Wednesday, April 1, 2026
Wednesday, April 1, 2026
Home Blog Page 1340

ಮನಸ್ಸಿನಿಂದ ಮನಸ್ಸಿಗೆ

0

ಅಂತರಂಗದ ಅಭಿಷೇಕ……..

ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ…..

ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ…….

ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ……

ಸಾವು – ಸೋಲು – ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ ತಪ್ಪುಗಳು ಇವುಗಳ ಕಾರಣಕ್ಕಾಗಿಯೇ ಆಗಿರುತ್ತದೆ.

ಆಸ್ಪತ್ರೆ ಪೋಲೀಸ್ ನ್ಯಾಯಾಲಯ ದೇವರು ಧರ್ಮ ಸ್ವಾಮಿಗಳು ಎಲ್ಲವುಗಳ ಸುತ್ತ ನಾವು ಸುತ್ತುವುದು ಮತ್ತು ಅನೇಕ ಭ್ರಮಾತ್ಮಕ ಮೌಢ್ಯಗಳಿಗೆ ಒಳಗಾಗುವುದು ಸಹ ಈ ಮೂರರ ಕಾರಣಕ್ಕಾಗಿ.

ಇವುಗಳನ್ನು ಘನತೆಯಿಂದ ಸ್ವೀಕರಿಸುವ, ವಾಸ್ತವವಾಗಿ ಎದುರಿಸುವ, ಸಹಜವಾದ ಕ್ರಿಯೆ ಎನ್ನುವ ಸಾಮಾಜಿಕ ವಾತಾವರಣ ನಮ್ಮ ವ್ಯವಸ್ಥೆಯಲ್ಲಿ ಇಲ್ಲ.

ಮನುಷ್ಯ ಸಂಘ ಜೀವಿ. ಒಂದು ವೇಳೆ ವೈಯಕ್ತಿಕ ನೆಲೆಯಲ್ಲಿ ಇವುಗಳನ್ನು ಸ್ವಾಭಾವಿಕವಾಗಿ ಒಪ್ಪಿಕೊಂಡರು ನಮ್ಮ ಸುತ್ತಮುತ್ತಲಿನ ಜನರ ಪ್ರತಿಕ್ರಿಯೆ ಅತ್ಯಂತ ನಕಾರಾತ್ಮಕವಾಗಿ ಇರುತ್ತದೆ. ಅದನ್ನು ಎದುರಿಸುವುದೇ ಒಂದು ದೊಡ್ಡ ಸವಾಲು.

ಇದು ಹೇಳುವಷ್ಟು ಸುಲಭವಲ್ಲ. ಆದರೆ ನಮ್ಮ ಒಟ್ಟು ವ್ಯಕ್ತಿತ್ವ ಮತ್ತು ಜೀವನಮಟ್ಟ ಸುಧಾರಣೆಯ ದೃಷ್ಟಿಯಿಂದ ಸಾವು ಸೋಲು ಮತ್ತು ವಿಫಲತೆಯ ಭಯವನ್ನು ಮೀರಲೇ ಬೇಕಿದೆ.

ಯಾರೋ ಕೆಲವು ವ್ಯಾವಹಾರಿಕ ವ್ಯಕ್ತಿಗಳ ಯಶಸ್ಸುಗಳನ್ನು ಮಾಧ್ಯಮಗಳಲ್ಲಿ ನೋಡಿ ಅಥವಾ ನಮ್ಮ ಸುತ್ತಮುತ್ತಲಿನ ಅಥವಾ ಪರಿಚಿತರ ಒಂದಷ್ಟು ಆರ್ಥಿಕ ಲಾಭಗಳನ್ನು ನೋಡಿ ನಮ್ಮಲ್ಲಿ ಬೆಳೆಯುವ ಕೀಳರಿಮೆ, ಆಸೆಯಿಂದ ಶ್ರಮದಿಂದ ಮಾಡಿದ ಕೆಲಸದ ಸೋಲು, ಬದುಕಿನ ಒಟ್ಟು ವಿಫಲತೆ ಜೊತೆಗೆ ಸಾವಿನ ಭಯ ನಮ್ಮನ್ನು ಅತ್ಯಂತ ಕೆಳಮಟ್ಟದ ಶರಣಾಗತಿಗೆ ಅಥವಾ ಮನಸ್ಸು ಒಪ್ಪದ ಅಸಹ್ಯ ಹೊಂದಾಣಿಕೆಗೆ ದೂಡುತ್ತದೆ. ವಿಧಿ ಇಲ್ಲ ಅಥವಾ ವಿಧಿಯ ಆಟ ಎಂದು ಸಮಾಧಾನ ಮಾಡಿಕೊಳ್ಳಬಹುದು.

ಜೊತೆಗೆ ನಾವು ಸತ್ತ ನಂತರದ ನಮ್ಮ ಅವಲಂಬಿತರು, ಪ್ರೀತಿ ಪಾತ್ರರು, ವಿರೋಧಿಗಳು ಹೇಗೆ ಬದುಕಬಹುದು ಮತ್ತು ಪ್ರತಿಕ್ರಿಯಿಸಬಹುದು, ನಮ್ಮ ಸೋಲು ಹೇಗೆ ಹೊರಗಿನವರಿಂದ ಕುಹುಕಕ್ಕೆ ಗುರಿಯಾಗಬಹುದು, ನಮ್ಮ ವಿಫಲತೆ ಹೇಗೆ ನಮ್ಮ ಇಡೀ ಬದುಕನ್ನು ಪ್ರಪಾತಕ್ಜೆ ದೂಡಬಹುದು ಎಂಬ ಭಾವನೆಯೇ ನಮ್ಮನ್ನು ಯಶಸ್ಸಿಗಾಗಿ ಹಪಹಪಿಸುವಂತೆ ಮಾಡುತ್ತದೆ. ಈ ಭಯದ ಭಾವನೆಯೇ ನಮ್ಮನ್ನು ಅನೇಕ ತಪ್ಪುಗಳನ್ನು ಮಾಡಲು ಪ್ರೇರೇಪಿಸುತ್ತದೆ. ಏನಾದರೂ ಆಗಲಿ ಸಾಯಬಾರದು, ಸೋಲಬಾರದು ಯಶಸ್ಸು ಆಗಲೇ ಬೇಕು ಎಂದು ನಾವೆಂದೂ ಊಹಿಸದ ಹೀನಾಯ ಕೆಲಸಗಳಿಗೂ ಸಿದ್ದರಾಗುತ್ತೇವೆ. ಇದರಿಂದಾಗಿ ಕೆಲವರು ದುಶ್ಚಟಗಳಿಗೂ ದಾಸರಾಗುತ್ತಾರೆ ಹಾಗೆಯೇ
ತಲೆ ಒಡೆಯಲು ತಲೆ ಹಿಡಿಯಲು ಹೇಸುವುದಿಲ್ಲ. ಭ್ರಷ್ಟಾಚಾರ ನಮಗೆ ಏನೂ ಅನಿಸುವುದಿಲ್ಲ.

