Wednesday, April 1, 2026
Wednesday, April 1, 2026
Home Blog Page 1341

ವಿಕಲ ಚೇತನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಜ.15 ಕೊನೇ ದಿನ

0

ಶಿವಮೊಗ್ಗ: 2022-23 ನೇ ಸಾಲಿಗೆ ವಿಕಲಚೇತನ ವಿದ್ಯಾರ್ಥಿವೇತನ ಯೋಜನೆಯನ್ನು ಸ್ಟೇಟ್ ಸ್ಕಾಲರ್‍ಶಿಪ್ ಪೋರ್ಟಲ್(ಎಸ್‍ಎಸ್‍ಪಿ) ನಲ್ಲಿ ಜಾರಿಗೊಳಿಸಿದೆ. ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ 1 ರಿಂದ 10 ನೇ ತರಗತಿವರೆಗೆ(ಪ್ರಿ ಮೆಟ್ರಿಕ್) ವಿಕಲಚೇತನ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಅರ್ಜಿಗಳನ್ನು ಎಸ್‍ಎಸ್‍ಪಿ https://ssp.karnataka.gov.in ಮೂಲಕ ಮತ್ತು ಎಸ್‍ಎಸ್‍ಎಲ್‍ಸಿ ನಂತರದ ವಿದ್ಯಾರ್ಥಿಗಳು ಎಸ್‍ಎಸ್‍ಪಿ https://ssp.postmatric.karnataka.gov.in ಮೂಲಕ ಅರ್ಜಿ ಸಲ್ಲಿಸಿ ಹಾರ್ಡ್ ಕಾಪಿಯನ್ನು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯುಗಳಿಗೆ, ನಗರ ಸ್ಥಳೀಯ ಸಂಸ್ಥೆಗಲಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯು.ಆರ್.ಡಬ್ಲ್ಯುಗಳಿಗೆ ಹಾಗೂ ತಾಲ್ಲೂಕು ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯುಗಳಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಜನವರಿ 15 ಕಡೆಯ ದಿನ. ಅರ್ಜಿ ಸಲ್ಲಿಸುವ ವೇಳೆ ತಾಂತ್ರಿಕ ತೊಂದರೆ ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 1902 ನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಆಲ್ಕೊಳ ಸರ್ಕಲ್, ಬಿಎಸ್‍ಎನ್‍ಎಲ್ ಕಚೇರಿ ಪಕ್ಕ, ಸಾಗರ ರಸ್ತೆ, ಶಿವಮೊಗ್ಗ ದೂ.ಸಂ: 08182-295234/251676 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ. ಎಂ ದೊಡ್ಡಮನಿ ತಿಳಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ನಿಗಮಕ್ಕೆ ಸಾಲ ಸೌಲಭ್ಯಯೋಜನೆಅರ್ಜಿಸಲ್ಲಿಸಲು ಕಾಲಾವಧಿ ವಿಸ್ತರಣೆ

0

ಶಿವಮೊಗ್ಗ:
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿ 2022-23 ನೇ ಸಾಲಿಗೆ ಅನುಷ್ಟಾನಗೊಳಿಸುತ್ತಿರುವ ನೇರಸಾಲ ಯೋಜನೆ, ಉದ್ಯಮಶೀಲತೆ ಯೋಜನೆ ಮತ್ತು ದ್ವಿಚಕ್ರ ವಾಹನ ಯೋಜನೆಗಳಡಿ ಸೌಲಭ್ಯ ಪಡೆಯಲು ಕರೆಯಲಾಗಿದ್ದ ಅರ್ಜಿ ಅವಧಿಯನ್ನು ಜನವರಿ 16 ರವರೆಗೆ ವಿಸ್ತರಿಸಲಾಗಿದೆ.

