ತಿಕ್ಕುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದರು.
‘ನೀನು ಬಡವನಾಗು’ ಎಂದು ಯಾವ ದೇವರೂ ಹೇಳುವುದಿಲ್ಲ. ದೇವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾನೆ. ಆದರೆ ದೇವರ ಹೆಸರಿನಲ್ಲಿ ಶೋಷಣೆ ನಡೆಯುತ್ತಿದೆ. ಮನುವಾದಿಗಳು, ಪಟ್ಟಭದ್ರರು ಇರುವ ಕಾರಣಕ್ಕೆ ನಮಗೆ
ವೈಚಾರಿಕ, ವೈಜ್ಞಾನಿಕ ಶಿಕ್ಷಣ ಸಿಗುವುದು ಕಷ್ಟವಾಗಿ ಪರಿಣಮಿಸಿದೆ. ಇಂತಹ ವಿಷಯಗಳನ್ನು ಪತ್ರಿಕೆಗಳು ತಿಳಿಸಿದರಷ್ಟೇ ಸಾಲದು; ಸಾಮಾಜ ಸುಧಾರಣೆ ಕಾರ್ಯಕ್ಕೆ ‌ನಿರಂತರ ಹೋರಾಡಬೇಕು ಎಂದರು.
ನಮ್ಮಲ್ಲಿ ಸಂವಿಧಾನ ಜಾರಿ ಬಂದಿದೆ. ಸಂವಿಧಾನದ ಆಶಯಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲು ಮನುವಾದಿಗಳು, ಪಟ್ಟಭದ್ರರು ಬಿಡುತ್ತಿಲ್ಲ. ನಮಗೆ ರಾಜಕೀಯ ಸ್ವಾತಂತ್ರ್ಯ ಸ್ವಲ್ಪ ಪ್ರಮಾಣದಲ್ಲಿ ದಕ್ಕಿದೆ. ಆರ್ಥಿಕ ಸ್ವಾತಂತ್ರ್ಯ ಸಿಗುತ್ತಿಲ್ಲ ಎಂದರು.
ಸಮಾಜದಲ್ಲಿ ಆರ್ಥಿಕತೆ, ಸಾಮಾಜಿಕತೆಗೆ ಚಲನಶೀಲತೆ ಸಿಕ್ಕಾಗಲೇ ಜಡತ್ವ ತೊಲಗುತ್ತದೆ. ಆರ್ಥಿಕ, ಸಾಮಾಜಿಕ ಚಲನಶೀಲತೆ ತರುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದರು.
CM Siddharamaiah ಬಹುತೇಕ ಪತ್ರಕರ್ತರು ಕಾರ್ಪೋರೇಟ ವಲಯದ ಹಿಡಿತದಲ್ಲಿದ್ದು, ಮುಕ್ತವಾಗಿ ಬರೆಯಲು ಅವಕಾಶವಿಲ್ಲದಂತಹ ಒತ್ತಡ ಎದುರಿಸುವ ಪರಿಸ್ಥಿತಿಯೂ ಇದೆ. ಪತ್ರಕರ್ತರಿಗೆ ಬರೆಯಲು ಮುಕ್ತ ಅವಕಾಶವಿರಬೇಕು.
ವಸ್ತುನಿಷ್ಠವಾದ ವಿಷಯ, ಸತ್ಯವನ್ನು ಜನರ ಮುಂದೆ ಇಡುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು. ಯಾವುದೇ ವಿಷಯ ಇರಲಿ ಶೋಧಿಸಿ, ದಾಖಲೆ ಕೇಳಿ ಬರೆಯಬೇಕು. ಊಹಾ ಮಾಧ್ಯಮ ಅಪಾಯಕಾರಿ. ಕ್ಷುಲ್ಲಕ ವಿಚಾರಗಳನ್ನು ಮುನ್ನೆಲೆಗೆ ತರಬಾರದು ಎಂದು ಅವರು ಸಲಹೆ ಮಾಡಿದರು.
ಒಂದು ಸಿರಿವಂತರ‌ ಪರ, ಮತ್ತೊದು ಬಡವರ ಪರ ಎನ್ನುವಂತಹ ಎರಡು ರೀತಿಯ ಆರ್ಥಿಕ ನೀತಿಗಳು ಜಾರಿಯಲ್ಲಿರಬೇಕು ಎಂದು ಪಟ್ಟಭದ್ರರು ಬಯಸುತ್ತಾರೆ.
ಬಡವರಿಗು ಸಹ ಕೊಂಡುಕೊಳ್ಳುವ ಆರ್ಥಿಕ ಶಕ್ತಿ ಬರಬೇಕು ಎಂದು ಪತ್ರಕರ್ತರು ಯೋಚಿಸುವಂತಾಗಬೇಕು. ಸಮಾಜದಲ್ಲಿ ಆರ್ಥಿಕ ಸಮಾನತೆ ತರುವ ಪ್ರಯತ್ನವನ್ನು ಪತ್ರಕರ್ತರು ಮಾಡಬೇಕು ಎಂದರು.