ಆದರೆ ಧೈರ್ಯದಿಂದ ಸತ್ತರೆ ಸಾಯಲಿ ಸತ್ತ ನಂತರ ಹೇಗೂ ನನಗೆ ಅರಿವಿರುವುದಿಲ್ಲ ಅಥವಾ ಸೋಲಾಗಲಿ ಅಥವಾ ವಿಫಲವಾಗಲಿ ನನ್ನ ಬದುಕು ನನ್ನ ಆಯ್ಕೆ ಎಂಬ ದೃಢ ನಿರ್ಧಾರಕ್ಕೆ ಬಂದರೆ ಮನಸ್ಸಿನಲ್ಲಿ ಸ್ವಲ್ಪ ಶಾಂತಿ ನೆಮ್ಮದಿ ನೆಲೆಸುತ್ತದೆ.

ಸೂಕ್ಷ್ಮ ಮನಸ್ಸಿನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬಹುದು. ಸತ್ತರೆ ಏನಂತೆ ಸೋತರೆ ಏನಂತೆ ಇರುವುದು ಒಂದೇ ಜೀವನ. ಹೆದರುವುದೇಕೆ ಎಂದು ತಮ್ಮಲ್ಲಿರುವ ಸ್ವಲ್ಪ ಭಯದ ಭಾವನೆಯನ್ನು ಕೊಂದುಕೊಳ್ಳಬೇಕು. ಜೊತೆಗೆ ಮಾನ ಮರ್ಯಾದೆ ಎಂಬುದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸುಖಕ್ಕಾಗಿ ಹುಟ್ಡುಹಾಕಿರುವ ಭ್ರಮೆಗಳು ಎಂದು ಪರಿಗಣಿಸಬೇಕು. ಆಗ ನಿಮ್ಮಲ್ಲಿ ಹೊಸ ವಿನೂತನ ಚೈತನ್ಯ ಮೂಡುತ್ತದೆ. ಹೊಸ ಪ್ರಯೋಗಗಳಿಗೆ ನಮ್ಮನ್ನು ಒಡ್ಡಿಕೊಳ್ಳಬಹುದು.

ಈ ರೀತಿಯ ಧೈರ್ಯ ನಿಮ್ಮಲ್ಲಿ ಉಂಟಾದರೆ ಆಗ ನೀವು ಮೌಡ್ಯಗಳಿಗೆ ದಾಸರಾಗುವುದಿಲ್ಲ, ಲಂಚ ಪಡೆಯುವುದಿಲ್ಲ, ವರದಕ್ಷಿಣೆ ಕೇಳುವುದಿಲ್ಲ, ಇನ್ನೊಬ್ಬರ ಆಸ್ತಿಗೆ ಆಸೆ ಪಡುವುದಿಲ್ಲ. ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ.
ಸ್ವಾಭಿಮಾನದಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಜೀವನ ಸಾಗಿಸಬಹುದು.

ನೆನಪಿರಲಿ, ಇದೆಲ್ಲವೂ ಒಳ್ಳೆಯ ರೀತಿಯಲ್ಲಿ ನೆಮ್ಮದಿಯ ಬದುಕನ್ನು ಅಪೇಕ್ಷಿಸುವವರಿಗೆ ಮಾತ್ರ.
ದುಷ್ಟತನದ ಕ್ರಿಮಿನಲ್ ಗಳಿಗೆ ಇದು ಯಾವುದೇ ರೀತಿಯಲ್ಲಿಯೂ ಅನ್ವಯಿಸುವುದಿಲ್ಲ.

ಆದ್ದರಿಂದ ಇನ್ನು ಮುಂದೆ ಸಾವು ಸೋಲು ಅಪಯಶಸ್ಸಿನ ಭಯದಿಂದ ತಪ್ಪುಗಳನ್ನು ಮಾಡುವುದು ಬಿಡೋಣ. ಧೈರ್ಯವಾಗಿ ಸ್ವಾಭಿಮಾನದಿಂದ ಸ್ವತಂತ್ರವಾಗಿ ಬದುಕಲು ಪ್ರಯತ್ನಿಸೋಣ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.

ಕನ್ನಡದ ಹಿರಿಮೆಗೆ ಆಡಳಿತವು ಅಭಿಮಾನತುಂಬಿ ಮಾಡಿರುವ ಕೆಲಸ ಅತೃಪ್ತಿಕರ-ದೊಡ್ಡರಂಗೇಗೌಡ

0

ಹಳ್ಳಿಗಾಡಿನ ಪದಗಟ್ಟಗಳನ್ನು ತಮ್ಮ ಕವಿತೆಗಳ ಮೂಲಕ ಸಹೃದಯರಿಗೆ ಪರಿಚಯಿಸಿದವರು ಕವಿ ದೊಡ್ಡ ರಂಗೇಗೌಡರು. ಸಾಹಿತ್ಯ ಸಂವಹನದಲ್ಲಿ ಕೇವಲ ಮುದ್ರಣ ಮಾಧ್ಯಮಕ್ಕೆ ಅವರು ತಮ್ಮನ್ನು ಕಟ್ಟಿ ಹಾಕಿಕೊಳ್ಳಲಿಲ್ಲ. ಅತ್ಯಂತ ಪರಿಣಾಮವಾಗಿ ಮಾಧ್ಯಮ ಚಲನಚಿತ್ರಗಳಲ್ಲಿ ತಮ್ಮ ಕವಿತೆಗಳಲ್ಲಿ ಹಳ್ಳಿಯ ಸೊಗಡನ್ನ ತುಂಬಿದವರು.