ಅರ್ಹ ಪರಿಶಿಷ್ಟ ಪಂಗಡದ ಫಲಾಪೇಕ್ಷಿಗಳು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ಮುಖಾಂತರ ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸಬಹುದೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ನಾಯಕರಾಗುವವರು ಗಾಂಧೀಜಿಯವರಂತೆ ಸಮಾಜ ಮುಖಿ ಸೇವೆ ಮಾಡಿ-ಡಾ.ಸೆಲ್ವಮಣಿ

0

ಶಿವಮೊಗ್ಗ: ಭಾರತ ಸರ್ಕಾರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಶಿವಮೊಗ್ಗ ಇವರ ವತಿಯಿಂದ 2022-23 ನೇ ಸಾಲಿನ ಯುವ ನಾಯಕತ್ವ ಮತ್ತು ಸಮುದಾಯ ಅಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಶಿವಮೊಗ್ಗದ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ನಾಯಕತ್ವ ಗುಣ ಬೆಳೆಸಿಕೊಳ್ಳಲು ಮಾತನಾಡುವ ಮತ್ತು ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ನಾಯಕರಾಗುವವರು ಅಧಿಕಾರಕ್ಕೆ ಆಸೆ ಪಡದೆ ಗಾಂಧೀಜಿಯವರಂತೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.

ಈ ತರಬೇತಿಯನ್ನು 45 ಯುವಜನರಿಗೆ ನೀಡಲಾಗುತ್ತಿದೆ. ಯುವಜನತೆಯಲ್ಲಿ ವ್ಯಕ್ತಿತ್ವ ವಿಕಸನ, ಜೀವನ ಕೌಶಲ್ಯಗಳು, ನಾಯಕತ್ವದ ಗುಣ, ಸಮಾಜಸೇವೆ, ದೇಶಭಕ್ತಿಯ ಮೌಲ್ಯಗಳು ಮತ್ತು ವೃತ್ತಿಯೋಜನೆ ವಿಷಯಗಳ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತದೆ.

ಕಾರ್ಯಕರಮದಲ್ಲಿ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರಾದ ರವೀಂದ್ರ ಚಂದ್ರಾನಾಯ್ಕ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರೊಫೆಸರ್ ಮತ್ತು ಪಾತ್‍ವೇಸ್‍ನ ನಿರ್ದೇಶಕ ಡಾ.ಸಿ.ಕೆ.ರಮೇಶ್, ಕುವೆಂಪು ವಿವಿ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆಟಿಕೆ, ಲೆಕ್ಕಾಧಿಕಾರಿ ರಮೇಶ್ ಹಾಜರಿದ್ದರು.

ಮಹಿಳೆಯರು ಹೆಚ್ಚು ಅಧ್ಯಯನ ಮಾಡಿ ಸಾಧನೆ ಗುರಿ ಹೊಂದಬೇಕು-ಮೋಹನ್ ಕುಮಾರ್

0

ಕಳಸ: ಮಹಿಳೆಯರು ಜೀವನದಲ್ಲಿ ಸಿಗುವ ಅವಕಾಶವನ್ನು ಸದುಪಯೋಗಪಡಿಸಿ ಕೊಂಡು ಮುಂಬರುವ ದಿನಗಳಲ್ಲಿ ಹೆಚ್ಚು ಅಧ್ಯಯನ ನಡೆಸಿ ಸಾಧನೆ ಮಾಡುವ ಗುರಿ ಹೊಂದಬೇಕು ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ. ಸಿ.ಆರ್.ಮೋಹನ್‌ಕುಮಾರ್ ಅವರು ಹೇಳಿದರು.

ಶ್ರೀ ಕ್ಷೇತ್ರ‍್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಮಹಿಳಾ ಜ್ಞಾನ ವಿಕಾಸ ಅಡಿಯಲ್ಲಿ ಪಟ್ಟಣದ ಕಳಸ ಪೊಲೀಸ್ ಠಾಣೆ ಆವರಣದಲ್ಲಿ ಮಹಿಳಾ ಅಧ್ಯಯನ ಪ್ರವಾಸ ಕಾರ್ಯಕ್ರಮವನ್ನು ಮಂಗಳವಾರ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪೊಲೀಸ್ ಇಲಾಖೆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಜನ ಸ್ನೇಹಿ ವ್ಯವಸ್ಥೆ, ಬೀಟ್, ಮಹಿಳಾ ಕಾನೂನು, 112ರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಮಹಿಳೆಯರು ಪುರುಷರಂತೆ ಸಮಾನ ವೆಂಬ ಭಾವನೆ ಬೆಳೆಸಿಕೊಂಡು ಉತ್ತಮ ಸಾಧನೆ ಬಗ್ಗೆ ಗಮನ ಹರಿಸಬೇಕು ಎಂದರು.