12ನೇ ಶತಮಾನದಿಂದಲೇ ಸಮಾಜ ಬದಲಾವಣೆ ಕಾರ್ಯ ಆಗುತ್ತಿದೆ. ಆದರೆ, ಸಮಾಜ ಇದುವರೆಗೆ ಏಕೆ ಬದಲಾಗುತ್ತಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು,
ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡದೆ ಇದ್ದರೆ ಮತ್ತೆ ನಾವು ಹಳೆಯ ವ್ಯವಸ್ಥೆಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್ ಅವರು ಮಾತನಾಡಿದರು.
ಸಂಘದ ಜಿಲ್ಲಾಧ್ಯಕ್ಷರಾದ ಆನಂದ ದೇವಪ್ಪ ಅವರು ಸ್ವಾಗತಿಸಿದರು.
ಸಮಾರಂಭದಲ್ಲಿ ಹಾರಕೂಡ
ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿಯ
ಬಸವಲಿಂಗ ಪಟ್ಟದ್ದೇವರು, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಸಂಸದರಾದ ಸಾಗರ ಖಂಡ್ರೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ, ಶಾಸಕರಾದ ಶರಣು ಸಲಗರ, ಡಾ.ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಶಿವಕುಮಾರ, ಮುಖಂಡರಾದ
ರಾಜಶೇಖರ ಪಾಟೀಲ,
ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಖದೀರ್, ಗಣ್ಯರಾದ ಸರ್ದಾರ ಬಲಬೀರ್ ಸಿಂಗ್, ಗುರುನಾಥ ಕೊಳ್ಳೂರ, ಹಿರಿಯ ಸಂಪಾದಕರಾದ ವಿಶ್ವೇಶ್ವರ ಭಟ್, ಸಂಘದ
ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ, ರಾಜ್ಯ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಮುಖಂಡರಾದ
ಸೋಮಣ್ಣ ಬೇವಿನಮರದ,
ಬಸವರಾಜ ಜಾಬಶೆಟ್ಟಿ, ಮೇಯರ್ ಗೌಸುದ್ದೀನ್, ಮಲ್ಲಿಕಾರ್ಜುನ ಬಿರಾದಾರ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದರು.
ನೆನಪಿನ ಕೈಪಿಡಿ ಬಿಡುಗಡೆ: ಸಮ್ಮೇಳನದ ನಿಮತ್ತ ಪ್ರಕಟಿಸಿದ ಸ್ಮರಣ ಸಂಚಿಕೆಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು. ಪತ್ರಕರ್ತರಾದ
ಶಶಿಕಾಂತ ಶೆಂಬೆಳ್ಳಿ ಹಾಗೂ
ಶ್ರೀಕಾಂತ ಬಿರಾದಾರ ಸಂಪಾದಿಸಿದ ‘ಶರಣ ಸೂಫಿ ಸಿರಿ’ ವಿಶೇಷ ಸಂಚಿಕೆಯನ್ನು ಸಹ ಇದೆ ವೇಳೆ ಬಿಡುಗಡೆ ಮಾಡಲಾಯಿತು.

ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

0

ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಹೊಸನಗರ ತಾಲ್ಲೂಕು ಮಾರಿಗುಡ್ಡ ಸ್ಮಶಾನ ರಸ್ತೆ ಕಾಮಗಾರಿ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.

ಹೊಸನಗರ ಪಟ್ಟಣ ಪಂಚಾಯಿತಿ ವಾರ್ಡ್ ನಂಬರ್ 9 ಆರ್ ಕೆ ರಸ್ತೆಯ ಮರುಡಾಂಬರಿಕರಣ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.

ಹೊಸನಗರ ಪಟ್ಟಣದ ವಾರ್ಡ್ ನಂ 6 ಆಶ್ರಯ ಕಾಲೋನಿಯ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.

ಹೊಸನಗರ ಪಟ್ಟಣ ಪಂಚಾಯಿತಿಯ ಉದ್ದಿಮೆ ನಿಧಿಯಡಿ ಮಂಜೂರಾಗಿರು 2 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.

ಹೊಸನಗರದ ನೆಹರೂ ಮೈದಾನದಲ್ಲಿ ಪುಡ್ ಕೋರ್ಟ್ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.

ನ್ಯಾಯವಂಚಿತರಿಗೆ ನ್ಯಾಯ ಒದಗಿಸುವ ಪತ್ರಕರ್ತರನ್ನ ನಾವೆಲ್ಲಾ ಗೌರವಿಸೋಣ- ಶ್ರೀನಿಜಗುಣಾನಂದ ಸ್ವಾಮೀಜಿ

0

ಕರ್ನಾಟಕ ಕಾರ್ಯನಿರತ‌ ಪತ್ರಕರ್ತರ ಸಂಘ ಬೀದರ ಜಿಲ್ಲಾ ಘಟಕದ 40ನೇ ರಾಜ್ಯ ಸಮ್ಮೇಳನದ ಮೆರವಣಿಗೆಗೆ ಏಪ್ರಿಲ್ 11 ರಂದು ಅದ್ದೂರಿ ಚಾಲನೆ ಸಿಕ್ಕಿತು.
ಬೀದರ ನಗರದ ಶ್ರೀ ಬಸವೇಶ್ವರ ಸಭಾಂಗಣದಲ್ಲಿ ನಡೆದ ವೇದಿಕೆಯಲ್ಲಿ ನೆರೆದಿದ್ದ ಸ್ವಾಮೀಜಿಗಳು, ಶಾಸಕರು, ಹಿರಿಯ ಪತ್ರಕರ್ತರು ಮತ್ತು ಇನ್ನೀತರ ಗಣ್ಯರು ಶಾಂತಿ ಸಂದೇಶದ 40 ಪರಿವಾಳಗಳನ್ನು ಹಾರಿ ಬಿಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ವೇದಿಕೆ ಮೇಲಿದ್ದ ಪತ್ರಕರ್ತರು ಮತ್ತು ಗಣ್ಯರು ತಲೆಗೆ ಪೇಟಾಸುತ್ತಿ 40‌ನೇ ರಾಜ್ಯ ಸಮ್ಮೇಳನದ ಸಾಂಕೇತಿಕವಾಗಿ 40 ಕೊಡಿಗಳನ್ನು ಹಿಡಿದು ಗಮನ ಸೆಳೆದರು.
ಪತ್ರಕರ್ತರನ್ನು ಗೌರವಿಸೋಣ: ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಬೈಲೂರನ ನಿಷ್ಕಲ‌ ಮಂಟಪದ ಶ್ರೀ
ನಿಜಗುಣಾನಂದ ಸ್ವಾಮೀಜಿ ಅವರು ಮಾತನಾಡಿ, ದೇವರು ಕಣ್ಣು ಮುಚ್ಚಿದಾಗ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ ಎನ್ನುವ ಭಾವನೆ ಸಮಾಜದಲ್ಲಿ ಬೇರೂರಿದೆ. ಒಳ್ಳೆಯ ಪತ್ರಕರ್ತರನ್ನು