ಪ್ರಸ್ತುತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಜರುಗುತ್ತಿದೆ. ಕವಿ ದೊಡ್ಡರಂಗೇಗೌಡರದ್ದು ಸರ್ವಾಧ್ಯಕ್ಷತೆ.

ಈಗ ನಮ್ಮ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೂ ಕನ್ನಡಕ್ಕೆ ಸರ್ಕಾರದಿಂದ ಆದದ್ದೇನು? ಎಂದು ತಮ್ಮ ಅಧ್ಯಕ್ಷ ಭಾಷಣದಲ್ಲಿ ಕನ್ನಡದ ಅಭಿಮಾನ ತೋರಿಸದ ಡಬಲ್ ಇಂಜಿನ್ ಸರ್ಕಾರಕ್ಕೆ ಮಾತಿನ ಈಟಿ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡದ ಶಾಸ್ತ್ರೀಯ ಭಾಷಾ ಬೆಳವಣಿಗೆಯ ಬಗ್ಗೆ ಸಿಗಬೇಕಾದ ಅನುದಾನ ನೀಡುವಲ್ಲಿ ಸರ್ಕಾರ ಸಾಕಷ್ಟು ಮಂಜೂರು ಮಾಡಿಲ್ಲ ಎಂದು ತಮ್ಮ ಕವಿ ಶೈಲಿಯಲ್ಲೇ ಎಚ್ಚರಿಸಿದ್ದಾರೆ.

ಸಂಸ್ಕೃತ, ತಮಿಳು ಭಾಷೆಗೆ ಕಳೆದ ಮೂರು ವರ್ಷಗಳಲ್ಲಿ 40 ರಿಂದ 50 ರೂಪಾಯಿ ಕೋಟಿ ಅನುದಾನ ನೀಡಲಾಗಿದೆ. ಆದರೆ ನಮ್ಮ ಕನ್ನಡಕ್ಕೆ ಅದು ಎರಡಂಕಿಯನ್ನೂ ಮುಟ್ಟಿಲ್ಲ ಎಂದು ವಿಷಾದಿಸಿದ್ದಾರೆ.

ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಗಡಿ ಸಮಸ್ಯೆ ಬಗ್ಗೆ ಅಧ್ಯಕ್ಷರು ಉಲ್ಲೇಖಿಸುತ್ತಾರೆ. ಈ ಬಾರಿ ದೊಡ್ಡ ರಂಗೇಗೌಡರು ಬೆಳಗಾವಿಯ ಒಂದಂಗುಲವನ್ನೂ ಬಿಡೆವು ಎಂದು ಘೋಷಿಸಿ ಕನ್ನಡಿಗರ ಕನ್ನಡ ಪ್ರೀತಿಯನ್ನು ಜಾಗೃತಗೊಳಿಸಿದ್ದಾರೆ.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಉಲ್ಲೇಖಿಸಿ ಈರ್ವರೂ ಇದಕ್ಕೆ ಪರಿಹಾರ ಹುಡುಕಬೇಕು ಎಂದು ಸೂಚಿಸಿದ್ದಾರೆ.

ಕನ್ನಡ ಪರ ಹೋರಾಟಗಾರರ ಬಗ್ಗೆ ಪ್ರಸ್ತಾಪಿಸಿ ಅವರನ್ನು ಯಾಕೆ ಜೈಲಿಗೆ ಹಾಕುತ್ತಿರಿ ? ಅವರ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆಯಿರಿ ಎಂದು ಮುಖ್ಯಮಂತ್ರಿಗಳನ್ನು ಕೋರಿದರು.

ಅವರ ಮಾತಿನಲ್ಲಿ ಕನ್ನಡ ಹೋರಾಟಗಾರರ ಬಗ್ಗೆ ಅಂತಃಕರಣ ತುಂಬಿತ್ತು.

ಜಿಲ್ಲೆಯಲ್ಲಿ14,41.833 ಅರ್ಹ ಮತದಾರರಿದ್ದಾರೆ- ಡಾ.ಸೆಲ್ವಮಣಿ

0

ಶಿವಮೊಗ್ಗ: ಜಿಲ್ಲೆಯ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೊಳಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ 727310 ಮಹಿಳಾ ಮತದಾರರು, 714490 ಪುರುಷ ಮತದಾರರು ಮತ್ತು 33 ತೃತೀಯಲಿಂಗ ಮತದಾರರು ಸೇರಿ ಒಟ್ಟು 14,41,833 ಅರ್ಹ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ತಿಳಿಸಿದರು.

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನೇಕ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ 2023ರ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಅಂತಿಮ ಮತದಾರರ ಪಟ್ಟಿಯಲ್ಲಿ ಮತದಾರರ ಲಿಂಗಾನುಪಾತ ಉತ್ತಮಗೊಂಡಿದೆ. 1 ಸಾವಿರ ಪುರುಷ ಮತದಾರರಿಗೆ 1018 ಮಹಿಳಾ ಮತದಾರರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಹೊಸದಾಗಿ 22185 ಯುವ ಮತದಾರರ ಸೇರ್ಪಡೆಯಾಗಿದೆ. ಇವರಲ್ಲಿ 11760 ಪುರುಷ ಹಾಗೂ 10419 ಮಹಿಳಾ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 1775 ಮತಗಟ್ಟೆಗಳು ಇವೆ ಎಂದು ಅವರು ಹೇಳಿದರು.

ವಿಧಾನಸಭಾ ಕ್ಷೇತ್ರವಾರು ವಿವರ: ಮತದಾರರ ಅಂತಿಮ ಪಟ್ಟಿಯಲ್ಲಿ ಶಿವಮೊಗ್ಗ ಗ್ರಾಮಾಂತರದಲ್ಲಿ 1,03,534 ಪುರುಷ, 1,04,525 ಮಹಿಳಾ, ಮೂವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 208062 ಮತದಾರರು ಇದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ 101058 ಪುರುಷ, 106546 ಮಹಿಳಾ, ಐವರು ತೃತೀಯ ಲಿಂಗಿ ಸೇರಿದಂತೆ ಒಟ್ಟು 207609 ಮತದಾರರು ಇದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ 1,23,770 ಪುರುಷ, 1,29,204 ಮಹಿಳಾ, 15 ತೃತೀಯ ಲಿಂಗಿ ಸೇರಿದಂತೆ 2,52,989 ಮತದಾರರು ಇದ್ದಾರೆ.