ಮಹಿಳಾ ಜ್ಞಾನ ವಿಕಾಸ ಮೆಲ್ವಿಚಾರಕಿ ರಂಜಿತಾ ಮಾತನಾಡಿ ಮಹಿಳಾ ಸಬಲೀಕರಣ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮಹಿಳೆ ಪ್ರಗತಿ ಸಾಧಿಸಿದಾಗ ಮಾತ್ರ ಸಬಲರಾಗಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಪ್ರೇರಣಾ, ಪ್ರೇಮ, ಹೇಮಾವತಿ ಸ್ನೇಹ, ಪ್ರಕೃತಿ, ಸಾವಿತ್ರಿ ಜಾನಕಿ, ಭಾರತಿ, ಸುಮಿತ್ರ, ಮಾಲತಿ ಹಾಗೂ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಮತ್ತಿತರರಿದ್ದರು.

ಶ್ರೀಸಿದ್ದೇಶ್ವರರು ಮನುಕುಲದ ಒಳಿತಿಗೆ ಜೀವನ ಮುಡಿಪಾಗಿಟ್ಟವರು-ಡಾ.ಮೋಹನ್ ರಾಜಣ್ಣ

0

ಕಳಸ: ಮನುಕುಲದ ಒಳಿತಿಗಾಗಿ ತಮ್ಮ ಸಂಪೂರ್ಣ ಜೀವನವನ್ನು ಜನತೆಗಾಗಿ ಮುಡಿಪಾಗಿಟ್ಟವರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಅವರು ಹೇಳಿದರು.

ಕಳಸ ಪಟ್ಟಣದ ಪ್ರಬೋಧಿನಿ ವಿದ್ಯಾ ಕೇಂದ್ರ ಆವರಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಅಶ್ರಯದಲ್ಲಿ ಬುಧವಾರ ಸಂಜೆ ಶಿವೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಪುಷ್ಪನಮನ ಸಲ್ಲಿಸಿ ಬಳಿಕ ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ನಿಸ್ವಾರ್ಥ ಸೇವೆ ಮತ್ತು ಅಪಾರ ಜ್ಞಾನವು ನಮಗೆಲ್ಲರಿಗೂ ಮಾದರಿಯಾಗಬೇಕಿದೆ. ಅತ್ಯಂತ ಸರಳ ಜೀವನವನ್ನು ಅನುಸರಿಸಿದ ಸ್ವಾಮೀಜಿಯವರು ಅದ್ಬುತ ಜ್ಞಾನವನ್ನು ಹೊಂದಿದ್ದರು. ಅವರ ಬದುಕು ಜನಸಾಮಾನ್ಯರಿಗೆ ಸ್ಪೂರ್ತಿದಾಯಕವಾದದು ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷೆ ಡಾ. ರಮ್ಯಾ ಮಾತನಾಡಿ ಕಠಿಣವಾದ ವಿಷಯಗಳನ್ನು ಅತ್ಯಂತ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ರೀತಿಯಲ್ಲಿ ಹೇಳುವ ಕೌಶಲ್ಯತೆಯನ್ನು ಸ್ವಾಮೀಜಿಯವರ ಮಧುರವಾದ ಮಾತಿನಲ್ಲಿತ್ತು ಎಂದ ಅವರು ಅಧ್ಯಾತ್ಮದ ಜೊತೆಗೆ ವಿಜ್ಞಾನ, ಕೃಷಿ, ಶಿಕ್ಷಣ, ಪರಿಸರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದರು ಎಂದರು.

ಬಸವ ಸಮಿತಿ ಗೌರಾವಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಸಮಾಜಕ್ಕೆ ಸ್ಫೂರ್ತಿಯಾಗುವಂತೆ ಜೀವನದ ಪ್ರತಿಕ್ಷಣವನ್ನು ಅನುಭವಿಸಿದ ಸ್ವಾಮೀಜಿಯವರು ನಮ್ಮೊಂದಿಗೆ ಇನ್ನೂ ಹಲವು ವರ್ಷಗಳು ಜೊತೆಗಿರುವ ಮೂಲಕ ಮಾರ್ಗದರ್ಶನ ನೀಡಬೇಕಿತ್ತು ಎಂದರು.