ಗೌರವಿಸುವ ದೊಡ್ಡ ಕೆಲಸವನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ವೇಗವಾಗಿ ಬೆಳೆಯುತ್ತಿರುವ ಕಾಲಕ್ಕೆ ತಕ್ಕಂತೆ ಪತ್ರಿಕಾ ರಂಗವೂ ಬೆಳೆಯುತ್ತಿದೆ. ನ್ಯಾಯ ಇಲ್ಲದವರಿಗೆ ನ್ಯಾಯ ಒದಗಿಸುವ ಪತ್ರಕರ್ತರನ್ನು ನಾವೆಲ್ಲರೂ ಗೌರವಿಸೋಣ ಎಂದರು.
ಸಮಾರಂಭದಲ್ಲಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಎಲ್ಲ ರಂಗದಲ್ಲೂ ನ್ಯಾಯ ಪೀಠವನ್ನು ಪವಿತ್ರ ಎಂದೇ ಭಾವಿಸಿದ್ದೇವೆ. ಅದಕ್ಕೂ ಮಿಗಿಲಾದ ಕಾರ್ಯವನ್ನು ಪತ್ರಿಕಾರಂಗವು ಮಾಡುತ್ತಿದೆ ಎಂದರು.
ಸಮಾರಂಭದಲ್ಲಿ ಪೌರಾಡಳಿತ ಸಚಿವರಾದ ರಹೀಂ ಖಾನ್, ಪ್ರಜಾಪಿತ ಬ್ರಹ್ಮಕುಮಾರಿ ಕೇಂದ್ರದ ಬಿ ಕೆ ಪ್ರತಿಮಾ ಬಹೇನಜಿ, ಬಸವ ಪೀಠದ ಅಧ್ಯಕ್ಷರಾದ ಗಂಗಾಂಬಿಕೆ ಅಕ್ಕ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ‌ ತಗಡೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್, ಸಂಘದ ಜಿಲ್ಲಾಧ್ಯಕ್ಷರಾದ ಆನಂದ‌ ದೇವಪ್ಪ, ಅಡ್ಹಾಕ್ ಕಮಿಟಿಯ ಸದಸ್ಯರಾದ ಅಪ್ಪರಾವ್ ಸೌದಿ, ಶಿವಕುಮಾರ ಸ್ವಾಮಿ,
ಮೆರವಣಿಗೆ ಸಮಿತಿ ಪ್ರಧಾನ ಸಂಚಾಲಕರಾದ
ರಜನೀಶ ವಾಲಿ, ಹಿರಿಯ ಪತ್ರಕರ್ತರಾದ ಶಿವಶರಣಪ್ಪ
ವಾಲಿ, ಗಂಧರ್ವ ಸೇನಾ,
ಮಾಳಪ್ಪ ಅಡಸಾರೆ, ಅಲಿ ಬಾಬಾ, ಅಶೋಕುಕುಮಾರ ಕರಂಜಿ, ಮಾರುತಿ ಭಾವಿದೊಡ್ಡಿ, ಸಿದ್ದು ಸ್ವಾಮಿ, ದೀಪಕ್ ವಾಲಿ, ಅಮರೇಶ ಎಸ್ ಚಿದ್ರಿ, ಹಾಜಿ ಪಾಶಾ, ಕರಣಕುಮಾರ ಚಂದನ, ಶ್ರೀಕಾಂತ ಬಿರಾದಾರ, ಶಶಿಕಾಂತ ಎಸ್ ಶೆಂಬೆಳ್ಳಿ,
ವೀರಶೆಟ್ಟಿ ಕುಂಬಾರ ಸೇರಿದಂತೆ ಇತರರು ಇದ್ದರು.
ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆಯು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ನಗರದ ಜನವಾಡ ರಸ್ತೆಯ ಝೀರಾ ಕನ್ವೆನ್ಶನ್ ಹಾಲಗೆ ಬಂದು ಸೇರಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿಸಿದ್ದ ಕಲಾ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಪತ್ರಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