ತೀರ್ಥಹಳ್ಳಿ ಕ್ಷೇತ್ರದಲ್ಲಿ 91,376 ಪುರುಷ, 93,475 ಮಹಿಳಾ, ಮೂವರು ತೃತೀಯ ಲಿಂಗಿ ಸೇರಿದಂತೆ 1,84,854 ಮತದಾರರು ಇದ್ದಾರೆ.

ಶಿಕಾರಿಪುರ ಕ್ಷೇತ್ರದಲ್ಲಿ 98,281 ಪುರುಷ, 97,086 ಮಹಿಳಾ, ನಾಲ್ವರು ತೃತೀಯ ಲಿಂಗಿ ಸೇರಿದಂತೆ 371 ಮತದಾರರು ಇದ್ದಾರೆ. ಸೊರಬ ಕ್ಷೇತ್ರದಲ್ಲಿ 97,070 ಪುರುಷ, 95,148 ಮಹಿಳಾ, ಇಬ್ಬರು ತೃತೀಯ ಲಿಂಗಿ ಸೇರಿದಂತೆ ಒಟ್ಟು 1,92,220 ಮತದಾರರು ಇದ್ದಾರೆ. ಸಾಗರ ಕ್ಷೇತ್ರದಲ್ಲಿ 99,401 ಪುರುಷ, 1,01,326 ಮಹಿಳಾ, ಒಂದು ತೃತೀಯ ಲಿಂಗಿ ಸೇರಿದಂತೆ ಒಟ್ಟು 2,00,728 ಮತದಾರರು ಇದ್ದಾರೆ.

ಲಿಂಗಾನುಪಾತ ಅತಿ ಹೆಚ್ಚು ಭದ್ರಾವತಿ ಕ್ಷೇತ್ರದಲ್ಲಿ 1054 ಇದೆ. ಅತಿ ಕಡಿಮೆ ಸೊರಬ ಕ್ಷೇತ್ರದಲ್ಲಿ 980 ಇದೆ ಎಂದರು.

ಕಳೆದ ನವೆಂಬರ್ 9ರಂದು ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 14,34,138 ಮತದಾರರ ಹೆಸರು ಪ್ರಕಟಿಸಲಾಗಿತ್ತು.

ಅಂತಿಮ ಪಟ್ಟಿಯಲ್ಲಿ 40767 ಮತದಾರರನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದ್ದು, 33072 ಮತದಾರರ ಹೆಸರು ಕೈ ಬಿಡಲಾಗಿದೆ. 11651 ತಿದ್ದುಪಡಿ ಮಾಡಲಾಗಿದೆ. ತೆಗೆದು ಹಾಕಿರುವುದಕ್ಕೆ 11,873 ಮರಣ, 17,064 ಸ್ಥಳಾಂತರ, 1058 ಪುನರಾವರ್ತನೆ ಮತ್ತು 3077 ವಲಸೆ ಕಾರಣವಾಗಿದೆ.

ಕರಡು ಪಟ್ಟಿಯಲ್ಲಿ ಲಿಂಗಾನುಪಾತ 1 ಸಾವಿರ ಪುರುಷ ಮತದಾರರಿಗೆ 1,014 ಮಹಿಳಾ ಮತದಾರರು ಇದ್ದರು ಎಂದು ಅವರು ಮಾಹಿತಿ ನೀಡಿದರು.

ಸೇರ್ಪಡೆಗೆ ಅವಕಾಶ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಸಂಬಂಧದಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಗೆ ಚುನಾವಣಾ ಆಯೋಗ ನಿಗದಿಪಡಿಸುವ ದಿನಾಂಕದವರೆಗೂ ಹೆಸರು ಸೇರಿಸಲು ಅವಕಾಶವಿರುತ್ತದೆ. ನಮೂನೆ -6 ಸೇರ್ಪಡೆ, ನಮೂನೆ-6ಎ ಅನಿವಾಸಿ ಭಾರತೀಯರು ಹೆಸರು ನೊಂದಾಯಿಸಿಕೊಳ್ಳಲು, 6-ಬಿ ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆ ಮಾಡಿಕೊಳ್ಳಲು, ನಮೂನೆ-7 ತೆಗೆದು ಹಾಕಲು, ನಮೂನೆ-8ರಲ್ಲಿ ತಿದ್ದುಪಡಿ, ವರ್ಗಾವಣೆ, ಬದಲಿ ಎಪಿಕ್‍ಗೆ ಮನವಿ ಮತ್ತು ಅಂಗವೈಕಲ್ಯ ಹೊಂದಿರುವ ಮತದಾರರು ವಿವರ ದಾಖಲಿಸಲು ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು https://ceo.karnataka.gov.in ನಲ್ಲಿ ಲಭ್ಯವಿದ್ದು, ಮತದಾರರು ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಅನೇಕ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬದುಕಿನ ಬಗ್ಗೆ ಎಲ್ಲ ಆಯಾಮಗಳಲ್ಲಿ ಅರ್ಥೈಸಲು ವಿಜ್ಞಾನದ ಸದುಪಯೋಗ ಮಾಡಿ- ಜೆ.ಪಿ.ಕೃಷ್ಣೇಗೌಡ

0

ಶಿವಮೊಗ್ಗ: ಹಿಂದೆ ಹಾಗೂ ಇಂದು ಮತ್ತು ಮುಂದಿನ ಬದುಕು ಹೇಗಿರಬೇಕು. ಹೇಗೆ? ಬದುಕಬೇಕು ಎಂಬುದನ್ನು ಅತ್ಯಂತ ಸುಲಭವಾಗಿ ತಿಳಿದುಕೊಳ್ಳಬಹುದಾದಂತಹ ವೈಜ್ಞಾನಿಕ ವಾತಾವರಣ ನಿಮ್ಮ ಮುಂದಿದೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಾಹಿತಿ ವಾಗ್ಮಿ ಹಾಗೂ ಉಪನ್ಯಾಸಕ ಪ್ರೊಫೆಸರ್ ಕೃಷ್ಣೇಗೌಡ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.