ಈ ವೇಳೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕ ಶಿವಕುಮಾರ ಸ್ವಾಮಿ, ರೋಟರಿ ಸಂಸ್ಥೆ ಅಧ್ಯಕ್ಷ ಪ್ರಸನ್ನ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಕುಕ್ಕೊಡು ಗಣೇಶ್, ಬಸವ ಸಮಿತಿ ಅಧ್ಯಕ್ಷ ಆನಂದಗುರೂಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ )ತಾಲ್ಲೂಕು ಸದಸ್ಯ ರಾಜು, ಸವಿತಾ ಸಮಾಜದ ಅಧ್ಯಕ್ಷ ಮೋಹನ್, ಕಸಾಪ ಅಧ್ಯಕ್ಷ ಶೇಖರ್ ಶೆಟ್ಟಿ, ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಉಪಾಧ್ಯಕ್ಷ ಆನಂದ್ ಶೆಟ್ಟಿ, ಮುಖಂಡರುಗಳಾದ ರಾಮಚಂದ್ರಹೆಬ್ಬಾರ್, ಮಹೇಂದ್ರ, ಸೋಮಯ್ಯ, ಕಿಶೋರ್, ಜ್ಯೋತಿ ಜೈನ್, ಆನಂದ್, ರಾಮು, ಚನ್ನಾಮಲ್ಲಿಕಾಜುನ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಎಎಪಿ ಪಕ್ಷ ಬೆಂಬಲಿಸಿ-ಡಾ.ಕೆ ಸುಂದರಗೌಡ

0

ಚಿಕ್ಕಮಗಳೂರು: ಪ್ರಜಾಪ್ರಭುತ್ವ ರಕ್ಷಿಸುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂ ಗ ಎಂಬ ಆಧಾರಸ್ಥಂಬಗಳು ಸಮಯಪ್ರಜ್ಞೆ ಮತ್ತು ಮಾನವೀಯ ಧರ್ಮದಲ್ಲಿ ರೈತರ ಭೂ ಕಂದಾಯ ಕಾಯ್ದೆಯ ಅಧ್ಯಾಯ ಬಗ್ಗೆ ನ್ಯಾಯಯುತವಾಗಿ ಪರಿಹಾರ ನೀಡುವಲ್ಲಿ ಶ್ರಮವಹಿಸಿದ್ದರೆ ಇಂದು ರೈತರು ಹೋರಾಟ ಮಾಡುವ ಅನಿವಾರ್ಯವಿರಲಿಲ್ಲ ಎಂದು ಆಮ್‌ಆದ್ಮಿ ಜಿಲ್ಲಾಧ್ಯಕ್ಷ ಡಾ. ಕೆ.ಸುಂದರಗೌಡ ಅವರು ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ದೇಶದ ಬೆನ್ನೆಲುಬು ರೈತ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ಅಧಿಕಾ ರಿಗಳಾಗಲೀ ಸ್ಥಳಕ್ಕೆ ಭೇಟಿ ನೀಡಿ ಅಹವಾಲನ್ನು ಸ್ವೀಕರಿಸದಿರುವುದು ಮಾನವೀಯತೆಗೆ ಬಹುದೂರವಾದ ಕಾಯಕವಾಗಿದೆ ಎಂದು ದೂರಿದ್ದಾರೆ..