Bapuji Institute of Hi-Tech Education ಯಶಸ್ವಿ ಬದುಕಿಗೆ ಶಾಲಾ ಪಾಠಕ್ಕಿಂತ ಜೀವನ ಪಾಠವೇ ಮುಖ್ಯ- ಡಾ.ರಾಹುಲ್ ದೇವರಾಜ್

0

Bapuji Institute of Hi-Tech Education ಜಾಗತಿಕ ಸವಾಲುಗಳನ್ನೆದುರಿಸುತ್ತಾ ಬದುಕಿನಲ್ಲಿ ಯಶಸ್ಸು ಸಾಧಿಸಲು ಶಾಲಾ ಪಾಠಕ್ಕಿಂತ ಜೀವನ ಪಾಠವೇ ಮುಖ್ಯ ಎಂದು ಸಮಾಜ ಕಾರ್ಯಕರ್ತ ಡಾ. ರಾಹುಲ್ ದೇವರಾಜ್ ಹೇಳಿದರು.

ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ನ ವಾಣಿಜ್ಯ ವಿಭಾಗದ ಬಿಕಾಂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಪ್ರೌಢಾವಸ್ಥೆಯಲ್ಲಿನ ನಿರ್ಧಾರಗಳು ಸ್ವಂತದ್ದಾಗಿರಬೇಕೇ ವಿನಹ ಮತ್ತೊಬ್ಬರ ಅನುಭವದ ಎರವಲು ಅಭಿಪ್ರಾಯಗಳಾಗಿಬಾರದು, ಹಣ ಮತ್ತು ಅಧಿಕಾರಕ್ಕಿಂತ ಜ್ಞಾನ ಮತ್ತು ಸೇವೆಗೆ ಮೌಲ್ಯ ಜಾಸ್ತಿ ಎಂದರಲ್ಲದೆ ಮನುಷ್ಯ ಶಕ್ತಿಗಿಂತ ಮಿಗಿಲಾದ ದೈವಶಕ್ತಿ ಒಂದಿದೆ, ಅದು ನಮ್ಮ ಬದುಕಿಗೆ ಭರವಸೆ ಕೊಡಬಲ್ಲದು ಎಂದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ. ಅಥಣಿ ಎಸ್ ವೀರಣ್ಣನವರು ಮಧ್ಯಪ್ರಾಚ್ಯದ ಯುದ್ಧವು ಪ್ರತಿಷ್ಠೆಯ ಹಾಗೂ ಸ್ವಾರ್ಥದ ಅಮಾನವೀಯ ನಡವಳಿಕೆಯಾಗಿದ್ದು ವಿಶ್ವವೇ ಇದರ ತೊಂದರೆ ಅನುಭವಿಸುತ್ತಿದೆ ಎಂದರಲ್ಲದೆ ಕೆಲಸ ಹುಡುಕಿ ಹೋಗುವುದಕ್ಕಿಂತ ನೂರಾರು ಜನಕ್ಕೆ ಕೆಲಸ ಕೊಡುವಂತಾಗಿರಿ ಎಂದು ಪದವೀಧರರಿಗೆ ಕರೆ ಕೊಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ. ಬಿ ವೀರಪ್ಪನವರ ಉಪಸ್ಥಿತಿಯಲ್ಲಿ ನಿರ್ದೇಶಕ ಡಾ.ಸ್ವಾಮಿ ತ್ರಿಭವನಾನಂದ ಸ್ವಾಗತ ಕೋರಿದರು. ಭಾಗ್ಯಶ್ರೀ ಬಿ ಎನ್, ಭೂಮಿಕಾ ನಾಡಿಗೇರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಲಿಖಿತಾ ತಂಡದವರು ಹಾಡಿದರು.

ಪ್ರೊ.ಶ್ವೇತಾ ಬಿ ವಿ ವರದಿ ವಾಚನ ಮಾಡಿದರು. ಪ್ರೊ.ನರೇಂದ್ರ ಡಿ ಆರ್, ಪ್ರೊ.ವೀಣಾ ಹೆಚ್ ಎಸ್, ಪ್ರೊ. ಮಂಜುಳಾ ಎ ಎನ್ ಪರಿಚಯ ಭಾಷಣ ಮಾಡಿದರೆ ಪ್ರೊ. ನಾಗರಾಜ್ ಎಮ್ ಎಸ್, ಪ್ರೊ. ಪ್ರಜ್ವಲ್ ಎ ಆರ್ ಪದವೀಧರರ ನಾಮ ಘೋಷಣೆ ಮಾಡಿದರು.

Bapuji Institute of Hi-Tech Education ಪ್ರೊ.ಜ್ಞಾನೇಶ್ವರ್ ಆರ್ ಎಸ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೊ.ಮಂಜುನಾಥ್ ಬಿ ಬಿ ವಂದನೆ ಸಲ್ಲಿಸಿದರು. ರಾಂಕ್ ವಿಜೇತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಗಾಯಕ ಮಲ್ಲಿಕಾರ್ಜುನ ಶಾನುಭೋಗ ಭಾವಸಂಗಮ ನಡೆಸಿಕೊಟ್ಟರು.

-ಚಿತ್ರ ಹಾಗೂ ವರದಿ: ಡಾ. ಎಚ್.ಬಿ.ಮಂಜುನಾಥ,
ಹಿರಿಯ ಪತ್ರಕರ್ತರು-

Rovers and Rangers ರಕ್ತದಾನ ಅತ್ಯಂತ ಮಹತ್ವದ ದಾನ – ಕೆ.ಎಸ್.ಗೌತಮ್

0

Rovers and Rangers ಸಾಗರದ ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜಿನಲ್ಲಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಕಾಲೇಜಿನ ಎನ್ ಎಸ್ ಎಸ್, ಎನ್ ಸಿ ಸಿ, ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಹಾಗೂ ರೋವರ್ಸ್ ಮತ್ತು ರೆಂಜರ್ಸ್ ಘಟಕಗಳ ಪರವಾಗಿ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರವನ್ನು ಉದ್ಘಾಟಿಸಿದ ಶ್ರೀ ಕೆ ಎಸ್ ಗೌತಮ್ ಅವರು ರಕ್ತದಾನದ ಮಹತ್ವ ಹಾಗೂ ಅದರಿಂದ ಉಂಟಾಗುವ ಲಾಭಗಳ ಕುರಿತು ಮಾತನಾಡಿದರು.