ಶಿವಮೊಗ್ಗ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಸೂಕ್ಷ್ಮ ಪ್ರಜ್ಞೆಯ ಮೂಲಕ ವೈಜ್ಞಾನಿಕ ಹಾಗೂ ವೈಚಾರಿಕ ತಳಹದಿಯ ನಡುವೆ ಸುಭದ್ರವಾದ ಬದುಕನ್ನು ಕಟ್ಟಿಕೊಳ್ಳಬಹುದಾದ ವ್ಯವಸ್ಥೆಯನ್ನು ವಿವರಿಸಿದರು.

ಹಿಂದೆ ಶಿಕ್ಷಣಕ್ಕೆ ಅಷ್ಟೊಂದು ಆದ್ಯತೆ ಇರಲಿಲ್ಲ ಅದರಲ್ಲೂ ವಿಜ್ಞಾನಕ್ಕೆ ಅಷ್ಟೊಂದು ಅವಕಾಶಗಳು ಹಾಗೂ ಲಭ್ಯ ಸಂಪನ್ಮೂಲಗಳು ಸಿಗುತ್ತಿರಲಿಲ್ಲ ಈಗಿನ ಮಕ್ಕಳಿಗೆ ವೈಜ್ಞಾನಿಕ ಹಾಗೂ ಆಧುನಿಕ ಮಟ್ಟದ ವಿಜ್ಞಾನ ಕೈಗೆ ತಲುಪುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದ ಅವರು ಇಂತಹ ವಿಜ್ಞಾನ ಪ್ರದರ್ಶನಗಳ ಮೂಲಕ ಹೊಸ ಹೊಸ ಆವಿಷ್ಕಾರಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗುತ್ತದೆ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಮಾತನಾಡುತ್ತಾ, ನಾವು ನಮಗೆ ಅನಗತ್ಯವಾದ ವಿಷಯವನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ.

ಅಗತ್ಯದ ಸಂಸ್ಕೃತಿ ಬದುಕು ಹಾಗೂ ನಮ್ಮ ನಡುವಿನ ಚಿಕ್ಕ ಚಿಕ್ಕ ವಿಷಯಗಳನ್ನು ಮರೆತುಬಿಟ್ಟಿದ್ದೇವೆ. ಇದೊಂದು ದುರಂತದ ಸಂಗತಿ ಎಂದರು.

ವಿಜ್ಞಾನ ಎಂಬುದು ಅತ್ಯಂತ ಸೂಕ್ಷ್ಮ ವಿಷಯ. ವಿದ್ಯಾರ್ಥಿಗಳು ಮುಂದೆ ದೊಡ್ಡಮಟ್ಟದ ವಿಜ್ಞಾನಿಗಳಾಗಬೇಕು. ಹಾಗೆಯೇ ಅದರ ಜೊತೆ ನಮ್ಮ ದೇಶವನ್ನು ನಮ್ಮ ಸಂಸ್ಕೃತಿಯನ್ನು ನಮ್ಮ ಪರಿಸರದ ಸಮಗ್ರ ಮಾಹಿತಿಯನ್ನು ತಿಳಿದುಕೊಳ್ಳುವಂತಹವರಾಗಬೇಕು ಎಂದರು.

ಪ್ರಜ್ಞಾವಂತರು, ಜ್ಞಾನವಂತರು ಹಾಗೂ ಸಮಾಜದ ಗಣ್ಯ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುವಂತಹ ರೀತಿಯಲ್ಲಿ ಬೆಳೆಯಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಯಾವುದೇ ಕ್ರೀಡೆ ಪ್ರದರ್ಶನದಂತಹ ಸ್ಪರ್ಧಾತ್ಮಕ ಪ್ರಕ್ರಿಯೆಯಲ್ಲಿ ಗೆಲುವು ಮಾತ್ರ ಮುಖ್ಯವಲ್ಲ. ಭಾಗವಹಿಸುವಿಕೆ ಅತಿ ಮುಖ್ಯ. ಸೋತವರು ದಡ್ಡರಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಇಂದಿನ ಸೋಲು ಮುಂದಿನ ಗೆಲುವಾಗುತ್ತದೆ ಎಂದು ಗೆಲುವು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪರಾಭವ ಗೊಂಡವರನ್ನು ಮುಂದಿನ ಹೆಜ್ಜೆಯಲ್ಲಿ ಜಯಶೀಲರಾಗುವಂತಹ ಮನಸು ಬೆಳೆಯಲಿ ಎಂದು ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಆಡಳಿತ ಅಧಿಕಾರಿ ಎ.ಟಿ.ಶಿವರಾಂ, ಪ್ರಾಂಶುಪಾಲೆ ಎಸ್.ಆರ್. ಹೇಮಾ, ಆಡಳಿತ ಮಂಡಳಿ ಸದಸ್ಯರು ಮತ್ತಿರರಿದ್ದರು.

ಜಿಲ್ಲೆಯ ಸರ್ಕಾರಿ ನೌಕರರಿಂದ ಭ್ರಷ್ಟಾಚಾರ ಕರ್ತವ್ಯಲೋಪ ವಿಳಂಬ ಆದರೆ ಅವರ ವಿರುದ್ಧ ಕ್ರಮ – ಬಿ.ಎಸ್.ಪಾಟೀಲ್