ಕಳಸ ಜಿಲ್ಲಾಧಿಕಾರಿ ಕಚೇರಿಯಿಂದ 200 ಮೀ.ವರೆಗೆ ಯಾವುದೇ ಚಳುವಳಿಯನ್ನು ಮಾಡದಂತೆ ನಿಷೇಧ ವನ್ನು ಹೇರಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಈ ಎಲ್ಲಾ ಸಮಸ್ಯೆಗಳಿಗೆ ಜಿಲ್ಲಾಡಳಿತವಾಗಲಿ, ಜನಪ್ರತಿ ನಿಧಿಗಳಾಗಲೀ ಚಿಂತನೆ ನಡೆಸದೇ ಗಾಡನಿದ್ರೆಯಲ್ಲಿರುವುದು ಜನತಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಗೌರವವಾಗಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಅಪಘಾತವಾದಾಗ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದರೆ ಸರ್ಕಾರವೇ ಅವರಿಗೆ ನಗದು ನೀಡುವುದು. ಅಪಘಾತ ವ್ಯಕ್ತಿಯನ್ನು ನೋಡಿಕೊಳ್ಳುವುದು. ಉಚಿತ ಸೇವೆಯ ದೃಷ್ಟಿಯಲ್ಲಿ ಮೊಹಲ್ಲಾ ಕ್ಲೀನಿಕ್‌ಗಳನ್ನು ತೆರೆದು ಉಚಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತಿದ್ದರೆ ಕರ್ನಾಟಕದಲ್ಲಿ ಈ ಯೋಜನೆಗಳನ್ನು ಯಾಕೆ ಜಾರಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಎಲ್ಲಾ ಸಮಸ್ಯೆಗಳ ವಿರುದ್ಧ ಹೋರಾಡಲು ಸಾರ್ವಜನಿಕರು ಮುಂದಾಗಬೇಕು. ಭ್ರಷ್ಟಾಚಾರವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಳ್ಳಬೇಕು. ಜೊತೆಗೆ ರಾಜ್ಯದಲ್ಲಿ ಎಎಪಿ ಯನ್ನು ಸಂಪೂರ್ಣವಾಗಿ ಬೆಂಬಲಿಸಿ ಅಧಿಕಾರ ನೀಡಿದ್ದಲ್ಲಿ ದೆಹಲಿ ಮಾದರಿಯ ಜನಪರ ಯೋಜನೆಗಳು ಹಾಗೂ ಸುಸ್ಥಿರ ಸಮಾಜ ನಿರ್ಮಾಣ ಮಾಡಲು ರಾಜ್ಯದಲ್ಲಿ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಜನವರಿ 8 ರಂದು ಐಎಂಎ ರಕ್ತದಾನ ಶಿಬಿರ

0

ಶಿವಮೊಗ್ಗ: ಪ್ರತಿ ವರ್ಷದಂತೆ ಈ ವರ್ಷವೂ ಭಾರತೀಯ ವ್ಯದ್ಯಕೀಯ ಸಂಘವು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

ಈ ಬಾರಿ ದಿನಾಂಕ 8-1-2023ರ ಭಾನುವಾರ ಬೆಳಿಗ್ಗೆ 9-00 ಘಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಶಿವಮೊಗ್ಗದ IMA ಹಾಲ್ ನಲ್ಲಿ ಅಭಿರುಚಿ ,ರೋಟರಿ ಮಿಡ್ ಟೌನ್, ಶಿವಮೊಗ್ಗ, ಇವುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದೆ.

ಸದಸ್ಯರು ಹಾಗೂ ಸಮಾಜದ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ. ಕಾರ್ಯಕ್ರಮಕ್ಕೆ ತಮ್ಮ ಬಳಗದಲ್ಲಿ ರಕ್ತದಾನ ಮಾಡಲು ಅರ್ಹರಾದವರನ್ನು ಕರೆತರಲು ಕೋರಿದೆ. ಕಾರ್ಯಕ್ರಮದಲ್ಲಿ ಉಪಹಾರದ ವ್ಯವಸ್ಥೆ ಇರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಇವರನ್ನು ಸಂಪರ್ಕಿಸಬಹುದು
ಮಂಜು: 9986841317.

ಹಿಂದುಳಿದ ಮತ್ತು ಅಲೆಮಾರಿ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

0

2022-23 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ ಹಾಗೂ ಊಟ ಮತ್ತು ವಸತಿ ಸಹಾಯ ಯೋಜನೆಯಡಿ ಆಹ್ವಾನಿಸಲಾಗಿದ್ದ ಅರ್ಜಿ ಅವಧಿಯನ್ನು ದಿನಾಂಕ ಜನವರಿ 31 ರವರೆಗೆ ವಿಸ್ತರಿಸಲಾಗಿದೆ.

ದಿನಾಂಕ: 20-01-2023 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿ ನಿಗದಿಗೊಳಿಸಿದ್ದು ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆಗೊಳಿಸಲು ಮನವಿ ಬಂದ ಹಿನ್ನೆಲೆ ಅರ್ಜಿ ಅವಧಿ ವಿಸ್ತರಿಸಲಾಗಿದೆ.