ವೈದ್ಯಾಧಿಕಾರಿಗಳಾದ ಡಾ. ಸಚಿನ್ ಆರ್ ರಕ್ತದಾನ ಹಾಗೂ ಅದರ ವಿವಿಧ ಹಂತಗಳ ಕುರಿತು ಪರಿಚಯಿಸಿದರು. ಮತ್ತೋರ್ವ ವೈದ್ಯಾಧಿಕಾರಿಗಳಾದ ಡಾ. ಲಿಖಿತ್ ಕುಮಾರ್ ಎಸ್ಆರ್ ಇವರು ರಕ್ತದಾನದ ಪ್ರಕ್ರಿಯೆ, ರಕ್ತದ ಪರೀಕ್ಷೆ ಹಾಗೂ ರಕ್ತವನ್ನು ಯಾವ ರೀತಿಯಾಗಿ ಅಗತ್ಯ ಇರುವವರಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ್ ಎ ಎಸ್ ಇವರು ರಕ್ತದಾನವು ಅತ್ಯಂತ ಮಹತ್ವದ್ದಾಗಿದ್ದು ಪ್ರತಿಯೊಬ್ಬರೂ ಸಹ ಈ ಕಾರ್ಯದಲ್ಲಿ ತೊಡಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕೆಎಂ ಸೂರ್ಯನಾರಾಯಣ ಉಪಾಧ್ಯಕ್ಷರು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಇವರು ರಕ್ತದಾನವು ಅತ್ಯಂತ ಶ್ರೇಷ್ಠವಾದ ಕೆಲಸ ಎಂದರು. ರಕ್ತದಾನದಿಂದಾಗಿ ತುರ್ತು ಸಂದರ್ಭಗಳಲ್ಲಿ ಇಂತಹ ರಕ್ತದಾನ ಶಿಬಿರಗಳು ಬಹಳ ಪ್ರಯೋಜನಕಾರಿ ಎಂದರು.

Rovers and Rangers ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ಎಸ್ಎಸ್ ಘಟಕ ಅಧಿಕಾರಿಗಳಾದ ಶ್ರೀ ಅಶೋಕ್ ಎಂ, ರೋವರ್ಸ್ ಹಾಗೂ ರೆಂಜರ್ಸ್ ಅಧಿಕಾರಿಗಳಾದ ಶ್ರೀಮತಿ ದೀಪ್ತಿ ನಾಯಕ್ ಹಾಗೂ ಶ್ರೀ ಗಜೇಂದ್ರ ಎಸ್, ಕಂದಾಯ ಅಧಿಕಾರಿಗಳಾದ ಶ್ರೀ ಶ್ರೀಧರ, ಮತ್ತು ಕಾಲೇಜಿನ ಭರತ್ ರಾಜ್,ಅಣ್ಣಪ್ಪ ಇವರು ಉಪಸ್ಥಿತರಿದ್ದರು. ಸ್ವಾಗತವನ್ನು ಕ್ಯಾll ನೂತನ್ ಎಚ್ ಡಿ ಹಾಗೂ ವಂದನಾರ್ಪಣೆಯನ್ನು ಶ್ರೀ ಪುನೀತ್ ನಾಯಕ್ ಪಿ ಇವರು ನಡೆಸಿಕೊಟ್ಟರು.ಪ್ರಾರ್ಥನೆಯನ್ನು ಕುಮಾರಿ ಆಶಿತಾ ತಂಡದವರು ನಡೆಸಿ ಕೊಟ್ಟರು.ಶ್ರೀ ವಿನಯ ಇವರು ನಿರೂಪಣೆಯನ್ನು ಮಾಡಿದರು.

ಈ ಶಿಬಿರದಲ್ಲಿ ಒಟ್ಟು 42 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.