0

ಕಡತ ವಿಲೇವಾರಿಯಲ್ಲಿ ವಿಳಂಬ, ಕರ್ತವ್ಯ ಲೋಪ, ಅಧಿಕಾರದ ದುರುಪಯೋಗ, ಭ್ರಷ್ಟಾಚಾರದಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆಯನ್ನು ನಡೆಸಿ ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಕೆರೆಗಳ ಸಂರಕ್ಷಣೆ, ಒತ್ತುವರಿ ತೆರವು ಮತ್ತು ಪುನರುಜ್ಜೀವನ ಕುರಿತಾಗಿ ಲೋಕಾಯುಕ್ತ ಸಂಸ್ಥೆ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿದೆ. ಕೆರೆಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಲು ಗುರಿಯನ್ನು ನಿಗದಿಪಡಿಸಲಾಗಿದ್ದು, ನಿಯಮಿತವಾಗಿ ಈ ಕುರಿತು ವಿಚಾರಣೆಯನ್ನು ನಡೆಸಲಾಗುವುದು. ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು 6ಸಾವಿರಕ್ಕೂ ಅಧಿಕ ಕೆರೆಗಳಿದ್ದು, ಇವುಗಳ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಆದ್ಯತೆ ಮೇರೆಗೆ ಈ ಕಾರ್ಯವನ್ನು ಕೈಗೊಂಡು ವರದಿಯನ್ನು ಸಲ್ಲಿಸಬೇಕು. ಇದೇ ರೀತಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಕೆರೆಗಳ ಸ್ಥಿತಿಗತಿ ಕುರಿತು ವರದಿಯನ್ನು ಪ್ರತ್ಯೇಕವಾಗಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸುವ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಟಾನ ಸರಿಯಾಗಿ ಆಗುತ್ತಿಲ್ಲ. ಈ ಕುರಿತು 5ಲಕ್ಷ ಪ್ರಕರಣಗಳು ಲೋಕಾಯುಕ್ತದ ಮುಂದಿವೆ. ಯುದ್ದೋಪಾಧಿಯಲ್ಲಿ ಪ್ರಕರಣಗಳ ವಿಲೇವಾರಿ ಮಾಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಜಾರಿಯ ಸರಿಯಾದ ದಾಖಲೆಗಳನ್ನು ನಿರ್ವಹಿಸದ ಪಿಡಿಒಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಯೋಜನೆ ಅನುಷ್ಟಾನ ಸಮರ್ಪಕವಾಗಿ ನಿರ್ವಹಿಸದಿದ್ದರೆ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ದೂರುಗಳ ವಿಚಾರಣೆಯನ್ನು ಮಾಡಲಾಗುತ್ತಿದೆ. ಇದೇ ರೀತಿ ನೀರಾವರಿ, ಕೃಷಿ, ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಇಲಾಖೆಗಳು ಜನಕಲ್ಯಾಣ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಪಟ್ಟಿ ಸಿದ್ಧಪಡಿಸಲು ಸೂಚನೆ: ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಸ್ತುತ ಪೂರ್ಣ ಪ್ರಮಾಣದ ಅಧಿಕಾರಿ ಸಿಬ್ಬಂದಿಗಳಿದ್ದು, ನ್ಯಾಯಾಂಗ ವಿಭಾಗ, ಪೊಲೀಸ್ ವಿಭಾಗ, ಆಂತರಿಕ ಗುಪ್ತಚರ ವಿಭಾಗ, ಆಡಳಿತ ವಿಭಾಗ, ತಾಂತ್ರಿಕ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಜನಕಂಟಕರಾಗಿರುವ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಅದರ ಪ್ರಕಾರ ದಾಳಿಗಳನ್ನು ನಡೆಸಿ ಭ್ರಷ್ಟ ವ್ಯವಸ್ಥೆಯನ್ನು ಮಟ್ಟ ಹಾಕಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದೇ ರೀತಿ ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವೂ ನಡೆಯಬೇಕಿದೆ ಎಂದು ಹೇಳಿದರು.

ಜನರು ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಕೈಜೋಡಿಸಬೇಕು. ಇದೇ ವೇಳೆ ಕೆಲವರು ಸುಳ್ಳು ದೂರುಗಳನ್ನು ದಾಖಲಿಸಿ ವಸೂಲಿ ದಂಧೆಗೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಂತಹ ಪ್ರಕರಣಗಳಲ್ಲಿ ಲೋಕಾಯುಕ್ತ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಡಿ.ಪ್ರಕಾಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ, ಲೋಕಾಯುಕ್ತ ಡಿ.ವೈ.ಎಸ್.ಪಿ ಮೃತ್ಯುಂಜಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾಗರದಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ಪೈನಾಪಲ್ ಉತ್ಪನ್ನ ತಯಾರಿಕೆ ತರಬೇತಿ

0

ಶಿವಮೊಗ್ಗ: ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಮತ್ತು ಕೃಷಿ ಇಲಾಖೆ, ಸಾಗರದ ಆತ್ಮ ಯೋಜನೆಯಡಿ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಪೈನಾಪಲ್ ಹಣ್ಣಿನ ಜಾಮ್ ಮತ್ತು ಕ್ಯಾಂಡಿ ತಯಾರಿಕೆಯ ಬಗ್ಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಸ್ವಸಹಾಯ ಸಂಘದ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿತ್ತು.

ತರಬೇತಿಯನ್ನು ಸಾಗರ ಸಹಾಯಕ ಕೃಷಿ ನಿರ್ದೇಶಕ ಕಾಶೀನಾಥ್ ವೈ. ಒಂಟೆಕೋರ್ ಉದ್ಘಾಟಿಸಿದರು.

ತರಬೇತಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಗೃಹ ವಿಜ್ಞಾನಿ ಡಾ. ಜ್ಯೋತಿ ಎಂ. ರಾಠೋಡ್ ಪೈನಾಪಲ್ ಹಣ್ಣಿನ ಪೋಷಕಾಂಶಗಳು ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಶಿವಮೊಗ್ಗದ ಆರ್ಯ ಯೋಜನೆಯ ಹಿರಿಯ ಸಹಾಯಕ ಸಂಶೋಧಕಿ ಡಾ. ಪೂಜಾ. ಜಿ. ಕೆ., ಸಾಗರ ತಾಲೂಕಿನ ಕೃಷಿ ಇಲಾಖೆಯ ವಿನಾಯಕ್ ರಾವ್, ಪ್ರದೀಪ್ ಕುಮಾರ್, ಪಾಂಡುರಂಗ ನಾಗರತ್ನ ಹಾಗೂ ಜೋಗದಸಿರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಉಮಾದೇವಿ ಉಪಸ್ಥಿತರಿದ್ದರು.

ಸಾಗರ ತಾಲ್ಲೂಕಿನಲ್ಲಿ ನೆಟ್ ಸೇವೆಗೆ ಅವಕಾಶ ನೀಡಲು ಅರಣ್ಯ ಇಲಾಖೆ ಅನುಮತಿ ನೀಡಬೇಕು- ಹರತಾಳು ಹಾಲಪ್ಪ

0

ಮಲೆನಾಡಿನ ನೆಟ್ ವರ್ಕ್ ಸಮಸ್ಯೆಗೆ ಪರಿಹಾರ ಕಲ್ಪಿಸಲು, ಕೇಂದ್ರ ಸರ್ಕಾರ BSNL ನ ಸಹಭಾಗಿತ್ವದೊಂದಿಗೆ ಹಳ್ಳಿಗಳಲ್ಲಿ ಇಂಟರ್ ನೆಟ್ ಸೇವೆಗಳನ್ನು ವಿಸ್ತರಿಸಲು, ಸಾಗರ ತಾಲ್ಲೂಕಿನಲ್ಲಿ, ಫೈಬರ್ saturation ಯೋಜನೆ ಆರಂಭವಾಗಿದೆ. 46 ಟವರ್ ಅಳವಡಿಸಲು ಕಾರ್ಯಾರಂಭ ಮಾಡಲಾಗಿದೆ.