ಆನ್‍ಲೈನ್ ಅರ್ಜಿ ಸಲ್ಲಿಸಲು ವೆಬ್‍ಸೈಟ್ www.//ssp.postmatric.karnataka.gov.in, ಸರ್ಕಾರಿ ಆದೇಶ ಮತ್ತು ಇತರೆ ಮಾಹಿತಿಗೆ https://bcwd.karnataka.gov.in, ಹೆಚ್ಚಿನ ಮಾಹಿತಿಗೆ ಇಲಾಖೆಯ ಸಹಾಯವಾಣಿ ಸಂಖ್ಯೆ : 8050770005/08182-222129 ಇಮೇಲ್ bcwdhelpline@gmail.com, ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಇಮೇಲ್ postmatrichelp@karnataka.gov.in ಮತ್ತು ಸಹಾಯವಾಣಿ 080-35254757 ನ್ನು ಸಂಪರ್ಕಿಸಬಹುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ವಿವಿಧ ವಸತಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಾತಿ

0

2023-24 ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್,
ಶ್ರೀ ನಾರಾಯಣ ಗುರು ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

2022-23 ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ 6ನೇ ತರಗತಿಯಿಂದ 10ನೇ ತರಗತಿವರೆಗೆ ಉಚಿತ ವಸತಿ, ಊಟ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದು.

ಆಸಕ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಜಿಲ್ಲೆಯ ಯಾವುದಾದರೂ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಶ್ರೀ ನಾರಾಯಣ ಗುರು ವಸತಿ ಶಾಲೆ/ಕಾಲೇಜುಗಳ ಮೂಲಕ ಆನ್‍ಲೈನ್‍ನಲ್ಲಿ ದಿ: 22-02-2023 ರೊಳಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಶಿವಮೊಗ್ಗದ ಪ್ರಾಂಶುಪಾಲರು ಮೊ ಸಂ: 9886897594, ಭದ್ರಾವತಿ 9482696819, ತೀರ್ಥಹಳ್ಳಿ 9481078559, ಶಿಕಾರಿಪುರ 9901325156, ಸೊರಬ 9740934526, ಸಾಗರ 9901699650, ಹೊಸನಗರ 9620793267 ನ್ನು ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ತೀರ್ಥಹಳ್ಳಿಯ ಹೆದ್ದೂರಿನಲ್ಲಿ ಕಂಬದಿಂದ ಬಿದ್ದು ಲೈನ್ ಮನ್ ಸಾವು

0

ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಎಂಬ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಲೈನ್ ಮ್ಯಾನ್ ಒಬ್ಬರು ಕಂಬದಿಂದ ಬಿದ್ದು, ಆಸ್ಪತ್ರೆಗೆ ತೆರಳುವಾಗ ಮೃತಪಟ್ಟ ಘಟನೆ ಇಂದು ನಡೆದಿದೆ.

ರವಿ ನಾಯಕ (37) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ರವಿ ನಾಯಕ ಅವರು ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಹೆದ್ದೂರಿನ ಬಳಿ ಕೆಲಸ ಮಾಡುತ್ತಿರುವ ವೇಳೆ, ಆಯಾ ತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಸ್ಥಳೀಯರು ಹತ್ತಿರದಲ್ಲೇ ಇದ್ದ, ಕಟ್ಟೆಹಕ್ಕಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿಯ ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗದ ಕಾರಣ,ಕಾರಿನಲ್ಲಿ ರವಿ ನಾಯಕ ಅವರನ್ನು ಕರೆದೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ತೀರ್ಥಹಳ್ಳಿ ಆಸ್ಪತ್ರೆ ಮಾರ್ಗ ಮಧ್ಯದಲ್ಲಿ ರವಿ ನಾಯಕ ಅವರು ಮೃತಪಟ್ಟಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಈ ಘಟನೆಯಿಂದ ಸ್ಥಳೀಯರು ಕಟ್ಟೆ ಹಕ್ಕಲು ಆಸ್ಪತ್ರೆಗೆ ಸರಿಯಾದ ಆಂಬುಲೆನ್ಸ್ ವ್ಯವಸ್ಥೆ ಇಲ್ಲವೆಂದು ಗ್ರಾಮಸ್ಥರು ಆಸ್ಪತ್ರೆಯ ಎದುರು ಕುಳಿತು ಧರಣಿ ನಡೆಸಿದ್ದಾರೆ.