ಇಂದು ಶಾಸಕರಾದ ಹೆಚ್.ಹಾಲಪ್ಪ ನವರು, ಸಾಗರ ತಾ.ಪಂ ಸಭಾಂಗಣದಲ್ಲಿ ಅಂತರ್ ಇಲಾಖೆ ಅಧಿಕಾರಿಗಳ ಸಭೆ ನೆಡೆಸಿ, ಕರೂರು, ಬಾರಂಗಿ ಹೋಬಳಿ ವ್ಯಾಪ್ತಿಯ ಸೂಕ್ತ ಸ್ಥಳಗಳಲ್ಲಿ BSNL ಟವರ್ ಅಳವಡಿಸಲು ಅರಣ್ಯ ಇಲಾಖೆಯವರು ಅನುಮತಿ ನೀಡುವಂತೆ ಸೂಚಿಸಿದರು.

ಫೈಬರ್ saturation ಯೋಜನೆಗೆ 1760 ಅರ್ಜಿಗಳು ಬಂದಿದ್ದು, 750 ಸಂಪರ್ಕ ನೀಡಲಾಗಿದೆ. ಬಾಕಿ ಉಳಿದ ಅರ್ಜಿಗಳಿಗೆ, ಮೇಲಾಧಿಕಾರಿಗಳ ಅನುಮತಿ ಪಡೆದು ಸಂಪರ್ಕ ನೀಡಲಾಗುತ್ತದೆ ಎಂದು BSNL ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರರು, ಚುನಾಯಿತ ಪ್ರತಿನಿಧಿಗಳು, ಬಿಜೆಪಿ ಜಿಲ್ಲಾಧ್ಯಕ್ಷರು, ಇ ಒ, ಅರಣ್ಯ ಇಲಾಖೆ ಅಧಿಕಾರಿಗಳು, BSNL ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿಜಿಟಲ್ ದೃಷ್ಟಿ ಕೋನದಲ್ಲಿ ಸಾಗುವ ಭಾರತಕ್ಕೆ ಸಹಕಾರ ನೀಡುವೆ- ಸತ್ಯನ್ ನಾಡೆಲ್ಲ

0

ಮೈಕ್ರೋಸಾಫ್ಟ್ ಅಧ್ಯಕ್ಷ ಹಾಗೂ ಸಿಇಒ ಸತ್ಯ ನಡೆಲ್ಲಾ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

ಭಾರತ ಸರ್ಕಾರದ ಆಳವಾದ ಸ್ಥಿರ, ಎಲ್ಲವನ್ನೂ ಒಳಗೊಂಡ ಆರ್ಥಿಕ ಬೆಳವಣಿಗೆ ಆಧಾರಿತ ಡಿಜಿಟಲ್ ರೂಪಾಂತರ ಮೇಲೆ ಗಮನ ಹರಿಸುತ್ತಿರುವುದು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಡಿಜಿಟಲ್ ದೃಷ್ಟಿಕೋನದಲ್ಲಿ ಕೆಲಸ ಮಾಡಬೇಕೆನ್ನುವ ಭಾರತದ ಮಹದಾಸೆಗೆ ನಾವು ಒತ್ತು ನೀಡಲು ಸಹಕಾರ ನೀಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಸತ್ಯ ನಡೆಲ್ಲಾ ಪ್ರಧಾನಿ ಭೇಟಿಯ ನಂತರ ಟ್ವೀಟ್ ಮಾಡಿದ್ದಾರೆ.

ಡಿಜಿಟಲ್ ರೂಪಾಂತರ ಆಧಾರಿತ ಸ್ಥಿರ ಮತ್ತು ಆಂತರಿಕ ಆರ್ಥಿಕ ಬೆಳವಣಿಗೆಯ ಮೇಲೆ ಭಾರತ ಗಮನ ಹರಿಸಿರುವುದು ಸ್ಪೂರ್ತಿದಾಯಕವಾಗಿದೆ ಎಂದು ಸತ್ಯ ನಡೆಲ್ಲಾ ಹೇಳಿದ್ದಾರೆ.

ಒಳನೋಟವುಳ್ಳ ಭೇಟಿ ಮಾತುಕತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದಿದ್ದಾರೆ.

ಮೈಸೂರು ಹಂಪಿ ಸ್ವದೇಶ ದರ್ಶನ್ ಪಟ್ಟಿಗೆ ಸೇರ್ಪಡೆ ಹೆಮ್ಮೆಯ ಸಂಗತಿ- ಸಚಿವ ಸೋಮಶೇಖರ್

0

ಸ್ವದೇಶ ದರ್ಶನ್ 2.0 ಯೋಜನೆಗೆ ಪಾರಂಪರಿಕ ನಗರ ಹಂಪಿ ಸಾಂಸ್ಕೃತಿಕ ನಗರ ಮೈಸೂರು ಸೇರ್ಪಡೆ ಆಗಿರುವುದು ಹೆಮ್ಮೆಯ ಸಂಗತಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಕೇಂದ್ರೀಯ ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ, ಪ್ರವಾಸೋದ್ಯಮ ಸಚಿವಾಲಯವು ಕೇಂದ್ರ ಹಣಕಾಸು ನೆರವನ್ನು ರಾಜ್ಯ ಸರ್ಕಾರಗಳಿಗೆ, ಸಕ್ರ್ಯೂಟ್‍ಗಳ ಮೂಲಸೌಕರ್ಯ ಅಭಿವೃದ್ಧಿಗೆ ಒದಗಿಸುತ್ತದೆ. ಇದರಿಂದ ಆಯಾ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯಾಗಿ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಹಾಗಾಗಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ಅನಂತ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗುವುದರ ಜೊತೆಗೆ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ.

ಕಾಲ್ನಡಿಗೆಯಿಂದ ಚಾರಣ ಮಾಡಿದರೆ ಪರಿಸರ ಮಾಲೀನ್ಯ ಆಗದು-ಬಿ.ಆರ್.ರೂಪ

0

ಚಿಕ್ಕಮಗಳೂರು: ಗಿರಿಶ್ರೇಣಿಯಲ್ಲಿ ವಾಹನಗಳಿಂದ ಪ್ರಕೃತಿಯ ಸೌಂದರ್ಯವನ್ನು ಸವಿಯುವ ಬದಲು ಕಾಲ್ನಡಿಗೆಯ ಮೂಲಕ ಚಾರಣವನ್ನು ಪ್ರಯತ್ನಿಸಿದರೆ ಹೊಸತನದ ಅನುಭವ ಮತ್ತು ಪ್ರಕೃತಿ ಸೌಂದರ್ಯವನ್ನು ಸಮೀಪದಿಂದ ಆನಂದಿಸಬಹುದು ಎಂದು ಅಪರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರು ಹೇಳಿದರು.

ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಅಡ್ವಂಚೇರ್ ಕ್ಲಬ್ ಸಹಯೋಗದೊಂದಿಗೆ ಚಿಕ್ಕಮಗಳೂರು ಹಬ್ಬದ ಪ್ರಯುಕ್ತ ಸರ್ಕಾರಿ ನೌಕರರಿಗೆ ಆಯೋಜಿಸಿದ್ದ ಮುಳ್ಳಯ್ಯನಗಿರಿಗೆ ಚಾರಣ ಕಾರ್ಯಕ್ರಮವನ್ನು ಸರ್ಪದಾರಿಯ ಮೂಲಕ ಆರಂಭಿಸಿ ಅವರು ಮಾತನಾಡುತ್ತಿದ್ದರು.

ಗಿರಿಶ್ರೇಣಿಗಳಲ್ಲಿ ಚಾರಣಕ್ಕೆ ತೆರಳುವ ಮುನ್ನ ತಂಡಗಳನ್ನು ರಚಿಸಿಕೊಂಡು ಕಾಲ್ನಡಿಗೆಯಲ್ಲಿ ಸಂಚ ರಿಸಲು ಪ್ರಯತ್ನಿಸಬೇಕು. ಅತಿಯಾದ ವಾಹನಗಳ ದಟ್ಟಣೆಯಿಂದ ಪರಿಸರ ಮಾಲಿನ್ಯವಾಗುವು ದಲ್ಲದೇ ಇದರಿಂದ ಕೆಲವು ಸ್ಥಳಗಳಿಗೆ ತೆರಳಲಾಗುವುದಿಲ್ಲ. ಆ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲಿ ಚಾರಣ ವನ್ನು ಆರಂಭಿಸಿದರೆ ಆರೋಗ್ಯ ವೃದ್ದಿಯೊಂದಿಗೆ ಪರಿಸರವನ್ನು ಹತ್ತಿರದಿಂದ ಸವಿಯಲು ಸಾಧ್ಯ ಎಂದರು.

ಜಿಲ್ಲೆಯ ಮಲೆನಾಡು ಭಾಗವು ಅತ್ಯಂತ ರಮಣಿಯವಾದ ಪ್ರದೇಶ. ಇಂತಹ ಜಿಲ್ಲೆಯಲ್ಲಿ ಜನಿಸಿರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ನಾವೆಲ್ಲರೂ ಪುಣ್ಯವಂತರು. ನಗರದಿಂದ ಕೇವಲ 30 ಕಿ.ಮೀ. ಅಂತರದಲ್ಲಿರುವ ಪಶ್ಚಿಮಘಟ್ಟ ಪ್ರದೇಶ ಅಪರೂಪದ ಗಿಡ-ಮರಗಳೊಂದಿಗೆ ಪ್ರಕೃತಿಯನ್ನು ಮೈದುಂಬಿಕೊಂಡು ಕಂಗೊಳಿಸುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯು ಅನೇಕ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ. ಸುತ್ತಮುತ್ತಲು ಹಚ್ಚ ಹಸಿರಿನಿಂದ ಕೂಡಿರುವ ಪ್ರರ್ವತಶ್ರೇಣಿಗಳು ಚಾರಣ ಪ್ರಿಯರಿಗೆ ಅತ್ಯಂತ ಪ್ರಿಯವಾಗಲಿದ್ದು, ನೌಕರರು ಅಥವಾ ಪ್ರವಾಸಿ ಗರು ವಾಹನಗಳ ಮೂಲಕ ಸಂಚರಿಸುವ ಬದಲು ಚಾರಣ ಮೂಲಕ ತೆರಳಿದರೆ ಗಿರಿಶ್ರೇಣಿಯ ಸೌಂದರ್ಯದ ನಡುವೆ ವೃತ್ತಿ ಬದುಕಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹದು ಎಂದರು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್.ಲೋಹಿತ್ ಮಾತನಾಡಿ ಚಾರಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ತಿಂಗಳಿಗೆ ಒಮ್ಮೆಯಾದರೂ ಗಿರಿಶ್ರೇಣಿಗಳಲ್ಲಿ ಕಾಲ್ನಡಿಗೆ ಚಾರಣವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಈ ವೇಳೆಯಲ್ಲಿ ಜಿಲ್ಲಾ ಸರ್ಜನ್ ಡಾ. ಮೋಹನ್‌ಕುಮಾರ್, ಜಿಲ್ಲಾ ಪಂಚಾಯಿತಿ ಅಧಿಕಾರಿ ಸೋಮಶೇಖರ್, ಭದ್ರಾ ವನ್ಯಜೀವಿ ವಿಭಾಗದ ಎಸಿಎಫ್ ಮೋಹನ್, ಪತ್ರಕರ್ತ ಜಿ.ಎಂ.ರಾಜಶೇಖರ್, ಅರಣ್ಯ ಇಲಾಖೆಯ ನವೀನ್, ಪ್ರವಾಸೋದ್ಯಮ ಅಧಿಕಾರಿ ನಾಗರಾಜ್ ಸೇರಿದಂತೆ ಅನೇಕ ಮಂದಿ ಸರ್ಕಾರಿ ನೌಕರರು ಚಾರಣದಲ್ಲಿ ಪಾಲ್ಗೊಂಡಿದ್ದರು.